EN | KA

Menu

V

ಮದನತಿಲಕ

ಖ್ಯಾತಯಶಂ ಕವಿಕಾಲಮನೋಜಾತನಜೇಯಗುಣಂ ವಿತತಂಧಾತುಗಳಂ ನುಡಿಗುಂ ನಿಜಕಾಂತೆಗೆನೀತಿವಿದಂ ಸತತಂ ಪ್ರಿಯಳೇ

ವಿನುತಶ್ಯಾಮೆ ಮೃದುಚ್ಛವಿದ್ವಿಜನಖಾಕ್ಷಿದ್ವಂದ್ವೆ ಶೀತಾಂಗಿ ಮಾನಿನಿ ಸುಸ್ನಿಗ್ಧಭಗೋರು ಬಾಹುಯುಗೆ ಸೌಖ್ಯಾವಾಸೆ ಮಾಂಸಾರ್ದ್ರಸುಸ್ತನೆ ಸನ್ಮಧ್ಯಮೆ ಕಾಮಿ ಬೆಳ್ಪಸದನಕ್ಕಾಸಕ್ತೆ ಸೀಮಂತಿನೀಜನತಾಶ್ರೇಷ್ಠೆ ಬೃಹದ್ಗುಣಾಭೆಗೆ ಖಫಾತ್ಮಸ್ತ್ರೀ ಮನೋವಲ್ಲಭೇ

ವಿನಯಮನಂದಮಂ ಸಖಿಯರೊಳ್ ಪೊಗೞ್ದೞ್ಕಱನುಂಟುಮಾಡಿ ಕಾಮಿನಿಯ ಮುಖಾಬ್ಜಮಂ ನಯದಿ ನೋಡಿ ಕರಂ ನಗೆಗೂಡಿ ಕೂರ್ಮೆಯಿಂಮನಮಱಿದಿಚ್ಛೆಯಂ ಸಲಿಸಿ ಬಿಚ್ಚತದಿಂ ಸುರತಾನುರಾಗಮಂಜನಿಯಿಸಿ ಕೂಡೆ ಗೆಲ್ಗೆ ಚದುರಿಂ ಚದುರಂ ಖಫಧಾತುವಪ್ಪಳಂ

ಮಾಗಿಯ ದಿವಸಂ ಘನರತಿರಾಗವನುತ್ಸವದಿ ಮಾಡುಗೆಂದುಂ ಬೆಳಗಪ್ಪಾಗಳ್ ಕೂಡದೆ ವಿನುತದಿಭೋಗಂಗಳ್ಗೆಳಸಿ ಕೂಡಿ ಗೆಲ್ಗಾ ವಧುವಂ

ಅತಿ ಪರುಷೋಕ್ತೆ ಕರ್ಕಶವರಾಂಗೆ ವಿಭಿನ್ನಕಚಾಗ್ರೆ ತನ್ವಿ ದುರ್ಮತಿ ಕಠಿನಾಂಗೆ ಶೀಘ್ರಗತಿ ಸಂಚಳಗಾತ್ರೆ ಸಕೋಪೆ ಮೀನಸಮ್ಮಿತವರನೇತ್ರಯುಗ್ಮೆ ಬಹುಭೋಜನೆ ನೀಲವಿಭೂಷಣೇಚ್ಛೆ ದುಃಸ್ಥಿತಿಯು ಮಾರುತಪ್ರಕೃತಿಯಕ್ಕುಮವಳ್ ತರಳಾಯತೇಕ್ಷಣೇ

ರತಿಯಂ ನಿಷ್ಠುರದಿಂ ಪೊಣರ್ಚಿ ಕಡುಪಿಂದಂ ಬಯ್ದು ಮೆಯ್ಯೆಲ್ಲಮುಂಸತತಂ ಸೀಗುರಿಸುತ್ತುಸಿರ್ದು ನಡುವಂ ನುರ್ಗರ್ಪಿನಂ ಪೊಯ್ದು ತೀವ್ರತೆಯಂ ಕಿಂಕೊೞೆ ಮಾಡಿ ನಿರ್ದಯತೆಯಿಂದಂ ಚುಂಬನಂಗೆಯ್ದು ಮಾರುತಧಾತುಸ್ಥಿತಿಯಪ್ಪಳಂ ಬಸದೆ ಮಾಡಲ್ಬಲ್ಲವಂ ಬಲ್ಲವಂ

ಕುಂತಳಮಂ ತೆಗೆದೊತ್ತಿ ನಿರಂತರವೆರಡನೆಯ ಜಾವದೊಳ್ ನೆರೆವುದು ನೀಂಭ್ರಾಂತೇಂ ವೈಶಾಖದೊಳತ್ಯಂತಂ ಸುರತಮನೊಡರ್ಚಿ ಮಚ್ಚಿಸುಗವಳಂ

ನಯನಂ ದಂತಂ ಮುಖಂ ತಾಮವು ಪಸುರೆಸೆಗುಂ ಪೂತಿಗಂಧಂ ಸಮಸ್ತಾವಯವಂ ಮೆಲ್ಪಾಗಿ ಕೆಂಪಂ ಮಿಸುಪಮನೊಳಕೊಂಡಿರ್ಕುಮೋರಂತೆ ತಂಪಂಬಯಸುತ್ತಿರ್ಪಳ್ ನಿತಾಂತಂ ಮುನಿಸೊಸಗೆಗಳುಂ ತಕ್ಷಣಂಗಳ್‌ ಸುರಾಗೋದಯೆ ಲೌಲ್ಯಪ್ರಜ್ಞೆ ಪೈತ್ತ್ಯಪ್ರಕೃತಿಯ ವಧುವಾರಕ್ತಭೂಷೇಚ್ಛೆಯಕ್ಕುಂ

ನಂದನಮುಂ ಲತಾಭವನಮುಂ ಕೊಳನುಂ ಪುಳಿನಸ್ಥಳಂಗಳುಂಚಂದನಮುಂ ಹಿಮಾನಿಳನುಮಿಂದುಕರಂಗಳುಮಿಂದುಕಾಂತಮುಂಕುಂದದ ತಾಣದೊಳ್ ಚದುರನೊಯ್ದು ರತೋತ್ಸವಭೂಷಣಂಗಳಂಸಂದಿಸಿ ಗೆಲ್ಗೆ ಪೈತ್ತ್ಯದವಳಂ ನಯದಿಂ ತರಳಾಯತೇಕ್ಷಣೇ

ಮುಳಿದು ತಿಳಿಪಿದೊಡೆ ತಿಳಿದಾಗಳೆ ಮುಳಿಯಿಸಿ ತಿಳಿಪಿ ಮೃದುರತೋತ್ಸವದಿಂಮೞೆಗಾಲದೊಳಿರುಳರ್ಧಂಗಳೆದಿಂ ಬೞಿಕೆಳಸಿ ಕೂಡಿ ಗೆಲ್ಗಾ ವಧುವಂ

ಕಾಲಂ ದೇಶಂ ಪ್ರಕೃತಿಗಳಾಳೋಚಿಸೆ ಸಹಜಮಕ್ಕುಮಾದೊಡಮೇಂ ನೀಳಾಳಕಿ ಸಲೆ ರತಿಕಾಂಕ್ಷೆಯಕಾಲದೊಳಂ ನೆರೆಯೆ ನೆಱೆಯೆ ನೆರೆಗುಂ ಸುಖಮುಂ

ಇಂತೀ ಪೊೞ್ತೆನ್ನದೆ ನಿದ್ರಾಂತದೊಳೆಂತಪ್ಪ ಪೊೞ್ತಱೊಳಮೆಲ್ಲರ್ಗಂಕಂತೂತ್ಸಾಹಂ ಪೆರ್ಚುಗುಮಿಂತದಱಿಂದಱಿದು ಕೂಡೆ ಕೂಡುಗೆಯೊಳ್ಪಿಂ

ಇಂತೀ ಪ್ರಕೃತಿಗುಣಂಗಳ್ಕಾಂತೆಯರೊಳ್ ಬೆರಸಿ ತೋಱೆ ಸಂಕೀರ್ಣೆಯರಾದಿಂತಿವರ ಭೇದಮಂ ನಯದಿಂ ತಿಳಿದೊಡಗೂಡಿ ಗೆಲ್ದೊಡಾತಂ ಚದುರಂ

ಇದು ಸಕಲವಿಬುಧಜನವಿನುತ ಕಾವ್ಯಾಲಂಕಾರನೀತಿನಿಬಂಧನಮುಂ ಛಂದೋಮಹಾರ್ಣವಮುಂ ಕವಿತಾಮಹಾರ್ಣವಂ ಶ್ರೀ ಚಂದ್ರರಾಜವಿರಚಿತಮುಮಪ್ಪ ಮದನತಿಲಕದೊಳ್ ತ್ರಿದೋಷಪ್ರಕೃತಿವರ್ಣನಂ ಪಂಚಮಾಧಿಕಾರಂ ಸಮಾಪ್ತಂ