EN | KA

Menu

ಪೀಠಿಕೆ

ಕನ್ನಡ ಸಾಹಿತ್ಯ ಮತ್ತು ಭೌತಿಕ ಸಂಸ್ಕೃತಿಯು ೧೫೦೦ ವರ್ಷಗಳ ಇತಿಹಾಸವನ್ನು ಹೊಂದಿದೆ, ಪಂಪನ ಮಹಾಕಾವ್ಯಗಳಿಂದ ಹಿಡಿದು ಲಕ್ಷ್ಮೀಶನ ಇಂಪಾದ ಪದ್ಯಗಳವರೆಗೆ ಮತ್ತು ಬಾದಾಮಿ ಚಾಲುಕ್ಯರ ಅಲಂಕೃತ ದೇವಾಲಯಗಳಿಂದ ವಿಜಯನಗರದ ಭವ್ಯವಾದ ಸ್ಮಾರಕಗಳವರೆಗೆ. ಈ ಅದ್ಭುತ ಆನುವಂಶಿಕತೆಯು ನಮ್ಮ ಕರ್ತವ್ಯವನ್ನು ನೆನಪಿಸುತ್ತದೆ. ಅಲ್ಲದೆ, ಮಹತ್ತ್ವದ ಸಂಪ್ರದಾಯವನ್ನು ರಕ್ಷಿಸಲು ಹಾಗೂ ಸೃಜನಾತ್ಮಕವಾಗಿ ಪುನರುಜ್ಜೀವನಗೊಳಿಸುವ ತಕ್ಷಣದ ಅಗತ್ಯವನ್ನು ಹುಟ್ಟುಹಾಕುತ್ತದೆ. ‘ಕರ್ಣಾಟ’ ಒಂದು ಮಹತ್ತ್ವದ ಸಾಂಸ್ಕೃತಿಕ ಆಕರ, ವಿದ್ವಾಂಸರು ಮತ್ತು ತಜ್ಞರ ಸಂಗಮ. ಅಭಿಜಾತ ಕನ್ನಡ ಪರಂಪರೆಯು ಕೇವಲ ಸುಸ್ಥಿರವಾಗದೆ, ಮುಂಬರುವ ಪೀಳಿಗೆಗೆ ಸ್ಫೂರ್ತಿಯನ್ನು ನೀಡುವ, ಭವಿಷ್ಯತ್ತನ್ನು ರೂಪಿಸುವ ಸಾಧನವೂ ಆಗಿದೆ. ಈ ಕೇಂದ್ರದ ಮೂಲಕ, ನಾವು ಮುಂದೆ ತಿಳಿಸಿರುವ ಕೆಲಸಗಳನ್ನು ಸಾಧಿಸುವ ಗುರಿ ಹೊಂದಿದ್ದೇವೆ:

  • ಲಭ್ಯತೆಯನ್ನು ಸುಗಮಗೊಳಿಸುವುದು: ಇಂಗ್ಲಿಷಿಗೆ ಭಾಷಾಂತರ ಮಾಡುವ ಯೋಜನೆಗಳು, ಪ್ರಾಚೀನ ಪಠ್ಯಗಳನ್ನು ಆಧುನಿಕ ಗದ್ಯಕ್ಕೆ ಪರಿವರ್ತಿಸುವ ಕಾರ್ಯ, ಪ್ರಮುಖ ಪಠ್ಯಗಳ ವ್ಯಾಖ್ಯಾನ, ಟಿಪ್ಪಣಿಗಳನ್ನು ಮಾಡಿಸುವುದು ಇದರಲ್ಲಿ ಸೇರಿವೆ. ಸಾಹಿತ್ಯಕ ಪಠ್ಯಗಳು ಮತ್ತು ಲೇಖಕರ ವಿವರಗಳನ್ನು ಹುಡುಕಬಹುದಾದ ಡೇಟಾಬೇಸ್ ಮೂಲಕ ಜಾಲತಾಣದಲ್ಲಿ ಒದಗಿಸುವ ಯೋಜನೆಗಳಿವೆ. ಈ ಯೋಜನೆಯಡಿಯಲ್ಲಿ ಶಾಸನಗಳನ್ನೂ ಸೇರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಸುಲಭವಾಗಿ ಓದುವ, ಸಾಹಿತ್ಯದ ವಿಶಾಲವಾದ ಪ್ರಾಚ್ಯಾಗಾರವನ್ನು ಉಪಯೋಗಿಸಿಕೊಳ್ಳುವ ಮತ್ತು ಡಿಜಿಟಲ್ ಪಠ್ಯಗಳನ್ನು ವಿಶ್ಲೇಷಣೆಮಾಡುವ ಯೋಜನೆ ಇದಕ್ಕೆ ಪೂರಕವಾಗಿದೆ. ನಮ್ಮ ಕೇಂದ್ರದಿಂದ ತಯಾರಾಗುವ ಎಲ್ಲಾ ಡಿಜಿಟಲ್ ಪಠ್ಯಗಳನ್ನು ಜಾಲತಾಣದಲ್ಲಿ ಮುಕ್ತವಾಗಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.
  • ಕಲಿಕೆಗೆ ಪ್ರೋತ್ಸಾಹ ಮತ್ತು ವಿದ್ವತ್ತು: ಕಲಿಯುವ ಹಂಬಲ ಇರುವ ಯುವಕರನ್ನು ಪ್ರೋತ್ಸಾಹಿಸಲು ಸಿದ್ಧರಿರುವ ಮತ್ತು ಸಮರ್ಥರಾದ ವಿದ್ವಾಂಸರ ಸಹಕಾರವನ್ನು ಹೊಂದಲು ನಾವು ಮುಂದಾಗಿದ್ದೇವೆ. ಈ ಹಿರಿಯ ಶಿಕ್ಷಣತಜ್ಞರಿಂದ ಮಾರ್ಗದರ್ಶನ ಪಡೆಯಲು ಉತ್ಸುಕರಾಗಿರುವ ಗಂಭೀರ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ನಾವು ಹುಡುಕುತ್ತೇವೆ ಮತ್ತು ಅವರು ರೂಪಿಸುವ ಸಂಶೋಧನ ಯೋಜನೆಗಳನ್ನು ಕೈಗೊಳ್ಳುತ್ತೇವೆ. ಶೈಕ್ಷಣಿಕ ಸಂಪನ್ಮೂಲಗಳನ್ನು, ಫೆಲೋಶಿಪ್‌ಗಳನ್ನು ಮತ್ತು ಅನುದಾನಗಳನ್ನು ಒದಗಿಸುತ್ತೇವೆ. ಆಯ್ದ ವಿದ್ಯಾರ್ಥಿಗಳಿಗೆ ಅವರ ವಿದ್ಯಾರ್ಥಿವೇತನವನ್ನು ಮುಂದುವರಿಸಲು ಶಾಶ್ವತ ವ್ಯವಸ್ಥೆಯ ಭರವಸೆಯನ್ನು ಸಹ ನೀಡುತ್ತೇವೆ.
  • ಸಂರಕ್ಷಿಸುವುದು ಮತ್ತು ಉತ್ತೇಜಿಸುವುದು: ಸಾಹಿತ್ಯ, ಶಿಲಾಶಾಸನ ಮತ್ತು ಪ್ರಾಚೀನ ಸ್ಮಾರಕಗಳ ಡಿಜಿಟಲೀಕರಣ, ದಾಖಲೀಕರಣ ಮತ್ತು ಸೂಚಿಗಳನ್ನು ತಯಾರಿಸುವ ಮೂಲಕ ನಾವು ಮುಂದಿನ ತಲೆಮಾರಿಗಾಗಿ ಈ ಅಮೂಲ್ಯವಾದ ಪರಂಪರೆಯನ್ನು ರಕ್ಷಿಸುತ್ತೇವೆ. ಡಿಜಿಟಲ್ ಮತ್ತು ನೇರ ಮುದ್ರಣ ಮಾಧ್ಯಮಗಳ ಮೂಲಕ ಅಭಿಜಾತ ಕೃತಿಗಳನ್ನು ಪ್ರಸಾರ ಮಾಡಿ, ನಮ್ಮ ಅಭಿಜಾತ ಪರಂಪರೆಯ ಬಗ್ಗೆ ಆಸಕ್ತಿಯನ್ನು ಹುಟ್ಟುಹಾಕುವ ಮತ್ತು ಸಂವಾದವನ್ನು ಸುಗಮಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ಈ ಕೇಂದ್ರದ ಪರಿಕಲ್ಪನೆಯನ್ನು ಸಾಕಾರಗೊಳಿಸಿದವರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಆರ್.ವಿ.ಎಸ್.ಸುಂದರಂ; ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಮತ್ತು ಕನ್ನಡದ ಪ್ರಾಧ್ಯಾಪಕ ಮತ್ತು ವಿದ್ವಾಂಸ ಗಿಲ್ ಬೆನ್-ಹೆರುತ್; ಮತ್ತು ಭಾರತೀಯ ಶಾಸ್ತ್ರೀಯ ಸಂಪ್ರದಾಯಗಳ ಪೋಷಕ ಮನೀಶ್ ಮಹೇಶ್ವರಿ. ಈ ಯೋಜನೆಯಲ್ಲಿ ಸಹಕರಿಸಲು ಒಗ್ಗೂಡಿದ ಪ್ರತಿಷ್ಠಿತ ವಿದ್ವಾಂಸರ ಮತ್ತು ತಜ್ಞರ ತಂಡವು ನಮ್ಮ ಪ್ರಯತ್ನವನ್ನು ಬೆಂಬಲಿಸುತ್ತಿದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮ್ಮ ಪ್ರಸ್ತುತ ತಂಡವನ್ನು ನೋಡಿ. ತತ್ತ್ವ ಹೆರಿಟೇಜ್ ಫೌಂಡೇಶನ್‌ನ ಉದಾರ ಅನುದಾನದಿಂದ ಕೇಂದ್ರವನ್ನು ಬೆಂಬಲಿಸಲಾಗುತ್ತಿದೆ.