EN | KA

Menu

ಗಮನದಲ್ಲಿರುವ ಕ್ಷೇತ್ರಗಳು

ಅಭಿಜಾತ ಕನ್ನಡ ಪರಂಪರೆಯ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಕೇಂದ್ರವು ಮಹತ್ತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದೆ. ಈ ಯೋಜನೆಯ ಕಾರ್ಯಚಟುವಟಿಕೆಗಳು ಈ ಕೆಳಗಿನ ಕ್ಷೇತ್ರಗಳಲ್ಲಿರುತ್ತವೆ:

ಅ. ಅನುವಾದಗಳು ಮತ್ತು ವಿಮರ್ಶಾತ್ಮಕ ಅಧ್ಯಯನಗಳು

ಈ ಕೇಂದ್ರವು ಗಮನಾರ್ಹವಾದ ಅಭಿಜಾತ ಕನ್ನಡ ಪಠ್ಯಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಲು ನಿರ್ಧರಿಸಿದೆ. ಈ ಕಾರ್ಯಕ್ಕಾಗಿ ಪ್ರತಿಷ್ಠಿತ ವಿದ್ವಾಂಸರನ್ನು ಮತ್ತು ಅನುವಾದಕರನ್ನು ತೊಡಗಿಸಿಕೊಳ್ಳುತ್ತದೆ. ನಮ್ಮ ಆರಂಭಿಕ ಅನುವಾದ ಯೋಜನೆಗಳ ಅವಲೋಕನಕ್ಕಾಗಿ, ಪ್ರಕಟನೆಗಳ ಪುಟಕ್ಕೆ ದಯವಿಟ್ಟು ಭೇಟಿ ನೀಡಿ. ಈ ಅನುವಾದಗಳು ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಆಸಕ್ತ ಕನ್ನಡ ಸಮುದಾಯಕ್ಕೆ ಸೇವೆ ಸಲ್ಲಿಸುತ್ತವೆ. ಅನುವಾದಗಳ ಜೊತೆಗೆ, ಕೇಂದ್ರವು ಮೊನೊಗ್ರಾಫ್, ಕಲಾ ಪುಸ್ತಕ ಮತ್ತು ವಿಮರ್ಶಾತ್ಮಕ ಅಧ್ಯಯನಗಳನ್ನು ಪ್ರಕಟಿಸಲು ಯೋಜಿಸಿದೆ.

ಆ. ಕನ್ನಡ ವ್ಯಾಖ್ಯಾನಗಳು

ವ್ಯಾಪಕವಾದ ಸಮಾಸಗಳು, ಅರಿದಾದ ಪದಗಳು ಮತ್ತು ಸಂಕೀರ್ಣ ಭಾಗಗಳಿಗೆ ವಿವರಣೆಯ ಅಭಾವದಿಂದ ಅಭಿಜಾತ ಕನ್ನಡ ಸಾಹಿತ್ಯವು ಆಧುನಿಕ ಓದುಗರಿಗೆ ಅನೇಕವೇಳೆ ಅಸ್ಪಷ್ಟವಾಗಿ ಉಳಿದಿದೆ. ಈ ಪಠ್ಯಗಳನ್ನು ಸರಳಗೊಳಿಸುವ ಗುರಿಯನ್ನು ಹೊಂದಿರುವ ಕನ್ನಡ ವ್ಯಾಖ್ಯಾನ ರಚನೆಯ ಮೂಲಕ ನಮ್ಮ ಯೋಜನೆಯು ಈ ಅಂತರವನ್ನು ಕಡಿಮೆಮಾಡಲು ಪ್ರಯತ್ನಿಸುತ್ತದೆ. ಪದಚ್ಛೇದವನ್ನು ಕೈಗೊಳ್ಳುವ ಮೂಲಕ - ಸಂಧಿ ಮತ್ತು ಸಮಾಸಗಳಲ್ಲಿರುವ ಪದಗಳ ಪ್ರತ್ಯೇಕತೆಯನ್ನು ತೋರಿಸಿ ಪಠ್ಯಗಳನ್ನು ಹೆಚ್ಚು ಅರ್ಥಮಾಡಿಕೊಳ್ಳುವಂತೆ ಮಾಡುತ್ತೇವೆ. ಅಲ್ಲದೆ, ಓದುಗರಿಗಾಗಿ ಸಂಕೀರ್ಣವಾದ ವಿಷಯಗಳನ್ನು ಸರಳಗೊಳಿಸಿ ವಿಮರ್ಶಾತ್ಮಕ ವ್ಯಾಖ್ಯಾನ ಮತ್ತು ವಿವರಣೆಗಳನ್ನು ಒದಗಿಸುತ್ತೇವೆ.

ಇ. ಡಿಜಿಟಲೀಕರಣ ಕಾರ್ಯಕ್ರಮಗಳು

ಕನ್ನಡ ಸಾಹಿತ್ಯದಿಂದ ಪ್ರಮುಖ ಪಠ್ಯಗಳ ಸಂಗ್ರಹಣೆ ಮತ್ತು ಡಿಜಿಟಲೀಕರಣದ ಮೂಲಕ ಸುಲಭವಾಗಿ ಆನ್‌ಲೈನ್ ಓದುವಿಕೆ ಮತ್ತು ಹುಡುಕಾಟ ಎರಡೂ ಸಾಧ್ಯವಾಗುವಂತೆ ಮಾಡಲಾಗುವುದು. ಪ್ರತಿಯೊಂದು ಪಠ್ಯವನ್ನು ಎಚ್ಚರಿಕೆಯಿಂದ ಟೈಪ್ ಮಾಡಿ, ಅದರ ಮೂಲರೂಪವನ್ನು ಉಳಿಸಲಾಗುವುದು. ಅಧ್ಯಾಯ ಮತ್ತು ಸಾಲುಗಳ ಸಂಖ್ಯೆಗಳು, ಛಂದಸ್ಸು ಇತ್ಯಾದಿಗಳನ್ನು ಒಳಗೊಂಡಂತೆ ವಿವರವಾದ ಮೆಟಾಡೇಟಾದೊಂದಿಗೆ ಇರುತ್ತದೆ. ಅಲ್ಲದೆ, ಸಾಧ್ಯವಾದಲ್ಲೆಲ್ಲ ಪಠನ ಮತ್ತು ಗಮಕ ಎರಡರಲ್ಲೂ ಪಠ್ಯದ ಆಡಿಯೊ ರೆಕಾರ್ಡಿಂಗ್ (ಸಾಂಪ್ರದಾಯಿಕ ಶೈಲಿ ನಿರೂಪಣೆ) ರೂಪವನ್ನು ಒದಗಿಸಲಾಗುವುದು. ಈ ವಿಧಾನವು ಈ ಸಾಹಿತ್ಯಕ ಸಂಪತ್ತಿನ ಡಿಜಿಟಲ್ ಪ್ರಾತಿನಿಧ್ಯವನ್ನು ಗಣನೀಯವಾಗಿ ಉತ್ಕೃಷ್ಟಗೊಳಿಸುತ್ತದೆ.

ಈ. ಕನ್ನಡ ಸಾಹಿತ್ಯದ ಡೇಟಾಬೇಸ್

ಈ ಯೋಜನೆಯು ೯ ರಿಂದ ೧೯ ನೇ ಶತಮಾನದವರೆಗಿನ ಕನ್ನಡ ಸಾಹಿತ್ಯದ ಸಮಗ್ರ ಡಿಜಿಟಲ್ ಕ್ಯಾಟಲಾಗ್ ಅನ್ನು ತಯಾರು ಮಾಡಲು ಪ್ರಯತ್ನಿಸುತ್ತದೆ. ಇದು ಸಂಸ್ಕೃತ ಸಾಹಿತ್ಯಕ್ಕೆ ಮೀಸಲಾದ ಪಂಡಿತ್ ಯೋಜನೆಯನ್ನು ಹೋಲುತ್ತದೆ. ಕನ್ನಡ ಸಾಹಿತ್ಯ ಕೃತಿಯ ಹೆಸರು, ಕೃತಿಯ ಪ್ರಕಾರ, ಛಂದಸ್ಸು, ರೂಪ ಮತ್ತು ರಚನೆಯ ಪಟ್ಟಿಯೊಂದಿಗೆ ಲೇಖಕರ ಹೆಸರುಗಳು, ಅವರ ಕೃತಿಗಳು ಮತ್ತು ಈ ಕೃತಿಗಳ ದಿನಾಂಕಗಳನ್ನು ಪಟ್ಟಿ ಮಾಡಲು ಡೇಟಾಬೇಸ್ ಗುರಿಯನ್ನು ಹೊಂದಿದೆ.

ಉ. ಶಾಸನಗಳು

ಪ್ರಸ್ತುತ ಯೋಜನೆಯು ಕನ್ನಡದ ಶಾಸನಸಂಚಯವನ್ನು ಡಿಜಿಟಲೀಕರಣಗೊಳಿಸುವ ಧ್ಯೇಯ ಹೊಂದಿದೆ. ದಿನಾಂಕ, ರಾಜರು, ರಾಜವಂಶ, ಸ್ಥಳ, ದೇವತೆಗಳು ಇತ್ಯಾದಿಗಳ ವಿವರವಾದ ಮೆಟಾಡೇಟಾದೊಂದಿಗೆ ಅದನ್ನು ಹುಡುಕಬಹುದಾಗಿದೆ. ಲಭ್ಯವಿರುವ ಮಾನವಸಂಪನ್ಮೂಲಗಳ ಆಧಾರದ ಮೇಲೆ, ಪ್ರತಿ ಶಾಸನಕ್ಕೆ ವಿಮರ್ಶಾತ್ಮಕ ವ್ಯಾಖ್ಯಾನ ಮತ್ತು ಅನುವಾದಗಳನ್ನು ಒದಗಿಸುವ ಗುರಿ ಇದೆ. ಹೆಚ್ಚುವರಿಯಾಗಿ, ವಿದ್ವತ್ಪೂರ್ಣ ಲೇಖನಗಳೊಂದಿಗೆ ಕ್ರಾಸ್-ರೆಫರೆನ್ಸ್ ಶಾಸನಗಳನ್ನು ಒದಗಿಸಲಾಗುವುದು ಮತ್ತು ಶಾಸನದ ಪದಗಳ ಸೂಚಿಯನ್ನು ಸಿದ್ಧಪಡಿಸಲಾಗುವುದು.

ಊ. ದೇವಾಲಯಗಳ ನಕ್ಷೆ ಮತ್ತು ದಾಖಲೆ

ದೇವಾಲಯಗಳ ನಕ್ಷೆ ಮತ್ತು ದಾಖಲೆ ಎಂಬ ಈ ಭಾಗದಲ್ಲಿ ದೇವಾಲಯಗಳನ್ನು ವ್ಯವಸ್ಥಿತವಾಗಿ ಕ್ಯಾಟಲಾಗ್ ಮಾಡಲು ಮತ್ತು ದೇವಾಲಯಗಳ ವಿವರವಾದ ದಾಖಲೆಗಳನ್ನು ರಚಿಸುವ ಉದ್ದೇಶವಿದೆ. ಇದು ಇತಿಹಾಸ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಮಹತ್ತ್ವವನ್ನು ಒಳಗೊಂಡಿದೆ. ಈ ಕಾರ್ಯಕ್ರಮದಡಿ ದೇವಾಲಯವಿರುವ ಸ್ಥಳಗಳನ್ನು ಭೌಗೋಳಿಕವಾಗಿ ಮ್ಯಾಪಿಂಗ್ ಮಾಡಿ, ಅವುಗಳ ನಿರ್ಮಾಣದ ಕಾಲಾವಧಿ, ವಾಸ್ತುಶಿಲ್ಪದ ಶೈಲಿಗಳು, ಶಾಸನಗಳು, ಪೂಜಿಸುವ ದೇವತೆಗಳು ಮತ್ತು ಸಂಬಂಧಿತ ಆಚರಣೆಗಳು ಮತ್ತು ಹಬ್ಬಗಳ ಸಮಗ್ರ ಡೇಟಾವನ್ನು ತಯಾರುಮಾಡಲಾಗುವುದು. ಇಂತಹ ಕಾರ್ಯಕ್ರಮಗಳು ಆಶಾದಾಯಕ ವಾಗಿದ್ದು ಜನರಲ್ಲಿ ಜಾಗೃತಿ ಮೂಡಿಸುತ್ತವೆ ಮತ್ತು ಸಂರಕ್ಷಣೆಯ ಪ್ರಯತ್ನಗಳನ್ನು ಹೆಚ್ಚಿಸುತ್ತವೆ.

ಎ. ಹೆಚ್ಚಿನ ಚಟುವಟಿಕೆಗಳು

ಅಭಿಜಾತ ಕನ್ನಡ ಭಾಷೆ ಮತ್ತು ಸಾಹಿತ್ಯದ ಲಭ್ಯತೆ ಮತ್ತು ತಿಳಿವಳಿಕೆಯನ್ನು ಹೆಚ್ಚಿಸಲು ಬಹುತೇಕ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗಿದೆ. ನಮ್ಮ ಪ್ರಕಾಶನ ವಿಭಾಗದ ಮೂಲಕ, ಹೊಸ ವಿದ್ವತ್ಪೂರ್ಣ ಗ್ರಂಥಗಳ ಪ್ರಕಟನೆ, ಅನುವಾದ ಮತ್ತು ಮೌಲ್ಯಯುತವಾದ ಹಳೆಯ ಕೃತಿಗಳ ಮರುಪ್ರಕಟನೆ ಕಡೆ ಗಮನ ಹರಿಸಲಾಗುವುದು. ಕಲಿಕೆ ಮತ್ತು ಸಂಶೋಧನೆಯನ್ನು ಬೆಂಬಲಿಸಲು, ಆಯ್ದ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅನುದಾನ ಮತ್ತು ಫೆಲೋಶಿಪ್‌ಗಳನ್ನು ನೀಡುವುದರ ಜೊತೆಗೆ ಬೋಧನೆ ಮತ್ತು ಮಾರ್ಗದರ್ಶನದ ಸಹಾಯವನ್ನು ಒದಗಿಸುತ್ತೇವೆ. ಹೆಚ್ಚುವರಿಯಾಗಿ, ವಿದ್ವಾಂಸರು, ಉತ್ಸಾಹಿಗಳು ಮತ್ತು ಜನಸಮುದಾಯಕ್ಕೆ ಕನ್ನಡ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು, ಚರ್ಚಿಸಲು ಮತ್ತು ಸಹಯೋಗ ನೀಡಲು ಅವಕಾಶ ಕಲ್ಪಿಸಿ ಕಾರ್ಯಕ್ರಮಗಳನ್ನು ಮತ್ತು ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ.