EN | KA

Menu

ಪ್ರಕಟನೆಗಳ ಪಟ್ಟಿ

ಕೇಂದ್ರವು ಪ್ರಮುಖ ಅಭಿಜಾತ ಕನ್ನಡ ಪಠ್ಯಗಳನ್ನು ಇಂಗ್ಲಿಷ್ ಮತ್ತು ಆಧುನಿಕ ಕನ್ನಡಕ್ಕೆ ಅನುವಾದಮಾಡಿಸುತ್ತದೆ. ಇದು ಕನ್ನಡ ಸಾಹಿತ್ಯ ಮತ್ತು ವಾಸ್ತುಶಿಲ್ಪ ಪರಂಪರೆಗೆ ಸಂಬಂಧಿಸಿದ ಮೊನೋಗ್ರಾಫ್‌ಗಳು ಮತ್ತು ಕಾಫಿ ಟೇಬಲ್ ಪುಸ್ತಕಗಳನ್ನು ಸಹ ಪ್ರಕಟಿಸುತ್ತದೆ. ನಮ್ಮ ಯೋಜಿತ ಆರಂಭಿಕ ಪ್ರಕಟಣೆಗಳ ಪಟ್ಟಿ ಇಲ್ಲಿದೆ:

ಅ. ಕಲಾ ಪುಸ್ತಕಗಳು

Śaiva Monuments at Paṭṭadakal

ಪಟ್ಟದಕಲ್ಲು ಭಾರತದ ಕಲೆ ಮತ್ತು ನಾಗರಿಕತೆಯ ಅತ್ಯಂತ ಶ್ರೀಮಂತ ಮತ್ತು ಭವ್ಯವಾದ ಸ್ಥಳಗಳಲ್ಲಿ ಒಂದು. ಇದು ಯುನೆಸ್ಕೋದ ವಿಶ್ವಪರಂಪರೆಯ ಪಟ್ಟಿಯಲ್ಲಿ ಗುರುತಿಸಲ್ಪಟ್ಟ ಪ್ರಸಿದ್ಧ ಪುರಾತತ್ತ್ವಶಾಸ್ತ್ರದ ತಾಣವಾಗಿದೆ. ಆದರೆ ಇದನ್ನು ಸಮಗ್ರವಾಗಿ ದಾಖಲಿಸಲಾಗಿಲ್ಲ. ಅನೇಕ ವರ್ಷಗಳ ಬರವಣಿಗೆ ಮತ್ತು ಸಂಶೋಧನೆಯ ಅನಂತರ, ವಿವರವಾದ ವಾಸ್ತುಶಿಲ್ಪದ ರೇಖಾಚಿತ್ರಗಳೊಂದಿಗೆ ಈ ಸಮಗ್ರವಾದ ಸಚಿತ್ರ ಮೊನೋಗ್ರಾಫ್ ಅನ್ನು ಕೇಂದ್ರವು ಕಾಫಿ ಟೇಬಲ್ ಪುಸ್ತಕವಾಗಿ ಅನೇಕ ಸಂಪುಟಗಳಲ್ಲಿ ಪ್ರಕಟಿಸಲು ಯೋಜಿಸಲಾಗಿದೆ.

ಲೇಖಕರು: ಪಿಯರೆ-ಸಿಲ್ವೈನ್ ಮತ್ತು ವಸುಂಧರಾ ಫಿಲಿಯೋಜಾ

ಆ. ಇಂಗ್ಲಿಷ್‌ ಅನುವಾದಗಳು

- ಕರ್ಣಾಟಕಭಾಷಾಭೂಷಣಂ, ಕ್ರಿ.ಶ. ೧೧೫೦

ನಾಗವರ್ಮನ ಕರ್ಣಾಟಕಭಾಷಾಭೂಷಣವು ಪಾಣಿನಿಯ ಅಷ್ಟಾಧ್ಯಾಯಿ ಮತ್ತು ಸಂಸ್ಕೃತ ಹಾಗೂ ಪ್ರಾಕೃತದಲ್ಲಿಯ ಇತರ ವ್ಯಾಕರಣಗಳ ಕಾರ್ಯವಿಧಾನಗಳನ್ನು ಅನುಸರಿಸಿ ಸಂಸ್ಕೃತದಲ್ಲಿ ರಚಿತವಾದ ಕನ್ನಡ ವ್ಯಾಕರಣ. ಇದು ಭಾಷಾಶಾಸ್ತ್ರ ಪರಿಭಾಷೆ, ಸಂಧಿ, ವಿಭಕ್ತಿ, ಧಾತುಗಳು ಮತ್ತು ಕನ್ನಡ ಭಾಷೆಯ ವಿವಿಧ ಘಟಕಗಳಿಂದ ಕೂಡಿದ ಹತ್ತು ಅಧ್ಯಾಯಗಳನ್ನು ಒಳಗೊಂಡಿದೆ.

ಸಂಪಾದಕ ಮತ್ತು ಅನುವಾದಕ: ಎಚ್.ವಿ. ನಾಗರಾಜರಾವ್, ಹಿರಿಯ ಸಂಸ್ಕೃತ ವಿದ್ವಾಂಸರು

- ಪಂಪಾಶತಕ ಮತ್ತು ರಕ್ಷಾಶತಕ, ಕ್ರಿ.ಶ.೧೧೮೦

ಹಂಪೆಯ ಹರಿಹರನ ಪಂಪಾಶತಕ ಮತ್ತು ರಕ್ಷಾಶತಕ, ಶತಕ ಸಾಹಿತ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿವೆ. ಶತಕವು ನೂರು ಮುಕ್ತಕಗಳನ್ನು ಒಳಗೊಂಡಿರುವ ಜನಪ್ರಿಯ ಸಾಹಿತ್ಯ ಪ್ರಕಾರ. ಭಕ್ತಿ, ವೈರಾಗ್ಯ ಮತ್ತು ನೀತಿ ಈ ಪ್ರಕಾರದಲ್ಲಿ ಬಳಸುವ ಸಾಮಾನ್ಯ ವಿಷಯಗಳಾಗಿವೆ. ಶತಕಗಳು ಸಾಮಾನ್ಯವಾಗಿ ಕವಿಯ ಭಾವನೆಗಳನ್ನು ಮತ್ತು ವೈಯಕ್ತಿಕ ಅನುಭವಗಳನ್ನು ಪ್ರತಿಬಿಂಬಿಸುತ್ತವೆ. ಹರಿಹರನ ಶತಕಗಳು ಶಿವನ ಬಗೆಗಿನ ಭಕ್ತನ ಆಂತರಿಕ ಭಾವನೆಗಳ ಅನ್ವೇಷಣೆಗೆ ಸಾಹಿತ್ಯಕ ಮಾದರಿಗಳಾಗಿವೆ.

ಅನುವಾದಕ: ಗಿಲ್ ಬೆನ್-ಹೆರುತ್, ಸಹ ಪ್ರಾಧ್ಯಾಪಕರು, ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯ

ಇ. ಕನ್ನಡ ವ್ಯಾಖ್ಯಾನಗಳು

ಕನ್ನಡದ ಪ್ರಮುಖ ಗ್ರಂಥಗಳ ಪದಚ್ಛೇದದೊಂದಿಗೆ ವಿಮರ್ಶಾತ್ಮಕ ವ್ಯಾಖ್ಯಾನಗಳು ಮತ್ತು ಅನುವಾದಗಳನ್ನು ಪ್ರಕಟಿಸಲು ಕೇಂದ್ರವು ಯೋಜಿಸಿದೆ.

- ಚೂಡಾರತ್ನ ಶತಕ

ಇದು ಅಜ್ಞಾತಕರ್ತೃವಿನಿಂದ ರಚಿತವಾದ ನೀತಿಬೋಧಕ ಶತಕವಾಗಿದೆ. ಈ ಜನಪ್ರಿಯ ಪಠ್ಯದ ಕಾಲವೂ ತಿಳಿದಿಲ್ಲ. ಇದು ಮೌಖಿಕ ಸಂಪ್ರದಾಯದ ಮೂಲಕ ಬಹಳ ಹಿಂದಿನಿಂದಲೂ ಜನಪ್ರಿಯಪಠ್ಯವಾಗಿ ಉಳಿದುಬಂದಿದೆ. ಅಂತಹ ನೀತಿ ಶತಕಗಳಿಗೆ ಯುಕ್ತವಾದ ಕಂದ ಛಂದದಲ್ಲಿ ಇದನ್ನು ಬರೆಯಲಾಗಿದೆ.

ಟೀಕಾಕಾರರು: ಅಕ್ಕಮಹಾದೇವಿ, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರು

- ರಾಮಧಾನ್ಯ ಚರಿತೆ, ಕ್ರಿ.ಶ. ೧೫೫೦

ಮಹಾನ್ ಕೀರ್ತನಕಾರರಾದ ಕನಕದಾಸರ ರಾಮಧಾನ್ಯ ಚರಿತೆ ವಿಡಂಬನಾತ್ಮಕ ರಚನೆಯಾಗಿದ್ದು, ಇದರಲ್ಲಿ ರಾಗಿ ಮತ್ತು ಬತ್ತದ ನಡುವೆ ಚರ್ಚೆ ನಡೆಯುತ್ತದೆ. ರಾಮನು ರಾಗಿಯನ್ನು ಬೆಂಬಲಿಸಿ ತನ್ನ ಅಂತಿಮ ನಿರ್ಧಾರವನ್ನು ನೀಡುತ್ತಾನೆ.

ಟೀಕಾಕಾರರು: ನಾಗರತ್ನಮ್ಮ, ಕನ್ನಡ ಅಧ್ಯಾಪಕರು, ಮಹಾರಾಜ ಕಾಲೇಜು, ಮೈಸೂರು

- ನಳಚರಿತೆ, ಕ್ರಿ.ಶ. ೧೫೫೦

ನಳಚರಿತೆಯು ವ್ಯಾಸಮಹಾಭಾರತದಲ್ಲಿ ಮೊದಲು ಕಾಣಿಸಿಕೊಳ್ಳುವ ನಳನ ಪ್ರಸಿದ್ಧ ಕಥೆಯನ್ನು ಆಧರಿಸಿದೆ. ಈ ಕಾವ್ಯದಲ್ಲಿ ಕನಕದಾಸರು ಮೂಲಕಥೆಗೆ ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿದ್ದಾರೆ.

ಟೀಕಾಕಾರರು: ಗೀತಾ ನಾವಲ್, ವಿಶ್ರಾಂತ ಕನ್ನಡ ಪ್ರಾಧ್ಯಾಪಕರು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು

- ಪಂಪಾ ಶತಕ, ಕ್ರಿ.ಶ. ೧೧೮೦

ಹರಿಹರನ ಪಂಪಾಶತಕವು ಶತಕ ಸಾಹಿತ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಶತಕವು ನೂರು ಮುಕ್ತಕಗಳನ್ನು ಒಳಗೊಂಡಿರುವ ಜನಪ್ರಿಯ ಸಾಹಿತ್ಯ ರೂಪವಾಗಿದೆ.

ಟೀಕಾಕಾರರು: ಬಿ.ಪಿ. ಆಶಾಕುಮಾರಿ, ಕನ್ನಡ ಪ್ರಾಧ್ಯಾಪಕರು, ಮಹಾರಾಜ ಕಾಲೇಜು, ಮೈಸೂರು

ಇವು ನಮ್ಮ ಹೆಚ್ಚು ಮಹತ್ತ್ವಾಕಾಂಕ್ಷೆಯ ಯೋಜನೆಗಳಿಗೆ ಮತ್ತು ಕನ್ನಡ ಸಾಹಿತ್ಯ ಪರಂಪರೆಯನ್ನು ಎತ್ತಿ ಹಿಡಿಯುವ ಗುರಿಗೆ ಪೂರ್ವಭಾವಿ ಪ್ರಯತ್ನಗಳಾಗಿವೆ.