XV
ಖಗೇಂದ್ರಮಣಿದರ್ಪಣ
ಬಾಷ್ಟಚಿಕಿತ್ಸಾ ಪ್ರಕರಣಂ
ವ. ಬಾಷ್ಟವಿಧಾನ ಚಿಕಿತ್ಸೆಯಂ ಪೇೞ್ವೆಂ
ಶ್ರೀಮತ್ಪರಮಾತ್ಮನೆನಿಪ್ಪಾ ಮದರತಿರಾಗದೋಷರಹಿತನನೊಸೆದಾಂಪ್ರೇಮದೊಳಂ ವಂದಿಸಿಯೆ ಮನೋಮುದದಿಂ ಬಾಷ್ಟಭೇದಮಂ ವಿವರಿಸುವೆಂ
ಅಪ್ರಮಿತ ವೀರ್ಯನಾ ಜಗತೀಪ್ರಿಯತಮವಾದಿಯಂಘ್ರಿಪದ್ಮಂಗಳ್ಗೊಪ್ಪೆ ಪ್ರಣತನಾಗಿ ಬಾಷ್ಟವಿಷಪ್ರಹರಣಮಪ್ಪ ವೈದ್ಯಮಂ ಪ್ರಕಟಿಸುವೆಂ
ಕ್ಷಿತಿಯೊಳ್ ಬಾಷ್ಟಮೆ ಕೋಟಿಭೇದಮದು ತಾನೆಂಬತ್ತುನಾಲ್ಕೆಂಬ ಸೂಚಿತಮುಂಟಲ್ಲಿ ಸಮಸ್ತರಂ ತಿಳಿಪಲೆಂದಾನೆಲ್ಲಮಂ ಪೇೞ್ದೊಡಂವಿತತಂ ಶಾಸ್ತ್ರಮದಕ್ಕು ಮಂತಱಿವ ವರ್ಗಾಲಸ್ಯಮೆಂದಿಂತಿದಪ್ರತಿಮಂ ತಾನೆನೆ ಪೇೞ್ವೆನಾಂ ಕಿಱಿದಱಿಂ ತತ್ಸಾರಮಂ ಸಾಂಗದಿಂ
ಪಿತ್ತ ಶ್ಲೇಷ್ಮ ಸಮೀರ ಸನ್ನಿಯುರಿ ಕಾಸಂ ಛರ್ದಿ ಮೂರ್ಛಾಹ್ವಯಂಮತ್ತಾ ರಕ್ತ ಜಡಂ ಭ್ರಮಂ ಭ್ರಮಣೆಯುಂ ಶಲ್ಯಾಸ್ಥಿ ಶುಭ್ರಾಸಿತಾಯತ್ತಂ ಖಂಡಿತ ಹಿಕ್ಕೆ ಸೊಕ್ಕು ಸಹಿತಂ ಸಿಂಗಿ ಕ್ರಿಮಿ ಪ್ರ (ದೃ)ಷ್ಟಮಂತತ್ತದ್ಭೇದಮನಾ ಚಿಕಿತ್ಸೆಸಹಿತಂ ಪೇೞ್ವೆಂ ಮನೋರಾಗದಿಂ
ವ. ಅದೆಂತೆಂದೊಡೆ
1 ಪಿತ್ತಂ
ಪಿತ್ತೋದ್ರೇಕಂ ಪುಗುೞುಂಚಿತ್ತಭ್ರಮೆಯೆಂಬಿವಕ್ಕುಮಂಗಮ[ದುಂ] ತಾನೆತ್ತಂ ಹಳದಿಯ ವರ್ಣಂಬೆತ್ತಿರ್ಪುದು ಪೈತ್ಯಮೆನಿಪ ಬಾಷ್ಟದ ಭೇದಂ
ಕಳಿ ಪುಣಿಸೆಯೆಲೆಯರಸದಿಂತೊಳೆವುದು ಪುಣ್ಣಂ ಸಮುದ್ರಫಲಮಂ ಬೞಿಯಂಕಳಿಯಿಂ ನಸ್ಯಾಂಜನಮಂತಳಿವಿಲ್ಲದೆ ಮಾಡೆ ತದ್ವಿಷಂ ಪಱಿಪಡುಗುಂ
2 ಶ್ಲೇಷ್ಮಂ
ರಸಿಗೆಗಳೊಸರ್ಗುಂ ಗಾಯದದೆಸೆಯಿಂ ಬಾಯಿಂದೆ ಲೋಳೆ ಸುರಿಗುಂ ಮತ್ತಂಮುಸುಡೆಯ್ದೆ ಬಾವುದುಂ ಭಾವಿಸೆ ಬಧಿರತೆಯಕ್ಕುಮದುವೆ ಕಫದ ವಿಶೇಷಂ
ಅಮರ್ದಾ ತಗಚೆಯ ರಸದೊಳಮಮರಿಯೊಳಂ ತೊಳೆದು ಗಾಯಮಂ ಹಾಲೆಯ ಬೀಜಮನೆಚ್ಚಲಮರಿಯಿಂ ಕಣ್ಗಮದಂ ನಸ್ಯಮನೊಡರ್ಚೆ ಬಾಷ್ಟಂ ಕಿಡುಗುಂ
3 ವಾತಿಕಂ
ವಾತಿಕಮೆನಿಸಿದ ಬಾಷ್ಟಕ್ಕೇತೊದಳಂಗದೊಳೆ ಶೂಲ ಪುಟ್ಟುಗುಮೆತ್ತಂಮಾತೇಂ ತೊಳೆವುದು ಕತ್ತೆಯಗೋತದೊಳಂ ಮೇಘನಾದಿವೆರಸಂತದಱಿಂ
ವ. ಅಂತಾ ಪುಣ್ಣಂ ತೊಳೆದ ಬೞಿಕಂ ಮರ್ದು
ಆ ಮೇಘನಾದಿಯೆಂಬಭಿರಾಮತೆಯೌಷಧಿಯ ಮೂಲಮಂ ಮರ್ದಿಸಿ ಸುಪ್ರೇಮದೊಳಂ ಪಾನಾಂಜನನಾಮಸನಸ್ಯಮನಡರ್ಚೆ ತದ್ವಿಷಮೞಿಗುಂ
4 ಸನ್ನಿ
ಸಂನಿಯ ಬಾಷ್ಟದೆ ನಾಡಿಯೊಳಂ ನಸು ಮಿಡುಕಿಲ್ಲ ಪುರ್ಬನಾಡಿಸುಗುಂ ಮತ್ತಂ ನಾಲಗೆ ಬೀೞ್ಗುಂ ತಾಂತಂನಂ ಮಱೆದಿರ್ಕುಮದಱಿನಿದುವೆ ನಿದಾನಂ
ಒಡಗೂಡಲ್ ಕುಲಿಗನ ರಸದೊಡನಾಡಿನ ಮೂತ್ರವೆರೆದು ತೊಳೆವುದು ಪುಣ್ಣಂಪಡೆಮಾತೇಂ ಸನ್ನಿಯ ಪುಣ್ಬಡೆದಂ ಜೀವಿಸುವುದರಿದು ಭೂಮಂಡಲದೊಳ್
5. ಉರಿ
ಉರಿಯೆಂಬ ಬಾಷ್ಟದೊಳ್ ನೀರ್ಸುರಿಗುಂ ಕಣ್ಣಿಂದೆ ದಂತಶೂಲೆಯುಮಕ್ಕುಂಉರಿಗುಂ ಸರ್ವಾಂಗಂ ಬಾಯ್ಕರಮಾಱುಗುಮಿಂತಿದರ್ಕೆ ಪೇೞ್ವೆಂ ಮರ್ದಂ
ಸರಿಯಾಗಿ ಹಾಲಿವಾಣದಗರುಗದ ರಸಮವಱೊಳೊಂದಿಸಮರಿಯನಂತಾಯೆರಡಱ ಸರಿಯಿಂ ತೊಳೆವುದುನಿರುತಂ ಕೂಷ್ಮಾಂಡಫಲರಸಂಗಳೊಳಂ ಮೇಣ್
ರಾಜಿಸುವ ಕುಂಬಳಂಗಳಬೀಜಂಗಳ ತಿರುಳನೆಸೆವ ಶರ್ಕರೆಯಿಂ ತದ್ಭಾಜಿತ ಫಲರಸದಿಂದಂಯೋಜಿಸಿ ಕುಡಿಯಲ್ಕಮಂತದುಪ [ವಿಷ]ಮಕ್ಕುಂ
6 ಕಾಸಂ
ಪರಿಕಿಸೆ ಕಾಸದ ಬಾಷ್ಟಕ್ಕೆರಡುಂ ದೃಷ್ಟಿಗಳ ಮಾಂದ್ಯಮಕ್ಕುಂ ಕೆಮ್ಮುಂಪಿರಿದಕ್ಕುಂ ನಾಲಗೆ ತೆರೆದಿರದುಬ್ಬಸಮಕ್ಕುಮದಱ ತೆಱನಂ ನರರೊಳ್
ಆಕಳ ಮೂತ್ರದೊಳಂ ಸವಿವೇಕಂ ಗಣಜಿಲೆಯ ಕೊನರನರೆದು ಬೞಿಕ್ಕಾಲೋಕಿಸಿ ತೊಳೆವುದದಂ ನಿರ್ವ್ಯಾಕುಳದಿಂ ಮಾೞ್ಕೆ ನಸ್ಯ ಪಾನಾಂಜನಮಂ
ವ. ಅದಱಿಂದಾ ಬಾಷ್ಟಂ ಪ್ರಶಮಿಸುಗುಂ
7 ಛರ್ದಿ
ವಮನದ ಬಾಷ್ಟಕ್ಕಂ ತಾಂಕ್ರಿಮಿಗಳ್ ಬಾಯಿಂದೆ ಸುರಿಗುಮಡಿಗಡಿಗಂ ತಾಂವಮನಮದಕ್ಕುಂ ಗಾಯಂಸಮನಿಸಿದೆಡೆಯಿಂದೆ ಕೂಳೆ ಸುರಿಗುಮವಶ್ಯಂ
ಕರಿಮೂತ್ರದೊಳಂ ಬೆರಸುಗೆಕುರುಟಿಗೆಯ ರಸಂಗಳಂ ಕ್ಷತಸ್ಥಾನಮುಮಂಭರದಿಂದೆ ತೊಳೆದು ಘಾಯಮನಿರದಾರೈವುದು ಬೞಿಕ್ಕೆ ನಿರ್ಮಾಕ್ಷಿಕದೊಳ್
8 ಮೂರ್ಛೆ
ಮುಚ್ಚೆಯ ಬಾಷ್ಟಕ್ಕಾಗಳೆಮುಚ್ಚೆಯುಮಾಕ್ಷಣದೆ ಹಾಸ್ಯಮುಂ ಶೋಕಂ ತಾಂಬಿಚ್ಚತದ ನಟನಮುಂ ಪಲ್ವಚ್ಚನಮಪ್ಪುದುಮನೂನಮುಣ್ಬುದುಮಕ್ಕುಂ
ಗಾಯಮನೀಕ್ಷಿಸಿ ತೊಳೆವುದುಪಾಯದೊಳಂತುಷ್ಟ್ರ ಮೂತ್ರದಿಂ ತ್ರಿಕಟುಕಮಂಶ್ರೇಯಸ್ಕರಮೆನಲೆಚ್ಚುವುದಾಯತಮೆಸೆವಕ್ಷಿಗಳ್ಗೆ ಹಿತಕರಮಕ್ಕುಂ
9 ರಕ್ತಂ
ರಕ್ತದ ಬಾಷ್ಟಕ್ಕಂತಾರಕ್ತಮೆ ತಾಂ ಸುರಿಗುಮೆಸೆವ ಬಾಯಿಂ ಮೂಗಿಂವ್ಯಕ್ತಂ ಲಿಂಗದೊಳೆಂಬುದಿದುಕ್ತಂ ಕಣ್ ಪಚ್ಚನುಗುರ್ಗಳುಂ ಬಿಳಿದಕ್ಕುಂ
ಅದನೊಟ್ಟೆಯ ಮೂತ್ರದೊಳೊಂದಿದ ಮೂತ್ರದೆ ಕನಕರಸದೊಳಂ ತೊಳೆವುದುಮಂತದಱುಪಶಮಮಕ್ಕುಂ ಜಿನಪದಪಂಕಜ ಮಧುಪನೆನಿಪ ಮಂಗನ ಮತದಿಂ
10 ಜಡಂ
ಜಡಬಾಷ್ಟದವನ ನಾಲಗೆಜಡಮಕ್ಕುಂ ಸ್ಫೋಟಕಂಗಳಂಗದೊಳಕ್ಕುಂನುಡಿಯುಂ ಬೞಲ್ಗುಂ ಮೂಗಿನಯೆಡೆ ತುಱಿಸುಗುಮಿಂತಿವೆಯ್ದೆ ತಚ್ಚಿಹ್ನಂಗಳ್
ಈಡಿತದಿಲುಮಿಚ್ಚೆಯ ಪುಳಿಗೂಡಿದ ಸೌತೆಯಫಲೋತ್ಥರಸದಿಂ ತೊಳೆಯಲ್ಈಡಿತದರಸಿನಮಂ ಕರಿಮಾಡಿ ನಿಯೋಜಿಸಿದ ನಸ್ಯದಿಂದುಪಶಮಿಕುಂ
11 ಭ್ರಮೆ
ಭ್ರಮೆಯೆಂಬ ಪೆಸರ ಬಾಷ್ಟಂಭ್ರಮೆಯನೆ ಮಾೞ್ಕುಂ ಶರೀರಮುಂ ಕಂಪಿಸುಗುಂಕ್ರಮದಿಂ ರೋಮಮದಿರ್ಗುಂಸಮನಿಸಿ ಜಲಮೊಸರ್ಗುಮಂತಿರಲ್ ಕಡೆವಾಯಿಂ
ನಳನಳಿಪ ಕಾಗೆದೊಂಡೆಯಬೆಳೆದಿರ್ದ ಕುಮಾರಿಯೆಸೆವ ರಸದಿಂ ಬೆರಸಾಕುಳಮೇಂ ಮೂತ್ರದೊಳೊಂದಲ್ತೊಳೆದು ಹರೀತಕಿಯನಮರಿಯಿಂದಿಸೆ ಮಾಣ್ಗುಂ
12 ಭ್ರಮಣೆ
ಭ್ರಮಣೆಯ ಬಾಷ್ಟಕ್ಕೆ ಶಿರೋಭ್ರಮಣಂ ಬೞಲಿಕೆಗಳಕ್ಕುಮೀಕ್ಷಿಸೆ ಕೂಷ್ಮಾಂಡಮಿರಲ್ ತತ್ಫಲರಸದಿಂದಮೆ ತೊಳೆವುದು ತಥ್ಯಮಾಮಯಂ ಪರಿಹರಿಕುಂ
13 ಶಲ್ಯಂ
ಶಲ್ಯವೆಸರಾದ ಬಾಷ್ಟದೊಳೆಲ್ಲಂ ಕೃಶಮಕ್ಕುಮಾ ಶರೀರಂ ನಖರುಕ್ಪಲ್ಲಟಿಸಿ ಪಚ್ಚನಕ್ಕುಂಪೊಲ್ಲಂ ಜ್ವರಮಕ್ಕು ಪರೆಯದಿರ್ಕುಂ ಮೂತ್ರಂ
ಅಂಗುರೆಸೆವಾಡುಸೋಗೆಯಸಂಗತಮೆನೆ ಕಾಗೆದೊಂಡೆಯೆಲೆಯಂ ಬೆರಸೇಕಾಂಗದಜದುಗ್ಧದಿಂದರೆದಂಗದ ಗಾಯಮನೆ ತೊಳೆವುದಂತದನೆ ವಲಂ
ಚೆಚ್ಚರದಕ್ಷಿದ್ವಿತಯದೊಳೆಚ್ಚುವುದಂತದನೆ ನಸ್ಯಮಂ ಮಾೞ್ಪುದದೇನಚ್ಚರಿ ಹಿತಮೆಂಬಿಳೆಯೊಳ್ಸಚ್ಚರಿತ ಮುನೀಂದ್ರವಚನಮುಂ ತಪ್ಪುಗುಮೇ
14 ಅಸ್ಥಿ
ದುಷ್ಟತರಮೆನಿಸಿದಸ್ಥಿಯಬಾಷ್ಟದೊಳೆಲು ಕರಗಿ ಘಾಯದಿಂದಂ ಬೀೞ್ಗುಂಕಷ್ಟಪ್ರಮೇಹಮಕ್ಕುಮರಿಷ್ಟಂ ತದ್ವೃಷಣಪಾತಮಂತದು ಕಷ್ಟಂ
ಘನನಾದಿಯ ರಸದಿಂ ಕೂಡಿ ನೃಮೂತ್ರದೆ ತೊಳೆವುದೇಱನಾಗಳೆ ಮತ್ತಾಘನನಾದಿಯ ಮೂಲಮನಂಜನ ಪಾನಾದಿಯೊಳೆ ರಚಿಸಲದು ಹಿತಮಕ್ಕುಂ
15 ಶ್ವೇತಂ
ಮಾತೇಂ ಪೞ್ತಿಯ ತೊಳೆವೋಲ್ಶ್ವೇತಾಖ್ಯದ ಬಾಷ್ಟದಿಂದಮಕ್ಕುಂ ಗಾಯಂಪೀತಾಂಗರಕ್ತಮುಂ ಪುರುಹೂತಂಗಮಸಾಧ್ಯಮದು ಸದೇವರಿನೞಿಗುಂ
ಆನೆಯ ಲಂಡದ ರಸದಿಂಜಾನಿಸಿ ವಟಫಲಮನರೆದು ತೊಳೆದಾ ಕ್ಷತಮಂಭೂನುತಮೆನೆ ಕಣ ವಚೆಗಳನಾ ನೆಗೞ್ವುದಱಿಂದೆ ರಚಿಸು ನಸ್ಯಾಂಜನಮಂ
16 ಅಸಿತಂ
ಗಾಯಂ ಕರಿದಪ್ಪುದು ತತ್ಕಾಯದ ನಿಜಕಾಂತಿ ಕಿಡುಗುಮಸಿತಾಕೃತಿಯಾಶ್ರೇಯಂ ವಮನಂ ಪಿರಿದನ್ಯಾಯದ ನೆಲೆ ಕೃಷ್ಣನೆಂಬ ಬಾಷ್ಟದಿನಕ್ಕುಂ
ಕುದುರೆಯ ಮೂತ್ರಂ ಜಂಭೀರದ ಫಲರಸಯುಕ್ತಮಾಗೆ ತೊಳೆವುದು ತಾಂ ಗಾಯದ ಬಾಯಂ ಗುಂಜಿಯನೊಳ್ಳಿದುದುಂ ಕಣ್ಗೆಸಲೆ ಬಾಷ್ಟದಾ ವ್ಯಥೆ ಕಿಡುಗುಂ
17 ಖಂಡಿತಂ
ಖಂಡವೆಸರೆಸೆವ ಬಾಷ್ಟದೆಖಂಡಮನೇ ಕಾರುತಿರ್ಪನೇಱಿನ ಬಾಯಿಂಖಂಡಂಗಳೆ ಬೀೞ್ಗುಂ ಬಸಿಱುಂಡವೊಲುಬ್ಬರಿಸೆ ನೇತ್ರಮುಂ ಬಿಳಿದಕ್ಕುಂ
ತೊಳಸಿಯ ರಸದೊಳ್ ಬೆರಸಲ್ನಳನಳಿಸುವ ಲೋಯಿಸರದ ರಸಮಂತದಱಿಂತೊಳೆಯಲ್ಕಂತಾ ಬಾಷ್ಟದಮಲಮೞಿಗುಂ ಸುಖದೊಳಿರ್ಕುಮಂತಾ ಪುರುಷಂ
18 ಹಿಕ್ಕೆ
ಹಿಕ್ಕೆಯ ಬಾಷ್ಟಮದೆಂತೆನೆಬಿಕ್ಕೞಿಕೆಗಳಕ್ಕುಮಕ್ಷಿಯೊಳ್ ತಿಮಿರಂ ತುಂಬಿರ್ಕುಂ ತನು ಕೆಯ್ ಕಾಲ್ಗಳೊಳಕ್ಕುಂ ನಿಶ್ಚೇಷ್ಟೆಯಂತದರ್ಕುಪಶಮನಂ
ನಿಂಬೆಯ ಪುಳಿಯುಮನಮರಿಯುಮಂ ಬೆರಸುವುದವಱ ಗಾಯಮಂ ತೊಳೆವುದು ಮತ್ತಂ ಬಿಡದಾರಯ್ವುದದರ್ಕಿಂಬಿನ ಪಥ್ಯಕ್ರಮಂಗಳೆಂಬಿವು ಮುಖ್ಯಂ
19 ಸೊರ್ಕು
ಸೊರ್ಕಲ್ತೆ ಧನುರ್ವಾತದತಕ್ಕನವೋಲ್ ತೆಗೆದುಮಂಗಮಂ ಪೆಱಗಣ್ಗಂಪಕ್ಕದೊಳೆ ಶೂಲೆಗಳಲೆಗಳಕ್ಕುಂ ಕೆಂಪುಗುರ್ಗಳೊಳ್ ಬಸಿಱ್ ತೆಗೆದಿರ್ಕುಂ
ಸ್ಫುಟಮಾದ ಮೂತ್ರದೊಳೆ ತಾಂವಟವೃಕ್ಷದ ನಾರ ರಸಮನೊಂದಿಸಿ ತೊಳೆದುಂಝಟಿತೆಯೊಳೆ ಪುತ್ರಜೀವಿಯಘಟಿಯಿಸಿ ಲೋಚನದೊಳೆಚ್ಚಲಂತದು ಮಾಣ್ಗುಂ
20 ಸಿಂಗಿ
ಸಿಂಗಿಯ ಬಾಷ್ಟದೆ ಕಣ್ಣಳ್ಪೊಂಗಿರ್ಕುಂ ಬಾಯ್ಗೆ ಪೊಗೆಯ ನಾತಮದಕ್ಕುಂಬಿಂಗದವೋಲ್ ಬಿರಿದುದಿರ್ಗುಮದಂಗಜ್ಜರಮಕ್ಕುಮದು ಕರಂ ಕಷ್ಟತರಂ
ಮೂತ್ರಂ ಜಂಭೀರಂ ಕರಿಮೂತ್ರಂ ಲೇಸಪ್ಪ ಬಂಜೆ ಮಡುವಾಗಲಿವಂಮಿತ್ರಜನಮೆಱೆದು ತೊಳೆಯಲಮಿತ್ರಂ ಬಾಷ್ಟಕ್ಕೆ ಸಿಂಗಿಗಳಮಳಚರಿತ್ರಾ
21 ಕ್ರಿಮಿ
ಕ್ರಿಮಿಬಾಷ್ಟದ ಗುಣದಿಂದಂಭ್ರಮೆಯುಂ ಕ್ರೋಧಂಗಳಕ್ಕುಮುರಿಮೂತ್ರಂ ತಾಂಕ್ರಿಮಿಕುಲಮುರ್ಬುಗುಮೇಱಿನೊಳಮೋಘ[ಮನೆ]ಬಾಯಬಸಲೆಯುಂ ಸಂಭವಿಕುಂ
ಒರಸುಗೆ ನಿಂಬೆಯ ಪುಳಿಯೊಳ್ಸುರಸುರಿಕೆಯ ಪುತ್ರದಿಂದೆ ತೊಳೆವುದು ಬೞಿಕಂತಿರದತಿಬೇಗದೊಳೆತ್ತಂವಿರಚಿಸಿ ಗೋಮಯದ ಕಟ್ಟೆಯಂ ಸುತ್ತೆವರಂ
ಭ್ರಾಂತಿಲ್ಲದೆ ಕುರಟಿಗೆಯೆಲೆಯಂ ತೀವಿದ ರಸಸಮನ್ವಿತಂ ಸುಣ್ಣದ ಕಲ್ಲಂ ತೀವಿ ಕಡೆದು ಗಾಯದೊಳಂ ತೊಳೆವುದು ಮುನ್ನಿನಂತೆ ತದ್ವಿಷಮೞಿಗುಂ
22 ಶೋಭೆ
ಭಾವಿಸೆ ಶೋಭೆಯ ಬಾಷ್ಟಂಬಾವುದು ಮೆಯ್ಯೆಡೆ ನುಡಿಯುವ ನಾಲಗೆ ಬೀೞ್ಗುಂಜೀವಿಸುಗುಂ ಬ್ರಾಹ್ಮಿಯ ಸದ್ಭಾವ ಗುಡೂಚಿಯ ರಸಂಗಳಿಂ ತೊಳೆಯಲೊಡಂ
ಕಾಕೆಯ ಸೊಪ್ಪಿನ ರಸಮಂಮೂಕೊಱತಿಯ ರಸಮನಾದೊಡಂ ಮೇಣ್ ಬೆಳೆದಿರ್ದಾ ಕೌಡೆಯ ಫಲರಸಮಂವ್ಯಾಕುಳಮೇನೆರೆದು ತೊಳೆಯೆ ವಿಷಬಾಷ್ಟಹರಂ
ವ. ಇಂ ಸರ್ವ ಭಾಷ್ಟಕ್ಕೆ
ಕರಿಮೂತ್ರದೊಳಂ ತೊಳೆವುದುಪರಿಕಿಸೆ ಬಾಷ್ಟಂಗಳಾವುದಾದೊಡಂ ಮೇಣ್ಕರಿಯಿಕ್ಕಿದ ಲಂಡದ ರಸಮುರುಹಿತಮದಱಿಂದೆ ತೊಳೆದೊಡಂ ಹಿತಮಕ್ಕುಂ
ನರರೇತೋ ಮಲಮೂತ್ರಾಂತರದೊಳೆ ಪ್ರತ್ಯೇಕಮಾವುದಾದೊಡಮೊಂದಂದೊರಕಿದುದನೆಱೆದು ತೊಳೆವುದುಪರಿಹರಿಕುಂ ಬಾಷ್ಟದುಗ್ರವಿಷಮೆನಿತನಿತಂ
ಹುಲಿಯ ಮಲ ಹುಲಿಯ ತುಪ್ಪಂಹುಲಿಯಂಗದ ರುಧಿರಮಿವಱೊಂದೊಂದಂ ತಂದಲಸದೆ ತೊಳೆಯಲ್ ತನುವಿಂತೊಲಗುಗುಮಾವಾವ ಬಾಷ್ಟಮಾದೊಡಮಚಿರಂ
ಅಳುಕದೆ ಗಾಯದ ಬಾಯಂತೊಳೆವುದು ನರಮೂತ್ರದಿಂದಮರೆವುದು ಮತ್ತಂಮೊೞಗಿನ ತಿಗುಡಂ ಕಡಲೆಯಹುಳಿಯಂ ಬೆರಸರಿದೆನಿಪ್ಪ ಬಾಷ್ಟಂ ಕಿಡುಗುಂ
ತೊಳೆವುದು ಕಡಲೆಯ ಗಿಡುವಿನಪುಳಿಯಿಂ ಕರಿಮೂತ್ರದಿಂದೆ ತೊಯ್ದಱಿವೆಯೊಳಂತೊಳೆದೊರಸಿ ಕರಿಯ ಲಂಡಂಗಳನಿಕ್ಕಿಯೆ ಕಟ್ಟೆ ಬಾಷ್ಟಮೆಲ್ಲಂ ಕಿಡುಗುಂ
ಅಂಕೋಲೆಯ ಮೂಲಂ ನಿಶ್ಯಂಕಂ ಜಂಬೀರರಸ ನೃಮೂತ್ರಸಮೇತಂಭೋಂಕೆನಲರೆದುರೆ ತೊಳೆಯಲ್ತಾಂ ಕಳೆಗುಂ ಸಕಲ ಬಾಷ್ಟದತ್ಯುಗ್ರತೆಯಂ
ಮಿಟಮಿಟನೀಕ್ಷಿಸುತ್ತಿರದೆ ಕಳ್ಳಿಯ ಪಾಲಿನೊಳಿಟ್ಟು ಮರ್ದಿಸಿಂಕುಟಜದ ಮೂಲಮಂ ತೊಳೆವುದಂತದಱಿಂ ಪಗೆಯಸ್ತ್ರಧಾರೆಯಿಂಘಟಿಯಿಸಿದೇಱಬಾಯನದಱಿಂ ಚತುರುತ್ತರಮಪ್ಪಶೀತಿಯುತ್ಕಟತರ ಬಾಷ್ಟಭೇದ ವಿಷಮೆಯ್ದೆ ಕರಂ ಕಿಡುಗುಂ ಬುಧೋತ್ತಮಾ
ಕುರುಟಿಗೆ ಹಾರಿವಾಳದ ರಸಂಗಳೊಳಾಲದ ಪಾಲನಿಂಬಿನಿಂಬೆರಸಿಡು ತಾಮ್ರನಾಳಿಯೊಳೆ ತುಂಬದಱಿಂದೊರಸುತ್ತೆ ಪುಣ್ಣುಮಂಭರದೊಳಮೆಲ್ಲಮಂ ತೊಳೆಯಲಸ್ತ್ರದೊಳೂಡಿದನೇಕ ಬಾಷ್ಟಮಂಪರಿಹರಿಕುಂ ನರಂ ಸುಖದೆ ಬಾೞ್ಗುಮಿವುಂ ವಿಭು ಮಂಗನುಕ್ತಿಯಿಂ
ಇದು ಬಾಷ್ಟಂಗಳ ಭೇದಮಿಂತಿದು ಚಿಕಿತ್ಸಾಸಾರಭೇದಂಗಳೆಂಬುದನೆಲ್ಲಂದದೆ ಭಾವಿಸಿಂತು ನೇಱೆ ಪೇೞ್ದಂ ಸರ್ವ ವಿದ್ಯಾಬ್ಧಿಮಧ್ಯದೊಳಿಷ್ಟಾರ್ಥಫಲಪ್ರದಾಯಿಯೆನಿಸಿರ್ದಾ ಪಾರಿಜಾತಂ ದಯಾಸ್ಪದ ಮಂಗಂ ಮುಗುಳೀಪುರಪ್ರಭು ಲಸಚ್ಛ್ರೀಸಂಗ ಮಂಗಾತ್ಮಜಂ
ಗದ್ಯ. ಇದು ಸಕಲವಿದಮಲ ಜಿನೇಂದ್ರೋಕ್ತ ಸಿದ್ಧಾಂತ ಪಯಃಪಯೋನಿಧಿ ಪಾರಗ ಶ್ರೀ ಪೂಜ್ತಪಾದ ಮುನೀಂದ್ರ ಚಾರುಚರಣಾರವಿಂದ ಗಂಧ ಗುಣಾನಂದಿತ ಮಾನಸಂ ಶ್ರೀಮದಖಿಲ ಕಳಾಗಮೋತ್ತುಂಗ ಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್ ಸರ್ವಬಾಷ್ಟ ಚಿಕಿತ್ಸಾಧಿಕಾರಂ ಪಂಚದಶಂ


