XVI
ಖಗೇಂದ್ರಮಣಿದರ್ಪಣ
ಸಮಸ್ತ ನಿರ್ವಿಷಚಿಕಿತ್ಸಾ ಪ್ರಕರಣಂ
ಸಂಕೀರ್ಣಾಧಿಕಾರಂ
ಶ್ರೀರತ್ನತ್ರಯ ವಿನುತಾಧಾರಂ ಸುರರಾಜವಂದ್ಯನೆಮಗೀಗೆ ಮದೀಯಾರೋಗ್ಯಮನೆ ಮನೋಹರದೂರಂ ಶುದ್ಧೋಪಯೋಗಮಂ ವೀರಜಿನಂ
ನಾಗಾಕೃಷ್ಟಿಯುಮಂ ಸಹಾಗಮನಮಂ ಸುಪ್ರೇಷಣಾಸ್ಯೋದ್ಯದುದ್ಯೋಗಾಲೋಕನ ಬಂಧನಂಗಳನಮೋಘಂ ಕುಂಡಲೀಕೃತ್ಯ ನಿರ್ವೇಗತ್ವಂ ಘಟಸುಪ್ರವೇಶ ನವರೇಖಾಮಂತ್ರಮಂ ತದ್ವಿಷೋದ್ಯೋಗೋದ್ಯೋಗ ಸುರಾವಧೂತ ವಿವಿಷತ್ಖಾದ್ಯಂಗಳಂ ಮತ್ತಮುಂ
ನಾಗೋಚ್ಚಾಟನಮುಂ ನಯಯೋಗದೆ ಸಂಕೀರ್ಣದೊಳ್ ಪರಿಕಿಸಿಯೆ ಪೇೞ್ದಂರಾಗದೊಳಂ ಮಂಗಬುಧಂಯೋಗಾಮೃತಜಲಧಿ ಪೂಜ್ಯಪಾದರ ಮತದಿಂ
ಕವಳಂ ಗಂಡೂಷೆಯುಂ ತದ್ವಿಹಿತಮೆನಿಪ ಭೇದಂ ದಲಾ ಪುಣ್ಗೆ ವರ ಪ್ರಕ್ಷಾಳನಂ ಭೇಷಜವಿಧಿ ಕರಿಯೆಂಬಿಂತಿವಂ ಪೇೞ್ದೆನಾಂ ಪತ್ತು ವಿಶೇಷಾರ್ಥಂಗಳಿಂದಂ ಜನಹಿತಮೆನೆ ಸಂಕೀರ್ಣದೊಳ್ ಕ್ಷೀರವಾರಾಶಿವರಂ ಧರ್ಮಾರ್ಥ ಕಾಮಂಗಳನೆ ಪಡೆವ ಪುಣ್ಯಾತ್ಮಕರ್ಗಿನ್ನಮೋಘಂ
ನಿಯತಮೆನಿಪ್ಪ ಮಂತ್ರಜಪಲಕ್ಷದೆ ಸಿದ್ಧಿಸುಗುಂ ದಶಾಂಶ ಹೋಮ ಯಜನದಿಂ ಸಹಾಗಮನಮುಂ ಫಣಿಯೊಪ್ಪುವುದೆಂದನಂತ ಚಿನ್ಮಯ ಜಿನ ಸಿದ್ಧ ಸೂರಿ ವರ ದೇಶಿಕ ಸಾಧುಪದಾಬ್ಜಭೃಂಗನದ್ವಯನ ಮಹಾವಿಲಾಸಪದ ಮಂಗಮಹಾವಿಭು ಪೇೞ್ದ ಮಾೞ್ಕೆಯಿಂ
ಪ್ರಣವಾದಿ ಸ್ವಾಹಾಂತಂಭಣಿತಂ ತಾಂ ಚಿರಿಚಿರಿ ಪ್ರಮುಖ ಮಂತ್ರಮಿದಂಫಣಿಪಾಕೃಷ್ಟಿಗೆ ಮಂತ್ರ [ಮನೆ]ಣಿಸುಗೆ ತತ್ಪ್ರಮಿತ ಜಪಮನಿದು ಸಿದ್ಧಾಂತಂ
ತನ್ಮಂತ್ರೋದ್ಧಾರಂ-
ಓಂ ಚಿರಿಚಿರಿದಿಂದ್ರವಾರುಣಿ ವಹಿ ಕಡ್ಡ (ಕುಡ್ಡ)ಸ್ವಾಹಾ
ವ. ಈ ಮಂತ್ರದಿಂ ಹತ್ತು ಸಾವಿರ ಆಹುತಿಯಿಂ ತ್ರಿಮಧು ಗುಗ್ಗುಳದಿಂ ಮಾಡಲು ಈ ಮಂತ್ರಸಿದ್ಧಿಯಕ್ಕುಂ
ಇನ್ನಾ ನಾಗಪ್ರೇಷಣ ಮಂತ್ರ
ಜಾತಿಫಣಿಪ್ರೇಷಣವಹುದೇತೊದಳಿಂ ಹವನಮುಂ ದಶಾಂಶಂ ಜಾಪ್ಯಮಶೀತಿ ಸಹಸ್ರಂ ಕರವೀರಾತಿಶಯಾರುಣ ಲತಾಂತದಿಂ ಸಿದ್ಧಿಸುಗುಂ
ನಾಗಪ್ರೇಷಣ ಮಂತ್ರೋದ್ಧಾರಂ
ಓಂ ನಮೋ ನಾಗಪಿಶಾಚಿ ರಕ್ತಾಕ್ಷಿ ಭ್ರುಕುಟಿಮುಖಿ ಉಚ್ಛಿಷ್ಟದಿಷ್ಟತೇಜಸ ವಹಿ
ಭಗವತೀ ಹೂಂ ಫಟ್ ಸ್ವಾಹಾ
ವ. ಇದು ನಾಗಪ್ರೇಷಣ ಮಂತ್ರಮಿದಱಿಂದಂ
ಸಿತ ದುಗ್ಧಾಜ್ಯ ಪ್ರಯುಕ್ತಂಗಳೊಳೆ ಹವನಮಂ ಮಾೞ್ಪುದೊಳ್ಪುಳ್ಳ ವಲ್ಮೀಕ ತದೀಯಸ್ಥಾನಸಾನ್ನಿಧ್ಯದೊಳೆ ವಿನಯದಿಂದಂ ಪ್ರಸೂನಂಗಳಿಂ ಸಾಧಿತ ಮಂತ್ರಂ. ಮಾಡಿ ನಾಗಾಜ್ಞೆಯನುರಗನುಮಂ ತಿರ್ದಿ ತಾಂ ಪ್ರೇಷಿಸಲ್ಕಾಪ್ರತಿಮಂ ತತ್ತದ್ವಿಧಾನಪ್ರಥಿತ ವಚನಮಂ ಸೂಚಿಪೆಂ ಶ್ಲೋಕದಿಂದಂ
ಶ್ಲೋಕ ಪ್ರೇಷಿತೋಹವನೇ ನೇತಿ ಮಾ ಕಸ್ಯಾಪಿಪುರೋವದೇತ್
ಅನ್ಯಮಂತ್ರೇಣಮಾಗಚ್ಚಮಾನಯಂ (?) ಭಕ್ಷಯಾಮುಖಂ (?)
ವ. ಎಂದು ಬಂದ ಸರ್ಪಂಗೆ ಆಜ್ಞಾಪಿಸಿ ಕಳುಹುವುದು. ಇದು ನಾಗಪ್ರೇಷಣ ವಿಧಾನಂ
ಇನ್ನು ನಾಗ ಸಹಾಗಮನ ವಿಧಾನಂ
ತೇಜೋಂ ನಮಃ ಪ್ರಮುಖಮಂರಾಜಿತ ಮಂತ್ರಮನೆ ಪಠಿಸುತುಂ ಪೋಗಲ್ ನಿರ್ವ್ಯಾಜಮವನೊಡನೆ ಬರ್ಕುಂಯೋಜಿಸಿ ತಾಂ ಯಾಯಿ ಎಂದೊಡಹಿ ತಾಂ ಮರಳ್ಗುಂ
ಮಂತ್ರಂ. -ಓಂ ನಮೋ ಸಹಸ್ರ ಜಿಹ್ವೆ ಕುಮುದ್ಭಾಸಿನಿ (ಕೋದ್ದಾಸಿನಿ) ದೀರ್ಘಕೇಶಿನಿ
ಉಚ್ಛಿಷ್ಟ ಭಕ್ಷಿಣಿ ಸ್ವಾಹಾ- ಏಹಿ ಯಾಹಿ ಎಂದು ಯೋಜಿಸಿ ಮಂತ್ರಿಸೆ ಮರಳಿ ಪೋಕುಂ
ಸರ್ಪಮುಖಸ್ತಂಭನ ಮಂತ್ರ
ಓಂ ಹ್ರೀಂ ಶ್ರೀಂ ಹೂಂ ಕ್ಷೂಂ ಠ (ಂ ಠಃ) ಫಣಿಮುಖಂ ಸ್ತಂಭಯ
ಎಂಬೀ ಮಂತ್ರದಿಂ ಸರ್ಪಮುಖಸ್ತಂಭನಮಕ್ಕುಂ
ಮಂತ್ರಂ. ಹ್ರೂ (ಹೂಂ)ಂ ಕ್ರೂ (ಕ್ಷೂ)ಂ, ಠ (ಂ ಠಃ) ಸ್ತಂಭಯ
ಎಂಬೀ ಮಂತ್ರದಿಂ ಸರ್ಪಗಮನಮುಖಸ್ತಂಭನಂ
ಹ್ರಾಂ (ಹಾಂ) ಕ್ರೂಂ (ಕ್ಷೂಂ) ಠ (ಂ ಠಃ)
ಎಂಬೀ ಮಂತ್ರದಿಂ ಸರ್ಪಂಗಳ ದೃಷ್ಟಿಯಂ ಕಟ್ಟುವುದು
ಹ್ರಾಂ (ಹಾಂ) ಠ (ಂ ಠಃ)
ಎಂಬೀ ಮಂತ್ರದಿಂ ಸರ್ಪಮುಖಗತಿ ದೃಷ್ಟಿಸ್ತಂಭನಂ. ಇಲ್ಲಿ ಪೋಗೆನೆ ಮಾಣ್ಗುಂ
ಇನ್ನು ಕುಂಡಲೀಕರಣವಿಧಾನಂ
ಸ್ವಯಮೋಂ ಸುವರ್ಣರೇಖಾಮಯಮಂ ಬರೆದಿಂ ಬೞಿಕ್ಕಮದಱಗ್ರದೊಳಂನಯದಿಂ ಗರುಡಾಜ್ಞಾಪಯತಿಯೆಂಬುದುಂ ಕೂಡೆ ಸೂಚಿತಂ ಸ್ವಾಹಾಂತಂ
ಬರೆ (ವು)ದು ಕುಂಡಲೀಕರಣಮೆಂದಗ್ರದೊಳ್ಕುರು ಎಂದು ಪದಮನಱಿದಿಟ್ಟು ಮಂತ್ರದಚ್ಚರಿಯನೀಕ್ಷಿಪುದು ಬುಧರೆಯ್ದೆ
ತನ್ಮಂತ್ರೋದ್ಧಾರಂ
ಓಂ ಸುವರ್ಣರೇಖಾಯ ಗರುಡಾಜ್ಞಾಪಯತಿ ಕುಂಡಲೀಕರಣಂ ಕುರು ಸ್ವಾಹಾ – ಇದು
ನಾಗಕುಂಡಲೀಕರಣ ಮಂತ್ರಂ. ಬಿಟ್ಟೆವೆನೆ ಹೋಹುದು
ಇನ್ನು ಫಣಿಘಟಪ್ರವೇಶ ಮಂತ್ರಂ.
ವಿಲಸತ್ ಪ್ರಣವ ಪುರಸ್ಸರಲಲಲಲ ಲಾಯೆಂಬಿವಂ ಬೞಿಕ್ಕಂ ಪಠಿಸಲ್ನಿಲಲಱಿಯದೆ ಘಟದೊಳಮಾಕುಲದಿಂ ಪೋಗುಗು ಮಹೀಶನಾದೊಡಮಚಿರಂ
ತನ್ಮಂತ್ರೋದ್ಧಾರಂ
ಓಂ ಲಲಲಲ ಲಲಾ ಸ್ವಾಹಾ – ಇದು ಫಣಿಘಟ ಪ್ರವೇಶಮಂತ್ರಂ.
ಇನ್ನು ರೇಖಾಮಂತ್ರಂ.
ಬರೆದೋಂ ಹ್ರಾಂ ಹ್ರೀಂ ಎನುತುಂಗರುಡಾಜ್ಞಾ ಠ ಠ ಯೆನುತ್ತೆ ಮತ್ತಂತದಱಿಂಗರುಡನ ಮುದ್ರೆಯನಾಗಿಸಿಬರೆವುದು ಭೂರೇಖೆಯಂ ಫಣೀಶಂ ಮಣಿಗುಂ
ತನ್ಮಂತ್ರೋದ್ಧಾರಂ
ಓಂ ಹ್ರಾಂ ಹ್ರೀಂ ಗರುಡಾಜ್ಞಾ ಠ ಠ ಠ ಠ
ಇದಱಿಂ ಗರುಡನ ಮುದ್ರೆಯಂ ಹಿಡಿದು ಗೆರೆಯಂ ಬರೆಯೆ ಸರ್ಪಂ ದಾಂಟದು, ಬಿಟ್ಟೆವೆನೆ
ಹೋಹುದು. ಇದು ರೇಖಾಮಂತ್ರಂ.
ವ. ಇಲ್ಲಿಂದ ಮೇಲೆ ಮೂಲ ವಿಷಾದಾನಮುಂ ಪೇೞಲ್ಪಡುಗುಂ
ಬರೆದೋಂ ಕ್ರೋಂ ಪ್ರಾಂ ತ್ರುಂ ಠಃಸ್ವರೂಪದಿಂ ಮೆಱೆವ ಮಂತ್ರಮಂ ಜಪಿಸಿ ಸ್ಥಾವರವಿಷಮಂ ಹೂಂಕಾರಂಕರದೊಳಗಿಟ್ಟುಂ ಸಮಂತಭೀಕ್ಷಿಸಿ ರವಿಯಂ
ಪೂರಕಯೋಗದೊಳಿಕ್ಕಿದದಾರುಣತರ ವಿಷಮನುಂಡೊಡಂ ತದ್ವಿಷದಾಕ್ರೂರತೆಯೞಿಗುಮದೆಂದುಂದೂರೀಕೃತ ಕುಮತ ಮಂಗರಾಜನ ಮತದಿಂ
ವ. ತನ್ನ ಹಸ್ತದೊಳ್ ಹೂಂಕಾರಮಂ ಬರೆದು ಅದಱ ಮಧ್ಯದೊಳೀ ಮಂತ್ರಮಂ ಬರೆದು ಅದಱ
ಮೇಲೆ ಪರರಿಕ್ಕಿದ ಹಾಳಾಹಳ ವಿಷಮನಿಕ್ಕಿ ಈ ಮಂತ್ರಮಂ ಜಪಿಸುತ್ತಂ ಸೂರ್ಯಾವಲೋಕನಂಗೆಯ್ದು
ಪೂರಕಯೋಗದಿಂ ಭಕ್ಷಿಸೆ ನಿರ್ವಿಷಂ
ತನ್ಮಂತ್ರೋದ್ಧಾರಂ
ಓಂ ಕ್ರೋಂ ಪ್ರೋಂ ತ್ರುಂ ಠಃ- ಇದು ವಿಷಭಕ್ಷಣಮಂತ್ರಂ.
ಪ್ರತಿಪಕ್ಷಂಗೀವುದು ಸಂಚಿತ ವಿಷಮಂ ನೀಲವರ್ಣಮಂ ಧ್ಯಾನಿಸಿ ಮಂತ್ರಿತಮಂ ಗ್ಲೌಂ ಗ್ಲಾಮೆಂದೊಚ್ಚತದಿಂದಾ ವಿಷಮನುಂಡೊಡಂ ವಿಷಮೞಿಗುಂ
ವ. ಇಂತು ಪ್ರತಿಪಕ್ಷಂಗೀವುದು ನೀಲಧ್ಯಾನಮಂ ಭಾವಿಸೆ ವಿಷಾದಾನಂ
ಕ್ಷಾರದ್ವಯದೊಡನಂಗುರಬೇರಂ ತಾಂ ಮೆಲ್ದು ವೈರಿಯಿಕ್ಕಿದ ವಿಷಮಂಧೀರಂ ತಿನೆ ನಿರ್ವಿಷಮೆಂದಾರಾಧ್ಯರ್ ದಿವ್ಯಮುನಿಗಳೆಲ್ಲರ್ ಪೇೞ್ಗುಂ
ಚೊಚ್ಚಿಲೆಳಹೋರಿಯ ರ (ರೆ)ಣಂಬೆಚ್ಚರದಿಂ ತಗರಮಂತದಂ ಸಂಯೋಗಿಸಿಒಚ್ಚತದಿಂ ವಿಷಮಕ್ಕೊಂದಚ್ಚರಿಯೇ ಮಂಗರಾಜನನುಮತದಿಂದಂ
ಬಾದಿಸೆ ಫಲವೇಂ ಚೊಚ್ಚಿಲೊಳೀದಾಗಳೆ ಹೋರಿಯ ರ (ರೆ)ಣಮಂ ಪಾಲಿಂದಾಸ್ವಾದಿಸಿ ಕುಡಿಯಲ್ಕೆಲ್ಲಾಮೇದಿನಿಯ ವಿಷಂಗಳಾಕ್ಷಣಂ ಪಱಿಪಡುಗುಂ
ಬಿಂಕದೊಳೇಂ ಪಾವಿಂ ನಿಶ್ಯಂಕತೆಯಿಂ ಪಿಡಿಸಿಕೊಂಬೊಡಂ ಮೆಲುವೆಲೆಯಂಟಂಕಣಮಂ ಬೆರಸಿ ತಿನಲ್ತಾಂ ಕುಳಿಕಂ ತಿಂದೊಡಂ ವಿಷಂ ಪ್ರಶಮಿಸುಗುಂ
ತಿಂಬುದಗುಳುಶುಂಠಿಯುಮಂತಂಬುಲದೆಲೆಯೊಡನೆ ಬಿಳಿಯಮಿಂತೆಸೆವ ಫಣಾಡಂಬರದ ಪಾವು ಕೊಂಡೊಡಮಿಂ ಬಾೞ್ಗುಮವಂ ಸರಸ್ವತೀಮುಖತಿಲಕಾ
ರಕ್ತಕರವೀರಮೂಲಂವ್ಯಕ್ತಮೆನಲ್ ತಿಂಬುದೆಸೆವ ತಂಬುಲದೊಳ್ ಪ್ರಾಗುಕ್ತ ಕರವೀರ ಮೂಲಮನುಕ್ತಂ ಫಣಿ ಕೊಂಡವರ್ಗೆ ನಿರ್ವಿಷಮಕ್ಕುಂ
ತನ್ನಂ ಕಚ್ಚಿದುದಂ ತಾಂಪನ್ನಗನಂ ಮಗುೞ್ದು ಕಚ್ಚೆ ನಿರ್ವಿಷಮಕ್ಕುಂತನ್ನಂ ಪಿಡಿದೆಡೆಯಂ ವಿಚ್ಛಿನ್ನಮೆನಲ್ಕಡಿದಿಡಲ್ಕೆ ಜಂಗಮವಿಷಮುಂ
ಪುೞು ಮುಟ್ಟಲ್ ಹೆಮ್ಮಿಟಿಲವಬಿಳಿದೆನಿಸುವ ಗುಂಜಿಯೆಸೆವ ಮೂಲಮಿವಂ ತಾಂಕೞಿಯಿಂ ಲೇಪಿಸಿ ಕರ್ಚಿಸೆಕೊೞೆಪಾವಿಂ ನಿರ್ವಿಷಂ ಶ್ರುತಾಬ್ಧಿಶಶಾಂಕಾ
ಸೂತಮಪಾಮಾರ್ಗರಸಂಖ್ಯಾತಂಗಳಿವೊಂದಲೊಡನೆ ಮರ್ದಿಸೆ ತನುವಿಂಗೋತಹಿಯಂ ಪಿಡಿಸಲ್ (ತಾಂ)ಮಾತೇಂ ವಿಷವೇಱದೆಂದನುಭಯಕವೀಶಂ
ಕಾಡವರೆ ಮಣಲು ಸುಣ್ಣಮಿವೀಡಿತ ವಜ್ರೋಪಮಾನ ತಿವುರೆನಿಸಿರ್ಕುಂಮಾಡಿದ ಸುಣ್ಣದೊಳಂ ಮಳಲೂಡಿರೆ ರವಿದುಗ್ಧಮಿವಱ ತಿವುರೆ ವಿಷಘ್ನಂ
ನವಿಲುಂ ಮುಂಗುರಿ ಪರ್ದೆಂಬಿವಱುಗುರ್ಗಳನಿಕ್ಕಿ ಮತ್ತೆ ಹೆದ್ದುಂಬೆಯ ಬೇರ್ಪವಣಿಸೆ ಕಿಱುದೇಗುವನಂತೆವರಂ ಪಾತಾಳಗರುಡನಂ ಕೂಡಿದು ನೀಂ
ಯಂತ್ರಂ- ಕ್ಷಿ ಪ ಓಂ ಸ್ವಾ ಹಾ
ಬರೆದಿದ ತಾಮ್ರದ ತಗಡಿನೊಳಿರೆ ಯಂತ್ರಮದೊಂದೆ ಕೂಡಿ ತದ್ಯೋಗಮನುಂಗುರಮಂ ಮಾಡಿಸಿ ತನ್ನಯಬೆರಲೊಳ್ ತಳ್ತಿಕ್ಕಿ ಬೞಿಯಮಹಿಮಸ್ತಕದೊಳ್
ಹಸ್ತಮನಿಂಬಿನೊಳಂ ತದ್ವಿಸ್ತಾರದೊಳಿಕ್ಕಲಾತನಂ ಖಗಪತಿಯೆಂದಸ್ತಮನಂ ಬಗೆದಹಿ ತನ್ಮಸ್ತಕಮಂ ನೆಗಪದಂತೆ ಸತ್ತವೊಲಿರ್ಕುಂ
ಒಡವಂ ಪೆರ್ಗುರುಟಿಗೆಗಳನಿಡುಬೇರಂ ಬೆರಸಿ ಕೊಂಡು ನೀಲಿಯ ಬೇರಿಂದೊಡನಿಕ್ಕಿ ರಕ್ಷೆಯಂ ಕಟ್ಟಲೊಡಂ ಶುಭತಿಥಿಯೊಳಹಿಗಳಂಜುಗುಮದಱಿಂ
ನೋಡಿರೆ ಪುಷ್ಯಾರ್ಕದೊಳಂಕೂಡಿದ ದಿನದಲ್ಲಿ ತಂದ ಲಜ್ಜರಿಕೆಯುಮಂತಾಡಲ್ ರಕ್ಷೆಯನಾಗಿಯೆಕ್ರೀಡಿಸುಗುಂ ಫಣಿಗಳೊಡನಿದೊಂದಚ್ಚರಿಯೇ
ಲಜ್ಜರಿಕೆಯ ಬೇರಂ ತಂದುಜ್ಜುಗದಿಂ ಸಿದ್ಧಿದಿನದೊಳಂ ಪೂಸಲದೇಂಕಜ್ಜಮಹಿಯೊಡನೆ ತಾಂ ನಿರ್ಲಜ್ಜತೆಯಿಂ ರಮಿಯಿಸುತ್ತುಮಿರ್ಪಂತು ಹಿತಂ
ಸಿತ ಗಿರಿಕರ್ಣಿಕೆಯಂ ತಂದು ತಿಷ್ಯರವಿಯಾದ ದಿನದೊಳಂ ರಕ್ಷೆಯನಂದತಿ ಶೋಭಾನ್ವಿತಮಾಗಪ್ರತಿಮಂ ಕಟ್ಟಲ್ಕೆ ಮುಟ್ಟಲಣ್ಮವು ಫಣಿಗಳ್
ಸಂಗತಮೆನೆ ಪುಷ್ಯಾರ್ಕದೊಳಂಗುರಮಂ ತಂದು ರಕ್ಷೆಯಂ ಕಟ್ಟಲ್ ಸರ್ಪಂಗಳ್ ಮುಟ್ಟವು ಮುಟ್ಟಲೊಡಂ ಗಡ ವಿಷಮಿಲ್ಲಮಮಳಗುಣಗಣನಿಳಯಾ
ಕರಡಿಯ ದಾಡೆಯೊಳಂ ಮೇಣ್ಬೆರೆದೆಬ್ಬುವ ಪುಲಿಯದಾಡೆಯೊಳ್ ಮಾಡಿಸಿ ತಾಂಗರುಡನ ರೂಪಂ ಕಟ್ಟಲ್ಕುರದೊಳವಂ ಗರುಡನೆಂದು ಫಣಿಗಳ್ ಮಡಿಗುಂ
ಕರ್ಕಶತನಮಂ ಮಾಡದೆತರ್ಕಂಗೊಳದಣ್ಣ ತಂದು ಮೋನದೊಳಂ ಹಸ್ತಾರ್ಕದೊಳಂ ರಕ್ಷೆಯನಿರದರ್ಕನ ಮೂಲಮನೆ ಕಟ್ಟೆ ನಿರ್ವಿಷಮಕ್ಕುಂ
ದವನಂ ಕೇಸರ ನಾಗಕೇಸರ ಲವಂಗಂ ದಾರ್ವಿಯೆಂದಿಂತದೊಪ್ಪುವ ನೀರಿಂದೆ ತಮಾಲಪತ್ರಮಗರೊಂದಂ ಮರ್ದಿಸಾ ರಕ್ಷೆಯಂಜವದಿಂ ನುಂಗುವ ರಕ್ಕಸಂ ಫಣಿ ಮಹಾವ್ಯಾಘ್ರಂ ನೃಪಂ ತಸ್ಕರಾಟವಿಕರ್ ಮುಖ್ಯಮೆನಿಪ್ಪ ಸರ್ವ ಭಯಮುಂ ಪೊರ್ದಲ್ಕಣಂ ಬರ್ಕುಮೇ
ಇನ್ನು ಶಬ್ದನಿರ್ವಿಷ ಮಂತ್ರಂ.
ಆರ್ಯರ್ ಪೇೞ್ದೀ ಮಂತ್ರಂ.ಸೂರ್ಯಗ್ರಹಣದೊಳೆ ಮೋಕ್ಷಪರ್ಯಂತಂ ತಾತ್ಪರ್ಯದೊಳಾದನಿತಂ ಬುಧವರ್ಯಂ ಮಾೞ್ಪುದು ಜಪಂಗಳಂ ಸಿದ್ಧಿಸುಗುಂ
ಪನ್ನಿರ್ಛಾಸಿರಮಪ್ಪಿನಂ ಜಪಮದುಂ ಸಾಧ್ಯಂ ಬೞಿಕ್ಕಂ ಸದೋತ್ಪನ್ನೋದ್ಯೋಗದೆ ಮೂಱು ಸಂಜೆಯೊಳೆ ತಾಂ ಪಂಚೋತ್ತರಾಹ್ವಂಗಳಪ್ಪನ್ನಂ ತದ್ದಶಸಂಖ್ಯೆಯಿಂ ಪಠಿಸೆಯುಂ ತಚ್ಛಬ್ದದಿಂ ನಿರ್ವಿಷಂನನ್ನಿ ಕ್ಷ್ಮಾತಳದೊಳ್ ಪ್ರಭಾವಭವನಂ ತಾನಲ್ತೆ ದೃಷ್ಟಂ ಬುಧಾ
ತನ್ಮಂತ್ರೋದ್ಧಾರಂ
ಒಲೆಯ ಮುಟ್ಟೆ ಅಜಿತ ಉಚಿತ ಮಘಾನಾಸ್ತಿಕಯೆಂಬೊಕ್ಕುಲಿಗುಂ ಪ ಹರಹರ ಸ್ವಾಹಾ
ವ. ಅದಲ್ಲದೆಯುಂ
ಮುಂ ಪೇೞ್ದಿಂತೀ ಮಂತ್ರಮುಮಂ ಪಠಿಸಲ್ ಸಿದ್ಧಿಯಕ್ಕುಮೇೞುಂ ಸೂೞ್ ನಿಚ್ಚಂ ಪೇೞ್ದೊರ್ಕುಡಿತೆಯ ನೀರಂ ಪಾನಂಗೆಯ್ಯೆ ಶಬ್ದನಿರ್ವಿಷಮಕ್ಕುಂ
ತನ್ಮಂತ್ರಂ- ಕಾಡದುಂಗಟ್ಟು ನಯಂಗಲ ಪಯಂಗಟ್ಟುಣಲ್ವಾಸಿಯಂಗಟ್ಟು ಮಹದೇವಿಯ ಕೆಯ್ಯ
ಶೂಲಂ ಬೆತ್ತುಂಗಟ್ಟು ಯೆಂನ ಕಟ್ಟು ಕಟ್ಟು ಪರಕಟ್ಟು ಕಟ್ಟಲ್ಲ ವೊಂಜುಂ ಬಾಳಿಗೆ ಹರ ಗುರುಪ್ರಸಾದ
ಅಕ್ಕಿತಕ್ಕು- ಉಚಿತಕ್ಕು-ಕಾವಿಬಕ್ಕು-ವಿಷನಾಸ್ತಿ ಹರ ಶಬ್ದ ನಿರ್ವಿಷಂ ಗುರುಪ್ರಸಾದ
ವ. ಈ ಮಂತ್ರಕ್ಕಂ ಪೂರ್ವಕ್ರಮದಿಂದ ತ್ರಿಸಂಧ್ಯಾಕಾಲದಲ್ಲಿ ಎಂಟೆಂಟು ಸೂೞ್ ಜಪಿಸಿಯೊ
ರ್ಕುಡಿತೆ ನೀರಂ ಕುಡಿಯುತ್ತುಂ ಬರೆ ಶಬ್ದನಿರ್ವಿಷಂ, ತನ್ನ ಮುಟ್ಟಿದ ಸರ್ಪಂ ಸಾಗುಂ
ಇನ್ನು ದೂತ ನಿರ್ವಿಷಂ
ಇಪ್ಪತ್ತೊಂದುಂ ಸೂೞ್ವರಮೊಪ್ಪುವ ಮಂತ್ರದೊಳೆ ದೂತನಂ ಮಂತ್ರಿಸಿತುಪ್ಪಮನೆ ಕುಡಿಸೆ ನಿರ್ವಿಷಮಪ್ಪುದು ದಷ್ಟಂಗೆ ತಪ್ಪದಿದು ಪರಮಾರ್ಥಂ
ತನ್ಮಂತ್ರಂ- ಅರೆಯ ಮೇಲಣ ಪಾಂಬು ಲಾಗಿಸಿ ಲಂಘಿಸಿದಡೆ ಅರೆಗಳೊಡೆವುವು ಶಿಲೆಗಳೆರಡು
ಹೋಳಾದುವು. ತಳಮುಟ್ಟದು ನಾಗಲೋಕ ಕಾಳಿಂಗನಾಗನ ಕಂಠಮಂ ಸೀೞುವೆಂ ಎಳೆಯನಾಗನ
ಹೆಡೆಯಂ ಸೀೞುವೆಂ. ಎಪ್ಪತ್ತುಯೇೞುಕೋಟಿಯ ಹಾವನು ಸರವಿಯನೆ ಮಾಡಿ ನುಂಗಿದಂ. ಅಹಮೆರೆಯ
ಗರುಡನುಂ ಗುತ್ತಿ ಬಂದನೆ ವಿಷಮಿಲ್ಲ ವಿಷನಾಶನವಾಗಿ ಇೞಿದೋಡುಗುಂ ಗುರುಪ್ರಸಾದ
ಈ ಮಂತ್ರಕ್ಕಂ ಪೂರ್ವಕ್ರಮ, ಪೂರ್ವಸೇವೆ- ಇದು ದೂತ ನಿರ್ವಿಷಂ
ಇನ್ನು ಸರ್ಪೋಚ್ಚಾಟನ ಮಂತ್ರಮಂ ಪೇೞ್ವೆಂ
ಮಂತ್ರಂ. ಓಂ ಹ್ರೀಂ ಭ್ರೂಂ ಕ್ಷೂಂ ಹಂಸ ಮಹಾಹಂಸ ಪದ್ಮಹಂಸ ಶಿವಹಂಸ ಪರಮಹಂಸ
ಜರಿಹಂಸ ಪಕ್ಷಿವಿಷಂ ಪಕ್ಷಿಯೇಣಾ ಮೇಣಾಂ ಜಾಂಗಳಿಂಮಂತೊಲಗಿಸು ಱೊಂತೊ ಜಯಪಕ್ಷಿಂ
ಜಯ ಅಂಗಂ ತೊರೆ ಡಾಮರರಯಿತೋ ನಿರ್ವಿಷೀಕರಣಂ
ಈ ಮಂತ್ರದಿಂದೆ ಮಂತ್ರಿಸಿದಾ ಮಳಲಂ ಮನೆಯೊಳೆಯ್ದೆ ತಳಿಯಲ್ ಪೋಕುಂತಾಮಸಮಿಲ್ಲಂ ಸರ್ಪನನಾಮಮುಮಿರದೆಂದು ಮಂಗರಾಜಂ ಪೇೞ್ದಂ
ಕೃತ ಹಂಸಬೀಜಮೋಂ ಪ್ಲಾಂಪ್ರತಿಸರ್ಪಕುಲಾಯ ಯೆಂದು ತಾಂ ಸ್ವಾಹಾ ಮಂತ್ರಿತ ಸಪ್ತ ವಾರದೊಳುದಕದತಿಶಯದಿಂ ಸರ್ಪಮೋಡುಗುಂ ತದ್ಗೃಹದಿಂ
ಕುರುಕುಲ್ಯಾಕ್ಷರಮಂ ತಾಂಬರೆವುದು ಷಟ್ಕೋಣಭವನಮಧ್ಯದೊಳಂ ತದ್ಗರುಡಾಖ್ಯ ಬಂಧನದೊಳಿಡಲುರಗಂ ಪೊಱಮಡುಗುಮೆಂದನುಭಯಕವೀಂದ್ರಂ
ವ. ತದ್ವಿವರಣಂ- ಮನೆಯ ಗೋಡೆಯಲ್ಲಿ ಗರುಡನ ಯಂತ್ರಮಂ ಬರೆದು, ಅದಱ ಮಧ್ಯದೊಳೆ
ಷಟ್ಕೋಣ ಚಕ್ರಮಂ ಬರೆದು, ತನ್ಮಧ್ಯದಲ್ಲಿ ಕುರುಕುಲೈ ಸ್ವಾಹಾ ಎಂಬ ಮಂತ್ರಮಂ ಬರೆದಿಡೆ
ಸರ್ಪೋಚ್ಚಾಟನಂ
ಗರುಡನ ಬರ್ಹಿಯ ಗಱಿಯೊಂದಿರೆ ನಕುಲನ ದಂತದಿಂ ಲಸತ್ ಭುಜಪತ್ರಾಂತರದೊಳ್ ಸುತ್ತುವುದೆತ್ತಂಬೆರಸಿರೆ ತಾಳೀಸಪತ್ರಮಿಂತಿರಲೈದುಂ
ಸೊಗಯಿಪ ಮಂತ್ರಂ. ತಾಮ್ರದತಗಡಿನೊಳಂ ಬರೆದಿರಲ್ಕಮದಱೊಳವಂ ತೀವುಗದುಂಗುರಮಂ ಮಾಡಿಸಿಬಗೆ ಸರ್ಪೋಚ್ಚಾಟನಂ ವಿದಗ್ಧಾಭರಣಾ
ಮಂತ್ರಂ. ಕ್ಷಿ ಪ ಓಂ ಸ್ವಾ ಹಾ
ವ. ಎಲ್ಲಾ ನಿರ್ವಿಷಯೋಗಕ್ಕಂ ಉಚ್ಚಾಟನಕ್ಕಂ ಇದೆ ಮಂತ್ರಂ.
ಈ ಯೋಗಮಂ ಯುಗಾದಿಯ ಚೌದಿನಂ ಮಾೞ್ಪುದು
ತರಿಸುಗೆ ಪುಷ್ಯಾರ್ಕದೊಳೀಶ್ವರಿಯಂ ತಾಂ ಬಾಯೊಳಡಸಿ ಮಂತ್ರಮನಿಂತುಚ್ಚರಿಸಲ್ ವ್ಯಾಘ್ರೋರಗ ತಸ್ಕರ ನೃಪರಿಂದಪ್ಪ ಭಯಮದೆಲ್ಲಂ ಕಿಡುಗುಂ
ಆ ಮಂತ್ರಂ. ಓಂ ಹ್ರೀಂ ಮಾಂ ರಕ್ಷ
ವ. ಎಂಬೀ ಮಂತ್ರಮಂ ಜಪಿಸುತ್ತುಂ ಪೋಪುದು
ರಾಗದೊಳಂ ಪುಷ್ಯಾರ್ಕದಯೋಗದೊಳೀಶ್ವರಿಯ ಮೂಲಮಂ ತರ್ಪುದು ಮೇಣ್ದಾಗುಡಿಯುಂ ಮನೆಯೊಳಿರಲ್ನಾಗಕುಲೋಚ್ಚಾಟನಂ ದಿಟಂ ಸಂಭವಿಕುಂ
ಅತಿಬಜೆ ಲೊಕ್ಕಿ ಸಜ್ಜರಸಮಂ ಗುರುಗಿಂಗುಳ ಬೇಳೆ ಬಾಳ ಸಂಗತಮೆನೆ ಕೇರಗೊಟ್ಟೆ ಘನಮೆಂಬಿವನೊಪ್ಪಿರೆ ಕೂಡಿ ಧೂಪಮಂಪ್ರತಿಮಮೆನಲ್ಕೆ ತದ್ಗೃಹದೊಳಿರ್ಕೆ ಮಹೋರಗ ವೃಶ್ಚಿಕಾದಿ ಮುಖ್ಯತೆಯೆನಿಪಂಗಳೊಳ್ವನೆಯನಾಕ್ಷಣದಿಂ ಬಿಡುಗುಂ ಬುಧೋತ್ತಮಾ
ನವಿಲುಂ ಮುಂಗುರಿ ಪರ್ದೆಂಬಿವಱ ಮಲಂ ಮೂತ್ರದೊಂದಿರಲ್ ಮರ್ದಿಸಿ ತಂದವನಭಿಮಂತ್ರಿಸಿ ಇಟ್ಟಂತವೆ ಸರ್ಪೋಚ್ಚಾಟನಂ ಲಸತ್ತಿಲಕದೊಳಂ
ತನ್ಮಂತ್ರಂ- ಓಂ ನಮೋ ಭಗವತೇ ಪಾರ್ಶ್ವನಾಥಾಯ ಪಕ್ಷಿರಾಜಾಯ ಸರ್ಪಕುಲವಿಧ್ವಂಸ
ನಾಯ ಸಮಸ್ತ ವಿಷಸಂಹರಣಾಯ ದೇವೇಂದ್ರಮರ್ದನಾಯ ಹೂಂ ಫಟ್ ಸ್ವಾಹಾ
ಎಂದು ಮಂತ್ರಿಸಿ ಓಂ ಕ್ಷಿಪ ಸ್ವಾಹಾ ಎಂದು ತಿಲಕಮನಿಡೆ ಸರ್ಪೋಚ್ಛಾಟನಂ
ಇನ್ನು ಕವಳಪ್ರಯೋಗಮಂ ಪೇೞ್ವೆಂ
ಬಾವುಜಿಗೆ ನೀಲಿ ಮುತ್ತದಪೂವಾವರೆಯಮರ್ದುವಳ್ಳಿ ಸೆಳ್ಳೆಂಬಿವಱೊಳ್ಭಾವಿತ ಗುಡಮೆಂದೊಂದೆನಲೇವಣ್ಣಿಪೆನಡಸಿ ಮೆಲೆ ವಿಷಾಪಹಮಕ್ಕುಂ
ನೆಲದಾಳ್ ಗಿಳಿಯಿಂದೆಂಗಿಂ (?)ಕಲಸುಗೆ ಬೆಲ್ಲದೊಳೆ ಮಾೞ್ಕೆ ತಚ್ಚರ್ವಣಮಂನೆಲೆಗೊಳ್ಳದೆ ವಿಷಮೞಿಗುಂಖಲಜನ ಸಂಸರ್ಗರಹಿತ ಮಂಗನ ಮತದಿಂ
ಸಾರತರಮಪ್ಪ ಕುಟಜದಬೇರಂ ತಾ ಕಱಿಕನೆಸೆವ ಬೀಜಂಗಳೊಳಂಜೀರಗೆಯಂ ಪಲ್ಮಾಣಿಕಮೋರಂತಿರೆ ಕುಡಿಯೆ ಮತ್ತೆ ದಿವ್ಯೌಷಧಿಗಳ್
ಹುಲಿಗಿಲ್ ತಂಡಸು ನುಗ್ಗಿ ಶುಭ್ರರವಿ ನೇಱಿಲ್ ತಾಱೆಯಂಕೋಲೆ ನಾಂಗುಲಿಕಂ ಮಲ್ಲಿಗೆಯಿಪ್ಪೆ ಕೈಪೆಸೊರೆಯಾಜ್ಯಂ ಕೈತಕಂ ದಾರ್ವಿ ನಿಸ್ತುಲಮಪ್ಪೀಶ್ವರಿ ಬೇವುಮುತ್ತರಣೆಯಂ ಚೂರ್ಣಂಗಳಂ ಮಾಡಿ ತೀವಿ ಲಲಾಮೋಧ್ಭವ ಕುಂಡಿಕಾಂತರದೊಳಂ ಬೈತಿಟ್ಟು ಸುಸ್ಥಾನದೊಳ್
ಸೂತಕ ಪಾತಕವಿಲ್ಲದಪೂತಸ್ಥಾನದೊಳಮಿರ್ದುದಂ ಜಂಭೀರೋದ್ಭೂತರಸದಿಂದೆ ಕುಡಿಸಲ್ಕೇ ತೊದಳೊಱೆಯಲ್ಕೆ ಪೂಸೆ ನಿರ್ವಿಷಮಕ್ಕುಂ
ನೆಗ್ಗಿಲಗಸ್ತ್ಯ ಮುಂಡೆ (?) ಯೆಸಗಂ ಕಣಿಗಿಲ್ ಕಿಱುದೇಗು ಚಿತ್ರಕಂನುಗ್ಗಿಲವುಂ (?)ಗುಲೀಶ್ವರಿ ನೆಲಾವರೆಯಾವರೆ ಗುಳ್ಳ ನುಗ್ಗಿ ಕಾೞ್ನುಗ್ಗಿ ದಿನೇಶ ಜಾಂಗುಲಿ ಕುರಂಟಿಗೆ ಸಂಪಗೆ ಬಳ್ಳಿಸೊಂಡೆಯುಂಕೊಗ್ಗಿ ಸುಧಾತ್ರಿ ಮಾದಲ ನಿದಿಗ್ಧಿಕೆ ಕಂಕರಿ ಕಾಗೆದೊಂಡೆಗಳ್
ಕಕ್ಕೆ ಎಳನಾಗ ಮಹಾಮೆಕ್ಕೆಯಗುಳ್ಶುಂಠಿ ನಿಂಬಿ ಮೂಗೊಱತಿ ಕರಂತಕ್ಕುದೆನಿಸಿರ್ದ ತಂಡಸುಲೊಕ್ಕಿಯೆನಿಪ್ಪವಱ ಬೇರ್ಗಳಂ ಕೊಂಡದಱಿಂ
ಮರಗಱುಕೆಯ ಬಳ್ಳಿಯ ಪೆರ್ಗುರುಟಿಗೆಯಂ ಬ್ರಹ್ಮದಂಡೆಯಂ ಕಳವಲ್ ಚುಂಚುರುಚಂ ಗಿಣಿಮೂಗಿಯ ಚಂಗರ ಹಿತಕರಮೆನಿಪ ಬಂಜೆ ಮಡುವಾಗಲುಮಂ
ನೆಲಮಾವುಂ ನೆಲದೊಟ್ಟಿ ತೊಟ್ಟಿ ಮಿಟಿಲಂ ಕಾೞ್ತೊಂಡೆಯಂ ನಿಂಬಿ ಮಂಡಲಮಾರಿ ಪ್ರಥಿತಂಗಳಪ್ಪ ಕುಟಜದ್ವಂದ್ವಂ ವರಾನಿಂಬಮುಂನೆಲಗೊಟ್ಟಿಯೆನಿಪ್ಪುವಂ ಮೊಲಗಿವಿಕ್ಷ್ವಾರಣ್ಯಕಂ ಜೀರಕಂವಿಲಸನ್ಮೂಲಮನಿಂತಿವೆಲ್ಲಮ ಸಮಂ ಕೂಡಿಟ್ಟು ತದ್ಯೋಗಮಂ
ರಾಜಿಪೆೞ್ಕಾಸರಿಕೆಯಬೀಜಮುಮಂ ಕೈಪೆಸೊರೆಯ ಕಾೞ್ವೀರೆಯ ಸದ್ಬೀಜಮುಮಂ ಗರ್ದುಗಿನೊಳಂಯೋಜಿಸಿಯೆ ಸಮುದ್ರಫಳದ ಚುಂಚಿನ ಬಿತ್ತಂ
ಇವನೆಯ್ದೆ ಚೂರ್ಣಿಸುತ್ತುಂಕವಳಂಗುಡು ಕೂಡಿ ಮೇಲ್ಕೊಳಲ್ ಪಾನದೊಳಂತವೆ ಲೇಪನದಿನೞಿಗು ಸಕಲವಿಷಂ ರವಿಕರದಿನೞಿವವೋಲ್ ಘನತಿಮಿರಂ
ಸುಟ್ಟುಂಬೆಯ ಬೆರಲಗ್ರದೊಳಿಟ್ಟಾ ತ್ರಿಕಟುಕಮನೊರಸೆ ಕಿಱುನಾಲಗೆಯಂಮೆಟ್ಟಲ್ದವಮತಿವಿಷಂಬಿಟ್ಟಡಗುಗುಮೆಂದು ಮಂಗರಾಜಂ ನುಡಿದಂ
ವಾಂತಿಗೆ
ಒಸೆದುಂಡನನಹಿಕೊಂಡೊಡೆಬಿಸಿನೀರಿಂ ಕೈಪೆಸೊರೆಯ ಬಿತ್ತುಮನುಪ್ಪಿಂದಸಹಾಯಂ ಕುಡಿಸಲ್ ವಾಂತಿಸಮೇತ ಕಿಡುಗುಂ ಚರಾಚರಂಗಳ ಗರಳಂ
ನೀರಿಂ ಚುಂಚಿನ ಬಿತ್ತಂನೀರಿಂದಂ ಬಿಳಿಯ ಬೇರುಮಂ ಕುಡಿಸಲ್ ಮೇಣಾನೀರಗ್ನಿಯನೆಂತಂತೆ ನಿವಾರಿಸುಗುಂ ವಾಂತಿಯಿಂದೆ ವಿಷದುಗ್ರತೆಯಂ
ಕೋಪದೊಳಹಿ ಪಿಡಿಯೆ ವೃಥಾಲಾಪದೊಳೇಂ ಬೀಗಿ ಬೆಳೆದು ಪರ್ಬಿರೆ ತಂದಾಕೈಪೆಸೊರೆಯೆಸೆವ ಮೂಲಂತಾಪಹರಂ ಕಡಿತಮಾಗಿ ಕುಡಿಸಲಮೋಘಂ
ಸ್ವೈರದೊಳಂ ಪರ್ವಿರ್ದಾ ಕಾಳ್ವೀರೆಯ ಬೇರಿನ ಕಷಾಯಮಂ ಮಧುಘೃತದಿಂದಾರಯ್ದು ಕುಡಿಸೆ ಪೋಕುಂದಾರುಣತರ ವಿಷ ವಿನಷ್ಟಮಕ್ಕುಮಮೋಘಂ
ನೀರೊಳ್ ಮಱುಗಿಸಿ ಕುಡು ಕಾೞ್ವೀರೆಯ ಕಾಯೊಂದನಾಕ್ಷಣಂ ಕುಡಿಸಲ್ ತಾಂಭೋರೆನೆ ವಮನಮನಾಗಿಸೆದಾರುಣತರ ಗರ ವಿನಷ್ಟಮಪ್ಪಿನಮಿೞಿಗುಂ
ನೀರಿಂದರೆದೀಂಟುಗೆ ಕಾೞ್ವೀರೆಯ ಬೀಜಮನದಲ್ಲದೊಡೆ ಕೈಪೆಯೆನಿಪ್ಪಾರಣ್ಯದ ಹಂಚಿಯ ಪುಲ್ವೇರಂ ಕುಡಿಸಲ್ಕೆ ವಾಂತಿಯಿಂ ವಿಷಮೞಿಗುಂ
ಹಿತಮೆನಿಪ ತಗಚೆಯಾ ಚೂರ್ಣಿತಮಂ ನೀರಿಂದೆ ಕುಡಿಸಲಾಕ್ಷಣದಿಂ ಛರ್ದಿತಮಾಗದಿರೆ ವಿಷಂ ತಾಂಪಿತೃಪತಿಖಳದೂತದಷ್ಟನೆಂದಱಿಗವನಂ
ಉಪನಾಹಂ
ಸಿರಿಸ ತದಿಂದ್ರವಾರುಣಿ ನೃಪಾಂಘ್ರಿಪಮಂತಿರವಂತಿ ಲೊಕ್ಕಿ ಈಶ್ವರಿ ನೆಲಬೇವು ದೊಗ್ಗಳೆ ಕರಂಜಿಕೆ ತಿಂತ್ರಿಣಿ ಚುಂಚು ತರ್ಗಿಗಳ್ವರ ಪಿಚುಮಂದಮೆಂಬಿವಱ ಪತ್ರದೊಳೊಗ್ಗಿದ ಮಂಡಸೀಗೆಯಾತುರಿತಮೆನಿಪ್ಪ ಪಾಪಟೆಯ ಸದ್ದಳಮಂ ಬೆರಸುತ್ತುಮಂತಱಿಂ
ತೊಱೆಗಣಿಗಿಲೆ ಗಳವೊಂದಿರೆಮಱುಗಿಸಿ ಕೞಿಯಿಂದಮಂತದಂ ಕಟ್ಟಲೊಡಂನೆಱೆಯಳಿಗುಂ ಬಾಹುವಿಷಂಪಱಿಪಡುಗುಂ ಮಂಗರಾಜನನುಮತದಿಂದಂ
ನೆಱೆ ಕುದಿಸಿ ಕಟ್ಟು ಕಳಿಯಿಂತೊಱೆಗಣಿಗಿಲ ದಳಮನಾದೊಡಂ ಬಾತ ವಿಷಕ್ಕುಱಿಸುಱಿಸಲ್ಕುಪನಾಹದೆತೊಱೆಯಿೞಿಗುಂ ತಿಳಿಗುಮೆಂದನಮಲಿನ ವಚನಂ
ಅವಿರಳಮರಳಿಯ ದಳದೊಳ್ನವನೀತಮನೆಯ್ದೆ ತೊಡೆದು ಕಾಸಿದುದಂ ಕಟ್ಟುವುದುಂ ನಿರ್ವಿಷಮಕ್ಕುಂಭುವನಜನಾನಂದಕರಣಪಟು ಮೃದುವಚನಾ
ನೆಗ್ಗಿಲ್ ತಗಚೆ ನಿದಿಗ್ಧಿಕೆತಗ್ಗಿಯಪಾಮಾರ್ಗದೊಡನೆ ಬೆರಸಿದುದಂ ತಾಂಕೊಗ್ಗಿ ಕುಮಾರಿಗಳಂ ಕುದಿಸೊಗ್ಗಿಸಿದಂಬಿಲದೆ ಬೇದುಗಟ್ಟು ವಿಷಘ್ನಂ
ವಿಷದಿಂಬಾತ ಬಾಹಿಂಗೆ
ಕಳ್ಳಂಗಡಲೆಯ ಮಂಗುರುವಳ್ಳಿಯ ನಿಡುಲೋಯಿಸರದ ನಂದ್ಯಾವರ್ತದೊಳೊಳ್ಳಿದುವೆರಸಾವರೆಯಂಕೊಳ್ಳರೆದು ನೃಮೂತ್ರದಿಂದೆ ಕಟ್ಟು ವಿಷಘ್ನಂ
ಮುಱಿಕಾಯಿ ನುಗ್ಗಿನಖಮಂಗುರು ಜೇಪಾಳಂ ಗುಡೂಚಿ ಸೂರಣಮೆರಡುಂವರ ದೇವದಾರು ಕಣಮೊಂದಿರೆ ಮಾಂಸಿಯೊಳರೆದು ಬೇದುಗಟ್ಟು ವಿಷಘ್ನಂ
ಹಿಡಿಹಿಡಿಕೆಯಾಚಕತ್ತರಿಮಡುವಾಗಲ್ ನೆಲ್ಲಿ ಗೋಣಿ ಕಿಱುನೆಲ್ಲಿಯ ಚೆಲ್ವೊಡರಿಸಿದೆಲೆಯಂಕೋಲದನಿಡುದಳಿರುಪನಾಹಮಖಿಳ ವಿಷಮಂ ಕಳೆಗುಂ
ಕುರುಟಿಗೆ ಕಕ್ಕೆ ಪುನರ್ನವಿವರಕರ್ಕೋಟಕಿಯಲಾಬು ಕಾೞ್ವೀರೆಯಿವಕ್ಕಿರದುದ್ಭವಿಸಿದ ದಳಮಂತರದಿಂದಂ ಕುಡಿಸೆ ಕಟ್ಟೆ ನಿರ್ವಿಷಮಕ್ಕುಂ
ಹಿಡಿಹಿಡಿಕೆಯೊಂದಱೆಲೆಯಂತಡೆಯದೆ ಉಪನಾಹಮಿಕ್ಕೆ ನಿರ್ವಿಷಮಕ್ಕುಂತೊಡೆದುಪ್ಪಳಿದುಪ್ಪಮ ತಾಂಗಿಡುಕಳ್ಳಿಯ ತೊವಡುಕಟ್ಟೆ ನಿರ್ವಿಷಮಕ್ಕುಂ
ಆವರೆಯ ಸೊಪ್ಪುಮಂ ತಂದಾವಿಲದೊಳೆ ಕಾಸಿ ಸುತ್ತಿ ಬಾೞೆಯ ನಾರಿಂದಾ ವಿಧದೊಳೆ ಕಟ್ಟಿದೊಡೇವೆೞ್ವೆಂ ವಿಷದ ಬಾಹದಾಕ್ಷಣಮೞಿಗುಂ
ನಿಂಬೆ ಸಹಕಾರ ತಿಂತ್ರಿಣಿಜಂಬುಗಳೆಂಬಿವಱ ಸೊಪ್ಪುಮಂ ಕುದಿಸುತ್ತಂತಂಬಿಲದಿಂದುಪನಾಹಮಿದೆಂಬಿನೆಗಂ ಮಾಡಲಂತೆ ನಿರ್ವಿಷಮಕ್ಕುಂ
ಮೂಷಕೋಚ್ಚಾಟನಂ
ಮಂತ್ರಂ. ಓಂ ಚಿರಿ ಮುರಿ ತಿಷ್ಠ ಮೂಷಕಭಿನ್ನ ಗಜೇಂದ್ರನ ಷಟ್ ರರರಸ್ವಾಹಾ
ವಾಳುಕಮಂ ಸರ್ಷಪದೊಡನಾಲಸ್ಯಮದಿಲ್ಲದೇಕವಿಂಶತಿ ವಾರಂಮೂಲಂ ಮಂತ್ರಿಸಿ ತಳಿದ ವಿಶಾಲದ ಕೆಯ್ಯಿಲಿಯ ಭಯಮದಾಗದಮೋಘಂ
ಮಂತ್ರಂ. ಓಂ ಆಸರಣೆ ಹೂಂ ಆಸರಣೆ ಹೂಂ ಖಾಣಂ ದಾಡಾಬಂಧನಂ ಮೂಷಕ
ಖಿಳಿಸುವೆ ಜಾವೆ
ಭಾವಿಸಿ ಮೋನದಿಂದೆ ರವಿವಾರದುಷಸ್ಸಮಯ ಪ್ರಸಿದ್ಧದಂದಾವಗೆಯೋಡ ಬೂದಿಯನೆ ತಂದದುಮಂ ಬೆಳೆಗೆಯ್ಯ ಮಧ್ಯದೊಳ್ತೀವಿರೆ ಮತ್ತಮೆಂಟಧಿಕಮಪ್ಪ ಶತಂಗಳವಾಗೆ ಮಂತ್ರಿಸಂದೋವದೆ ಕೆಯ್ಯ ಗೋಂಟುಗಳೊಳಂ ತಳಿಯಲ್ಕಿಲಿಯೋಡುಗುಂ ದಿಟಂ
ವ. ಇಂತು ಮೂಱು ವಾರಂ ಮಾಡೆ ಮೂಷಕೋಚ್ಚಾಟನಂ
ನಗರೆಯ ಗೊಟ್ಟೆಯನರೆದಾಖುಗಳಿಕ್ಕಿದ ಹಿಕ್ಕೆಸಹಿತಮೆಣ್ಣೆಯೊಳೊಂದಲ್ಬಗೆದೆಡೆಯೊಳ್ ಧೂಪಮನಿಕ್ಕುಗೆ ತದ್ಗೃಹದಿಂದೆ ಮೂಷಕಂ ಪೊಱಮಡುಗುಂ
ಅತಿಬಜೆಯುಂ ಮುಸ್ತಾಸಂಯುತಮುಂ ಕೃತಧೂಪಮಾಗಲಿಲಿ ಹೆಗ್ಗಣದಿಂಚ್ಯುತಮಕ್ಕುಮದಾ ವೃಶ್ಚಿಕತತಿಯಿಂದಹಿ ದಂಶ ಮಶಕ ಮಕ್ಷಿಕತತಿಯಿಂ
ಅರೆದಂತಾಡಿನ ಪಾಲಿಂದರಿದಾಳ ಬಿಡಾಳ ವಿಷ್ಠೆಯಂ ತೊಡೆದುಂ ಬಿಡುತಿರಲೊಂದಿಲಿಯದನೀಕ್ಷಿಸೆಪಿರಿದುಂ ಭಯದಿಂದಮೋಡುಗುಂ ಪಲವಿಲಿಗಳ್
ಮಂತ್ರಂ. ಓಂ ನಮೋ ಭಗವತೇ ಪಾರ್ಶ್ವನಾಥಾಯ ಧರಣೇಂದ್ರ ಪದ್ಮಾವತೀ ಸಹಿತಾಯ
ಉದಗ್ರ ರುದ್ರಾಯ ಮುಖಂ ಬಂಧ ಕ್ರೂರಮುಖಂ ಬಂಧ ಜಿಹ್ವಾಂ ಬಂಧ ವಕ್ತ್ರಂ ಬಂಧ ಸಕಳಂ
ಬಂಧಯ ಸ್ವಾಹಾ
ಏೞನೆಯ ಸೂೞ್ವರಂ ತಾಮೇಳಿಸದೀ ಮಂತ್ರದಿಂದೆ ಮಂತ್ರಿಸಿ ಮಣಲಂಪಾಳಿಸಿ ತಳಿಯಲ್ ಸುತ್ತಂವ್ಯಾಳಮೃಗಾಖು ಪ್ರಭೇದಮುಂ ಪುಗದಿರ್ಕುಂ
ಮಂತ್ರಂ. ಓಂ ನಮೋ ಭಗವತೇ ಚಂಡಮರೀಚಿ ಱು ಚಾಂಡಾಲಿನಿ ಸ್ವಾಹಾ
ಆವಿಗೆಯ ಬೂದಿಯಂ ಸಂಭಾವಿತದೀ ಮಂತ್ರದಿಂದೆ ನೂಱುಂ ಸೂೞಿಂದೋವಿರೆ ಮಂತ್ರಿಸಿ ತಳಿಯಲ್ಕಾವರ ಮಂಚಕದ ತಗುಣೆಯೂಱದಮೋಘಂ
ಎಕ್ಕೆಯ ಸಮೂಲ ಚೂರ್ಣಮನಿಕ್ಕಲತಗೆಯೆಸೆವ ಬತ್ತಿಯೊಳ್ ದೀವಿಗೆಯಂತೆಕ್ಕನೆ ಪೊತ್ತಿಸೆ ತಗುಣೆಗಳಿರ್ಕುಮೆ ತದ್ಗೃಹದಿನೋಡುಗುಂ ದೆಸೆದೆಸೆಗಂ
ಮಂತ್ರಂ. ಓಂ ಬುಧಾಯ ಗಿರಿ ಸ್ವಾಹಾ
ವ. ಇದಱಿಂ ನಾಯ ಮುಖಬಂಧನಂ
ಮಂತ್ರಂ. ನಮೋ ವೃಷಭಮುಖ ಯಕ್ಷೇಶ್ವರಾಯ, ಸರ್ವಜನಪ್ರಮೋದನಾಯ, ಸಸ್ಯಪ್ರಮರ್ದನ
ವೃಷಭಯಕ್ಷನಾಜ್ಞೆ
ಈ ಮಂತ್ರದಿಂದಮೊಣಗಿದಗೋಮಯಮಂ ತದ್ಭ್ಯತಾಕ್ತಮಂ ಯೋಜಿಸಿ ಮತ್ತಾ ಮಾೞ್ಕೆಯಿಂದೆ ತಳಿಯಲ್ಭೂಮಿಯೊಳಾ ಕೆಯ್ಯ ಮೇಯಲೊಲ್ಲವು ವೃಷಭಂ
ಮಂತ್ರಂ. ಓಂ ನಮೋ ಭಗವತೇ ಕುಮಾರಿ ಚಾಂಡಾಳಿ ಕಾಮಸಹಿತ ಪ್ರಿಯಕ್ಷಿಣಿ ಮಾಯಾ
ಮಯೆ ಮಾಯೆಯಂ ಕಟ್ಟು ದಿಶಾಂ ಬಂಧನಾಯ ಸ್ವಾಹಾ
ಶೋಭಿಸುವಿದಱಿಂ ಮಂತ್ರಿಸಿದಾ ಭಸ್ಮಮನೆಯ್ದೆ ಕೆಯ್ಯ ಸುತ್ತಂ ತಳಿಯಲ್ಕಾ ಭೀತಿಯಿಂದಮೋಡಿ ಮಹಾಭಯ ಕೃತ್ಸೂಕರಂಗಳೇಂ ಪೊರ್ದುಗುಮೇ
ಮಂತ್ರಂ. ಓಂ ನಮೋ ಭಗವತೇ ಸಿದ್ಧಿ ಚಾಮುಂಡೆ ಮುಂಡೆ ನೀಲಿ ಕಾಳರಾಕ್ಷಸಿ
ಏಹಿ ಛಿಂದ ಭಿಂದ ಉಜ್ಜೆಣಿ ಮಸಣಿ ಅಪಿಂಡಂ ತಿಲಂತ ಭೂಮಿದಾಚಾ ಸಿದ್ಧಿ ಶಿವ
ಭೋಗೇಶ್ವರಿ ಕಾಷ್ಠಂಗಾ ಶೂಲವೆ ಓ ಫಟ್ ಸ್ವಾಹಾ
ವಿಲಸನ್ಮಂತ್ರಯುತಂ ಕೂಂದಲ ನೇಣಿಂ ಮುಸಲಮಂಥಮಂ ಪೊರೆವುದುಲೂಖಲಮಂ ಮೇಣ್ ಬಾಸುೞ್ಗಳ್ಪುಲುಗುಡಿತೆಯ ಮೆಯ್ಯೊಳೇೞುಗುಂ ತತ್ಕ್ಷಣದಿಂ
ಮಂತ್ರಂ. ಆಡುವಲ್ಲಿಯ ಭೋರುಗುಣದಿಂದನುವಿಂದಂ ತಿಕ್ಕೆನಮಂ ತಿಕ್ಕೆ ಗುರು ಪಂಚಸಿದ್ಧಿ
ಒಸೆದೀ ಮಂತ್ರದೊಳಂ ಮಂತ್ರಿಸಿ ಕೊಂಡಿಡೆ ಭಸ್ಮಮಂ ತದೀಯಾಲಯದಾದೆಸೆಗಂ ಹುಲುಗುಡಿತೆಗಳುಂಮಿಸುಕದೆ ಚಕಿತರ್ಕಳಾಗಿ ತೊಲಗುಗುಮದಱಿಂ
ಧೂಪಂ
ಮಂತ್ರಂ. ಆಂಶಬರಿ ಕಿತ್ತಯ ಸಂಜಲೆ ಸ್ವಾಹಾ- ಈ ಮಂತ್ರದಿಂದೆ
ಮೊಕ್ಕಳಮೆನೆ ನವಿಲಿನ ಬೆಳ್ಳಕ್ಕಿಯ ಗಱಿಗಳನೆ ತುಪ್ಪದಿಂ ಚಂದನದಿಂದಿಕ್ಕಲ್ ಧೂಪಮನದು ತಾಂಧೊಕ್ಕನೆ ಫಣಿ ವೃಶ್ಚಿಕಾಖು ವಿಷಮಂ ಕಳೆಗುಂ
ತರಣಿಯ ಪರ್ಣಂಗಳುಮಂಬೆರಣಿಯ ಕಿಚ್ಚಿನೊಳಮಿಕ್ಕಿ ಕಾಸುಗೆ ಪೊಗೆಯಿಂಗರಳದ ಪುಣ್ಣುಂ ಬೇಗನೆಪರಿಹರಿಕುಂ ವಿಷಮಶೇಷ ಬುಧಜನಮಿತ್ರಾ
ಕಾಕೆಯ ಸೊಪ್ಪಿನ ಪೊಗೆಯಂಸ್ವೀಕರಿಸಿದ ವಿಷದ ಪುಣ್ಗಳಱಿಗುಮಮೋಘಂವ್ಯಾಕುಳದಾ ವಿಷಮುಂ ಭೂಲೋಕಸ್ತುತ ಸುಕವಿ ವನಜವನಕಳಹಂಸಾ
ವ. ವಿಷದಿಂದಾದ ಪುಣ್ಣಂ ಮಾಣಿಪ ಮರ್ದು
ಕರಿಯುಮ್ಮತ್ತದ ಕಾಯ್ಗಳಕರಿಯಂ ಬೆಣ್ಣೆಯೊಳೆ ಕಲಸಿಡಲ್ ಪುಣ್ಗಳ್ಗಂಪರಿಹರಿಕುಂ ತದ್ವಿಷಮಂಗುರುಕುಲಕಮಲಾರ್ಕ ಪೂಜ್ಯಪಾದರ ಮತದಿಂ
ವ. ಪುಣ್ಣಂ ತೊಳೆವ ಔಷಧಂ
ಕೋೞಿಯ ಗಱಿಯಿಂ ವಿಷದಿಂಚಾಳಿಸಿದಾ ಪುಣ್ಣನೊರಸಿ ತೊಳೆವುದು ಕೞಿಯಿಂಮೇಳಿಸಿದ ರಜನಿಯಿಂದುನ್ಮೂಲಿಸುಗುಂ ಕಾಸಿ ತೊಡೆದಿಡುತ್ತಿರೆ ಮರ್ದಂ
ಹುಲಿಗಿಲ್ಗೆಂಡೆಯುಮಂ ಮಂಡಲಮಾರಿಯೆನಿಪ್ಪುದಿಪ್ಪೆಯರುಠಾಳ ಫಲಂಪಲ ತೊಱೆಗಣಿಗಿಲಿವಂ ತಾಂಜಲದಿಂದರೆದೆಱೆದುತೊಳೆಯೆ ನಿರ್ವಿಷಮಕ್ಕುಂ
ವ. ಪುಣ್ಣಿಗೆ ಪಿಂಡಿ
ಅಲಸದಿರು ಮಂ (ಮುಂ)ಡಸೀಗೆಯದಲಮಂ ತಂದರೆದು ತೊಳೆದು ಪುಣ್ಣಿನ ಬಾಯೊಳ್ನಿಲೆ ಪಿಂಡಿಯನಿಕ್ಕಲೊಡಂತೊಲಗೆ ವಿಷಂ ಸುಖದಿನಿರ್ಪನಾ ದಷ್ಟನವಂ
ಮಾತೇಂ ಪೋಗದೆ ತದ್ವಿಷಂ ನೆಲಸಿರಲ್ ಪುಣ್ಣಾಗಿ ಕೀತಿರ್ದೊಡಂಬಾತುಂ ಬಾಧಿಸುತಿರ್ದೊಡಂ ತುಳಿದು ಕೃಷ್ಣಾಖ್ಯಾತದುಮ್ಮತ್ತಮಂಜಾತಂ ತದ್ರಸಮಾಗೆ ಕೂಡಿರೆ ಸೆತಂ ಮಾೞ್ಪುದೊಳ್ಪಿಂದೆ ವಿಖ್ಯಾತಂ ಪೂಸಿದೊಡಂ [ವಿಷಂ] ತೊಲಗುಗುಂ ಪುಣ್ಣಾಱುಗುಂ ಕ್ಷಿಪ್ರದಿಂ
ಘಣಿದಷ್ಟನ ಪುಣ್ ಬಾತೊಡೆಭಣಿತಮೆನಿಪ್ಪರ್ಕಮೂಲಮಂ ಗೋಕ್ಷೀರಕ್ಕೆಣೆಯಾಗಿರಲ್ಕಮರೆದಿಡುಮಣಿಯಿಸುಗುಂ ವಿಷಮನೆಂದನಭಿನವತಾರ್ಕ್ಷ್ಯಂ
ಸಿರಿಸದ ಪಂಚಾಂಗಮುಮಂಗಿರಿಕರ್ಣಿಕೆ ನೀಲಿಯಂಗುರೆಂಬಿವನಂಭಃಪರಿಮರ್ದಿತಮಂ ಪುಣ್ಣೊಳ್ನಿರುತಂ ಪೂಸಲ್ ವಿಷಂಗಳೆಲ್ಲಂ ಕಿಡುಗುಂ
ಎಣ್ಣೆಮರ್ದು
ಮೆಣಸಿಗೆ ಕೃಷ್ಣನೀಲಿ ಕುಟಜಂ ನಿಡುಗೊಂಡೆಯೆನಿಪ್ಪಿವೆಲ್ಲಮಂಗುಣನಿಧಿ ಸಾಧಿಸಿಟ್ಟಿಡಿದು ಕತ್ತುರಿಗೂಡಿದ ಚೂರ್ಣಮಾದೊಡಂದಣಕಿಸದಣ್ಣ ಪುಣ್ಣೊಳದನೆಣ್ಣೆಯೊಳಟ್ಟು ಬಿಡುತ್ತುಮಲ್ಲಿ ತತ್ಕ್ಷಣದೊಳಮಂತದಲ್ಲಿ ಕರಿಯಂಬಿಡೆ ನಿರ್ವಿಷಮಕ್ಕುಮಾತನೊಳ್
ಕಡಸಿಗೆ ಮೆಣಸಿಗೆಯಂಗುರುಗಡಣದ ಕಾತ (ಸ)ರಿಕೆ ತೊಟ್ಟಿಯೆಂಬಿವಱಡಿಯೊಳ್ಬಡಗಲ್ ಪರ್ಬಿದ ಬೇರ್ಗಳನಡುಗೆಣ್ಣೆಯೊಳೆಱೆದು ಕರಿಯನಿಕ್ಕೆ ವಿಷಘ್ನಂ
ಕಾಸರಿಕೆ ತೊಟ್ಟಿಯಿಪ್ಪೆಯುಮಾಸಡಿ ಮೆಣಸಿಗೆಯ ಬೇರನಿಡಿದಡುವುದುಮಾಸಾಸಿವೆಯೆಣ್ಣೆಯೊಳಂತದನಾಸುರದಾ ಕ್ಷತದೊಳೆಱೆಯೆ ನಿರ್ವಿಷಮಕ್ಕುಂ
ವ. ಇನ್ನು ಕರಿಯಂ ಮಾೞ್ಪೊಡೆ ಕ್ರಮಂ
ಗರುಡನ ಗೂಡಂ ಹಸ್ತಂಬೆರಸಿರಲರ್ಕನೊಳೆ ತಂದು ಮಾೞ್ಪುದು ಕರಿಯಂಕರಮರಿದೆನಿಸಿದ ಪುಣ್ಣಿಂಗಿರದಿಕ್ಕೆ ವಿಷಘ್ನ ಹಂಸಶರ್ಮಕಳಾಢ್ಯಾ
ಆಡಿನ ಹಿಕ್ಕೆಯನಾ ಹುಡಿಮಾಡಿಸಿದಭಯಾಖ್ಯಮೆಸೆವ ಹುಣಿಸೆಯ ದಳಮಂನೋಡರಿದಪ್ರತಿಮಂ ಕರಿಮಾಡುಗೆ ಪುಣ್ಗಿಡುಗೆ ವಿಷಮನಂತವು ಕಳೆಗುಂ
ತೊಱೆಗಣಿಗಿಲೆ ನಾಯ್ವೆಲ ಪೆರ್ಗುರುಟಿಗೆ ಹೊಡೆಮರೞ್ದ ಹಚ್ಚೆಯೆಲೆ ಮೆಣಸಿಗೆ ನಾಗುರುಮಾರಿಯಜದ ಹಿಕ್ಕೆಗಳುರುತರದ ವಿಷಪ್ರಹಾರಿಗಳ್ ಬೆರಸಲವಂ
ಮಗ್ಗಾರೆಯ ಪಣ್ಗಳನವಱೊಗ್ಗಿನೊಳಾಗಿಸಿ ಬೞಿಕ್ಕಮಂತಾ ಕರಿಯಿಂದಗ್ಗಳಿಕೆವಡೆದ ವಿಷಮಂಮಗ್ಗುಗುಮಾ ಪುಣ್ಗಳಾಱುಗುಂ ಗುಣನಿಳಯಾ
ಮರಿಚಂ ಬೊಬ್ಬುಲಿ ಗುಳ್ಳಂಮರದರಿಸಿನಮೆಸೆವ ಹುಣಿಸೆಯೊಳ್ತಿಗುಡುಗಳೊಂದಿರೆ ಸರ್ಪಾಕ್ಷಿಯುಮವಱೊಳ್ಬೆರಸಿಡೆ ಕಂಚ್ಯಾಲಮಿದು ಹಿತಂ ಕರಿಯಕ್ಕುಂ
ಹೆಗ್ಗುರುಟಿಗೆ ಹುಣಿಸೆಯ ತಿಗುಡೆಗ್ಗಿಲ್ಲದ ಚಿನ್ನಧಾರೆಯಲಿಯಿಕ್ಕಿದ ಸಂದಗ್ಗಳದ ಹಿಕ್ಕೆಯಿವಱಿಂತಗ್ಗಿದ ಕರಿಯಖಿಳ ವಿಷಮನಂತಳಱಿಸುಗುಂ
ವರಮಿಂದ್ರವಾರುಣಿಯ ಬೇರ್ಪರತರಮಾಬಿಂಡಿಗಂ ಲಸದ್ವರತರಮಾಕರಿಗಂಡಂಗಿಯೆನಲ್ ಪರಿಹರಿಕುಂ ವಿಷದುರುವ ಪುಣ್ಗಳಂ ತತ್‌ಕ್ಷಣದಿಂ
ಅಂಬಿಲದಿಂದರೆದರಿಸಿನಮಂ ಬೆರಸಿಯೆ ತೊಳೆದು ಪುಣ್ಗೆ ಹಬ್ಬೆಯ ದಳಮಂಕಿಂ ಬಹುನಾ ಚೂರ್ಣಿಸಿ ತಳಿಯಂಬುರುಹಂ ಹಿಮದೊಳಗಿದವೋಲ್ ವಿಷಮೞಿಗುಂ
ಅನಂತ ಗಾರುಡಂ –
ಮಂತ್ರಂ. ಓಂ ಕ್ಷಿಃ ಅಮೃತವಾಹಿ ಸ್ವಾಹಾ
ಕೋಪದೊಳಹಿ ಪಿಡಿದಾ ಸಂತಾಪಿತ ದೇಹಂಗೆ ಮಣ್ಣನೀ ಮಂತ್ರಮನಾಳಾಪಿಸಿ ಕುಡೆ ತಿಂದಾತಂಕೈಪೆಯೆನಲ್ ಕೊಳಕನೆಂಬುದಿನಿದೆನೆ ಕುರ್ಯಂ
ಹುಳಿಯಾದೊಡೆ ನಾಗನದುಂತಿಳಿ ಸಹಜಂ ಸ್ವಾದುವಾದೊಡಂ ಶಂಕೆಯಿನಾದೊಳ ವಿಷಮೆಂದೇ ಭಾವಿಪುದಿಳೆಯೊಳ್ ಮಾಂತ್ರಿಕನಶೇಷಬುಧಜನಮಿತ್ರಾ
ತನ್ಮಂತ್ರಂ- [ಓಂ ನಮೋ ಭಗವತೇ] ಅಸ್ತಂಗತಪಾದಮ ಚಣದಿವಿ ಕರಿಯಾಗಿ ಜಳದೆ ಹರಿ
ಸರ್ಪ ಹರಿಮರಿ ಸ್ವಾಹಾ
ಈ ಮಂತ್ರದೊಳಂ ದಷ್ಟನನಾಮವನಿಕ್ಕುವುದು ಪಠಿತಮಂತ್ರನ ಸಂಗಂನಾಮಧ್ಯಾನದೊಳಂದಭಿರಾಮಂ ತಂಬುಲಮನಿಕ್ಕೆ ನಿರ್ವಿಷಮಕ್ಕುಂ
ತನ್ಮಂತ್ರಂ – ಓಂ ಪರಿಹರಿಕು (ತಾತಾಸಾ) ಸಾ ಪರಿಗರುಡಾ ಪರಿಗರುಡಾ ಆಟಕಂಠಾಪುರ ಗರುಡಾ
ಗರುಡ ಗರುಡಾ ಉಕ್ಕೆಂ (ಉಪ್ಪಲ) ಗರುಡಾ ತಲೆದಿಂಬು ಗರುಡಾಹಿಣಿ ಗರುಡಾ ವೊಡಿಕುದ ಓಂ
ಗುರುಪ್ರಸಾದಾ ವಿಷ ಅತಿವಿಷ ನೀಲಕಂಠ ನಿರ್ವಿಷ ಸ್ವಾಹಾ- ಓಂ ಗರುಡಪ್ರಸಾದ
ಮಂದಾಕ್ರಾಂತಂ. ಈ ಮಂತ್ರೋಚ್ಚಾರಣದಿನಚಿರಂ ಮಂತ್ರಿಸಲ್ಕಂದು ದಷ್ಟಂಕ್ಷೇಮಂ ಬಾೞ್ಗುಂ ಕುಡುವುದು ಚಿರಂ ಮಾಂತ್ರಿಕಂ ವೀಟಿಕಾಖ್ಯಂತಾಮಾಗಲ್ ತೇದೆಳೆಗೆ ಶುಚಿ ತಾಂ ಮಾನಸಂ ಪೇೞ್ದನೆಂತುಂಸಾಮಾನ್ಯರ್ಗಂ ತಿಳಿಗುಮೆ ಚಿರಂ ಭಾವಿಸಲ್ ಪದ್ಮಬಂಧೂ
ತನ್ಮಂತ್ರಂ- ರಿದಳದ್ದಿ ಧವಳವಸ್ತ್ರಂ ಧವಳಾಭರಣಂ ಶಂಖಪಾಳಧವಳಾಮಮ ಭೈಸಣಂ ಬೈಸಿದ್ಧಿದೆ
ಕಾಳಿಸು (ರ)ರಿ ಬ (ಜ) ಜ್ವರೆ ವಿಷಂ ಉತ್ಪತಿ ಗುರುಂಜೆ ಸಿದ್ಧಿ ಕೆರವೆ ನಾಮುಘೇತಿ ಗುರುಂ ಚ ಸಿದ್ಧಿ
ಮಂದಾಕ್ರಾಂತಂ. ಪೇೞ್ದೀ ಮಂತ್ರಧ್ವನಿಯನೆ ಕರಂ ಕರ್ಣದಿಂ ಚಿತ್ತಗೊಟ್ಟುಂಕೇಳ್ದಾ ದಷ್ಟಂಗಖಿಳ ವಿಕಳತ್ವಂ ದಿಟಂ ಪಿಂಗಿಪೋಕುಂತಾಳ್ದುಂ ತನ್ನಿಂ ತೊಲಗಿದ ಕಲಾದಗ್ಧಮಂ ಮತ್ತೆ ನಂಜಂತೂಳ್ದುಂ ಬಾೞ್ಗುಂ ಸುಕವಿನಿಕರಾನಂದಕೃನ್ಮಂಗನಿಂದಂ
ಸುಣ್ಣದ ಕಟ್ಟನಿಕ್ಕುವ ಮಂತ್ರಂ.
ಓಂ ಇಂದ್ರ ಸುಣ್ಣ ಮೆಱೆಯೆರೆಯನಯ ಸುಣ್ಣ ಚಂದ್ರನ ಸುಣ್ಣ ಚಾಮುಂಡಿ ಸುಣ್ಣ ಮಂದ್ರನ ಸುಣ್ಣ
ಶ್ರೀಮಹಾದೇವರ ಸುಣ್ಣ ಇನ್ನು ಸುಣ್ಣಂಗೊಂಡು ನಾನೋಡಿ ಕಟ್ಟನಿಕ್ಕಲು ವಿಷಂ ನಿರ್ವಿಷಮಾಗಿ ನೀರಂ
ಕೊಂಡು ನೆಲಕ್ಕಿೞಿದು ಪೋಗು ಎನ್ನ ಗರುಡಾ-ಗುರುಪ್ರಸಾದ
ಮಂದಾಕ್ರಾಂತಂ. ಚೂರ್ಣಂ ತಾನೆಂಬಿನಮತಿಮುದಂಬೆತ್ತುಮೀ ಮಂತ್ರದಿಂ ತಚ್ಚೂರ್ಣಂ ಸುಣ್ಣಂ ಬಳಸಿರೆ ಮುರಧ್ವಂಸಿಯಾ ಚಕ್ರದಂತಾಕೀರ್ಣಂ ಮಾಡಲ್ಕನುಪಮಮುದೀರ್ಣಾಂಗಮೆಂಬೌಷಧಂ ವಿಸ್ತೀರ್ಣಂ ಮತ್ತೊಂದೆನೆ ಸುಖಮುಖಂ ಜೀವಿಕುಂ ದಷ್ಟದೇಹಂ
ಹೀಲಿಯ ಕಟ್ಟಿನ ಮಂತ್ರ
ಓಂ ತಿರಿ ವರಮೈಲಂ ಅಧ್ಯದಾತನಡು ನಾಗಂ ಪುಟ್ಟುವ ಚಟ್ಟು ಪಂಡ ಪೀಲಿ ವರ ಉಳ್ಳವಂ
ಚಿಕಿಲಸುಗುದಿಂದ್ರೆ ನೀಲಗಿರಿ ಸಾಧಾರಣಿ ನೀರಂ ಕೊಂಡು ನೆಲಕ್ಕೆ ವಿಷವಿೞಿದು ಪೋಕುಂ ಯೆನ್ನಂ
ಗರುಡ ಗುರುಪ್ರಸಾದ
ಮಂದಾಕ್ರಾಂತಂ. ಲೋಕಖ್ಯಾತಂ ನಿರುಪಮಗುಣಾಧಾರನೀ ಮಂತ್ರದಿಂದಂಕೇಕೀಪತ್ರಂಗಳೊಳಿಸೆ ಗುಣಂ ಕಟ್ಟನಿಕ್ಕಲ್ ವಿಷಂ ಕೊಂಡೇಕಂ ತಾನೇಂ ಪ್ರಶಮಿಸುಗುಮಾ ಮಂಗರಾಜೋಕ್ತಿಯಿಂ ಸುಶ್ಲೋಕಂ ತಾನಲ್ಲದೊಡೆ ನಗುಗುಂ ಸಜ್ಜನಾ ವ್ಯರ್ಥವಾಕ್ಯಂ
ಮಂತ್ರಂ. ಓಂ ನಮೋ ಭಗವತೇ ರಕ್ತಾಂಗಿ ರಕ್ತಲೋಚನೇ ರಕ್ತಜಟೇ ಕಪಿಳ ಶರೀರೇ ಹರ ಮದ
ಭಂಜ ಶೂಲೋಗ್ರಪಾಣಿ ಉಗ್ರೆ ಚಡೆ ತಷಿ (ತ್ವಷ್ಟು) ಕೃಷ್ಣೆ ಅತಿಕೃಷ್ಣೇ ಇದಂ ಮಾನುಷಶರೀರಂ
ಪ್ರವಿಶ್ಯಾಭ್ರಮ ಭ್ರಾಮಯ ನೃತ್ಯ ಬಹುರೂಪೆ ಸರೂಪೆ ವಿಲಾಸಿನಿ ರಕ್ತೆ ಕರಾಂಗಿ ಪೂರಯ ಭಂಜಯ
ಆವೇಶಯ ವಿಶ್ವರೂಪಿಣಿ ರಕ್ತಪಟೆ ರುದ್ರಾಜ್ಞಾಪಯತಿ ಹೂಂ ಫಟ್ ಸ್ವಾಹಾ
ಮಂದಾಕ್ರಾಂತಂ. ಸ್ವಸ್ಥಾವೇಶಕ್ಕಿದುವೆ ತಿಳದಂಗಲ್ತೆ ಪದ್ಮಾಲಯಂ ಶುದ್ಧಸ್ಥಾನಸ್ಥಂ ಬಿಸುಟು ಮುಳಿಸಂ ಸ್ನೇಹಮಂ ಭಾವಿಸಲ್ ಕಾಮಸ್ಥಂ ಮಂತ್ರಂ. ಜಪಿಸ ಮಳಿನಾಕಾರದಿಂದಕ್ಕುಮಾರಸ್ಥಂ ಜ್ಞೇಯಂಗಳನೆ ತಿಳಿಗುಂ ತತ್ಪ್ರಭು ಪ್ರಜ್ಞೆಯಿಂದಂ
ಮಂತ್ರಂ. ಓಂ ನಮೋ ಭಗವತೇ ಪಾರ್ಶ್ವನಾಥಾಯ ಹ್ರಾಂ ಹ್ರೀಂ ಹ್ರೂಂ ಕಂಪ ಕಂಪ
ಧುನ ಧುನ ಪುರಾಣ ದಷ್ಟಮಾವೇಶಯ ಸ್ವಾಹಾ
ಈ ವಿವಿಧ ಮಂತ್ರದಿಂದೆಸೆವಾವೇಶಂ ತತ್ಪುರಾಣದಷ್ಟ್ರಂಗಕ್ಕುಂಭೂವಳಯದೊಳೆಂದಂ ತಾಂದೇವಳಿಗೆಯ ಮುಖ್ಯನೆನಿಪ ವಿಭು ಮಂಗರಸಂ
ಮಂತ್ರಂ. ಓಂ ನಮೋ ಭಗವತೇ ಚಂಡಗರುಡಾಯ ಪಕ್ಷಿರಾಜಾಯ ತೀಕ್ಷ್ಣದಂಷ್ಟ್ರಾಯ
ರೋಮಹರ್ಷಣಾಯ ಭಯಂಕರಾಯ ದುಷ್ಟನಾಶಕಾಯ ವಿಷ್ಣುವಾಹನಾಯ ಸುವರ್ಣಜಿಹ್ವಾಯ
ಹನಹನ- ದಹದಹ- ಪಚಪಚ- ಮಾರಯ- ಭಂಜ- ಗ್ರುಣಣ ರೋಹಣ ರೋಹಣ – ಪಲ
ಹಲ ಛಿಂದ ಛಿಂದಿ- ಆವೇಶಯ ಆವೇಶಯ ಠಹಂ ಹೂಂ- ಕ್ಷಾಂ- ಕ್ಷೂಂ- ನಟನಟ- ನೃತ್ಯ
- ಬ್ರೂಹಿ – ಹೂಂ ಫಟ್ ಸ್ವಾಹಾ
ಗರುಡಾಂಕನ ಮುಂದರುಣದಕರವೀರಲತಾಂತದಿಂದೆ ನೂಱೆಂಟಾಗಲ್ವಿರಚಿತ ಮಂತ್ರದ ದೆಸೆಯಿಂನಿರುಪಮದಾವೇಶಮಪ್ಪುದಹಿದಷ್ಟನೊಳಂ
ವ. ಇದು ಪಾವು ಕೆಱೆಕೊಳೆವಾವಿಂಗೆ ಆವೇಶದ ಕಾಲದಷ್ಟಮಂತ್ರಂ. 108 ಪುಷ್ಪದಿಂ- ಸಿದ್ಧಿ-ಗರುಡನ ಮುದ್ರೆ
ತನ್ಮಂತ್ರಂ – ಓಂ ನಮೋ ಭಗವತೇ ಪಾರ್ಶ್ವನಾಥಾಯ, ಓಂ ನಮೋ ಸರ್ಪಖಂಡ, ಓಂ ಸರ್ಪ
ಖಂಡ, ಓಂ ಛಿಂದ, ಓಂ ಸರ್ಪಛಿಂದ, ಏಹಿ ಘೇಂ – ಹೂಂ-ಫಟ್-ಸ್ವಾಹಾ
ಇದು ಕಾಲದಷ್ಟಮಂತ್ರಂ.108 ಪುಷ್ಪಮಂ ಗರುಡಮುದ್ರೆಯನಿಕ್ಕೆ ಸಿದ್ಧಿ
ಇದಱಿಂ ಕೆಱಿಕೊಳೆವಾವುಂಮುದನಾಗರ್ ಮಂಡಲಾದಿ ದಷ್ಟನನಾಗಳ್ಪದೆಪಿಂ ಮಂತ್ರಿಸೆ ನುಡಿಗುಂಉದಯಿಸಿದಾವೇಶದಿಂದಮಿದು ಪರಮಾರ್ಥಂ
ಇನ್ನು ವ್ಯಾಘ್ರಮುಖಸ್ತಂಭನಮಂತ್ರಂ.
ಓಂ ನಮೋ ಭಗವತೇ ಪಾರ್ಶ್ವನಾಥಾಯ ಧರಣೇಂದ್ರ ಪದ್ಮಾವತೀ ಸಹಿತಾಯ ಶ್ರೀ ಪೂಜ್ಯಪಾದಸ್ವಾಮಿಗಳ
ನಿರೂಪದಿಂ ನಾನೋದಿ (ಡಿ) ಮಂತ್ರಿಸಿದೆನು. ಮಂತ್ರಂ. ಬೆರಸು ಕೆಯ್ಯಲಿ ಕರ್ಬಾವ ಬಾಯಂ ಕಟ್ಟುವೆ,
ಕರಡಿಯ ಬಾಯಂ ಕಟ್ಟುವೆ, ಅಟ್ಟಿತಿಂಬ ಹುಲಿಯ ಬಾಯಂ ಕಟ್ಟುವೆ, ಸರ್ಪನ ಬಾಯಂ ಕಟ್ಟುವೆ,
ಚೋರನ ಬಾಯಂ ಕಟ್ಟುವನೆ, ಅವು ನೋಡುವ ನಾಲ್ಕು ನಾಲ್ಕು ದೃಷ್ಟಿಯಂ ಕಟ್ಟುವೆ, ಕಂಭಕ್ಕೆ ಕಟ್ಟುವೆ,
ಹಸುವಿನ ನಾಲ್ಕು ಕಾಲಂ ಕೆಡೆಯ ಕಟ್ಟುವೆ, ನಾ ಕಟ್ಟಿದ ಕಟ್ಟು ಕಟ್ಟು ಓಜದಿಂ ಬಾೞುಗೆ ಗುರುಪ್ರಸಾದ
ಮೇಳಿಸಿ ಕಂಬಳಿಯೆಳೆಯಂಪೀಲಿಯುಮಂ ಪೊಸೆದ ನೇಣನೀ ಮಂತ್ರದೊಳಂದಾಳೋಚಿಸಿ ಗಂಟಿಪ್ಪತ್ತೇೞಾಗಲ್ ಕಟ್ಟನಿಕ್ಕೆವೊಪ್ಪುವ ಕೊರಲೊಳ್
ಇಪ್ಪತ್ತೇೞ್ವರೆಗಂ ತಾನೊಪ್ಪುವ ಮಂತ್ರದೊಳೆ ಮಂತ್ರಿಸುತ್ತುಂ ಕಟ್ಟಲ್ಕಿಪ್ಪತ್ತುಱುಗಳೆ ಹುಲಿಯಿಂದಪ್ಪ ಭಯಂ ತಪ್ಪುಗುಂ ವಿವೇಕನಿಧಾನಾ
ಮಂತ್ರಂ. ಓಂ ನಮೋ ಭಗವತೇ ಚಂಡೋಗ್ರ ಪಾರ್ಶ್ವನಾಥಾಯ ಸಕಳ ಕ್ಷುದ್ರೋಪದ್ರವ
ನಿ (ರ್ನಾಶನಾ)ವಾರಣಾಯ ಓಂ ನಮೋ ಸದಾ ಛಿಂದಮುಂಚರದೋಮಯ ಸ್ವಾಹಾ
ಮಂತ್ರಂ. ಈ ಮಂತ್ರದಿಂ ಮೂಡಣಿಂ ಬಂದ ಹುಲಿಯ ಬಾಯಂ ಕಟ್ಟುವೆಂ, ಪಡುವಣಿಂ
ಬಂದ ಹುಲಿಯ ಬಾಯಂ ಕಟ್ಟುವೆಂ, ಬಡಗಣಿಂ ಬಂದ ಹುಲಿಯ ಬಾಯಂ ಕಟ್ಟುವೆಂ, ತೆಂಕಣಿಂ
ಬಂದ ಹುಲಿಯ ಬಾಯಂ ಕಟ್ಟುವೆಂ, ಯಮದೂತನ ಬಾಯಂ ಕಟ್ಟುವೆಂ, ಸುತ್ತಿ ಬಂದು [ತಿಂಬ]
ನಾಲ್ಕು ಕೋರದಾಡೆಯ [ಹುಲಿಯ]ಂ ಕಟ್ಟುವೆಂ ಓಂ ಗುರುಪ್ರಸಾದ
ವ. ಈ ಮಂತ್ರದಿಂದೊಂಬತ್ತು ಸೂೞ್ ಮಂತ್ರಿಸುವುದು, ಬಿಡುವೊಡೆ ಬಿಟ್ಟಿತ್ತೆಂದು ಮೂಱು
ಬಾರಿ ಮಂತ್ರಿಸುವುದು.
ಅರಿಷ್ಟನೇಮಿ ಮಂತ್ರೋದ್ಧಾರಂ ಓಂ ಣಮೋ ಭಗವದೇ ಅರಿಂಠಣೆಮಿಸ್ಸ ಅರಿಂಠಿಣ ಬಂದೆಣ
ಬಂದಾಮಿ ರಕ್ಕಸಾಣಂ ಭೂಯಾಣಂ ಖೇಯರಾಣಂ ಚೋರಾಣಂ ಧಾರಯಣಂ ಸಾಯಣಿ ಬಂಣತ
ಮಹೋರಗಾಣಂ ಆಣಿಚೆಕೆ ವಿದುರುಠ್ಠಂ ಭಟ್ಟಸ್ಸಂ ಭವಂತಿ ತೇಸದ್ವಿವನಾಂ ಮಹಾಂಗಇಂ ದಿಠ್ಠಿ
ಬಂದಾಮಿ ದುಣು ಮಹಾದುಣು ಜ ಠ ಹೂಂ ಫಟ್ (ಸ್ವಾಹಾ)– ಇದರಿಠ್ಠಣೇಮಿಮಂತ್ರಂ.
ಎಂಟು ಲಘೂಫಲಮಂ ಪಿಡಿದೆಂಟುಂ ದಿಕ್ಕಿನೊಳೆ ಜಪಿಸಿ ನಿಕ್ಷೇಪಿಸೆ ತತ್ಕಂಟಕ ಚೋರಾದಿಭಯಂಗೆಂಟಱೊಳಿರದೋಡುಗುಂ ಮಹಾಕ್ರೂರಮೃಗಂ
ಸಿರಿಸದ ಪೂ ಹುಲಿಗಿಲಿಕಾಯ್ವೆರಸಿದ ಮಡುವಾಗಲೆಂಬಿವಂ ಗೋಮೂತ್ರಂಬೆರಸರೆದು ನಸ್ಯಕರ್ಮಕ್ಕಿರದೊಡರಿಸಲಹಿಕುಲೋಗ್ರವಿಷಮಂ ಕಳೆಗುಂ
ಆಲಸ್ಯಂಗೆಯ್ಯದೆ ಪೊಸನೀಲಿಯುಮಂ ನಸ್ಯವಿಧಿಗೆ ಮಾೞ್ಕೆ ಬುಧಂ ತತ್ಕಾಲದೊಳಂ ಮಣಿಶಿಲೆಯಂಪಾಲಿತ ಗುಣನಿಳಯನೆನಿಪ ಮಂಗನ ಮತದಿಂ
ನುಗ್ಗೆಯ ಬೇರ್ ಸಿತ ಮರಿಚದೊಳೊಗ್ಗಿರಿಕೊಂಡರೆದು ಬಿಡದೆ ನಸ್ಯಂಗೆಯ್ಯಲ್ಕಗ್ಗಲಿಸಿದ ವಿಷಮೞಿಗುಂಸುಗ್ಗಿಯ ಬೆಳ್ದಿಂಗಳಿದಿರ ಕೞ್ತಲೆವೊಲದುಂ
ಮಾತೇನಂಬಿಲದಿಂದಂಪಾತಾಳ ಗರುತ್ಮನೆಸೆವ ಗೆಡ್ಡೆಯನರೆದಿನ್ನೇ ತೊದಳೊತ್ತೀಯಲೊಡಂವಾತಾಹತ ಮೇಘದಂತೆ ವಿಷಮೞಿದಿರ್ಕುಂ
ರೇವತಿಯುಂಭರೆ ಸಿರಿಸದಭಾವದ ಬಂದಳಿಕೆ ಚಂದನ ಪ್ರಯುಕ್ತಮೆನಲ್ಕೋವದರೆದು ತೀವುತಿರಲ್ಕೇವೇೞ್ವೆಂ ವಿಷಮತರ ವಿಷಂ ಪಱಿಪಡೆಗುಂ
ಮಱೆಹಿಡಿಗೆ
ಕನಕದ ಬೇರುಗುನಿಯ ಎಳಗೊನರಂ ಜಂಭೀರಫಲಸಮೇತಂ ಲವಣಂಸನಯಂ ತಡಸಿನ ದಳಮೆಂಬಿನಿತುಮನರೆದು ಗಱಿಯಿಂದೆ ಪೂಸುಗೆ ತನುವಂ
ಇಂತಿದಱಿಂ ಮಱೆಹಿಡಿಕೆಯಭ್ರಾಂತಿನೊಳದಟೞಿದು ಕಾಲ್ಗಳುಂ ಕೆಟ್ಟೊಡವಂಗಂ ತಳುವಿಲ್ಲದೆ ತಕ್ಕ್ರಿಯೆಯಂ ತಾಂ ಮಾಡಲಿೞಿಗುಮದು ಮುನ್ನಿನವೋಲ್
ನೀಲಿಯ ಬೇರಂ ಪೂಸಲ್ಸಾಲದೆ ತಾಂ ಪಲವುಮುಳ್ಳ ವಿಷಮಂ ಕಿಡಿಸಲ್ಭೂಲೋಕದೊಳಂ ಸದ್ಗುಣಪಾಲಂ ತಾನೆನಿಪ ಮಂಗರಾಜನ ಮತದಿಂ
ಹುಲುಗಿಲ ಮೂಲಿಕೆಯಂ ತಾನಲಸದೆ ಕಾಂಜಿಕದೊಳರೆದು ಪೂಸಲೊಡಂ ಭೂತಳದೊಳತಿ ದುಷ್ಟ ಗೋನಸಕುಲದ ವಿಷಂ ಕಿಡುಗುಮಲ್ಲಿ ಸಂದೆಗಮುಂಟೇ
ತಂಡುಲವಾರಿಯೊಳಂ ನೀಂಕೊಂಡರೆ ಲಜ್ಜಾಲು ಮೂಲಿಕಾ ನೀಲಿಗಳಂಮಂಡಲಸಂಭವ ವಿಷಮಂಖಂಡಿಸುಗುಂ ಸಕಳ ವೈದ್ಯಶಾಸ್ತ್ರವಿಳಾಸಾ
ಬಂಜೆ ಮಡುವಾಗಲಂ ತಾನಂಜದೆ ಗೋಮೂತ್ರದೊಡನೆ ಕುಡಿಸಲ್ ಪಡೆಮಾತೇಂ ಜವದೊಳೆ ಗೋನಸಕುಲಮೆಂಜಲಿಸಿದ ವಿಷಗಳೞಿಗುಮೆಂಬರ್ ಪಿರಿಯರ್
ಮತ್ತೆನಿಸಿದೆತ್ತುನಾಲಗೆಯುತ್ತಮತರ ಹೀರೆ ಮೇಣ್ ತ್ರಿಶೂಲಿಯುಮಂ ತಾಂಬಿತ್ತರದಿಂ ಗೋಮೂತ್ರದೊಳಿತ್ತೊಡೆ ಕಳೆಗುಂ ಸಮಸ್ತ ಗೋನಸವಿಷಮಂ
ಹಯಗಂಧಿಯ ಬೇರಂ ಕ್ಷೀರಯುತಂ ಮುಂ ಕುಡಿದು ತಿಂಗೆ ವಿಷಮಂ ಬೞಿಯಂಕ್ಷಯಮಕ್ಕುಂ ಗರಳಂ ದುರ್ನಯದೂರನೆನಿಪ್ಪ ಮಂಗರಾಜನ ಮತದಿಂ
ನಿರ್ವಿಷದ ಉಂಗುರ
ಅಹುದೆಖ್ಖಂಡದ ತಾಮ್ರದುಂಗುರಮದೇ ತಾಂ ನಿರ್ವಿಷಂ ಬಂದೊಡಾಗ್ರಹಣಂ ಕಾಲದೊಳಂದು ಕಾಡಗಸೆಯಾ ಪಂಚಾಂಗಮಂ ದುಗ್ಧದಿಂವಿಹಿತಂ ತಾನೆನೆ ಪಾರದಾಖ್ಯದಿನದಂ ಸಮ್ಮರ್ದಿತಂ ಮಾಡಿ ಕಿಂಬಹುನಾ ದ್ವಾದಶವಾರಮಂತದಱೊಳಂ ಕಾಸೞ್ದಿ ಮೋಕ್ಷಾಂತಮುಂ
ಆವುಂಗುರಮಂ ಮುಟ್ಟಿಸಿದಾವುದಕಮನೀಂಟಲೞಿಗುಮೆಲ್ಲಾ ವಿಷಮೀಭೂವಳಯದೊಳೆಂದಂ ವಿಬುಧಾವಳಿ ವಿನುತಂ ಮನೋಜನಿಭ ಮಂಗಬುಧಂ
ದೀಪದೆ ನಂಬಿರಲ್ಕಿದಱ ನಾಲ್ಕು ದಿನಂಗಳೊಳಲ್ಲದಂದು ನಿಷ್ಠಾಪನೆಯಾದೊಡಂ ಗ್ರಹಣದಂದನುರಾಗದೆ ತಂದು ಮೌನಿ ನಿಷ್ಠಾಪಮೆನಿಪ್ಪ ಬಂಜೆ ಮಡುವಾಗಲ ಗೆಡ್ಡೆಯನಂತೆ ಸಣ್ಣಿಸಲ್ತಾಪಿತ ತಾಮ್ರದೊಳ್ ತಗಡನದ್ದುಗೆ ಕಾಸುಗೆಯಂತ [ದಂ ಪುನಃ]
ಹೆಗ್ಗುರುಟಿಗೆಯಂ ತುಱುಚೆಯನೊಗ್ಗಿರೆ ತಾಂ ಕೈಪೆಸೊರೆಯ ಬೇರ್ಗಳೊಳೆಲ್ಲಂತಗ್ಗಳ ಮೂರ್ಸೂೞ್ವರೆಗಂತೆಗ್ಗಿಲ್ಲದೆ ರಚಿಸಿ ಯಜಿಸಿ ತಂದದನೆ ವಲಂ
ನೀರೊಳಗಿಟ್ಟಾ ನೀರಿಂದಾರಾನುಂ ಸ್ನಾನ ಪಾನಮಂ ಮಾಡಿದೊಡಂಭೋರನೆ ಕಳೆಗುಂ ವಿಷಮುಂಕಾರುಣ್ಯನಿಧಾನ ಮಂಗರಾಜನ ಮತದಿಂ
ಕೆಂಪಿನ ಕಣಿಗಿಲೆಯೀಶ್ವರಿಕೆಂಪಿನಪಾಮಾರ್ಗ ದಾಗುಡಿಗಳೆಂಬಿವಱೊಳ್ಸೊಂಪುಳ್ಳ ಬೇರ್ಗಳಂ ತಂದುಂಪುಡಿ ಧನ್ವಂತರಿ ಪ್ರಸಿದ್ಧೌಷಧಿಗಳ್
ರಕ್ಷೆಯನಾಗಿಸಿ ಶುಭದಿನನಕ್ಷತ್ರದೊಳನುಪಮಾನಮಂತದ ನೀನಿಂತೀಕ್ಷಿಸಿ ಜಲದೊಳಮಿರಿಸಿದನಾಕ್ಷಣದೊಳ್ ಕುಡಿಸೆ ನಿರ್ವಿಷಂ ಸ್ನಾನದೊಳಂ
ಬರೆ ತತ್ಸಿದ್ಧದಿನಂಗಳಂತವಱೊಳಂ ಸರ್ಪಾಕ್ಷಿಯೊಳ್ಮೂಲಮುಂಗುರದೊಳ್ ತೀವಿರಲಿಕ್ಕಿ ಕಟ್ಟುವುದದಂ ಕರ್ಬೊನ್ಗಳುಂ ಮುಟ್ಟದಂತಿರಲಾವುಂಗುರಮಂ ಜಲಾಂತರದೊಳಿಟ್ಟಾ ವಾರಿಯಿಂ ಸ್ನಾನಮಂಗರುಡಧ್ಯಾನದಿನಾಗಿಸಲ್ಕೆ ಕುಡಿಸಲ್ಕಾ ವಾರಿಯಿಂ ನಿರ್ವಿಷಂ
ಲಲಿತ ವೃತ್ತಂ. ಟಂಕಣ ನಿಶಾ ಮಧುಕಮಿಲ್ಲಣ ರುಜಾಖ್ಯಮಿವೆ
ತಾಂ ಕರಮಿರಲ್ ಸಮದೊ (ಳೊಂ) ದೆನಿಪ ಭಾಗಂ
ಸಂಕಿಸದೆ ಮೋನದೊಳೆ ತಂದು ಘನನಾದಿಯನ
ದಂ ಕರಮೆ ರಕ್ಷಿತಮದೆಲ್ಲವಱ ತೂಕಂ
ತಾಂ ಕರಮಿರಲ್ ಬೆರಸಿ [ಸೇವಿಪುದು] ಗೋಘೃತದೊಳಂ ಕಲಸಿದಂತದಣಮಾಗಲದು ಕರ್ಷಂ[ತಾಂ ಕರ] ಘನಂ ಗಡ ಬರ್ದುಂಕನವನೆನ್ನದಿರುಬಿಂಕದ ಚರಾಚರವಿಷಂ ಪರಿಗುಮೆಲ್ಲಂ
ಬರೆ ಕೃಷ್ಣ ಚತುರ್ದಶಿ ಪುಟ್ಟಿರೆ ನೀಲಿ ಪ್ರೇತಭೂಮಿಯೊಳ್ ತಂದದನಿಂತಿರಿಸರೆದು ನೀರೊಳೀಂಟಲ್ಚರಾಚರಂಗಳ ವಿಷಂಗಳುಂ ನಿಂದಪುವೇ
ಕರಕರ್ಣಿ ದೇವದಾಳಿಯವರಬೀಜಂ ನೀಲಿ ಗದುಗಿನೆಲೆ ಱಂಜಿಗೆಯಂಸರಿಮಾಡಿ ಕೂಡಿ ಮೆಲಲಾಪುರುಷಂ ಖಗರಾಜನೆಂದುವಂಜುಗುಮಹಿಗಳ್
ಮರಿಚಂ ಸೈಂಧವಮೆಂಬೀಯೆರಡಂ ಸಮಮಾಗಿ ಕೊಂಡು ನಿಂಬದ ಬೀಜೋತ್ಕರಮಂ ಪಯೋಘೃತಂಗಳ್ಬೆರಸೀಂಟೆ ಚರಾಚರಂ ವಿಷಂ ಪರಿದಳಿಗುಂ
ರಥೋದ್ಧತಂ. ನಂಜೆ ಬೆಟ್ಟಿತ್ತು ಗಡೆಂಬ ಶಂಕೆಯಿಂದಂಜಲೇಕೆ ಮಡುವಾಗಲೆಂಬುದಂಬಂಜೆಯಪ್ಪುದನೆ ನಸ್ಯದಿಂದೆ ಮತ್ತಂಜದೀಂಟೆ ತೊಡೆಯಲ್ ವಿಷಾಪಹಂ
ಒಂದೆಯಪ್ಪ ಮಡುವಾಗಲೊಂದಱಿಂಸಂಧಿಸಿರ್ದ ವಿಷಮೆಯ್ದೆ ಪಿಂಗುಗುಂಸಿಂಧುವೆಲ್ಲೆವರಮೆಯ್ದೆ ಭವ್ಯರೊಳ್ಬಂಧುವಪ್ಪ ವರ ಮಂಗನಾಜ್ಞೆಯಿಂ
ಮಾಳತಿ ದೇವದಾರಮರ್ದುವಳ್ಳಿ ಕುರುಂಟಗೆ ದೇವದಾಳಿ ಸದ್ಬಾಳವಜಾಮೋದವರುಠಾಳ ಘನಂ ಸದಲಾಬು ನಿಂಬಮುಂವಾಳುಕಿ ಲುಂಗ ಭಾಸ್ಕರ ಲವಂಗ ತಮಾಳಕ ನಾಗಕೇಸರಂಮೇಳಿಸಿ ಕೂಡಿಕೊಂಡು ನವಹಿಪ್ಪಲಿಯಂ ಕರಿಯಾವಿಕಾಖ್ಯದಿಂ
ಅಡುವುದದಂ ತತ್ ಕ್ಷೀರದೆತಡೆಯದೆ ಉಣ್ಬುದು ಬೞಿಕ್ಕೆ ಕಾಳೋರಗನಿಂಮಡಿಯ ನರನೆಂದು ಕರುಣದೆನುಡಿದಂ ಗಡ ಗರುಡನೆಂಬರಿದು ಕೇವಳಮೇ
ಗಿರಿಕನ್ನೆಕುಮಾರಿಯ ಬೇರ್ಗಿರಿಮಲ್ಲಿಗೆಗಳ ಕೊನರ್ ಗುಡೂಚಿಗಳೊಂದಾಗಿರೆ ಸಿದ್ಧಿದಿನದೊಳಡುವುದುಪರಮಾನ್ನಮನೊಸೆದು ಕಾಳಿಯಾವಿನ ಪಾಲಿಂ
ಘನಸಾರಯುಕ್ತಮೆನಲುಂಡ ನರಂಗಂ ವತ್ಸರಂಬರಂ ನಿರ್ವಿಷಮೆಂದನುಪಮ ಗುಣನಿಧಿ ಮಂಗಂಜಿನಮತದಿಂ ಪೇೞ್ದನಖಿಳ ಜನಮಱಿವಿನೆಗಂ
ಎಕ್ಕೆಯ ಮಾದಲಂಗಳ ಮೊದಲ್ಗಳನೊಂದನೊಂದಱೊಳ್ತಕ್ಕುದೆನಲ್ಕೆ ಪಲ್ಲಟಿಸಿ ತನ್ನ (ದ್ಭ?) ವ ಸಂಭವ ಮೂಲಮಪ್ಪುವಂಚೆಕ್ಕನೆ ಮೋನದಿಂ ತರಿಸಿ ಕೂಡಡುಗಾಡಿನ ತಕ್ರಮೊಂದೆ ಕೂಡೆಕ್ಕೆಯಡಲ್ಕಮಂಬಲಿಯುಮಂ ಕೊಱೆಯಕ್ಕಿಯೊಳಂ ಬೞಿಕ್ಕದಂ
ಎಂಬುದು ಸಿದ್ಧಿದಿನಂ ಕೊಱೆಯಂಬಲಿಯನದಂ ಬೞಿಕ್ಕಮಿಮ್ಮಡಿ ಷಣ್ಮಾಸಂಬರ ವಿಷಮಿಲ್ಲವನಂತಿಂಬುದುಮಾ ತಿಂದ ಫಣಿಯದಾಗಳೆ ಸಾಯ್ಗುಂ
ಕಿಱುದೇಗಿನ ಬೇರಂ ತಾಕೊಱೆಯಕ್ಕಿಯೊಳಾಡಿನಳೆಯೊಳಟ್ಟಂಬಲಿಯಂಸುಱಿ ವರುಷಂಬರಮುಂ ಜನಮಱಿಯಲ್ ವಿಷಮಿಲ್ಲಮವನನಹಿ ಕೊಳೆ ಮಡಿಗುಂ
ಎಕ್ಕೆಯ ಬೇರ್ ಪೂವುಮನೊಡನಿಕ್ಕೆ ಸಮಂ ಚೂರ್ಣಮಾಗಿ ಜಲದಿಂ ಕುಡಿಯಲ್ನಿಕ್ಕುವಮೇನಱುದಿಂಗಳ್ಬರ್ಕುಮದೆಂಬಿನೆಗಮಾ ನರಂ ವಿಷದೂರಂ
ಬಿಳಿಯುಗುನಿಯ ಬೇರಂ ನಿಶ್ಚಳಮತಿಯಿಂ ತಂದು ಪುಷ್ಯ ತಾರೆಯೊಳಂ ನೀರೊಳೆ ಬೆರಸಿ ಕುಡಿಯೆ ವಿಷದಿಂದೞಿಯಂ ತನ್ನರನೆ ವತ್ಸರಂ ಬರ್ಪಿನೆಗಂ
ವರ ಪುಷ್ಯಾರ್ಕದ ದಿವಸಂಸಿರಿಸದ ಮೂಲಮನೆ ತಂದು ತಂಡುಲಜಲದಿಂದರದೀಂಟಲೊಡಂ ವರ್ಷಂಬರಮುಂ ತತ್ಪಾ[ಯಿ]ಗೆಯ್ದಲಾಱದು ಗರಳಂ
ಪೂರ್ಣಹಿತಂ ತಚ್ಛೇತ ಪುನರ್ನವಿಯಂ ಪುಷ್ಯತಾರೆಯೊಳ್ ತಂದುದುಮಂಚೂರ್ಣಿಸಿ ನೀರೊಳ್ ಕುಡಿಗಾಪೂರ್ಣಂ ಸಂವತ್ಸರಂಬರಂ ನಿರ್ವಿಷದಂ
ಇನವಾರದಮಾವಾಸ್ಯೆಯದಿನದೊಳ್ ದಾಗುಡಿಯ ಬಂಜೆ ಮಡುವಾಗಲಸೊಪ್ಪಿನ ಕಿಱಿದಡಸಿಗೆಯೆಲೆಯಂತಿನಲಾತಂಗಿಲ್ಲ ವಿಷಮದಾ ವರ್ಷಾಂತಂ
ದೀವಳಿಗೆಯ ಬಾವುದಿನಂಭಾವಿಸಿ ಶುದ್ಧಾತ್ಮನಾಗಿ ವೃಕ್ಷಾದಿಯ ಪತ್ರಾವಳಿಯಂ ಬಲ್ಲಂ ಸಮನೇವೇೞ್ವೆಂ ಮೆಲುಗೆ ನಿರ್ವಿಷಂ ವರ್ಷಾಂತಂ
ಬಿಳಿಯ ಕನ್ನೆಕುಮಾರಿಯಂ ರವಿಪುಷ್ಪಮಂ ಬೆರಸಂಬುವಿಂಚಳೆಯದಿಂದರೆದಂತದಂ ಕುಡಿಸಲ್ಕೆ ತದ್ವರುಷಂಬರಂಖಳಫಣಿಪ್ರಮುಖಂಗಳಾ ವಿಷಮಿಲ್ಲಮಾತನೊಳಲ್ತೆ ದೇವಳಿಗೆ ನಾಡ ಮಹಾಪ್ರಭು ಪ್ರಥಿತೋಕ್ತಮಿಂತಿದು ಲೋಕದೊಳ್
ಧರೆಯ ಜನೋಪಕಾರಮನಿಂತಿದನೆನ್ನ ಮನೋನುರಾಗದಿಂವಿರಚಿಸಿದೆಂ ಖಗೇಂದ್ರಮಣಿದರ್ಪಣಮೆಂಬಭಿಧಾನದಿಂದೆ ಮಚ್ಚರಿಸದಿದಂ ಪರೀಕ್ಷಿಪುದು ಮಾೞ್ಪುದು ನಿಮ್ಮಯ ಭಾವಹಸ್ತದಿಂಸುರುಚಿರಮಾಗೆ ಮಂಗಣಬುಧಂಗೆ ಸಹಾಯರೆನಲ್ಕೆ ಪಂಡಿತರ್
ನೃಪಶಾರ್ದೂಲ ಸಭಾಂತರಾಳದೊಳಶೇಷಪ್ರಜ್ಞರುಂ ಸರ್ವಶಾಸ್ತ್ರಪಯೋರಾಶಿಗಳಸ್ಮದೀಯ ಕೃತಿಯಂ ಸದ್ಭಾವದಿಂ ನೋಡಿ [ನೋಡಿ] ಪುರೋವೃದ್ಧಿಯನೆಯ್ದುವಂತಿರಲಿದಂ ಮಾೞ್ಪುಜ್ಜುಗಂ ನಿಮ್ಮದೆಂದು ಪದದ್ವಂದ್ವದೊಳಿಕ್ಕುವೆಂ ಕುಸುಮಮಂ ಮನ್ಮಾತೆ ವಾಗ್ದೇವಿಯಾ
ಷೋಡಶ ಭಾವನೆಯಂತೀಷೋಡಶವಧಿಕಾರವೆಲ್ಲವಂ ಭಾವಿಸುತುಂನೋಡೆ ಮನದೆಱಕದಿಂದಂಮಾಡುಗೆ ತಾಂ ಯಂತ್ರ ಮಂತ್ರ ತಂತ್ರಂಗಳುಮಂ
ಇಂತೀ ಪ್ರಯೋಗಮಂ ತಾಂಸಂತತ ದಯೆವೆರಸಿ ಮಾಡೆ ಸಫಲಮದಕ್ಕುಂಕಂತುಹರ ಪೂಜ್ಯಪಾದರುಮಂತೀ ಮಂಗಣನೆ ಪೇೞ್ದರಮಳ ಗುಣಾಢ್ಯರ್
ಗುರುಜನ ಪಿರಿಯರ್ ನೋಡಿಯೆಉರುತರ ಗುಣಿಗಳ್ಗೆ ಪೇೞೆ ಸಾಧ್ಯಂ ವಿದ್ಯಂಕರಧೂರ್ತ ಕಷ್ಟದುಷ್ಟಂಗಿರದೀಯಲ್ ನಷ್ಟವಿದ್ಯೆಯಪ್ಪುದು ಪುಸಿಯೇ
ಸೊಲ್ಲಿಸೆ ಕಿಡುಗುಂ ಮಂತ್ರಂ.ಸೊಲ್ಲಿಸಿದೊಡೆ ಕಿಡುಗು ಯಂತ್ರ ತಂತ್ರಂಗಳ್ ತಾಂಮೆಲ್ಲನೆ ಯೋಜಿಸಿ ಮಾಡಲ್ಕೆಲ್ಲಾ ಕರ್ಮಂಗಳಲ್ಲಿ ಬರ್ಕುಂ ಕ್ರಮದಿಂ
ಸಾರಾಸಾರಮನಱಿಯದೆಯಾರಾನುಂ ಕೇಳೆ ಪೇೞ್ದೊಡಾ ಭೋಷಜಮಂಸಾರಂಗಿಡುಗುಂ ಮತ್ತಾಧೀರಂ ಸಾರಂಗೆ ಪೇೞ್ವುದೀ ಗ್ರಂಥಮುಮಂ
ವ. ಅಂತು ಪ್ರಯತ್ನಪರನಾಗಿ ಗ್ರಂಥಮಂ ಸಾಧ್ಯಂ ಮಾೞ್ಪುದು
ಪರಪುರುಷಾರ್ಥಮಪ್ಪವೊಲಿದಂ ಮುದದಿಂ ತಿಳಿದೊಪ್ಪೆ ಪೇೞ್ವೆನಾಂಪುರುಪರಮಾತ್ಮನುಕ್ತಿಯಿನಶೇಷಬುಧರ್ ನೆಱೆ ನೋಡೆ ಪೇೞ್ದೆ[ನಾಂ]ಹರಿಹರ ಭೂಭುಜಪ್ರಥಿತ ಕೀರ್ತಿ ರಮಾರಮಣೀಯದಂತೆ ಸಚ್ಚರಿತದಿನಿಂತಿದುಂ ಪರೆಗೆ ಲೋಕದೊಳೆಲ್ಲೆಡೆಗಂ ನಿರಂತರಂ
ಸೋಮಂ ಪ್ರೇಮಾಸ್ಪದಂ ಬೀರುಗುಮಿಳೆಗೆ ಸುಧಾಸಾರಮಂ ಚಂದ್ರನೆಂತಂತೀ ಮಂತ್ರಾದಿ ಪ್ರಯೋಗಂ ಕೃತಿ ವಿಷದಹನಾಘೋಪಮಂ ಮಾಱಿಕುಂ ಸುಕ್ಷೇಮಂ ಧರ್ಮಾರ್ಥ ಕಾಮಂಗಳ ನಿಳಯಮಿಳಾಬ್ಜಾರ್ಕರುಳ್ಳನ್ನೆಗಂ ಶ್ರೀಧಾಮಂ ತಾವಿಂತಿವೆಂದುಂ ನೆಲಸುಗೆ ವಸುಧಾಚಕ್ರದೊಳ್ ಮಾನನೀಯಂ
ಗದ್ಯ. ಇದು ಸಕಲವಿದಮಲ ಜಿನೇಂದ್ರೋಕ್ತ ಸಿದ್ಧಾಂತ ಪಯಃಪಯೋನಿಧಿ ಪಾರಗ ಶ್ರೀ ಪೂಜ್ತಪಾದ ಮುನೀಂದ್ರ ಚಾರುಚರಣಾರವಿಂದ ಗಂಧ ಗುಣಾನಂದಿತ ಮಾನಸಂ ಶ್ರೀಮದಖಿಲ ಕಳಾಗಮೋತ್ತುಂಗ ಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್ ನಿರ್ವಿಷೀಕರಣ ಚಿಕಿತ್ಸಾ ವಿವರಣಂ
ಷೋಡಶಾಧಿಕಾರಂ


