VI
ಖಗೇಂದ್ರಮಣಿದರ್ಪಣ
ಅಂಜನ ಪ್ರಕರಣಂ
ಶ್ರೀ ವಿದ್ಯಾಪ್ರಕೃತಿಯೆನಿಪ್ಪಾ ವಿಭುವಂ ಪಾರ್ಶ್ವನಾಥನಂ ವಂದಿಸಿ ಸದ್ಭಾವಂ ಸಕಳ ಸಮಾಶ್ರಿತಪಾವನನೆನಿಪಂ ಸರಸ್ವತೀಮುಖತಿಳಕಂ
ಕಂ ಜಾಸನೆಯಂ ವಿಷಭಯಭಂಜನೆಯೆನಿಸಿರ್ದ ದೇವಿ ಪದ್ಮೆಯ ನಯದಿಂದಂ ಜಾನಿಸಿ ಫಣಿದಷ್ಟಂಗಂಜನ ದಿವ್ಯೌಷಧಂಗಳಂ ವಿರಚಿಸುವೆಂ
ಕವಿತಾಕಾಮಿತ ಕಾಮಧೇನುವನದಂ ವಿದ್ಯಾಮದ ವ್ಯಾಘ್ರನಿಂದೆ ವಿಘಾತಂ ಸ್ಫುಟಮಾಗದಂತೆ ಸುಧೆಯಂ ತಾಂ ಮಾಡಿ ಮಂತ್ರಜ್ಞರಪ್ಪವರನ್ಯರ್ಗೆ ಹಿತಾರ್ಥಮಾಗದಿತ ಸದ್ಧ್ಯಾನೈಕನಿಷ್ಠರ್ ದಿಟಂಸುವಿನಿಷ್ಟಾಮೃತ ಮಂತ್ರಮಂ ಕುಡುಗೆ ಪೇೞ್ದಿಂತೀ ಪ್ರಯೋಗಂಗಳಿಂ
ತನುವಿಂದಾನನಮಲ್ಲಿಯುಂ ಶುಭಕರಂ ಮತ್ತಲ್ಲಿ ತೋರ್ಪೀ ವಿಲೋಚನಮೆಂಬಂತಿರೆ ಲೇಸು ಲೇಪನಮದರ್ಕಂ ಪಾನಮಾ ಪಾನದಿಂವಿನುತಂ ತನ್ನಯನಾಂಜನಂ ಬಲುಹೆನಿಪ್ಪಾ ತಾರತಮ್ಯಂಗಳಿಂಜನತಾಸ್ತುತ್ಯ ದೃಗಂಜನಂ ಜನಹಿತಂ ವಕ್ತವ್ಯಮಿನ್ನಂತಱಿಂ
ವ. ಅದೆಂತೆಂದೊಡೆ
ಪಿಪ್ಪಲಿ ಚಿತ್ರಕ ಶಿವೆ ಲೇಸಪ್ಪ ರಸಂ ಮೆೞಸು ಪೆರ್ಗುರುಂಟಿಗೆಯಿವನಿಂತೊಪ್ಪುವ ಸೈಂಧವಯುತಮಂತುಪ್ಪದೊಳೆಸೆ ನಿಮಿಷದಿಂ ವಿಷಘ್ನಮೆನಿಕ್ಕುಂ
ರಸ ಗಂಧಕ ಮಾಕ್ಷಿಕಯುತಮೆಸೆವಾ ವಾಕುಚಿಯ ಬೀಜ ನೀಲಿಗಳಂ ಮರ್ದಿಸಿ ನಿರ್ಗುಂಡಿಯ ಕಕ್ಕೆಯರಸದಿಂದೆಚ್ಚಹಿಯ ವಿಷಹರಂ ಗುಣನಿಲಯಾ
ಪಾತಾಳಗರುಡನೆಲವಂಸೂತಂ ಸತ್ಪುತ್ರಜೀವಿ ಕುನಟಿ ವಿಳಂಗಂಭೂತಳಮಱಿಗೆ ವಿಷಘ್ನಮಿದೇತೊದಳೆಚ್ಚಲ್ಕೆ ಪುಳಿಯೊಳಿವಱನುಯೋಗಂ
ಇಲಿಪಾಷಾಣ ಮಯೂರತುತ್ಥಮಮೃತಂ ಪಾಷಾಣ ಭೃತ್ಕಲ್ಲಪೂವಿಲಸದ್ಗಂಧಕ ಪುತ್ರಜೀವಿಯಗಿಲುಂ ಕರ್ಪೂರ ತೈಲಾಹ್ವಮಿಂಗುಲಿಕಂ ನಾಗರಮಿಪ್ಪೆ ಕಪ್ಪರಿಗಳಂ ತನ್ಮೂತ್ರದಿಂ ಮರ್ದಿಸಿಟ್ಟೊಲಿದೆಚ್ಚುತ್ತಮಮಪ್ಪ ಜೇನಘೃತದಿಂದವ್ಯಾಕುಳಂ ನಿರ್ವಿಷಂ
ಅಂಜಿಕೆಯೆಂಬುದೇಕೆ ಫಣಿ ಕೊಂಡೊಡೆ ಸಾವಡಸಿರ್ಪುದೇ ಕರಂರಂಜಿತಪುತ್ರಜೀವಿಯನೆ ಗೋವಿನ ದುಗ್ಧದೊಳೀಂಟೆ ಪೂಸೆ ಮತ್ತಂಜನ ನಸ್ಯದಿಂದಡರ್ದ ನಂಜಿೞಿದೋಡುಗುಮೆಂತೆನಲ್ಮಹಾಮಂಜಿನ ಪುಂಜಮರ್ಕಕರದಿಂದೞಿವಂತೞಿಗುಂ ಧರಿತ್ರಿಯೊಳ್
ಪಿಪ್ಪಲಿ ತುತ್ಥಂ ಸೈಂಧವಖಪ್ಪರಿಯುಂ ವಿಶ್ವಮೀಶ್ವರಿಯುಮೆಂಬಿನಿತಂತಪ್ಪದೆ ಕಣ್ಗಿಸೆ ವಿಷಮೇನಿರ್ಪುದೆ ಪುಳಿಯಿಂ ನೃಮೂತ್ರದಿಂ ಭೂತಳದೊಳ್
ಮೂಱುಂ ವತ್ಸರ ಮಪ್ಪಿನಂ ಬೆಳೆದುದಂ ಪರ್ವಿರ್ದುದಂ ನೋಡಿ ಬೇರೂಱಿರ್ದಾ ಪುಳಿಹೀರೆಯಂ ನಯದೊಳಂ ತಂದಿರ್ದುದಂ ಮತ್ತಮಿಂಪೇಱಲ್ಕಾವಿಕ ಗವ್ಯ ಮಾಹಿಷಮೆನಿಪ್ಪೀ ಕ್ಷೀರದಿಂದಟ್ಟು ಮೆಯ್ದೋಱಲ್ ತದ್ವಿಷಹಂ ಜಲಾಂಜನ ಲಸನ್ನಸ್ಯಪ್ರಯೋಗಂ ಹಿತಂ
ರಸಮರುಠಾಳದ ಪಣ್ಗಳರಸಮಂಬುಧಿಫಳಮುಮಿಟ್ಟಿಯಂಕೊಲೆಬೀಜಸಮೇತಂ ನಸ್ಯಾಂಜನಮೆಸೆವ ನೃಮೂತ್ರದೊಳೆ ತದ್ವಿಷಾಪಹಮಕ್ಕುಂ
ಹುಲಿಗಿಲಬೀಜ ಸೈಂಧವ ಕಟುತ್ರಯ ಬಿಲ್ವಫಲಂ ನಿಶಾದ್ವಯಂಜಲಧಿತರಂಗಮರ್ಕ ಕತಕಾಸ್ಥಿತಿಗಳೆಂಬಿವನೊಂದುಗೂಡಿ ಸಂಚಲಿಸದೆ ನಿಂಬೆಯೊಳ್ ಪುಳಿಯೊಳೀಂಟಿಸೆ ನಸ್ಯಮನಂತೆ ಮಾಡಲಾಬಲುಗರಳಂ ಮಹೋರಗವಿಷಂ ಕಿಡುಗುಂ ಧರೆಯೊಳ್ ಬುಧೋತ್ತಮಾ
ಬೆರಸಿಂದ್ರವಾರುಣಿಯೊಳೊಂದಿರೆ ಬೆಳುಗಾರಮನೆ ಸಣ್ಣಮಾಗರೆದುದನಂತಿರಿಸಿ ಪೊಗೆಯೊಳ್ ಬೞಿಕ್ಕಂನರಮೂತ್ರದೊಳೆಚ್ಚೆ ಸರ್ವವಿಷಮಿರದೞಿಗುಂ
ವಾರಿಧಿಫಳಮುಂ ಬಜೆ ಕಾೞ್ವೀರೆಯ ಬಿತ್ತುಂ ಸಮಾನಮಾಗಲ್ಕಂ ಜಂಭೀರದ ರಸದಿಂದೆಚ್ಚೆ ನಿವಾರಿಸುಗುಂ ನಸ್ಯದಿಂ ಮಹೋರಗವಿಷಮಂ
ಮಣಿರಂಗಂ. ಪುತ್ರಜೀವಿಯ ದಾಂಗುಡಿ ನೆಗ್ಗಿಲ್ಪತ್ರಕಂ ಅಜಮೋದ ಸಮೇತಂಮೂತ್ರದಿಂದಹಿ ಕೊಂಡ ನರಂಗಂನೇತ್ರಯುಗ್ಮದೊಳೆಚ್ಚೆ ವಿಷಘ್ನಂ
ನೆಲ್ಲಿಯ ಬೀಜಂ ಗುಂಜಿಯುಮಲ್ಲಂ ಕರ್ಕೋಟ ವಜ್ರಲತೆ ಖರ್ಜೂರಮಿವೆಲ್ಲವನಾಮ್ರದಿ ಮರ್ದಿಸಿನಿಲ್ಲದೆ ಕಂಗುಂಗೆಯೆಣ್ಣೆಯಿಂದೆಸೆ ವಿಷಹಂ
ಬಲಿದುದು ತದ್ವಿಷೂಚಿಯಹಿಕೊಂಡ ವಿಷಂ ಪಿರಿದಾದುದೆಂದು ಮಮ್ಮಲ ಮಱುಗಲ್ಕದೇಕೆ ಬೆಳೆದಿಂಗುಳದೊಳ್ ಗುೞಮಂ ಪುನರ್ನವೀವಿಲಸಿತ ಮೂಲಸೈಂಧವಯುತಂ ಮರಿಚಾನ್ವಿತಮೆಚ್ಚೆ ಕಣ್ಗೆ ನಿರ್ಮಲಮಿನಿಸಿರ್ದು ನಿಂಬೆರಸಂಗಳೊಳಂತವರ್ಗಂ ಸುಖಾವಹಂ
ಏಪಡೆಮಾತೋ ಸರ್ವವಿಷಾಪಹಮಿದೆ ಸಾಲ್ಗುಂ ಮಗಧರುಹ ಮರಿಚಮುಮಂಜೇಪಾಳಮಿವಂ ಸಮಮಪ್ಪಾ ಪಾಂಗಿಂದಜಸು (ನ)ಮೂತ್ರದಿಂದರೆವುದಿದಂ
ಸುಲಲಿತಮೆನಿಸಿದ ನಿಂಬೆಯಪುಳಿಯೊಳ್ ತೊಯ್ದಟ್ಟು ಪೊಗೆಯೊಳಂ ಕಟ್ಟಿ ಬೞಿಕ್ಕಲಸದೆ ನೃಮೂತ್ರದಿಂದೆಸೆಪಲವಱೊಳೇಂ ಫಣಿವಿಷಘ್ನಮಿಂತಿದುಮಿಳೆಯೊಳ್
ಕುರುಟಿಗೆಯೆಲೆಯಂ ಕೞಿಯಿಂದರೆದೀಂಟಿಸೆ ಬೞಿಕೆ ಪೆರ್ಗುರುಂಟಿಗೆಯೊಂದಂನರಮೂತ್ರದೆ ಕಣ್ಗೆಸೆಯಲ್ಕುರಗನ ವಿಷಮೞಿಗುಮೆಂಬುದೇಂ ಕೇವಳಮೇ
ಸಾರಮೆನಿಪ್ಪ ಬಂಜೆ ಮಡುವಾಗಲಯಿಟ್ಟಿ ಪುನರ್ನವಾಖ್ಯೆ ಖರ್ಜೂರಫಲಂ ಸಮುದ್ರಫಲ ದಾಂಗುಡಿಯುಂ ಕತಕಾಸ್ಥಿಯುಂ ತ್ವಚಂಚಾರು ಸುದುಗ್ಧ ಕಂಚುಕಮುಮಂ ಮಧುವಿಂದೆ ವಿಮರ್ದಿತಂ ವಲಂವಾರಿಯೊಳೆಚ್ಚೆ ತೇದು ಫಣಿದಷ್ಟವಿಷಾಪಹಮೊಂದೆ ಸಾಲದೇ
ವರಪದ್ಮಕೇಸರಂ ನಾಗರಮಿಂಗುಳದೆಸೆವ ಪಣ್ ಪುನರ್ನವಿಯಿವಱೊಳ್ಬೆರಸಿರೆ ಮುಸ್ತೆಯುಮಂ ಕೊಂಡರೆವುದು ಜಂಭೀರರಸದೊಳಂ ಭಾವಯುತಂ
ವಳಿಗೆಗಳಂ ಮಾೞ್ಪುದವಂಘಳಿಲನೆ ಫಣಿ ಕೊಂಡವಂಗೆ ಕಣ್ಗಳೊಳಂ ಸಂಚಳಿಸದ ಮಾೞ್ಕೆಯೊಳೆಸಲಾಗಳೆ ಪಱಿಗುಂ ಫಣಿವಿಷಂಗಳುಂ ಗುಣನಿಲಯಾ
ಶಶಿಕಾಂತ. ಬಂಜೆ ಮಡುವಾಗಲ್ಕಂಜರಸದಿಂ ಕಣ್ಗಂಜನಮದಾಗಲ್ನಂಜಿೞಿದು ಪೋಕುಂ
ಬಱುವದಣೆ ತುಱುಚೆಯಾಸಡಿಯೆರನಫಳಂ ನಾಗಚಂಪಕಂ ನೆಲ್ಲಿಯ ಬಿತ್ತಿರಲರೆದು ಪೂಗರಸದಿಂದುರಗಂ ಕೊಂಡಂಗೆ ಕಣ್ಗೆಸಲ್ವಿಷಮೞಿಗುಂ
ವ್ಯೋಷಂ ಸಪ್ತಾಕ್ಷಿ ನಿರ್ಗುಂಡಿ ಲಶುನ ಗಿರಿಕನ್ಯಾಭಿಧಾನಂ ಲವಂಗೋರೋಷಾಶೇಷಾರ್ಥ ಸಿದ್ಧಿಪ್ರದಮೆನಿಪ ಲಸತ್ಪಾರದಂಗೂಡಿ ಪೇೞ್ದಂತೀ ಷಟ್ಕಂ ಮರ್ದಿತಂ ಯೋಗದೊಳಿದುವೆ ವಿಶಿಷ್ಟಾಂಜನಂ ಕಣ್ಗೆಸಲ್ ನಿಶ್ಶೇಷಂ ತಾಮಾಗಲೆಲ್ಲಾ ಫಣಿ ವಿಷಮನದೇ ತೀರ್ಚುಗುಂ ಭವ್ಯಬಂಧೂ
ಮಲ್ಲಿಕಾಮಾಲೆ. ರಂ ನೀಲಿ ಮಾದಲ ಮಾಕ್ಷಿಕಂ ಬಜೆ ಮುಂಡಿ ಟಂಕಣ ಸಿಂದುಕಂಬಾಳಮುಂ ಕಟುಕತ್ರಯಂ ತಗಂ ಪುನರ್ನವಿಯಿಪ್ಪೆಯೊಳ್ಮೂಲಮೊಪ್ಪುವ ಲಕ್ಷ್ಮಿ ಲೊಕ್ಕಿ ಖಚೋರ ಪುಷ್ಕರಮೂಲ ನಿರ್ವಾಳಮಪ್ಪ ಕರಂಜಮುಂ ಮಧು ಕೂಡೆ ಱಂಚಿಗೆಯೆಂಬಿವಂ
ಬೆರಸ (ಸಿ)ರೆ ಗಾಂಧಾರಿ ಗುಣೋತ್ಕರಯುತ ಖರ್ಜೂರ ಯೋಗಮಂ ತೇದೆಚ್ಚಲ್ಕುರಗ ವಿಷದಷ್ಟನಕ್ಷಿಗಿದರರೇ ಕ್ಷಣಮಾತ್ರದಿಂದೆ ನುಡಿಗುಂ ನಡೆಗುಂ
ಪಾತಾಳಗರುಡ ಪಿಪ್ಪಲಿಸೂತಾನ್ವಿತ ಪುತ್ರಜೀವಿಯಂ ಮರ್ದಿಸಿರಲ್ಪೂತಾರ್ದ್ರಕರಸದಿಂ ಪಡೆಮಾತೇಂ ನೀರಿಂದೆ ತೇದೆಸಲ್ ವಿಷಮೞಿಗುಂ
ಮಾಗಧ ಮಯೂರಶಿಖಿಯುಂದಾಗುಡಿ ಸರ್ಪಾಕ್ಷಿ ತುತ್ಥ ಪರ್ಪಾಟಕಮೊಂದಾಗಿ ಬಜೆಯಾಟರೂಷಕಯೋಗಮಿದಂಜನದೊಳಹಿವಿಷಂಗಳನೞಿಗುಂ
ತರದಿಂದಿಂಗುಳಮಗ್ನಿವಳ್ಳಿ ಮಗಧೋದ್ಭೂತಾನಲಂ ಸಿಂಹಿ ಕೇಸರಿಬೀಜಂ ಹಯಗಂಧಿನೀ ರಸನಿ ಭದ್ರಾಕ್ಷಿಪ್ರಭೇದಂಗಳೊಳ್ಬೆರಸಿರ್ದಾ ಬಜೆ ಕೃಷ್ಣಗುಂಜಿಗಳುಮಂ ಕೂಡಗ್ನಿವಕ್ತ್ರಾಖ್ಯದೊಳ್ಖರಮೂತ್ರ ಪ್ರವಿಮರ್ದಿತಾಂಜನಮಿದಂ ತೇದೆಚ್ಚು ನೇತ್ರಂಗಳೊಳ್
ನರಮೂತ್ರದೊಳಂ ತೇದೆಚ್ಚರಿದಿನೆಸುವ ಸರ್ಪವಿಷಮ ವಿಷಮಾಕ್ಷಣದೊಳ್ಪರಿಹರಿಕುಮಲ್ತೆ ಮುಗುಳೀಪುರವಿಭು ಮಂಗರಸನಭಿಮತಂ ತಪ್ಪುಗುಮೇ
ಕೊಡಸಿಗೆ ನಾಗದಾಳಿ ವರಚಂಪಕ ನಾಂಗುಲಿ ಪೆರ್ಗುರಂಟಿಗಂಸೊಡರಿಪ (ಸ) ನಾಗಸರ್ಪಮೆಸೆವೀಶ್ವರಿ ಕನ್ನೆಕುಮಾರಿ ಪುಟ್ಟಿಪಣ್ಪೊಡವಿಗೆಗಂಧಯುಕ್ತ ಮರುಗಂ ದವನೋದ್ಭವ ಬೀಜಮೆಂಬಿವಂಬಿಡದರೆ ಗವ್ಯಮೂತ್ರದೊಳೆ ತದ್ವಟಕಂಗಳುಮಂ ಪ್ರಯತ್ನದಿಂ
ಇರಿಸಿ ಮೊಲೆವಾಲೊಳೆಚ್ಚುಗೆನರರ್ಗಂ ಪಲತೆಱದ ಸರ್ಪವಿಷಮ ವಿಷಂಗಳ್ಪರಿಹರಿಕುಂ ತನುರಕ್ಷಣಕರಯೋಗಮಿದೊಂದೆ ಮಂಗರಾಜನ ಮತದಿಂ
ಹುಲಿಗಿಲೆರಂಡದ ವೃಕ್ಷೋತ್ಪಳ ಬಂಧೂಕಂ ಪಟೋಲ ಪಥ್ಯಯುತಂ ಪಿಪ್ಪಲಿಯಂ ನರಮೂತ್ರದೊಳಿಂತಲಸದೆ ತೇದೆಚ್ಚಲಹಿಕುಲಂಗಳ ವಿಷಮುಂ
ಎರಡರಿಸಿನಮಂ ಬಿಲ್ವಂಸಿರಿಸದ ಕುಸುಮಂ ರಸಾಂಜನಂ ತ್ರಿಕಟುಕಮಂಬೆರಸಿ ಕರಂಜದ ಬಿತ್ತಮನರೆ ನರಮೂತ್ರದೊಳೆಸಲ್ ವಿಷಾಪಹಮಕ್ಕುಂ
ಮಾತೇಂ ನೃಮೂತ್ರದಿಂದಂಶ್ವೇತ ಪುನರ್ನವಿಯ ಮೂಲಮಂ ತೇದೆಚ್ಚಲ್ಭೂತಳದೊಳ್ ಫಣಿಕುಲವಿಷಭೀತರ್ಗೆ ಹಿತಂ ವಿಷಘ್ನಮಿದು ಕೇವಳಮೇ
ಮರಿಚಂ ನಾಗರಮುಂ ಬಜೆಯರುಠಾಳದ ಪಣ್ ಸಮುದ್ರಫಳಮೆಂಬಿವಱೊಳ್ದೊರಕಿದುದೊಂದಂ ಪುಳಿಯಿಂದಿರದೆಚ್ಚಲ್ಕುರಗವಿಷಮನದು ಸಂಹರಿಕುಂ
ರಾಸಭ ಗೋಮಹಿಷ್ಯಜ ನೃಮೂತ್ರದೊಳಂತಿಲಿಮಿಚ್ಚಿ ನೆಲ್ಲಿಯೆಂಬೀ ಸುಲಭಂಗಳಪ್ಪ ಕುಜಪಕ್ವ ಫಲಸ್ಥರಸ ಪ್ರಯುಕ್ತಮಂಕಾಸುವುದಿಂತಿದಂ ಸಮಮೆನಲ್ ವಿಧಿಯಿಂ ಗುೞಪಾಕಮಪ್ಪಿನಂಬೇಸುವುದಿಂತಿವಂ ತೞಿಗೆಯೊಳ್ ಬಿಸಿಯಾಱದ ಮುನ್ನ ಪೊಯ್ದು ನೀಂ
ಬೆರಸಂತಲ್ಲಿ ಕಟುತ್ರಿಕಂ ತ್ರಿಫಳೆಯುಂ ತುತ್ಥಂ ಶಿಲಾಧಾತು ಖಪ್ಪರಿಯೆಂಬಿಂತಿವುಮಂ ಪಲಾರ್ಧದನಿತಂ ತಚ್ಚೂರ್ಣಮಂ ಕೂಡಿ ನೀಂಭರದಿಂ ಮರ್ದಿಸಿದಂತದಂ ಮಡಗಿರಲ್ ಸಂರಕ್ಷಿತಂ ತೆಂಗಿನೊಳ್ನಿರುತಂ ಪೊಂಬೆಸಱ ಪ್ರಮಾಣದನಿತಂ ಕಣ್ಗೆಚ್ಚಲಂತಾಕ್ಷಣಂ
ಸ್ವಲ್ಪಮನಂತಾ ಗುಳಿಗೆಯನಲ್ದೋರಗವಿಷದಿನೞಿದ ಮಱುದಿನಮವನುಂಜಲ್ಪಿಸದೆ ಕಣ್ಣೆಸಲ್ಕದುತಲ್ಪಿತಮಂ ಕೞಿವುದುೞಿದ ಮರ್ದುಗಳೊಳವೇ
ಬಾದೇಂ ನಿಂಬೆಯ ಪುಳಿಯಿಂತೇದೆಚ್ಚು ಸಮುದ್ರಫಲಮನಕ್ಷಿಗಳೊಳ್ ಕೆಂಪಾದೊಡೆ ಸಾಯಂ ದಷ್ಟಂಭೇದಿಸದಿರ್ ಜೀವಿಕುಂ ಶಿರಃಕಂಪನದಿಂ
ಇದು ಸಿದ್ಧಂ ಸಾರಮಪ್ಪಾ ಪಲವು ಮತದೊಳಂ ನೋಡಿ ಪೇೞ್ದೌಷಧಂಗಳ್ಸುದಯಾರ್ದ್ರಸ್ವಾಂತ ಮಂಗಂಗಳವಡೆ ನುಡಿದೀಯಂಜನಾಂಗಾಧಿಕಾರಂವಿದಿತಂ ತಾನಾಗೆ ಭವ್ಯಾವಳಿಗಱಿಪಿದ ಮರ್ತೈಕಮಾನ್ಯಂ ಸವಿಘ್ನಾಸ್ಪದ ಕರ್ಮಂ ಕೆಟ್ಟು ದಿವ್ಯಾಂಗನೆ ವಲಮೆನಿಪಂ ವಿಶ್ವವಿದ್ಯಾವಿನೋದಂ
ಗದ್ಯ. ಇದು ಸಕಲ ವಿದಮಲ ಜಿನೇಂದ್ರೋಕ್ತ ಸಿದ್ಧಾಂತ ಪಯಃಪಯೋನಿಧಿ ಪಾರಗ ಶ್ರೀ ಪೂಜ್ತಪಾದ ಮುನೀಂದ್ರ ಚಾರುಚರಣಾರವಿಂದ ಗಂಧ ಗುಣಾನಂದಿತ ಮಾನಸಂ ಶ್ರೀಮದಖಿಲ ಕಳಾಗಮೋತ್ತುಂಗ ಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್ ಅಂಜನಾಧಿಕಾರಂ ಷಷ್ಠಂ


