EN | KA

Menu

V

ಖಗೇಂದ್ರಮಣಿದರ್ಪಣ

ಪಾನಾಧಿಕಾರಂ

ಸಪ್ತಧಾತುಗಳ ವಿಷಲಕ್ಷಣ ಚಿಕಿತ್ಸಾವಿವರಣಂ

ಶ್ರೀರಮಣಂ ಶುಭಕೀರ್ತಿರಮಾರಮಣನುಮೆನಿಸಿ ನೆಗೞ್ದೊಡಂ ಬಹುವಿದ್ಯಾಧಾರಂ ತನುತನಗೆ ಹಿತಂಸಾರಮೆನಿಪ್ಪೌಷಧಂಗಳಂ ನೋೞ್ಕೆ ಬುಧಂ

ಕೌಶಲ್ಯಯುತಂ ಕ್ಷತದವಕಾಶಾವಸ್ಥಾಗ್ರಭಾಗದೊಳ್‌ ಪೞಿಯಿಂ ತದ್ದೇಶದ ಕೆಲಂಗಳೊಳ್‌ ನಯಪಾಶಂಗಳನಱಿದು ಕಟ್ಟನಿಕ್ಕುಗೆ ವಿಧಿಯಿಂ

ದಷ್ಟವಿಷರಕ್ತಮೋಚನದಿಷ್ಟಂ ಬೞಿಯಂ ಜಲಾಭಿಷಿಕ್ತತೆಯಿಂದುತ್ಕೃಷ್ಟಮೆನಿಪ್ಟೌಷಧಿಯಂಸ್ಪಷ್ಟಮೆನಲ್‌ ತೊಡೆದು ಕುಡಿಯೆ ಕುಡುವುದು ತಕ್ಕಂ

ಗಾರುಡಮಂತ್ರಂ.

ಓಂ ನಮೋ ಭಗವತೇ ಪಾರ್ಶ್ವತೀರ್ಥಕರಾಯ ಧರಣೇಂದ್ರ ಪದ್ಮಾವತೀ ಸಹಿತಾಯ ಪಾಂ ಖ್ವ್ರೋಂ

ಪಾಂ ಬಾಂ ಹಾಂ ಖ್ವ್ರೋಂ ಬಾಂ ಭಾಂ ಖ್ವ್ರೋಂ ಬಾಂ ಭ್ರಾಂ ಭಾಂ ಖ್ವ್ರೋಂ

ಎಸೆವೀ ಮಂತ್ರದಿನಭಿಮಂತ್ರಿಸಿ ಕುಡುವುದು ಮರ್ದನಂತಱಿಂ ದಷ್ಟನ ಸಂಧಿಸಿದ ವಿಷಂ ತೊಲಗುಗುಮೆಂದಸದೃಶ ಗುಣಿಯೆನಿಪ್ಪ ಮಂಗರಾಜಂ ಪೇೞ್ದಂ

ಸಪ್ತಧಾತುಗತ [ವಿಲಕ್ಷಣ]ಕ್ಕೆ

ಕ್ರಮದಿಂದೆ ಸಪ್ತಧಾತುಗಳುಮನಾವರ್ತಿಸಿದ ವಿಷಮುಮಂ ದಷ್ಟನ ಸಂಕ್ರಮ ವಿಷಭೇದಮುಮಂ ತತ್ಪ್ರಮಿತಾಪಹರೌಷಧಂಗಳಂ ವಿರಚಿಸುವೆಂ

ತ್ವಗ್ಗತ

ವಿಷಮುಂ ತ್ವಗ್ಗತಮಾಗಿರೆವಿಷಧರದಷ್ಟಂಗೆ ತಡೆಯದಕ್ಕುಂ ಸ್ವೇದಂವಿಷಮ ಶ್ವಾಸಮವಂಗಂನಿಷೇವಣೀಯಂಗಳಪ್ಪ ಮರ್ದಂ ಪೇೞ್ವೆಂ

ಅದರ್ಕೌಷಧಂ

ಉತ್ತರಣೆಯರ್ಕಮೂಲಂಮತ್ತಂ ತತ್ಫಲಿನಿ ರಕ್ತಚಂದನಮಿನಿತಂಬಿತ್ತರದೊಳರೆದುದಂ ಕುಡಿಸುತ್ತುಂ ಲೇಪಿಸೆ ವಿಷಘ್ನಮುಂ ತ್ವಗ್ಗತದೊಳ್‌

ರಕ್ತಗತಕ್ಕೆ

ಕಂಗಳ್‌ ಶೋತ್ರಂಗಳೆನಿಪ್ಪಂಗಂಗಳ್‌ ವೇದನಾಸ್ಪದಂಗಳೆನಿಕ್ಕುಂಪೊಂಗೆ ವಿಷಂ ರಕ್ತದೊಳಸಿತಂಗಳ್‌ ದಶನಂಗಳಪ್ಪುವಾ ಗರಳಕ್ಕಂ

ಅದರ್ಕೌಷಧಂ

ಬೆರಸಿರಲುಶೀರ ಚಂದನಸುರಕ್ತಮಂತಾ ಪ್ರಿಯಂಗು ಕುಂಕುಮ ನಖಮುಂನಿರುತಂ ಲೇಪನ ಪಾನಮನಿರದೀಯಲ್‌ ಪರೆಗುಮರಿದೆನಿಪ್ಪ ವಿಷಂಗಳ್‌

ಮಾಂಸಗತಕ್ಕೆ

ಭೂತಳ ವಸ್ತ್ರಾದ್ಯಂಗಳ್ಪೀತಾಭಮವಾದೊಡಂ ಭ್ರಮಂ ವಮನಕದುಷ್ಣಾತಿಶಯದಿಂದೆ ಮಾಂಸವ್ರಾತದೊಳೊಂದಿದ ವಿಷಂಗಳಂತಲ್ಲದೊಡಂ

ಲಾಲೆ ಬಹುದಂಶಮುಂ ಸುಕರಾಲಂ ಮಾಂಸಗತಮಾಗಲಕ್ಕುಮದರ್ಕಂಕಾಲಕ್ಷೇಪಂಗೆಯ್ಯದಿರಾಲೋಚಿಸು ಮಂತ್ರಮಣಿ ಚಿಕಿತ್ಸಾದಿಗಳಂ

ಅದರ್ಕೌಷಧಂಗಳ್‌

ಹಿಂಗು ಮಧು ಮಧುಕ ಕುಂಕುಮಸಂಗತಮೆನಿಸಿರ್ದ ರೋಹಿಣಂ ಪಾನ ವಿಲೇಪಂಗಳಿನೞಿಗುಂ ತದ್ವಿಷಸಂಗಂ ಶುಭಸಂಗ ಮಂಗನನುಮತದಿಂದಂ

ಅಸ್ಥಿಗತಕ್ಕೆ

ವದನದ ದುರ್ಗಂಧಂ ಕಾಸದತಿಶ್ವಾಸದ ವಿಕಾರ ಲಾಲಾಸ್ರಾವಂಒದವಿರ್ದ ನಿದ್ರೆಗಳಿಗಾಸ್ಪದಮಕ್ಕುಮದಸ್ಥಿತಿಗತವಿಷಂ ವಿಷಮತರಂ

ಅದರ್ಕೌಷಧಂ

ಚಿತ್ರಾರ್ದ್ರಕೇಂದ್ರವಾರುಣಿಸತ್ತ್ರಿಫಲಾ ಕಟುಕರಾಜ ಕೋಶಾತಕಿಯಾಪತ್ರಂಗಳೊಡನೆ ಕುಡೆ ವಿಷವಿತ್ರಸ್ತಂ ಪಾನಮಾತ್ರದಿಂ ಸುಖಿಯಕ್ಕುಂ

ಮೇದೋಮಜ್ಜಾ ಶುಕ್ಲಗತಕ್ಕೆ

ಶ್ವಾಸಂ ಕ್ಷೋಭೆ ಮಹಾ ಸಂತ್ರಾಸಂ ವಮನಂ ಯಥಾಕ್ರಮಂ ಮೇಧೆಗೆ ಮಜ್ಜಾಸಂಗಕ್ಕಂ ಶುಕ್ಲದೊಳೋಸರಿಕುಂ ಪ್ರಾಣವಾಯುಗಳ್‌ ವಿಷತತಿಯಿಂ

ಅದರ್ಕೌಷಧಂ

ಘೃತದಿಂದಮೃತಲತಾ ಸಂಗತ ಕರ್ಕೋಟಕಿಯುತಂ ಪಯಃಪಾನಮದಂದತಿಶಯದ ಪುತ್ರಜೀವಿಯೆಜಿತವಿಷಮಕ್ಕಂತು ದುಗ್ಧಪಾನ ವಿಲೇಪಂ

ಸರ್ವಗತಕ್ಕೌಷಧಂ

ಘೃತದಿಂ ತ್ವಗ್ಗತಮಾ ಪಯಃಪ್ರಯುತದಿಂ ರಕ್ತಾಶ್ರಿತಂ ಮಾಂಸಗಂಕ್ಷಿತಿಯೊಳ್‌ ಕುಷ್ಠದಿನಸ್ಥಿಗಂ ರಜನಿಯಿಂ ಮೇದಃಪ್ರಯುಕ್ತಂ ನವೋದ್ಗತ ಸದ್ವಾಕುಚಿಯಿಂ ಸಮಜ್ಜೆ ಕಣದಿಂ ಚಾಂಡಾಳಿಯಿಂ ಶುಕ್ಲಗಂಹತಮಕ್ಕಂತಪರಾಜಿತಾಖ್ಯಮ (ಖ್ಯೆಯ)ನದಂ ಕೊಂಡಂದು ತತ್ತದ್ವಿಷಂ

ತ್ರಿದೋಷಗತ ವಿಷಲಕ್ಷಣ ಚಿಕಿತ್ಸಾವರಣಂ

ಪಿತ್ತಗತಕ್ಕೆ

ಪಿತ್ತಗತಮಾಗೆ ವಿಷಮದುಪಾತ್ತ ಸುಪೀತಾಭಮಕಲ್ಕಮಾ ನಯನಪದಂಬಿತ್ತರದಿಂ ಹಿತಮಪ್ಪತ್ಯುತ್ತಮದೌಷಧದೆ ಮಾೞ್ಕೆ ಪಾನಾದಿಗಳಂ

ಅದರ್ಕೌಷಧಂ

ಚಂದನಕುಷ್ಠಂ ತ್ರಿಫಳೆಯೊಳೊಂದಿದ ಘೃತಮಾರ್ದ್ರಕಂಗಳೊಳ್‌ ಬೆರಸರೆದೀಗಂದು ವಿಲೇಪನ ಪಾನಂಸಂದೆಯಮೇಂ ಪಿತ್ತಗತ ವಿಷಂಗಳನೞಿಗುಂ

ಕಫಗತಕ್ಕೆ

ಮೂಕಾಂಧರಂದದಿಂ ಮತ್ತಾ ಕಫಯುತ ವಿಷದ ತೀವ್ರ ಪರಿಣಾಮದಿನಾಳೋಕಿಸದೆ ಸುಮ್ಮನಿರ್ಕುಮನೇಕವಿಧಂ ತನುಗೆ ಬಣ್ಣಮಕ್ಕುಂ ವಿಕೃತಂ

ಅದರ್ಕೌಷಧಂ

ಅಗುರರಗು ಬೋೞ ಕುಂಕುಮತಗರಂ ಸರ್ಜಂ ಕುಸುಂಬೆಯಂಕಲೆ ಮಧುಕಂಸೊಗಯಿಪ ಚಾತುರ್ಜಾತಕಮೊಗೆದ ಕಫಾನ್ವಿತ ವಿಷಾಪಹಂ ಕೃತಪಾನಂ

ವಾತಗತಕ್ಕೆ

ಶ್ವಾಸಮತಿಮೂರ್ಛೆಯಕ್ಕುಂಮಾಸುಗುಮಾನನದ ವರ್ಣಮುಂ ಶೇಮುಷಿಂಯಂತೋಸರಿಕುಮಂಗಮುಡುಗುಗುಮಾಸುರದ ಸಮೀರಣಸ್ಥ ವಿಷದಿಂದಿಳೆಯೊಳ್‌

ಅದರ್ಕೌಷಧಂ

ಪಾರೋಪದಾಕ್ಷಿ ತಾಳಕಚಾರು ಮನಶ್ಶಿಲೆಯೆನಿಪ್ಪಿವಂ ಶೀಘ್ರದೊಳಂನೀರೊಳರೆದೀಂಟೆ ಪೂಸಲ್ಮಾರುತಗತ ವಿಷಮವಿಷಹರಂ ಗುಣನಿಲಯಾ

ವ. ತ್ರಿದೋಷಂಗಳ್‌ ಸಪ್ತಧಾತುಗಳಂತರ್ಭಾವಿತಂಗಳಪ್ಪುದಱಿಂ

ಕ್ರಮದಿಂ ಕಂಡೂಪ್ರದಾಹಂ ಭ್ರಮೆ ಪತನ ಮಹಾಕ್ಷೋಭೆ ಮೂರ್ಛಾಗತ ಪ್ರಾಣಮೆನಿಪ್ಪೀ ಸಪ್ತಚಿಹ್ನಂ ನರರೊಳಹಿವಿಷಗ್ರಸ್ತರೊಳ್‌ ತೋರ್ಕುಮೆಂದಭ್ರಮರಪ್ಪರ್‌ ಪೂರ್ವಸೂರಿ ಪ್ರಭುಗಳಱಿಪಿದರ್‌ ಸಪ್ತಧಾತುಸ್ಥದಿಂದೆಂದು ಮಹೀಚಕ್ರಕ್ಕೆ ಸಂದುಗ್ರಮೆನಿಪ ವಿಷದಿಂ ನೋಡೆ ಸ (ತ)ದ್ಭಾವಿತಾತ್ಮರ್‌

ಬಗೆಗೊಂಡು ಕೆಲಂಬರ್‌ ಧಾತುಗಳೊಳ್‌ ತ್ವಕ್ಪ್ರಮುಖಮಾಗಿಯಾ ಶುಕ್ಲಾಂತಂಜಗದೊಳ್‌ ತ್ವಗ್ಗತ ವಿಷಮುಂದ್ವಿಗುಣಕ್ರಮವೃದ್ಧಿಯಿಂದಮೇೞಱೊಳಿರ್ಕುಂ

ತುಷಮಾತ್ರಮೆಂಬರೆಲ್ಲಾವಿಷಮಂ ಮರ್ದುಗಳ ಶಕ್ತಿಯಿಂ ಬಲ್ಲುದಱಿಂವಿಷಮುಮಸಾಧ್ಯಮದೆಂಗುಂಭಿಷಗ್ವರರ್‌ ಮನುಜರಂತ್ಯಧಾತುಸ್ಥಮುಮಂ

ವಿಷವೇಗಂಗಳ್‌

ಧರೆಯೊಳ್‌ ದರ್ವೀಕರೋಗ್ರ ಪ್ರಥಮ ವಿಷವಿಕಾರಂಗಳೆಂತೆಂದೊಡಂ ಮರ್ತ್ಯರೊಳಾ ದಷ್ಟಂಗೆ ಮೂರ್ಛಾಪರಿಣತಿಯಧಿಕಂ ರಕ್ತಮುಂ ಮಾಂಸಮೆಲ್ಲಂಕರಿದಕ್ಕುಂ ನಾಡಿಯುಂ ತತ್‌ ಪ್ರಕೃತಿ ವಿಕೃತಿಯಕ್ಕುಂ ದ್ವಿತೀಯಾಖ್ಮವೇಗಂಬೆರಸಲ್ಕಂತಾ ಪ್ರಕಾರಂ ಪರಿಕಿಸೆ ದಿಟದಿಂದಂ ತೃತೀಯಾಭಿಧಾನಂ

ಸಂಗಳಿಸಲ್ಕೆ ಶಿರೋರೋಗಂಗಳ್‌ ಚಕ್ಷುರ್ದ್ವಯಂ ಗುರುತ್ವಮೆನಿಕ್ಕುಂಪಿಂಗದಿರಲ್ಕುಪಯೋಗದಭಂಗಿಯೊಳೆ ಚತುರ್ಥವೇಗದೊಳ್‌ ಬೆರಸಿರ್ಕುಂ

ಒಸರ್ಗುಂ ನಾಸಿಕದೆಡೆ ಕಫದೆಸಕದೊಳಂ ತಪಿತನಲ್ತೆ ಪಂಚಮವೇಗಕ್ಕಸದೃಶ ಹಿಕ್ಕಾಯುಕ್ತಂಪೆಸರೆನಿಸಿದ ಷಷ್ಠವೇಗಮುಂ ವಿಷಮಕರಂ

ವ. ಅದೆಂತೆಂದೊಡೆ

ದೇಹದತಿಮೂರ್ಛೆಯುದಿತ ವಿದಾಹಂಗಳಿವಕ್ಕುಮಿಂತು ಸಪ್ತಮದೊಳ್‌ ಸಂದೇಹಂ ಮರಣಮದಕ್ಕುಂತ್ರಾಹಿಯೆನಲ್‌ ಗರುಡನಾದೊಡಂ ರಕ್ಷಿಪನೇ

ವ. ಅಂತಾದೊಡಂ

ಮೊದಲೊಳ್‌ ಮೞ್ಪುದು ಶಸ್ತ್ರಕರ್ಮಮದಱಿಂದಂ ತದ್ದ್ವಿತೀಯಾಖ್ಯದೊಳ್ವಿದಿತಂ ರಕ್ತವಿಮೋಚನಂ ಬೞಿಯಮೆಂತುಂ ತತ್ತೃತೀಯಾಹ್ವದೊಳ್ಪುದಿದಾ ಘೋರವಿಷಕ್ಕೆ ಪಾನಮೆಸೆವೀ ನಸ್ಯಂಜನಂಗಳ್‌ ಸುಖಪ್ರದಮಕ್ಕೌಷಧಮಾಶು ನಾಶಮನದುಂ ಮಾೞ್ಕುಂ ಚತುರ್ವೇಗದೊಳ್‌

ಪಂಚಮವೇಗದೊಳಭಿಮಂತ್ರಾಂಚಿತ ಶೀತೋದಕಂಗಳಿಂ ಕರ್ಚಿ ಬೞಿಕ್ಕಂ ಚದುರಂ ಮಾಂತ್ರಿಕ ತತ್ಸಂಚಿತ ದಿವ್ಯೌಷಧಂಗಳಂ ತೊಡೆ ಬೞಿಕಂ

ಶೀತದ್ರವ್ಯಾಲೇಪಂಮಾತೇಂ ಶೋಧನ ವಿಶೇಷಮುಂ ಪಂಚಮವೇಗಾತಿಶಯ ಷಷ್ಠವೇಗವಿಘಾತಮುಮಂ ತೊಲಗಿಸಲ್ಕಮಿವೆ ಶಕ್ತಂಗಳ್‌

ವೇಗದೊಳಾ ಸಪ್ತಮದೊಳ್ಬೇಗಂ ನಸ್ಯಾಂಜನಾದಿಯಂ ಮಾೞ್ಕೆ ಬುಧಂಪೋಗದೊಡೆ ಕಾಕಪದದವೊಲಾಗಳೆ ಶಿರದೊಳ್‌ ಕೃತಕ್ಷತಾದಿಕ್ರಿಯೆಯಂ

ವಿಸ್ತರ ಧಾತ್ವಂಗವಿಷಪ್ರಸ್ತುತಮೆನಿಸಿದ ಚಿಕಿತ್ಸೆಯಂ ಪೇೞ್ದೆಂ ನಾಂಶಸ್ತತರಂ ಹಿತಮಿದುವೆ ಸಮಸ್ತ ವಿಷಕ್ಕೆಂಬ ಮರ್ದನಾಂ ಪ್ರಕಟಿಸುವೆಂ

ವ. ಅದೆಂತೆಂದೊಡೆ

ಅಮರ್ದಿರ್ಪುತ್ತಮ ಪಾನ ನಸ್ಯ ಕವಳಂ ಗಂಡೂಷಮುಂ ವಾಂತಿಯುಂಸಮಸಂದೊಪ್ಪುವ ಬೇದುಕಟ್ಟು ತಿಲಕಂ ರಕ್ಷಾವಹೋದ್ವರ್ತನಾದ್ಯಮೃತೋದ್ಯದ್ಘೃತ ತೈಲ ಕಜ್ಜಳಮೆನಿಪ್ಪೀರೇೞು ಭೇದಂಗಳಂರಮಣೀಯಂಗಳೆನಿಪ್ಪುವಂ ತಿಳಿಪುವೆಂ ಸಾಂಗಂ ವಿಷಘ್ನಂಗಳಂ

ರಸ ಪೊಸಗಂಧಕಂ ರಜನಿ ಟಂಕಣ ತುತ್ಥಮಿವೆಯ್ದುಮೊಂದಲೊಂದಿಸು ಸುರದಾಳಿಯ ದ್ರವದೆ ಮರ್ದಿಸಿ ಮಾಡಿದ ನಿಷ್ಕಮಾತ್ರದಿಂವಿಸೃತ ವಿಷಂ ಮೆಲಲ್ಕೆ ಫಣಿದಷ್ಟನದಲ್ಲದೊಡಂ ಸಮೂತ್ರಮೀಂಟಿಸೆ ವಿಷಹರಂ ಕೃತಾಂತಕುಧರಾಶನಿಯೆಂಬಭಿಧಾನಮಾ ರಸಂ

ಬಾವುಜಿಗೆಯ ಬಿತ್ತಂ ನೆಱೆಭಾವಿಸಿ ಗೋಮೂತ್ರದಿಂದದಂ ತಜ್ಜಲದಿಂಸೇವಿಸಲದು ತಾಂ ಮೃತಸಂಜೀವಿನಿ ಕಳೆಗುಂ ಚರಾಚರಂಗಳ ವಿಷಮಂ

ಟಂಕಣ ಮುಶಲೀಕಂದಮುಮಂ ಕುಡಿಸುಗೆ ನೀರೊಳಂತುಮಲ್ಲದೊಡಂ ಮೇಣ್ಪಂಕಜದ ಮೂಲ ಟಂಕಣಮಂ ಕೊಳಲಾಕ್ಷಣದೊಳೞಿಗುಮಹಿಕುಲದ ವಿಷಂ

ಮುಶಲೀಕಂದಂ ಕಟುಕಂಕುಶಲತರಂ ಸರ್ಪದಷ್ಟ ವಿಷಹರಮಕ್ಕುಂವಶಮಲ್ಲದ ವಿಷತತಿಯಂಪ್ರಶಮಿಸುಗುಂ ಕವಿಸರೋಜಭಾಸ್ಕರಮತದಿಂ

ಕೈಪೆಸೊರೆಯೆಸೆವ ಮೂಲಮನಾ ಪತ್ರದ ರಸದೊಳರೆದು ಗೋಮೂತ್ರದೊಳಂಲೇಪಿಸುವುದು ಕುಡಿಸುವುದು ವಿಷಾಪಹಮಕ್ಕುಂ ವಿವೇಕ ಚೂಡಾರತ್ನಾ

ಸುರದಾರುವರ್ಕ ಲಾಂಗಲಿಕರವೀರಂ ಚಿತ್ರಕಂಗಳೆಂಬಿವನಿಂಬಿಂದರೆದುರಗದಷ್ಟನಪ್ಪಂಗಿರದೀಂಟಿಸಲದು ವಿಷಾಪಹಂ ಬುಧಬಂಧೂ

ಪಿಪ್ಪಲಿ ಶೃಂಗಿವೇರ ಮರಿಚಂ ಮೊಸರುಂ ಪೊಸಕೋಷ್ಠಮೆಯ್ದೆ ಲೇಸಪ್ಪಿನಿದಪ್ಪ ಬೆಣ್ಣೆ ಮಧು ಸೈಂಧವಮೆಂಬಿವನೆಯ್ದೆ ಕೂಡಿಕೊಂಡೊಪ್ಪುವ ಯೋಗಮುಂ ಭರದೊಳಂ ದಧಿ ಮಸ್ತುಕಯುಕ್ತಪಾನದಿಂತಪ್ಪಿಸಿ ಕಾಲದಷ್ಟವಿಷಮಂ ಪರೆಗುಂ ನರರಂ ಬುಧೋತ್ತಮಾ

ಗಿರಿಕರ್ಣಿಕೆಯಂ ಕೞಿಯಿಂದಿರದೀಂಟಲ್‌ ಫಣಿಯ ವಿಷಮದೞಿಗುಂ ಮೇಣ್‌ ಚೆಚ್ಚರದಿಂದರೆದು ಗುಡೂಚಿಯನಿರದೀಂಟಲ್‌ ಕೞಿಯೊಳಂ ವಿಷಘ್ನಮೆನಿಕ್ಕುಂ

ತಾಱೆ ಮಣಿಶಿಲೆಗಳಂ ಕಾಯ್ದಾಱಿದ ನೀರಿಂದೆ ಕುಡಿಸೆಯುಂ ಮೇಣ್‌ ನೀರಿಂಬೇಱೆ ತೊಱೆಮಲ್ಲಿಗೆಯೊಳಂಮೀಱಿದ ವಿಷಮೞಿಗುಮಿಲ್ಲಿ ಸಂದೆಯಮುಂಟೇ

ಸಿರಿಸ ಗುಡೂಚಿ ರಂಜಿಗೆಯುಮೀಶ್ವರಿ ಕತ್ತರಿ ದೇವದಾರು ಕಾಸರಿಕೆ ವರಾಶ್ವಗಂಧಿ ಕಟುಪರ್ಣಿಯೆನಿಪ್ಪವಱಲ್ಲಿಯುಕ್ತಮಾಗಿರಲರೆ ಕಾಡಮಲ್ಲಿಗೆಯೊಳಂ ಕೞಿಯಿಂದತಿಕೈಪೆಯಪ್ಪ ಕಾೞ್ಸೊರೆಯೆಳಗಾಯ್ಗಳೊಪ್ಪುವ ರಸಪ್ರಸರಂಗಳೊಳೊಂದೆ ಮತ್ತದಂ

ತೂಗುವುದು ಮೂಱು ಪೊಂಪ (ಣ್ಪ)ಣಮಾಗಿರೆ ಮಾಡುವುದು ವಳಿಗೆಯಂ ಕೆಯ್ಯಿಂದಂನಾಗ ಸುದಷ್ಟಗೆ ಪೂಸುವುದಾಗಳೆ ತತ್ಪಾನ ನಸ್ಯ ಲೇಪನವಿಧಿಯಿಂ

ಇದಮೋಘಮಪ್ಪ ಯೋಗಂಸದಯರ್‌ ಮುಂ ಪೇೞ್ದರೊಸೆದು ಸಂಗ್ರಹಿಸುವುದೇಳಿದಮಲ್ಲೆಂದಿಳೆಗೆಲ್ಲಂಸದಮಳ ಗುಣನಿಳಯ ಮಂಗರಾಜಂ ಪೇೞಂ

ಸಾರ ಕರಂಜದ ಪೊಸಕಾೞ್ವೀರೆಯ ಧಾತ್ರಿಯ ಸುಬೀಜಮರಿದಾಳಮಿವಂಕ್ಷೀರದೊಳರೆದೀಂಟಲ್‌ ಸಂಹಾರಿಸುಗುಂ ವಿಷಮ ವಿಷಮನಿದು ಕೇವಳಮೇ

ಕಾರಸೆ ಱೆಂಚಿಗೆ ಬೆಟ್ಟದಬೇರೀಶ್ವರಿ ಹಸ್ತಿಕರ್ಣಿ ಹತ್ತರಿಕೆಗಳೆ ನಿವಾರಿಸುಗುಮಖಿಲ ವಿಷಗಳನೋರಂತಿರೆ ನಸ್ಯ ಪಾನ ಲೇಪನವಿಧಿಯಿಂ

ಧರೆಯೊಳಿದೊಂದು ಚಿತ್ತತರಮಂ ತಿಳಿಯಿಂ ನರರೊಪ್ಪುವಾಚದೊಳ್ಬೆರಸಿರೆ ಕಕ್ಕೆ ಪಲ್ಲವಿಸಿ ಕಂಡೊಡೆ ಮಂದನವಾರದಂದು ಚೆಚ್ಚರದೊಳದಂ ಸ್ಥಿರಂ ಭಜಿಸಿ ಮೂವಳಸಾಗಿಯೆ ಸುತ್ತಿ ನೂಲುಮಂಸರಸಿಜಮಿತ್ರವಾರದೊಳೆ ಮೋನದೊಳೀಕ್ಷಿಸಿಕೊಂಡು ಬೇರ್ಗಳಂ

ಘಮ್ಮನೆ ಧಾತ್ರಿಯುಮೀಶ್ವರಿಹೆಮ್ಮಿಟಿಲಂಗಳೊಳೆ ಬೆರಸಿ ಮತ್ತಂ ಜಲದಿಂದಮ್ಮುದದೊಳರೆದು ಮಾೞ್ಪುದುಸಮ್ಮತ ಚಣಕ ಪ್ರಮಾಣಮೆನೆ ವಳಿಗೆಗಳಂ

ಅವು ದಿವ್ಯಮಪ್ಪ ವಳಿಗೆಗಳವನೆ ಸುರಕ್ಷಿತದೊಳಿರಿಸಿ ಫಣಿದಷ್ಟಂಗಂಜವದಿಂ ಪೂಸುಗೆ ತತ್ಪಾನವಿಶೇಷದೊಳಂ ವಿಷಾಪಹಂ ಬುಧಬಂಧೂ

ಕುಡಿಯಲ್ಕಣಮಾಱದೊಡಂಕುಡಿಸಿದನೊಡನುಂಡವಂಗವಂ ತೆಕ್ಕಿಸಿಕೊಂಡೊಡಮವನ ವಿಷಮದಿೞಿಗುಂಕುಡು ನಲ್ಲರೊಳಿಂ ಪರಸ್ಪರಂ ತತ್ಕ್ರಮದಿಂ

ಹತ್ತರಿಕೆ ಹಾಲೆಯೆಲೆಯಂಮತ್ತೀಶ್ವರಿ ಕೀರತುಂಡಿಗಳ ಬೇರ್ಗಳನತ್ಯುತ್ತಮದಂಬಿಲದಿಂದರೆಯುತ್ತುಂ ತತ್ತನುಗೆ ಪೂಸಲಹಿವಿಷಮಿೞಿಗುಂ

ದಧಿ ನವನೀತಂ ಮರಿಚಂಮಧು ಪಿಪ್ಪಲಿ ಪಂಚಲವಣಮೆಂಬೀ ದಿವ್ಯೌಷಧಿಯಂ ಕೊಂಡೊಡೆ ನಾನಾವಿಧ ಸರ್ಪಪ್ರಮುಖ ವಿಷಮವಿಷಮಿರದೞಿಗುಂ

ಸುರವಾರುಣಿ ಕ (ಖ) ರಕರ್ಣೀಶ್ವರಿಗಳ್‌ ಶುಕತುಂಡಿ ಕೈಪೆಸೊರೆಯೊಳ್ದಿರುಳೊಂದಿರಲರೆದೆಱೆಯಲ್‌ ಪೂಸಲ್ಕುರಗವಿಷಂ ಪಱಿಗುಮೆಂದನಮಳಚರಿತ್ರಂ

ಎರಡರಿಸಿನಂಗಳೊಳೆ ತಗರ ರಸಾಂಜನಮೊಂದಿರಲ್ಕಮರೆದೀಂಟಲ್‌ ಮೇಣಿರದೆ ವಚಾದ್ವಯಗಳುಮಂಭರದಿಂದಂ ಕುಡಿಸೆ ತದ್ವಿಷಘ್ನಮದಕ್ಕುಂ

ಅಂಕೊಲೆ ಚವ್ಯ ವಿಳಂಗಂಕುಂಕುಮ ಚಂದನ ರಸಾಂಜನಂ ಮಗಧರುಹಂಟಂಕಣಮುಂ ಮಣಿಶಿಲೆಯುಮಿವಂ ಕುಡಿಯಿಸಲಿೞಿಗುಮಖಿಳ ಜಂಗಮವಿಷಮುಂ

ಸುರದಾಳಿ ನೀಲಿ ಱಂಜಿಗೆಕರಕರ್ಣಿಕೆಯೆಂಬಿನಿತಱೊಳೊಪ್ಪುವ ಬೇರಂಬೆರಸಂಬಿಲದಿಂದರೆದೀಗರಿದೆನಿಸುವ ಫಣಿವಿಷಂಗಳಂ ಪರಿಹರಿಕುಂ

ಸುರದಾಳಿ ನೀಲಿ ಱಂಜಿಗೆಯೆರಡರಿಸಿನಮೊಂದಿರಲ್‌ ವಿಷಾಪಹಮಕ್ಕುಂಕರಕರ್ಣಿ ಬೆಳದ ಬೇರ್ಗಳನರೆದು ಕಟುತ್ರಯದೊಳೀಂಟೆಯಹಿವಿಷಮೞಿಗುಂ

ಕರಕರ್ಣಿ ಸುರಸಿಯೆರಡಱವರಮೂಲಂ ಕೈಪೆಸೊರೆಯ ಕಾೞ್ವೀರೆಯ ಬಿತ್ತಿರೆ ಪೋತಿನ ಮೂತ್ರದೊಳಂಪರಿಮರ್ದಿಸಿ ಕುಡಿಸಲುರಗತತಿ ವಿಷಮೞಿಗುಂ

ಶರಪುಂಖಿ ಯಿಂದ್ರವಾರುಣಿಸಿರಿಸದ ಪಣ್‌ ಬ್ರಹ್ಮಿ ಕತ್ತಗಿರಿಯೆಂಬಿವಱೊಳ್ಬೆರಸಿದ ಶುಕತುಂಡಿಯುಮಂಪರಿಮರ್ದಿಸಿ ಕುಡಿಸಲುರಗವಿಷಮಿರದೞಿಗುಂ

ದಳಮಂ ಶಿರೀಷಸಂಭವಫಳಮಂ ನೀರಿಂದಮರೆದು ಶೋಧಿಸಿ ಬಿಸಿಲೊಳ್ಕೊಳುಗಂಬು ಲವಣಮಿಶ್ರದೆಕಳೆಗುಂ ಕಾಳಾಹಿ ಮುಖ್ಯ ಬಹುವಿಧವಿಷಮುಂ

ಊರಹಿಗಳ್‌ ಪಿಡಿಯಲ್‌ ತಣ್ಣೀರಿಂ ಜಂಭೀರಮೂಲಮಂ ಸಣ್ಣಿಸಿ ಬೆನ್ನೀರಿಂ ಮೇಣ್‌ ಕುಡಲದು ಸಂಹಾರಿಸುಗುಂ ತದ್ವಿಷಂಗಳಂ ಗುಣನಿಳಯಾ

ಅಟವಿಯೊಳಹಿ ಕೊಂಡೊಡದುತ್ಕಟದ ವಿಷಂ ಶ್ರೋತ್ರವಲ್ಲಿಯೊಪ್ಪುವ ಬೇರಂಝಟಿತೆಯೊಳೆ ಮೂತ್ರದಿಂ ಕುಡೆದಿಟಮಿೞಿಗುಮದನಲನಡಸಿದರಲೆಯ ತೆಱದಿಂ

ಸೊಡರಿಯ ಬೇರರುಠಾಳಂಗುಡೂಚಿಯಾಡುಳಿಚಮೆಂಬಿವಂ ಕೞಿಯಿಂದಂಕುಡಿಯಿಸಲಹಿವಿಷಮೞಿಗುಂಕಡುಭರದಿಂ ನಸ್ಯ ಲೇಪನಂ ಮಾೞ್ಕೆ ಬುಧಂ

ಕೞಿಯಿಂದರೆದಿರದೀಂಟಿಸೆಹುೞಿಗುಡಿ ಹೆಮ್ಮಿಟಿಲಿ ಬಿಳಿಯ ಗುಂಜಿಯ ಬೇರಂಘೞಿಲನೆ ನಸ್ಯಂಗೆಯ್ಯಲ್ಕಳೇವರಕ್ಕೆಯ್ದೆ ಪೂಸೆ ಫಣಿವಿಷಮೞಿಗುಂ

ಮಲ್ಲಿಕಾಮಾಲೆ. ಕಕ್ಕೆ ಮಾದಲ ಪೆರ್ಗುರುಂಟಿಗೆ ಮೊಲ್ಲೆ ಯೀಶ್ವರಿ ಚಂಪಕಂಮೆಕ್ಕೆ ನಾಂಗುಲಿ ಕಟ್ಟವತ್ತಿಗೆಯುಂ ಸಮಂತೆಸಗಂ ಗಡೀಯೆಕ್ಕೆ ನುಗ್ಗೆಯಿವೆಲ್ಲಮಂ ಕೞಿಯಿಂ ಕೊಳುತ್ತಿರೆ ಪೂಸಲಿಂನಿಕ್ಕುವಂ ಕಿಡುಗುಂ ಫಣೀಂದ್ರಮುಖ ಪ್ರಚಂಡವಿಷಂಗಳುಂ

ಕುರುಟಿಗೆ ಕುಮಾರಿ ಈಶ್ವರಿವೆರಸಿರೆ ಮಗ್ಗಾರೆಯೆರ್ಕೆ ಶುಕತುಂಡಿಗಳಂಭರದೊಳರೆದೀಂಟೆ ಕೞಿಯಿಂದಿರದುರಗವಿಷಂ ವಿನಷ್ಟಮಪ್ಪುದು ಪುಸಿಯೇ

ಹೆಗ್ಗುರುಟಿಗೆ ಕಡಸಿಗೆಗಳೊಳೊಗ್ಗಿರೆ ಕೞಿಯಿಂದಮಿಟ್ಟ ಹುರುವಳ್ಳಿಯುಮಂಸಿಗ್ಗಿರೆ ಕುಡಿಸುಗೆ ಪೂಸುಗೆಯಗ್ಗಲಿಸಿದ ವಿಷಮುಮೞಿವುದೊಂದಚ್ಚರಿಯೇ

ಹಿಂಗು ವಿಳಂಗ ವಹ್ನಿ ಕಟುಕತ್ರಯ ಸೈಂಧವಮುಂ ಫಲತ್ರಯಂಸಂಗತಮಪ್ಪ ಪಾರಿ ಯಜಮೋದ ಪುರಂದರಮೆಂಬಿವಂ ಸಮಾನಂಗಳೆನಲ್ಕೆ ಕೂಡಿ ಪಟಚೂರ್ಣಮನಾಗಿಸಿ ತುಪ್ಪದಿಂ ಕೊಳಲ್ಶೃಂಗಿ ಮಹೋರಗಾದಿ ವಿಷಸಂತತಿಯಂ ಕಳೆಗುಂ ಬುಧೋತ್ತಮಾ

ಸುರದಾಳಿ ಕಾಡುಜೀರಗೆಮರಿಚಂ ಬಜೆ ಕಾಗೆದೊಂಡೆ ಬೆಳುಗಣಜಿಲೆಯಂವಿರಚಿಸಿ ಪಾನದೆ ನಸ್ಯದೆನರಗೋಮಹಿಷಾದಿಗಳ್ಗೆ ನಿರ್ವಿಷಮಕ್ಕುಂ

ಸಿರಿಸ ಸುಗಂಧಿ ಬಂಜೆ ಮಡುವಾಗಲ ಕನ್ನೆಕುಮಾರಿ ಕಕೆಯೀಶ್ವರಿಯಜದಂಡೆ ಮಲ್ಲಿಗೆ ವಿಶಾವಿಷಮಾಮಯ ನಿಂಬಬೀಜಮೊಪ್ಪಿರೆ ಸರಸಾಶ್ವಗಂಧಿ ರವಿ ವಾಯಸತುಂಡಿ ಸುದೇವದಾಳಿಯೊಳ್ಬೆರಸಿರದಟ್ಟ ತುಪ್ಪಮದು ಪಾನದಿ ಸರ್ವ ವಿಷಘ್ನಮುರ್ವಿಯೊಳ್‌

ಸಾಲದೆ ಫಣಿವಿಷಮಂ ನಿರ್ಮೂಲಿಸಲೀ ಯೋಗಮೊಂದೆ ಹಿಮಮಿಶ್ರದೊಳಂತೈಲಂ ಲೇಪನ ಪಾನದೆಲಾಲಿತ ಗುಣನೆನಿಪ ಮಂಗರಾಜನ ಮತದಿಂ

ಘನನಾದಿ ಕಾಗೆತೊಂಡೆಗಳನೆ ಕೂಡಿ ಮಯೂರಪಿತ್ತದೊಳ್‌ ಬೞಿಯಂ ಚೆಕ್ಕನೆ ಗೋಮೂತ್ರದೊಳಗದಂಜನ ವಿನುತಂ ಕುಡಿಯೆ ಸರ್ವವಿಷಹರಮಕ್ಕುಂ

ಏಪಡೆವಾತೊ ಕೋಷ್ಠ ಮಡುವಾಗಲು ನುಗ್ಗಿ ಕಟುತ್ರಿಕಂ ಕರಂಕೈಪೆಯೆನಿಪ್ಪಲಾಬು ಮುನಿಭೂರುಹಮೂಲ ಕುಮಾರಿ ಸಾರಮಪ್ಪಾ ಪುದಿದಶ್ವಗಂಧಿ ಸುರದಾಳಿಯೆನಿಪ್ಪಿವನೆಯ್ದೆ ಕೊಂಡು ಮತ್ತಾ ಪರಿಪಕ್ವಮಪ್ಪ ಕುಟಜೋದ್ಭವ ಬೀಜಯುತಂ ಸುರಕ್ಷಿತಂ

ಇರಲವಱ ಚೂರ್ಣಮಂ ಬೆರಸರೆದು ಕುಮಾರೀರಸಪ್ರಯುಕ್ತಂಗೆಯ್ದಂದಿರದೀಂಟಿಸೆ ನಸ್ಯಯುತಂಪರಿಹರಿಕುಂ ಸರ್ಪ ವೃಶ್ಚಿಕಾಳಿಯ ವಿಷಮಂ

ಹರಿವಾರಂ ಹಸ್ತ ತಾರಾಯುತಮಿರೆ ಭರದಿಂದಂದು ಕರ್ಕೋಟಕಾಹ್ವಂಬೆರಸಂತಾ ಕಾಕತುಂಡೀ ಪ್ರಥಿತಮೆನಿಪ ನಿರ್ಗುಂಡಿಯುಗ್ಮಂ ಲಸಚ್ಛರ ಪುಂಖೀ ಪ್ರಷ್ಠಕೋಷ್ಠಿ ಕ್ಷಿತಿನುತಮೆನಿಪಿಂತೈದಱೊಳ್‌ ಮೂಲಮಂ ತಂದುರಗಂ ಕೊಂಡಂಗಮಾ ಚೂರ್ಣಮನರೆದೆಱೆಯಲ್‌ ತದ್ವಿಷಂ ನಾಶಮಕ್ಕುಂ

ಕಿಱುಕುಂಸಾಲೆಯ ಬೇರುಮನಿರದರೆ ತುಪ್ಪದೊಳೆ ಸರ್ಪ (ರ್ವ) ವೃಶ್ಚಿಕವಿಷಮುಂಪಱಿಪಡುಗುಂ ಕೃತ್ರಿಮದಿಂನೆಱೆದಿರ್ದೊಡದುಂ ಜನೈಕಮಿತ್ರನ ಮತದಿಂ

ಉರಗಂ ಕೊಂಡೊಡೆ ಘೃತದೊಳ್ಬೆರಸಿದ ಮಧು ಸಮವೆನಲ್ಕೆ ಕುಡಿಸುವುದಱಿಂಪರಿಹರಿಕುಂ ತದ್ವಿಷಮದುನಿರುಪಮ ಗುಣಿಯೆನಿಪ ಮಂಗರಾಜನ ಮತದಿಂ

ಬಿಳಿಯ ಗಿರಿಕರ್ಣಿಕೆಯ ಬೇರೊಳೆ ನೀಲಿಯ ಮೂಲಮಂ ಸಮಾನಂಗೊಂಡಾಕಳತುಪ್ಪದಿಂದೆ ಕುಡಿಯಿಸಲೞಿಗುಂ ಫಣಿವಿಷಮದಮಲತರ ಗುಣನಿಲಯಾ

ಭೂಲೋಕದೊಳೊಂದೌಷಧಿಸಾಲದೆ ಪಲವೇವುದರೆದುಮರಿದಾಳಯುತಂನೀಲಿಯುಮಂ ಕುಡಿಸುವುದದುಕಾಲೋರಗನಗಿದ ವಿಷಮನಾಕ್ಷಣಮೞಿಗುಂ

ಬಜೆಯಶ್ವಗಂಧಿಯಿಲ್ಲಣರುಜೆಯೆಂಬಿವನರೆದು ಕೞಿಯೊಳಂ ಕುಡಿಸುವುದುಂಭುಜಗೋಗ್ರವಿಷಂ ಕಿಡುಗುಂತ್ರಿಜಗದ್ಭೂಷಣನೆನಿಪ್ಪ ಜಿನಮುನಿಮತದಿಂ

ಹುಲಿಗಿಲರುಟಾಳದೊಪ್ಪುವಫಲಮಂ ಗಣಿಜಿಲೆಯುಮಂ ಸಮಾನಂಗೊಂಡಂಬಿಲದಿಂದರೆದೀಂಟಿಸಲದುತೊಲಗಿಸುಗುಂ ಫಣಿಯ ವಿಷಮನಪಗತಕುಮತಾ

ಅರೆದಿಂದ್ರವಾರುಣಿಯೊಳಂಬೆರಸಿರೆ ಸೇಗುಡಿತೆಯೊಪ್ಪುವಂಬಿಲದಿಂದಂಭರದಿಂ ಕುಡಿಸಲ್ಕುರಗೋತ್ಕರದ ವಿಷಂ ಪಱಿಗುಮೆಂದನಪಗತಕಲುಷಂ

ಅಂಗುರಮಂ ನೀಲಿಯುಮಂಸಂಗತಮಾಗರೆದು ತುಪ್ಪದಿಂದೀಂಟಲದಂದೇಂ ಗಹನಂ ಫಣಿಯವಿಷಂಪಿಂಗುವುದಕಳಂಕಚರಿತ ಮಂಗನ ಮತದಿಂ

ಬೆರಸೆಲವದ ಹಗಿನೆಲಹುರಿಯಿರವಂತಿಗೆಯೆಂಬಿವಂ ಲಸದ್ದುಗ್ಧದೊಳಂದರೆದೀವುದು ಪಾನದೆ ವಿಷಧರವಿಷಮೞಿಗುಂ ಸರಸ್ವತೀಮುಖತಿಲಕಾ

ಬೆಳೆದಿರಲಾಚ ಕಕ್ಕೆಗಳಿಳಾತಳದೊಳ್‌ ಕರಮೊಂದುಗೂಡಿ ತಾಂವಿಳಸಿತ ಸಿದ್ಧಿಯೋಗದೊಳೆ ಬೇಱವನೊಪ್ಪಿರೆ ತಂದುದೊಂದನೊಂದಳವಿಯೊಳಂಟದಂತಿರಿಸಿ ಚೂರ್ಣಿಸಿ ರಕ್ಷಿತಮಾಗಿರಲ್ಕದುಂತಳವಲು ತುಂಬೆ ನೆಲ್ಲಿ ತುಱಿಚಂ ಕಿಱುನೆಲ್ಲಿಯೆರೞ್ಕುರಂಟಕಂ

ನಾಗರುಮಾರಿಯೆಂಬಿವಱೊಳೊಂದಿರಲಾಚದ ಚೂರ್ಣಮಂತದಾಯೋಗಮದೊಂದನಿಕ್ಕುಮದನಿಂಬಿನೊಳಿಟ್ಟರಸಂತೆ ಮತ್ತೆಯುಂದಾಗುಡಿ ಸಂದಲಾಬು ಮಡುವಾಗಲು ಕೈಪೆಯೆನಿಪ್ಪ ಹೀರೆವೊಂದಾಗಿರೆ ಕೈಪೆದೊಂಡೆಯೊಳೆ ಪಿಂದೆಸೆವಿಪ್ಪೆಯ ಮೂಲದೊಳ್‌ ಕರಂ

ಸಕ್ಷೀರಕಂಚುಕಂ ಸುಪರೀಕ್ಷಿತದಾ ಪವಳದೊಂಡೆಯಿಂತಿವಱೊಳ್‌ ಸಂರಕ್ಷಿತ ನೃಪತರು ಚೂರ್ಣಮನೀಕ್ಷಿಸಿ ಮತ್ತೀ ಪ್ರಯೋಗಮಂ ಮಾೞ್ಕೆ ಬುಧಂ

ಎರಡುಂ ಪೋೞ್ಗಳ ಮಾಡಿ ಕೌಟೆಯೆಳಗಾಯಂ ತೀವಿ ತಚ್ಚೂರ್ಣಮಂತರದಿಂದೊಂದಱೊಳೊಂದನಂತರೆದಿವಂ ಮಾಡುಂಡೆಯಂ ವಾಮದಾಚರಣಕ್ಕಂ ನೃಪಭೂಜಯುಕ್ತಮನೆ ಮತ್ತಾ ದಕ್ಷಿಣಕ್ಕಾಚ ಸಂಕರಮಂ ಪೂಸೆ ತದಂಘ್ರಿಯುಗ್ಮಮನಣಂ ಪ್ರಕ್ಷಾಳಿಸಾ ವಾರಿಯಿಂ

ವಿಹಿತಮದಂ ಕುಡಿಸುಗೆ ಜನಮಹಿತಂ ವಾಸುಗಿ ವಿಷಾಪಹಂ ತಾಮಿನಿತರ್ಕಹಿದಷ್ಟಂಗಂ ಭಾವಿಸೆಮಹದಪಘನರಕ್ಷಣಂ ಸಮಂ ಪೆಱತುಂಟೇ

ತೊಱೆಮಲ್ಲಿಗೆ ಪುನ್ನಾಗಂತೊಱೆ ಮಾದಲಮಮೃತವಳ್ಳಿ ಗಿಣಿಮೂಗನ ಬೇರ್ತೊಱೆದವನ ತೊಟ್ಟಿ ಮುಸ್ತೆಯನುಱೆ ಚೂರ್ಣಿಪುದುಲಿಗ ಹೊನ್ನಗನ್ನೆ ಸಮೇತಂ

ಮತ್ತಂ ಕಾಂಜಿಕಯುಕ್ತಮನಿತ್ತೊಡೆ ತಚ್ಚೂರ್ಣಮಂ ಮಹೋರಗವಿಷಮಂನಿತ್ತಱಿಸಲೀಯದಿದುವೆ ಬುಧೋತ್ತಮನ ಮತಂ ಖಗೇಂದ್ರಮಣಿದರ್ಪಣದೊಳ್‌

ನೆಲದಾಳ್‌ ದಾಗುಡಿ ಹೇರೀಚಲು ವಾಳಂ ತರಣಿ ತೊಟ್ಟಿ ಹುರುವಳ್ಳಿ ಸದುತ್ಪಲ ಕಾಗೆದೊಂಡೆ ಸರ್ಷಪವಿಲಸಚ್ಚಂದನ ಸತಕ್ರಪಾನಂ ವಿಷಹಂ

ಗಿರಿಕರ್ಣಿಕೇಂದ್ರವಾರುಣಿವೆರಸರೆದಂಬಿಲದೊಳೀಂಟಿಸಂತಲ್ಲದೊಡಂತಿರೆ ಸಹದೇವಿಯನಿಂಬಿಂದರೆ ನೀರೊಳ್‌ ನಿಂಬೆಯಂ ವಿಷಾಪಹಮಕ್ಕುಂ

ಕುರುಟಿಗೆ ಮಗ್ಗಾರೆಗಳೀಶ್ವರಿವೆರಸು ಕುಮಾರಿಯೆರ್ಕೆ ಗಿಣಿಮೂಗನುಮಂಬೆರಸರೆದೀಂಟಲ್‌ ಕೞಿಯಿಂದುರಗ ವಿಷಾಪಹಮದಪ್ಪುದಮಳಚರಿತ್ರಾ

ಕನಕಾಖ್ಯಮೆಕ್ಕೆ ಗಿಣಿಮೂಗನಗೆಡ್ಡೆಯನಕ್ಕೆ ಕೞಿಯೊಳರೆದೀಂಟಲೊಡಂಮನುಮುನಿಮತದಿಂ ಸರ್ಪನಘನವಿಷಮೞಿಗುಂ ಖಗೇಂದ್ರಮಣಿದರ್ಪಣದೊಳ್‌

ವರಮೆನಿಸಿದಿಪ್ಪೆಯಾ ಬಲುಕುರುಟಿಗೆ ಹೆಮ್ಮಿಟಿಲು ಹುಲಿಗಿಲುಂ ತುಱುಚೆಯುಮೊಂದಿರಲಾ ಹೆಗ್ಗಟವತ್ತಿಗೆಯರೆದಂಬಿಲದಿಂದೆ ಕುಡಿಸೆ ಫಣಿವಿಷಮೞಿಗುಂ

ಮಡುವಾಗಲ್‌ ತ್ವಚ ಪತ್ರಕವಿಡಂಗ ಖರ್ಜೂರ ಯಷ್ಟಿ ತುಱುಚಂಗಳೊಳಂತೊಡಲೇನಾ ದ್ರಾಕ್ಷಿಗಳಂಕುಡುವುದು ಮಧು ದುಗ್ಧದೊಡನೆ ಫಣಿವಿಷಮೞಿಗುಂ

ಜಾಲಂ ಕತ್ತುರಿ ಕಾಮನಮೂಲಂ ನಸುಗುನ್ನಿ ಭೃಂಗ ಕರ್ಕೋಟಕಮುನ್ಮೂಲಿಸುಗುಂ ಫಣಿವಿಷಮಂಪಾಲೊಳ್‌ ಕುಡಿಸವನಧೋಮುಖಾನ್ವಿತಮಾಗಲ್‌

ನೆಲಬೇವು ಬೇವು ಮುಸ್ತೆಯುಯಲಹುರಿಕುಡಿ ಕಕ್ಕೆ ಮುಸ್ತೆ ರವಿಭಕ್ತಂ ಪಿಪ್ಪಲಿ ಕಾಮನೆಂಬಿವಂ ಮತ್ತಲಸದೆ ಕಾಂಜಿಕದೊಳೀಂಟೆ ಫಣಿವಿಷಮೞಿಗುಂ

ನಱುವಲ್‌ ಮಗ್ಗಾರೆಯಕಾಯ್ತೊಱೆಗಣಿಗಿಲೆ ದೇವದಾಳಿ ಪಾಠಿಯುಮೆಸಗಂಮೆಱೆವರುಠಾಳದ ಪಣ್ಣಿವನೆಱೆಯಲ್‌ ಜಲದಿಂದೆ ಫಣಿಯ ವಿಷ ನಿರ್ಹರಣಂ

ಎಸೆವ ವನಲತೆಯ ಮೂಲಮನಸಿತಾಂಗಾರಕ ಚತುರ್ದಶೀ ದಿವಸದೊಳೊಂದಿಸಿ ಮೋಚರಸದೊಳೀಂಟಲ್ಕಸಮಾನಮೆನಿಪ್ಪ ವಿಷಮನದು ಸಂಹರಿಕುಂ

ದಿನಕರಭಕ್ತಂ ದಾಂಗುಡಿಘನನಾದಂ ಶೃಂಗವೇರ ಪಿಪ್ಪಲಿ ಕಾಮಂವಿನುತ ಪುನರ್ನವಿ ಮಧುವೆಂಬಿನಿತಂ ಪಾಲಿಂ ಕೊಳಲ್‌ ವಿಷಾಪಹಮಕ್ಕುಂ

ವರಮೇಘನಾದಿ ಕೊತ್ತುಂಬರಿಗಳ್‌ ಸಮನಾಗೆ ಕೊಂಡು ತಂಡುಲಜಲದಿಂದರೆದಾಜ್ಯದಿಂದೆ ಕುಡಿಸುತ್ತಿರಲುರಗವಿಷಾಪಹಂ ಭಿಷಗ್ವರಮತದಿಂ

ಪಿರಿಯೀಚಲಪಣ್ಣಂ ಕಾಸರಿಕನ ಬಿತ್ತಮರ್ದುವಳ್ಳಿ ಮೂಲಂಗಿಯ ಬೇರರಿಸಿನ ಮಡುವಾಗಲ್‌ ವಿಷಹರಮಕ್ಕುಂ ಬೇಱೆವೇಱೆ ಕೞಿಯಿಂದೀಂಟಲ್‌

ಕರಕರ್ಣಿಯೊಂದನಿಂಬಿಂದರೆದಂಬಿಲದಿಂದಮೀಂಟೆ ನಿರ್ವಿಷಮಕ್ಕುಂನಿರುತಂ ಸರ್ಪಂಗಳ ವಿಷವರಿದೇಂ ವಿಭು ಮಂಗರಾಜನನುಮತದಿಂದಂ

ಅರಿಸಿನಮುಂ ಸೈಂಧವಮುಂಪರಿಮರ್ದಿತ ಪಾಗಲೆಲೆಯ ರಸಮುಂ ಮೂತ್ರಂಬೆರಸೀಂಟೆ ಬೇಱೆವೇಱವುಪರಿಹರಿಸುಗುಮುಗ್ರಫಣಿವಿಷಂಗಳನಿಳಿಯೊಳ್‌

ಝಟಿತೆಯೊಳೆ ನಿಂಬಬೀಜಂಕುಟಜದ ಬೇರ್ವೆರಸಿಯರೆದು ನೇಱಿಲ ತಿಗುಡಿಂಸ್ಫುಟಮಾದ ರಸದೊಳೆಱೆಗುತ್ಕಟದಹಿವಿಷಮೞಿಗುಮಖಿಳ ಬುಧಜನಮಿತ್ರಾ

ಗಿರಿಕರ್ಣಿಯಂಕೊಲೆ ಸೂಕರಕಂದಂ ಪುತ್ರಜೀವಿಯೆಂಬಿನಿತಱೊಳಂದೊರಕಿದುದೊಂದೊಂದಂ ಪಾಲ್ವೆರಸಿ ಕುಡಲ್ಕುರಗವಿಷಹರಂ ಬುಧಬಂಧೂ

ಮರಿಚಾಮೃತಲತೆ ಘನರವಹರಿದ್ರ ಸಾಮುದ್ರ ಲವಣಮೆಂಬಿಂತಿವಱೊಳ್ದೊರಕಿದುದೊಂದಂ ತುಪ್ಪಂಬೆರಸರೆದು ಕೊಡಲ್‌ ವಿಷಾಪಹಾರಮದಕ್ಕುಂ

ತಿಲಜಯುತಂ ಕುಡಿವುದು ಕಣಿಗಿಲಬೇರ್‌ ಕರ್ಪೂರಮೆಂಬಿವಂ ಮೇಣ್‌ ಮಡುವಾಗಲನೆ ಫಲರಹಿತಮಂ ಕೊಂಡಲಸದೆ ಕುಡಿಸಲ್ಕೆ ನಿರ್ವಿಷಂ ಪ್ರತ್ಯೇಕಂ

ಮಡುವಾಗಲು ಮಾದಲದೊಳ್ಪಡೆದಿರ್ದುದನೊಂದನಳೆಯೊಳರೆದು ಬೞಿಕ್ಕಂಕುಡಿಸುಗೆ ಫಣಿಯ ವಿಷಂಗಳ್ಕಿಡುಗುಂ ವಿಭು ಮಂಗರಾಜನನುಮತದಿಂದಂ

ನಂಜುಗ್ರಮೆಂದು ನೀಂ ಕರಮಂಜಲದೇಕಣ್ಣಾ ತಂಡುಲೋದಕದಿಂದಂಬಂಜೆ ಮಡುವಾಗಲಂ [ಕುಡಿಸಿಂ]ಜಿನಮತವಾರ್ಧಿಚಂದ್ರನಭಿಮತದಿಂದಂ

ಇನದಿನದೊಳಿಂದ್ರವಾರುಣಿಯನೆ ನೀಂ ಮೋನದೊಳೆ ತಂದು ಮಡಗಿ ಬೞಿಕ್ಕಂಕನಲ್ದಹಿಕೊಂಡಂಗೀವುದುವಿನುತಂ ಸತ್ತಂಡುಲೋದಕದೊಳೆ ವಿಷಘ್ನಂ

ಗರುಗದ ಬೇರ್‌ ಗಣಜಿಲೆಯೆಂಬೆರಡರೊಳೊಂದಾವುದಾದೊಡಂ ದೊರಕಲದಂಭರದಿಂದಮಕ್ಕಿಗರ್ಚಿಂದರೆದೀವುದು ವಿಷಮನಂತದೞಿಗುಮವಶ್ಯಂ

ಸಾಲದೆ ಫಣಿಯ ವಿಷಕ್ಕಂನೀಲಿಯ ಬೇರೊಂದೆ ಪುಳಿಯೊಳರೆದೀಂಟುಗದಂಬಾಲಾಬಲಾದಿಯಱಿಯಲ್ಭೂಲೋಕದೊಳಱಿಪಿದಂ ಬುಧಂ ಮಂಗರಸಂ

ಅರೆದೀಶ್ವರಿಯಂ ಪುಳಿಯಿಂದಿರದೀಂಟಲ್ಕೆ ಫಣಿಯ ವಿಷಮದಾಗಳೆ ಕಿಡುಗುಂಸ್ಮರರಿಪು ಜಿನೇಂದ್ರಚರಣಸ್ಮರಣಾಂತಃಕರಣ ಶುದ್ಧನಭಿಮತದಿಂದಂ

ಗೋಜಿಹ್ವೆ ವಿಷ್ಣುಕ್ರಾಂತೆ ವಿರಾಜಿತ ನಿರ್ಗುಂಡಿ ಮೊಲಯಲಹೂಲಿಗಳಂಯೋಜಿಸಿ ಜಲದಿಂ ಕುಡಿಸೆ ಮನೋಜವದಿಂ ವಿಷಮನೞಕುಂ ಪ್ರತ್ಯೇಕಂ

ಭಿನ್ನಗುಣಪ್ರದಮಿಂತಿವುಸನ್ನುತಮೆನಿಪರ್ಜುನಂ ಕುಮಾರಿಯುಮಂ ತಾಂಬನ್ನಿಯಿವೊಂದೊಂದಂ ಸಂಪನ್ನಗುಣಂ ನೀರೊಳರೆದು ಕುಡಿಸೆ ವಿಷಘ್ನಂ

ತೊಱೆಮಲ್ಲಿಗೆಯ ಸಮೂಲಮನರೆವುದು ನೀರಿಂದೆ ಮೇಣ್‌ ಸುನಿಂಬೆಯ ಬೇರಿಂಪಱಿಪಡುಗುಂ ಸರ್ಪವಿಷಂಪೆಱತೇಂ ಮರ್ದುಗಳಿವರ್ಕೆ ದೊರೆಯೆನಿಸುಗುಮೇ

ಇಂಗುಳಮಂ ದಾಂಗುಡಿಯುಮನಂಗುರಮಂ ನೀಲಿ ಶೈಲಕರ್ಣಿಕೆಯೋರೊಂದಂ ಗುಣನಿಧಾನ ಕೊಡು ಪಾನಂಗೊಳೆ ನೀರಿಂದಮುರಗವಿಷಹರಮಕ್ಕುಂ

ಟಂಕಣ ಸಹದೇವಿಗಳುಂಪಂಕರುಹದ ಕಂದಮಿಂದ್ರವಾರುಣಿಯಿವಱೊಳ್ಸಂಕಿಸದೋರೊಂದಂ ನೀರಿಂ ಕುಡಿವುದು ಸರ್ಪದುಗ್ರವಿಷಹರಮಕ್ಕುಂ

ಸುಗಮಮೆನಿಸಿರ್ಪ ಹೆಗ್ಗುರುಟಿಗೆಯಂ ಮೇಣ್‌ ಚುಂಚಿನೆಸೆವ ಬೀಜಂಗಳುಮಂಸೊಗಯಿಪ ಜಲದಿಂ ಕುಡಿಸಲ್ವಿಗತವಿಷಂ ತಪ್ಪದಕ್ಕುಮಿದು ಪರಮಾರ್ಥಂ

ಮುದದಿಂದೆ ನೆಲಾವರೆಯಂಸದಯಂ ನೀರಿಂದೆ ಕುಡಿಸೆ ನಿರ್ವಿಷಮಕ್ಕೊಂದುದಧಿರವಂ ಪೇೞ್ದನಿದಂಸದಮಳಗುಣನಿಧಿಯೆನಿಪ್ಪ ಮಂಗಕವೀಂದ್ರಂ

ಪುರುಜಿನಪತಿಮುಖ್ಯರ್‌ ಪೇೞ್ದ ವಿದ್ಯಾಸಮುದ್ರಾಂತರದೊಳೊಗೆದುದಿಂತೀ ಬಿಂದುಮಾತ್ರಪ್ರಮಾಣಂವಿರಚಿತಮಿದು ವೈದ್ಯಂ ಪೂಜ್ಯಪಾದಾಖ್ಯರಿಂದಂಪರಹಿತಕರತಂತ್ರಂ ತತ್ಪ್ರಪಂಚಂ ಮದೀಯಂ

ಘನಮಪ್ಪೀ ಜನ್ಮಕಾಂತಾರದ ನಡುವೆ ಮಹಾಘೋರದುಃಖಂಗಳಿಂ ಕೆಮ್ಮನೆ ಕಣ್ಗೆಟ್ಟುಣ್ಬ ಜೀವಂಗಳಿಗೆ ಮನುಜತಾಪ್ರಾಪ್ತಿಯೇ ದುರ್ಲಭಂ ತನ್ಮನುಜತ್ವಂ ಮುಖ್ಯಮೆಲ್ಲಾ ಪುರುಷರ ಪುರುಷಾರ್ಥಂಗಳೊಳ್‌ ತಾನಿದೆಂದಾತನುಗಂ ಸಂರಕ್ಷಣಾರ್ಥಂ ವಿರಚಿಸಿದ ಗುಣೋತ್ತುಂಗನೆಂ ಮಂಗರಾಜಂ

ಗದ್ಯ. ಇದು ಸಕಲ ವಿದಮಲ ಜಿನೇಂದ್ರೋಕ್ತಸಿದ್ಧಾಂತ ಪಯಃಪಯೋನಿಧಿಪಾರಗ ಶ್ರೀ ಪೂಜ್ಯಪಾದಮುನೀಂದ್ರ ಚಾರುಚರಣಾರವಿಂದ ಗಂಧ ಗುಣಾನಂದಿತ ಮಾನಸಂ ಶ್ರೀಮದಖಿಲ ಕಲಾಗಮೋತ್ತುಂಗ ಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್‌ ನಿರ್ವಿಷ ಪಾನಾಧಿಕಾರಂ ಪಂಚಮಂ