EN | KA

Menu

VII

ಖಗೇಂದ್ರಮಣಿದರ್ಪಣ

ನಸ್ಯ ಪ್ರಕರಣಂ

ಶ್ರೀನಿಳಯನೆನಿಪನಂ ನೆನೆದಾ ನಮಿತ ಸುರಾಧಿನಾಥ ಜಿನಪತಿಯಂ ಮನ್ಮಾನಸದೊಳಿರಿಸಿ ನಯದಿಂಭೂನುತಮಂ ನಸ್ಯಕರ್ಮಮಂ ವಿರಚಿಸುವೆಂ

ನಸ್ಯಂಗಳಿಂದೆ ತನುಸಾರಸ್ಯಂ ಪಿರಿದಕ್ಕುಮಖಿಲವಿಷಮೞಿಗುಂ ತನ್ನಸ್ಯಮಿದೆ ಮುಖ್ಯಮಿಂ ಸರ್ವಸ್ಯೈವ ಶಿರಃಪ್ರಧಾನಮೆಂಬುದಱಿಂದಂ

ವ. ಅದೆಂತೆಂದೊಡೆ

ಅರಿದಾಳಂ ಗಂಧಕಂ ರಾಮಠ ಲಶುನಯುಗಂಗೂಡಿ ತತ್ಸೂತದೊಳ್‌ ತಳ್ತಿರೆ ಮೂತ್ರಂ ದೇವದಾಳಿಪ್ರಥಿತ ರಸದೊಳೊಂದಾಗೆ ಮೂಗಿಂಗೆ ನಸ್ಯಂದೊರೆಕೊಂಡಾ ನಾಗದಷ್ಟಂಗರರೆ ನಯನದೊಳ್‌ ತೀವಲಂತಾ ವಿಧಿಜ್ಞಂಸ್ಮರಣಂ ಮಾತಾಟ ನೋಟಂ ಗತಿಮತಿಗಳವಂಗಕ್ಕುಮಾ ಮುನ್ನಿನಂದಂ

ಮಿಸುಗುತ್ತಿರ್ಪ ರಸಂ ಸಮುದ್ರಫಲಮುಂ ಜೇಪಾಳಮಂಕೋಲಬೀಜಸಮಂ ತಾನರುಠಾಳದೊಪ್ಪುವ ಫಲಂ ಸಂದಿಟ್ಟಿಯೊಳ್ಬೀಜದಿಂಪೆಸರ್ಗೊಂಡಂತವನೊಂದುಗೂಡರೆ ನೃಮೂತ್ರಾಕಲ್ಪಿತಂ ನಸ್ಯಮೀಕ್ಷಿಸಲೆಲ್ಲಾ ವಿಷಮಂ ಗಡಂ ಕಿಡಿಸುಗುಂ ಶಿಷ್ಟೇಷ್ಟಕಲ್ಪದ್ರುಮಾ

ನಾಗರ ತುಪ್ಪಕೀರೆ ಲಶುನಂ ರಸ ರಾಮಠಮೆಂಬಿವೆಲ್ಲಮಂರಾಗದೊಳೊಂದುಗೂಡಿ ಜಲದಿಂ ನೆಱೆ ಮಾಡಿದ ನಸ್ಯದಿಂದೆ ತನ್ನಾಗಕುಲಂ ಕೊಳಲ್‌ ಮೃತಕನಾದವನಂದಿರದೆೞ್ದು ನೋಡಿ ತಾನಾಗಳೆ ಮಾತನಾಡಿಸಲವಂ ನುಡಿಗುಂ ಲಪಿತಾನುರೂಪದಿಂ

ಅರಿಠಾ (ದಾ)ಳ ಸೂತ ಟಂಕಣವರ ರಾಮಠ ಸಿಂಧುಜಂಗಳಂ ಕೂಡಿರೆ ಕೊಂಡರೆ ಕಾೞ್ವೀರೆಯ ರಸದಿಂದಿರೆ ಮಡಗಿ ಬೞಿಕ್ಕೆ ಸರ್ಪದಷ್ಟ ನರಂಗಂ

ನರಮೂತ್ರದಿಂದೆ ನಸ್ಯಮನಿರದಾಗಿಸೆ ಕಣ್ಗೆ ತೇದೆಸಲ್‌ ತದ್ವಿಷಮುಂಪರಿಗುಂ ಝಂಝಾಮಾರುತನುರವಣೆಯಿಂ ದೀಪಕುಲಮನೞಿವಂತೆ ವಲಂ

ನರಮೂತ್ರದೊಳರುಠಾಳದಪರಿಪಕ್ವಫಲಂ ಸಮುದ್ರಫಳಮೆಂಬೆರಡಂಬೆರಸರೆದು ಪನಿಸು ಮೂಗಿನೊಳುರಗಕುಳೋಗ್ರೋಗ್ರತರ ವಿಷಂಗಳ್‌ ಕಿಡುಗುಂ

ಅರಿಸಿನಮಂ ಸಮುದ್ರಫಳಮಂ ಸರಿಗೂಡಿ ನೃಮೂತ್ರದಿಂದೆ ಚೆಚ್ಚರಮರೆದೊಪ್ಪೆ ಮಾಡುವುದು ನಸ್ಯಮನಲ್ಲದೊಡಂತವಂ ಸಮಂತಿರೆ ಪೊಸೆದಿಕ್ಕಿ ಪಿಂಡಿ ಪೊಸಲಕ್ಕಿಯ ಪತ್ರಮನಾ ರಸಾಂಬುವಿಂಪರಿಕಿಸೆ ನಾಸಿಕಾಂತರದೊಳಂ ಪನಿಸಲ್‌ ವಿಷಮೆಯ್ದೆ ಪಿಂಗುಗುಂ

ಸಿರಿಸದಪೂ ಹುಲಿಗಿಲಕಾಯ್ವೆರಸಿದ ಮಡುವಾಗಲೆಂಬಿವಂ ಗೋಮೂತ್ರಂಬೆರಸರೆದು ನಸ್ಯಮಂ ತಾವಿರಚಿಸಲುರಗೋಗ್ರ ವಿಷಮನದು ಸಂಹರಿಕುಂ

ಬಜೆಮಡುವಾಗಲ್ಗಳನಿಂತಜಮೂತ್ರದೊಳರೆದು ನಸ್ಯಮಂ ಮಾಡಲೊಡಂಭುಜಗೋಗ್ರವಿಷಂ ಕಿಡುಗುಂನಿಜತನುವಂ ಪೂಸಲುಂ ವಿದಗ್ಧಾಭರಣಾ

ಅರುಣಾಭಂ ಪುಷ್ಪಮಪ್ಪೊಂದಗಸೆಯನೆ ವಲಂ ನೋಡಿ ತನ್ಮೂಲಮಂ ಕೊಂಡರೆ ನೀಂ ಬೆಳ್ಳುಳ್ಳಿಯಂ ಕಗ್ಗೊರಲೆಯ ರಸದಿಂ ಭಾವಿಸಂತಿರ್ದ ಮರ್ದಂನರಮೂತ್ರಂಗೂಡಿ ನಸ್ಯಂ ವಿರಚಿತಮದು ತತ್ಸರ್ಪದಷ್ಟಂಗಮಾಗಳ್ನಿರುತಂ ಸಂಹಾರಿಕುಂ ತದ್ವಿಷಮನಖಿಳಭವ್ಯಪ್ರಜಾಸಂಗ ಮಂಗಾ

ಮರಿಚಯುತಂ ಗುರುಗುಂಜಿಯನರೆಗುಳ್ಳದ ಪಣ್ಣ ರಸದೊಳಂ ಮಡಗಿ ಬೞಿಕ್ಕುರಗಂ ಕೊಂಡ ನರಂಗಂವಿರಚಿಸು ನಸ್ಯದೊಳೆ ಪಾನದಿಂ ಹಿತಮಕ್ಕುಂ

ಅರಿಸಿನಮಂ ನೀಲಿಯುಮಂಬೆರಸಲ್ಲದ ರಸದೊಳರೆದು ನಸ್ಯಂಗೆಯ್ಯಲ್ಕುರಗೋಗ್ರವಿಷಂ ಕಿಡುಗುಂತರತರದೌಷಧಿಗಳಿವಱ ದೊರೆಯೆನಿಸುಗುಮೇ

ಬಜೆ ಕಟುಕತ್ರಯಂ ವರ ಸಮುದ್ರಫಳಂ ಅರುಠಾಳಮೆಂಬ ಸತ್ಕುಜಫಲರಾಜಿಯೆಂಬಿವನೆ ಕೂಡುಗೆ ಬೊಮ್ಮಿಯಸೊಪ್ಪನೊಪ್ಪದಿಂಗಜಬಜೆಯಿಲ್ಲದಂತರೆದು ತದ್ರಸದಿಂದುಱೆ ಮಾಡಿ ನಸ್ಯಮಂವೃಜಿನಹರಂ ವಿಷಘ್ನಮಪಭೂತ ಪಿಶಾಚಮಿದೊಂದೆ ಸಾಲದೇ

ಅರುಠಾಳದ ಪಣ್‌ ನೆಲ್ಲಿಯನರೆದುರಗಂ ಕೊಂಡವಂಗೆ ನಸ್ಯಂಗೆಯ್ಯಲ್ಕಿರದು ವಿಷಂ ಗ್ರಹ ಭೂತೋತ್ಕರದ ಭಯಂ ಪಿಂಗುಗುಂ ವಿದಗ್ಧಾಭರಣಾ

ಏೞಿಸದಿಲುಮಿಚ್ಚೆಯ ಹುಳಿಬೇೞಿಯದಳ ಲಶುನ ಮರಿಚಮೆಂಬಿವನಿಂಬಿಂಮೇಳೈಸಿ ನಸ್ಯಮೀಯಲ್ಜಾಳಿಸುಗುಂ ಸರ್ಪವಿಷಮನಮಳಿನಚರಿತಾ

ಮರಿಚಂ ಬಜೆ ಪತ್ರಕ ಶರ್ಕರೆ ಪಥ್ಯಂ ಹಿಂಗು ಮಧುಗಳಂ ಜಲದಿಂದಂದರೆದೀಯೆ ನಸ್ಯದೊಳ್‌ ಸಂಹರಿಕುಂ ಫಣಿವಿಷಮನಲ್ತೆ ವಿಭುಕುಳತಿಳಕಾ

ಮರಿಚಂ ಮಾಗಧಿಯಿಂದ್ರವಾರುಣಿಯೆನಿಪ್ಪೀ ಮೂಱಱೊಳ್‌ ವಿಶ್ವಮಂಬೆರಸೀ ನಾಲ್ಕಱೊಳಂತೆ ಕೂಡಿ (ಡು) ಬೞಿಯಂ ಕಾೞ್ವೀರೆಯೊಳ್ಬೀಜಮಂನಿರುತಂ ಸ್ವಲ್ಪಮನಿಂತಿವೈದೆ ಧರೆಯೊಳ್‌ ನಸ್ಯಂ ಪ್ರಧಾನಂ ಮಹಾಪುರುಷರ್‌ ಪೇೞ್ದರಿದಂ ಪ್ರಯೋಗಿಸು ಗಡಿಂ ಸತ್ಸಂಗ ಮಂಗಪ್ರಭೂ

ಅಲಸದೆ ನಾಯ್ವೇಲ ತೊಱೆಗಣಿಗಿಲ ಕತ್ತರಿಯೆಸೆವ ಮೂಲಮಂ ಕತಕಕುಜಾವಳಿಯ ಪರಿಪಕ್ವಫಲರಸಜಳದಿಂದರೆದುದಱೊಳಲುಬಿ ತೊಯಿದಾ ಪಟಮಂ

ಪಱಿದಿಬ್ಬೆರಳನಿತಂ ತೊಯ್ದಱಿ (ಱು)ವೆಯನೆ ನೃಮೂತ್ರದಿಂದೆ ನಸ್ಯಂಗೆಯ್‌ ಮೆಯ್ಮಱೆದಹಿದಷ್ಟಂ ತಿಳಿದೆೞ್ಚಱುಗುಂ ವಿಷಮೞಿಗುಮೆಂದನುಭಯಕವೀಂದ್ರಂ

ಗೋಮೂತ್ರದಿಂದಮರೆವುದುಭೂಮಹಿತಂ ಪುತ್ರಜೀವಿಯಂ ವಹ್ನಿಯನಿನ್ನೇಮಾತೋ ದೀಪಿಕೆಯೆಂಬೀ ಮೂಱಱ ಯೋಗನಸ್ಯದಿಂ ವಿಷಮೞಿಗುಂ

ತರ್ಕಮದೇವುದಿಲ್ಲ ಕಿಱುಗುಳ್ಳದೊಳುಳ್ಳ ಬೀಜಮಂ ಸಮಂತರ್ಕಸುಭೂಜದುಗ್ಧದೊಳೆ ಭಾವಿಸಿ ಚೂರ್ಣಮದಾಗೆ ಮಾಡಿದಂತಿರ್ಕುಮೆನಲ್‌ ಕಟುತ್ರಿಕದೊಳೊಂದಿಸಲಂತದೆ ನಸ್ಯ ಪಾನದಿಂಕರ್ಕಶಮಪ್ಪನೇಕ ವಿಷಸಂತತಿಯಂ ಕಿಡಿಕುಂ ದರಿತ್ರಿಯೊಳ್‌

ದಾಗುಡಿಯ ಕಾಗಿದೊಂಡೆಯಯೋಗದೊಳತಿಹಿತಮೆನಿಪ್ಪ ಹೆಮ್ಮಿಟಿಲದ ಬೇರ್ಗಾಗಳೆ ಕಾಸಱಿಕೆಯ ತರುಗಾಗಿಹ ಬೀಜಮನೆ ಕೂಡಿ ಚೂರ್ಣಿಸಿ ಬೞಿಯಂ

ಅರೆದುಂ ಪೂಸುಗೆ ದಷ್ಟನಶರೀರಮಂ ನಸ್ಯಪಾನಮಂ ಮಾೞ್ಕತಿದುರ್ಧರಮೆನಿಪ ವಿಷಂ ಪಱಿಗುಂಪಱಿವಂತಿರೆ ಮೇಘಪಟಲಮಾಶುಗನಿದಿರೊಳ್‌

ಒಕ್ಕುಳಮಪ್ಪ ಚಿಲ್ಲಳೆಯ ಕಾಯ್ಗಳೊಳಿಕ್ಕಿ ಸುರೇಂದ್ರಶಾಖೆಯಂಚಕ್ಕನೆ ಕೂಡಿರಲ್‌ ತುೞಿದು ತದ್ರಸದಿಂ ಪಟಮಾಱಲಾಱಲಾಲೆಕ್ಕಮದಿಪ್ಪತೊಂದುವರೆಗಂ ಬಿಡದೂಡಿಯದಂತಿರಲ್ಕೆ ನೀಂಸಿಕ್ಕನೆ ಸೀೞ್ದುದಿಬ್ಬೆರಳನಿತ್ತುಮನರ್ದಿ ನೃಮೂತ್ರದೊಳ್‌ ಬುಧಂ

ಚೇಲಮುಮಂ ಪಿಂಡಿದುದೇಂಸಾಲದೆ ನಸ್ಯದೊಳಶೇಷ ವಿಷತತಿಯಂ ನಿರ್ಮೂಲಿಸುಗುಂ ಪಡೆಮಾತೇಂಕಾಲೋರಗದಷ್ಟನಾದೊಡಂ ಜೀವಿಸುಗುಂ

ಸರಸಮೆನಿಪ್ಪ ಕೈಪೆಸೊರೆಯೊಳ್ದಿರುಳಂ ಬೆರಸಂತಿರಲ್ಕೆ ಕಾಸರಿಕನ ಬಿತ್ತುಮಂ ಭರದೊಳಂದರೆ ಕೂಡಿರೆ ದೇವದಾಳಿಯಂವರ ನರಮೂತ್ರದಿಂ ಪಿೞಿದು ನಸ್ಯಮನಾಗಿಸು ಪೆಣ್ಗೆ ಪೆಣ್ಗಳಿಂಬರಿಸಿದ ಮೂತ್ರದಿಂ ನೃತನುಗಾದ ವಿಷಂ ಪಱಿಗುಂ ಧರಿತ್ರಿಯೊಳ್‌

ಮರಿಚ ವಚಾ ಲವಣಂಗಳ್ಬೆರಸರೆದೌಡಲದ ಮೊಗ್ಗೆಯಂ ನಸ್ಯಂಗೆಯ್ಗುರಗವಿಷಂ ಸ್ಫುರಿಸದು ಸಂಚರದನಿಲಂಗಿರದ ಮಾೞ್ಕೆಯಿಂ ಸೊಡರಿಳೆಯೊಳ್‌

ದಾಗುಡಿಯಂ ಬಜೆಯಂ ಮಡುವಾಗಲ್‌ ಸುರದುಂಬೆ ಕುನಟಿಯಂ ಭ್ರಾಮಕಮಂತಾ ಗರುಳಮೆಂಬಿವೆಲ್ಲಂನಾಗ ಸುದಷ್ಟಂಗೆ ನಸ್ಯಮೆಂಬರ್‌ ಕೞಿಯಿಂ

ಪುನ್ನಾಗಂ ನೀಲಿ ಪಾತಾಳಗರುಡನೆಸೆವೀ ಲೊಕ್ಕಿ ಚಾಂಪೇಯಮಪ್ರಚ್ಛನ್ನಂ ಜಂಬಾಳ ಸರ್ಪಾಕ್ಷಿಗಳೆಸೆವ ಸಿದ್ದಾರ್ಥ ಕಂಕೆಲ್ಲಿಗಳ್‌ ಸಾಲ್ಗುನ್ನಾಡೊಳ್‌ ಪುಟ್ಟಿ ಸಂದೌಷಧಿಗಳಿಗಿವೆ ಮುಖ್ಯಂಗಳಿಂತೆಲ್ಲಮೊಂದಿರ್ಪನ್ನಂ ನಸ್ಯಂ ಹಿತಂ ಮೂತ್ರದೊಳಹಿಕುಲದಷ್ಟಂಗಭೀಷ್ಟಂ ಸಮಸ್ತಂ

ಸುರದುಂಬೆ ಸಿಂಧುವಾರಂಮರಿಚಂ ಕಿಱಿದೇಗು ಗರ್ದುಗಿನೆಲೆಯೆಂಬಿವುಮಂಬೆರಸಿ ನೆಲಾವರೆಯಂ ಕೊಂಡರೆ ನಸ್ಯಂಗೆಯ್‌ ಸಮಸ್ತ ಫಣಿವಿಷಮೞಿಗುಂ

ದಾಗುಡಿಯ ಬೇರ್ಗಳಂ ತತ್ಪೂಗದ ರಸದಿಂದೆ ನಸ್ಯಮಂ ಮಾೞ್ಕೆ ಬುಧಂನಾಗಕುಲದಷ್ಟತನು ವಿಷಮಾಗಳೆ ಪಿಂಗುಗುಮಶೇಷ ಬುಧಜನವಿನುತಾ

ಬಜೆ ಮಂಜಿಷ್ಟಾಖ್ಯೆ ಲೋಧ್ರಂಗಳುಮೆಸೆವ ರುಜಾಂಕೋಲ ಸತ್ಸಿಂಧುಜಾತಂರಜನೀ ಶ್ರೀಖಂಡಮುಂ ಗುಳ್ಳದ ಫಲ ತಗರಂಗೂಡಿದಿಂತೆಲ್ಲಮಂ ನೀಂಭುಜಗಂ ಕೊಂಡಂಗೆ ನಸ್ಯಂ ಹಿತಮತಿಶಯದಿಂ ಕಣ್ಗೆಸಲ್ಕಾಕ್ಷಣಂ ತದ್ವೃಜಿನಂ ಬಿಟ್ಟೋಡುಗುಂ ಸತ್ಕವಿಕುಲಕಮಲಾದಿತ್ಯನಿಷ್ಟೋಕ್ತಿಯಿಂದಂ

ಶೆಂಬೆಯೆಲೆ ಲಶುನ ವಚೆಗಳ್ಕಿಂ ಬಹುನಾ ಭುಜಂಗಸಂಗತ ವಿಷದಾಡಂಬರಮಂ ಪಿಂಗಿಸುಗುಮವಂಬಿಲದೊಡನರೆದು ನಸ್ಯಮಂ ಮಾಡಲೊಡಂ

ಸುರದುಂಬೆಯೆಕ್ಕೆಯೆಲೆ ನಾಗರುಮುಂ ಬಜೆಯುಳ್ಳಿ ಹಾಲಿವಾಣದ ಕೊನರುಂಮರಿಚಂ ಬೆರಸರೆ ನಸ್ಯಂವರಮಿದುವೆ ನೃಮೂತ್ರದಿಂ ವಿಷಘ್ನಮೆನಿಕ್ಕುಂ

ವನಹಿಪ್ಪಲಿ ನಿರ್ಗುಂಡಿಗಳನುಪಮಮಪ್ಪುಳ್ಳಿ ಲೋಧ್ರ ಮಗ್ಗಾರೆಗಳುಂವಿನುತಂ ಪೆರ್ಗುರುಟಿಗೆಯಿಂಬಿನ ಮೊಲಗಿವಿಯೆಂಬಿವಲ್ತೆ ನಸ್ಯದೊಳೆ ಹಿತಂ

ಅಭಯ ಕಟುತ್ರಿಕಂ ಬಜೆ ಮನಶ್ಶಿಲೆ ರಾಮಠ ಪತ್ರಕಾರ್ದ್ರಕಂವಿಭವಸಮೇತಮಪ್ಪ ಹಯಗಂಧಿಯ ಬಂಧುರ ಪಂಚಕಾಂಗಮಂಶುಭದಿನದಲ್ಲಿ ತಂದುಮಜಮೂತ್ರ ವಿಮರ್ದಿತಮಾಗಲುಂಡೆಯಂವಿಭವಮೆನಲ್ಕೆ ಮಾಡುಗದ ನಸ್ಯಮನಿಂತಿದೆ ತದ್ವಿಷಾಪಹಂ

ದಾಗುಡಿ ಪಿಪ್ಪಲಿಯುಂ ಮಡುವಾಗಲ್‌ ನಿರ್ಗುಂಡಿಗಳ್‌ ಸಮೇತಂ ನಸ್ಯಂಬೇಗದೊಳಳವಡೆ ಮಾಡಲ್ಪೋಗದೆ ಫಣಿಕುಲದ ವಿಷಮದೇಂ ನಿಂದಪುದೇ

ಕರವೀರ ಲಶುನ ದಾಗುಡಿಗಿರಿಕರ್ಣಿಕೆ ನಾಗರಂಗಳುಂ ಸಮನಾಗಲ್ನರಮೂತ್ರದಿಂದೆ ನಸ್ಯಂವಿರಚಿತಮೆನಲುರಗಕುಲದ ವಿಷಮಿರ್ದಪುದೇ

ಬನ್ನಿಯುಮನಿಪ್ಪೆಯುಂ ತಾಂಹೊನ್ನೆಯುಮಂ ಮುಸ್ತೆ ಲೊಕ್ಕಿ ಲಾಂಗುಲಿಕಮುಮಂಕನ್ನೆ ವರಪುತ್ರಜೀವಿಯುಮನ್ನಯದಿಂ ನಸ್ಯಮಿತ್ತೊಡದುವೆ ವಿಷಘ್ನಂ

ಅಣಿಲೆ ಬಜೆ ಹಿಂಗು ಲೋಧ್ರಂಮೆಣಸಿಗೆಯೆಲೆಯೆಂಬಿವಂ ಜಲಾನ್ವಿತಮಂ ತತ್ಕ್ಷಣದಿಂ ನಸ್ಯಂಗೆಯ್ಯಲ್ಫಣಿವಿಷಮಿರದೞಿಗುಮೆಂದಪಂ ಮಂಗಬುಧಂ

ಫಲಮಾಗದ ಮಡುವಾಗಲನಲಸದೆ ಶತವಾರಮಪ್ಪಿನಂ ಮೂತ್ರದೊಳಂಸುಲಿಲಿತಮಾಗಲ್‌ ಭಾವಿಸಿಜಲದಿಂ ನಸ್ಯಮನೊಡನೆಸೆ ನಿರ್ವಿಷಮಕ್ಕುಂ

ಮರಿಚಮನುಳ್ಳಿಯನೊಂದಿಸಿಸುರದುಂಬೆಯ ರಸದಿನಂತುಮಲ್ಲದೆಯುಂ ಮೇಣ್ಮರಿಚಂ ನಿರ್ಗುಂಡಿ ಲಶುನಮಿರೆ ಕೊಂಡು ನಸ್ಯದೊಳೆ ಫೞಿಲನಹಿವಿಷಮೞಿಗುಂ

ವಂಚಿಸಲೇಂ ಹೊಮ್ಮುಗುಳಿನಪಂಚಾಂಗ ಸಮೇತಮಂ ಕಟುತ್ರಿಕಮಂ ತತ್ಸಂಚಿತ ಚೂರ್ಣಮನೂದುಗೆಸಂಚಳ ನಾಸಿಕದೊಳಹಿವಿಷಾಪಹಮಕ್ಕುಂ

ನರಮೂತ್ರದೆ ನಸ್ಯಂಗುಡುಗುರುಗುಂಜಿಯ ಬಕುಳ ಮರಿಚಯುಗ್ಮದ ಬಿತ್ತಂಪರಿಹರಿಕುಂ ಗರಳ ಭಯಂನಿರುತಂ ಸಾಹಿತ್ಯನಿಳಯನನುಮತದಿಂದಂ

ನೀರಿಂ ನಸ್ಯಂಗೆಯಿ ಮಗ್ಗಾರೆಯ ಪಂಚಾಂಗಚೂರ್ಣಮಂ ಫಣಿ ಕೊಂಡಂಗೋರಂತೆ ಕುಡಿಸೆ ಕಣ್ಗೆಸಲಾರಯ್ಯಲ್‌ ತದ್ವಿಷಾಪಹಂ ಬುಧಮಿತ್ರಾ

ಒಮ್ಮಡಿ ಹೆಮ್ಮಿಟ್ಟಿಯೊಳಂತಿಮ್ಮಡಿ ಕಾೞ್ವೀರೆಯೆಸೆವ ಬಿತ್ತತಿಬಜೆಯುಂಘಮ್ಮನೆ ಪಾನದೆ ನಸ್ಯದೊಳಮ್ಮಡಿದನೆನಿಪ್ಪ ಸರ್ಪದಷ್ಟಂ ಬಾೞ್ಗುಂ

ಗುಣ ಸಮಸೈಂಧವ ಮಧುಕಂಮಣಿಶಿಲೆಯೊಡಗೂಡಿ ನಸ್ಯಮಂ ಮಾಡಲದುಂಫಣಿಕೊಂಡನ ವಿಷಮಂ ತತ್ಕ್ಷಣಮಾತ್ರದೊಳೞಿಗುಮೆಂಬುದೇಂ ಕೇವಳಮೇ

ಸಾಲದೆ ಮೆಣಸಿಮ್ಮಡಿ ಜೇಪಾಳದ ತಿರುಳೊಂದು ಭಾಗಮಾಗಿರೆ ಜಂಬೀರಾಳಿಯ ಫಲರಸದಿಂ ಪ್ರಕ್ಷಾಲಿಸಿ ತದ್ರಸದೊಳಿರಿಸಿ ಮಡಗೆಂಟು ದಿನಂ

ಅದನರೆದು ಗುೞಿಗೆಯಂ ಮಾಡಿದುದಂ ಫಣಿದಷ್ಟನೆಸೆವ ನಾಸಿಕದೊಳ್‌ ತಾಂಪದನಱಿದು ಬಿಂದುವಂ ಪನಿಸಿದೊಡಂ ಫಣಿಕುಳ ವಿಷಂಗಳಾಕ್ಷಣಮೞಿಗುಂ

ಎಕ್ಕೆಯ ಪಣ್ಣೆಲೆಯಂ ಸೆಖೆಗಿಕ್ಕಿ ರಸಂಗೊಳ್‌ ಸರಾಮಠಂ ನಾಸಿಕದೊಳ್ಧೊಕ್ಕನೆ ಪನಿಸುಗೆ ವಿಷದಿಂದುಕ್ಕಲಿಕುಂ ಸರ್ಪದಷ್ಟನಮಳಚರಿತ್ರಾ

ನೆಲ್ಲಿ ಬೆಳುಹೂಲಿಗಳ ಬೇರಿಲ್ಲಣ ಮುಳುಗೊಗ್ಗಿಯೆಂಬಿನಿತ್ತಱ ಪುಡಿಯಂಚೆಲ್ಲನೆ ಮೂಗಿನೊಳೂಡಿದೊಡೆಲ್ಲಾ ಪಾವಿನ ವಿಷಕ್ಕೆ ತವಿಲದೆ ಸಾಲ್ಗುಂ

ಗೋರಕ್ಷನ ಮೂಲಿಕೆಯಾಕ್ಷೀರಮುಮಂ ಪೞ್ತಿಯಿಂದೆ ಯೋಜಿಸಿ ಮಡಗುಗ್ರೋರಗನಗಿದೊಡೆ ಮೂತ್ರದೊಳಾರುಂ ನಸ್ಯಮನೊಡರ್ಚಲದುವೆ ವಿಷಘ್ನಂ

ರಜೀನೀ ವ್ಯೋಷಯುತಂ ಸಿಂಧುಜ ಗೋಶೃಂಗಾಂಕ ದಂತಿ ಮಂಜಿಷ್ಠೇಲಾವ್ರಜಮಂ ತಿಗಡೆಯೊಳಂ ಸರ್ಪಜವಿಷಮಂ ಕಳೆವೊಡಿವಱ ನಸ್ಯಮೆ ಸಾಲ್ಗುಂ

ಸಿರಿಸದ ಪೂವಂ ಹುಲಿಗಿಲವರಫಲ ಮಡುವಾಗಲೆಲೆ (ಳೆ)ಯ ಫಲಮಂ ಮೂತ್ರಂಬೆರಸರೆದು ನಸ್ಯಕರ್ಮಕ್ಕಿರದೊಡರಿಸಲಹಿಕುಳೋಗ್ರ ವಿಷಮಂ ಕಳೆಗುಂ

ಪಾಗಲಬೇರ್‌ ತ್ರಿಕುಟಕಮೊಂದಾಗಲ್‌ ನರಮೂತ್ರದಿಂದೆ ನಸ್ಯಂಗೆಯ್ದಂತಾಗಳೆ ಪೂಸುಗೆ ಪುಣ್ಣೊಳ್ನಾಗವಿಷಂ ಪರೆದುಪೋಗದೇಂ ನಿಂದಪುದೇ

ಚಿಕ್ಕಣಿಕೆಯಪುಲ್ಲರಸಂತೆ (ಚೆ)ಕ್ಕನೆ ತೀವಿರೆ ಕಟುತ್ರಿಕಂ ಚೂರ್ಣಿತಮೇನಿಕ್ಕುವಮಿದು ನಸ್ಯದೊಳಂಚಕ್ಕನೆ ಕಳೆಗುಂ ಸಮಸ್ತ ಫಣಿಗಳ ವಿಷಮಂ

ಸಾಲದೆ ಪಲವೌಷಧಗಳಲೋಲತ್ವಂ ದೇವದಾಳಿಯಪರಾಜಿತೆಯೊಳ್ಮೂಲಂ ಸಮನಾಗಿರೆ ನಿರ್ಮೂಲಿಸುಗುಂ ವಿಷಮನದಱ ನಸ್ಯಾಂಜನದಿಂ

ಎಂಜಲಿಸಿತ್ತಹಿಪತಿಯೆಂದಂಜಲೆ ಬೇಡಣ್ಣ ನಸ್ಯಕರ್ಮದೊಳಂ ನೀಂಬಂಜೆ ಮಡುವಾಗಲೊಂದನೆರಂಜಿಪ ಜಲದಿಂದೆ ಕುಡುವುದಮಳಚರಿತ್ರಾ

ಹೇರೀಚಲಪೂವೊಂದೆ ನಿವಾರಿಸುಗುಂ ಕೞಿಯೊಳರೆದು ನಸ್ಯಂಗೆಯ್ಯಲ್ಭೋರೆಂದು ಮೊರೆವ ಸರ್ಪನಘೋರ ವಿಷಂಗಳನಶೇಷಕವಿಕುಲತಿಲಕಾ

ಎಕ್ಕೆಯ ಪತ್ರದ ರಸದಿಂಚೆಕ್ಕನೆ ತೇವುದು ಸಮುದ್ರಫಳಮಂ ತಲೆಯಿಂಪೊಕ್ಕಿರೆ ನಸ್ಯಂಗೆಯ್ಯಲ್ತೆಕ್ಕನೆ ತೀವಿದ ವಿಷಂಗಳೆಲ್ಲಂ ಪಱಿಗುಂ

ಎಲೆ ಮರುಳೆ ಮನುಜ ನೀಂ ಪಲಪಲವಂ ಪಂಬಲಿಸಲೇಕೆ ನೀರಿಂದರೆದಾಫಲಿನೀ ಕಂದಮನೊಂದನೆವಿಲಸನ್ನಸ್ಯದೊಳೆ ರಚಿಸು ಫಣಿವಿಷಮೞಿಗುಂ

ಅರುಠಾಳದ ಪಣ್ಗಳೊಳಂಬೆರಸರೆದು ಸಮುದ್ರಫಲಮನಿತ್ತೊಡೆ ನಸ್ಯಂನರಮೂತ್ರದೊಳದಱಿಂ ಚೆಚ್ಚರಮೞಿಗುಂ ಫಣಿವಿಷಂಗಳೆನಿತೊಳವನಿತುಂ

ಭೂಮಿನುತಮಪ್ಪ ಮುಗುಳೀಗ್ರಾಮದ ವಿಭು ಮಂಗರಾಜನಱಿಪಿದ ನಸ್ಯಂರಾಮಠ ಮರಿಚಂಗಳವಿನ್ನೇಮಾತೊ ಸರ್ಪವಿಷಮನಾಕ್ಷಣಮೞಿಗುಂ

ದೊರೆಕೊಳೆಚಕ್ರಾಂಕಿಯ ಬೇರ್ಗುರುಪುಷ್ಯದೊಳಲ್ಲದಂದು ಹಸ್ತಾರ್ಕದೊಳಂಪರಿಕಿಸಿ ನಸ್ಯಮನೀಯಲ್ಪರೆಗುಂ ಫಣಿ ವೃಶ್ಚಿಕಂಗಳುಗ್ರವಿಷಂಗಳ್‌

ಮದನಫಳಮೂತ್ರಯುತ ಲೇಪದೊಳಂ ನಸ್ಯದೊಳಶೇಷ ವಿಷಮಿರದೆಂದಂಸದಯನೆನಿಸಿರ್ಪ ಸಜ್ಜನಹೃದಯಾಂತರ್ಜ್ಯೋತಿರಂಗ ಸುರತರು ಮಂಗಂ

ಸಾರತರ ತುಳಸಿಯುಂ ಮಗ್ಗಾರೆಯ ಫಲಮೆಸೆವ ವಿಮಲ (ದ)ಜೇಪಾಳಂ ಕಾೞ್ವೀರೆಯೆಲೆ ಮೂತ್ರದಿಂದರೆದೋರೊಂದಱ ನಸ್ಯಕರ್ಮದಿಂ ವಿಷಮೞಿಗುಂ

ಬಂಜೆ ಮಡುವಾಗಲಂ ಮೇಣ್ಱಂಜಣಿಗೆಯ ಪುಲ್ಲನಕ್ಕೆ ನರಮೂತ್ರದೊಳಂರಂಜಿಸೆ ನಸ್ಯಂಗೆಯ್ಯಲ್ನಂಜೞಿಗುಂ ಕವಿಜನೈಕಮಿತ್ರನ ಮತದಿಂ

ಭುಜಗಂ ಕೊಂಡೊಡೆ ಸಭಯಂಗುಜುಗುಜುವೇಡಣ್ಣ ವಾರ್ಧಿಫಳಮಂ ಮತ್ತಂತಜಮೂತ್ರಯುತಂ ನಸ್ಯಂವಿಜಯಂ ವಿಷವಿಕ್ರಮಾಬ್ಧಿ ಬಾಡವನೆನಿಕುಂ

ನಂಜಿದತಿವಿಷಮಮೆಂದೇಕಂಜುವಿರಂಜದಿರಿ ತರಿಸಿ ಗೋಮೂತ್ರದೊಳಂಬಂಜೆ ಮಡುವಾಗಲೊಳ್‌ ವಿಷಭಂಜನಮಾಕ್ಷಣದೆ ನಸ್ಯಮಂ ಮಾಡಲೊಡಂ

ಪಾಲಿಂದೆ ಪುತ್ರಜೀವಿಯನಾಲಸ್ಯಮನುೞಿದು ನಸ್ಯಮಂ ಮಾಡೆ ಬುಧಂಸೋಲಿಸುಗುಮುಗ್ರವಿಷಮಂಶ್ರೀಲಲನಾಪತಿಯೆನಿಪ್ಪ ಮಂಗನ ಮತದಿಂ

ಏಮಾತಿನ್ನಿಲ್ಲಂ ನೀಕ್ಷೇಮಂ ಫಣಿ ಕೊಂಡುದೆಂದು ಬೆಂಬೀೞದೆ ಸುಪ್ರೇಮದೆ ಸಮುದ್ರಫಳಮಂಗೋಮೂತ್ರದೊಳಿತ್ತ ನಸ್ಯಮದುವೆ ವಿಷಘ್ನಂ

ಎಸೆವಾ ಪಾಗಲ ತುಂಬೆಯರಸಮಂ ಗಣಜಿಲೆಯ ರಸಮನಕ್ಕೆಮ ಮೂಗಿಂಗೆಸೆಯಲ್‌ ನಸ್ಯಮನಾಗಿಸೆ ದೆಸೆಗಿಡುಗುಂ ಫಣಿವಿಷಂಗಳಮಳಚರಿತ್ರಾ

ಮಿಕ್ಕಾ ವಿಷವೈದ್ಯದೊಳಂಚುಕ್ಕಿಯ ಮಾತೇವುದಣ್ಣ ಫಣಿಕೊಂಡ ನರಂಗೆಕ್ಕೆಯ ಪಾಲಿನ ನಸ್ಯಂಚೆಕ್ಕನದಾಗಲ್‌ ವಿಷಾಪಹಂ ಗುಣನಿಲಯಾ

ಭುಜಗಂ ಕೊಂಡೊಡೆ ಭಯದಿಂಗಜಬಜಿಸಲದೇಕೆ ನಸ್ಯಕರ್ಮದೊಳೊಂದಂಬಜೆಯಂ ಪ್ರಯೋಗಿಸಲ್ಕದೆವಿಜಯಪ್ರದನೆಂದನಲ್ತೆ ಮಂಗ ಶುಭಾಂಗಂ

ಭೋಜ್ಯಮೆನಿಪಗುಳುಶುಂಠಿಯನಾಜ್ಯದೊಳಂತರೆದು ನಸ್ಯಮಂ ಮಾಡಲೊಡಂಭಾಜ್ಯಂ ಫಣಿವಿಷಮದಱಿಂರಾಜ್ಯದೊಳಿಂತಱಿಯೆ ಪೇೞ್ದನಮಳಚರಿತ್ರಂ

ಸಾಲದೆ ತಂಬುಲದೆಲೆಯಂತೈಲಾನ್ವಿತಮಾಗೆ ನಸ್ಯಮಂ ಮಾಡಲೊಡಂಸೋಲಿಸುಗುಂ ಫಣಿವಿಷಮಂಕಾಲೋರಗ ದಷ್ಟನಾದೊಡಂ ಜೀವಿಸುಗುಂ

ಅಗಸೆಯ ಬೇರಾಗಲಿ ಱಂಜಿಗೆಯಕ್ಕೆಮ ದೊರೆಕೊಳಲ್ಕೆ ನಿಂಬೆಯರಸದಿಂಬಗೆಗೊಳೆ ನಸ್ಯಮನೀವುದುಪಗೆಯೆನಿಸಿದ ವಿಷಧರೋಗ್ರತರ ವಿಷವೞಿಗುಂ

ಸೊಗಯಿಪ ನುಗ್ಗೆಯ ಬೇರ್‌ ಹೊಮ್ಮುಗುಳಕ್ಕೆ ಸಮುದ್ರಫಳಮನಕ್ಕೆಮ ಕೂಡಿಟ್ಟು ಗಡರೆ ನಿಂಬೆಯ ರಸಬಿಂದುಗಳಿಂ ನಸ್ಯಮನೊಡರ್ಚಲಹಿವಿಷಮೞಿಗುಂ

ಅಜಮೂತ್ರದಿಂದೆ ತೇವುದುರಜನಿಯುಮಂ ದಷ್ಟನಾಸಿಕಕ್ಕೆಱೆಯಲೊಡಂಭುಜಗೋಗ್ರವಿಷಂ ಕಿಡುಗುಂವೃಜಿನಾಂಗವಿದೂರ ಸಂಗ ಮಂಗನ ಮತದಿಂ

ಕಗ್ಗೊಱಲೆ ಬುಗುಡಿ ಮಿಟಿಲೆಯನುಗ್ಗಿಯ ಪತ್ರಂಗಳೊಡನೆ ಮರಿಚದ ಚೂರ್ಣಂಅಗ್ಗಳಮೊಂದಿರೆ ನಸ್ಯದೊಳೆಗ್ಗಲ್ಲದೆ ವಿಷಹರಂ ವಲಂ ಪ್ರತ್ಯೇಕಂ

ಅವು ಹಿತಮಿವು ಹಿತಮೆಂಬೀವಿವರಣೆಯ ವಿಕಲ್ಪಮೇಕೆ ಮೆಣಸಿನ ಚೂರ್ಣಕ್ಕವರೆಯ ಪತ್ರದ ರಸಮೊಂದೆ ವಿಶೇಷಂ ನಸ್ಯದಿಂ ವಿಷಘ್ನಮಮೋಘಂ

ವಶಮಲ್ಲಂ ವಿಷಮೆ ನಿರಂಕುಶಮೆಂಬ ಭಯಂಗಡೇಕೆ ನಸ್ಯದೊಳಂತಾಲಶುನದ್ವಯಮುಂ ಮರಿಚಂಪ್ರಶಸ್ತಮೆಂದಿಳೆಯೊಳಱಿಪುವರ್‌ ಜಾಂಗುಳಿಕರ್‌

ತೊಱೆ ಗಿರಿಗಳೊಳೌಷಧಿಗಳನಱಸಲ್ವೇಡಣ್ಣ ಮೆಣಸಿನೊಡವೆರಸಿರಲಾಕಿಱುದೆಂಗಿನ ರಸವೊಂದುಮನೆಱೆ ನಸ್ಯಮನಹಿವಿಷಂಗಳಂ ಭಂಜಿಸುಗುಂ

ಪಾಗಲು ಲೊಕ್ಕಿ ಚಿಕ್ಕಣಿಕೆಯಾವರೆ ನಾಗಲತಾಖ್ಯೆ ಕಾಕೆಯೊಳ್ಬೇಗದೊಳೊಪ್ಪುವೆತ್ತ ದಳಮಂ ಬೆರಸೊಪ್ಪಿರೆ ಬೇಱೆಬೇಱವಿಂಬಾಗಿರೆ ನಸ್ಯದೊಳ್‌ ಮರಿಚಮಂ ಪನಿಸಲ್‌ ದೆಸೆಗೆಟ್ಟು ಬಿಟ್ಟದೇಂಪೋಗದೆ ನಿಲ್ಕುಮೇ ಫಣಿವಿಷಂ ಧರೆಯೊಳ್‌ ಕವಿಕಂಜಭಾಸ್ಕರಾ

ಗರ್ದುಗು ನೆಲಾವರೆ ತುಂಬೆಯೊಳೊದವಿದ ಪತ್ರಂಗಳಂ ಗಡಂ ದೊರಕಿದುದಂಪದೆಪಿಂ ನಸ್ಯದೊಳಂದೀವುದು ಮರಿಚಂಗೂಡಿ ನಿರ್ವಿಷಾಖ್ಯಮದಕ್ಕುಂ

ಎಸೆವೇರಂಡದ ಮೊಗ್ಗೆಯರಸಮಂ ಮೆಣಸಿನೊಳೆ ಕೂಡಿ ನಸ್ಯಮನಿತ್ತಂದಸಮಾನಮೆನಿಪ ವಿಷಮುಂದೆಸೆಗಿಡುಗುಂ ಕವಿಕುಲಾಬ್ಜಮಿತ್ರನ ಮತದಿಂ

ಮೇಟಿ ಪುರುವಳ್ಳಿ ಎಲೆಯುತ್ಪಾಟಿಸುಗುಂ ನಸ್ಯಕರ್ಮದೊಳ್‌ ವಿಷಮನದುಂಪಾಟಿಸಿ ಮರಿಚದೊಳೀಯಲ್ಕೋಟಿ ಲತಾಕುಲಮದೇವುದಿಂತಿದಱಿದಿರೊಳ್‌

ದಾಗುಡಿಯಂ ಜಲದಿಂದರೆದೋಗಡಿಸದೆ ನಾಸಿಕಾಂತದೊಳ್‌ ಪಿೞಿಯಲೊಡಂನಾಗಕುಲದುಗ್ರವಿಷಮೇಂಪೋಗದೆ ನಿಂದಪುದೆ ಬುಧಸರೋರುಹಮಿತ್ರಾ

ವಂಧ್ಯಾ ಕರ್ಕೋಟಕೀ ಕಂದದೊಳೆಱೆವುದಜಾಮೂತ್ರದಿಂ ಮೂಱು ಸೂೞ್ ಭಾವಂ ಧ್ಯೇಯಂ ತಾನದಾಗಲ್‌ ಕೞಿವೆರಸು ಬೞಿಕ್ಕಾಜ್ಯದಿಂ ಕೂಡಿರಲ್‌ ಬೇಱೇಂ ಧ್ಯಾನಂ ತದ್ಭಿಷಕ್ಸೂರಿಗೆ ವಿಷಧರದಷ್ಟಂಗೆ ನಸ್ಯಾಂಗಮಾಗಲ್ಸಂಧ್ಯಾಭ್ರಾರಕ್ತದಂತಾಗಳೆ ವಿಷಮೞಿಗುಂ ಮಂಗರಾಜೋಕ್ತಿಯಿಂದಂ

ಆಡಿನ ಮೂತ್ರದೊಳ್‌ ಪೊರೆಯಲೊತ್ತುವುದೇೞಿರುಳಿಪ್ಪೆಯ ದ್ರುಮಂತಾಡಿದ ಕೆಚ್ಚನಲ್ಲಿಯ ಕಟುತ್ರಯ ಸೈಂಧವಮುಂ ವಚಾನ್ವಿತಂಕೂಡಿರಲಂತದಂ ಪಿೞಿಯೆ ನಾಸಿಕದೊಳ್‌ ಖಳಸರ್ಪ ವೃಶ್ಚಿಕೋತ್ಪೀಡನದುಗ್ರಮಪ್ಪ ವಿಷಮುಂ ಗ್ರಹಮುಂ ಮೊಲೆನಾಗನೋಡುಗುಂ

ತ್ರಿಕಟುಕಮಂ ಸಮುದ್ರಫಳಮಂ ಮಡುವಾಗನಕ್ಕೆ ಕೊಂಡು ನಾಸ್ತಿಕತನಮಿಲ್ಲದಂತರೆದು ಮೂತ್ರದೊಳಂತಿರೆ ನಸ್ಯಕರ್ಮದೊಳ್ಪ್ರಕಟಿಸೆ ಸರ್ಪನುಗ್ರವಿಷದಿಂದೞಿವಿಲ್ಲ ನರರ್ಗಮೆಂದು ಭಾವಕಕವಿ ಮಂಗನಿತ್ತಪನಿದಂ ಪ್ರಜೆಗೆಂದಭಯಪ್ರಸಿದ್ಧಿಯಂ

ತ್ರಿಕಟುಕಮಂಗುರುಂ ಮುನಿ ಶಿಫಾರುಜೆ ಕೈಪೆಯೆನಿಪ್ಪಲಾಬು ಮೂಲ ಕುಟಜ ದೇವದಾಳಿಮಡುವಾಗಲುದಂಚಿತ ನಸ್ಯಕರ್ಮದೊಳ್ಪ್ರಕಟಿತ ಪನ್ನಗೋಗ್ರವಿಷನಾಶನಮೆಂದಿಳೆಗೆಯ್ದೆ ಸಾಱಿದಂಸಕಳಕಳಾಬ್ಜಿನೀದಿನಕರಂ ವಿಭು ಮಂಗರಸಂ ದಯಾರಸಂ

ಈ ಗ್ರಂಥಮಖಿಳ ಪುರುಷರವಿಗ್ರಹ ರಕ್ಷಣನಿಮಿತ್ತಮೆಂದುಸಿರ್ದೆಂ ನಿರ್ವ್ಯಗ್ರತೆಯಿಂ ತಿಳಿವುದು ನರರುಗ್ರವಿಷಾಪಹ ಖಗೇಂದ್ರಮಣಿದರ್ಪಣದೊಳ್‌

ಸುಜ್ಞಾನ ತ್ರಿತಯಾಬ್ಧಿಗಳ್‌ ಗಣಧರ ಶ್ರೀಗೌತಮಾಖ್ಯರ್‌ ಜಿನೋಪಜ್ಞಂ ಸರ್ವಜನೋಪಕಾರಕಮೆನಲ್ಕೀ ಲೋಕದೊಳ್‌ ಪೇೞ್ದುದುಂಕುಜ್ಞಾನೋದಿತ ವಾಕ್ತಮೋರವಿಗಳಾ ಶ್ರೀಪೂಜ್ಯಪಾದಾಖ್ಯರಿಂಪ್ರಜ್ಞಾಧಾರನೆನಿಪ್ಪ ಮಂಗವಿಭುವಿಂ ಸಂಕ್ಷೇಪದಿಂ ಸೂಚಿತಂ

ಗದ್ಯ. ಇದು ಸಕಲ ವಿದಮಲ ಜಿನೇಂದ್ರೋಕ್ತ ಸಿದ್ಧಾಂತ ಪಯಃ ಪಯೋನಿಧಿ ಪಾರಗ ಶ್ರೀ ಪೂಜ್ಯಪಾದಮುನೀಂದ್ರ ಚಾರುಚರಣಾರವಿಂದ ಗಂಧಗುಣಾನಂದಿತಮಾನಸಂ ಶ್ರೀಮದಖಿಲಕಲಾಗಮೋತ್ತುಂಗ ಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್‌ ನಸ್ಯಾಧಿಕಾರಂ. ಸಪ್ತಮಂ