
ಪಂಪ ಭಾರತದ ಇಂಗ್ಲಿಷ್ ಅನುವಾದವನ್ನು ಕುರಿತ ಪ್ರಕಟನೆ
ಮಾರ್ಚ್ 7, 2025

ಅಭಿಜಾತ ಕನ್ನಡ ಡೇಟಾಬೇಸ್ ಯೋಜನೆಯ ಪ್ರಾರಂಭ
ಮಾರ್ಚ್ 15, 2024

ಶಾಸ್ತ್ರೀಯ ಕನ್ನಡ ಅಧ್ಯಯನದ ಅಂತಾರಾಷ್ಟ್ರೀಯ ಶಿಬಿರ ೨೭-೨೯ ಸೆಪ್ಟೆಂಬರ್‌೨೦೨೪

ಅಭಿಜಾತ ಕನ್ನಡ ಕೇಂದ್ರವಾದ ʼಕರ್ಣಾಟʼ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸಹಯೋಗದಲ್ಲಿ ಶಾಸ್ತ್ರೀಯ ಕನ್ನಡ ಅಧ್ಯಯನದ ಅಂತಾರಾಷ್ಟ್ರೀಯ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆಯಿತು. ಇದರಲ್ಲಿ ನಲವತ್ತು ಜನ ಶಿಬಿರಾರ್ಥಿಗಳು ಪಾಲ್ಗೊಂಡು ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸಗಳನ್ನು ಅತ್ಯಂತ ಆಸಕ್ತಿಯಿಂದ ಕೇಳಿ ಪ್ರಯೋಜನ ಪಡೆದರು.
ಶಿಬಿರವನ್ನು ನಾಡಿನ ಹಿರಿಯ ವಿದ್ವಾಂಸರಾದ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಉದ್ಘಾಟಿಸಿದರು. ಅವರು ತಮ್ಮ ಉಪನ್ಯಾಸದಲ್ಲಿ ದೋಷರಹಿತವಾದ ಕನ್ನಡವನ್ನು ಬಳಸುವ ಆವಶ್ಯಕತೆಯನ್ನು ಒತ್ತಿ ಹೇಳಿದರು. ಕನ್ನಡ ಅಧ್ಯಯನವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಸುದೀರ್ಘ ಇತಿಹಾಸವಿರುವ ಕನ್ನಡ ಭಾಷಾಸಾಹಿತ್ಯಗಳನ್ನು ನಿಷ್ಠೆಯಿಂದ ಅಭ್ಯಾಸ ಮಾಡಬೇಕೆಂದು ಶಾಸ್ತ್ರಿ ಅವರು ಸಲಹೆ ನೀಡಿದರು.
೨೭ರಂದು ಮೂರು ಉಪನ್ಯಾಸಗಳು ನಡೆದುವು. ಮೊದಲನೆಯ ಉಪನ್ಯಾಸವನ್ನು ನೀಡಿದವರು ಡಾ. ಎನ್.ಎಸ್. ತಾರಾನಾಥ್. ಹಳಗನ್ನಡ ಸಾಹಿತ್ಯದ ಓದು, ಅರ್ಥ, ವ್ಯಾಖ್ಯಾನ ಎಂಬುದು ಅವರ ಉಪನ್ಯಾಸದ ವಿಷಯ ಆಗಿತ್ತು. ಹಳಗನ್ನಡ ಸಾಹಿತ್ಯದ ಅಭ್ಯಾಸದಲ್ಲಿ ಗಮನಿಸಬೇಕಾದ ಅನೇಕ ವಿಷಯಗಳನ್ನು ಅವರು ಸೋದಾಹರಣವಾಗಿ ವಿವರಿಸಿದರು. ಎರಡನೆಯ ಉಪನ್ಯಾಸವನ್ನು ನೀಡಿದವರು ಅಂತಾರಾಷ್ಟ್ಟೀಯ ಖ್ಯಾತಿಯ ಡಾ.ಎಚ್.ವಿ. ನಾಗರಾಜರಾವ್. ಅಭಿಜಾತ ಕನ್ನಡ ಸಾಹಿತ್ಯದ ಮೇಲೆ ಸಂಸ್ಕೃತದ ಪ್ರಭಾವವನ್ನು ಅವರು ಅನೇಕ ಉದಾಹರಣೆಗಳೊಂದಿಗೆ ನಿರೂಪಿಸಿದರು. ಸಂಸ್ಕೃತ ಪದಜ್ಞಾನ, ಸಂಧಿಸಮಾಸಗಳ ಪರಿಚಯ ಇಲ್ಲದೆ ಪ್ರಾಚೀನ ಕನ್ನಡ ಸಾಹಿತ್ಯವನ್ನು ಅಭ್ಯಾಸ ಮಾಡಲು ಸಾಧ್ಯವಿಲ್ಲ ಎಂದು ವಿವರಿಸಿದರು. ೨೭ರಂದು ಮೂರನೆಯ ಉಪನ್ಯಾಸ ಡಾ.ಆರ್.ವಿ.ಯಸ್. ಸುಂದರಂ ಅವರದಾಗಿತ್ತು. ಛಂದೋಲಂಕಾರಗಳನ್ನು ಸುಲಭವಾಗಿ ಅಭ್ಯಾಸ ಮಾಡುವುದು ಹೇಗೆ, ಕವಿಸಮಯಗಳೆಂದರೇನು ಎಂಬುದನ್ನು ಅವರು ಸೋದಾಹರಣವಾಗಿ ವಿವರಿಸಿದರು.
೨೮ರಂದು ಮೊದಲನೆಯ ಉಪನ್ಯಾಸವನ್ನು ಡಾ.ತಮಿಳ್ ಸೆಲ್ವಿ ನೀಡಿದರು. ಅಭಿಜಾತ ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಬೇಕಾದ ಸಿದ್ಧತೆಯನ್ನು ಡಾ. ಸೆಲ್ವಿ ವಿವರಿಸಿದರು. ಪಾಠಗಳ ಸಂಗ್ರಹ, ಪರಾಮರ್ಶನ ಗ್ರಂಥಗಳ ಅಧ್ಯಯನ, ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನಕ್ಕೆ ಪೂರ್ವ ಸಿದ್ಧತೆಯ ಅಗತ್ಯದ ಬಗೆಗೆ ಅವರು ವಿವರಿಸಿದರು. ಗ್ರಂಥ ಪರಿಷ್ಕರಣದ ಬಗೆಗೆ ಡಾ.ಟಿ. ನಾಗರತ್ನ ವಿದ್ವತ್ಪೂರ್ಣ ಭಾಷಣ ಮಾಡಿದರು. ಹರಿದಾಸ ಸಾಹಿತ್ಯದ ಹಿನ್ನೆಲೆಯಲ್ಲಿ ಪರಿಷ್ಕರಣ ಮಾಡುವ ಸಾಧ್ಯತೆಗಳನ್ನು ಅವರು ಉದಾಹರಣ ಸಮೇತ ವಿವರಿಸಿದರು. ಕನ್ನಡ ಗಣಕ ಪರಿಷತ್ತಿನ ಜಿ.ಎನ್. ನರಸಿಂಹಮೂರ್ತಿ ಅವರು ಅಭಿಜಾತ ಸಾಹಿತ್ಯವನ್ನು ಜಾಲತಾಣಕ್ಕೆ ಅಳವಡಿಸುವ ಬಗೆಗೆ ಉಪಯುಕ್ತ ಮಾಹಿತಿಯನ್ನು ಒದಗಿಸಿದರು. ಪಂಪಭಾರತ, ಆದಿಪುರಾಣ, ಕುಮಾರವ್ಯಾಸ ಭಾರತಗಳ ಉದಾಹರಣೆಗಳಿಂದ ಅಧ್ಯಯನ ಮಾಡುವ ಬಗೆಗಳನ್ನು ತಿಳಿಸಿದರು. ೨೮ನೆಯ ತಾರೀಖಿನ ಕೊನೆಯ ಉಪನ್ಯಾಸ ಡಾ.ಕೆ. ಕಮಲಾಕ್ಷ ಅವರದಾಗಿತ್ತು. ಹಳಗನ್ನಡ ಪಠ್ಯಗಳನ್ನು ಪಾಠ ಮಾಡುವುದು ಹೇಗೆ ಎಂಬುದರ ಬಗೆಗೆ ಅವರು ಯಶೋಧರ ಚರಿತೆಯ ಆಧಾರದಿಂದ ಹೇಳಿದರು.
೨೯ನೆಯ ತಾರೀಖಿನ ಮೊದಲನೆಯ ಉಪನ್ಯಾಸ ಡಾ. ಗಿಲ್ ಬೆನ್-ಹೆರುತ್ ಅವರದಾಗಿತ್ತು. ಪ್ರಾತ್ಯಕ್ಷಕಿ ಮೂಲಕ ಅಭಿಜಾತ ಸಾಹಿತ್ಯದ ಆಕರಗಳನ್ನು, ತಾಂತ್ರಿಕ ವಿಷಯಗಳನ್ನು ಅವರು ವಿವರಿಸಿದರು. ಡಾ.ಎಂ.ಬಿ. ಮಂಜುನಾಥ ಪ್ರಾತ್ಯಕ್ಷಕಿ ಮೂಲಕ ಶಾಸನಗಳನ್ನು ಓದುವ ಬಗೆಯನ್ನು, ಶಾಸನಗಳ ಪರಿಣಾಮವನ್ನು ಮನಮುಟ್ಟುವಂತೆ ವಿವರಿಸಿದರು. ಡಾ. ಜ್ಯೋತಿ ಶಂಕರ್ ಅವರ ಕಾವ್ಯವಾಚನ, ಗಮಕಕಲೆಯ ನಿರೂಪಣೆ ಎಲ್ಲರನ್ನು ಆಕರ್ಷಿಸಿತು. ಜರ್ಮನಿಯಿಂದ ಡಾ. ಸಮನ ಗುರುರಾಜ ಅಲ್ಲಿಯ ಕನ್ನಡ ಶಾಸನಗಳ ಯೋಜನೆಯನ್ನು ಕುರಿತು ಅಂತರ್ಜಾಲದ ದೃಶ್ಯಮಾಧ್ಯಮದ ಮೂಲಕ ವಿವರಿಸಿದರು.
ಸಮಾರೋಪ ಭಾಷಣವನ್ನು ಡಾ.ಡಿ.ಕೆ. ರಾಜೇಂದ್ರ ಮಾಡಿದರು. ಮುಖ್ಯ ಅತಿಥಿಗಳಾದ ಡಾ. ಒ.ಎಲ್. ನಾಗಭೂಷಣ ಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಡಾ. ಸಂತೋಷ ಹಾನಗಲ್ಲ ಮಾತನಾಡಿದರು. ಡಾ. ಎಂ. ರಾಮನಾಥಂ ನಾಯುಡು ಅಧ್ಯಕ್ಷತೆ ವಹಿಸಿದ್ದರು.