EN | KA

Menu

ಮೈಸೂರಿನಲ್ಲಿ ಕೇಂದ್ರದ ಆರಂಭದ ಉದ್ಘಾಟನಾ ಕಾರ್ಯಕ್ರಮ

‘ಕರ್ಣಾಟ’ದ ಉದ್ಘಾಟನಾ ಕಾರ್ಯಕ್ರಮವು ೧೮ ನೇ ಫೆಬ್ರವರಿ ೨೦೨೪ರಂದು ಮೈಸೂರಿನ ಹೆರಿಟೇಜ್ ಹೌಸ್‌ನಲ್ಲಿ ನಡೆಯಿತು. ಅದು ನಮ್ಮ ಚಟುವಟಿಕೆಗಳ ಕೇಂದ್ರವಾಗಿರುತ್ತದೆ. ಕಾರ್ಯಕ್ರಮದಲ್ಲಿ ಕನ್ನಡ ವಿದ್ವಾಂಸರು, ಸಮಾಜದ ಗಣ್ಯರು ಉಪಸ್ಥಿತರಿದ್ದರು. ಸಮಾರಂಭವು ಗೌರವಾನ್ವಿತ ಜ್ಯೋತಿ ಶಂಕರ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಅನಂತರ ವಿಧ್ಯುಕ್ತವಾಗಿ ದೀಪ ಬೆಳಗಿಸಿ ಕೇಂದ್ರದ ಲಾಂಛನವನ್ನು ಉದ್ಘಾಟಿಸಲಾಯಿತು. ಲೋಗೋ ಪ್ರಮುಖವಾಗಿ ಕನ್ನಡ ವರ್ಣಮಾಲೆಯ ಶಕಟರೇಫವನ್ನು ಒಳಗೊಂಡಿದೆ. ಇದು ಆಧುನಿಕಪೂರ್ವದ ಕನ್ನಡ ಪರಂಪರೆಗೆ ನಮ್ಮ ಬದ್ಧತೆಯನ್ನು ಸಂಕೇತಿಸುತ್ತದೆ. ಶಕಟರೇಫ ಎಂಬ ಪದವು ಶಕಟ (ಚಲಿಸುವ ಬಂಡಿ) ಮತ್ತು ರೇಫ ಧ್ವನಿಗಳನ್ನು ಸೂಚಿಸುತ್ತದೆ. ಅಕ್ಷರದ ಎರಡು ವೃತ್ತಗಳು ಚಕ್ರಗಳನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಅಭಿಜಾತ ಕನ್ನಡದ ಚಲನಶೀಲತೆಯನ್ನು ಅವು ಸಾಕಾರಗೊಳಿಸುತ್ತವೆ. ಲೋಗೋದ ಕಪ್ಪು ಮಣ್ಣಿನ ಹಿನ್ನೆಲೆಯು ನಮ್ಮ ಕರುನಾಡಿನ ಹೆಸರನ್ನು ಪ್ರತಿನಿಧಿಸುತ್ತದೆ. ಕರುನಾಡು ಮತ್ತು ಅದರಿಂದ ಬಂದ ಕರ್ಣಾಟ ದಖನ್ ಪ್ರದೇಶದ ಫಲವತ್ತಾದ ಕಪ್ಪುಮಣ್ಣಿನೊಂದಿಗೆ ಸಂಬಂಧಿಸಿದ ಪದಗಳು. ಲೋಗೋವನ್ನು ಬೆಂಗಳೂರು ಮೂಲದ ವಿನ್ಯಾಸ ಸಂಸ್ಥೆ ಟ್ಯಾಸಿಟ್ ವಿನ್ಯಾಸಗೊಳಿಸಿದೆ, ಇದು ಭಾರತೀಯ ಪರಿಕಲ್ಪನೆಗಳಿಗೆ ಪ್ರಾಧಾನ್ಯ ಕೊಡುತ್ತದೆ.

ಉದ್ಘಾಟನೆಯ ಅನಂತರ, ಕಾರ್ಯಕ್ರಮವು ಖ್ಯಾತ ವಾಗ್ಮಿಗಳ ಭಾಷಣಗಳನ್ನು ಒಳಗೊಂಡಿತ್ತು. ಶ್ರೇಷ್ಠ ಸಂಸ್ಕೃತ ವಿದ್ವಾಂಸರಾದ ಎಚ್.ವಿ. ನಾಗರಾಜರಾವ್, ಪ್ರಾಚೀನ ಕನ್ನಡ ದೇವಾಲಯದ ವಾಸ್ತುಶಿಲ್ಪದ ಅಧ್ಯಯನಕ್ಕೆ ಹೆಸರುವಾಸಿಯಾದ ಫ್ರೆಂಚ್ ವಿದ್ವಾಂಸ ಪಿಯರೆ ಫಿಲಿಯೋಜಾ, ಖ್ಯಾತ ಶಾಸನತಜ್ಞರು, ವಿಜಯನಗರ ಸಾಮ್ರಾಜ್ಯದ ಮೇಲೆ ಅಧಿಕಾರವಾಣಿಯಿಂದ ಮಾತನಾಡಬಲ್ಲ ವಸುಂಧರಾ ಫಿಲಿಯೋಜಾ ಭಾಷಣಗಳನ್ನು ಮಾಡಿದರು.

ಕೇಂದ್ರದ ಸಂಸ್ಥಾಪಕ ಸದಸ್ಯರಾದ ಆರ್.ವಿ.ಎಸ್‌. ಸುಂದರಂ, ಗಿಲ್ ಬೆನ್-ಹೆರುತ್ ಮತ್ತು ಮನೀಶ್ ಮಹೇಶ್ವರಿ ಕೂಡ ತಮ್ಮ ಒಳನೋಟಗಳನ್ನು ಹಂಚಿಕೊಂಡರು. ಆರ್.ವಿ.ಎಸ್‌. ಸುಂದರಂ ಅವರು ಕೇಂದ್ರದ ಧ್ಯೇಯಧೋರಣೆಗಳನ್ನು ವಿವರಿಸಿದರು, ಗಿಲ್ ಬೆನ್-ಹೆರುತ್ ಅವರು ಕನ್ನಡ ಸಾಹಿತ್ಯ ಮತ್ತು ಇತಿಹಾಸದಲ್ಲಿ ಪಾಶ್ಚಿಮಾತ್ಯ ಲೇಖಕರಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ತಿಳಿಸಿದರು. ಭಾರತದ ಅಭಿಜಾತ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಖಾಸಗಿ ಔದಾರ್ಯಶೀಲರ ಪಾತ್ರವನ್ನು ಮನೀಶ್ ಮಹೇಶ್ವರಿ ಒತ್ತಿ ಹೇಳಿದರು. ಈ ಘಟನೆಯನ್ನು ಸ್ಥಳೀಯ ಕನ್ನಡ ದಿನಪತ್ರಿಕೆಗಳು ಮತ್ತು ಹಿಂದೂ ಮತ್ತು ಸ್ಟಾರ್ ಆಫ್ ಮೈಸೂರ್‌ ಮೊದಲಾದ ಇಂಗ್ಲಿಷ್ ಪತ್ರಿಕೆಗಳು ಸೇರಿದಂತೆ ಮಾಧ್ಯಮಗಳು ವ್ಯಾಪಕವಾಗಿ ಪ್ರಕಟಿಸಿವೆ. ಈ ಘಟನೆಯು ಅಭಿಜಾತ ಕನ್ನಡ ಸಂಪ್ರದಾಯಗಳ ಅಧ್ಯಯನ ಮತ್ತು ಮೆಚ್ಚುಗೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿತು ಮಾತ್ರವಲ್ಲದೆ ಭವಿಷ್ಯದ ವಿದ್ವತ್ಪೂರ್ಣ ಪ್ರಯತ್ನಗಳು ಮತ್ತು ಸಾಂಸ್ಕೃತಿಕ ಆಯಾಮಗಳಿಗಾಗಿ ಈ ವೇದಿಕೆಯನ್ನು ಸ್ಥಾಪಿಸಿದ್ದನ್ನು ಸೂಚಿಸಿತು. ಕಾಶ್ಮೀರದಲ್ಲಿ ಉಗಮಗೊಂಡು ಮೈಸೂರಿನಲ್ಲಿ ನೆಲಸಿರುವ ಶಾರದಾದೇವಿಯ ಉಪಸ್ಥಿತಿಯು ಕಲಿಕೆ ಮತ್ತು ಪಾಂಡಿತ್ಯಕ್ಕಾಗಿ ಭಾರತದಲ್ಲೆಲ್ಲ ತೋರುವ ಗೌರವವನ್ನು ಸಂಕೇತಿಸುತ್ತದೆ.

ಇನ್ನಷ್ಟು ಪ್ರಕಟಣೆಗಳು

Announcing the Upcoming Book Publications from karṇāṭa

ಜನವರಿ 8, 2026

ಪಂಪ ಭಾರತದ ಇಂಗ್ಲಿಷ್ ಅನುವಾದವನ್ನು ಕುರಿತ ಪ್ರಕಟನೆ

ಮಾರ್ಚ್ 7, 2025

ಶಾಸ್ತ್ರೀಯ ಕನ್ನಡ ಅಧ್ಯಯನದ ಅಂತಾರಾಷ್ಟ್ರೀಯ ಶಿಬಿರ ೨೭-೨೯ ಸೆಪ್ಟೆಂಬರ್‌೨೦೨೪

ಅಕ್ಟೋಬರ್ 2, 2024