ರಾಮಧಾನ್ಯ ಕಾರಿತ್ರೆ
ಶ್ರೀ ರಮಾಪತಿ ಸಿಂಧುಶಯನ ಮುರಾರಿ ಮುನಿಕುಲ ಪೂಜಿತಾಂಘ್ರಿ ಸರೋರುಹಾಕ್ಷ ಸುದರ್ಶನಾಂಕಿತ ದೇವ ಭವದೂರಮಾರಪಿತ ಕೌಸಲಾದೇವಿ ಕುಮಾರ ರಘುಕುಲ ರಾಮನೃಪ ವರಪೌರಚೆನ್ನಿಗರಾಯ ಪಾಲಿಸು ಸಕಲ ಸಜ್ಜನರ
ಗಿರಿಜೆಯರಸನ ಭಜಿಸಿ ಲಕ್ಷ್ಮೀವರನ ಪಾದಾಂಬುಜಕೆ ವಂದಿಸಿಕರಿಮುಖನ ಬಲಗೊಂಡು ಗೀರ್ವಾಣಿಗೆ ನಮಸ್ಕರಿಸಿಗುರುವಿನಂಘ್ರಿಗೆ ನಮಿಸಿ ಸತ್ಕವಿವರರ ಮನದಲಿ ನೆನೆದು ವರಪುರದರಸನನು ಕೊಂಡಾಡಿ ಪೇಳುವೆನೀ ಮಹಾಕಥೆಯ
ರಾಮಧಾನ್ಯದ ಕೃತಿಯನು ಜನಸ್ತೋಮವೆಲ್ಲಾದರಿಸುವಂದದಿಭೂಮಿಗಚ್ಚರಿಯಾಗಿ ಪೇಳುವೆನೀ ಮಹಾಕಥೆಯಪ್ರೇಮದಿಂದಾದರಿಸಿ ಕೇಳ್ದ ಸನಾಮರಿಗೆ ಸತ್ಕರುಣದಲಿ ರಘುರಾಮ ಪಾಲಿಸಿಕೊಡುವ ಮನದಲಿ ಇಷ್ಟಸಂಪದವ
ಧರೆಯನೆಲ್ಲವ ಸೋತು ಜೂಜಲಿಕುರುಪತಿಗೆ ಕೈದಳಿಸಿ ತಮ್ಮಂದಿರು ಸಹಿತ ಧರ್ಮಜನು ಕಾಮ್ಯಕ ವನದೊಳಿರುತಿರಲುಪರಮಋಷಿ ಶಾಂಡಿಲ್ಯಮುನಿ ಸತ್ಕರುಣದಲಿ ನಡೆತಂದನಲ್ಲಿಗೆವರ ತಪೋಧನರೊಡನೆ ಕಾಣಿಸಿಕೊಂಡನುಚಿತದಲಿ
ಧರಣಿಪತಿ ಯಮಸೂನು ತಮ್ಮಂದಿರು ಸಹಿತಲಿದಿರೆದ್ದು ಮುನಿಪನಚರಣಕಾನತನಾಗಿ ಕೈ ಮುಗಿದಿರಲು ಧರ್ಮಜನಕರೆದು ಲಾಲಿಸಿ ಕುಳ್ಳಿರಿಸಿ ಸತ್ಕರುಣದಲಿ ಮುನಿ ನುಡಿದನೆಲೆ ನೃಪಸಿರಿ ದರಿದ್ರತೆ ನಿಲದು ಪರಿಹರವಹುದು ಕೇಳೆಂದ
ದೇವ ಋಷಿಗಳು ನಿಮ್ಮ ಕರುಣಾಭಾವವೆಮ್ಮಲ್ಲಿರಲು ನಮಗಿನ್ನಾವ ಕಷ್ಟದ ಬಳಕೆದೋರದು ನಿಮ್ಮ ದರುಶನದಿಪಾವನರು ನಾವಾದೆವೆಮಗಿನ್ನಾವ ಬುದ್ಧಿ ಯನರುಹುವಿರಿಯದನೀವು ಪೇಳೆನೆ ನಸುನಗುತ ಮುನಿನಾಥನಿಂತೆಂದ
ಧಾರುಣಿಯೊಳರಸುಗಳು ನಾಲ್ವರುಭೂರಿ ಸತ್ಯವ್ರತರು ನಳನೃಪಧೀರ ರಾಮ ಯುಧಿಷ್ಠಿರ ಹರಿಶ್ಚಂದ್ರರಿವರೆಂದುಸಾರುತಿದೆ ಜಗವೆಲ್ಲ ನಿಮ್ಮನುದಾರನಿದರೊಳು ರಘುಪತಿಯ ಗುಣಹಾರ ಧರ್ಮವ ಪಾಲಿಸಿದ ನರೆದಲೆಗ ವ್ರಿಹಿಯರಿಗೆ
ಎನಲು ರಾಮಚರಿತ್ರೆಯನು ನೀವೆನಗೆ ಪೇಳಿದಡಾಲಿಸುವೆನೆನೆಮನದೊಳಗೆ ನಸುನಗುತ ಶಾಂಡಿಲ್ಯನು ಯುಧಿಷ್ಠಿರಗೆಅನುನಯದೊಳಾದರಿಸಿ ರಘುನಂದನನ ಚರಿತೆಯನರುಹಿ ಭೂಪನಮನಸಿನಲ್ಲಿರುವಂತೆ ವಿಸ್ತರಿಸಿದ ಮಹಾಕಥೆಯ
ಕೇಳು ಕುಂತೀತನಯ ಗಂಗಾಕೂಲದುತ್ತರ ಭಾಗದಲಿ ವಿಶಾಲ ವಿಭವದೊಳೆಸೆವಯೋಧ್ಯಾನಗರವಾ ಪುರವಪಾಲಿಸುವ ದಿನಕರ ಕುಲಾನ್ಪಯಶೀಲ ದಶರಥನಾ ಮಹೀಲೋಲಲೋಚನೆ ಕೌಸಲ್ಯೆ ದೇವಿ ಸುಮಿತ್ರೆ ಕೈಕೆಯರು
ದಶರಥಗೆ ಕೌಸಲೆಗೆ ಜನಿಸಿದರಸಿಕ ಗುಣನಿಧಿ ರಾಮನೃಪನಾಅಸುರೆ ತಾಟಿಕಿಯೊರಸಿ ಮಾರೀಚನ ಸುಬಾಹುವನುಕುಸುರಿದರಿದಾ ಮುನಿಮಖವ ರಕ್ಷಿಸಿಯಹಲ್ಯಾಶಾಪವನು ಖಂಡಿಸಿ ನಿಜಾನುಜ ಮುನಿಪಸಹಿತಾ ಮಿಥಿಳೆಗೈದಿದನು
ಹರನ ಧನುವೇರಿಸಿದ ಸೀತೆಯವರಮುಹೂರ್ತದಿ ವರಿಸಿ ತಮ್ಮಂದಿರು ನಿಜಾಂಗನೆ ಸಹಿತ ಮಿಥಿಳಾಪುರದ ಹೊರವಂಟಬರುತ ಮಾರ್ಗಾಂತರದಿ ಕಂಡನುಪರಶುರಾಮನ ಗೆಲಿದಯೋಧ್ಯಾಪುರವ ಹೊಕ್ಕನು ರಾಜತೇಜದಿ ಸುರರು ನಲಿದಾಡೆ
ಕೇಳು ಧರ್ಮಜ ನಿಮ್ಮವೋಲ್ ವಿಪಿನಾಲಯದ ಸಿರಿ ಸಂಭವಿಸೆ ಜನಪಾಲ ರಾಮನು ಪಿತೃ ವಚನ ಪಾಲನೆಯ ನೇಮದಲಿಬಾಲಕಿಯನೊಡಗೊಂಡು ಸತ್ಯವಪಾಲಿಸುತ ಲಕ್ಷ್ಮಣನ ಕೂಡೆ ನಿಜಾಲಯವ ಹೊರವಂಟು ಹೊಕ್ಕನು ಘೋರ ಕಾನನವ
ಭರತನನು ಸಂತೈಸಿ ಕಾಕಾಸುರನ ಪ್ರಾಣವ ಕಾಯ್ದು ದಾನವತರುಣಿ ನಾಸಿಕವರಿದು ಮಾಯಾಮೃಗವ ಸಂಹರಿಸಿಸರಸಿಜಾಕ್ಷಿಯನಗಲಿ ಮಾರ್ಗಾಂತರದಿ ಕಂಡ ಜಟಾಯುವನು ಮನಮರುಗಿ ವೃತ್ತಾಂತವನು ತಿಳಿದವನಲ್ಲಿ ಗತಿಗೊಳಿಸಿ
ಅಲ್ಲಿ ಶೋಕೋದ್ರೇಕದಲಿ ಕರಪಲ್ಲವದ ಕದಪಿನಲಿ ಊರ್ಮಿಳೆವಲ್ಲಭನನೊಡಗೊಂಡು ಕಿಷ್ಕಿಂಧಾದ್ರಿಗೈತಂದುಅಲ್ಲಿ ಸಂಭಾಷಿಸಿದ ರವಿಸುತನಲ್ಲಿ ವಾಲಿಯ ಮಡುಹಿ ವಾನರರೆಲ್ಲರನು ಕೈಕೊಂಡು ನಡೆದನು ಮುಂದೆ ದಕ್ಷಿಣಕೆ
ವಾರುಧಿಯ ಬಂಧಿಸಿದ ಸೇನಾಭಾರದಲಿ ನಡೆತಂದು ಲಂಕೆಯಸೇರಿ ಮುತ್ತಿಗೆವಿಡಿದು ರಾವಣ ಕುಂಭಕರ್ಣರನುಭೂರಿಬಾಣದೊಳೊರಸಿ ದಾನವವೀರರನು ಪರಿಹರಿಸಿ ರಘುನೃಪತಾರಣನು ಪಟ್ಟವನು ಕಟ್ಟಿದನಾ ವಿಭೀಷಣಗೆ
ಧರಣಿಸುತೆಯನು ಕರೆಸಿ ದೇವಾಸುರರುಲಿಯಲು ವಿಭೀಷಣಗೆ ವಿಸ್ತರಿಸಿ ಪೇಳಿದ ಪುರಕೆ ಪಯಣವಮಾಡು ನೀನೆನಲುಕರೆಸಿದನು ನಿಜಮಂತ್ರಿ ಕರಿರಥತುರಗ ಪಾಯ್ದಳವಾಕ್ಷಣವೆನೆರೆದುದಗಣಿತ ವೀರದಾನವ ಸೇನೆ ನಿಮಿಷದಲಿ
ಹರುಷದಲಿ ತರಿಸಿದ ಕುಬೇರನವರ ರಥವ ಮೇಳೈಸಿ ದೇವರಸಿರಿಪದಾಂಬುಜಕರ್ಪಿಸಲು ಶ್ರೀರಾಮ ನಸುನಗುತಕರೆಸಿ ಲಕ್ಷ್ಮಣದೇವನನು ನಿಜತರುಣಿ ಸಹಿತೇರಿದ ವರೂಢವತರಣಿಸುತ ಹನುಮಂತ ಜಾಂಬವರೈದಿತೊಗ್ಗಿನಲಿ
ಅಂಗದನು ನಳನೀಲ ಶತಬಲಿತುಂಗ ವಿಕ್ರಮ ಸುಷೇಣನಾ ಪ್ಲವಂಗ ಗವಯ ಗವಾಕ್ಷ ಮೊದಲಾದಖಿಳ ವಾನರರುಸಂಗಡಿಸಿ ನೆರೆದುದು ಮಹಾಸಮರಂಗವೀರರು ಮೋಹಿಸಿದ ರಘುಪುಂಗವನ ರಥದೊಡನೆ ನಡೆದುದು ಮುಂದೆ ಸಂದಣಿಸಿ
ಧಾರುಣೀಪತಿ ಕೇಳು ಲಂಕೆಯವೀರದಾನವ ಭಟರು ಪುರಜನಪೌರಜನ ಸಹಿತಾ ವಿಭೀಷಣನೊಡನೆ ಮೇಳೈಸಿಭೂರಿಬಲವೈತರುತಲಿರೆ ರಣಭೇರಿ ದಂಧಣಧಣರೆನಲು ಮಿಗೆಚೀರಿದವು ಕಹಳೆಗಳು ದಿಕ್ಪಾಲಕರ ಬೆದರಿಸಿತು
ತಡೆಯದೈತಂದುಭಯಬಲ ಸಂಗಡಿಸಿ ಬರುತಿರೆ ಮುಂದೆ ಸೇತುವಮಡದಿಗೆಲ್ಲವ ತೋರಿಸುತ ನೆರೆ ಕಡಲ ದಾಂಟಿದರುನಡೆದು ರಾಮೇಶ್ವರದ ಬಳಿಯಲಿಮೃಡನ ಪೂಜಿಸಿ ಭಕ್ತಿಭಾವದಸಡಗರದಿ ವಾಲ್ಮೀಕಿಯಾಶ್ರಮಕೈದಿದನು ನೃಪತಿ
ಅಲ್ಲಿ ನೆರೆದ ಮಹಾಮುನೀಶ್ವರರೆಲ್ಲರನು ಸತ್ಕರಿಸಿ ಜಾನಕಿವಲ್ಲಭನು ನಡೆತಂದನಾ ಮುಚುಕುಂದನಾಶ್ರಮಕೆಸಡಿಲದುನ್ನತ ಬಲಸಮೇತದಿಕಡಲ ಕಂಡನು ಪಂಚನದಿಯೊಳ್‌ಬಿಡದೆ ಪಲ್ಲೈಸಿರುವ ಫಲ ವಸ್ತುಗಳ ಸಂಭ್ರಮದಿ
ಆ ಮಹಾವನದೊಳಗೆ ಸುಭಟಸ್ತೋಮವಿಳಿದುದು ಪಾಳೆಯದ ಸಂಗ್ರಾಮದಿದಿರಲಿ ಗುಡಿಗುಡಾರಂಗಳು ವಿರಾಜಿಸಿತುರಾಮಣೀಯಕ ರಚನೆಯಲಿ ಸುತ್ರಾಮನೋಲಗದಂತೆ ರಘುಕುಲರಾಮನೈದಿರೆ ಬಂದು ಕಂಡರು ಸಕಲ ಮುನಿವರರು
ಕೌಶಿಕನು ಜಮದಗ್ನಿ ಜಹ್ನು ಪರಾಶರನು ಜಾಬಾಲಿ ಭೃಗು ದೂರ್ವಾಸ ಗೌತಮನಾದಿಯಾದ ಸಮಸ್ತ ಮುನಿವರರುಭಾಸುರದ ತೇಜದಲಿ ತಮ್ಮ ನಿವಾಸವನು ಹೊರವಂಟು ಬಂದರುದಾಶರಥಿಯನು ಕಂಡು ಹುಸಿದರಕ್ಷತೆಯ ತಳಿದು
ರಾಮ ದಶರಥ ತನಯ ರಘುಕುಲಸೋಮ ಸನ್ನುತ ನಾಮನಾಹವಭೀಮ ಸುಜನ ಪ್ರೇಮ ಜಗದಭಿರಾಮ ನಿಸ್ಸೀಮತಾಮರಸದಳ ನಯನ ದೇವಪ್ರೇಮ ಸುರಕುಲ ಮೌಳಿವಂದಿತಪ್ರೇಮದಿಂದಲಿ ಪಾಲಿಸೆನ್ನುತಲವರು ಪೊಗಳಿದರು
ದೇವಿ ಜಾನಕಿಸಹಿತ ವನದಲಿನೀವು ಕಷ್ಟವ ಬಳಸಿ ಭಕ್ತರಕಾವ ಹದನನು ನೆನೆದು ವಾನರ ಬಲಸಮೇತದಲಿರಾವಣನ ಸಂಹರಿಸಿ ಲಂಕೆಯನಾ ವಿಭೀಷಣಗಿತ್ತು ನಮ್ಮನುದೇವ ಪಾಲಿಸೆ ಬಂದೆಯೆಂದುಪಚರಿಸಿದರು ನೃಪನ
ಸಾರಹೃದಯರು ನೀವು ನಮಗುಪಚಾರವೇಕಿದು ನಿಮ್ಮಡಿಯ ಕರುಣಾರಸವೆ ಸಲಹುವುದು ನಮ್ಮನು ಸಾಕದಂತಿರಲಿಆರಿಗುಂಟಿದು ನಿಮ್ಮ ದರುಶನಸೇರಿತೆಮಗಿಂದಿಸಲಿ ಯೆಂದುಪಚಾರದಿಂ ಸತ್ಕರಿಸಿ ಕುಳ್ಳಿರಿಸಿದನು ಮುನಿವರರ
ಎಡದ ಕಡೆಯಲಿ ಕಪಿಕುಲೇಂದ್ರನಗಡಣ ಬಲದಲಿ ರಾವಣಾನುಜಸಡಗರದಿ ಮುನಿನಿಕರವಿದಿರಲಿ ಹಿಂದೆ ವಾನರರುಮಡದಿ ಲಕ್ಷ್ಮಣ ದೇವರಿರ್ವರುಬಿಡದೆ ಚಿಮ್ಮಲು ಚಾಮರಂಗಳಪೊಡವಿಪತಿ ಶ್ರೀರಾಮ ಸಿಂಹಾಸನದಿ ರಂಜಿಸಿದ
ಅಲ್ಲಿ ನೆರೆದ ಮಹಾಮುನೀಶ್ವರರೆಲ್ಲ ತರಿಸಿದರಖಿಳ ವಸ್ತುವಬೆಲ್ಲ ಸಕ್ಕರೆ ಜೇನುತುಪ್ಪ ರಸಾಯನಂಗಳಲಿಭುಲ್ಲವಿಸಿ ರಚಿಸಿದ ಸುಭಕ್ಷಗಳೆಲ್ಲವನು ತುಂಬಿದರು ಹೆಡಗೆಗಳಲ್ಲಿ ಜೋಡಿಸಿ ಹೊರಿಸಿ ತಂದರು ರಾಮನೋಲಗಕೆ
ತಂದು ಶಿಷ್ಯರು ಭಕ್ಷ್ಯಗಳ ಮುದದಿಂದ ಸುರಿಯಲು ನೋಡಿ ನಸುನಗೆಯಿಂದ ರಘುಕುಲಸಾರ್ವಭೌಮನು ಕರೆಸಿ ನಿಜಬಲಕೆಅಂದು ಕೊಡಿಸಲು ನೋಡಿದರು ರುಚಿಯಿಂದ ಸವಿದರು ಪೂಜೆಗಳನಾನಂದದಲಿ ಕೊಂಡಾಡಿದರು ವಾನರರು ಮುನಿವರರ
ಅನಿಲಸುತ ಬಾರೆಂದು ರಘುನಂದನನು ಕರುಣದೊಳಿದರ ರುಚಿಯೆಂತೆನಲು ಕರಗಳ ಮುಗಿದು ಬಿನ್ನೈಸಿದನು ರಘುಪತಿಗೆಇನಕುಲಾನ್ವಯತಿಲಕ ಚಿತ್ತೈಸೆನಗೆ ಸವಿಯಹುದಿನ್ನು ಧಾನ್ಯದತನುವನೀಕ್ಷಿಸಬೇಕು ದೇವರು ತರಿಸಿ ನೀವೆಂದ
ಎನಲು ರಾಮನೃಪಾಲ ಗೌತಮಮುನಿಯನೀಕ್ಷಿಸಿ ಬೇಕು ಸಲೆ ತರಿಸೆನಲು ಧಾನ್ಯವನೊಡನೆ ಯಾಲೋಚಿಸಿದರೀ ಹದನಮನನಲಿದು ತಂತಮ್ಮಶಿಷ್ಯರವಿನಯದಿಂದಲಿ ಕರೆಸಿ ತಾರೆಂದೆನಲು ಮೆರೆದರು ತಳುವದವರನು ತಂದು ಸಭೆಯೊಳಗೆ
ನರೆದಲೆಗನಿದು ನೆಲ್ಲು ಹಾರಕಬರಗು ಜೋಳವು ಕಂಬು ಸಾಮೆಯುಉರುತರದ ನವಣೆಯಿದು ನವಧಾನ್ಯವೆಂದೆನಲುಮೆರೆವ ರಾಶಿಯ ಕಂಡು ಇದರೊಳುಪರಮಸಾರದ ಹೃದಯನಾರೆಂದರಸಿ ಕೇಳಿದನಲ್ಲಿರುತಿಹ ಮಹಾಮುನೀಶ್ವರರ
ಕೆಲರು ಗೋಧಿಯ ಸಾಮೆಯನು ಕೆಲಕೆಲರು ನವಣೆಯ ಕಂಬು ಜೋಳವಕೆಲರು ಹಾರಕನೆಂದು ಕೆಲವರು ನೆಲ್ಲನತಿಶಯವಕೆಲರು ನರೆದಲಗನನು ಪತಿಕರಿಸಲದ ನೋಡಿದ ನೃಪತಿಯದರೊಳುಹಲವು ಮತವೇಕೊಂದನೇ ಪೇಳೆನಲು ಗೌತಮನು
ದಾಶರಥಿ ಚಿತ್ತೈಸು ನಮ್ಮಯದೇಶಕತಿಶಯ ನರೆದಲೆಗನೇವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲುಲೇಸನಾಡಿದೆ ಮುನಿಪ ಗೌತಮದೋಷರಹಿತನು ಪಕ್ಷಪಾತವನೀಸು ಪರಿಯಲಿ ಮಾಡುವರೆ ಶಿವಯೆಂದನಾ ವ್ರಿಹಿಗ
ಎಲ್ಲ ಧರ್ಮದ ಸಾರವನು ನೀವ್ಬಲ್ಲಿರರಿಯದೆ ಯೆಲ್ಲರನು ನೀವಿಲ್ಲಿ ನುಡಿವ ಯುಪೇಕ್ಷೆಯುಂಟೇ ಸಾಕದಂತಿರಲಿನೆಲ್ಲು ನಾನಿರೆ ಗೋಧಿ ಮೊದಲಾದೆಲ್ಲ ಧಾನ್ಯಗಳಿರಲುಯಿದರಲಿಬಲ್ಲಿದನು ನರೆದಲೆಗನೆಂಬುದಿದಾವ ಮತವೆಂದ
ಏನೆಲವೊ ನರೆದಲೆಗ ನೀನು ಸಮಾನನೇ ಯೆನಗಿಲ್ಲಿ ನಮ್ಮನುದಾನವಾಂತಕ ಬಲ್ಲನಿಬ್ಬರ ಹೆಚ್ಚು ಕುಂದುಗಳಜಾನಕೀಪತಿಯ ಸನಿಹದಲಿ ಕುಲಹೀನ ನೀನು ಪ್ರತಿಷ್ಠ ಸುಡು ಮತಿಹೀನ ನೀನೆಂದೆನುತ ಖತಿಯಲಿ ಬೈದು ಭಂಗಿಸಿದ
ಲೋಕದಲಧಿಕ ಭೋಜನವಿದೆಂದಾಕೆವಾಳರು ಬುಧರು ಜರೆದು ನಿರಾಕರಿಸಿ ಬಿಡಲಂತು ನೀ ಶೂದ್ರಾನ್ನವಾದೆಯಲನಾಕನಿಳೆಯರು ಸಾಕ್ಷಿ ನಿನ್ನ ವಿವೇಕಿಗಳು ಮೆಚ್ಚುವರೆ ಬಾಹಿರಸಾಕು ನಡೆ ನೀನಾವ ಮಾನ್ಯನು ಕಡೆಗೆ ತೊಲಗೆಂದ
ಕ್ಷಿತಿಯಮರರುಪನಯನದಲಿ ಸುವ್ರತ ಸುಭೋಜನ ಪರಮ ಮಂತ್ರಾಕ್ಷತೆಗಳಲಿ ಶುಭಶೋಭನದಲಾರತಿಗೆ ಹಿರಿಯರಲಿಕ್ರತುಗಳೆಡೆಯೊಳಗರಮನೆಯಲಿಪ್ರತಿದಿನವು ರಂಜಿಸುತ ದೇವರಿಗತಿಶಯದ ನೈವೇದ್ಯ ತಾನಹೆನೆಂದನಾ ವ್ರಿಹಿಗ
ಜನಪರಿಗೆ ಶಿಶುಗಳಿಗೆ ಬಾಂಧವಜನರೆಡೆಗೆ ಬ್ರಹ್ಮರ ಸಮಾರಾಧನೆಗೆ ವಿದ್ಯಾರಂಭ ಕಾಲಕೆ ಸಕಲ ಭೂಸುರರಮನೆಗಳಲಿ ಹರಿದಿವಸದೌಪಾಸನೆಗಳಲಿ ತಾ ಯೋಗ್ಯ ನಹುದೆಂದೆನಿಸಿಕೊಂಬೆನು ನೀನಯೋಗ್ಯನು ಭ್ರಷ್ಟ ತೊಲಗೆಂದ
ಹೊಸ ಮನೆಯ ಪುಣ್ಯಾರ್ಚನೆಗೆ ಮಿಗೆಯೆಸೆವ ಮದುಮಕ್ಕಳಿಗೆ ಸೇಸೆಗೆವಸುಮತೀಶರ ಗರುಡಿಯಲಿ ಶಸ್ತ್ರಾಸ್ತ್ರದರ್ಚನೆಗೆಎಸೆವ ವಿಪ್ರರ ಫಾಲದಲಿ ರಂಜಿಸುವ ಗಂಧಾಕ್ಷತೆಯಹೆನು ಭಾವಿಸಲು ಲೋಕದೊಳಾರು ಸರಿಯಿಂತೆಂದನಾ ವ್ರಿಹಿಗ
ಧರಣಿಯಮರರು ಮಂತ್ರ ತಂತ್ರೋಚ್ಚರಣೆಯಲಿ ಹಸ್ತಾಂಬುಜದಿ ಮಿಗೆಹರಸಿ ಕೊಡಲಕ್ಷತೆಯ ಮಂಡೆಯೊಳಾಂತ ಮಹಿಮರಿಗೆದುರಿತ ದುಃಖ ವಿನಾಶ ಮಂಗಳಕರವಹುದು ತಾನೀವೆ ಸಂತತಸಿರಿಯ ಸಂಪತ್ತಾಯುವನು ಕೇಳೆಂದನಾ ವ್ರಿಹಿಗ
ಪರಿಮಳದ ಚಂದನದ ತರುವಿಗೆಸರಿಯೆ ಒಣಗಿದ ಕಾಷ್ಠ ಗೋವದುಕರೆದ ಹಾಲಿಗೆ ಕುರಿಯ ಹಾಲಂತರವೆ ಭಾವಿಸಲುಪರಮ ಸಾಹಸಿ ವೀರ ಹನುಮಗೆಮರದ ಮೇಲಣ ಕಪಿಯು ತಾನಂತರವೆ ಘಡ ನೀನೆನಗೆ ಸರಿಯೇ ಭ್ರಷ್ಟ ತೊಲಗೆಂದ
ಸುರನದಿಗೆ ತಾ ಸರಿಯೆ ಕಾಡೊಳುಹರಿವ ಹಳ್ಳದ ನೀರು ಗರುಡನಮರಿಗೆ ಹದ್ದಂತರವೆ ಹಂಸಗೆ ಬಕನು ಹೋಲುವುದೆಸರಸ ಮರಿ ಕೋಗಿಲೆಗೆ ವಾಯಸನಣಕಿಸುವ ತೆರನಾಯ್ತು ಸಾಕಿನ್ನರೆದಲೆಗ ನೀನಾವ ಮಾನ್ಯನು ಕಡೆಗೆ ತೊಲಗೆಂದ
ನುಡಿಯ ಕೇಳುತ ಕನಲಿ ಕಂಗಳುಕಿಡಿಮಸಗಿ ಖತಿಗೊಂಡು ನುಡಿದನುಸಿಡಿಲ ಗರ್ಜನೆಯಂತೆ ಸಭೆಯಲಿ ಜರೆದನಾ ವ್ರಿಹಿಯನುಡಿಗೆ ಹೇಸದ ಭಂಡ ನಿನ್ನೊಳುಕೊಡುವರೇ ಮಾರುತ್ತರವ ಕಡುಜಡನಲಾ ನಿನ್ನೊಡನೆ ಮಾತೇಕೆಂದ ನರೆದಲೆಗ
ಸತ್ಯಹೀನನು ಬಡವರನು ಕಣ್ಣೆತ್ತಿ ನೋಡೆ ಧನಾಢ್ಯರನು ಬೆಂಬತ್ತಿ ನಡೆವ ಉಪೇಕ್ಷೆ ನಿನ್ನದು ಹೇಳಲೇನದನುಹೆತ್ತ ಬಾಣಂತಿಯರು ರೋಗಿಗೆಪತ್ಯ ನೀನಹೆ ಹೆಣದ ಬಾಯಿಗೆತುತ್ತು ನೀನಹೆ ನಿನ್ನ ಜನ್ಮ ನಿರರ್ಥಕರವೆಂದ
ಸತ್ತದಿನದಾರಭ್ಯ ಮನುಜರುಮತ್ತೆ ಕರ್ಮವ ಹೊತ್ತು ಪಿಂಡವನಿತ್ತು ತಪ್ಪದೆ ಮತ್ತೆ ವಾಯಸಕುಲವ ಕರೆಕರೆದುತುತ್ತನಿಡುವರು ಎಳ್ಳು ದರ್ಭೆಗೆತೆತ್ತಿಗನು ನೀನಾದೆ ಕೀರ್ತಿಯಹೊತ್ತುಕೊಂಡೆ ದುರಾತ್ಮ ನಿನ್ನೊಳು ಮಾತದೇಕೆಂದ
ಮಳೆದೆಗೆದು ಬೆಳೆಯಡಗಿ ಕ್ಷಾಮದವಿಲಯಕಾಲದೊಳನ್ನವಿಲ್ಲದೆಅಳಿವ ಪ್ರಾಣಿಗಳಾದರಿಸಿ ಸಲಹುವೆನು ಜಗವರಿಯೆಎಲವೊ ನೀನೆಲ್ಲಿಹೆಯೊ ನಿನ್ನಯಬಳಗವದು ತಾನೆಲ್ಲಿಹುದು ಈಹಲವು ಹುಲು ಧಾನ್ಯಗಳೆನಗೆ ಸರಿದೊರೆಯೆ ಕೇಳೆಂದ
ಬಲ್ಲಿದರು ಬರೆ ಬಡವರಲಿ ನಿನ್ನಲ್ಲಿಯುಂಟು ಉಪೇಕ್ಪೆ ನಮ್ಮಲಿಸಲ್ಲದೀ ಪರಿ ಪಕ್ಷಪಾತವದಿಲ್ಲ ಭಾವಿಸಲುಬಲ್ಲಿದರು ಬಡವರುಗಳೆನ್ನದೆಎಲ್ಲರನು ರಕ್ಷಿಸುವೆ ನಿರ್ದಯನಲ್ಲ ತಾ ನಿನ್ನಂತೆ ಎಲೆ ಕುಟಲಾತ್ಮ ಹೋಗೆಂದ
ನಾನೆಲೈ ಲೋಕದಲಿ ನಿರ್ದಯನು ಬಳಿಕೇನಲೈ ಸದ್ಧರ್ಮದಲಿ ಮಧುಪಾನವಾದೆಯಲಾ ದುರಾತ್ಮಕ ನಿನ್ನ ಸೇವಿಸಿದದಾನವರು ಮಾನವ ಕಿರಾತರುಜ್ಞಾನವಳಿದು ವಿಕಾರದಲಿ ಮತಿಹೀನರಾದರು ನಿನ್ನ ಗುಣವೇನೆಂದನಾ ವ್ರಿಹಿಗ
ಆಡಬಹುದತಿಶಯವ ನೀ ಕೊಂಡಾಡಿ ಕೊಂಬರೆ ಸಾಕು ಸಜ್ಜನರಾಡಿದರೆ ಪತಿಕರಿಸಿ ಲಜ್ಜೆಗೆ ಸಿರವ ಬಾಗುವರುನೋಡಿರೈ ಸಭೆಯವರು ದುರ್ಮತಿಗೇಡಿ ಇವನಾಡುವದ ನಾವಿನ್ನಾಡಿದರೆ ಹುರುಳಿಲ್ಲ ಶಿವಶಿವಯೆಂದ ನರೆದಲೆಗ
ಸತ್ತವರ ಪ್ರತಿಬಿಂಬರೂಪನುಬಿತ್ತರಿಸಿ ಪಿತೃನಾಮಗಳ ನಿನಗಿತ್ತು ಮೂವರ ಪೆಸರಿನಲಿ ಕರಕರೆದು ದರ್ಭೆಯಲಿನೆತ್ತಿಯನು ಬಡಿ ಬಡಿದು ಕಡೆಯಲಿತುತ್ತನಿಡುವರು ಪಶುಗಳಿಗೆ ನೀನೆತ್ತಿದೆಯೆಲಾ ತನುವ ಸುಡಬೇಕೆಂದ ನರೆದಲೆಗ
ಏನಿಹಿರಿ ಹಿರಿ ಕಿರಿದ ನುಡಿಯದೆಮೌನದೀಕ್ಷಿತರಾದಿರಲ ಕಂಡೇನು ಮುರಿದಾಡುವಿರಸಾಧ್ಯವೊ ಸಾಧ್ಯವೋ ನಿಮಗೆಈ ನಪುಂಸಕನಲಿ ನಿರಂತರವೇನು ಕಾರಣ ವಾದವಿದು ನಮಗೇನು ಬುದ್ಧಿಯನರುಹುವಿರಿ ಪೇಳೆಂದ ನರೆದಲೆಗ
ಮಸೆದುದಿತ್ತಂಡಕ್ಕೆ ಮತ್ಸರಪಿಸುಣ ಬಲರತಿ ನಿಷ್ಠುರರು ವಾದಿಸಲು ಕಂಡನು ನೃಪತಿ ಮನದಲಿ ನೋಡಿ ನಸುನಗುತಹಿಸುಣರಿನದಿರ ಮತ್ಸರವ ಮಾಣಿಸುವ ಹದನೇನೆನುತ ಯೋಚಿಸಿದಸುರಮುನಿಪರ ನೋಡೆ ಗೌತಮ ಮುನಿಪನಿಂತೆಂದ
ಅರಸುಗಳು ನಾವೆಲ್ಲ ಭೂಮೀಸುರರು ನೆರದಿಹ ದಾನವರು ವಾನರರು ನಮಗೀ ನ್ಯಾಯವನು ಪರಿಹರಿಸಲಳವಲ್ಲಕರೆಸುವೆವು ಹರಿಹರವಿರಿಂಚಾದ್ಯರನಯೋಧ್ಯೆಗೆಅವರ ಗುಣವಾಧರಿಸಿ ಪೇಳ್ವರು ನಯದೊಳೆಂದನು ರಾಮ ನಸುನಗುತ
ಪರಮ ಧಾನ್ಯದೊಳಿಬ್ಬರೇ ಇವರಿರಲಿ ಸೆರೆಯೊಳಗಾರು ತಿಂಗಳುಹಿರಿದು ಕಿರಿದೆಂಬಿವರ ಪೌರುಷವರಿಯ ಬಹುದಿನ್ನುಪುರಕೆ ಗಮನಿಸಿ ನಾವು ನಿಮ್ಮನುಕರೆಸುವೆವು ಕೇಳೆನುತಯೋಧ್ಯಾಪುರಿಗೆ ಪಯಣವ ಮಾಡಹೇಳಿದನಾ ವಿಭೀಷಣಗೆ
ಸೆರೆಗೆ ನಮ್ಮನು ನೂಕಿ ದೇವರುಸಿರಿಯ ಮದದಲಿ ಕಳೆದರೆಮ್ಮನುಮರದುಸಲಹುವರಾರು ನಿಮ್ಮಯ ಕರುಣ ಹೊರತಾಗಿಧರೆಯೊಳಿನ್ನಪಕೀರ್ತಿ ನಾರಿಯಸೆರಗ ಹಿಡಿವುದೆ ಲೇಸೆನುತತವೆಕರಮುಗಿದು ತಲೆಗುತ್ತಿಪೇಳಿದನಾಗ ನರೆದಲೆಗ
ಆಗಲದಕೇನೆಂದು ಕರುಣಾಸಾಗರನು ಬೀಳ್ಕೊಟ್ಟ ನವರನುಯೋಗಿಗಳ ವಶಮಾಡಿ ಗೌತಮಮುನಿಯನುಪಚರಿಸಿರಾಗ ಮಿಗೆ ಮುನಿವರರನಲ್ಲಿ ಸರಾಗದಿಂದಲೆ ಕಳುಹಿ ಬಳಿಕಾಯಾಗ ಸಂರಕ್ಷಕನು ವೀಳೆಯವಿತ್ತನನಿಬರಿಗೆ
ಹರದುದಾಕ್ಷಣದಲ್ಲಿ ವ್ಯೋಮದಿಸುರರು ಮಿಗೆ ಕೊಂಡಾಡೆ ಭೂಸುರವರರು ಕಳುಹಿಸಿಕೊಂಡು ಹೊಕ್ಕರು ತಮ್ಮ ಮಂದಿರವಹರುಷ ತಗ್ಗಿತು ತಾವರೆಗೆ ಮುಖವರಳಿದುವು ನೈದಿಲೆಗೆ ತಾರಕೆನೆರದುವಾಕಾಶದಲಿ ಅಸ್ತಾಂಬುಧಿಗೆ ಇನನಿಳಿದ
ನೆಗಳಿದುವು ಬೊಂಬಾಳದೀವಿಗೆಝಗಝಗಿಪ ನವರತ್ನದೊಡುಗೆಯಹೊಗರೊಗುವ ಕೈದುಗಳ ಸುಭಟರು ಮುಂದೆ ಸಂದಣಿಸೆನೆಗಹಿ ಕರಗಳ ಪಾಠಕರು ಬಿರುದುಗಳ ಹೊಗಳಲು ಚೀರಿದುವು ಕಹಳೆಗಳು ರಭಸದಿ ಬಂದು ಹೊಕ್ಕನು ನೃಪತಿಯರಮನೆಯ
ಗಗನಮಣಿ ದಿಗುತಟವ ಸಾರಲುಹೊಗರೊಗುವ ಬಲು ಕಾಳಗವು ಸಲೆಜಗವ ಮುಸುಕಲು ಜನರು ನಿದ್ರಾಂಗನೆಯ ಕೇಳಿಯಲಿದೃಗುಯುಗಳನೆವೆ ಬಿಗಿದಿರಲು ಮನವಿಗತಿವಡೆದಿರೆ ಧರೆಗೆ ದಿನಮಣಿಮೊಗವ ತೋರುವೆನೆನುತ ಪೂರ್ವಾಚಲಕೆ ನಡೆತಂದ
ಅರಸನುಪ್ಪವಡಿಸಿದ ಪೂರ್ವದತರಣಿಗರ್ಘ್ಯವ ಕೊಟ್ಟು ಭೂಸುರವರರ ಮಂತ್ರಾಕ್ಷತೆಯ ಕೈಗೊಂಡನನುಜನೊಡಗೂಡಿಹರುಷ ಮಿಗೆ ಪಾಠಕರ ಸಂದಣಿನೆರೆಯೆ ಮುನಿಕುಲದೊಡನೆ ನಿಜಮಂದಿರವ ಹೊರವಂಟವನಿಪತಿಯೋಲಗಕೆ ನಡೆತಂದ
ಕರೆಸಿದನು ರಾವಣನ ತಮ್ಮನತರಣಿಸುತ ನಳನೀಲ ಜಾಂಬವಶರಭ ಶತಬಲಿಯಾದಿ ಮುಖ್ಯ ಸಮಸ್ತ ವಾನರರಹರುಷ ಮಿಗೆ ಸತ್ಕರಿಸಿ ಮುಂದಕೆತೆರಳಬೇಕೆನೆ ವೀರಸುಭಟರುನೆರೆದುರುಬಿಕೈದುಗಳ ಜಡಿದಗ್ಗಳೆಯರೈದಿದರು
ಹೊಡೆವ ತಮ್ಮಟೆ ಭೇರಿ ಡಮರುಗಗಿಡಿಬಿಡಿ ಡೌಡೆ, ಡಿಂಡಿಮ ಢಕ್ಕೆನುಡಿವ ಶಂಖ ಮೃದಂಗ ಘನಸನಿಸ್ಸಾಳ ಮೊದಲಾದಬಡಿವ ನಾನಾ ವಾದ್ಯರವ ಭೋರಿಡಲು ಜಯರವದೊಡನೆ ರಘುನೃಪಮಡದಿ ಸಹಿತೇರಿದನು ಧನಪನ ದಿವ್ಯಮಣಿರಥವ
ಒಡನೆ ಏರಿದನೂರ್ಮಿಳಾಪತಿಬಿಡದೆ ಚಿಮ್ಮುವ ಚಾಮರವ ಸಾಲಿಡುತ ನಡೆದುದು ಸಕಲದಳ ಸುಗ್ರೀವನಾಜ್ಞೆಯಲಿಕಡುಮನದ ರಕ್ಕಸರು ಏರಿದರೊಡನೆ ಕರಿರಥತುರಗವನು ಪಡೆಕಡಲ ಜಲ ಮೊರೆವಂತೆ ಮೊರೆದುದು ನೃಪನ ಬಲಜಲಧಿ
ಕಳೆದು ಬಂದರು ಪಂಚನಂದಿಯಬಳಿಯಲೊಪ್ಪುವ ಪಂಚನದಿಗಳಹೊಳೆಯ ದಾಂಟುತ ಕಂಡು ಕಿಷ್ಕಿಂಧಾದ್ರಿಗೈತಂದುಲಲನೆ ಸೀತಾದೇವಿ ರವಿಜನಲಲನೆಯರ ತಾ ಕರೆಸಿ ತನ್ನೊಡನೊಲಿದು ಬರಬೇಕೆನಲು ಬಂದರು ದೇವಿಯರನೈದಿ
ಹೊಲಬುದಪ್ಪದೆ ಸಕಲ ನಾಯಕ.ದಳಸಹಿತ ಮುಂಬಟ್ಟೆಯಲಿ ಮುನಿಕುಲದ ದರುಶನವಾಗಲಾಶೀರ್ವಾದವನು ಕೊಂಡುಬಳಿವಿಡಿದು ಬರೆ ಜನರ ಪಾಪವಕಳೆದು ಸಲಹುವ ತುಂಗಭದ್ರೆಯಕಳೆದುಬಂದರು ಮುಂದೆ ಭಾರದ್ವಾಜನಾಶ್ರಮಕೆ
ಇಳಿದುದಾ ಬನದೊಳಗೆ ಪಾಳಯಬಳಸಿಬಿಟ್ಟುದು ಮೂರು ಯೋಜನದಳತೆಯಲಿ ಕಪಿಸೇನೆಯಾ ಮಧ್ಯದಲಿ ನೃಪಭವನಹಳದಿ ಕೆಂಪಿನ ನೀಲವರ್ಣದಚಳೆಯ ಪಟ್ಟೆಯಗುಡಿ ಗುಡಾರದಿಹೊಳೆವ ರತ್ನಗಳಿಂದ ಕಲಶದ ಸಾಲು ರಂಜಿಸಿತು
ಅರಮನೆಯ ಬಲವಂಕದಲಿ ನಿಜಶರಣನರಮನೆ ವಾಮಭಾಗದಿತರಣಿಸುತ ಸುಗ್ರೀವನಂಗದ ಜಾಂಬವಾದಿಗಳವರ ಭವನವೆಸೆದಿರಲು ಮೇಲುಪ್ಪರಿಗೆಗಳ ರಂಜಿಸಿ ಕವಾಟದಿಮೆರೆದುದಗ್ಗದ ನೀರ ರಾಮನ ಪಾಳ್ಯ ಬನದೊಳಗೆ
ಹೊರವಳಯದಲಿ ದಾನವರ ಬಲಶರಧಿಬಿಟ್ಟುದು ಬಳಸಿ ಸುತ್ತಲುಕರಿತುರಗ ರಥ ಪಾಯ್ದಳವು ಸಂದಣಿಸಿ ನಿಂದಿರಲುಮೊರೆವ ರಭಸವ ಕಂಡು ಸುರಮುನಿವರರಿದೇನೋಯೆನುತ ನಿಜಮಂದಿರವ ಹೊರವಂಟಲ್ಲಿ ಕೇಳ್ದರು ರಾಮನತಿಶಯವ
ಉರಗಮಾಲಿ ಮತಂಗ ಗಾರ್ಯ್ಗಾಂಗಿರಸ ಗಾಲವ ಕಣ್ವ ಜಯಮುನಿಪರಶುರಾಮ ಪರಾಶ ಕೌಶಿಕ ದಾಲ್ಭ್ಯ ಮೊದಲಾದವರಮುನಿಗಳೊಡನೈದಿ ಬಂದನುಭರದಿ ಭಾರದ್ವಾಜ ಮುನಿ ರಘುವರನ ಕಾಣಿಸಿಕೊಂಡು ಹರಸಿದರತುಳ ವಿಭವದಲಿ
ಬಂದ ಮುನಿಗವನೀಶ ವಂದಿಸಿನಿಂದು ಕರಗಳ ಮುಗಿದು ವಿನಯದೊಳೆಂದ ನಿಮ್ಮ ಸದಾಗ್ನಿ ಹೋತ್ರ ಸುಯಾಗ ಕರ್ಮಗಳುಸಂದ ಜಪತಪಗಳು ಸುರಕ್ಷಿತದಿಂದ ಮೆರೆವುದೆ ದಾನವರ ಭಯದಿಂದ ದುರ್ಘಟವಿಲ್ಲಲಾ ಮುನಿನಾಥ ಕೇಳೆಂದ
ದಶರಥಾತ್ಮಜ ನೀನು ಲಂಕೆಯೊಳಸುರ ವೀರರು ಕುಂಭಕರ್ಣನುದಶಶಿರನು ಮೊದಲಾದ ದುರ್ಜನರೆಲ್ಲರನು ಮಡುಹಿಅಸುರನನುಜಗೆಯಚಲ ಪದವಿಯನೊಸೆದು ಸಲಹಿದೆ ನಮ್ಮ ಕರುಣಾರಸದಿ ಪಾಲಿಸೆ ಬಂದೆಯೆಂದುಪಚರಿಸಿದನುನೃಪನ
ಕಮಲಸಂಭವನಿತ್ತ ವರದಲಿಕುಮತಿ ದಾನವರತುಳ ಬಲದಿಂದುರುಳ ಕಂಟಕರಾಗಿ ಮಡಿದರು ನಿನ್ನ ಬಾಣದಲಿತಮದ ಗಂಟಲನೊಡದು ಮೂಡುವದ್ಯುಮಣಿಯಂದದಿ ನೀವು ಜನಿಸಿರಲೆಮಗೆ ದನುಜಾಧಮರ ಭಯವೇನೆಂದನಾ ಮುನಿಪ
ಅರಸ ಕೇಳ್ದಾ ಮುನಿಯ ವಚನದಕರುಣರಸಧಾರೆಯಲಿ ಯಂತಃಕರಣ ನನದುಪಚರಿಸಿ ಕುಳ್ಳಿರಿಸಿದನು ಮುನಿವರರಮರುತಸುತನನು ಕರೆದು ತವಕದಿಭರತನನು ಸಂತೈಸು ಹೋಗೆಂದುರುತರದ ಪ್ರೇಮದಲಿ ಕಳುಹಿಸಲೆರಗಿ ಹೊರವಂಟ
ಹರಿವ ಗಂಗಾನದಿಯ ದಾಂಟುತಭರದಿ ಕಂಡನು ಶೃಂಗಬೇರೀಪುರವ ಹೊಕ್ಕನು ಗುಹನ ಕಾಣಿಸಿಕೊಂಡನುಚಿತದಲಿಮರುತ ಬಿನ್ನೈಸಿದನು ರಘುನೃಪವರನು ಪೇಳಿದ ಬುದ್ಧಿಯನು ವಿಸ್ತರಿಸೆ ನಿಷಧಾಧಿಪತಿ ಕೇಳ್ದತಿಶಯದ ಹರುಷದಲಿ
ಅನಿಲಸುತ ಬಾ ಮಗನೆ ರಘುನಂದನಗೆ ನಿನ್ನವೊಲಾಪ್ತರಾರೀದನುಜ ಮನುಜ ಭುಜಂಗರೊಳುಂಟೆ ನಿನ್ನ ಹೋಲುವರುಹನುಮ ನಂದೀಗ್ರಾಮದಲಿ ಭರತನಿಹನಗ್ರಜನಗಲ್ದ ಖೇದದಮನದ ಪರಿತಾಪವನು ಮಾಣಿಸು ಬೇಗ ಹೋಗೆಂದ
ಹರುಷಮಿಗೆ ಜನಪದದ ಪರಿಯಂತರದಿ ಬಂದನಿಲಜನ ಕಳುಹಿಸಿಮರಳಿದನು ಗುಹಸಿತ್ತ ಮಾರುತಿ ಮುಂದೆ ಪಥವಿಡಿದುಬರುತ ಮಾರ್ಗಾಂತರದಿ ಕಾನನಗಿರಿ ಶಿಖರಗಳ ಕಳೆದು ಬರೆ ವಿಸ್ತರದ ನಂದೀಗ್ರಾಮವನು(ಕಂಡಲ್ಲಿ) ಮನನಲಿದು
ಬಂದು ಭರತನ ಕಂಡು ನಮಿಸಿದಡೆಂದ ನೀನಾರಿಲ್ಲಿಗಿಂದೈತಂದ ಕಾರಣವೇನು ನಿನ್ನಭಿಧಾನವೇನೆನಲುನಿಂದು ಕೈಗಳ ಮುಗಿದು ನಸುನಗೆಯಿಂದ ನುಡಿದನು ಹನುಮ ತಾ ರಘುನಂದನನ ಸೇವಕನು ಕಳುಹಿದ ದೇವ ನಿಮ್ಮಡಿಗೆ
ರಾವಣನ ಸಂಹರಿಸಿ ಲಂಕೆಯನಾ ವಿಭೀಷಣಗಿತ್ತು ಸೀತಾದೇವಿ ಲಕ್ಷ್ಮಣಸಹಿತ ಭಾರದ್ವಾಜನಾಶ್ರಮಕೆದೇವ ಬಂದನು ಸಕಲ ವಿಭವದಿನೀವು ಚಿತ್ತದೊಳವಧರಿಸಿಯೆನೆಪಾವಮಾನಿಯ ನುತಿಸಿ ತಕ್ಕೈಸಿದನು ಭರತೇಂದ್ರ
ಹರುಷ ಹೆಚ್ಚಿದ ಮನದಿ ತಮ್ಮನಕರೆದು ಶತ್ರುಘ್ನನನಯೋಧ್ಯಾಪುರಿಗೆ ಕಳುಹಿದ ಜನನಿಯರಿಗೀ ವಾರ್ತೆಯೆಲ್ಲವನುಅರುಹಿ ಬಾಯೆನಲಗ್ರಜನ ಸಿರಿಚರಣಕಭಿಮುಖನಾಗಿ ವಂದಿಸಿಹರುಷ ಮಿಗೆ ಹೊರವಂಟು ಹೊಕ್ಕನಯೋಧ್ಯ ಪುರವರವ
ಚೀರಿದವು ಕಹಳೆಗಳು ತಮ್ಮಟೆಭೇರಿ ಶಂಖ ನಿನಾದ ಹಬ್ಬಿತುಸಾರಿ ತಂದಿನ ದಿವಸದಲಿ ಶತ್ರುಘ್ನ ಬಂದನೆನೆಆರತಿಯ ತಳಿಗೆಗಳ ಸಂದಣಿಕೇರಿ ಕೇರಿಯೊಳೈದಿದವು ಕೈವಾರಿಗಳ ಗಡಣದಲಿ ಹೊಕ್ಕನು ರಾಜ ಮಂದಿರವ
ಜನನಿಯರು ಮೂವರಿಗೆ ನಮಿಸಿದತನುಜನನು ತಕ್ಕೈಸಿ ಪೇಳಿದನಿನಕುಲಾನ್ವಯ ಬಂದ ಭಾರದ್ವಾಜನಾಶ್ರಮಕೆಎನಲು ಹರುಷಾನಂದಮಯರಸಹೊನಲಿನೊಳಗೋಲಾಡಿದರು ಮುಖವನಜವರಳಿತು ಜನನಿಯರಿಗವನೀಶ ಕೇಳೆಂದ
ಕರೆಸಿದನು ಶತ್ರುಘ್ನ ಮಂತ್ರೀಶ್ವರ ಸುಮಂತನ ಕೂಡೆ ನುಡಿದನುತರಣಿಕುಲ ರಾಜೇಂದ್ರನಣ್ಣನ ಬರವ ಕೇಳಿದೆವುಪುರವ ಶೃಂಗರಿಸಲ್ಲಿ ಕರಿರಥತುರಗ ಮೇಳೈಸಿರಲಿ ಮೋದದತರುಣಿಯರು ಸಂದಣಿಸಿ ನಡೆಯಲಿ ನೃಪನ ದರುಶನಕೆ
ಎಂದು ಮಂತ್ರಿಯೊಳರುಹಿ ತಾ ನಿಜಮಂದಿರಕೆ ನಡೆತಂದು ಪಯಣವನಂದು ಮಾಡಿದ ಜನನಿ ಕೌಸಲದೇವಿ ಮೊದಲಾದಇಂದುವದನೆಯರೇರುತಿರ್ದರುಅಂದಣವ ಸೊಸೆಯರು ವರೂಥದಿಹಿಂದುಮುಂದಿಟ್ಟಣಿಸಿ ನಡೆದುದು ಸತಿಯರೊಗ್ಗಿನಲಿ
ಪುರಜನವ ಸಂತೈಸಿ ಭೂಸುರವರರ ಮಂತ್ರಾಕ್ಷತೆಯ ಕೈಕೊಂಡರಸ ರಾಮ ಶ್ರೀ ಪದಾಬ್ಜವ ನೆನೆದು ಮನದೊಳಗೆತರಿಸಿ ಮಾಲ್ಯಾಂಬರ ಸುಗಂಧವಕರೆಸಿಕೊಟ್ಟನು ರಾಜವರ್ಗಕೆಹರುಷದಲಿ ಶತ್ರುಘ್ನನೇರಿದ ದಿವ್ಯಮಣಿ ರಥವ
ವಿವಿಧವಾದ್ಯ ಧ್ವನಿಯ ಕಹಳಾರವದ ಸನ್ನೆ ಯೊಳೈದಿ ಬಹ ನೃಪನಿವಹದಲಿ ಚತುರಂಗ ಸೇನೆಯ ಪದದ ಕೆಂಧೂಳಿಭುವನವಾಕಾಶವನು ಮುಸುಕಿದಡವನಿ ನೆಗ್ಗಲು ಬಲವು ಬಲುಭಾರವಣೆಯಲಿ ಹೊರವಂಟನಾ ಶತ್ರುಘ್ನನೊಲವಿನಲಿ
ಸತ್ತಿಗೆಯ ಸಾಲುಗಳ ಬೀಸುವಬಿತ್ತರದ ಚೌರಿಗಳ ರಥದಲಿತೆತ್ತಿಸಿದ ಸೂನಗಿಯ ಸೀಗುರಿ ಗುಡಿಪತಾಕೆಗಳಮತ್ತೆ ಗಜಘಟ ತುರಗ ಕಾಲಾಳೊತ್ತರಿಸಿ ಬರೆ ಕಮಠ ಕೂರ್ಮರನೆತ್ತಿ ನೆಗ್ಗಲು ನಡೆದುದಗಣಿತ ಸೇನೆ ವಹಿಲದಲಿ
ಪುರವ ಕಳೆದರು ಮುಂದೆ ಯಮುನಾವರನದಿಯನುತ್ತರಿಸೆ ಪಯಣದಿಮೆರೆವ ನಂದೀಗ್ರಾಮವನು ಕಂಡಲ್ಲಿಗೈತಂದುಭರತನೊಡಗೊಂಡಲ್ಲಿ ಹನುಮನಕರುಣದಲಿ ಸತ್ಕರಿಸಿ ಮುಂದಕೆತೆರಳಿದರು ಕೌಸಲ್ಯ ರಾಮನ ಕಾಣ್ಬ ತವಕದಲಿ
ಇತ್ತ ಕೇಳೈ ಪಾಂಡವಾಗ್ರಜಸತ್ವಗುಣನಿಧಿ ರಾಮಚಂದ್ರನುವತ್ತರಿಸಿಬರೆ ಕಂಡು ನಲಿಯುತ ಜಾನಕಿಯ ಕರೆದುಇತ್ತ ನೋಡೆಲೆ ದೇವಿ ಭರತನಶತ್ರುಹರ ಶತ್ರುಘ್ನರಿವರು ಸಮಸ್ತ ಬಲಸಹಿತಿದಿರು ಬರುತಿದೆ ನೋಡು ನೀನೆಂದ
ಎಂದು ತೋರಿಸಿ ಮನದ ಹರುಷದಿಮಿಂದುಲಕ್ಷ್ಮಣನೊಡನೆಸತಿಸಹಿತಂದು ರಥವೇರಿದನು ರಾಮನೃಪಾಲನಾಕ್ಷಣಕೆಮುಂದೆ ನೆರೆದುದು ಬನದೊಳಗೆ ಮುದದಿಂದ ಪಾಠಕರುಗ್ಘಡಿಸೆ ನಲವಿಂದ ಮುನಿಕುಲದೊಡನೆ ತೆರಳಿದನಾ ಮಹೀಪಾಲ
ತಲ್ಲಣಿಸಿ ದಶದಿಕ್ಕುಗಳ ಬಲವೆಲ್ಲ ನೆರೆದುದು ವಾನರಾಧಿಪರಲ್ಲಿ ಸುಗ್ರೀವನ ವರೂಥದ ಬಳಿಯೆ ಸಂದಣಿಸೆನಿಲ್ಲದೈದಿದರಾ ವಿಭೀಷಣನಲ್ಲಿ ದಾನವಸೇನೆ ಕೈದುಗಳಲ್ಲಿ ಹೊರವಂಟನು ವನಾಲಯದಿಂದಲಿದಿರಾಗಿ
ದೂರದಲಿ ಮಣಿರಥದೊಳಗೆ ರಘುವೀರರಿಬ್ಬರು ಕಂಡು ಬರೆಹೊಂದೇರನಿಳಿದರು ಭರತ ಶತ್ರುಘ್ನರು ಸರಾಗದಲಿಧಾರುಣಿಗೆ ಮೈಯಿಕ್ಕಿದರು ಪರಿವಾರವೆಲ್ಲವು ನೊಸಲಕೈಗಳಭೂರಿ ಸಂತೋಷದ ಸಮುದ್ರದೊಳಾಳಿತಂದಿನಲಿ
ಇಳಿದು ರಥವನು ನೃಪತಿ ಸೀತಾಲಲನೆ ಲಕ್ಷ್ಮಣಸಹಿತ ತಾ ಕೌಸಲೆ ಸುಮಿತ್ರಾದೇವಿ ಕೈಕೆಯ ಚರಣಕಭಿನಮಿಸಿತೊಲಗಿದಸು ಬಂದಂತೆ ತನಯರಚೆಲುವನೀಕ್ಷಿಸಿ ಜನನಿಯರು ಕಂಗಳಲಿ ಜಲತುಂಬಿ ನೆರೆ ಬಿಗಿಯಪ್ಪಿದರು ನಂದನರ
ವಿಮಲಮತಿ ಶತ್ರುಘ್ನ ಭರತರುನಮಿಸಿದರು ರಘುಪತಿಗೆ ಲಕ್ಷ್ಮಣನಮಿಸಿದನು ಭರತಂಗೆ ಭರತಾನುಜನ ಸಂತೈಸಿಸಮತೆಯಲಿ ಸುಗ್ರೀವ ಜಾಂಬವರಮಿತ ಬಲವನು ಜನನಿಯ ಚರಣಕಮಲವನು ಕಾಣಿಸಿದ ಸುಕರಹೊಳೂರ್ಮಿಳಾರಮಣ
ವರವಿಭೀಷಣ ದೇವ ಬಂದನುಭರತ ಶತ್ರುಘ್ನರಿಗೆ ವಂದಿಸಿಕರದ ಪುಷ್ಪಾಂಜಲಿಯಬಿನ್ನೈಸಿದನು ವಿನಯದಲಿಅರಸನನುಜರು ನೀವು ನಿಮ್ಮಯಚರಣ ದರುಶನವಾಯ್ತು ನಮಗೇನರಿದು ಲೋಕದೊಳೆಂದು ಕೊಂಡಾಡಿದನು ಮನದಣಿಯೆ
ಜನಕಸುತೆ ಹರುಷದಲಿ ಸುಗ್ರೀವನ ಸತಿಯರೊಡನಿರ್ದು ಮಾವನವನಿತೆಯರಿಗಭಿನಮಿಸೆ ಸೊಸೆಯಳ ತೆಗೆದು ತಕ್ಕೈಸಿಬನದೊಳಗೆ ಬಲುನೊಂದಲಾ ಮಾನಿನಿಯೆ ಬಾರೌ ತಾಯೆ ಬಾರೆಂದೆನುತ ಕಂಬನಿದೊಡೆದು ಲಾಲಿಸಿದರು ಮಹಾಸತಿಯ
ತರಿಸಿ ಮಣಿಭೂಷಣ ದುಕೂಲವಧರಣಿ ತನುಜೆಗೆ ತೊಡಿಸಿ ಭರತನುತರಣಿಸುತ ಜಾಂಬವ ವಿಭೀಷಣರುಗಳ ಸತ್ಕರಿಸಿಪುರಕೆ ಪಯಣವ ಮಾಡಿದನು ಡಂಗುರದ ಸನ್ನೆಯೊಳಂದು ಹೊರವಂಟರುಮಹಾಂಬುಧಿ ತೆರಳುವಂತೆ ಸಮುದ್ರ ಘೋಷದಲಿ
ಮಸಗಿದುದು ಕೆಂಧೂಳಿ ಗಗನವಮುಸುಕಿದರೆ ರವಿ ಧಾತುಗುಂದಿದಪಸರಿಸಿತುದೆಣ್ದೆಸೆಯ ನೀಂಟಿತು ಸಪ್ತ ಸಾಗರವಉಸುರು ತೆಗೆಬಗೆಯಾಯ್ತು ಕೂರುಮನಸಿದನಹಿಪತಿ ಬಲದ ಭಾರದಿಬೆಸುಗೆಬಿಡೆ ಗಿರಿವಾದ್ಯತತಿ ಗರ್ಜಿಸಿತು ಮೂಜಗವ
ಅರಸ ಕೇಳಲ್ಲಿಂದಯೋಧ್ಯಾಪುರಿಗೆ ಬಂದನು ರಾಮ ನೃಪ ತನ್ನರಸಿ ಲಕ್ಷ್ಮಣ ಭರತ ಶತ್ರುಘ್ನಾದಿ ಬಾಂಧವರಪರುಠವಣೆಯಲಿ ರಾಜತೇಜದಿಸುರರು ದುಂದುಭಿ ಮೊಳಗೆ ನಿಜಮಂದಿರದ ಬಾಗಿಲ ಬಳಿಯ ನಿಂದನು ಮುನಿಪರೊಗ್ಗಿನಲಿ
ಅನಿಮಿಷರು ಸಂದಣಿಸೆ ಅಭ್ರದಿಹನುಮನಾಕ್ಷಣ ಬಂದು ಕೈಲಾಗಿನಲಿ ಪಾಯವಧಾನ ಚಿತ್ತವಧಾನವೆಚ್ಚರಿಕೆಎನಲು ರಥದಿಂದಿಳಿದು ರಘು ನಂದನನು ಹೊಕ್ಕನು ರಾಜಭವನವತನತನಗೆ ಪುರಜನರು ಕಾಣಿಕೆಗೊಟ್ಟು ನಮಿಸಿದರು
ಗುರು ವಸಿಷ್ಠನ ಮತದಿತಮ್ಮಂದಿರು ಸಹಿತ ಮಜ್ಜನವ ಮಾಡಿದನರಸ ದಿವ್ಯಸುಗಂಧ ಮಾಲ್ಯಾಂಬರ ಸುಭೂಷಣವಧರಿಸಿದರು ನಾಲ್ವರು ಕುಮಾರರುಹರುಷಮಿಗೆ ನಿಜಜನನಿಯರು ಮೂವರಿಗೆ ವಂದಿಸಿ ಮೆರೆದರಗ್ಗದ ರಾಜತೇಜದಲಿ
ಓಲಗಕೆ ನಡೆತಂದು ರಾಮನೃಪಾಲನನುಜರು ಸಹಿತ ಮಂತ್ರೀಜಾಲ ಬಾಂಧವ ಸಹಿತ ತಿರೆಯ ಸಮಸ್ತ ದುಣಿಪರುಓಲಗದಿ ಮುನಿ ಮುಖ್ಯರೆಲ್ಲರುಲೀಲೆಯಿಂ ಕುಳ್ಳಿರೆ ಸುಮಂತ್ರನುಕೋಲ ಗುರುವಿಗೆ ನಮಿಸಿ ಯಾಳೋಚಿಸಸಿದನೀ ಹದನ
ವರನೃಪಾಲಗೆ ರಾಜಪಟ್ಟವಧರಿಸಬಹುದೇ ಜೀಯಯೆನೆ ಭೂಸುರರ ಬರಹೇಳೆನುತ ತರಿಸಿದರಖಿಳ ವಸ್ತುಗಳತರಿಸಿ ಕವಳವನುಭಯರಿಗೆ ಕರಕರೆಸಿ ಕೊಡಿಸಿದನಾ ಸುಮಂತನುಪುರವ ಸಲೆ ಶೃಂಗರಿಸೆಪರಿಚಾರರಿಗೆ ನೇಮಿಸಿದ
ವಾರಣದ ಬೀದಿಗಳ ಘನ ಶೃಂಗಾರದಿಂ ನವರತ್ನ ಜಲ್ಲಿಯತೋರಣದ ಮಂಟಪದ ಸಿರಿಯಲಿ ಮೇಲು ಕಟ್ಟುಗಳಕಾರಳಿಯ ಕುಂಕುಮದ ನವ ಪನ್ನೀರ ಚಳೆಯದ ಕತ್ತುರಿಯ ಮತಸಾರಳಿಯ ರಚನೆಯಲಿ ಶೃಂಗರಿಸಿದರು ಪಟ್ಟಣವ
ಬರಸಿದರು ವಾಲೆಗಳ ದಿಕ್ಕಿನಅರಸುಗಳ ಬರಹೇಳಿ ಮುನಿ ಮುಖ್ಯರನು ಬಂದರು ಅವನಿಪಾಲಕರತುಳ ಬಲಸಹಿತತರುಣಿಯರು ಶೃಂಗರಿಸಿದರು ಪರಿಪರಿಯ ದಿವ್ಯದುಕೂಲ ವಸ್ತ್ರಾಭರಣ ಭೂಷಿತರಾಗಿ ಪಿಡಿದರು ಕಲಶಕನ್ನಡಿಯ
ಹರುಷದಲಿ ತಂತಮ್ಮ ಕೈಯಲಿಪರಮ ಪುಣ್ಯಸುವಸ್ತುಗಳ ತಂದಿರಿಸಿದರುಹರುಷದಲಿ ನೆರೆದುದು ಬಹುಳ ಸಂಖ್ಯೆಯಲಿಶರಧಿ ಮೇರುದಿಗಂತದವನೀಶ್ವರರು ಯಾಚಕ ಪಂಡಿತರು ಕವಿವರರು ಗಾಯಕ ಮಲ್ಲ ದೈವಜ್ಞರು ಸುನರ್ತಕರು
ಬಂದರತಿ ಬೇಗದಲಿ ವರತೃಣಬಿಂದು ಮುನಿ ದಮನಾಖ್ಯಸನಕಸನಂದ ಶೌನಕ ಸೂತಶತಮುಖ ಸುಮತಿ ಜಾಬಾಲಿಸಂದ ದಾಲ್ಭ್ಯಮರೀಚಿ ಲೋಗಾನಂದ ಸುರಗುರು ರೋಮಜನು ಮುಚುಕುಂದ ನಾರದರಖಿಳ ತಪಸಿಗಳೈದಿ ತೊಗ್ಗಿನಲಿ
ಅತ್ರಿ ಭಾರದ್ದಾಜ ವಿಶ್ವಾಮಿತ್ರ ಗೌತಮ ವಾಮದೇವನಗಸ್ತ್ಯ ಕಣ್ವಾಂಗಿರಸ ಮಾರ್ಕಂಡೇಯ ಮೈತ್ರೇಯಸತ್ಯತಪ ಕೌಂಡಿನ್ಯಕೌಶಿಕಪುತ್ರಶುಕ ವಾಲ್ಮೀಕಿಯಾ ಮುನಿಪೋತ್ತಮರು ಸಂದಣಿಸಿದರು ರಘುನೃಪನ ಸಭೆಯೊಳಗೆ
ಚ್ಯವನ ಜನ್ಹು ಮೃಕಂಡು ಮುನಿಗಾಲವ ಶತಾನಂದೈಕ ನಾರದಶ್ರವತಿಕಶ್ಯಪ ಕಪಿಲ ಶೌನಕ ಸನಕ ಜಮದಗ್ನಿಪವನ ಭಕ್ಷಣ ಗಾರ್ಗ್ಯಋಷಿ ಭಾರ್ಗವ ಸನತ್ಸುತ ನಂದ ಜಯಮುನಿನಿವಹದೊಡನೈತಂದನಾ ದೂರ್ವಾಸನೊಲವಿನಲಿ
ಚೋಳ ಗುಜ್ಜರ ದ್ರವಿಡ ವಂಗ ವರಾಳ ಚೋಟಕ ಸಿಂಧು ಶಿಬ ನೇಪಾಳ ಪಾಂಡ್ಯ ಮರಾಟ ಸಿಂಹಳ ಹೂಣ ಸವ್ವೀರಲಾಳ ಮಗಧ ವಿದರ್ಭ ರುತು ಮಲೆಯಾಳ ನಿಷಧ ಕಳಿಂಗ ವರಪಾಂಚಾಳ ಬಹುದೇಶಾಧಿಪತಿಗಳು ಬಂದರೊಗ್ಗಿನಲಿ
ಮಾಳವಾಂಧ್ರಾಕರುಷವರ ನೇಪಾಳ ಬರ್ಬರ ಮತ್ಸ್ಯನೃಪ ಬಂಗಾಳಮಾಂಧ್ರ ಮರಾಟ ಕೋಸಲ ಕೊಡಗ ಕರ್ನಾಟಗೌಳ ಕುಂತಳ ಕೃಕರಪತಿ ಬಲ್ಲಾಳ ಕೊಂಕಣ ಚೀನಕೈಕೆಯರಾಳ ಮೇಳದಿ ಬಂದು ಹೊಕ್ಕರು ನೃಪನ ವರಸಭೆಯ
ಕೇರಳಾಧಿಪ ಬಾಹ್ಲಿಕನು ಹಮ್ಮೀರ ಚೈದ್ಯ ಕುರುಶ್ವಪತಿ ಗಾಂಧಾರ ಸಂಬಳ ತುಳುವ ನೃಪ ಕಾಶ್ಮೀರ ಸೌರಾಷ್ಟ್ರಶೂರಸೇನನವ ಪ್ರಚೇನ ಸುಪಾರಿಯಾತ್ರ ಕರೂಷಚಿಥ ವರಭೂರಮಣರೈತಂದರತುಳ ಮನೋನುರಾಗದಲಿ
ಅಕುಟಿಲನೆ ಕೇಳ್ ಪಾಂಡವಾಗ್ರಜಮುಕುರವದನೆಯರುತ್ಸವದಿ ಜಾನಕಿಯಲಂಕರಿಸಿದರು ಮಾಲ್ಯಾಂಬರದಿ ಸಿರಿಮುಡಿಯಸಕಲ ವೈಭವದಿಂದವೈಮಾನಿಕರು ಕೈವಾರಿಸಲು ಗಗನಸಖಿಯರ ನಡುವೆ ಮೃಗಾಕ್ಷಿ ಬಂದಳು ನೃಪನ ಗದ್ದುಗೆಗೆ
ಭರತ ಭಾರಿಯ ಸತ್ತಿಗೆಯ ಚಾಮರವ ಲಕ್ಷ್ಮಣ ದೇವ ಚಿಮ್ಮಲುಧರಿಸಿದನು ಶತ್ರುಘ್ನ ಗಿಂಡಿಯ ಹೆಗಲ ಹಡಪದಲಿಮರುತಸುತ ಸೇವಿಸಲು ಚರಣದಿಗುರು ವಸಿಷ್ಠನ ಸಮ್ಮುಖದಿ ರಘುವರನು ನಿಜಸತಿಸಹಿತ ಸಿಂಹಾಸನದಿ ರಂಜಿಸಿದ
ವರ ವಿಭೀಷಣ ಜಾಂಬವಂತರುತರಣಿಸುತ ನಳ ನೀಲನಂಗದಶರಭ ಶತಬಲಿ ಗವಯ ವೀರಗವಾಕ್ಷ ಮೊದಲಾದಧುರವಿಜಯರೆಡವಂಕದಲಿ ನಿಂದಿರಲು ಬಲದಲಿ ಸಿದ್ಧವಿದ್ಯಾಧರರು ನೆರೆದರನೇಕ ವಿದ್ವಾಂಸರು ಕವೀಶ್ವರರು
ಮೇಲು ಮಣಿಗಳ ರತ್ನಕಾಂತಿಯಮೌಳಿಗಳ ಮನ್ನೆಯರು ಮಂತ್ರೀಜಾಲ ಸಹಿತಿದಿರಿನಲಿ ನಿಂದುದು ಮಕುಟವರ್ಧನರುಓಲಗದಿ ಮಿಗೆ ವಾರಸತಿಯರುಓಲಗಿಸೆ ರಘುನೃಪನನಾಗಳೆತಾಳಮದ್ದಳೆ ಭೇರಿ ಡೆಂಕ ನಿನಾದ ರಂಜಿಸಿತು
ಅಲ್ಲಿ ನೆರೆದ ಮುನೀಶರೆಲ್ಲರುಬಲ್ಲ ಭೂಸುರನಿವಹ ಮಂತ್ರಿಗಳಲ್ಲಿ ಸುಮುಹೂರ್ತದಲಿ ಪಟ್ಟವ ಕಟ್ಟಿದರು ನೃಪಗೆಸಲ್ಲಲಿತಸತ್ಕೀರ್ತಿ ವಧು ವರನಲ್ಲಿ ನಿಲ್ಲದೆ ಬಂದು ಸೀತಾವಲ್ಲಭನ ಪೊಂದಿದಳು ಕುಂತೀ ಸೂನು ಕೇಳೆಂದ
ಗುರು ವಸಿಷ್ಠ ಮುನೀಂದ್ರ ಭೂಮೀಸುರರೊಡನೆ ತಾ ಬಂದು ರಾಮನಹರಸಿ ಮಂತ್ರಾಕ್ಷತೆಯ ತಳೆದರು ದೇವನಂಗದಲಿಸುರರು ದುಂದುಭಿ ಮೊಳಗೆ ಹೂವಿನಸರಿಯ ಸುರಿದರು ನಿರ್ಜರರು ಧರೆಯರಸುಗಳು ಕೈಮುಗಿದು ಮುಯಿಗಳನಿತ್ತರವನಿಪಗೆ
ಮುನಿಸತಿಯರೊಡನೈದಿ ಭೂಸುರವನಿತೆಯರು ಶೋಭನದ ಧವಳವವಿನಯದಲಿ ಪಾಡಿದರು ಜಯಜಯರವನಿನಾದದಲಿಕನಕರತ್ನದ ನೂಪುರದ ಕಾಮಿನಿಯರೊಯ್ಯಾರದಲಿ ರಘುನಂದನನ ಹರಸುತಲೆತ್ತಿದರು ನವರತ್ನ ದಾರತಿಯ
ಆರು ಹೊಗಳುವಡರಿದು ಸಭೆಯಲಿಸಾರ ಸಂಗೀತದ ವಿನೋದದಿವಾರಕಾಂತಾಜನದಲೊಪ್ಪುವ ಕೇಳಮೇಳವದಚಾರು ಗೀತನೃತ್ಯಗಳ ಸೇವಾಗಾರಿಕೆಯನೇನೆಂಬೆನೈ ಜಂಭಾರಿವೋಲಗದಂತೆ ಮೆರೆದುದು ನೃಪತಿಯಾಸ್ಥಾನ
ಕರೆದು ಯಾಚಕ ಪಂಡಿತರ ಭೂಸುರರ ಗಾಯಕಮಲ್ಲರನು ಕವಿವರರಿಗಿತ್ತನು ಧೇನು ಕನಕಾಂಬರ ಸುವಸ್ತುಗಳಅರಸುಗಳಿಗಾದರಿಸಿ ಕೊಟ್ಟನುಕರಿತುರಗ ರಥ ದಿವ್ಯಹೇಮಾಂಬರ ಸುವಸ್ತುಗಳಿಂದ ಕಳುಹಿದನಾ ವಸಿಷ್ಠಮುನಿ
ಕೊಟ್ಟ ಸುಮುಹೂರ್ತದೊಳಗಾಗ ವಶಿಷ್ಠಗುರುವಿಂಗೆರಗಿ ರಘುವರನೆಟ್ಟನೈತಂದಲ್ಲಿ ಹೊಕ್ಕನು ರಾಜಮಂದಿರವಸೃಷ್ಟಿಗಧಿಪನ ಕೀರ್ತಿವಧು ಘನನಿಷ್ಠೆಯಲಿ ಧಾವಳ್ಯ ವಸನವನುಟ್ಟು ನಲಿದಾಡಿದಳು ತ್ರಿಜಗದ ಜನದ ಜಿಹ್ವೆಯಲಿ
ಅರಸ ಕೇಳ್ಮರುದಿವಸದಲಿ ರಘುವರನು ತನ್ನೋಲಗಕೆ ನೃಪರನುಕರೆಸಿದನು ನಿಜಮಂತ್ರಿ ಬಾಂಧವಜಾಲವರ್ಗವನುತರಣಿಸುತ ಜಾಂಬವ ವಿಭೀಷಣರಿರದೆ ಬಂದರು ಕೈಮುಗಿದು ಕುಳ್ಳಿರಲು ಪರಿತೋಷದಲಿ ನುಡಿದನು ರಾಮ ನಸುನಗುತ
ಕೇಳು ಲಕ್ಷ್ಮಣ ಕೇಳು ಜಾಂಬವಕೇಳು ನಳ ನೀಲಾದಿ ಸುಭಟರರೆಕೇಳಿರೈ ನರೆದಲಗವ್ರಿಹಿಯರು ಸೆರೆಯೊಳಿರ್ದವರಕಾಲ ಸವೆದುದು ದಿವಸವಿಂದಿಗೆಏಳು ತಿಂಗಳು ಕಳೆದವವದಿರಪಾಲಿಸಲು ಬೇಕನಿಲಸುತ ನೀ ಕರೆದು ತಾರೆಂದ
ಹೈ ಹಸಾದವೆನುತ್ತ ವಂದಿಸೆಬಾಹುಬಲದಗ್ಗಳಿಕೆ ಮಿಗೆ ನಿರ್ವಾಹದಲಿ ಹೊರವಂಟನತಿ ವೇಗದಲಿ ಪಥವಿಡಿದುಸಾಹಸವನೇನೆಂಬೆ ವಜ್ರದದೇಹನಲ್ಲಾ ಹನುಮ ತನ್ನ ಮನೋಹರದ ಋಷಿಗಳನು ಕಂಡನು ಪಂಚನಂದಿಯಲಿ
ಅವರ ಪಾದಾಂಬುಜಕೆ ವಂದಿಸಿಪವನಸುತ ಬಿನ್ನೈಸಿದನು ರಾಘವ ನೃಪಾಲನು ಕಳುಹೆ ಬಂದೆನು ನಿಮ್ಮ ದರುಶನಕೆಅವಧಿ ಸವೆದುದುಸೆರೆಮನೆಯೊಳಿರ್ದವರನೊಡಗೊಂಡೀಕ್ಷಣವೆ ನೀವವನಿಪನ ಸಂಮುಖಕೆ ಚಿತ್ತೈಸೆಂದು ಕೈಮುಗಿದ
ಹನುಮನಾಡಿದ ನುಡಿಗೆ ಗೌತಮಮುನಿಪ ನಸುನಗುತೆದ್ದು ಬನದಲಿಘನತಪೋಬಲ ಮಹಿಮರನು ಕರೆಸಿದನತುಳವೇಗದಲಿಮನದಿಹರುಷಿತನಾಗಿ ಮುನಿ ಸೆರೆಮನೆಯ ಪ್ರತಿವಾದಿಗಳನೊಡಗೊಂಡನುಪಮಿತಗುಣನಿಲಯ ಮುನಿ ಹೊರವಂಟನಾಶ್ರಮವ
ಬಂದನತಿಹರುಷದಲಿ ಮುನಿಕುಲವೃಂದದೊಡನೈತರಲು ರಘುಕುಲನಂದು ಬಿಜಯಂಗೈಸೆ ತಂದನು ರಾಜಮಂದಿರಕೆಬಂದರೇ ಪ್ರತಿವಾದಿಗಳು ಕರತಂದಿರೇ ನೀವೆನುತ ಮುನಿಕುಲವೃಂದವನು ಸತ್ಕರಿಸಿ ಕುಳ್ಳಿರಿಸಿದನು ಗೌತಮನ
ಇವರ ವ್ಯವಹಾರವನು ಪರಿಹರಿಸುವವಿಚಾರವ ನೋಡಿ ಮನದಲಿರವಿಕುಲಾನ್ವಯ ರಾಮ ನೆನೆದನು ಹೃದಯ ಶುದ್ಧಿಯಲಿಶಿವನ ಧ್ಯಾನಿಸಲಾಕ್ಷಣವೆ ತ್ರೈಭುವನಕರ್ತರು ಇಂದ್ರ ಮೊದಲಾದವರು ಬಂದರಯೋಧ್ಯ ಪುರಪತಿಧಾಮನೋಲಗಕೆ
ವಸುಗಳಮರರುಭುಜಂಗಾಮರರಸುರ ಕಿನ್ನರ ಯಕ್ಷ ರಾಕ್ಷಸಶಶಿರವಿಗಳಾದಿತ್ಯ ವಿದ್ಯಾಧರರು ಗುಹ್ಯಕರುವಸುಧೆಯಮರರು ಕ್ಷತ್ರಿಯರು ಜೋಯಿಸರು ವೈಶ್ಯ ಚತುರ್ಥರುನ್ನತಕುಶಲ ವಿದ್ಯಾಧಿಕರು ನೆರೆದರು ನೃಪನ ಸಭೆಯೊಳಗೆ
ಇಂತೆಸೆವನಾ ಸಭೆಯೊಳಗೆ ಮತಿವಂತ ನುಡಿದನು ಧಾನ್ಯವರ್ಗದಸಂತತಿಯ ಬರಹೇಳಿಯೆನೆ ಸೆರೆಮನೆಯೊಳಿರ್ದವರುನಿಂತು ಕರಗಳ ಮುಗಿದು ಧರಣೀಕಾಂತ ರಘುವರನೀ ಸುಬುದ್ಧಿಯನೆಂತು ನಮಗರುಹುವಿರಿಯದ ಪೇಳೆಂದ ನರೆದಲೆಗ
ಎನಲು ರಾಮನೃಪಾಲ ನೋಡಿದಘನ ತಪೋಮಹಿಮರಿಗೆ ನುಡಿದನುಮನವ ವಂಚಿಸಲಾಗದೀ ಧರ್ಮವನು ನೆರೆತಿಳಿದುಅನುನಯದಿ ಪೇಳೆನೆ ಮುನೀಂದ್ರರುಅನಿಮಿಷರನೀಕ್ಷಿಸಿದರಲ್ಲಿ ಯಘನ ಮಹಾಸಭೆಯೊಳಗೆ ಭಾರ್ಗವರಾಮನಿಂತೆಂದ
ಆರು ನುಡಿಯರೆನೀವು ಹಿರಿಯರುಮಿರಿಸುವರಾರಿವರೊಳಗೆ ಗುಣಸಾರನಾವನು ಪೇಳೆನಲು ಜಂಭಾರಿ ನಸುನಗುತಸಾರಹೃದಯನು ನರೆದಲೆಗ ನಿಸ್ಸಾರನೀ ವ್ರಿಹಿಯೆನಲು ಗುಣನಿಧಿಮಾರುತಾತ್ಮಜ ನೋಡಿದನು ಸನ್ನೆಯಲಿ ನಾರದನ
ಅಹುದು ಸುರಪನ ಮಾತು ನಿಶ್ಚಯವಹುದು ನರೆದಲೆಗನೆ ಸಮರ್ಥನುಬಹಳ ಬಲಯುತ ಸೆರೆಗೆ ತಳ್ಳಲುಕಾಂತಿಗೆಡಲಿಲ್ಲಸಹಜವಿದು ಪರಪಕ್ಷವಾದಡೆವ್ರಿಹಿ ಕರಗಿ ಕಂದಿದನು ಸೆರೆಯಲಿವಿಹಿತವಿದು ಕೇಳೆಂದು ನಾರದ ನುಡಿದ ನಸುಗುತ
ಎಲ್ಲ ನವಧಾನ್ಯದಲಿ ಈತನೆಬಲ್ಲಿದನು ಹುಸಿಯಲ್ಲ ಬಡವರಬಲ್ಲಿದರನಾರೈದು ಸಲಹುವನಿವಗೆ ಸರಿಯುಂಟೆನೆಲ್ಲಿನಲಿ ಗುಣವೇನು ಭಾಗ್ಯದಿಬಲ್ಲಿದರ ಪತಿಕರಿಸುವನು ಅವನಲ್ಲಿ ಸಾರವ ಕಾಣೆಯೆಂದನು ಕಪಿಲಮುನಿ ನಗುತ
ಸುರಮುನಿಗಳಿಂತೆನಲು ಭೂಸುರವರರು ಸಂತೋಷಿಸಲು ಸಭಿಕರುನರೆದಲಗ ನೀ ಬಾರೆನುತ ರಾಮನೃಪಾಲ ನೆರೆಮೆಚ್ಚಿಕರೆದುಕೊಟ್ಟನು ತನ್ನ ನಾಮವಧರೆಗೆ ರಾಘವನೆಂಬ ಪೆಸರಾಯ್ತರದೆ ವ್ರಿಹಿ ನಾಚಿದನು ಸಭೆಯಲಿ ಶಿರವ ಬಾಗಿಸಿದ
ಹರುಷದೋರಿದಮನದಿ ನಲಿವುತನರೆದಲೆಗನೈತಂದು ರಾಮನಸಿರಿಚರಣಕಭಿನಮಿಸೆ ದೇವಾಸುರರು ಕೊಂಡಾಡೆಅರಸಿ ಮುತ್ತಿನ ಸೇಸೆಯನು ಭೂಸುರರು ಮಂತ್ರಾಕ್ಷತೆಯನಿತ್ತುಪಚರಿಸಿದರು ರಾಗಿಯನು ಪೊಗಳಿದರಲ್ಲಿ ಮುನಿವರರು
ಸರಸಿಜೋದ್ಭವ ಮೆಚ್ಚಿ ಕೊಟ್ಟನುಕರಕಮಂಡಲ ಪಾತ್ರೆಯನು ಶಂಕರ ತ್ರಿಶೂಲವನಿತ್ತ ಕೊಟ್ಟನುಕಾಲ ದಂಡವನುನಾರದನು ಚಕ್ರವನು ಕೊಟ್ಟನುಉರುತರದ ಕೂರಿಗೆಯ ವಾಸವನುರಗಪತಿ ವಾಸುಗಿಗಳಿತ್ತರು ನೇಣು ಪಾಶಗಳ
ಧನದನಿತ್ತನು ಯಂತ್ರರಕ್ಷೆಯಬನದೊಳಿಹ ಮೂಲಿಕೆಯ ಮಂತ್ರವವಿನಯದಿಂದ ವಿಭೂತಿಯನು ವರಕಾಲಭೈರವನುಇನಶಶಿಗಳಾದರಿಸಿ ಕೊಟ್ಟರುಘನತರದ ಜಲ್ಲರಿಯ ವರುಣನುಕನಕಮಣಿನಿರ್ಮಿತದ ಕರಗವನಿತ್ತು ಮನವೊಲಿದು
ಕರೆಸಿದಳು ಶರ್ವಾಣಿ ತನ್ನಯಮರುಳು ಬಳಗವನೆಲ್ಲ ನೀವೀಧರಣಿಯಲಿ ಸತಿರೂಪತಾಳ್ದ ಗಣಿತದ ಮನೆಗಳಲಿಹುರುಳು ಗೆಡಿಸದೆ ಸರ್ವಭೂತಾತ್ಮರಿಗೆ ಪಕ್ವಾನ್ನವನು ನೀಡೆಂದುರುತರದ ಪ್ರೇಮದಲಿ ಕಳುಹಿದಳಗಜೆ ಕರುಣದಲಿ
ಈತರದಿ ದೇವಾಸುರರು ನವನೀತಿಮಾರ್ಗದಿ ಕರೆದು ವರಗಳಪ್ರೀತಿಯಿಂದಾದರಿಸಿ ಕೊಟ್ಟರನೇಕ ವಿಭವದಲಿಭೂತಳದ ಜನರೊಡನೆ ನೀ ಪ್ರಖ್ಯಾತನಾಗೆನೆ ನರೆದಲೆಗ ನೆರೆವಾತನಾದನು ಮರ್ತ್ಯದಲಿ ನರನಾಥ ಕೇಳೆಂದ
ಇನಕುಲೇಂದ್ರನ ಪದಕೆ ವಂದಿಸಿಹನುಮಬಿನ್ನೈಸಿದನು ನೀವಾತನಿಗೆ ನಾಮಾಂಕಿತವನಿತ್ತಿರಿ ನಿಮ್ಮನಗಲುವೆನೆಎನಗೆ ಹದನೆಂತೆನಲು ನಸುನಗೆಮಿನುಗೆ ನುಡಿದನು ರಾಮನಿದ್ದೆಡೆನಿನಗೆ ನಿನ್ನಭಿಧಾನವಾಗಲು ಹನುಮ ಕೇಳೆಂದ
ಸೇವಕನ ಹಿಂದುಳಿದು ದೇವರುನೀವು ಮುಂದಡಿಯಿಡಲು ನಿಮ್ಮ ದದಾವಗುಣವೆನೆ ಹನುಮನಾಡಿದ ನುಡಿಗೆ ನಸುನಗುತನಾವು ಜನನದಿ ಮುಂದು ಕಲಹದಠಾವಿನಲಿ ನಾ ಮುಂದೆ ನಡೆಯೆಂದೀ ವಿಚಾರವ ತಿಳುಹಿದನು ನರನಾಥನನಿಲಜಗೆ
ಭಾನುವಂಶಜನಾ ವಿಭೀಷಣನಾನನವನೀಕ್ಷಿಸಲು ನಸುನಗುತಾ ನರೇಂದ್ರನ ಸನ್ನೆಯಲಿ ನಿಷ್ಠವಕವನ ಕರೆದುದಾನವೇಶ್ವರನಾ ಸತಿಗೆಸುಮ್ಮಾನದಿಂ ಕೊಡಲೀರ್ವರು ನವಧಾನ್ಯದಲಿ ವಿಖ್ಯಾತರಾದರು ನೃಪತಿ ಕೇಳೆಂದ
ಹರಿಹರ ಬ್ರಹ್ಮಾದಿ ದೇವಾಸುರರು ಮಹಾಮುನೀಶ್ವರರು ವಾನರರು ಕೊಂಡಾಡಿದರು ರಘುಕುಲ ಸಾರ್ವಭೌಮನನುಸುರರು ದುಂದುಭಿ ಮೊಳಗೆ ಮಲ್ಲಿಗೆಯರಳ ಮಳೆಗರೆದವು ವಿಮಾನದಿಪುರಕೆ ತೆರಳಿದರಲ್ಲಿಹರದುವೆ ನೃಪತಿಯಾಸ್ಥಾನ
ಇಂತು ಸಭೆಯಲಿ ಮಾನಭಂಗವದೆಂತು ಬಂದುದು ತನಗೆನುತಲತಿಚಿಂತೆಯಲಿ ಕಡುನೊಂದು ತಲೆಗುತ್ತಿದನು ನೀರೊಳಗೆಇಂತು ಪರಿತಾಪದಲಿ ಲಕ್ಷ್ಮೀಕಾಂತ ಶಿವಶಿವಯೆನುತಲಿರೆ ಭೂಕಾಂತ ದಶರಥರಾಮನಾಥನು ಕರೆದು ಲಾಲಿಸಿದ
ಮರುಳೆ ಬಾರೈ ವ್ರಿಹಿಯೆ ಮನದಲಿಕೊರಗಿ ಚಿಂತಿಸಲೇಕೆ ನಾವೀನರೆದಲೆಗನತಿಶಯವ ಮಾಡಿದೆವೆಂದು ಕನಲಿದೆಯಧರೆಗೆ ಹೊದ್ದಿದ. ಕ್ಷಾಮಕಾಲದಿಕರುಣದಿಂ ನಡೆತಂದು ಲೋಕವಹೊರೆವನದು ಕಾರಣವೆ ಪತಿಕರಿಸಿದೆವು ಕೇಳೆಂದ
ದೀನರಲಿ ದಾರಿದ್ರ್ಯ ಜನರಲಿನೀನು ನಿರ್ದಯನೆಂದೆವಲ್ಲದೆಶಹೀನಗಳೆದವರಲ್ಲ ನಿನ್ನನು ನಾವು ಸಭೆಯೊಳಗೆಮಾನುಷನು ನಮ್ಮೆಡೆಗೆ ನೀ ಸುರಧೇನುವಿಗೆ ಸಮ ನಿನ್ನ ಚಿತ್ತದಿಹಾನಿದೋರಲದೇಕೆ ಬಿಡು ಬಿಡು ಚಿಂತೆ ಯಾಕೆಂದ
ದೇವರಿಗೆ ಪರಮಾನ್ನ ನೀ ಮನುಜಾವಳಿಗೆ ಪಕ್ಪಾನ್ನಮೀತನುನೀವು ಧರೆಯೊಳಗಿಬ್ಬರತಿ ಹಿತದಲ್ಲಿ ನೀವಿಹುದುನಾವು ಕೊಟ್ಟೆವು ವರವ ಸಲ್ಲುವುದಾವ ಕಾಲದಲಿನ್ನು ನೀವೇಪಾವನರು ಪರಮಸುಖಿಯೆಂದುಪಚರಿಸಿದನು ನೃಪತಿ
ನಲವು ಹಿಂಗಿದ ವ್ರಿಹಿಯ ರಾಗಿಯುಜಲವ ಹಸ್ತದೊಳೊರಸಿ ಇಂದ್ರನಬಳಿಗೆ ಕಳುಹುವೆ ನಿನಗೆ ಸಂಶಯವೇಕೆ ಚಿತ್ತದಲಿಕಲಿತನವ ಕೈಕೊಂಡು ಸತ್ಯದಹೊಲಬುದಪ್ಪದೆ ಚೋಳದೇಶವನೊಲಿದು ನೀ ಸಲಹೆಂದು ನೇಮವನಿತ್ತು ಕಳುಹಿಸಿದ
ಪಾಂಡವಾಗ್ರಜ ಕೇಳಿದೈ ಮಾರ‍್ತಾಂಡ ವಂಶಜ ದಾಶರಥಿಯಾಖಂಡಲನ ಮತವಿಡಿದು ಕರೆಸಿದನತುಳ ಧಾನ್ಯವನುಗಂಡುಗಲಿಗಳು ನೀವು ಧರಣೀಮಂಡಲದೊಳಾದರಿಸಿ ದೇವರನಂಡಲೆದು ಸಲಹೆಂದು ನೇಮವನಿತ್ತು ಕಳುಹಿಸಿದ
ತಪಸಿಗಳನಾದರಿಸಿ ದೇಶಾಧಿಪರ ಮನ್ನಿಸಿ ಧರಣಿಯಮರರನುಪಚರಿಸಿ ವಿದ್ವಾಂಸ ಕವಿಜನ ಮಲ್ಲಗಾಯಕರಅಪರಿಮಿತ ಯಾಚಕರ ಕಳುಹಿಸಿತಪನತನಯನ ಸತಿಯರಿಗೆ ರಘುನೃಪತಿ ಕೊಡಿಸಿದನಖಿಳ ದಿವ್ಯಾಂಬರ ಸುಭೂಷಣವ
ಪಾಂಡವಾಗ್ರಜ ಕೇಳು ಘನ ಕೋದಂಡ ದೀಕ್ಷಾಚಾರ್ಯನೀ ಭೂಮಂಡಲದೊಳತಿಕೀರ್ತಿವಡೆದನು ಸತ್ಯಧರ್ಮದಲಿಚಂಡ ವಿಕ್ರಮ ರಾಮ ನೃಪ ಮಾರ್ತಾಂಡಸುತ ಮೊದಲಾದ ವಾನರತಂಡವನು ಕಳುಹಿಸಿ ಸುವಸ್ತುವನಿತ್ತು ಸತ್ಕರಿಸಿ
ಕರುಣದಿಂದ ವಿಭೀಷಣನ ಪತಿಕರಿಸಿ ಕರಿರಥ ತುರಗ ವಸ್ತ್ರಾಭರಣವಿತ್ತುಪಚರಿಸಿ ಕಳುಹಿದನಾಗಳಸುರರನುಗುರು ವಸಿಷ್ಠನ ಮತದಿ ತಮ್ಮಂದಿರು ಸಹಿತ ಸಾಮ್ರಾಜ್ಯವಾಳಿದವರದನಗಪತಿ ಯಾದಿಕೇಶವರಾಮ ವಿಭವದಲಿ
ವ್ಯೋಮಕೇಶ ವಿರಿಂಚಿ ವಾಸವತಾಮರಸದಳನಯನರಿವರು ಮಹಾ ಮಹಿಮರೀ ವ್ರಿಹಿಯ ನರೆದಲೆಗರ ವಿವಾದವನುರಾಮ ಸಭೆಯಲಿ ತೀರಿದುದು ಸುತ್ರಾಮನೋಲಗದಲ್ಲಿ ಕೇಳ್ದೆವುರಾಮಧಾನ್ಯದ ಕಥೆಯನಭಿವರ್ಣಿಸಿದೆ ನಿನಗೆಂದ
ಆಲಿಸಿದೆನೆಲೆ ಮುನಿಪ ನೀವಿದಪೇಳೆ ಕೇಳ್ದೆನು ಮೇಲೆ ಸಜ್ಜನಜಾಲ ತಣಿಯಿತು ಸಕಲ ಕರ್ಣಾಮೃತದಿ ರಂಜಿಸಿತುಹೇಳಲೇನದ ಮನದ ಬೇಸರಬೀಳುಕೊಂಡುದು ಹರುಷ ಚಿತ್ತದೆದಾಳಿ ಹರಿಯಿತ್ತೆ ನುತಮುನಿಪದಕೆರಗಿ ಕೈಮುಗಿದ
ಅರಸ ನೀ ಮನವೊಲಿದು ಕೇಳದಚರಿತೆ ತಾನೊಂದಿಲ್ಲ ಲೋಕದಿಪರಮ ಪುಣ್ಯದ ರಾಮಕಥೆಯಿದ ಕೇಳ್ದೆ ನೀನಿಂದುಕೊರತೆಯುಂಟೇ ಇಷ್ಟಭೋಗವಹರಿಕೊಡುವ ನಿಮಗಿನ್ನು ಎನುತುಪಚರಿಸಿ ಕಳುಹಿಸಿಕೊಂಡು ಮುನಿ ಹೊರವಂಟನಾಶ್ರಮಕೆ
ಶರಧಿಶಯನ ಮುಕುಂದ ಸಚರಾಚರಭರಿತ ನಿರ್ಗುಣ ನಿರಾಮಯಸುರ ನರೋರಗವಂದ್ಯ ವರಪುರದಾದಿಕೇಶವನಚರಣದಂಕಿತವಾಗಿ ಪೇಳಿದಪರಮಧಾನ್ಯದ ಚರಿತೆ ಸಂತತಧರೆಯೊಳಿಂತೊಪ್ಪಿಹುದು ಆಚಂದ್ರಾರ್ಕ ಪರಿಯಂತ


