Rāmadhānya Caritre
ಶ್ರೀ ರಮಾಪತಿ ಸಿಂಧುಶಯನ ಮು
ರಾರಿ ಮುನಿಕುಲ ಪೂಜಿತಾಂಘ್ರಿ ಸ
ರೋರುಹಾಕ್ಷ ಸುದರ್ಶನಾಂಕಿತ ದೇವ ಭವದೂರ
ಮಾರಪಿತ ಕೌಸಲಾದೇವಿ ಕು
ಮಾರ ರಘುಕುಲ ರಾಮನೃಪ ವರ
ಪೌರಚೆನ್ನಿಗರಾಯ ಪಾಲಿಸು ಸಕಲ ಸಜ್ಜನರ
ಗಿರಿಜೆಯರಸನ ಭಜಿಸಿ ಲಕ್ಷ್ಮೀ
ವರನ ಪಾದಾಂಬುಜಕೆ ವಂದಿಸಿ
ಕರಿಮುಖನ ಬಲಗೊಂಡು ಗೀರ್ವಾಣಿಗೆ ನಮಸ್ಕರಿಸಿ
ಗುರುವಿನಂಘ್ರಿಗೆ ನಮಿಸಿ ಸತ್ಕವಿ
ವರರ ಮನದಲಿ ನೆನೆದು ವರಪುರ
ದರಸನನು ಕೊಂಡಾಡಿ ಪೇಳುವೆನೀ ಮಹಾಕಥೆಯ
ರಾಮಧಾನ್ಯದ ಕೃತಿಯನು ಜನ
ಸ್ತೋಮವೆಲ್ಲಾದರಿಸುವಂದದಿ
ಭೂಮಿಗಚ್ಚರಿಯಾಗಿ ಪೇಳುವೆನೀ ಮಹಾಕಥೆಯ
ಪ್ರೇಮದಿಂದಾದರಿಸಿ ಕೇಳ್ದ ಸ
ನಾಮರಿಗೆ ಸತ್ಕರುಣದಲಿ ರಘು
ರಾಮ ಪಾಲಿಸಿಕೊಡುವ ಮನದಲಿ ಇಷ್ಟಸಂಪದವ
ಧರೆಯನೆಲ್ಲವ ಸೋತು ಜೂಜಲಿ
ಕುರುಪತಿಗೆ ಕೈದಳಿಸಿ ತಮ್ಮಂ
ದಿರು ಸಹಿತ ಧರ್ಮಜನು ಕಾಮ್ಯಕ ವನದೊಳಿರುತಿರಲು
ಪರಮಋಷಿ ಶಾಂಡಿಲ್ಯಮುನಿ ಸ
ತ್ಕರುಣದಲಿ ನಡೆತಂದನಲ್ಲಿಗೆ
ವರ ತಪೋಧನರೊಡನೆ ಕಾಣಿಸಿಕೊಂಡನುಚಿತದಲಿ
ಧರಣಿಪತಿ ಯಮಸೂನು ತಮ್ಮಂ
ದಿರು ಸಹಿತಲಿದಿರೆದ್ದು ಮುನಿಪನ
ಚರಣಕಾನತನಾಗಿ ಕೈ ಮುಗಿದಿರಲು ಧರ್ಮಜನ
ಕರೆದು ಲಾಲಿಸಿ ಕುಳ್ಳಿರಿಸಿ ಸ
ತ್ಕರುಣದಲಿ ಮುನಿ ನುಡಿದನೆಲೆ ನೃಪ
ಸಿರಿ ದರಿದ್ರತೆ ನಿಲದು ಪರಿಹರವಹುದು ಕೇಳೆಂದ
ದೇವ ಋಷಿಗಳು ನಿಮ್ಮ ಕರುಣಾ
ಭಾವವೆಮ್ಮಲ್ಲಿರಲು ನಮಗಿ
ನ್ನಾವ ಕಷ್ಟದ ಬಳಕೆದೋರದು ನಿಮ್ಮ ದರುಶನದಿ
ಪಾವನರು ನಾವಾದೆವೆಮಗಿ
ನ್ನಾವ ಬುದ್ಧಿ ಯನರುಹುವಿರಿಯದ
ನೀವು ಪೇಳೆನೆ ನಸುನಗುತ ಮುನಿನಾಥನಿಂತೆಂದ
ಧಾರುಣಿಯೊಳರಸುಗಳು ನಾಲ್ವರು
ಭೂರಿ ಸತ್ಯವ್ರತರು ನಳನೃಪ
ಧೀರ ರಾಮ ಯುಧಿಷ್ಠಿರ ಹರಿಶ್ಚಂದ್ರರಿವರೆಂದು
ಸಾರುತಿದೆ ಜಗವೆಲ್ಲ ನಿಮ್ಮನು
ದಾರನಿದರೊಳು ರಘುಪತಿಯ ಗುಣ
ಹಾರ ಧರ್ಮವ ಪಾಲಿಸಿದ ನರೆದಲೆಗ ವ್ರಿಹಿಯರಿಗೆ
ಎನಲು ರಾಮಚರಿತ್ರೆಯನು ನೀ
ವೆನಗೆ ಪೇಳಿದಡಾಲಿಸುವೆನೆನೆ
ಮನದೊಳಗೆ ನಸುನಗುತ ಶಾಂಡಿಲ್ಯನು ಯುಧಿಷ್ಠಿರಗೆ
ಅನುನಯದೊಳಾದರಿಸಿ ರಘುನಂ
ದನನ ಚರಿತೆಯನರುಹಿ ಭೂಪನ
ಮನಸಿನಲ್ಲಿರುವಂತೆ ವಿಸ್ತರಿಸಿದ ಮಹಾಕಥೆಯ
ಕೇಳು ಕುಂತೀತನಯ ಗಂಗಾ
ಕೂಲದುತ್ತರ ಭಾಗದಲಿ ವಿ
ಶಾಲ ವಿಭವದೊಳೆಸೆವಯೋಧ್ಯಾನಗರವಾ ಪುರವ
ಪಾಲಿಸುವ ದಿನಕರ ಕುಲಾನ್ಪಯ
ಶೀಲ ದಶರಥನಾ ಮಹೀಲೋ
ಲಲೋಚನೆ ಕೌಸಲ್ಯೆ ದೇವಿ ಸುಮಿತ್ರೆ ಕೈಕೆಯರು
ದಶರಥಗೆ ಕೌಸಲೆಗೆ ಜನಿಸಿದ
ರಸಿಕ ಗುಣನಿಧಿ ರಾಮನೃಪನಾ
ಅಸುರೆ ತಾಟಿಕಿಯೊರಸಿ ಮಾರೀಚನ ಸುಬಾಹುವನು
ಕುಸುರಿದರಿದಾ ಮುನಿಮಖವ ರ
ಕ್ಷಿಸಿಯಹಲ್ಯಾಶಾಪವನು ಖಂ
ಡಿಸಿ ನಿಜಾನುಜ ಮುನಿಪಸಹಿತಾ ಮಿಥಿಳೆಗೈದಿದನು
ಹರನ ಧನುವೇರಿಸಿದ ಸೀತೆಯ
ವರಮುಹೂರ್ತದಿ ವರಿಸಿ ತಮ್ಮಂ
ದಿರು ನಿಜಾಂಗನೆ ಸಹಿತ ಮಿಥಿಳಾಪುರದ ಹೊರವಂಟ
ಬರುತ ಮಾರ್ಗಾಂತರದಿ ಕಂಡನು
ಪರಶುರಾಮನ ಗೆಲಿದಯೋಧ್ಯಾ
ಪುರವ ಹೊಕ್ಕನು ರಾಜತೇಜದಿ ಸುರರು ನಲಿದಾಡೆ
ಕೇಳು ಧರ್ಮಜ ನಿಮ್ಮವೋಲ್ ವಿಪಿ
ನಾಲಯದ ಸಿರಿ ಸಂಭವಿಸೆ ಜನ
ಪಾಲ ರಾಮನು ಪಿತೃ ವಚನ ಪಾಲನೆಯ ನೇಮದಲಿ
ಬಾಲಕಿಯನೊಡಗೊಂಡು ಸತ್ಯವ
ಪಾಲಿಸುತ ಲಕ್ಷ್ಮಣನ ಕೂಡೆ ನಿ
ಜಾಲಯವ ಹೊರವಂಟು ಹೊಕ್ಕನು ಘೋರ ಕಾನನವ
ಭರತನನು ಸಂತೈಸಿ ಕಾಕಾ
ಸುರನ ಪ್ರಾಣವ ಕಾಯ್ದು ದಾನವ
ತರುಣಿ ನಾಸಿಕವರಿದು ಮಾಯಾಮೃಗವ ಸಂಹರಿಸಿ
ಸರಸಿಜಾಕ್ಷಿಯನಗಲಿ ಮಾರ್ಗಾಂ
ತರದಿ ಕಂಡ ಜಟಾಯುವನು ಮನ
ಮರುಗಿ ವೃತ್ತಾಂತವನು ತಿಳಿದವನಲ್ಲಿ ಗತಿಗೊಳಿಸಿ
ಅಲ್ಲಿ ಶೋಕೋದ್ರೇಕದಲಿ ಕರ
ಪಲ್ಲವದ ಕದಪಿನಲಿ ಊರ್ಮಿಳೆ
ವಲ್ಲಭನನೊಡಗೊಂಡು ಕಿಷ್ಕಿಂಧಾದ್ರಿಗೈತಂದು
ಅಲ್ಲಿ ಸಂಭಾಷಿಸಿದ ರವಿಸುತ
ನಲ್ಲಿ ವಾಲಿಯ ಮಡುಹಿ ವಾನರ
ರೆಲ್ಲರನು ಕೈಕೊಂಡು ನಡೆದನು ಮುಂದೆ ದಕ್ಷಿಣಕೆ
ವಾರುಧಿಯ ಬಂಧಿಸಿದ ಸೇನಾ
ಭಾರದಲಿ ನಡೆತಂದು ಲಂಕೆಯ
ಸೇರಿ ಮುತ್ತಿಗೆವಿಡಿದು ರಾವಣ ಕುಂಭಕರ್ಣರನು
ಭೂರಿಬಾಣದೊಳೊರಸಿ ದಾನವ
ವೀರರನು ಪರಿಹರಿಸಿ ರಘುನೃಪ
ತಾರಣನು ಪಟ್ಟವನು ಕಟ್ಟಿದನಾ ವಿಭೀಷಣಗೆ
ಧರಣಿಸುತೆಯನು ಕರೆಸಿ ದೇವಾ
ಸುರರುಲಿಯಲು ವಿಭೀಷಣಗೆ ವಿ
ಸ್ತರಿಸಿ ಪೇಳಿದ ಪುರಕೆ ಪಯಣವಮಾಡು ನೀನೆನಲು
ಕರೆಸಿದನು ನಿಜಮಂತ್ರಿ ಕರಿರಥ
ತುರಗ ಪಾಯ್ದಳವಾಕ್ಷಣವೆ
ನೆರೆದುದಗಣಿತ ವೀರದಾನವ ಸೇನೆ ನಿಮಿಷದಲಿ
ಹರುಷದಲಿ ತರಿಸಿದ ಕುಬೇರನ
ವರ ರಥವ ಮೇಳೈಸಿ ದೇವರ
ಸಿರಿಪದಾಂಬುಜಕರ್ಪಿಸಲು ಶ್ರೀರಾಮ ನಸುನಗುತ
ಕರೆಸಿ ಲಕ್ಷ್ಮಣದೇವನನು ನಿಜ
ತರುಣಿ ಸಹಿತೇರಿದ ವರೂಢವ
ತರಣಿಸುತ ಹನುಮಂತ ಜಾಂಬವರೈದಿತೊಗ್ಗಿನಲಿ
ಅಂಗದನು ನಳನೀಲ ಶತಬಲಿ
ತುಂಗ ವಿಕ್ರಮ ಸುಷೇಣನಾ ಪ್ಲ
ವಂಗ ಗವಯ ಗವಾಕ್ಷ ಮೊದಲಾದಖಿಳ ವಾನರರು
ಸಂಗಡಿಸಿ ನೆರೆದುದು ಮಹಾಸಮ
ರಂಗವೀರರು ಮೋಹಿಸಿದ ರಘು
ಪುಂಗವನ ರಥದೊಡನೆ ನಡೆದುದು ಮುಂದೆ ಸಂದಣಿಸಿ
ಧಾರುಣೀಪತಿ ಕೇಳು ಲಂಕೆಯ
ವೀರದಾನವ ಭಟರು ಪುರಜನ
ಪೌರಜನ ಸಹಿತಾ ವಿಭೀಷಣನೊಡನೆ ಮೇಳೈಸಿ
ಭೂರಿಬಲವೈತರುತಲಿರೆ ರಣ
ಭೇರಿ ದಂಧಣಧಣರೆನಲು ಮಿಗೆ
ಚೀರಿದವು ಕಹಳೆಗಳು ದಿಕ್ಪಾಲಕರ ಬೆದರಿಸಿತು
ತಡೆಯದೈತಂದುಭಯಬಲ ಸಂ
ಗಡಿಸಿ ಬರುತಿರೆ ಮುಂದೆ ಸೇತುವ
ಮಡದಿಗೆಲ್ಲವ ತೋರಿಸುತ ನೆರೆ ಕಡಲ ದಾಂಟಿದರು
ನಡೆದು ರಾಮೇಶ್ವರದ ಬಳಿಯಲಿ
ಮೃಡನ ಪೂಜಿಸಿ ಭಕ್ತಿಭಾವದ
ಸಡಗರದಿ ವಾಲ್ಮೀಕಿಯಾಶ್ರಮಕೈದಿದನು ನೃಪತಿ
ಅಲ್ಲಿ ನೆರೆದ ಮಹಾಮುನೀಶ್ವರ
ರೆಲ್ಲರನು ಸತ್ಕರಿಸಿ ಜಾನಕಿ
ವಲ್ಲಭನು ನಡೆತಂದನಾ ಮುಚುಕುಂದನಾಶ್ರಮಕೆ
ಸಡಿಲದುನ್ನತ ಬಲಸಮೇತದಿ
ಕಡಲ ಕಂಡನು ಪಂಚನದಿಯೊಳ್
ಬಿಡದೆ ಪಲ್ಲೈಸಿರುವ ಫಲ ವಸ್ತುಗಳ ಸಂಭ್ರಮದಿ
ಆ ಮಹಾವನದೊಳಗೆ ಸುಭಟ
ಸ್ತೋಮವಿಳಿದುದು ಪಾಳೆಯದ ಸಂ
ಗ್ರಾಮದಿದಿರಲಿ ಗುಡಿಗುಡಾರಂಗಳು ವಿರಾಜಿಸಿತು
ರಾಮಣೀಯಕ ರಚನೆಯಲಿ ಸು
ತ್ರಾಮನೋಲಗದಂತೆ ರಘುಕುಲ
ರಾಮನೈದಿರೆ ಬಂದು ಕಂಡರು ಸಕಲ ಮುನಿವರರು
ಕೌಶಿಕನು ಜಮದಗ್ನಿ ಜಹ್ನು ಪ
ರಾಶರನು ಜಾಬಾಲಿ ಭೃಗು ದೂ
ರ್ವಾಸ ಗೌತಮನಾದಿಯಾದ ಸಮಸ್ತ ಮುನಿವರರು
ಭಾಸುರದ ತೇಜದಲಿ ತಮ್ಮ ನಿ
ವಾಸವನು ಹೊರವಂಟು ಬಂದರು
ದಾಶರಥಿಯನು ಕಂಡು ಹುಸಿದರಕ್ಷತೆಯ ತಳಿದು
ರಾಮ ದಶರಥ ತನಯ ರಘುಕುಲ
ಸೋಮ ಸನ್ನುತ ನಾಮನಾಹವ
ಭೀಮ ಸುಜನ ಪ್ರೇಮ ಜಗದಭಿರಾಮ ನಿಸ್ಸೀಮ
ತಾಮರಸದಳ ನಯನ ದೇವ
ಪ್ರೇಮ ಸುರಕುಲ ಮೌಳಿವಂದಿತ
ಪ್ರೇಮದಿಂದಲಿ ಪಾಲಿಸೆನ್ನುತಲವರು ಪೊಗಳಿದರು
ದೇವಿ ಜಾನಕಿಸಹಿತ ವನದಲಿ
ನೀವು ಕಷ್ಟವ ಬಳಸಿ ಭಕ್ತರ
ಕಾವ ಹದನನು ನೆನೆದು ವಾನರ ಬಲಸಮೇತದಲಿ
ರಾವಣನ ಸಂಹರಿಸಿ ಲಂಕೆಯ
ನಾ ವಿಭೀಷಣಗಿತ್ತು ನಮ್ಮನು
ದೇವ ಪಾಲಿಸೆ ಬಂದೆಯೆಂದುಪಚರಿಸಿದರು ನೃಪನ
ಸಾರಹೃದಯರು ನೀವು ನಮಗುಪ
ಚಾರವೇಕಿದು ನಿಮ್ಮಡಿಯ ಕರು
ಣಾರಸವೆ ಸಲಹುವುದು ನಮ್ಮನು ಸಾಕದಂತಿರಲಿ
ಆರಿಗುಂಟಿದು ನಿಮ್ಮ ದರುಶನ
ಸೇರಿತೆಮಗಿಂದಿಸಲಿ ಯೆಂದುಪ
ಚಾರದಿಂ ಸತ್ಕರಿಸಿ ಕುಳ್ಳಿರಿಸಿದನು ಮುನಿವರರ
ಎಡದ ಕಡೆಯಲಿ ಕಪಿಕುಲೇಂದ್ರನ
ಗಡಣ ಬಲದಲಿ ರಾವಣಾನುಜ
ಸಡಗರದಿ ಮುನಿನಿಕರವಿದಿರಲಿ ಹಿಂದೆ ವಾನರರು
ಮಡದಿ ಲಕ್ಷ್ಮಣ ದೇವರಿರ್ವರು
ಬಿಡದೆ ಚಿಮ್ಮಲು ಚಾಮರಂಗಳ
ಪೊಡವಿಪತಿ ಶ್ರೀರಾಮ ಸಿಂಹಾಸನದಿ ರಂಜಿಸಿದ
ಅಲ್ಲಿ ನೆರೆದ ಮಹಾಮುನೀಶ್ವರ
ರೆಲ್ಲ ತರಿಸಿದರಖಿಳ ವಸ್ತುವ
ಬೆಲ್ಲ ಸಕ್ಕರೆ ಜೇನುತುಪ್ಪ ರಸಾಯನಂಗಳಲಿ
ಭುಲ್ಲವಿಸಿ ರಚಿಸಿದ ಸುಭಕ್ಷಗ
ಳೆಲ್ಲವನು ತುಂಬಿದರು ಹೆಡಗೆಗ
ಳಲ್ಲಿ ಜೋಡಿಸಿ ಹೊರಿಸಿ ತಂದರು ರಾಮನೋಲಗಕೆ
ತಂದು ಶಿಷ್ಯರು ಭಕ್ಷ್ಯಗಳ ಮುದ
ದಿಂದ ಸುರಿಯಲು ನೋಡಿ ನಸುನಗೆ
ಯಿಂದ ರಘುಕುಲಸಾರ್ವಭೌಮನು ಕರೆಸಿ ನಿಜಬಲಕೆ
ಅಂದು ಕೊಡಿಸಲು ನೋಡಿದರು ರುಚಿ
ಯಿಂದ ಸವಿದರು ಪೂಜೆಗಳನಾ
ನಂದದಲಿ ಕೊಂಡಾಡಿದರು ವಾನರರು ಮುನಿವರರ
ಅನಿಲಸುತ ಬಾರೆಂದು ರಘುನಂ
ದನನು ಕರುಣದೊಳಿದರ ರುಚಿಯೆಂ
ತೆನಲು ಕರಗಳ ಮುಗಿದು ಬಿನ್ನೈಸಿದನು ರಘುಪತಿಗೆ
ಇನಕುಲಾನ್ವಯತಿಲಕ ಚಿತ್ತೈ
ಸೆನಗೆ ಸವಿಯಹುದಿನ್ನು ಧಾನ್ಯದ
ತನುವನೀಕ್ಷಿಸಬೇಕು ದೇವರು ತರಿಸಿ ನೀವೆಂದ
ಎನಲು ರಾಮನೃಪಾಲ ಗೌತಮ
ಮುನಿಯನೀಕ್ಷಿಸಿ ಬೇಕು ಸಲೆ ತರಿ
ಸೆನಲು ಧಾನ್ಯವನೊಡನೆ ಯಾಲೋಚಿಸಿದರೀ ಹದನ
ಮನನಲಿದು ತಂತಮ್ಮಶಿಷ್ಯರ
ವಿನಯದಿಂದಲಿ ಕರೆಸಿ ತಾರೆಂ
ದೆನಲು ಮೆರೆದರು ತಳುವದವರನು ತಂದು ಸಭೆಯೊಳಗೆ
ನರೆದಲೆಗನಿದು ನೆಲ್ಲು ಹಾರಕ
ಬರಗು ಜೋಳವು ಕಂಬು ಸಾಮೆಯು
ಉರುತರದ ನವಣೆಯಿದು ನವಧಾನ್ಯವೆಂದೆನಲು
ಮೆರೆವ ರಾಶಿಯ ಕಂಡು ಇದರೊಳು
ಪರಮಸಾರದ ಹೃದಯನಾರೆಂ
ದರಸಿ ಕೇಳಿದನಲ್ಲಿರುತಿಹ ಮಹಾಮುನೀಶ್ವರರ
ಕೆಲರು ಗೋಧಿಯ ಸಾಮೆಯನು ಕೆಲ
ಕೆಲರು ನವಣೆಯ ಕಂಬು ಜೋಳವ
ಕೆಲರು ಹಾರಕನೆಂದು ಕೆಲವರು ನೆಲ್ಲನತಿಶಯವ
ಕೆಲರು ನರೆದಲಗನನು ಪತಿಕರಿ
ಸಲದ ನೋಡಿದ ನೃಪತಿಯದರೊಳು
ಹಲವು ಮತವೇಕೊಂದನೇ ಪೇಳೆನಲು ಗೌತಮನು
ದಾಶರಥಿ ಚಿತ್ತೈಸು ನಮ್ಮಯ
ದೇಶಕತಿಶಯ ನರೆದಲೆಗನೇ
ವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲು
ಲೇಸನಾಡಿದೆ ಮುನಿಪ ಗೌತಮ
ದೋಷರಹಿತನು ಪಕ್ಷಪಾತವ
ನೀಸು ಪರಿಯಲಿ ಮಾಡುವರೆ ಶಿವಯೆಂದನಾ ವ್ರಿಹಿಗ
ಎಲ್ಲ ಧರ್ಮದ ಸಾರವನು ನೀವ್
ಬಲ್ಲಿರರಿಯದೆ ಯೆಲ್ಲರನು ನೀ
ವಿಲ್ಲಿ ನುಡಿವ ಯುಪೇಕ್ಷೆಯುಂಟೇ ಸಾಕದಂತಿರಲಿ
ನೆಲ್ಲು ನಾನಿರೆ ಗೋಧಿ ಮೊದಲಾ
ದೆಲ್ಲ ಧಾನ್ಯಗಳಿರಲುಯಿದರಲಿ
ಬಲ್ಲಿದನು ನರೆದಲೆಗನೆಂಬುದಿದಾವ ಮತವೆಂದ
ಏನೆಲವೊ ನರೆದಲೆಗ ನೀನು ಸ
ಮಾನನೇ ಯೆನಗಿಲ್ಲಿ ನಮ್ಮನು
ದಾನವಾಂತಕ ಬಲ್ಲನಿಬ್ಬರ ಹೆಚ್ಚು ಕುಂದುಗಳ
ಜಾನಕೀಪತಿಯ ಸನಿಹದಲಿ ಕುಲ
ಹೀನ ನೀನು ಪ್ರತಿಷ್ಠ ಸುಡು ಮತಿ
ಹೀನ ನೀನೆಂದೆನುತ ಖತಿಯಲಿ ಬೈದು ಭಂಗಿಸಿದ
ಲೋಕದಲಧಿಕ ಭೋಜನವಿದೆಂ
ದಾಕೆವಾಳರು ಬುಧರು ಜರೆದು ನಿ
ರಾಕರಿಸಿ ಬಿಡಲಂತು ನೀ ಶೂದ್ರಾನ್ನವಾದೆಯಲ
ನಾಕನಿಳೆಯರು ಸಾಕ್ಷಿ ನಿನ್ನ ವಿ
ವೇಕಿಗಳು ಮೆಚ್ಚುವರೆ ಬಾಹಿರ
ಸಾಕು ನಡೆ ನೀನಾವ ಮಾನ್ಯನು ಕಡೆಗೆ ತೊಲಗೆಂದ
ಕ್ಷಿತಿಯಮರರುಪನಯನದಲಿ ಸು
ವ್ರತ ಸುಭೋಜನ ಪರಮ ಮಂತ್ರಾ
ಕ್ಷತೆಗಳಲಿ ಶುಭಶೋಭನದಲಾರತಿಗೆ ಹಿರಿಯರಲಿ
ಕ್ರತುಗಳೆಡೆಯೊಳಗರಮನೆಯಲಿ
ಪ್ರತಿದಿನವು ರಂಜಿಸುತ ದೇವರಿ
ಗತಿಶಯದ ನೈವೇದ್ಯ ತಾನಹೆನೆಂದನಾ ವ್ರಿಹಿಗ
ಜನಪರಿಗೆ ಶಿಶುಗಳಿಗೆ ಬಾಂಧವ
ಜನರೆಡೆಗೆ ಬ್ರಹ್ಮರ ಸಮಾರಾ
ಧನೆಗೆ ವಿದ್ಯಾರಂಭ ಕಾಲಕೆ ಸಕಲ ಭೂಸುರರ
ಮನೆಗಳಲಿ ಹರಿದಿವಸದೌಪಾ
ಸನೆಗಳಲಿ ತಾ ಯೋಗ್ಯ ನಹುದೆಂ
ದೆನಿಸಿಕೊಂಬೆನು ನೀನಯೋಗ್ಯನು ಭ್ರಷ್ಟ ತೊಲಗೆಂದ
ಹೊಸ ಮನೆಯ ಪುಣ್ಯಾರ್ಚನೆಗೆ ಮಿಗೆ
ಯೆಸೆವ ಮದುಮಕ್ಕಳಿಗೆ ಸೇಸೆಗೆ
ವಸುಮತೀಶರ ಗರುಡಿಯಲಿ ಶಸ್ತ್ರಾಸ್ತ್ರದರ್ಚನೆಗೆ
ಎಸೆವ ವಿಪ್ರರ ಫಾಲದಲಿ ರಂ
ಜಿಸುವ ಗಂಧಾಕ್ಷತೆಯಹೆನು ಭಾ
ವಿಸಲು ಲೋಕದೊಳಾರು ಸರಿಯಿಂತೆಂದನಾ ವ್ರಿಹಿಗ
ಧರಣಿಯಮರರು ಮಂತ್ರ ತಂತ್ರೋ
ಚ್ಚರಣೆಯಲಿ ಹಸ್ತಾಂಬುಜದಿ ಮಿಗೆ
ಹರಸಿ ಕೊಡಲಕ್ಷತೆಯ ಮಂಡೆಯೊಳಾಂತ ಮಹಿಮರಿಗೆ
ದುರಿತ ದುಃಖ ವಿನಾಶ ಮಂಗಳ
ಕರವಹುದು ತಾನೀವೆ ಸಂತತ
ಸಿರಿಯ ಸಂಪತ್ತಾಯುವನು ಕೇಳೆಂದನಾ ವ್ರಿಹಿಗ
ಪರಿಮಳದ ಚಂದನದ ತರುವಿಗೆ
ಸರಿಯೆ ಒಣಗಿದ ಕಾಷ್ಠ ಗೋವದು
ಕರೆದ ಹಾಲಿಗೆ ಕುರಿಯ ಹಾಲಂತರವೆ ಭಾವಿಸಲು
ಪರಮ ಸಾಹಸಿ ವೀರ ಹನುಮಗೆ
ಮರದ ಮೇಲಣ ಕಪಿಯು ತಾನಂ
ತರವೆ ಘಡ ನೀನೆನಗೆ ಸರಿಯೇ ಭ್ರಷ್ಟ ತೊಲಗೆಂದ
ಸುರನದಿಗೆ ತಾ ಸರಿಯೆ ಕಾಡೊಳು
ಹರಿವ ಹಳ್ಳದ ನೀರು ಗರುಡನ
ಮರಿಗೆ ಹದ್ದಂತರವೆ ಹಂಸಗೆ ಬಕನು ಹೋಲುವುದೆ
ಸರಸ ಮರಿ ಕೋಗಿಲೆಗೆ ವಾಯಸ
ನಣಕಿಸುವ ತೆರನಾಯ್ತು ಸಾಕಿ
ನ್ನರೆದಲೆಗ ನೀನಾವ ಮಾನ್ಯನು ಕಡೆಗೆ ತೊಲಗೆಂದ
ನುಡಿಯ ಕೇಳುತ ಕನಲಿ ಕಂಗಳು
ಕಿಡಿಮಸಗಿ ಖತಿಗೊಂಡು ನುಡಿದನು
ಸಿಡಿಲ ಗರ್ಜನೆಯಂತೆ ಸಭೆಯಲಿ ಜರೆದನಾ ವ್ರಿಹಿಯ
ನುಡಿಗೆ ಹೇಸದ ಭಂಡ ನಿನ್ನೊಳು
ಕೊಡುವರೇ ಮಾರುತ್ತರವ ಕಡು
ಜಡನಲಾ ನಿನ್ನೊಡನೆ ಮಾತೇಕೆಂದ ನರೆದಲೆಗ
ಸತ್ಯಹೀನನು ಬಡವರನು ಕ
ಣ್ಣೆತ್ತಿ ನೋಡೆ ಧನಾಢ್ಯರನು ಬೆಂ
ಬತ್ತಿ ನಡೆವ ಉಪೇಕ್ಷೆ ನಿನ್ನದು ಹೇಳಲೇನದನು
ಹೆತ್ತ ಬಾಣಂತಿಯರು ರೋಗಿಗೆ
ಪತ್ಯ ನೀನಹೆ ಹೆಣದ ಬಾಯಿಗೆ
ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕರವೆಂದ
ಸತ್ತದಿನದಾರಭ್ಯ ಮನುಜರು
ಮತ್ತೆ ಕರ್ಮವ ಹೊತ್ತು ಪಿಂಡವ
ನಿತ್ತು ತಪ್ಪದೆ ಮತ್ತೆ ವಾಯಸಕುಲವ ಕರೆಕರೆದು
ತುತ್ತನಿಡುವರು ಎಳ್ಳು ದರ್ಭೆಗೆ
ತೆತ್ತಿಗನು ನೀನಾದೆ ಕೀರ್ತಿಯ
ಹೊತ್ತುಕೊಂಡೆ ದುರಾತ್ಮ ನಿನ್ನೊಳು ಮಾತದೇಕೆಂದ
ಮಳೆದೆಗೆದು ಬೆಳೆಯಡಗಿ ಕ್ಷಾಮದ
ವಿಲಯಕಾಲದೊಳನ್ನವಿಲ್ಲದೆ
ಅಳಿವ ಪ್ರಾಣಿಗಳಾದರಿಸಿ ಸಲಹುವೆನು ಜಗವರಿಯೆ
ಎಲವೊ ನೀನೆಲ್ಲಿಹೆಯೊ ನಿನ್ನಯ
ಬಳಗವದು ತಾನೆಲ್ಲಿಹುದು ಈ
ಹಲವು ಹುಲು ಧಾನ್ಯಗಳೆನಗೆ ಸರಿದೊರೆಯೆ ಕೇಳೆಂದ
ಬಲ್ಲಿದರು ಬರೆ ಬಡವರಲಿ ನಿ
ನ್ನಲ್ಲಿಯುಂಟು ಉಪೇಕ್ಪೆ ನಮ್ಮಲಿ
ಸಲ್ಲದೀ ಪರಿ ಪಕ್ಷಪಾತವದಿಲ್ಲ ಭಾವಿಸಲು
ಬಲ್ಲಿದರು ಬಡವರುಗಳೆನ್ನದೆ
ಎಲ್ಲರನು ರಕ್ಷಿಸುವೆ ನಿರ್ದಯ
ನಲ್ಲ ತಾ ನಿನ್ನಂತೆ ಎಲೆ ಕುಟಲಾತ್ಮ ಹೋಗೆಂದ
ನಾನೆಲೈ ಲೋಕದಲಿ ನಿರ್ದಯನು ಬಳಿ
ಕೇನಲೈ ಸದ್ಧರ್ಮದಲಿ ಮಧು
ಪಾನವಾದೆಯಲಾ ದುರಾತ್ಮಕ ನಿನ್ನ ಸೇವಿಸಿದ
ದಾನವರು ಮಾನವ ಕಿರಾತರು
ಜ್ಞಾನವಳಿದು ವಿಕಾರದಲಿ ಮತಿ
ಹೀನರಾದರು ನಿನ್ನ ಗುಣವೇನೆಂದನಾ ವ್ರಿಹಿಗ
ಆಡಬಹುದತಿಶಯವ ನೀ ಕೊಂ
ಡಾಡಿ ಕೊಂಬರೆ ಸಾಕು ಸಜ್ಜನ
ರಾಡಿದರೆ ಪತಿಕರಿಸಿ ಲಜ್ಜೆಗೆ ಸಿರವ ಬಾಗುವರು
ನೋಡಿರೈ ಸಭೆಯವರು ದುರ್ಮತಿ
ಗೇಡಿ ಇವನಾಡುವದ ನಾವಿ
ನ್ನಾಡಿದರೆ ಹುರುಳಿಲ್ಲ ಶಿವಶಿವಯೆಂದ ನರೆದಲೆಗ
ಸತ್ತವರ ಪ್ರತಿಬಿಂಬರೂಪನು
ಬಿತ್ತರಿಸಿ ಪಿತೃನಾಮಗಳ ನಿನ
ಗಿತ್ತು ಮೂವರ ಪೆಸರಿನಲಿ ಕರಕರೆದು ದರ್ಭೆಯಲಿ
ನೆತ್ತಿಯನು ಬಡಿ ಬಡಿದು ಕಡೆಯಲಿ
ತುತ್ತನಿಡುವರು ಪಶುಗಳಿಗೆ ನೀ
ನೆತ್ತಿದೆಯೆಲಾ ತನುವ ಸುಡಬೇಕೆಂದ ನರೆದಲೆಗ
ಏನಿಹಿರಿ ಹಿರಿ ಕಿರಿದ ನುಡಿಯದೆ
ಮೌನದೀಕ್ಷಿತರಾದಿರಲ ಕಂ
ಡೇನು ಮುರಿದಾಡುವಿರಸಾಧ್ಯವೊ ಸಾಧ್ಯವೋ ನಿಮಗೆ
ಈ ನಪುಂಸಕನಲಿ ನಿರಂತರ
ವೇನು ಕಾರಣ ವಾದವಿದು ನಮ
ಗೇನು ಬುದ್ಧಿಯನರುಹುವಿರಿ ಪೇಳೆಂದ ನರೆದಲೆಗ
ಮಸೆದುದಿತ್ತಂಡಕ್ಕೆ ಮತ್ಸರ
ಪಿಸುಣ ಬಲರತಿ ನಿಷ್ಠುರರು ವಾ
ದಿಸಲು ಕಂಡನು ನೃಪತಿ ಮನದಲಿ ನೋಡಿ ನಸುನಗುತ
ಹಿಸುಣರಿನದಿರ ಮತ್ಸರವ ಮಾ
ಣಿಸುವ ಹದನೇನೆನುತ ಯೋಚಿಸಿ
ದಸುರಮುನಿಪರ ನೋಡೆ ಗೌತಮ ಮುನಿಪನಿಂತೆಂದ
ಅರಸುಗಳು ನಾವೆಲ್ಲ ಭೂಮೀ
ಸುರರು ನೆರದಿಹ ದಾನವರು ವಾ
ನರರು ನಮಗೀ ನ್ಯಾಯವನು ಪರಿಹರಿಸಲಳವಲ್ಲ
ಕರೆಸುವೆವು ಹರಿಹರವಿರಿಂಚಾ
ದ್ಯರನಯೋಧ್ಯೆಗೆಅವರ ಗುಣವಾ
ಧರಿಸಿ ಪೇಳ್ವರು ನಯದೊಳೆಂದನು ರಾಮ ನಸುನಗುತ
ಪರಮ ಧಾನ್ಯದೊಳಿಬ್ಬರೇ ಇವ
ರಿರಲಿ ಸೆರೆಯೊಳಗಾರು ತಿಂಗಳು
ಹಿರಿದು ಕಿರಿದೆಂಬಿವರ ಪೌರುಷವರಿಯ ಬಹುದಿನ್ನು
ಪುರಕೆ ಗಮನಿಸಿ ನಾವು ನಿಮ್ಮನು
ಕರೆಸುವೆವು ಕೇಳೆನುತಯೋಧ್ಯಾ
ಪುರಿಗೆ ಪಯಣವ ಮಾಡಹೇಳಿದನಾ ವಿಭೀಷಣಗೆ
ಸೆರೆಗೆ ನಮ್ಮನು ನೂಕಿ ದೇವರು
ಸಿರಿಯ ಮದದಲಿ ಕಳೆದರೆಮ್ಮನು
ಮರದುಸಲಹುವರಾರು ನಿಮ್ಮಯ ಕರುಣ ಹೊರತಾಗಿ
ಧರೆಯೊಳಿನ್ನಪಕೀರ್ತಿ ನಾರಿಯ
ಸೆರಗ ಹಿಡಿವುದೆ ಲೇಸೆನುತತವೆ
ಕರಮುಗಿದು ತಲೆಗುತ್ತಿಪೇಳಿದನಾಗ ನರೆದಲೆಗ
ಆಗಲದಕೇನೆಂದು ಕರುಣಾ
ಸಾಗರನು ಬೀಳ್ಕೊಟ್ಟ ನವರನು
ಯೋಗಿಗಳ ವಶಮಾಡಿ ಗೌತಮಮುನಿಯನುಪಚರಿಸಿ
ರಾಗ ಮಿಗೆ ಮುನಿವರರನಲ್ಲಿ ಸ
ರಾಗದಿಂದಲೆ ಕಳುಹಿ ಬಳಿಕಾ
ಯಾಗ ಸಂರಕ್ಷಕನು ವೀಳೆಯವಿತ್ತನನಿಬರಿಗೆ
ಹರದುದಾಕ್ಷಣದಲ್ಲಿ ವ್ಯೋಮದಿ
ಸುರರು ಮಿಗೆ ಕೊಂಡಾಡೆ ಭೂಸುರ
ವರರು ಕಳುಹಿಸಿಕೊಂಡು ಹೊಕ್ಕರು ತಮ್ಮ ಮಂದಿರವ
ಹರುಷ ತಗ್ಗಿತು ತಾವರೆಗೆ ಮುಖ
ವರಳಿದುವು ನೈದಿಲೆಗೆ ತಾರಕೆ
ನೆರದುವಾಕಾಶದಲಿ ಅಸ್ತಾಂಬುಧಿಗೆ ಇನನಿಳಿದ
ನೆಗಳಿದುವು ಬೊಂಬಾಳದೀವಿಗೆ
ಝಗಝಗಿಪ ನವರತ್ನದೊಡುಗೆಯ
ಹೊಗರೊಗುವ ಕೈದುಗಳ ಸುಭಟರು ಮುಂದೆ ಸಂದಣಿಸೆ
ನೆಗಹಿ ಕರಗಳ ಪಾಠಕರು ಬಿರು
ದುಗಳ ಹೊಗಳಲು ಚೀರಿದುವು ಕಹ
ಳೆಗಳು ರಭಸದಿ ಬಂದು ಹೊಕ್ಕನು ನೃಪತಿಯರಮನೆಯ
ಗಗನಮಣಿ ದಿಗುತಟವ ಸಾರಲು
ಹೊಗರೊಗುವ ಬಲು ಕಾಳಗವು ಸಲೆ
ಜಗವ ಮುಸುಕಲು ಜನರು ನಿದ್ರಾಂಗನೆಯ ಕೇಳಿಯಲಿ
ದೃಗುಯುಗಳನೆವೆ ಬಿಗಿದಿರಲು ಮನ
ವಿಗತಿವಡೆದಿರೆ ಧರೆಗೆ ದಿನಮಣಿ
ಮೊಗವ ತೋರುವೆನೆನುತ ಪೂರ್ವಾಚಲಕೆ ನಡೆತಂದ
ಅರಸನುಪ್ಪವಡಿಸಿದ ಪೂರ್ವದ
ತರಣಿಗರ್ಘ್ಯವ ಕೊಟ್ಟು ಭೂಸುರ
ವರರ ಮಂತ್ರಾಕ್ಷತೆಯ ಕೈಗೊಂಡನನುಜನೊಡಗೂಡಿ
ಹರುಷ ಮಿಗೆ ಪಾಠಕರ ಸಂದಣಿ
ನೆರೆಯೆ ಮುನಿಕುಲದೊಡನೆ ನಿಜಮಂ
ದಿರವ ಹೊರವಂಟವನಿಪತಿಯೋಲಗಕೆ ನಡೆತಂದ
ಕರೆಸಿದನು ರಾವಣನ ತಮ್ಮನ
ತರಣಿಸುತ ನಳನೀಲ ಜಾಂಬವ
ಶರಭ ಶತಬಲಿಯಾದಿ ಮುಖ್ಯ ಸಮಸ್ತ ವಾನರರ
ಹರುಷ ಮಿಗೆ ಸತ್ಕರಿಸಿ ಮುಂದಕೆ
ತೆರಳಬೇಕೆನೆ ವೀರಸುಭಟರು
ನೆರೆದುರುಬಿಕೈದುಗಳ ಜಡಿದಗ್ಗಳೆಯರೈದಿದರು
ಹೊಡೆವ ತಮ್ಮಟೆ ಭೇರಿ ಡಮರುಗ
ಗಿಡಿಬಿಡಿ ಡೌಡೆ, ಡಿಂಡಿಮ ಢಕ್ಕೆ
ನುಡಿವ ಶಂಖ ಮೃದಂಗ ಘನಸನಿಸ್ಸಾಳ ಮೊದಲಾದ
ಬಡಿವ ನಾನಾ ವಾದ್ಯರವ ಭೋ
ರಿಡಲು ಜಯರವದೊಡನೆ ರಘುನೃಪ
ಮಡದಿ ಸಹಿತೇರಿದನು ಧನಪನ ದಿವ್ಯಮಣಿರಥವ
ಒಡನೆ ಏರಿದನೂರ್ಮಿಳಾಪತಿ
ಬಿಡದೆ ಚಿಮ್ಮುವ ಚಾಮರವ ಸಾ
ಲಿಡುತ ನಡೆದುದು ಸಕಲದಳ ಸುಗ್ರೀವನಾಜ್ಞೆಯಲಿ
ಕಡುಮನದ ರಕ್ಕಸರು ಏರಿದ
ರೊಡನೆ ಕರಿರಥತುರಗವನು ಪಡೆ
ಕಡಲ ಜಲ ಮೊರೆವಂತೆ ಮೊರೆದುದು ನೃಪನ ಬಲಜಲಧಿ
ಕಳೆದು ಬಂದರು ಪಂಚನಂದಿಯ
ಬಳಿಯಲೊಪ್ಪುವ ಪಂಚನದಿಗಳ
ಹೊಳೆಯ ದಾಂಟುತ ಕಂಡು ಕಿಷ್ಕಿಂಧಾದ್ರಿಗೈತಂದು
ಲಲನೆ ಸೀತಾದೇವಿ ರವಿಜನ
ಲಲನೆಯರ ತಾ ಕರೆಸಿ ತನ್ನೊಡ
ನೊಲಿದು ಬರಬೇಕೆನಲು ಬಂದರು ದೇವಿಯರನೈದಿ
ಹೊಲಬುದಪ್ಪದೆ ಸಕಲ ನಾಯಕ.
ದಳಸಹಿತ ಮುಂಬಟ್ಟೆಯಲಿ ಮುನಿ
ಕುಲದ ದರುಶನವಾಗಲಾಶೀರ್ವಾದವನು ಕೊಂಡು
ಬಳಿವಿಡಿದು ಬರೆ ಜನರ ಪಾಪವ
ಕಳೆದು ಸಲಹುವ ತುಂಗಭದ್ರೆಯ
ಕಳೆದುಬಂದರು ಮುಂದೆ ಭಾರದ್ವಾಜನಾಶ್ರಮಕೆ
ಇಳಿದುದಾ ಬನದೊಳಗೆ ಪಾಳಯ
ಬಳಸಿಬಿಟ್ಟುದು ಮೂರು ಯೋಜನ
ದಳತೆಯಲಿ ಕಪಿಸೇನೆಯಾ ಮಧ್ಯದಲಿ ನೃಪಭವನ
ಹಳದಿ ಕೆಂಪಿನ ನೀಲವರ್ಣದ
ಚಳೆಯ ಪಟ್ಟೆಯಗುಡಿ ಗುಡಾರದಿ
ಹೊಳೆವ ರತ್ನಗಳಿಂದ ಕಲಶದ ಸಾಲು ರಂಜಿಸಿತು
ಅರಮನೆಯ ಬಲವಂಕದಲಿ ನಿಜ
ಶರಣನರಮನೆ ವಾಮಭಾಗದಿ
ತರಣಿಸುತ ಸುಗ್ರೀವನಂಗದ ಜಾಂಬವಾದಿಗಳ
ವರ ಭವನವೆಸೆದಿರಲು ಮೇಲು
ಪ್ಪರಿಗೆಗಳ ರಂಜಿಸಿ ಕವಾಟದಿ
ಮೆರೆದುದಗ್ಗದ ನೀರ ರಾಮನ ಪಾಳ್ಯ ಬನದೊಳಗೆ
ಹೊರವಳಯದಲಿ ದಾನವರ ಬಲ
ಶರಧಿಬಿಟ್ಟುದು ಬಳಸಿ ಸುತ್ತಲು
ಕರಿತುರಗ ರಥ ಪಾಯ್ದಳವು ಸಂದಣಿಸಿ ನಿಂದಿರಲು
ಮೊರೆವ ರಭಸವ ಕಂಡು ಸುರಮುನಿ
ವರರಿದೇನೋಯೆನುತ ನಿಜಮಂ
ದಿರವ ಹೊರವಂಟಲ್ಲಿ ಕೇಳ್ದರು ರಾಮನತಿಶಯವ
ಉರಗಮಾಲಿ ಮತಂಗ ಗಾರ್ಯ್ಗಾಂ
ಗಿರಸ ಗಾಲವ ಕಣ್ವ ಜಯಮುನಿ
ಪರಶುರಾಮ ಪರಾಶ ಕೌಶಿಕ ದಾಲ್ಭ್ಯ ಮೊದಲಾದ
ವರಮುನಿಗಳೊಡನೈದಿ ಬಂದನು
ಭರದಿ ಭಾರದ್ವಾಜ ಮುನಿ ರಘು
ವರನ ಕಾಣಿಸಿಕೊಂಡು ಹರಸಿದರತುಳ ವಿಭವದಲಿ
ಬಂದ ಮುನಿಗವನೀಶ ವಂದಿಸಿ
ನಿಂದು ಕರಗಳ ಮುಗಿದು ವಿನಯದೊ
ಳೆಂದ ನಿಮ್ಮ ಸದಾಗ್ನಿ ಹೋತ್ರ ಸುಯಾಗ ಕರ್ಮಗಳು
ಸಂದ ಜಪತಪಗಳು ಸುರಕ್ಷಿತ
ದಿಂದ ಮೆರೆವುದೆ ದಾನವರ ಭಯ
ದಿಂದ ದುರ್ಘಟವಿಲ್ಲಲಾ ಮುನಿನಾಥ ಕೇಳೆಂದ
ದಶರಥಾತ್ಮಜ ನೀನು ಲಂಕೆಯೊ
ಳಸುರ ವೀರರು ಕುಂಭಕರ್ಣನು
ದಶಶಿರನು ಮೊದಲಾದ ದುರ್ಜನರೆಲ್ಲರನು ಮಡುಹಿ
ಅಸುರನನುಜಗೆಯಚಲ ಪದವಿಯ
ನೊಸೆದು ಸಲಹಿದೆ ನಮ್ಮ ಕರುಣಾ
ರಸದಿ ಪಾಲಿಸೆ ಬಂದೆಯೆಂದುಪಚರಿಸಿದನುನೃಪನ
ಕಮಲಸಂಭವನಿತ್ತ ವರದಲಿ
ಕುಮತಿ ದಾನವರತುಳ ಬಲದಿಂ
ದುರುಳ ಕಂಟಕರಾಗಿ ಮಡಿದರು ನಿನ್ನ ಬಾಣದಲಿ
ತಮದ ಗಂಟಲನೊಡದು ಮೂಡುವ
ದ್ಯುಮಣಿಯಂದದಿ ನೀವು ಜನಿಸಿರ
ಲೆಮಗೆ ದನುಜಾಧಮರ ಭಯವೇನೆಂದನಾ ಮುನಿಪ
ಅರಸ ಕೇಳ್ದಾ ಮುನಿಯ ವಚನದ
ಕರುಣರಸಧಾರೆಯಲಿ ಯಂತಃ
ಕರಣ ನನದುಪಚರಿಸಿ ಕುಳ್ಳಿರಿಸಿದನು ಮುನಿವರರ
ಮರುತಸುತನನು ಕರೆದು ತವಕದಿ
ಭರತನನು ಸಂತೈಸು ಹೋಗೆಂ
ದುರುತರದ ಪ್ರೇಮದಲಿ ಕಳುಹಿಸಲೆರಗಿ ಹೊರವಂಟ
ಹರಿವ ಗಂಗಾನದಿಯ ದಾಂಟುತ
ಭರದಿ ಕಂಡನು ಶೃಂಗಬೇರೀ
ಪುರವ ಹೊಕ್ಕನು ಗುಹನ ಕಾಣಿಸಿಕೊಂಡನುಚಿತದಲಿ
ಮರುತ ಬಿನ್ನೈಸಿದನು ರಘುನೃಪ
ವರನು ಪೇಳಿದ ಬುದ್ಧಿಯನು ವಿ
ಸ್ತರಿಸೆ ನಿಷಧಾಧಿಪತಿ ಕೇಳ್ದತಿಶಯದ ಹರುಷದಲಿ
ಅನಿಲಸುತ ಬಾ ಮಗನೆ ರಘುನಂ
ದನಗೆ ನಿನ್ನವೊಲಾಪ್ತರಾರೀ
ದನುಜ ಮನುಜ ಭುಜಂಗರೊಳುಂಟೆ ನಿನ್ನ ಹೋಲುವರು
ಹನುಮ ನಂದೀಗ್ರಾಮದಲಿ ಭರ
ತನಿಹನಗ್ರಜನಗಲ್ದ ಖೇದದ
ಮನದ ಪರಿತಾಪವನು ಮಾಣಿಸು ಬೇಗ ಹೋಗೆಂದ
ಹರುಷಮಿಗೆ ಜನಪದದ ಪರಿಯಂ
ತರದಿ ಬಂದನಿಲಜನ ಕಳುಹಿಸಿ
ಮರಳಿದನು ಗುಹಸಿತ್ತ ಮಾರುತಿ ಮುಂದೆ ಪಥವಿಡಿದು
ಬರುತ ಮಾರ್ಗಾಂತರದಿ ಕಾನನ
ಗಿರಿ ಶಿಖರಗಳ ಕಳೆದು ಬರೆ ವಿ
ಸ್ತರದ ನಂದೀಗ್ರಾಮವನು(ಕಂಡಲ್ಲಿ) ಮನನಲಿದು
ಬಂದು ಭರತನ ಕಂಡು ನಮಿಸಿದ
ಡೆಂದ ನೀನಾರಿಲ್ಲಿಗಿಂದೈ
ತಂದ ಕಾರಣವೇನು ನಿನ್ನಭಿಧಾನವೇನೆನಲು
ನಿಂದು ಕೈಗಳ ಮುಗಿದು ನಸುನಗೆ
ಯಿಂದ ನುಡಿದನು ಹನುಮ ತಾ ರಘು
ನಂದನನ ಸೇವಕನು ಕಳುಹಿದ ದೇವ ನಿಮ್ಮಡಿಗೆ
ರಾವಣನ ಸಂಹರಿಸಿ ಲಂಕೆಯ
ನಾ ವಿಭೀಷಣಗಿತ್ತು ಸೀತಾ
ದೇವಿ ಲಕ್ಷ್ಮಣಸಹಿತ ಭಾರದ್ವಾಜನಾಶ್ರಮಕೆ
ದೇವ ಬಂದನು ಸಕಲ ವಿಭವದಿ
ನೀವು ಚಿತ್ತದೊಳವಧರಿಸಿಯೆನೆ
ಪಾವಮಾನಿಯ ನುತಿಸಿ ತಕ್ಕೈಸಿದನು ಭರತೇಂದ್ರ
ಹರುಷ ಹೆಚ್ಚಿದ ಮನದಿ ತಮ್ಮನ
ಕರೆದು ಶತ್ರುಘ್ನನನಯೋಧ್ಯಾ
ಪುರಿಗೆ ಕಳುಹಿದ ಜನನಿಯರಿಗೀ ವಾರ್ತೆಯೆಲ್ಲವನು
ಅರುಹಿ ಬಾಯೆನಲಗ್ರಜನ ಸಿರಿ
ಚರಣಕಭಿಮುಖನಾಗಿ ವಂದಿಸಿ
ಹರುಷ ಮಿಗೆ ಹೊರವಂಟು ಹೊಕ್ಕನಯೋಧ್ಯ ಪುರವರವ
ಚೀರಿದವು ಕಹಳೆಗಳು ತಮ್ಮಟೆ
ಭೇರಿ ಶಂಖ ನಿನಾದ ಹಬ್ಬಿತು
ಸಾರಿ ತಂದಿನ ದಿವಸದಲಿ ಶತ್ರುಘ್ನ ಬಂದನೆನೆ
ಆರತಿಯ ತಳಿಗೆಗಳ ಸಂದಣಿ
ಕೇರಿ ಕೇರಿಯೊಳೈದಿದವು ಕೈ
ವಾರಿಗಳ ಗಡಣದಲಿ ಹೊಕ್ಕನು ರಾಜ ಮಂದಿರವ
ಜನನಿಯರು ಮೂವರಿಗೆ ನಮಿಸಿದ
ತನುಜನನು ತಕ್ಕೈಸಿ ಪೇಳಿದ
ನಿನಕುಲಾನ್ವಯ ಬಂದ ಭಾರದ್ವಾಜನಾಶ್ರಮಕೆ
ಎನಲು ಹರುಷಾನಂದಮಯರಸ
ಹೊನಲಿನೊಳಗೋಲಾಡಿದರು ಮುಖ
ವನಜವರಳಿತು ಜನನಿಯರಿಗವನೀಶ ಕೇಳೆಂದ
ಕರೆಸಿದನು ಶತ್ರುಘ್ನ ಮಂತ್ರೀ
ಶ್ವರ ಸುಮಂತನ ಕೂಡೆ ನುಡಿದನು
ತರಣಿಕುಲ ರಾಜೇಂದ್ರನಣ್ಣನ ಬರವ ಕೇಳಿದೆವು
ಪುರವ ಶೃಂಗರಿಸಲ್ಲಿ ಕರಿರಥ
ತುರಗ ಮೇಳೈಸಿರಲಿ ಮೋದದ
ತರುಣಿಯರು ಸಂದಣಿಸಿ ನಡೆಯಲಿ ನೃಪನ ದರುಶನಕೆ
ಎಂದು ಮಂತ್ರಿಯೊಳರುಹಿ ತಾ ನಿಜ
ಮಂದಿರಕೆ ನಡೆತಂದು ಪಯಣವ
ನಂದು ಮಾಡಿದ ಜನನಿ ಕೌಸಲದೇವಿ ಮೊದಲಾದ
ಇಂದುವದನೆಯರೇರುತಿರ್ದರು
ಅಂದಣವ ಸೊಸೆಯರು ವರೂಥದಿ
ಹಿಂದುಮುಂದಿಟ್ಟಣಿಸಿ ನಡೆದುದು ಸತಿಯರೊಗ್ಗಿನಲಿ
ಪುರಜನವ ಸಂತೈಸಿ ಭೂಸುರ
ವರರ ಮಂತ್ರಾಕ್ಷತೆಯ ಕೈಕೊಂ
ಡರಸ ರಾಮ ಶ್ರೀ ಪದಾಬ್ಜವ ನೆನೆದು ಮನದೊಳಗೆ
ತರಿಸಿ ಮಾಲ್ಯಾಂಬರ ಸುಗಂಧವ
ಕರೆಸಿಕೊಟ್ಟನು ರಾಜವರ್ಗಕೆ
ಹರುಷದಲಿ ಶತ್ರುಘ್ನನೇರಿದ ದಿವ್ಯಮಣಿ ರಥವ
ವಿವಿಧವಾದ್ಯ ಧ್ವನಿಯ ಕಹಳಾ
ರವದ ಸನ್ನೆ ಯೊಳೈದಿ ಬಹ ನೃಪ
ನಿವಹದಲಿ ಚತುರಂಗ ಸೇನೆಯ ಪದದ ಕೆಂಧೂಳಿ
ಭುವನವಾಕಾಶವನು ಮುಸುಕಿದ
ಡವನಿ ನೆಗ್ಗಲು ಬಲವು ಬಲುಭಾ
ರವಣೆಯಲಿ ಹೊರವಂಟನಾ ಶತ್ರುಘ್ನನೊಲವಿನಲಿ
ಸತ್ತಿಗೆಯ ಸಾಲುಗಳ ಬೀಸುವ
ಬಿತ್ತರದ ಚೌರಿಗಳ ರಥದಲಿ
ತೆತ್ತಿಸಿದ ಸೂನಗಿಯ ಸೀಗುರಿ ಗುಡಿಪತಾಕೆಗಳ
ಮತ್ತೆ ಗಜಘಟ ತುರಗ ಕಾಲಾ
ಳೊತ್ತರಿಸಿ ಬರೆ ಕಮಠ ಕೂರ್ಮರ
ನೆತ್ತಿ ನೆಗ್ಗಲು ನಡೆದುದಗಣಿತ ಸೇನೆ ವಹಿಲದಲಿ
ಪುರವ ಕಳೆದರು ಮುಂದೆ ಯಮುನಾ
ವರನದಿಯನುತ್ತರಿಸೆ ಪಯಣದಿ
ಮೆರೆವ ನಂದೀಗ್ರಾಮವನು ಕಂಡಲ್ಲಿಗೈತಂದು
ಭರತನೊಡಗೊಂಡಲ್ಲಿ ಹನುಮನ
ಕರುಣದಲಿ ಸತ್ಕರಿಸಿ ಮುಂದಕೆ
ತೆರಳಿದರು ಕೌಸಲ್ಯ ರಾಮನ ಕಾಣ್ಬ ತವಕದಲಿ
ಇತ್ತ ಕೇಳೈ ಪಾಂಡವಾಗ್ರಜ
ಸತ್ವಗುಣನಿಧಿ ರಾಮಚಂದ್ರನು
ವತ್ತರಿಸಿಬರೆ ಕಂಡು ನಲಿಯುತ ಜಾನಕಿಯ ಕರೆದು
ಇತ್ತ ನೋಡೆಲೆ ದೇವಿ ಭರತನ
ಶತ್ರುಹರ ಶತ್ರುಘ್ನರಿವರು ಸ
ಮಸ್ತ ಬಲಸಹಿತಿದಿರು ಬರುತಿದೆ ನೋಡು ನೀನೆಂದ
ಎಂದು ತೋರಿಸಿ ಮನದ ಹರುಷದಿ
ಮಿಂದುಲಕ್ಷ್ಮಣನೊಡನೆಸತಿಸಹಿ
ತಂದು ರಥವೇರಿದನು ರಾಮನೃಪಾಲನಾಕ್ಷಣಕೆ
ಮುಂದೆ ನೆರೆದುದು ಬನದೊಳಗೆ ಮುದ
ದಿಂದ ಪಾಠಕರುಗ್ಘಡಿಸೆ ನಲ
ವಿಂದ ಮುನಿಕುಲದೊಡನೆ ತೆರಳಿದನಾ ಮಹೀಪಾಲ
ತಲ್ಲಣಿಸಿ ದಶದಿಕ್ಕುಗಳ ಬಲ
ವೆಲ್ಲ ನೆರೆದುದು ವಾನರಾಧಿಪ
ರಲ್ಲಿ ಸುಗ್ರೀವನ ವರೂಥದ ಬಳಿಯೆ ಸಂದಣಿಸೆ
ನಿಲ್ಲದೈದಿದರಾ ವಿಭೀಷಣ
ನಲ್ಲಿ ದಾನವಸೇನೆ ಕೈದುಗ
ಳಲ್ಲಿ ಹೊರವಂಟನು ವನಾಲಯದಿಂದಲಿದಿರಾಗಿ
ದೂರದಲಿ ಮಣಿರಥದೊಳಗೆ ರಘು
ವೀರರಿಬ್ಬರು ಕಂಡು ಬರೆಹೊಂ
ದೇರನಿಳಿದರು ಭರತ ಶತ್ರುಘ್ನರು ಸರಾಗದಲಿ
ಧಾರುಣಿಗೆ ಮೈಯಿಕ್ಕಿದರು ಪರಿ
ವಾರವೆಲ್ಲವು ನೊಸಲಕೈಗಳ
ಭೂರಿ ಸಂತೋಷದ ಸಮುದ್ರದೊಳಾಳಿತಂದಿನಲಿ
ಇಳಿದು ರಥವನು ನೃಪತಿ ಸೀತಾ
ಲಲನೆ ಲಕ್ಷ್ಮಣಸಹಿತ ತಾ ಕೌ
ಸಲೆ ಸುಮಿತ್ರಾದೇವಿ ಕೈಕೆಯ ಚರಣಕಭಿನಮಿಸಿ
ತೊಲಗಿದಸು ಬಂದಂತೆ ತನಯರ
ಚೆಲುವನೀಕ್ಷಿಸಿ ಜನನಿಯರು ಕಂ
ಗಳಲಿ ಜಲತುಂಬಿ ನೆರೆ ಬಿಗಿಯಪ್ಪಿದರು ನಂದನರ
ವಿಮಲಮತಿ ಶತ್ರುಘ್ನ ಭರತರು
ನಮಿಸಿದರು ರಘುಪತಿಗೆ ಲಕ್ಷ್ಮಣ
ನಮಿಸಿದನು ಭರತಂಗೆ ಭರತಾನುಜನ ಸಂತೈಸಿ
ಸಮತೆಯಲಿ ಸುಗ್ರೀವ ಜಾಂಬವ
ರಮಿತ ಬಲವನು ಜನನಿಯ ಚರಣ
ಕಮಲವನು ಕಾಣಿಸಿದ ಸುಕರಹೊಳೂರ್ಮಿಳಾರಮಣ
ವರವಿಭೀಷಣ ದೇವ ಬಂದನು
ಭರತ ಶತ್ರುಘ್ನರಿಗೆ ವಂದಿಸಿ
ಕರದ ಪುಷ್ಪಾಂಜಲಿಯಬಿನ್ನೈಸಿದನು ವಿನಯದಲಿ
ಅರಸನನುಜರು ನೀವು ನಿಮ್ಮಯ
ಚರಣ ದರುಶನವಾಯ್ತು ನಮಗೇ
ನರಿದು ಲೋಕದೊಳೆಂದು ಕೊಂಡಾಡಿದನು ಮನದಣಿಯೆ
ಜನಕಸುತೆ ಹರುಷದಲಿ ಸುಗ್ರೀ
ವನ ಸತಿಯರೊಡನಿರ್ದು ಮಾವನ
ವನಿತೆಯರಿಗಭಿನಮಿಸೆ ಸೊಸೆಯಳ ತೆಗೆದು ತಕ್ಕೈಸಿ
ಬನದೊಳಗೆ ಬಲುನೊಂದಲಾ ಮಾ
ನಿನಿಯೆ ಬಾರೌ ತಾಯೆ ಬಾರೆಂ
ದೆನುತ ಕಂಬನಿದೊಡೆದು ಲಾಲಿಸಿದರು ಮಹಾಸತಿಯ
ತರಿಸಿ ಮಣಿಭೂಷಣ ದುಕೂಲವ
ಧರಣಿ ತನುಜೆಗೆ ತೊಡಿಸಿ ಭರತನು
ತರಣಿಸುತ ಜಾಂಬವ ವಿಭೀಷಣರುಗಳ ಸತ್ಕರಿಸಿ
ಪುರಕೆ ಪಯಣವ ಮಾಡಿದನು ಡಂ
ಗುರದ ಸನ್ನೆಯೊಳಂದು ಹೊರವಂ
ಟರುಮಹಾಂಬುಧಿ ತೆರಳುವಂತೆ ಸಮುದ್ರ ಘೋಷದಲಿ
ಮಸಗಿದುದು ಕೆಂಧೂಳಿ ಗಗನವ
ಮುಸುಕಿದರೆ ರವಿ ಧಾತುಗುಂದಿದ
ಪಸರಿಸಿತುದೆಣ್ದೆಸೆಯ ನೀಂಟಿತು ಸಪ್ತ ಸಾಗರವ
ಉಸುರು ತೆಗೆಬಗೆಯಾಯ್ತು ಕೂರುಮ
ನಸಿದನಹಿಪತಿ ಬಲದ ಭಾರದಿ
ಬೆಸುಗೆಬಿಡೆ ಗಿರಿವಾದ್ಯತತಿ ಗರ್ಜಿಸಿತು ಮೂಜಗವ
ಅರಸ ಕೇಳಲ್ಲಿಂದಯೋಧ್ಯಾ
ಪುರಿಗೆ ಬಂದನು ರಾಮ ನೃಪ ತ
ನ್ನರಸಿ ಲಕ್ಷ್ಮಣ ಭರತ ಶತ್ರುಘ್ನಾದಿ ಬಾಂಧವರ
ಪರುಠವಣೆಯಲಿ ರಾಜತೇಜದಿ
ಸುರರು ದುಂದುಭಿ ಮೊಳಗೆ ನಿಜಮಂ
ದಿರದ ಬಾಗಿಲ ಬಳಿಯ ನಿಂದನು ಮುನಿಪರೊಗ್ಗಿನಲಿ
ಅನಿಮಿಷರು ಸಂದಣಿಸೆ ಅಭ್ರದಿ
ಹನುಮನಾಕ್ಷಣ ಬಂದು ಕೈಲಾ
ಗಿನಲಿ ಪಾಯವಧಾನ ಚಿತ್ತವಧಾನವೆಚ್ಚರಿಕೆ
ಎನಲು ರಥದಿಂದಿಳಿದು ರಘು ನಂ
ದನನು ಹೊಕ್ಕನು ರಾಜಭವನವ
ತನತನಗೆ ಪುರಜನರು ಕಾಣಿಕೆಗೊಟ್ಟು ನಮಿಸಿದರು
ಗುರು ವಸಿಷ್ಠನ ಮತದಿತಮ್ಮಂ
ದಿರು ಸಹಿತ ಮಜ್ಜನವ ಮಾಡಿದ
ನರಸ ದಿವ್ಯಸುಗಂಧ ಮಾಲ್ಯಾಂಬರ ಸುಭೂಷಣವ
ಧರಿಸಿದರು ನಾಲ್ವರು ಕುಮಾರರು
ಹರುಷಮಿಗೆ ನಿಜಜನನಿಯರು ಮೂ
ವರಿಗೆ ವಂದಿಸಿ ಮೆರೆದರಗ್ಗದ ರಾಜತೇಜದಲಿ
ಓಲಗಕೆ ನಡೆತಂದು ರಾಮನೃ
ಪಾಲನನುಜರು ಸಹಿತ ಮಂತ್ರೀ
ಜಾಲ ಬಾಂಧವ ಸಹಿತ ತಿರೆಯ ಸಮಸ್ತ ದುಣಿಪರು
ಓಲಗದಿ ಮುನಿ ಮುಖ್ಯರೆಲ್ಲರು
ಲೀಲೆಯಿಂ ಕುಳ್ಳಿರೆ ಸುಮಂತ್ರನು
ಕೋಲ ಗುರುವಿಗೆ ನಮಿಸಿ ಯಾಳೋಚಿಸಸಿದನೀ ಹದನ
ವರನೃಪಾಲಗೆ ರಾಜಪಟ್ಟವ
ಧರಿಸಬಹುದೇ ಜೀಯಯೆನೆ ಭೂ
ಸುರರ ಬರಹೇಳೆನುತ ತರಿಸಿದರಖಿಳ ವಸ್ತುಗಳ
ತರಿಸಿ ಕವಳವನುಭಯರಿಗೆ ಕರ
ಕರೆಸಿ ಕೊಡಿಸಿದನಾ ಸುಮಂತನು
ಪುರವ ಸಲೆ ಶೃಂಗರಿಸೆಪರಿಚಾರರಿಗೆ ನೇಮಿಸಿದ
ವಾರಣದ ಬೀದಿಗಳ ಘನ ಶೃಂ
ಗಾರದಿಂ ನವರತ್ನ ಜಲ್ಲಿಯ
ತೋರಣದ ಮಂಟಪದ ಸಿರಿಯಲಿ ಮೇಲು ಕಟ್ಟುಗಳ
ಕಾರಳಿಯ ಕುಂಕುಮದ ನವ ಪ
ನ್ನೀರ ಚಳೆಯದ ಕತ್ತುರಿಯ ಮತ
ಸಾರಳಿಯ ರಚನೆಯಲಿ ಶೃಂಗರಿಸಿದರು ಪಟ್ಟಣವ
ಬರಸಿದರು ವಾಲೆಗಳ ದಿಕ್ಕಿನ
ಅರಸುಗಳ ಬರಹೇಳಿ ಮುನಿ ಮು
ಖ್ಯರನು ಬಂದರು ಅವನಿಪಾಲಕರತುಳ ಬಲಸಹಿತ
ತರುಣಿಯರು ಶೃಂಗರಿಸಿದರು ಪರಿ
ಪರಿಯ ದಿವ್ಯದುಕೂಲ ವಸ್ತ್ರಾ
ಭರಣ ಭೂಷಿತರಾಗಿ ಪಿಡಿದರು ಕಲಶಕನ್ನಡಿಯ
ಹರುಷದಲಿ ತಂತಮ್ಮ ಕೈಯಲಿ
ಪರಮ ಪುಣ್ಯಸುವಸ್ತುಗಳ ತಂ
ದಿರಿಸಿದರುಹರುಷದಲಿ ನೆರೆದುದು ಬಹುಳ ಸಂಖ್ಯೆಯಲಿ
ಶರಧಿ ಮೇರುದಿಗಂತದವನೀ
ಶ್ವರರು ಯಾಚಕ ಪಂಡಿತರು ಕವಿ
ವರರು ಗಾಯಕ ಮಲ್ಲ ದೈವಜ್ಞರು ಸುನರ್ತಕರು
ಬಂದರತಿ ಬೇಗದಲಿ ವರತೃಣ
ಬಿಂದು ಮುನಿ ದಮನಾಖ್ಯಸನಕಸ
ನಂದ ಶೌನಕ ಸೂತಶತಮುಖ ಸುಮತಿ ಜಾಬಾಲಿ
ಸಂದ ದಾಲ್ಭ್ಯಮರೀಚಿ ಲೋಗಾ
ನಂದ ಸುರಗುರು ರೋಮಜನು ಮುಚು
ಕುಂದ ನಾರದರಖಿಳ ತಪಸಿಗಳೈದಿ ತೊಗ್ಗಿನಲಿ
ಅತ್ರಿ ಭಾರದ್ದಾಜ ವಿಶ್ವಾ
ಮಿತ್ರ ಗೌತಮ ವಾಮದೇವನ
ಗಸ್ತ್ಯ ಕಣ್ವಾಂಗಿರಸ ಮಾರ್ಕಂಡೇಯ ಮೈತ್ರೇಯ
ಸತ್ಯತಪ ಕೌಂಡಿನ್ಯಕೌಶಿಕ
ಪುತ್ರಶುಕ ವಾಲ್ಮೀಕಿಯಾ ಮುನಿ
ಪೋತ್ತಮರು ಸಂದಣಿಸಿದರು ರಘುನೃಪನ ಸಭೆಯೊಳಗೆ
ಚ್ಯವನ ಜನ್ಹು ಮೃಕಂಡು ಮುನಿಗಾ
ಲವ ಶತಾನಂದೈಕ ನಾರದ
ಶ್ರವತಿಕಶ್ಯಪ ಕಪಿಲ ಶೌನಕ ಸನಕ ಜಮದಗ್ನಿ
ಪವನ ಭಕ್ಷಣ ಗಾರ್ಗ್ಯಋಷಿ ಭಾ
ರ್ಗವ ಸನತ್ಸುತ ನಂದ ಜಯಮುನಿ
ನಿವಹದೊಡನೈತಂದನಾ ದೂರ್ವಾಸನೊಲವಿನಲಿ
ಚೋಳ ಗುಜ್ಜರ ದ್ರವಿಡ ವಂಗ ವ
ರಾಳ ಚೋಟಕ ಸಿಂಧು ಶಿಬ ನೇ
ಪಾಳ ಪಾಂಡ್ಯ ಮರಾಟ ಸಿಂಹಳ ಹೂಣ ಸವ್ವೀರ
ಲಾಳ ಮಗಧ ವಿದರ್ಭ ರುತು ಮಲೆ
ಯಾಳ ನಿಷಧ ಕಳಿಂಗ ವರಪಾಂ
ಚಾಳ ಬಹುದೇಶಾಧಿಪತಿಗಳು ಬಂದರೊಗ್ಗಿನಲಿ
ಮಾಳವಾಂಧ್ರಾಕರುಷವರ ನೇ
ಪಾಳ ಬರ್ಬರ ಮತ್ಸ್ಯನೃಪ ಬಂ
ಗಾಳಮಾಂಧ್ರ ಮರಾಟ ಕೋಸಲ ಕೊಡಗ ಕರ್ನಾಟ
ಗೌಳ ಕುಂತಳ ಕೃಕರಪತಿ ಬ
ಲ್ಲಾಳ ಕೊಂಕಣ ಚೀನಕೈಕೆಯ
ರಾಳ ಮೇಳದಿ ಬಂದು ಹೊಕ್ಕರು ನೃಪನ ವರಸಭೆಯ
ಕೇರಳಾಧಿಪ ಬಾಹ್ಲಿಕನು ಹ
ಮ್ಮೀರ ಚೈದ್ಯ ಕುರುಶ್ವಪತಿ ಗಾಂ
ಧಾರ ಸಂಬಳ ತುಳುವ ನೃಪ ಕಾಶ್ಮೀರ ಸೌರಾಷ್ಟ್ರ
ಶೂರಸೇನನವ ಪ್ರಚೇನ ಸು
ಪಾರಿಯಾತ್ರ ಕರೂಷಚಿಥ ವರ
ಭೂರಮಣರೈತಂದರತುಳ ಮನೋನುರಾಗದಲಿ
ಅಕುಟಿಲನೆ ಕೇಳ್ ಪಾಂಡವಾಗ್ರಜ
ಮುಕುರವದನೆಯರುತ್ಸವದಿ ಜಾ
ನಕಿಯಲಂಕರಿಸಿದರು ಮಾಲ್ಯಾಂಬರದಿ ಸಿರಿಮುಡಿಯ
ಸಕಲ ವೈಭವದಿಂದವೈಮಾ
ನಿಕರು ಕೈವಾರಿಸಲು ಗಗನ
ಸಖಿಯರ ನಡುವೆ ಮೃಗಾಕ್ಷಿ ಬಂದಳು ನೃಪನ ಗದ್ದುಗೆಗೆ
ಭರತ ಭಾರಿಯ ಸತ್ತಿಗೆಯ ಚಾ
ಮರವ ಲಕ್ಷ್ಮಣ ದೇವ ಚಿಮ್ಮಲು
ಧರಿಸಿದನು ಶತ್ರುಘ್ನ ಗಿಂಡಿಯ ಹೆಗಲ ಹಡಪದಲಿ
ಮರುತಸುತ ಸೇವಿಸಲು ಚರಣದಿ
ಗುರು ವಸಿಷ್ಠನ ಸಮ್ಮುಖದಿ ರಘು
ವರನು ನಿಜಸತಿಸಹಿತ ಸಿಂಹಾಸನದಿ ರಂಜಿಸಿದ
ವರ ವಿಭೀಷಣ ಜಾಂಬವಂತರು
ತರಣಿಸುತ ನಳ ನೀಲನಂಗದ
ಶರಭ ಶತಬಲಿ ಗವಯ ವೀರಗವಾಕ್ಷ ಮೊದಲಾದ
ಧುರವಿಜಯರೆಡವಂಕದಲಿ ನಿಂ
ದಿರಲು ಬಲದಲಿ ಸಿದ್ಧವಿದ್ಯಾ
ಧರರು ನೆರೆದರನೇಕ ವಿದ್ವಾಂಸರು ಕವೀಶ್ವರರು
ಮೇಲು ಮಣಿಗಳ ರತ್ನಕಾಂತಿಯ
ಮೌಳಿಗಳ ಮನ್ನೆಯರು ಮಂತ್ರೀ
ಜಾಲ ಸಹಿತಿದಿರಿನಲಿ ನಿಂದುದು ಮಕುಟವರ್ಧನರು
ಓಲಗದಿ ಮಿಗೆ ವಾರಸತಿಯರು
ಓಲಗಿಸೆ ರಘುನೃಪನನಾಗಳೆ
ತಾಳಮದ್ದಳೆ ಭೇರಿ ಡೆಂಕ ನಿನಾದ ರಂಜಿಸಿತು
ಅಲ್ಲಿ ನೆರೆದ ಮುನೀಶರೆಲ್ಲರು
ಬಲ್ಲ ಭೂಸುರನಿವಹ ಮಂತ್ರಿಗ
ಳಲ್ಲಿ ಸುಮುಹೂರ್ತದಲಿ ಪಟ್ಟವ ಕಟ್ಟಿದರು ನೃಪಗೆ
ಸಲ್ಲಲಿತಸತ್ಕೀರ್ತಿ ವಧು ವರ
ನಲ್ಲಿ ನಿಲ್ಲದೆ ಬಂದು ಸೀತಾ
ವಲ್ಲಭನ ಪೊಂದಿದಳು ಕುಂತೀ ಸೂನು ಕೇಳೆಂದ
ಗುರು ವಸಿಷ್ಠ ಮುನೀಂದ್ರ ಭೂಮೀ
ಸುರರೊಡನೆ ತಾ ಬಂದು ರಾಮನ
ಹರಸಿ ಮಂತ್ರಾಕ್ಷತೆಯ ತಳೆದರು ದೇವನಂಗದಲಿ
ಸುರರು ದುಂದುಭಿ ಮೊಳಗೆ ಹೂವಿನ
ಸರಿಯ ಸುರಿದರು ನಿರ್ಜರರು ಧರೆ
ಯರಸುಗಳು ಕೈಮುಗಿದು ಮುಯಿಗಳನಿತ್ತರವನಿಪಗೆ
ಮುನಿಸತಿಯರೊಡನೈದಿ ಭೂಸುರ
ವನಿತೆಯರು ಶೋಭನದ ಧವಳವ
ವಿನಯದಲಿ ಪಾಡಿದರು ಜಯಜಯರವನಿನಾದದಲಿ
ಕನಕರತ್ನದ ನೂಪುರದ ಕಾ
ಮಿನಿಯರೊಯ್ಯಾರದಲಿ ರಘುನಂ
ದನನ ಹರಸುತಲೆತ್ತಿದರು ನವರತ್ನ ದಾರತಿಯ
ಆರು ಹೊಗಳುವಡರಿದು ಸಭೆಯಲಿ
ಸಾರ ಸಂಗೀತದ ವಿನೋದದಿ
ವಾರಕಾಂತಾಜನದಲೊಪ್ಪುವ ಕೇಳಮೇಳವದ
ಚಾರು ಗೀತನೃತ್ಯಗಳ ಸೇವಾ
ಗಾರಿಕೆಯನೇನೆಂಬೆನೈ ಜಂ
ಭಾರಿವೋಲಗದಂತೆ ಮೆರೆದುದು ನೃಪತಿಯಾಸ್ಥಾನ
ಕರೆದು ಯಾಚಕ ಪಂಡಿತರ ಭೂ
ಸುರರ ಗಾಯಕಮಲ್ಲರನು ಕವಿ
ವರರಿಗಿತ್ತನು ಧೇನು ಕನಕಾಂಬರ ಸುವಸ್ತುಗಳ
ಅರಸುಗಳಿಗಾದರಿಸಿ ಕೊಟ್ಟನು
ಕರಿತುರಗ ರಥ ದಿವ್ಯಹೇಮಾಂ
ಬರ ಸುವಸ್ತುಗಳಿಂದ ಕಳುಹಿದನಾ ವಸಿಷ್ಠಮುನಿ
ಕೊಟ್ಟ ಸುಮುಹೂರ್ತದೊಳಗಾಗ ವ
ಶಿಷ್ಠಗುರುವಿಂಗೆರಗಿ ರಘುವರ
ನೆಟ್ಟನೈತಂದಲ್ಲಿ ಹೊಕ್ಕನು ರಾಜಮಂದಿರವ
ಸೃಷ್ಟಿಗಧಿಪನ ಕೀರ್ತಿವಧು ಘನ
ನಿಷ್ಠೆಯಲಿ ಧಾವಳ್ಯ ವಸನವ
ನುಟ್ಟು ನಲಿದಾಡಿದಳು ತ್ರಿಜಗದ ಜನದ ಜಿಹ್ವೆಯಲಿ
ಅರಸ ಕೇಳ್ಮರುದಿವಸದಲಿ ರಘು
ವರನು ತನ್ನೋಲಗಕೆ ನೃಪರನು
ಕರೆಸಿದನು ನಿಜಮಂತ್ರಿ ಬಾಂಧವಜಾಲವರ್ಗವನು
ತರಣಿಸುತ ಜಾಂಬವ ವಿಭೀಷಣ
ರಿರದೆ ಬಂದರು ಕೈಮುಗಿದು ಕು
ಳ್ಳಿರಲು ಪರಿತೋಷದಲಿ ನುಡಿದನು ರಾಮ ನಸುನಗುತ
ಕೇಳು ಲಕ್ಷ್ಮಣ ಕೇಳು ಜಾಂಬವ
ಕೇಳು ನಳ ನೀಲಾದಿ ಸುಭಟರರೆ
ಕೇಳಿರೈ ನರೆದಲಗವ್ರಿಹಿಯರು ಸೆರೆಯೊಳಿರ್ದವರ
ಕಾಲ ಸವೆದುದು ದಿವಸವಿಂದಿಗೆ
ಏಳು ತಿಂಗಳು ಕಳೆದವವದಿರ
ಪಾಲಿಸಲು ಬೇಕನಿಲಸುತ ನೀ ಕರೆದು ತಾರೆಂದ
ಹೈ ಹಸಾದವೆನುತ್ತ ವಂದಿಸೆ
ಬಾಹುಬಲದಗ್ಗಳಿಕೆ ಮಿಗೆ ನಿ
ರ್ವಾಹದಲಿ ಹೊರವಂಟನತಿ ವೇಗದಲಿ ಪಥವಿಡಿದು
ಸಾಹಸವನೇನೆಂಬೆ ವಜ್ರದ
ದೇಹನಲ್ಲಾ ಹನುಮ ತನ್ನ ಮ
ನೋಹರದ ಋಷಿಗಳನು ಕಂಡನು ಪಂಚನಂದಿಯಲಿ
ಅವರ ಪಾದಾಂಬುಜಕೆ ವಂದಿಸಿ
ಪವನಸುತ ಬಿನ್ನೈಸಿದನು ರಾ
ಘವ ನೃಪಾಲನು ಕಳುಹೆ ಬಂದೆನು ನಿಮ್ಮ ದರುಶನಕೆ
ಅವಧಿ ಸವೆದುದುಸೆರೆಮನೆಯೊಳಿ
ರ್ದವರನೊಡಗೊಂಡೀಕ್ಷಣವೆ ನೀ
ವವನಿಪನ ಸಂಮುಖಕೆ ಚಿತ್ತೈಸೆಂದು ಕೈಮುಗಿದ
ಹನುಮನಾಡಿದ ನುಡಿಗೆ ಗೌತಮ
ಮುನಿಪ ನಸುನಗುತೆದ್ದು ಬನದಲಿ
ಘನತಪೋಬಲ ಮಹಿಮರನು ಕರೆಸಿದನತುಳವೇಗದಲಿ
ಮನದಿಹರುಷಿತನಾಗಿ ಮುನಿ ಸೆರೆ
ಮನೆಯ ಪ್ರತಿವಾದಿಗಳನೊಡಗೊಂ
ಡನುಪಮಿತಗುಣನಿಲಯ ಮುನಿ ಹೊರವಂಟನಾಶ್ರಮವ
ಬಂದನತಿಹರುಷದಲಿ ಮುನಿಕುಲ
ವೃಂದದೊಡನೈತರಲು ರಘುಕುಲ
ನಂದು ಬಿಜಯಂಗೈಸೆ ತಂದನು ರಾಜಮಂದಿರಕೆ
ಬಂದರೇ ಪ್ರತಿವಾದಿಗಳು ಕರ
ತಂದಿರೇ ನೀವೆನುತ ಮುನಿಕುಲ
ವೃಂದವನು ಸತ್ಕರಿಸಿ ಕುಳ್ಳಿರಿಸಿದನು ಗೌತಮನ
ಇವರ ವ್ಯವಹಾರವನು ಪರಿಹರಿ
ಸುವವಿಚಾರವ ನೋಡಿ ಮನದಲಿ
ರವಿಕುಲಾನ್ವಯ ರಾಮ ನೆನೆದನು ಹೃದಯ ಶುದ್ಧಿಯಲಿ
ಶಿವನ ಧ್ಯಾನಿಸಲಾಕ್ಷಣವೆ ತ್ರೈ
ಭುವನಕರ್ತರು ಇಂದ್ರ ಮೊದಲಾ
ದವರು ಬಂದರಯೋಧ್ಯ ಪುರಪತಿಧಾಮನೋಲಗಕೆ
ವಸುಗಳಮರರುಭುಜಂಗಾಮರ
ರಸುರ ಕಿನ್ನರ ಯಕ್ಷ ರಾಕ್ಷಸ
ಶಶಿರವಿಗಳಾದಿತ್ಯ ವಿದ್ಯಾಧರರು ಗುಹ್ಯಕರು
ವಸುಧೆಯಮರರು ಕ್ಷತ್ರಿಯರು ಜೋ
ಯಿಸರು ವೈಶ್ಯ ಚತುರ್ಥರುನ್ನತ
ಕುಶಲ ವಿದ್ಯಾಧಿಕರು ನೆರೆದರು ನೃಪನ ಸಭೆಯೊಳಗೆ
ಇಂತೆಸೆವನಾ ಸಭೆಯೊಳಗೆ ಮತಿ
ವಂತ ನುಡಿದನು ಧಾನ್ಯವರ್ಗದ
ಸಂತತಿಯ ಬರಹೇಳಿಯೆನೆ ಸೆರೆಮನೆಯೊಳಿರ್ದವರು
ನಿಂತು ಕರಗಳ ಮುಗಿದು ಧರಣೀ
ಕಾಂತ ರಘುವರನೀ ಸುಬುದ್ಧಿಯ
ನೆಂತು ನಮಗರುಹುವಿರಿಯದ ಪೇಳೆಂದ ನರೆದಲೆಗ
ಎನಲು ರಾಮನೃಪಾಲ ನೋಡಿದ
ಘನ ತಪೋಮಹಿಮರಿಗೆ ನುಡಿದನು
ಮನವ ವಂಚಿಸಲಾಗದೀ ಧರ್ಮವನು ನೆರೆತಿಳಿದು
ಅನುನಯದಿ ಪೇಳೆನೆ ಮುನೀಂದ್ರರು
ಅನಿಮಿಷರನೀಕ್ಷಿಸಿದರಲ್ಲಿ ಯ
ಘನ ಮಹಾಸಭೆಯೊಳಗೆ ಭಾರ್ಗವರಾಮನಿಂತೆಂದ
ಆರು ನುಡಿಯರೆನೀವು ಹಿರಿಯರು
ಮಿರಿಸುವರಾರಿವರೊಳಗೆ ಗುಣ
ಸಾರನಾವನು ಪೇಳೆನಲು ಜಂಭಾರಿ ನಸುನಗುತ
ಸಾರಹೃದಯನು ನರೆದಲೆಗ ನಿ
ಸ್ಸಾರನೀ ವ್ರಿಹಿಯೆನಲು ಗುಣನಿಧಿ
ಮಾರುತಾತ್ಮಜ ನೋಡಿದನು ಸನ್ನೆಯಲಿ ನಾರದನ
ಅಹುದು ಸುರಪನ ಮಾತು ನಿಶ್ಚಯ
ವಹುದು ನರೆದಲೆಗನೆ ಸಮರ್ಥನು
ಬಹಳ ಬಲಯುತ ಸೆರೆಗೆ ತಳ್ಳಲುಕಾಂತಿಗೆಡಲಿಲ್ಲ
ಸಹಜವಿದು ಪರಪಕ್ಷವಾದಡೆ
ವ್ರಿಹಿ ಕರಗಿ ಕಂದಿದನು ಸೆರೆಯಲಿ
ವಿಹಿತವಿದು ಕೇಳೆಂದು ನಾರದ ನುಡಿದ ನಸುಗುತ
ಎಲ್ಲ ನವಧಾನ್ಯದಲಿ ಈತನೆ
ಬಲ್ಲಿದನು ಹುಸಿಯಲ್ಲ ಬಡವರ
ಬಲ್ಲಿದರನಾರೈದು ಸಲಹುವನಿವಗೆ ಸರಿಯುಂಟೆ
ನೆಲ್ಲಿನಲಿ ಗುಣವೇನು ಭಾಗ್ಯದಿ
ಬಲ್ಲಿದರ ಪತಿಕರಿಸುವನು ಅವ
ನಲ್ಲಿ ಸಾರವ ಕಾಣೆಯೆಂದನು ಕಪಿಲಮುನಿ ನಗುತ
ಸುರಮುನಿಗಳಿಂತೆನಲು ಭೂಸುರ
ವರರು ಸಂತೋಷಿಸಲು ಸಭಿಕರು
ನರೆದಲಗ ನೀ ಬಾರೆನುತ ರಾಮನೃಪಾಲ ನೆರೆಮೆಚ್ಚಿ
ಕರೆದುಕೊಟ್ಟನು ತನ್ನ ನಾಮವ
ಧರೆಗೆ ರಾಘವನೆಂಬ ಪೆಸರಾ
ಯ್ತರದೆ ವ್ರಿಹಿ ನಾಚಿದನು ಸಭೆಯಲಿ ಶಿರವ ಬಾಗಿಸಿದ
ಹರುಷದೋರಿದಮನದಿ ನಲಿವುತ
ನರೆದಲೆಗನೈತಂದು ರಾಮನ
ಸಿರಿಚರಣಕಭಿನಮಿಸೆ ದೇವಾಸುರರು ಕೊಂಡಾಡೆ
ಅರಸಿ ಮುತ್ತಿನ ಸೇಸೆಯನು ಭೂ
ಸುರರು ಮಂತ್ರಾಕ್ಷತೆಯನಿತ್ತುಪ
ಚರಿಸಿದರು ರಾಗಿಯನು ಪೊಗಳಿದರಲ್ಲಿ ಮುನಿವರರು
ಸರಸಿಜೋದ್ಭವ ಮೆಚ್ಚಿ ಕೊಟ್ಟನು
ಕರಕಮಂಡಲ ಪಾತ್ರೆಯನು ಶಂ
ಕರ ತ್ರಿಶೂಲವನಿತ್ತ ಕೊಟ್ಟನುಕಾಲ ದಂಡವನು
ನಾರದನು ಚಕ್ರವನು ಕೊಟ್ಟನು
ಉರುತರದ ಕೂರಿಗೆಯ ವಾಸವ
ನುರಗಪತಿ ವಾಸುಗಿಗಳಿತ್ತರು ನೇಣು ಪಾಶಗಳ
ಧನದನಿತ್ತನು ಯಂತ್ರರಕ್ಷೆಯ
ಬನದೊಳಿಹ ಮೂಲಿಕೆಯ ಮಂತ್ರವ
ವಿನಯದಿಂದ ವಿಭೂತಿಯನು ವರಕಾಲಭೈರವನು
ಇನಶಶಿಗಳಾದರಿಸಿ ಕೊಟ್ಟರು
ಘನತರದ ಜಲ್ಲರಿಯ ವರುಣನು
ಕನಕಮಣಿನಿರ್ಮಿತದ ಕರಗವನಿತ್ತು ಮನವೊಲಿದು
ಕರೆಸಿದಳು ಶರ್ವಾಣಿ ತನ್ನಯ
ಮರುಳು ಬಳಗವನೆಲ್ಲ ನೀವೀ
ಧರಣಿಯಲಿ ಸತಿರೂಪತಾಳ್ದ ಗಣಿತದ ಮನೆಗಳಲಿ
ಹುರುಳು ಗೆಡಿಸದೆ ಸರ್ವಭೂತಾ
ತ್ಮರಿಗೆ ಪಕ್ವಾನ್ನವನು ನೀಡೆಂ
ದುರುತರದ ಪ್ರೇಮದಲಿ ಕಳುಹಿದಳಗಜೆ ಕರುಣದಲಿ
ಈತರದಿ ದೇವಾಸುರರು ನವ
ನೀತಿಮಾರ್ಗದಿ ಕರೆದು ವರಗಳ
ಪ್ರೀತಿಯಿಂದಾದರಿಸಿ ಕೊಟ್ಟರನೇಕ ವಿಭವದಲಿ
ಭೂತಳದ ಜನರೊಡನೆ ನೀ ಪ್ರ
ಖ್ಯಾತನಾಗೆನೆ ನರೆದಲೆಗ ನೆರೆ
ವಾತನಾದನು ಮರ್ತ್ಯದಲಿ ನರನಾಥ ಕೇಳೆಂದ
ಇನಕುಲೇಂದ್ರನ ಪದಕೆ ವಂದಿಸಿ
ಹನುಮಬಿನ್ನೈಸಿದನು ನೀವಾ
ತನಿಗೆ ನಾಮಾಂಕಿತವನಿತ್ತಿರಿ ನಿಮ್ಮನಗಲುವೆನೆ
ಎನಗೆ ಹದನೆಂತೆನಲು ನಸುನಗೆ
ಮಿನುಗೆ ನುಡಿದನು ರಾಮನಿದ್ದೆಡೆ
ನಿನಗೆ ನಿನ್ನಭಿಧಾನವಾಗಲು ಹನುಮ ಕೇಳೆಂದ
ಸೇವಕನ ಹಿಂದುಳಿದು ದೇವರು
ನೀವು ಮುಂದಡಿಯಿಡಲು ನಿಮ್ಮ ದ
ದಾವಗುಣವೆನೆ ಹನುಮನಾಡಿದ ನುಡಿಗೆ ನಸುನಗುತ
ನಾವು ಜನನದಿ ಮುಂದು ಕಲಹದ
ಠಾವಿನಲಿ ನಾ ಮುಂದೆ ನಡೆಯೆಂ
ದೀ ವಿಚಾರವ ತಿಳುಹಿದನು ನರನಾಥನನಿಲಜಗೆ
ಭಾನುವಂಶಜನಾ ವಿಭೀಷಣ
ನಾನನವನೀಕ್ಷಿಸಲು ನಸುನಗು
ತಾ ನರೇಂದ್ರನ ಸನ್ನೆಯಲಿ ನಿಷ್ಠವಕವನ ಕರೆದು
ದಾನವೇಶ್ವರನಾ ಸತಿಗೆಸು
ಮ್ಮಾನದಿಂ ಕೊಡಲೀರ್ವರು ನವ
ಧಾನ್ಯದಲಿ ವಿಖ್ಯಾತರಾದರು ನೃಪತಿ ಕೇಳೆಂದ
ಹರಿಹರ ಬ್ರಹ್ಮಾದಿ ದೇವಾ
ಸುರರು ಮಹಾಮುನೀಶ್ವರರು ವಾ
ನರರು ಕೊಂಡಾಡಿದರು ರಘುಕುಲ ಸಾರ್ವಭೌಮನನು
ಸುರರು ದುಂದುಭಿ ಮೊಳಗೆ ಮಲ್ಲಿಗೆ
ಯರಳ ಮಳೆಗರೆದವು ವಿಮಾನದಿ
ಪುರಕೆ ತೆರಳಿದರಲ್ಲಿಹರದುವೆ ನೃಪತಿಯಾಸ್ಥಾನ
ಇಂತು ಸಭೆಯಲಿ ಮಾನಭಂಗವ
ದೆಂತು ಬಂದುದು ತನಗೆನುತಲತಿ
ಚಿಂತೆಯಲಿ ಕಡುನೊಂದು ತಲೆಗುತ್ತಿದನು ನೀರೊಳಗೆ
ಇಂತು ಪರಿತಾಪದಲಿ ಲಕ್ಷ್ಮೀ
ಕಾಂತ ಶಿವಶಿವಯೆನುತಲಿರೆ ಭೂ
ಕಾಂತ ದಶರಥರಾಮನಾಥನು ಕರೆದು ಲಾಲಿಸಿದ
ಮರುಳೆ ಬಾರೈ ವ್ರಿಹಿಯೆ ಮನದಲಿ
ಕೊರಗಿ ಚಿಂತಿಸಲೇಕೆ ನಾವೀ
ನರೆದಲೆಗನತಿಶಯವ ಮಾಡಿದೆವೆಂದು ಕನಲಿದೆಯ
ಧರೆಗೆ ಹೊದ್ದಿದ. ಕ್ಷಾಮಕಾಲದಿ
ಕರುಣದಿಂ ನಡೆತಂದು ಲೋಕವ
ಹೊರೆವನದು ಕಾರಣವೆ ಪತಿಕರಿಸಿದೆವು ಕೇಳೆಂದ
ದೀನರಲಿ ದಾರಿದ್ರ್ಯ ಜನರಲಿ
ನೀನು ನಿರ್ದಯನೆಂದೆವಲ್ಲದೆಶ
ಹೀನಗಳೆದವರಲ್ಲ ನಿನ್ನನು ನಾವು ಸಭೆಯೊಳಗೆ
ಮಾನುಷನು ನಮ್ಮೆಡೆಗೆ ನೀ ಸುರ
ಧೇನುವಿಗೆ ಸಮ ನಿನ್ನ ಚಿತ್ತದಿ
ಹಾನಿದೋರಲದೇಕೆ ಬಿಡು ಬಿಡು ಚಿಂತೆ ಯಾಕೆಂದ
ದೇವರಿಗೆ ಪರಮಾನ್ನ ನೀ ಮನು
ಜಾವಳಿಗೆ ಪಕ್ಪಾನ್ನಮೀತನು
ನೀವು ಧರೆಯೊಳಗಿಬ್ಬರತಿ ಹಿತದಲ್ಲಿ ನೀವಿಹುದು
ನಾವು ಕೊಟ್ಟೆವು ವರವ ಸಲ್ಲುವು
ದಾವ ಕಾಲದಲಿನ್ನು ನೀವೇ
ಪಾವನರು ಪರಮಸುಖಿಯೆಂದುಪಚರಿಸಿದನು ನೃಪತಿ
ನಲವು ಹಿಂಗಿದ ವ್ರಿಹಿಯ ರಾಗಿಯು
ಜಲವ ಹಸ್ತದೊಳೊರಸಿ ಇಂದ್ರನ
ಬಳಿಗೆ ಕಳುಹುವೆ ನಿನಗೆ ಸಂಶಯವೇಕೆ ಚಿತ್ತದಲಿ
ಕಲಿತನವ ಕೈಕೊಂಡು ಸತ್ಯದ
ಹೊಲಬುದಪ್ಪದೆ ಚೋಳದೇಶವ
ನೊಲಿದು ನೀ ಸಲಹೆಂದು ನೇಮವನಿತ್ತು ಕಳುಹಿಸಿದ
ಪಾಂಡವಾಗ್ರಜ ಕೇಳಿದೈ ಮಾ
ರ್ತಾಂಡ ವಂಶಜ ದಾಶರಥಿಯಾ
ಖಂಡಲನ ಮತವಿಡಿದು ಕರೆಸಿದನತುಳ ಧಾನ್ಯವನು
ಗಂಡುಗಲಿಗಳು ನೀವು ಧರಣೀ
ಮಂಡಲದೊಳಾದರಿಸಿ ದೇವರ
ನಂಡಲೆದು ಸಲಹೆಂದು ನೇಮವನಿತ್ತು ಕಳುಹಿಸಿದ
ತಪಸಿಗಳನಾದರಿಸಿ ದೇಶಾ
ಧಿಪರ ಮನ್ನಿಸಿ ಧರಣಿಯಮರರ
ನುಪಚರಿಸಿ ವಿದ್ವಾಂಸ ಕವಿಜನ ಮಲ್ಲಗಾಯಕರ
ಅಪರಿಮಿತ ಯಾಚಕರ ಕಳುಹಿಸಿ
ತಪನತನಯನ ಸತಿಯರಿಗೆ ರಘು
ನೃಪತಿ ಕೊಡಿಸಿದನಖಿಳ ದಿವ್ಯಾಂಬರ ಸುಭೂಷಣವ
ಪಾಂಡವಾಗ್ರಜ ಕೇಳು ಘನ ಕೋ
ದಂಡ ದೀಕ್ಷಾಚಾರ್ಯನೀ ಭೂ
ಮಂಡಲದೊಳತಿಕೀರ್ತಿವಡೆದನು ಸತ್ಯಧರ್ಮದಲಿ
ಚಂಡ ವಿಕ್ರಮ ರಾಮ ನೃಪ ಮಾ
ರ್ತಾಂಡಸುತ ಮೊದಲಾದ ವಾನರ
ತಂಡವನು ಕಳುಹಿಸಿ ಸುವಸ್ತುವನಿತ್ತು ಸತ್ಕರಿಸಿ
ಕರುಣದಿಂದ ವಿಭೀಷಣನ ಪತಿ
ಕರಿಸಿ ಕರಿರಥ ತುರಗ ವಸ್ತ್ರಾ
ಭರಣವಿತ್ತುಪಚರಿಸಿ ಕಳುಹಿದನಾಗಳಸುರರನು
ಗುರು ವಸಿಷ್ಠನ ಮತದಿ ತಮ್ಮಂ
ದಿರು ಸಹಿತ ಸಾಮ್ರಾಜ್ಯವಾಳಿದ
ವರದನಗಪತಿ ಯಾದಿಕೇಶವರಾಮ ವಿಭವದಲಿ
ವ್ಯೋಮಕೇಶ ವಿರಿಂಚಿ ವಾಸವ
ತಾಮರಸದಳನಯನರಿವರು ಮ
ಹಾ ಮಹಿಮರೀ ವ್ರಿಹಿಯ ನರೆದಲೆಗರ ವಿವಾದವನು
ರಾಮ ಸಭೆಯಲಿ ತೀರಿದುದು ಸು
ತ್ರಾಮನೋಲಗದಲ್ಲಿ ಕೇಳ್ದೆವು
ರಾಮಧಾನ್ಯದ ಕಥೆಯನಭಿವರ್ಣಿಸಿದೆ ನಿನಗೆಂದ
ಆಲಿಸಿದೆನೆಲೆ ಮುನಿಪ ನೀವಿದ
ಪೇಳೆ ಕೇಳ್ದೆನು ಮೇಲೆ ಸಜ್ಜನ
ಜಾಲ ತಣಿಯಿತು ಸಕಲ ಕರ್ಣಾಮೃತದಿ ರಂಜಿಸಿತು
ಹೇಳಲೇನದ ಮನದ ಬೇಸರ
ಬೀಳುಕೊಂಡುದು ಹರುಷ ಚಿತ್ತದೆ
ದಾಳಿ ಹರಿಯಿತ್ತೆ ನುತಮುನಿಪದಕೆರಗಿ ಕೈಮುಗಿದ
ಅರಸ ನೀ ಮನವೊಲಿದು ಕೇಳದ
ಚರಿತೆ ತಾನೊಂದಿಲ್ಲ ಲೋಕದಿ
ಪರಮ ಪುಣ್ಯದ ರಾಮಕಥೆಯಿದ ಕೇಳ್ದೆ ನೀನಿಂದು
ಕೊರತೆಯುಂಟೇ ಇಷ್ಟಭೋಗವ
ಹರಿಕೊಡುವ ನಿಮಗಿನ್ನು ಎನುತುಪ
ಚರಿಸಿ ಕಳುಹಿಸಿಕೊಂಡು ಮುನಿ ಹೊರವಂಟನಾಶ್ರಮಕೆ
ಶರಧಿಶಯನ ಮುಕುಂದ ಸಚರಾ
ಚರಭರಿತ ನಿರ್ಗುಣ ನಿರಾಮಯ
ಸುರ ನರೋರಗವಂದ್ಯ ವರಪುರದಾದಿಕೇಶವನ
ಚರಣದಂಕಿತವಾಗಿ ಪೇಳಿದ
ಪರಮಧಾನ್ಯದ ಚರಿತೆ ಸಂತತ
ಧರೆಯೊಳಿಂತೊಪ್ಪಿಹುದು ಆಚಂದ್ರಾರ್ಕ ಪರಿಯಂತ


