XII
ಖಗೇಂದ್ರಮಣಿದರ್ಪಣ
ಮೂಷಿಕವಿಷ ಪ್ರಕರಣಂ
ಶ್ರೀ ವೀರಜೀನಾಧೀಶಂದೇವರದೇವಂ ಜಗತ್ರಯಾಧಿಪನನಘಂಪಾವನಮಂ ಕ್ಷಾಯಿಕವರಭಾವಮನೆಮಗೀಗೆ ಮುದಮನಮೃತಾಸ್ಪದಮಂ
ವಿಷಯವಿಷರಹಿತರಪ್ಪೀಋಷಿಜನವಂದ್ಯನ ಪದಾಬ್ಜಮಂ ಭಾವಿಸಿ ನಾಂಸುಷಮಾಧ್ಯಾನದೆ ಮೂಷಕವಿಷಭೇದಮನವಱ ವೈದ್ಯಮಂ ಪ್ರಕಟಿಸುವೆಂ
ಶ್ವೇತಂ ಕೃಷ್ಣನಲಕ್ತಕಂ ಕಪಿಲನುಂ ನೀಲಾಭ ಧೂಮ್ರಾಭಮಾಪೀತಂ ಪಿಂಗಲ ಲೂತಿದಂಷ್ಟ್ರ ಕಪಿಲ ಕ್ರೋಡಾಸ್ಯ ದೀರ್ಘಾಸ್ಯ ಸಂಭೂತಂ ಕಾವಳ ದೀರ್ಘಕರ್ಣ ಕಳಕಂಠಂ ರೇಣುಕಾಂಗಂ ಲಸತ್ಖ್ಯಾತಂ ಪುಚ್ಛವಿಹೀನನೆಂದು ಪದಿನೆಣ್‌ಭೇದಂಗಳಕ್ಕಾಖುಗಳ್
ನರರಂ ಕೋಪದೆ ಕಚ್ಚಲಂತವದಱಿಂ ಕಂಡೂತಿಯುಂ ದಾಹಮುಂಜ್ವರ ಶೂಲಂ ವಮನಂ ಭ್ರಮಂ ಮಱುಕಮುಂ ಲಾಲಾಸ್ರವಂ ಗ್ರಂಥಿಯುಂಪಿರಿದುಂ ಶೋಷಮುಮೈಕಿಲುಂ ಮರಣಮೆಂಬತ್ಯಂತ ದುಃಖಂಗಳುಬ್ಬರಮಕ್ಕುಂ ಕೃಪೆಯಿಂ ಜನಕ್ಕಱಿಪುವೆಂ ತನ್ಮಂತ್ರ ತಂತ್ರಂಗಳಂ
ಮಂತ್ರಂ. ಓಂ ನಮೋ ಭಗವತೇ ಪಾರ್ಶ್ವನಾಥಾಯ ಧರಣೇಂದ್ರ ಪದ್ಮಾವತೀ ಸಹಿತಾಯ ಪಾಂ
ಖ್ವೋಂ ಪಾಂ ಫ್ರಾಂ ಖ್ವ್ರೊಂ ಪ್ರಾಂ ಬಾಂ ಭಾಂ ಖ್ವೋ ಪಾಂ ಭ್ರಾಂ ಖ್ಯೊಂ ಭ್ರಾಂ
ಈ ಮಂತ್ರದಿಂದೆ ತೊಳೆದಿಂತೀ ಮಂತ್ರದೊಳೆಸೆವ ಮರ್ದನಿಕ್ಕುವುದಱಿವಂಈ ಮಂತ್ರದ ದಿವ್ಯಮಹಾಸಾಮರ್ಥ್ಯದಿನೞಿಗುಮಖಿಳ ವಿಷಮದಮೋಘಂ
ಮತ್ತಂ ಮಂತ್ರಾವತಾರ ಮಂತ್ರಂ. ಬೇಲಿಯಲಿರ್ಪನ ಬೆಕ್ಕುಳುವಾಲನ ಮಚ್ಚಕ್ಕಿವಲ್ಲನ ಗುರುಗಂಜಿಗಣ್ಣನ
ನೀ ಕಚ್ಚಿದ ಕಚ್ಚನಾ ಬಂದುವೋದಲ್ಲಿ ಕಲಿಕಲ್ಲ ವಿಷವಿದ್ದೆಡೆ ಭಿಲ್ಲಾದೇವಿಯಾಣೆ ಕೊಲ್ಲಾಪುರದ ಬನ್ನಿ
ಮಹಾಕಾಳಿಯಾಣೆ ಗರಳದ ಭೈರವನಾಣೆ ಕುಕ್ಕುನೂರಕ್ಕನರಾಣೆ
ತುಂಬುವುದುದಕಮುಮಂ ತಾನಿಂಬಿನೊಳಂ ಕೈಪೆಸೊರೆಯ ಗುಂಡಿಗೆಯೊಳ್ ಮೂಱೆಂಬ ದಿನಂಬರಮಿರಿಸಿದುದಂ ಬಿಡದಭಿಮಂತ್ರಿಸುವುದು ಸೂೞ್ ಮೂಱುವರಂ
ಕುಡಿಸಲ್ಕಂತಾ ಜಳಮಂಕಿಡುಗುಂ ಮೂಷಕ ವಿಷಂಗಳಾಕ್ಷಣದಿಂದಂಕುಡುವುದು ಪಥ್ಯಂಗಳೊಳಂತೊಡಗೂಡಿದ ಸಾವೆಯೋಗರಂ ತಕ್ರಮುಮಂ
ವಿಂಧ್ಯದೊಳೊಪ್ಪಿರೆ ಬೆಳೆದಾವಂಧ್ಯಾ ಕರ್ಕೊಟಕಾಖ್ಯಮಂ ಮಜ್ಜಿಗೆಯಿಂದಂ ಧ್ಯಾನಿಸದೀಂಟಲೊಡಂಸಂಧ್ಯಾಭ್ರಮೆನಲ್ಕಮಾಖುಗಳ ವಿಷಮೞಿಗುಂ
ತಂತ್ರಂ
ಸುಲಲಿತ ಸಿಂಧುವಾರ ವರನೀಲಿ ನಿದಿಗ್ಧಿಕೆಯರ್ಕಮೂಲ ಪಿಪ್ಪಲಿ ಮಿರಿ (ಡಿ)ನಾಗರಂ ಬಿಳಿದೆನಿಪ್ಪ ಪುನರ್ನವಿಯೆಂಬಿವೆಲ್ಲಮಂಜಲದೊಳೆ ಕೂಡಿಕೊಂಡರೆದುದಂ ಕುಡಿಸಲ್ ಬಹುವರ್ಣಮಾಗಿ ತೋರ್ಪಿಲಿಗಳ ಪೆರ್ಗ್ಗಣಂಗಳ ವಿಷಂಗಳುಮಂ ಕಳೆಗುಂ ಬುಧೋತ್ತಮಾ
ತಿಲದನಿತು ವತ್ಸನಾಭನನಲಸದೆ ರಜನೀದ್ವಯಂಗಳಂ ಗಣಜಿಲೆಯಂತುಲಸಿಯ ಬೇರ್ಗಳನಿಂಬಿಂಜಲದಿಂದತಿಸಣ್ಣಮಾಗಲರೆವುದು ಬೞಿಯಂ
ಇಲಿಗಳ್ ಕಚ್ಚಿದ ಮನುಜಂಗೊಲಿದೀವುದು ಪಾನ ನಸ್ಯವಿಧಿಗಳೊಳಂ ತಾಂತೊಲಗುಗುಮಾಖುವಿಷಂಗಳ್ಪಲವಾದೊಡಮಾಕ್ಷಣಂ ವಿಚಕ್ಷಣತಿಲಕಾ
ಪೊಸತೆನಿಪ ಸಿಂಧುವಾರದರಸದಿಂದರಿದಾಳ ಕೋಷ್ಠಶಿಲೆಯೆಂಬಿವನಿಂತಸುವೆಯೊಳರೆದೀಂಟಲೊಡಂವಸುಧೆಯ ಮೂಷಿಕ ವಿಷಂಗಳೆಲ್ಲಂ ಕಿಡುಗುಂ
ಸಿರಿಸದ ಪುಷ್ಪದೊಳಂ ತಾಮರಿದೆನಿಸಿದ ವತ್ಸನಾಭನಂ ತಿಲದನಿತಂಬೆರಸಿ ಕುಡಿಸಲ್ಕಮಿಲಿಗಳ್ಭರದಿಂ ಕರ್ಚಿದ ವಿಷಂಗಳೆಲ್ಲಂ ಕಿಡುಗುಂ
ಶ್ವೇತಾರ್ಕದ ಕೋರಕ ಕೋಶಾತಕಿಯಂಕೋಲಮೆಂಬಿವಱ ಮೂಲಮುಮಂಶೀತಜಲದಿಂದೆ ಕುಡಿಸಲ್ಭೂತಳದಿಲಿಗಳ ವಿಷಂಗಳೆಲ್ಲಂ ಕಿಡುಗುಂ
ಶರಪುಂಖಿಯ ಬೇರೊಂದಂಬೆರಸರೆದಜಮೂತ್ರದಿಂದೆ ಪಾನಂಗೆಯ್ಯಲ್ಕರಿದೆನಿಪ ಮೂಷಕಂಗಳಗರಳಂ ಪಱಿಪಡುಗುಮೆಂದನಪಗತಕಲುಷಂ
ಎರಡೊಂದು ಭಾಗಮಾಗಿರಲರೆ ಹುಣಿಸೆಯ ಪಣ್ಣಮಿಲ್ಲಣಂ ಘೃತದೊಳವಂಬೆರಸೇೞುದಿನಂ ಕುಡಿಯಲ್ಪರೆಗುಂ ಮೂಷಕವಿಷಂಗಳೆಲ್ಲಂ ಕ್ರಮದಿಂ
ಲವಣ ಸಮೇತಂ ಜಲದಿಂನವತರಮೆನಿಸಿರ್ದ ಪದ್ಮಕೇಸರಮಂ ಕೊಂಡವಯವದೊಳೀಂಟೆ ಕಿಡುಗುಂಭುವನದೊಳಿಲಿಗಳ ವಿಷಂಗಳಮಳಚರಿತ್ರಾ
ಅಂಜನಂ
ಅನುಪಮಮೆನಿಸಿದ ಮೊಲೆವಾಲ್ವನಿಯಂ ಮಂಜರನ ದಶನಮಂ ತೇದೆಚ್ಚಲ್ಕೆ ನಯಂ ಮೂಷಕವಿಷಮಿರ್ದನಿತುಂ ಕಿಡುಗುಂ ಕುದೃಷ್ಟಿಜನದೂರತರಾ
ಸ್ವಪರೋಪಕಾರದಕ್ಷಂನೃಪತರು ತಱಿವಾಯುವಿಳಂಗದೊಳ್ಕೊನರ್ಗಳನಿಂತುಪಯುಕ್ತ ದಧಿಯನೀಂಟಲ್ಸಪದಿ ಮಹಾಮೂಷಕೋಗ್ರವಿಷತತಿಯಿೞಿಗುಂ
ವಿನುತಮಲಾಬುವಿನೊಪ್ಪುವತನಿರಸಮಂ ಕೊಂಡು ಪೂಸಲಂತಾಕ್ಷಣದೊಳ್ಘನತರಮೆನಿಪಾಖುವಿಷಂತನುವಿಂದಂ ಪಿಂಗುಗುಂ ಲಸತ್ಕವಿತಿಲಕಾ
ಘೞಿಲನೆ ಚಕ್ರಾಂಗಿಯುಮಂಕೞಿಯಿಂದರೆದೀಂಟೆ ಕೆಡುಗುಮಾಖುಗಳ ವಿಷಂಅಳೆಯಿಂದುತ್ತರಣೆಯ ಬೇರ್ಗಳುಮಂ ಮೇಣ್ ಕುಡಿಸೆಯುಂ ವಿದಗ್ಧಾಭರಣಾ
ಭರದಿಂದಮಿಂದ್ರವಾರುಣಿಕರಂಜಮೆಂಬಿವಱೊಳೊಂದನಳೆಯಿಂ ಕುಡಿಸಲ್ಪರಿಹರಿಕುಮಾಖುಗಳ ವಿಷಮಿರದೆಂದಂ ಪಂಚಗುರುಪದಾಂಬುಜಮಧುಪಂ
ಧೂಪ
ಉರಗದ ಹೆರೆ ನಗರೆಯ ಪಣ್ಬೆರಸಿದ ಬೆಕ್ಕಿನ ಪುರೀಷಮಂ ಧೂಪಮನಿತ್ತಿರದದನೆ ಪಾನಮಂ ಮಾಡಿರದೞಿಗುಂ ಪಲವೆನಿಪ್ಪ ಮೂಷಕದ ವಿಷಂ
ಕವಳಂ
ಘನನಾದಿ ಕರಿಯ ಕನಕದಕೊನರಂ ಕ್ಷೀರದೊಳಮಟ್ಟು ಮೇಲಿಕ್ಕುವುದುಂಘನದಾಡಂಬರಮೆಂತಂತನಿಲನಿನೞಿಗುಂ ಸಮಸ್ತ ಮೂಷಕ ವಿಷಮುಂ
ಕನಕದ ಕೊನರಂ ತಾಳಿಸಿತಿನೆ ತೈಲಾಜ್ಯಂಗಳೊಡನೆ ಮೂಷಿಕನಿಂದಂತನುಗೇಱಿದ ವಿಷಮಾಗಳ್ಕನಕದ ದೆಸೆಯಿಂ ದರಿದ್ರವೞಿವಂತೞಿಗುಂ
ಕಲ್ಲೊಳಗಿಟ್ಟು ಮರ್ದಿಸುಗೆ ವಜ್ರಿಯ ದುಗ್ಧದೊಳಂ ಕುಸುಂಬೆಯುತ್ಫುಲ್ಲಶಿಖಿ ಪ್ರಶಸ್ತ ತರುಮೂಲಮನಿಂತು ತದೀಯಮಪ್ಪುವಂಛಲ್ಲಿಗಳಂ ಬೞಿಕ್ಕ ವಟಕಂಗಳನಾಗಿಸಿ ಗುಂಜಿಯಂತಿರೊಂದಲ್ಲದೊಡೆರೞ್ಬಲಮನೀಕ್ಷಿಸಿಕೊಳ್ಳಿಲಿನಂಜು ಮಗ್ಗುಗುಂ
ಮರಿಚಮೆರಡರಿಸಿನಂ ನಾಗರಕಣವೆರಸರ್ಕಮೂಲ ಮಣಿಶಿಲೆಯಂ ಕೊಂಡರೆದಿರದೆ ಲೇಪಿಸಲ್ಕದುಪಿರಿದೆನಿಸಿದ ಮೂಷಕೋಗ್ರವಿಷಮಂ ಕಳೆಗುಂ
ಮರವಱುಹೆ ಕಡವು ಸರ್ಷಪಸುರುಚಿರ ಕುಂಕುಮಮುಮೆಲ್ಲಮಂ ಕೂಡಿ ಬೞಿಕ್ಕರೆದಿರದೆ ಲೇಪಿಸಲ್ಕದುಗಿರಿಕಾಯುವ ವೃದ್ಧ ಮೂಷಕೋಗ್ರವಿಷಘ್ನಂ
ಕುಳಿಮಾವು ಗಂಧಕಂಗಳ್ಬೆೞಲೊಪ್ಪುವ ಹಗಿನದೊಂದನರಿದಾಳದೊಳಂಛಳೆಯದೊಳಂ ಪೂಸಲೊಡಂತಿಳಿಗುಂ ಮೂಷಕವಿಷಂಗಳಧಿಕಗುಣಾಢ್ಯಾ
ಯುಕ್ತ ಕಪಿತ್ಥದ ಹಗಿನಾಲಕ್ತಕರಸ ಚಂದನಂ ಜವಾದಿಯಿವಂ ಸಂಯುಕ್ತಮದಾಗಿರೆ ಪೂಸಲ್ಸೂಕ್ತಂ ತಾನಿಲಿಯ ಗರಳಮಂ ಪರಿಹರಿಕುಂ
ಘನನಾದಿ ರಸಾಂಜನ ನರವನಿತಾಸ್ತನದುಗ್ಧಮೊಂದಿರಲ್ ಪೂಸಲೊಡಂಕನಲ್ದಾಖುಗಳಗಿದ ವಿಷಂದಿನಪನನಿಟ್ಟಿದಿರ ತಿಮಿರದಂತಿರೆ ಕಿಡುಗುಂ
ವಿನುತಂ ರಸಾಂಜನಂ ಮೇಘನಿನಾದಂ ಮಧುಕಮೆಂಬಿವಂ ಮೊಲೆವಾಲಿಂದನುರಾಗದಿಂದೆ ಪೂಸಲ್ಕನಿತುಂ ಮೂಷಕವಿಷಂ ಕ್ಷಣಾರ್ಧದೊಳೞಿಗುಂ
ವಿನುತ ರಸಾಂಜನಮುಂ ಮೇಘನಾದ ಟಂಕಣಕಣಂಗಳಿಂ ನುಗ್ಗಿಯುಮಂಮನಮೊಸೆದು ಲೇಪಿಸಲ್ ತತ್ತನುವಿನ ಮೂಷಕ ವಿಷಂಗಳೆಲ್ಲಂ ಕಿಡುಗುಂ
ತರ್ಕದೊಳೇಂ ಘೃತದಿಂದಂಶರ್ಕರೆಯಂ ಶಿಗ್ರುಮೂಲಮಂ ಬೆರಸಲದಂನೀರ್ಕಲಸದೆ ಪೂಸಲ್ ತಲೆದೋರ್ಕುಮೆ ಮೂಷಕ ವಿಷಂಗಳವನೀತಳದೊಳ್
ತ್ರಿಕಟುಕಮಂ ಚಾತುರ್ಜಾತಕಮುಮನಂಜನಮನೆರಡು ತೆಱದರಿಸಿನಮಂಪ್ರಕಟಮೆನೆ ಪೂಸೆ ಮೂಷಿಕನಿಕರದ ವಿಷಮಿೞಿಗುಮೆಂದನುಭಯಕವೀಂದ್ರಂ
ಅಂಕೋಲೆ ಕೋಷ್ಠ ಮಧುಕಮುಮಂ ಕುಸುಬೆಯ ಪೂ ಬಳಾಹಕಧ್ವನಿಗಳೊಳಂಸಂಕಿಸದೆ ಬೆರಸಿ ಪೂಸಲೊಡಂ ಕರಮರಿದೆನಿಸಿದಾಖುವಿಷಮಿರದೞಿಗುಂ
ಅಸದೃಶದ ಸಿಗ್ರುವಂ ವಾಯಸಬಿಂಬಿ ಕಣಂ ರಸಾಂಜನಂ ಬೆರಸಿದುದಂಪೊಸತೆನೆ ಸಣ್ಣಿಗೆಯಿಂ ಮರ್ದಿಸಿ ಪೂಸಲ್ಕಾಖುಗಳ ವಿಷಂ ಪ್ರಶಮಿಸುಗುಂ
ಅರಿಸಿನ ಸೋವೆಯತಿಗುಡೀಶ್ವರಿವಾಕುಜ (ಚಿ) ದೇವದಾಳಿ ಹಯಗಂಧಿಯಿವೊಂದಿರೆ ಸೊಗದೆಯೊಳಂ ನೀರಿಂದರೆದಾಗಳ್ ತೊಡೆಯಲಿಲಿಯ ವಿಷಮದು ಪರೆಗುಂ
ಪಾರಿವದೆಚ್ಚಂ ಕುಸುಬೆಯಬೇರಾಜ್ಯಂ ತಿಗಡೆ ದಂತಿ ಸೈಂಧವಮುಂ ತಾಮೋರಂತಿರೆ ಕೂಡಿದುವಂಚಾರಿಸಿ ಪೂಸಲ್ಕಮಾಖುಗಳ ವಿಷಮಿೞಿಗುಂ
ಸಾರತರಮೆನಿಪ ಬೇಳೆಯಬೇರಂ ಗಣಜಿಲೆಯ ಬೇರುಮಂ ತುಪ್ಪದೊಳಂತೋರಂತೆ ಪೂಸೆ ಮೂಷಕಘೋರವಿಷಂ ಶಿಖಿಯ ಮುಖದ ರಸದಂತೞಿಗುಂ
ಆಲೋಚಿಸಲೇಂ ಕಣಮಂಕೋಲೆ ಹರೀತಕಿ ವಿಳಂಗ ಕಿತ್ತಾಕೆಯಿವಂಲೀಲೆಯೊಳೆ ಪೂಸಲದು ನಿರ್ಮೂಲಿಸುಗುಂ ಸಕಳ ಮೂಷಕಂಗಳ ವಿಷಮಂ
ಕಡವದತಿಗುಡುಂ ಕುಸುಬೆಯಕಡುಲೇಸೆನಿಸಿರ್ಪ ಪೂಗಳೊಳ್ಕೂಡಿದುದಂಪಿಡಿದರೆದುದಕದೊಳಂತಿರೆಕುಡಿಸಲದಂ ಪೂಸೆ ಮೂಷಿಕಾದಿ ವಿಷಘ್ನಂ
ಕ್ಷೀರದ್ರುಮದೊಳ್ ಸಾರಂಚಾರು ರಸಾಂಜನಮನುದಕದಿಂ ಪೂಸಲ್ ಸಂಹಾರಮದಕ್ಕುಂ ಮೂಷಕಘೋರವಿಷಂ ತತ್ಪ್ರಭಾವದಿಂ ಗುಣನಿಳಯಾ
ಇಲಿಯ ಕುರುಣೆಯಂ ಕಾಱುವುದಕ್ಕೆ
ಭರದಿಂದೆ ಕೈಪೆಸೊರೆಯೊಳ್ತಿರುಳಂ ಹೀರೆಯುಮನಕ್ಕಿಗರ್ಚಿಂದರೆದಂದಿರಲೆಣ್ಣೆಯೊಳೀಂಟಲ್ಕಿಲಿಗುರುಣೆಯ ವಮನಗಳಪ್ಪ ವಿಷಮದನೞಿಗುಂ
ಮುದದಿಂದಂ ಬಜೆಯೆರಡುಂಮದನಫಲಂ ದೇವದಾಳಿಯುಂ ಕೂಡಿರಲಂತದನರೆದು ಗೋತದಿಂ ಕುಡಿಸದು ಕುರುಣೆಯ ವಮನದಿಲಿಯ ವಿಷಮಂ ಕಳೆಗುಂ
ನೆಲ್ಲಿಯಬೇರಂ ನೀರಿಂತಲ್ಲಣಿಸದೆ ಕುಡಿಸಲಿಲಿಯ ವಮನದ ವಿಷಮುಂಚಿಲ್ಲಫಲದಿಂದೆ ನೀರ್‌ಕದಡೆಲ್ಲಂ ತಿಳಿ (ಕಿಡು)ವಂತೆ ತಿಳಿಗುಮದಱಿಂ ಧರೆಯೊಳ್
ಸುರದಾಳಿ ಕೈಪೆಸೊರೆಯೊಳ್ಬೆರಸಿದ ಹೀರೆಯುಮನಕ್ಕಿಗರ್ಚಿಂದರೆದೀಂಟಿರದೞಿಗುಮಿಲಿಗಳಿಂದೋಕರಿಸುವ ವಿಷಮಮಳದೃಷ್ಟಿಕುವಳಯಚಂದ್ರಾ
ಮುಂಡಿಯ ಪಂಚಾಂಗಮುಮಂತಂಡುಲದಿಂದಳೆಯೊಳಡುವುದಂಬಲಿಯಂ ಕೊಂಡುಂಡೊಡೆ ಮೂಷಕನಿಂದಂಖಂಡಮನುದ್ಗರಿಸುವಖಿಳವಿಷಮದು ಪರೆಗುಂ
ಅಳೆಯಾರನಾಳಮೆಂಬಿವಱೊಳೆನುಚ್ಚುತ್ತರಣೆ ಬೋೞತರದ ಸಮೂಲಂಗಳನೆಯ್ದೆ ಬೆರಸಿದಂಬಲಿಕಳೆಗುಂ ಮಱಿಯಿಲಿಯಿನೊಗಿಸುವುದ್ಗಾರಮುಮಂ
ಕರಿಯುಮ್ಮತ್ತಮನೊತ್ತಿಬಂದ ರಸದಿಂದಂ ಮೇಷತಕ್ರಂ ಸಮಂಬೆರಸಂತಾಯಜಮೂತ್ರದಿಂ ನವಣೆಯಂ ಮಿದ್ದಕ್ಕಿಯಿಂದಟ್ಟುದಂಕರಮಿಂಬಿಂ ಸವಿದಾಕ್ಷಣಂ ತಿಲಜಮಂ ಪೂಸಿರ್ದು ತಾನಾತಪೋತ್ಕರದಿಂ ಸೊರ್ಕುವಿನಂ ಬರಲ್ ನೆೞಲೊಳಂದುದ್ಗಾರಮಕ್ಕುಂ ದಿಟಂ
ಕುರುಣೆಗಳಂ ಕಾಱಿ ಬೞಲ್ದಿರೆ ಪಾಲೋಗರಮನುಂಬುದೀರೈದು ದಿನಂಬರೆಗಂ ಮಾಡೀ ವಿಧದಿಂಪರಿಹರಿಕುಂ ಮೂಷಕೋಗ್ರವಿಷದುಗ್ರತೆಯಂ
ಹೆಗ್ಗಣಕ್ಕೆ
ಒಡವತ್ತಿಯ ತೊಕ್ಕಿನೊಳಂದೊಡಗೂಡಾಡುಳಿಚ ಶುಂಠಿ ನೆಲಗುಳ್ಳಮಿವಂಕಿಡುಗುಂ ನೀರಿಂ ಪಾನಂಗುಡೆ ಪೆರ್ಗಣದುಗ್ರಮಪ್ಪ ವಿಷಮಾಕ್ಷಣದೊಳ್
ವರ ಮನುಮುನಿಗಳ್ ಪೇೞ್ದಾ ಮಹಾವೈದ್ಯಶಾಸ್ತ್ರಾಂತರದೊಳಮೊಸೆದಿಂತೇನಾನುಮಂ ಪೇೞ್ದೆನಾಖೂತ್ಕರ ವಿಷಹರಣಾರ್ಥಂ ಮರ್ತ್ಯಲೋಕಕ್ಕೆ ಮಂತ್ರಾಕ್ಷರವೆರಸಿದಮರ್ದಂ ಹೃದ್ಯಮಂ ಸ್ವಸ್ತಿಕಾಮಂ
ಗದ್ಯ. ಇದು ಸಕಲವಿದಮಲ ಜಿನೇಂದ್ರೋಕ್ತ ಸಿದ್ಧಾಂತ ಪಯಃಪಯೋನಿಧಿ ಪಾರಗ ಶ್ರೀ ಪೂಜ್ತಪಾದ ಮುನೀಂದ್ರ ಚಾರುಚರಣಾರವಿಂದ ಗಂಧ ಗುಣಾನಂದಿತ ಮಾನಸಂ ಶ್ರೀಮದಖಿಲ ಕಳಾಗಮೋತ್ತುಂಗ ಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್ ಅಷ್ಟಾದಶ ಮೂಷಕಭೇದ ತದ್ವಿಷಾಪಹರಣ ಚಿಕಿತ್ಸಾ ವಿವರಣಾಧಿಕಾರಂ ದ್ವಾದಶಂ


