EN | KA

Menu

VII

ಗಿರಿಜಾಕಲ್ಯಾಣ

ವಸಂತೋದ್ಯಾನ ಮದನಪ್ರಯಾಣ ಪ್ರಾರಂಭ ವರ್ಣನಂ

ವರಸುರನರೋರಗವ್ರಜಕಿರೀಟಪದಯುಗನತಿಸ್ವತಂತ್ರಂ ಶರ್ವಂಹರನಧಿಕಾಕ್ಷಂ ಸಲೆ ಭಕ್ತಿರಸಮನೆಮಗೀಗೆ ಹಂಪೆಯ ವಿರೂಪಾಕ್ಷಂ

ಪುರುಹೂತಂ ಹರಿ ನೋಡಿದಪರಿಯಂ ತಾನಱಿದು ಮಂತ್ರಿವಾಚಸ್ಪತಿಯಂಕರೆದೀಗಳೆ ಕಾಮನನತಿಭರದಿಂದೊಡಗೊಂಡು ಬರ್ಪುದೆಂದಿಂತೆಂದಂ

ಇರ್ದೀ ತೆಱನಿದು ನೀನಱಿದಿರ್ದುದೆ ನಿನಗಱಿಪಲಿಲ್ಲ ಕಾರ್ಯಸ್ಥಿತಿಯಿಂಸಾರ್ದತಿವೇಗದೆ ಶೂರ್ಪಕಮರ್ದನನಂ ತರ್ಪುದಾವ ತೆಱದಿಂ ಜೀವಾ

ಎಂದು ಬೆಸಸತ್ತುಮಿಱೆ ನಡೆತಂದಂ ಗುರು ಮದನನಲ್ಲಿಗಮಲಿನದೇಹಂಸಂದ ಕಳಾವ್ಯೂಹಂ ಗುಣಸಂದೋಹಂ ಗಗನಗಮನಪುಷ್ಪಕವಾಹಂ

ನಡೆತಂದು ಮುಂದೆ ಚೆಲ್ವಿಂದಿಡಿದ ರತೀಶ್ವರನ ರಾಜಧಾನಿಯನೊಳಪೊಕ್ಕೆಡೆಯುಡುಗದೆ ನೆರೆದರಮನೆಗೆಡೆಯಾಡುವ ಲಲನೆಯರ್ಕಳಂ ನೋಳ್ಪಾಗಳ್

ತೆಗೆದೆಸುವ ಪುಷ್ಪಚಾಪನಮುಗಳಂಬಿಂಗೆಣೆಯೆನಿಪ್ಪ ವಧುವೊರ್ವಳ್ ಮೆಲ್ಲಗೆ ಬಂದಳ್ ಮನ್ಮಥನೋಲಗಕ್ಕೆ ಶತಪತ್ರದಾತಪತ್ರದ ನೆಳಲೊಳ್

ನೇವುರದ ಮುದ್ರಿಕೆಯ ಮಧುರಾವರಣಧ್ವನಿ ಬೃಹಸ್ಪತಿಯ ಕಿವಿವುಗೆ ಸದ್ಭಾವಕಿಯೊರ್ವಳ್ ಬಂದಳ್ಕಾಮನ ಸಭೆಗೆಸೆವ ರತ್ನಮುಕುರದ ತೆಱದಿಂ

ಬಿಸರುಹದಳದೊಳ್ ಚಂದನರಸಮಂ ನೆಱೆ ತೀವಿಕೊಂಡು ಮೆಲ್ಲಡಿಯಿಡುತುಂಪೊಸಜವ್ವನೆ ನಡೆತಂದಳ್ಕುಸುಮಾಸ್ತ್ರನ ಗಟ್ಟಿವಳ್ತಿಯೊರ್ವಳ್ ಬನದಿಂ

ಇಂಬಾಗಿರೆ ವರಹಿಮಕರಬಿಂಬದ ಬೆಂಬಳಿಯೊಳಿಳಿವ ತಣ್ಣದಿರ್ಗಳೆನಲ್ಪೊಂಬಾಳೆಯ ಚಮರಮದಾಲಂಬಿಸಿ ಪಿಡಿದೊರ್ವ ಚಂದ್ರಮುಖಿ ನಡೆತಂದಳ್

ಪ್ರಬಳನವರತ್ನರೋಚಿಃಶಬಳಿತ ದರ್ಪಣಮನಾಂತು ಮುಂದೆಯ್ತಂದಳ್ನಿಬಿಡತರ ಸುಕರ ಪುಷ್ಪಸ್ತಬಕದ ಬೆಳ್ಗೊಡೆಯ ನೆಳಲೊಳಂಗನೆಯೊರ್ವಳ್

ವ. ಅಂತವರ ನಿರತಿಶಯ ಸ್ವಭಾವ ಸೌಂದರ್ಯಸೌಕುಮಾರ್ಯಂಗಳಂ ಕಂಡು ಬೃಹಸ್ಪತಿ ಮನದೊಳಳಿಪುತ್ತಂ ಬುದ್ಧಿಯೊಳ್ ಬೆದರುತ್ತುಂ ಚಿತ್ತದೊಳ್ ಕೌತುಕಂಬಡುತ್ತುಂ ನಡೆತಂದರ ಮನೆಯ ಮುಂದೆ ಪುಷ್ಪಕಮನಿಳಿದೊಪ್ಪುವ ದರ್ಪಭೂಷಣಮೆನಿಸಿದ ದರ್ಪಕಾಸ್ಥಾನಮಂ ಪುಗುತರ್ಪಲ್ಲಿ,

ಮುಂತಿರ್ದಂ ಪುಷ್ಪಮಾಲಾನಿಚಯರಚಿತ ಸೌರಭ್ಯಲೋಲುಪ್ತಭೃಂಗೀಸಂತಾನಾಬದ್ಧಧಾರಾನಿಳಯವಳಯ ಮಧ್ಯ ಪ್ರದೇಶಪ್ರರತ್ನಾನಂತಪ್ರದ್ಯೋತವೀಧೀಪ್ರಯುತನಿಯತ ಸಿಂಹಾಸನಾರೂಢತಾನಿಶ್ಚಿಂತಂ ಶೃಂಗಾರಕಾಂತಂ ಜನವಿನುತರತೀನಾಥನಾನಂದಯೂಥಂ

ವ. ಅಂತಿರ್ದು ಮದನಭೂಭುಜನಂ ತ್ರಿದಶಾಚಾರ್ಯಂ ದೂರದಿಂ ನಿರೀಕ್ಷಿಸುತ್ತುಂ ಬರ್ಪಾಗಳ್ ಮುಂತೆ ಮಗಮಗಿಪ ಕದಂಬಕುಸುಮದ ಪೊಸಗಂಪಿಂ ಪೊರೆದು ಸಾರ್ವರ್ತುಕಮೆನಿಸಿ ಕೊರ್ಬಿ ಬೆಳೆದ ಕೇಳೀವನದ ನಡುವೆ ನಿಂದ ನೀಲದ ನೆಲೆಗಟ್ಟಿಂಗೆ ನೆಲೆಯಾದ ಮುತ್ತಿನ ಬೆಳಗಿನ ಬೆಳ್ದಿಂಗಳ ಭಿತ್ತಿಗಳ ಮೇಲೆ ತರತರದಿಂ ಪರಪಿದ ಕೈರವದ ನುಣ್ಣೆಸಳ ಸಣ್ಣ ಜಂತೆಗಳನಾಂತ ಕೇತಕಿಯ ನೀಳ್ದ ದಳದ ಪೆಟ್ಟಿಗೆಗಳೊಟ್ಟಜೆಗಳಿಂ, ಮತ್ತಂ ಮುತ್ತಿ ಮತ್ತವಾರಣಮಂ ನವೀನಗ್ರಂಥದಿಂ ತವೆ ಪೊರೆದ ದವನದ ದಾರವಂದದೊಳಚ್ಚೊತ್ತಿ ಬೆಚ್ಚಂತಿರ್ದು ಲಾಮಂಚದ ಮುಚ್ಚುಳಮಂ ನೆಮ್ಮಿ ನಿಂತಿರ್ದ ಪಡಿಯರಗೋಗಿಲೆಗಳಿಂ, ಮತ್ತಂ ರವಿಕರಕೆಡೆಗುಡದಿಡಿದು ಸುತ್ತಿ ಮುತ್ತಿ ಕವಲಿಱಿದು ಕವಿದ ಲತಾಂತಜಾಳದ ತಳ್ತ ನೆಳಲಿಂ ಕಳ್ತಲಿಸುವ ಓಲಗಸಾಲೆಯೊಳ್ ಬಂದುಗೆಯ ಬಣ್ಣದ ತಿಣ್ಣವೆಳಗುಂ ಕಣ್ಣ ಬೆಳಗುಂ ತಮ್ಮೊಳಿರ್ಮಡಿ ಮೆಯ್ದೋಱಿ ಕೆಯ್ದೀವಿಗೆವಿಡಿದಿರ್ಪ ಖೇಚರಾಂಗನೆಯರಿಂ, ಕಾಮನ ರತಿಯ ನನೆಯ ಸಿಂಹಾಸನದಿರ್ಕೆಲದೊಳ್ ನಿಂದು ಮರುಗದ ಪೊಂಬಾಳೆಯ ಸೀಗುರಿಯ ಚಾಮರಂಗಳಂ ಪಿಡಿದಿರ್ಪ ಹಸ್ತಿನಿಯರಿಂ, ನೆರೆದು ನಿಂದ ಕೀರಾಳಗೆ ಕಾಮಾದ್ವೈತ ಶಾಸ್ತ್ರ ಸೂತ್ರಮಂ ಪಾಠವೋದಿಪ ಪರಿಜ್ಞಾನದಿಂ ಮೆಱೆವ ಚಿತ್ತಿನಿಯರಿಂ, ಮೇಲೆ ಬೀಳ್ವ ಕಾಮದೇವನ ಕಟಾಕ್ಷಕಂಜಿ ರತಿದೇವಿಗಡಿಗಡಿಗೆ ಕೆಯ್ ಮುಗಿದು ಕೆಲಸಾರ್ದಿರ್ಪ ಶಂಖಿನಿಯರಿಂ, ಮತ್ತಂ ಶತಪತ್ರದೊಳಮೃತರಸಮನೋವಿ ತೀವಿ ಮುದದಿಂ ಪಿಡಿದರ್ಪ ಪದ್ಮಿನೀನಾಯಕಿಯರಿಂ, ಹಂಸೆವಿಂಡಿಂಗೆ ನಡೆಗಲಿಪ ಮದಕರಿಯಾನೆಯರಿಂ, ನವಿಲನಾಡಿಪ ನರ್ತಕಿಯರಿಂ, ಮತ್ತಂ ಮಧುಕರಮಂಡಳಿಗೆ ಮಾರಭೂಪನ ಬಿರುದಿನೇಳ್ಗೆಗಳ ಗೀತಗೋಷ್ಠಿಯನೀವ ನೂತನ ಗಾಯಕಿರಿಂ, ಶತ ಪತ್ರವೀಜನಸಮಾಜದಿಂ ರಥಾಂಗಮಿಥುನದ ಸುರತ ಶ್ರಾಂತಿಯನಾದರದಿಂದಾದರಿಸುವ ಚಕ್ರಕುಚೆಯರಿಂ, ಹರಿಣಗಳ ಮುಳಿಸಂ ತಿಳಿಪಿ ಹರಿಣಂಗಳನೊಡಗೂಡುವ ಹರಿಣಾಕ್ಷಿಯರಿಂ, ಅಶೋಕೆಯನೊದೆದಂಕುರಮಂ ಪುಟ್ಟಿಪ ಪದ್ಮಮುಖಿಯರಿಂ, ಕುರುವಕಮಂ ಪರಿರಂಭಣದಿಂ ಪೊಱೆಯೇರಿಸುವ ತರುಣಿಯರಿಂ, ಕುಸುಮ ರಸಗಂಡೂಷದಿಂ ವಕುಳಕುಳಮಂ ಕೋರಕಿತಂಮಾಳ್ಪ ಸಾರಮುಖಿಯರಿಂ, ಹೂವಿನ ಬಿಲ್ಲನೊಚ್ಚತಂಗೊಂಡರ್ಚಿಸುತ್ತಿರ್ಪ ನಿಡುಪುರ್ವಿನ ನೀಱೆಯರಿಂ, ನನೆಯಂಬಂ ಕೆಯ್ಗೆಯ್ವ ಸವಿನೋಟದ ಸಾಧಾರಣೆಯರಿಂ, ಮತ್ತಂ ಮಕರಕೇತನನ ಕೇತಕಿಯಲಗಂ ಪರಾಗದ ಸಾರಣೆಯೊಳ್ ಪರಿಮಳದ ಹೊರಗೆತ್ತುವಳಿ ಕುಂತಳೆಯರಿಂ, ನನೆಯ ಕಠಾರಿಯಂ ಸಿಂಗರಿಪ ಸಂಗಡದ ಮುಗ್ಧೆಯರಿಂ, ತಳಿರ ತೋಮರಮಂ ತಿರ್ದುವಕಳಕಂಠ ನಿನಾದೆಯರಿಂ, ಕೈರವದ ಸಬಳಮನೊಪ್ಪವಿಡಿವ ಕುಮುದಾಕ್ಷಿಯರಿಂ, ಚಕೋರಿಯಕುಳಕ್ಕೆ ಬೆಳ್ದಿಂಗಳನೂಡುವ ರೋಹಿಣೀವಿಳಾಸಿನಿ ಯರಿಂ, ಪೂಗೊಳನಂ ಸಾಗಿಪ ಭೋಗವತಿಯರಿಂ, ಬನಮಂಬಳೆಯಿಸುವ ವನಲಕ್ಷ್ಮಿಯರಿಂ, ಮತ್ತಂ ವಿರಿಂಚಿಯ ಹಾಹೆ ಕಾಲೊಳೆಳಲೆನಿಂದಿರ್ಪ ನಾಯಕಿ ಯರಿಂ, ಇಂದ್ರನ ಮೆಯ್ಗಣ್ಣ ಬಾವುಲಿಯ ದರ್ಪಾಯಿತಿಯರಿಂ, ಕುಬೇರನರೂಪು ನೇವುರದೊಳೆಳಲ್ವ, ಚಾಪಳೆಯರಿಂ, ಜಿತೇಂದ್ರಿಯರಂ ಗೆಲ್ವ ವಿಜಯಧ್ವಜದ ವೀರೆಯರಿಂ, ತಳಿರಗದ್ದುಗೆಯೊಳ್ ಕೆಳಗೆ ಕುಳ್ಳಿರ್ಪ ವಸಂತರಾಜನಿಂ, ಬೆಳ್ದಿಂಗಳ ಹಸೆಯೊಳ್ ಬಳಿಸಿಕುಳ್ಳಿರ್ಪ ಕಳಾಮಾಳೆಯರಿಂ, ಅರಸಾಳ್‌ ಬೆಸನಂ ಸಾರ್ದಿರ್ಪ ಮಳಯಾನಿಳನಿಂ, ಕೆಲದೊಳ್ ನಿಲಿಸಿದಿಕ್ಷು ಚಾಪದಿಂ, ಮಲಂಗಿಸಿದ ಪುಷ್ಪಬಾಣಂಗಳಿಂ, ಸಮಸ್ತ ವಸ್ತುವಿಸ್ತಾರ ವಿಳಸದ್‌ ವಿಲಾಸವಿಭ್ರಮಮಂ ಪಡೆದು ಪರಾಗಮಂ ಪಸರಿಸುವ ಸರಸೀರುಹದೆಸಳ ತುಱುಂಗಲ ಸಿಂಹಾಸವದೊಳ್‌ ಸುರತರುವಂ ಮಲಂಗಿ ವಸಂತನ ಮೇಲೆ ಕಾಲಂ ನೀಡಿ ಶೀತಕರನಿಂ ಶ್ರೀಹಸ್ತಮ ನೊತ್ತಿಸಿಕೊಳುತ್ತುಂ ನಳನಗುಣದುಕೂಲದ ಮಲ್ಲಗಂಟುಂ ಮೊಲ್ಲೆಯ ಮುಗುಳ ಕಂಕಣಮುಂ ಮಲ್ಲಿಗೆಯ ನೆನೆಯ ಹಾರಮುಂ ಬಂದುಗೆಯ ಬಾಹುಪೂರಮುಂ ದಾಡಿಮೀ ಬೀಜದ ಕರ್ಣಾವತಂಸಮುಂ ಚಂದನತಿಲಕಮುಂ ಶ್ಯಾಮವರ್ಣಮುಂ ಕೋಮಲಾಂಗಮುಂ ಕಣ್ಣ ಬೆಳಗುಂ ಮುಖದ ಕಾಂತಿಯುಂ ಮಿಗೆ ಸೊಗಸಂ ಮೂವಡಿಸೆ ಮೂಱುಂಜಗಮಂ ಮೀರಿ ಗೆಲಲೆಂದು ಸಂಗಡಿಸಿ ಶೃಂಗಾರರಸಮಂಗಂಬಡೆದಂತೆ ಸುಕುಮಾರತೆ ಸಾಕಾರಂಗೊಂಡಂತೆ ಸೊಬಗು ಸಂದಣಿಸಿದಂತೆ ನಳನಳಿಕೆ ಬಳೆದಂತೆ ಕಣ್ಗಳ ಭಾಗ್ಯಂ ಕಪಲ್ತಂತೆ ಮನೋರಥಂ ಮದವೇಱಿದಂತೆ ಪುಟವಿಟ್ಟ ಪುಣ್ಯಂ ಪುರುಷಾಕಾರಮಾದಂತಿರ್ದ ಕಂದರ್ಪರಾಜನ ಕಮನೀಯ ರೂಪಂ ಬೃಹಸ್ಪತಿಯ ಕಣ್ಗಳೊಳಪೊಕ್ಕು ಮನಮನಲ್ಲಾಡಿಸೆ ಬುದ್ಧಿ ಬೆದಱೆಯಹಂಕಾರವಳಿದು ಚಿತ್ತಂ ಸೂಸಿ ಮದನವಿಕಾರದ ಜಮ್ಮುಜಕ್ಕುಲಿಸಿ ಹಮ್ಮದಂ ಬೋಗಿ ಜೀವಂ ಸುಖದ ಜೀವಕಳೆಯ ಕಳಾಸದ ಕುಣಿಕೆ ಕಳಲ್ಚಿ ತನ್ನನಱಿಯದಿದಿರನಱಿಯದೆ ಬಂದುದಂಮಱೆದು ಕಜ್ಜಮಂ ತೊಱೆದಿನಿತುಂ ಬೇಗಂ ಸುಖದ ಸೋಂಕಿದುರ್ಕುವ ಕಾಮರಸದ ತೆರೆಯೊಳ್ ತೇಂಕಾಡುತಿರ್ದೆಂತಾನುಮೆಳ್ಚತ್ತು ಸಂತೈಸಿಕೊಂಡು,

ಮಱೆಯುತ್ತೆಳ್ಚಱುತುಂ ಕುಱುಕುಱುಮೆಟ್ಟುತ್ತಡಿಯನೆತ್ತಿ ತಾನೆಂದಿದಿರೆಂದಱಿಯದೆ ಕಾಮವಿಕಾರಂನೆಱೆಪತ್ತಿ ಸುರೇಂದ್ರಮಂತ್ರಿ ದಡದಡಿಸುತ್ತುಂ

ಮೆಲ್ಲನೆ ಮೆತ್ತನೆ ನಡೆತರುತಲ್ಲಲ್ಲಿ ಕುನುಂಗಿ ಕುರ್ಗಿ ಪಂಚಶರಂಗುತ್ಫುಲ್ಲನವಕುಸುಮಸಂಕುಳವಲ್ಲರಿಯಂ ಕಾಣ್ಕೆಯಿತ್ತನಮರಾಚಾರ್ಯಂ

ವ. ಮತ್ತಮನಂತರಂ

ಕಂಪಂ ಕೆಯ್ಕೊಳುತುಂ ಮೆಯ್ಜೊಂಪಿಸಿ ಬೀಳ್ವಳಿನಿಕಾಯಸಹಿತಂ ಜೀವಂಪೆಂಪಿನ ಸೊಂಪಿನಲಂಪಿನಸಂಪಗೆಯಲರ್ದೊಂಗಲಂ ರತೀಶಂಗಿತ್ತಂ

ವ. ಅಂತು ಕಾಣ್ಕೆಯಿತ್ತು ಕುಳ್ಳಿರ್ದ ವಾಚಸ್ಪತಿಯ ಮುಖಮಂ ಮಕರಧ್ವಜಂ ನೋಡಿ,

ಸುರಪತಿ ಸರಸಿಜಭವ ಪಂಕರುಹಾಕ್ಷರ್ ಸುಖದೊಳಿರ್ದಪರೆ ತಾರಕಸಂಗರಮೇನಾದುದು ಸುರಕುಲಗುರುವೇ ನೀಂ ಬಂದ ಕಜ್ಜಮೇನೀ ಪದದೊಳ್

ಎನೆ ಗುರುವೆಂದಂ ತಾರಕನನುವರಮಂ ಮಾಣ್ದು ಮೇರುಗಿರಿತಟದೊಳ್ ಶಕ್ರನುಮಜನುಂ ಸರಸಿಜನಾಭನುಮೇಕಾಂತದೊಳಗಿರ್ದು ಕಳುಪಿದರೆನ್ನಂ

ಕೇಳಲೆ ದರ್ಪಕ ತಾರಕನೂಳಿಗದಿಂದುರಗ ಮರ್ತ್ಯ ನಿರ್ಜರಲೋಕಂಗೋಳುಂಡೆಗೊಳುತುಮಿದೆ ವೀರಾಳಾಪಂಗೊಳ್ಳದಸುರನತ್ಯಧಿಕಬಲಂ

ಅತುಳತರಗುಪ್ತಕಾರ್ಯಸ್ಥಿತಿಯಾಳೋಚನೆಗಳುಂಟು ನೀಂ ಚೆಚ್ಚರಮಪ್ರತತಿಂ ಕಾಮನನೊಡಗೊಂಡು ತರ್ಪುದೆನೆ ಬಂದೆನಿದೆ ಪದಂ ನಡೆ ಮದನಾ

ಎನುತುಂ ಗುರು ನುಡಿಯೆ ಸುಖಾಸನದಿಂದಿದಿರೆಳ್ದು ಶಶಿವಸಂತಾದಿಗಳಂಬನದೊಳ್ ಪಿಂತಿರಿಸುತೆ ಭೋಂಕನೆ ರತಿವೆರಸೇಱಿ ದರ್ಪಕಂ ಪುಷ್ಪಕಮಂ

ತಾನುಂ ವಾಚಸೃತಿಯುಂನಾನಾವಿಧಕಾರ್ಯಗತಿಗಳಂ ನುಡಿಯುತ್ತುಂಸಾನಂದಂ ಹರಿಯಜರಾಸ್ಥಾನನಿಕೇತನದ ಮುಂದೆ ಬಂದಿಳಿತಂದ‌ರ್

ಬಂದೊಳಪೊಕ್ಕು ಚಕ್ರಿಗೆ ವಿರಿಂಚಿಗೆ ವಜ್ರಧರಂಗೆ ವಂದನಾನಂದಶರೀರರಾಗಿ ಕುಸುಮಾಯುಧನುಂ ರತಿಯುಂ ಪ್ರಸಿದ್ಧ ಸಂಕ್ರಂದನಮಂತ್ರಿಯುಂ ಮುದದೆ ಕುಳ್ಳಿರೆ ಕಾಮನನೀಕ್ಷಿಸುತ್ತೆ ಗೋವಿಂದನನಿಂದಿತಂ ನುಡಿದನಾತ್ಮಗತಾರ್ಥವಿಚಾರಸಾರಮಂ

ಹರನತ್ಯಧಿಕತಪೋವಿಸ್ತರಮನನಾಗಿರ್ದಪಂ ಮದನ ತತ್ತಪಮಂಕೊರಗಿಸಿ ವರಗಿರಿಸುತೆಯೊಳ್ನೆರೆಪಲ್ಲಿಗೆ ನೀನೆ ಬಲ್ಲೆ ನೀನೆ ಸಮರ್ಥಂ

ತಪಮಂ ಕೆಡಿಪುದು ಮಾಡುವಜಪದಕ್ಷರದೊಳಗೆ ನಿನ್ನ ನನೆಯಂಬಂ ಕೀಲಿಪುದಾ ಗಿರಿಜಾವಧುಸೌಖ್ಯಪದಾವರಣಾತ್ಮನೆನಿಸುವುದು ಶಶಿಧರನಂ

ವ. ಅಂತುಮಲ್ಲದೆ,

ಪುರುಷ‌ರ್ ವಧುಗಳ್ಗೆ ವಧೂತ್ಕರಮಾ ಪುರುಷರ್ಗೆ ಸೋಲ್ವುದುಚಿತಮದಿಲ್ಲೀಧರೆಯೊಳ್ ಮದನ ವರಸ್ತ್ರೀಪುರುಷ‌ರ್ ನೆರೆ ನಿನಗೆ ಸೋಲ್ವುದೆನಗಿದು ಚಿತ್ರಂ

ಇಂತಪ್ಪ ನಿನಗೆ ಮನ್ಮಥಮುಂತಿದಿರಪ್ಪವರದಾರೊ ಶಶಿಚೂಡನ ತಚ್ಛಾಂತಿಯನುಡುಗಿಸಿ ಗಿರಿಜಾಕಾಂತೆಯ ಸಮಸುಖಸಮುದ್ರಮಧ್ಯದೊಳಿರಿಸೈ

ಎನೆ ಮದನಂ ನುಡಿದಂ ನಿಜಜನಕನೊಳಕ್ಕಕ್ಕಿದಪ್ಪದಪ್ಪದು ಸರ್ವೇಶನನನವಧಿಗುಣನಂ ಶರ್ವನನೆಸುವುದೆನಗೆ ಬೆಸಸುವುದು ನಿಮಗರಿದೇ

ಶ್ರುತಿಗಳ್ ಕಾಣದ ಮನುಗಳಮತಿಯೆಯ್ದದ ಮುನಿಗಳಱಿವು ನಿಲ್ಕದ ಶಾಸ್ತ್ರಪ್ರತತಿ ನೆಱೆಯಱಿಯದಪ್ರತಿಹತರೂಪನನೆಂತು ಕಾಣ್ಬೆನೆಂತಾನೆಸುವೆಂ

ಇಸುವೆನ್ನೀ ಮನಮಂ ಪ್ರೇರಿಸುವೀತನನಖಿಳಲೋಕಗುರುವಂ ಭರದಿಂದಸಮಾಕ್ಷನನಿರದಾರ್ದಿಸುವಸಮಾಸ್ತ್ರ‌ರ್ ಜಲಧಿವಸನ ವಸುಧೆಯೊಳುಂಟೇ

ತಿಳಿಯದೆ ಶೂಲಿಯ ತಪಮಂಚಲಯಿಸು ನೀನೆಂಬುದಹಿತಮೆನಗೆ ಹೆಱರ ಮಕ್ಕಳನಿಕ್ಕಿ ನೆಲೆಯನರಿವುದನಿಳೆಯೊಳಗೆನ್ನಲ್ಲಿ ಮಾಳ್ಪರೇ ಕಮಲಾಕ್ಷಾ

ವ. ಅಂತುಮಲ್ಲದೆ

ಹರಿಯಲ್ಲಿಗೆ ತಮಮಂ ಕೇಸರಿಯಲ್ಲಿಗೆ ಕರಿಯನಭ್ರಶಿಖಿಯಲ್ಲಿಗೆ ಕೇಳುರಗನನಟ್ಟುವ ತೆಱದಿಂಹರನಲ್ಲಿಗೆ ತಂದೆ ಕಳಿಪುವರೆ ನೀವೆನ್ನಂ

ಎಂದೊಡೆ ಮುಕುಂದನೆಂದಂಕಂದರ್ಪ ಬಹೂಕ್ತಿಯಿಂದಮೇನಪ್ಪುದು ನಿನ್ನಿಂದಂ ಸಕಳಜಗಂ ಸುಖದಿಂದಿರ್ಪೊಡೆ ಹರಣದೊಂದು ಹುರುಳಱಸುವರೇ

ಎನೆ ಕಂದರ್ಪಂ ಸಕಳ ಭುವನಮೆನ್ನಿಂ ಪರಮಸುಖದೊಳಿರ್ಪುದು ಗಡಮಾನೆನಿತಱವನೆನ್ನ ಹರಣಂಘನವೇ ತೆಗೆಯಿಂದೆ ನೂಱು ತೀವಿತ್ತೆಂದಂ

ವ. ಎಂದು ಮೀಱಿ ನುಡಿಯುತ್ತೊಡಂಬಟ್ಟು ಬೀಳ್ಕೊಂಡು ನಡೆತಂದು ಪೊಱ ಗಿಕ್ಕಿದ ಸಿಂಹವಿಷ್ಟರ ಮನವಷ್ಟಂಭಿಸುತುನ್ನತಚಿತ್ತಂ ಪುಷ್ಪಧನ್ವಂ ತನ್ನೊಳಿಂತೆಂದಂ

ಪೊಡವಿಯೊಳುಳ್ಳ ಮುಖ್ಯಮುನಿಗಳ್ ಮನುಗಳ್ ಜಿತಕಾಮರುಂ ಸಮಂತೆಡೆಗುಡದೆನ್ನ ಕಾರ್ಮುಕದ ಟಂಕೃತಿಮಾತ್ರದೊಳತ್ತಲಿತ್ತಲುಂಸೆಡೆದು ಸುರುಳ್ದುರುಳ್ದು ರತಿಯುನ್ನತಿಯಿಂ ರತರಪ್ಪರೆಂದೋಡೀಸಡಿಫಡ ಶೂಲಿಗೀಲಿಯ ತಪಂಗಿಪಮೊಡ್ಡಿಪುದೇ ರತೀಶನೊಳ್

ವ. ಎಂದು ಕಂದರ್ಪಕಂ ತನ್ನೊಳೆ ತಾನೆ ಗಜಱಿ ಗರ್ಜಿಸಿ ಮಧುದೂತಿ ಯೆನಿಪ್ಪದಿರ್ಗಂತಿಯಂ ಕರೆದು ವಸಂತಾದಿ ಚತುರಂಗಬಲಮಂ ಬರಲ್ವೇಳೆಂದು ಕಳಿಪುವ ಸಮಯಮೇ ವಸಂತಸಮಯಮಾಗೆ

ಶಿಶಿರದ ತವುದಲೆಯುಂ ನವವಸಂತಸಮಯಪ್ರವೇಶಮುಂ ತಮ್ಮೊಳ್ ಸಂದಿಸೆ ಬಣ್ಣಿಸಲರಿದಾದೊಡಮೆಸೆವಾ ಋತುಸಂಧಿಯಂ ವಿಭಾಗಿಸಿ ಪೇಳ್ವೆಂ

ವ. ಅದೆಂತೆಂದೊಡೆ

ಪೊಳೆವದಿರ್ಗಂತಿಯುಣ್ಮೆ ಮಧುಮಾಸಮೊಡರ್ಚಿದುದನ್ಯಪುಷ್ಪಸಂಕಳರುತಿ ಹತ್ತೆಸಾರ್ದುದು ನವಾಮ್ರಕುಳಂಗಳೊಳಂಕುರಸ್ಥಳಂತಳೆದುವು ತಂಬೆಲರ್ ಜನಿಯಿಸಿರ್ದುದು ಬಾಲ್ಯದೊಳತ್ತ ಮಾರನಗ್ಗಳಿಸುವ ಮಾರ್ಗಣಂಗಳೆನೆ ಚಿಂತಿಸುತಿರ್ದನದಾವ ಕಾಲಮೋ

ವ. ಆ ಸಮಯದೊಳ್

ನನೆಯಂ ಪೆತ್ತುದು ಮಾಧವಿಮೊನೆಸಿದುವಂಕುರಿಪ ತಾಣಮಿಮ್ಮಾವುಗಳೊಳ್ಜಿನುಗಿದುವು ಕೊರಲೊಳಗೆ ಪಿಕನನಂತರಂ ಬಿಲ್ಗೆ ಮದನನನುಮಾನಿಸಿದಂ

ಮುಗುಳೊತ್ತಿತ್ತದಿರ್ಗಂತಿಯಂಕುರಿಸಿತಾಮ್ರಂ ಬಂದು ಮಂದಾನಿಳಂಪುಗುತೊಂದೊಂದಡಿಯಿಟ್ಟನನ್ಯಭೃತನತೋರೊರ್ಮೆ ಕೂಗಿತ್ತು ಮೆ-ಲ್ಲಗೆ ಬಿಲ್ಲಂ ಗೊಲೆಗೆತ್ತಿ ಹೂಡಿದನಮೋಘಾಸ್ತ್ರಸ್ತ್ರಂಗಳಂ ದರ್ಪಕಂದಿಗಿಲೆಂದಿತ್ತು ವಿಯೋಗಿವೃಂದಹೃದಯಂ ವಾಸಂತಿಕಾಮಾಸದೊಳ್

ಕಳಿದುದು ಮಾಗಿ ಕೂಗಿದುದು ಕೋಗಿಲೆ ಪಲ್ಲವಿಸಿತ್ತು ಮಾಮರಂತಳವೆಳಗಾಯ್ತು ಪಾಂಥಜನಮೊಲ್ದವರೊಳ್ ನವಭೋಗದುಜ್ಜುಗಂಮೊಳೆತುವು ಕಾಮನೇಸು ಗುಱಿಗಂಡುದು ತಂಡದೆ ನಿಂದ ನಂದನಂತಳೆದುವು ಕೂಡೆ ಕೆಂಪಿನ ಪಸುರ್ಪಿನ ಕರ್ಪಿನ ಬೆಳ್ಪಿನಂದಮಂ

ವ. ಆ ಸಮಯದೊಳ್,

ಜನಮನುರಾಗಮೇಱಿ ಲಲನಾಜನಮಂ ತೆಗೆದಪ್ಪಿ ಮೀಱಿ ಸನ್ಮುನಿನಿಕರಂ ಜಪಂ ತಪಮನೋವದೆ ಬಿಟ್ಟತಿದೈನ್ಯದಿಂ ವಧೂಸ್ತನತಟವಕ್ಷರಾಗೆ ಮೃಗವೀಧಿಮೃಗೀಕುಲದತ್ತ ಸಾರ್ದು ಬೆನ್ನನೆ ಮಿಗೆ ಪೋಗೆ ಪರ್ಬಿತಿಳೆಯಲ್ಲಿ ವಸಂತವಿಶಾಲಸಂಪದಂ

ವ. ಆಗಳ್

ಮುದದಿಂದಂ ಮಧುದೂತಿಯಂ ಮೊಗಮಲರ್ಚುತ್ತುಂ ವಿರಾಜಿಪ್ಪ ಚೂತದೆ ಮೆಯ್ಯೊಳ್ ಪುಳಕಂಗಳಂ ನೆಗೆಪುತುಂ ಸಾರ್ದನ್ಯಪುಷ್ಟಕ್ಕೆ ಕಂಠದ ಕಾಕಂ ನೆಲೆವೆರ್ಚಿಸುತ್ತೆ ವನಮಂ ವೈವರ್ಣಮಂ ಮಾಡುತುರ್ವಿದಲಂಪಿಂದೆ ವಸಂತರಾಜನೊಸೆದೇಳ್ತಂದಂ ಜಗದ್ವಲ್ಲಭಂ

ನಡುಗಿ ವಿಯೋಗಿಗಳ್ ಸೆಡೆದು ಜೀವಮೊಪ್ಪಿಸೆ ದರ್ಪಕಂಗೆ ಮುಂತಡಿಯಿಡಲಾರದೊತ್ತರಿಸೆ ಪಾಂಥಜನಂ ಕಳೆಗುಂದಿ ನಿಂದು ಪಾವಡರ್ದವೊಲಾಗುತುಂ ಬೆದಱಿ ನಲ್ಲರ ಮೆಯ್ಸಿರಿ ನವ್ಯಭೋಗದೊಳ್ತೊಡರ್ದಿರೆ ಬಂದನಿಂದುಕಳೆಯಂ ದಳವೇಱಿಸುತುಂ ವಸಂತಕಂ

ವ. ಇಂತು ವಸುಮತಿಯ ಪೆಂಪಿನ ಸಂಪದಮಂ ಸೊಂಪೇಱಿಸುತುಂ ನವ್ಯವನಂಗಳ್ಗೆ ನಳನಳಿಕೆಯನೀಯುತುಂ ಚೂತದ ಮೆಯ್ಯೊಳಂಕುರಮನಾಗಿಸಿ ಕೋಗಿಲೆಗಳ ಕೊರಲಂ ಕೆಳೆಯೇಱಿಸುತುಂ ಅಶೋಕೆಯೊಳ್ ಪಲ್ಲವಮಂ ಪಡೆದು ಕಾಂತಾಜನದ ಕಣ್ಣ ಪುಣ್ಯಮಂ ಕವಲ್ವರಿಯಿಸುತುಂ ಲತಾವಿಸರದೊಳ್‌ ಕುಸುಮ ಕುಲಮಂ ಪಸರಿಸಿ ಮಧುಕರಂಗಳ ಮನೋರಥಂಗಳಂ ಪಡೆಯುತುಂ ತರುನಿಕರಕ್ಕೆ ನವೀನಫಲಮಂ ಕೊಟ್ಟು ಶುಕಂಗಳ ಜಿಹ್ವೆಯ ವಿಕಸನಮಂ ಮಾಡುತ್ತುಂ ಪೂಗೊಳನಂ ತಿಳಿಯಿಟ್ಟು ನೀರ್ವಕ್ಕಿಗಳಂ ನೆಲೆವೆರ್ಚಿಸುತ್ತುಂ ರವಿಕಿರಣಂಗಳಂ ಪುಟವಿಟ್ಟು ರಥಾಂಗಮಂ ನಲವೇಱಿಸುತ್ತುಂ ನಳನಕುಲಮನಲರ್ಚಿ ಕಲಹಂಸಂಗಳಂ ತಣಿಪುತ್ತುಂ ನದೀಜಳಮಂ ನಿರ್ಮಳಮಂ ಮಾಡಿ ಮೃಗಪಕ್ಷಿಕುಳಮಂ ಮಿಗೆ ತುಷ್ಟಿವಡಿಸುತ್ತುಂ ಚಂದ್ರಕಳೆಯಂ ದಳವೇಱಿಸಿ ಚಕೋರಮಾಲೆಗೆ ಸುಖಮಂ ಕೂಡುತ್ತುಂ ಇಳೆಯೊಳ್ ಬೆಳ್ದಿಂಗಳಂ ಪಸರಿಸಿ ವಿರಹಿಗಳಂ ವಿರಥರಂ ಮಾಡುತ್ತುಂ ಕಾಮಬಾಣಕ್ಕೆ ಕಂಪನಿತ್ತುಂ ಕಾಮಿಗಳನಿರ್ಮೆಯ್ಗಾಣಿಸುತ್ತುಂ ಮಳಯಾನಿಳಂಗೆ ಶೈತ್ಯಸೌರಭ್ಯಮಾಂದ್ಯಮನಿತ್ತು ಸುಖಮಿಥುನದ ಸುರತಶ್ರಾಂತಿಯನಾಱಿಸುತ್ತುಂ ಮುನಿಗಳ ಮನಮನನನ್ವಿತಂ ಮಾಡಿ ವನಿತಾಜನದ ವದನಮನಲರ್ಚುತ್ತುಂ ಸಕಳಭುವನಕ್ಕೆ ರಾಗಾಂಧತೆಯನಿತ್ತು ಸತೀಜನಮನೇಪೊಳ್ತುಂ ನೆರೆಪುತ್ತುಂ ಇಂತು ತನ್ನ ಬರವಿನುರವಣೆಯನುರಾಗಕ್ಕೆ ಅನುರಾಗವೇಱಿ ಮನ್ಮಥರಾಜಂ ರತಿಯನಾಲಂಗಿ ಸಲನುಗೆಯ್ಯುತ್ತಿರೆ ವಸಂತಂ ಸಂತಸದಿಂ ನಡೆತಂದೆಳಗೆಂಪಂ ಪಸರಿಪ ಕಿಸಲಯ ವಿಸರಮಂ ಕಂಪಂ ಕವಲ್ವರಿಯಿಸುವ ಕುಸುಮಮಂಜರಿಯಂ ಮಧುರರಸಮಂ ತೆರೆಮಸಗಿಪ ನವ್ಯಫಲಂಗಳಂ ಮಕರಪತಾಕಂಗೆ ಕಾಣ್ಕೆಯಿಕ್ಕಿ ಮೆಯ್ಯಿಕ್ಕಿ ಕೆಯ್ಯಂ ಮುಗಿದು ನಿಂದು

ಇದೆ ಚತುರಂಗಬಲಂ ಬಂದುದು ಮನ್ಮಥಭೂಪ ನೋಡು ಚಿತ್ತವಿಸೆನುತುಂಸದಮಳಮೋಹನಜನಕಾಸ್ಪದಸೇವೆಯನೊಲ್ಡು ತೋಱುತಿರ್ದಂ ಚೈತ್ರಂ

ವ. ಅದೆಂತೆಂದೊಡೆ,

ಮಿಳಿ ಲತೆ ಗುಳಮೇ ಪತ್ರಂಫಳರಸಮೆ ಮದಾಂಬು ನೀಳ್ದ ಕೊಂಬೆ ಕರಂ ಪೂತೆಳಗೊಂಬುಗಳೇ ದಂತಂಕಳಕಂಠನಿನಾದಮೆಸೆವ ಬೃಂಹಿತನಾದಂ

ವಿಪುಳೋನ್ನತಪಲ್ಲವಮಗ್ರಪಲ್ಲವಂ ಡಿಂಡಿಮಸ್ವನಂ ಮತ್ತಾಳೀಚಪಳಸ್ವನಮೆನೆ ಚೂತದ್ವಿಪಘಟೆಯಂ ತೋಱಿದಂ ಸಮಂತು ವಸಂತಂ

ವರಮುಖರಾಗದ ಮೊಗವಡದುರುಕಾಂತಿಯ ವಾಘೆ ಚರಣದಂಕಣಿಯಿಂ ಭಾಸುರಪಕ್ಷದ ಪಚ್ಚೆಯ ಪಕ್ಕರಿಯೆಸೆವ ಶುಕಾಶ್ವವೀಧಿಯಂ ಕಾಣಿಸಿದಂ

ಎರಡುಂ ಪಕ್ಷಂ ಚಕ್ರಂಪೊರೆದಾಲಿಂಗನೆಯಚ್ಚು ಚಂಚುಪುಟಂ ಪೊತ್ತರಿಸುವ ಮುಂಕಣಿಯಾಗಿರೆನೆರೆದಿರ್ದ ರಥಾಂಗರಥಮನೊಪ್ಪಿರೆ ತಂದಂ

ವ. ಇಂತು ವಸಂತಂ ಹಸ್ತ್ಯಶ್ವರಥಂಗಳಂ ತೋಱಿದ ಸಮನಂತರದೊಳ್ ಪದಾತಿಬಲಂ ಬರುತಿರ್ದುದದೆಂತೆನೆ

ಪಾಡುವ ತುಂಬಿಯ ತಲೆಯಲ್ಲಾಡುತ್ತಿರೆ ಬಂದಳಮಮ ಕೃಷ್ಣನ ಮನಮಂಷೋಡಶಸಹಸ್ರಭಾಗಂಮಾಡಿದ ಮನ್ಮಥನ ಮೊನೆಯ ನಾಯಕಿಯೊರ್ವಳ್

ಅನವದ್ಯಕಳಾಕೋವಿದನೆನಿಸಿಯುಮಾತ್ಮಜೆಯೊಳೊಲ್ದು ಬೆರಸಿದ ಚತುರಾಸ್ಯನ ರೂಪು ಕಾಲ ಪೊಸಪೂವಿನ ಹಾಹೆಯೊಳೆಳಲೆ ಬಂದಳಂಗನೆಯೊರ್ವಳ್

ಭಾಸುರತರಸುಕುಮಾರೆ ವಿಲಾಸದೆ ನಡೆತಂದಳಂದಹಲ್ಯೆಯ ಕತದಿಂಸಾಸಿರ ಕಣ್ಣಂ ಮಾಡಿದವಾಸವವಿಜಯಧ್ವಜಪ್ರತಾಪದಿನೊರ್ವಳ್

ವ. ಮತ್ತಮಲ್ಲದೆ,

ನೆರೆದು ಪಳಂಚುವ ಕಾಲುಂಗುರದ ರವಂ ಮುಂದೆ ಡೌಡೆವಱೆಯಂ ಪೊಯ್ವುತ್ತಿರೆ ಕುಸುಮಾಸ್ತ್ರನ ಮದವತ್ಕರಿಯಂತೆ ಕರೀಂದ್ರಯಾನೆ ಬಂದಳದೊರ್ವಳ್

ವ. ಮತ್ತಂ ವಸಂತಂ ಪದಾತಿಬಲಮಂ ತೋಱಿಸುತಿರ್ದನದೆಂತೆಂದೊಡೆ

ಅದೆ ನನೆಯ ಕಠಾರಿಯ ಮರುಗದ ಹಱಿಗೆಯ ತಾಮರಸದ ಘಂಟೆಯ ಮುಡಿವಾಳದ ಚಮರಿಯ ಕುಮುದದ ಕೊಂತದ ಕೇತಕಿಯೆಸಳ ಸುರಗಿಯಬಳಾನೀಕಂ

ತಳಿರ್ಗಳ ಚಕ್ರದ ಕದಳೀದಳಫಲಕದ ಸುರಗಿಯರಲ ಕೌಕ್ಷೇಯದ ಪಡ್ಡಳಿಗಳ ಸಬಳದ ಬಂದುಗೆಗಳ ತಿಸುಳದ ಮೊಲ್ಲೆಯಿಟ್ಟಿಗಳ ಕಾಮಿನಿಯರ್

ಸುರಹೊನ್ನೆಯ ಮುಗುಳ್‌ಗಳ ತೋಮರ ಲತಾವಳಿಯ ಸೆಲ್ಲೆಹಂಗಳ ಪೊಸಪಾದರಿಗಳ ಬಲ್ಲೆಹದೆಸವಂಕುರವೀಧಿಯ ವಜ್ರಮುಷ್ಟಿಯಂಗನೆರ್ಕಳ್

ದವನದ ಸೀಗುರಿಗಳ ಪೊಣ್ಮುವ ಪೊಂಬಾಳೆಗಳ ಚಾಮರಂಗಳ ಕಂಪೇಱುವ ಸಂಪಗೆಗಳ ಸತ್ತಿಗೆಯ ವಿಚಕಿಲನಿಕಾಯ ಕೇತುದಂಡದ ಸತಿಯರ್

ತರದಿಂದಂ ಕ್ಷೀರಾಬ್ಧಿಯತರಂಗದಂತೆಸೆವ ಶಶಿಯ ಹಾದಿಯವೋಲ್ ಸುಂದರಿಯರ ಮೋಹರಮಿಂತೊತ್ತರಿಸೆ ನಿರೀಕ್ಷಿಸುತೆ ದರ್ಪಕಂ ಬೆಱಗಾದಂ

ವ. ಇಂತು ಬೆಱಗಾಗುತ್ತುಮಿರೆಯಿರೆ ಮತ್ತಂ ಕಂದರ್ಪರಾಜನ ಮುಂದೆ,

ನಳನಳಿಪಿಕ್ಷುದಂಡದ ಧನುವ್ರಜದಿಂ ಶತಪತ್ರಸೂತ್ರದಿಂತೊಳಗುವ ನಾರಿಯಿಂ ತಳಿರ ಕೆಯ್ಪೊಡೆಯಿಂ ಕುಸುಮಾಸ್ತ್ರಮಾಲೆಯಿಂದಳವಡೆ ನಿಂದು ನೀಡಡಿಗೆ ನೀಡಡಿ ಸೇರ್ದಿರೆ ಸಾರ್ದು ಬೊಬ್ಬೆಗೊಟ್ಟೆಳೆ ಬೆಱಗಾಗೆ ನಾರಿಯರ ಬಿಲ್ವಡೆ ತೋಱಿತು ಮೀಱಿ ಲೋಕಮಂ

ವ. ಅಂತುಮಲ್ಲದೆ

ತೊಳತೊಳಪಮೃತಮಯೂಖಂಗಳನೊಸೆದೆಣ್ದೆಸೆಗೆ ಪಸರಿಸುತ್ತೆ ಚಕೋರಾವಳಿ ಬಳಸೆ ನೆರೆದ ಕೈರವಕುಳದೊಳ್ ನಡೆತಂದನಮಮ ತಾರಾಧೀಶಂ

ಕ್ರಮದಿಂದ ಶೈತ್ಯಸೌರಭ್ಯಮಾಂದ್ಯಮೆಂದೆಂಬ ತನ್ನ ಗುಣದೊಳ್ಪು ರತೀರಮಣನನಲ್ಲಾಡಿಸೆ ಮಂದಮಾರುತಂ ಮೋಹಿಸುತ್ತೆ ಮುಂದೆಯ್ತಂದಂ

ವ. ಇಂತು ಸಹಕಾರಸಾಮಜಸಮಾಜಮಂ ಕೀರಕದಂಬ ತುರಂಗಸಂಘಮಂ ರಥಾಂಗರಥವ್ರಾತಮಂ ಸುದತೀಸಮೂಹ ಪದಾತಿಕುಲಮಂ ನಿರೀಕ್ಷಿಸುತ್ತುಂ ಪರಮಾನುರಾಗದಿಂ ಕಂತುರಾಜಂ ಸಂತಸಮನೆಯ್ದುವಾಗಳ್ ವಸಂತನಿರ್ದಿತ್ತಲವಧರಿಸೆಂದು ನವೀನವಚೋವಿಳಾಸೋನ್ಮತ್ತತೆಯಿಂದಿಂತೆಂದಂ,

ಕಿಸಲಯದ ಕುಸುಮವಿತತಿಯಪೆಸರೇಕಾ ಸ್ಥಾಣುವಿನ ವಿನಿಶ್ಚಲಮನಮಂಬೆಸುಗೆಗಳೆದೊಡೆದು ಮೂಡಲ್ಮಿಸುಪಂಕುರವೊಂದೆ ಸಾಲದೇ ಮದನನೃಪಾ

ಎಸೆವ ನವಾಂಕುರರಸದಿಂಮಸೆದೀ ಕೋಕಿಲನ ಕೊರಲ ಮಧುರಧ್ವನಿಯೊಂದೆ ಸಮರ್ಥಂ ಶೂಲಿಯ ತಪದೆಸಕಮನುಡುಗಿಸುವೊಡುಳಿದ ಪರಿಕರಮೇಕಯ್

ಇಳೆಯೊಳ್ ಸರ್ವೇಶನ ನಿಶ್ಚಳತಪದುರವಣೆಯ ತೇಜಮಂ ದೊರೆಗೆಡಿಸಲ್ಕಳರವದಿಂ ಬಗ್ಗಿಸುವರಗಿಳಿಗಳ ಚಪ್ಪರಣೆಯೊಂದೆ ಸಾಲದೆ ಮದನಾ

ವ. ಇಂತಿವರ್ಕೆ ಸೆಡೆಯದೆ ಕಡುಪಿಂದಿಂದುಧರಂ ನಿಂದನಪ್ಪೊಡೆ

ಅರಗಿಳಿಗಳ ಪವಮಾನನತರುಣೀನಿವಹದ ಫಳಪ್ರತಾನದ ಪುಷ್ಪೋತ್ಕರದನುಪಮ ಶಬ್ದಸ್ಪರ್ಶರೂಪ ರಸಗಂಧದಿಂದೆ ಶಿವನಂ ಗೆಲ್ವೆಂ

ವ. ಅಂತು ಸಕಲ ಜಗಜ್ಜನ ಮನೋನುರಾಗ ಜನನಕಾರಣ ಕರ್ತೃವಪ್ಪ ವಸಂತಂ ಭಾಷೆಗೊಟ್ಟ ಸಮನಂತರದಲ್ಲಿ

ಭರದಿಂದೆ ಬಂದು ನುಡಿದಂವರಹಿಮಕರನೆಸೆವ ಚಂದ್ರಕಾಂತದ ಕಲ್ಲಂಕರಗಿಸುವೆನ್ನ ಸುಧಾಮಯಕರಂಗಳಿಂ ಹರನ ಚಿತ್ತಮಂ ಕರಗಿಸುಗುಂ

ವ. ಆ ಸಮಯದೊಳುರವಣಿಸಿ ನಡೆತಂದು ಮುಂದೆ ನಿಂದ ಚಂದ್ರಮುಖಿಯರೊಳೊರ್ವಳ್,

ತ್ರಿಣಯನ ತಪಮಂ ಕಿಡಿಸಲ್ಕ್ಷಣವೇಧಿಗಳೆನಿಸುವೆನ್ನ ತರಳಕಟಾಕ್ಷೇಕ್ಷಣಯುಗಮಿರ್ದಂತೀ ನನೆಗಣೆಗಳ್ ಪರ್ಯಂತವೇಕೆ ಮಕರಪತಾಕಾ

ವ. ಮತ್ತಮೊರ್ವಳ್,

ಮಾರನೃಪ ನಿಜಧನುಷ್ಟಂಕಾರಮನಾರಾಂಪರಂತದಿರ್ಕೆನ್ನೆಯೆ ಮಂಜೀರದ ಮಧುರಧ್ವನಿಯಿಂಘೋರತಪೋಮಯನನಭವನಂ ಪರಿಭವಿಪೆಂ

ವ. ಎಂದು ಮೀಱಿ ನುಡಿವ ನೀಱೆಯರ ನಡುವಣ ಭಾಮಿನಿಯೋರ್ವಳ್ ಭಾಷೆ ಗುಡುತ್ತುಮಿರ್ದಳದೆಂತೆಂದೊಡೆ,

ಮದನನೃಪಾಲ ಕೇಳ ಭುವನತ್ರಯಮಂ ಕ್ಷಣದಿಂದೆ ಗೆಲ್ದು ಸಿಂಗದ ಘನಕೀರ್ತಿಯಿಂ ತೊಳಗುವಿಕ್ಷುವ ಚಾಪದ ಪುಷ್ಪಬಾಣದಗ್ಗದ ನುಡಿಯಿಲ್ಲಿಗೇಕೆ ಮಿಸುಪೆನ್ನಯೆ ಪುರ್ವಿನ ಕರ್ವುವಿಲ್ಲ ನೋಟದ ನನೆಗೋಲ ಲೀಲೆಯೊಳೆ ಸೋಲಿಸುವೆಂ ಜಿತಕಾಲಶೂಲಿಯಂ

ವ. ಎಂದಿಂತು ಸಂದಣಿಸಿ ಭಾಷೆಗೊಟ್ಟ ವಸಂತಾದಿ ಸಂಮೋಹನ ಬಲಮುಖ್ಯರ ಸುಧಾರಸಪೂರಿತ ಚಾರುವಚನರಚನೆಗಳಂ ಕೇಳ್ದು ಕುಸುಮಾಯುಧಂ ವಿಳಸನ ವಿಜಯಿಗಳಪ್ಪ ನಿಜಭುಜದಂಡಯುಗಳಮಂ ನೀಡಿ ಮದೋನ್ಮತ್ತ ವೀರಾಳಾಪಮುಖರಮುಖನಾಗಿ

ಇನ್ನಿರ್ಪನಿರ್ಪನಭವಂಸನ್ನುತತಪದಿಂದಮಿರದೆ ಮಾಣ್ಬಂ ಕಾಣ್ಬಂತನ್ನಗ್ಗದ ವೈರಾಗ್ಯದಬಿನ್ನಣಮುಮನೆನ್ನ ಪಂಚಬಾಣದ ಬಲಮಂ

ಗಣಿದಮದೇವುದಿಕ್ಷುಧನುವುಂ ಕುಸುಮಾಸ್ತ್ರಮುಮೆನ್ನ ಕೆಯ್ಗೆ ಸಂದಣಿಸೆ ಬಳಿಕ್ಕಮೆತ್ತಣ ತಪೋಮಯರೆತ್ತಣ ಶಾಂತಿಭೂಷರೆತ್ತಣ ಜಿತಕಾಮರೆತ್ತಣ ದಿಗಂಬರರೆತ್ತಣ ಕರ್ಮನಿಷ್ಠರೆತ್ತಣ ಬುಧರೆತ್ತಣಾತ್ಮವಿದರೆತ್ತಣ ನಿಸ್ಪೃಹರೆತ್ತಣುತ್ತಮರ್

ವ. ಅಂತುಮಲ್ಲದೆ

ಪರಿಮಳಮನೆಣ್ದೆಸೆಗೆ ಬಿತ್ತರಿಸುವ ನನೆಗಣೆಗಳಿಂದೆ ಗಿರಿಪತಿತನಯಾವಿರಹಾತಪಮೊಗೆಯಲ್ ಶಂಕರನ ತಪಶ್ಛತ್ರದಂಡಮಂ ಖಂಡಿಸುವೆಂ

ಅತಿಭೀಮ‌ರ್ ಜಿತಕಾಮ‌ರ್ನುತನಾಮರ್ ಮದನನಿದಿರೊಳಿಲ್ಲೆನೆ ಹೋಹೋಸತಿ ಕಾಮಿತಮನದಿಂ ಪಾರ್ವತಿ ಬಳೆವನ್ನೆವರಮಿರ್ಪ ತಪಮೊಡ್ಡಿಪುದೇ

ವ. ಅಂತುಮಲ್ಲದೆ

ಸೊಂಪಿಂ ಮುದದಿಂ ಮೋಹನದಿಂಪಿಂ ಸಂತಾಪದಿಂ ವಶೀಕರಣೋದ್ಯತ್ಸಂಪದದಿಂ ನೆಱೆ ತೋರ್ಪೆಂ ಪಂಚಮುಖಂಗೆ ಪಂಚಬಾಣದ ಸವಿಯಂ

ವ. ಎಂದಿಂತು ನಿಜಭುಜಪ್ರತಾಪಾಲಂಕೃತ ವೀರಾಳಾಪಮಂ ಮಾರನೃಪಂ ನುಡಿಯುತ್ತುಂ ನಳಿನಗುಣವಿರಚಿತ ನವ್ಯದುಕೂಲಮಂ ತೆಗೆದು ಬಿಗಿದುಟ್ಟು ದಿವ್ಯ ಚಂದನಮನುದ್ವ ರ್ತನಂಗೆಯ್ದು ಪರಾಗದ ತಿಲಕಮನಿಟ್ಟು ಕೇತಕೀದಳದ ಕೂರಲಗಂ ಕಿಗ್ಗಟ್ಟಿನೊಳಳವಡಿಸಿ ವಸಂತಂ ಪೊಸಮಲ್ಲಿಗೆಯ ನುಣ್ಣನಪ್ಪ ಸಣ್ಣನನೆಯ ವೀರಸೇಸೆಯಂ ಸೂಸೆ ವನಲಕ್ಷ್ಮಿ ಪಳಿಕಿನ ಪರಿಯಾಣದೊಳ್ ಬಂದುಗೆಯ ಕುಸುಮದ ವಿಜಯಾರತಿಯನೆತ್ತೆ ಮಜ್ಜಯ್ಯ ಪೂತುರೆ ಎಂದು ಸರಸಿಜಾಕ್ಷಂ ಪರಸೆ ಲಕ್ಷ್ಮೀದೇವಿಯ‌ರ್ ಮೊದಲಾದ ಲಲನಾಜನಂ “ವೀರವಿಭ್ರಮ ವಿಜಯೀಭವ” ಎಂದು ಗೆಲ್ವನೀಯೆ ಚತುರಾಸ್ಯನುಮಿಂದ್ರಾದಿ ದಿಗ್ವರರುಂ ಮುಂದೆ ಉರಾವುರೇ ಎಂದು ಮೆಯ್ಯಾಂತು ಕೆಯ್ವಾರಿಸೆ ಕಳಾಮಾಳಿ ಕೆಯ್ಗುಡೆ ಗರ್ವಪರ್ವತಮನೇರುವಂತೆ ಮುಂದೆ ನಿಂದ ಮಾಕಂದ ಮತ್ತಮಾತಂಗಮಂ ಭೋಂಕನೇಱಿ ಪಶ್ಚಿಮಾಸನದೊಳ್ ರತೀದೇವಿಯನಿರಿಸಿ ಹೊಳೆಹೊಳೆವ ಚಂದ್ರಮನ ಬೆಳ್ಗೊಡೆ ಮೇಲಲರೆ ಗಂಧವಹಂ ಸುಗಂಧದ ಸೀಗುರಿ ಚಾಮರವನಿಕ್ಕೆ ಕರ್ಬಿನ ಬಿಲ್ಲುಮನಲರ ಸರಲುಮಂ ರೋಹಿಣೀದೇವಿ ಪಿಡಿದಿರೆ ಕೆಲಬಲದೊಳ್ ಶುಕಾವಳೀ ತುರಂಗಸಂಘಂ ಸಂದಣಿಸೆ ರಥಾಂಗ ಘನರಥಂ ಮೇಳಯ್ಸೆ ಚೂತಗಜಂ ವೀಧಿಗೊಳೆ ಮುಂದೆ ಸುದತೀಕುಲ ಪದಾತಿಬಲಂ ಮುಂದಯ್ಸೆ ನೆಗಪಿದ ಮಕರಧ್ವಜಂ ಗಗನಮಂ ಚುಂಬಿಸೆ ದರ್ಪಂ ಕೆಯ್ಮಿಕ್ಕು ದರ್ಪಕ ಭೂಭುಜಂ ಶೂರ್ಪಕಮರ್ದನಂ ಶಂಬರಸೂದನಂ ನತ ಜಿತೇಂದ್ರಿಯವಿತಾನಂ ಮುನಿಜನಮನೋಹಾರಿ ಯತಿವ್ರಜವಾರಣ ಪಂಚಾನನಂ ಕಾಂತಾಕುಲ ಚಕ್ರವರ್ತಿ ಅಪ್ರತಿಹತವಿಕ್ರಮಂ ಕಾಮದೇವಂ ಹೇಮಕೂಟಾಭಿಮುಖನಾಗಿ ನಡೆತರ್ಪಾಗಳ್,

ಪರಮಸ್ವಾಮಿ ಜಟಾಧರಂ ಶಶಿಧರಂ ಗಂಗಾಧರಂ ಕಾಲಸಂಹರನಜ್ಞಾನಹರಂ ಪುರತ್ರಯಹರಂ ಸೌಖ್ಯಾಕರಂ ಶಂಭು ಶಂಕರನಾನಂದಕರಂ ಸಮಂತೆನಗೆ ಭಕ್ತಿಜ್ಞಾನ ವೈರಾಗ್ಯಮಂಕರುಣಂಗೆಯ್ಗೊಲವಿಂದೆ ಹಂಪೆಯ ವಿರೂಪಾಕ್ಷಂ ಶಿವಾವಲ್ಲಭಂ

ಇದು ಸಮಸ್ತ ಸುರಾಸುರಮಕುಟ ಖಚಿತ ದಿನಕರಕರಾಧಿಕ್ಯ ಮಾಣಿಕ್ಯಪ್ರಭಾಪುಂಜರಂಜಿತಚರಣ ನೆನಿಪ ಪಂಪಾವಿರೂಪಾಕ್ಷ ಶ್ರೀ ಪಾದಕಮಲ ಮಕರಂದ ಮಧುಕರಾಯಮಾಣ ಸತ್ಕವೀಶ್ವರ ಹಂಪೆಯ ಹರಿಹರದೇವ ವಿರಚಿತಮಪ್ಪ ಶ್ರೀ ಗಿರಿಜಾಕಲ್ಯಾಣ ಮಹಾಪ್ರಬಂಧದೊಳ್ ವಸಂತೋದಯ ಮದನಪ್ರಯಾಣ ಪ್ರಾರಂಭ ವರ್ಣನಂ ಸಪ್ತಮಾಶ್ವಾಸಂ