EN | KA

Menu

VI

ಗಿರಿಜಾಕಲ್ಯಾಣ

ತಾರಕಾಸುರ ಯುದ್ಧವರ್ಣನಂ

ಶ್ರೀಪತಿ ವಾಕ್ಪತಿ ಪೌಲೋಮೀಪತಿ ಪೂಜಿತಪದದ್ವಯಂ ಸದ್ಭಕ್ತಿಶ್ರೀಪದಮಂ ಕುಡುಗೆಮಗೆ ವಿರೂಪಾಕ್ಷಂ ಭಾಸುರಂ ಭವಾನೀಭರ್ತಂ

ಸಕಳೋರಗ ಸುರನರಮಸ್ತಕಶೂಲನನಮಿತಲೋಕ ಪಾಲನ ತೀವ್ರಪ್ರಕಟ ಯಶೋಲೋಲನ ತಾರಕಾಸುರನ ಕೊರ್ವು ಪರ್ವಿತುರ್ವೀತಳಮಂ

ವ. ಅಂತುಮಲ್ಲದೆ,

ಉರಗಾನೀಕಾಬ್ಧಿಮರ್ತ್ಯವ್ರಜಗಹನ ಸುರವ್ರಾತ ಧಾರಾಧರ ಪ್ರಸ್ಫುರಿತೌರ್ವಂ ಪಾವಕಂ ಮರುತನೆನಿಸಿ ಕರಂ ಶೋಷಿಸುತ್ತಾವಗಂ ಸುಟ್ಟುರಿಪುತ್ತೆಳ್ಬುಟ್ಟುತುಂ ಪೆರ್ಚಿದನಸುರನವಂ ತಾರಕಂ ತೀವ್ರ ಕೋಪಾಕರರೂಪಂ ಪ್ರಾಯಕಾಯಂ ಪ್ರಬಳ ಬಳಯುತಂ ಚಂಡಶೀಲಂ ವಿಶಾಲಂ

ಅರರೇ ಆತ್ಮಬಲಾಕ್ಷಿಮಧ್ಯವಿಮಲಶ್ರೀತಾರಕಂ ತಾರಕಂಪರಭೂಪಾಲ ತಮಂಧಭೇದನಕರೋದ್ಯತ್ತಾರಕಂ ತಾರಕಂಸುರಸಂಘಾತಪತಾಕಿನೀ ಪ್ರಬಳವಾರ್ಧ್ಯುತ್ತಾರಕಂ ತಾರಕಂನರನಾಗಾಮರಲೋಕಶೋಕಸರಣೀ ವಿಸ್ತಾರಕಂ ತಾರಕಂ

ವ. ಎಂದು ಗಂಭೀರ ಪ್ರತಾಪಮಂ ತಳೆದು,

ಧರಣಿಯನೊಕ್ಕಲಿಕ್ಕಿ ದಿಗಧೀಶರ ಗಂಟಲನೊತ್ತಿ ಮೆಟ್ಟಿ ಭೀಕರ ಫಣಿಲೋಕಮಂ ಹಿಡಿದು ನಾಕಮನೋಡಿಸಿ ನಿಂದ ವೀರರಂಧುರದೊಳೆ ತತ್ತಱಂದಱಿದು ತಳ್ಕಿಸುತಪ್ರತಿಮ ಪ್ರತಾಪಭಂಗುರು ಭುವನತ್ರಯಂ ನೆಗಳ್ದನಕ್ರಮಕಾರಿ ಜಿತಾರಿ ತಾರಕಂ

ವ. ಇಂತು ಜಗತ್ರಯಮಂ ನಿಜಪ್ರತಾಪದಿಂ ಕುಕ್ಕುಳಂಗುದಿಸುವ ವಿಕ್ರಮ ಶೀಲನಪ್ಪತಾರಕಾಸುರನುರವಣೆಯಂ ಸೈರಿಸಲಾಱದೆ ನಾಗರ್ಕಳುಂ ನರರುಂ ನಿರ್ಜರರುಂ ಕಿನ್ನರಸ್ತೋಮಮುಂ ಕಿಂಪುರುಷವ್ರಜಮುಂ ನೆರೆದು ಪರಿತಂದು ಮೇರುವಿನ ತಳ್ಪಲೊಳಿರ್ಪ ನಾರಾಯಣ ವಾರಿಜಪುತ್ರಪುರಂದರರಸಭಾನಿಳಯದ್ವಾರವಳಯದ ಮುಂದೆ ಮಂದೈಸಿ ಮುದವಳಿದು ಮದವುಡುಗಿ ಮೆದೆಗೆಡೆದು ಮುಂದುಗೆಟ್ಟು ಸಂದಣಿಸಿ ನಿಂದು,

ನರತತಿ ನೊಂದಳಲ್ದು ಮೊಱೆಯೋಮೊಱೆಯೋ ನೆರೆದಲ್ಲಿಗಲ್ಲಿಗೊತ್ತರಿಸಿ ನಿಳಿಂಪವೀಥಿಯವಿಧಾಯವಿಧಾ ಉರಗಪ್ರತಾನಮಾತುರಿಸಿ ಬಿಗುರ್ತು ನಿಂದು ಶಿವಧೋಶಿವಧೋ ಎನುತುಂ ಸುರುಳ್ದು ಸೂಗುರಿಸಿ ತೆರಳ್ದು ತಲ್ಲಣಿಸಿ ಮಲ್ಲಳಿಗೊಂಡುದು ಮೇರುಭಾಗದೊಳ್

ಮೊಱೆಯಿಡೆ ಕೇಳ್ದು ಚಕ್ರಧರನುಂ ಜಳಜೋದ್ಭವನುಂ ಬಲಾರಿಯುಂಮಱುಗಿ ಸುರುಳ್ದಳಲ್ದು ಕರೆಯೆಲ್ಲಿಯದೀ ಘನಶೋಕವಾವನಿಂತುಱುಗಿದುದಾವನಿಂದೊದವಿತಾವನಿನುರ್ವಿದುದಾವನಿಂದೆಯಳ್ಕಱಿದುದಿದಾವನಿಂದಲರ್ದುದಾವನಿನೊತ್ತರಿಸಿತ್ತು ಕೌತುಕಂ

ಎಂದೆಂದು ನುಡಿಯುತಿರ್ಪಿನಮಂದೆಯ್ತಂದೊಟ್ಟಿಯೊಱಲಿ ಮೆದೆಗೆಡೆಯುತ್ತುಂಸಂದಣಿಸುತ್ತುರವಣಿಸುತ್ತುಂ ದಡದಡಿಸುತ್ತೆ ಸುರನರೋರಗನಿಕರಂ

ಸುರಿತರ್ಪ ಕಣ್ಣ ನೀರಿಂಕರಾಗ್ರದೊಳ್ ನೆಗೆದು ತೋರ್ಪ ಪುಲ್ಲಿಂ ಮುಖದೊಳ್ತರದಿಂ ಪೊಣ್ಮುವ ಮೊಱೆಯಿಂನೆರೆದೊಱಲುತ್ತಳುರ್ವ ತಾಪದಿಂದಖಿಳಜನಂ

ವ. ಅಂತು ಬಂದಳಲ್ದುನಿಂದು

ಕಾವುದು ವಿಷ್ಣು ಕಾವುದರವಿಂದ ತನೂಭವ ಕಾವುದಿಂದ್ರ ಸದ್ಭಾವದೊಳೆಮ್ಮನೀಕ್ಷಿಪುದು ತಾರಕನಿಂದುಱೆ ನೊಂದು ಶೋಕದಿಂತೀವಿದೆವಾವುದಿನ್ನೆಮಗೆ ಜೀವನಮಾವುದು ನಿಲ್ವ ತಾಣವಿನ್ನಾವುದು ರಕ್ಷಣಾರ್ಥಕರವಾವುದು ಸತ್ಪಥವಾವುದಾಶ್ರಯಂ

ವ. ಅಂತುಮಲ್ಲದೆ

ಧರೆಗೆಸೆದತ್ತು ತಾರಕನ ದುರ್ಗತಿ ತಾರಕನೇಳ್ಗೆ ತಾರಕಾಸುರನ ಪೊಡರ್ಪು ತಾರಕನ ಮತ್ತತೆ ತಾರಕನಾಜ್ಞೆ ತಾರಕಾಸುರನ ತೆರಳ್ಕೆ ತಾರಕನ ತೀವ್ರತೆ ತಾರಕನುರ್ಕು ತಾರಕಾಸುರನ ನಿಮಿರ್ಕೆ ತಾರಕನ ಮೂರ್ಖತೆ ತಾರಕನುತ್ಪಥಕ್ರಮಂ

ತಾರಕನಂ ಗುರುತರ ಭೂಭಾರಕನಂ ಸಕಳದುರಿತಪೂರಿತಪಾಪಪ್ರೇರಕನಂ ದುರ್ಗುಣವಿಸ್ತಾರಕನಂ ಬಾರಿಪನ್ನರಾರ್ ಧಾರಿಣಿಯೊಳ್

ವ. ಎಂದು ಬಿನ್ನವಿಸಿದ ಪನ್ನಗನರಸುರರ ಸಂತಾಪಮನೆಂತಾನುಂ ಕೇಳ ಲಾಱದೆ ಸಂತೈಸಿ, ಮಂತ್ರಾಳೋಚನೆಯಂ ಮುಂದುಗೊಂಡು ಹರ್ಯಜ ಪುರಂಧರರ್ ಪರಿಮಿತಾಸ್ಥಾನರಾಗಿ

ಪುರಹರನಿರ್ದಪಂ ನಿರುಪಮಾ ನತಪೋಮಯನಾಗಿ ಲೋಕವೊತ್ತರಿಸಿ ತೆರಳ್ದು ಪುಯ್ಯಲಿಡುತಿರ್ದುದು ಸೈರಿಸಬಾರದಾತ್ತ ಸಂಗರ ವಿಜಯೋರ್ಜಿತ ಪ್ರಮುಖರಿಲ್ಲ ವಿಚಾರಿಸೆ ವೀರತಾರಕಾಸುರನತುಳಪ್ರತಾಪನಿಧಿ ಕಾಳೆಗಮೀ ಪದದೊಳ್ ನಿರರ್ಥಕಂ

ಸುರಗುರುವಂ ಕಳಿಪುವುದಾದರದಿಂ ಸಂಧಾನಮಂ ನಿಮಿರ್ಚುವುದವನಿರ್ಪಿರವಂ ನೋಡುವುದಲ್ಲದೊಡರವರಿಸದೆ ಕಾದುವುದು ದಿಟಕ್ಕಿದು ಮಂತ್ರಂ

ವ. ಎಂದು ನಾರಾಯಣ-ನೀರಜಭವ-ನಾಕಪತಿಗಳೇಕಚಿತ್ತರಾಗಿ,

ಶೌರ್ಯಮದೀ ಪೊಳ್ತಲ್ಲಂವೀರ್ಯಾಧಿಪನೆನಿಪ ತಾರಕನ ಸಂಧಾನಂಕಾರ್ಯಮಿದೆನುತಂ ತ್ರಿದಶಾಚಾರ್ಯನ ಮುಖಮಂ ನಿರೀಕ್ಷಿಸುತ್ತಿಂತೆಂದರ್‌

ಸಕಳಕಳಾಪೂರಿತಮನನಕಳಂಕಚರಿತ್ರನಮರಗುರು ನೀಂ ಘನಸಾತ್ತ್ವಿಕನದು ಕಾರಣದಿಂ ತಾರಕನಲ್ಲಿಗೆ ಪೋಪುದೊಲ್ದು ಮಾಳ್ಪುದು ನಯಮಂ

ವಿನಯವನಾಡುವುದಾಳೋಚನೆಗೆಯ್ವುದು ಚಿತ್ತದೊಳಗನಾರಯ್ವುದು ನೀನನುಕೂಲನಂತೆ ಪೊರ್ದುವುದನವದ್ಯಂ ಸಾಮದಿಂ ಮರಳ್ಚುವುದವನಂ

ಅದು ಸಲ್ಲದೊಡಾತನ ನೇಹದ ಗೋತ್ರಸುಮಿತ್ರ ರಾಜಪುತ್ರ ಸಚಿವ ಸಂಘದ ಕಿವಿಗೇನಾನುಮನೀವುದನಾಡುತೆ ಭೇದದಿಂ ಕಳಲ್ಚುವುದವನಂ

ಆ ನಯವಾಗದೊಡಸುರಂಗಾನತವಚನಾಗಿ ಬಲ್ಪುಗುಂದದೆ ಬಯಸಿತ್ತೇನೆಂದುಮನನುಸರಿಸುವದಾನದೊಳಂ ಸಂತವಿಡುವುದಾತನ ಮನಮಂ

ಈ ಪೇಳ್ದಂದಮನೊಲ್ಲದೆಚಾಪಳವೃತ್ತಿಯೊಳೆ ಮೀಱಿ ನುಡಿದೊಡೆ ಸಮರವ್ಯಾಪಾರದಲ್ಲಿ ಕಾಣ್ಬಂಕೋಪಾವಿಷ್ಟಪ್ರಚಂಡಕ್ರಮಮಂ

ವ. ಎಂದು ರಾಜೀವಸಂಭವಾದಿಗಳೋಜೆಯಂ ರಾಜನೀತಿಯಂ ಕಲ್ಪಿಸಿ ಕಳಿಪೆ,

ಭರದಿಂ ಬೀಳ್ಕೊಂಡು ವಾಚಸ್ಪತಿ ಗಮನವಶಂ ಪುಷ್ಪಕಾರೂಢಕಾಯಂಸ್ಥಿರಚಿತ್ತಂ ಸರ್ವಕಾರ್ಯಸ್ಥಿತಪರಿಣತನಜ್ಞಾನಮೇಘಾನಿಳಂ ಭಾಸುರತೇಜಂ ರಾಜಪೂಜ್ಯಂ ನುತಸಕಳಕಳಾಮಾರ್ಗಸಂಗಂ ಸುಖಾಂಗಂಹರಪಾದಾರಾಧಕಂ ತಾರಕನ ನಗರಿಯಂ ಪೊಕ್ಕನುತ್ಸಾಹದಿಂದಂ

ವ. ಅಂತು ಪೊಕ್ಕು ಪುರವೀಥಿಯಂ ನಿರೀಕ್ಷಿಸುತ್ತುಂ ನೂತನ ನಿಕೇತನಯೂಥಕ್ಕೆ ಕೌತುಕಚಿತ್ತನಾಗಿ

ಬಂದು ವಿಮಾನದಿಂದಿಳಿದು ರಾಜಗೃಹಪ್ರತಿಹಾರದೇಶದೊಳ್ನಿಂದು ಸುರೇಂದ್ರಮಂತ್ರಿ ನಡೆತಂದನೆನಿಪ್ಪುದನಂದು ಪೇಳೆ ಸಾರ್ತಂದು ಕವಾಟಮಂ ತೆಱೆಯೆ ಕಂಡನನಂತಸಮುದ್ಭಟಾವಳೀವಂದಿತಪಾದಪದ್ಮಯುಗರಾಜಿತನಂ ಘನತಾರಕಾಖ್ಯನಂ

ಕಂಡುಪಚರಿಸಿದೊಡಸುರಂಕೊಂಡಾಡುತ್ತುನ್ನತಾಸನಮನೀಯುತ್ತಾಖಂಡಲಮಂತ್ರಿಯನಸುಹೃನ್ಮಂಡಲ ರವಿರಾಹುಸನ್ನಿಭಂ ಬೆಸಗೊಂಡಂ

ಸುರಪತಿಗೆ ಕುಶಲಮೇ ಪಂಕರುಹಭವಂ ಕ್ಷೇಮಿಯೇ ಸರೋರುಹನಾಭಂಸ್ಥಿರನೇ ನೀವಿಂತಿಲ್ಲಿಗೆಬರವೇನೆಂದಱಿಪುವರ್ಥವಾವುದು ಕಜ್ಜಂ

ಎನೆ ಸುರುಗುರುವೆಂದಂ ನಾಗನಿಕರಮುಂ ಮರ್ತ್ಯನಿಕರಮುಂ ತರದಿಂ ದೇವನಿಕರಮುಂ ನಿಮ್ಮೂಳಿಗಮನೆ ಭರದಿಂ ಪುಯ್ಯಲಿಕ್ಕೆ ಕಳುಪಿದರೆನ್ನಂ

ಬಿದಿಯುಂ ದೈತ್ಯಾರಿಯುಂ ವಜ್ರಧರನುಮೆನಿಪೀ ಮೂವರುಂ ಕೂಡಿ ಮೂಲೋಕದ ಶೋಕಾನೀಕಮಂ ಕೇಳ್ದತಿಕೃಪೆ ಮನದೊಳ್ ಪುಟ್ಟಿ ನಿನ್ನಲ್ಲಿಗೆನ್ನಂಪದೆಪಿಂದಂ ಪೋಗವೇಳ್ದಟ್ಟಿದರಿದುವೆ ನಿಮಿತ್ತಂ ದಿಟಂ ಬಂದೆನೀ ಕಾರ್ಯದ ಭಾರಂ ನಿನ್ನದೆಂತುಂ ನಿನಗೆ ಧುರದೊಳಾರ್ ಪಾಟಿ ಪೇಳ್ ದೈತ್ಯರಾಜಾ

ವರಗಂಭೀರಂ ಧೀರಂಪರಸೈನ್ಯಾರಣ್ಯದಾವನೆನಿಸಿದ ನಿನಗೊಂದರಿದುಂಟೆ ಪೇಳೆನುತ್ತುಂಸುರಗುರು ಮಿಗೆ ಪೊಗಳೆ ತಾರಕಂ ನಗುತೆಂದಂ

ನಯಮಿಂತೇಕೆ ಬೃಹಸ್ಪತಿಜಯಮಂ ಮುಂತಿಟ್ಟು ಬಂದವಂಗೆನಗತಿ ನಿಶ್ಚಯಬುದ್ಧಿಯಿಂದೆ ಮೇಲತಿಶಯಸಂಗರವಿಕ್ರಮಂಗಳುಳ್ಳೊಡೆ ಪೇಳಾ

ವ. ಎಂದು ತಾರಕಂ ನಯಮನೊಲ್ಲದೆ ನಿರಾಕರಿಸಿ ನುಡಿಯೆ ಸುರುಗುರು ವಿಂತೆಂದಂ,

ನಯಮಂ ನೀನೊಲ್ಲೆ ಬುದ್ಧಿಪ್ರದ ಸಚಿವಕುಲಂ ನೋಡೆ ತಾನಿಲ್ಲ ನಿಸ್ಸಂಶಯದಿಂದಂ ಮಂತ್ರಿಗಳ್ ಪೇಳ್ದತಿಹಿತವಚಮಂ ಕೇಳೆ ಮತ್ತಾರುಮಂ ಸಂದೆಯದಿಂದಂ ನಂಬೆ ನಂಬಿರ್ದತಿಹಿತಜನಮಂ ಪೊರ್ದಿ ಮಾತಾಡೆ ಮೇಲಪ್ಪ ಯಶೋವಿಸ್ತಾರಮಂ ಭಾವಿಸೆ ತನುಮದದಿಂ ತಾರಕಾ ಮೇರೆಗೆಟ್ಟಯ್

ವ. ಎಂದು ವಾಚಸ್ಪತಿ ಸಾಮಮಂ ಬಿಟ್ಟು ಭೇದಮಂ ನುಡಿಯೆ ತಾರಕಂ ದರಸ್ಮಿತಮುಖನಾಗಿ,

ಎಂತೆಂತು ಗುರುವೆ ನೀನೆನ್ನಂತರಮಂ ನೋಡದಿಂತು ನುಡಿವರೆ ಸಮರಪ್ರಾಂತದೊಳೆನಗೆ ವಿಚಾರಮೆಸಂತಂಮಿರತಿಮಥನಮೇಕೆ ತಾರಕನಿದಿರೊಳ್

ಹಿತರೆನಗಿನ್ನಾ‌ ವಾಚಸ್ಪತಿ ನೀನೆಂದಂತಿರಹಹ ಹುಸಿಯಲ್ತಲ್ತುನ್ನತಸಂಗರದೊಳಗಱಿಯಯ್ಹಿತರೆನ್ನ ನಿಶಾತಖಡ್ಗಮುಂ ನಿಡುದೋಳಂ

ಇಂತೆಂದು ನುಡಿದ ತಾರಕನಂತಸ್ಥಮನಱಿದು ಸಾಮಭೇದಂಗಳುಮಂಪಿಂತಿಕ್ಕಿ ನಿರ್ಜರಾಚಾರ್ಯಂ ತಡೆಯದೆ ನುಡಿದನುಚಿತದಾನಕ್ರಮಮಂ

ಕೇಳೆಲೆ ತಾರಕಾಸುರ ಸರೋಜಭವಾದಿಗಳಾಜಿರಂಗದೊಳ್ಕಾಳೆಗಮಂ ನಿಮಿರ್ಚಲಣಮಾಱದಿರರ್ ದಿಟಮೆಂಬ ಯುದ್ಧಸಲ್ಲೀಳೆಯದಿರ್ಕೆ ನಿನ್ನ ಮನದೊಳ್ ಬಯಸಿರ್ದುದನೇನನಾದೊಡಂಪೇಳದನಿತ್ತಪರ್ ಬಡವರೊಲ್ಲೊಡೆಯರ್ ಕನಕಾದ್ರಿಗಾವಗಂ

ನೀಡಾಗದೆ ರಣರಂಗಕ್ರೀಡೆಯನುಳಿದೆಳಸಿದನಿತುಮಂ ದೇಶವನೀಡಾಡಲ್ ಸಮರ್ಥರದಱಿಂಬೇಡೊಲ್ದು ಸಮುದ್ರಮುದ್ರಿತಾವನಿಯೆಡೆಯೊಳ್

ಎನೆ ತಾರಕಂಗೆ ಕೋಪಂಮನದೊಳ್ ಪುಟವೆಳ್ದು ಮುಖದೊಳವತರಿಸಿ ವಿಲೋಚನದೊಳ್ ಪಸರಿಸಿ ಪುರ್ಬಿನಕೊನೆಯೊಳ್ ಕುಡಿಗೊಂಡು ನಿಮಿರೆ ನಡುಗುತೆ ನುಡಿದಂ

ಸಡಿಫಡ ಸುರೇಂದ್ರಮಂತ್ರಿಯೆಬೆಡಂಗಿದೇಕೆನ್ನ ಕೂಡೆ ನೆನೆಯದ ಮುನ್ನಂಪೊಡವಿಯನೆನ್ನಯೆ ಕೆಯ್ಯೊಳಗಡಗಿರ್ದುದನೆನಗೆ ಕುಡುವೆನೆಂಬುದು ಚಿತ್ರಂ

ಎನ್ನೊಡನೇಕೆ ನಿನ್ನ ಮತಿ ನಿನ್ನ ಮದಾಂಧತೆ ನಿನ್ನ ಮತ್ಸರಂನಿನ್ನ ನಯೋಕ್ತಿ ನಿನ್ನ ಹೃದಯೋಗ್ರತೆ ನಿನ್ನಯೆ ಬುದ್ಧಿ ನಿನ್ನ ಸಂಪನ್ನತೆ ನಿನ್ನ ಮಂತ್ರಗತಿ ನಿನ್ನಯೆ ವಕ್ತೃತೆ ನಿನ್ನ ವಿಸ್ತರಂನಿನ್ನಯೆ ನೀತಿ ನಿನ್ನ ಬಗೆ ನಿನ್ನ ತಿರಸ್ಕರಣಂ ಬೃಹಸ್ಪತೀ

ಧರೆಯೊಳಗೆ ತಾರಕಂಗೆನಗರಿಮೇಘಮಹಾಬಲಂಗೆ ಸಮರಾಂಗಣದೊಳ್ಹರಿಗಿರಿ ರವಿಗಿವಿ ಶಿಖಿಗಿಖಿಸುರಪತಿಗಿರಪತಿಯಜಂಗಿಜಂ ತೆಗೆ ಸರಿಯೇ

ನೆಟ್ಟನೆ ಕಾಳೆಗಮನೊಡಂಬಟ್ಟೆಂ ಕೇಳಮರಗುರುವೆ ಅಮರಾವತಿಯಂಬಿಟ್ಟೋಡಿ ನಿಮ್ಮ ಬೆಳ್ಳಿಯಬೆಟ್ಟದ ಗುಹೆಗುಹೆಗಳೊಳಗೆ ಮಾಡುವುದಿಂಬಂ

ವ. ಎಂದು ನುಡಿದ ತಾರಕನ ವೀರಾಳಾಪಮಂ ವಾಚಸ್ಪತಿ ಕೇಳ್ದು ಕೌತುಕಮನಾಳ್ದು ನಿರ್ವೇದದೊಳ್ ಬಿಳ್ದು ಭಯರಸದೊಳಳ್ದು ಧೈರ್ಯದೊಳೆ ಳ್ದೆಂತಾನುಂ ಸಂತಯ್ಸಿಕೊಂಡು ಸಾಮ-ಭೇದ-ದಾನಂಗಳನುಲ್ಲಂಘಿಸಿದ ಕರ್ಕಶನಪ್ಪ ರಕ್ಕಸರರಸನೊಳ್ ದಂಡಮೆಂದುಂ ಹಸನಾಗದೆಂದು ಮನದೊಳಳ್ಕುತುಂ ಮಾತಿ ನೊಳ್ ಬಲ್ಪುಗಿಡದೆ ತಾರಕನಂ ಬೀಳ್ಕೊಂಡು,

ಮೋನದೆ ನಡೆತಂದಂ ಸಂಧಾನವಿಹೀನಪ್ರಧಾನ ಚಿಂತಾಭರಿತಂಮಾನ ಮನಸ್ಸಂಗತವಿಧುರಾನನ ವಿಗತಪ್ರಧೈರ್ಯನಮರಾಚಾರ್ಯಂ

ಬರೆವರೆ ಸರೋಜಭವನುಂಹರಿಯುಂ ವಾಸವನುಮಮರರುಂ ನೆರೆದಿರ್ದಾತುರದಿಂದೆ ಬರ್ಪ ಮಂತ್ರಿಯಬರವಂ ನೆರೆ ಕಂಡು ತಮ್ಮೊಳಂದಿಂತೆಂದ‌ರ್

ಕೊರಗಿದುವು ಲೋಚನಂ ಭಾಸುರಮುಡುಗಿತು ಭಾಳಲೇಖೆ ಕಂದಿತು ಗಂಡಂವರವಕ್ತ್ರಂ ಕಳೆಗುಂದಿತುಗುರುತರಸಂಧಾನಮಿಲ್ಲ ಗುರುವಿನ ಮುಖದೊಳ್

ಎಂದಾಗಳ್ ನುಡಿಯುತ್ತಿರೆಬಂದೆಲ್ಲರ್ ನಮಿಸಲಮರಗುರು ಕುಳ್ಳಿರ್ದಿಂತೆಂದಂ ರಕ್ಕಸನೊಡನೆಲ್ಲಂದದೊಳಂ ಪೇಳ್ದೆನಾವ ಮಂತ್ರಮನೊಲ್ಲಂ

ಕ್ರಮದೊಳ್ ಸಲ್ಲಂ ಸಂಧಾನಮನೊಲ್ಲಂ ಸಂಗರಾನುಸಂಧಾನಮೆ ತನ್ನ ಮನಂ ತಾರಕನೊಡನೆಶ್ರಮದಿಂ ಕಾದುವುದೆ ಮಂತ್ರಮಿಂತಿದೆ ಕಜ್ಜಂ

ಅತಿನಿಷ್ಠುರನತಿ ನಿಷ್ಕೃಪನತಿನೀರಸನತಿನಿರಾಶ್ರಯಂ ತಾರಕನಿಂತತಿದುಷ್ಕರನತಿದುರ್ಜನನತಿ ದುರ್ಗುಣನತಿ ದುರಾತ್ಮನತಿದುಶ್ಶೀಲಂ

ವ. ಅಂತುಮಲ್ಲದೆ,

ಅಪರಿಮಿತತುರಗಕುಲದಿಂದಪರಿಮಿತೇಭಪ್ರತಾನದಿಂ ತಾರಕನಿಂತಪರಿಮಿತ ಪತ್ತಿಯಿಂದಶ್ವಪತಿಗೆ ಗಜಪತಿಗೆ ನರಪತಿಗೆ ಮಿಗಿಲೆನಿಪಂ

ಸಿಡಿಲಿಂದರಣ್ಯಶಿಖಿಯಿಂವಡಬಾನಳನಿಂ ಲಯಾಗ್ನಿಯಿಂ ತಾರಕನಿರ್ಮಡಿ ಮೂವಡಿ ನಾಲ್ವಡಿಯಯ್ವಡಿ ಭರದೊಳ್ ಬಲದೊಳುಷ್ಣದೊಳ್ ತೀವ್ರತೆಯೊಳ್

ವ. ಎಂದು ವಾಚಸ್ಪತಿ ತಾರಕಾಸುರನ ಪಟುತರಪ್ರತಾಪಮಂ ಪೇಳುತಿರ್ಪ ಸಮಯದೊಳೊರ್ವ ಗಂಧರ್ವನಾಯಕನತಿತ್ವರಿತಗತಿಯಿಂ ಪರಿತಂದು

ಏತಱ ಮಾತಿದೇತಱ ವಿಚಾರತೆಯೇತಱ ಮಂತ್ರಶಕ್ತಿಯಿನ್ನೇತಱ ಸತ್ವಮೇತಱ ಬಲೋನ್ನತಿಯೇತಱ ವೀರವೃತ್ತಿ ತಾನೇತಱ ಬುದ್ಧಿಯೇತಱ ಪರಾಕ್ರಮದುತ್ಸವವೇತಱಾಜ್ಞೆ ವಿಖ್ಯಾತನ ತಾರಕಾಸುರನ ಬೀಡು ಬಿಡುತ್ತಿದೆ ನೋಡಲದ್ಭುತಂ

ಧರೆಯಿಂಬಿಲ್ಲಬ್ಧಿಯಿಂಬಿಲ್ಲಚಲವಿತತಿಯಿಂಬಿಲ್ಲ ದಿಕ್ಚಕ್ರಮಿಂಬಿಲ್ಲ ರಥವ್ರಾತಕ್ಕೆ ಘೋಟಪ್ರತತಿಗೆ ಗಜಯೂಥಕ್ಕೆ ಪಾದಾತಿವೃಂದಕ್ಕರಿದಾರ್ಗಂ ರೇಣು ಪಂಕಂ ಶಿಥಿಲತೆ ದೆಸೆಗೆಟ್ಟಿತ್ತು ತಾನೆಂಬಿನಂ ಸಂಗರಕಾಲಾಭೀಳಭೃತ್ತಾರಕನಖಿಳಬಳಂ ತೀವಿ ಪರ್ವಿತ್ತದೆತ್ತಂ

ವ. ಎಂಬ ಸಂಭ್ರಮೋಕ್ತಿಯನಂಬುಜಾಕ್ಷಂ ಕೇಳ್ದು ಕೋಪಮಂ ತಾಳ್ದು,

ನಡೆ ಸುರಪತಿ ನಡೆ ಪಾವಕನಡೆಯಂತಕ ನಡೆ ನೃವಾಹ ನಡೆ ಜಳಧೀಶಾನಡೆ ಮಾರುತ ನಡೆ ವಿತ್ತಪನಡೆ ವೃಷಭಾರೂಢ ಗಾಢತರವಿಕ್ರಮದಿಂ

ಸುರರುಂ ಕಿನ್ನರರುಂ ಖೇಚರರುಂ ಗಂಧರ್ವರುಂ ಗರುಡರುಂ ವಿದ್ಯಾಧರರುಂ ರಾಕ್ಷಸರುಂ ಯಕ್ಷರುಮೊಂದೊಂದೆಸೆಯೊಳೊಡ್ಡನೊಡ್ಡುಗೆ ರಣದೊಳ್

ಎಂದು ಬೃಹಸ್ಪತಿಗತಿಭರದಿಂದಂ ಬೆಸಸುತ್ತುಮಿರ್ಪ ಸಮಯದೊಳೊರ್ವಂಸಂದಣಿಪ ನುಡಿಗಳೊಗುತಿರೆನಿಂದುರ್ಬುತೆ ಭಾಷೆಗೊಟ್ಟನಚಳಿತವೀರಂ

ಎನಗಿದಿರಾದ ತಾರಕಬಳಂ ಕಬಳಂ ಕಬಳಂಬೊಲಿಂದು ಪೊಕ್ಕನವಧಿಸಾಹಸಪ್ರಕರವಂ ಕರವಂ ಕರವಂತೆ ಪೊರ್ದಿ ಭೋಂಕನೆ ಕರವಾಳ್ ಕಡಂಗಿದವನಂ ದವನಂ ದವನಂಜೆವೊಯ್ದು ಪೋಳ್ದನಿಮಿಷರಾರೆ ವೈರಿಬಲವಂ ಬಲವಂ ಬಲವಂದು ಗೆಲ್ದಪೆಂ

ವ. ಎಂದು ನಿಂದಾಸುರದಿಂ ಭಾಷೆಗುಡುತ್ತಿರ್ಪ ವೀರಾಳಾಪಮಂ ಕೇಳುತ್ತಮರಪತಿ ಸಮರೋತ್ಸಾಹಭೇರಿಯಂ ಪೊಡೆಯಿಸೆ,

ಧರೆಯಲ್ಲಾಡೆ ಸಮುದ್ರಮುರ್ಕೆ ದಿಗಧೀಶ‌ರ್ ಬೆರ್ಚೆ ದಿಕ್ಕುಂಜರಂಕರಮಳ್ಕುತ್ತಿರೆ ಸೀಳೆ ಶೈಳಮಹಿರಾಜಂ ಬಳ್ಕೆ ಕೂರ್ಮಂ ಭಯಾತುರಘರ್ಮಾನನನಾಗೆ ಮೇಗಣುಡುವೃಂದಂ ಬೀಳ್ಕೆ ಕೋಳಾಹಳೋತ್ಕರನಿಸ್ಸಾಳಧಳಂಧಳಂಧಳರವಂ ಪರ್ಬಿತ್ತು ಮೂಲೋಕಮಂ

ವ. ಅನಂತರದಲ್ಲಿ

ಉರುನಿಸ್ಸಾಳಧಳಂಕೃತಂ ನೆಗೆದುದೇಳೇಳ್ ಭೀಕರಾಕಾರಮಾಗಿರೆ ಪೆಣ್ಣಾನೆಯನಾರ್ದು ಹಲ್ಲಣಿಸು ವಾಹವ್ಯೂಹಮಂ ಕೂಡೆ ಪೂಡು ರಥವ್ರಾತಮನೆಯ್ದೆ ಕೆಯ್ದುಗೊಳವೇಳ್ ಪಾದಾತಿಯಂ ಬೇಗಮೆಂಬ ರವಂ ಪರ್ವಿತು ನಾಕಲೋಕದಿವಿಜಾನೀಕಪ್ರಧಾನಾಖ್ಯರೊಳ್

ವ. ಇಂತು ಕೊರ್ಬಿ ಪರ್ಬಿದ ಕೋಳಾಹಳದ ಸಂಭ್ರಮಮಿಂಬುವಡೆಯೆ, ಸುರಕುಲಂ ಸಡಗರಿಸಿ ಘುಡುಘುಡಿಸಿ ನಡೆ ನಡೆದು ಪರಿದು ನೆರೆದು ಮುಂಗುಡಿಗೆದಱಿ ಸಂಗರ ಭೂಮಿಯೊಳೊಡ್ಡಿ ನಿಂದೆಡ್ಡಮಾಗಿ ಬಗ್ಗಿಸಿ ಮೊಗ್ಗರಿಸುತ್ತೊಗ್ಗುಗೆಡದೆ ನಡೆಗೋಂಟೆಯಂತೆ ನೆಲೆವೆರ್ಚಿ ನಿಂದು ತೊಲಗದ ಕಂಭದ ಹುಲಿಯ ಬಚ್ಚಣೆಯ ಗಜಮುಖದ ಭುಜಬಳಗರುಡನ ಗಜಕೇಸರಿಯ ಬಿರುದ ಶರಭನ ಗಂಡರ ಡಾವಣಿಯ ಭಂಡಣವಿಜಯನ ವೈರಿಜಗದ್ದಳನನ ವೀರಘಂಟೆಯ ಹೊನ್ನ ಗುಬ್ಬಿಯ ರತ್ನವಟ್ಟೆಯ ಬೆನ್ನ ಚಮ್ಮಟಿಗೆಯ ಬಿಳಿಯ ಚವರದ ವಿಳಸದ ಗೆಜ್ಜೆಯ ಅಭಯಹಸ್ತದ ಉಭಯಸತ್ತಿಗೆಯ ಹಗಲ ಕೆಯ್ದೀವಿಗೆಯ ಘಟಸರ್ಪನ ಕಟಕಸೂಱೆಗಾಱನ ಅಸುರ ಕೋಳಾಹಳನ ದೈತ್ಯಮರ್ದನನ ದಾನವಾರಿಯ ರಕ್ಕಸಜೂಜಿನ ಪಚ್ಚೆಯ ಪರಿಗೆಯ ಪಸರದ ಪಾರಿಯದೊಯ್ಯಾರದ ಕೆಂದಟ್ಟಿನ ಪಂತಿಯ ಪೊಂಬಟ್ಟೆಯ ಹಾದಿಯ ಕಾಳಿಕೆಯ ಜಾಳದ ನೀಲದ ಸಾಲಶಂಖದ ತಟ್ಟಿನೊಟ್ಟಜೆಯ ಕಟ್ಟುಬ್ಬಟೆಯ ಬಿರುದಿನ ಹರಿಗೆಕಾಱರ ಪರಿವೀಥಿಯೊಳಂ; ಮತ್ತಮಾ ಹರಿಗೆಕಾಱರಿಕ್ಕೆಲದೊಳ್ ಕೋಡಕೆಯ್ಯೊಳುಟ್ಟ ಮಲ್ಲಗಂಟಿನ ತೊಡರ್ಚಿದುಡೆಗಂಟೆಯ ಕಿರ್ಗಟ್ಟಿನ ಸುರಿಗೆಯ ಕಟ್ಟಿದ ಚಿಂದಿಯ ತೊಟ್ಟ ಕಂಚುಳಿಕೆಯ ಹಿಡಿದ ಬಿಲ್ಲ ಬಲಗೈಯ ಸರಳ ಬೆನ್ನ ಬತ್ತಳಿಕೆಯ ಸುತ್ತಿದ ಹೀಲಿಯ ಮುಡಿಗಟ್ಟಿನ ಪಟ್ಟೆಯ ಮಲಯಜದ ಮಂಗಳಬೊಟ್ಟಿನ ಕಟ್ಟಣಕದ ಸಿಂಗರಂ ಬೆರಸಿ ಬೀರಸಿರಿಯಂ ಬೇಱೆ ನಂಜಿನ ಪುಂಜದಂತೆ ಕುಳಿಕನ ಕುಲದಂತೆ ಜವನ ಜಂಗುಳಿಯಂತೆ ಬಯ್ದು ಕೊಲ್ವ ಬಕನ ಬಳಗದಂತೆ ನಿಂದ ಬಿಲ್ಲ ಬಲ್ಲಣಿಯ ಹಿಂಗಟ್ಟಿನೊಳ್ ಮುಂಕಣಿಸಿ ನೆಗೆಪಿದ ಸಬಳಂಗಳ ಮೊನೆಯ ಮೊತ್ತಮಿನಕಿರಣಂಗಳನೊತ್ತರಿಸಿ ಮಿಸುಗುವ ತಪನನ ಬಿಸಿಯ ಬಿಂಬದೊಳ್ ಮಾರ್ಪೊಳೆದು ತಳತಳಿಸಿ ಸಿಡಿಲ ಬಳಗಂ ತಳಿರ್ತಂತೆ ಗಗನ ತಳದೊಳ್ ತುಱುಂಗಿ ನೆರೆಮೆಱೆಯೆ ನಭಕ್ಕೆ ಚಿಮ್ಮಿ ಕುರುಳ್ಚಿ ಕೆಯ್ಮಾಡುವ ಕೊಂತಕಾಱರ ತಿಂತಿಣಿಯ ನಡುವೆ ಪಿಡಿದ ವಜ್ರಮುಷ್ಟಿಯ ಮಸೆದಿಟ್ಟಿಯೆಸೆವ ಗಂಡಗತ್ತಿಯ ಕೂರಲಗಿನ ಭಾರಿಸಂಕಲೆಯ ಪಟ್ಟೆಯದ ಪರಶುವಿನ ಚಕ್ರದ ಕಕ್ಕಡೆಯ ಕರವಾಳ ಕಠಾರಿಯ ಕತ್ತಿಯ ಕರಗಸದ ಗಂಡಗತ್ತರಿಯ ಶೂಲದ ಕಾಲ ತೊಡರ ರಕ್ಕಸರ ಹಾಹೆಯ ತಡೆಯದ ಲವುಡಿಯ ಚಾವುಡಿಯ ಬಾವುಲಿಯ ಬಲ್ಲಾಳ್ಗಳ ಮುಂದೆತ್ತಿದ ಪರಿಪರಿಯ ಪತಾಕಾವಳಿಯ ಸೂಳಱಿದು ಮಸಗಿ ದುವ್ವಾಳಿಸುವ ಗೋವಳಗಟ್ಟಿಯ ಗೊಂದಣಂಗೂಡಿ ಗಗನಂ ಕವಿದಂತೆ ದೆಸೆಗಳ್ ಉಗುಳ್ದಂತೆ ಭೂಮಿ ಬೆಸಲಾದಂತೆ ಭೂಚಕ್ರಮಂ ತೆಕ್ಕನೆ ತೀವಿದ ಪದಾತಿಬಲದೊಳಂ; ಮತ್ತಮಾ ಪದಾತಿಬಲದ ಪೆಡೆಮೆಟ್ಟನೊಳ್ ಹೂಡಿದ ಕುದುರೆಯ ನೀಡಿ ನೆಗೆದ ಪಳವಿಗೆಯ ಕಟ್ಟಿದ ಚಮರದ ನೆಟ್ಟ ತಿಸುಳದ ಕೀಲಿಸಿದ ಕೀಲ್ಗಳ ತಿರುಗುವ ಚಕ್ರದ ಸುತ್ತಿ ಬಿಗಿದ ಲೋಹಬಂಧದ ತೆತ್ತಿಸಿದ ಸೂಲಿಗೆಯ ಹೇಱಿದ ಶಸ್ತ್ರವೇಱಿದ ಸಾರಥಿಯ ಮೀಱಿ ನಿಂದ ಜೋದರ ಭೀಕರರೂಪು ಲೋಕಕ್ಕೆ ಪೊಸತಾಗೆ ಚಕ್ರಚೀತ್ಕೃತಿಗೆ ದಿಕ್ಕರಿಗಳ್ ಬೆರ್ಚೆ ಸೂತರ ಕಳಕಳಕ್ಕೆ ಭೂತಳಂ ನಡುಗೆ ಜವನ ಜಕ್ಕಂದೊಳಲಿಯಂತೆ ಮಾರಿಯ ಮಸಕದಂತೆ ಪಸರಿಸಿ ನಿಂದ ರಥಿಕಪ್ರತಾನದೊಳಂ: ಮತ್ತಮಾ ಸ್ಯಂದನವೃಂದಮಂ ಮುಂದುಗೊಂಡ ಹೊನ್ನ ಹಲ್ಲಣದ ರನ್ನದ ಪಕ್ಕರಕ್ಕೆಯ ಕಟ್ಟಿದ ಗೆಜ್ಜೆಯ ಸೂಟಿಯ ರವದ ಪೊರ್ಕುಳಗಂಟೆಯ ಮೋಹಿಸುವ ಮೊಗವಡದ ರೂಹಿಸುವ ನೊಸಲ ಕನ್ನಡಿಯ ಕಡುಚೆಲ್ವ ಕೊಡಂಕೆಯ ಲಂಬಿಸುವ ಚಮರದ ಚಾರುತರ ಭೂಷಣಂ ಭೀಷಣಮಾಗೆ ಕಂಬಿಯ ಕಡಿಯಣದ ಕೀಲಣದ ಹೋರಟೆಯ ಘಾರಾಘಾರಿಯೊಳ್ ಜೋಳಿಸುವ ಲಾಲಾಜಲಂ ಖುರಹತಿಯಿಂ ನೆಗೆವ ದೂಳ್ಗೆ ಚಳೆಯಂಗುಡೆ ಹರಿಣ ಚರಣಮಂ ಚೆಲ್ಲವಾಡುವ ಗರುಡನಂ ಪರಿಹಾಸಂಗೆಯ್ವ ಪವನನಂ ಪರಿಭವಿಸುವ ಮನಮನನುಗೆಡಿಸುವ ದಿಟ್ಟಿಗಳನಿಟ್ಟಣಿಸಿ ದಾಂಟುವ ಕಡುವೇಗದಿಂ ಮೆಱೆದ ಚರ್ಮದಂಡದ ನೆಮ್ಮುಗೆಯಿಲ್ಲದೆ ದನಿದೋಱುವನುಮಾನಂ ಪೊರ್ದದೆ ಮಡಸನ್ನೆ ಮನದೊಳಂಕುರಿಸುವಲ್ಲಿಂ ಮುನ್ನಂ ಪರಿದು ಶರಧಿಯನೆಡಗಲಿಪ ಗಗನಮನಡರ್ವಜಾತ್ಯಶ್ವಂಗಳ ವಳಯಮಂ ಸೋಂಕದಂಕಣಿಯ ಹಂಗಿಲ್ಲದೆ ಭೋಂಕನೇಱಿ ಸುಳಿವ ಮಿಂಚಂಸೆಳೆದು ನಿಮಿರ್ಚಿ ಕರತಳದೊಳ ಮರ್ಚಿದಂತೆ ಮಿಗೆಪಮಿಡಿದು ಹೆಗಲೊಳಿಟ್ಟ ಪಟ್ಟಿಗಳ ಬೆಳಗಗೆಯೆಳ್ದು ಗಗನಮನಪ್ಪಿ ಗಾಡಿಕೆಯಿಂದೊಪ್ಪುವ ಭುಜಪೂಜೆಯ ವೀರನಿವಾಳಿಯ ಬಿರುದಿನೇಳ್ಗೆಯ ತರದ ದೌಡೆಯ ಹೀಲಿದಳೆಯ ಮಾಲೆಗೊಂಡೆಯ ಚೆಲ್ಲುವ ಚಾಮರದ ಸೂಸುವ ಸೀಗುರಿಯ ಸೂರ್ಯಸೋಮವಂಶದ ರಾಜಪುತ್ರರ ರಾಯರಾವುತರ ದಿವ್ಯವಾಹಕರ ರಾಘೆಗಿಂಬುಗೊಟ್ಟು ವಾಘೆಗಳವಟ್ಟು ಪ್ರಳಯಸಮಯದೊಳ್ ಮೇಱೆಯಂ ಮೀಱಿದ ವಾರಿನಿಧಿಯ ತರಂಗ ಕುಲದಂತಿರ್ದ ತುರಂಗ ಬಲದೊಳಂ; ಮತ್ತಮಾ ತುರಂಗ ಬಲದಪರಭಾಗದೊಳ್ ಹಮ್ಮಿದ ಗುಳದ ಹೂಡಿದ ಱಿಂಚೆಯದ ಕಾಲ ಕಂಭದ ದಂಡೆಯ ಬರಿಕೆಯ್ಯ ಪಟ್ಟೆಯದ ಕೋಡ ಮೊನೆಯ ಕೀರ್ತಿಮುಖದ ಅಗ್ರಪಲ್ಲವದ ಪತ್ರಗತಿಯ ತಲೆಯೊಳೊಟ್ಟದ ಕುಂಕುಮದ ಕಪೋಳದೊಳ್ ಸುರಿವ ಮದಜಲದ ಬೆನ್ನ ಮೇಲಿಳಿ ಬಿಳಿಯ ಚವರದ ಮುಂತಣ ಮಾವಂತರ ಪಿಂತಣ ಬಡಿಗೆಕಾಱರ ಘುಳುಘುಳಿಸುವ ವೀರವೃಂದದ ಘುಡುಘುಡಿಸುವ ದೌಡೆಯ ಕೋಳಾಹಳದಬ್ಬರಮಾಗೆ ಸೂರ್ಯಮಂಡಲಮಂ ಸೆಳೆವ ಸಿಡಿಲಂ ಪಿಡಿವ ದಿಕ್ಕರಿಗಳನೆಟ್ಟುವ ಕಡುಗಾಯ್ಪಂ ತಳೆದು ನೀಲಾಚಳಂ ಸಾಲಿಟ್ಟಂತೆ ಅಂಜನಗಿರಿಯೊ ಯ್ಯಾರಂ ಬಡೆದಂತೆ ಕಾಲಮೇಘಂಗಳ್‌ ಕವಿದಂತೆ ನಿಂದ ಗಜ ಘಟಾಪಟಲದೊಳಂ; ಇಂತೊಡ್ಡಿ ನಿಂದ ಹಸ್ತ್ಯಶ್ವರಥದಾತಿಯೆನಿಪ ದೇವರ್ಕಳ ಚಾತುರಂಗ ಬಲದ ಕಟ್ಟದಿರೊಳೊಡ್ಡಿನಿಂದ ತಾರಕಾಸುರನ ಚಾತುರಂಗಬಲವೆಂತಿರ್ದುದೆಂತೆಂದೊಡೆ ಪೆರ್ಬುಲಿಯೊರ್ಬುಳಿಯಂತೆ ಸಿಂಗದ ಸಂಗರದಂತೆ ಶರಭಂಗಳ ನೆರವಿಯಂತೆ ಭೇರುಂಡನ ಹಿಂಡಿನಂತೆ ಕುಳಿಕನ ಕುಳದಂತೆ ನಂಜಿನ ಪುಂಜದಂತೆ ಸಿಡಿಲ ಗಡಣ ದಂತೆ ಕಾಳ್ಕಿರ್ಚಿನ ಗೂಳೆಯಂತೆ ವಡಬಾನಲನ ಪಡೆಯಂತೆ ಕಾಲಾಗ್ನಿಯ ಮಾಲೆಯಂತೆ ಮಾರಿಯ ಮೂರಿಯಂತೆ ಮೃತ್ಯುವಿನ ಕೊತ್ತಳಿಯಂತೆ ಅಂತಕನ ಸಂತತಿಯಂತೆ ಭೈರವನ ಬಳಗದಂತೆ ಮುಂತಿರ್ದ ರಕ್ಕಸವಡೆಯ ನಡುವೆ ನಿಂದ ವೀರ ತಾರಕಾಸುರಂ ತನ್ನ ಬಲಕ್ಕಿದಿರಾದ ನಿರ್ಜರಬಲಮಂ ನಿರೀಕ್ಷಿಸಿ ರಾಕ್ಷಸ ಗುರುವಪ್ಪ ಭಾರ್ಗವನ ಮುಖಮಂ ನೋಡಿ,

ಒಟ್ಟಿದ ನಿರ್ಜರ ಬಲದೊಳ್ಕಟ್ಟಿದಿರಾಗಿರ್ದು ನಿಂದರಾರಾರವರಂನೆಟ್ಟನೆನಗಱಿಪವೇಳ್ಕೆನೆನಿಟ್ಟಯಿಸಿಯೆ ನುಡಿದನಸುರಕುಲಗುರು ಭರದಿಂ

ನಡೆತಂದುನ್ನತವಕ್ತ್ರನಾಗಿ ಸುರರಂ ಗಂಧರ್ವರಂ ಯಕ್ಷರಂಎಡೆಗೊಂಡೊಪ್ಪುವ ರತ್ನಕೋಟಿ ರುಚಿರ ಪ್ರಖ್ಯಾತಕೋಟೀರಮಿರ್ಮಡಿ ದಿವ್ಯಪ್ರಭೆಯೀಯೆ ಬೆಳ್ಗೊಡೆಯ ವೀರಚ್ಛಾಯೆಯೊಳ್ ವಜ್ರಮಂಪಿಡಿದೈರಾವತಮೇಱಿ ನಿಂದನವನಿಂದ್ರಂ ಕೇಳ್ ದನುಪ್ರೋದ್ಭವಾ

ಆತನ ಕೆಲದೊಳ್ ಚಂಡವ್ರಾತಂ ಸಿಡಿಲೇಳ್ಗೆಯೇಳ್ವ ಬಲ್ದಗರೇಱಿರ್ದಾತಂ ಸಕಳಜಗದ್ವಿಖ್ಯಾತಂ ಹುತವಹನೆನಿಪ್ಪನಧರಿಸಸುರಾ

ಉರುತರ ಭೀಕರವಕ್ತ್ರಂಕರತಳದಿಂ ಕಾಲದಂಡಮಂ ಕಡುಪಿಂದಂತಿರಿಪುತ್ತಿರ್ಪವನಂತಕನರಿದೆನಿಪ ಲುಲಾಯವಾಹನಂ ದನುಜೇಂದ್ರಾ

ಅಸಮಬಳನತುಳವಿಕ್ರಮನಸುರಕುಲೋತ್ತಂಸನಾಜಿಮುಖಹಸನಂ ಮಾನಸನಂ ಪಾಯ್ದೇಱಿದ ರಕ್ಕಸರರಸಂ ನಿರೃತಿ ನಿರುತವೆಲೆ ದನುಜೇಂದ್ರಾ

ಅವಧರಿಸೆಲೆ ತಾರಕ ಮಕರವನೇಱಿ ವಿಶಾಲಪಾಶಮಂ ಪಿಡಿದತ್ಯುತ್ಸವದಿಂದಂ ನಿಂದಾತಂನವರತ್ನಾಭರಣನಿಕರಕಿರಣಂ ವರುಣಂ

ಸಂದಣಿಪ ಕುರುಳ ಕುಂತದಮುಂದಣ ಸಾಮಂತರಾಜ ಪುತ್ರೋತ್ಕರದಿಂಗೊಂದಣಿಸಿ ಪರ್ವಿ ರಣದೊಳ್ನಿಂದಿರ್ಪವನೇಣವಾಹನಂ ಪವಮಾನಂ

ತುರಗವನೇಱಿ ಮಯೂಖಾವರಣ ಸಿತಚ್ಛತ್ರಮೆಸೆಯೆ ಗರುಡರ ಗಂಧರ್ವರ ಯಕ್ಷರ ಸಂದಣಿಯೊಳ್ಬರುತೊಪ್ಪುವ ಭೀಕರಂ ಕುಬೇರಂ ದನುಜಾ

ನಂದಿಯನೇಱಿ ಗಣಂಗಳಮುಂದೆ ವೃಷಧ್ವಜಮನೆತ್ತಿ ಸಮರೋತ್ಸಾಹಾನಂದದೊಳೆ ಬಂದು ಮುಂದಂನಿಂದವನೀಶಾನನೆಂಬನೊರ್ವ ಗಣೇಶಂ

ವರಚಕ್ರಂ ಶಾರ್ಙ್ಗ ಗದೆಯುರುತರಭೀಕರಮನೀಯೆ ಸಂಗರರಂಗಕ್ಕುರವಣಿಸುತ್ತುಂ ಬರ್ಪಂಗರುಡಧ್ವಜನಸುರಮರ್ದನಂ ಕೇಳರಸಾ

ಸುತ್ತಿರ್ದ ತಳೆಯ ದಿವಿಜರಮೊತ್ತದ ಗಂಧರ್ವಕುಲದ ನಡುವೆ ವಿಳಾಸಂಬೆತ್ತತಿಸಂಭ್ರಮದಿಂದೆ ಬರುತ್ತಿರ್ಪಂ ಹಂಸವಾಹನಂ ಚತುರಾಸ್ಯಂ

ವ. ಎಂದು ತಾರಕಾಸುರಂಗೆ ಭಾರ್ಗವಂ ಬೇಱೆವೇಱೆ ಮಾಱೊಡ್ಡಿ ಮೀಱಿ ನಿಂದ ಗೀರ್ವಾಣಮುಖ್ಯರಂ ತೋಱುತ್ತಿರ್ಪ ಸಮಯದೊಳಮರಪತಿ ಸಮರಕ್ಕೆ ಸನ್ನದ್ಧಮಾದ ತನ್ನ ಬಲಕ್ಕೆ ಸನ್ನೆದೋಱೆ ಹೊಯ್ವ ನಿಸ್ಸಾಳದ ಭೇರಿಯ ತಂಬಟದ ಚಂಬಕದ ವೀರವೃಂದದ ದೌಡೆಯ ಪಟಹದ ಢಕ್ಕೆಯ ಧವಳ ಶಂಖದ ಜವಳಿಗಾಳೆಯ ತಿತ್ತಿರಿಯ ಕಿನ್ನರಿಯ ಹೊನ್ನ ಬೊಂಬುಳಿಯ ರನ್ನದ ಕೊಂಬಿನ ಕೋಳಾಹಳಂ ನೆಗಳೆ, ಮಸಗಿ ಬೊಬ್ಬಿಟ್ಟು ದೆಸೆದೆಸೆಗೆ ಪರಿದು ಮೂದಲಿಸಿ ಮುಂಗುಡಿಗೆದಱಿ ಮೊಗ್ಗರಂಬೊಯ್ದಗ್ಗಲಿಸಿ ನಡೆದು ಬಗ್ಗಿಸಿ ಬಯ್ದೊಗ್ಗುಗೆಡದೆ ಮುಂಕಣಿಸಿ ಭೋಂಕನೆ ನೂಂಕಿ ಪದಾತಿಬಲಂ ಪಡಿತಳಿಸಿ ರಥವ್ರಾತಮಂ ತುರಂಗ ಸಂಘಮಂ ಗಜಘಟಾ ಪಟಳಮಂ ಸಂಗಡಿಸಿ ಪಿಂಗದೊತ್ತರಿಸಿ ತನಗಿದಿರಂ ಬರ್ಪ ಚತುರಂಗಬಲದ ಭಾರದುರವಣೆಯ ತಾರಕಾಸುರಂ ಕಂಡು ಕೋಪಮನೆಡೆ ಗೊಂಡಾಸ್ಫೋಟಿಸಿ ಬಾಹಾಸ್ಫಾಲನಂಗೆಯ್ದು ಗಜರಿ ಗರ್ಜಿಸಿ ಗದ್ದುಗೆವೊಯ್ದೆರ್ದು ಪೊರ್ದಿ ನಿಂದು ಮಿಕ್ಕು ಮೀಱುವ ರಕ್ಕಸವಡೆಗೆ ಕಾಯ್ದು ಕಡುಕೆಯ್ದು ಮೆಯ್ದೋಱಿ ಕೆಯ್ವೀಸಿದಾಗಳ್

ಚರಣದ ಧೂಳಿ ಬಾಂದೊಱೆಗೆ ಬಾಸಣಮಾಗಿರೆ ಹೇಷಿತಂ ದಿಶಾಕರಿಗಳನೆಳ್ಬೆ ಬೃಂಹಿತಮಜಾಂಡಮನಾಂತಿರೆ ಚೀತ್ಕೃತಂ ಧರಾಧರಮನದಿರ್ಪೆ ತಾಗಿದು ಪದಾತಿ ಪದಾತಿಯೊಳಶ್ವಮಶ್ವದೊಳ್ಕರಿ ಕರಿಯೊಳ್ ರಥಂ ರಥದೊಳದ್ಭುತಮಾಹವಭೂಮಿಗಪ್ಪಿನಂ

ವ. ಅಂತು ತಾಗಿದಾಗಳ್

ಬೆರಸಿ ಪದಾತಿ ನೆಕ್ಕು ನೆರಿಲೆಂಬ ನೆಳಿಲ್‌ನೆಳಿಲೆಂಬ ಘಾರು ಘರ್ಘರ ಘರಿಲೆಂಬ ದೊಪ್ಪುಧಡಲೆಂಬ ಬುದಿಲ್ ಬುದಿಲೆಂಬ ಸಂಭ್ರಮಂನೆರೆದು ಖಣಿಲ್ ಖಣಿಲ್ ದೊಗಹು ಧೊಕ್ಕು ದುಡುಮ್ಮು ತಟಿಲ್ ನಿಟಿಲ್ ಪಟಿಲ್ಗರಿಗರಿಲೆಂಬ ನಿಷ್ಠುರರವಂ ಮಿಗೆ ತೞ್ತಱಿದತ್ತು ಯುದ್ಧದೊಳ್

ವ. ಅನಂತರದಲ್ಲಿ

ಗಿರಿಗಿರಿಯೊಳ್ ಪಳಂಚುವವೊಲೆಯ್ದೆ ರಥಂ ರಥದೊಳ್ ಪಳಂಚೆ ಸೂತರ ರಥಚಕ್ರಸಂಚಯದ ಕಾರ್ಮುಕವೀಥಿಯ ಮುಕ್ತಮಾರ್ಗಣೋತ್ಕರದ ವಿಶಾಲಹುಂಕೃತಿ ಸಮುದ್ಧತ ಚೀತ್ಕೃತಿ ಚಾರು ಟಂಕೃತಿಸ್ಫುರಿತ ನವೀನ ಭೀಂಕೃತಿ ಚಮತ್ಕೃತಿಯಾಯ್ತು ಮಹಾಜಿರಂಗದೊಳ್

ವ. ಅಂತು ತಾಗಿದ ರಥಪ್ರತಾನದ ಕಾಳೆಗಮಂ ಕಂಡು,

ಜಳಧಿತರಂಗಸನ್ನಿಭತುರಂಗಬಲಂ ಮುಳಿದೇಱೆವಾಹಕಾವಳಿಯ ನಿಶಾತಖಡ್ಗದ ಖಣಿಲ್ ಖಟಿಲೆಂಬ ಮಹಾರವಂ ಮುಖೋಚ್ಚಳಿತರವಂ ಖುರೋದ್ಗತರವಂ ಕಳಿಕೋಚ್ಚರವಂ ಕಶಾರವಂಬಳಸಿ ನಭಃಸ್ಥಲಕ್ಕೆ ಬಳೆಯುತ್ತಿರೆ ತಾಗಿದುದಾಜಿರಂಗದೊಳ್

ನೆರೆದುಬುಬೆಂಬ ಕಟ್ಟಿದಿರ ತಟ್ಟಿನ ರಾವುತರೊಳ್ ಕಡಂಗಿ ಮಚ್ಚರಿಸಿ ಮರಳ್ದು ಮೂದಲಿಸಿ ಕೂರಸಿಯಿಂ ತಲೆ ಪಾಱಿ ಬೀಳ್ವಿನಂಸರಿಬೆಸನಾಗಿ ಪೊಯ್ಯೆ ತಲೆ ಮಾರ್ತಲೆಯೊಳ್ ನಿಮಿರ್ದಟ್ಟೆಯಿಟ್ಟೆಯೊಳ್ಹರಿಹರಿಯೊಳ್ ಪಳಂಚೆ ಪೊಸತಾದುದು ಸಂಗರರಂಗಭೂಮಿಯೊಳ್

ವ. ಆ ಕಾಳೆಗದ ಕಡುಪಂ ಚಂಡ ಗಜಾರೋಹಕ‌ರ್ ಕಂಡು,

ಮುಂಕಣಿಸುತ್ತೆ ಚಪ್ಪರಿಸುತುಂಗುಟದಿಂದೊದೆದಾರ್ದು ಸಾರ್ದು ಕೂರಂಕುಸಮಿಟ್ಟು ಭೈ ಭಲರೆ ಭೈಯೆನುತುಂ ಕಡುಪಿಂದೆ ನೂಂಕೆ ನಿಶ್ಶಂಕತೆಯಿಂದ ತೂಳ್ದು ಘಟೆಯೊಳ್ ಘಟೆ ಜೋಡಿಸಿ ದಂತಜಾಲದೊಳ್ಭೋಂಕನೆ ಪೊಣ್ಮಿ ತೋರಕಿಡಿ ಸೂಸೆ ಕಱುತ್ತುಱೆ ತಾಗಿತಾಜಿಯೊಳ್

ವ. ಆಗಳ್

ಭರಿಕೆಯ್ ಭರಿಕೆಯ್ಯೊಳ್ ನಿಷ್ಠುರದಂತಂ ದಂತದೊಳ್ ಮುಖಂ ಮದಮುಖದೊಳ್ವರಜೋದರ್ ಜೋದರೊಳೊತ್ತರಿಸಿದರಾರೋಹಕರ್ಕಳಾರೋಹಕರೊಳ್

ಮುಂತಿದಿರೊಳ್ ನೂಂಕಿದ ಮಾವಂತರ ಗಳಗರ್ಜನಕ್ಕೆ ಕಡುಮುಳಿಯುತ್ತತ್ಯಂತಂ ಪೊಣ್ಮಿತು ದಂತಾದಂತಿ ನಖಾನಖಿಯೆನಿಪ್ಪ ಕಾಳೆಗಮಾಗಳ್

ವ. ಅಂತು ಪೋಗದೆ ನಿಂದು ತಾಗಿ ತಳ್ತಿಱಿದು ರಕ್ಕಸವಡೆಯೊಳ್ ಮಿಕ್ಕು ಮೀಱುವ ದೇವರ್ಕಳ ದೆಖ್ಖಾದೆಖ್ಖಿಯ ಕಾಳೆಗಮಂ ಕಂಡು ಕಡುಮುಳಿದು ತಾರಕಾಸುರಂ ವಾರಣಾರೂಢನಾಗಿ ತನ್ನ ಕೆಲಬಲದ ಪಿಂತಣ ಮುಂತಣ ಚತುರಂಗಬಲಂ ಬೆರಸಿ ಬಿಲ್ಲನುಗಿದು ನಿಲ್ಲದೆ ನೂಂಕಿದಾಗಳ್,

ಅರರೆ ಚತುರ್ಬುಲಂಬೆರಸು ಭೋಂಕನೆ ನೂಂಕಿದ ವೀರತಾರಕಾಸುರನೊಳದಾವನೇಱುವನದಾವನಮರ್ಚುವನಾವನೆಯ್ದೆ ಮಚ್ಚರಿಸುವನಾವನೊಡ್ಡುವನದಾವನೊಡರ್ಚುವನಾವನಾಂತು ನಿತ್ತರಿಸುವನಾವನಣ್ಮಿ ತಲೆದೋರ್ಪನದಾವನಿದಿರ್ಚಿ ತಾಗುವಂ

ವ. ಎಂಬ ಸಂಭ್ರಮಮಂತರಿಕ್ಷದೊಳೀಕ್ಷಿಪ ಯಕ್ಷಕುಲದೊಳ್ ನೆಗಳೆ,

ಕುಳಿಕನ ಕೂರ್ಪೊ ಬಾಡಬನ ತೀವ್ರತೆಯೊ ಸಿಡಿಲೇಳ್ಗೆಯೋ ದವಾನಳನ ಪೊಡರ್ಪೊ ಭೈರವನಳುರ್ಕೆಯೊ ಕಾಲನ ಕಾಯ್ಪೊ ತದ್ದಿಶಾನಿಳನತಿವೇಗಮೋ ಪರಿವ ಮೃತ್ಯುವಿನುಗ್ರತೆಯೋ ಮಹಾಲಯಜ್ವಲನನ ದಾಳಿಯೊ ತಿಳಿಯೆ ಪೇಳೆನೆ ನೂಂಕಿದನುಗ್ರತಾರಕಂ

ವ. ಅಂತು ನೂಂಕಿದತುಳಬಳವೀರತಾರಕನ ಚತುರಂಗಬಲದುರವಣೆ ಗಿರಲಾಱದೆ ಸುರರ ಪದಾತಿಬಲಂ ಪರಿಭವಂಬಡೆದು ರಥಾನೀಕಂ ವಿರಥಮಾಗಿ ತುರಂಗಕುಲಂ ತರಹರಿಸಲಾಱದೆ, ಗಜದೊಡ್ಡು ಗಂಡುಗೆಟ್ಟು ಬೆಂಗೊಟ್ಟು ನಿಲ್ಲದೋಡಿ ಕಲೆಯುಂ ಕವಿಯುಮಾಗೆ

ಕಂಡತಿವೀರತಾರಕನಣಂ ಪರಿಹಾಸಮನಾಳ್ದು ಮೀಱಿ ಬೆಂಕೊಂಡು ಭಯಾಕುಳವ್ರಜದ ಬೆಂಬಳಿಯಂ ನೆಱೆಬಿಟ್ಟು ನಿಂದು ವೇದಂಡಮನೋಜೆಯಿಂ ತಿರುಪಿ ನೂಂಕಿ ಮರಳ್ದು ರಣಾಗ್ರರಂಗಭೂಮಂಡಳಮಂ ನಿರೀಕ್ಷಿಸುತೆ ಪೋದನಪಾರಗಭೀರವಿಕ್ರಮಂ

ವ. ಅಂತು ಪೋಗೆ,

ಇತ್ತಲನಂತರಂ ತ್ರಿದಶರೋಡಿ ಸುರಾದ್ರಿಹರಾದ್ರಿಯೊಳ್ ಭಯಂಬೆತ್ತು ಮಹಾಗುಹಾವಳಿಗಳಂ ಘನಗಹ್ವರಘೋರವೀಥಿಯಂಸುತ್ತಿದರಣ್ಯದಂಧತಮಮಂ ತವಕಂ ಮಿಗೆ ಸಾರ್ದು ಪೊಕ್ಕು ಶೌರ್ಯೋತ್ತರರಿರ್ದರಪ್ರತಿಮತಾರಕಸಂಗರರಂಗಭಂಗಿತ‌ರ್

ಓಡಿದರಡಗಿದರಗಿದ‌ರ್ಕೋಡಿದರನುಗೆಟ್ಟರಳ್ಕಿದರ್ ಸೊರ್ಕಿಳಿದ‌ರ್ಬಾಡಿದರಂಜಿದರಮರ‌ರ್ಪಾಡಳಿದರ್ ಮಣಿದರಳ್ದರಳಿದರ್ ಕಳಿದ‌ರ್

ವ. ಇಂತು ಭಯಾಕುಳರಾಗಿ ಮೇರುಗಿರಿಯ ರಜತಾದ್ರಿಯ ಗುಹೆ ಗಹ್ವರಂಗಳಂ ಪೊಕ್ಕು ಗಾಡಿಗೆಟ್ಟು ಗಂಡುಡುಗಿರ್ದ ದೇವರ್ಕಳನಲ್ಲಲ್ಲಿ ಕರೆದು ಮೆಲ್ಲಮೆಲ್ಲನೆ ನೆರಪಿ ಸುರಕುಲಂಬೆರಸು ಹಿರಣ್ಯಗರ್ಭನುಂ ಜಿಷ್ಣುವುಂ ವಿಷ್ಣುವಿರ್ದ ತಾಣಕ್ಕೆ ಜಾಣಿಂ ಬಂದು ಕಂಡು ಕುಳ್ಳಿರ್ದು ಕಾಳೆಗದಿಂ ನೊಂದಾಳೋಚನಂಗೆಯ್ವಲ್ಲಿ ಮುನ್ನಿನಂತಲ್ಲದಿನ್ನೊರ್ಮೆ ಸಂಗರಮಂ ಸಮಕಟ್ಟಲ್ವೇಳ್ಕುಮಾನಿರ್ದಪೆಂ ನೀವಿರ್ದ ಪಿರಜನಿರ್ದಪನಂಜಲೇತರ್ಕೆಂದು ಶಕ್ರಂ ಮಿಕ್ಕು ನುಡಿಯೆ,

ನೆನೆದು ವಿಚಾರಿಸಿ ನಿಶ್ಚಯಮನನತುಳೋಪಾಯಕೋವಿದಂ ಸ್ಥಿತಿಕರ್ತಂವನಜಾಕ್ಷಂ ಘನನಿರ್ಮಲನನಾಗತಜ್ಞಾನಿ ಶಕ್ರನೊಡನಿಂತೆಂದಂ

ಆನಿರ್ದುಂ ತಾನಿರ್ದುಂನೀನಿರ್ದುಂ ಮೂವರಿರ್ದುಮೇನಾದುದು ಪೇಳ್ನಾನಾನಿಷ್ಠುರತಾರಕಸೇನಾಮುಖನಿಖಿಳಭುವನವಿಧ್ವಂಸನದೊಳ್

ವ. ಅಂತುಮಲ್ಲದೆ

ಅಯ್ದುಂ ಮುಖದ ಭವಂಗೀರಯ್ದುಂ ಭುಜದೀಶ್ವರಂಗೆ ಷಣ್ಮುಖನುದಯಂಗೆಯ್ದೇಳನೆಯ ದಿನಂ ಬಂದೆಯ್ದಿದೊಡತ್ಯುಗ್ರತಾರಕಾಸುರನಳಿವಂ

ಎಂದಬ್ಜಜನಿತ್ತಾದೇಶಂ ದಿಟಮದುಕಾರಣಂ ಕಪರ್ದಿಯ ತಪಮಂಛಂದಂಗೆಡಿಸುವ ವೀರನನಿಂದೆ ವಿಚಾರಿಸಲೆ ವೇಳ್ಪುದಿಂತಿದೆ ಕಜ್ಜಂ

ಕಾಳೆಗದ ಮಾತನಾಡಿದಿರಾಳಾಪಂಗೊಳ್ಳನಸುರನತಿಬಳನದಱಿಂಸೂಳಿಯ ತಪಮಂ ಚಲಿಯಿಸುವಾಳಾಪಂಗೆಯ್ವುದುಚಿತಕಾರ್ಯಂ ಶೌರ್ಯಂ

ವ. ಎಂದು ಚಕ್ರಧರಂ ಶಕ್ರನೊಳ್ ತಕ್ಕಳಿದು ನುಡಿಯೆ ತಮ್ಮೊಳೊಂದಾಗಿ ವಚನನಿಚಯದಿಂ ವಿಚಾರಿಸಿ ನೋಡಿ ಸಕಳ ಜಗಜ್ಜನ ವಶೀಕರಣ ಪಟುತರ ಕುಸುಮಕೋದಂಡಟಂಕಾರಪ್ರತಾಪಮುಖಂ ಮಕರಪತಾಕನೆಂದಚ್ಚರಿ ಮಿಗೆ ನಿಶ್ಚಯಿಸಿ ಪಂಚೇಶುವಿಂದಲ್ಲದೆ ಪಂಚಮುಖನ ತಪಂ ಸಂಚಲಿಸದೆಂಬ ಸಂಚಮನಱಿದು ಕಾಮನಂ ಕರೆಯಿಸಲ್ವೇಡಿ ಸರಸಿಜಾಕ್ಷಂ ಪುರಂದರನ ಮುಖಮಂ ನೀಡಾಗದೆ ನೋಡಿದಾ ಪ್ರಸ್ತಾವದೊಳ್,

ಪರಮಸ್ವಾಮಿ ಜಟಾಧರಂ ಶಶಿಧರಂ ಗಂಗಾಧರಂ ಕಾಲಸಂಹರನಜ್ಞಾನಹರಂ ಪುರತ್ರಯಹರಂ ಸೌಖ್ಯಾಕರಂ ಶಂಭು ಶಂಕರನಾನಂದಕರಂ ಸಮಂತೆನಗೆ ಭಕ್ತಿಜ್ಞಾನ ವೈರಾಗ್ಯಮಂಕರುಣಂಗೆಯ್ಗೊಲವಿಂದೆ ಹಂಪೆಯ ವಿರೂಪಾಕ್ಷಂ ಶಿವಾವಲ್ಲಭಂ

ಇದು ಸಮಸ್ತ ಸುರಾಸುರಮಕುಟ ಖಚಿತ ದಿನಕರಕರಾಧಿಕ್ಯ ಮಾಣಿಕ್ಯಪ್ರಭಾಪುಂಜರಂಜಿತಚರಣ ನೆನಿಪ ಪಂಪಾವಿರೂಪಾಕ್ಷ ಶ್ರೀಪಾದಕಮಲ ಮಕರಂದ ಮಧುಕರಾಯಮಾಣ ಸತ್ಕವೀಶ್ವರ ಹಂಪೆಯ ಹರಿಹರದೇವ ವಿರಚಿತಮಪ್ಪ ಶ್ರೀ ಗಿರಿಜಾಕಲ್ಯಾಣ ಮಹಾಪ್ರಬಂಧದೊಳ್ ತಾರಕಾಸುರ ಯುದ್ಧ ವರ್ಣನಂ ಷಷ್ಠಾಶ್ವಾಸಂ