II
ಗಿರಿಜಾಕಲ್ಯಾಣ
ಗಿರಿರಾಜ ದೇಶಪುರಾಸ್ಥಾನವರ್ಣನಂ
ಶ್ರೀಮಚ್ಛರ್ವಂ ಪರಮಸ್ವಾಮಿ ದಯಾವಾರ್ಧಿ ಭಕ್ತಿಯಿಂ ಕುಡುಗೆಮಗುದ್ದಾಮ ಸುರರಾಜರಾಜಂಸೋಮಧರಂ ಕೂರ್ತು ಹಂಪೆಯ ವಿರೂಪಾಕ್ಷಂ
ಆ ಹಿಮಶೈಲದುತ್ತರವಿಭಾಗದೊಳೊಪ್ಪುವುದಾತ್ತನಂದನವ್ಯೂಹ ತಟಾಕ ವೀಥಿ ಕಳಮಾವಳಿ ಕೈರವರಾಜಿಯಬ್ದಸಂದೋಹ ವಿಶಾಲ ರಾಜನಗರೀವ್ರಜ ಚಾರುನದೀನದಾಳಿಯುತ್ಸಾಹ ಸಮಗ್ರದಿಂದ ಗಿರಿರಾಜನ ದೇಶಮಿಳಾವಿಭೂಷಣಂ
ಸೊಗಯಿಪ ದೇಶಮಚ್ಚರಿಯ ದೇಶಮದುತ್ತಮ ದೇಶಮಾಗೆಯುಂಬಗೆದುದನೀವ ದೇಶಮತಿ ಮಂಗಳ ದೇಶಮನೂನದೇಶಮುರ್ವಿಗೆ ಸುಖಮಪ್ಪ ದೇಶಮುದಿತೋದಯ ದೇಶಮಪಾರಪುಣ್ಯಕಾರಿಗಳನುಕೂಲದೇಶಮಮೃತೋದಯದೇಶಮದೆಂತು ಬಣ್ಣಿಪೆಂ
ತೀವಿ ಬೆಳೆಯಿಲ್ಲದಿಳೆಯಿಲ್ಲಾವಡೆ ಬೆಳೆಯಿಸದ ವನಮದಿಲ್ಲನವರತಂಪೂವಿಲ್ಲದ ಕೊಳನಿಲ್ಲ ಫಲಾವಳಿಯಿಲ್ಲದ ಮರಂಗಳಿಲ್ಲಾ ನಾಡೊಳ್
ಅಳಿಯಾಸೆ ಪುಷ್ಪವಾಟೀಸ್ಥಳದೊಳ್ ರಾಜಭಯಮಬ್ಜಸಂಕುಳದೊಳ್ ಸಂಚಳತೆ ಪವಮಾನನೊಳ್ ವಿಹ್ವಳತೆ ರಥಾಂಗದೊಳಮಲ್ಲದಿಲ್ಲಾ ನಾಡೊಳ್
ಸಕಲಂಕತೆ ಚಂದ್ರಮನೊಳ್ವಿಕಲಧ್ವನಿ ವಿಹಗದಲ್ಲಿ ಭಂಗಂ ನದಿಯೊಳ್ಸಕುಟಿಲತೆ ಲತೆಗಳೊಳ್ ಭುವನಕಂಟಕಂ ಬಿಸದೊಳಲ್ಲದಿಲ್ಲಾ ನಾಡೊಳ್
ಕರವಿಚ್ಛೇದಂ ಗ್ರಾಮನಿಕರಂಗಳೊಳ್ ಬಂಧನಂ ಕುಸುಮಮಾಲಿಕೆಯೊಳ್ಪರವಶಮೆಂಬುದು ಯೋಗೀಂದ್ರರೊಳಲ್ಲದೆ ಶೈಲವತಿಯ ದೇಶದೊಳುಂಟೇ
ಆ ಮಯಮಕ್ಷರ ಕುಲದೊಳ್ಸಾಮಂ ವೇದಂಗಳಲ್ಲಿ ಭೀಮಂ ಚಿತ್ರಸ್ತೋಮದೊಳಂ ಕ್ಷಾಮಂ ಲಲನಾಮಧ್ಯದೊಳಲ್ಲದಾ ಸುದೇಶದೊಳುಂಟೇ?
ಆ ದೇಶಂ ಸಲೆ ಗಿರಿರಾಜಾದೇಶಂ ತೀವಿ ವಿಪ್ರವೇದೋಚ್ಚರಣಾನಾದ ಶಿವವಾಕ್ಯದೊಳ್ ಸಮನಾದ ಶಿವಜ್ಞಾನಗಾನದಿಂದಿಸೆದಿರ್ಕುಂ
ಗ್ರಾಮಂ ಜಿತಾಘಕುಲಸಂಗ್ರಾಮಂ ಸದನಂ ಸುಖಕ್ಕೆ ಪಸದನಮೆಸೆವಾರಾಮಂ ರಾಮಂ ಜನಕುಲಕಾಮಂ ಕಾಮಹರಪೂಜೆ ನೋಡಾ ನಾಡೊಳ್
ಕಲ್ಲೆಲ್ಲಂ ಪರುಷಂ ತರುವೆಲ್ಲಂ ಕಲ್ಪತರು ಗುಲ್ಮಮೆಲ್ಲೌಷಧಿ ಗೋವೆಲ್ಲಂ ಸುರಭಿಕುಲಂ ಮಡುವೆಲ್ಲಂ ಸಿದ್ಧರಸಮೆನಿಕುಮಂತಾ ನಾಡೊಳ್
ಆ ವಿಷಯದೊಳೊಪ್ಪುವ ಕಳಮಾವಳಿ ನಳನಳಿಸಿ ಬೆಳೆದು ಪಸುರೇಱಿ ಲಸದ್ಭೂವನಿತೆಗೆ ಧಾತ್ರಂ ಪರಿಭಾವಿಸಿ ಪೊದೆಯಿಸಿದ ಹರಿತಪಟದಂತಿರ್ಕುಂ
ಸೊಂಪಾಗುತ್ತಂಕುರಿಸುತ್ತುಂ ಪಸುರೇಱುತ್ತೆ ಕವಲಿಱಿದು ಪೊಡೆಯೊತ್ತುತ್ತುಂ ಪಾಲೆಱುತ್ತುಂ ನೆಱೆದಿಂಪಿಂ ನಳನಳಿಸಿ ಶಾಲಿವನಮೆಸೆದಿರ್ಕುಂ
ಉಗುವೆಳನೀರಿಂದಂ ಕದಳಿಗಳಾ ಕದಳಿಗಳ ಪಣ್ಣ ರಸದಿಂ ಪುಂಡ್ರೇಕ್ಷುಗಳಿಕ್ಷುರಸದಿನಾ ಕಳ-ವೆಗಳಾ ಕಳವೆಗಳ ಕಣಿಶದಿಂ ಗಿಳಿ ಬಳೆಗುಂ
ವ. ಆ ಕಳಮಕ್ಷೇತ್ರಂ ಬಳಸಿ ತಾಮರಸಾಕ್ಷಿಯರಪ್ಪ ಪಾಮರಿಯರ್ ಸಾದರಂ ಕಾದಿರ್ಪಲ್ಲಿ
ತ್ವರಿತಗತಿಪ್ರಚಾರತೆ ಮರಾಳಲಸದ್ಗತಿ ಸಾರುತೆಳ್ಬಲಬ್ಬರಿಸುವ ನಾದಮನ್ಯಭೃತನಾದಮಡರ್ಚುತಿರಲ್ಕೆ ಮಚ್ಚಿ ಮಚ್ಚರಿಸುವ ತೋಳ್ ಮರುದ್ಧತಲತಾಕುಳಮೆಂದುಱೆ ಪಕ್ಕಿಸೋವ ಪಾಮರಿಯರ ಝಂಕೆಗಲ್ಲಿ ಗಿಳಿಯಂಜದೆ ಬೆರ್ಚದೆ ನಿಲ್ಕುಮಾವಗಂ
ವ. ಮತ್ತಮಲ್ಲಿ
ಮುಡಿ ಮೊಲೆ ನಿತಂಬಭಾರದಿನಡಿಯಿಡಲಾಱದೆ ಶುಕಾಳಿಯಂ ಪಾಮರಿಯರ್ಬಿಡೆ ಸೋವುತ್ತಿರ್ಪರ್ ಸಂಗಡಮಿರ್ದಲ್ಲಿರ್ದು ಬಱಿಯ ಗಳಬಳದಿಂದಂ
ಗಿಳಿಯಂ ಸೋವೆಳೆಯಳ ನುಡಿವಳಿಯಿಂದೆ ವಿಕಾಸಮಾದ ಬಾಯ್ದೆಱೆಗಂಡಂದೆಳಸುತ್ತಿರ್ಪುವು ದಾಡಿಮಫಳಬೀಜಂಗೆತ್ತು ದಂತಕುಳಮಂ ಗಿಳಿಗಳ್
ವ. ಮತ್ತಂ ಪೆಱತೊಂದೆಡೆಯ ಕಳಮಕ್ಷೇತ್ರಮಂ ಕಾದಿರ್ಪ ಕಾಮಿನಿಯರೊಳೊರ್ವ ಪ್ರೌಢಪಾಮರಿ ಪಾಂಥರೊಳಗೆ ಬಳಲ್ದು ಬರ್ಪ ಜವ್ವನಿಗನಂ ಕಂಡು ನಾಡೆ ಮನಮೆಳಸಿ ಕೂಡಲೆಂದು,
ಪತ್ತಿತು ಬಿಸಿಲುಱೆ ಕಾಲಂಮುತ್ತಿತು ನೋವುದಕದಿಚ್ಛೆಯಿಂದಂ ಬೆಳರ್ವಾಯ್ಬತ್ತಿತ್ತಯ್ಯೋ ಶ್ರಮಮನಿನಿತ್ತಂ ಕಳೆವವರೆ ಜಾಣರೆನುತುಂ ನುಡಿದಳ್
ನುಡಿಯೆ ಬಳಲ್ದ ಪಾಂಥನೆರ್ದೆ ತಣ್ಪಿನ ಸೋನೆಯನಾಂತ ಮಾಳ್ಕೆಯಿಂಪೊಡಕರಿಸುತ್ತೆ ಪೆರ್ಚಿಮಿಗೆ ಸಾರ್ದು ನಿವಾಸಸುಖಸ್ಥಳಕ್ಕೆ ಬಂದೆಡೆಗುಡದನ್ಯಚಿಂತೆಗೆ ಮನೋಜಸುಖಾರ್ಣವಮಧ್ಯದೊಳ್ ಮನಂಗುಡುತಮಮರ್ಚುತೀ ಸುತೆ ಧುಡುಮ್ಮಿಱಿಯುತ್ತಮೆ ಪಾಂಥನೊಪ್ಪಿದಂ
ನೆಳಲಾದುದು ಧಮ್ಮಿಲ್ಲಂಪುಳಿನಸ್ಥಳಮಾಯ್ತು ವೃತ್ತಜಘನಭರಂ ಶೀತಳತರಜಳಮಾದುದು ಕೋಮಳೆಯಧರ ಮರೀಚಿ ಪಾಂಥನೇಂ ಬರ್ದುಕಿದನೋ
ವ. ಮತ್ತಮಾ ದೇಶದೊಂದಱವಟಿಗೆಯಲ್ಲಿ
ಕಳಕೇಕೀಕೇಶಪಾಶಂ ಶಶಿನಿಭವದನಂ ಭೃಂಗನೀಲಾಳಕಂ ಸಂಚಳಿತ ಪ್ರೋನ್ಮತ್ಸ್ಯನೇತ್ರಂ ಘಟಕುಚಯುಗಳಂ ಲೇಶಮಧ್ಯಂ ಗಭೀರೋಜ್ಜ್ವಳ ಶೋಭಾನಾಭಿ ಕುಂಭಸ್ಥಳಸದೃಶನಿತಂಬಂ ಸುರಂಭಾವಿಳಾಸಂದಳೆದೊಪ್ಪಿರ್ದೂರುದಂಡಂ ತನಗೆಸೆದಿರೆ ಸಂತಂ ಪ್ರಪಾಕಾಂತೆಯಿರ್ದಳ್
ವರನಾಭಿ ಸುಳಿಗಳಂ ತೋಳ್ತರಂಗಮಾಲೆಗಳನಂಬಕಂ ಮತ್ಸ್ಯಮನಂಗರುಚಿ ರುಚಿರಾಂಬುವಂ ಪೋಲ್ತು ರಮಣಿ ನದಿಯಂದದಿಂ ಪ್ರಪಾಂತದೊಳಿರ್ದಳ್
ಇರೆ ಬಂದ ಪಥಿಕನೋರ್ವಂತರುಣಿಯ ಲಾವಣ್ಯರಸಮನಕ್ಷಿಗಳಿಂದಂಬರೆ ಪೀರ್ದು ದಣಿದು ಬಟ್ಟೆಯಪರಿಶ್ರಮವ್ಯಥೆಯನಱಿಯದಿರ್ದಂ ಸುಖದೊಳ್
ವ. ಆ ಪ್ರಪಾಕಾಮಿನಿ ಪಥಿಕರ್ಗೆ ನೀರ್ಗುಡಿಯಲೆಱೆವಲ್ಲಿಯೊರ್ವ ವಿಟಂ ಜಲಪಾನಂ ಮಾಡುತುಂ ತರುಣಿಯ ನಿರತಿಶಯಲಾವಣ್ಯಮಂ ಕಂಡು,
ತೀರ್ದುದು ನೀರ್ ತೀರ್ದುದು ತೃಷೆತೀರ್ದುದು ಕಡುಸೇದೆ ತೀರ್ದೊಡೇಂ ಪಥಿಕಂ ತಾನಿರ್ದಂತಿರ್ದಂ ಸ್ತ್ರೀಮುಖಮಿರ್ದಿರವಂ ನೋಡುವಾಸೆ ತೀಱದೆ ಮನದೊಳ್
ನಡೆ ನುಡಿ ಬಳಲ್ಕೆ ಮುನ್ನಂಕಡು ಚಲ್ವೆಯ ರೂಪುಗಂಡ ಬಳಿಕಂ ನಡೆಯರ್ನಡುಯರ್ ನೀರಂ ಕುಡಿಯರ್ನಡೆನೋಡುತ್ತಿರ್ಪರತನುಶಿಥಿಲರ್ ಪಥಿಕರ್
ವ. ಮತ್ತಮೊಂದು ಪ್ರಪಾಶಾಲೆಯಲ್ಲಿ,
ಅಂಬುವನೆಱೆವಾಗಳ್ ಪ್ರತಿಬಿಂಬಿಸೆ ಕೆಯ್ನೀರೊಳವಳ ವದನಂ ಪಥಿಕಂನಂಬಿ ನಲಿದೀಂಟಿದಂ ಪ್ರತಿಬಿಂಬಾಧರ ಮಧುರರಸಮನೀಂಟುವ ತೆಱದಿಂ
ವ. ಮತ್ತಮಾ ದೇಶದಲ್ಲಿ-
ಬಳಸಿಗಮೊಪ್ಪಿದುವು ಜಿನುಗಿಗಳಪಿ ಕುಳಿರ್ಕೋಡಿ ಕಳ್ತಲಿಸಿ ಮಲೆದುದ್ದಂದಳೆದು ಫಲಮಾಗೆ ಪರಿವಡೆದಳಿ ಗಿಳಿ ಮಡು ಗಿಡು ಕರಿ ಗಿರಿ ಚೂತಂ ಗೀತಂ
ನಾನಾ ದೇವಾಯತನಾನೂನವಿಭೋಗಾದಿ ಸಂಪದಪ್ರದಮೆನಿಸಿರ್ಪಾನಾಡಿಂಗೆ ಶಿರೋಮಣಿತಾನೆನಿಕುಂ ಪೆಸರೊಳೋಷಧಿಪ್ರಸ್ಥಪುರಂ
ಅದು ಗಿರಿರಾಜನ ರಾಜ್ಯಾಸ್ಪದ ರಾಜಿತರಾಜಧಾನಿ ತಾನೆಂದೆನಿಸಿರ್ಪುದು ಪುರಮಾ ಪುರಮಂ ಸುತ್ತಿದ ಬಹಿರುದ್ಯಾನಚಯಮನಾರ್ ಬಣ್ಣಿಸುವರ್
ಕರಮೆಸೆವೀಳೆ ಬಾಳೆ ನವಪೂಗಚಯಂ ಪನಸಾಳಿ ಶಾಳಿ ಭಾಸುರ ಸುರಹೊನ್ನೆ ಜಂಬು ಘನನಿಂಬಕುಳಂ ಬಕುಳಂ ಕವುಂಗು ತೆಂಗುರುತರಮಾತುಳಂಗತತಿ ಚೂತಕುಜಾತಮಶೋಕೆ ಪೂಗೊಳಂಕುರುವಕನತ್ತಮಾಲ ಕೃತಮಾಲ ತಮಾಲದಿನೊಪ್ಪುಗುಂ ವನಂ
ಸಿರಿತಂದಿಕ್ಕಿದಶೋಕೆ ವಾಗ್ವನಿತೆಯಿಟ್ಟಾಮ್ರಂ ಶಚೀದೇವಿಯಿಟ್ಟರನೇರಿಲ್ ಮಿಗೆ ರಂಭೆಯಿಟ್ಟ ಕದಳೀಷಂಡಂ ಸುರಸ್ತ್ರೀಯರಿಟ್ಟರವಿಂದಾಕರಮೂರ್ವಶೀವಧು ಸರಾಗಂ ತಂದ ಪೂಗದ್ರುಮಂತರದಿಂದಂ ರತಿಯಿಟ್ಟ ದಾಡಿಮಕುಲಂ ಸಾರ್ವರ್ತುಕೋದ್ಯಾನದೊಳ್
ಸುರುಚಿರಸಾರಪಕ್ವಫಲವಕ್ತ್ರಲಸಚ್ಛುಕಚುಂಬನಂ ಬನಂಪರಮವಿರಕ್ತಸಂತತಿಗಿದೇತಱ ಮೋಹನಮೆಂಬಿನಂ ಬನಂಚರಿತದೆ ಸೋಲಿಕುಂ ಶುಕಪಿಕಾಳಿಕುಲಕ್ಕತಿಜೀವನಂ ವನಂಧರೆಗೆ ವಿಚಿತ್ರಭಾಸುರಮದೇಳಿಪುದಗ್ಗದ ಕಾವನಂ ವನಂ
ವ. ಆ ಸಾರ್ವರ್ತುಕಮೆನಿಸಿದುದ್ಯಾನದಲ್ಲಿ,
ಅಂಕುರದಿಂ ಪ್ರವಾಳಕುಲದಿಂ ನನೆಯಿಂ ಮುಗುಳಿಂ ಪ್ರಸೂನದಿಂದಂ ಕಿಱುಗಾಯ್ಗಳಿಂ ತೊರೆದ ದೋರೆಗಳಿಂ ತನಿವಣ್ಣ ಪಂಕ್ತಿಯಿಂದಂ ಕಳಕಂಠಕೂಜಿತದಿನೊಪ್ಪುವ ಷಟ್ಪದವೃಂದಗಾನದಿಂದಂ ಕಡುಕೊರ್ಬಿ ಚಪ್ಪರಿಪ ರಾಜಶುಕಾಳಿಯಿನಾಮ್ರಮೊಪ್ಪುಗುಂ
ವ. ಮತ್ತಂ
ಇದು ರತಿರಾಜಭದ್ರಗಜಮೋ ಇದು ಚೈತ್ರನ ರಾಜಧಾನಿಯೋಇದು ವನಲಕ್ಷ್ಮಿಗೆತ್ತಿಸಿದ ಪೀಲಿಯ ಸತ್ತಿಗೆಯೋ ವಸಂತನಿಂದಿದು ಶಶಿಯಳ್ತಿಯಿಂ ಸಲಪಿದರ್ವಿದ ಕೊರ್ವಿದ ಕಲ್ಪವೃಕ್ಷಮೋಇದು ಧರೆಯಿಂದೆ ಮೂಡಿದ ನವಾಂಬುದಮೋ ಎನೆ ಚೂತಮೊಪ್ಪುಗುಂ
ತರದಿಂದಂಕುರಮಂ ಕುರಪ್ರಕರದಿಂದಂ ಪಲ್ಲವಂ ಪಲ್ಲವೋತ್ಕರದಿಂದಂ ಕುಸುಮಂ ಲಸತ್ಕುಸುಮದಿಂ ಚಂಚತ್ಫಲಂ ತತ್ಫಲೋತ್ಕರದಿಂ ಚಾರುಶುಕಂ ಶುಕಾವಳಿಗಳಿಂ ಭೃಂಗಾಳಿ ಭೃಂಗಾಳಿಯಿಂಪರಪುಷ್ಟಂ ಪರಪುಷ್ಟಪೋತಕಕುಲಂ ಪೊಣ್ಮಿರ್ಪುದಿಮ್ಮಾವಿನೊಳ್
ಸಲೆ ಸಹಕಾರದಲ್ಲಿ ಕೆಲವಂಕುರಮಂ ಕೆಲವಾಪ್ರಸೂನಮಂಕೆಲವು ಫಲಂಗಳಂ ಮಿಸುಪ ಚಂಚುಗಳಿಂ ನವನಾಸಿಕಂಗಳಿಂತೊಲಗದೆ ಜಿಹ್ವೆಯಿಂ ಕರ್ದುಕಿ ವಾಸಿಸಿ ಪೀರ್ದುಱೆ ಸೊರ್ಕುತುಂ ಕರಂನಲಿಯುತೆ ಮೀಱಿ ತೊಂಡುಗೆಡೆಯುತ್ತ ಪಿಕಾಳಿ ಶುಕಾಳಿಯೊಪ್ಪುಗುಂ
ಕಾವಂಗೆಂದು ವಸಂತಂಭಾವಿಸಿ ಸಮೆದಿಟ್ಟ ನೀಲದರಮನೆಯೆನಿಕುಂಮಾವಿನ ಹೂವಿನ ಕಾವಿನಠಾವಿನ ಮೊದಲಿಂದೆ ತೀವಿದಳಿಗಳ ಬಳಗಂ
ಬಿರಿಯಲ್ ಪೊಂಗಿದ ಪಣ್ಗಳಸಿರೆಯಱಿದಲ್ಲಿರಿಸಿ ಚಂಚುಪುಟದಿಂ ಸವಿಯಂಬರೆತೆಗೆದು ತಣಿವು ತವಕಮನರಳ್ಚುತ್ತಿರೆ ಮೆಱೆದುದಾಮ್ರದೊಳ್ ಶುಕನಿಕರಂ
ಬಿಗಿಯಪ್ಪಿ ಮೊಗಮನಿಟ್ಟಾಲಿಗಳವು ನಸುಮುಚ್ಚೆ ಪಕ್ಷಯುಗಮೆಳಲೆ ರಸಂದೆಗೆವ ದನಿ ನಿಮಿರ ನಾಲಗೆಚಿಗುರುತ್ತಿರೆ ಸವಿದುದೊಂದು ಗಿಳಿ ತನಿವಣ್ಣಂ
ಎಳಸಿ ನೆಗೆತಂದು ಮಿಕ್ಕಗ್ಗಳಿಸುತಮಿರ್ದಂತಿರಪ್ಪೆ ಮಧುರಸಸಂ ವೆಗ್ಗಳಿಸೆ ಲವಲವಿಸುತುಂ ಪಣ್ಗಳೊಳಳ್ದುದದೊಂದು ರಾಜ ಶುಕನತಿಭರದಿಂ
ವ. ಮತ್ತಮಲ್ಲದೆ
ಅರಳೆಲೆ ಮೇಲಾಡುತ್ತಿರೆಭರದಿಂ ಮಾಂಗಾಯ್ಗಳೊಲೆಯೆ ಕೆಲಬಲದೊಳ್ ನಿಂದರಗಿಳಿಯ ತೊದಳ್ನುಡಿ ಬಿತ್ತರಿಸೆ ವಸಂತನ ಕುಮಾರನೆನಿಸಿತ್ತಾಮ್ರಂ
ಅಂತಂತೆ ನಲಿದು ನಾಲಗೆತೀಂತೆ ಮಿಗಲ್ ಕಳಿಕೆಗೆಳಸಿ ಚಂಚುವನಿಟ್ಟೋರಂತೆ ಸವಿ ಸವಿದು ಸೊರ್ಕಿ ನಿರಂತಂ ಕರೆದತ್ತು ಮಾವಿನೊಳ್ ಪರಪುಟ್ಟಂ
ಅಳಿ ಗಿಳಿ ಪಿಕಕುಲರವದಿಂನೆಳಲಿಂ ರೂಪಿಂ ಫಲಂಗಳಿಂ ಪೂವಿಂದಂಬಳಸಿ ತಣಿಪುವುದು ಪೊಸಮಾವೆಳಸಿದ ಪಾಂಥಪ್ರತಾನ ಪಂಚೇಂದ್ರಿಯಮಂ
ತಿಳಿನೀರಿಂ ತಾವರೆಯಿಂಕಳಹಂಸೆಯಿನೆಸೆವುದಲ್ಲಿ ಸರಸೀಷಂಡಂತಳಿರಿಂ ನನೆಯಿಂ ಪೂವಿಂಫಳಂಗಳಿಂದೆಸೆವುದಲ್ಲಿ ಚೂತಕುಜಾತಂ
ಪಿಕಕುಲದ ಸೊರ್ಕು ಮಧುಕರನಿಕರದ ಮದವರಗಿಳಿಗಳ ಗರ್ವಂ ನವಚೂತಕುಜಂ ಮಲ್ಲಿಗೆ ದಾಡಿಮನಿಕಾಯಮಂಕುರದೆ ಪುಷ್ಪದಿಂ ಫಲದಿಂದಂ
ವ. ಮತ್ತಮಲ್ಲದೆಯುಂ,
ಬೇರಿಂದಂ ನೀರುಂಡಾಬೇರಿಂದಗ್ರಂಬರಂ ಫಲಂಗಳನೀವೆಂಧಾರಿಣಿಗೆಂಬಂತಿರೆ ಫಲಪೂರಿತ ಪನಸದ್ರುಮಂಗಳೆಸೆದುವು ಬನದೊಳ್
ನೀರೆಱೆದುಪಕಾರಕ್ಕೆಳನೀರಂ ರುಚಿವೆರಸು ತೀವಿ ವನಪಾಲಕರಂಪಾರುತ್ತಿರ್ಪಂತಿರ್ಪುವುಸಾರಾಯ ಫಲಾಳಿನಾಳಿಕೇರಂ ಬನದೊಳ್
ವನಲಕ್ಷ್ಮಿಗೆ ಸಕಲವಿಲಾಸಿನಿಯರ್ ಬಳೆದೋಳ್ಗಳಿಂದೆ ಚಾಮರಮಿಕ್ಕಲ್ತನ ತನಗೆ ನಿಂದರೆನೆ ತದ್ವನದೊಳ್ ಪೊಂಬಾಳೆಯಿಂದೆ ಪೂಗಮದೆಸೆಗುಂ
ಕುಸುಮಶರಂಗೆ ವಸಂತಂಪೊಸ ಪೊಂಗಳಸಂಗಳಲ್ಲಿ ಸೌರಭ್ಯ ಸುಧಾರಸಮಂ ತೀವಿರಿಸಿದವೋಲೆಸೆವುವು ಫಳಭಾರಮಾತುಳಂಗವ್ರಾತಂ
ಬಾಗುತೆ ಬಲಿಯುತೆ ಪೊಳೆದಿನಿದಾಗುತೆ ದಳವೇಱಿತಿದಿಡಿದು ಹಿಗ್ಗುತೆ ಪಣ್ಣಾಗುತೆ ಕಾಯ್ಗಳ್ ಪೊಱಮಡೆಬೀಗುತ್ತುಂ ಬೆಳೆದುವಲ್ಲಿಂ ಕದಳೀಷಂಡಂ
ವ. ಅಂತುಮಲ್ಲದೆಯುಂ,
ಅಳಿಗಳ ಗಿಳಿಗಳ ಕೋಗಿಲೆಗಳ ಕಳ ಹಂಸೆಗಳ ಪಾರಿವಂಗಳ ಕೋಕಂಗಳ ಪುರುಳಿಗಳ ನವಿಲ್ಗಳಕೊಳರ್ವಕ್ಕಿಗಳೆಸೆವ ಮನದ ಬಿನದಂ ವನದೊಳ್
ನಲಿದು ಕೊರಲೆತ್ತಿ ಕುಕಿಲಿಱಿದುಲಿದುಂ ಸುಳಿದೆಳಸಿ ಬಳಸಿ ಬಳಿಸಂದು ಪಳಂಚಲೆದೊಲೆದು ಪಕ್ಕಮಂ ಬಿರ್ಚಿ ಲಲ್ಲೆಗೆಯ್ದತ್ತು ಪಾರಿವಂ ಪಾರಿವದೊಳ್
ಚಾರುತರಂ ನಿರ್ಮಲಜಲಪೂರಂ ಸೌರಭ್ಯಮುದಿತಮದಮಧುಕರಝೇಂಕಾರಂ ಹಂಸಕುಲ ಕ್ರೇಂಕಾರಂ ರಾಜೀವಭರಿತ ನವಕಾಸಾರಂ
ವ. ಅಂತುಮಲ್ಲದೆಯುಂ
ಸುರರ ನಿವಾಸದಂತನಿಮಿಷಪ್ರಕರಂ ನಭದಂತಿರಬ್ಜಬಂಧುರ ಮಧುಮಾಸದಂತೆ ಸಿತಪಕ್ಷಯುತಂ ರಥದಂತೆ ಚಕ್ರವಿಸ್ತರಮುರುಪದ್ಮಜಾಂಡದವೊಲಾತ್ತರಸದ್ಭುವನಾಶ್ರಯಂ ಧನುರ್ಧರರ ಕಳಾಪದಂತೆ ರಮಣೀಯ ಶಿಳೀಮುಖಸಂಕುಳಂ
ನಳಿನದ ಕರ್ಣಿಕೆಯೊತ್ತಿನೊಳಳವಡೆ ಕಣ್ಮುಚ್ಚಿ ಮಗ್ಗುಲಿಕ್ಕಿಯಜಸ್ರಂತಳರದೆ ನಿದ್ರಾಸುಖದಿಂಕಳಹಂಸೆಯ ಮಱಿಗಳಿರ್ಪುವಂತಾ ಕೊಳನೊಳ್
ವ. ಇಂತೊಪ್ಪುವ ಸರೋವರದೊಳೊಂದು ಕಳಹಂಸಂ ಕಾಂತೆಯನಗಲ್ದು
ಅತಿಭರದಿಂ ನವಕುವಲಯತತಿಯೊಳ್ ಕಾಸಾರದೊಳ್ ಕುಶೇಶಯ ಚಯದೊಳ್ಲತೆವನೆಯೊಳ್ ವನದೊಳ್ ಪುಳಿನತಳದೊಳಱಸಿದುದು ಕಾಂತೆಯಂ ಕಳಹಂಸಂ
ಪುಳಿನಮನಡಿಗಡಿಗೇಱುತೆಕೊಳನೊಳಗಡಿಗಡಿಗೆ ಪೊಕ್ಕು ಪೊಱಮಡುತೆ ಲತಾವಳಿಗಳೊಳಡಿಗಡಿಗಾಲಿಸುತಳವಳದಡಿಗಡಿಗೆ ಬಳಲುತಿರ್ದುದು ಹಂಸಂ
ಬಱಿದೆ ಗಳಗಳನೆ ನಡೆವುದುಪೆಱಸಾರ್ವುದು ಬೆರ್ಚುವುದು ಬಳಲ್ವುದು ಮತ್ತೆಳ್ಚಱೊಳಿರ್ಪುದು ಕಣ್ಗಳನರೆದೆಱೆವುದು ನೆನೆನೆನೆದು ಕಾಂತೆಯಂ ಕಳಹಂಸಂ
ಇರೆ ಸಿರಿ ಬರ್ಪಂದದೆ ಸುಂದರಿ ಬರೆ ಪರಿತಂದು ಚಂಚುಗೂಡುತೆ ಪಕ್ಷಾಂತರದೊಳ್ ಮುಸುಂಕಿ ಬಿಬ್ಬಿರಬಿರಿವಂತಪ್ಪಿದುದು ದೇಹಮೊಂದೆಂಬಿನೆಗಂ
ವ. ಮತ್ತಮೊಂದೆಡೆಯೊಳ್
ಕಾಮನ ಬಾಣದಿರ್ಕೆವನೆಯೋ ಭ್ರಮರಾಳಿಯ ಸತ್ರಸಾಲೆಯೋಭೂಮಿಯದೊಂದು ಗಂಧಗುಣಮಿರ್ಪೆಡೆಯೋ ವಿಲಸತ್ ಸದಾಗತಿಪ್ರೇಮದೆ ಸೌರಭಂದಳೆದ ತಾಣಮೋ ಪೇಳಿಮಿದೆಂದು ಕಂಡವರ್ಕಾಮಿಸೆ ಮಾಲೆಗಾಱರೊಸೆದೋವಿದ ಪೂವಿನ ತೋಂಟಮೊಪ್ಪುಗುಂ
ಸುರಗಿಯ ಕಂಪು ಸಂಪಗೆಯ ಕಂಪದಿರ್ಗಂತಿಯ ಸೊರ್ಕುಗಂಪು ಪಾದರಿಯಲರ್ಗಂಪು ಪಡ್ಡಳಿಯ ಕಂಪಿರವಂತಿಯ ಕಂಪು ಮೊಲ್ಲೆಯೊಂದುರವಣೆಗಂಪು ಮಲ್ಲಿಗೆಯ ಕಂಪು ಸರೋಜದ ಕಂಪು ನೀಲನೀರರುಹದ ಕಂಪು ಕೇತಕಿಯ ಕಂಪೆಸೆಗುಂ ಸಲೆ ಪುಷ್ಪವಾಟಿಯೊಳ್
ಆ ನವಗಂಧಕ್ಕೆಳಸಿಯನೂನಂ ಮಧುಕರನಿಕಾಯಮೊಲ್ದನವರತಂನಾನಾ ಮಂಜುಳನಿನದದೊಳಾನಂದಂ ಮಿಕ್ಕು ಕಂಪನೀಂಟುತ್ತಿರ್ಕುಂ
ಬಿಗಿಯಪ್ಪಿ ಪುಷ್ಪರಸಮಂತೆಗೆದೀಂಟಿ ತುಳುಂಕಿ ತೂಱಿ ತೇಂಕಾಡಿ ಮನಂಮಿಗೆ ಸೊರ್ಕಿ ಜಿನುಗಿ ಜೀವಿಸಿಮಗಮಗಿಸಿತ್ತೊಂದು ಮಧುಕರಂ ಮಲ್ಲಿಗೆಯೊಳ್
ವ. ಅಂತುಮಲ್ಲದೆಯು
ಧೃತಕಂಟಕಮಾದೊಡಮುನ್ನತಿಯಂ ಕೇತಕಿಯೊಳೆಱಗಿದುದು ಮಧುಕರನಿಂತತಿರೂಕ್ಷರಾದೊಡಂ ಸ್ನೇಹಿತರಂ ಕಾಯಲ್ಕೆ ಬರ್ಪುದೇ ಧಾರಿಣಿಯೊಳ್
ವ. ಅದಲ್ಲದೆಯುಂ
ಭದ್ರಮೆನಿಸಿರ್ದ ಕುಸುಮಲಸದ್ರಸಮಂ ಪೀರ್ವ ಪದದೊಳೊಪ್ಪಿತು ಮದನಂಮುದ್ರಿಸಿದಂಬಿನ ಲಾಕ್ಷಾಮುದ್ರೆಯಿದೆಂಬಂತೆ ತೀವಿದಳಿನಿಕುರುಂಬಂ
ವ. ಅದಲ್ಲದೆಯುಂ
ನನೆಯಂ ಮುಂಡಾಡುತೆ ಬಲ್ನನೆಯಂ ಬಲವಂದು ಮುಗುಳನಾಲಿಂಗಿಸಿ ಕಂಪಿನ ಬಿರಿಮುಗುಳಂ ಚುಂಬಿಸಿಯನುನಯದಿಂದಲರನಲೆದು ತೀವಿದುವಳಿಗಳ್
ಅಂಡಲೆದು ಜಾದಿಯಂ ಬಂಡುಂಡಳಿಯಂ ಮಿಕ್ಕು ಮಧುಕರಂಗಳ್ ಭರದಿಂಬಂಡುಣ್ಬುವೆನೆ ಸುಗಂಧಮಖಂಡಿತಮತಿನುತ ರಸೋದಯಂ ಮಾಳತಿಯಾ
ವ. ಅಂತುಮಲ್ಲದೆಯುಂ
ಆ ವನದ ಕೊಳದ ಪೂಗೊಳನೇವೇಳ್ವೆಂ ಹಂಸೆ ರಾಜಹಂಸೆಗಳಾಹಾತಾವರೆ ಹೊಂದಾವರೆಗಳ್ಮಾವಿಮ್ಮಾವಳಿ ಮದಾಳಿ ಗಿಳಿಯರಗಿಳಿಗಳ್
ವ. ಅಂತುಮಲ್ಲದೆಯುಂ
ತವೆ ಬೆಳೆದ ಪೊಸ ಪನಸು ಬಕ್ಕೆವಲಸು ನಳನಳಿಸುವಿಕ್ಷು ಪುಂಡ್ರೇಕ್ಷು ಪಳಂಚುವ ತೆಂಗವು ಚೆಂದೆಂಗೊಪ್ಪುವ ದಾಳಿಂಬಂಗಳೆಲ್ಲ ರಸದಾಳಿಂಬಂ
ಬನವಿದೆ ನೋಡು ಸರ್ವಸುಖಮಪ್ಪುದು ಕೇಳ್ ನುಡಿಯಿಲ್ಲ ತಣ್ಣೆಲರ್ಮನದೊಲವಿಂದೆ ತೀಡುತಿದೆ ಚೆಲ್ವು ಮನೋಹರಮಿರ್ಪುದಳ್ಕಱಿಂದನುದಿನಮೆಯ್ದಿ ಕಿಂಪುರುಷ ಕಿನ್ನರ ಖೇಚರ ಭೂಚರಾದಿ ಮಂಡನ ಮಿಥುನಂ ರತೀಶ್ವರ ಸುಖಾಬ್ಧಿಯೊಳೊಪ್ಪುಗುಮಾ ವನಾಂತದೊಳ್
ಸುರತರ ವೊಂದೆ ತತ್ಸುರಭಿಯೊಂದೆ ಸುರಾಪಗೆಯೊಂದೆ ನಿಶ್ಚಯಂಸುರಪುರದಲ್ಲಿ ಇಲ್ಲಿ ಸುಮನಸ್ತರು ಗೋ ಪಶು ನಿರ್ಜರಾಪಗೋತ್ಕರಮುಮನಂತಮೆಂದು ಗಿರಿರಾಜ ಪುರೋಪವನಾಳಿಯಲ್ಲಿಯಪ್ಸರತತಿ ಕಿನ್ನರಪ್ರತತಿ ಕಿಂಪುರುಷವ್ರಜಮಿರ್ಪುದಾವಗಂ
ವ. ಮತ್ತಮಾ ಪುರದ ಬಹಿರುದ್ಯಾನಂ ನಾನಾ ಪಿಕ ಚಂಚುಸಂಚಾರಿತ ಚೂತಾಂಕುರ ಪ್ರಕರದಿಂದೊಸರ್ದು ಮಂದಾನಿಲನಿಂ ಸೂಸಿ ಮಂಜುಮಸಗಿ ಬೀಳ್ವ ಪೊಸರಸದಿಂ ವಿಕಸಿತಪ್ರಸೂನಕುಲದೊಳ್ ಕೂಡೆ ಬಂಡುಣ್ಬ ಪಟ್ಟದ ಪದಘಾತದಿಂದುದಿರ್ದ ಪರಾಗಧೂಳಿಯಿಂ ಶುಕ ತುಂಡವಿದಾರಿತ ಪಕ್ವಫಲಗಳಿತ ರಸಾಸಾರದಿಂ ಪರಿಮಳದ ಕೆಸಱ್‌ಮಸಗಿದ ವನಸ್ಥಳದೊಳ್ ಬಿನದದಿಂ ನಡೆವಲ್ಲಿ ಕಾಲ್ ಜಗುಳ್ದು ಜೋಲ್ದು ಬೀಳ್ವ ಕಳಹಂಸೆಗಳಂ ನಗುವಂತಿರರೆವಿರಿದ ಪಣ್ಗಳಿಂ ಕಣ್ಗೊಳಿಪ ದಾಡಿಮದ್ರುಮಂಗಳಿಂಮತ್ತಮೊಂದೆಡೆಯೊಳ್ ಮೀಱಿ ಪಾಱುವ ಪಱಮೆಗಳ ಪಜ್ಜೆವಿಡಿದಱಸಿ ಗಂಧವಹನನೊಡಗೂಡಿ ಬಂದೆಳೆದುಯ್ದು ಮಿಸುಗುವ ಕುಸುಮ ಕರ್ಣಿಕೆಯೊಳ್ ಕಡುಪಿಂ ಕೆಡೆಪಿ ಕೊಲ್ವುದಿದೆಂಬ ಶಂಕೆ ಭೋಂಕನೆ ಪುಟ್ಟಿ ಝಂಕಾರರವದಿಂ ಪಲ್ಮೊರೆವಂತೆ ಸಲೆ ಮೊರೆದು ಸಂಪಗೆಯ ಕಂಪಿಂಗೆ ಕಂಪಿಸಿ ಮಲ್ಲಳಿಗೊಂಡೊಲ್ಲದೆ ಮೊಗಂದಿರುವಿ ಪರಿತಂದು ಸಾದರದಿಂ ಪೂದೋಂಟದ ಪ್ರಸೂನಕುಲಮನಂಡಲೆದು ಬಂಡುಣ್ಬಲ್ಲಿ ಬಾಯಕುಟುಕನೆಳಕುಳಿಗೊಂಡು ತೀಡುವ ಗಂಧವಹನ ಬಳಿವಿಡಿದು ಘಳಿಲನೆಳ್ದು ಪರಿಮಳದ ಪಸಿವಿನುಱವಣೆಯಡಂಗದೆ ಕಡಂಗಿ ಕಾಯ್ದು ವಸಂತ ರಾಜಂಗೆ ಪುಯ್ಯಲಿಡುವಂತೆ ನೆರೆನೆರೆದು ಮೊರೆವ ಮಧುಕರಪ್ರಕರದಿಂ, ಮತ್ತಮೊಂದೆಡೆಯೊಳ್ ತೀವಿಪೂತ ಸೇವಂತಿಗೆಯ ತೋಂಟದೊಳ್ ಮೀಂಟುವರಿವ ಪರಿಮಳದ ಪನಿನೀರ ಪಳ್ಳಮಂ ದಾಂಟಲಾಱದ ಬಾಲಮರಾಳಂಗಳಂ ಪದ್ಮಪತ್ರದಿನೊಪ್ಪುವ ತೆಪ್ಪದೊಳಿಟ್ಟು ದಾಂಟಿಸುತಿರ್ಪ ರಾಜ ಹಂಸರಾಜಿಗಳಿಂ, ಮತ್ತಂ ಚಕ್ರವಾಕ ಚಕ್ರವಳಯಾಗ್ರದೊಳೊಗ್ಗಿನ ಕಮಳದ ಮೊಗ್ಗೆಯ ಗುಂಡಿಗೆಯಂ ತಂಡದೊಳಮರ್ಚಿ ಕೊಳರ್ವಕ್ಕಿಯಂ ಹೂಡಿ ದ್ರಾಕ್ಷಾರಸಪೂರಿತ ಕಾಸಾರಜಲಮಂ ಕೇತಕೀದಳದ ದೋಣಿಯೊಳ್ ವಸಂತರಾಜಂ ಕತ್ತುರಿಯ ಮಡಿಯೊಳ್ ಕಪ್ಪುರದ ಗಿಡುವಂ ನಟ್ಟು ಱಾಟಳಮನೆತ್ತಿ ಬೆಳೆಯಿಸಿದನೆಂಬಂತಿರ್ದ ಕರ್ಪೂರದ್ರುಮಂಗಳಿಂ, ಮತ್ತಮೊಂದೆಡೆಯೊಳ್ ಪಸಿದ ಮಱಿಗಿಳಿಯ ಮೊಗಮಂ ನೋಡಿ ಚಂಚುಗೂಡಿ ಕಿಸಲಯದೆಸಳ ಮಾಣಿಕ್ಯದ ಸಿಂಪಿಂ ಫಳರಸದ ಪಾಲನೆಱೆದು ತಳಿರ ತೊಟ್ಟಿಲೊಳಿಟ್ಟು ಸಣ್ಣನೆನೆಗಳ ನನೆಯಕ್ಕಿಯನಿಕ್ಕಿ ಪಣ್ಣ ಬಾಯಿನಮನಣ್ಣ ವಳಿಯದೆ ಕೊಟ್ಟು ಚೂತವಲ್ಲಭನೆಂಬ ಪೆಸರಿಟ್ಟು ಮಂದಾನಿಳಂ ತೂಗೆ ಮಧುಕರನಿಕರಂ ಪಾಡೆ ಸಹಕಾರಕುಲದೊಳ್ ಸಂತಸದಿಂ ಸಲಪುತಿರ್ಪ ರಾಜಶುಕಪ್ರಕರದಿಂ, ಮತ್ತಮೊಂದು ಪೂಗೊಳದೊಳ್ ಪೆತ್ತ ಮಱಿದುಂಬಿಯಂ ಕಂಡು ಮನಂಗೊಂಡು ಪುಂಡರೀಕದೆಸಳ ಬೆಳ್ಳಿಯ ಸಿಂಪಿಂ ಪರಿಮಳದ ರಸಮನೆಱೆದು ಪರಾಗದ ತಿಲಕಮನಿಕ್ಕಿ ಸೌರಭದ ತುಂತುಱಿಂ ತೂಪಿಱಿದೆಸಳ ಸೋಗಿಲ ಹಸುಳೆಯಂ ಝಂಕಾರರವದಿಂ ಜೋಗುಳಂಬಾಡಿ ತರಂಗದಿಂ ತೂಗಿ ವಸಂತತಿಲಕನೆಂದು ನಾಮಕರಣಮಂ ಮಾಡಿ ಬಾಳುತಿರ್ಪ ಬಾಣಂತಿದುಂಬಿಗಳ ಗೊಂದಣಂಗಳಿಂ, ಮತ್ತಮೊಂದೆಡೆಯೊಳ್ ಚಂದ್ರಕಾಂತನಿರ್ಮಿತಕೃತಕಾಚಳನಿತಂಬ ವಿಳಸಿತ ಲತಾಮಂಟಪವಳಯಸ್ಥಿತ ಪುಳಿನಸ್ಥಳ ಕುಸುಮತಳ್ಪದೊಳ್ ಕುಸುಮಾಯುಧ ಸಕಳಸುಖ ಸಾಮ್ರಾಜ್ಯಭರದಿಂ ನೆರೆವ ಹಂಸ ಕೀರ ಪಾರವತಂಗಳಂ ನೋಡಿ ನಾಡೆ ನಲಿದು ಕಾಮಬಾಣಮನಿಕ್ಕಿ ಮೆಟ್ಟಿದಂತೆ ಹೂವಿನ ಹಸೆಯೊಳ್ ಮನಂಮುಟ್ಟಿ ಮಾಣದೆ ನೆರೆದ ವಿದ್ಯಾಧರ ಮಿಥುನಂಗಳಂ, ಇಂತು ತರುಕುಲದ ತೆಕ್ಕೆಯಿಂ ಗುಲ್ಮಕುಲದಿರ್ಕೆಯಿಂ ನೆಳಲ ತಣ್ಪಿಂದಂಕುರದ ಸೊಂಪಿಂ ಪಲ್ಲವದ ನುಣ್ಪಿಂ ಕುಸುಮಾವಳಿಯ ಕಂಪಿಂ ಪಣ್‌ಗೊನೆಯ ಬಿಣ್ಪಿಂ ಪಕ್ವಫಲರಸದಿಂಪಿಂ ಕೋಕಿಲ ಧ್ವಾನದಿಂದಳಿಕುಲದ ಗಾನದಿಂ ಶುಕರವ ಪ್ರತಾನದಿಂ ಫಲರಸ ಪಾನದಿಂ ರಾಜಹಂಸಯಾನದಿಂ ಲತಾಮಂಟಪಸ್ಥಾನದಿಂ ಪರಿಕಾಲ ಪರ್ಬಿಂ ಪೂದೋಂಟದ ಕೊರ್ಬಿಂ ವಿಹಂಗಮ ಕುಲದುರ್ಬಿಂ ತಮಾಳವನದ ಮರ್ಬಿಂ ವಿದ್ಯಾಧರಿಯಗುರ್ಬಿಂ ಪ್ರಸೂನಕುಲದ ಪರ್ಬಿಂ ಚಕ್ರವಾಕದ ಪೆರ್ಮೆಯಿಂ ಮಂದಾನಿಲನ ಕೂರ್ಮೆಯಿಂ ಇಂತು ಪುರದ ಬಹಿರುದ್ಯಾನಂ ಸಕಲ ಸೌಂದರ್ಯ ಮನಧಿಕತರಸುಕುಮಾರತೆಯನುರುತರ ಭೋಗಮನುನ್ನತಕ್ರೀಡೆಯನತ್ಯುದಾರತೆಯ ನತಿಪ್ರಸನ್ನತೆಯನೊಳಕೊಂಡಿರ್ಪು ದಂತುಮಲ್ಲದೆಯುಂ
ಮೊಗಮಬ್ಜಂ ಲೋಚನಂಗಳ್ ಕುವಲಯಮಧರಂ ಬಿಂಬಮಾ ನಾಸಿಕಂ ಸಂಪಗೆ ತೋಳ್ ಶಾಖಾನಿಕಾಯಂ ಘನಕುಚಯುಗಳಂ ಚಕ್ರವಾಕದ್ವಯಂ ನಾಭಿ ಗಭೀರೋದ್ಯತ್ಸರಂ ತೋಱುವ ತೊಡೆ ಕದಳೀಸ್ತಂಭಮಂಘ್ರಿ ಪ್ರವಾಳಂಸೊಗಸಿಂ ತಾವಾಗೆ ತನ್ನಂದನಮೆ ಘನ ವನಶ್ರೀಗೆ ರೂಪಾಗಿ ತೋರ್ಕುಂ
ಆ ವನದ ಪುರದ ನಡುವೆ ಸುಖಾವಹಮತಿವಿಭ್ರಮಂ ವಿಶಾಲಂ ಸರ್ವೋರ್ವೀವರ ಶಸ್ತ್ರಾಭ್ಯಾಸ ನಿಜಾವಾಸಂ ಸುಭಟಪಟಲ ಪಟುರವಭರಿತಂ
ಹಯಶಿಕ್ಷಕರಿಂ ಗಜಶಿಕ್ಷೆಯ ಭೀಕರದಿಂ ಸ್ರವಂಗುಡುವ ಜೋದರ ಸಂಚಯದಿಂ ನಯದಿಂ ವೈಹಾಳಿಯ ಬಯಲೊಪ್ಪಿತ್ತು ಪಟ್ಟಣದ ವನದೆಡೆಯೊಳ್
ವ. ಮತ್ತಮಲ್ಲಿ
ಕರಿಗಳ್ ಬಾಳ್ಗಂಬದೊಳೊಪ್ಪಿರುತ್ತಿರ್ದುವು ಸುಳಿವ ನೀಲಮೇಘಾವಳಿಯಂತರದಿಂ ಸೆಱೆಯಿಟ್ಟಂತಾಗಿರಿಪತಿ ಸುರಪತಿಯ ಹಗೆಯ ಹರಿಬದ ಚಲದೊಳ್
ಸುರಿವ ಮದಂ ಮಳೆ ಗಂಭೀರ ರವಂ ಮೊಳಗಂಗಮಂಬುದಂ ದಂತಂ ನಿಷ್ಠುರದಿಂದೆಱಗುವ ಸಿಡಿಲಾಗಿರೆ ಕಾರ್ಗಾಲದವೊಲಿರ್ದುವಲ್ಲಿಯ ಕರಿಗಳ್
ವ. ಮತ್ತಮಾ ಪೊಱವೊಳಲ ವೈಹಾಳಿಯ ಬಯಲಿಂದೊಳಗೆ
ಧರೆಯಂ ಸುತ್ತಿದ ಜಲಧಿಗೆಪುರುಡಿಸಿ ಪುರವಳಯ ವಿಳಸಿತ ಪ್ರಾಕಾರಂಪುರಮಂ ಸುತ್ತಿರ್ಪುದು ತತ್ಪರಿಖಾತ ಜಲೌಘಮೌರ್ವವಿಹರಣದೂರಂ
ಹರಿ ಮತ್ಸ್ಯಾಕಾರದೊಳುದ್ಧುರತಮನಂ ಹತಿಸಲೆಂದು ಪಾತಾಳ ತಳಕ್ಕಿರದಿಳಿದ ತಾಣಮೆಂಬಂತಿರೆ ಪುರದಗಳಿರ್ಪುದತುಳಮತಿ ಗಂಭೀರಂ
ವ. ಮತ್ತಮನಂತರದಲ್ಲಿ
ಪಳಿಕಿನ ಕೋಂಟೆ ಬಟ್ಟದೆನೆ ಬೇವಿನ ದಂಡೆ ನಭಕ್ಕೆ ಮೀಱುವಟ್ಟಳೆ ನಿಮಿರ್ದೇಱಿ ಪಾಱುವ ಪತಾಕೆ ವಿರಾಜಿಪ ಗೊಂಟು ಗೊಂಟಿನೊಳ್ಬಳಸಿದ ಕೊತ್ತಳಂ ಸೊಗಯಿಪಾಳ್ವರಿ ಡೆಂಕಣಿ ಸಾರಮಾಗಿಯಗ್ಗಳಿಸುವ ಗೋಪುರಂ ಪುಲಿಮೊಗಂ ಮೆಱೆಗುಂ ಪುರದೊಳ್ ನಿರಂತರಂ
ನೆಗೆದ ಪತಾಕಾಪಟಕೋಟಿಗಳೊಪ್ಪಿದುವಾವಗಂ ತೊಳಲ್ದು ಬಳಲ್ದಾಖಗನ ತುರಂಗಪ್ರತತಿಗೆಗಗನಾಂಗನೆ ಬೀಸುತಿರ್ಪ ವೀಜನತತಿವೋಲ್
ವ. ಅಂತುಮಲ್ಲದೆಯುಂ
ಬಗೆವೊಡಮರಾವತಿಗೆ ಮಿಥಿಳೆಗೆಯುದಯನಗಕ್ಕೆ ಉಜ್ಜಯಂತಿಗೆ ದಿಟಮಾನಗರಿ ಗುಣೋನ್ನತಿಯಿಂದಂದ್ವಿಗುಣಂ ತ್ರಿಗುಣಂ ಚತುರ್ಗುಣಂ ಪಂಚಗುಣಂ
ಪೊಸಸೊದೆ ಕೌಮುದಿಯಂ ಪಸರಿಸೆ ಕನಕದ ಕಳಶಮಾಲೆ ಪೊಂಬಿಸಿಲಂ ಪೂರಿಸೆ ತರತರದಿಂದಂ ರಾಜಿಸುತಿರ್ಪುವು ಸೋಮಸೂರ್ಯವೀಧಿಗಳದಱೊಳ್
ವ. ಆ ವೀಧಿಗಳೊಳಗೆ
ನಯದಿಂ ಮಾಱುಗುಡುವ ಕೊಳ್ವ ಯತ್ನಪೂರ್ವಕದೊಳಿರ್ಪ ಘನಧನಿಕರ ಪಙ್ತಿಯ ಮುಂದೆ ಸಂದಣಿಸಿ ವಿಕ್ರಯ ನವ ಕಳಮಾದಿಧಾನ್ಯರಾಶಿಗಳೆಸೆಗುಂ
ವ. ಅನಂತರಮಲ್ಲಿ
ಪರಿಮಳದಾಡುಂಬೊಲನಿದುವರವಿಟರ ವಿಶಾಲ ಲೋಲ ಲೀಲಾಸ್ಥಲಮಾತುರಿಸುವ ತುಂಬಿಗಳೌತಣದರಮನೆಯೆನೆ ಪುಷ್ಪವಿಕ್ರಯಸ್ಥಲಮೆಸೆಗುಂ
ಭರದಿಂ ಪೂಮಾಲೆಗಳಂತರದಿಂ ಪಿಡಿದೆತ್ತಿ ನಿಂದ ಶಶಿಮುಖಿಯರ್ ಬಂಧುರ ಶಶಿಕಳೆಗಳನೀವಂತಿರಿರ್ದರಾ ವಿಟಚಕೋರ ಸಂಗತಿಗಾಗಳ್
ವ. ಮತ್ತೊರ್ವಳ್
ವರಮಲ್ಲಿಗೆ ಮೊಲ್ಲೆಗಳೊಳ್ಬೆರಸಿದ ಮಧುಕರಕದಂಬದಿಂದಂ ನೀಲೋತ್ಕರಮಂ ಮೌಕ್ತಿಕಮಂ ಪೋಲ್ತಿರೆ ಮೆಱೆದಳ್ ಮಾಲೆಗಾರ್ತಿ ಮಣಿಗಾರ್ತಿಯವೋಲ್
ವ. ಆ ಮಾಲೆಗಾರ್ತಿಯರ ನಡುವೆಯೋರ್ವ ಪಣ್ಯಾಂಗನೆಯಿರೆ ಕಂಡು
ನಗೆಗಣ್ಗಳ ಕಾಂತಿಯ ಸೆಳ್ಳುಗುರ್ಗಳ ಕಾಂತಿಯ ಕರದ್ವಯದ ಕಾಂತಿಯ ಮಾಲೆಗಳಂ ಹೊಸಹೂವಿನ ಮಾಲೆಗೆತ್ತು ಬೆಲೆಗೊಟ್ಟು ಕೊಂಡು ನಗಿಸಿದನೊರ್ವಂ
ವ. ಅಂತುಮಲ್ಲದೆ
ಎತ್ತಿದುದೊಂದು ಮಾಲೆ ಪೊಸಪೂವಿನ ಬಿಲ್ಲವೊಲಾಗೆ ಮೀಱಿ ಬೆಂಬಿತ್ತುವ ನೋಟಮಂಗಜನ ಬಾಣದವೋಲಿರೆ ಕಾಯಕಾಂತಿ ಸೈತೊತ್ತಿದ ಮೌರ್ವಿಯಂತಿರೆಸಲೆಂದು ಯುವೋನ್ಮೃಗಮಂ ಕಱುತ್ತು ಕೋಲೆತ್ತುವ ಬೇಂಟೆಕಾರ್ತಿಯರವೋಲೆಸೆದರ್ ಮಿಗೆ ಮಾಲೆಕಾರ್ತಿಯರ್
ವ. ಮತ್ತಮಲ್ಲದೆಯುಮಾ ಪುರದಲ್ಲಿ
ಎಸೆಯೆ ಪುರಂಧ್ರಿಯರ್ ಪಡೆದು ಸಂಗಮಿರ್ದು ಮನೋನುರಾಗದಿಂದಸುವೆಯಕಲ್ಗಳಂ ತೊಳೆದು ಚಂದನಮಂ ಪನಿನೀರ್ಗಳಿಂದೆ ಚಾರಿಸಿ ಹಿಮಚೂರ್ಣಮಂ ತಳಿದು ಕಂದುಗಳಂ ಪಿಡಿದೌಂಕಿ ನೂಂಕಿದರ್ದೆಸೆ ದೆಸೆಗೆಲ್ಲ ಕಂಪೆಸಗೆ ಗಟ್ಟಿಮಗುಳ್ಚುತೆ ಗಟ್ಟಿವಳ್ತಿಯರ್
ಸುಳಿಗುರುಳಾಡೆ ತೋಳ್ಗಳೆಡೆಯಾಡೆ ಬೆಮರ್ ಮಿಗೆ ಮೂಡೆ ಸುಯ್ಯೆಲರ್ಮಿಳಿರೆ ಕುಚಂಗಳೊತ್ತರಿಸೆ ಕಕ್ಷಪುಟಂ ನಸುದೋಱೆ ಮೇಲುದಿಂಬಳಿಯೆ ಕರಂ ಕರಂ ಕೊರಗೆ ಸೋರ್ಮುಡಿ ಲಂಬಿಸೆ ಕರ್ಣಪೂರಿತೋತ್ಪಳಮೊಲೆದಾಡೆ ಗಟ್ಟಿಗಳನಂದು ಮಗುಳ್ಚಿದರಿಂದುವಕ್ತ್ರೆಯರ್
ಚಂದನಗಂಧಕ್ಕುಂ ವದನೇಂದೀವರ ಪರಿಮಳಕ್ಕಮೆಱಗುವ ಭೃಂಗೀವೃಂದಮನುಱೆ ಸೋವುತ್ತುಂಮಂದಯ್ಸಿ ಮಗುಳ್ಚಿ ಗಟ್ಟಿವಳ್ತಿಯರೆಸೆಗುಂ
ಬೆಳಗಿನ ಬಿಂಬಂಗಳನಂತಳವಡೆ ತರತರದಿನಿಳಿಪಿದಂತಿರ್ದುವು ನಿರ್ಮಳ ಪಾತ್ರಾಕುಲದಿಂದಂತೊಳತೊಳಗಿರುತಿರ್ಪ ಕಂಚುಗಾಱರ ಪಸರಂ
ಚಾರುತರ ವಿಮಳ ಮೌಕ್ತಿಕಹಾರಾದಿ ಸಮಸ್ತರತ್ನರಾಶಿಗಳಿಂದಂನೀರೋಡಿದ ರತ್ನಾಕರದೋರನ್ನಮದಾಯ್ತು ರನ್ನವಸರಂ ಪುರದೊಳ್
ತೀವಿರ್ಪಶ್ವಾವಳಿಯ ಗಜಾವಳಿಯ ನರಾವಳಿಗಳ ವಿಕ್ರಯದಿಂದಂಭಾವಿಸೆ ದೂಸಿಗವಸರಂಮೂವರ್ ರಾಯರನೆ ಮಾಱುವಂತೆಸೆದಿರ್ಕುಂ
ತನತನಗೆ ಪೊನ್ನರಾಶಿಯನನವರತಂ ಮುಂದುಗೊಂಡನೇಕ ಕುಬೇರರ್ಜನಿಯಿಸಿ ನಿಂದಂತಿರ್ಪುದುಕನಕವ್ಯವಹಾರದಿಂದೆ ವೈಶ್ಯಕದಂಬಂ
ವ. ಮತ್ತಮಾ ಪುರದಲ್ಲಿ
ನೀಲದ ಪಚ್ಚೆಯ ಪವಳದಶಾಲೆಗಳ ಮರೀಚಿಯಂ ಪುರಂದರಧನುಗೆತ್ತಾಲೋಕಿಸಿ ನವನರ್ತನಲೀಲೆಯನೊಳಕೊಳ್ವುವಲ್ಲಿ ಪುರದ ನವಿಲ್ಗಳ್
ಬೆಳೆಬೆಳೆಪ ಸುಧಾಧವಳಿತನಿಳಯಂಗಳ ಧವಳಕಾಂತಿಯಂ ಕೌಮುದಿಗೆತ್ತೆಳಸುತ್ತಿರ್ಪುವು ಪಗಲುಂಬಳಸಿ ಚಕೋರಾಳಿ ಪುರದ ನಿಳಯದೊಳೆಲ್ಲಂ
ವ. ಅಂತುಮಲ್ಲದೆ
ಒದವಿದ ಮುತ್ತಿನ ಮಾಣಿಕ್ಯದ ಗೋಮೇಧಿಕದ ಪುಷ್ಯರಾಗದ ವೈಡೂರ್ಯದ ವಜ್ರದ ಪಚ್ಚೆಯ ಪವಳದ ನೀಲದ ಕಳಶದಿಂ ಶಿವಾಲಯಮೆಸೆಗುಂ
ಶ್ರುತಿಘೋಷಂ ಮಂತ್ರಘೋಷಂ ನತಜನಜಯಘೋಷಂ ಪುರಾಣಪ್ರಘೋಷಂಸ್ಮೃತಿಘೋಷಂ ಗೀತಘೋಷಂ ಪರಶಿವ ವಿಮಳಜ್ಞಾನಸಂವಾದಘೋಷಂಕೃತಿಘೋಷಂ ಯಜ್ಞಘೋಷಂ ಪರಿಣಯನ ಮಹೋತ್ಸಾಹವಿಸ್ತಾರಘೋಷಂಸತತಂ ತೀವಿರ್ಪುದಂತಾ ಪುರದೊಳಭವಗೇಹಾವಳೀ ವಾದ್ಯಘೋಷಂ
ವ. ಮತ್ತಮಾ ಪುರದ ರಾಜವೀಧಿಯಲ್ಲಿ
ವಿಳಸತ್ ಸೇವಾಪುರಂಧ್ರೀನಿಕರ ಚರಣಮಂಜೀರ ತನ್ಮುದ್ರಿಕಾ ಮಂಜುಳನಾದಂ ರಾಜಪುತ್ರಪ್ರಕರ ಪರಿವೃತಾಶೇಷಗೀತ ಪ್ರಣಾದಂಜಳಪಾನಾಸಕ್ತ ಮುಕ್ತದ್ವಿಪಕುಲ ನಿಗಳವ್ರಾತ ಸಂಭೂತ ನೂತ್ನೋಜ್ವಳನಾದಂ ಪೊಣ್ಮುತಿರ್ಕುಂ ನರಪಯುತ ಕವೀಂದ್ರಾಸ್ಯ ಸಂಸ್ತೋತ್ರನಾದಂ
ತಿಂತಿಣಿಪ ನಿಳಯದಿಂ ಜನದಿಂ ತರದಿಂದೆಸೆವ ವೀಧಿಯಿಂ ನೃಪಕುಲದಿಂದಂ ತರುಣೀತತಿಯಿಂ ತಾನಿಂತೊಪ್ಪುವುದಿಳೆಯೊಳೋಪಪ್ರಸ್ಥಪುರಂ
ಶ್ರೀ ಪರಮೇಶ್ವರಾಂಘ್ರಿ ಸರಸೀಜಮಧುವ್ರತನುದ್ಘತೇಜನುರ್ವೀಪತಿ ಸರ್ವದಿಗ್ಭರಿತ ಕೀರ್ತಿಯುತಂ ವರಭೂಭುಜಂ ಜಗದ್ದೀಪಕನತ್ಯುದಾರನತಿಧೀರನತಿಸ್ತುತಿಪಾತ್ರಗೋತ್ರನಂತಾ ಪುರನಾಥನೊಪ್ಪುವನುದಾತ್ತಗುಣಂ ಗಿರಿರಾಜನುರ್ವಿಯೊಳ್
ಪರಭೂಪಾಲ ವಿಶಾಲ ಮೌಳಿಮಣಿಸಂಘಾತ ಪ್ರಭಾಪುಂಜವಿಸ್ತರಪಾದಂ ನತ ಸರ್ವಲೋಕನಭಯಂ ತೀವ್ರಪ್ರತಾಪಂ ಮಹೀಧರರಾಜಂ ಮಹಿಮಾಂಬುರಾಶಿಯಚಳಂ ಭರ್ಗಪ್ರಿಯಂ ಭೋಗಭಾಸುರನುದ್ದಾಮಗುಣಂ ಪ್ರಚಂಡಭುಜನೊಪ್ಪಿರ್ಪಂ ನಗಾಧೀಶ್ವರಂ
ಎಱಗದ ಭೂಪರಿಲ್ಲ ಬೆಸಕೆಯ್ಯದ ರಾಜಕುಮಾರರಿಲ್ಲ ಕೂರ್ತಱಿಯದ ಪೆಣ್ಗಳಿಲ್ಲ ತಲೆವಾಗದ ಚಾಗಿಗಳಿಲ್ಲ ತಳ್ತು ಕುಕ್ಕುಱಿಸದ ವೀರರಿಲ್ಲ ನತರಾಗದ ಬಲ್ಲಿದರಿಲ್ಲ ಕೀರ್ತಿಯಿಂತುಱುಗದ ದಿಕ್ಪ್ರತಾನಮಣಮಿಲ್ಲೆನೆ ಬಾಳ್ವನಗಾಧಿನಾಯಕಂ
ಆತನ ಪುಣ್ಯವಲ್ಲಭೆ ವಿರಾಜಿತೆ ಪೂಜ್ಯೆ ಪರಾಪರೈಕ ವಿಖ್ಯಾತೆ ಪತಿವ್ರತಾಗುಣವಿಭೂಷಣೆ ಸಲ್ಲಲಿತಾಂಗಿ ಸತ್ಯೆ ಶೈವಾತುರೆ ಶಾಂತೆ ಶಾಶ್ವತೆ ಶುಭಾಚರಣಾನ್ವಿತೆ ಮಾನ್ಯೆ ಸದ್ಗುಣವ್ರಾತೆ ವಿಳಾಸ ವಿಭ್ರಮ ಕಳಾನಿಧಿ ಮೇನೆಯೆನಿಪ್ಪಳುರ್ವಿಯೊಳ್
ವ. ಇಂತು ಪಿತೃಗಳ ಮನದೊಳ್ ಪುಟ್ಟಿದ ಸಕಲ ಗುಣಾಲಂಕೃತೆಯಪ್ಪ ಮೇನಾದೇವಿ ನಿಜವಲ್ಲಭೆಯಾಗೆ ನಿಶ್ಚಿಂತತೆಯಿಂದಿರ್ವರುಂ ಪರ್ವಿದ ಹರ್ಷಕ್ಕಿಂಬು ಗೊಟ್ಟು ನಲಿನಲಿದು ಕೆಲವು ದಿನಂ ಸಮಸುಖದೊಳಿರ್ದುಂ ಮೈನಾಕನೆಂಬ ಕುಮಾರನಂ ಪಡೆದು ಸಕಳಸಾಮ್ರಾಜ್ಯಭರಿತ ದಿಗ್ವಳಯನಾಗಿ ಅಪ್ರತಿಹತ ಪ್ರತಾಪಭೂಷಣನೆನಿಸಿಯೋಷಧಿ ಪ್ರಸ್ಥಪುರಕ್ಕೆ ಮಲಯಜತಿಲಕದಂತೆ ವಿರಾಜಿಸುವರ ಮನೆಯ ಸಭಾನಿಳಯದೊಳ್ ಪ್ರಭಾವಳಯಮೆನಿಸಿದ ನವಕನಕ ಮಣಿಗಣಭಾಸುರ ನಿವಾಸಭದ್ರಾಸನಮಂ ದುಷ್ಟವಿದ್ವಿಷ ವಿದ್ರಾವಣನೆನಿಪ್ಪ ಶೈಲರಾಜನವಷ್ಟಂಭಿಸಲೊಡಂ, ಸಿಂಹಾಸನದಿರ್ಕೆಲದೊಳ್‌ನಿಂದ ವೀರಲಕ್ಷ್ಮಿ ವಿಜಯಲಕ್ಷ್ಮಿಯರ್ ಸಕಲ ಭೂಪಾಲರ ಸುಕೃತ ಬೀಜರಾಜಿಗಳಂ ಜಗದ್ವಿಜಯವಲ್ಲಭೈಕಪಟ್ಟಕ್ಕೆ ವೀರಸೇಸೆಯನಿಕ್ಕುವಂತೆ ಬಿಂಕದಿಂ ಕೊಂಕಿ ನಿಂದು ಕಂಕಣ ಝಣಝಣತ್ಕಾರಂ ಸಭೆಯ ಕಿವಿಗೆ ಸವಿಗಳಂ ಸಾಲಿಡೆ ಸೂಳಱಿದಿಕ್ಕುವ ಚಾಮರ ಗ್ರಾಹಿಣಿಯರೊಳಂ, ಮತ್ತಮಾಸ್ಥಾನಮೆಂಬ ನೀರ್ ತೆಗೆದ ರತ್ನಾಕರದೊಳಲ್ಲಲ್ಲಿ ತರತರಂಬಿಡಿದು ಗುಡಿಸಿದ ರತ್ನರಾಶಿಗಳಿವೆಂಬಂತೆ ಮಣಿನಿಕರಖಚಿತಮಕುಟಕೋಟಿಗಳ್ ಮೆಱೆಯೆ ಬಹುರತ್ನಕದಂಬಕಾಂತಿ ಮಂಡಳಿಸೆ ಪರಿವೇಷಂಗೊಂಡ ರವಿಮಂಡಲದ ಹಿಂಡುಗಳಂತೆ ತೆಕ್ಕನೆ ತೀವಿ ಕಿಕ್ಕಿಱಿಗಿಱಿದು ಕುಳ್ಳಿರ್ದ ಲಾಳ ಗೌಳ ಚೋಳ ಕೇರಳ ಪಾಂಡ್ಯ ಪಲ್ಲವ ಮಗಧ ಮಾಳವ ವಂಗ ಕಳಿಂಗ ಬಂಗಾಳ ತೆಲುಂಗ ಗುರ್ಜರ ಹಮ್ಮೀರ ನೇಪಾಳರ್ ಮೊದಲಾದ ರಾಜಪುತ್ರರ ಪಙ್ತಿಗಳೊಳಂ, ಮತ್ತಮಾ ಶೈಳಪತಿಗೆ ನೆನೆವ ಮನಂ, ನುಡಿವ ನಾಲಗೆ, ನೋಡುವ ಕಣ್, ಕುಡುವ ಕೆಯ್, ಪಿಡಿವ ಕೈದುಗಳೆನಿಸಿ ಸುರಗುರುವಿನ ಬುದ್ಧಿಯೆಲ್ಲಂ ದೇವಲೋಕ ವಿಳಸಿತಮೆಂದೇಳಿಸಿ ದೈತ್ಯಗುರುವಿನ ಮಂತ್ರಮನ ಧೋಭುವನ ವಿಳಸಿತಮೆಂದಧಃಕರಿಸಿ ನಿಜಮಂತ್ರಶಕ್ತಿಯಿಂ ಸರ್ವೋರ್ವೀಧರ ನಿಕಾಯಮಂ ಕಾಲ್ಗೆಱಗಿಸಿಕೊಳ್ವ ಮಂತ್ರಿಗಳ ಮಂತಣದೊಳಂ, ಮತ್ತಮೊತ್ತರದಿನೆತ್ತಿ ನಡೆವೆಡೆಯೊಳರಿರಾಯರ ಗುಹೆ ಗಹ್ವರಂ ಬೆಟ್ಟಗಟ್ಟ ಬಿದಿರ್ಬೆತ್ತದಿಂದೆತ್ತಲುಂ ಮುತ್ತಲರಿದೆನಿಸಿದರಿ ಬಿರುದಿನ ಗಿರಿದುರ್ಗಂಗಳಂ ವಜ್ರಧರನಂತಡಿಸಿ ಘುಡುಘುಡುಸಿ ಪುಡಿಗುಟ್ಟುವ, ಮತ್ತಂ ಸಕಲತರುನಿಕರದಿಂದಿಡಿದಿಡಿದುರ್ವಿ ಕೊರ್ವಿ ಪರ್ಬಿದ ಮರ್ಬಿಂದಗುರ್ವಿಸುತ್ತಪ್ರತಿಹತವೆನಿಸಿ ದುಷ್ಟ್ರವೇಶಮಾದ ವನದುರ್ಗಂಗಳಂ ದಾವಾನಳನಂತಟ್ಟಿ ಮುಟ್ಟಿ ಸುಟ್ಟುರಿಪುವ, ಮತ್ತಮಲ್ಲದೆಯುಂ ನಾಲ್ಕುಂ ದೆಸೆಗಳೊತ್ತರದಿಂ ಸುತ್ತಿ ಮುತ್ತಿ ನಿಬಿಡತರ ನಿರ್ಘೋಷ ಪ್ರಭೂಷಣ ಲೋಲಕಲ್ಲೋಲ ಮಾಲಾಸಂಘಟ್ಟನ ಸಮದ್ಭೂತಸಲಿಲ ಪೂರ್ಣಮಾದ ಜಲದುರ್ಗಂಗಳಂ ಬಡಬಾನಳಂತೆ ನಾಡೆ ಪೀರ್ವ, ನಿಜಭುಜಪ್ರತಾಪಂ ರೂಪುಗೊಂಡಂತೆ ತಂಡತಂಡದೊಳ್ ಕುಳ್ಳಿರ್ದ ದಂಡನಾಥಯೂಥದೊಳಂ; ಮತ್ತಂ ನಿಜಮಂದಿರದ ರಸಿಕರ ಗಾಯಕರ ಗೋಷ್ಠಿಯೊಳ್ ಪುಟ್ಟಿದ ರಸಕಾವ್ಯಗಾನಮನುಱೆ ಕೇಳ್ದು ಸವಿವ, ಮುಖಮಂಡಲದ ಲಲಿತಲಾವಣ್ಯಂ ಕಮನೀಯಕಾಂತಿಯಂ ಕನ್ನಡಿಯೊಳ್ ಕಳ್ದು ನೋಳ್ಪ, ಸಖೀಜನಂ ಕಲಿಸಿದ ಸುಖಪ್ರತಿಕೂಲವಚನಮಂ ಮುಖದ ಮುನಿಸುಮಂ ಪ್ರಿಯ ದರ್ಶನದಿಂ ಮುನ್ನಮೆ ಮಱೆದು ನಲ್ಲನೊಳ್ ಸಲ್ಲೀಲೆಯಿಂ ನೆರೆವ, ಕೇಳೀವನದ ಬಿನದಕ್ಕೆ ಇನಿಯಂ ಪೋದನಿತು ಬೇಗಮಂ ಸೈರಿಸಲಾಱದೆ ಪರಿತಂದು ಸೆಜ್ಜೆವನೆಯ ಸಿರಿಮಂಚದೊಳ್ ಕುಳ್ಳಿರ್ದು ಬಳ್ಳಿವರಿವ ನೇಹಂ ಕುಡಿನಿಮಿರೆ ಸುರತಸಮಯದೊಳಿನಿಯನಾಡಿದ ಸವಿನುಡಿಗಳನುಸಿರ್ದುಸಿರ್ದು ಸವಿ ಸವಿದಾಲಿಸಿ ಪುಳಕಿಸುತುಂ ಕೆಲಬಲನಂ ನೋಡಿ ಭಿತ್ತಿಯ ಚಿತ್ರಂ ಕಾಣ್ಗುಮೆಂದು ನಾಣ್ಚಿ ನಿಲುತ್ತೆ ತಡೆದ ನಲ್ಲನಂ ಕಣ್ಮುಚ್ಚಿ ನೆನೆದು ಮನದ ಕಣ್ಣೊಳ್ ಸನ್ನೆಗೆಯ್ದು ಬುದ್ಧಿಯಿಂ ಬರಿಸಿಯಹಂಕಾರದಿಂ ಪಿಡಿದು ಚಿತ್ತದೊಳ್ ನೆರೆದು ಭಾವರತಿ ಒಲಿದು ಬಂದಂತೆ ಬಗೆದು ಕೆಣ್ದೆಱೆದು ಕಾಣದೆ ಬಯಲನಪ್ಪಿದ ತೋಳ್ ಬಂಜೆಯಾಗೆ ಬಾಡಿದ ಲತೆಯಂತೆ ಕಂದಿ ಕುಂದುವ ಪೊಳ್ತುಮಱೆಯಿಲ್ಲದೆ ಪೊಸಂತಿಲಂ ಪೊಱಮಡಲಱಿಯದೋಲಗಕ್ಕೆ ಪೋಪಲ್ಲಿ ದಾದಿಯ ಸೆರಗಂ ಪಿಡಿದು ನಡೆವಲ್ಲಿ ರಾಜವೀಧಿಯೊಳ್ ಸುಳಿವ ಜವ್ವನಿಗರಂ ಕಂಡು ಪೊಲಂಬುಗೆಟ್ಟ ಪುಲ್ಲೆಯಂತೆ ದೆಸೆದೆಸೆಗೆ ಬೆರ್ಚುವ ನುಡಿಸಿದ ವಿಟಂಗೆ ಮೌನಮನುತ್ತರಂಗುಡುವ, ಸಮದೃಷ್ಟಿಯಾಗೆ ಮಿಂಚು ಪಳಂಚಿದಂತೆ ಕಣ್ಮುಚ್ಚುವ, ಎಸೆವ ಸಭೆಯೊಳ್ ನಸು ಮುಸುಂಕು ನಾಡೆ ಮೆಱೆಯೆ ಮಱೆಗೊಂಡು ಕುಳ್ಳಿರ್ಪಲ್ಲಿ ರಾಜಪುತ್ರರ್ ನೆವದಿಂ ಸೋಂಕಿ ಭೀತಿಯಿಂ ಬೆಮರ್ವ, ಸಾತ್ವಿಕರಸಂ ಪುಟ್ಟಿ ಸನ್ನೆಯಱಿಯದ ಸರಸವಱಿಯದ ಜಾಣಱಿಯದ ಕೇಣವಱಿಯದ ನಿಲವು ನಿರ್ವಿಕಾರಸುಖಮನೀಯೆ ಕಾಮಸುಖಕ್ಕೆ ಕಣ್ ಬಂದಂತೆ ಸೌಕುಮಾರ್ಯಕ್ಕೆ ಸವಿಯೇಱಿದಂತೆ ಆಲಿಂಗನಕ್ಕೆ ಅವಯವಂ ಬಂದಂತೆ ಚೆಲ್ವಿಂಗೆ ಮೊಲೆಮೂಡಿದಂತಲ್ಲಲ್ಲಿ ಕುಳ್ಳಿರ್ದ ಬಚ್ಚ ಬಱಿಯಚ್ಚಸುಖದ ಪಚ್ಚಪಸಿಯ ಪೊಚ್ಚ ಪೊಸ ಹರೆಯದ ಮುಗ್ಧಾಂಗನೆಯರೊಳಂ; ಮತ್ತಂ ನಿಳಯಾಂಗಣದೊಳ್ ಸುಳಿವ ವಿಟನಂ ನೋಟದೊಳೊಳವುಗಿಸಿ ಕೂಟದೊಳ್ ಕೊಸಱಿ ಬೇಟದೊಳ್ ಬಳೆಯಿಸಿ ನೆರೆವ, ಪರಿಮಿತದ ಮೋಡಾ ಮೋಡಿಯನುಭವದೊಳ್ ವಲ್ಲಭನ ಮನಂ ಪಲ್ಲಟಿಸುವ ಕಾಲಮನಱಿದು ಕಡುಮುಳಿದ ಖಾತಿಮಿಕ್ಕು ಪ್ರಣಯ ಕಲಹಂ ಕೈಗಣ್ಮೆ ಕಂಡಂಜಿ ಕಾಲ್ಗೆಱಗಿದ ಕಾಂತಂಗೆ ಕಾರುಣ್ಯಮಂ ನೀಡಿ ಕೂಡುವ ಸುರತಚಂದ್ರೋದಯದೊಳ್ ಕಾಮ ಸುಖಾಬ್ಧಿಯುರ್ಕಿ ಪರಿಯೆ. ಗಾಢಾಲಿಂಗನಂ ತೆರಪುಗುಡದಿರೆ ಸರ್ವಾಂಗಮಂ ಪ್ರತ್ಯಂಗದೊಳ್ ಮೇಳಯಿಸಿ ಕುಸುಮಾಯುಧ ಸುಖತರಂಗಿಣಿಯ ಸುಳಿಯೊಳ್ ಮನಂ ಮುಳುಂಗಿರ್ದ ಸುಖಸಮಯದೊಳರಮನೆಯ ಸೂಳಾಯ್ತರ ಸರವೆತ್ತಿ ಸಾಱುವ ದನಿಯಂ ಭೋಂಕನೆ ಕೇಳ್ದು ಮುಗಿಲ ದನಿಗೇಳ್ದ ಮರಾಳನಂತೆ ಮನಂಗುಂದಿ ಕೂಟದ ಕೇಡಿಂಗೆ ನಾಡೆ ನೊಂದು ಮನದಪ್ಪು ಸಡಿಲದೆ ತನುವಿನಪ್ಪು ಸಡಿಲ್ದು ಸಂಗಸುಖಮಂ ಪಿಂಗಲಾಱದೆ ಕಾಮನ ಬಾಣಕ್ಕೆ ಗುಱಿಯಾಗಿ ಮಱುಗಿ ಮಲ್ಲಳಿಗೊಂಡು ಮೆಲ್ಲನೇಳ್ದು ಮುಂದುಗೆಟ್ಟಂತಂತೆ ಸಿಂಗರಿಸಿ ಸಿಡಿಮಿಡಿಗೊಂಡು ನಡೆತರ್ಪಾಗಳ್ ಮುಡಿಯ ಭಾರಕ್ಕೆ ಕೊರಲ್ ಕೊಂಕೆ ನೆಲೆಮೊಲೆಯ ಬಿಣ್ಪಿಂಗೆ ಬಡನಡು ಬಳ್ಕೆ ನಿತಂಬಭಾರಕ್ಕೆ ಮೆಲ್ಲಡಿ ಮಲ್ಲಳಿಗೊಳ್ಳುತ್ತಿರೆ ನೇವುರದ ನುಣ್ದನಿಗೆ ಗಾವಱಿಸುವ ವಿಟರ ನೋಟಮಂ ಜಡಿವಂತೆ ಪಾದ ಮುದ್ರಿಕೆ ಪಳಂಚೆ ಕಡೆಗಣ್ಗಳ ಕಾಂತಿಯೊಳೆಳಲ್ವ ನವಜವ್ವನಿಗರಂ ನಗುವಂತೆ ಸೂಕ್ತಿಯೊಡನೆ ಸೂಸುವ ಸುಲಿಪಲ್ಲ ಬೆಳಗು ಬೀದಿವರಿಯೆ ನಡೆತಂದೊಡ್ಡೋಲಗಮನೊಟ್ಟಯಿಸಿ ಪೊಕ್ಕು ಮಕುಟವರ್ಧನರಂ ಮರುಳ್ಗೊಳಿಸುತುಂ ಮಲೆದು ಕುಳ್ಳಿರ್ದ ಮಧ್ಯಮ ನಾಯಕಿಯರ ನಿಕರದೊಳಂ; ಮತ್ತಮನುರಾಗಮೇಱಿ ಮನಂದಂದು ಬಂದ ವಿಟರ್ಗುನ್ನತಾಸಮನಿತ್ತು ಮನ್ನಿಸಿ ಮಣಿದು ಸಜ್ಜೆವನೆಗುಯ್ದು ಸಜ್ಜನಸ್ನೇಹದಿಂ ಸಾಗಿಸಿ ನೋಡಿ ಭೋಗದೊಳ್ ಬೋಳಯಿಸಿ ರಾಗದಿಂ ಮೇಳಯಿಸಿ ಮುಂದೆವಾಳಂ ಮೆಯ್ಸಂದೊಂದೆರಳ್ ಬಂಧದನುಭವದೊಳ್ ಮಂದಯಿಪ ಸುಖಮನಿತ್ತು ನೆತ್ತದೊಳ್ ಬಿತ್ತರಂಬಡೆದು ಚದುರಂಗದೊಳ್ ಚಾತುರ್ಯಮನಿತ್ತು ಓದಿನೊಳ್ ಮಾಧುರ್ಯಂಬಡೆದು ಪಾಡಿನೊಳ್ ಪರಿವಡೆದು ನುಡಿಯೊಳ್ ನಯಂಬಡೆದು ವೀಣೆಯೊಳ್ ಜಾಣಂ ಮೆಱೆದು ಉಪಚಾರದೊಳೊಯ್ಯಾರಂ ಬಡೆದು ಇಚ್ಛೆಯೊಳ್ ಕೆಚ್ಚುಗಟ್ಟಿ ಸಿಂಗರದೊಳ್ ಸೊಬಗುವೆತ್ತು ವಿಳಾಸದೊಳ್ ವಿವೇಕಂಬಡೆದು ನಡೆದು ಬಂದರಮನೆಯಂ ಪುಗುವಾಗಳ್ ಮುಖಮಂಡಲಂ ಚಂದ್ರಮಂಡಲಮನಿಳಿಕೆಗೆಯ್ಯೆ, ಪುರ್ವಿನ ಕೊರ್ವು ಕರ್ವುವಿಲ್ಲಂ ಕೀಳ್ಮಾಡೆ ಕಡೆಗಣ್ಣ ಕಾಂತಿ ಕುಸುಮಾಸ್ತ್ರಮಂ ಕೆದಱೆ ಕರ್ಣಾಭರಣಂ ರವಿಕಿರಣಮನನುಕರಿಸೆ ಉಟ್ಟ ಬಿಳಿದು ಬೆಳ್ದಿಂಗಳಂ ಬೀಱೆ ಪಿಡಿದ ಲೀಲಾಬ್ಜಂ ನೂತನಂಬಡೆಯೆ ನೇವುರದ ದನಿ ನೆಲನನುಗ್ಗಡಿಸೆ ಕಂಕಣ ಝಣತ್ಕಾರರವಂ ಅರಸುಮಕ್ಕಳಂ ಜಡಿಯೆ ವಿಳಾಸದಿಂ ಪೊಕ್ಕು ಮೆಯ್ಯೊಳ್ ಪೂಸಿದ ಸಿರಿಗಂಧದ ಕಕ್ಷದೊಳಳವಟ್ಟ ಸಾದಿನ ಕಿವಿಯೊಳ್ ಮಗಮಗಿಪ ಮೃಗಮದದ ಮುಡಿದ ಕದಂಬಪ್ರಸೂನದ ಬೆರಕೆಗಂಪಿಗುರವಣಿಸಿ ಮುಸುಱಿ ಮೊರೆದು ಮಂಡಳಿಸಿ ಮೌಳಿಚಳನದೊಳೇಳುತೆಱಗುವ ಮಧುಕರನಿಕರಂ ಸೌಭಾಗ್ಯಲಕ್ಷ್ಮಿಯರಿಕ್ಕುವ ನೀಲದ ಸೀಗುರಿಯಂತಿರೆ ತರದಿಂ ಕುಳ್ಳಿರ್ದ ವಿದಗ್ಧವನಿತಾ ಸಮೂಹದೊಳಂ; ಮತ್ತಂ ಸೊರ್ಕಿನ ಸೊವಡಿಂಗೆಱಗಿ ತುಱುಗಿದ ಪರಮೆಗಳ್ ಕರಿಮುರಿವೋಗಿ ಧರೆಯ ಮೇಲುದಿರಲಗ್ರಪಲ್ಲವದಿಂ ಬೀಸಿಕೊಳ್ವ ನೆಗೆದ ತುಂತುರ್ವನಿಗಳಂ ಮುಗಿಲ ಮೆಯ್‌ಪುಗಳೇಳೆ ಪುಷ್ಕರದಿಂ ಪೂತ್ಕರಿಸುವ ಒಳಗುರ್ಕಿ ತೆರಮಸಗುವ ಮದಸಮುದ್ರದೊಡನೆ ಕ್ರೋಧಬಡಬಾನಳನಂ ಬೆರಸಿ ಸುರಿದಪುದೆಂಬಂತೆ ನೆಗೆದ ಪೊಗೆವೆರಸಿ ಕೀಳ್ಮದಂಬಿಡುವ ಕಣ್ಣಂ ಕೋಡ ಮೊನೆಗನೇಕ ಕಾಲದೊಳ್ ಬಂದ ರೂಪಂ ಪ್ರತಿಮಾನದೊಳಟ್ಟಿಕೊಳ್ವ ಕಟ್ಟಣಕದ ದುಷ್ಟಗಜಮನಗ್ರ ಪಲ್ಲವಮಂ ಪಿಡಿದೇಱಿ ಭಂಗಿಸುತ್ತುಂಗುಟಕ್ಕಾಳ್ಮಾಡಿ ಬಿದುವನಪ್ಪಳಿಸಿ ಚಪ್ಪರಿಸುತ್ತಬ್ಬರಿಸುವ ಕೊರ್ಬನುಡಿಯೆ ಕೂರಂಕುಸಮಾಗೆ ತೋಱಿ ತೊಟ್ಟು ಕೀಱಿ ಬಿಟ್ಟಿಕ್ಕುವ ಬಲ್ಪಿನ ಕಟ್ಟುಬ್ಬಟೆಯ ಬಿರುದಿನ ಹಾಹೆ ಕಾಲೊಳೊಳಲೆ ಕಡುಪಿಂ ಬಂದು ಪುರುಷಸಿಂಹಂಗಳಂತೆ ತರದಿಂ ಕುಳ್ಳಿರ್ದ ಗಜಾರೋಹಕರ ಗೊಂದಣದೊಳಂ; ಮತ್ತಂ ಮಂದುರದೊಳ್ ನಟ್ಟ ಕೆಚ್ಚಿನ ಮುಂಡಿಗೆ ಮುಱಿಯೆ ಪಾಳಾಸಂ ಪಱಿಯೆ ಪೊಱಮಟ್ಟು ನೆರವಿಯನುರವಣಿಸಿ ಪಾಯ್ದ ಬೀದಿವರಿದಾಱಿಗೊಂಡು ಸಿಕ್ಕಿದ ರೂಪಿನ ತಲೆಯೊಳ್ ನಿಳಿಲ್ ನಿಕ್ಕೆಂದು ತರ್ಗಿ ನುರ್ಗಿ ಕರ್ಬೆಕೊಡಹುವ ನಚ್ಚಿನ ಗೋವಂ ದನಿದೋಱೆ ಕತ್ತರಿಮೊನೆಗೊಂಡ ಕಿವಿಯಂ ಕೆಕ್ಕಳಿಸುವ ದಿಟ್ಟಿಯಿಂ ಕಂಗನೆ ಕನಲ್ದು ಮುಂಗಾಲಿಂ ನೆಲನಂ ಪೊಯ್ದೆಳ್ದು ಪರಿದೆಯ್ದುವ ಮುಂದೆ ಕಚ್ಚುವ ಹಿಂದೆ ಮೆಟ್ಟುವ ಕೆಲಕೆ ಚಿಮ್ಮುವ ದುಂಡಿಸಿ ನೆಗೆವ ಮಂಡಿಸಿ ನಿಲ್ವ ಮುರಿದಪ್ಪವರಿಸುವ ತರಹರಿಸಿ ಪೊಣ್ಮುವ ಪೊಱಕಾಲೊಳ್ ನಡೆವ ಸುಕಳಾಶ್ವಮಂ ಬೇಗದಿಂ ಬೆಂಗವಾಯ್ದು ರಾಘೆಯೊಳೌಂಕಿ ವಾಘೆಯೊಳ್ ನಿಲಿಸಿ ಕೆಲಬಲಕ್ಕಿಕ್ಕಿ ಸರಸಬೀದಿಯೊಳೇಱಿ ತೋಱಿ ನಳನಂ ದತ್ತಿಳನನಿಳಿಕೆಗೆಯ್ವ ಬಿರುದಿನ ಬಿಂಕದಂಕಮಾಲೆ ಕೆಲಬಲದೊಳಲಂಕರಿಸುತ್ತುಮಿರೆ ನಡೆತಂದು ಸಮುಚಿತಾಸನದೊಳ್ ಕ್ರಮದಿಂ ಕುಳ್ಳಿರ್ದ ಪಟ್ಟಸಹಣಿಯರ ಪರಿವಿಡಿಯೊಳಂ ಮತ್ತಂ ಮಲೆತು ನಿಂದು ಅಖ್ಖಡದೊಳ್ ಪೊಕ್ಕು ಬಾಹಪ್ಪಳಿಸಿ ಬಲ್ದುದೋಱಿಸಿದ ಮಲ್ಲನನುರ್ಬತ್ತೊಯ್ಯನೊಳಪೊಕ್ಕು ಮಿಕ್ಕು ಪರಿದಿಕ್ಕಿ ಮುರಿವ ಅಡುಪಾಯದಳವಿಂಗೆ ಕಡಂಗುವ ಮಲ್ಲನನಡಸಿ ತಿವಿದು ಕಡುಪಿಂ ಕೆಡಪಿ ಕೊಪ್ಪರದೊಳ್ ಕುಮ್ಮಿ ಮಂಡಿಯೊಳ್ ಮಿದಿದು ಕುದಿದು ಸದೆದು ಸಣ್ಣಿಸುವ ಚೊಕ್ಕೆಯದಾಸೆಗೆ ಪೊಕ್ಕ ಮಲ್ಲನನಿಕ್ಕಿ ಮೆಟ್ಟಿ ವಜ್ರದ ಬಳ್ಳಿಯಂತೆ ಛಡಿಕೆಯೊಳ್ ಬಿಗಿದು ಚಾಳಿಸಿ ನೂಂಕುವ ನೂಂಕೆ ಪೋಗದೆ ನಿಂದ ಸೆಳೆಹನಂ ಸೆಳೆದು ಕೆಡೆಪಿ ಪಿಡಿದೆತ್ತಿಯೊತ್ತಿ ಕುಸುಬಿ ಕುಸುಕಿಱಿದು ಪೊಸೆದು ಪೂಳ್ವ ಸಾಹಸಿತನಕೆ ಬೆರಸಿದ ಮಲ್ಲನನೊರಸಿಬಿಡುವ ಲವಣಿಸಾರದೊಳ್ ನುಣ್ಚುವ ಮಲ್ಲನನೌಂಕಿ ಪಿಡಿದು ಸುತ್ತಿ ಮುತ್ತಿ ಸೆಳೆದಿಕ್ಕಿ ಸೀಸಕದೊಳ್ ಪೊಕ್ಕು ಭುಜದೊಳಣೆದುರದೊಳ್ ತೇದು ಉತ್ತಾನಕದೊಳ್ ನಿಂದು ಸಖಾಯರ್ ಝಣಝಣರೆನೆ ಬಳಸಿ ಭಂಜಿಸುವ ಐರಾವತಂ ಮಲ್ಲವೇಷದೊಳಿದಿರಾದೊಡಂ ತೋರಹತ್ತದೊಳಂ ತಿವಿದು ತಿರುಪುವ ಸಂಚಳಿಸುವ ಮುಂಚಿ ಮೇಳವಿಸಿ ಚೊಕ್ಕೆಯದನುಮಾನದೊಳ್ ಡೊಕ್ಕರಿಸಿ ಪಿಡಿವರಿಬಿರುದಿನ ಕಲ್ಲ ಮಾನಸರಂತಿರ್ಪ ಮಲ್ಲರ ನೆರವಿಗಳೊಳಂ; ಮತ್ತಂ ಕಳನೇಱಿದಂಕಮಂಗಳೆಯೊಡ್ಡದ ಮುನ್ನಂ ಕುತ್ತಿ ಕೆಡೆಪುವ ತಳ್ತು ಗಂಟಿಕ್ಕಿ ಟೆಂಟಣಿಸುವಂತಮಂ ಸೆಳೆದು ಕೆಡೆಪುವ ಮುಳಿದು ಮೆಟ್ಟುವ ಸುಳಿದು ಸುತ್ತಿ ಬಳಸಿ ಮೊನೆದೋಱುವ ಬಿರುದಿನಂತಮನುರವಣಿಸಿ ಪೊತ್ತಿಪೊರಳ್ಚಿ ಕೊಳ್ವ ಬಿನ್ನಣಂದೋರ್ಪ ಗನ್ನದಂಕಮಂ ಬಿಡಿಸಿ ಬೆಂಬತ್ತಿ ಕುತ್ತಿ ಸುರುಳ್ಚುವುಬ್ಬಟ್ಟಿಯ ಬಿರುದಿನುಪ್ಪರವಟ್ಟ ದುಭಯಸತ್ತಿಗೆಯ ಪಗಲ ಕೈಯ್ದೀವಿಗೆಯ ಕಾಲ ಹಾಹೆಯ ಮೊತ್ತದ ಬಾವುಲಿಯ ಮಾಲೆದೊಡರ ಮಾಸಾಳ್ಗಳ ಮಂತಣದೊಳಂ; ಮತ್ತಂ ವಕ್ರೋಕ್ತಿ ಸ್ವಭಾವೋಕ್ತಿ ಪಾಕ ಲಾಲಿತ್ಯ ಗುಂಪು ಇಂಪು ರೀತಿ ನೂತನಮಾಗೆ ಗದ್ಯ ಪದ್ಯ ಕಾವ್ಯಕಳಾಪ್ರೌಢಿ ರೂಢಿವಡೆಯ ಮೆಱೆದಿರ್ದ ಸರಸಕವಿಗಳ ಸಂದಣಿಯೊಳಂ; ಮತ್ತಮಾರಭಟಿಯೊಳ್ ದೆಖ್ಖಾಳಂ ಮಿಕ್ಕು ಸಾತ್ವತಿಯೊಳ್ ಪಜ್ಜಳಂಬೆತ್ತು ಭಾರತಿಯೊಳ್ ಕಾಂತಿ ಕೈಗಣ್ಮಿ ಆಸ್ಥಾನಮಂ ಕೌತುಕರಸದೊಳ್ ಕರುವಿಟ್ಟಂತಿರಿಸುವ ಸಾಮರ್ಥ್ಯಮನೊಳಕೊಂಡು ಕುಳ್ಳಿರ್ಪ ಗಮಕಿಗಳ ತಂಡದೊಳಂ; ಮತ್ತಂ ಶಬ್ದ ಖಂಡನಮರ್ಥಖಂಡನಮನುಮಾನ ಖಂಡನಮೆಂಬ ತರ್ಕತಂತ್ರಕೋವಿದರಪ್ಪ ವಾಗ್ಮಿಗಳೊಳಂ; ಮತ್ತಂ ಮಧುರರಸ ಮೊಸರ್ವ ಪೊಸನುಡಿಗಳಂ ಕೇಳ್ವ ಸಭೆಗೆ ಕರ್ಣರಸಾಯನಮನೀವ ಮಾಧುರ್ಯ ಗುಣಂ ಮೆಯ್ಯಿಕ್ಕಿರ್ದ ವಾಗ್ಮಿಗಳೊಳಂ; ಮತ್ತವಳಿ ವಕ್ರತೆಯನೀವ ವಹಣಿ ತರಂಗಿಸುವ ತಿರುಪು ಸುಳಿಗೊಳ್ವ ಹೆಂಪು ಇಂಪಂ ಕಱೆವ ಸುಧಾರಸಗಾನಂ ನಾನಾರಸದ ಲಹಣಿಯ ರೂಪುವಡೆಯೆ ಪಾಡುವ ಗಾಯಕರೊಳಂ; ಮತ್ತಂ ಸುಗತಿಗಳಂ ಸೂಸುವ ಮದ್ದಳಿಗರಿಂ ರೂಪುರೇಖೆ ರಸಂಬಡೆವ ನೃತ್ಯನಾಯಕಿಯರಿಂ ನವೀನಗತಿಯಂ ನೀಡುವ ನರ್ತಕರಿಂ ಭಾವರಸಮನೀವ ಚಿತ್ರಕರಿಂ ಇಂತು ಗಿರಿರಾಜನೊಡ್ಡೋಲಗಮನಂತ ಗಂಭೀರಮನತುಳಪ್ರತಾಪಮನುರತರಸೌಂದರ್ಯಮನೂರ್ಜಿತವಿಳಾಸಮನನುಪ ಮೌದಾರ್ಯಮನೊಳಕೊಂಡಿರ್ದುದಾ ಪ್ರಸ್ತಾವದೊಳ್
ನುಡಿಯದಿರಾಂಧ್ರ ಕೆಯ್ಮುಗಿ ಕಳಿಂಗ ಕುನುಂಗೆಲೆ ವಂಗ ಕೇರಳಂಗೆಡೆಗುಡು ಚೋಳ ಲಾಳ ಪೆಱಸಾರ್ ಪುಗದಿರ್ ಮಗಧೇಶ ಕಾಣ್ಕೆಯಂಪಿಡಿದಿರು ಪಾಂಡ್ಯ ಬಿನ್ನವಿಸು ಮಾಳವ ಗೌಳನೆ ಪಿಂಗೆನುತ್ತಣಂಜಡಿವರಿಳೇಶರಂ ಪಡಿಯಱರ್ ಗಿರಿರಾಜ ಸಭಾಂತರಾಳದೊಳ್
ಪರಮಸ್ವಾಮಿ ಜಟಾಧರಂ ಶಶಿಧರಂ ಗಂಗಾಧರಂ ಕಾಲಸಂಹರನಜ್ಞಾನಹರಂ ಪುರತ್ರಯಹರಂ ಸೌಖ್ಯಕರಂ ಶಂಭು ಶಂಕರನಾನಂದಕರಂ ಸಮಂತೆನಗೆ ಭಕ್ತಿಜ್ಞಾನ ವೈರಾಗ್ಯಮಂಕರುಣಂಗೆಯ್ಗೊಲವಿಂದೆ ಹಂಪೆಯ ವಿರೂಪಾಕ್ಷಂ ಶಿವಾವಲ್ಲಭಂ
ಇದು ಸಮಸ್ತ ಸುರಾಸುರಮಕುಟ ಖಚಿತ ದಿನಕರಕರಾಧಿಕ್ಯ ಮಾಣಿಕ್ಯಪ್ರಭಾಪುಂಜರಂಜಿತಚರಣ ನೆನಿಪ ಪಂಪಾವಿರೂಪಾಕ್ಷ ಶ್ರೀಪಾದಕಮಲ ಮಕರಂದ ಮಧುಕರಾಯಮಾಣ ಸತ್ಕವೀಶ್ವರ ಹಂಪೆಯ ಹರಿಹರದೇವ ವಿರಚಿತಮಪ್ಪ ಶ್ರೀ ಗಿರಿಜಾಕಲ್ಯಾಣ ಮಹಾಪ್ರಬಂಧದೊಳ್ ಗಿರಿರಾಜದೇಶ ಪುರಾಸ್ಥಾನ ವರ್ಣನಂ ದ್ವಿತೀಯಾಶ್ವಾಸಂ


