I
ಗಿರಿಜಾಕಲ್ಯಾಣ
ಹೈಮಾಚಲವರ್ಣನಂ
ಶ್ರೀಮಚ್ಛೈಲೇಂದ್ರಪುತ್ರೀಗುರುತರ ಹೃದಯಕ್ಷೀರವಾರಾಶಿಚಂದ್ರಂವ್ಯೋಮಾರ್ಕೇಂದುಕ್ಷಮಾತ್ಮಾನಲಜಲಪವಮಾನಾಷ್ಟಮೂರ್ತಿಪ್ರಸಿದ್ಧಂಪ್ರೇಮಂಬೆತ್ತೀಗೆ ಸದ್ಭಕ್ತಿಯನೆಮಗಮರಾನೀಕಮಾಣಿಕ್ಯಮೌಳಿಸ್ತೋಮಾಂಘ್ರಿಜ್ಯೋತಿ ಪಂಪಾಪುರದರಸ ವಿರೂಪಾಕ್ಷನಾನಂದದಿಂದಂ
ಗೌರೀಪಾದಾಂಗುಲೀಕೋರಕಮೆಸೆವ ಕರಂ ಪಲ್ಲವಂ ಪುಷ್ಪವೃಂತಾಕಾರಂ ಮಂದಸ್ಮಿತಂ ಶಾಖೆಗಳಮರ್ದ ಭುಜಾನೀಕಮಾಸ್ಯಂ ಫಲಂ ಶ್ರೀಸಾರಂ ತಾನಾದ ಪಂಪಾಪುರದರಸ ವಿರೂಪಾಕ್ಷ ಕಲ್ಪಾಂಘ್ರಿಪಂ ವಿಸ್ತಾರಂ ಬೆತ್ತೀಗೆ ಸದ್ಭಕ್ತಿಯನೆಮಗಮೃತಪ್ರಾಯೆಯಂ ಪ್ರೀತಿಯಿಂದಂ
ಶ್ರೀ ಹೇಮಾದ್ರೀಂದ್ರ ಚೂಡಸ್ಥಿರಕರಣಸಮಾರೂಢ ಪದ್ಮಾಸನಸ್ಥಂಕೋಹಂ ಸೋಹಂಗಳೆಂಬಾ ಗಜೆಬಜೆ ಪುಗದಾನಂದಸಂವಿತ್ತು ಕಂದರ್ಪಾಹಂಕಾರಪ್ರವಿಧ್ವಂಸನಕರನಿಟಿಲಾಕ್ಷಂ ಶಿವಂ ಪಾರ್ವತೀಶಂನೇಹಂ ಕೈಮಿಕ್ಕು ಪಂಪಾಪುರಪತಿ ದಯೆಯಿಂ ನೋಡಿ ರಕ್ಷಿಕ್ಕೆ ನಮ್ಮಂ
ಮಂಗಳಮೂರ್ತಿ ಮಾನಿನಿ ಮಹೋಜ್ವಳೆ ಮಾನ್ಯೆ ಮಹಾಮಹೇಶನರ್ಧಾಂಗಿ ಮಹಾವಿರಾಜಿತೆ ಮಹಾಶಿವಭಕ್ತೆ ಮಹಾಪತಿವ್ರತೋತ್ತುಂಗೆ ಮಹಾತ್ರಿಲೋಚನೆ ಮಹಾನಿಧಿ ತನ್ನ ವಿವಾಹವರ್ಣನಾಸಂಗತಿಯೆಂದು ಮತ್ಕೃತಿಗೆ ಪಾರ್ವತಿ ಮಾೞ್ಕೆ ಮಹೋತ್ಸವಂಗಳಂ
ಎನ್ನೀ ಕಾವ್ಯಕ್ಕೆ ನಿರ್ವಿಘ್ನದಿನತುಳನವೀನಾರ್ಥವಾಕ್ಯಪ್ರಸನ್ನೋತ್ಪನ್ನಾಲಂಕಾರಮಂ ಕೂಡುಗೆ ವಿಪುಳಕಪೋಳಸ್ಥಳಾಂತಸ್ಥಳೀ ಸಂಭಿನ್ನೋದ್ಯದ್ದಾನಧಾರಾಪ್ರಬಳಪರಿಮಳಾಸಕ್ತಭೃಂಗಾವಳೀ ಸಂಪನ್ನ ಪ್ರೋದ್ಭೂತಝಂಕಾರಿತರವಮುದಿತಾನಂದವೇಶಂ ಗಣೇಶಂ
ಪುಳಕಮನೆೞ್ಬಿಸುತ್ತೆ ಹರನಂ ಪರಿದಪ್ಪುತೆ ಸಂತಸಗಳಂಬಳೆಯಿಸುತುಂ ಭವಾನಿಯ ಪಯೋಧರಮಂ ನಲಿದುಂಡು ವಕ್ತ್ರಮಂಡಲಮನಲರ್ಚುತುಂ ನಗುವ ಹೊಂಗುವ ಹಿಗ್ಗುವ ಪೊಣ್ಮುವುಣ್ಮುವಗ್ಗಳಿಸುವ ಕಾಡುವಾಡುವ ಷಡಾನನಕೃತಿಗೀಗೆ ರಾಗಮಂ
ಶಿವನ ಮನೋಹರಂ ಶಿವನ ಪುಣ್ಯಫಲಂ ಶಿವನಾಪ್ತಸಂಕುಳಂಶಿವನ ವಿಲೋಚನ ಶಿವನ ಗೋತ್ರಬಲಂ ಶಿವನೂರ್ಜಿತೋಜ್ವಲಂಶಿವನ ಸುಖಂ ಸದಾಶಿವನ ಸರ್ವಮುಖಂ ಶಿವಭಕ್ತರೆನ್ನ ಕಾವ್ಯವನತಿಸಮ್ಮದಂ ಬೆರಸಿ ಪೊರ್ದುಗೆ ತಿರ್ದುಗೆ ತಾೞ್ದಿದೞ್ಕಱಿಂ
ಘನಕವಿತಾವಿಳಾಸದೊಳೆ ಸಂದ ಮಯೂರನ ರೇಖೆ ಕಾಳಿದಾಸನ ರಸವೃತ್ತಿ ಬಾಣನ ಮೃದೂಕ್ತಿ ಹಲಾಯುಧನಾಶು ಕೇಶಿರಾಜನ ಬಗೆಯುದ್ಭಟಯ್ಯನ ಗಭೀರತೆ ಮಲ್ಹಣನೇಳ್ಗೆ ಭೋಜರಾಜನ ಜಸಮೆನ್ನ ಕಾವ್ಯರಸದೊಳ್ ನಲಿವಿಂ ನೆಲಸಿರ್ಕೆ ಸಂತತಂ
ಚತುರ ಚತುರ್ಮುಖನೆಲ್ಲಾಶ್ರುತಿಗಳನೊಲವಿಂದೆ ಕಲ್ತ ಶಿವನ ವಿವಾಹೋನ್ನತಿಯಾ ಕೃತಿಯೆಂದೆನೆ ಭಾರತಿಯೆನಗನುಕೂಲೆಯಾಗದಿರಲಣ್ಮುವಳೇ
ಕೊಂಡಾಡುಗೆ ಕಲ್ತೋದುಗೆಮುಂಡಾಡುಗೆ ಮುದ್ದಿಸುಗೆ ಮರಲ್ದಪ್ಪುಗೆ ಕೈಕೊಂಡೀ ಕಾವ್ಯಮನಗಜೆಯಗಂಡನಲಂಪಿಂದೆ ಹಂಪೆಯ ವಿರೂಪಾಕ್ಷಂ
ವ. ಎಂದಿಂತು ಬೇಡಿಕೊಳ್ವಲ್ಲಿ
ಅತುಳತರಾರ್ಥಮರ್ಥದನುವೃತ್ತಿ ಪದಂ ಪದದಿಚ್ಛೆ ಬಂಧಮೂರ್ಜಿತಪದಬಂಧ ಸಂಧಿ ನವರೀತಿ ಸುರೀತಿ ಗುಣಂ ಸದೃಕ್ಕಲಂಕೃತಿ ಸದಲಂಕೃತಿ ಪ್ರತಿಮಮೊಪ್ಪುವ ಭಾವಮನೂನ ಭಾವದುನ್ನತರಸಮೆಂದು ಸತ್ಕವಿಗಳಾಲಿಸೆ ಪೇೞ್ದಪೆನೀ ಪ್ರಬಂಧಮಂ
ಕಂದಂಗಳಮೃತ ಲತಿಕಾಕಂದಂಗಳನೂನವಾಕ್ಯಫಲ ವಿಲಸನ್ಮಾಕಂದಗಳ್ ತನಿರಸದುಕ್ಕಂದಂಗಳ್ ಸೊಗಯಿಸಿರ್ಪುವೀ ನುತಕೃತಿಯೊಳ್
ಪದ್ಯಂಗಳ್ ನವರಸ ನಿರವದ್ಯಂಗಳ್ ಸುಜನಸಂಕುಳಕ್ಕೆ ನಿತಾಂತಂಹೃದ್ಯಂಗಳ್ ಧಾರಿಣಿಗತಿಚೋದ್ಯಂಗಳ್ ಮೆಱೆಯುತಿರ್ಪುವೀ ಸತ್ಕೃತಿಯೊಳ್
ಕಾವ್ಯಂ ತಾನಿದು ನವರಸಸೇವ್ಯಂ ಗಿರಿಜಾಧಿನಾಥನುರುತರಕರ್ಣಶ್ರಾವ್ಯಂ ವಸುಧಾತರದೊಳ್ನವ್ಯಂ ಭೂತೇಶ ಭಕ್ತಜನತಾ ಭಾವ್ಯಂ
ಪೊಸತಿದು ಪಾವನಮಿದು ರಂಜಿಸುವ ಮಹಾನರ್ಘ್ಯಮಿಂತಿದೆಂಬೀ ಜಸದಿಂರಸವತ್ಕಾವ್ಯಂ ತಾಂ ರಾ-ಜಸಭೆ ಬ್ರಹ್ಮಸಭೆ ದೇವಸಭೆಗೆಸೆದಿರ್ಕುಂ
ವ. ಅದು ಕಾರಣದಿಂ
ಸೇವ್ಯಂ ಸೌಖ್ಯಂ ಪ್ರಸನ್ನ ನವರಸವಿಭವಂ ಪುಣ್ಯಪುಂಜಂ ಶುಭಂ ವಾಗ್ದೇವ್ಯಾವಾಸಂ ವಿವೇಕೋನ್ನತ ಜಲನಿಧಿ ಸಂಸಾರ ವಿಶ್ರಾಮದೇಶಂದಿವ್ಯ ಜ್ಞಾನೋಕ್ತಿಮಾರ್ಗಂ ನಿರತಿಶಯಪದಂ ಕೂರ್ತುಪೇೞ್ವೞ್ತಿಯಿಂದಂಕಾವ್ಯಂ ಕಲ್ಪಾಂತರ ಸ್ಥಾಯಿಯೆನಿಪ ನುಡಿ ಸತ್ಯಂ ಕವೀಶಾಧಿಪತ್ಯಂ
ಸುರತರುವಿನಂತೆ ಸುಜನರಸಿರಿಯಂತೆ ಸರೋಜದಂತೆ ಸುಧೆಯಂತೆ ಸುಧಾಕರ ಕಿರಣದಂತೆ ಹಂಪೆಯಹರಿದೇವನ ಕಾವ್ಯಮಖಿಳ ಸೇವ್ಯಂ ನವ್ಯಂ
ಪ್ರಿಯವಚದಂತೆ ಪುಣ್ಯತತಿಯಂತೆ ಸುಧಾಕರನಂತೆ ಕೂರ್ತ ಮುಗ್ಧೆಯ ಕಡುನೇಹದಂತಮೃತದಂತೆ ವಸಂತಕನಂತೆ ಪುಷ್ಪಮಾಲೆಯ ಪೊಸಗಂಪಿನಂತೆ ಮಲಯಾನಿಲನಂತೆ ಮರಾಳನಂತೆ ಹಂಪೆಯ ಹರಿದೇವನೊಪ್ಪಿರೆ ನಿಮಿರ್ಚಿದ ಕಾವ್ಯಮಿಳಾಜನೋತ್ಸವಂ
ನೆರೆಯೆ ಕುತರ್ಕದಿಂದರೆದು ಸಣ್ಣಿಸಿ ನುಣ್ಣಿಸಿಯಂತದಿಂದು ಪೋದರ ಕೃತಿಯೊಳ್ಳಿತನ್ಯಕೃತಿ ಪೊಲ್ಲದಿದೆಣ್ಣೆಗೆ ಬೆಣ್ಣೆ ಸಣ್ಣನೆಂಬರ ನುಡಿಬೇಡ ಪೇೞ್ವೆನತಿ ಭಾವರಸಾರ್ಥದೊಳಾತ್ತ ಛಂದಮಂಪರಸುಖವೃಂದಮಂ ಸೊಗಯಿಪಂದಮನೀ ಸುಕರಪ್ರಬಂಧಮಂ
ನವರಸಮತಿಭಾವಾರ್ಥಂನವೀನಪದಭರಿತಮಿಂತಿದೆನೆ ಸತ್ಕೃತಿಯಂತವೆ ಪೇೞ್ವುದು ಪೇೞದೊಡೇಂಕವರ್ವರೆ ಕೋಪಿಪರೆ ನಿಂದಿಪರೆ ದಂಡಿಪರೇ
ಕೇಳಲೊಡಂ ಕಿವಿ ಸವಿಯೊಳಗಾೞದೊಡಂ ತನ್ಮನಂ ಮುೞುಂಗದೊಡಂ ಸೌಖ್ಯಾಲಂಬಿಯೆನಿಪ ಚಿತ್ತಂಲೀಲೆಯೊಳವಗಾಹಮಿರದೊಡದು ಸತ್ಕೃತಿಯೇ
ವ. ಅಂತುಮಲ್ಲದೆಯುಂ
ಓದಿದೊಡೆ ಕಲ್ಲಮಾಲೆಯನಾದಂ ಕರ್ಬೊನ್ನ ಕಡಲೆ ವಾದಿಸೆ ರಸಮಂಸೋನಸೆಯುರ್ಕಿನ ಪುಡಿಯೆನಿಪಾ ದುಷ್ಕವಿತೆಗಳನೆಣಿಸಲೇಕೀ ಕೃತಿಯೊಳ್
ಹಱಿಗವಿಗಳ ಕಬ್ಬಂಗಳಹೊಱಗೞಿಯಕ್ಕರದ ಹೊಲಿಗೆ ಬಿರ್ಚಿದೊಡೆಲ್ಲಂಬಱಿತಾಱಿಗಬೀಱಿಗ ತಿತ್ತಱ ತತ್ತಱ ತಿಕ್ಕಸಕ್ಕಮಸ್ತವ್ಯಸ್ತಂ
ಪೆೞವನ ಕಣ್ಗಳಂಧಕನ ಕಾಲ್ಗಳಿವಿಂತೊಡಗೂಡಿ ಗಾವುದಂದಳರ್ದೊಡೆ ಬಲ್ಲಿದಂ ನಡೆದ ಮಾೞ್ಕೆಯೆನಿಪ್ಪುದೆ ಬೇಡ ಮಾಣೆಲೇಅೞಿಗವಿ ನಿನ್ನ ತನ್ನೆರವಿನೋದಿನ ಕಬ್ಬಮನೋದಿದರ್ ಸುಧಾನಿಳಯದ ಮುಂದೆ ಸತ್ಕೃತಿಯ ಮುಂದೆ ಸುಖಾಬ್ಧಿಯ ಮುಂದದೊರ್ಮೆಯುಂ
ಅದು ಘೂಕಂ ದಿವದೊಳ್ ಕಾಣದು ನಿಶ್ಚಯಮಂತೆ ದುರ್ಜನಂ ಕಾಣಂ ಕಾವ್ಯದೊಳತಿ ರಸಮನಸೂಯಾಸದನಂ ಸುಖದೂರನವನ ಮಾತೇಕಿದಱೊಳ್
ಕ್ಷುದ್ರಂಗೆ ಸಕಲಸುಜನೋಪದ್ರವರೂಪಂಗೆ ಪರರ ಕಾವ್ಯಾರ್ಥಮಂಛಿದ್ರಿಸುವಂಗತಿಶಬ್ದದರಿದ್ರಂಗಕ್ಕುಮೆ ನವೀನಕಾವ್ಯಾರಂಭಂ
ಒಳಗಱಿಯದೆ ಸತ್ಕಾವ್ಯದಕಳೆಯಱಿಯದೆ ಲಘುತರತ್ವದಿಂ ನಾಲ್ಕೆರಡಾಯ್ಕುಳಿ ಮಾತಾಡಿಯುಱೆ ಹೆಕ್ಕಳಮಿಕ್ಕಿದೊಡೊಲ್ವರೇ ಕವೀಂದ್ರಾಭರಣರ್
ಬರೆದಾಹ! ಬರೆದೆ ಭಾಪುರೆ!ಬರೆದಕ್ಕಟ ಬರೆದೆ ಲೇಸು! ಬರೆದೆಯೆನುತ್ತುಂಬಱಿದೆ ತಲೆದೂಗುವುದಱಿಂಬಱಿದಪ್ಪುದು ಕಾವ್ಯಮಱಿಯದರ ಜಾಣಿಂದಂ
ತನಗೆ ಕವಿತ್ವಮಿಲ್ಲ ಪೆಱರಂ ಪೞಿದಲ್ಲದೆ ನಿಲ್ಲನಾತನೊಳ್ಮುನಿವುದನೀತಿ ಪಂದಿ ಡುಱುಕೆಂದೊಡೆ ತಾಂ ಡುಱುಕೆಂಬುದೇ ಮಹಾವನಕರಿಯಂ ವಿದಾರಿಸುವ ಸಿಂಹಮದಂತತಿದೋಷಿಯಪ್ಪ ದುರ್ಜನರ ಕಟೂಕ್ತಿಗಂಜದೆ ಲಸತ್ಕೃತಿಯಂ ಸಲೆ ಮಾೞ್ಕೆ ಸಜ್ಜನರ್
ಗೌರೀವರಕರ್ಣಾಲಂಕಾರಂ ರಸಪೂರಮತಿಗಂಭೀರಂ ಕಾವ್ಯಂನೀರಸರಱಿವಂತೇನಿದುತಾರೆಲೆಯೇ ಬೀದಿವಾಡೆ ನೆರವಿಯ ತುಮುಕೇ
ರಸಮಿದು ಭಾವಾಮಿದರ್ಥಮಿದು ಸಮಾಸವಿದುಚಿತಪದಮಿದುತ್ಪ್ರೇಕ್ಷೆಯಿದೆಂದು ಸವಿದು ಸವಿದು ಕರಂ ನವರಸದೊಳಗಾೞುತ್ತುಮಿರ್ಪ ರಸಿಕರ್ ಬಲ್ಲರ್
ನೋಡುವೊಡೊಂದಕ್ಕರಮದುಮಾಡುವೊಡುಚ್ಚರಣೆಗರಿದು ಮೂಱುಂ ತೆಱನಂಕೂಡೆ ಕವಿತತಿ ವಿಚಾರಿಸಬೇಡದಱಿಂ ಱೞಕುಳಕ್ಷಳಂಗಳನಿದಱೊಳ್
ಗಿರಿಜಾಕಲ್ಯಾಣಮಿಂತೀ ನುತಕೃತಿಯ ಪೆಸರ್ ಭಾಪುರೇ! ಕಾವ್ಯನಾಥಂಗಿರಿಜಾನಾಥಂ ಕಥಾಸಂಗತಿ ವರಗಿರಿಜೋದ್ವಾಹಮೀ ಕಾವ್ಯಮಂ ಬಿತ್ತರದಿಂ ತಾನೊಲ್ದು ಪೇೞ್ದಂ ಶಿವಕವಿ ಹರಿದೇವಂ ಮಹೋತ್ಸಾಹದಿಂದಂಪರಮಾನಂದಾಬ್ಧಿ ಪಂಪಾಪುರದರಸ ವಿರೂಪಾಕ್ಷ ಸಾಕ್ಷಾತ್ಸುಪುತ್ರಂ
ಆತನ ಗುರುಕುಲಮತಿ ವಿಖ್ಯಾತಂ ಘನಪೂತಮಿಂದುಧರ ಸಂಭೂತಂನೂತನ ಪುಣ್ಯವ್ರಾತಂಪ್ರೀತಿಕರಂ ಭೂತಳಾತಿಶಯ ಸುಖಜಾತಂ
ಸುರುಚಿರಮೂರ್ತಿ ಸತ್ಯತರಮೂರ್ತಿ ಕೃಪಾಕರಮೂರ್ತಿ ಪುಣ್ಯವಿಸ್ತರಗುರುಮೂರ್ತಿ ಶಾಂತಿಮಯಮೂರ್ತಿ ಸುಧಾಕರಮೂರ್ತಿಯುತ್ತರೋತ್ತರಪರಮೂರ್ತಿ ಮುಕ್ತಿಸುಖಮೂರ್ತಿ ಮನೋಹರಮೂರ್ತಿ ಚಂದ್ರಶೇಖರ ಗುರುಮೂರ್ತಿ ಕೀರ್ತಿಪತಿ ಹಂಪೆಯ ಶಂಕರದೇವರೊಪ್ಪುವರ್
ಆಶೈವಾಗಮಸಿದ್ಧರಪ್ಪ ಪರಮ ಶ್ರೀ ಶಂಕರಾಚಾರ್ಯರಿಂಪಾಶಚ್ಛೇದಮನಿಂಬುಗೊಂಡು ಮೆಱೆದಂ ಶ್ರೀ ಶುದ್ಧ ಪಂಚಾಕ್ಷರೀವೇಶಾನಂದರಸಾರ್ದ್ರಚಿತ್ತಯುತಹೃದ್ರಾಜೀವ ಸಂಪೂರ್ಣ ಸಂಕಾಶಪ್ರಜ್ವಲಮೂರ್ತಿ ಕೀರ್ತಿಭರಿತಂ ಶ್ರೀ ಮಾದಿರಾಜಾಹ್ವಯಂ
ಇಂತಿಂತೊಪ್ಪುವ ಮಾದಿರಾಜನ ಮನೋದುಗ್ಧಾಬ್ಧಿಚಂದ್ರಂ ಶಿವಂಶಾಂತಂ ಶಾಶ್ವತಮೂರ್ತಿ ಶೈವಸುಭಗಂ ಸಾಕಾರಸರ್ವೇಶ್ವರಂಸಂತೋಷಾಭರಣಂ ಪ್ರಸನ್ನಕರಣಂ ಪ್ರತ್ಯಕ್ಷಪಂಚಾನನಂಸಂತಂ ಹಂಪೆಯ ಮಾಯಿದೇವನೆಸೆದಿರ್ಪಂ ಶೈವಸಾರೋದಯಂ
ಶ್ರೀಗುರು ಪರಗುರು ಘನಮಹಿಮಾಗುರು ಮಾಧುರ್ಯಗುರು ಮಹಾಗುರು ವರವಿದ್ಯಾಗುರು ಸುಖೈಕಗುರು ವಸುಧಾಗುರು ಶೈವಗುರು ಶಾಂತಗುರು ಮಾಯ್ದೇವಂ
ಸದಮಳನೆಂಬುದುತ್ತಮ ಗುಣಾಶ್ರಯನೆಂಬುದು ಶೈವಸಿದ್ಧನೆಂಬುದು ರವಿತೇಜನೆಂಬುದು ಕೃಪಾಂಬುಧಿಯೆಂಬುದು ಶಾಂತಮೂರ್ತಿಯೆಂಬುದು ಪರಮಾಗಮಪ್ರಕರನೆಂಬುದು ಹಂಪೆಯ ಮಾಯಿದೇವನೆಂಬುದು ಶಿವನೆಂಬುದಪ್ರತಿಮನೆಂಬುದು ಸದ್ಗುರುವೆಂಬುದೀ ಜಗಂ
ಧರೆಯೊಳಗಾ ಮಾಯ್ದೇವರವರ ಕರುಣಂಬಡೆದು ಮೆಱೆವನುನ್ನತತೇಜಂಗುರುಪದಭಕ್ತಂ ಹಂಪೆಯಹರಿದೇವಂ ದೇವಕವಿ ಕಳಾವಿದರರಸಂ
ಜಾಣಂ ರಸಿಕಂ ಸುಜನಪ್ರಾಣಂ ಕವಿತಾನಿಧಾನನಧಿಕಂ ಪುಣ್ಯಾಕ್ಷೂಣಂ ವರಗಿರಿಜಾ ಕಲ್ಯಾಣಮನೊರೆದಂ ವಿವೇಕಿ ಹರಿಹರದೇವಂ
ಎಂದಿಂತೆಲ್ಲಾ ಕವೀಂದ್ರರ್ ಪೊಗೞೆ ಪರಸೆ ಭಕ್ತವ್ರಜಂ ಸಜ್ಜನರ್ ಸಾನಂದಂ ಮಜ್ಝಯ್ಯ ಭಾಪುನ್ನತಕೃತಿ ಭಲರೇ ಚಿತ್ರಮಾಹಾ ಎನುತ್ತೊಳ್ಪಿಂದಂ ಕೊಂಡಾಡೆ ಲೋಕಂ ಸ್ತುತಿಯಿಸೆ ಪದೆಪಿಂ ಪೇೞ್ದಪೆಂ ರೀತಿಭಾವಂಛಂದೋಲಂಕಾರಸಾರಂ ಪುದಿದಿರೆ ಗಿರಿಜೋದ್ವಾಮಂ ಪ್ರೀತಿಯಿಂದಂ
ಗಿರಿಜಾಕಲ್ಯಾಣಮನೊಲ್ದೊರೆವೆಂ ಗುರುಕರುಣದಿಂದೆ ರಸಿಕರ್ ಕವಿಗಳ್ಪಿರಿಯರ್ ಸುಜನರ್ ಭಕ್ತರ್ಪರಮಾರ್ಥದೆ ಕೇಳ್ವುದೀ ಪ್ರಬಂಧೋನ್ನತಿಯಂ
ಎಂತೆನೆ ವಿಶಾಲಧಾತ್ರೀಕಾಂತಾನಾಭೀಸರೋಜಸುರುಚಿರವರ ಮದ್ಯಾಂತಸ್ಥಿತನುತ ಕರ್ಣಿಕೆಯಂತಿರ್ಪುದು ಮೇರುವದಱ ಮೂಡಣದೆಸೆಯೊಳ್
ಶಿವಶಿವ! ಪಂಚಾಶತ್ಕೋ-ಟಿ ವಿಸ್ತೃತಾವನಿಗೆ ನೀಲಮೇಖಲೆಯಂತೊ-ಪ್ಪುವುದಾತ್ತ ಲೋಲಕಲ್ಲೋ-ಲ ವಿವಿಧ ಸಲಿಲಚರಪೂರ ಪಾರಾವಾರಂ
ವ. ಅದೆಂತೆಂದೊಡೆ
ವಿಳಸತ್ಕಲ್ಲೋಲಮಾಲಾಪ್ರತಿಹತವಿತತ ಪ್ರೋಚ್ಚಲಚ್ಛೈಲ ಕೋಳಾಹಳಿತೋದ್ಯತ್ಫೇನ ನಾನಾಕರಿಮಕರವಿಪುಚ್ಛ ಪ್ರಹಾರಪ್ರತಾಪೋದ್ಗಳಿತಾನಂತಪ್ರರತ್ನ ಪ್ರಬಲಜಲಚರಾನೀಕ ಗಂಭೀರಭೀಮೋಜ್ಜ್ವಳರಾವಪ್ರಾದ್ಭುತಪ್ರೋನ್ಮಿಳಿತ ಘುಳು ಘುಳುಧ್ವಾನಮಂಭೋನಿಧಾನಂ
ವ. ಮತ್ತಮಲ್ಲದೆ
ನೊರೆಯಿಂ ಬುದ್ಬುದದಿಂ ಕಣಾವಳಿಗಳಿಂದಾವರ್ತದಿಂ ತುಂತುಱಿಂತೆರೆಯಿಂ ಪೆರ್ದೆರೆಯಿಂ ತಿಮಿಂಗಿಲಗಿಲಸ್ತೋಮಂಗಳಿಂ ಕಚ್ಛಪೋತ್ಕರದಿಂ ನಕ್ರನಿಕಾಯದಿಂ ಮಕರದಿಂ ನೀರಾನೆಯಿಂ ಕಂಬುವಿಂವರರತ್ನ ವ್ರಜದಿಂ ಪ್ರವಾಳಲತೆಯಿಂದೊಪ್ಪಿತ್ತು ನೀರಾಕರಂ
ಆ ವಿಸ್ತಾರ ಗಭೀರವಾರಿ ನಿಧಿಯಿಂದಂ ಪಶ್ಚಿಮಾಂಭೋಧಿಗಂತೀವಿರ್ದೊಪ್ಪುವುದಾತ್ತಗಹ್ವರ ಗುಹಾ ಸಂತಾನಪರ್ಯಂತ ಗೋತ್ರವಾಸೋಜ್ಜ್ವಲ ಗಂಡಶೈಲಶಿಖರ ಪ್ರೋದ್ಭೂತ ಭೂಜಾತಪತ್ರಾವೇಶೋನ್ನತ ಭೀಮರೂಪಧರದೇವಾಗಮ್ಯ ಹೈಮಾಚಳಂ
ಆ ರಾಜತ್ಕೌಮುದೀ ಸಂಗತಶಿಶಿರಶಿಲಾನೀಕನಿರ್ಯದ್ಧಿಮಂ ಸಸ್ಮೇರಾಬ್ಜಾಕ್ಷೀ ಕರೋತ್ಪಲ್ಲವ ನಖಕುಸುಮವ್ರಾತ ಚಂಚದ್ವಸಂತಂಸೂರಾಂಶುಸ್ಪರ್ಶತೀವ್ರಾನಳಕರರವಿಕಾಂತಾತಪೋದ್ಯನ್ನಿದಾಘಂಕ್ರೂರಾಭೀಳದ್ವಿಪಪ್ರೋಚ್ಚಳಿತಮದ ಜಲಾಸಾರಸಾಂದ್ರಂ ನಗೇಂದ್ರಂ
ವ. ಅಂತುಮಲ್ಲದೆಯುಂ
ಪಾಱುವ ಸೋಗೆ ಸೀಗುರಿ ಚಲಚ್ಚಮರೀಮೃಗವೀಥಿ ಚಾಮರಂಮೀಱಿ ನಿಮಿರ್ಕೆವೆತ್ತ ಕುಜಮೆತ್ತಿದ ಸತ್ತಿಗೆ ಸಿಂಹವಿಷ್ಟರಂತೋಱುವ ಚಂದ್ರಕಾಂತಶಿಲೆಯಾಗೆ ಸಮುನ್ನತರಾಜಲೀಲೆಯಂಬೀಱುತೆ ಪೂರ್ವಪಶ್ಚಿಮಕೆ ಪರ್ವಿದ ಪರ್ವತರಾಜನೊಪ್ಪುಗುಂ
ಗಿರಿಶಿಖರಂ ಮುಖಂ ಮರದೊಳೊಪ್ಪುವ ಬೀೞೆಲೆ ತಜ್ಜಟಾಳಿ ವಿಸ್ತರವರಗಂಡ ಶೈಲಮೆ ವಿಕೀರ್ಣಭುಜಾವಳಿ ವಾದ್ಯಸಂಕುಲಂಕರಿಕುಳ ಬೃಂಹಿತಂ ನೆಗೞ್ದ ಸಿಂಹರವಂ ಗಳವಾಗೆ ಸಂತತಂಸ್ಮರರಿಪು ನಾಟ್ಯದೊಳ್ ನೆಲಸಿ ನಿಂದವೊಲೊಪ್ಪಿತು ಭೂರಿಭೂಧರಂ
ನಳನಳಿಸುತ್ತೆ ಸುತ್ತಿಡಿದುತೋರ್ಪ ಕದಂಬ ಕದಂಬದಿಂ ಚಳಜ್ಜಳದಮನೊತ್ತರಿಪ್ಪ ಘನದೀರ್ಘಸುಕೋಮಳ ವಂಶ ವಂಶದಿಂಬಳಸಿಗಮೆತ್ತಲುಂ ತುಱುಗಿ ಪರ್ವಿದಗುರ್ವಿನ ಬಿಂಬ ಬಿಂಬದಿಂದಿಳೆಯೊಳಗೊಪ್ಪುತಿರ್ಪುದು ಹಿಮಾಚಳಮಾಶ್ರಿತಗೋತ್ರಗೋತ್ರದಿಂ
ವ. ಮತ್ತಮಲ್ಲದೆ
ಉರವಣಿಸಿ ನಡೆತರುತ್ತುಂಗಿರಿಶಿಖರಮನೇಱಲಾಱದೆರಡುಂ ದೆಸೆಯೊಳ್ಬರಲನುವಂ ಕಂಡು ದಿವಾಕರನಂದಿಂ ದಕ್ಷಿಣೋತ್ತರಾಯಣನಾದಂ
ಹರಹರ! ಗಿರಿಯುದ್ಧಮನಾರೊರೆದಪರಗ ಚೂಡದಲ್ಲಿ ನಿಂದಿರ್ದು ಸಮಂತಿರೆ ತಾರಗೆಯಂ ವಿದ್ಯಾಧರಿಯರ್ ಮುತ್ತೆಂದು ತೆಗೆದು ತುಡಲವ್ವಳಿಪರ್
ಗಿರಿಯುದ್ದಮನೇನಂ ಬಿತ್ತರಿಪೆನದಂ ಖೇಚರರ್ ಬಿಸಿಲ್ಗಂಜುತ್ತುಂಭರದೊಳ್ ಬೞಲ್ದು ಬಂದಾಗಿರಿಶಿಖರದ ಮರದ ತುದಿಯ ನೆೞಲಂ ಸಾರ್ವರ್
ಕರಮೆಸೆದುದು ಗಿರಿಶಿಖರಂಪರಮ ಸ್ವಚ್ಛಂದಲೀಲೆ ಪೆರ್ಚಿದ ಗಂಧರ್ವರ ಗರುಡರ ಸಿದ್ಧರ ಖೇಚರರ ಮುನೀಶ್ವರರ ಸುರರ ನೆರವಿಗಳಿಂದಂ
ಧರೆಯಱಿಯೆ ಹೊನ್ನಮೆಯ್ಯಂತಿರುತಿರ್ದುಂ ಲಜ್ಜೆಯಿಲ್ಲ ತನಗೆಂದು ಕರಂಸುರುಚಿರಧವಳಿಮದಿಂ ಸುರಗಿರಿಯ ಹಿಮನಗದ ಚೆಲ್ವು ನಗದೇಕಿರ್ಕುಂ
ಇಂತಿಂತು ಮೆಱೆಯುತಿರ್ಪುವನಂತಂ ಘನತೇಜದಿಂದಯೋಗ್ರಾಹ್ಯತೆಯಿಂದಂ ತಣ್ಪಿಂದಾಹಾ! ರವಿಕಾಂತ ಮಯಸ್ಕಾಂತಮಿಂದು ಕಾಂತಂ ನಗದೊಳ್
ಆ ನಗದಲ್ಲಿ ಪುಣ್ಯತತಿಯೊ ಪ್ರಭೆಯೊರ್ಬುಳಿಯೊ ಮಹೇಶ್ವರಶ್ರೀನಿಧಿಯೋ ಸುಧಾಕರನೊ ಸತ್ಯಮೋ ನಿತ್ಯಮೊ ಶೈವಪೂರಿತಸ್ಥಾನನೊ ಶಾಂತಿಯೊ ದಯೆಯೊ ಧರ್ಮಮೊ ನಿರ್ಮಳನೀತಿಯೊ ಶಿವಜ್ಞಾನ ಮುಕ್ತಿಸಂಕುಳಮೊ ಪೇೞೆನೆ ತಾಪಸವೀಧಿಯೊಪ್ಪುಗುಂ
ಗುಹೆ ಗುಹೆಗಳೊಳಗೆ ಬಳಸಿದಬಹುಗಹ್ವರ ಗಹ್ವರಂಗಳೊಳ್ ಪರಸೌಖ್ಯಾವಹನಿರ್ಝರ ನಿರ್ಝರದೊಳಗಹರಹ ಮೊಪ್ಪಿರ್ಪುದಧಿಕ ಮನು ಮುನಿವೃಂದಂ
ಯಮ ನಿಯಮ ನಿತ್ಯಕರ್ಮಂಸಮನಿಸೆ ವನಲತೆಯ ಗುಲ್ಮವೃಕ್ಷಾವಳಿಯಾವಿಮಳವ್ರತಿಗಳ್ ಸಲೆ ಕಂದ ಮೂಲಫಲದಿಂದೆ ತಣಿದು ಪರಿಣಮಿಸಿರ್ಪರ್
ಭಾಸ್ಕರಕರಸಮ ವಿಮಳಮನಸ್ಕರತಿ ವ್ರತಿಗಳಗ್ರಗಣ್ಯರ್ ಶಮೆಯಿಂತಸ್ಕರರತಿಮುದದಿಂದೆ ನಮಸ್ಕರಿಸುವ ಮುನಿಗಳನರ್ಘರಿರ್ಪರ್ ನಗದೊಳ್
ಗಣ್ಯಾತೀತರ್ ಶಿವಲಾವಣ್ಯದೆ ಸರ್ವಾಂಗಭಸಿತದಿಂ ನರೆಯಿಂ ಕಾರುಣ್ಯದಿನತಿಧವಳತೆಯಿಂಪುಣ್ಯಂ ಪಣ್ಣಾದ ತೆಱದೆ ತಾಪಸರಿರ್ಪರ್
ವ. ಅಂತುಮಲ್ಲದೆ
ಭಸಿತಮನೊಪ್ಪೆ ಪೂಸುವ ಶಿವಾಗಮಮೋದುವ ಶಾಸ್ತ್ರಮಂ ವಿಚಾರಿಸುವ ವಿನೂತನಾಕ್ಷಮಣಿಯಂ ಸರವೇಱಿಪ ನಾರಸೀರೆಯಂಪಸರಿಪ ಕಂದಮೂಲಫಲಮಂ ತರೆ ಪೋಪ ಲಸನ್ಮೃಗಾಜಿನಪ್ರಸರಮನೆಯ್ದೆ ಪೊಲ್ವ ಮುನಿಮುಖ್ಯಕುಮಾರಸಮೂಹಮೊಪ್ಪುಗುಂ
ವ. ಅಂತವರ ಶಾಂತಿಮಯ ಶೈವತೇಜಸ್ಸಾಮರ್ಥ್ಯಮೆಂತೆಂದೊಡೆ-
ಮೈಗರೆದು ಮೆಲ್ಲ ಮೆಲ್ಲನೆಕೈಗೊಟ್ಟೊಡನೈದಿ ಮತ್ತೆ ತಂದಿರಿಸಿ ಪಗಲ್ಬೈಗಿರುಳೆನ್ನದೆ ಸಲೆ ಬೆಸಕೈಗುಂ ಮುನಿಗಳ್ಗೆ ನಗದ ಮರ್ಕಟನಿಕರಂ
ಓಸರಿಸಿ ಬಿರ್ಚಿ ಪಕ್ಕಮನೋಸರಿಸದೆ ಮುನಿಗಳೊಡನೆ ಹೋಮಸ್ಥಳದೊಳ್ಭಾಸಿಪವೊಲಂತುಮಿಂತುಂಬೀಸುತ್ತೆೞ್ಚರಿಸಿ ಕುಡುವುದಾ ಶಿಖಿ ಶಿಖಿಯಂ
ವ. ಅಂತೆೞ್ಚಱಿಸಿ ಕುಡುತ್ತಿರ್ಪನ್ನೆಗಮಲ್ಲಿ-
ಇದು ಭೂಮಿಸ್ಥಾನದಿಂ ಮುತ್ತಿಗೆ ನಡೆಯಿಪ ನೀಲಾಶ್ಮಸೋಪಾನಮಾಹಾಇದು ಸಂಸಾರಾತಪಾಶ್ರಾಂತರೊಳತಿ ಸುಖಮೀವಂಬುದಶ್ರೇಣಿ ಮೇಣಿಂತಿದು ದುಷ್ಕರ್ಮಾಬ್ಜ ಷಂಡಂಗಳನುಱೆ ಕೊರಗಿಪ್ಪೊಂದು ನೀಹಾರಮೆಂಬಂದದೆ ಹೋಮಸ್ತೋಮಧೂಮಂ ನೆಗೆದುದು ಮುನಿಗಳ್ ಬೇಳ್ವಮಂತ್ರಾಗ್ನಿಯಿಂದಂ
ವ. ಮತ್ತಮೊಂದೆಡೆಯೊಳ್
ಸುಲಿಪಲ್ ಕೆಂಜೆಡೆ ನಾರಸೀರೆಯಜಿನಂ ಯಜ್ಞೋಪವೀತಂ ಕಮಂಡಲುವಾಧಾರಕಮಕ್ಷಮಾಲೆ ಭಸಿತಂ ಸ್ಮೇರಾನನಂ ಕರ್ಣಕುಂಡಲಮೊಪ್ಪುತ್ತಿರೆ ಪುಣ್ಯದಂತೆ ಶುಭದಂತಾನಂದದಂತಚ್ಚ ನಿರ್ಮಳದಂತುಜ್ವಳತೇಜದಂತೆ ಸುೞಿವರ್ ತಚ್ಚೈಲದೊಳ್ ತಾಪಸರ್
ವ. ಅಂತವರ ಶಾಂತ್ಯಾಚರಣ ಶೈವತೇಜಃಪ್ರತಾಪದಿಂದೋರಂತೆ ಕ್ರೂರಮೃಗಂಗಳ್ ನಿಜ ವೈರಮಂ ಬಿಟ್ಟಿರ್ಪುವದೆಂತೆಂದೊಡೆ
ಪುಲ್ಲೆಯ ಕೋಡ ಮೇಲೆ ಪುಲಿಗಳ್ ತಲೆಯಿಟ್ಟು ಕುರಂಗಸಂಕುಳಂಭಿಲ್ಲರ ಬಿಲ್ಲ ಮೇಲೆ ಮೊಗವಿಟ್ಟು ನವಿಲ್ಗಳ ಮೇಲೆ ಭೀತಿ ತಾನಿಲ್ಲದೆ ಸರ್ಪವೀಧಿ ಪೆಡೆಯಿಟ್ಟು ಗಜಂ ಶಿರಮಿಟ್ಟು ಸಿಂಗದೊಳ್ನಿಲ್ಲದೆ ನೋಡುತಿರ್ಪುವು ನಗೇಂದ್ರ ಮುನೀಂದ್ರರ ಶಾಂತಮೂರ್ತಿಯಂ
ವ. ಮತ್ತಮಾ ತಪಸ್ವಿಗಳ್ ರುದ್ರನಂತೆ ಜಟಾಜೂಟರಂಜಿತಾಬ್ಜರುಂ, ದುರ್ಯೋಧನಾ ಸ್ಥಾನದಂತೆ ಕರ್ಣಾಲಂಕಾರಶೋಭಿತರುಂ ಕುಬೇರನಂತೆ ವಿಭೂತಿವಿಲಸಿತಗಾತ್ರರುಂ, ಪುಣ್ಯವೃಕ್ಷದಂತೆ ಶಾಖಾವಲಂಬಿತ ಕರ್ಮನಿಷ್ಠರುಂ ವಲ್ಕಲಾಂತರ್ವಾಸರುಂ, ಕಮಲಕ್ಷೇತ್ರದಂತೆ ಪಂಕಜಗುಣೋಪವೀತರುಂ, ಭೂಮಿಜೆಯಂತೆ ಕುಶಲವಾಧಿಷ್ಠಿತರುಂ, ನವಗ್ರಹದಂತೆ ರವಿ-ರಾಜ-ವಕ್ರ-ಸೌಮ್ಯ-ಜೀವ-ಕಾವ್ಯಶ್ರೇಷ್ಠರುಂ, ನಕ್ಷತ್ರಮಂಡಲದಂತೆ ಪುಣ್ಯ-ಶ್ರವಣ-ಚಿತ್ರಾನಂದ ಹೃದಯರುಂ ಮೂಲಹಸ್ತಸಂಯುಕ್ತರುಂ, ವಾರಾಣಸಿಯಂತೆ ದಿವ್ಯ-ಕ್ಷೇತ್ರ-ವಾಸಿಗಳು ಮೆನಿಸಿರ್ದ್ದರ್ ಅಂತುಮಲ್ಲದೆಯುಂ,
ತರತರದಿಂದೆ ತೋರ್ಪ ಸರಿಯಿಂ ದರಿಯಿಂ ಪರಿವೊಜ್ಜರಂಗಳಿಂತರುಕುಲದಿಂ ಲತಾವಿಸರದಿಂ ಮಡುವಿಂ ಗಿಡುವಿಂ ಗುಹಾಳಿಯಿಂಸರಸಿಗಳಿಂದೆ ಪೆರ್ಮೆಳೆಗಳಿಂ ಕೆರೆಯಿಂ ತೊಱೆಯಿಂ ನದಂಗಳಿಂಪರಿವೊನಲಿಂ ಬಿಲಂಗಳಿನರಣ್ಯದಿನಲ್ಲಿಯ ತಳ್ಪಲೊಪ್ಪುಗುಂ
ವ. ಆ ಶೈಲನಿತಂಬಮಂ ಸುತ್ತಿ ಮುತ್ತಿ ಘೋರ ಗಭೀರ ಕಾಂತಾರಮಿರ್ಪ್ಪುದು ಅದೆಂತೆಂದೊಡೆ
ಎಳಸಿ ಗಿರಿಯುಟ್ಟ ಪಟ್ಟಾವಳಿಯೆನಿಕುಂ ತದ್ವನಂ ಲತಾವಳಿ ಪತ್ರಾವಳಿ ಪುಷ್ಪಾವಳಿ ಹಂಸಾವಳಿ ಸಿಂಹಾವಳಿ ಮೃಗಾವಳಿಯ ಪಜ್ಜೆಗಳಿಂ
ವ. ಮತ್ತಮಲ್ಲದೆ (-)
ಅರನೇಱಿಲ್ತಾಱೆ ತುಂಬುರ್ತದುಕಳಿಲೆ ಲವಂ ನೆಲ್ಲಿ ಬಿಲ್ವಾರ್ಜುನಂ ಕಮ್ಮರನಾಲಂ ಜಾಲಬೇಲಂ ಬಿಳಿಲರಳಿಯೆರಂ ಕಕ್ಕೆ ಹೂರಂಬೆಳಲ್ ಮಾವರುಟಾಳಂ ಹಾರಿವಾಳಂ ತುಡು ತಡಸೊಡವಂ ಲೊಕ್ಕಿಗೊಟ್ಟಕ್ಕಿ ದಿಂಡಂಚಿರಚಲ್ವಂ ಬ್ರಹ್ಮವೃಕ್ಷಂ ಕಱಿಕೆ ತಱಿಯದಿಂದೊಪ್ಪುತಿರ್ದತ್ತರಣ್ಯಂ
ನರಿಶಶಕಂ ವೃಕಂ ಸರಟನೆಯ್ಯಮಿಗಂ ಮರೆವಿಂಡು ಬೆಕ್ಕು ಮುಂಗುರಿ ಮುಸಲಿವ್ರಜಂ ಕರಡಿ ಮೆಂಡಲಿ ಪೆರ್ಬುಲಿ ಮರ್ಕಟಾಳಿ ಸೂಕರನಿಕರಂ ಕುರಂಗತತಿಯುಷ್ಟ್ರಚಯಂ ಘನಖಡ್ಗಿ ಸೈರಿಭಂಪುರುಷಮೃಗಂ ಗಜಂ ಶರಭ ಸಿಂಹದಿನೊಪ್ಪುವುದಲ್ಲಿ ಕಾನನಂ
ಅರಗಿಳಿ ಪಾರಿವಂ ಕುರರಿ ಲಾವಗೆಯನ್ಯಭೃತಂ ಶರಾರಿ ಹೊಂಗುರು ಚರಣಾಯುಧಂ ಶಕುನಿ ಚಂದನವಕ್ಕಿ ಚಕೋರಿ ಟಿಟ್ಟಿಭಂಹರಡೆ ಗವುಂಜು ಚಾದಗೆ ಬಕಂ ಶಿಖಿವಾಯಸಮಂಚೆ ಕೊಂಚೆ ತಿತ್ತಿರಿ ಗಿಡುಗಂಗಳೆಂಬ ಖಗವೃಂದದಿನಲ್ಲಿಯರಣ್ಯವೊಪ್ಪುಗುಂ
ಅತಿ ಘೋರಂ ಧ್ವಾಂತಪೂರಂ ಬಹುತರುಂ ಕುಲಸಾರಂ ಸಮುದ್ಯದ್ಗಭೀರಂಪ್ರತಿಶೂನ್ಯಂ ದಾವಮಾನ್ಯಂ ಮೃಗವಿತತಿಗನನ್ಯಂ ನದೀವ್ರಾತಧನ್ಯಂನುತ ಚೋದ್ಯಂ ವ್ಯಾಧವೇದ್ಯಂ ದಿನಕರ ಕಿರಣಾಭೇದ್ಯಮೀ ಭೂಮಿಗಾದ್ಯಂನುತಪುಣ್ಯ ತಾನಗಣ್ಯಂ ಕಠಿನವಿಷಯಗುಣ್ಯಂ ವಿರಾಜಿಪ್ಪರಣ್ಯಂ
ಹರಿಯಂತಿಂದುವಿನಂತೆ ಕೃಷ್ಣಮೃಗಸಂಶ್ಲೇಷಂ ಸುರಾವಾಸದಂತುರಗಾಧೀಶ್ವರನಂತೆ ಕೌಶಿಕವಿಭೋಗಂ ಕಾಮನಂತಬ್ಧಿಯಂತಿರೆ ಚಂಚದ್ರತಿಸಂಯುತಾನಿಮಿಷವೃಂದಂ ವ್ಯೋಮದಂತಬ್ಜ ವಿಷ್ಟರನಂತುಜ್ಜ್ವಳ ರಾಜಹಂಸವಿಭವಂ ರೌದ್ರಾನನಂ ಕಾನನಂ
ಅದು ಸರುವು ದರುವಿನಾಗರಮದು ಭೂಜವ್ರಜದ ತಾಣಮದು ಮೃಗಸಂತಾನದ ನೆಲೆಯದು ಶಬರಾನೀಕದ ಜನ್ಮಸ್ಥಲಮೆನಿಪ್ಪುದೊಪ್ಪುವರಣ್ಯಂ
ಅದಱೊಳ್ ಭೀಕರಕಾಲಕಿಂಕರನಿಭಂ ಭೀಷ್ಮಾನನಂ ರೌದ್ರಸಂಮದನೇತ್ರಂ ಘನಕೃಷ್ಣಕಾಯನಿಕರಂ ಕಾಠಿನ್ಯಧರ್ಮಂ ಭಯಪ್ರದಬಾಣಾವಳಿ ನಿಷ್ಠುರಧ್ವನಿಚಯಂ ನಾನಾಮೃಗಾಯುಷ್ಯದಾಪದಲಂಕಾರದಿನೊಪ್ಪಿ ಲುಬ್ಧಕಕುಲಂ ತೀವಿರ್ಪುದಂತಾವಗಂ
ವ. ಅಂತಿರ್ದ ಪುಳಿಂದಬಲಂ ಬೇಂಟೆಗೆಂದೊರ್ಬುಳಿಗೊಂಡು ಮರ್ಬು ಮಸಗಿದಂತೆ ಸಡಗರಿಸಿ ಸಮಕಟ್ಟಿ ಸನ್ನೆದೋಱಿ-
ಬಡಿಕೋಲ್ ಕಿರ್ಗಟ್ಟು ಹಾಸಂ ಶುನಕವಿತತಿ ಹೇರಿಟ್ಟ ಕೂರಂಬುಗಳ್ ಕೈಪೊಡೆ ಬಿಲ್ ಪುಲ್ದಂಡೆ ಬೆಳ್ಳಾರ್ಪಟಮೆರೆಬಲೆಗಳ್ ಸಾಳುವಂ ಕೂಳೆಗಾಳಂಗಿಡುಗಂ ಬಲ್ಬಂಡಿಯೊಳ್ ದೀಹದ ಪುಲಿ ನಿಶಿತಾಸ್ತ್ರಂಗಳುಗ್ರತ್ವಮಂ ಸಂಗಡಿಸುತ್ತಿರ್ದೊಪ್ಪೆ ವಿಂಧ್ಯಾಟವಿಗೆ ನಡೆದುದುದ್ಯತ್ಕಿರಾತಪ್ರಜಾತಂ
ತಡಿಕೆವಲೆ ಕಣ್ಣಿವಲೆ ನಿಟ್ಟಡಕಿಲ್ವಲೆ ಗೂಂಟವಲೆ ಪೊಣರ್ಚುವ ಬಲೆ ಮುಂಬಿಡುವಲೆ ನಡುವಲೆ ತಡೆವಲೆಸಿಡಿವಲೆ ನಿಡುವಲೆಗಳೊಪ್ಪಿದುವು ಲುಬ್ಧಕರೊಳ್
ವ. ಆಗಳ್
ಹರಿಣನ ಬೇಂಟೆ ಪೆರ್ಬುಲಿಯ ಬೇಂಟೆ ವರಾಹನ ವೀರ ಬೇಂಟೆ ಪೇಗರಡಿಯ ಬೇಂಟೆ ಹೆಮ್ಮರೆಯ ಬೇಂಟೆ ವಿಹಂಗದ ಮೊತ್ತವೇಂಟೆ ತತ್ಕರಿಗಳ ಬೇಂಟೆ ಸಿಂಹ ಶರಭಂಗಳ ಬೇಂಟೆಗಳಾದಿಯಾದ ಭೀಕರಮೃಗಸಂಘ ಸಂಹನನಮುಣ್ಮಿತು ಪರ್ವಿದರಣ್ಯಮಧ್ಯದೊಳ್
ನಡೆಯೆಂಬಬ್ಬರಿಸೆಂಬ ಪರ್ವಿ ಪರಿಯೆಂಬಾರೆಂಬ ಸಾರೆಂಬ ಸಂಗಡಿಸೆಂಬಡ್ಡಮಿರೆಂಬ ಸಾರ್ದು ಸರುವಂ ಕಟ್ಟೆಂಬ ಮುಟ್ಟೆಂಬ ಪಿಂದಡಸೆಂಬೊತ್ತರಿಸೆಂಬ ಸುತ್ತಿನಿಲಿಸೆಂಬೈಯ್ದೆಂಬ ಮೆಯ್ದೋಱುತುಂಪೊಡೆಯೆಂಬೊಂದು ಪುಳಿಂದವೃಂದನಿನದಂ ಪೊಣ್ಮಿತ್ತು ಕಾಂತಾರದೊಳ್
ಇಡು ಮೊಲನಂ ತೆರಳ್ಚದಿಸು ಪುಲ್ಲೆಗಳಂ ಬಲೆಯೊಡ್ಡಿ ಖಡ್ಗಿಯಂಪಿಡಿ ಮರೆವಿಂಡನೆಯ್ಬಿ ಪುಲಿಯಂ ಛಲದಿಂದಿಱಿ ಪಂದಿಯೊತ್ತುಗೊಂಡೊಡೆ ಬಿಡು ನಾಯ್ಗಳಂ ಸಮೆದ ಪೆರ್ಗುಳಿಯೊಳ್ ಕರಿಪೋತಕಂಗಳಂಕೆಡೆಪು ಮರಳ್ಚು ಸಿಂಹಮನೆನಿಪ್ಪ ಘನಧ್ವನಿಯಾಯ್ತರಣ್ಯದೊಳ್
ನಡುಗಿತು ವಿಹಗತತಿಯುರ್ಕುಡುಗಿತ್ತು ಮೃಗಾಳಿ ತಮ್ಮ ನಿಜಪೋತಕಮಂಮಡಗಿತ್ತು ಗೂಡು ಗುಹೆಯೊಳ್ತೊಡಗಿತ್ತು ಕಿರಾತಭೀಕರಧ್ವನಿ ವನದೊಳ್
ವ. ಆ ತನ್ನ ನಚ್ಚಿನ ನಾಯಂ ಮೊಲನಂ ಸರುವಂ ತೋಱಿ ಕೀಱಿ ಸಂಭ್ರಮದೊಳೊರ್ವಪುಳಿಂದಂ ಬಿಟ್ಟಾಗಳ್.
ನಡೆನಡೆದು ನಸುಬಳುಂಕುತ್ತೆಡಬಲನಂ ನೋಡಿ ಕೂಡೆಯಾಘ್ರಾಣಿಸುತುಂಗಿಡುವಿನ ಸರುವಿನ ದರುವಿನಮಡುವಿನ ಬೞಿಗೊಂಡು ಶುನಕನಟ್ಟಿತು ಮೊಲನಂ
ಅಟ್ಟಿದೊಡೆ ತಿರುಗಿ ಮುರಿ ಮುರಿದೊಟ್ಟೈಸುತೆ ಕೊಂಕಿ ಪರಿಯುತ್ತೆಡನಂ ಬಲನಂದಿಟ್ಟಿಸುತೆ ನಿಂದು ನಿಲ್ಲದೆನಿಟ್ಟೋಟದೊಳೋಡಿತೆಸೆವ ಮಸಕದ ಶಶಕಂ
ಬಿಡದೋಡೆ ಕಂಡು ಶಬರಂಕಡುಮುಳಿದಱಿಯಟ್ಟಿ ತಿರುಗೆ ತಿರುಗುತ್ತುಂ ಸಂಗಡಿಸಿ ಪರಿದುಬು ಬೆನುತ್ತುಂಬಡಿಗೋಲಿಂದಿಟ್ಟನಧಿಕ ಬಲನಂ ಮೊಲನಂ
ಇಡೆ ತಿರುಗುತ್ತೆ ಬರ್ಪ ಬಡಿಕೋಲೊಳೆ ಸಿಲ್ಕುತೆ ಸಿಲ್ಕದಾ ಮೊಲಂಗಿಡುಗಳೊಳೋಡಿ ಪೊಕ್ಕ ಪದದೊಳ್ ಘನರಾಹುವ ಕೋೞ್ಗೆ ಭೀತಿಗೊಂಡುಡುಪತಿಬಿಂಬದಿಂದೆ ಸರಿದೋಡಿ ಮುಗಿಲ್ಗಳೊಳೆಯ್ದಿ ಪೊಕ್ಕು ಗಂಡುಡುಗಿ ಸುರುಳ್ದು ತಚ್ಛಶಕಂ ನೆರೆ ಪೋಲ್ತುದು ಕಾಡ ಪೆರ್ಮೊಲಂ
ವ. ಮತ್ತೊಂದೆಡೆಯಲ್ಲಿ
ಪಸರಂಬೆತ್ತೆಡೆಯಾದ ನೀಡಡಿ ಪೊದೞ್ದಾಕರ್ಣವಾಕುಂಚಿ ತಾಸ್ತ್ರಸಮೇತೋಚ್ಚಕರಾಗ್ರವಸ್ಖಲಿತಚಿತ್ತಂ ಸಂಸ್ಫುಟಾಲೋಕನಂಕುಸಿದಂಗಂ ಮಿಗೆ ದೃಷ್ಟಿ ಮುಷ್ಟಿ ಶರಸಂಧಾನಂಗಳೊಂದಾಗೆ ತಾನಿಸಲೊಂದೊಂದು ಕುರಂಗಮಂ ಶಬರನೊಪ್ಪಿರ್ದಂ ಮಹಾರಣ್ಯದೊಳ್
ಕಂಡುದು ಮೃಗವಲ್ಲಿ ಭಯಂಗೊಂಡುದು ಪೆಪ್ಪಳಿಸುತದಿರುತೋಡಲ್ಕೆ ಕರಂದುಂಡಿಸುತಿರ್ದಪುದೆಂದುರುಚಂಡಾಸ್ತ್ರದಿನಚಲ ಶಬರನಿಸೆ ಕಾನನದೊಳ್
ತಿರುಗುವ ತನು ಬೆರ್ಚುವ ಕಣ್ಪರಿವ ಮನಂ ನಟ್ಟ ಕಿವಿಯಡಂಗುವ ಸುಯ್ಯಿಂಸರಳಂ ಮೀಱುತೆ ಹರಿಣಂಸರಳಸಿತೈದಾಱನೇಳನೆಂಟೊಂಬತ್ತಂ
ಕುನಿಕುನಿದು ವನದ ಗಿಡುಗಿಡುವಿನ ಮಱೆ ಮಱೆಯಲ್ಲಿ ಸುೞಿದು ಸುೞಿದೋಡುವ ಟಕ್ಕಿನ ಹರಿಣನತಿ ಭರದಿಂತನತನಗೆ ಪುಳಿಂದರಟ್ಟಿ ಮುಟ್ಟುತ್ತೆಚ್ಚರ್
ಸಿಲ್ಕಿ ಶಬರಾಳಿಯೆಚ್ಚ ಸರಲ್ಕಿಕ್ಕಿಱಿಗಿಱಿದು ನಟ್ಟು ಗಱಿದೋಱುತ್ತಂನಾಲ್ಕುಂ ಮೆಯ್ಯೊಳ್ ತೀವಿರೆಸಿಲ್ಕಿದ ಮೃಗಮೆಯ್ಯಮಿಗದ ತೆಱನಾಯ್ತಾಗಳ್
ವ. ಮತ್ತಂ ಪೆಱತೊಂದೆಡೆಯೊರ್ವ ಕಿರಾತನಾಥನಳವಿಯೊಳೋಡುತ್ತಿರ್ಪ ಮೃಗ ಸಮೂಹಮಂ ಕಂಡು
ಬಂಡಿಯ ಪುಲಿಯಂ ಮೆಲ್ಲನೆಕೊಂಡಿಳಿಪುತೆ ಸರಿದು ಕೊರಲ ಹಾಸದ ನೇಣಂಕಂಡಳವಿಗೆ ಸಿಲ್ಕಿದ ಮೃಗಮಂಡಲಮನದರ್ಕೆ ತೋಱೆ ಶಬರಾಧೀಶಂ
ನಿಮಿರ್ದಂಗಂ ನೀಳ್ದ ಮುಂಗಾಲುಡುಗಿ ನಡೆವ ಪಿಂಗಾಲ್ ಚಲದ್ವಾಲದಂಡಂವಿಮಳೋಚ್ಚಂಡಾಕ್ಷಿ ಸೂಕ್ಷ್ಮಶ್ವಸಿತವದನ ನಮತ್ಯೇಕಚಿತ್ತಂ ನಿರಸ್ತಕ್ರಮಗಾಢಂ ಕೂಡೆ ತನ್ನೊಳ್ ಬಗೆದಳವಿಗೆ ಮುಂಕೊಂಡು ಧೀಂಕಿಟ್ಟು ಪಾಯುತ್ತಮರುತ್ತೋಡುತ್ತೆ ಪೀಱುತ್ತಡಸಿ ಕೆಡಪಿತೊಂದೇಣನಂ ಚಿತ್ರಕಾಯಂ
ಪೊದಱೊಳಗತ್ಯುನ್ನತ ತರಮದಾಂಧತಾನಂತಬಲ ವಿಭೂಷಣನಪ್ಪಗ್ಗದ ಪೆರ್ಬುಲಿಯಿರೆ ಶಬರರ್ಮುದದಿಂದಂ ನೋಡಿ ಕಂಡು ಮತ್ತೊಂದೆಡೆಯೊಳ್
ಮೆಳೆಯೊಳಗಿರ್ದ ಪೆರ್ಬುಲಿಯನಾರ್ದು ಪುಳಿಂದನಿಕಾಯಮೆಳ್ಬೆ ಪಿಂಗಳತರಲೋಚನಂ ಬಹಳಸಂಹನನಂ ಪೃಥುಳಾಸ್ಯಗಹ್ವರಂಗಳಿತನಿಶಾತದಂಷ್ಟ್ರನತಿತೋಷಮನಂ ಘನಚಿತ್ರಕಾಯನು-ಜ್ಜ್ವಲಚರಣಂ ವಿಘೂರ್ಣಿತಗಳಂ ಪೊಱಮಟ್ಟುದುದಗ್ರವೃತ್ತಿಯಿಂ
ಪೊಱಮಡೆ ಕಂಡು ಗಂಡುಮಿಗೆ ದಂಡೆಯನಿತ್ತು ಕುಱುತ್ತು ಪತ್ತೆ ಸಾರ್ದುಱದೆ ನಿಲುತ್ತೆ ಸುತ್ತಿದ ಕಿರಾತಕುಲಂ ಮಝ ಭಾಪೆನುತ್ತೆ ಬೊಬ್ಬಿಱಿಯೆ ಕುನುಂಗಿ ಕುಕ್ಕುಱಿಸಿ ಸಱಱನೆ ಕಿಳ್ತಲಗಿಂ ಕಡಂಗಿ ಕಾಯ್ದಿಱಿದನದೊರ್ವ ಲುಬ್ಧಕನಗುರ್ವಿನ ಪೆರ್ಬುಲಿಯಂ ವನಾಂತದೊಳ್
ವ. ಮತ್ತಮೊಂದೆಡೆಯೊಳ್ ಪುಳಿಂದನಾಥರೊಂದಾಗಿ
ತನತನಗೆ ಹಂದಿವೇಂಟೆಗೆವನಚರರೆಯ್ತಂದು ನಿಂದು ನೀರ್ದಾಣದೊಳೊಗ್ಗಿನ ಮರದ ಮಱೆಯೊಳಿರೆ ಮೆಲ್ಲನೆ ಬಂದತ್ತೊಂದು ಸೊರ್ಕಿದೆಕ್ಕಲನಾಗಲ್
ಧೀರಂ ಪಿಂಗಳಲೋಚನಂ ನಿಶಿತ ದಂಷ್ಟ್ರಂ ಭೀಷ್ಮವಕ್ತ್ರಂ ಘನಕ್ರೂರಂ ವಜ್ರಸಮಾನರೋಮನಿಚಯಂ ಸಂಪೂರ್ಣಕಾಯಂ ಸ್ಥಿರಂಶೂರಂ ರೌದ್ರಗಭೀರಚಿತ್ತನತಿಮಾನಿ ಸ್ವಲ್ಪ ಪುಚ್ಛಾನ್ವಿತಂಘೋರಾರಣ್ಯಚರಂ ವಿರಾಜಿಸಿದುದುದ್ಯದ್ಭೀಕರಂ ಸೂಕರಂ
ಬರೆ ಕಾಣುತ್ತಲ್ಲಿ ಭಿಲ್ಲಪ್ರಕರಮಡಸಿ ಕೂರ್ನಾಯ್ಗಳಂ ಬಿಟ್ಟು ಬೊಬ್ಬಿಟ್ಟರರೇ ಕೆಯ್ಕೊಂಡು ನಾಲ್ಕುಂದೆಸೆಗೆ ಮಸಗೆ ಕಂಡೆಕ್ಕಲಂ ದಾಡೆಗುಟ್ಟುತ್ತೆರಡುಂ ಕಣ್ಣಿಂ ಸ್ಫುಲಿಂಗಂ ಸುರಿದಪುವೆನೆ ನೋಡುತ್ತೆ ತೀಡುತ್ತೆ ಕಲ್ಲಿಂದುರದಂಷ್ಟ್ರಾಗ್ರಂಗಳಿಂ ಭೂಮಿಯನುಱದೆ ಬೆಱಂಟುತ್ತೆ ಮುಂಗಾಲ್ಗಳಿಂದಂ
ನಟ್ಟಡವಿಯೊಳಗೆ ಮುಳಿಸಿಂಮುಟ್ಟುವ ನಾಯ್ಗಳನೆ ತುಂಡಿಸಲ್ಕೆಂದುಱೆ ಕಿರ್ಗುಟ್ಟುತೆ ಮುಂದಟ್ಟ ಪೆಡಂಮುಟ್ಟುತೆ ಸೂಕರನಡರ್ದು ಸಾರ್ದುದು ಮೆಳೆಯಂ
ಕುಪ್ಪಳಿಸಿ ತುರುಗಿ ಪರ್ವಿದಱೊಪ್ಪವನಿರದಂಡುಗೊಂಡು ಪಂದಿಯ ಬಳಿಯೊಳ್ನೊಪ್ಪುನೆಗೆದುರ್ಬಿ ಪಾಯುತೆಚಪ್ಪರಿಸುತ್ತುಗಿದು ಬಗಿದು ತೆಗೆದುವು ನಾಯ್ಗಳ್
ವ. ಮತ್ತಮವಱೊಳಗೊಂದು ಜಾತಿಜಾಯಿಲಂ ಪೋಗದೆ ನಿಂದು
ಮುಳಿದಟ್ಟಿ ತಿರುಗಿ ನೋಡುತ್ತೊಳಪೊಕ್ಕು ಮರಳ್ದು ಮತ್ತೆ ಬೆನ್ನಟ್ಟಿ ಕರಂಕಳಿದು ಪೆಡಂಬಾಯ್ದಳಲಿಂಬಳಸುತ್ತಿರೆ ನಿಂದ ಪಂದಿಯಂ ಶುನಕೇಂದ್ರಂ
ಮಿಕ್ಕುಪುಗಲತ್ತು ಕಿರ್ಗಣ್ಣಿಕ್ಕುತ್ತೊಳಪೊಕ್ಕು ಜಾಯಿಲನ ಬಡನಡುವಂಚಕ್ಕನೆ ತುಂಡಿಸಿ ಮಲೆಯುತೆಧಿಕ್ಕರಿಸುತ್ತತುಳ ಕೋಪನೀಡಂ ಕ್ರೋಡಂ
ವ. ಆಗಳ್
ಅಳ್ಕಿ ಪುಳಿಂದಂ ಕಾಣುತೆತಳ್ಕೈಸಿಯೆ ಕೊಂಡು ಶುನಕನೆರಡುಂ ಕಡಿಯಿಂಕಾಳ್ಕಿರ್ಚು ತಗುಳ್ದ ತೆಱದಿಂನಿಳ್ಕೈಸದೆ ನೊಂದು ಬೆಂದು ಬಳಲುತ್ತೆಂದಂ
ಪಾಸಿನ ಮೇಲೆ ಪಟ್ಟಿರಿಸಿ ಪಾಲೆಱೆದೆನ್ನೊಡಗೂಡಿ ಬಾಲಿಕಾಭ್ಯಾಸದಿನೆತ್ತಿ ಸತ್ತಿಗೆಯ ತಣ್ನೆಳಲೊಳ್ ಬಳೆವಂತು ಮಾಡಿಯುಚ್ಚಾಸನದಲ್ಲಿ ಕುಳ್ಳಿರಿಸಿಯೋವಿದ ಕುನ್ನಿಯನೀ ವರಾಹ ನೀಸಾಸಿಗನೀ ಕಠೋರಮನನೆನ್ನಯೆ ಮುಂದೆ ಸಮಂತು ಕೊಲ್ವುದೇ
ಒಡಗೂಡುತ್ತೊಡವೆಳೆಸುತ್ತೊಡನಾಡಿಸಿದೆನ್ನ ಚೆನ್ನ ಕುನ್ನಿಯನೀ ಕಕ್ಕಡವಂದಿ ಕೊಂದುದಿನ್ನಿದಱೊಡನಳಿವೆಂ ಕೊಲ್ಲದುಳಿಯೆನೀ ಸೂಕರನಂ
ಎಂದು ಪುಳಿಂದನಾಥನುಳಿದಾರುತೆ ಕೂರಲಗಿಂ ಕಱುತ್ತು ಪೆರ್ಬಂದಿಯನೆಯ್ದಿ ತಳ್ತಿಱಿದೊಡುಂಗುಟದಿಂದೆ ಶಿರಂಬರಂ ವರಾಹಂ ದಿಟಮೆತ್ತೆ ಮತ್ತಿಱಿಯೆ ಮತ್ತೆಕರಂ ಸೆಳೆದೆತ್ತೆ ನೊಂದು ತಾನೊಂದೆಸೆಯೆಳ್ ವರಾಹಪತಿಯೊಂದೆಸೆಯೊಳ್ ಕೆಡೆದತ್ತರಣ್ಯದೊಳ್
ಕೆಡೆದಿರ್ದ ಶಬರನಂ ಕಕ್ಕಡವಂದಿಯನೀಕ್ಷಿಸುತ್ತೆ ಶಬರಸಮೂಹಂಬಿಡೆ ಕೊಂಡು ಕೊನೆದು ಬಲ್ಪಂನುಡಿಯುತ್ತಿರ್ಪನ್ನಮಿತ್ತ ಮತ್ತೊಂದೆಡೆಯೊಳ್
ಪ್ರಕುಪಿತದಿಂ ತೆಗೆದಿಸೆ ಮಸ್ತಕಮಂ ಕರಿ ನೊಂದು ತಿರುಗೆ ಪರಿವ ಶರಂ ಪೇಚಕದಿಂದುರ್ಚಿ ಕರಂ ಲುಬ್ಧಕನಂ ತಾಗಿತ್ತು ಮಗುಳ್ದು ವನದೊಳ್ ಚಿತ್ರಂ
ದರಿಯಂ ದಂತಾಗ್ರದಿಂದೀಡಿಱಿದು ಕೆಡುಪುತುಂ ಗುಲ್ಮವೃಕ್ಷಂಗಳಂ ತತ್ಕರದಿಂದಂ ಸುತ್ತಿ ಕಿಳ್ತೆತ್ತುತೆ ನಿಜವಿಪುಳಚ್ಛಾಯೆಯಂ ಕುಂಭಿಗೆತ್ತುದ್ಧುರಕೋಪಾಟೋಪದಿಂ ಕಂಡೆಱಗುತೆ ಮದಸೌರಭ್ಯಲೋಲುಪ್ತಭೃಂಗೋತ್ಕರಮಂ ಕರ್ಣಾಗ್ರದಿಂ ಸೋವುತೆ ಕರಿಯಿರೆ ನಿದುದೊಂದಭ್ರಾಭ್ರಕಾಯಂ
ಕಂಡು ಕಿರಾತನೊರ್ವನಿಭಮಸ್ತಕಮೌಕ್ತಿಕಲೋಭದಿಂದೆ ಕೋದಂಡಮನಾರ್ಪಿನಿಂ ತೆಗೆದು ಕೂರ್ಪಿನ ಬಾಣದಿನೆಚ್ಚೊಡುರ್ಚಿವೇದಂಡಲಲಾಟದಿಂ ಪೆಱಗೆ ಪೇಚಕದೊಳ್ ಮಿಗೆ ಮೂಡೆ ತಲ್ಲಣಂಗೊಂಡುದು ಕುರ್ಗಿ ಕುಕ್ಕಱಿಸಿ ಘೀಳಿಡುತಿರ್ದುದು ಬಿಳ್ದು ಭೂಮಿಯೊಳ್
ಬೀಳೆ ಪರಿತಂದು ಶಬರಂಸೀಳುತ್ತಂ ಕುಂಭದೊಳಗಣಲ್ಲಿಯ ಮುಕ್ತಾಜಾಳಕಮನೆ ಕೊಂಡು ಸುಖಂದಾಳುತ್ತಂ ಬಂದನಬಲೆಗೀವತಿಭರದಿಂ
ವ. ಅಂತು ಬಂದು
ಮತ್ತಗಜಮಸ್ತಕದ ಪೊಸಮುತ್ತಂ ಬಲ್ಪಿಂದೆ ತಂದೆನೆಂದೊಲವಿಂದಂವೃತ್ತೋತ್ತುಂಗಪಯೋಧರಿಗಿತ್ತಂ ಮತ್ತೋರ್ವ ಶಬರಿ ಮಿಗೆ ನಗೆ ವನದೊಳ್
ವ. ಮತ್ತಮೊಂದೆಡೆಯಲ್ಲಿ
ಮತ್ತಮಲ್ಲದೆ ಘನಸುಖಚಿತ್ತಂ ಚಿತ್ತಜನ ಪೋಲೆ ಮನ್ಮಥರಾಗೋನ್ಮತ್ತನದೊರ್ವಂ ಲುಬ್ಧಕನತ್ತಿತ್ತಂ ಶಬರಿಯಿಲ್ಲದೊಂದಡಿಯನಿಡಂ
ಕೆಲದೊಳ್ ಪುಳಿಂದಿಯಿರೆ ಪೆರ್ಬುಲಿ ಬಂದೊಡಮಂಜನಳ್ಕನೋಡಂ ನೋಡಂಚಲದಿಂ ಕಾಡಂ ಕಾಡಂಸಲೆ ಪಸಿವಂ ಮಱೆದು ತಣಿದು ಬೇಡಂ ಬೇಡಂ
ಪೆಱತೊಂದೆಡೆಯೊಳ್ ಮುತ್ತಿಂತುಱುಗಿದ ಮಂಡನ ಚಯಂಗಳಂ ತೊಟ್ಟೊಲವಿಂದೆಱಗಿ ಕುಣಿದಾಡಿಸುತ್ತುಂಮೆಱೆವ ಪುಳಿಂದಿಯರ ನಿಂದ ಮೊತ್ತದೊಳೊರ್ವಳ್
ಎಳನವಿಲ ಕಲಾಪಂಗಳನಳವಡೆ ತಳೆದುಂ ಮದೇಭಮಸ್ತಕ ಮುಕ್ತಾಫಳವಿಳಸಿತ ಸಾಪತ್ನೀಕುಳದೊಳ್ ಗರ್ವಿಸುವ ಶಬರಿಯಿರವತಿ ಚಿತ್ರಂ
ನಡೆದು ಗಳಗಳನೆ ಮತ್ತೊಂದೆಡೆಯೊಳ್ ಗಜಮೆಯ್ದೆ ಪೊಕ್ಕು ನದಿಯೊಳ್ ಕಡುನೀರಡಸಿ ತೆಗೆದೀಂಟಿ ಜಲಮಂಬಿಡೆ ತಮ್ಮೊಳ್ ತೀವಿಕೊಂಡು ಚೆಲ್ಲುವ ಪದದೊಳ್
ಇಳೆಯೊಳ್ ತಮ್ಮಂ ಕಾದಾಪುಳಿಂದನಾಯಕಿಯ ಯೌವನಕ್ಕರ್ಘ್ಯಮುಮಂತಳವಡೆ ಕುಡುವಂತಿರ್ದುದುಜಳಪೂರಿತ ಹಸ್ತದಿಂದ ಹಸ್ತಿಕದಂಬಂ
ವಿಲಸನ್ಮತ್ತಗಜೇಂದ್ರೋಜ್ವಲ ನಿರ್ಮಳದಂತ ಮುಸಲ ಹಸ್ತಸಮೇತಂನಲಿನಲಿದು ಕಿರಾತಸ್ತ್ರೀಕುಲಮೊರ್ಬುಳಿಗೊಂಡು ನಿಂದು ಮತ್ತೊಂದೆಡೆಯೊಳ್
ತಳಿರ್ಗಳ ಸೀರೆಯುಟ್ಟು ಗುರುಗುಂಜಿಯ ಹಾರಮನಾಂತು ಮುಂದೆ ಶೀತಳ ಶಶಿಕಾಂತದಿಂ ಸಮೆದೊರಲ್ಗಳೊಳಂ ಬಿದಿರಕ್ಕಿಯಿಕ್ಕಿ ನಿಚ್ಚಳಮನ ಸುವ್ವಿ ಕಾಡೊಡೆಯ ಸುವ್ವಿ ಮನೋಹರ ಸುವ್ವಿಸುವ್ವಿಯಂದಳವಡೆ ರಾಗದಿಂ ತಳಿಸಿದರ್ ವನದಲ್ಲಿ ಪುಳಿಂದಕಾಂತೆಯರ್
ವ. ಅದಲ್ಲದೆಯುಂ ಮತ್ತೊಂದೆಡೆಯೊಳ್ ಅತಿಬಳನೊರ್ವ ಪುಳಿಂದನಾಥಂ ಒಡನೆಯ ಬೇಡರ ಮುಂದಾಸುರದಿಂ ಭಾಷೆಗುಡುತಿರ್ದನದೆಂತೆಂದೊಡೆ
ನಿಂದೆಂ ನಿಂದೆಂತುವೀ ವೀರದ ರದನಿಕರಂ ಬಂದೊಡಂ ಬಂದೊಡಂ ಗೊಂಡಂದಾವಂದಾವನಂತಿರ್ಪ ಸರಪಸರಮಂ ಕಾಣ್ಬನಾ ಮಾತದಿರ್ಕೆನ್ನಂದಂ ನಂದಂ ಕನಲ್ದಿರ್ಪೊಡೆ ಪೊಡೆ ಪುಲಿಯಂ ಬೇಗದಿಂ ಬೇಗದಿಂದಂಬಂದಂ ಬಂದಂತೆ ಕೊಂದುರ್ಕುವ ಕುವರನವಂ ಸೋಂಕಿರಾತಂ ಕಿರಾತಂ
ಬಿದಿರಂ ಬಿದಿರಂ ನಡೆ ನಡೆಯದೆಯದೆ ಪಿಡಿ ಪಿಡಿಗೆ ಬಂದ ಕರಿಯಂ ಕರಿಯಂಪದೆದೆಚ್ಚಂ ಕಲಿ ಕಲಿ ಪೇಸದೆ ಸದೆದಪನೆಂದು ಬೇಡರೆನೆ ನಲಿದಿಸುವಂ
ವ. ಮತ್ತೊಂದೆಡೆಯೊಳ್
ಇನೆಯನೊಡಗೂಡಲೆಂದಿಂಪಿನ ರಮ್ಯಸ್ಥಳಮನಱಸಿ ಬರುತಂ ನವಯೌವನೆ ಮುಗ್ಧೆ ತುಱುಗಿ ಪರ್ವಿದವನದೊಳಗಣ ಮೆಳೆಗಳೊಳಗ ಪುಗುವನ್ನೆವರಂ
ಬೆಳಗಂ ಕಳ್ತಲಿಸುವ ಮೆಳೆಮೆಳೆಯಂ ಪೊಕ್ಕಲ್ಲಿ ತನ್ನ ಕಣ್ಗಳ ಬೆಳಗಿಂಬೆಳಗಾಗಿರೆ ಬೆಳಗಿಲ್ಲದಮಳೆಯಿಲ್ಲೆಂದಬಲೆ ಶಬರಿ ಸೊಬಗಳಿದಿರ್ದಳ್
ಇರೆ ಸುಪ್ರೌಢಕಿರಾತಂತುರುಣಿಯ ಮುಗ್ಧತೆಗೆ ಮಚ್ಚಿ ಮುಗ್ಧೆಯ ಕಣ್ಣಂಬರೆ ಮುಚ್ಚಿ ಇಡಿದ ಕಳ್ತಲೆದೊರೆಕೊಂಡತ್ತೆಂದು ನೆರೆದು ಸುಖಿಯಾಗಿರ್ದಂ
ವ. ಮತ್ತಮತಿವಿಸ್ತಾರಮಾದ ಘೋರಾರಣ್ಯಂ ಕಡು ನಿಡುದುಗೊಂಡಂಬರ ಚುಂಬಿತಮಾಗಿ ನಳನಳಿಸಿ ಕೊರ್ಬಿ ಬೆಳೆದ ಪೆರ್ಬಿದಿರ ತುದಿ ತಾಗಿ ಪಱಿದ ಕಿಱುಮುಗಿಲ್ಗಳಿಂದವನೀತಳಕ್ಕಾಲಿಕಲ್ಲೊಕ್ಕು ಚೆಲ್ಲಿದಂತಿರ್ಪ ಮುಕ್ತಾಫಲಂಗಳಂ ವಂಶತಂಡುಲಂ ಗೆತ್ತು ಸುತ್ತಿ ಬಂದುಡುಗುವ ಮುಗ್ಧಶಬರಿಯರಂ ನಗುವ ಕಾಮುಕ ಶಬರ ಸಂದೋಹದಿಂ, ಮತ್ತೆ ಪೆಱತೊಂದೆಡೆಯೊಳ್ ಪುಲಿಯ ಬೇಂಟೆಯ ಕಾಳೆಗದ ಕೋಳಾಹಳದ ಮಲ್ಲಾ ಮಲ್ಲಿಯಿನಾದ ಕರನಖರನವವ್ರಣಕಳಂಕಾಂಕಿತ ಭುಜವಳಯನಾಗಿ ಬಂದ ಪುಳಿಂದನಂ ಕಂಡು ಕಡುಮುಳಿದು ಪ್ರಣಯಕಲಹಂ ಕೆಯ್ಗಣ್ಮೆ ಪಲ್ಲವದಿಂ ಪೊಯ್ದು ಪೊಯ್ದತಿಕೋಪದಿಂದುತ್ಕಂಠೆಯಾದ ನಲ್ಲಳ್ಗೆ ಲಲ್ಲೆಗರೆದು ಬೆರಲಂ ಕರ್ಚಿ ಕಾಲ್ಗೆಱಗಿ ವಿನಯದಿಂ ತಿಳಿಪಿ ಮುಳಿಸಂ ಕಳಲ್ಚಿ ಕಳ್ತಲಿಪ ಮೆಳೆಗಳೊಳ್ ಉತ್ತಾನಲತೆ ಚಿತ್ತಜಂಗೆತ್ತಿದುಪ್ಪರವಟ್ಟಮಾಗೆ ನಿರಂತರಂ ನೆರೆವ ಕಿರಾತಮಿಥುನಂಗಳಿಂ, ಮತ್ತಂ ಸಂಚಿತ ತಿಳಕಿತವರ್ಧಕಪೋಳಿತವತಿವರ್ತಿತ ವಧೋನುಬಂಧಿನಿ ಕ್ರೋಧಿನಿ ಗಂಧಚಾರಿಣಿಗಳೆಂಬ ಸಪ್ತಾವಸ್ಥೆಯ ಮದದಿಂ ಮುಂದುಗಾಣದೆ ತನ್ನ ನೆಳಲಿಂ ಪ್ರತಿಗಜವೆಂದುಱದೆ ಕಱುತ್ತೆಱಗಿ ಬೆಟ್ಟದ ಪೆಟ್ಟೆಗಳನೆತ್ತಿಯೆತ್ತಿ ಕೋಪಮಾಱದೆ ಮೀಱಿ ಬಂದು ನೀಡುಂ ನೋಡಿ ಕೋಡುಗಲ್ಲಂ ಪರಿದು ಪಾಯ್ದು ಕೋಡುಡಿಯೆ ನಾಡೆ ನೊಂದು ನೋವಂ ಮಱೆದು ಚಂದ್ರಕಾಂತ ಶಿಲಾತಲದೊಳ್ ಮಾರ್ಪೊಳೆವ ನಿಜಬಿಂಬಮಂ ಕಂಡು ಕರಿಣಿಗೆತ್ತಡಿಗಡಿಗೆ ಕರಮನಿಟ್ಟಾರಯ್ದು ಸಾರುತಿರ್ಪ ಮದಾಂಧಗಂಧಸಿಂಧುರಂಗಳಿಂ, ಮತ್ತಮೊಂದೆಡೆ ಯೊಳ್ ಪಸಿವೆತ್ತು ಮಸಗಿಬಂದು ಬಿಲಂಗಳೊಳಗಣಿರುಂಪೆಗಳಂ ಮೊಗಮಿಟ್ಟೂದಿ ಯೂದಿ ತಣಿಯದೆ ತವಕದಿಂ ನಡೆ ನಡೆದು ನಳನಳಿಸುವ ಬೆಳಲಮರದ ತಳದೊಳಿರ್ದ ಪಕ್ವಫಲಂಗಳನಾಯ್ದುಕೊಂಡು ಗಳಗಳನೆ ಪರಿದು ಪಾಸಱೆಯ ಮೇಲಾಸುರದಿಂದೊಡೆದೊಟ್ಟಿ ಜೇನ ಹುಟ್ಟುಗಳನ್ನಿಟ್ಟಿಟ್ಟಲಸದೆ ಕಲಸಿ ತಣಿವಿನಂ ತಿಂದು ತೇಗಿ ತೂಗಿ ಕೆಲೆ ಕೆಲೆದು ಕುಪ್ಪಿ ಕುಪ್ಪಿ ಯುರ್ಬಿ ಕೊರ್ಬಿ ನಲಿದಾಡುವ ಭಲ್ಲೂಕನಿಕಾಯದಿಂ, ಮತ್ತಮೊಂದೆಡೆಯೊಳ್ ಎಳೆವುಲ್ಗಳಂ ಮೇದು ತಿಳಿನೀರನೀಂಟಿ ನೆಳಲೊಳ್ ಪಟ್ಟಿರ್ದು ಬೆಂಡೇಳ್ವ ಲೋಳೆಹಿಂಡಿಲ್ಗಟ್ಟೆ ಮೇವಂ ಮಗುಳ್ಚಿ ಕಟ್ಟದಿರ ಪುಲಿಯಂ ತೊಟ್ಟನೆ ಕಂಡು ಭೋಂಕನೆಳ್ದು ಮೊಗಮನೆತ್ತಿ ಕಡುಮುಳಿದು ಖಾತಿ ಗೊಂಡು ಚಲದಿಂ ಮಲೆದು ಘಳಿಲನೆಯ್ದಿ ಪಾಯ್ದು ಪೊಯ್ದು ಕೋಡಿಟ್ಟು ಜಲ್ಲಿಸಿ ಬಿಸುಟ್ಟು ನೊಸಲ ತೀಂಟೆ ತೀಱದೆ ಕೊಣಕಿಟ್ಟು ಮುರಿದು ಪಿರಿದಪ್ಪ ಪುತ್ತಿನೊಳೊತ್ತಿ ಪೋರ್ದು ಮೆತ್ತಿದ ಕರ್ದಮಂ ನಿಟಿಲ ತಟದೊಳ್ ಪತ್ತಿರ್ದ ಧೂಳಿ ಮೆಯ್ಯೊಳೆ ಮೆಱೆಯೆ ಪಲವೋತ್ಕರದಿಂ ಪೊಱಮಟ್ಟ ಕಾಳರಕ್ಕಸರಂತಿರ್ಪ ಕಾಳ್ಕೋಣಂಗಳಿಂ, ಮತ್ತಮೊಂದೆಡೆಯೊಳ್ ಮರದಿಂ ಮರಕ್ಕೆ ತಿರುಗಿ ಪಾಯ್ದೆಳಗೊಂಬನಲ್ಲಾಡಿ ತೂಗಿ ತೊನೆದಳ್ಳಿಱಿದು ಕುಳ್ಳಿರ್ದು ಕಾಲ್ಗಳಂ ನೀಡಿ ಬರಿಯಂ ಬೆರಂಟಿ ಬಿಸಿಲ್ಗಾಯ್ದು ಪಸಿವೆತ್ತಿ ಮೇಲಂ ನೋಡಿ ನೀಡಿ ನೆಗೆದು ತಿಣ್ಣಗೊಂಬಿನೊಳ್ ಬಣ್ಣವಳಿಯದ ಪಣ್ಣಂ ತಿಂದು ತಣ್ಣನೆ ತಣಿದು ಕಣ್ಣಂ ಬಿಟ್ಟು ಪುರ್ಬಿಕ್ಕಿ ಪಲ್ಗಿಱಿದು ಹುಱ್ರೆಂದು ಕಿರಾತಕಾಂತೆಯರಂ ಮಿಗೆ ನಗಿಸುತಿರ್ಪ ಮರ್ಕಟಪ್ರಕರದಿಂ, ಮತ್ತಮೊಂದೆಡೆಯೊಳ್ ಚಿತ್ತಜಕೇಳಿಗೆಂದು ಮತ್ತಗಜಂ ಪರಿವ ಕರಿಣಿಯ ಬಳಿಸಂದು ಬೋಳೈಸಿ ಕರಮಂ ನೆಗಪಿ ಕೂಡುವ ಪಿಂಚಕ ಚುಂಬನ ಪ್ರಾರಂಭಸಮಯದೊಳ್ ತೊಟ್ಟನೆ ಕಂಠೀರವರವಮಂ ಕೇಳಲಾಗೆ ಬೆಳ್ಳಾಗಿ ಬಿಗುರ್ತು ರಾಗಮಳಿದಗಿದು ಸುಗಿದು ಹಳುಂಗಿ ಹಮ್ಮದಂ ಬೋಗಿ ಪರಿದೋಡಿ ಪಿರಿಯ ಗುಹೆಯೊಳಡಂಗಿ ಬೆಡಂಗಳಿದು ತಡಂಗೆಡೆದಿರ್ಪ ಮಾತಂಗದಂಪತಿಗಳಿಂ, ಮತ್ತಮೊಂದೆಡೆಯೊಳಾರ್ದು ಸಾರ್ದು ಪರಿತರ್ದ ಕಿರಾತ ನಿಕರದೊಳೊರ್ವ ಲುಬ್ಧಕಂ ಯಮಕಿಂಕರನಂತೆ ಮುಳಿದು ಪರಿತಂದು ಪಿರಿದಪ್ಪ ಪಕ್ಕಿಗಳ್ ನೆರೆದಿರ್ಪ ಶಾಲ್ಮಲಿಯ ತುದಿಯನದಿರದೆ ನೋಡಿ ಮೀಱಿದ ಮರನನೇಱಲ್ ಸಾಲದೆ ಕಾಲಪಾಶದಂತೆ ಮುರಿದು ಪರಿದು ಪರ್ವಿದ ಪೆರ್ಬಳ್ಳಿಯನಡರ್ದೇಱಿ ಬಿಡದೆ ಬರ್ಪುದಂ ತಡೆಯದೆ ಕಂಡು ನಡನಡಂ ನಡುಗಿ ತಲ್ಲಣಿಸಿ ಮಲ್ಲಳಿಗೊಂಡು ಪೋಳಲೊಳಗಣ ಬಾಲವಿಹಂಗಂಗಳನೆಱಂಕೆ ಯೊಳಿಱುಂಕಿಕೊಂಡು ಪಾಱಲನುವಾಗಿ ತೂಱಲ್ಗೊಂಬಿನೊಳಿರ್ಪ ವಿಹಂಗ ಸಂಕುಳದಿಂದತಿಸೌಂದರ್ಯಮನುರುತರ ವಿಕ್ರಮಮನುಧ್ಯದ್ಭಯಾನಕಮನೂರ್ಜಿತ ಸಂಪದಮನಪಾರ ಗಂಭೀರತೆಯ ನನಂತ ಕೌತುಕಮನನೇಕರೌದ್ರರಸಮನೊಳಕೊಂಡಿರ್ಪುದಂತುಮಲ್ಲದೆಯುಂ;
ಇಂತುದ್ಯನ್ಮೃಗಸಂಘದಿಂ ವನಚರಸ್ತೋಮಂಗಳಿಂ ಭೂಮಿಜಾನಂತಶ್ರೇಣಿಗಳಿಂದರಣ್ಯಕುಲದಿಂದಂ ತಾಪಸವ್ರಾತದಿಂಸಂತಂ ಸುತ್ತಿದ ಸೂಕ್ಷ್ಮಗೋತ್ರಚಯದಿಂ ಗಂಧರ್ವಸಿದ್ಧಾಮರೌ-ಘಂ ತೀವಿರ್ದ ಮಹಾಗುಹಾವಳಿಗಳಿಂದೊಪ್ಪಿರ್ದುದುದ್ಯನ್ನಗಂ
ಪರಮಸ್ವಾಮಿ ಜಟಾಧರಂ ಶಶಿಧರಂ ಗಂಗಾಧರಂ ಕಾಲಸಂಹರನಜ್ಞಾನಹರಂ ಪುರತ್ರಯಹರಂ ಸೌಖ್ಯಾಕರಂ ಶಂಭು ಶಂಕರನಾನಂದಕರಂ ಸಮಂತೆನಗೆ ಭಕ್ತಿ ಜ್ಞಾನ ವೈರಾಗ್ಯಮಂಕರುಣಂಗೆಯ್ಗೊಲವಿಂದೆ ಹಂಪೆಯ ವಿರೂಪಾಕ್ಷ ಶಿವಾವಲ್ಲಭಂ
ಇದು ಸಮಸ್ತ ಸುರಾಸುರಮಕುಟ ಖಚಿತ ದಿನಕರಕರಾಧಿಕ್ಯ ಮಾಣಿಕ್ಯಪ್ರಭಾಪುಂಜರಂಜಿತಚರಣ ನೆನಿಪ ಪಂಪಾವಿರೂಪಾಕ್ಷ ಶ್ರೀ ಪಾದಕಮಲ ಮಕರಂದ ಮಧುಕರಾಯಮಾಣ ಸತ್ಕವೀಶ್ವರ ಹಂಪೆಯ ಹರಿಹರದೇವ ವಿರಚಿತಮಪ್ಪ ಶ್ರೀ ಗಿರಿಜಾಕಲ್ಯಾಣ ಮಹಾಪ್ರಬಂಧದೊಳ್ ಹೈಮಾಚಲ ವರ್ಣನಂ ಪ್ರಥಮಾಶ್ವಾಸಂ


