EN | KA

Menu

II

ನಳಚರಿತ್ರೆ

ಹಲವು ನಯನೀತಿಯಲಿ ಹಂಸೆಯಕಳುಹಲಂದಿನ ರಾಯಭಾರದಿನಳನೃಪಗೆ ಸತಿಯಾದಳಾ ದಮಯಂತಿ ಮನವೊಲಿದು

ಕೇಳು ಕುಂತೀತನಯ ಭೀಮನೃಪಾಲತನುಜೆಗೆ ವಿರಹ ಬಲಿದು ವಿಶಾಲವಾಗಿರಲಿತ್ತ ಕೇಳೈ ನಿಷಧನಗರಿಯನುಪಾಲಿಸುವ ನಳಚಕ್ರವರ್ತಿಯುಮೇಲೆನಿಪ ಸಭೆಯಲ್ಲಿ ರತ್ನದಸಾಲುಹೊಳಹಿನ ಸಿಂಹಪೀಠದೊಳೆಸೆದು ಕುಳ್ಳಿರ್ದ

ಗೌಳ ವಂಗ ಕಳಿಂಗ ಕುಂತಳಚೋಳ ಬರ್ಬರ ಸಿಂಧು ಕೇರಳಲಾಳ ಮಗಧ ವರಾಳ ಸೌರಾಷ್ಟ್ರಾದಿ ಭೂಮಿಪರಬಾಳೆಯರ ಮಂತ್ರಿಗಳ ವೀರಭಟಾಳಿ ನಟ ಗಾಯಕರ ಕವಿಗಳಜಾಲ ಸಂದೋಹದಲಿ ಮೆರೆದುದು ನೃಪತಿಯಾಸ್ಥಾನ

ಆ ಸಮಯದಲಿ ಬಂದನಲ್ಲಿಗೆದೇಶಯಾತ್ರಿಕ ಭೂಸುರನೊಳವನೀಶ ಕೇಳಿದನಿಳೆಯೊಳೇನುಂಟತಿ ವಿಚಿತ್ರವೆನೆಭೂಸುರೋತ್ತಮನೆಂದನೆಲೆ ಧರಣೀಶ ಕೇಳು ವಿದರ್ಭನಗರದೊಳೇಸು ಪುಣ್ಯೋದಯದಿ ಪಡೆದನೊ ಭೀಮನೃಪ ಸುತೆಯ

ಅವಳ ರೂಪಗುಣಾತಿಶಯಗಳನೆವಗೆ ಬಣ್ಣಿಸಲಳವೆ ಕೇಳಾಯುವತಿ ಲೋಕದ ಸತಿಯ ಬಗೆಯಂತಲ್ಲ ಭಾವಿಸಲುಪ್ರವಿಮಲಾಕಾರದಲಿ ಮೃದುತರಸವಿನುಡಿಯ ಸಂಭಾಷಣೆಗಳಲಿಭುವನದೊಳು ನಾಕಾಣೆ ದಮಯಂತಿಗೆ ಸಮಾನರನು

ಮುರಹರನ ನಿಜಸೊಸೆಯ ರೂಪಂತಿರಲಿ ಚಂದ್ರನ ಮಗಳ ಚೆಲುವಂತಿರಲಿ ಮೈನಾಕನ ಸಹೋದರಿಯಂದವಂತಿರಲಿಶರಧಿತನುಜೆಯ ಸೌಂದರಿಯವನುಮರಸಿತೆಂಬುದು ಲೋಕದೊಳಗಾಸರಸಿಜಾಕ್ಷಿಯ ಬಗೆಗೆ ಸರಿಯಿಲ್ಲರಸ ಕೇಳೆಂದ

ಮಿಸುನಿಯೋಲೆಯ ಢಾಳ ಕದಪಿನೊಳೆಸೆಯೆ ಮೇಲುದು ಜಾರೆ ಕುಚಭರಕುಸಿಯೆ ನಡುವಲ್ಲಾಡೆ ಮಸಗಿದ ಮಂದಹಾಸದಲಿಎಸೆವ ಸೋರ್ಮುಡಿ ಭಾರದಲಿ ಬಾಗಿಸಿದ ಕೊರಳಿನ ಕೈಯ ವೀಣೆಯಬಿಸರುಹಾಕ್ಷಿಯ ಸೊಬಗ ಬಣ್ಣಿಸಲರಿಯೆ ನಾನೆಂದ

ಹೇಳುತಿರೆ ನುಡಿನುಡಿಗೆ ಮೆಚ್ಚುತಕೇಳಿ ತಲೆದೂಗಿದನು ನೈಷಧನಾಲಿಗಳಿಗೆ ಸರೋಜಮುಖಿ ಗೋಚರಿಸಿದಂತಾಗೆಬಾಲಿಕೆಯ ಮೋಹಿಸಿದ ಪುಷ್ಪಶರಾಳಿಯಲಿ ಮನನೊಂದು ಶಿವ ಶಿವಲೋಲಲೋಚನೆಯೆಂತು ತನಗಹಳೆನುತ ಚಿಂತಿಸಿದ

ವನಿತೆ ಗುಣಗಳೊಳೊಂದನೊಂದನುಮನದೊಳಗೆ ಸವಿಮಾಡಿ ತರುಣಿಯನೆನೆದು ಹೊಂಪುಳಿವೋಗಿ ವಿರಹದಿ ಮದನಗೀಡಾಗಿಘನವಿರಹದಲಿ ಕಾಯಕುಂದಿದಜನಪ ನಳನಿರೆ ಬೇಂಟೆಕಾರರಜನನಿವಹದಿಂ ಬಂದರಾ ಸಮಯದಲಿ ವನಚರರು

ಬಂದು ಫಲವಸ್ತುಗಳ ಕಾಣಿಕೆಯಿಂದ ಕೈಮುಗಿದರಸ ಮೃಗಘನವಿಂದು ಬೇಂಟೆಗೆ ಗಮಿಸಬೇಕೆನೆ ನೃಪತಿ ನಸುನಗುತಇಂದು ವಿರಹವ ಕಳೆವಡಿದು ಲೇಸೆಂದು ಶಬರರ ಕಳುಹಿಯೋಲಗದಿಂದಲರಮನೆಗೆಯ್ದಲಸ್ತಾಂಬುಧಿಯೊಳಿನನಿಳಿದ

ನಳಿನಸಖನುದಯದಲಿ ನಳನೃಪತಿಲಕ ಕರೆಸಿದ ಸಕಳದಳವನುಹೊಳೆವ ಖಡ್ಗಕಠಾರಿ ಮೊದಲಾದಖಿಳ ಕೈದುಗಳಬಲುಭಟರು ಬೇಂಟೆಯಲಿ ನಾನಾಬಲೆಗಳಂಟಿನ ಕೋಲು ಕಣ್ಣಿಯಚಲಯುತರು ಸಂದಣಿಸಿ ಮೆರೆದುದು ಪುರದ ಬಾಹೆಯಲಿ

ಅರಸ ಕೇಳ್ ಶಶಿಕುಲಶಿರೋಮಣಿಧರಿಸಿದನು ನವರತುನಮಯದಾಭರಣಗಳ ದಿವ್ಯಾಂಬರಾದಿ ಸುಗಂಧಲೇಪದಲಿತರಿಸಿಯೇರಿದ ವಾಯುವೇಗದತುರಗವನು ಸಂದಣಿಸಿ ಮೋಹರತೆರಳಿತಗಣಿತ ವಾದ್ಯದಲಿ ನೆಲ ಬಿರಿಯಲೈತಂದ

ಏನ ಹೇಳುವೆನರಸ ಹೊಕ್ಕರುಕಾನನವ ಬಳಸಿದರು ಮೃಗತತಿಯಾನಲಾಪುದೆ ತೆಗೆದು ಹಾಯ್ದುದು ಭಟರ ಘಲ್ಲಣೆಗೆಆನೆಗಳ ಕೆಡಹಿದರು ಬಲಸಂಧಾನದಲಿ ಹುಲಿ ಕರಡಿ ಮುಸು ಮೊಲವಾನರಾದಿ ಸಮಸ್ತ ಮೃಗಗಳ ತರುಬಿ ಕೆಡಹಿದರು

ಹತ್ತಿ ತದ್ಗಿರಿಶಿಖರವನು ಮರಮೊತ್ತದಲಿ ಬಲೆಗಳನು ಹಾಯ್ಕಿದರೊತ್ತಿ ಸೋಹಿದರೊಂದು ಘನತರ ಸಿಹವಬ್ಬರಿಸಿಹೊತ್ತ ಕೋಪದಿ ಸೈನ್ಯವನು ಮುರಿದೊತ್ತಿ ಬರುತಿರೆ ಕಂಡು ನೃಪ ಬೆಂಬತ್ತಿ ಕಡಿದನು ಮೃಗಪತಿಯ ವನವೆಲ್ಲ ಬೆರಗಾಗೆ

ನಿಲಿಸಿ ಬೇಂಟೆಯನಲ್ಲಿ ಬಳಲಿದಬಲಸಮೇತದಿ ಬಂದು ತತ್ಪುರವಳಯದುದ್ಯಾನವನು ಹೊಕ್ಕನು ಬಲಿದ ವಿರಹದಲಿನಲವು ಹಿಂಗಿದ ಮನದ ದುಗುಡದೊಳಿಳಿದು ತೊಳೆದನು ಜಾನುಜಂಘೆಯಕೊಳದಿ ಪರಿಹೃತನಾಗಿ ಸಂಚರಿಸಿದನು ವನದೊಳಗೆ

ಆ ಕೊಳದ ತೀರದಲಿ ತರುಗಳನೇಕವದರೊಳಗೊಂದು ಠಾವಿನೊಳೇಕವೃಕ್ಷದ ನೆಳಲಿನಲಿ ನವಕುಸುಮದಿಕ್ಕೆಯಲಿಆ ಕಮಲಜನತುರಗ ನಿದ್ರಾವ್ಯಾಕುಲದಿ ಮಲಗಿರಲು ಕಡ ಶುಭಾಕರೋನ್ನತ ಶುಭ್ರತೇಜದ ರಾಜಹಂಸವನು

ಅರುಣಮಯದಾನನದ ಪದಯುಗಗರಿಗಳುನ್ನತಧವಳ ದೇಹದಪರಮತೇಜದೊಳೆಸೆವ ಹಂಸೆಯ ಕಂಡು ಬೆರಗಾಗಿಹರಹರಾ! ಇದರಾಯತವ ಮುರಹರನು ತಾನೇ ಬಲ್ಲನೆನುತಕ್ಕರದಿ ಮೆಲ್ಲನೆ ಕರವ ನೀಡುತ ಪಿಡಿದ ಹಂಸವನು

ಒದರಿ ಕುಣಿಯಲು ಹಸ್ತದೊಳಗದಕದಲದಂತಿರೆ ಪಿಡಿಯಲರಸನವದನಕಮಲವ ನೋಡಿ ಹೆದರಿತು ಬಹಳ ಭೀತಿಯಲಿಹೃದಯ ಕರಗುವ ಮಾತನೆಂದುದುಮದಕರಿಗೆ ನೊರಜಂತರವೆ ಕೈಸದರದವರನು ಕೊಲುವುದೇನರಿದೆಂದುದಾ ಪಕ್ಷಿ

ಕರಿಗಳನು ಮುರಿದಿಡುವ ಸಿಂಹಕೆನರಿಗಳಿದಿರೇ ತಾನು ನಿನಗಂತರವೆ ಸಾಕಂತಿರಲಿ ಕಂಡವರೆಲ್ಲ ಕಡುನಗರೆಅರಿಭಯಂಕರ ಶತ್ರುಗಳ ಸಂಹರಿಸುವುದು ನೃಪನೀತಿ ನಿನಗಿದುತರವೆ ಬಿಡು ಪರಹಿಂಸೆ ದೋಷವಿದೆಂದುದಾ ಪಕ್ಷಿ

ಬಡಬಗೌತಣವಿಕ್ಕುವಡೆಯೊಕ್ಕುಡಿತೆ ಹಾಲೇ ಮಂಜು ಸುರಿಯಲ್ಕೊಡನೆ ಕೆರೆ ತುಂಬುವುದೆ ನೃಪ ನೀನೆನ್ನ ಭುಂಜಿಸಲುಒಡಲಿಗಾಪ್ಯಾಯನವೆ ಕೇಳೆಲೆಪೊಡವಿಪತಿ ಬಿಡು ನನ್ನ ಮನೆಯಲಿಮಡದಿ ಸುತರುಮ್ಮಳವ ನೋಡೆಂದೊರಲಿತಾ ಪಕ್ಷಿ

ಮರನ ಹುತ್ತವನೇರಿದರ ಸಂಗರದಿ ದೈನ್ಯಂಬಡುವರಾಯುಧಮುರಿದ ಬರಿಗೈಯವರ ನೀರೊಳು ಹೊಕ್ಕು ನಿಂದವರತರುಣಿಯರ ಮರೆಗೊಂಡವರ ನಿಬ್ಬರದಿ ಮುರಿದೋಡುವರ ನಿದ್ರಾಭರದೊಳಿರ್ದರ ಕೊಲುವುದುಚಿತವೆಯೆಂದುದಾ ಪಕ್ಷಿ

ನುಡಿಗೆ ನಾಚಿದನರಸ ಹಂಸದನಡವಳಿಗೆ ಮೆಚ್ಚಿದನು ನಿನ್ನನುಹಿಡಿದು ಕೊಲುವವನಲ್ಲ ನಿನ್ನಾಲಯಕೆ ಹೋಗೆಂದುಬಿಡಲು ರೆಕ್ಕೆಯ ಕೊಡಹಿ ಹಾರಿತುವೊಡನೆ ಮರಳಿತು ಧರೆಗೆ ರಾಯನಕಡೆಗೆ ಮಂಡಿಸಿ ಕುಳಿತು ನುಡಿದುದು ನೃಪಗೆ ವಿನಯದಲಿ

ಭೂರಮಣ ಕೇಳಸುವ ಕಾಯ್ದುಪಕಾರಮಾಡಿದೆ ನೀನು ನಿನಗುಪಕಾರಮಾಡುವೆನೆನಲದೇನೆಂದರಸ ಬೆಸಗೊಂಡಸಾರಹೃದಯನೆ ಚಿತ್ತವಿಸು ವಿಸ್ತಾರದಿಂದರುಹುವೆನು ಭುವನದೊಳಾರಿಗುಂಟೇ ಪರಮಸುಕೃತಗಳೆಂದುದಾ ಪಕ್ಷಿ

ಅರಸ ಕೇಳತಿದೂರದಲಿ ಸುರಪುರವ ಪೋಲ್ವ ವಿದರ್ಭಪಟ್ಟಣದರಸು ಭೀಮನೃಪಾಲನಾತನ ತನುಜೆ ದಮಯಂತಿಪರಮ ಪುಣ್ಯಾಂಗನೆ ಮಹಾಸುಂದರಿ ನಿಪುಣೆ ಗಜಗಮನೆ ನಯಗುಣಭರಿತೆ ಸೊಬಗಿನ ಸೋನೆ ತಾನಿಹಳಲ್ಲಿ ವನಜಾಕ್ಷಿ

ಪೊಗಳಲಳವೇ ಸತಿಯ ಚೆಲುವಿನಬಗೆಯ ಭಾವಿಸಿ ನೋಡಲತಿ ಸೋಜಿಗವು ನೆರೆ ದಮಯಂತಿ ಯೌವನರೂಪರೇಖೆಯಲಿನಗೆಮೊಗದ ಪೊಂಬೊಗರ ಮಿಂಚಿನಬೊಗಸೆಗಂಗಳ ಸೆಳೆನಡುವ ಸೆಳ್ಳುಗುರ ಬೆಡಗಿನ ಕಾಂತೆ ರಂಜಿಸುತಿರ್ಪಳಾ ಪುರದಿ

ಕ್ಷಿತಿಯೊಳಿಹ ಸತಿಯರಲಿಯಮರಾವತಿಯೊಳಿಹ ಪೆಣ್ಗಳಲಿ ಮೇಣಾವಿತಳದಲ್ಲಿಹ ನಾರಿಯರಲ್ಲೀಕ್ಷಿಸಿದಡಾ ಸತಿಗೆಪ್ರತಿಯ ಕಾಣೆನು ರೂಪಿನಲಿ ನೀನತಿ ಚೆಲುವ ನಿನಗವಳು ಪಾಸಟಿಸತಿಗೆ ನೀನೇ ರಮಣನಲ್ಲದೆ ಕಾಣೆನಿತರರನು

ಆವಳು ನಿನಗೊಲಿವಂತೆ ಮಾಡುವೆಶಿವನ ಕೃಪೆ ನಿನಗುಂಟು ನಮ್ಮಲಿಸವಡಿನುಡಿಯಿಲ್ಲರಸ ನಂಬುವುದೆನ್ನ ನೀನೆನಲುಅವನಿಪತಿ ನಸುನಗುತ ಹಂಸೆಯಸವಿನುಡಿಗೆ ಮನಸೋತು ವಿರಹದತವಕದಲಿ ಹೇವರಿಸಿ ನುಡಿದನು ನೃಪತಿ ಖಗಪತಿಗೆ

ಮನಸಿಜನ ಶರಹತಿಗೆ ನೊಂದೆನುತನುವ ಸೈರಿಸಲಾರೆನೆನಗಾವನಿತೆಯನು ಸೇರಿಸುತ ಸಲಹೆನ್ನಸುವ ಕರುಣದಲಿಎನಗೆ ನೀನೇ ಪರಮಬಾಂಧವಮನಕೆ ಹರುಷವ ಮಾಡು ನೀನೀಬನಕೆ ಬಹ ಪರಿಯಂತ ತಾನಿಲ್ಲಿಹೆನು ಹೋಗೆಂದ

ಕೇಳು ಧರ್ಮಜ ನಳನೃಪಾಲನಬೀಳುಕೊಂಡು ಸರಾಗದಿಂದ ವನಾಲಯವ ಹೊರವಂಟು ತೆರಳಿತು ವಾಯುವೇಗದಲಿಆ ಲತಾಂಗಿಯ ಪತಿಯ ಕೀರ್ತಿ ವಿಶಾಲವಾದದದಲಿ ರಾಜಮರಾಳ ಗಗನಕೆ ಹಾಯ್ದು ಕಂಡಿಳಿತಂದುದಾ ಪುರಕೆ

ಕನಕಮಣಿ ನಿರ್ಮಿತದ ಸೌಧದಿಜನನಿಕರ ಸಂದೋಹದಲಿಯುಪವನದ ವೀದಿಗಳೆಸೆದು ಮೆರೆವ ವಿದರ್ಭ ಪಟ್ಟಣಕೆಮನವೊಲಿದು ನಿಜಬಳಗ ಸಹಿತಂಗನೆಯರೋಲಗದಲ್ಲಿ ಮದನನಮೊನೆಯಲಗಿನಲಿ ಬಳಲ್ವ ಸತಿಯನು ಕಂಡುದಾ ಹಂಸೆ

ನೀಲಮಣಿಭಿತ್ತಿಗಳ ವಜ್ರದಸಾಲುಗಂಬದ ಪಚ್ಚೆ ಹಲಗೆಯಮೇಲೆ ಮುತ್ತಿನ ಲೋವೆ ಹವಳದಿ ಕಡೆದ ಬೋದಿಗೆಯಸಾಲ ಮಣಿಮಂಟಪದಿ ಮಂಚದಮೇಲೆ ಮಂಡಿಸಿ ನಳನ ಚಿಂತೆಯತಾಳಿದಗನೆ ಸತಿಯರೊಡನಿರೆ ಕಂಡುದಾ ಹಂಸೆ

ಪೆರೆನೊಸಲ ಕತ್ತುರಿಯ ತಿಲಕದಕೊರಳ ಮುತ್ತಿನ ಹಾರ ರತ್ನದಬೆರಳ ಮುದ್ರಿಕೆಗಳ ಸುವರ್ಣದ ಕರದ ಕಂಕಣದಪರಿಪರಿಯ ನಿರಿಯುಡಿಗೆಗಳ ನೂಪುರದ ತೊಡರಿನ ದೇಸಿ ಮಿಗೆ ಬಳಸಿರಲು ತರುಣಿಯರದು ಸತಿಯನು ಕಂಡುದಾ ಹಸ

ತಳಿತ ಮೇಘದಿ ಹೊಳೆವ ಮಿಂಚಿನಬಳಗವೆನೆ ಹಂಸಗಳು ನಭದಿಂದಿಳೆಗಿಳಿದು ಸತಿಯರ ಸಭಾಮಂಡಲದಿ ಕುಳ್ಳಿರಲುನಳಿನಲೋಚನೆ ಕಂಡು ಪಕ್ಷಿಯಲಲನೆಯರ ಮೊಗ ನೋಡಿ ಹಂಸದಚೆಲುವ ಬಣ್ಣಿಸಿ ಹಿಡಿಯಬೇಕೆಂದೆನುತ ಗಮನಿಸಿದಳು

ಮೆಲ್ಲಮೆಲ್ಲನೆ ಅಡಿಯಿಡುತ ಕರಪಲ್ಲವವ ಚಾಚಿದಳು ನೂಪುರಘಲ್ಲುಘಲಿರೆನೆ ಅತ್ತಲಿತ್ತಲು ಸಾರುತಾ ಹಂಸೆನಿಲ್ಲದಗೈಸುತ್ತ ಬರಲಲ್ಲಲ್ಲಿ ಎಡರಿತು ಕುಸುಮಮಯ ನವಮಲ್ಲಿಗೆಯ ಬನದಲ್ಲಿ ಹೊಕ್ಕುದು ಹೊದರ ಹೊಸಮೆಳೆಯ

ಕೆಳದಿಯರ ಕೆಲಕೊತ್ತಿ ತಾನೇಮೆಳೆಯ ಹೊಕ್ಕಳು ಬಾಗೆ ಸೆಳೆನಡುಬಳುಕೆ ಕುಚಭಾರದಲಿ ಮೇಲುದು ಜಾರೆ ಮುಡಿ ಚದರೆಜಲಜಮುಖಿ ಬೆಮರಿಡಲು ಕೊರಳಿನಲಲಿತದೇಕಾವಳಿಗಳಲ್ಲಾಡಲು ಸೆರಗನಳವಡಿಸಿ ನಿಂದಳು ಬಳಲಿ ಬಿಸುಸುಯ್ದು

ಎಲೆ ಸರೋರುಹಗಂಧಿ ನೀನೆನಗೊಲಿದು ಮನದಲಿ ಹಿಡಿವೆನೆಂಬೀಛಲವಿದೇತಕೆ ಮಾಣು ನಾವಂಬರದ ಪಕ್ಷಿಗಳುನಿಲುಕುವವರಾವಲ್ಲ ಬರಿದೇಬಳಲದಿರು ತಾ ಬಂದ ಪರಿಯನುತಿಳುಹುವೆನು ನಿನಗೆಲ್ಲವನು ಕೇಳೆಂದುದಾ ಪಕ್ಷಿ

ನಳಿನಮುಖಿ ನಳಚಕ್ರವರ್ತಿಯಬಳಿಯ ವಾಹನವಾಗಿ ತಾನಿಹೆನೊಲಿದು ಸಲಹುವನೆನ್ನ ಪರಮಪ್ರೀತಿವಚನದಲಿಇಳೆಗೆ ನಳಕೂಬರ ಜಯಂತರಚೆಲುವ ಮದನನ ರೂಪರೇಖೆಯಹಳಿವುದಾ ನಳನೃಪನ ನಿಜಸೌಂದರ್ಯದಾಟೋಪ

ನಿನ್ನ ರೂಪಿಗೆ ಸಲುವುದೌ ನಳನುನ್ನತದ ಸೌಂದರ್ಯ ಜಗದೊಳಗಿನ್ನು ನಾ ಸರಿಗಾಣೆ ನಿಮಗೀರ್ವರಿಗೆ ಸಮನಹುದುಎನ್ನಲಾ ನುಡಿಗೇಳಿ ಹಂಸೆಗೆತನ್ನ ಶಿರವನು ಬಾಗಿ ಗುಣಸಂಪನ್ನೆ ನುಡಿದಳು ನಾಚಿ ನಸುನಗೆಯಿಂದ ವಿನಯದಲಿ

ಪರಮಗುಣನಿಧಿ ಪಕ್ಷಿ ಕೇಳ್‍ ಬಾಹಿರನು ಪಾತಕಿ ಮದನನೆಲೆ ನಿಷ್ಠುರದೊಳೆಸೆಯಲು ಪುಷ್ಪಬಾಣದಿ ನೊಂದುದೆನ್ನೊಡಲುಕರುಣರಸಧಾರೆಯಲಿ ತಾಪವಪರಿಹರಿಸಬೇಕೆಂದು ನೀನಾಧರಣಿಪತಿ ನಳನೃಪಗೆ ಬಿನ್ನೈಸೆಂದಳಿಂದುಮುಖಿ

ಪರರ ದುಃಖವ ಪರಿಹರಿಸಿ ಮಿಗೆಪರರಿಗುಪಕಾರಾರ್ಥವೆಸಗಲುಪರಮಪುಣ್ಯವಿದೆಂದು ಪೇಳ್ವರು ಪಿರಿಯರಾದವರುಪರಮಬಾಂಧವ ನೀನೆನಗೆ ಸತ್ಕರಿಸು ವಿರಹದಿ ನೊಂದವಳ ಕರಕರೆಗೆ ಗುರಿ ಮಾಡದಿರು ಸಲಹೆಂದಳು ಸರೋಜಮುಖಿ

ಬಲಿದ ವಿರಹಾಗ್ನಿಯಲಿ ನೊಂದೆನುಬಳಲಿದೆನು ತನು ಬಾಡಿ ತಾಪದಿನಲವು ಹಿಂಗಿತು ಬವಣೆ ಹೆಚ್ಚಿತು ತ್ರಾಣವೆಳದಾಯ್ತುಹಲವು ಮಾತೇನಿನ್ನು ನಳನೃಪತಿಲಕನೆನ್ನಯ ಪತಿಯಲಾ ಭೂತಳದ ಪುರುಷರು ಪಿತನ ಸಮ ಕೇಳೆಂದಳಿಂದುಮುಖಿ

ಅರಸ ಕೇಳಾ ಹಂಸ ತರುಣಿಯಕರುಣದಳತೆಯ ಕಂಡು ತಾ ಬಂದಿರುವ ಕಾರ್ಯದ ಹದನು ಲೇಸಾಯ್ತೆಂದು ಮನದೊಳಗೆಹರುಷ ಮಿಗೆ ಕೊಂಡಾಡಿ ಸತಿಯನುಕರೆದು ನುಡಿದುದು ನಿನಗೆ ನಳಭೂವರನ ಪತಿಯನು ಮಾಳ್ಪೆನಂಜದಿರೆಂದುದಾ ಹಂಸೆ

ಅಂತರಂಗದ ಬುದ್ಧಿಯನು ದಮಯಂತಿಗೆಲ್ಲವನರುಹಿ ತರುಣಿಯಸಂತವಿಟ್ಟಲ್ಲಿಂದ ಕಳುಹಿಸಿಕೊಂಡು ಬೇಗದಲಿಮುಂತಳರ್ದು ಮಿಗೆ ತನ್ನ ಬಾಂಧವಸಂತತಿಯನೊಡಗೊಂಡು ನಿಷಧನಚಿಂತೆಯನು ಪರಿಹರಿಸಬೇಕೆಂದೈದಿತಾ ಹಂಸೆ

ಆಗ ನಳಭೂವರನ ದಕ್ಷಿಣಭಾಗ ಭುಜನಯನಂಗಳದುರಿದುವಾಗ ಕೇಳಿದನಿದರ ಫಲವೇನೆಂದು ಭೂಸುರರಭೋಗಸುಖದರ್ಶನದ ಫಲವಿಂದೀಗಲಹುದೆನಲಾ ಸಮಯದಿ ಸರಾಗದಲಿ ನಡೆತಂದುದಾ ನೃಪನೆಡೆಗೆ ಕಲಹಂಸೆ

ಬಂದ ಹಂಸೆಯ ಕಂಡು ಮುಖಕಳೆಯಿಂದಲರಿದನು ನೃಪತಿ ಮನದಲಿಯಿಂದುಮುಖಿ ತನಗೊಲಿದ ಹದನಹುದೆಂದು ಹರುಷದಲಿಮಂದಗಮನೆಯ ಕಂಡಿರೇ ಏನೆಂದು ನುಡಿದಳು ಸತಿಯ ಬಗೆಯೇನೆಂದು ಕೇಳಲು ನೃಪಗೆ ಬಳಿಕಿಂತೆಂದುದಾ ಪಕ್ಷಿ

ಮಾನವಾಧಿಪ ಕೇಳು ಮನದನುಮಾನವನು ಬಿಡು ಗುಡಿಯ ಕಟ್ಟಿಸುನೀನೆಳಸಿದಿಷ್ಟಾರ್ಥಫಲ ಸಿದ್ಧಿಸಿದುದಿನ್ನೇನು?ಮಾನನಿಧಿ ನೀ ಮುನ್ನ ಮಾಡಿದನೂನ ಸುಕೃತದ ಫಲವೊ ನಿನ್ನನೆಧ್ಯಾನಿಸುವಳನವರತ ಮನ ಬೇರಿಲ್ಲವಾ ಸತಿಗೆ

ಆ ತಳೋದರಿ ನಿನ್ನ ಮೇಲಣಪ್ರೀತಿಯಿಂದೊಲಿದಂತರಂಗದಿಕಾತರಿಸುತಿಹಳಂಗಜನ ಉಪಟಳದಿ ಕಡುನೊಂದುಧಾತುಗುಂದಿಹಳಾ ತರುಣಿ ಮನಸೋತು ಹಂಬಲಿಸುವಳು ನಳನೃಪನಾತನೇ ಪತಿಯೆಂದು ನಂಬಿಹೆನೆಂದಳಿಂದುಮುಖಿ

ಎಲೆ ನೃಪತಿ ದಮಯತಿಯನು ನಿನಗೊಲಿಸಿ ಬಂದೆನು ಭಾಷೆ ಸಂದುದುಲಲನೆಯನು ನೀ ಮದುವೆಯಾಗಿಂದೆನ್ನ ಕಳುಹೆನಲುಬಳಲಿದಿರಿ ನಮಗೋಸುಗವೆ ಬಲುಹಳುವದಲಿ ತೊಳಲಿದಿರಿ ಕಷ್ಟವಬಳಸಿದಿರಿ ಸಾಕಿನ್ನು ಗಮನಿಸಿಯೆಂದು ಬೀಳ್ಕೊಟ್ಟ

ಕೇಳು ಪಾಂಡವತನಯ ರಾಜಮರಾಳ ತೆರಳಿದುದತ್ತ ನಳಭೂಪಾಲನಿತ್ತಲು ಬಂದು ಹೊಕ್ಕನು ತನ್ನ ನಗರಿಯನುಆಳುಮಂದಿಯ ಕಳುಹಿ ಮನದಿ ವಿಶಾಲವಿರಹದ ತಾಪದಲಿ ಮಿಗೆಕೇಳಮೇಳ ವಿನೋದವಿಭವವನುಳಿದನಾ ನೃಪತಿ

ಅತ್ತಲಾ ದಮಯಂತಿ ನಳನೊಳುಚಿತ್ತವಿಟ್ಟಳು ನೃಪಗೆ ವಿರಹವುಹೊತ್ತಿತಾಕೆಯ ಮೇಲೆಯಿರ್ವರಿಗಾಯ್ತು ಸಂತಾಪಚಿತ್ತಜನು ಪಾತಕನು ವಿರಹವಹೊತ್ತಿಸಿದನಿಬ್ಬರಿಗೆ ಮದನನಹೆತ್ತವನು ವರಪುರದ ಚೆನ್ನಿಗರಾಯ ಕರುಣಿಸಿದ