EN | KA

Menu

I

ಮದನತಿಲಕ

ಶ್ರೀವಧುವಿಂಗಗಜೆಗೆ ವಾಕ್ಫ್ರೀವಧುವಿಂಗಜನನಜನನಜನಂ ಕುಸುಮಾಸ್ತ್ರಾವಳಿಯಿಂದೋಲೈಸಿದಭಾವೋದ್ಭವನೀಗೆ ನಮಗೆ ಸುಖಸಂಪದಮಂ

ಶ್ರೀಯನುರಃಸ್ಥಲದೊಳ್ವಾಕ್ಫ್ರೀಯಂ ನಿಜವದನಕಮಲದೊಳ್ಕೂರ್ತ ಜಯಶ್ರೀಯಂ ಭುಜದೊಳ್ಕೀರ್ತಿಶ್ರೀಯಂ ದಿಕ್ತಟದೊಳ್ನಿಲಿಸಿದಂ ರೇಚನೃಪಂ

ತ್ರಿಜಗದ್ವ್ಯಾಪಿತ ಕೀರ್ತಿ ಕುಂತಳಧರಾಧೀಶಂ ದ್ವಿಷದ್ಭೂಮಿಪವ್ರಜಕಾಲಂ ಹರಿಮೂರ್ತಿ ನಿರ್ಮಳಗುಣಂ ಸಿಂಹಾಸನಾಧಿಷ್ಠಿತಂವಿಜಯಾದ್ಯಂ ವಿಳಯಾತಿವರ್ತಿ ಜಯಸಿಂಹಂ ದೇವದೇವಾಂಘ್ರಿಪಂಕಜಭೃಂಗಂ ನುತಚಕ್ರವರ್ತಿತಿಲಕಂ ಚಾಳುಕ್ಯವಂಶೋತ್ತಮಂ

ಬಳವದ್ದ್ವಿಟ್ಸಮವರ್ತಿ ಕಂಟಕಶಿರೋವ್ಯುತ್ಕೀರ್ತಿ ಸಮ್ಯಗ್ಜಿತಾಖಿಳಪೃಥ್ವೀವರ ಲಾಭಪೂರ್ತಿ ಮಗಧೋರ್ವೀಪಾಲ ನೀಲಾರ್ತಿ ಕುಂತಳದೇಶೋದ್ಭವ ಚಕ್ರವರ್ತಿ ಭುವನಪ್ರೋತ್ಕೀರ್ತಿ ಲುಪ್ತಪ್ರಜಾಕುಳವಿಶ್ವಾರ್ತಿ ಮುಕುಂದಮೂರ್ತಿ ನೆಗೞ್ದಂ ಶ್ರೀಕೀರ್ತಿವಿದ್ಯಾಧರಂ

ಚೋಳಕುಲ ವಿಲಯಕಾಲಂಕಾಳಮುಖ ಪ್ರಾಪಿತೋದ್ಧತಾಹಿತ ಮಾಳಂಮಾಳವರಾಜಕ ಶೂಲಂಶೂಲಾಯುಧ ಚರಣಕಮಲ ಭೃಂಗಂ ಸಿಂಗಂ

ಎನಿಪ ಜಯಸಿಂಹ ದೇವನಮನುಚರಿತನ ತೊಡೆಯೆ ತೊಟ್ಟಿಲಾಗಿರೆ ಬಳೆದಂವಿನಯಾಂಬುರಾಶಿ ವರಬುಧವಿನತಾಂಘ್ರಿ ಕಿರೀಟಕೋಟಿ ಘಟ್ಟಿತ ಚರಣಂ

ಅಮಿತ ಗುಣಂ ರೇಚಂ ವಿಕ್ರಮದಿಂದಂ ಸ್ವಸ್ತಿ ಸಮಧಿಗತ ಪಂಚಮಶಬ್ದ ಮಹಾಸಾಮಂತಾಸ್ಪದಮುಮೆಲ್ಲಮಂ ಪಡೆದನೀಯೆ ಜಯಸಿಂಹ ನೃಪಂ

ಪಿರಿಯರ ಪೆಸರ್ವೇೞ್ದೆಮ್ಮಂಪೊರೆವಾಳ್ದನ ಪಾೞಿಯವರೆಮೆನ್ನದೆ ಪತಿಯಂಪಿರಿದುಂ ಶೌರ್ಯದೆ ಮೆಚ್ಚಿಸಿಪರಮ ಮಹಾಸ್ಪದಮನೆಯ್ದೆ ಪಡೆದಂ ರೇಚಂ

ಪ್ರತಿಪತ್ತಿಯ ಮೆಯ್ಮೆಯನಾನತಿಶಯಿಸಲ್ಕರೆಯೆ ಕೇಳ್ದು ಸಿಂಹಾಸನದೌಸ್ಥಿತಿಯೞಿಯೆ ರೇಚಗಾತ್ಮಪ್ರತಿಪತ್ತಿಯನಿತ್ತನೊಸೆದು ಜಯಸಿಂಹನೃಪಂ

ಸ್ಫುರಿತೋದ್ಯನ್ನಕ್ರಚಕ್ರಕ್ಷುಭಿತ ಫಣಿಫಣಾಭೀಳರತ್ನಪ್ರಭಾಭಾಸುರಗಂಭೀರಾಬ್ಧಿವಿಸ್ತಾರಿತನಿಖಿಳಧರಾದೇವಿಯಂ ದೇವಭೂಮೀಶ್ವರಮಸ್ತನ್ಯಸ್ತಪಾದಾಂಬುಜ ಜಯಜಯಸಿಂಹಾವನೀಶಂಗೆ ವೀರಾಭರಣಂ ನಿಷ್ಕಂಟಕಂಮಾಡಿದನತುಳಬಲಭ್ರಾಜಿತಂ ರೇಚಭೂಪಂ

ಮಳಯಾಂಧ್ರಾರ್ಬುದ ಮಾಗಧ ದ್ರವಿಳವೆಂಗೀ ವಂಗ ನೇಪಾಳ ಕೇರಳ ಪಾಂಚಾಳ ಕಳಿಂಗ ಕೊಂಕಣ ಸೌರಾಷ್ಟ್ರಾಭೀಳ ಕಾಶ್ಮೀರ ಕೋಸಲ ಲಂಪಾಕ ತುರುಷ್ಕ ಗೌಳ ಖಸ ಕಾಮಾಕ್ಷೀಂದ್ರ ಕಾಂಭೋಜ ಸಿಂಹಳ ದೇಶಾಧಿಪರಂ ಭಯಂಗೊಳಿಸಿದಂ ವಿಕ್ರಾಂತದಿಂ ರೇಚಿಗಂ

ಸಕಲಪ್ರತ್ಯರ್ಥಿ ಧಾತ್ರೀಪರಿತಲ ಪರಿವೃಟ್‌ ಗೀರ್ವಾಣ ನಿರ್ವಾಣ ಢಣಕರಂ ಶುಭ್ರಾಭ್ರದುಗ್ಧಾರ್ಣವ ಪುರಹರಗೋರಾಜ ಗೋರಾಜ ಗೋರಾಜ ಕರೀಂದ್ರ ಶ್ವೇತಪದ್ಮ ತ್ರಿದಿವಭವಧುನೀಹಾರ ನೀಹಾರಕರಾರ್ದ್ಧೇಂದುಪ್ರಭಾಭಾಸುರ ವಿಶದಯಶಂ ನೀತಿಮಾಂಧಾತ ಭೂಪಂ

ಅಭಿನವ ಭಗದತ್ತಂ ಭೋಗದೊಳ್ ಚಾರುದತ್ತಂಸ್ವಭುಜವಿಜಯ ಪಾರ್ಥಂ ಖಂಡಿತಾರಾತಿ ಸಾರ್ಥಂಸುಭಟಕಟಕ ಸಾಮಂತಾವತಂಸಂ ಘನಾಂಸಂವಿಭವಜಿತಬಿಡೌಜಂ ರೇಚಕಾಂತಾ ಮನೋಜಂ

ಇದು ಚಕ್ರವೃತ್ತಮಕ್ಕುಂ–

ಗಂಗಾ ಚಂದ್ರ ಹಿಮಾಚಲಾಭಯಶನುತ್ತಪ್ತೋಗ್ರರಾಜ ಪ್ರಭಂಗಂಗೋದ್ಭೂಸ್ಥಿರ ಶಕ್ರನಪ್ರಿಯತಮೋಮಿತ್ರಂ ದಿವಾಕೃತ್ಸಮುತ್ತುಂಗಾರಾಜಿತ ಸದ್ವಿಪಂ ನಯವಿದಂ ದುರ್ಗಾಭ್ರಪಾತದ್ರುಮಂವಂಗಾಂಗಾಂಧ್ರ ಕಳಿಂಗ ವಾರ್ಜತುಹಿನಾಭಂ ರೇಚಿ ಮಂತ್ರೋದ್ಭವಂ

ವಚನ. ಇದುವೆ ಎಡೆಯಕ್ಕರಮುಂ ಕಿಱಿಯಕ್ಕರಮುಂ ಚೋಪದಿಗೆಯುಂ ಎರಡು ಷಟ್ಟದಿಯುಂ ತ್ರಿಪದೋನ್ನತಿಯುಂ ವಲ್ಜಮುಖಿಯುಂ ತೋಟಕಮುಂ ಚಿತ್ರ ಪದಮುಂ ಕಮಳಮುಂ ಚಂದ್ರಿಕೆಯುಮಿಂದುಮುಖಿಯುಂ ಮೊದಲಾಗೆ ೮೪ ವೃತ್ತಮುಂ ಪಾದಮುರಜ ಚಂಡಮೂಲ ಗೋಮೂತ್ರಿಕೆಯುಮಕ್ಕುಂ

ಅಂಗನೃಪಾಯತಿ ತುಂಗಭುಜಂ ಕಲಿಯಿಂಗಿತಶಿಕ್ಷಿತನಿಂದುಯಶಂಪಿಂಗಜ ಸಂಗತ ಭೃಂಗಕಚಂ ಕಲಿ ಮಂಗಳಲಕ್ಷಣಯುಕ್ತನಿವಂಸಂಗರಕೇಸರಿ ಸಂಗಗುಣಂ ಬಲಿ ಭೃಂಗರದಕ್ಷನುವಾಯತನುಂಸಂಗದ ಸನ್ಮತಿ ರಂಗವಹಂ ಸಲೆ ಭಂಗಿಯಿನೀಕ್ಷಿಸಿ ರೇಚನೃಪಂ

ಸುರಹಿತನಲ್ಲದೆಯುಂ ತಾಂಸುರಹಿತಕರನರಸನಲ್ಲದರಸಂ ಕಮಳಾಕರನಲ್ಲದೆಯುಂ ಕಮಳಾಕರನೆನಿಕುಂ ರೇಚನೃಪತಿ ವಿಶ್ವಂಭರೆಯೊಳ್

ಅತನುವಲ್ಲದ ಪರಿಭವಂಬಡೆಯದ ಪೆಸರ ಸೌಭಾಗ್ಯಕ್ಕೆ ಕೆಳೆಗೊಳ್ಳದರತಿಗೆ ಸೋಲದ ಬೈಗುಳಿಂಗೆ ಪಕ್ಕಾಗದೋಪರಂ ಮಱುಗಿಸಿ ಬಿಸುಸುಯ್ಸದಸತತಮತಿಕೃಷ್ಣನಲ್ಲದ ಕೂರದರ ದಂಡಿಸಲ್ನೆಱೆವ ನೀಱಂ ತಾನೆಂಬವ್ರತಕೆ ತಪ್ಪದ ಕಾಮನಪ್ಪುದಱೆಂದಭಿನವಕಾಮಂ ರೇಚನೃಪಂ

ಕಾಮದೇವ ದತ್ತಕನಿಂದ್ರರಿಂದಮಾನಗ್ಗಳಂ ಸೊಬಗಿನೊಳೆಂದು ಪೊಂಗಿತಾಮೆ ತಮ್ಮ ಮನೆಗಳೊಳ್ಪಾಡಿಸುವರವರೆಲ್ಲ ತಪ್ಪದೆ ಪೋಲ್ತಪರೇಕಾಮಸನ್ನಿಭರೇಚನೃಪನಂ ತೆ ಗಣಿಕೆಯರ್ಪಲರುಂ ಕೂರ್ತು ಬಂದುತಾಮೆ ಲಂಚಮನಿತ್ತೊಡಗೂಡಿರ್ದು ಸೊಬಗಂ ಪಾಡಿಸುವುದು ಚದುರಗಪ್ಪಂ

ಕುರುಳಂ ಚೆಂಬೊನ್ನಂ ಕೇಶಮಂ ಮುಂಗಯ್ಯಂ ಹಾರಮಂ ನೇವುರಮಂಬೆರಲಂ ಮೆಯ್ಯಂ ವಸ್ತ್ರಮಂ ಪದಕಮಂ ಕೇಯೂರ ಕುಂಡಲಮಂಸರಿಗೆಯೆಂಬಿವಂ ಕೊಟ್ಟು ಮೂವಣ್ಣಂಬಂದು ಕೆರ್ಪುಗಳಂ ಕರ್ಚಿ ಬಯಲೆನಿಸಿನೆರೆವರಬಲೆಯರ್ ಬೇಟದೊಳ್ ರೇಚಿಯೊಳೆಂದೊಡೀ ಸೊಬಗನೇವಣ್ಣಿಪುದೋ

ಕಡುಪನು ಕಾಣ್ಕೆ ರೂಪು ನೆನಪಣ್ಮೞಿದಾದೆಡಱಂದೆ ವಂಚನಂಬಡಿಪಮಗಲ್ಕೆ ಪತ್ತುಗೆ ನಯಂ ತೆರಪಾಂಕೆ ನಿಮಿರ್ಕೆ ಬಂಧನಂತೊಡಕುಳಿಸಕ್ಕಿ ಮಪ್ಪಸರಗೋಚರವಟ್ಟ ಬೇಱೊಟ್ಟಲಿಂತು ನೇರ್ಪಡು ನೆಲೆ ಚಿತ್ರಮೆಂಬ ಭೃಗುವಿದ್ಯೆಯೊಳಾರ್ದೊರೆ ರೇಚಭೂಪನೊಳ್(?

ಧಾರೆ ಗತಿ ಲಯಮಯ್ದು ಕಾಯಕ್ಷಮಂ ತಿತಿಕ್ಷೆ ಪ್ಲುತ ನೇಱಿ ತುರಗಸಮಾನಂಬಾರಿ ಕೊಸೆ ಮುಷ್ಟಿ ಭಾಗಂ ವ್ಯೂಹಂ ನಿವರ್ತನೆ ಪದಂ ಯತಿ ಗಾತ್ರವೆವಿ ಮಾರ್ಗಂವಾರಿಬಂಧನಮಾ ಭೌಮಂ ವೈಹಾಯಸಂ ವಯಸಂ ಯಂತ್ರ ಕ್ಷೇತ್ರ ವಹಳಿ ಸತ್ತ್ವಂದಾರಿಯೆಂಬ ಭೇದಂಗಳಿಂದಶ್ವಮನೇಱಲ್ ರೇಚಿಗನೃಪತಿ ತಾನೆ ಬಲ್ಲಂ

ವನಜಾತ್ಯಶ್ವ ಸುವಂಶಲಕ್ಷಣಗುಣಂ ಸತ್ತ್ವಂ ಜವಂ ಶಿಕ್ಷೆ ಬಂಧನಮಾರ್ಪುಂ ನಸೆ ಪಾನ ಪಿಂಡ ಕಬಲವ್ರಾತಂ ಗುಣಂ ಕ್ಷೀಣವರ್ಧನೆ ಸಂಜುಷ್ಟಮದೋಷಭಾರವಿದಿತಾಧಾರಾತಿಮತ್ತೇಭ ಭೇದನಮೆಂಬೀ ಗಜವಿದ್ಯೆಗೋಜನಿಳೆಯೊಳ್ ಸಾಮಂತನಾರಾಯಣಂ

ಮದಮಾ ನಸೆಯೆಱಕಂ ಜಾಣ್ಪದಿರೆಂಬುವನಱಿದು ತನ್ನ ತೊಡೆಗಳ್ಗೆಡೆಗುನ್ಮದಕರಿಯಂ ಬರ್ದೆಯುಮಂಮುದದಿಂ ಶ್ರೀರೇಚನೃಪತಿ ಬಸಮಾಗಿಸುವಂ

ಗತಿ ಮಾರ್ಗಂ ಶ್ರುತಿ ದೇಸೆ ನುಣ್ಪು ಗಮಕಂ ಬಂಧಂ ಕ್ರಮಂ ರೌಕುಳಂಕೃತಿಯರ್ಥಂ ಲಯ ತಾಳ ಸೌಷ್ಠವ ಗುಣಂ ಬಣ್ಣಂ ಕ್ರಿಯಾಕಾರಕಂಯತಿ ತಾಳಂ ರಸಭಾವವಿಂಪಭಿನಯಂ ಪ್ರಾಣಂ ಪದಂ ಛಂದಮಾಣತಿ ಶಾರೀರಮೆನಿಪ್ಪ ಗೀತದೆಡೆಯೊಳ್ ರೇಚಂ ಸರೋಜಾಸನಂ

ನರನಾಥಂ ರೇಚಂ ಶ್ರೀನಿರುತಂ ತ್ರಿಸ್ಥಾನಶುದ್ಧಿಯಿಂತೀ ಬುಧರಂಪರಮಂ ಪರಮಂ ತನ್ನಯಸರದಿಂ ಸೋಲಿಸಿದನಿನ್ನವಚ್ಚರಿಯೊಳವೇ

ತನಗಿಲ್ಲದ ಭಯಮಂ ಕೊಟ್ಟು ನಿರಂತರಮನ್ಯನೃಪರೊಳಿಲ್ಲದಭಯಮಂಘನಶೌರ್ಯಮುಮಂ ಕೊಂಡಂಮನೆಯೊಳ್ ರೇಚಿಗಮಹೀಶನೇನಚ್ಚರಿಯೋ

ಇರ್ಮಡಿ ಹರಹಾಸಕ್ಕೆ ಪದಿರ್ಮಡಿ ದುಗ್ಧಾಬ್ಧಿಗಂಬರಾಪಗೆಗತ್ತಂನೂರ್ಮಡಿ ಹಿಮಶಿಖರಿಗೆ ಸಾಸಿರ್ಮಡಿ ಮಿಗಿಲಾಯ್ತು ರೇಚಿಗನ ವಿಶದಯಶಂ

ಇದುವೆ ಗೋಮೂತ್ರಿಕೆಯುಂ ಮುರಜಬಂಧಮುಮಕ್ಕುಂ –

ಕಲಿಯೆ ಸೊಬಗನೆ ಕರಂ ನಿರ್ಮಲನೆ ನಿರುತಪದನೆ ಶುಚಿಯೆ ದಾನಿಯ ರೇಚಂ

ಆದಿಯಮಕಂ-

ಭವನೆನಿಸಿದ ಮಹಿಮೆ ಭವೋದ್ಭವನೆನಿಸಿದ ಶಕ್ತಿ ನಾಕಲೋಕೇಶ್ವರಸಂಭವನೆನಿಸಿದ ಗಂಡು ಮನೋಭವನೆನಿಸಿದ ಸೊಬಗು ರೇಚಭೂಪಾಲಕನಾ

ಎನೆ ನೆಗೞ್ದ ರೇಚಭೂಪನಮನೋಜ್ಞೆ ಲಾವಣ್ಯರೂಪಲಕ್ಷಣಯುತೆ ಮಾನಿನಿ ನುಡಿಗುಂ ನೃಪನೊಳ್‌ ಮಿಂಚಿನ ಗೊಂಚಲಿವೆನಿಸಿ ಪೊಳೆಯೆ ದಶನದ್ಯುತಿಗಳ್‌

ಮೃದುಮಧುರ ಗಭೀರತರಂವಿದಿತಂ ಲಲಿತಂ ವಿಮುಗ್ಧಮತಿಚಾತುರ್ಯಂಸದಯಂ ಧರ್ಮ್ಯಂ ವಿನಯಾಸ್ಪದಮಿಂತಿದೆ ನೀತಿಯೆಂಬಿನಂ ಸತಿ ನುಡಿದಳ್‌

ಮೃಗಮದಕರ್ಪೂರಯುತಂಮಗಮಗಿಪ ಕದಂಬದಂಬುಲದ ಕಂಪಂ ನೆಟ್ಟಗೆ ಮುಖಪದ್ಮದ ಗಂಧಂಮಿಗೆ ಪಂಕಜವಕ್ತ್ರೆ ನಯದೆ ನುಡಿಗುಂ ಪ್ರಿಯನೊಳ್‌

ಕೇಳ್ದು ಸೋಲದರೊಳರೇಕಾದಿ ಸೋಲದರೊಳರೇಬಾದುಗೆಯ್ಯದರೊಳರೇಮೇದಿನೀಪತಿ ನಿಮಗೇಂ

ರೂಪು ಸೌಭಾಗ್ಯಂ ಕುಲಮಭಿಮಾನಮಣ್ಮೊಳುನುಡಿ ಶಮಂ ಭರಣಂ ದಾನಂಕ್ಷ್ಮಾಪಣುಗುಣಮಿಂತಿನಿತುಂ ರೇಚಿಗಮಹೀಶ ನಿನಗೆಂದುಂ ಸಹಜಂಗಳಪ್ಪುದಱಿಂಭೂಪ ನಿನಗುಳ್ಳ ಗುಣಮಿವೆಲ್ಲವರ್ಗಿಲ್ಲಂ ಸ್ತ್ರೀಯರನೊಲಿಸುವ ಭೇದಂಗಳಂಸೋಪದೇಶಮೆಂಬಂತಿರೆ ಬೆಸಸಿಮೆಂದು ಸತಿಯೆನೆ ಪೇೞಲುದ್ಯುಕ್ತನಾದಂ

ಜಗದ ಕಂಟಕರೆಲ್ಲರುಮಂ ಕೊಂದಿಕ್ಕಿ ನಿಷ್ಕಂಟಕಂಮಾಡಿ ಮತ್ತಮೀಗಳ್ಜಗದೊಳೆಲ್ಲಂ ಗೆಯ್ವಂತಾ ಶ್ರಮಂ ಪೂಜ್ಯಮದು ಕೂರ್ಮೆಯಿಲ್ಲದ ಪೆಂಡಿರಿಂಜಗದ ಕರ್ಮಂಗಳುಂ ಕೆಟ್ಟಪ್ಪುವು ಧರ್ಮಕರ್ಮಂಗಳುಂ ಸತಿಯರಿಂದಂಜಗಕ್ಕೆ ನೆಗೞ್ಗುಂ ನೀನದಱಿಂದಂ ರೇಚಿಗ ಜಗಕೆಲ್ಲಂ ಸ್ಮರತತ್ವಮಂ ಬೆಸಸಾ

ಎಂದು ಪತಿ ನುಡಿಯೆ ಪರಮಾನಂದದೆ ರೇಚಿಗ ಮಹೀಶನಾಗಳ್ ಸಂಪೂರ್ಣೇಂದುಮುಖಿಗಱಿಪಿದಂ ನಯದಿಂದಂ ಮುನಿಮತಮನವನಿಗೆಲ್ಲಂ ಹಿತಮಂ

ಮದನದರ್ಪಹರಂ ವರ ಕೈಲಾಸಾದ್ರಿಯೊಳದ್ರಿತನೂಜೆಗಾಮದನತತ್ತ್ವಮನಿಂತಿರೆ ಪೇೞ್ದಂ ರೇಚಮಹೀಶನುಮಂತೆ ನಿರ್ಮದ ಸಮಾನಗುಣಂ ನಯದಿಂದಂ ಸ್ವಾಮಿಯ ಛಂದಮೆ ಛಂದಮೆಂಬುದನೆ ಭಾವಿಸಿ ಕಾಂತೆಗೆ ಪೇೞ್ದಂ ಮಚ್ಚಿ ಮನೋಭವತತ್ತ್ವಮಂ

ಇದಂ ಗಿರಿಸುತೇಶನುಂ ನೆಗೞ್ದ ರೇಚನುಂ ಕೂರ್ಮೆಯಿಂದುದಾಹರಿಪರಾತ್ಮವಲ್ಲಭೆಯರ್ಗೆಂದೊಡನ್ಯರ್ ಮನೋಮುದಂಬೆರಸು ಕಾಂತೆಯರ್ಗಱಿಯೆ ಪೇೞಲಾಗಿರ್ದುದೇನ್ನ ದೇವಚರಿತಂ ಚರೇತೆನಿಪ ವಾಕ್ಯಮಂ ಕೇಳಿರೇ

ಅಗಣಿತಗುಣ ರೇಚನೃಪಂಮೃಗನಯನೆಗೆ ಪೇೞ್ದಂ ಕಾಮತತ್ತ್ವವನಿಂಪಾವಗಮೊದವೆ ಪಲವು ಛಂದದೊಳೊಗೆದಂಭೋಜಾಸ್ಯಚಂದ್ರನಭಿವರ್ಣಿಸಿದಂ

ಸಕಳ ಕಳಾಗಮ ಕೋವಿದನಕಳಂಕಚರಿತ್ರನುದ್ಘಗುಣಗಣ ಮಣಿ ವಿಪ್ರಕುಲಲಲಾಮಂ ಲೋಕಪ್ರಕಟಿತ ಶ್ರುತಕೀರ್ತಿ ನೆಗೞ್ದ ಚಂದ್ರಕವೀಂದ್ರಂ

ಇದು ಪಣವ ಬಂಧಮುಂ ಗೋಮೂತ್ರಿಕೆಯುಮಕ್ಕುಂ-

ಆದಿಚೈತ್ರಂ ಕರಂ ಧೀರಂರಾಜಿತಂ ಚಂದ್ರನೂರ್ಜಿತಂವಾಜಿ ಗೋತ್ರಂ ಸ್ಥಿರಂ ಧೀರಂಪೂಜಿತಂ ಚಂದ್ರನೂರ್ಜಿತಂ

ಅರ್ಧಪಾದಗತಪ್ರತ್ಯಾಗತ ವಿಷಮಚಕ್ರಶ್ಲೋಕಂ-

ಸಾಹಸಾ ಮದಯಾಹಾಸಸಹಾಯಾದರಿ ತೋಪರಿವಿಹತೋರಯ ಸೋಹೇಮಮಹಿಸೋಯಮ ಸಾಹಸಂ

ಇದುವೆ ಮುರಜ ಫಣಿ ಬಂಧಮುಂ ಗೋಮೂತ್ರಿಕೆ ಮೊದಲಾದ ಪಲವುಂ ತೆಱದ ಬಂಧಮುಂ ಜತ್ತರಟ್ಟಮೆಂಬೆರಡು ವೃತ್ತಮುಮಕ್ಕುಂ-

ಕವಿರಾಜ ಸಮಾನಂ ತಾಂಕವಿರಾಜ ಸಮಾನಂವಿರಾಜಿತ ಸಾಹಸಂಕವಿರಾಜ ಸಮಾನಂ

ಆದ್ಯಂತ ಪ್ರಾಸ ಯಮಕಮುಂ ಜತ್ತರಟ್ಟಮುಮೆಂಬುದಕ್ಕುಂ –

ಪೂಜಿತವಿಬುಧಸಮಾಜಂಯೋಜಿತಸಮವಿದ್ಯನಮಲಗುಣಕವಿರಾಜಂರಾಜಿತರೂಪಮನೋಜಂವಾಜಿತಮೋರಹಿತನಂಬುಜಲತಾಂಭೋಜಂ

ನೃತವಾಕ್ಯಾಂಬುಧಿ ಶೌರ್ಯಸದ್ಗುಣಿ ಮಹಾತೇಜಂ ಮಹಾತೇಜನೂರ್ಜಿತವಿದ್ಯಾದಯಿತಂ ಸುರಂ ಜಿತಧರಾಧೀಶಂ ಧರಾಧೀಶಜಾಪತಿಪಾದಾಂಬುರುಹಾದಿಪೂರ್ತ ಸುಮನೋಜಾತಂ ಮನೋಜಾತನೆಂದೊಲವಿಂದಂ ಧರೆ ಬಂದು ದೇಶ ಶರದೋಷಶ್ಚಂದ್ರನಂ ಚಂದ್ರನಂ(?)

ಅಸತೀಸಂಕುಲದೂರನಂ ಮನುಮುನೀಂದ್ರಾಚಾರನಂ ಶ್ರೀವಧೂಲಸಿತೋರಃಸ್ಥಳನಂ ವಿಶುದ್ಧಕುಲನಂ ದಿಕ್ಕಾಮಿನೀಗೇಯಮಾನಸಮುದ್ಭಾಸಿತವರ್ಣನಂ ಬಹುಕಲಾಸಂಪೂರ್ಣನಂ ಧಾತ್ರಿ ಬಣ್ಣಿಸುಗುಂ ಚಂದ್ರನನರ್ಥಿಕೀರಪರಪುಷ್ಟಾನಂದಮಾಕಂದನಂ

ಪರಹಿತನೆಂಬ ಸತ್ಯನಿಧಿಯೆಂಬ ಮಹಾಕವಿಯೆಂಬ ದೀನಭಾಸುರಸುರಭೂಜನೆಂಬ ಗುಣಿಯೆಂಬ ಗುಣಾನ್ವಿತನೆಂಬ ಲೋಕದೊಳ್ಪರಹಿತನೆಂಬ ಸತ್ಯನಿಧಿಯೆಂಬ ಮಹಾಕವಿಯೆಂಬ ದೀನಭಾಸುರಸುರಭೂಜನೆಂಬ ಗುಣಿಯೆಂಬ ಪೆಱರ್ ನರರಾರ್ ಧರಿತ್ರಿಯೊಳ್

ಶ್ಲೇಷೆಯ ಕಂದ-

ವೃತಗೋಮಂ ಸಕಳಕಳಾನ್ವಿತನಮೃತಮಯಂ ವಿಶುದ್ಧವೃದ್ಧಂ ಪರಿವೇಷ್ಟಿತಸನ್ನಿವಹಂ ಕುವಳಯಹಿತನೆನೆ ಸಂಪೂರ್ಣಚಂದ್ರನೊಳ್ದೊರೆ ಚಂದ್ರಂ

ಒಸೆದಿನಿಸಂ ವಿಬುಧರ್ ಸೇವಿಸೆ ಷೋಡಶಕಳೆಗೆ ಕುಂದುವಾ ಚಂದ್ರಂಗೇನೆಸೆದನೊ ನಾಲ್ವಡಿ ಮಿಗಿಲೆನೆಮಿಸುಪ ಚತುಷ್ಷಷ್ಟಿಕಳೆಗಳಿಂದೀ ಚಂದ್ರಂ

ಶಿವಶೀಲಂ ಪುಣ್ಯಶೀಲಂ ವಿಬುಧವಿಬುಧಶಾಲಂ ಗುಣಾನೀಕಶಾಲಂಸುವಿನೀತಂ ಬಂಧುನೀತಂ ಸುಕೃತಸುಕೃತಜಾತಂ ಸುವಿಸ್ತಾರಿಜಾತಂಕವಿಭಾವಂ ಸುಪ್ರಭಾವಂ ವಿಶದವಿಶದಭಾವಂ ಮಹಾಭಾವಭಾವಂಭವತೇಜಂ ಚಂದ್ರರಾಜಂ ಕರಣಕರಣರಾಜಂ ದ್ವಿಜಾಂಭೋಧಿರಾಜಂ

ಸಕಲವ್ಯಾಕರಣಾರ್ಥಶಾಸ್ತ್ರ ಗಣಿತಾಲಂಕಾರ ಸತ್ಕಾವ್ಯ ನಾಟಕ ವಾತ್ಸ್ಯಾಯನ ನೃತ್ತ ಗೀತ ಹಯಶಾಸ್ತ್ರಾದ್ವೈತ ಗಾಂಧರ್ವ ತಾರ್ಕಿಕವಿಂದ್ರಾಗಮ ವೈದ್ಯ ವಾದ್ಯ ಶಕುನೋದ್ಯದ್‌ಹೃದ್ಯವಿದ್ಯಾಕದಂಬಕಮಂ ಚಂದ್ರಕವೀಂದ್ರನೊರ್ವನೆ ವಲಂ ಬಲ್ಲಂ ಪೆಱರ್ ಬಲ್ಲರೇ

ಅನಕಂ ಕುಂಡಲಿ ಬಾಭ್ರವೀಯನತಿಲೌಲ್ಯಂ ಕೂಬರಂ ಕಾತರಂಕಿನಿಪಂ ಭದ್ರನರೂಪಿ ಕೇತು ಕುವಿಟಂ ವಾತ್ಸ್ಯಾಯನಂ ಗೋಣಿಕಾತನಯಂ ನಿದರ್ಯನಲ್ಪವೀರ್ಯನೆನಿಪಂ ಚಾರಾಯಣಂ ಜತ್ತಕಂತನುಹೀನಂ ದೊರೆಯಲ್ಲರಿಂತಿನಿಬರುಂ ಪ್ರತ್ಯಕ್ಷಕಂದರ್ಪನೊಳ್

ಎನೆ ನೆಗೞ್ದ ಚಂದ್ರನಬ್ಜಾನನಚಂದ್ರಂ ಶ್ವೇತಕೇತು ಜತ್ತಕ ವಾತ್ಸ್ಯಾಯನ ಪಾಂಚಾಳಾದಿ ಮಹಾಮುನಿಮತಮನೆ ಪೇೞ್ದನೆಸೆಯೆ ಪೊಸಗನ್ನಡದಿಂ

ನೆಱೆಯೆ ಮುನ್ನಿನ ತತ್ತ್ವಮನಾರುಂ ಮುನ್ನಿನವರ್ವಿದಿತಾರ್ಥಮಾಗಱೆಪಲೊಲ್ಲರಣಂ ಪಲವೋದಂ ಮಾಡಿ ಸಮಂತೊಗೆದಂದವಾರಱಿವರೆಂದು ಧರಾತಳಕೆಲ್ಲಂ ಕಾಮಕಳಾಗಮಮೆಲ್ಲಮಂಕಿಱಿದಱಿಂದಱಿವಂತಿರೆ ಪೇೞ್ದಂ ಶ್ರೀ ಕವಿತಾಮಹಿಮಾರ್ಣವಂ

ಅನುಭವಿಸಿದಂಗಜಾಗಮಮನೆ ಮಾಡಿ ಪಲರ್ ಗತಾನುಗತಿಕೋ ಲೋಕಃಎನಿಪಂತೆ ಮುನ್ನ ಪೇೞ್ದುದನನುಭವಣೆಗಮಾಗಮಕ್ಕಮಳವಡೆ ಪೇೞ್ವೆಂ

ಛಂದದಳಂಕಾರಂ ಕರಮೊಂದಿ ಮನೋಜಾಗಮೋಕ್ತಮಂ ಲೌಕಿಕಮಂಸಂದಿಸಿ ನೀತಿಗೊಡಂಬಡುವಂದದಿನಾರ್ಪೇೞ್ವರಿಂತು ಚಂದ್ರನ ತೆಱದಿಂ

ಅಧರೀಕೃತ ವಾತ್ಸ್ಯಾಯನನಧಿಗತಕವಿಮಾರ್ಗನಖಿಳ ನಾನಾ ಛಂದಕ್ಕಧಿಕೃತಮಿದೆಂದು ಪೇೞ್ವುದುಬುಧಮಂಡಳಿ ನಚ್ಚಿ ಮಚ್ಚಿ ಚಂದ್ರನ ಕೃತಿಯಂ

ಕೃತಿಪತಿ ರೇಚನೃಪಂ ಕವಿಪತಿ ಚಂದ್ರಂ ತಿರ್ದಿ ಬರೆದವಂ ಬ್ರಹ್ಮಂ ಸತ್ಕೃತಿ ಮದನತಿಲಕಮಿದು ಕಾಮತತ್ತ್ವಮೆನೆ ನಚ್ಚಿ ಮಚ್ಚಿ ಪೊಗೞದರೊಳರೇ

ವಚನ. ಅದೆಂತೆಂದೊಡೆ -

ಮೊದಲೊಳಬ್ಜಸಂಭವಂ ಧರ್ಮಾರ್ಥಕಾಮಶಾಸ್ತ್ರಂಗಳನೊಂದು ಲಕ್ಷಾಧ್ಯಾಯವಂ ಮಾಡಿದನಲ್ಲಿಂ ತೆಗೆದುಕೊಂಡು ಚತುರ್ಮುಖಪುತ್ರಂ ಸ್ವಾಯಂಭುವೆಂಬ ಮನು ಧರ್ಮಮಂ ಪೇೞ್ದಂ; ಬೃಹಸ್ಪತಿಯರ್ಥಶಾಸ್ತ್ರಮಂ ಪೇೞ್ದಂ; ಮಹಾದೇವರ ಗಣಂ ನಂದಿಕೇಶ್ವರಂ ಸಹಸ್ರಾಧ್ಯಾಯದಿಂ ಕಾಮಶಾಸ್ತ್ರಮಂ ಪೇೞ್ದಂ; ಕಿಱಿದಱೊಳುದ್ದಾಲಕ ಮುನಿಯ ಮಗಂ ನೂಱಧ್ಯಾಯದಿಂ ಪೇೞ್ದನದಂ ಪಿರಿದೆಂದು ಬಭ್ರುವಿನ ಮಗಂ ಪಾಂಚಾಳಂ ನೂಱಯ್ವತ್ತಧ್ಯಾಯದಿಂ ಸಾಧಾರಣ ಸಾಂಪ್ರಯೋಗಿಕ ಕನ್ಯಾಸಂಪ್ರ ಯುಕ್ತ ಭಾರ್ಯಾಧಿಕಾರಿಕ ಪಾರದಾರಿಕ ವೈಶ್ಯಯಿಕ ಔಪನಿಷದಾದಿಕಮೆಂ ಬೇೞಧಿಕರಣಮಂ ಪೇೞ್ದನಲ್ಲಿ ಆಱನೆಯಧಿಕರಣಮಂ ವೈಶ್ಯಯಿಕಮಂ ದತ್ತಕಂ ಪಾಟಲಿಪುತ್ರಂ ಗಣಿಕೆಯರ್ಗೆ ಪೇೞ್ದನಲ್ಲದೆ ಸಾಧಾರಣಮೆಂಬಧಿಕರಣಮಂ ಚಾರಾ ಯಣಂ, ಸಾಂಪ್ರಯೋಗಿಕಮಂ ಸ್ವರ್ಣನಾಭಂ, ಕನ್ಯಾಸಂಪ್ರಯುಕ್ತಮಂ ಘೋಟಕ ಮುಖಂ, ಭಾರ್ಯಾಧಿಕರಣಮಂ ಗೋನರ್ದೀಯಂ, ಪತಂಜಳಿಯಾ ಪಾರ ದಾರಿಕಮಂ ಗೋಣಿಕಾಪುತ್ರಂ ಕುಚುಮಾರನೌಪನಿಷದಾದಿಕಮಂ ಪೇೞ್ದರಿಂತು ಪಾಂಚಾಳನಿಂದಿತ್ತ ಪಲಬರುಮಾಚಾರ್ಯರಿಂದವ್ಯವಚ್ಛಿನ್ನಮಾದ ಮದನಾಗಮಮ ನೊಂದುಮಾಡಿ ವಾತ್ಸ್ಯಾಯನಂ ಮೂವತ್ತಾಱಧ್ಯಾಯಮೇೞಧಿಕರಣದೊಳಂ ನಾಲ್ವ ತ್ತೆಂಟಕ್ಕರದ ಸಮಪಾದಸಹಸ್ರಗ್ರಂಥದಿಂ ಪೇೞ್ದನಲ್ಲಿ ಚಂದ್ರರಾಜನಾಗಮಲೌಕಿಕ ವಿರೋಧಮಂ ಕಳೆದು ಸಾರಾಂಶಮಂ ಕೊಂಡು ಪಲವು ಮತಂಗಳನೊಂದುಮಾಡಿ ಪದಿನೆಂಟಧಿಕರಣಂಗಳಿಂದಳಂಕಾರಾಲಂಕೃತಮಾಗೆ ನಾನಾ ಛಂದದಿನೈನೂಱು ಗದ್ಯ ಪದ್ಯಂಗಳಿಂ ವಿಶ್ರುತಂಮಾಡಿ ಪೇೞ್ದನಲ್ಲಿ ಪುರುಷಂಗಾಯುಷ್ಯಂ ನೂಱುವರುಷಮಂ ತ್ರಿಭಾಗಂ ಮಾಡಿ ತ್ರಿವರ್ಗಮಂ ಸೇವಿಸುಗೆ. ಬಾಲ್ಯದೊಳ್ ವಿದ್ಯಾಭೂಮಿಯರ್ಥಮಿತ್ರ ರೆಂಬಿವನುಪಾರ್ಜಿಸಿ ಬೞಿಯಂ ಜವ್ವನದೊಳ್ ಕಾಮಭೋಗಮನನುಭವಿಸಿ ವಾರ್ಧಕ ದೊಳ್ ಧರ್ಮಮೋಕ್ಷಂಗಳಂ ಸೇವಿಸುವುದು ಆಯುರ್ಜ್ಞಾನಮಱಿವಂಗಂತುಮಲ್ಲದೆ ಮನುಷ್ಯರ್ ಪರಿಮಿತಾಯುಗಳಪ್ಪುದಱಿಂದನೆಂ ಧರ್ಮಾರ್ಥಕಾಮಂಗಳನೊಡ ನೊಡನೆ ದೇಶಕಾಲಬಲೋಪಾಯದಿಂ ಸೇವಿಸುಗೆ. ಧರ್ಮಶಾಸ್ತ್ರಮಾರ್ಗದೊಳಂ ಧರ್ಮಜ್ಞರುಂ ಪೇೞ್ದಂಗದೊಳಂ ಧರ್ಮಂಗೆಯ್ಗೆ. ನೀತಿಶಾಸ್ತ್ರಮಾರ್ಗದೊಳಾ ವ್ಯವಹಾರ ಕೌಶಲದೊಳೆ ಅರ್ಥೋಪಾರ್ಜನಂಗೆಯ್ಗೆ. ಪಂಚೇಂದ್ರಿಯಂಗಳಿಚ್ಛೆ ಯೊಳ್ ಮನಂಗೊಂಡು ನಡೆವುದು ಕಾಮಮಕ್ಕುಂ; ಅಲ್ಲಿ ಸ್ವರ್ಶನವಿಶೇಷಂ ಪ್ರಧಾನಕಾಮ ಮಕ್ಕುಮಾ ಕಾಮಮಂ ಶಾಸ್ತ್ರದೊಳಂ ನಾಗರಿಕಜನದೊಳಂ ಕಲ್ತು ನೆಗೞ್ವುದು. ಮತ್ತಂ ಧರ್ಮಾರ್ಥಂಗಳ್ಗೆ ಶಾಸ್ತ್ರಂ ಬಾರ್ತೆ. ಕಾಮಕ್ಕಂ ಶಾಸ್ತ್ರಂ ನಿಷ್ಟ್ರಯೋಜನ ಮಲ್ತದೆಂತೆನೆ -

ಪಿರಿಯ ಜ್ಞಾನಿಗಳ್ಗಾವ ಶಾಸ್ತ್ರದಿಂ ನೆರವಪ್ಪುವೆಂದೊಡವು ಋತು ಕಾಲಾದಿಗಳ್ ಮೊಱೆ ಧರ್ಮಂ ಜಾತಿವಿಕಲ್ಪನೆಯೆಂಬಿವೆಲ್ಲಂ ಪುಣ್ಯಪಾಪಮೆಂಬು ದನಱಿವುದಲ್ಲವು. ಗೋಧರ್ಮಂ ಮನುಷ್ಯಧರ್ಮಮು ಮಾಗಲಱಿಯದದಱಿಂ ಕಾಮಕ್ಕೆ ಶಾಸ್ತ್ರಂ ಪ್ರಯೋಜನಮೆಂಬುದು. ಪೂರ್ವಾಚಾರ್ಯಮತ ಮೆಂತಾದುದೆಂದೊಡರ್ಥಮಂ ಶರೀರಮುಮನುಪಕ್ಷಯಂ ಮಾಡುವ ಸಂಶಯವಂ ಮಾಡುವ ಧರ್ಮಮೇಬಾರ್ತೆ, ಸಂಶಯದಿಂ ನಾಳೆ ಬರ್ಪ ಪೊನ್ನಿಂದಮಿಂದು ಬರ್ಪ ಪಣಮೆ ಲೇಸು, ನಾಳೆ ತಿಂಬ ನವಿಲಿಂದಮಿಂದು ತಿಂಬ ಲಾವಗೆ ಲೇಸೆಂಬ ಲೋಕದ ವಚನಮಂ ಪ್ರಮಾಣವಚನಮಂ ಧರ್ಮಕುಪಮಾನಂ ಮಾಡಿ ಶೂನ್ಯವಾದಿಯಾಗಿ ಧರ್ಮಮಂ ಸಂಶಯಂಗೆಯ್ಯವೇಡ. ಯಜ್ಞ ಮಂತ್ರವಾದ ಜ್ಯೋತಿರ್ಜ್ಞಾನ ವಿಷವಾದಂಗಳಿಂ ಗುಣಪಟ್ಟುದಱಿಂ ಧರ್ಮಂ ನಿಶ್ಚಯಮುಂಟು. ಬೀಜದುಪಕ್ಷಯಂ ಬಗೆದು ಬಿತ್ತುವುದಂ ಮಾಣಲಾಗದು. ಶರೀರಾರ್ಥದುಪಕ್ಷಯಂ ಬಗೆದು ಧರ್ಮಮಂ ಮಾಣಲಾಗದು. ಸರ್ವಥಾ ಧರ್ಮಂಗೆಯಿಮೆಂಬುದು ಚತುಸ್ಸಮಯವಾಕ್ಯಂ. ಅಂತಪ್ಪೊಡರ್ಥಕ್ಕೆ ಶಾಸ್ತ್ರಂ ಬಾರ್ತೆಯಲ್ತೇ. ಪೂರ್ವಕೃತ ಪುಣ್ಯದಿಂದಪ್ಪುದೆಂತುಮಕ್ಕುಮಾಗದುದೆಂತುಮಾಗದೆಂದು ನಿರುದ್ಯೋಗಿಯಾಗವೇಡ. ಪುಷ್ಪಾಕಾರದಿಂ ಶಾಸ್ತ್ರಮಾರ್ಗದಿಂ ಪೂರ್ವಾಪರವಱಿದುಚಿತಮಪ್ಪುದಂ ನೆಗೞೆ ನಿಶ್ವಯಾರ್ಥ ಮಕ್ಕುಂ, ಅಲ್ಲಿಂ ಸಂಶಯಂ ಬೇಡೆಂದು ಬೃಹಸ್ಪತಿಯ ವಾಕ್ಯಂ.

ಧರ್ಮಾರ್ಥಂಗಳ್ಗೆ ಕಾಮಂ ಪ್ರತಿಕೂಲಮಾ ಕಾಮಮಂ ಸೇವಿಸುವೊಡೆ ಪಿರಿದುಂ ಪ್ರಮಾದಮಗ್ರಾಹ್ಯಮವಿಶ್ವಾಸಂ; ಮತ್ತಮೊಳ್ಳಿತಪ್ಪುವೆಲ್ಲಮಂ ಕಾಮಂ ಕೆಡಿಸುಗುಂ; ಕಾಮವಶರಾಗಿ ರಾವಣ ದಂಡಕ ಸುರೇಂದ್ರ ಕೀಚಕ ಪ್ರಭೃತಿಗಳನೇಕರುಂ ಕೆಟ್ಟರ್;‌ ಅದಱಿಂ ಕಾಮಂ ಸೇವ್ಯಮಲ್ತು. ಆದೊಡಂ ದೋಷವಿರಹಿತಕಾಮಮಂ ಸೇವಿಸುಗೆ. ಭೈಕ್ಷಕ್ಕಂಜಿ ಅಟ್ಟುಂಬುದಂ ಮಾಣವೇಡ, ಪೆಣ್ಣಿಂಗಂಜಿಯುಟ್ಟುದನಿಕ್ಕ ವೇಡ, ಅದಱಿಂ ನಿರ್ವಾದಮಪ್ಪುದಂ ಮಾಡುವುದಂತುಮಲ್ಲದೆಯುಂ

ಒಂದಂ ತ್ರಿವರ್ಗದೊಳ್ವೆಸಸೊಂದಂ ಮತ್ತೆರಡುಮುಱಿವುವಪ್ಪೊಡೆ ಕೈಕೊಳ್ಳೆಂದಾಚಾರ್ಯಂ ಮುನಿಯಂಸಂದಿಸಿ ವರ್ಗತ್ರಯಾನ್ವಿತಂ ನೆಗೞ್ಗೆ ಬುಧಂ

ದಿವಸ ದಿವಸಕ್ಕೆ ಶ್ರುತಿ ಮತಿನವಿರುದ್ವಹಮಾಯು ರೂಪು ತೇಜಂ ಸತ್ತ್ವಂತವುಗುಂ ನರೆ ತೆರೆ ರುಜೆಯೆಂಬಿವಕ್ಕುಮದಱಿಂ ತ್ರಿವರ್ಗಪರನಕ್ಕೆ ಬುಧಂ

ಕೆಲಬರ್ ಕಾಮಾಗಮಂ ಪ್ರಚ್ಛನ್ನಮದು ಸಂಭಾವಯೋಗ್ಯಮಲ್ಲದಱಿಂದೇವುದೆಂಬರ್ಲಲನಾಸಂಯೋಗಮದೇಕಾಂತವಪ್ಪುದಱಿಂಸುರತಾಗಮಂ ರಹಸ್ಯಂಜಲಜಭವಕೃತವದೆಂಬತ್ತುನಾಲ್ಕುಲಕ್ಷ ಯೋನಿಮುಖಜೀವದಲ್ಲಿಲಲನೆ ಮಾನುಷಯೋನಿ ದುರ್ಲಭಮಲ್ಲಿ ದುರ್ಲಭಂ ಧರ್ಮಾರ್ಥಕಾಮವರ್ಗಂ

ಅವಱೊಳಗೆ ಧರ್ಮಮುಂ ದ್ರವ್ಯವುಮೆರಡುಂ ಹೇತುವಲ್ತೆ ಕಾಮಕ್ಕದಱಿಂತ್ರಿವಿಧದೊಳಂ ಕಾಮಮೆ ಮುಖ್ಯವೆಂದು ಮುನಿಮುಖ್ಯರಱಿಯದೇಂ ಮಾಡಿದರೇ

ವಚನ : ಕಾಮಾಂಧನಿಂತೆಂದನಲ್ತೇ –

ಸೇವೇತ ವಿಷಯಾನ್ ಕಾಲೇಮುಕ್ತ್ವಾ ಚತ್ವಾಸಿ ತಾಮಸಿಸುಖಂ ಹಿ ಫಲಮರ್ಥಸ್ಯತನ್ನಿರೋಧೇ ವೃಥಾ ಶ್ರಿಯಃ

ವಿವಿಧ ಪ್ರಜಾಭಿವೃದ್ಧಿಪ್ರವರ್ಧಕಂ ಕಾಮಮಾದ ಕಾರಣದಿಂ ತ್ರೈಭುವನಂ ಕಾಮಮಯಂ ನಿಕ್ಕುವಮದಱಿಂ ತತ್ತ್ವಮಗ್ಗಳಂ ಪೆಱತುಂಟೇ

ಜಗತೀತಳದೊಳಪುತ್ರಸ್ಯ ಗತಿರ್ನಾಸ್ತಿಯುಮೆನಿಪ್ಪ ಮುನಿವಾಕ್ಯಂ ನೆಟ್ಟಗೆ ಕಾಮಸುಖದಿನಲ್ಲದೆನೆಗೞ್ಗುಮೆ ಪೇೞ್ ಶಾತಕುಂಭಘಟಕುಚಯುಗಳೇ

ಸುರದನುಜಗರುಡಯಕ್ಷಾಸುರಭೂತಪಿಶಾಚಸಿದ್ಧವಿದ್ಯಾಧರ ಕಿನ್ನರ ಪನ್ನಗ ಗಂಧರ್ವರ್ಸುರತಸುಖಂ ಪರಮಸುಖಮಿದೆಂದೆಱಗಿರ್ದರ್

ಪಂಚಬಾಣಂಗಳೆ ಪಂಚೇಂದ್ರಿಯಂಗಳ್ ಕರ್ಣನಾಸಿಕದೃಗ್ಜಿಹ್ವೆ ತ್ವಚಂಗಳ್ಪಂಚಬಾಣನೆ ಪರಮಾತ್ಮನೆಂತೆನೆ ಭೂಜಳಾನಳಮರುದ್ವ್ಯೋಮವೆಂಬಪಂಚಭೂತಂ ಶಬ್ದಸ್ಪರ್ಶರೂಪರಸಗಂಧವ್ಯಾಪಕಮಂತದು ಸೂಕ್ಷ್ಮರೂಪಂಪಂಚವಿಂಶತಿತತ್ತ್ವಮಿದೆ ಫಲಂ ಮೋಕ್ಷಸುಖಮಲ್ತೆ ಕಾಮಸುಖಂ

ವಚನ : ವರಾಹಮಿಹಿರನುಮಿಂತೆಂದನಲ್ತೇ –

ಆತ್ಮಾ ಸಹೈತಿ ಮನಸಾ ಮನ ಇಂದ್ರಿಯೇಣಸ್ವಾರ್ಥೇನ ಚೇಂದ್ರಿಯಮಿತಿ ಕ್ರಮ ಯೇಷ ಶೀಘ್ರಃಯೋಗೋಽಯಮೇವ ಮನಸಃ ಕಿಮಗಮ್ಯಮಸ್ತಿಯಸ್ಮಿನ್ ಮನೋವ್ರಜತಿ ತತ್ರ ಗತೋಽಯಮಾತ್ಮಾ

ಪರಬಲಮಂಡಲ ಸ್ವಬಲಮಂಡಲ ಧರ್ಮವಿಚಾರಚಿಂತೆ ಸಂವರಣೆ ಕುಲಕ್ರಮಾಚರಣೆ ಕಂಟಕಶೋಧನೆ ಧರ್ಮಪಾಲನಂಗುರುನಿಯಮಂ ನಿಯುಕ್ತನಿಯಮಂ ಮೊದಲಾಗಿರನೇಕದುಃಖಮುಂನರಪತಿಗಳ್ಗಮಕ್ಕುಮಿವು ತೃಷ್ಣೆಯಿನಿಪ್ಪ ನರಂಗೆ ಧಾತುಗಳ್

ಅವಱಿಂ ಪಲರ್ಗೆ ಸಂಸಾರದ ದುಃಖಾನಳನನಾಱಿಸಲ್ಕನುರಕ್ತಂಮದನೋತ್ಸಾಹಂ ಕಾರಣಮದು ಕೂರ್ಮೆಯಿನಕ್ಕುಮದಱ ತೆಱನಂ ಪೇೞ್ವೆಂ

ವಚನ : ಅರ್ಧಜತ್ತರಟ್ಟ –

ಯತ್ನಂಗೆಯ್ಯದ ಮುನಿಪರಪತ್ನಿಯರುಂ ಕಾಮಕೃತಕರಾದರಯತ್ನಂಯತ್ನಂಗೆಯ್ಯದ ವನಿತಾರತ್ನಮುಮಾ ಕಾಮಕೃತರೆ ಕೇಡೊಡರಿಸುಗುಂ

ಕೂರಲೆ ವೇೞ್ಪುದು ಸತಿಯರ್ಕೂರದೊಡವರಿಂದವಸುಹರಂ ವಸುಹರಮಿನ್ನಾರಯ್ವೊಡುೞಿದ ಸಾಹಸಮಾರಳವೊ ಮಿಹಿರವಾಕ್ಯಮಂ ಕೇಳ್ದಱಿಯಾ

ಶಸ್ತ್ರೇಣ ವೇಣೀವಿನಿಗೂಹಿತೇನವಿದೂರಥಂ ತನ್ಮಹಿಷೀ ಜಘಾನವಿಷಪ್ರದಿಗ್ಧೇನ ಚ ನೂಪುರೇಣದೇವೀ ವಿರಕ್ತಾ ಕಿಲ ಕಾಶಿರಾಜಂ

ವಚನ: ಅಂತುಮಲ್ಲದೆಯುಂ -

ಭಾವೆ ಕೊಂಡು ಮಡಗಿಟ್ಟಳಿಂದುವಂದೇವಿ ಮಾಣ್ದಳೆ ದಲಭ್ರನಂ ಮಹಾದೇವಿಯಿಂ ಶಿಖ ಗತಾಯುವಾದನಾಭೂಮಿಪಾಲನೞಿದಂ ವಿನತೆಯಿಂ

ಪಲ ತೆಱದ ಶಸ್ತ್ರದಿಂದಂಪಲ ತೆಱದ ವಿಷಾನ್ನಪಾನಖಾನಾದಿಗಳಿಂಪಲ ತೆಱದುಪಾಂಶುವಧೆಯಿಂಪಲರುಂ ಸತ್ತರ್ವಿರಕ್ತಲಲನಾಜನದಿಂ

ವಚನ : ನೀತಿವಾಕ್ಯಮಿಂತೆಂದುದಲ್ತೇ-

ದುಷ್ಟಾ ಭಾರ್ಯಾ ಶಠಂ ಮಿತ್ರಂಭೃತ್ಯಶ್ಚೋತ್ತರದಾಯಕಃಸಸರ್ಪೇ ಚ ಗೃಹೇ ವಾಸೋಮೃತ್ಯುರೇವ ನ ಸಂಶಯಃ

ಕವಯಃ ಕಿಂ ನ ಪಶ್ಯಂತಿಕಿಂ ನ ದೃಶ್ಯಂತಿ ಯೋಗಿನಃಮದ್ಯಪಾಃ ಕಿಂ ನ ಜಲ್ಪಂತಿಕಿಂ ನ ಕುರ್ವಂತಿ ಯೋಷಿತಃ

ಇಂತಾ ಮನುಮುನಿವಾಕ್ಯಮದಂತುರೆ ಕಾಂತೆಯರ ಗೆಯ್ದ ಪಾಪಂಗಳ್ ತತ್ಕಾಂತನನೆಯ್ದುಗುಮದಱಿಂಕಾಂತೆಯರನುವಶೆಯರಾಗದಂದು ವಿನಾಶಂ

ವಚನ: ಮನುವುಮಿಂತೆಂದನಲ್ತೇ –

ಯಾನಿ ಯಾಮಿನಿ ಗೇಹಾನಿಸಂಪ್ರತ್ಯಂ ಪ್ರತಿಪೂಜಿತಂತಾನಿ ಕೃತ್ಯಂ ಹಿತೋನಿವವಿನಶ್ಯಂತಿ ಸಮನ್ವಿತಂ

ವಚನ : ಅಂತು ದುಃಖಂಬಟ್ಟು ಬಯ್ವ ಪೆಂಡಿತಿಯಿಂ ಕೇಡಕ್ಕುಮಲ್ಲದೆಯುಂ ಬೆಸನಮಲ್ಲ ದೊಡಂ ಋತುಗಾಲದೊಳಂ ರತಿಗೆಯ್ಯಲೆವೇೞ್ಕುಂ. ಸ್ಮೃತಿಕಾರನು ಮಿಂತೆಂದನಲ್ತೇ-

ಬಹಿರ್ಲೋಮೇನ ಷಣ್ಮಾಸೇದ್ವೇಷಿತಃ ಕರಚರ್ಮಣಾರಾಗಾತಿಕ್ರಮ್ಯರಿಂ ಕ್ಷಾದೇದೇಹೀತ್ಯುಕ್ತಾ ವಿಶುದ್ಧ್ಯತಿ (?)

ಏನಂ ಪೇೞ್ವುದೊ ಪಲವಂಮಾನಿನಿಗೆ ವಿರಾಗಮಾಗದಂತನುಭವಿಸುತ್ತಾ ನಾರಿಯನೊಲ್ದೊಲಿಸುಗೆಮಾನಯಶೋಧರ್ಮವಂಶಮಂ ಬಯಸುವವಂ

ರತಿಯ ಪದದಲ್ಲಿ ಗರ್ಭಸ್ಥಿತಿಯೊಳ್ ಶುಕ್ಲಂ ವಿಶೇಷಮಾದೊಡೆ ಪುರುಷಂಸತಿ ರಕ್ತಾಧಿಕದಿಂದಂಸತತಂ ಸಮನಾಗೆ ಷಂಡರಪ್ಪರ್ ಮಕ್ಕಳ್

ಋತುವಿನ ರತಿಯೊಳ್ ಪೆಱರಂಸತಿ ಬಯಸಿದೊಡವಳ ಬಯಸಿದವನಂ ಪೋಲ್ವರ್ಸುತರದಱಿಂ ಸ್ತ್ರೀಗನುರಕ್ತತೆಯಂ ಮಾಡಲ್ಕೆ ಕಾಮತತ್ತ್ವವೆ ಮುಖ್ಯಂ

ಬಲಗೆಲದೆಡೆಯೊಳ್ ಗರ್ಭಂನಿಲೆ ಪುರುಷಂ ವಾಮಭಾಗದಿಂ ಸ್ತ್ರೀಯೆರಡುಂಕೆಲದೊಳಮಳ್ಗಳ್‌ ನಡುವಣನೆಲೆಯಿಂದಂ ಷಂಡರಾಗಿ ಪುಟ್ಟುವರೆಂದುಂ

ಅನಿಲ ಕಫ ಪೈತ್ತ್ಯದೋಷದಿನನಿಲನ ಕುಂದಿಂದೆ ಪಂಗುಳಾಂಧಕೃಶಂ ವಾಮನ ಕುಬ್ಜ ಬಧಿರ ಮೂಕರುಮನೇಕವಿಧದಂಗಹೀನರುಂ ಜನಿಯಿಸುವರ್

ವನಿತಾಲಕ್ಷಣವೆನಿತೊಳವನಿತುಂ ಪುರುಷಂಗಮಕ್ಕುಮಿದನಱಿದು ಜಗಜ್ಜನಮೆನಿಪುನ್ನತಿಯಂ ತಾಂತನಗಾಗಿಪೊಡೊಲಿದು ನೆಗೞ್ಗೆ ವರ್ಗತ್ರಯದೊಳ್

ಇದು ಸಕಲವಿಬುಧಜನವಿನುತ ಕಾವ್ಯಾಲಂಕಾರನೀತಿನಿಬಂಧನಮುಂ ಛಂದೋಮಹಾರ್ಣವಮುಂ ಕವಿತಾಮಹಾರ್ಣವಂ ಶ್ರೀ ಚಂದ್ರರಾಜವಿರಚಿತಮುಮಪ್ಪ ಮದನತಿಲಕದೊಳ್ ಪೀಠಿಕಾವರ್ಣನಂ ಪಿಂಡೋತ್ಪತ್ತಿವಿವರಣಂ ಪ್ರಥಮಾಧಿಕಾರಂ ಸಮಾಪ್ತಂ