I
ಖಗೇಂದ್ರಮಣಿದರ್ಪಣ
ಸಂಜ್ಞಾ ಪ್ರಕರಣಂ
ಶ್ರೀಮದ್ಗೀರ್ವಾಣಶೋಣಾಮಳ ಮಣಿಮಕುಟೋದ್ಯತ್ಪ್ರಭಾವಲ್ಲರೀ ಪ್ರೋದ್ದಾಮಾಂಘ್ರಿದ್ವಂದ್ವಕಲ್ಪಾಂಘ್ರಿಪನನಘನಚಿಂತ್ಯಂ ಸಮಸ್ತಾರ್ಥದಿಂ ನಿಷ್ಕಾಮಂ ಸೋಮಾರ್ಕಕೋಟಿದ್ಯುತಿ ವಿಮಳಗುಣಂ ಮುಕ್ತಿಸೌಖ್ಯವನೀಜಾರಾಮಂ ಶ್ರೀಪಾರ್ಶ್ವನಾಥಂ ನಿರವಧಿಕ ಸುಖಾವಾಪ್ತಿಯಂ ಮಾೞ್ಕೆ ನಮ್ಮೊಳ್
ತೊಲಗಲ್ ವ್ಯಾಮೋಹಮಂತಾವೃತಿಯುಗಮಸದುದ್ವಿಘ್ನಮಾಯುರ್ವಿನಾಮಾಮಲಗೋತ್ರಂ ವೇದನೀಯಂ ಸ್ಥಿರತರವೆನಿಪೀ ಸದ್ಗುಣಂ ತಾಮೆ ತಮ್ಮೊಳ್ನಿಲೆ ಸೌಖ್ಯಜ್ಞಾನಮುಖ್ಯಂ ಗುಣಮಗಣಿತ ಸಿದ್ಧರ್ಕಳಾಗಿರ್ಪರೆಮ್ಮಾವಿಲಭಾವಂ ಪಿಂಗೆ ಕೈವಲ್ಯದೊಳೆ ನಿಲಿಸಿ ರಕ್ಷಿಕ್ಕೆ ಸದ್ಭಾವದಿಂದಂ
ಮನಮೆಂಬೊಂದು ಮಹಾಮದದ್ವಿರದಮಂ ಸುಜ್ಞಾನಮೆಂಬಂಕುಶಂವಿನುತಂ ಕೈವಶಮಾಗಿರಲ್ಕದಱಿನಾತ್ಮಾಧೀನಮಂ ಮಾಡಿ ಭಾಪ್ಪೆನೆ ಪಂಚಾಚರಣಂಗಳಿಂ ಸಕಲ ಶಾಸ್ತ್ರಜ್ಞತ್ವದಿಂ ರೂಢಿವೆತ್ತನವದ್ಯರ್ ದಯೆಗೆಯ್ಗೆ ಸೂರಿಗಳಶೇಷರ್ ನಮ್ಮೊಳಾಚಾರಮಂ
ಹೇಯೋಪಾದೇಯ ತತ್ವಂಗಳನಱಿಯೆ ಬುಧರ್ ದ್ವಾದಶಾಂಗಾಂಗ ಬಾಹ್ಯಂದೇಯಂ ಶಾಸ್ತ್ರಾರ್ಥಮಾಗಲ್ ತಿಳಿಪಿ ತಣಿಪಿ ಮತ್ತಂ ಜಿನಾಧೀಶ್ವರೋಕ್ತಶ್ರೇಯೋಮಾರ್ಗಾಗ್ರಗಾಮಿಪ್ರವರರಿವರೆನಲ್ ವಂದ್ಯರಪ್ಪರ್ ವರೋಪಾಧ್ಯಾಯರ್ ನಿರ್ಮಾಯರೆಮ್ಮಂ ಬಿಡದೆ ತಡೆಯದಿಂ ಪಾಲಿಸುತ್ತಿರ್ಕೆ ನಿಚ್ಚಂ
ವಿಲಸದ್ಯೋಗಪ್ರಯೋಗಾಮೃತ ಜಲನಿಧಿಗಳ್ ಸರ್ವಸಂಕಲ್ಪದೂರರ್ಖಲಕಾಳವ್ಯಾಳ ಹಾಲಾಹಲ ವಿರಹಿತ ಸುಧ್ಯಾನಯುಕ್ತರ್ ವಿರಕ್ತರ್ಕುಲಶೈಲಾಕಾರನಿಷ್ಕಂಪತೆ ತಮಗೆಸೆವಾ ಸಾಧುಗಳ್ ಸಾಧಿತಾತ್ಮೋಜ್ವಲತೇಜರ್ ಪ್ರೇಮದಿಂ ರಕ್ಷಿಸುಗೆ ಮಿಸುಪ ಕಾರುಣ್ಯಭಾವರ್ಕಳೆಮ್ಮಂ
ಹಂಸಜ್ಞಾನದಿನಾದಿನಾಥರನಘರ್ ಮಾಂಗಲ್ಯರೂಪರ್ ಜಿನರ್ಸಂಸಾರಾಂಬುಧಿಪೋತರುನ್ನತಗುಣರ್ ಸಿದ್ಧರ್ ಸದಾ ಪಂಡಿತೋತ್ತಂಸರ್ ಪಾಠಕರಾ ಸುಸಂಯುತಯುತಂ ಸಾಧುವ್ರಜಂ ಕೂಡೆ ವಿಧ್ವಂಸಂ ಮಾಡಿ ಭವೋದಗ್ರದುಃಖವಿಷಮಂ ರಕ್ಷಿಕ್ಕೆ ಭವ್ಯರ್ಕಳಂ
ಮದಮುಖಮಾಗಿ ಕಂಜಮದು ಸದ್ಗುಣಮಂ ಕೆಳಗಿಟ್ಟುದಂತುಮಲ್ಲದೆ ದಿನದೊಳ್ ದಿನಾಂತ್ಯದೊಳೆ ರಾಗವಿರಾಗತೆವೆತ್ತು ದುರ್ಜನತ್ವದೊಳೆಣೆಯಾಗಿ ರಾಜಸಭೆಯೊಳ್ ತಲೆಗುತ್ತುವುದೇವುದೆಂದು ಬಂದಿದೆ ವರಮೆಂದು ವಾಣಿ ನೆಲಸಿರ್ಕೆ ಮದೀಯಮುಖಾರವಿಂದದೊಳ್
ಕೋಮಳ ಲತಾಂಗವಿಲಸತ್ತಾಮರಸಮುಖಾನ್ಯ ಪುಷ್ಟರವಗಜಗತಿಯಿಂಕಾಮವನೋಪಮ ತನುವೆಸೆವಾ ಮಹಿಮಾವನಧಿ ಪದ್ಮೆ ಪಾಲಿಸುಗೆಂದುಂ
ಮಂಗಳದೇವತಾಸದನ ಸದ್ಗುಣ ಪಾವನ ಸಜ್ಜನಾಳಿಸೇವ್ಯಂ ಗಣಭೃತ್ಪದಾಂಬುರುಹ ಸಂಕುಳಮಾವಗಮಸ್ಮದೀಯ ಭಾವಾಂಗಪವಿತ್ರಮಾನಸದೊಳಿಂತೆಸೆದಿರ್ಕೆ ಸುರಾಗದೇೞ್ಗೆಯಿಂಪಿಂಗದೆ ದೋಷಭಾವಭವಬಂಧಮದಾಮಯ ದುಃಖಸಂಕುಳಂ
ಸುರುಚಿರ ಪಾರ್ಶ್ವಚೈತ್ಯವಿಭು ಶೋಭಿತ ರತ್ನಕಿರೀಟ ಮೌಕ್ತಿಕಾಭರಣ ಮನೋಹರಾಂಗ ಧರಣೇಂದ್ರಮನಸ್ಸರಸೀಮರಾಳೆ ಸುಂದರಕರಪಾದಪದ್ಮೆಯಭಯಾಂಕುಶಹಸ್ತೆ ಮದಿಷ್ಟಸಿದ್ಧಿಯಂತ್ವರಿತದೊಳಿತ್ತು ರಕ್ಷಿಪುದು ಪದ್ಮೆ ಸರೋರುಹಸದ್ಮೆ ಸಂತತಂ
ಅಧಿಗತತತ್ವರುಂ ವಿಗತರೌದ್ರರೆನಿಪ್ಪ ಸಮಂತಭದ್ರರಂಮಧುರ ಮನೋಹರಾಂಗ ವಿನಯೋಕ್ತ ನಯಾರ್ಥವಚಃಪ್ರಯುಕ್ತರಂವಿಧುನಿಭಕೀರ್ತಿಸಂಯಮ ಪವಿತ್ರರನೂರ್ಜಿತ ಪುಣ್ಯಪಾತ್ರರಂಬುಧತತಿವಂದ್ಯರಂ ಪೊಗೞ್ವೆನಾದರದಿಂದಮೆ ಪೂಜ್ಯಪಾದರಂ
ಸ್ಥಿರಮಾಗಿರ್ಕೆ ಮದೀಯ ಮಾನಸದೊಳಂ ಶ್ರೀವೀರಸೇನವ್ರತೀಶ್ವರನಾ ಶ್ರೀಪದಕೋಮಳಾರುಣ ಪಯೋಜದ್ವಂದ್ವಮಸ್ಮತ್ಪುರಾದುರಭಿಪ್ರಾಯದಿನಾದ ದುಷ್ಕೃತ್ಯಮಂ ಪಿಂಗಲ್ಕೆ ನೈರ್ಮಲ್ಯದೃಷ್ಟಿರಮಾದೇವತೆ ರಾಗದಿಂ ನಿಲೆ ಚಿರಂ ತತ್ಪೂತಿವಿಖ್ಯಾತಿಯಿಂ
ಬಂಧವಿದೂರನಂ ಭುವನಬಾಂಧವನಂ ಸಕಲಜ್ಞನಪ್ಪ ಸೀಮಂಧರನಂ ಮನೋಮುದದಿನೆಯ್ದಿ ತದೀಯ ವಚಃಪಯೋಧಿಯೊಳ್ಸಂಧಿಸಿ ಬುದ್ಧಿಮಂದರಮನಾ ಸಮಯಾಮೃತದಿಂದೆ ಮುಂ ಕೃಪಾಸಿಂಧುವೆ ಕೊಂಡಕುಂದಮುನಿ ಪಾಲಿಸಿದಂ ಬುಧರಂ ಧರಿತ್ರಿಯೊಳ್
ತಪದೊಳ್ಪಿಂ ಮನಮೊಲ್ದು ದೇವತೆಯೆ ತತ್ಸಿದ್ಧೌಷಧಂ ಲೇಪಮಾಗೆ ಪದಾಂಭೋಜತಳಕ್ಕೆ ಪೂಸಲದಱಿಂ ವ್ಯೋಮಾಧ್ವದಿಂದಾ ವಿದೇಹಪರಕ್ಷೇತುಮನೆಯ್ದಿ ತೀರ್ಥಕರ ಸಚ್ಛ್ರೀಮೂರ್ತಿಯಂ ಕಂಡು ಕೀರ್ತಿಪ ಪುಣ್ಯಕ್ಕೆ ಸುಪಾತ್ರವಾದ ಮಹಿಮಂ ಶ್ರೀಪೂಜ್ಯಪಾದೋತ್ತಮಂ
ಭಯಮಂ ಮನ್ಮಥತಸ್ಕರಂಗಭಯಮಂ ಭವ್ಯರ್ಗೆ ರಾಗಾದಿಗಂಕ್ಷಯಮಂ ಸುಶ್ರುತದೇವಿಗಂ ವಿನಯಮಂ ವೈಶೇಷಿಕಾದ್ಯರ್ಗೆ ವಿಸ್ಮಯಮಂ ತಮ್ಮ ತಪೋಗುಣಂಗಳಿನಶೇಷಜ್ಞತ್ವದಿಂದಿತ್ತ ನಿರ್ಭಯನಂ ಶ್ರೀಗುರು ಪೂಜ್ಯಪಾದಮುನಿಯಂ ಸದ್ಭಾವದಿಂ ವಂದಿಪೆಂ
ಅನುಪಮ ಭಾನುಕೀರ್ತಿಮಲಧಾರಿ ಮುನೀಶ್ವರನಿಂತಿರಲ್ಕೆ ತತ್ತನುವಿನೊಳಂ ತಿಲಾಂಶದನಿತಂ ಮಲಮಂ ತೆಗೆದೊರ್ಮೆ ಸರ್ಪದಷ್ಟನ ತನುವಿಂಗೆ ಪೂಸೆ ವಿಷಮಾಗಳೆ ಪಿಂಗುಗುಮೆಂದೊಡಿನ್ನು ತನ್ಮುನಿಯ ತಪಃಪ್ರಭಾವಮನದೇವೊಗೞ್ವರ್ ನರರೊಂದು ಜಿಹ್ವೆಯೊಳ್
ಹೇಮಾಂತಂ ತರ್ಕಾಂತಂನಾಮಾಂತ ಗಜಾಂತಮಾದ ಶಾಸ್ತ್ರ ಸುಹೋರಾಮಾಮಹಿಮೆಗೆ ನೆಱೆ ನೋಂತಂಸೋಮಂ ಜೈನಾಗಮಾಮೃತಾಂಬುಧಿಸೋಮಂ
ಮದ ಮದನಾಂಗಗೋಷ್ಠಿ ಪುದಿದಿರ್ದ ವಿಮೋಹ ವಿಷಾದ ಚಿಂತೆ ಪೊಣ್ಮಿದ ಮದ ಲೋಭಮೆಂಬಿವಿನಿತುಂ ತಲೆದೋಱದ ಚಿತ್ತಶುದ್ಧಿಯಿಂದೊದವಿದ ಕೀರ್ತಿಯಿಂದಮರಸಂತತಿಯರ್ಚಿಸಿ ವಂದಿಸುತ್ತೆ ಮಾಡಿದ ನುತಿಯಿಂದೆ ತಾನಮರಕೀರ್ತಿಯೆನಲ್ ನೆಗೞ್ದಂ ಧರಿತ್ರಿಯೊಳ್
ಆ ಮುನಿಮುಖ್ಯ ಶಿಷ್ಯತಿಲಕಂ ನೆಗೞ್ದಂ ಸಲೆ ಧರ್ಮಭೂಷಣಂಶ್ರೀಮದಶೇಷಭವ್ಯಜನಸೇವ್ಯ ಪದಾಂಬುರುಹದ್ವಯಂ ಸದಾಕಾಮಮದೇಭಕೇಸರಿ ಜಿನಾಗಮವಾರ್ಧಿಸುಧಾಕರಂ ಸ್ಥಿರಂಭೂಮಹಿಳಾಧಿನಾಥಮಹಿತಂ ಮುನಿಸಂಘಸರೋಜಭಾಸ್ಕರಂ
ಧ್ಯಾನತಪೋರತ್ನಮುಮಂಭಾನುಪ್ರತಿಮಾನ ಕೀರ್ತಿಯಂ ವಂದಿಸುವೆಂಜ್ಞಾನೋದಯ ಗುಣಮಣಿಯಂಭೂನುತನಂ ವರ್ಧಮಾನ ಮುನಿಪುಂಗವನಂ
ಶುಭತರ ಭಾವನಾನಲನ ಪೆರ್ಚುಗೆಯಿಂದುರಿ ತಳ್ತುವೀಗಳೀವಿಭವದ ಕರ್ಬುವಿಲ್ ಕಮಲನಾಳದ ನೂಲರಲಂಬು ಮನ್ಮಥತ್ರಿಭುವನಮಂ ಭಯಂಗೊಳಿಸಿದೆಂ ಗಡಮೆಂಬತಿಗರ್ವಮೇಕೆ ಮಾಣಭಿನವ ಧರ್ಮಭೂಷಣಮುನೀಶನ ಮುಂದೆ ಭವತ್ಪ್ರತಾಪಮೇಂ
ಖಂಡಿಸಿ ಮಿಥ್ಯಾತ್ವಮುಮಂಕೊಂಡಾಡಿ ಜಿನೇಂದ್ರಮಾರ್ಗಮಂ ಬೆಳಗಿ ಮಹೀಮಂಡಲದೊಳೆಸೆದನಭಿನವಪಂಡಿತ ಚಂಡಾಂಶುಗಂ ಸಮಪ್ರಭರೊಳರೇ
ಗುರುಕುಚೆಯರ ಮಱೆಯಿಂದಂಸ್ಮರನಾರ್ದಿಸಲರಲ ಸರಲ್ಗಳಿಂ ತನ್ನ ತಪಶ್ಚರಣ ದವಾಗ್ನಿಯಿನುರುಪಿದವರಲಕ್ಷ್ಮೀ ಸೇನಮುನಿಪನಂ ವಂದಿಸುವೆಂ
ಮಾಣಿಕ್ಯನಂದಿ ಮುನಿಪದಮಾಣಿಕ್ಯಜ್ಯೋತಿಯಿರೆ ಮನೋಗೇಹದೊಳಂಕಾಣಲರಿದಾವುದಿಳೆಗಕ್ಷೂಣ ಜಿನಾಗಮದೊಳಖಿಳ ವಸ್ತುಸ್ಥಿತಿಯಂ
ಸಾರಂ ಸಾರತ್ರಿತಯಂಮಾರಮದಪ್ರಹರಣೈಕದಕ್ಷನ ಮತದೊಳ್ಧಾರಿಣಿಯೊಳೊಪ್ಪಿದಂ ತತ್ಸಾರತ್ರಯವೇದಿಯೆನಿಸಿ ಕೇಶವವರ್ಯಂ
ಒರ್ಮೊದಲೊಳಮರಿನೃಪರಂನಿರ್ಮೂಲಿಸಿ ಕಳೆದುಮೇಕಚತ್ವಾರಿಂಶತ್ಕರ್ಮದ ಬಂಧಮನೞಿದಾನಿರ್ಮಳನಂ ಧರಣಿಯಲ್ಲಿಯುಂ ಪೊಗೞದರಾರ್
ದಯೆಯಿಂ ಜೀವಂಗಳನೋವಿಯೆ ಮನ್ಮಥನೆಂಬ ತಸ್ಕರಂಗಿತ್ತು ಮಹಾಭಯಮುಮನಶ್ರಾಂತಂ ಮುಕ್ತಿಯನೆಯ್ದುವ ಮುನಿಗಳೆನಿಬರನಿಬರ್ಗೆಱಪೆಂ
ಪಂಡಿತ ಜೈನೋತ್ತಮ ನಿಜಮಂಡಲಮಂ ಜೈನಗೃಹ ಸಹಸ್ರಂಗಳುಮಂದಂಡಾಧಿನಾಥಮುಖ್ಯನಖಂಡಿತಮೆನೆ ಪಾಲಿಸತ್ತುಮಿರ್ಪಂ ಬೊಪ್ಪಂ
ಸದ್‌ಜ್ಞಾನೋಪಜ್ಞ ಧರ್ಮಸ್ಥಿತ ನುತವರ ಸಮ್ಯಕ್ತ್ವ ಚಾರಿತ್ರಯುಕ್ತಂಕುಜ್ಞಾನಾಜ್ಞಾವಿದೂರೀಕೃತತರ ಜಿನಸಂಕಲ್ಪಿತಂ ಕಲ್ಪಭೂಜಂಪ್ರಜ್ಞಾವಿಜ್ಞಾನ ಭೇದೋದ್ಭವ ವಿಮಲಿನ ವೈದಗ್ಧ್ಯದಗ್ಧಾಘಕೈವಲ್ಯಜ್ಞಾನಾಧಾರ ಭೂಭೂವಿಭುಗುಪಸಚಿವಂ ಬೈಚಮಂತ್ರೀಶಪುತ್ರಂ
ವ. ಅಂತು ಪೊಗೞ್ತೆವೆತ್ತುವೊಪ್ಪಂಬಡೆದಯಿರುಗಪ ದಂಡಾಧೀಶನ ಸತ್ಕೀರ್ತಿಯೆಂತೆಂದೊಡೆ
ಇರುಗಪ ಮಂತ್ರಿಯ ಮತಿಸಾಗರಮಂ ಬೆರಸಿದುವಶೇಷ ವಿದ್ಯಾನದಿಗಳ್ನಿರುಪಮ ಚರಿತ್ರರತ್ನಾಕರನದಱಿಂ ತಿರ್ದುವೆನಿಪನಾ ಗುಣನಿಳಯಂ
ವ. ಎಂದು ವಂದಿಸಿ ಸರ್ವಜನೋಪಕಾರಿಯಪ್ಪ ಖಗೇಂದ್ರಮಣಿದರ್ಪಣದೊಳ್ ನಿರ್ವಿಷೀಕರಣ ಮಂತ್ರ ಯಂತ್ರೌಷಧಮೆಂಬವೈದ್ಯಗ್ರಂಥಮಂ ಪೇೞ್ವೆನದೆಂತೆಂದೊಡೆ
ಶ್ರೀಜಿನಯೋಗಿಯಿಂ ಪ್ರಥಿತಮಾದುದು ಯಾದವವಂಶಮುಂ ಕರಾಂಭೋಜದೊಳಂತವರ್ ಪಿಡಿದ ಕುಂಚದ ಪೆರ್ಬುಲಿಯೊಂದು ಕಾರಣಂಯೋಜನೆಗಾಯ್ತು ನಾಮಮದು ಹೊಯ್ಸಳವೆಂದು ತದೀಯ ರಾಜ್ಯಮುಂರಾಜಿಪುದಿಂತು ತಾನನುಗತಾರ್ಥಮದಾಗಿರೆ ಹೊಯ್ಸಳಾಖ್ಯದಿಂ
ವ. ಅದೆಂತೆಂದೊಡೆ
ಪರಿವೃತಮಾದ ವಾರ್ಧಿಯೆನಿಪ್ರುದ್ಘ ಸರೋವರಮಧ್ಯದೊಳ್ ನಿರಂತರಧರೆಯೆಂಬ ಪಂಕಜದ ಕರ್ಣಿಕೆಯಂತೆ ಸುಮೇರುವಂತದಕ್ಕುರುತರ ದಕ್ಷಿಣಾಶೆಯೊಳಗಿರ್ಪುದು ಹೊಯ್ಸಳದೇಶಮಂತದಾಧರೆಗನುರಾಗಮಂ ಹರಿಹರಕ್ಷಿತಿಪಂ ಕೊಡುತಿರ್ಪನೊಲ್ಮೆಯಿಂ
ಸಕಳ ಕಳಾ ಕಳಾಪ ಪರಿಪೂರ್ಣಮಹಾಮತಿಗಳ್ಗೆ ಸತ್ಯಭಾವಕ ಕವಿ ವಾದಿ ವಾಗ್ಮಿ ಗಮಕಿಪ್ರಕರಕ್ಕವನೀಸುರರ್ಗೆ ಮಾಂತ್ರಿಕರಿಗಭೀಪ್ಸಿತಪ್ರದ ನಮೇರುಸಮಾನತೆಯಿಂ ವಿರಾಜಿಕುಂಪ್ರಕಟಿತ ಧರ್ಮನೀ ಹರಿಹರಾವನಿಪಂ ನೃಪವಂಶಭೂಷಣಂ
ದೂರೋತ್ಸಾರಿತ ವೈರಿಭೂಪನಚಳ ಶ್ರೀಹೃದ್ಯವಿದ್ಯಾಸ್ವಕೂಪಾರಾವಾರಗುಣಂ ಧರಾಮರಸಮೂಹಾನಲ್ಪಕಲ್ಪದ್ರುಮಂಕ್ರೂರಾತ್ಮಾರಿಮದೇಭ ಭೈರವ ಮಹಾಕಂಠೀರವಂ ಸದ್ಗುಣಾಧಾರಂ ಧಾರಿಣಿಯಂ ಚಿರಂ ಹರಿಹರಕ್ಷ್ಮಾಪಾಲಕಂ ಪಾಲಿಪಂ
ವ. ಅಂತಾ ನೃಪವಂಶತಿಳಕಂ ಹರಿಹರೇಶ್ವರನಾಳ್ವ ಸರ್ವಸುಖಾವಲಂಬನಮಪ್ಪ ಪಲವುಂದೇಶಂಗಳೊಳ್
ಭಾವಿಸಲರಿದದಱಿರವಂಭೂವನಿತೆಯ ಲಪನದಂತಿರಾವಗಮೆಸೆಗುಂದೇವಳಿಗೆಯೆಂಬ ದೇಶಂದೇವರ್ಗಣಮಿಲ್ಲಮಲ್ಲಿಯಖಿಳಸುಖಂಗಳ್
ಸನ್ನುತಮಪ್ಪ ದೇವಳಿಗೆ ನಾಡಿಳೆಯೊಳ್ ಖರದಂಡಮುಂ ಸಮುತ್ಪನ್ನಕರಪ್ರಪೀಡೆ ಕಠಿನತ್ವಮುಮಿಲ್ಲೆನುತಿರ್ಪರೆಲ್ಲರುಂನನ್ನಿಯದೇ ಸರಂಗಳೊಳೆ ಧೇನುಕುಚಂಗಳೊಳಂಗನಾಜನಸ್ವರ್ಣಘಟೋಪಮಾನ ಕುಚಯುಗ್ಮದೊಳುಂಟದಱಿಂ ಪ್ರಸಿದ್ಧಮೇ
ಚೋರಾಂಗತ್ವ ನಿಷೇಧಮಾರ್ಗಮಪವಾದಂ ತದ್ವಿಘಾತಾಖ್ಯಮುಂಟಾ ರಾಜಂ ಪರಿರಕ್ಷಿಸಿರ್ಪ ಜನತಾವಿಚ್ಛಬ್ದ ಶಾಸ್ತ್ರಂಗಳೊಳ್ಸಾರಾಪೀಡನಮೆಂಬುದುಂಟು ವನಿತಾಬಿಂಬಾಧರಸ್ಥಾನದೊಳ್ಧೀರಂ ಭಾವಿಪೊಡಿಲ್ಲ ಮತ್ತೆ ನರ ನಾರೀವೃಂದದೊಳ್ ನಿಶ್ಚಯಂ
ಬಾಲಕರೊಳ್ ನಿರ್ಲಜ್ಜತೆಮಾಲೆಯೊಳಂ ವರ್ಣಸಂಕರಂ ಕುಟಿಲತ್ವಂಬಾಲೆಯರ ಕುರುಳೊಳಲ್ಲದೆಪೋಲಿಪೊಡಾ ಜನದ ಮನದೊಳಿಲ್ಲಮಿವೆಂದುಂ
ಆ ನಾಡೊಳ್ ಸೊಗಯಿಸುಗುಂಭೂನುತವೆಂದೆನಿಪ ಚಿಕ್ಕಮುಗುಳಿಯದುಂ ಸ್ವಸ್ಥಾನಪ್ರಾಪ್ತಿಯನೀಗುಂಜ್ಞಾನನಿಧಾನರ್ಗಶೇಷ ಸುಕವಿಜನಕ್ಕಂ
ವ. ಅದೆಂತೆಂದೊಡೆ
ಆ ಜನಪದಕಾಂತಾಮುಖರಾಜೀವದವೋಲ್ ಕರಂ ಮನಂಗೊಳಿಸಿ ರಮಾಭಾಜನಮೆನೆ ಮುಗುಳಿ ಕರಂರಾಜಿಸುಗುಂ ಸಕಲ ಸುಖದ ಪೊಂಪುೞಿಯಿಂದಂ
ಮದನಶರಂಗಳಂತೆಸೆವ ಕಾಂತೆಯರಿಂ ವನವೃಕ್ಷಮಾಲೆಯಿಂಮೃದುಮಧುರಂಗಳಪ್ಪ ಫಲದಿಂ ಕುಸುಮಾವಳಿಯಿಂ ಸುನರ್ತಕೀಸುದತಿಯರಿಂದೆ ಗಾಯಕಿಯರಿಂದೆ ಸಮಗ್ರತೆವೆತ್ತದೆತ್ತಲುಂಮುದಮನದಾಗಿಕುಂ ವಿಷಯಪಂಚಕದಿಂ ಮುಗುಳೀಪುರಂ ಕರಂ
ವರ ಪದ್ಮಾಕರದಿಂದೆ ಪುಷ್ಪಿತ ಕುಜವ್ರಾತಂಗಳಿಂ ಷಟ್ಪದಸ್ವರದಿಂದೊಪ್ಪುವ ಗಂಧಶಾಳಿವನದಿಂದುತ್ತುಂಗ ಚೈತ್ಯಾಲಯೋತ್ಕರದಿಂ ಹರ್ಮ್ಯಗೃಹಾಳಿಯಿಂ ಸುಜನರಿಂ ಸಂಪತ್ತಿಯಿಂದಾವಗಂನಿರುತಂ ಶ್ರೀಮುಗುಳೀಪುರಂ ಸೊಗಯಿಕುಂ ವಿಶ್ವಂಭರಾನೂಪುರಂ
ಅದಱಧಿಪರಬ್ಜಗರ್ಭನವಿದಿತ ಪರಂಪರೆಯಿನೆಸೆವ ವಂಶಾರ್ಣವದೊಳ್ವಿಧುವುದಯಿಪಂತಿರೊಗೆದರ್ಸದಮಳ ಗುಣನಿಳಯರಾದ್ಯರಗಣಿತರವರೊಳ್
ಶ್ರೀಜಿನಪಾದಪದ್ಮಮಧುಪಂ ಪರಮಾಗಮದತ್ತಚಿತ್ತನಂಭೋಜದಳೇಕ್ಷಣಂ ಪರಮಲಕ್ಷಣಲಕ್ಷಿತ ಪುಣ್ಯದೇಹದಿಂರಾಜಸಮಾನನಿಂದ್ರವರವೈಭವ ಸಜ್ಜನಪಾರಿಜಾತನೆಂದೀ ಜಗಮೞ್ತಿಯಿಂದೆ ಸಲೆ ಬಣ್ಣಿಸುಗುಂ ವಿಭು ಮಂಗರಾಜನಂ
ಸುರುಚಿರವೃತ್ತರತ್ನಸದನಂ ಜನರಕ್ಷಣದಕ್ಷನಬ್ಜಮಂದಿರೆಯ ಸುಜನ್ಮಭೂಮಿ ಪುರುಷೋತ್ತಮಸಂಗತನಾವಗಂ ಶುಭಾಕರ ವಿಲಸತ್ ಸರಸ್ವತಿ ನಿರಂತರಮಿರ್ಪುದಱಿಂದೆ ಸಿಂಧುಗಂದೊರೆ ಮುಗುಳೀಪುರಫ್ರಭು ವಿದಗ್ಧಶಿಖಾಮಣಿ ಮಂಗಣೋತ್ತಮಂ
ವ. ಇಂತನೇಕ ಪೊಗೞ್ತೆಗೆ ನೆಲೆಯಾದ ವಿಭುಲಲಾಮನ ಮನೋಮರಾಳಕೇಳಿಗೆ ಸರಸಿಜಾಕರಮಾದ
ಕಲನಿನದಂ ಪಿಕಸ್ವನಮೆ ತದ್ವಿಳಸದ್ವಿಮಳಾಂಗಿಯಂಗಕೋಮಲಲತೆ ತಾನೆ ಕಾಮಲತೆ ಪೂಗಣೆಗಳ್ ತದಪಾಂಗಮಿಂದುಮಂಡಲಮದು ಮಂಗಳಾನನಮೆನಲ್ ಕುಸುಮೇಷುಗೆ ಪೆರ್ಮಲೆಯಾಕೆನಿಶ್ಚಲ ಬಲಮಾಗಿರಲ್ ಮನಮನಂಡಲೆವಳ್ ನಲಿದಾತ್ಮನಾಥನಾ
ಆ ಸಮ್ಯಕ್ತ್ವನಿಧಾನೆಗೆವಾಸವನ ಸತೀಸಮಾನೆಗನ್ಯೂನಕಲಾವಾಸವಿಧುವದನೆಗುೞಿದರ್ಪಾಸಟಿಯಪ್ಪರೆ ಮನುಷ್ಯಸತಿಯರ್ ಕ್ಷಿತಿಯೊಳ್
ಎನೆ ನೆಗೞ್ದಾ ತ್ರಿಲೋಕಪತಿ ಪಾರ್ಶ್ವಜಿನಾಂಘ್ರಿಸರೋಜಭೃಂಗ ಸನ್ಮನುಜಮುಕುಂದನೆಂದೆನಿಪ ತದ್ವಿಭುಗಂ ಮೃಗನೇತ್ರೆಯಪ್ಪ ತನ್ಮನ ವಿಲಸಲ್ಲತಾಲಲಿತೆ ಪೆರ್ಮಲೆಗಂ ಜನಿಸಿರ್ದಪಂ ಸದಾಘನತರಕೀರ್ತಿ ಪುಣ್ಯಕರಮೂರ್ತಿ ಮಹಾಪ್ರಭು ಮಂಗಮನ್ಮಥಂ
ಶ್ರೀಮನ್ಮಂಗಣವರ್ಯನಾ ಗುಣಗಣಾಲಂಕಾರನೀಡ್ಯಾನುಜಂಪ್ರೇಮಕ್ಕಾಸ್ಪದಮಪ್ಪ ಪುತ್ರವಿನುತರ್ ಜವ್ವಾನೆ ಮೇಧಾವಿಯೆಂಬೀ ಮೂವರ್ ವಿಭು ಮಂತ್ರಮುತ್ಸಹಮೆನಿಪ್ಪಾ ಶಕ್ತಿಯಿಂತಾಗಿರಲ್ಕೀ ಮಾನ್ಯಂಗೆ ಸಮಾನನಾವನೆನಿಪಂ ವಿಶ್ವಂಭರಾಚಕ್ರದೊಳ್
ಸುರುಚಿರ ಮೇರುವುಂ ವರಬುಧಾವಳಿಸೇವ್ಯ ನಮೇರುವುಂ ಮನೋಹರತರ ದುಗ್ಧವಾರಿಧಿಯುಮಿರ್ದವೊಲಾವಗಮೊಪ್ಪೆ ಧೈರ್ಯಮುಂನಿರುಪಮಮಪ್ಪುದಾರತೆಯುಮೊಳ್ಪಿನಗಾಧತೆಯುಂ ವಲಂ ಗುಣೋತ್ಕರಮಿವು ಬಂದುಮಿಲ್ಲಿ ನೆಲಸಿರ್ಕುಮಮೋಘಶುಭಾಂಗ ಮಂಗನೊಳ್
ದಾರಿದ್ರ್ಯಾಂಬುಧಿ ಶೋಷಣೌರ್ವದಹನಜ್ವಾಲಾವಳೀವಿಭ್ರಮಂಧೀರಂ ಪುಣ್ಯಪುರಾಣ ಶುಶ್ರುತತರಂ ದಾನಪ್ರಸಂಗಂ ಸದಾಚಾರಂ ಚಾರುಗುಣಾನ್ವಿತಂ ಬುಧನುತಂ ಸಮ್ಯಕ್ತ್ವರತ್ನಾಕರೋದಾರಂ ದೇವಲದೇಶ ಮುಖ್ಯ ಸುಜನಶ್ರೀಸಂಗನೀ ಮಂಗಣಂ
ಸ್ಮರಪರಿತಾಪದಿಂ ನೆಱೆ ಮರುಳ್ತನದಿಂದಜತಾತನೆನ್ನೊಳಂಬೆರಸಿದನೀ ವಧೂಭವದ ಪುಟ್ಟುಗೆ ಪೊಲ್ಲೆನುತಿಲ್ಲಿ ರಾಗದೊಳ್ನಿರುಪಮನಪ್ಪ ಮಂಗವಿಭುವಾದಳೊ ಭಾರತಿಯಲ್ಲದಂದು ಪೇೞ್ಪರರಿಗಿದೆತ್ತಣ ಪ್ರಥಿತ ಸರ್ವಕಳಾಕುಶಲತ್ವಮೊಪ್ಪುಗುಂ
ವಿನುತ ಕಳಾಗಮಜ್ಞನಮಲಾನ್ವಯ ಕೀರ್ತಿ ಮನೋಜಮೂರ್ತಿ ಸಜ್ಜನತಿಳಕಂ ಪರಾರ್ಥಚರಿತಂ ಕೃತಪುಣ್ಯನಮೋಘ ವಾಕ್ಯಪಾವನ ವಿಭುವಂಶಮಂಡನನಶೇಷಜನಸ್ತುತ ಸತ್ಕವೀಶನೆಂದನುದಿನಮೞ್ತಿಯಿಂದೆ ನೆಱೆ ಬಣ್ಣಿಕುಮಾತನ ಸಚ್ಚರಿತ್ರಮಂ
ಮೃದುತರಸೂಕ್ತಿಯಿಂದೆ ರಸಘಟ್ಟಿಗಳಿಂದೆ ಪದಪ್ರಯೋಗದಿಂದುದಿತ ಘನಪ್ರಬಂಧನಯದಿಂದಮೆ ಸರ್ವಜನೋತ್ಸವತ್ವಮಂಪುದಿದನುರಾಗದಿಂದಮೃತವೃಷ್ಟಿಗಳಂ ಕಱೆವಂತು ಪೇೞ್ದ ತಿರ್ದಿದ ಕೃತಿಯಂ ಬುಧರ್ ಕಿವಿಗಳಿಂ ಮೊಗೆವರ್ ಪ್ರಭು ಮಂಗನುಕ್ತಿಯಿಂ
ವ. ಎಂಬ ಕವಿತ್ವಸರಣಿಯಿಂ ಮಂತ್ರೌಷಧಂಗಳ ಪ್ರಕರಂಗಳಂ ಕೇಳೆ ಬುಧರ್ ಪರಿಭಾವಿಸುತ್ತಿರಲ್ಕೆ
ಪದ್ಯಂಗಳ್ ರಸಪುಷ್ಟಿಗಳುದ್ಯತ್ಕವಿವೃಷಭನಿಗದಿತಂ ಪೆಱತೇನನವದ್ಯಮುಮೆನೆ ಪೇೞ್ ಸತ್ಕವಿಹೃದ್ಯಂ ಮಾೞ್ಪುಕ್ತಿ ಮಂಗ ನಿನ್ನೊಳ್ ಸಹಜಂ
ವ. ಎಂದು ಪ್ರಯೋಜನಾಭ್ಯರ್ಥನೆಯಂ ಮಾಡಿದರದೆಂತೆಂದೊಡೆ
ಏಕಾನೇಕ ಮತಸ್ವತತ್ವ ಸದಸತ್ಸ್ಯಾದ್ವಾದ ವಿದ್ಯಾಂಬುಧಿಶ್ಲೋಕಾಧ್ವಾನ ಗಭೀರ ಮಾರ್ದವಯುತಂ ಸಾರ್ಥಂ ಪರಿತ್ಯಕ್ತ ಮೋಹಾಕಾರಂ ವಿಮಲಂ ಜಿನೇಂದ್ರವಚನಂ ತತ್ಸರ್ವಭಾಷಾತ್ಮಕಂಲೋಕಾರೋಗ್ಯನಿಮಿತ್ತಮಿಲ್ಲಿ ತಿಳಿದರ್ ಮುಂ ಪೇೞ್ದರೀ ಗ್ರಂಥಮಂ
ಕನ್ನಡದಿಂ ಸಮಸ್ತ ಜನಗೋಚರಮಪ್ಪವೊಲೊಲ್ದು ಪೇೞ್ವುದೈನೀನ್ನಮಗೆಂದು ಭವ್ಯರೊಸೆದೞ್ತಿಯೊಳಂ ಬೆಸಗೊಳ್ವುದುಂ ಕರಂನನ್ನಿಯೊಳಂತವರ್ಗೆ ತಿಳಿಪಲ್ ಮನದಂದೆನಿದಂ ವಿಳಾಸಸಂಪನ್ನತೆವೆತ್ತುದೀ ಕೃತಿಯದಂತೆನೆ ಮತ್ಸುಕೃತಪ್ರಭಾವದಿಂ
ವ. ಅದೆಂತೆಂದೊಡೆ
ಎನಿತಸ್ಮದೀಯ ಪದಮುಂಟನಿತಱೊಳಪಶಬ್ದ ಮಾತ್ರಮಿಲ್ಲಂ ಭಿಷಗಾನನ ಗಹ್ವರದೊಳಮುಂಟೆಂಬ ನಯೋಕ್ತಿಯೞಿದು ಪೇೞ್ದಪೆಂ ತತ್ಕೃತಿಯಂ
ಉದಕಂ ಪಡೆದೊಡಮೇಂ ಪದ್ಮದ ಗಂಧಂ ಗಂಧವಾಹನಿಂ ಪರೆವವೊಲಿಂತೊದವಿದ ಮದೀಯ ಕವಿತಾಭ್ಯುದಯ ಯಶಂ ಪರೆಗುಮಿಳೆಗೆ ಸಂತರೆ ನಿಮ್ಮಿಂ
ವಾದಿ ಚಮತ್ಕೃತಿ ಸತ್ಕೃತಿಯಾದೊಡೆ ಮುಂ ಕೊಂಡುಕೊನೆವಿರಿ ನೀವಿಂಮೇದಿನಿಯೊಳಾಗದೊಡೆ ಸಂವಾದಂ ಪ್ರಾರ್ಥಿಸಿದೊಡಹುದೆ ತತ್ಸ್ವಾಮಿತ್ವಂ
ಗುಣಮಂ ಕಂಡೊಡೆ ಸಜ್ಜನಂ ಸಭೆಗಳೊಳ್ ಕೊಂಡಾಡುಗುಂ ದೋಷಮಂಗುಣಹೀನಂ ಕೃತಿಬಂಧದೊಳ್ ಪ್ರಕಟಿಸುತ್ತಿರ್ಪಂ ಗುಣಗ್ರಾಹಿಯಲ್ಲಣಕಕ್ಕಗ್ರಣಿಯಾದನಿರ್ವರೊಳವುಂ ನೈಜಂಗಳೆಂಗುಂ ಮಹಾಗ್ರಣಿ ಲೇಶ್ಯಾ ಪರಿಣಾಮಭೇದಮೆನಲಿನ್ನಾರ್ ವಾರಿಪರ್ ಭಾವಮಂ
ಧರ್ಮಾರ್ಥಕಾಮಮೆಂಬಿವನೊರ್ಮೊದಲೊಳೆ ಬಯಸುವಾತನೀ ಗಾರುಡಮಂಧರ್ಮಮೆನಲ್ ಪೇೞ್ವೆಂ ತಕ್ಕೂರ್ಮೆಯೊಳಂ ಮಿಕ್ಕ ವಿದ್ಯೆಯೇದೊರೆಯಿದಱೊಳ್
ಮರನಂ ಗಾಳಿಯ ಧೂಳಿಯಂ ರಜನಿಯಂ ನೀರಾಟಮಂ ಬೇಟಮಂಸುರೆಯಂ ಸೂಳೆಯರಂ ವಿಟಾಟವಿಕರಂ ಕೊಂಡಾಡಿ ಬೆಂಡಾಗದೀಧರೆಯೊಳ್ ಸರ್ವ ಜನೋಪಕಾರಮೆನಲೀ ಮಂತ್ರೌಷಧವ್ರಾತಮಂನಿರುತಂ ಭಾವಿಸಿ ಪೇೞ್ದ ಮಾನವನೆ ತಾಂ ದೇವಂ ಧರಾಚಕ್ರದೊಳ್
ವ. ಎಂದಶೇಷ ಬುಧಜನೋಪಕಾರಾರ್ಥಂ ಸ್ಥಾವರ ಜಂಗಮ ಕೃತ್ರಿಮಪ್ರಭೃತಿ ನಾನಾ ವಿಷಹರಣಕಾರಣಮಪ್ಪ ಗ್ರಂಥಮಂ ಪೇೞಲೊಡರ್ಚಿದೆನದೆಂತೆಂದೊಡೆ
ಗುಣನಿಧಿ ಖಗೇಂದ್ರಮಣಿದರ್ಪಣಮೀ ಕೃತಿ ರಚಿತಮಾಯ್ತು ಮಂಗಪ್ರಭುವಿಂಪ್ರಣುತಂ ಜನಹಿತಮೆನೆ ಧಾರಿಣಿಯೊಳಿದಂ ಮೆಚ್ಚದಿರ್ಪ ಸಜ್ಜನರೊಳರೇ
ನರರ್ಗರುಜತೆ ಭೇಷಜದಿಂದರುಜತೆಯಿಂ ದೇಹ ದೇಹದಿಂದಂ ಜ್ಞಾನಂಪರಮಜ್ಞಾನದೆ ಮೋಕ್ಷಂದೊರೆಕೊಳ್ಗುಮದೆಂದು ಪೇೞ್ದಪೆಂ ಭೇಷಜಮಂ
ಆದ್ಯರ ಹಿತತ್ವದೊಳಗಾಂಹೃದ್ಯಮೆನಲ್ ಪಲವು ಮತದೊಳಾನಱಿವನಿತಂವೈದ್ಯಮಿ ದೆನಲ್ಕೆ ಪೇೞ್ವೆಂವೈದ್ಯಾಂಭೋನಿಧಿಯೊಳೆತ್ತಿ ತತ್ಸಾರಮುಮಂ
ಆಗಳೆ ದಷ್ಟಜೀವಿತಮದಾಗಳೆ ದಷ್ಟನ ಸಾವು ಭಾವಿಸಲ್ಕಾಗಳೆ ಕೀರ್ತಿಯಾಗಳಪಕೀರ್ತಿಯಭಿಜ್ಞತೆಯಿಂದಮಜ್ಞತಾಯೋಗದಿನಾಭಿಷಕ್ತಮಜನಕ್ಕಹ ಕಾರಣದಿಂದಮಾಂ ಪರೀಕ್ಷಾಗುಣ ಮುಖ್ಯಮೆಂದೊಸೆದು ಪೇೞಲೊಡರ್ಚಿದೆನೀ ಪ್ರಪಂಚಮಂ
ಸ್ಥಾವರ ಜಂಗಮ ಕೃತ್ರಿಮ ವಿಷಭೇದಂಗಳ್
ಉರಗ ಮೃಗಮಾಖು ವೃಶ್ಚಿಕಸುರೆ ಕೀಟಕಮುಂ ಕುಧಾನ್ಯ ತಂಬುಲ ಕನಕಂನಿರುಪಮಿತ ಕೃತ್ರಿಮಂಗಳ್ಪರಿಕಿಪೊಡಿವು ದಶವಿಧಂ ವಿಷಂಗಳೆನಿಕ್ಕುಂ
ಉರಗಂ ವೃಶ್ಚಿಕ ಮೂಷಿಕಾದಿ ಶುನಕ ವ್ಯಾಘ್ರಾದಿಯುಂ ಗೌಳಿಯುಂಸರಟಂಗಳ್ ಮೊದಲಾದುವುಂ ಮಕರ ಮತ್ಸ್ಯಾದ್ಯಪ್ಚರವ್ರಾತಮುಂನೊರಜುಂ ಗುಂಗುಱು ಷಟ್ಪದಾದಿಗಳಿವುಂ ಪಕ್ಷಿವ್ರಜಂ ಮರ್ತ್ಯರುಂಧರೆಯೊಳ್ ನಂಜಿಲಿ ನಲ್ಲಿಱುಂಪೆ ಮೊದಲಾದೆಲ್ಲಂ ವಿಷಗ್ರಾಹಿಗಳ್
ವ. ಇನ್ನು ಕೃತ್ರಿಮ ವಿಷಂಗಳಾವುವೆನೆ
ಭಾಷ್ಪಂಗಳೆಂಬನಿತ್ತಱಕಷ್ಟತೆಯಂ ಕೃತ್ರಿಮಂಗಳಂ ಪೆಱರಿಂದಂಚೇಷ್ಟಿಸಿದಭಿಚಾರಂಗಳನಿಷ್ಟತ್ವ ವಿಘಾತ ಮಂತ್ರತಂತ್ರಮನುಸಿರ್ವೆಂ
ವ. ಅದೆಂತೆಂದೊಡೆ ನಾನಾ ವಿಷಂಗಳೊಳಗೆ ವಿಭೇದಂಗಳ್ ಸ್ಥಾವರ ಜಂಗಮಮೆಂಬೆರಡುತೆಱಗಳುಂಟು, ಅವಱೊಳ್
ಸ್ಥಾವರ ವಿಷಮಿರ್ಪತ್ತಯ್ದಾವಾವುವಿವೆಂಬ ನಾಮ ವಿಷವೀರ್ಯಮುಮಂಕೇವಳ ಕುತ್ಸಿತ ವಿಷಮಂಭಾವಿಪೊಡವಱುಪಶಮಂಗಳಂ ವಿವರಿಸುವೆಂ
ಕೂಟದ ತಕ್ಷಕಂ ಕುಳಿಕ ಪದ್ಮನನಂತ ಮಹೋಗ್ರಪದ್ಮ ಕರ್ಕೋಟಕ ಶಂಖಪಾಳ ನುತ ವಾಸುಗಿಯೆಂಬ ಕುಲಂಗಳೆಂಟಱೊಳ್ಸ್ಫೋಟನೆಯಿಂದ ತೋರ್ಪವಱ ಚಿಹ್ನಮನನ್ವಯವರ್ಣಮಂ ವಿಷೋತ್ಪಾಟನ ಭೇದಮಂ ದಶನಭೇದಮುಮಂ ತಿಳಿವಂತು ಪೇೞ್ದಪೆಂ
ದೂತಿ ಕರಾಳಿ ಕಾಳಿ ಯಮದೂತಿಗಳೆಂಬ ಸುತೀಕ್ಷ್ಣದಂಷ್ಟ್ರಸಂಘಾತದ ಭೇದಮಂ ಕ್ಷತಪರೀಕ್ಷೆಗಳಂ ಧರೆ ವಾರಿ ವಹ್ನಿಸಂವಾತ ವಿಶೇಷದಂತಕಮನಂತವಱಿಂದಹ ಚೇಷ್ಟೆಯೆಂಬಿವಂಧಾತುಗಳಂ ಪರೀಕ್ಷಿಸುವುದೊಪ್ಪುವ ಜಾಂಗಳಿಕಂ ಧರಿತ್ರಿಯೊಳ್
ವ. ಅದೆಂತೆಂದೊಡೆ
ಕಾಣದ ಮುನ್ನಂ ದಷ್ಟಪ್ರಾಣದ ಗತಿ ದಷ್ಟನನ್ವಯಂ ಕ್ಷತದೆಡೆಯಂಜಾಣೆನೆ ಪೇೞಲ್ ಜಗದಕ್ಷೂಣ ಜಿನೋಕ್ತಿಯೊಳೆ ಮಂಗರಾಜಂ ಬಲ್ಲಂ
ನೆಲನಿಂ ದೂತನಿನಾದ ಚೇಷ್ಟೆಯೊದವಿಂ ವಾರಂಗಳಿಂ ಹೋರೆಯಿಂವಿಲಸದ್ಪಕ್ಷದಿನಾ ದಿನಪ್ರತತಿಯಿಂ ಮರ್ಮಂಗಳಿಂ ಪೊೞ್ತಿನಿಂಪಲವಪ್ಪ ಸ್ವರದಿಂ ನಿಮಿತ್ತತತಿಯಿಂ ಮಂತ್ರೌಷಧಿವ್ರಾತದಿಂಸಲೆ ಜೀವಿಪ್ಪನಿವಂ ಮೃತಾಂಗಿಯಹನೆಂಬೀ ಭೇದಮಂ ಪೇೞ್ದಪೆಂ
ತಾಪಿಸುವ ದಷ್ಟದೇಹಿಗಳೋಪರ್ಗೆ ತದೀಯ ದೂತರಪ್ಪ ನರರ್ಗೀವಾಪರವಿಧಾನಮುಮನಾಲಾಪದೊಳೇಂ ಶಬ್ದನಿರ್ವಿಷಂಗಳನುಸಿರ್ವೆಂ
ವ. ಅಂತಗಣ್ಯಮಪ್ಪ
ಸ್ಥಾವರ ಜಂಗಮ ಕೃತ್ರಿಮಮಾವಾವ ವಿಷಕ್ಕೆ ತತ್ಪ್ರತೀಕಾರಮುಮಂಜೀವಹಿತಮಪ್ಪುವಂ ಪರಿಭಾವಿಸಿ ಪೇೞ್ವೆಂ ಜಿನಾಗಮೋಕ್ತಕ್ರಮದಿಂ
ದ್ರವ್ಯಸಂಗ್ರಹನಿರೀಕ್ಷೆಯಂ ಪೇೞ್ವೆಂ
ಗಿರಿಶ ನಿರೀಕ್ಷಣಾವಧಿಯೊಳಂ ಭಸಿತಂಗಳೊಳಸ್ಥಿಚರ್ಮದೊಳ್ಪಿರಿಯ ಪಥಂಗಳೊಳ್ ಮಲದೊಳೂರೊಳಮಾ ಮಲಮೂತ್ರದಿರ್ಕೆ ಭೀಕರತರ ರುದ್ರಭೂಮಿ ಪುೞು ಕೊಂಡೆಡೆಯೊಳ್ ಬೆಳೆದಿರ್ದ ಮೂಲಮಂತರು ಲತೆ ಗುಲ್ಮಮಂ ತರಿಸಿ ಸಂಗ್ರಹಿಸಲ್ಕಣಮಾಗದಾವಗಂ
ಅಲರಂ ಬಸಂತದೊಳ್ ತತ್ಫಲಮಂ ಗ್ರೀಷ್ಮದೊಳೆ ಮೂಲಮಂ ಶರದದೊಳಂದಲಮಂ ಶಿಶಿರದೊಳಂ ತಾಂನಲವಿಂ ಪ್ರಾವೃಡ್ದಿನಂಗಳೊಳ್ ಛಲ್ಲಿಗಳಂ
ಹೇಮಂತದೊಳಂ ಪಣ್ಗಳನೇಮಾತಿಂತೀ ಕ್ರಮಂಗಳಿಂ ದ್ರವ್ಯಮುಮಂಪ್ರೇಮದೊಳಂ ಸಾಧಿಪುದು ಮಹಾಮಯ ಹಾಲಾಹಲಕ್ಕೆ ಸಂಗ್ರಹಕಾಱಂ
ಪರಿಭಾಷೆ
ಕುಂದೇಂದೀವರಜಾತಿಪೂತಕರ ನಂದ್ಯಾವರ್ತದೊಳ್ ಪುಷ್ಪಮಂಸಂದಾ ದಾಡಿಮ ನಾರಿಕೇಳ ಕದಳೀವ್ರಾತಂಗಳೊಳ್ ತತ್ಫಲಂಸಂದಾ ನಾಗಸುಭೂರ್ಜತಾಳತೃಣ ವಲ್ಲ್ಯಾದ್ಯಂಗಳೊಳ್ ಪತ್ರಮಂಕಂದಂ ಗ್ರಾಹ್ಯಮೆ ಸೂರಣಾದಿಗಳೊಳ್ ಬಾಳಾದಿಯೊಳ್ ಮೂಲಮಂ
ಪ್ರಸವಕ್ಕೆ ಪತ್ರ ಪತ್ರಕ್ಕೆಸೆವ ಫಲಂ ಫಲಕ್ಕೆ ಛಲ್ಲಿ ಛಲ್ಲಿಗೆ ಪಣ್ಣಂತಸದೃಶದ ಪಣ್ಗೆ ಬೇರ್ಗಳ್ವಿಶೇಷತರ ವೀರ್ಯವೃದ್ಧಿಯಿಂದೆಂಟುಗುಣಂ
ಭಾಗಮಿದಿಂತುಟೆನ್ನದುವುಮಂ ಸಮಭಾಗಮವೆಂಗೆ ವಸ್ತುವಂತಾಗಲಲರ್ ಫಲಂ ದಳಸಮೂಲಮಿವೆನ್ನದೆ ಪೇೞ್ದುವೆಲ್ಲಮಂಬೇಗದೊಳೆಂಗೆ ಬೇರ್ಗಳನಣಂ ರಸಮಿಂತುಟದೆಂದು ಪೇೞದಂದಾಗಳೆ ನೀರೊಳಂದರೆದುಕೊಳ್ವುದು ನಿಜ ಪುರುಷಾರ್ಥಸಾಧಕಂ
ತನ್ಮಾಂತ್ರಿಕಲಕ್ಷಣಂ
ವಿನಯನಿದಾನನಾರ್ಯಜನಸಂಗತಿ ಲೋಭವಿದೂರನಾವಗಂಮನುನಿಯಮಾದಿನಿಷ್ಠ ಮದನಾಂಗ ವಿವರ್ಜಿತನಿಷ್ಪವರ್ಗ ಸಜ್ಜನಹಿತಕಾರಿ ಸೂರಿಯಭಿಮಾನಿ ವಿವರ್ಜಿತ ಮಾನರೋಷನೆಂಬನುಪಮ ಪಂಡಿತಂ ಧರೆಯ ಮಾಂತ್ರಿಕರೊಳ್ ಗುರುಭಕ್ತನಪ್ಪವಂ
ಸ್ಥಿರತರ ಬುದ್ಧಿಭಾವಯುತನನ್ವಯ ಶುದ್ಧನನೂನಮೂರ್ತಿಸತ್ಪುರುಷನಮೋಘವಾಕ್ಯನಮಲಾಂಗನಕುತ್ಸಿತಕರ್ಮನಾಗಳುಂಪರಹಿತವೃತ್ತನೊಳ್ಳಿದನುದಾರ ಗಭೀರ ಗುಣಾಢ್ಯನಪ್ಪವಂಧರೆಯ ಭಿಷಗ್ವರಾಗ್ರಣಿಯೆನಿಪ್ಪನತಂದ್ರನವದ್ಯವರ್ಜಿತಂ
ಪಾತ್ರಾಪಾತ್ರ ವಿಶೇಷಂಗಳ ಪರೀಕ್ಷೆಗಳ್
ವ. ಅದೆಂತೆಂದೊಡೆ ಇಂತಪ್ಪ ನುತಚರಿತಕೀರ್ತಿಯಶರಪ್ಪವರ್ಗಳಾರ್ಗೆ ಪೇೞ್ವುದೆಂದೊಡೆ
ಕರುಣನಿಧಿಯಾಗಮಜ್ಞಂಗುರುಭಕ್ತಂ ಪರಹಿತಂ ನಿಮಿತ್ತಾದಿಗಳೊಳ್ಪರಿಣತನಪ್ಪ ನರಂಗಂದಿರದುಪದೇಶಿಪುದು ಬಲ್ಲರೀ ಗ್ರಂಥಮುಮಂ
ನೀರಸನತಿನಿರ್ಘೃಣನವಿಚಾರಪರಂ ಶಾಸ್ತ್ರದೂಷಕಂ ಖಳನೆಗ್ಗಂಕ್ರೂರನತಿಕಷ್ಪನಿಷ್ಠುರಜಾರನೆನಿಪ್ಪವಗೆ ಪೇೞವೇಡಿದನೆಂದುಂ
ಧರ್ಮಪರರ್ಗೆ ದಾನಗುಣಮುಳ್ಳವರ್ಗಂ ವ್ರತಶೀಲಯುಗ್ಮದಿಂನಿರ್ಮಲಚಿತ್ತರಪ್ಪವರ್ಗೆ ವಂಶವಿಶುದ್ಧರಿಗೞ್ತಿಯಿಂದೆ ಪೇೞ್ವರ್ಮುದದಿಂದೆ ಕೂಡೆ ಕುಡುವರ್ ಪಡೆಗುಂ ಶುಭಕೀರ್ತಿಲಕ್ಷ್ಮಿಯಂಶರ್ಮದಮಪ್ಪ ಧರ್ಮವಸುಕಾಮಸುಖಂಗಳನೀ ಧರಿತ್ರಿಯೊಳ್
ಗದ್ಯ ಇದು ಸಕಲ ವಿಮಲ ಜೀನೇಂದ್ರೋಕ್ತ ಸಿದ್ಧಾಂತ ಪಯಃಪಯೋನಿಧಿಪಾರಗ ಶ್ರೀ ಪೂಜ್ಯಪಾದಮುನೀಂದ್ರ ಚಾರುಚರಣಾರವಿಂದಗಂಧಗುಣಾನಂದಿತಮನಾನಸಂ ಶ್ರೀಮದಖಿಲಕಲಾಗಮೋತ್ತುಂಗ ಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್ ಸಂಜ್ಞಾಧಿಕಾರಂ ಪ್ರಥಮಂ


