EN | KA

Menu

VIII

ಹದಿಬದೆಯ ಧರ್ಮ

ಆವನಿಚ್ಛೆಯೊಳವತರಿಸಿದುದಾದಿಯೊಳಾವನಿಂದೊಳ್ಪುವಡೆದುದುಆವನೊಳಡಗುವುವಖಿಳ ಚರಾಚರವಾ ವಿಷ್ಣುಗಾನೆರಗುವನು

ಶ್ರೀ ವಿಷ್ಣುವಲ್ಲಭೆಯೆನಿಸಿ ಸಕಲ ವೇದಾವಳಿಯೊಳು ಜಸವಡೆದಪಾವನಚರಿತೆಯ ಪದ್ಮಸದ್ಮೆಯ ಲಕ್ಷ್ಮೀವನಿತೆಯ ವಂದಿಪೆನು

ಲೋಕಶಾಸ್ತ್ರವನಾಲೋಚಿಸಿ ತಿಳಿದದರೈಕಮತ್ಯವನಳವಡಿಸಿಏಕಪತ್ನಿಯರೆಸಗುವ ದಿನಚರ್ಯೆಯಜೋಕೆತಪ್ಪದೆ ಸೊಲ್ಲಿಸುವೆನು

ಅರುಣೋದಯದ ಸಮಯದೊಳೆದ್ದು ಶ್ರೀಹರಿಗುರುಚರಣಕೆ ಕೂರ್ತೆರಗಿಪರಮಭಕ್ತಿಯೊಳೊಲಿದಿನಿಯನೆಚ್ಚರುವನ್ನಮರುಕವೆರೆದು ಕಾದಿಹುದು

ಸಡಿಲಿದ ಮುಡಿಯ ಸೈಪಿಡುತೊಂದರೊಳೊಂದುತೊಡಕಿದ ರನ್ನ ಸರಗಳಬಿಡಿಸುತೆಚ್ಚರುವನ್ನೆವರಮಿನಿಯನ ಕೆಲಗಡೆಯೊಳೊಲಿದು ಕಾದಿಹುದು

ಎದ್ದು ನಿಟ್ಟಿಸುವಿನಿಯನ ನೋಟಕೆ ತನ್ನಮುದ್ದುಮೊಗವ ಮುಂಗೊಳಿಸಿನಿದ್ದೆಯೊಳೆಸಗಿದ ನಿಖಿಲಾಪಚಾರವತಿದ್ದುವುದಿನಿವಾತಿನೊಳು

ಅಡಿಗಳಿಗೆರಗಿಯಾಣತಿಗೊಂಡು ಪೊಡಮಟ್ಟೊಡನೂಳಿಗದ ಪೆಣ್ಗಳಿಗೆಬಿಡುಗೆಲಸಂಗಳ ಬೆಸಸಿ ಯಾಪಂತೆ ತಾನೊಡರಿಪುದೊಳ್ಗಜ್ಜವನು

ಕರುತುರುಗಳ ಕಾಪಿಡುವ ಕರೆವ ಪಾಲ್ಗರೆವ ಕಾಸುವ ಕೌಶಲವಅರಿಯದ ಸೊಸೆ ಪೆಣ್ಮಕ್ಕಳಿಗಾ ಬಗೆಯರಿವಂತನುಗೊಳಿಸುವುದು

ದೇವಪೂಜೆಯ ದೇವರಿಗೆರಗುವುದೆತ್ತಮಾವಂದಿರಡಿಗೆ ಮಣಿವುದುಭಾವಂದಿರಡಿಗೆ ವಂದನೆಗೈವುದು ತನ್ನಭಾವಶುದ್ಧಿಯ ಬಳೆಯಿಪುದು

ಮನಮೊಲಿದುಡಿಸಿ ತಿಲಕಂಗಳನನುಗೈದಾದರವೆರಸಿಮನೆಯೊಳಿರುವ ಮಕ್ಕಳನೆಲ್ಲರನೊಯ್ದನಿಬರಡಿಯೊಳೆರಗಿಪುದು

ಕಳವು ಕಪಟಗಳ ಕಲಿಯದಂದದಿ ಮಕ್ಕಳನಡಿಗಡಿಗಳುಕಿಪುದುಎಳಮೆಯೊಳೆದೆಗೊಂಡು ಸುಗುಣ ದುರ್ಗುಣಗಳಕಳೆವುದರಿದು ಕಡೆಕಡೆಗೆ

ಆರೈದು ತನ್ನಿನಿಯನ ಸಿರಿ ಬಡತನವೀ ರೀತಿಯೆಂದೆದೆಗೊಳಿಸಿಬಾರದ ವಸ್ತುವ ಬಯಸಿ ಬಾಧಿಸದೆ ಕೈಸಾರಿದುದಕೆ ಸಮ್ಮತಿಪುದು

ಹಸಗೆಡದಂತೆ ಹಕ್ಕಿಗಳು ಕುಟುಕದಂತೆಪಸುಗಳು ಬಾಯಿಡದಂತೆಕಸ ಪುಗದಂತೆ ಕಾಪಿಡುವುದು ಧಾನ್ಯವಜಸವಡೆವುದು ಜಾಣ್ಮೆಯೊಳು

ಸಾವಧಾನದೊಳು ಸಂಪಾದಿಸಿ ಮನೆಯೊಳುತೀವಿದ ದಿವ್ಯವಸ್ತುಗಳದೇವರಾರೋಗಣೆಗೆಂದೆಲ್ಲವ ಭಕ್ತಿಭಾವದಿ ಪರಿಶೋಧಿಪುದು

ಪಳದಾಗದ ಮುನ್ನ ಬಣ್ಣಗೆಡದ ಮುನ್ನಮೊಳೆದೋರಿ ಮುಗ್ಗದ ಮುನ್ನಕಳೆಯಳಿಯದ ಮುನ್ನ ಕುಂದಿ ಕುಂದದ ಮುನ್ನಬಳಸುವುದಖಿಳ ವಸ್ತುವನು

ಮೀಸಲಳಿಯದಂತೆ ಮಿದಿವರೆವುರ್ದುವಬೀಸುವರನು ಬೆಸಸುವುದುಈ ಸುವಸ್ತುವನಿಂತನುಗೊಳಿಸುವ ಬಗೆಲೇಸೆಂಬವೊಲೆಸಗುವುದು

ಕೆಲಗಂದು ಬೇರು ಗೆಣಸು ದಂಟು ಕುಡಿ ಕಾಯೆಲೆ ಮಿಡಿಗಾಯಿಗಳೆಂಬಪಲವಗೆ ಶಾಕದೊಳುಚಿತಾನುಚಿತವನೆಲೆಯರಿವುದು ನೇಮದೊಳು

ಕೊಳೆತ ಕಂದಿದ ಇಲಿ ತಿಂದುಳಿದ ಮೀಸಲಳಿದಲ್ಲದವರು ತಂದಿತ್ತಪುಳಿತ ಪೊಲ್ಲದ ನೆಲದೊಳು ಪುಟ್ಟಿದ ಶಾಕಂಗಳನು ಕಳೆದು ಬಿಸುಡುವುದು

ಆಚಾರದಿಂದನುಪಮಧರ್ಮದೇಳಿಗೆಆಚಾರದಿಂದಾಯುಷ್ಯಆಚಾರದಿಂದಿಹಪರವದರಿಂದ ಸದಾಚಾರವತಿಯೆನಿಸುವುದು

ಆದಿಯೆನಿಪುದಾಚಾರಂಗಳಿಗೆ ಮೀಹವಾದ ಬಗೆಯೊಳದನರಿತುಆದರವೆರಸಿ ಮೀವುದು ಮೊದಲೊಳು ಮಿಕ್ಕವೇದವಿಧಿಯನೆಗುವುದು

ಇಳಿದು ನೀರೊಳು ಮೀವುದಿದಕಾರದವರು ಮೈದೊಳೆವುದು ಮಂಡೆಯನುಳಿದುಚಳಿಯ ಸೈರಿಸಲಾರದ ಸತಿಯರು ಬಿಸಿಯೊಳು ಮೀವುದು ಮೈದೊಳೆವುದು

ಬಳೆದ ಬೇನೆಯ ಬಡಮೆಯ್ಯೆ ಭಾವೆಯರೆದ್ದುತೊಳೆದು ಕೈಕಾಲು ಮೊಗಗಳಉಳಿದಂಗವನು ನನೆದುಡೆಯೊಳು ತೊಡೆವುದುಕಳೆವುದು ಪಾಪಕರ್ಮವನು

ನೀರೊಳು ಮೆಯ್ಯ ನೇಮದೊಳು ಕರಣಗಳಭೂರಿಸತ್ವದೊಳು ಬುದ್ಧಿಯನುನಾರಾಯಣನಾಳುತನದೊಳಾತ್ಮನ ತೊಳೆದೋರಂತೆ ಒಳ್ಪುವಡೆವುದು

ಸಲೆ ಚಿನ್ನ ಬೆಳ್ಳಿ ಹಿತ್ತಳೆ ಕಂಚು ತಾಮ್ರದಪಲಬಗೆ ಪಾತ್ರಂಗಳನುಕಿಲುಬಿನ ಕರೆ ತೋರದಂತಾದರದಿಂದಲಸದೆ ತೊಳೆವುದಂದಂದು

ಅಡಿಗೆಮನೆಗೆ ದೇವತಾರ್ಚನೆಯೆಡೆಗೆ ತಾವಡಿದೊಳೆವುದಕೆಂದು ಬೇರೆಮಡಗಿಸುವುದು ಮರ್ಯಾದೆಯರಿತು ನೀರಕೊಡಗಳ ಕುಲಪಾಲಕಿಯರು

ರಚನೆಯ ಬಗೆ ರಯ್ಯಮಾಗೆಯುಪಸ್ಕರಉಚಿತಮೆನಿಸಿಯೊಳ್ಪುವಡೆಯೆಶುಚಿ ರುಚಿಯಪ್ಪಂತೆ ಸುಯಿಧಾನದೊಳೈದೆಪಚನಗೈವುದು ಭಾವೆಯರು

ಬೆಂದು ಬೇಯದೆ ಗಬ್ಬದೊಳು ಪಸಿಯಾದುದಬೆಂದುರೆ ತಳ ಪೊತ್ತಿದುದನುಅಂದವಳಿದುದನಚ್ಯುತನಾರೋಗಣೆಗೆಂದು ಮುಂದಿಡದೆ ಕಳೆವುದು

ಮೈದೊಳೆಯದ ಮಡಿಯುಡದ ಮೈಲಿಗೆಯೆಂಜಲಾದ ನಾರಿಯರನುಗೈದಈ ದೇವರಾ ದೇವರಿಗೆಂದುದನು ನಿವೇದಿಸಲಾಗದಚ್ಯುತಗೆ

ದೇವರಿಗೆರಗಿ ದೇವರ ಮನೆವೊಕ್ಕಲ್ಲಿತೀವಿರುವುಪಕರಣಗಳಸಾವಧಾನದಿ ಸಜ್ಜುಗೈವುದು ಜನ್ಮವಪಾವನವೆನಿಸಿ ಬಾಳುವುದು

ಸಾರಿಸಿ ರಂಗವಲ್ಲಿಯ ಸರಗೊಳಿಸಿ ದೀಪಾರೋಪಣವನಾಚರಿಸಿಹಾರುತ ಮನದನ್ನನ ಬರವನೆ ಮನವಾರೆ ಕಾದಿಹುದು ಕಾಂತೆಯರು

ಒಡನೆ ತನ್ನಿಷ್ಟದೇವತೆಗಾರೋಗಣೆವಡಿಸಿ ತಂದಮೃತಾನ್ನವನುತಡೆಯದಿನಿಯನನುಮತಿವಡೆದದನುಣಬಡಿಸುವುದುಪಚರಿಸುವುದು

ಅತಿಥಿಗಳಭ್ಯಾಗತರೊಡನಧವರಯತಿಯಾಚಕರೆಲ್ಲರನುಪತಿಕರಿಸುವುದು ಬಳಿಕ ಸಂತಸದೊಳುಸತಿಯರು ಸವಿವುದನ್ನವನು

ತಿಳಿವಂತೆ ಪೇಳುವ ದೇಶಿಕೋತ್ತಮನಂಘ್ರಿನಳಿನಂಗಳಿಗೆ ನತಿಗೈದುಬಳಿಕ ಭಾರತ ಭಾಗವತ ರಾಮಾಯಣದೊಳುಗತೆಗಳನು ಕೇಳುವುದು

ತಿಳಿದದರೊಳು ತತ್ವದಿರವ ಮಾಧವನಂಘ್ರಿಯೊಳು ಭಕ್ತಿಭಾವವ ಬಲಿಸಿಕಳೆವುದು ಸಕಲ ಕರಣ ಕಲ್ಮಷಗಳತೊಳೆವುದು ಮನದ ಧೂಳುಗಳ

ಏರುಜವ್ವನದ ನೀರೆಯರಿನಿತನಿತಕ್ಕೆಮೋರೆಗಾಣಿಸಿ ಮುಂಬರಿಯದೆಮೀರಬಾರದ ಕಜ್ಜದೊಳು ಮೇರೆಯರಿತು ಮೈದೋರಿ ನಡೆವುದುಚಿತದೊಳು

ಸುಜ್ಜುವಡೆಯೆ ಸೌಮ್ಯತೆ ಸರ್ವಾಂಗದೊಳುಜ್ಜುಗಗೊಳೆಯೊಳ್ನಡತೆಲಜ್ಜೆ ಬಿಂಬಿಸೆ ಲಾವಣ್ಯದೊಳೊಯ್ಯನೆಪಜ್ಜೆಯಿಡುವುದು ಭಾಮೆಯರು

ನೆಲನ ನಿಟ್ಟಿಸೆ ದಿಟ್ಟಿ ನೇಮದೊಳಿರೆ ಮನತಲೆ ನಸುಮಣಿದಂದವಡೆಯೆಒಲೆಯದೆ ಮೆಯ್ಯೊಪ್ಪದೊಳಿರೆ ಒಯ್ಯನೆಕುಲವಧು ಪಜ್ಜೆಗೊಳುವುದು

ತನ್ನೊಡಲಿಗೆ ತನ್ನ ಮನವ ಕಾಪಿಡುವುದುತನ್ನ ಮನಕೆ ತನ್ನ ಮತಿಯತನ್ನ ಮತಿಗೆ ತನ್ನ ಸಾತ್ವಿಕ ಧೈರ್ಯವನುನ್ನತಿವಡೆದೊಪ್ಪುವುದು

ತನ್ನ ಮನೆ ಬಡತನಗಳ ಧನಗಳತನ್ನಿನಿಯನ ತಪ್ಪುಗಳತನ್ನ ಮರವೆ ಮೋಸಗಳನವರಿವರೊಳುಬಿನ್ನವಿಸದೆ ಮರಸುವುದು

ಪರವೇಳೆಯೊಳು ಪರಿಯದೆ ತಾಯ್ವನೆಗಲ್ಲಿಪಲವಗಲಿದ್ದು ನೆಲಸದೆಪಲಬಗೆಯೊಳು ಪತಿಪದವನಗಲಿದೊಂದುಕಲೆಯ ಕಲ್ಪದವೋಲೆಣಿಪುದು

ಪೆರರ ಮರ್ಮವ ಪೆರರಾಲೋಚನೆಗಳಪೆರರೇಕಾಂತದೆಸಕವಪೆರತೊರ್ವರಿಗೆ ಪೇಳುವ ಬೆಸನವ ಬಿಟ್ಟುನೆರೆ ನೇಮದೊಳು ನೆಲಸುವುದು

ನೆರೆಮನೆ ಮನೆವಾರ್ತೆಯನಿಂತಿಂತೆಂದುಪರಿಹಾಸಗೈದು ಪಳಿಯದೆಪರರೊಳು ಪರಿವಾದವ ಬಣ್ಣಿಸುವರೊಡವೆರಸದೆ ಬೇರೆನಿಸುವುದು

ಪರಿದೂರ ಬೀದಿ ಬೀದಿಯ ಪಲವನೆಯೊಳುತಿರುಗುವ ದಿಟ್ಟವೆಣ್ಗಳನುಕರೆದು ಮನ್ನಿಸದೇಕಾಂತವನಾಡದೆಪರಿಹರಿಪುದು ಪದುಳದೊಳು

ಬಂಡು ಬೂತಾಟದ ಮಾತುಗಳನು ಕಿವಿಗೊಂಡು ಕೇಳದೆ ಕುರುಪಿಡದೆಚಂಡಿ ಚಪಲೆ ಚಾಡಿಕಾತಿಯೆನಿಸದೆ ನಲ್ವೆಂಡಿರಿರ್ಪುದು ನಲ್ಮೆಯೊಳು

ಕೆಟ್ಟರಳಿದರೆಂಬ ಕೀರ್ತಿಗಂಜದೆ ಚಳಿಬಿಟ್ಟ ಕೆಳದಿ ಪೆಣ್ಗಳೊಳುನೆಟ್ಟನೆ ಬಳೆದಿರ್ದ ನೇಹವ ನೆನೆಯದೆಪೊಟ್ಟು ಕಳೆದು ಪೊರಡಿಪುದು

ತೊಂಡುವೆಣ್ಗಳ ನೇಹದೊಡಕಿಗೆ ಸಿಲುಕದೆಲಂಡವೆಣ್ಗಳ ಲಾಲಿಸದೆಪುಂಡವೆಣ್ಗಳೊಳು ಪೊರ್ದುಗೆವಡೆಯದೆ ನಲ್ವೆಂಡಿರೊಡನೆ ಬೆರಸುವುದು

ಕಂಡಕಡೆಗೆ ನಡೆನಡೆದಳುಕದೆ ಕಾಲುಗಂಡ ಕರಾಳಿವೆಣ್ಣುಗಳಅಂಡಲೆದವರೊಳು ಬಳೆದೊಳ್ನೇಹವಬೆಂಡುಗಳೆದು ಬಿಡಿಸುವುದು

ಮರುಳಾಗಿ ಮತ್ತೆ ಮಬ್ಬಿನೊಳಿದದಿಲ್ಲೆಂದೊರೆದಿನಿಯನನೇಳಿಸದೆಇರುಳಿಗೆಂದಿಳಿವೊತ್ತಿನೊಳೆಲ್ಲ ವಸ್ತುವತರಿಸುವುದನುವಡಿಸುವುದು

ನೆನೆದೊಂದೊಂದನೆಡೆಯೊಳಿದ್ದಾಣ್ಮನಮನವ ನೋಯಿಸಿ ಮರುಗಿಸದೆಮನೆಗೆಲಸವನೆಲ್ಲವನಾರೈದು ಮತ್ತಿನಿಯನ ಶಯ್ಯೆಗೇರುವುದು

ಪಗಲಿರುಳೀ ಪರಿಯೊಳು ನಡೆದಿನಿಯನಬಗೆಯ ತಿಳಿದು ಬಂದಿಗೊಂಬಸುಗುಣೆಯರಿಹಪರದೊಳು ಸೂರೆಗೊಂಬರುಸೊಗದ ಸುಗ್ಗಿಯ ಸುಲಭದೊಳು

ಚೆನ್ನಿಗ ಚಿಕದೇವರಾಯನ ಸಂಚಿಯಹೊನ್ನಮ್ಮನುಸುರ್ದ ಕಬ್ಬದೊಳುಉನ್ನತಿವಡೆದೊಪ್ಪಿದುದೆಂಟನೆಯ ಸಂಧಿಸನ್ನುತ ಗುಣಸಂಬಂಧಿ