EN | KA

Menu

X

ಗಿರಿಜಾಕಲ್ಯಾಣ

ಪಾರ್ವತೀಪರಮೇಶ್ವರ ವಿವಾಹ ವರ್ಣನಂ

ಶ್ರೀ ಗಿರಿಜಾವಲ್ಲಭನಖಿಳಾಗಮದುರ್ಲಭನಪಾರಸುಲಭಂ ಕಾರುಣ್ಯಾಗಾರಂ ಭಕ್ತಿಯನೆಮಗೀಗೆ ಸದಾವರದ ಹಂಪೆಯ ವಿರೂಪಾಕ್ಷಂ

ಆಗಳ್ ಕಂಡಗಸುತೆ ಬೆಱಗಾಗುತೆ ಸರಿವರಿಸಿಕೊಳುತೆ ವಲ್ಕಲವಸನಾಭೋಗಮನತಿಲಜ್ಜಿತೆ ತಲೆವಾಗಿದಳನುರಾಗವೇಱಿ ಪುಳಕಿಸುತಿರ್ದಳ್

ಅವಳೋಕನದಿಂ ಸೆಳೆದಳ್ಶಿವನಂ ಮನದಿಂದ ತೆಗೆದಳಪ್ಪಿದಳತ್ಯುತ್ಸವದಿಂ ಚಿತ್ತದೊಳೆಳಸುತೆತವಕಂ ಮಿಗೆ ಚುಂಬಿಸಿದಳಹಂಕಾರದೊಳಂ

ವ. ಆ ಸಮಯದೊಳ್,

ಉಡುಪತಿಬಿಂಬಮಂ ನಗುವ ನಿರ್ಮಳವಕ್ತ್ರಮನಾಸೆ ಮಿಕ್ಕು ಧೀಂಕಿಡುವ ಕಟಾಕ್ಷಮಾಲೆಗಳನುನ್ನತಪೀನಪಯೋಧರಂಗಳಂಮೃಡನೊಸೆದೀಕ್ಷಿಸುತ್ತೆ ನಿಲಲಾಱದಪರ್ಣೆಯ ಪುಣ್ಯಹಸ್ತಮಂಪಿಡಿದನಶೇಷದೇವಕುಲಮೌಳಿವಿರಾಜಿತಪಾದಪಂಕಜಂ

ವ. ಅಂತು ಕಯ್ಯಂ ಪಿಡಿದು,

ಗಿರಿಸುತೆಯಳ್ಕಱಿಂ ನಡೆಯ ತಾರಗಿರೀಂದ್ರನಿವಾಸದಲ್ಲಿಗತ್ಯುರುತರಲೀಲೆಯಿಂದಮೆನೆ ದೇವ ಗಿರೀಶ್ವರನಲ್ಲಿಯೆನ್ನನಾದರದೊಳಗೆ ಬೇಡಿಯೂರ್ಜಿತವಿವಾಹಮದಚ್ಚರಿಯಪ್ಪ ಮಾಳ್ಕೆಯಂಕರುಣಿಪುದೆಂದುದಂ ಸಲಿಸವೇಳ್ಪುದು ಬೇಳ್ಪೆನಿದಂ ಸದಾಶಿವಾ

ಎಂದಗಜೆ ನುಡಿಯೆ ಮಹಿಮಾವೃಂದನೊಡಂಬಡುತೆ ಸುಖದೊಳಿರ್ಪವಸರದೊಳ್ಬಂದು ರತಿ ಮುಕುಳಿತಾನನೆನಿಂದುಮ್ಮಳದಿಂದೆ ಮುಂದೆ ಮೆಯ್ಯಿಕ್ಕಿರ್ದಳ್

ರತಿ ಮೆಯ್ಯಿಕ್ಕಿರ್ದೊಡೆ ಪಾರ್ವತಿ ಬಿನ್ನಯ್ಸಿದಳಧೀಶ ಕೇಳೀ ಲಲನಾಪತಿಯಪ್ಪ ಕಾಮನಂ ಪಶುಪತಿ ನಿಮ್ಮಿಂ ಪಡೆದು ಕೊಡುವೆನೆಂದಾಂ ನುಡಿದೆಂ

ಎನೆ ಕೇಳ್ದು ಶಂಕರಂ ಗಿರಿತನಯಾಮಧುರಾಸ್ಯಮಂ ನಿರೀಕ್ಷಿಸಿ ನಗುತುಂನೆನೆದಾಗಳ್ ಕಾಮನನಂಗನಾಗಿ ಕುಡುತಿರ್ಕೆ ರತಿಗೆ ಸುಖಸಂಪದಮಂ

ವ. ಎಂದು ಪಾರ್ವತಿಯೊಡನೆ ನುಡಿಯುತ್ತುಂ ರತಿಗೆ ಕಾಮನಂ ಸಂಕಲ್ಪಜನ್ಮಂ ಮಾಡಿ ಕೊಟ್ಟು ಗಿರಿಜೆಯಂ ಗಿರಿರಾಜನಲ್ಲಿಗೆ ಪೋಗವೇಳ್ದು ದರ್ಪಕವಿಪಿನ ದಾವಾನಳಂ ಗಜಾಸುರ ಕುಂಭನಿರ್ಭಿನ್ನಸಿಂಹಂ ಜಳಂಧರಕುಮುದ ನಿಲಯಾರ್ಕರೂಪಂ ಲಾಲಾಸುರಾಭ್ರವಿಲಯಾನಿಲಂ ಕೀನಾಶವಿನಾಶಕರಂ ತ್ರಿಪುರಭಂಜನಂ ಚತುರ್ದಶಭುವನಚಕ್ರವರ್ತಿ ಸರ್ವಬ್ರಹ್ಮಾಂಡಸಾರ್ವಭೌಮನಾ ಭೀಳಭಾಳಾಂಬಕಂ ಶೂಲಧರಂ ಕೈಲಾಸಕ್ಕೆ ಬಿಜಯಂಗೈದನಿತ್ತಲ್,

ಗಿರಿಸುತೆ ಜಯೆವಿಜಯೆಗಳೊಡನುರುತರಪುಷ್ಪಕಮನೇಱಿ ಬರುತಿರ್ದಳ್ ಶಂಕರನ ವರಮೂರ್ತಿಯಂತಃಕರಣಪ್ರಭೆಯೊಳಗೆ ತೊಡಗಿ ಬೆಳಗೆ ನಿರಂತಂ

ವ. ಇಂತು ಶಿವನಂ ನೆನೆಯುತುಂ ಹಿಮಾಚಳಮಂ ಕಳೆದು ನಿಜರಾಜಧಾನಿಯೆನಿಸಿ ದೋಷಧಿಪ್ರಸ್ಥಪುರವರಮಂ ಪುಗುತರ್ಪಾಗಳ್ ಪಾರ್ವತೀ ದೇವಿ ಲಬ್ಧವರಪ್ರಸನ್ನಮುಖಿಯಾಗಿ ತಪಮಂ ಬಿಟ್ಟು ಬರುತಿರ್ದಪಳೆಂಬ ಸಂತೋಷವಾರ್ತೆಯಂ ಕರ್ಣಪರಂಪರೆಯಿಂ ಗಿರಿರಾಜಂ ಕೇಳ್ದು ಸಂತಸಮಂ ತಾಳ್ದು,

ಪುಳಕಂ ಮುನ್ನೇಳುತ್ತಿರೆಬಳಿಕಂ ತಾನೆಳ್ದು ಸಕಳಪರಿಜನಸಹಿತಂಕಳಗೀತವಾದ್ಯನೃತ್ಯಂಗಳ ಮಂಗಳರವದ ನಡುವೆ ಗಿರಿಪತಿ ಬರುತುಂ

ಫಳತತಿಗಳ್ ತುಱುಗಿದ ಗುಡಿಗಳ ಸೀಗುರಿ ಚಾಮರಂಗಳೊಟ್ಟಜೆಗಳ ಮಂಗಳಕಳಶಂಗಳ ಕನ್ನಡಿಗಳ ಲಲನೆಯರೊಳಗೆ ನಡೆದನಗಕುಲರಾಜಂ

ತರತರದೆ ನಡೆವ ಹಸ್ತ್ಯಶ್ವರಥಪದಾತಿಗಳ ಸಂದಣಿಗಳಂ ನೋಡು!ತ್ತುರುಳುತ್ತುರ್ಬುತೆ ಕೊರ್ಬುತ್ತುರವಣಿಸುತೆ ನಡೆದು ಬಂದನಗಕುಲರಾಜಂ

ವ. ಅಂತು ನಡೆದು ಬಂದು,

ಇದಿರ್ಗೊಂಡು ಗಿರಿರಾಜನೂರ್ಜಿತತಪೋವಿಸ್ತಾರೆಯಂ ಧೀರೆಯಂಸದಲಂಕಾರಮನಾಂತ ಪಿಂಗಳಜಟಾಸಂಪನ್ನೆಯಂ ಚೆನ್ನೆಯಂಮುದದಿಂ ವಲ್ಕಲವಸ್ತ್ರವಿಸ್ತರಿತಶೋಭಾಗಾತ್ರೆಯಂ ಸ್ತೋತ್ರೆಯಂಪದೆದಾಹಾ ಗಿರಿಜಾತೆಯಂ ಸಕಳಕಾಂತಿಸ್ತೋಮೆಯಂ ರಾಮೆಯಂ

ವ. ಅಂತಿದಿರ್ಗೊಂಡು,

ಭರದಿಂ ನಡೆತಂದು ರಾಜಗೃಹಮಂ ಸಂತೋಷದಿಂ ಪೊಕ್ಕು ಭಾಸ್ಕರ ಕೋಟಿಪ್ರಭೆಯಂ ಸಭಾಸದನದೊಳ್ ಬೀಱುತ್ತುವಿರ್ಪುದ್ಘವಿಷ್ಟರರಂ ತುಷ್ಟಿಯನೇಱಿ ಶೈಳಪತಿಯುಂ ಶರ್ವಾಣಿಯುಂ ಸ್ನೇಹದಿಂದಿರೆ ಮೇನಾವಧು ಬಂದಳೀಕ್ಷಿಸಿದಳೀಷತ್‌ಗಾತ್ರೆಯಂ ಪುತ್ರಿಯಂ

ವ. ಅಂತು ಬಂದು ಕಟ್ಟಳ್ಕಱಿಂ ಮುಟ್ಟಿ ನೋಡಿ,

ತಾಯೆ ತಪೋನಿರೋಧದೊಳೆ ಮೆಯ್ ಬಡವಾದುದು ಲೋಚನತ್ರಯಚ್ಛಾಯೆ ಬಳಲ್ದುದಾನನಸರೋಜಮಣಂ ಕಳೆಗುಂದಿತುಜ್ಜ್ವಳಪ್ರಾಯಕುಚದ್ವಯಂ ಕೊರಗಿದತ್ತು ಕಚಂ ಜಡೆಗಟ್ಟಿತಿಂತಿದನ್ಯಾಯಮಿದೇಕೆ ಪೋದೆ ಸುತೆ ಎಂತಳವಟ್ಟುದರಣ್ಯವಿಭ್ರಮಂ

ವ. ಎಂದು ಮೇನಾದೇವಿ ಪಾರ್ವತಿಯಂ ನೋಡಿ ಕೋಡಿ ಬಾಡಿ ಬಳಲ್ದು ಕನಲ್ದು ನುಡಿಯುತ್ತಿರ್ಪಾಗಳ್,

ಗಿರಿಪತಿಯನುಮತಿಯಿಂ ಸೌಂದರಿಯ‌ರ್ ನಡೆತಂದು ಪಾರ್ವತಿಯ ಜಡೆಗಳನೊಪ್ಪಿರೆ ಬಿಡಿಸಿ ಕಚಭರಮನತಿಭರದಿಂ ತಿರ್ದುತ್ತುಮಿರ್ದರನ್ನಗಮಿತ್ತಲ್

ಶ್ರೀಕೈಲಾಸದೊಳಿರ್ದು ಪಿನಾಕಿ ವಿವಾಹಾರ್ಥದಿಂದೆ ವರಮೂರ್ತಿಗಳಂಲೋಕೋತ್ತಮರಂ ಪುಣ್ಯಶ್ಲೋಕರನಾ ಸಪ್ತಋಷಿಯರಂ ನೆನೆಯಲೊಡಂ

ನೆನೆಯದ ಮುನ್ನಂ ಬಂದರ್ವಿನುತಾಶೇಷರ್ ಜಟಾಧರರ್ ಭಸಿತಾಂಗರ್ಘನಮಹಿಮಾರುಂಧತಿ ಬೆನ್ನನೆ ಬರವರೆ ಸಪ್ತಋಷಿಯರತಿಮುದದಿಂದಂ

ಬಂದಭವಂಗತಿಸುಖಮುಖದಿಂದಂ ಮೆಯ್ಯಿಕ್ಕಿ ಹರ ಬರ್ದುಂಕಿದೆವೆನುತುಂಸಂದಣಿಸಿ ಪುಳಕಮೆಳ್ತರೆನಿಂದಿರ್ದು ಶಶಾಂಕಮೌಳಿ ಬೆಸನೇನೆನುತುಂ

ಇರೆ ಕಂಡು ಕರುಣದಿಂ ಶಂಕರನಾ ಋಷಿಗಳ್ಗೆ ಬೆಸಸಿದಂ ಪೋಪುದು ಭೂಧರನಾಥನಲ್ಲಿಗತ್ಯಾದರಮಂ ಮಾಡುವುದು ಬೇಡುವುದು ಗಿರಿಸುತೆಯಂ

ಎಂದೊಡೆ ಹಸಾದಮೆಂದಾನಂದಂ ಮಿಗೆ ಸಪ್ತಋಷಿಗಳನುನಯದಿಂದೆಯ್ತಂದರ್ ಮಂಡಿತಪುಷ್ಪಕವೃಂದಾರೂಢ‌ರ್ ನಗೇಶಪುರಮಂ ಪೊಕ್ಕರ್

ವ. ಆ ಸಮಯದೊಳ್,

ಮನದೊಳ್ ಪರಮೋತ್ಸಾಹಂಜನಿಯಿಸಿ ಗಿರಿರಾಜನೆಸೆವ ಋಷಿಗಳನಿದಿರ್ಗೊಂಡನುನಯದಿಂ ತಂದುಚ್ಚಾಸನದೊಳ್ ಕುಳ್ಳಿರಿಸಿ ವಿನಯವಿನಮಿತನಾದಂ

ವ. ಅಂತು ವಿನಯದಿಂದೆಱಗಿ,

ಸುರಲೋಕದಲ್ಲಿ ಸುಖದಿಂದಿರುತುಂ ಬರವಿಂತು ನಿಮಗೆ ದೊರೆಕೊಂಡುದಿದೆಮ್ಮುರುತರಭಾಗ್ಯಮೆನುತ್ತುಂಗಿರಿರಾಜಂ ಸಪ್ತಋಷಿಗಳಂ ಕೇಳಲೊಡಂ

ವರಮುನಿಗಳ್ ಮನದೊಂದಾದರದಿಂ ನುಡಿದರ್ ಶಿವಂ ಶಶಾಂಕಧರಂ ಶಂಕರನಭವಂ ನಿರ್ಮಾಯಂಗಿರಿಜೆಯ ಬೇಡುವೊಡೆ ತಿಳುಪಿ ಕಳುಪಿದನೆಮ್ಮಂ

ಆತಂಗೆ ಚಂದ್ರಮೌಳಿಗಜಾತಂಗೆ ನಿರಾಮಯಂಗೆ ನಿತ್ಯಂಗೆ ನತವ್ರಾತಂಗೆ ಬೇಡೆ ಬಂದೆವುನೂತನಭುವನೈಕ ಭಾಗ್ಯವತಿ ಪಾರ್ವತಿಯಂ

ಚಂದ್ರಧರಂಗೆ ನತೋತ್ಪಲಚಂದ್ರಂಗಂ ಗಣಸಮೂಹನಯನ ಚಕೋರಚಂದ್ರಂಗಂ ಮುದದಿಂದಂಚಂದ್ರಾನನೆ ಶಿವೆಯನೊಲ್ದು ಕೊಡು ಗಿರಿರಾಜಾ

ವ. ಎಂದು ಸಪ್ತಋಷಿಗಳ್ ನುಡಿದಾಪ್ತವಚನಂ ಕರ್ಣರಸಾಯನಮಾಗೆ ಗಿರಿರಾಜಂ ಕೇಳ್ದು ಬಾಳ್ದು ಸಂದಣಿಸಿ ಪುಳಕದಿಂ ದಳವೇಱಿ ಮನಮಲರ್ದು ಬುದ್ಧಿ ಪೆರ್ಚಿಯಹಂಕಾರವಿರ್ಮಡಿಸಿ ಚಿತ್ತಂ ಚಿಗುರ್ತು ಅಳವಿಗಳೆದ ಸಂತಮಂ ಸಂತಯ್ಸಲಾಱದೆ ಹೆಚ್ಚಿ ಹಿಗ್ಗಿ ನಚ್ಚಿ ನುಡಿದಂ ಮೇಘಾಗಮನಮಂ ಮಯೂರಂಗಸಹ್ಯಮೆ ವಸಂತನ ಬರವು ಹೊಸಬನಕ್ಕೆ ಪೊಲ್ಲದೆ ಚಂದ್ರೋದಯಂ ಚಕೋರಿಗುಪದ್ರಮೆ ಅರ್ಕನೇಳ್ಗೆ ಚಕ್ರವಾಕಮಿಥುನಕ್ಕೆ ವಕ್ರಮೆ ಕಾರ ತೋರವನಿ ಚಾದಗೆಗೆ ಭಾರಮೆ ಶಿವನ ಕರುಣಮೆನಗಿದಿರ್ವರೆ ವಿಚಾರಮೆ ಬರ್ದುಂಕಿದೆಂ ಬರ್ದುಂಕಿದೆನೆನ್ನ ಭಾಗ್ಯದ ಬೆಳೆ ತಳಿರ್ತುದು ಎನ್ನ ಪುಣ್ಯಲತೆ ಪೂತುದೆನ್ನ ಕುಲಕಲ್ಪವೃಕ್ಷಂ ಫಲಿತಮಾದುದಲ್ಲದೆಯುಂ ರತ್ನಕ್ಕೆ ಕಾಂತಿಯೆರವೆ ಚಂದ್ರಂಗೆ ಬೆಳ್ದಿಂಗಳುಪಚಾರಮೆ ತರಣಿಗೆ ಕಿರಣಂಗಳ್ ಸಾಧಾರಣಮೆ ಕುಸುಮಕ್ಕೆ ಪರಿಮಳಂ ಪಡಿಸಣಮೆ ಅಮೃತಕ್ಕೆ ಸ್ವಾದು ಸಂಕಲ್ಪಮೆ ಶರ್ವಂಗೆ ಪಾರ್ವತಿಯೆರವೆ ಪನ್ನಗಾಭರಣನೆನ್ನಂ ಬೇಡಲ್ವೇಳ್ಪುದೆ ಸುರುಚಿಯಿಂ ಸಾಂಗೀಕಾರದಿಂ ಕಾಮದಿಂ ಪ್ರೇಮದಿಂ ನಿಷ್ಠೆಯಿಂ ನೆಟ್ಟನೆ ಕೊಟ್ಟೆಂ ಕೊಟ್ಟೆನೆರಡಿಲ್ಲೆಂದು ಸತ್ಯವಚನಮಂ ಸಂತೋಷದಿಂ ನುಡಿದು ಸಪ್ತಋಷಿಗಳ ಚರಣಕ್ಕೆ ಮತ್ತೆ ಮತ್ತೆಱಗುತ್ತೆ ಅವರಂ ಹರಿಸದಿಂ ಕಳುಹಿ ಗಿರಿರಾಜಂ ಮಹೋತ್ಸಾಹದಿಂ ಮಹಾವಿವಾಹಮಂಟಪಾದಿ ಸಮಸ್ತವಸ್ತುಗಳಂ ವಿಸ್ತರಿಸುತಿರ್ದನದೆಂತೆಂದೊಡೆ,

ಗಿರಿಪತಿ ಚಾರರಂ ಕಳುಪಿ ನಿರ್ಜರಲೋಕದ ವಿಶ್ವಕರ್ಮನಂಬರಿಸಿ ನಯೋಕ್ತಿಯಿಂ ನುಡಿದು ಮನ್ನಿಸಿ ಬೇಳ್ಪುದನಿತ್ತು ಚಂದ್ರಶೇಖರನ ಮದೀಯಪುತ್ರಿಯ ವಿವಾಹಶುಭೋಚಿತಮಂಟಪಾದಿ ಭಾಸುರವರಚಿತ್ರಪತ್ರಕುಳಮಂ ನೆಱೆ ನಿರ್ಮಿಪುದಿಂದೆ ಬೇಗದಿಂ

ಎನೆ ನಲಿದು ವಿಶ್ವಕರ್ಮಂನೆನೆಯದ ಮುನ್ನಂ ಸಮುದ್ರಮುದ್ರಿತವಿಶ್ವಾವನಿಪರಿಗತವಿಭವಾಸ್ಪದಘನಮಂಟಪಮೆಸೆದು ಮುಂದೆ ತೋಱಿತ್ತಾಗಳ್

ವ. ಅದೆಂತೆಂದೊಡೆ-ಮಹಾಮಂಟಪಮಂ ನಿರ್ಮಳ ಚಂದ್ರಕಾಂತ ಶಿಳಾತಳದೊಳ್ ಮಾರ್ಪೊಳೆದು ಶಿವನ ವಿವಾಹಕ್ಕೆ ನಾಗಲೋಕದಿಂ ನಾಗರ್ಕಳ್ ಕಳುಪಿದ ಅಭಿನವಮಂಟಪಮಂ ಪಡೆದಂತಿರ್ದುದು ಮತ್ತಮಲ್ಲದೆಯುಂ ಉದಯಿಸುವ ತರುಣ ತರಣಿಯ ಕಿರಣಸಹಸ್ರಂ ಗಗನಮಂ ಹೊತ್ತೆತ್ತುವಂತೆ ಜಗದಗಲಕ್ಕೆ ಸಾಲ್ದೆಗೆದು ನೀಳ್ದು ನಿಱಿಸಿದ ಮಾಣಿಕ್ಯಸ್ತಂಭಕೋಟಿಗಳೆಳಗೆಂಪು ಗಳೊಪ್ಪುವ ಚಪ್ಪರದ ಮೇಲ್ಕಟ್ಟಂ ಹೊತ್ತೆತ್ತುತಿರ್ದುವು ಮತ್ತಲ್ಲಲ್ಲಿ ಕಟ್ಟಿದ ಪುಲ್ಲಿಯ ಪಟ್ಟಿಗಳ ಮೇಲೆ ಬಳಸಿದ ಮೇಘವಣ್ಣಿಗೆಯ ಚೌಕದ ವಿಳಾಸದ ಕಥಾಯಿಯ ಸುಚ್ಛವಿಯನೀವ ಪಚ್ಚೆಯ ಪಟ್ಟೆಗಳ ಚೂಳಿಕೆಯ ಕಾಳಿಕೆಯ ನುಣ್ಬೆಳಗನೀವ ಪೊಂಬಟ್ಟೆಯ ಬಳ್ಳಿವೆಳಗಂ ಕಱೆವ ಬೆಳ್ಳುಂಬಟ್ಟೆಯ ನೀಲದ ನಿರ್ಮಲೋದಕದ ಪಚ್ಚೆಯ ಪಾವಸೆಯ ಪುಷ್ಯರಾಗದ ಕರ್ಣಿಕೆಯ ಪದ್ಮರಾಗದೆಸಳ್ಗಳ ಪಱಮೆಗಳೆಱಗಲವ್ವಳಿಸುವ ಜಳಜವೀಧಿಯ ಕೀಲಿಸಿದ ಮುತ್ತಿನ ಸೂಸಕದ ಕೆಯ್ಗೊಳಿಸಿದ ಗೋಮೇಧಿಕಸ್ತೋಮದ ಪವಳದ ಪಙ್ತಿಯ ಪಜ್ಜಳಿಪ ವಜ್ರದ ಕೂಡಿದ ವೈಢೂರ್ಯದ ರಂಜಿಸುವ ಲತಾವಳಿಯ ಪಸರಿಸಿದ ಪತ್ರಾವಳಿಯ ಪೊಣ್ಮಿದ ಪುಷ್ಪಾವಳಿಯ ಹವಣಿಸಿದ ಹಂಸಾವಳಿಯ ಸಕಲಸೌಂದರ್ಯಮನೊಳಕೊಂಡ ಮೇಲ್ಕಟ್ಟಿನ ಬೆರಕೆವೆಳಗು ಮಂಟಪದೊಳಗಂ ಪೊಱಗಂ ತೆಕ್ಕನೆ ತೀವೆ ಬಿಡದೆ ಸುಳಿವ ಉತ್ಸಾಹಪುರುಷರಿಂ ನಡೆಪಾಡುವ ಲಲನಾವಿಭ್ರಮದಿಂ ಪ್ರಭಾಜಳಧಿ ತೆರೆಮಸಗಿ ದಂತಿರ್ದುದು ಮತ್ತಂ ಮುಗಿಲನಳ್ಳಿಱಿವ ತೋರಣಸ್ತಂಭಂಗಳೊಳ್ ತೆತ್ತಿಸಿದ ಜಂತ್ರದ ಹಂಸಕೀರಮಯೂರ ಪಾರಾವತ ವಾರಣಂಗಳಿಂ ನವರತ್ನರಂಜಿತಮಾಗಿ ರವಿಮಂಡಲಮಂ ಮುಂಡಾಡುವ ಸುವರ್ಣಕಳಶ ದರ್ಪಣಾಳಿಗಳಿಂ ರಯ್ಯಂಬಡೆದು ಸಕಳಜಗಕ್ಕೆ ತನ್ನ ಕಾಂತಿಯೆ ಕಣ್ದೆಱವಿಯೆಂಬಂತಿರ್ದ ಮಹಾತೋರಣದೊಳ ಮೆಯ್ಯೊಳ್ ನೆರೆದು ಕುಳ್ಳಿರ್ದ ಸೂರ್ಯವಂಶದ ಸುಕುಮಾರರಿಂ ಸೋಮವಂಶದ ಭೂಮಿಪರಿಂ ರಾಜಿಸುವ ರಾಜಪುತ್ರರಿಂ ಮಂಡಳಿಕರ ತಂಡದಿಂ ಸಾಮಂತರ ಶಿಷ್ಯರ ಮಂತಣದಿಂ ಸೇವ್ಯರ ತಿಂತಿಣಿಯಿಂ ಮುತ್ತೆಯ್ದೆಯರೊ ತ್ತೊತ್ತೆಯಿಂ ಸುವಾಸಿನಿಯರ ಸಂದಣಿಯಿಂ ಸಕಳಾಗಮಕೋವಿದರಿಂ ಸರ್ವಶಾಸ್ತ್ರ ಪ್ರವೀಣರಿಂ ಸಹಸ್ರವೇದಿಗಳಿಂ ಗಳಿಗೆವಟ್ಟಲಂ ಪರಿವೇಷ್ಟಿಸಿರ್ದ ನಕ್ಷತ್ರಪಾಠಕರಿಂ ಏಕಾದಶಕ್ಕೆ ಬಂದ ನವಗ್ರಹಂಗಳಿಂ ತೆಕ್ಕನೆ ತೀವಿರ್ದ ಮಹಾಮಂಟಪಮತಿ ವಿಸ್ತಾರಮನತಿಗಂಭೀರತೆಯನತಿಸೌಖ್ಯ ಮನತ್ಯಾಶ್ಚರ್ಯಮನುರುತರಸಂಪದಮನತಿ ಸೌಂದರ್ಯಮನತಿಪ್ರಸನ್ನತೆಯನೊಳಕೊಂಡು ವರನ ಬರವಂ ಬಯಸುತಿರ್ದುದಾ ಪ್ರಸ್ತಾವದೊಳ್,

ಒಳಗೆ ಸುವಾಸಿನಿಯರ್ ಗಿರಿಕುಳರಾಜತನೂಜೆಗೊಪ್ಪೆ ಸಿಂಗರಮಂ ಕೆಯ್ಕೊಳಿಸುತ್ತಿರ್ದರ್ ವರಶಶಿಕಳೆಗೆ ಸುಧಾಕಿರಣಜಾಲಮಂ ತುಡಿಸುವವೋಲ್

ವ. ಅದೆಂತೆಂದೊಡೆ,

ಭದ್ರಾನನೆಯರ್ ನವಕುಸುಮದ್ರವಯುತಜಲದೆ ಮಜ್ಜನಕ್ಕೆಱೆಯುತೆ ಕಲ್ಪದ್ರುಮಶಾಖಾನ್ವಿತೆಗೆ ಹರಿದ್ರಾಪರಿಮಳಮನಂಗದೊಳ್ ಸಮನಿಸಿದ‌ರ್

ನವಲತೆಯಂ ಕೌಮುದಿಯಿಂದವೆ ಬಾಸಣಿಪಂತೆ ಕೂಡೆ ಧವಳದ್ಯುತಿಯಂತವೆ ಪಸರಿಪ ದಿವ್ಯದುಕೂಲವನುಡಿಸಿದರಗತನೂಜೆಗಂಗನೆಯರ್ಕಳ್

ಸರಸಿಜದೆಸಳೊಳ್ ತರುಣಿಯತರುಣಾರುಣಕಿರಣವಲಯಮಂ ಕೆಯ್ಕೊಳಿಪಂತಿರೆ ಚಕ್ರವಾಕಕುಚೆಯ‌ರ್ಗಿರಿಜೆಗೆ ನವರತ್ನಪಾದಮುದ್ರಿಕೆಯಿತ್ತ‌ರ್

ವಾರಿರುಹನಾಳಮಂ ಕ್ರೇಂಕಾರರವಂ ಸಹಿತವಂಚೆ ಮುತ್ತಿದುವೆನೆ ಮಂಜೀರವನಳವಡಿಸಿದರಂಭೋರುಹನೇತ್ರೆಗೆ ಭವಾನಿಗಾ ಭಾಮಿನಿಯರ್

ಬಾಹುಲತಾಪಲ್ಲವಸಂದೋಹದೊಳಗೆ ಕುಸುಮಮಂ ತೊಡರ್ಚುವ ತೆಱದಿಂದಾಹಾನಿಜಕರಶಾಖಾವ್ಯೂಹಕ್ಕತಿಭದ್ರಮುದ್ರಿಕೆಗಳಂ ತೊಟ್ಟ‌ರ್

ಪುರಹರನ ರಾಜಕಟಕಂಗಿರಿಜೆಯ ಕೆಯ್ವತ್ತಿತೆಂಬುದಂ ಸೂಚಿಪವೋಲ್ವರಹಸ್ತದಲ್ಲಿ ರತ್ನೋತ್ಕರವಿಳಸಿತಕಟಕಯುಗಳಮಂ ರಂಜಿಸಿದರ್

ಒದವಿದ ನವ್ಯಲತಾಮಧ್ಯದ ಕುಸುಮಾಳಿಯೊಳೆ ಮೊರೆವ ಮರಿದುಂಬಿಗಳಂಮುದದಿಂ ಕೀಲಿಪವೋಲ್ ನೀಲದ ರವೆಯದ ಬಾಹುಪೂರಕಂಗಳನಿತ್ತರ್

ಸುತ್ತದೆ ನೆಲೆಗೊಂಡಂ ಪರಿವೃತ್ತೋನ್ನತಚಂದ್ರನಗಜೆಯಾಸ್ಯದೊಳೆಂದುನ್ಮತ್ತತೆಯೊಳ್ ತಾರಗೆಗಳ್ಸುತ್ತಿದುವೆನೆ ತೋರಹಾರಮಂ ರಂಜಿಸಿದ‌ರ್

ಭಾಳಸ್ಥಳದೊಳ್ ಕಣ್ ಗಡಶೂಳಿಗೆ ಪಾರ್ವತಿಗೆ ಕೊರಲೊಳೆಗೆದುದು ನಯನಂಕೇಳೆಂಬಾಳಾಪಂ ಮಿಗೆಮೇಳೈಸಿದರೈರದಾಳಿಯಂ ಬಾಳಕಿಯರ್

ಜಳಜಾನನೆಯರ್‌ ವಿನಯೋಜ್ವಳಮುಖಿಯರ್ ಸಖಿಯರೊಲ್ದು ಗಿರಿಜಾನನದೊಳ್ನಳಿನಳಿಪಚ್ಚಮುಗುಳ್‌ ನಗೆಮೊಳೆತುದೆನಲ್ ಮೆಱೆವ ಮೂಗುತಿಯನೊಸೆದಿತ್ತರ್

ಮಗಧರಬಿಂಬಂಗಳವೆರಡಗಲದೆ ಕೊಂಡೆಸೆಯುತಿರ್ದಪುವು ಸರಸಿಜದೊಂದಗಣಿತ ಕರ್ಕಶಮನೆನಲ್ನಗಪುತ್ರಿಗೆ ನೀಮುತ್ತಿನೋಲೆಯನಿತ್ತರ್

ಬಿಂಬಾಧರೆಯ‌ರ್ ಬಂದಲರಂಬಂ ಕತ್ತುರಿಯ ಸಾಣೆಯಿಕ್ಕುವ ತೆಱದಿಂದಂಬುಜದಳ ಸದೃಶಾಂಬಕದಂಬಿಕೆಗಂಜನಮನೆಚ್ಚಿದರ್ ಸಂತಸದಿಂ

ಸಸಿಯಂ ತಳೆವೊಡೆ ಮಕುಟದೊಳಸಮಾಕ್ಷಂ ಗಿರಿಜೆ ಪುರುಡಿಸುತ್ತುಂ ತಳೆದಳ್ನೊಸಲೊಳ್ ಸಸಿಯಂ ತಾನೆನೆಭಸಿತದ ತಿಲಕಮನಲಂಕರಿಸಿದ‌ರ್ ಸತಿಯ‌ರ್

ನೀಳಾಭ್ರಮನಂಭಃಕಣಜಾಳದೆ ಬಾಸಣಿಸುವಂತೆ ಶಶಿಮುಖಿಯ‌ರ್ ಸಲ್ಲೀಳೆಯೊಳಚಳತನೂಜೆಗೆಬಾಳೆಗೆ ಸೂಸಕಮನಿಕ್ಕಿದರ್ ಮುದದಿಂದಂ

ಸುರರುಚಿರನೀಲಾಂಬುದದೊಳ್ಸುರಧನುವಂ ನಿರ್ಮಿಪಂದದಿಂ ಪೀನಪಯೋಧರೆಯ‌ರ್ ಶೈಳತನೂಜೆಗೆವರರತ್ನದ ದಂಡೆದೊಂಡಿಲಂ ಸಯ್ತಿಟ್ಟರ್

ವ. ಅಂತುಮಲ್ಲದೆಯುಂ,

ಅಂಬಿಕೆಯ ಸುಧಾವಯವ ಕದಂಬದ ಚೆಲ್ವಿಂಗೆ ದೃಷ್ಟಿಯಾಗದ ತೆಱದಿಂಬಿಂಬಾಧರೆಯ‌ರ್ ತೊಡಸಿದರೆಂಬಂತಿರೆ ಮೆಱೆದುವರರೆ ಭೂಷಣತತಿಗಳ್

ವ. ಇಂತು ನನೆಗಣೆಯನರ್ಚಿಪಂತೆ ಚಂದ್ರಕಳೆಯಂ ದಳವೇಱಿದಂತೆ ಪುಣ್ಯಮಂ ಪುಟವಿಡುವಂತೆ ಶಂಕರನ ಪ್ರೇಮಮಂ ಸೀಮೆಗೊಳಿಸುವಂತೆ ಹರನ ಮನೋರಥಮಂ ಮದವೇಱಿಪಂತೆ ಪಾರ್ವತಿಗೆ ಸುವಾಸಿನಿಯರ್ ಸಿಂಗರಮಂ ಮಾಡಿ ತರುಣ-ತರುಣಿಯ ಕಿರಣಂಗಳ್ಗೋರನ್ನಮಪ್ಪಾ ರತಿಗಳನೆತ್ತಿಯೆತ್ತಿ ಪಿಂಗದೆ ಮಂಗಳೋನ್ನತಿಯಂ ಕೊಂಡಾಡುತ್ತುಮಿರೆಯಿರೆ ಅತ್ತಲ್ ಸಪ್ತಋಷಿಗಳಿಂ ಸಂತೋಷ ವಾರ್ತೆಯಂ ಶಂಕರಂ ಕೇಳ್ದು ಹರ್ಷಮಂ ತಾಳ್ದಂ

ಇತ್ತಲ್ ಕೈಲಾಸಾದ್ರಿಯೊಳುತ್ತಮಗಣನಾಥರೊಳಗೆ ಮೆಱೆದಿರ್ದಂ ದೇವೋತ್ತುಂಗಂ ಪುಳಕಿತನಾಗುತ್ತುಂ ಮದುವಣಿಗತನಮನುಱೆ ನಟಿಯಿಸಿತುಂ

ವ. ಆ ಪೊಸಮದವಣಿಗನಪ್ಪ ಪಶುಪತಿಯ ಸರ್ವಾವಯವಂಗಳಂ ಬಣ್ಣಿಸ ಲಳವಲ್ಲದೊಡಂ ಭಕ್ತಿಯಿಂ ಬಲ್ಲಂತೆ ಬಣ್ಣಿಪೆನದೆಂತೆಂದೊಡೆ,

ಜಡೆಗಳೊ ಹೊಸಹೊಸಹವಳದಕುಡಿಗಳೊ ನವಕಾಂತಿಜಳದ ಮಡುಗಳೊ ಚೆಲ್ವಿರ್ಪೆಡೆಗಳೊ ಶಿವಶಿವ ಸುಕೃತದಗುಡಿಗಳೊ ಮಹಿಮೆಗಳ ನಟ್ಟನಡುಗಳೊ ಶಿವನಾ

ಭಾಳಂ ಸುರುಚಿರಸುಕೃತವಿಶಾಳಂ ವಿಷಮಾಕ್ಷವಿರಥಕಾಳಂ ವಿಮಳಸ್ಥೂಳಂ ಶೃಂಗಾರರಸೋದ್ವೇಳಂ ಕಂದರ್ಪಕುಸುಮಬಾಣಾಭೀಳಂ

ಪುರ್ಬುಗಳೊ ಗಣನಿಕರದಗುರ್ಬುಗಳೊ ಹರಿ ವಿರಿಂಚಿ ಸುರಪದವಿಗಳೊಂದುರ್ಬುಗಳೋ ಪುಣ್ಯಲತಾಪರ್ಬುಗಳೋ ಮದನವಿಭ್ರಮದ ಕೊರ್ಬುಗಳೋ

ಈ ಕಣ್ಗಾ ಕಣ್ಣಾ ಕಣ್ಗೀ ಕಣ್ಣೆರಡಕ್ಕವೆರಡೆ ಪಡಿ ಮತ್ತಿಲ್ಲೀಲೋಕವ್ಯವಹಾರದ ನುಡಿಯೀ ಕಣ್ಗುಪಮಾನಮಿಲ್ಲಮಿನ್ನುಂ ಮುನ್ನುಂ

ಘ್ರಾಣಂ ಮಂಜುಳಮುಖಕಲ್ಯಾಣಂ ಜಗದೇಕಜೀವನೆನಿಸುವ ಪವನಪ್ರಾಣಂ ಸರ್ವಾವಯವತ್ರಾಣಂ ಪರಿಮಳಪರೀಕ್ಷೆಗಂತದು ತಾಣಂ

ಕರ್ಣಂಗಳ್ ನವಕಿರಣ ವಿಕೀರ್ಣಂಗಳ್ ಶರಣಜನಸುಗೀತಾಮೃತ ಸಂಪೂರ್ಣಂಗಳ್ ಪಂಚಾಕ್ಷರವರ್ಣಂಗಳ್ ಫಣಿವಿತಾನವಿಸ್ತೀರ್ಣಂಗಳ್

ವದನಂ ಕಾರುಣ್ಯಾಮೃತಸದನಂ ಪ್ರಣತಪ್ರತಾನಜನನಾ ವಿದ್ಯಾಕದನಂ ಮಝ ಭಾಪುರೆ ಜಿತಮದನಂ ಧವಳಪ್ರಕಾಶಮಂಡಿತರದನಂ

ಗ್ರೀವಂ ಘನಗರಳೋನ್ನತಭಾವಂ ವಿಮಳಸ್ವಭಾವಮಾನತಜನಸದ್ಭಾವಂ ಮಧುರರವಪ್ರಸ್ತಾವಂ ಶಿವಶಿವ ಸಮಸ್ತಜನತಾಜೀವಂ

ತೋಳ್ಗಳ್ ನೆನೆವರ ಚಿತ್ತದಬಾಳ್ಗಳ್ ವರವೀಯಲೆಂದು ಮಿಗೆ ಮತ್ಸರಿಪಾಸೂಳ್ಗಳ್ ರುದ್ರನ ನೆಚ್ಚಿನಬಾಳ್ಗಳ್ ಗಿರಿರಾಜಪುತ್ರಿಯಪ್ಪಿಂಗಾಳ್ಗಳ್

ಪ್ರಾಣಿಗಳತ್ಯಧಿಕ ವರಶ್ರೇಣಿಗಳುಚಿತಕ್ರಿಯಾವಚೋಗುಣವಿಳಸದ್ವಾಣಿಗಳಖಿಳಾಧಾರಕ್ಷೋಣೀಗಳಾಹಾ ಸುಪಾಣಿಗಳ್ ಶಂಕರನಾ

ಉರವದು ಗಿರಿಜಾಕಾಂತೆಯತೆಱವದು ತತ್ಕುಚಯುಗಂಗಳಿರವದು ಪುಣ್ಯೋತ್ಕರವದು ವರವದು ಸುಖಸಾಗರವದು ಭುವನೈಕಚಾರುತರವದು ಹರನಾ

ಮಧ್ಯಂ ಗಿರಿಜಾಲೋಕನಸಾಧ್ಯಂ ನಂಬಿರ್ದ ಸಕಳಗಣಸಂಕುಳಸಂಚೋದ್ಯಂ ಪೊರ್ದಿದಜಾಂಡಾಬಾಧ್ಯಂ ಹರಹರ ಸಮಸ್ತಭುವನಾರಾಧ್ಯಂ

ತೊಡೆಗಳೊ ಹೈಮವತಿಯ ಕೌಳುಡೆಗಳೊ ನವಕಾಂತಿಲಕ್ಷ್ಮಿ ಸಂತಸದಿಂದಿರ್ಪೆಡೆಗಳೊ ರಂಭಾವಿಭವದತಡೆಗಳೊ ಸಿಂಗರದ ಕಡೆಗಳೋ ಶಶಿಧರನಾ

ಮೇಲ್ಗಳೊ ನವಸೌಂದರ್ಯದಸಾಲ್ಗಳೊ ಪಾರ್ವತಿಯ ಚಿತ್ತಮಂ ಸೋಲಿಸುವಾಕೀಲ್ಗಳೊ ಸಲ್ಲೀಲೆಯ ಪೊಂಗೋಲ್ಗಳೊ ಕಣಕಾಲ್ಗಳೋ ಲಲಾಟೇಕ್ಷಣನಾ

ಚರಣಂ ಭಕ್ತಜನಾಂತಃಕರಣಂ ನಂಬಿದರ ಹರಣವಿನಕುಲತೇಜಃಕಿರಣಂ ತ್ರಿಲೋಕಶರಣಂಶರಣಾಭರಣಂ ಸಮಸ್ತಮುಕ್ತಾಭರಣಂ

ವ. ಎಂಬ ಪೊಗಳ್ತೆಗೆ ಮಿಗಿಲೆನಿಸಿ ನೆಱೆಮೆಱೆವ ಶಿವನ ಪುಣ್ಯಾಗಣ್ಯ ಲಾವಣ್ಯಮಯ ಸುಕುಮಾರಾವಯವಂಗಳಂ ಕಂಡು ಕೌತುಕಂಗೊಂಡು ನಂದೀಶ್ವರಂ ಬಂದು ಸುರೆಶಿರೋಮಾಲೆಯಂ ಪರಿಹರಿಸಿ ಮಣಿಕಿರೀಟಮಂ ಸಾರ್ಚಿ ಬಿಸುಗಣ್ಣಂ ಭಸಿತದಿಂ ಬಾಸಣಿಸಿ ಬಾಸಿಗಮನಿಕ್ಕಿ ನಾಗಕುಂಡಲಮಂ ಕಳಲ್ಚಿ ಮಾಣಿಕ್ಯಾವತಂಸಮಂ ಕೆಯ್ಕೊಳಿಸಿ ಕೂರ್ಮಶಿರಮಂ ತೆಗೆದು ತೋರಹಾರದೊಳ್ ಕೀಲಿಸಿದ ಪದಕಮನಳವಡಿಸೆ ಸರ್ಪೋಪವೀತಮಂ ಸಡಿಲ್ಚಿ ಯಜ್ಞೋಪವೀತಮನಮರ್ಚಿ ಕೀರ್ತಿಮುಖಮಂ ಕಳಲ್ಚಿ ಬಾಹುಪೂರಯಮನೆಡೆಗೊಳಿಸಿ ಉರಗಕಂಕಣಮಂ ಕಳೆದು ರತ್ನಕಂಕಣಮಂ ತಿರುಂಪಿ ನೂಂಕಿ ಬ್ರಹ್ಮಕಪಾಲಮಂ ನಿಲಲೀಯದೆ ಪುಣ್ಯಪವಿತ್ರಮ ನಿಟ್ಟು ಖಟ್ವಾಂಗಮಂ ಬಿಡಿಸಿ ಮಾದುಫಲವನಿಂಬುಗೊಳಿಸಿ ಗಜಚರ್ಮಮನೋಸರಿಸಿ ನಿರ್ಮಳೋತ್ತರೀಯಮಂ ಪೊದೆಯಿಸಿ ಪುಲಿದೊವಲಂ ನಿವಾರಿಸಿ ದಿವ್ಯದುಕೂಲಮ ನುಡಿಸಿ ದೇವಕುಲಮೆಳಲ್ವ ಬಾವುಲಿಯ ತೊಡರಂ ಸಡಿಲ್ಚಿ ಸಹಜಸೌಂದರ್ಯಮನಿರಿಸಿ ಇಂತು ಶಿವಯೋಗಕ್ಕೆ ಮುಕ್ತಿಯಂ ಮುಕ್ತಿಗೆ ವೈರಾಗ್ಯಮಂ ವೈರಾಗ್ಯಕ್ಕೆ ಶಿವಜ್ಞಾನಮಂ ಶಿವಜ್ಞಾನಕ್ಕೆ ಭಕ್ತಿಯಂ ಭಕ್ತಿಗೆ ಪುಣ್ಯಮಂ ಪುಣ್ಯಕ್ಕೆ ಸತ್ಕ್ರಿಯೆಯಂ ಸತ್ಕ್ರಿಯೆಗೆ ಪಾವನಜನ್ಮಮನಲಂಕರಿಸುವಂತೆ ಪರಬ್ರಹ್ಮಚರ್ಯಾಲಂಕೃತಿ ಬ್ರಾಹ್ಮಣೋತ್ತಮೋತ್ತಮ ನಪ್ಪ ವಿರೂಪಾಕ್ಷಂಗೆ ಪರಮೈಶ್ವರ್ಯಪೂಜಿತಂಗೆ ನಾದಮೂರ್ತಿಗೆ ಶಿವಜ್ಞಾನಿಗೆ ವೇದಶಿಖಾಮಣಿಗೆ ಸತ್ಯಜ್ಞಾನಾಭರಣಂಗೆ ನಿತ್ಯಕಾಯಂಗೆ ವಿಶ್ವಾರಾಧ್ಯಂಗೆ ಶಾಶ್ವತಪ್ರತಾಪನಿಧಿಯೆನಿಪ ಶಂಕರಂಗೆ ನಂದೀಶಾದಿಗಣನಾಯಕ‌ರ್ ಸಿಂಗರಮಂ ಮಾಡಿ ಹೆಱಸಾರ್ದು ನಿಂದು ನೋಡಲಂಜಿ ಕಣ್ಮುಚ್ಚಿ ಭಯದಿಂ ಶಿವಶಿವ ಜಯಜಯಯೆನುತ್ತುಮಿರೆ ದಧೀಚಿ ದೂರ್ವಾಸ ವಶಿಷ್ಠ ವಾಮದೇವ ಭೃಗು ಕಶ್ಯಪಾದಿ ಮುನಿಜನಂಗಳ್ ಶಿವನ ಕಾಂತಿಯಂ ಕಂಡು ನಿರೀಕ್ಷಿಸಣ್ಮಲದೆ ಚೇತೋದೃಷ್ಟಿಯಿಂ ನೋಡಿ,

ಮಿಗಿಲೆತ್ತಂ ಜ್ಯೋತಿಗಂ ಪಾವಕರುಚಿ ಎಸೆವಾ ಜ್ಯೋತಿಗಂ ಪಾವಕಂಗಂಮೃಗಲಕ್ಷ್ಮಜ್ಯೋತ್ಸ್ನೆಯೆಂತುಂ ಕರಮಸದಳಮಾ ಜ್ಯೋತಿಗಂ ಪಾವಕಂಗಂಮೃಗಲಕ್ಷ್ಮಜ್ಯೋತ್ಸ್ನೆಗಂ ಭಾಸ್ಕರರುಚಿ ಪಿರಿದಾ ಜ್ಯೋತಿಗಂ ಪಾವಕಂಗಂಮೃಗಲಕ್ಷ್ಮಜ್ಯೋತ್ಸ್ನೆಗಂ ಭಾಸ್ಕರರುಚಿಗಮತರ್ಕ್ಯಂ ವಿರೂಪಾಕ್ಷತೇಜಂ

ವ. ಎಂದು ಪೊಗಳುತ್ತಿರ್ಪ ಸಮಯದೊಳ್ ಶಿವನ ವಿವಾಹಕ್ಕೆ ಸಕಲದೇವ ಕುಲಂ ಹರ್ಷದಿಂ ಬರುತಿರ್ಪಲ್ಲಿ,

ಸುರಪತಿಯಾನೆಯಂ ಹುತವಹಂ ತಗರಂ ಸಮವರ್ತಿ ಕೋಣನಂನಿರೃತಿ ಮನುಷ್ಯನಂ ಜಳಧಿಪಂ ನೆಗಳಂ ಪವಮಾನನೇಣನಂಹರಸಖನಶ್ವಮಂ ಶಶಿಧರಂ ವೃಷನ ನಲಿದೇಱಿ ಬಂದರತ್ಯುರುತರ ನಂದಿವಾಹನವಿವಾಹಮಹೋತ್ಸವದೇಳ್ಗೆಗಳ್ಕಱಿಂ

ಲೋಕೈಕಬಂಧುವೆನಿಪ ಪಿನಾಕಿಯ ಪರಿಣಯನದುತ್ಸವಕ್ಕತಿಮುದಮಂಕೈಕೊಂಡು ಕೊಂಡು ಕೊನೆಯುತ್ತೇಕಾದಶರುದ್ರರಳ್ತಿಯಿಂ ನಡೆತಂದ‌ರ್

ಮೇದಿನಿಯುಮನಂಬರಮುಮನಾ ದಿಕ್ಚಕ್ರಮುಮನಂಶುಕುಳದಿಂ ಬೆಳಗುತ್ತಾದಂ ಸಂತಸದಿಂದಂದ್ವಾದಶರವಿಗಳ್‌ ಮಹೋಜ್ಜ್ವಳ‌ರ್ ನಡೆತಂದ‌ರ್

ದೇವರ ದೇವನ ಗರಳಗ್ರೀವನ ಭಕ್ತೈಕಬಾಂಧವನ ಸಕಳಜಗಜ್ಜೀವನ ಮದುವೆಗೆ ನೆರೆದಷ್ಟಾವಸುಗಳ್ ನಡೆದು ಬಂದರತ್ಯುನ್ನತಿಯಿಂ

ವರತೇಜದಿಂ ಪವಿತ್ರಾಚರಣೆಯಿನತಿಕಮನ‌ ವಿಮಳಸಾಮರ್ಥ್ಯತೆಯಿಂಕರಮೆಸೆದನುನಯದಿಂ ರಾಜಋಷಿ ಬ್ರಹ್ಮಋಷಿ ದೇವಋಷಿಗಳ್ ಬಂದ‌ರ್

ವ. ಅವರಾರೆಂದೊಡೆ,

ವರದೂರ್ವಾಸನಗಸ್ತ್ಯ ಜಹ್ನು ಕಪಿಲಂ ಕೌಂಡಿನ್ಯ ಮಾಂಡವ್ಯ ಭಾಸುರ ಶಾತಾತಪ ವಾಮದೇವ ಮುನಿವಿಶ್ವಾಮಿತ್ರ ಮೈತ್ರೇಯ ಬಂಧುರ ಮಾರ್ಕಂಡೇಯ ದೇವಲಾಖ್ಯನನಿಳಾದಂ ಸೂತನಾ ವ್ಯಾಸನಾತ್ವರಿತಂ ಚಿತ್ರಶಿಖಂಡಿ ಗಾಲವವೃಷಂ ಜಾಬಾಲಿ ವಾಲ್ಮೀಕಿಗಳ್

ಪರಮ ದಧೀಚಿ ರೋಮಜ ಪುಲಸ್ತ್ಯ ಪರಾಶರ ಯಾಜ್ಞವಲ್ಕ್ಯಯಂಗಿರ ಭೃಗು ಪುಂಡರೀಕ ಋಶಿಕಶ್ಯಪ ಕೌಶಿಕ ಗಾರ್ಗ್ಯ ಗೌತಮಂವರಸನಕಂ ಸನಂದನ ಸನತ್ಸು ಭಗೀರಥ ಕುತ್ಸವತ್ಸ ಭಾಸುರ ಜಮದಗ್ನಿ ಜೈಮಿನಿ ವಶಿಷ್ಠ ಮತಂಗ ಮರೀಚಿಯತ್ರಿಗಳ್

ವ. ಮತ್ತಮನಂತರದಲ್ಲಿ,

ಸಂಗಡಿಸಿದ ಶಂಖಂ ಚಕ್ರಂ ಗದೆ ಶಾರ್ಙ್ಗಂಗಳೆಸೆಯೆ ಗರುಡಾಸನದೊಳ್ಪಿಂಗದೆ ಬಂದಂ ಯುತಚತುರಂಗಂ ಮಾಧವನುಮಾಧವಂ ಮಚ್ಚುವಿನಂ

ಭರದಿಂದಂ ತನ್ನ ಬಲಂಬೆರಸೊಲನಿಂ ಹಂಸೆಯೇಱಿ ತೊಳತೊಳಗುತ್ತುಂಸರಭಸದಿಂ ನಡೆತಂದಂಸರಸಿಜಭವನಭವನಭಯಮೀಯೆ ಸರಾಗಂ

ವ. ಅಂತುಮಲ್ಲದೆಯುಂ,

ಸುರರ ಬಲಂ ಹರಹರ ಖೇಚರರ ಬಲಂ ಭಾಪು ಕಿನ್ನರರ ಬಲವಾಹಾಗರುಡರ ಬಲವರರೇ ಸಿದ್ಧರ ಬಲವಮ್ಮಮ್ಮ ಭಲರೆ ಗಂಧರ್ವಬಲಂ

ವ. ಅಂತು ಬಂದ ಬಲಮಂ ಕಂಡು ಮದನಮರ್ದನಂ ನೋಡುತಿರ್ಪಾಗಳ್ ಬಿರುದಿನಗ್ಗದ ಗಣಂಗಳ್ ಬರುತಿರ್ದರದೆಂತೆಂದೊಡೆ,

ತಮತಮಗುಗ್ರರುದಗ್ರ‌ರ್ತಮತಮಗೆ ವಿಚಾರಸಾರರಭವ‌ರ್ ವಿಭವರ್ತಮತಮಗಾಪ್ತರ್ ಗುಪ್ತ‌ರ್ತಮತಮಗೆ ಸಮಸ್ತಲೋಕವಂದ್ಯರನಿಂದ್ಯರ್

ಸಿಡಿಲಂ ನುರ್ಗುವ ಶೇಷನಂ ಪೊಸೆವ ದಿಙ್ನಾಗಂಗಳಂ ಪೊಯ್ದು ಘೀಳಿಡಿಪೇಳುಂ ಕಡಲಂ ತುಳುಂಕುವ ಕುಲಾದ್ರಿ ಸ್ತೋಮಮಂ ಕಿಳ್ತಣಂಪೊಡೆಸೆಂಡಾಡುವ ಭೂಮಿಯಂ ಹಿಳಿವ ಚಂದ್ರಾದಿತ್ಯರಂ ಮೀಂಟುತಿರ್ಪುಡುಸಂತಾನಮನಾರ್ದುದಿರ್ಚುವ ಗಣಗಳ್ ಬಂದರಾನಂದದಿಂ

ವ. ಮತ್ತಮಲ್ಲಿ,

ನಂದೀಶಂ ವೀರಭದ್ರಂ ಘನರವನಚಲಂ ಪುಷ್ಪದಂತಂ ಶುಭಂ ಸಾನಂದಂ ಭೃಂಗೀಶನುಗ್ರಂ ಪಿಕ ಮುಖನಶಿತಗ್ರೀವಗ್ರೀಸುವನತ್ಯಾನಂದಂ ದಿವ್ಯಾಂಗನಂಧಾಸುರಮಥನನನೇಕಾಸ್ಯನೋಂಕಾರಿ ಶರ್ವಾಂಗಂ ದಕ್ಷಧ್ವಂಸಿ ಲಂಬೋದರನತುಳಬಳಂ ಹಸ್ತಿಕರ್ಣಂ ವಿಕರ್ಣಂ

ಗರಳಂ ಭದ್ರಮುಖಂ ಶುಭೋದಯನಭಂಗಂ ಶಂಕುಕರ್ಣಂ ಷಡಕ್ಷರನುತ್ತುಂಗತಿರಂ ವೃಕೋದರನಟವ್ಯಂ ದಾರುಕಂ ಸಿಂಹಕೇಸರಿ ಸಿದ್ಧಾಂತಿಯುದಾರನೇಕಜಟ ವಿದ್ಯುನ್ಮಾಲಿ ತಾರಾಕ್ಷನಂಬರಕಾಯಂ ಘನಕಾಯನಪ್ರತಿಷಕಾಯಂ ವಿಸ್ತರಂ ಕುಂಭಜಂ

ಹಳನುತ್ತುಂಗಂ ವಿಚಿತ್ರಂ ತ್ರಿಶಿರನಸುರಕೋಳಾಹಳಂ ಯಜ್ಞಕೋಳಾಹಳನುದ್ಯತ್ ಕಾಳಕೋಳಾಹಳನತನುಹರಂ ಮಂಗಳಂ ಮೃತ್ಯುಕೋಳಾಹಳನೀಶಾನಂ ಪ್ರಘೋಷಂ ವಿಜಯನನಲಕಾಯಂ ಗಂಭೀರಸುಗಂಡಸ್ಥಳನೂರ್ಧ್ವಾಂಗಂ ಪ್ರಜಿಹ್ವಂ ವಿಷಸರಣಿ ಪುರಧ್ವಂಸಿ ಸರ್ವಾಂಗಜಿಹ್ವಂ

ವ. ಇಂತಿವರ್ ಮೊದಲಾದ ಗಣೇಶ್ವರಬಲಸಹಿತಂ ಇಳಾತಳಮಂ ದಿಕ್ಚಕ್ರಮಂ ನಭೋಭಾಗಮಂ ತೆಕ್ಕನೆ ತೀವಿ ಬ್ರಹ್ಮಾಂಡಮಿಂಬಿಲ್ಲೆಂಬ ಸಂಭ್ರಮಮಿಂಬುವಡೆಯೆ ಬಂದು ನಿಂದ ಸಕಲಸುರಸಮೂಹಮಂ ವಿರೂಪಾಕ್ಷಂ ಕಂಡು ಮನಂಗೊಂಡು ಮುಂದಿರ್ದ ನಂದೀಶ್ವರನ ಮುಖಮಂ ನೋಡಿದಾಗಳ್,

ನಯದಿಂದೆಳ್ದು ನತಾಸ್ಯನಾಗಿ ವಿಪುಳಶ್ವಾಸಂಗಳೊಳ್ ದೇವಕೋಟಿಯನಾಂದೋಳಮನಾಡಿಸುತ್ತೆ ನಡೆತಂದುಚ್ಚಪ್ರಭಂ ಧರ್ಮಸಂಚಯನಾನಂದಮಯಂ ಮಹೇಶನ ಸುಖಾವಾಸಾನ್ವಿತಂ ದಿಟ್ಟಿವಾರಿಯ ಧೀರಂ ವೃಷಭೇಂದ್ರನಪ್ರತಿಮಕಾಯಂ ಮುಂದೆ ನಿಂದಿರ್ಪುದುಂ

ಹರಿ ಜಯಜೀಯ ಜೀಯೆನೆಯಜಂ ಮಝ ಭಾಪೆನೆ ದೇವವೀಧಿ ದೇವುರೆ ಸುರರಾಜರಾಜಧಿರುರೇ ಎನೆ ಸನ್ಮುನಿಗಳ್ ಸರಾಗದಿಂಹರಿಹರ ರುದ್ರ ಭದ್ರಯೆನೆ ನಿಂದ ಗಣಾವಳಿಯಳ್ಕಱಿಂ ಮದೀಶ್ವರ ಭಲರೇ ಕಪರ್ದಿಯೆನೆ ನಂದಿಯನೇಱಿದನೆಮ್ಮ ಶಂಕರಂ

ವ. ಇಂತು ವೃಷಭಾರೂಢನಾಗಿ ಕೂಡೆ ನೆರೆದ ಗರುಡರ ಗಡಣದ ಗಂಧರ್ವರಸಂದಣಿಯ ಸಿದ್ಧರ ಪದ್ಧತಿಯ ವಿದ್ಯಾಧರರ ವೀಧಿಯ ಕಿನ್ನರರ ವ್ರಜದ ಪನ್ನಗಪ್ರಕರದ ಕಿಂಪುರುಷಸ್ತೋಮದ ಯಕ್ಷರ ಪಂಙ್ತಿಯ ರಾಕ್ಷಸರ ತಿಂತಿಣಿಯ ಮಯೂರರ ಮಂತಣದ ಗುಹ್ಯಕರ ಯೂಥದ ಖೇಚರರ ತೆಕ್ಕೆಯ ಮನುಗಳ ಪಂಗಡದ ಮುನಿಗಳ ಗೊಂದಣದ ಸುರರ ನೆರವಿಯ ದೇವಕಾಮಿನೀನಿಕರದ ದಿಕ್ಪಾಲಕನಿಕಾಯದ ಹರಿವಿರಿಂಚಿಗಳ ಪರಿವಿಡಿಯ ಬಿರುದುಗಣಂಗಳ ತೆರಳ್ಕೆಯ ರವಿಮಂಡಲದ ಹಿಂಡುಗಳ ಶಶಿಮಂಡಲದ ಸಾಲ್ಗಳ ಕುಂಜರನಿಕರದ ತುರಂಗಸಂಘದ ರಥಪ್ರತಾನದ ಪದಾತಿಬಲದಿರ್ಕೆಲದೊಳ್ ದಿಕ್ಕರಿಗಳ ಮೇಲೆ ಮಿಕ್ಕು ಬರ್ಪ ದೇವಾಂಗವಸ್ತ್ರವಿತಾನದ ಪಟ್ಟಗಳೊಟ್ಟಜೆಯ ಸಾದಿನ ಪೆಟ್ಟಿಗೆಗಳ ಮೃಗಮದದ ಕೊಂಬುಗಳ ಕರ್ಪೂರಕರಂಡಕಾನಿಕರದ ಪನಿನೀರ ಭಾಜನಂಗಳ ಕತ್ತುರಿಯ ಭಾಂಡಂಗಳ ಬಾವನ್ನದೊಟ್ಟಿಲ್ಗಳ ರತ್ನಾಭರಣರಾಶಿಗಳ ಚಿಂತಾಮಣಿಯ ಮುಡಿಪುಗಳ ಪರುಷದ ಕಣಿಯ ತನತನಗೆ ಪಿಡಿದು ಬರ್ಪ ಬಿಳಿಯ ಕರ್ಬಿನ ನಡೆವನದ ಪುಣ್ಯಫಲವ್ರಾತದ ಸುರತರುವಿನಾರವೆಗಳ ಸುರಭಿಗಳೊಯ್ಯಾರದ ಮುಂದಣ ವೃಷಭಧ್ವಜದ ದರ್ಪಣದ ತಳಿರ್ಗಳ ಕಳಶಂಗಳಂ ಪಿಡಿದು ಮೆಲ್ಲಮೆಲ್ಲನಡಿಯಿಡುವರುಂಧತಿಯನಸೂಯಾದೇವಿ ಗಾಯತ್ರಿ ಸಾವಿತ್ರಿ ಸರಸ್ವತಿ ಶಚೀದೇವಿ ಲಕ್ಷ್ಮಿ ರೋಹಿಣಿಯರಾದಿಯಾದ ಪರಮಪತಿವ್ರತಾವಿತಾನದ ಪೊಡೆವ ಭೇರಿಯ ಸೂಳಯ್ಪ ನಿಸ್ಯಾಳದ ಪೂರಯಿಪ ಶಂಖದ ಬಿರುದೆತ್ತಿ ಕರೆವ ಕಹಳೆಗಳ ಮೊಳಗುವ ಮದ್ದಳೆಯ ಸುಗತಿಯನುಗುಳ್ವ ಕರಡೆಗಳ ಮೇಳಯ್ವ ಕಂಸಾಳದ ಗರ್ಗರಿಪ ಗಿರ್ಗಟಂಗಳ ಪೊಣ್ಮುವ ತಾಳದ ಉಣ್ಮುವ ಗಾನದ ಭೃಂಗಿಯ ನರ್ತನದ ಭೋರೆಂಬ ರವದ ಸಮಸ್ತವಸ್ತುವಿಸ್ತರದ ನಡುವೆ ಧವಳಾತಪತ್ರದ ಭುವನಾಶ್ರಯಂ ಜಡೆಮುಡಿಯ ಬೆಡಂಗಂ ಮಕುಟದ ಮನೋಹರಂ ಶಶಿಕಳೆಯ ಸೊಬಗಂ ಬಾಸಿಗದ ಭಾಗ್ಯನಿಧಿ ಕರ್ಣಾವತಂಸದ ಕಮನೀಯಂ ಕಪೋಳದ ವಿಪುಳಂ ಭೂಲತೆಯ ಭಾವಕಂ ಅಲರ್ಗಣ್ಗಳ ಸುಲಲಿತಂ ಶ್ರೀವದನದ ಪಾವನಂ ಭೂರಿಭುಜದ ಮಾರಾರಿ ನಳಿತೋಳ್ಗಳ ನಾಯಕಂ ಕರತಳದ ಕಾಮಧೇನು ಕಂಕಣದ ಕಳಾವಿಧಂ ಹಸ್ತಪವಿತ್ರದ ಸುಲಭಂ ಮಾದುಫಲದ ಮಹಾನಿಧಿ ಹಾರದ ಹರ್ಷಮಯಂ ಪದಕದ ಸದಮಳಂ ಜಾಹ್ನವಿಸನ್ಮಕುಟಂ ಜನ್ನದಾರದ ಪನ್ನಗಭೂಷಣಂ ಪವಿತ್ರದ ಪರಮಾತ್ಮಂ ಧವಳೋತ್ತರೀಯದ ವಿರಳಂ ಪರಿವಸನದ ಪುಣ್ಯಾಧಿಕಂ ನಂದಿ ವಾಹನದ ನವೀನಂ ಭಸಿತದ ಹೊಸಮದುವಣಿಗನೆನಿಪ ಆ ಪಂಪಾವಿರೂಪಾಕ್ಷಂ ತನ್ನ ಕಾರುಣ್ಯಕಟಾಕ್ಷಕ್ಕೆ ಕೆಯ್ಮುಗಿವ ನಾಲ್ಕು ದೆಸೆಯ ದೇವಕುಲಕ್ಕೆ ಕರುಣಿಸುತ್ತುಂ ಪ್ರಸನ್ನಮುಖಂ ಸುಖಾವರಣಂ ಶರ್ವಂ ಸರ್ವಸಂಭ್ರಮದಿಂ ಬರೆ ನಡೆತಂದಿದಿರ್ಗೊಳ್ವ ಸುವಾಸಿನಿಯರೊಯ್ಯಾರದಿಂ ನಿವಾಳಿಗಳಂ ಪಿಡಿದು ನಿವಾಳಿಸಲ್ ಮತ್ತಮಲ್ಲಿಂ ಮುಂದೆ ಕುಲಾಂಗನೆಯರ್ ಸೂಸುವ ಮುತ್ತಿನ ಸೇಸೆಗಳನಾದರದೊಳಾನುತ್ತುಂ ನಂದೀಶ್ವರನ ಬೆನ್ನಿಂದವನಿತಳಕ್ಕವತರಿಸುತ್ತುಂ ಪ್ರಮಥಗಣಂಗಳ್ ಕೆಯ್ಮೆಯಿಂ ಕೆಯ್ಗುಡೆ ಮಹಾವಿವಾಹಮಂಟಪಮಂ ಪುಗುತರ್ಪಾಗಳ್ ಕಂಡು ಹರ್ಷಮನೆಲೆಗೊಂಡು ಮೆಯ್ಯಿಕ್ಕಿ ನಿಂದ ಮೇನಾದೇವಿಗಂ ಮಾವನಪ್ಪ ಗಿರಿರಾಜಂಗಂ ಕಾರುಣ್ಯಮನೀಯುತ್ತುಂ ಸಿಂಹವಿಷ್ಟರವನವಷ್ಟಂಭಿಸಿ ಸಮಯೋಚಿತಾನ್ನಮನುಂಡು ಮಹಾವಿಭವಮಂ ಕಂಡು ಮಧುಪರ್ಕಮಂ ಕೆಯ್ಕೊಂಡು,

ಇರೆ ಹರಿಯಜರನುಮಿಸುತುಂಪರಮಶುಭಾಕರ ಮುಹೂರ್ತಮೆಲೆಲೆ ಸಮೀಪಂಕರುಣಿಪುದೆನೆ ಮಂಗಳವಾಗ್ವಿರಚನೆಯಂ ಕೇಳ್ದು ಭೋಂಕನೆಳ್ದಂ ರುದ್ರಂ

ಅಮಮ ವರಮೂರ್ತಿ ನವವಿಭ್ರಮ ವಿಸ್ತರನಮೃತಶೀಲನಾನಂದಮಯಂಮಮಕರ್ತಂ ಮಮಭರ್ತಂಸುಮುಹೂರ್ತಂ ಪತ್ತೆಸಾರ್ವವೋಲ್ ನಡೆತಂದಂ

ವ. ಅಂತು ನಡೆತಂದು ವಿವಾಹಗೇಹದೊಳಪೊಕ್ಕು,

ಮುತ್ತೈದೆಯರೊತ್ತೊತ್ತೆಯನೊತ್ತರಿಸುತೆ ಬೆಳಗಿನೊಳಗೆ ಹೊಸಬೆಳಗಂ ಸೂಸುತ್ತುಂ ಸವಿನೋಟಮಂ ನೀಯುತ್ತುಂ ಜವನಿಕೆಯ ನೆಲೆಗೆ ಶಿವನೈತಂದಂ

ವ. ಆ ಸಮಯದೊಳ್ ಪಾರ್ವತೀದೇವಿ ನಿಟ್ಟಯ್ದೆ ಮೆಟ್ಟಕ್ಕಿಯಂ ಮೆಟ್ಟಿ ತೆಱೆಯ ಮಱೆಯಂ ಮಱೆಗೊಂಡು ನಿಂದಿರ್ಪಲ್ಲಿ,

ನಲ್ಲರ ನಡುವುಪಚಾರಂಸಲ್ಲಲಿತೇಕ್ಷಣದ ನಡುವೆ ಪಕ್ಷ್ಮಪುಟಂ ಸಂಪುಲ್ಲರದಮಧ್ಯದೊಳ್ ಮಿಗೆಸೊಲ್ಲಿರ್ಪಂತಿರ್ದುದಲ್ಲಿ ತೆಱೆ ಹರನಿದಿರೊಳ್

ವ. ಅಂತಿರ್ಪ ಜವನಿಕೆಯನತಿಸ್ನೇಹದಿಂ ನೋಡಿ,

ಅವಿಭೇದಪ್ರಕೃತಿಗಳೆನಿಪವಯವದಿಂದೊಪ್ಪುವರ್ಧನಾರೀಶ್ವರರೊಳ್ಜವನಿಕೆ ನಡುವೊಡ್ಡಿತು ಕಾಲವಶದಿನಾವಂಗಮಾವುದಾಗದು ಧರೆಯೊಳ್

ಬೆಳಗಿನ ಬೀಜಾವಳಿಯೊರ್ಬುಳಿಯೋ ನಕ್ಷತ್ರರಾಶಿಯೋ ನವಪುಣ್ಯಂಗಳ ಪುದುವೋ ಚಂದ್ರಿಕಾತಂಡುಳವೋ ಎನೆ ತೊಳಗಿ ತೋರ್ಪ ಮೆಟ್ಟಕ್ಕಿಗಳಂ

ಕಾಂತಿಮಯಂ ಶಶಿಚೂಡಂಶಾಂತಂ ನವಭೋಗಿಯೆನಿಪ ಲೀಲಾವಾಸಂಸಂತಂ ಸುರುಚಿರಹರ್ಷಮಯಂ ತಡೆಯದೆ ಮೆಟ್ಟಿ ನಿಂದ ಸಮನಂತರದೊಳ್

ಹರಿಯುಂ ಸರಸಿಜಭವನುಂಪುರುಹೂತನುಮೆಸೆವ ಋಷಿಗಳುಂ ಗಣಕುಲಮುಂಗಿರಿಜೇಶನ ಗಿರಿಜೆಯ ಭಾಸುರಪರಿಧಾನದ ಸಮೀಪದೊಳ್ ನಿಂದಾಗಳ್

ಕಳಕಳಮಂ ನಿವಾರಿಸುತುಮಾಯತಮೇ ಎನಲಾಯತಂ ಲಸದ್ಗಳಬಳಮಂ ವಿವರ್ಜಿಸುತುಮಾಯತಮೇ ಎನಲಾಯತಂ ನಿರಾಕುಳಿತಮನಂ ಬೃಹಸ್ಪತಿ ಸಮಾಯತಮೇ ಎನಲಾಯತಂ ಮನಂಗೊಳಿಪ ಮಹಾಮುಹೂರ್ತದೊಳಗಾಯತಮೇ ಎನೆ ತಪ್ಪದಾಯತಂ

ಅಮರಗುರು ಸಕಳವೇದಾಗಮಕೋವಿದನೊಲ್ದು ಭಕ್ತಿಯಿಂದಂ ಪುಣ್ಯಾಹಮೆನುತ್ತುಮಿತ್ತ ರಾಜತ್ಸುಮುಹೂರ್ತಂ ಬಂದು ತೆಱೆಯನೋಸರಿಸಲೊಡಂ

ಕರಡೆಗಳ ರವಂ ನಿಸ್ಸಾಳರವಂ ಭೇರೀರವಂ ಮೃದಂಗರವಂ ದೇವರ ಹೂಮಳೆಗಳ ಭೋರೆಂಬ ರವಂ ಮಂಗಳರವಂಗಳುಣ್ಮಿದುವಾಗಳ್

ಆನಿರೆ ಮತೋರ್ವಳ್ ಗಡತಾನಿರ್ಪಳ್ ಜಡೆಯೊಳೆನುತೆ ಮುಳಿದಿಡುವಂತಾಮಾನಿನಿ ಜೀರಿಗೆ ಬೆಲ್ಲದೊಳಾನುತೆ ಶಿವನುತ್ತಮಾಂಗಮಂ ಪದೆದಿಟ್ಟಳ್

ಮೃಡನಾಗಳ್ ಗಿರಿಜೆಯ ಚೆಲ್ವಿಡಿದ ಮೊಗಂಗಂಡು ಸಾತ್ತ್ವಿಕಂ ಕೆಯ್ಕೊಂಡೊಲ್ದಿಡುವಾ ಜೀರಿಗೆ ಬೆಲ್ಲಂಸಡಿಲ್ದು ಕಂಪನದೆ ಬಿಳ್ದುವಗಜೆಯ ಪದದೊಳ್

ವ. ಅನಂತರದಲ್ಲಿ,

ಅಱಸುತ್ತಿರೆ ಪಲಕಾಲದೊಳುಱೆ ನಿನ್ನನೆನುತ್ತೆ ಶಿವನ ಮಕುಟೇಂದುಗೆ ತಾಂತುಱುಗಿದ ತಾರಗೆಯೆಂಬಾತೆಱದಿಂ ತಂಡುಲವನಗಜೆ ಸುರಿದಳ್ ಶಿರದೊಳ್

ವ. ಆಗಳ್,

ಪರಮತಪೋನಿಧಿಯೆನಿಸಿದಗಿರಿಜೆಗೆ ಪುಣ್ಯಾಂಬುವಿಂದಲಭಿಷೇಕಮನೊಪ್ಪಿರೆ ಮಾಡುವ ತೆಱದಿಂದಂಗಿರಿಶಂ ನವತಂಡುಲಂಗಳಂ ತವೆ ಸುರಿದಂ

ವ. ಆ ಸಮಯದೊಳ್,

ನಲಿನಲಿದು ಬಂದು ಗಿರಿಪತಿಯೊಲವಿಂದಂ ಗಿರಿಜೆಸಹಿತವುಂ ನಾವೆಲ್ಲವುಂನೆಲೆದೊಳ್ತಿರ್ ಬಳಿದೊಳ್ತಿರ್ಸಲೆದೊಳ್ತಿರ್ ನಿಮಗೆನುತ್ತೆ ಧಾರೆಯನೆರೆದಂ

ಗಿರಿಜಾತೆಯ ಸಕಲಗುಣಂಹರ ನಿಮ್ಮಂ ಸುತ್ತುಗೀ ತೆಱದೊಳೆಂಬಂತೊಪ್ಪಿರೆ ಸುತ್ತಿದರತಿಮೃದುತರಸುರುಚಿರ ನವಕಾಂತಿಯೆಸೆವ ಗುಣಮಂ ಗುಣಮಂ

ಅಯ್ದುಂ ವದನನ ಕಾಂತೆಯನೆಯ್ದಿ ಪತಿವ್ರತೆಯರಧಿಕತರಮುದದಿಂ ಮುತ್ತಯ್ದೆಯೆ ನಿಟ್ಟಯ್ದೆಯೆ ನೆಱೆಯಯ್ದೆಯೆ ಸಲೆಯಯ್ದೆಯೆಂದು ಪರಸುತ್ತಿರ್ದರ್

ವ. ಇಂತು ವಿವಾಹವಿಭ್ರಮಮಂ ಕೆಯ್ಕೊಂಡು ಗಿರಿಜೆಯ ಕರತಳಮಂ ಪಿಡಿದು ಸೋಮಂ ಸೋಮಧರಂ ವ್ಯೋಮಕೇಶಿ ಹೋಮಸ್ಥಳಕ್ಕೆ ನಡೆತಂದಿಕ್ಕಿದ ಹಸೆಯ ಮೇಲೆ ಪಶುಪತಿ ಕುಳ್ಳಿರೆ ಮಂತ್ರತಂತ್ರಯಂತ್ರಸಿದ್ಧನಪ್ಪ ಪರಮೇಷ್ಠಿ ಹರನನುಜ್ಞೆಯಿಂ ಸ್ಥಂಡಿಲಮನಲಂಕರಿಸಿ ಮೆಲ್ಲನುಲ್ಲೇಖನಂಗೆಯ್ದಗ್ನಿಯಂ ಪ್ರತಿಷ್ಠೆಯಂ ಮಾಡಿ ಬ್ರಹ್ಮರ್ಷಿ ದೇವರ್ಷಿ ವಿಪ್ರೋತ್ತಮರನನುಮತದಿಂ ಪ್ರಾಣಾಯಾಮಂ ಮಂತ್ರಿಸಿ ಸಮಿತ್‌ಪರಿಸ್ತರಣಂ ಪಾತ್ರಾಸಾಧನಂ ಆಜ್ಯಸಂಸ್ಕಾರಂ ಸ್ರುಕ್‌ಸ್ರುವಸಮ್ಮಾರ್ಜನಂ ದೂರ್ವಾಯವಹಸ್ತಬಂಧನಾದಿ ಸತ್ಕ್ರಿಯೆಗಳಂ ಹೋಮಮಂ ಮಾಡುತ್ತಿರ್ದು,

ಭಾವಿಸಿ ಮಂತ್ರಾವಳಿಯಿಂದೋವುತೆ ಹುತವಹನೊಳೆಸೆವ ಲಾಜಾಹುತಿಯಂತೀವಿದನಂತರಮಗಸುತೆದೇವನ ಬಲದಿಂದೆಡಕ್ಕೆ ಬಂದಳನೂನಂ

ವ. ಅಂತು ಬರೆ ಪೂರ್ಣಾಹುತಿಯಂ ಕೊಟ್ಟು ಹೋಮಸಮಾಪ್ತಿ ಯೊಳಾಪ್ತನಪ್ಪ ಕಮಳಜಂ ಸಪ್ತಪದಿಯಂ ಕಟ್ಟಳ್ಕಱಿಂ ಮೆಟ್ಟಿಸಿ ತದನಂತರಂ ದೇವದಂಪತಿಗಳಂ ಸಿಂಹಾಸನದೊಳಲಂಕರಿಸೆ ಸಖನೆನಿಪ ನಿಮಿತ್ತಂ ಕುಬೇರಂಗೆ ನಿರೂಪಮಂ ಕೊಟ್ಟು ನಾರದಾದಿ ಋಷಿಗಳಂ ಕಳಿಪೆ ದಿಟ್ಟಿಮೂಱರಸಂ ನಾರಾಯಣಪ್ರಿಯಂ ಕಾಮಾರಿಯಾರೋಗಣೆಗೆ ನಡೆತಂದೆಡೆಮಾಡಿದೆಡೆಯೊಳಿಕ್ಕಿ ರ್ದುಚಿತಾಸನಮನವಷ್ಟಂಭಿಸೆ ನಂದೀಶ್ವರವೀರಭದ್ರಾದಿಯಾದ ಗಣಂಗಳ್ ಹರಿವಿರಿಂಚಿ ಪುರಂದರಾದಿ ಸಮಸ್ತಸುರಸಮೂಹಂ ಪಂಙ್ತಿಯೊಳ್ ಕುಳ್ಳಿರೆ ಪಾರ್ವತಿಯೊಡನಮೃತಾನ್ನಮನಾರೋಗಿಸಿ ಕೆಯ್ಘಟ್ಟಿಗೊಂಡು ತಾಂಬೂಲಮನಾದರಿ ಸುತ್ತುಮಂತಿಂತು ಕಂತುಮದಮರ್ದನಂ ನತಾಶೇಷಂ ಚತುರ್ಥಿಯಂ ಕಳೆದು ಸಾಕಾರನಿಧಿಯೋಕುಳಿಯಾಡಿ ಗಿರಿರಾಜಂಗೆ ಕರುಣಿಸುತ್ತುಂ ಮೇನಾದೇವಿಯರ ಮನ್ನಿಸುತ್ತುಂ ಗಿರಿಜೆಯನಾಲಿಂಗಿಸುತ್ತುಂ ವೃಷಭಸಮಾರೂಢಂ ದಶಭುಜಪ್ರಖ್ಯಾತಂ ಮಹಿಮಾನಿಧಿ ಮಹಾದೇವನುರಗಾಭರಣಂ ಗಜಾಜಿನಾವರಣಂ ಶರಣಕುಲಕಲ್ಪವೃಕ್ಷಂ ಸಕಲದೇವಗಣಪರಿವೃತ್ತಂ ಶೈಳಜಾವರಂ ಶೂಳಧರಂ ಭಾಳೇಂದುಮೌಳಿ ಕೈಲಾಸಾಭಿಮುಖನಾಗಿ,

ಬಳುವಳಿಯಾನೆಯಂ ಬಳಿಯ ರತ್ನಮುಮಂ ಬಳಿಯಶ್ವವೀಧಿಯಂಬಳುವಳಿಯರ್ಥಮಂ ಬಳಿಯ ನಾಣೆಯಮಂ ಬಳಿಯಾಪ್ತವರ್ಗಮಂಬಳುವಳಿಯಂಗನಾನಿಕರಮಂ ಪದಪಿಂದವಳೋಕಿಸುತ್ತೆ ಕೋಮಳಪುಳಕಂಗಳೇಳ್ಗೆಯನೊಡಂಬಡುತುಂ ನಡೆತಂದನೀಶ್ವರಂ

ವ. ಆ ಸಮಯದೊಳ್,

ಹರನೀ ಬಂದನೆ ಗಿರಿಜಾವರನೀ ಬಂದನೆ ಮಹೇಶನೀ ಬಂದನೆ ಶಂಕರನೀ ಬಂದನೆನುತ್ತುಂಪರೆದುವು ದೆಸೆದೆಸೆಗೆ ಬಹಳಕಹಳಾನಾದಂ

ವ. ಅಂತು ಕರೆವ ಕಹಳಾನಾದಮಂ ಕೇಳುತ್ತುಂ ನಡೆತಂದು ಕೈಲಾಸಪುರ ದ್ವಾರವಲಯದೊಳ್ ಪುಗುತರ್ಪಾಗಳ್,

ಕಟ್ಟಿದ ಗುಡಿಗಳ ಮುಗಿಲಂಮುಟ್ಟಿದ ತೋರಣದ ನೆರೆದು ನೋಳ್ಪಬಲೆಯರೊಂದೊಟ್ಟಜೆಗಳ ಲಾವಣ್ಯಮದಿಟ್ಟಣಮೆನಿಸಿತ್ತು ಶಿವನ ಕಣ್ಗಂ ಮನಕಂ

ವ. ಅಂತುಮಲ್ಲದೆಯುಂ,

ತರದಿಂ ವೇದಿಕೆಯೇಱಿ ಭದ್ರಚಯಮಂ ಬಂದೇಱಿಯುತ್ಸಾಹದಿಂಕರುವಾಡಂಗಳನೇಱಿ ವೃಕ್ಷಕುಲಮಂ ಸಾರ್ದೇಱಿಯೊಪ್ಪಿರ್ಪ ಗೋಪುರವೃಂದಗಳನೇಱಿ ಶೀತಕರಬಿಂಬವ್ರಾತವೇಳ್ತಂದವೋಲರವಿಂದಾಕರವೇಳ್ದವೋಲ್ ತುಱುಗಿ ನೋಡಿತ್ತಲ್ಲಿ ಕಾಂತಾಜನಂ

ವ. ಅಂತು ನೋಡುವ ಕಾಂತೆಯರೊಳೊರ್ವಳ್,

ನಡುವೆ ವಿಳಾಸದಿಂ ವೃಷಭರಾಜನನೇಱಿದವಂ ಶಿವಂ ಸಮಂತೊಡನೆ ಮಹೇಶನಂ ಪ್ರಿಯದೊಳಪ್ಪಿದಳ್ ಗಿರಿಜಾತೆಯಾಹ ಚೆಲ್ವೊಡರಿಸಿತಾಹ ದಂಪತಿಗಳಾಹ ಜಗತ್ಪ್ರಭುಗಳ್ ಸುಭಾಗ್ಯರೆನ್ನೊಡೆಯರೆನುತ್ತೆ ಕೆಯ್ಮುಗಿದು ಬಣ್ಣಿಸುತಿರ್ದಳತಿಪ್ರಮೋದದಿಂ

ವ. ಮತ್ತಮೊರ್ವಳುಮಾಮಹೇಶ್ವರರಂ ಕಂಡು ಕೊಂಡುಕೊನೆಯುತ್ತಿರ್ದಳ ದೆಂತೆಂದೊಡೆ

ಸ್ಥಿರದಂಪತಿಗಳ್ ಮಂಗಳಕರದಂಪತಿಗಳ್ ವಿಶೇಷದಂಪತಿಗಳ್ ಭಾಸುರದಂಪತಿಗಳ್ ವಸುಧಾವರದಂಪತಿಗಳ್ ಮನೋಜಹರದಂಪತಿಗಳ್

ವ. ಎಂದು ಪೊಗಳುತ್ತುಮಿರೆಯಿರೆ,

ಇಂತಿಂತೊಪ್ಪುವ ಸಂಭ್ರಮಮಂ ತವೆ ನೋಡುತ್ತೆ ಪಡೆದು ಕೊಂಡಾಡುತ್ತುಂಕಂತುಹರಂ ಸಂತಸದಿಂಮುಂತಣ ಕೈಲಾಸದರಮನೆಗೆ ನಡೆತಂದಂ

ವ. ಅಂತೊಳಪೊಕ್ಕು ಬಂದಾಗಳ್,

ಆರತಿಯೆತ್ತೆ ರುದ್ರಗಣಿಕಾನಿಕರಂ ಸರಸೀಜನಾಭನುಂನೀರಜಪುತ್ರನುಂ ಹೊಗಳೆ ದೇವಗಣಾಳಿಯಳ್ಕಱಿಂದೆ ಕೆಯ್ವಾರಿಸೆ ನಂದಿಯಿಂದಮಿಳಿದುನ್ನತಸನ್ನುತಸಿಂಹಪೀಠಮಂತಾರಗಿರೀಂದ್ರನಾಥನೊಸೆದೇಱಿದನದ್ರಿಸುತಾಸಮನ್ವಿತಂ

ವ. ಅಂತು ಸಿಂಹವಿಷ್ಟರಮನೇಱಿ,

ಗಿರಿಪತಿಯಂ ಮೇನೆಯನಾದರದಿಂ ಬೀಳ್ಕೊಟ್ಟು ಮಕುಟರತ್ನಪ್ರಕರಸ್ಫುರಿತಪ್ರದ್ಯೋತ ಪ್ರೋತ್ಕರವಿಳಸಿತವಳಯದೊಳಗೆ ಶಿವನೆಸೆದಿರ್ದಂ

ವ. ಆಗಳ್ ಗಿರಿರಾಜನುಂ ಮೇನೆಯುಂ ಬೀಳ್ಕೊಳುತುಂ ಪಾರ್ವತಿಯಂ ನೋಡಿ,

ಮಾತೆ ಶಿವಂ ಪಿತಂ ಶಿವನನಂತಬಲಂ ಶಿವನೂರ್ಜಿತಂ ಶಿವಂನೀತಿ ಶಿವಂ ಸ್ಥಿರಾಯು ಶಿವನೊಳ್ಪು ಶಿವಂ ಸುಕೃತಂ ಶಿವಂ ಘನಖ್ಯಾತಿ ಶಿವಂ ಧನಂ ಶಿವನಪಾರಸುಖಂ ಶಿವನದ್ರಿಜಾತೆ ಸಂಪ್ರೀತಿ ಶಿವಂ ಶಿವಂ ನಿನಗೆ ಚಿಂತಿಸದಿರ್ ಮಱೆದೆಮ್ಮನೊರ್ಮೆಯುಂ

ವ. ಎಂದುಳ್ಳುದನುಪಚಾರಮಿಲ್ಲದೆ ನುಡಿದು ಸಾದರಂ ಪೋದರಿತ್ತಲ್ ಚಂಡ ಕೀರ್ತಿಗಳ್ ಮೆಯ್ಯಿಕ್ಕಿ ನಿಂದು ಕೆಯ್ಯಂ ಮುಗಿದು,

ಅತುಳಕಪಾಲಿ ಪಾಲಿಪುದುಮಾಪತಿ ಮಾಪತಿರಾಜ ರಾಜ ಭೂಷಿತ ಸಿತಭಸ್ಮಭಸ್ಮಮಯಮನ್ಮಥ ವಿಗ್ರಹವಿಗ್ರಹ ವ್ರಜಾನತ ನತಸಿದ್ಧ ಸಿದ್ಧ ಸಕಳಾತ್ಮ ಕಳಾತ್ಮ ವಿಶೇಷಶೇಷಪೂಜಿತ ಜಿತಕಾಲ ಕಾಲವಿಲಸದ್ಗಳ ಸದ್ಗಳ ಹಂಪೆಯಾಳ್ದನೇ

ಕರುಣಿಸು ನಾಥ ನಾಥಕುಲಸೇವಿತ ಸೇವಿತ ಕಾಲ ಕಾಲ ಸಂಹರಣ ರಣಾಗ್ರರಂಜಿತಜಿತಾಮರತಾಮರಸಾಕ್ಷ ಸಾಕ್ಷಸಂಸ್ಮರ ನಿಜದರ್ಪದರ್ಪಕವಿನಾಶ ವಿನಾಶನಿಕಾಯಕಾಯವಿಸ್ತರಿತಭುಜಂಗ ಜಂಗಮಕೃಪಾವನ ಪಾವನ ಹಂಪೆಯಾಳ್ದನೇ

ವ. ಎಂದಿತು ಸಂತಸದಿಂ ಕೆಯ್ವಾರಂ ಮಾಡೆ ಕೇಳ್ದು ದಂಡಧರಗರ್ವಪರ್ವತ ಕುಲಿಶಂ ಕುಸುಮಕೋದಂಡಕುಮುದಮಾರ್ತಂಡಂ ಪುರತ್ರಯಮೇಘಮಹಾನಿಲಂ ಶತಪತ್ರಪುತ್ರಶಿರಚ್ಛೇದನಕರಂ ಸರೋಜನಯನನಯನಸರೋಜಪೂಜಿತಪದಂ ಜಲಂಧರಮರಾಳಮೇಘಗರ್ಜಿತಂ ಅಂಧಕಾಸುರಾರಣ್ಯದಾವಾನಳಂ ಲಾಲಾಸುರೇಭ ಪಂಚಾನನಂ ದುರಿತಪಂಚಾನನಶರಭಮೂರ್ತಿ ದಕ್ಷಮಖನಿರ್ಧೂಮಧಾಮಂ ಚತುರ್ದಶಭುವನಚಕ್ರಭಾಸ್ಕರಂ ಬ್ರಹ್ಮಾಂಡಭರಿತಕೀರ್ತಿಮಯಂ ಸರ್ವಬ್ರಹ್ಮಾಂಡ ಫಳಭರಿತಮಹಾಮಹೀರುಹಂ ವರನಿಚಯರಚಿತಪ್ರಶಸ್ತಹಸ್ತಂ ಸೋಮಧರಂ ಸೋಮಂ ಸಾಮಗೇಯಪ್ರಿಯಂ ವಿಮಳತ್ರಿಣೇತ್ರಂ ಕಮಲಜಶಿರಃ ಪಾತ್ರಂ ಸುರರಾಜರಾಜಂ ಶರಣಸುರಭೂಜಂ ದೇವಗಣಸಮಾಜಂ ರವಿಕೋಟಿತೇಜಂ ಶೃಂಗಾರಸಾರಂ ವೀರರಸಪೂರಂ ರೌದ್ರಪ್ರತಾಪಂ ಭಯಾನಕರೂಪಂ ಪಿನಾಕಚಾಪಂ ಸಜ್ಜನಸಮೀಪಂ ಅದ್ಭುತಶೀಲಂ ಶೈಲಜಾಲೋಲಂ ಘನಘನಸ್ಥೂಲಂ ವಿಶ್ವಲೋಕ ಪಾಲಂ ನತಜನವಿತತಸಂಪದಂ ಪ್ರೇಮಜನಕಾಮದುಘಂ ಭಕ್ತಜನಭಾಗ್ಯೋದಯಂ ಮುಕ್ತಿಪ್ರದಾಯಕಂ ಪ್ರಮಥಗಣಪುಣ್ಯಫಲಾಕಾರಂ ಕೃಪಾಮೇರು ದಯಾನಿಧಿ ಪಾರ್ವತೀಪ್ರಾಣನಾಥನೆನಿಪ ಪಂಪಾಪುರಾಧಿಪ ಶ್ರೀ ವಿರೂಪಾಕ್ಷಂ ಚಂಡಕೀರ್ತಿಗಳ್ಗೆ ಮಚ್ಚಿ ಪಸಾಯನಮನಿತ್ತು,

ಹರನುದ್ಯದ್‌ಗಿರಿಜಾಮನೋಹರಸುಖಾಂಭೋರಾಶಿಚಂಚತ್‌ ಸುಧಾಕಿರಣಂ ತತ್ಸುಖದಿಂದಮಿರ್ದುದಯಿಸಿರ್ದಾ ಸ್ಕಂದನಿಂ ತಾರಕಾಸುರನಂ ತೀರ್ಚಿ ಸಮಸ್ತಲೋಕಜನತಾಸಂತುಷ್ಟಿಯಂ ಮಾಡಿ ಶಂಕರನೊಪ್ಪಿರ್ದನುದಾರಿ ಹಂಪೆಯ ವಿರೂಪಾಕ್ಷಂ ಲಲಾಟೇಕ್ಷಣಂ

ಹರಿಸಂ ಮಿಗೆ ಕೈಲಾಸದಪುರದೊಳಗೊಪ್ಪಿರ್ದನಭವನದ್ವಯರೂಪಂವರಶರಣಾಳಿಗೆ ಬೇಡಿದವರಮಂ ಕರುಣಿಸುತೆ ಹಂಪೆಯ ವಿರೂಪಾಕ್ಷಂ

ಎಂದಿಂತೊಪ್ಪಿರೆ ಮಚ್ಚಿ ಮಚ್ಚಿ ಹರಿದೇವಂ ಪೇಳ್ದ ಸತ್ಕಾವ್ಯಮಂಚೆಂದಂಬೆತ್ತಿರಲೋದುವಾರ್ತಸುಖದಿಂ ಕೇಳ್ದಾದರಿಪ್ಪರ್ಗೆ ಸಾನಂದಂ ಮಾಡುಗೆ ಪುಣ್ಯಭೋಗಜಯಮಂ ನಿತ್ಯಾಯುಮಂ ಶ್ರೀಯುಮಂನಂದೀಶಾದಿ ಗಣಪ್ರತಾನದೊಡೆಯಂ ಪಂಪಾಪುರಾಧೀಶ್ವರಂ

ತರದಿಂದಂ ಶಬ್ದಮರ್ಥಂ ರಸವಿಸರಮಲಂಕಾರಾದಿಂ ತೀವುತೊಳ್ಪಿಂಧರೆಯೊಳ್ ಕೆಯ್ಕೊಂಡು ಪಂಪಾಪುರದರಸ ವಿರೂಪಾಕ್ಷನಿತ್ತಾಜ್ಞೆಯಿಂದಂಹರಿದೇವಂ ಭಕ್ತಿಯಿಂದಂ ಗುರುಕರುಣದಿನುತ್ಸಾಹದಿಂ ಮಚ್ಚಿ ಪೇಳ್ದಾಗಿರಿಜಾಕಲ್ಯಾಣಮಿಂತೀ ಶಶಿರವಿಧರೆಗಳ್ ನಿಲ್ವಿನಂ ನಿಲ್ಕೆ ಸಂತಂ

ಇಳೆಯೊಳ್ ಪೆರ್ಮಳೆಯುಂ ಸಮಸ್ತಫಲಮುಂ ಸಂತೋಷಮುಂ ಧರ್ಮಸಂಕುಳಮುಂ ಸತ್ಯಮುಮೀಶ್ವರಾರ್ಚನೆಯ ಸೊಂಪುಂ ಶ್ರೀಯುಮಾಮುಂ ನಿರಾಕುಳಮೆಂದುಂ ನೆಲಸಿರ್ಪುದೊಂದು ತೆಱನಂ ತಾಂ ಮಾಳ್ಕೆ ಸರ್ವೇಶ್ವರೀವಿಳಸತ್‌ಸಂಗಸುಖಾಬ್ಧಿಶೀತಕಿರಣಂ ಪಂಪಾಪುರಾಧೀಶ್ವರಂ

ಪರಮಸ್ವಾಮಿ ಜಟಾಧರಂ ಶಶಿಧರಂ ಗಂಗಾಧರಂ ಕಾಲಸಂಹರನಜ್ಞಾನಹರಂ ಪುರತ್ರಯಹರಂ ಸೌಖ್ಯಾಕರಂ ಶಂಭು ಶಂಕರನಾನಂದಕರಂ ಸಮಂತೆನಗೆ ಭಕ್ತಿಜ್ಞಾನವೈರಾಗ್ಯಮಂಕರುಣಂಗೆಯ್ಗೊಲವಿಂದೆ ಹಂಪೆಯ ವಿರೂಪಾಕ್ಷಂ ಶಿವಾವಲ್ಲಭಂ

ಇದು ಸಮಸ್ತ ಸುರಾಸುರನಮಕುಟ ಖಚಿತ ದಿನಕರಕರಾಧಿಕ್ಯ ಮಾಣಿಕ್ಯಪ್ರಭಾಪುಂಜರಂಜಿತಚರಣ ನೆನಿಪ ಪಂಪಾವಿರೂಪಾಕ್ಷ ಶ್ರೀ ಪಾದಕಮಲ ಮಕರಂದ ಮಧುಕರಾಯಮಾಣ ಸತ್ಕವೀಶ್ವರ ಹಂಪೆಯ ಹರಿಹರದೇವ ವಿರಚಿತಮಪ್ಪ ಶ್ರೀ ಗಿರಿಜಾಕಲ್ಯಾಣ ಮಹಾಪ್ರಬಂಧದೊಳ್ ಪಾರ್ವತೀಪರಮೇಶ್ವರ ವಿವಾಹವರ್ಣನಂ ದಶಮಾಶ್ವಾಸಂ

ಗಿರಿಜಾಕಲ್ಯಾಣಂ ಸಮಾಪ್ತಂ