ಚಂದ್ರಚೂಡಾಮಣಿ ಶತಕ
ಶ್ರೀರಾಮಾಜನಿತೋತ್ಸವಕ್ಕೆ ಮನದೊಳ್ ಮುಯ್ಯಾಂತು ತತ್ಭೇದ ಭೇದಾರಂಭಕ್ಕೊಳಸಾರ್ದು ಚಿಂತಿಸಿ ತದೀಯೋಪಾರ್ಜಿತಾಯಾಸ ದುರ್ವಾರ ಕ್ಷೇಶದಿನಪ್ಪ ಬೇವಸವನೊಲ್ಲೆಂ ಮಾಡು ನಿಃಶ್ರೇಯಸಶ್ರೀರಾಮಾಸುಖಮಂ ಮದೀಶ ದಯಯಿಂ ಶ್ರೀಚಂದ್ರಚೂಡಾಮಣೀ
ತನುವುಂ ಜೀವಮುಮೇಕರೂಪಮೆನೆ ನೀರುಂ ಕ್ಷೀರದಂತಿರ್ದ ತತ್ತನು ಬೇರೆಂದಡೆ ಪುತ್ರಮಿತ್ರರವರೆಮ್ಮಿಂ ತಾವೆ ಬೇರಲ್ತೆ ದೇಹ ನಿಬದ್ಧಾಂತರ ಬಾಹ್ಯ ಕರ್ಮವನವಂ ಬೇರಾಗಿರಲ್ ಕಂಡು ನಿಮ್ಮನೆ ಬೇರಿಲ್ಲದೆ ಕಾಣ್ಬೆನಕ್ಕೆ ಮನದೊಳ್ ಶ್ರೀಚಂದ್ರಚೂಡಾಮಣೀ
ಮನೆಯಿಂದಂ ಮನೆಗೆಯ್ದಿ ಪೋಪ ತೆರದಿಂ ನಾನಾ ಪ್ರಕಾರಂಗಳಿಂತನುವಿಂದಂ ತನುಗೆಯ್ದಿ ಪೋಗಿ ಪುಗುಗುಂ ವಿಭ್ರಾಂತಿಯಿಂ ಜೀವಮಾತನುವಾನೆಂಬುದಸತ್ಯಮಲ್ಲದುದೆ ಸತ್ಯಂ ಸತ್ಯಮಂ ನಿತ್ಯಮಾಗಿನಿತುಂ ನಂಬುಗೆ ನಿನ್ನೊಳೆನ್ನಯ ಮನಂ ಶ್ರೀಚಂದ್ರಚೂಡಾಮಣೀ
ವಿವಿಧಾಹಾರಮಭೋಜ್ಯಮಂಬರಮಪೂಜ್ಯಂ ಪುಷ್ಪಮಸ್ಪೃಶ್ಯಮಂಗ ವಿಲೇಪಂ ಪ್ರಚುರಾಂಗರಾಗಮಪವಿತ್ರಂ ನಿರ್ಮಳಾಂಬುಪ್ರತಾನವಪೇಯಂ ತನುಮುಟ್ಟಿದಾಗಳಸುವುಳ್ಳಂತತ್ತಲೇಂ ಬಾರ್ತೆ ಮುಟ್ಟುವೊಡಾನೊಲ್ಲೆನಿದಕ್ಕೆ ತತ್ತನುವನಾಂ ಶ್ರೀಚಂದ್ರಚೂಡಾಮಣೀ
ಎನಿತುಂ ಪೂಸಿಯುಮೆಂತು ಕರ್ಚಿಯುಮಿದಂ ತಾನೆಂತು ಕೈಗೆಯ್ದುಮೊಳ್ಪಿನ ಸಂಸ್ಕಾರಮನೆಂತು ಮಾಡಿಯುಮಿದಂ ಮತ್ತೊಮ್ಮೆ ನೋಳ್ಪಾಗಳೊಯ್ಯನೆ ತನ್ನಂದಮನೆಯ್ದೆ ತೋರುವುದಿದಂ ಕಂಡುಂ ಮನಂ ಪೇಸದೀತನುವಂ ಕಂಡು ಮರಳ್ದುದೆನ್ನಯ ಮನಂ ಶ್ರೀಚಂದ್ರಚೂಡಾಮಣೀ
ನಿಳಯಸ್ಥಾನದೊಳೊಂದಶುದ್ಧಮಿರಲೆತ್ತಾನುಂ ಬಿಸುಟ್ಟಿಲ್ಲದಾಸ್ಥಳದೊಳ್ ನಿಂದಿರಬಾರದೀ ಯೊಡಲಶುದ್ಧಕ್ಕಾಸ್ಪದಂ ತಾನಿದಂತಿಳಿದುಂ ಪೇಸದಿದೆಂತು ಮನ್ಮನವಿದೇಂ ವಿಭ್ರಾಂತಿಯೋ ಪೇಳಿದಂತಿಳಿಯಲ್ ನಿನ್ನಯ ಮಾಯೆಯೊಂದೆಸಕಮೋ ಶ್ರೀಚಂದ್ರಚೂಡಾಮಣೀ
ಪೆರತಸ್ಪೃಶ್ಯಮಶುದ್ಧ ಮನ್ಯಮಪವಿತ್ರಂ ಬೇರದೆಂದೆಂದು ತಾಂಪೆರತಂಭಾವಿಸಿ ಪೇಸುತಿರ್ಪುದು ಮನಂ ತಾನಿಪ್ಪ ತದ್ದೇಹಮೇತರೊಳಾಯ್ತೆಂದದರಂದಮಂ ತಿಳಿಯರಾರುಂ ತಮ್ಮನಿಂತೆಂದು ತಾವರಿಯರ್ ನಿಮ್ಮನದೆಂತು ಪೇಳ್ದರಿದಪರ್ ಶ್ರೀಚಂದ್ರಚೂಡಾಮಣೀ
ಬಿಡದಿರ್ಪನ್ನೆಗಮಿರ್ಪ ತನ್ನ ಮನೆಯಂ ಯತ್ನೀಕೃತಂ ಮಾಳ್ಪವೋಲ್ಒಡಲೊಳ್ ತಾಂ ನೆಲಸಿರ್ಪಿನಂ ನಿಲುವುದಾಹಾರಾದಿಯುಂ ಸಾಲ್ವುದೀಒಡಲಾನೆಂದರಿದಿಚ್ಛೆಯಂ ಸಲಿಪೆನೆಂದಜ್ಞಾನದಿಂ ದಂದುಗಂಬಡದಾಂ ನಂಬಿದೆ ನಿನ್ನನಾತ್ಮಗತದಿಂ ಶ್ರೀಚಂದ್ರಚೂಡಾಮಣೀ
ಜಲ ಭೂಸಂಗಮುಮಾಗೆ ಸಂಸ್ಥಿತಿವಿಘಾತಾವಸ್ಥೆಯೊಳ್ ಭೂರುಹಾವಳಿಗಳ್ ಪಾವನಮಾಡುವೆನ್ನ ತನು ಸುಸ್ವತ್ವಪ್ರಭೂತಸ್ತ್ರೀಗೆನಲ್ಪ್ರಳಯಾವಸ್ಥೆಯೊಳಾ ವಿಶುದ್ಧಮದೆ ಯುಕ್ತಂ ಬೀಜಮೆಂತಂತೆ ತತ್ಫಲಮಕ್ಕುಂ ಪೆರತಕ್ಕುಮೋ ಪರಿಕಿಸಿಲ್ ಶ್ರೀಚಂದ್ರಚೂಡಾಮಣೀ
ಅತಿದೂಷ್ಯಂ ತನುವೆಂಬುದಚ್ಚರಿಯೆ ಶುಕ್ಲಾಸೃಕ್‌ಸಮೋತ್ಸಂಗಸಂಸ್ಥಿತಿಯಿಂದಾದುದು ತಾನೆ ದೋಷಯುತಮಲ್ಲಿಂ ಪುಟ್ಟುವದೆಂತು ಪುಟ್ಟಿತು ಕೇಡುಂ ತನಗೆಂತುಟಾ ತನುವಿನಾಗುಂ ಪೋಗುಮೋರಂತೆ ದುರ್ಮತಿಯುಂ ಪುಟ್ಟುಗೆ ಮುಟ್ಟದೆನ್ನ ಮತಿಯಂ ಶ್ರೀಚಂದ್ರಚೂಡಾಮಣೀ
ಪೆರೆ ಪೋಗಲ್ ತನುಪೋಗದಂತಹಿಗೆ ದೇಹಂ ಪೋದೊಡಂ ದೇಹಿಗಂತರದೇಹಂ ಕತೃಕರ್ಮದೊಳ್ ಪುದಿದು ನಾನಾಯೋನಿಯೊಳ್ ಬಿಳ್ದು ತಾಂತಿರುಗುತ್ತಿರ್ಪುದು ಮುಕ್ತನಪ್ಪಿನೆಗ ಮಾಕಾರಂ ನಿರಾಕಾರಮಾಗಿರೆ ನೀಂ ಮಾಳ್ಪೊಡೆ ಮಾಡು ಬೇಡುವೆನಿದಂ ಶ್ರೀಚಂದ್ರಚೂಡಾಮಣೀ
ತನುದೇಹಾಸ್ಪದ ಮೋಕ್ಷಸಾಧನದುಪಾದಾನಾರ್ಥಮಾಗಿರ್ದುದೆಂಬೆನುಪಾದಾನಮುಪಾಯಮಿಲ್ಲದೊಡೆಯಾ ಭಾಂಡಂ ಭವತ್‌ತತ್ತ್ವಮಂಮನದೊಳ್ ಶಂಭುವುಪಾಯಮುಳ್ಳೊಡೆ ಶರೀರಂ ಬಾರ್ತೆಯಂತಲ್ಲದೀತನುವೇಂ ಬಾರ್ತೆ ಇದಂ ಜಲಕ್ಕನರಿದೆಂ ಶ್ರೀಚಂದ್ರಚೂಡಾಮಣೀ
ಮರುದಾವರ್ತದೆ ಪಾಂಸು ಪರ್ಣತತಿ ದಂಡಾಕಾರ ಮಾಗುತ್ತೆ ತಾಂಪರಿವೊಂದಂದದೆ ಪಾಂಚಬೌತಿಕ ಮಿದೊಂದಾಗಿರ್ದು ಜೀವಾನಿಳಂಬೆರಸೊಂದಾಕೃತಿಯಾಗಿ ತೋರ್ಕುಮನಿಳಂ ಪೋಗಲ್ಕೆ ತತ್ ಭೌತಿಕೋತ್ಕರಮುಂ ಪೋಕುಮಿದರ್ಕೆ ವಿಸ್ಮಯಮಿದೇಂ ಶ್ರೀಚಂದ್ರಚೂಡಾಮಣೀ
ಉಡಿಸುತ್ತೂಡುತಮರ್ತಿಯಿಂ ತೊಡಿಸುತಂ ಕೈಗೆಯ್ದು ತದ್ದೇಹಮಂಪಿಡಿದಾಡುತ್ತಿರಲಿಲ್ಲದಿಲ್ಲೆನಗೆ ಪೊತ್ತಾನೀಗ ಬೇಸತ್ತೆ ನೀಒಡಲಿರ್ಪಂದದಲಿರ್ಕೆ ಮನ್ಮನಮಹೋರಾತ್ರಂ ಭವತ್ತತ್ವದೊಳ್ತೊಡಗಿರ್ಪಂತಿರೆ ಮಾಡು ಬೇಡುವೆನಿದಂ ಶ್ರೀಚಂದ್ರಚೂಡಾಮಣೀ
ಸುಖದಿಂ ಸೊಕ್ಕಿ ನಿಜಾಂಘ್ರಿಯಂ ಮರೆವುತತ್ಯಾಯಾಸದಿಂ ಜೀವ ಸಮ್ಮುಖನಾಗಿರ್ದರಿವಂ ಬಿಸುಟ್ಟೆಸಗದಿಂತೀ ನೀಚ ದೇಹಕ್ಕೆ ನೀಂಸುಖದುಃಖಗಳನೀಯದೀ ತನುವನಾಂ ನೀಗಿರ್ಪ ಮೋಕ್ಷಾಂಗನಾಸುಖಮಂ ಮಾಡೆನಗೊಲ್ಲೆನನ್ಯ ಸುಖಮಂ ಶ್ರೀಚಂದ್ರಚೂಡಾಮಣೀ
ತನುವುಳ್ಳನ್ನೆವರಂ ತದೀಯ ತನುಧರ್ಮಂ ಪೋಗದಾ ಕ್ಷುತ್ತೃಷಾದಿ ನಿರೋಧಾನು ವಶಕ್ಕೆ ಸಲ್ವ ನೆವದಿಂದಿಂತಾಗಿಯುಂ ಮಾಣದಾ-ತ್ಮನನಾಪ್ತಾತ್ಮನೊಳೊಂದಿ ಸಂಧಿಸುತಿರಲ್ ತದ್ದೇಹಮಂ ನೀಗಿ ಮುಕ್ತನೆನಿಕ್ಕುಂ ಪೆರತಂದವೇಕುಳಿದುದೀ ಶ್ರೀಚಂದ್ರಚೂಡಾಮಣೀ
ತನುವಾನೆಂದಡೆ ತಚ್ಛರೀರ ಕೃತ ಕರ್ಮದ್ವಂದ್ವವೊಂದಿರ್ಕುಮಾತನುವಾನಲ್ಲೆನಲುಂ ತದೀಯ ಸುಖ ದುಃಖಂ ಮುಟ್ಟದೆಂತಿರ್ದಡಂತೆನಲೇನಕ್ಕುಮೆ ಪಾವು ಗಾರುಡಿಗನಂ ತಾನೆಂತು ಸುತ್ತಿರ್ದಡಂಮನದೊಳ್ ನೀನಿರೆ ಮುಟ್ಟದಾ ತನುಗುಣಂ ಶ್ರೀಚಂದ್ರಚೂಡಾಮಣೀ
ಒಡಲಿಂತೆಂದರಿದೀ ಶರೀರದಳಿವಂ ಬಿಟ್ಟಲ್ಲಿ ಪೊಕ್ಕಿರ್ದು ಕೂಗಿಡಿಸುತ್ತಿರ್ಪಖಳೇಂದ್ರಿಯ ಪ್ರಕರದಿಷ್ಟಾವೃತ್ತಿಯೊಳ್ ಸಲ್ಲದೀಒಡಲುಂ ಜೀವನುಮಾತ್ಮನುಂ ಸಕಳಮುಂ ನೀನೆಂದತಿ ಪ್ರೀತಿಯಿಂಮೃಡ ನಿಮ್ಮಂ ಸಲೆ ನಂಬುಗೆನ್ನಯ ಮನಂ ಶ್ರೀಚಂದ್ರಚೂಡಾಮಣೀ
ಕಿವಿಯಿಂ ತ್ವಕ್ಚಯದಿಂ ವಿಲೋಚನದಿನಂತಾ ಜಿಹ್ವೆಯಿಂ ಘ್ರಾಣದಿಂಶ್ರವಣ ಸ್ಪರ್ಶನ ಚಾರು ರೂಪರಸಗಂಧಾನೀಕದಿಂ ಕೇಳ್ವ ಮುಟ್ಟುವ ಕಣ್ಸೋಲುವ ಸೋಲ್ತು ಕೂರ್ತುಸವಿವಾಘ್ರಾಯಿಪ್ಪ ದುರ್ಮೋಹ ಮೆಂಬಿವನೆಲ್ಲಂ ಬಿಸುಟಿರ್ಕೆ ನಿಮ್ಮೊಳೆ ಮನಂ ಶ್ರೀಚಂದ್ರಚೂಡಾಮಣೀ
ಕಿವಿಯೊಳ್‌ಕೇಳ್ದವನೆಲ್ಲವಂ ಪದಪಿನಿಂದಂ ಕಣ್ಗಳೊಳ್ ಕಾಣ್ಬವೆಲ್ಲವನಂತಃಕರಣಂಗಳಿಂದರಿವ ನಾನಾ ವಸ್ತುಸಂದೋಹಮೆಂಲ್ಲವನಾಂ ನೀನೆನುತೆಂಬ ಭಾವನೆಯನಾತ್ಮಾರಾಮನಾಗಿರ್ಪ ತತ್ವವಿಚಾರಂ ಸಲೆ ಕೂಡುಗೆನ್ನಮನದೊಳ್ ಶ್ರೀಚಂದ್ರಚೂಡಾಮಣೀ
ಶಯು ಕರ್ಣಾಂತರದಿಂ ಗಜಂ ತ್ವಚದಿನುದ್ ಭ್ರಾಮ್ಯತ್ಪತಂಗಂ ನಿಜಾಕ್ಷಿಯಲಂಪಿಂ ಶಫರಾಳಿ ನಾಲಗೆಯಿನುನ್ಮತ್ತಾಳಿ ಮೂಗಿಂದೆ ಇಂದ್ರಿಯಮೊಂದೊಂದರೊಳೊಂದಿ ಕೆಟ್ಟವೆನೆ ತತ್ಪಚೇಂದ್ರಿಯಕ್ಕುದ್ಭವಾಲಯಮಾದೆನ್ನನಗಲ್ಚು ತದ್ವಿಷಯದಿಂ ಶ್ರೀಚಂದ್ರಚೂಡಾಮಣೀ
ಎರೆಯಂ ನುಂಗಿ ಪಯೋಧಿಯೊಳ್ ಶಫರಜಾಲಂ ಗಾಳದೊಳ್ ಬೀಳ್ವವೊಲ್ಸ್ಫುರಿತದ್ಯದ್ವಿಷಯಾಮಿಷ ಪ್ರಕರದಿಚ್ಛಾ ಸೇವೆಯಿಂ ಜನ್ಮಸಾಗರದೊಳ್ ಬೀಳ್ವುದು ಪುಣ್ಯಪಾಪವಶದಿಂದಂ ಜೀವನೀ ಜನ್ಮಸಾಗರದಿಂದಂ ಹೊರಗಿಕ್ಕು ನೀಂ ಕರುಣದಿಂ ಶ್ರೀ ಚಂದ್ರಚೂಡಾಮಣೀ
ಮನದೊಳ್ ನಿಮ್ಮನೆ ಕೂಡಿಕೊಂಡಿರದಗಲ್ಚುತ್ತಿರ್ಪವೆತ್ತಾನುಮೊಂದಿನಿಸಾನುಂ ಮರೆದಾಗಳಾಕ್ಷಣದೊಳೆನ್ನಂ ಸುತ್ತಿ ತಮ್ಮತ್ತಲೊಯ್ದಿನಿತಾನುಂ ಕೊರಚಾಡಿ ಕಾಡಿದಪವಾಂ ಬಲ್ಲೆಂ ಮದೀಯೇಂದ್ರಿಯಕ್ಕೆನಿತಂ ನಿಮ್ಮನೆ ಚಿತ್ತದೊಳ್ ನಿರಿಸುವೆಂ ಶ್ರೀ ಚಂದ್ರಚೂಡಾಮಣೀ
ಸಲೆ ತನ್ನಿಚ್ಛೆಗೆ ಕೊಂಡುಪೋದಪುದು ಸಂಸಾರಲ್ಪ ಸಂಕಲ್ಪ ಸೌಖ್ಯ ಲವಾಭಾಸದಲಂಪುದೋರೆ ವಿಷಯಂಗಳ್ ಬಲ್ಲೆನಾಂ ಚಿತ್ತದಿಂಬಲರಾರಿಂದೊಳ ಸಾರ್ದು ಚಿದ್ರಿಪುದನಂತುಂ ನಚ್ಚಿ ನಂಬಿರ್ದು ನಿಶ್ಚಲದಿಂ ನಿಮ್ಮನೆ ಬಲ್ಲಿತಾಗಿ ಪಿಡಿದೆಂ ಶ್ರೀ ಚಂದ್ರಚೂಡಾಮಣೀ
ಕರುಣಾಂತಃಕರಣಂಗಳಿಂದರಿವ ಚಿತ್ತಾಸಕ್ತಿ ತಾಂ ಪುಣ್ಯ ಪಾಪರತ ವ್ಯಾಪ್ತಿಗೆ ಪುಣ್ಯಪಾಪ ಸುಖ ದುಃಖಕ್ಕಾಸ್ಪದಂ ಯೋಗ ತತ್ಪರನಾಗಿರ್ದಪವರ್ಗದೊಳ್ ನೆರೆವುದಂ ತಾಂ ಬೇಗದಿಂ ಮನ್ಮನಂಹರ ನಿಮ್ಮಂ ಸಲೆ ನಂಬುಗೆನ್ನಯ ಮನಂ ಶ್ರೀ ಚಂದ್ರಚೂಡಾಮಣೀ
ಬೆಸನಾಪೇಕ್ಷಿತನಪ್ಪ ಬುದ್ಧಿ ವಿಷಯಕ್ಕಾಸಕ್ತನಪ್ಪೊಂದು ಬುದ್ಧಿ ಸಮಸ್ತೇಂದ್ರಿಯದಿಚ್ಛೆಯಂ ಸಲಿಪೆನೆಂಬೀ ಬುದ್ಧಿ ವೇದಾತ್ಮ ತತ್ತ್ವ ಸಮಾಪನ್ನ ಪಯಃ ಪಯೋಧಿಯೊಳಗೋಲಾಡುತ್ತಲಿರ್ಪೊಂದು ಬುದ್ಧಿ ಸಮಂತೆನಗಾಗಳುಂ ಪಳಿಯದೀ ಶ್ರೀ ಚಂದ್ರಚೂಡಾಮಣೀ
ಎನಗಾವಂ ತಲೆದೋರ್ಪನೀ ಸೊಗಯಿಪೆನ್ನಾಕಾರಮಂ ಕಂಡು ಕಾಮಿನಿ ಕಣ್ ಸೋಲದಳಾವಳೆಂಬ ಮುದಿತಾಹಂಕಾರನಂ ನೋಡಿ ನೋಡಿ ನೆಲಕ್ಕಿಕ್ಕುವ ಮೃತ್ಯುವಂ ನೊಣೆವ ಕಾಳವ್ಯಾಳನಂತಿರ್ಪ ಗುರ್ಬಿನ ಹೆಮ್ಮಾರಿಯನಾವನೆತ್ತಲರಿವಂ ಶ್ರೀ ಚಂದ್ರಚೂಡಾಮಣೀ
ಭವಮತ್ತೇಭವ ಕೊಲ್ವಚಿತ್ತವಿದೆ ಆ ಕರ್ಮೋರಗಂ ಕೊಲ್ವ ಕೋಳ್ಗಮನಂಗಾಗ್ನಿಯ ಬೇಗೆಗಂ ದುರಿತಶಾರ್ದೂಲಾಭಿಘಾತಕ್ಕಮುತ್ಸವದಿಂದಂ ಗುರಿಯಾಗಿ ಕೋಟಲೆಗೆ ಪಕ್ಕಾಗಿರ್ದ ಮಚ್ಚಿತ್ತಮಂಶಿವ ನೀಂ ಸಂಹರಿಸಾಂ ಮರಲ್ದೆರೆದಪೆಂ ಶ್ರೀ ಚಂದ್ರಚೂಡಾಮಣೀ
ಪತಿಯಂ ವಂಚಿಪ ದೋಷದಂಡಮೆನೆ ನಿನ್ನೊಳ್ ಕೂಡಿ ಕೊಂಡಿರ್ದ ದುರ್ಮತಿಯಂ ನಿಮ್ಮಿನಗಲ್ಚಿ ತಮ್ಮ ದೆಸೆಗಿರ್ದ್ದಾರ್ದೊಯ್ದು ನಿನ್ನಂ ಜಗತ್ಪತಿಯಂ ವಂಚಿಸುವಿಂದ್ರಿಯ ಪ್ರಕರವೆಂಬೀ ದ್ರೋಹರಂ ಕೂಡಡಂಗಿ ತಗುಳ್ದೆಯ್ದೆ ಕರುತ್ತು ನಿಗ್ರಹಿಸುವೆಂ ಶ್ರೀ ಚಂದ್ರಚೂಡಾಮಣೀ
ಪಡೆವಾಗಳ್ ಕೆಡುವಾಗಳಾವೆಡೆಯೊಳಂ ನೋಳ್ಪಾಗಳಾರ್ತತ್ವಮಂಪಡೆಯಲ್ಕಾಪಡೆ ನೋಡಿ ನೋಡಿ ಪೆರರ್ಗಾಗಿರ್ಪಂಗನಾ ನೀಕಮಂಪಡೆಯಲ್ಕಾಮಿಸಿ ದಂದುಗಂಬಡಿಸದೆನ್ನಂ ನಿಮ್ಮ ನಿಶ್ಚಿಂತಮಿರ್ಪೆಡೆಯಂ ಕಾಮಿಸುವಂತೆ ಮಾಡು ದಯೆಯಿಂ ಶ್ರೀ ಚಂದ್ರಚೂಡಾಮಣೀ
ಮುಳಿಸಾರೊಳ್ಪನದಿರ್ಪದಾರರಿತಮಂ ಕೀಳ್ಮಾಡದಾರೊಳ್ಗುಣಂಗಳನಳ್ಕಾಡಿಸದಾರ ನಿರ್ಮಳತೆಯಂ ನಿರ್ಮೂಲನಂ ಮಾಡದಾರಳವಂ ತುಂಡಿಸದಾರ ಕೀರ್ತಿಲತೆಯಂ ಕಿಳ್ತಿಕ್ಕದಾನಂಜುವೆಂಮುಳಿಸಿಂಗಂ ಮುಳಿಸಾಗದಿಕ್ಕನೆ ಗುಣಂ ಶ್ರೀ ಚಂದ್ರಚೂಡಾಮಣೀ
ಧನಲೋಭಂ ತನುಲೋಭಮೆಂಬೆರಡು ವಿಘ್ನಂ ಸ್ವರ್ಗಮೋಕ್ಷಕ್ಕದೆಂತೆನೆ ದಾನಂ ಪೊರತಾಗೆ ದೇವಗತಿಯೆಂತಕ್ಕುಂ ತನು ತ್ಯಾಗಮಂಮನದೊಳ್ ಮಾಡದೊಡೆಂತು ಮೋಕ್ಷ ಪದಮಕ್ಕುಂ ಬಿಟ್ಟೆ ನೀವ್ಯಾಜದಿಂಧನಲೋಭಂ ತನುಲೋಭಮೆಂಬೆರಡುಮಂ ಶ್ರೀ ಚಂದ್ರಚೂಡಾಮಣೀ
ಅದಟಾಯ್ತುರ್ವರೆಯಾಯ್ತು ಉನ್ನತ ಬಳಂ ತಾನಾಯ್ತು ಆಯುಷ್ಯಮಾಯ್ತಿದುಮಂತರ್ಥಮದಾಯ್ತು ಸಂಪದಮುಮಾ ಸಂಭೋಗ ಭೋಗಂಗಳುನ್ಮದಮಿಂದ್ರಂಗೆಯುಮಿಂದ್ರಿಯಾಳಿಗಮಿವಂ ನೋಡಲ್ ಕರಂ ಸಂತತಂಹುದಿಗಿತ್ತುನ್ಮದವೆಂದಡೇನುಳಿದವಂ ಶ್ರೀಚಂದ್ರಚೂಡಾಮಣೀ
ಸುತಮಿತ್ರ ಪ್ರಿಯರಂಬರಾಭರಣ ಪುಷ್ಪಾಲೇಪ ಸಾಮ್ರಾಜ್ಯವೆಂಬಿತರ ವ್ಯಾಪ್ತಿಯೊಳಪ್ಪನರ್ಥಕ ಸುಖಕ್ಕಾನಂದಮಂ ಮಾಡದಕ್ಷತ ಯೋಗಾಮೃತ ಸೇವನಾಜನಿತ ರೋಮಾಂಚ ಪ್ರಮೋದಾನು ಸಂಯುತದಾನಂದವನೆಯ್ದಗೆನ್ನಯ ಮನಂ ಶ್ರೀ ಚಂದ್ರಚೂಡಾಮಣೀ
ರಸಮಂ ಕಟ್ಟಿದ ಸಿದ್ಧನಂ ಜಳಧಿಯಂ ಮುಂಕಟ್ಟಿದುದ್ಧಾಮ ಸಾಹಸನಂ ಕಂಡೆನದೆಲ್ಲಿಯುಂ ಮರೆದು ಕಾಣಲ್ ಬಾರದಾ ತೃಷ್ಣೆಯೆಂಬ ಸಮುದ್ರಾಂಬುವನಾಂತು ಕಟ್ಟಿದವನಂ ತೃಷ್ಣಾಬ್ಧಿಯಂ ಕಟ್ಟಲೊಂದೆ ಸಮರ್ಥಂ ನಿಜಯೋಗ ವಜ್ರಕುಧರಂ ಶ್ರೀ ಚಂದ್ರಚೂಡಾಮಣೀ
ದೆಸೆಯಂ ನುಂಗಿಯುಮುರ್ಬಿಯಂ ನೊಣೆದುಮಂಭೋರಾಶಿಯಂ ಪೀರ್ದುಮಾಗಸಗಂ ತಳ್ತಡರ್ದೇರಿಯುಂ ಗಣಿಗುಮೇ ಮತ್ತೆಯ್ದದಿಪ್ಪಲ್ಲಿಗೆಯ್ದಿಸುತಿರ್ಕುಂ ಚಲದಿಂದೆ ತೃಷ್ಣೆನೆಗಳ್ದಾ ತೃಷ್ಣಾಗ್ನಿಯಂ ಕೂಡೆ ಮಳ್ಗಿಸಲಕ್ಕುಂ ನಿಜತತ್ತ್ವವೆಂಬಮೃತದಿಂ ಶ್ರೀ ಚಂದ್ರಚೂಡಾಮಣೀ
ಸೊಡರಿಪ್ಪನ್ನೆವರಂ ತಮಂ ಪೆಣರುಗೆಂತುಂ ಜ್ಯೋತಿ ಪೋದಾಗಲಾಗಡೆ ಕೈಕೊಳ್ವವೊಲೀತನಾ ಹೃದಯದೊಳ್ ಕೂಡಿರ್ಪಿನಂ ತೃಷ್ಣೆನಾಲ್ಕೆಡೆಯೊಕ್ಕುಂ ಬಳಿಕಂತೆ ಪರ್ಬುಗುಮದರ್ಕೊಂದುಂಟು ಕರ್ತವ್ಯ ಸಂಗಡವಾಂ ನಿಮ್ಮನೆ ಚಿತ್ತದೊಳ್ ನಿಲಿಸುವೆಂ ಶ್ರೀ ಚಂದ್ರಚೂಡಾಮಣೀ
ದಿಟಮೇ ಭಾವಿಸಲಿಂದ್ರಜಾಲಮದನೆಲ್ಲಂ ಕಂಡು ಕಣ್ಮಾಯೆಯಿಂದಿಟಮೆಂದಿರ್ದು ಭವತ್ಪ್ರಸಾದದೊಳೆ ಕಂಡಾಮಾಯೆಯಂ ಚಿತ್ತದೊಳ್ದಿಟಿಮೆಂದಿರ್ದರಿದೆಂ ಬಳಿಕ್ಕ ಪುಸಿಯೆಂಬಂತೆಲ್ಲರುಂ ಮಾಯೆಯಂದಿಟಮಲ್ಲೆಂದರಿದೆಂ ಬಳಿಕ್ಕ ತಿಳಿದೆಂ ಶ್ರೀ ಚಂದ್ರಚೂಡಾಮಣೀ
ತಿಮಿರಂ ಪೋದಡೆ ಕಾಣ್ಬಕಣ್ಮಲರೊಳೆತ್ತಾನುಂ ಮರುಳ್ ಪೋದಡೆಲ್ಲಮನಿಂಬಾಗರಿವೊಂದು ಬುದ್ಧಿಯೊಳೆ ಎನ್ನಂ ಮೋಹಿಸುತಿರ್ಪ ಮಾಯೆ ಮನೋಜಾರಿ ಭವತ್ ಪ್ರಭಾವದೊಳೆ ಪೋಗಲ್ ಕೇವಲ ಜ್ಞಾನಮಾಗಿ ಮನಂ ವಿಶ್ವಮುಮಂ ಜಲಕ್ಕನರಿಗುಂ ಶ್ರೀ ಚಂದ್ರಚೂಡಾಮಣೀ
ಅರಿಷಡ್ವರ್ಗದೊಳೊಂದುಮನ್ ಪೊರೆಯದತ್ಯಾಪೇಕ್ಷೆಯಂ ಬಿಟ್ಟು ರಾಗ ರಸಾಸಕ್ತಿಯನೊಕ್ಕು ಮಿಕ್ಕರಿವು ತಾನಾಗಿರ್ಪ ತತ್ತ್ವಂ ನಿರಂತರವೆನ್ನೊಳ್ ನೆಲೆಗೊಂಡಿರಲ್ ನಿಜ ಶಿವ ಶ್ರೀಪಾದ ಪಂಕೇರುಹಸ್ಮರಣ ಪ್ರಾಪ್ತಿ ಜಿಗಿಲ್ತು ನಿಲ್ಕೆ ಮನದೊಳ್ ಶ್ರೀ ಚಂದ್ರಚೂಡಾಮಣೀ
ನಿಜವವ್ಯಾಕುಳ ನಿರ್ವಿಕಾರಗತನವ್ಯಾವಸ್ಥೆಯೊಳ್ ಸ್ವಸ್ಥನಾಗಿ ಜಯಂಗೆಯ್ದಿರಲೀಯದೀ ಮನದಹಂಕಾರಾದಿ ಜನ್ಮಂ ಮಹೀಜಜ ಬೀಜಂಗಳೆನಿಕ್ಕುಮೆಂಬ'ಬಗೆಯಿಂ ಪೊಕ್ಕಾವಗಂ ಮನ್ಮನೋಂಬುಜದೊಳ್ ಪ್ರಾಕೃತಿ ಸ್ವಸ್ವಭಾವದೆಸಕಂ ಶ್ರೀ ಚಂದ್ರಚೂಡಾಮಣೀ
ಪರಮಜ್ಯೋತಿಯನಾಂತು ಧಿಕ್ಕರಿಪುವಂತರ್ದೃಷ್ಟಿಯಂ ಕಾಣದಂತಿರೆ ಮಾಳ್ಕುಂ ಸಕಲ ಪ್ರಕಾಶರುಚಿಗೈತಂದಡ್ಡಮಾಗಿರ್ಕುಮಬ್ಬರಿಸುತ್ತಿರ್ಪ ತಮಂ ತದೀಯ ತಮಮಂ ಬೆಂಕೊಂಡು ಮಚ್ಚಿತ್ತಮಂಹರನಿನ್ನುಜ್ವಳ ತೇಜದಿಂ ಬೆಳಗು ನೀಂ ಶ್ರೀಚಂದ್ರಚೂಡಾಮಣೀ
ಎಲೆ ಸಂಸಾರದ ಸಾರಸೌಖ್ಯರುಚಿ ಜಿಹ್ವೋಪಸ್ಥಯುಗ್ಮಂ ರಸಾವಳಿಯಿಂದಪ್ಪ ಸುಖಂ ಸ್ವತಾಳು ರಸನಾ ಸಂಯೋಗ ಮಾತ್ರಂ ರತಾವಳಿ ತಾಂ ಭಾವಿಸೆ ಪಾದಮಾತ್ರ ಸುಖಮಾ ವಿದ್ಯುಚ್ಚಳತ್‌ಸೌಖ್ಯಸಂಕುಳಮಂ ಮಾಡದೆ ಮಾಡನಂತ ಸುಖಮಂ ಶ್ರೀಚಂದ್ರಚೂಡಾಮಣೀ
ಸತತೋಚ್ಛಿಷ್ಟಮುಖಂ ಸಭಾಷ್ಪನಯನಂ ಶ್ರೇಷ್ಮೋತ್ಕಟಂ ಘ್ರಾಣಮೂರ್ಜಿತ ಮೂತ್ರಾಂಬು ಪುರೀಷಪೂರ್ಣಂ ಜಘನಂ ಸ್ತ್ರೀರೂಪಮಾರೂಪಮಪ್ರತಿಯೆಂದಿರ್ದೆನದಂ ವಿಚಾರಿಸಿದೆನೀಗಳ್ ತಾನೆ ಭೀಭತ್ಸಹೇತು ತದಾಸಕ್ತಿಯನೀಗ ಪೇಸಿ ಬಿಸುಟೆಂ ಶ್ರೀಚಂದ್ರಚೂಡಾಮಣೀ
ಸಲೆನೋವಿಲ್ಲದ ವುಣ್ಗೆ ಮೂತ್ರಜಳನಾಳಕ್ಕುಗ್ರಗಂಧೋತ್ಥಿತಾನಿಳ ಧೂಪೋದ್ಗತ ರಕ್ತಮಂಡಲ ಪುರೀಷಾಸ್ರವ ಪಾತಕ್ಕೆ ತಳ್ತೊಲವಿಂ ಚರ್ಮಬಿಲಕ್ಕೆ ಪಂಬಲಿಸುತಿರ್ಕುಂ ಕಾಂಕ್ಷೆ ತಲ್ಲಾಭ ಸೌಖ್ಯಲವಂ ಮಿಂಚಿನಗೊಂಚಲಿಂದಲಚಿರಂ ಶ್ರೀಚಂದ್ರಚೂಡಾಮಣೀ
ಶುನಕಂ ಕೀಟಕಪೇಟಕಭ್ರಮಣಮಂಗಚ್ಛಿನ್ನ ಲಾಂಗೂಲಕರ್ಣನದೊಂದಂಗಜತಾಪದಿಂ ಶುನಿಯ ಬೆನ್ನೊಳ್‌ಪೋಪವೊಲ್‌ತನ್ನ ನೋವನುಮಾರಯ್ಯದೆ ಪೆರ್ಚುತಂ ನಲಿವುತಂ ಭೋಗೋಪಭೋಗಕ್ಕೆ ಪೇಳ್ಮನಮಂ ತರ್ಪುದಿದೇಂ ವಿಚಿತ್ರತರವೋ ಶ್ರೀಚಂದ್ರಚೂಡಾಮಣೀ
ಎನಿತೋಲಾಡಿಯುಮೆಂತು ಮೂಡಿಮುಳುಗಾಡುತ್ತಿರ್ದುಮಾನಂದದಿಂಮನವಾರಲ್‌ತೆಗೆದೀಂಟಿಯುಂ ದಣಿಯದೊಮ್ಮಿಂದೊಮ್ಮೆ ನಿರರ್ಗಳಂಕನಲುತ್ತಿರ್ಪುದೊರಲ್ದು ರಾಗರಸ ಸಂಪೂರ್ಣಾಬ್ಧಿಯೊಳ್ ಚಿತ್ತವಾಗೆನಗೀ ಲೋಲತೆಯಾಗದಿರ್ಕೆ ಸತತಂ ಶ್ರೀಚಂದ್ರಚೂಡಾಮಣೀ
ನರೆಯಿಂದಂ ತೆರೆಯಿಂದಮಾದ ಸೆರೆಯಿಂದಂ ಮುಪ್ಪಿನೊಳ್ ಚೆಲ್ವುಗೆಟ್ಟಿರುತಂ ವ್ಯಾಧಿಯೊಳಾಗಳುಂ ನವೆವುತಂ ತಳ್ತಿರ್ದ ದಾರಿದ್ರ್ಯದೊಳ್ಪೊರಳುತ್ತಿರ್ದುಮದೆಂತುಮಿಂತುಮಳಿಪೆಂತುಂ ಪೋಗದಾ ಕುತ್ತಮಂಪರಿಪಂತೊಂದೌಷಧಿಯಂ ಸಮಂತು ದಯೆಗೆಯ್ ಶ್ರೀಚಂದ್ರಚೂಡಾಮಣೀ
ಸ್ಮರವಲ್ಲೀ ಪರಿವೃದ್ಧಿಗೇಕಸಲಿಲಂ ಮೋಹಾರ್ಣವೋದ್ಯನ್ನಿಶಾಕರಬಿಂಬಂ ಪ್ರಮದಾಮ್ರ ವೈಭವ ವಸಂತಂ ಲೋಲುಪಾಂಭೋರುಹೋತ್ಕರಭಾಸ್ವದ್ದ್ಯುತಿಯೆಂಬಗುರ್ವನೊಳಕೊಂಡೀ ರಾಗಮಂ ಮನ್ಮನೋಂತರದೊಳ್ ಪತ್ತಿರದಂತೆ ಕರ್ಚಿಕಳೆ ನೀಂ ಶ್ರೀಚಂದ್ರಚೂಡಾಮಣೀ
ಸ್ಥಿರಧರ್ಮದ್ರುಮಭಂಗಕೃತ್ಪರಶು ಶಾಂತಿಕ್ಷ್ಮಾಧ್ರವಜ್ರಂ ಕ್ಷಮಾಂಬುರುಹೋನ್ಮೂಲನ ಮತ್ತಹಸ್ತಿ ಕರುಣಾಂಭೋರಾಶಿಕುಂಭೋದ್ಭವಂಪರಮಜ್ಞಾನ ಸುಧಾಂಶುರಾಹುವೆನಿಸಿತ್ತೀ ದ್ವೇಷಮಾ ದ್ವೇಷಮಂಹರ ನೀಂ ಸಂಹರಿಸಾಂ ಮರಲ್ದೆರೆದಪೆಂ ಶ್ರೀಚಂದ್ರಚೂಡಾಮಣೀ
ಒಡಲಂ ತಳ್ತಡಗಿರ್ಪುದೆಂತು ನೆಳಲಂತಾ ಮಾಳ್ಕೆಯಿಂ ತನ್ನ ಪೊಕೈಡೆಯಂ ಪೋಕೆಡೆಗೀಡು ಮಾಡುವುದು ಕರ್ಮ ಕರ್ಮದಾ ತೃಷ್ಣೆಯಂಕೆಡಿಸಲ್ ನೀನೆ ಸಮರ್ಥನೆನ್ನುಭಯ ಕರ್ಮಧ್ವಂಸಮಂ ಮಾಡು ಮಾಳ್ಪೊಡೆ ನೀಂ ಪ್ರಾರ್ಥಿಸಿ ಬೇಡಿಕೊಂಬೆನಿದನಾಂ ಶ್ರೀಚಂದ್ರಚೂಡಾಮಣೀ
ಪಿಡಿದಿಂತೀ ತನುವಂ ತಡಂಗಡಿದೊಡಂ ಖಂಡಂಗಳಂ ಕೂಡೆ ಕೊಯ್ಪೊಡೆಯುಗ್ರಾನಲ ಭಾಂಡದೊಳ್ ಕೆಡೆದೊಡಂ ವಾರಾಸಿಯಂ ನೋಡಿ ವೊಕ್ಕಡಮೇಗೆಯ್ದೊಡಮೆಂತುಮೇತೆರದಿನಾರ್ಗಂ ನೆಟ್ಟನುಂಡಲ್ಲದೇಂಕೆಡಿಸಲ್‌ಬಕ್ಕುಮೇಯೆಯ್ದೆ ಕರ್ಮಫಲಮಂ ಶ್ರೀಚಂದ್ರಚೂಡಾಮಣೀ
ಪರಮಾರಾಧ್ಯರುಮಂ ಪೊರಳ್ಚಿದುದು ಕರ್ಮಂ ಕರ್ಮಿಯಪ್ಪೆನ್ನನೊತ್ತರಿಸುತ್ತಿರ್ಪುದಿದಾವ ಚೋದ್ಯಮದು ತಾಂ ಗೆಲ್ಗುಂ ಭವೋದ್ಯೋಗ ತತ್ಪರನಾಗಿರ್ದು ವಿಷಾಪಹಾರಮಣಿಯಂ ಕಟ್ಟಿರ್ದವಂ ಗೆಲ್ವವೋಲ್ಗರಳಗ್ರಾಸದಿನಪ್ಪುದೊಂದು ವಿಷಮಂ ಶ್ರೀಚಂದ್ರಚೂಡಾಮಣೀ
ಕುರುಡಂ ಕಾಣದೆ ಬೀಳ್ವವೋಲ್ ಪಗಲೊಳಂ ಕಣ್ಣುಳ್ಳವಂ ಬೀಳ್ವನೇಮರುಳಪ್ಪಂ ದೆಸೆಗೆಟ್ಟುಪೋಪ ತೆರದಿಂ ಮೇಣ್ ಪೋಪನನೇ ಬುದ್ಧಿತತ್ಪರನಜ್ಞಾನಿಗೆ ಕರ್ಮಮಂ ನೆರಪಲಕ್ಕುಂ ಜ್ಞಾನಿ ಕರ್ಮಕ್ಕೆ ಮೆಯ್ದೆರಲೇನಾರ್ಪನೆ ಕರ್ಮವಾರ್ಗೆ ಹಿತಮೋ ಶ್ರೀಚಂದ್ರಚೂಡಾಮಣೀ
ಪರಿವಂ ನಿಲ್ಲನೆ ವಾರ್ಧಿಯೊಳ್ ಮುಳುಗಿದಂ ಬೆಂಡೇಳನೇ ಸುಪ್ತನೆಳ್ಚರನೇ ಬೆಂಕೆಯೊಳಿರ್ದವಂ ನೆಳಲನೆಂತುಂ ಸೇರನೇ ಕರ್ಮಿಯಂತಿರೆ ನಾನಾವಿಧ ಕರ್ಮದೊಳ್ ತೊಡರ್ದು ಮತ್ತಂ ಮತ್ತಮಾ ಕರ್ಮಮಂನೆರಪುತ್ತಿರ್ಪವರಾರುಮಿಲ್ಲ ಜಗದೊಳ್ ಶ್ರೀಚಂದ್ರಚೂಡಾಮಣೀ
ಪೊರೆಯಂ ಪೊತ್ತನದಂ ಸಮಂತಿಳಿಪುವನ್ನಂ ವ್ಯಾಧಿತಂ ಕುತ್ತಮಂಪರಿವನ್ನಂ ಪಡಿಪಟ್ಟವಂ ಬಿಸುಡುವನ್ನಂ ಕಾಣ್ಬುದಂ ಕಾಣ್ಬಿನಂಮರುಗುತ್ತಿರ್ಪವೊಲಾಗಳುಂ ಮರುಗವೇಡಾ ಕರ್ಮಿಕರ್ಮದ್ವಯಂಪರೆವನ್ನಂ ನಿಜಯೋಗ ವಜ್ರಹತಿಯಿಂ ಶ್ರೀಚಂದ್ರಚೂಡಾಮಣೀ
ದೆಸೆಯಂ ಪೊಕ್ಕಡಮಾಗಸಕ್ಕಡರ್ದೊಡಂ ವಾರಾಸಿಯೊಳ್‌ಪಾಯ್ದೊಡಂರಸೆಯೊಳ್ ಮೆಯ್ಗರೆದಿರ್ದೊಡಂ ನಿಮಿಷದಿಂ ದಾಳಿಟ್ಟು ಬಂದೆತ್ತಿ ಘಾತಿಸುಗುಂ ಮೃತ್ಯುವದೊಂದುವಂ ಕಳೆಯಲಾರ್ಗಂ ಬಾರದೊಂದುಂಟು ವಂಚಿಸಲೀಶಾನ ಶರಣ್ಯಮೆಂಬ ಬಗೆ ತಾಂ ಶ್ರೀಚಂದ್ರಚೂಡಾಮಣೀ
ಸುರರಾಜಾದ್ರಿಯ ಬಿಣ್ಪನಂಬುಧಿಯ ಗುಣ್ಪಂ ದಿಕ್‌ಸಮೂಹಂಗಳಂತರಮಂ ವ್ಯೋಮದ ಬಿಣ್ಪನೆಂತರಿಯಲಕ್ಕುಂ ಮೃತ್ಯುವೆಯ್ತಂದು ಗೋಣ್ಮುರಿಗೊಂಡೊಯ್ದು ಪುದಾಗಳೆಂದರಿಯಲಾರ್ಗಂ ಬಾರದಾ ಮೃತ್ಯುಸಂಹರಣಕ್ಕೀಶ ನಿಜಾಂಘ್ರಿಯೊಂದೆ ಶರಣಂ ಶ್ರೀಚಂದ್ರಚೂಡಾಮಣೀ
ನೆರವಿಲ್ಲೆಯ್ದಿಪರಿಲ್ಲ ಕಾವವರುಮಿಲ್ಲಾರುಂ ಭವಾರಾತಿಗಂನೆರಮಾಗಲ್ ತುದಿಗೆಯ್ದಿಸಲ್ ನೆರೆಯೆ ತಾಂ ಸಾಮರ್ಥ್ಯರಿಲ್ಲಿಂದು ಶೇಖರನೆಂದಾಂ ಶರಣಾರ್ಥಿಯಾಗಿ ಮರೆಯಂ ಪೊಕ್ಕೆಂ ದಿಟಂ ಜನ್ಮಸಾಗರದಿಂದಂ ಪೊರಗಿಕ್ಕು ನೀಂ ಕರುಣದಿಂ ಶ್ರೀಚಂದ್ರಚೂಡಾಮಣೀ
ಪಿತೃವೇನೋವನೆ ಮಾತೃಮಾಣಿಪಳೆ ಮಿತ್ರಂ ನಿಂದು ಮಾರಾಂಪನೇಸುತನೇಂ ಕಾದಪೆನೆಂಬನೇ ಯಮಭುಜಂಗಂ ಪ್ರಾಣಭುಕ್ ಪ್ರಾಣಮಾರುತನಂ ಪೀರ್ವೆಡೆಯೊಳ್ ತದೀಯ ಜನಿತೋಗ್ರಾನರ್ಥಮಂ ಕಾಯಲಚ್ಯುತ ನಿನಾರ್ಪೆ ಶರಣ್ಯಮೆಂಬ ಜನಮಂ ಶ್ರೀಚಂದ್ರಚೂಡಾಮಣೀ
ಕರಿಯಿರ್ದಂತೆ ಚರರ್ತುರಂಗದಳವಿರ್ದಂತಾಪ್ತರಿರ್ದಂತೆ ಕಿಂಕರರಿರ್ದಂತೆ ಕೃತಾಂತನಾರ್ದೆಳದು ಕೊಂಡೊಯ್ವಾಗಳಾ ಚಕ್ರಿಗಾರ್ಶರಣರ್ಬಾರಿಪರಾರೊ ನಿಮ್ಮಂ ದಯೆಯಿಂ ನೀಂ ಪುಟ್ಟಿಸಲ್ ಪುಟ್ಟುವಂತರಿಸಲ್ ನಿಲ್ವನಗಲ್ಚೆ ತಾನಗಲ್ವನೈ ಶ್ರೀಚಂದ್ರಚೂಡಾಮಣೀ
ಉದಬಿಂದುದ್ವಯಮುಂ ವಧೂಜಠರದೊಳ್ ಪೊಕ್ಕಾರೊ ರೂಪಾಗಿ ಮಾಡಿದರಂದಾವಯವಂ ಸ್ವಭಾವ ಮೆನಲೇಕಾಕಾರಮೇ ಕಾಗದೇಕದು ನಾನಾ ವಿಧಮಾದುದಂತೆರಡು ಮತ್ತೀತ ತ್ವದೀಯಿಚ್ಛೆಯಿಂದುದಯಿಕ್ಕುಂ ತನುಭೃದ್ಘನಕೃತಿ ಘನಂ ಶ್ರೀಚಂದ್ರಚೂಡಾಮಣೀ
ತನುಭೃತ್ಸಂಜನಿತಕ್ಕೆ ಮಾತೃಪಿತೃಯೋಗಂ ಕ್ಷೇತ್ರಬೀಜಾದಿ ಯೆಂಬ ನಿಜಂ ಸೂತಿಗೆ ವೃದ್ಧಿಯಾಯ್ತಖಿಳ ಮಾತ್ಸರ್ಯಕ್ಕೆ ಸೌಖ್ಯಕ್ಕೆ ಪಾಲನ ಧರ್ಮಾಚರಣಕ್ಕೆ ಕರ್ಮನಿವಹ ಪ್ರಾಪ್ತಕ್ಕೆ ಸರ್ವೇಶ ನೀನೆ ನಿಮಿತ್ತಂ ಪೆರರಾರುಮಿಲ್ಲ ಜಗದೊಳ್ ಶ್ರೀಚಂದ್ರಚೂಡಾಮಣೀ
ಜನಕಂ ಕಾರಣಮಪ್ಪಡೇಕರಿಯನಾದಂ ಪೆತ್ತ ತಾಯ್ತಾನೆನಲ್ಮನದೊಳ್ ಕಾಮಿಸಿದಾಗಳೇಕೆ ಪಡೆಯಳ್ ತಾನ್ ನಿಶ್ಚಯಮ್ಮಲ್ಲಿಪುಟ್ಟನು ಜೀವಂ ಬಗೆವಲ್ಲಿ ಮಾತೃಪಿತೃಯೋಗಂ ದಂಪತಿ ಕ್ರೀಡೆ ಯೆಂಬ ನೆವಂ ಸೂತಿಗೆ ನೀಂ ನಿಮಿತ್ತಮೆನಲೇಂ ಶ್ರೀಚಂದ್ರಚೂಡಾಮಣೀ
ಫಲವಾತ್ಮೇಚ್ಛೆಯೆ ಗರ್ಭಸಂಕ್ರಮಣಮೇಂ ಸ್ವಾಯತ್ತಮೇ ಸೇರಿ ತನ್ನೊಲವೇ ಬಾಳ್ವುದು ತನ್ನ ಮೆಚ್ಚೆ ಸುಖದುಃಖಂ ತನ್ನಭೀಷ್ಟಾರ್ಥಮೇಪ್ರಳಯಂ ದೇಹಿಗೆ ದೇಹ ತನ್ನ ವಶಮೇ ನೀಂ ಪುಟ್ಟಿಸಲ್ ಪುಟ್ಟುವರ್ನಿಲಿಸಲ್ ನಿಲ್ವರಗಲ್ಚೆ ತಾವಗಲ್ವರೈ ಶ್ರೀಚಂದ್ರಚೂಡಾಮಣೀ
ಸತಿ ಪೇಳ್ದಂತಿರೆ ಕರ್ಮಕಾಂಡವಮರ್ದಂತಾ ಜ್ಞಾನಕಾಂಡಂಗಳಿಂಕೃತಕರ್ಮ ಪ್ರಭವಾನುರೂಪ ಫಲಮಂ ನೀಂ ಮಾಳ್ಪೆ ತತ್ಕರ್ಮಿಗಚ್ಯುತ ಮೋಕ್ಷಾರ್ಥಿಗೆ ಮುಕ್ತಿಯಂ ಕೊಡುವ ನಿನ್ನಂ ನಂಬದಂಗೀವೆ ದುರ್ಗತಿಯಂ ದೇಹಿಗೆ ತನ್ನ ಮೆಚ್ಚೆರಡರೊಳ್ ಶ್ರೀಚಂದ್ರಚೂಡಾಮಣೀ
ನಿನಗಾರ್ ಕರ್ಮಿಯುಕರ್ಮಬಂಧನಕೃತಂ ದಾನಾರ್ಥಮಾಗಿರ್ದುದೆಂತೆನೆ ತಾಂ ಮೃದ್ದರ ಚಕ್ರದಂಡ ನಿವಹಂಗಳ್ ಕುಂಭಕಾರಂಗೆ ಸಾಧನವೆಂತಂತಿರೆ ಕರ್ಮಿಗೀವ ತೆರದಿಂ ಕರ್ಮೇತರಂಗೀವ ನೆಟ್ಟನೆ ಕರ್ಮಾನು ಪದಾನುರೂಪ ಫಲಮಂ ಶ್ರೀಚಂದ್ರಚೂಡಾಮಣೀ
ಇದು ಬಂಧಕ್ಕಿದು ಮುಕ್ತಿಗೆಂಬೆರಡುಮಂ ವೇದಾಂತ ಸಿದ್ದಾಂತದೊಳ್ವಿದಿತಂ ಮಾಡಿದ ಕರ್ಮಯೋಗ ಗತಿಯಿಂ ನಿಂದಿರ್ದು ಬಾರ್ಗುತ್ತ ವೊಡ್ಡಿದೆ ಯಿಂ ಸಂದದರೊಳ್ ಮನಂ ಮರಳಿ ಬೀಳ್ಗುಂ ಬುದ್ಧಿಯುಳ್ಳಂ ತೂಡಂಕದೆ ಪೋಕುಂ ಯಸಗಿಚ್ಛೆಯಂ ಗಳಿಪುದೇಂ ಶ್ರೀ ಚಂದ್ರಚೂಡಾಮಣೀ
ಸಕಲಾವಸ್ಥೆಯನಪ್ಪುಕೆಯ್ದು ನಿಜ ಪೂಜಾಭಕ್ತಿಯಿಂ ವೈಭವಾಧಿಕನೆಂದುಂ ನಿಜನಿಷ್ಕಳಾಸ್ಪದಮನತ್ಯಾನಂದದಿಂ ಧ್ಯಾನಿಸಲ್ಸಕಲಜ್ಞಾನಮನಾತ್ಮನಕ್ಕುಮೆರಡಕ್ಕುಂ ನೀನೆ ಹಸ್ತಾವಳಂಬಕಮಾಗಿರ್ದಪೆ ಶಾಶ್ವತ ಪ್ರಮಿತಿಯಿಂ ಶ್ರೀಚಂದ್ರಚೂಡಾಮಣೀ
ಸಕಳೈಕಾತ್ಮಕನಪ್ಪೆಯಲ್ಲದಖಿಳಾತ್ಮಾವಸ್ಥೆಯಿಂ ವಾರ್ಧಿವಾರಿಕಣಂ ಪಂಕಜ ಪತ್ರದೊಳ್ ನೆಲಸಿ ನೀರಂ ಪೊರ್ದದಿರ್ಪಂತೆ ಜೀವಕೃತ ವ್ಯಾಪ್ತಿಗೆ ಸಾಕ್ಷಿ ನೀಂ ಭವ ಭವತ್ಸಾನ್ನಿಧ್ಯದೊಳ್ ಜೀವಿತಾತ್ಮಕನೋರಂತರಿಗುಂ ಸಮಂತುಳಿವುದಂ ಶ್ರೀಚಂದ್ರಚೂಡಾಮಣೀ
ತಿಳಿದಾತ್ಮ ಪ್ರಕೃತಿ ಸ್ವಭಾವವದನಾನಲ್ಲೆಂದು ನಿಶ್ಚೈಸಿ ನಿಶ್ಚಲದಿಂ ದೇಹದ ಮೋಹಮಂ ಬಿಸುಟು ತತ್ವಜ್ಞಾನಮಂ ಚಿತ್ತದೊಳ್ತಳೆದಾತ್ಮಂ ಚಲಗೆಟ್ಟು ಸಂಚಲಿಸದೇಕೀಭಾವದೊಳ್ ಕೂಡಿ ನಿಮ್ಮೊಳೆ ನಿಲ್ಕಿಂತಿದನಾಂ ಮರಲ್ದೆರೆದಪೆಂ ಶ್ರೀಚಂದ್ರಚೂಡಾಮಣೀ
ಮೊದಲೊಳ್ ಮೂರ್ತಿಯನಿಂತುಟೆಂದರಿದು ತದ್ಧ್ಯಾನಾಂಗ ಮೋಕ್ಷಾರ್ಥಸಂಪದ ನೀನೆಂದಖಿಳಾರ್ಚನಾ ಜಪ ಸಮಾಧಿ ಧ್ಯಾನ ಸಾತತ್ಯ ಹೋಮದಿನಾರಾಧಿಸೆ ಖೇಚರೇಂದ್ರ ದಿವಿಜೇಂದ್ರೋಪೇಂದ್ರ ಸಾಮ್ರಾಜ್ಯ ಸಂಪದಮಕ್ಕುಂ ಸಕಳೇಶ ನಿಮ್ಮದಯೆಯಿಂ ಶ್ರೀಚಂದ್ರಚೂಡಾಮಣೀ
ಆದು ಕಾರ್ಮಿಂಚಿನಗೊಂಚಲಂತೆ ಶಶಿಸೂರ್ಯಜ್ಯೋತಿಯಂತುಗ್ರ ಭಾಸ್ವದುದಾತ್ತ ಸ್ಫಟಿಕಾದ್ರಿಯಂತೆ ಬೆಳಗುತ್ತಿರ್ಪಾ ಪರಂಜ್ಯೋತಿಯೆಂಬುದನುನ್ಮೀಳಿಸಿ ತನ್ನುಮಂ ಜಗಮುಮಂ ಪ್ರದ್ಯೋತಿಪಂ ತಾನೆ ಕಾಣ್ಬುದದೆಯ್ದಿಕ್ಕುಮದಾರುಮೆಯ್ದದೆಡೆಯಂ ಶ್ರೀಚಂದ್ರಚೂಡಾಮಣೀ
ಮನ ಮಂತ್ರಪ್ರಣವಾಕ್ಷರಾತ್ಮಸಹಿತಂ ಶ್ವಾಸಾನಿಳಂ ಪೋಗೆ ನಿನ್ನನೆ ತಾನೆಯ್ದಿ ಬರಲ್ಕೆ ಬರ್ಪಗತಿಯೊಂದಭ್ಯಾಸದೊಳ್‌ಕೂಡಿ ತನ್ಮನಮುಂ ವಾಯುವದೆಲ್ಲವಸ್ತಮಿಸಲಾನಂದೋತ್ಸವಂ ಪುಟ್ಟುಗುಂಜನಿತಾಸಂಗಸುಖಸ್ವರೂಪಮದರಿಂ ಶ್ರೀ ಚಂದ್ರಚೂಡಾಮಣೀ
ಪರಮಾನಂದಮಯಾತ್ಮನಾಗಿ ಸುಖಮಂ ನೀನೆಂದು ತಲ್ಲೀನನಾಗಿರೆ ರಂಧ್ರಾಂತರದಿಂದೆ ನಾದಮುದಯಿಕ್ಕುಂ ತಾನೆ ನಾದಾತ್ಮನಾಗಿರೆ ಯೋಗಾಮೃತವಾರಿಯುಂ ಪುಳಕಮುಂ ನೇತ್ರಪ್ರಮೋದಾಶ್ರುವುಂದೊರೆಕೊಳ್ಗುಂ ಪರಮಾತ್ಮ ನಿನ್ನ ದಯೆಯಿಂ ಶ್ರೀಚಂದ್ರಚೂಡಾಮಣೀ
ಸಲೆ ತನ್ನಿಂದವೆ ತನ್ನನೀಕ್ಷಿಸಿ ಜಗದ್ವ್ಯಾಪಾರದೊಳ್ ಕೂಡಿ ಪಂಬಲಿಪಾ ವ್ಯಾಪ್ತಿಯನೆಲ್ಲಮಂ ಮರೆಗುಮಂತಾ ವ್ಯಾಪ್ತಿ ಕೆಟ್ಟಂದು ಕೋಟಲೆ ಪೋಕುಂ ಮನದಿಂದೆ ಕೋಟಲೆ ಕೆಡಲ್ ಸೌಖ್ಯಾತ್ಮನಕ್ಕುಂ ಸುನಿಶ್ಚಲ ಸೌಖ್ಯಾತ್ಮಕನಾಗೆ ನೀನೆನಿಸುಗುಂ ಶ್ರೀಚಂದ್ರಚೂಡಾಮಣೀ
ಮನದಿಂದಿಂದ್ರಿಯ ಯಿಂದ್ರಿಯ ಪ್ರಕರದಿಂದಂ ವನ್ಯತಾಂ ಬಲ್ಲುದಕ್ಕನಿತಂ ತಾನರಿವುತ್ತಮಿರ್ಪುದದು ನಿತ್ಯಜ್ಞಾನಮಂತಲ್ಲದಾಮನದಿಂದಿಂದ್ರಿಯಮಲ್ಲದಿರ್ದುದನಿತಂ ವಿದ್ಯುತ್ಸಮಜ್ಞಾನ ಲಾಂಚನದಿಂದಾನರಿವಂತು ಮಾಡು ದಯೆಯಿಂ ಶ್ರೀಚಂದ್ರಚೂಡಾಮಣೀ
ಕರಣಜ್ಞಾನಮನೆಲ್ಲವಂ ಮರೆದು ತದ್ದೇಹಾದಿ ತದ್ವಸ್ತುವಂಚಿರಮಾಗಲ್ಲದವಂ ವಿಭೇದ ಮನದಿಂ ತಾನೆಂಬ ಸಂಕಲ್ಪದುಸ್ತರ ದುರ್ಬೊಧಮನೊಕ್ಕುಮಿಕ್ಕರಿತದಿಂದಾಂ ನೀನೆನುತ್ತಿಪ್ಪ ಸಂಸ್ಮರಣ ವ್ಯಾಪ್ತಿ ಜಿಗಿಲ್ತು ನಿಲ್ಕೆಮನದೊಳ್ ಶ್ರೀಚಂದ್ರಚೂಡಾಮಣೀ
ಒಳಕೊಂಡಿರ್ಪ ಪದಾರ್ಥವಿಲ್ಲಣಮೆ ತಾನೀವಿಶ್ಚಮಂ ಕೂಡಿ ನೀನೊಳಕೊಂಡಿರ್ದಪೆಯೆಂಬ ಪಂಬಲೊಳೆ ಸರ್ವಂಖಲ್ವಿದಂ ಬ್ರಹ್ಮವೆಂದೊಳಕೊಂಡಿರ್ಪುದಶೇಷಮುಂ ಸಕಲಮುಂ ತಾನಕ್ಕುಮಂತಾಗಿ ನೀನೊಳಕೊಳ್ವೈ ಬಿಡದಾ ಮಹಾಪುರುಷಂ ಶ್ರೀಚಂದ್ರಚೂಡಾಮಣೀ
ಕ್ರಮದಿ ತನ್ನಯರೂಪರೂಪಮೆನಲುರ್ವ್ಯಾದ್ಯಂತರಿಕ್ಷಾದಿವಿಶ್ವಮುಮಂ ಶೂನ್ಯಮೆನಲ್ಕೆ ಕಂಡದನೆ ನೀನೆಂದಿರ್ಪುದಯ್ಯೋ ಮಮಭ್ರಮಮಪ್ಪಂದಮಭೇದ್ಯಮಪ್ಪ ಬಗೆಯಿಂದಾ ಯೋಗಿಗಾ ಯೋಗಮುತ್ತಮ ಸೌಖ್ಯಾದಿ ಸುಯೋಗಮಂ ನೆರಪುಗುಂ ಶ್ರೀಚಂದ್ರಚೂಡಾಮಣೀ
ರವಿಯೆಂದರ್ಘ್ಯಮನಗ್ನಿಯೆಂದು ಹವಿಯಂ ತ್ರೈಮೂರ್ತಿಯೆಂದರ್ಚನೋತ್ಸವಮಂ ಶಾಶ್ವತನೆಂದು ಸಂಸ್ಮರಣಮಂ ಕೈಕೊಂಡು ಭಕ್ತಾಳಿಗುತ್ಸವಮಂ ಮಾಡುವಖಂಡಿತ ಪ್ರಭುವೇ ನೀಂ ಸರ್ವಜ್ಞನುಂ ಸ್ವಾಮಿಯುಂಭುವನಕ್ಕೀಶ್ವರ ನೀನೆ ಮತ್ತೆ ಪೆರರಾರ್ ಶ್ರೀಚಂದ್ರಚೂಡಾಮಣೀ
ಉರಿಯೊಳ್ ಕೂಡಿದುದಗ್ನಿಯಕ್ಕುಮುರಿಯೊಳ್ ಕೂಡಿರ್ದುದಾತೃಷ್ಣಮಾವರಿಸುತ್ತಾತನೊಳೊಂದಿಸುತ್ತಿರಲವಂ ಸರ್ವಜ್ಞನಕ್ಕುಂ ಮಹೇಶ್ವರ ಜೀವಾತ್ಮನಗಲ್ದುಪೋಗೆ ವಿಪುಳಜ್ಞಾನಂ ತದಾತ್ಮಂಗೆ ತಾಂದೊರೆಕೊಳ್ಗುಂ ನಿಜಸನ್ನಿಧಾನವಶದಿಂ ಶ್ರೀಚಂದ್ರಚೂಡಾಮಣೀ
ನವಕಾಳಾಗರುಧೂಪದಿಂ ಪರಿಮಳಂ ವಸ್ತ್ರಾಳಿಗಪ್ಪಂತೆ ಪುಷ್ಟವಿಭೇದೋದ್ಗಮ ಗಂಧವಾಸನೆಯಿನಾತೈಲಕ್ಕೆ ಕಂಪಪ್ಪವೊಲ್ಶಿವ ನಿಮ್ಮಂ ಸಲೆ ವಾಸಿಸಲ್ ಪರಮ ತತ್ತ್ವಜ್ಞಾನಮೀಶಾನ ನಿನ್ನವೊಲಕ್ಕುಂ ನಿಜಸೇವೆಯೆಂಬ ಗುಣದಿಂ ಶ್ರೀಚಂದ್ರಚೂಡಾಮಣೀ
ಮೊಗೆದಂಬೋಧಿಯ ನೀರನಂಬುಧಿಗೆ ವರ್ಷಾಕಾಲದೊಳ್ ಮೇಘಮಾಲೆಗಳೀವಂತಿರೆ ವಿಶ್ವಭೊಕ್ತೃಜನಿತಾ ಸತ್ಕರ್ಮಮಂ ಕೊಂಡು ನೆಟ್ಟಗೆ ಸತ್ಕರ್ಮಫಲಂಗಳಂ ಕ್ರಮದಿಕೊಂಬಾ ದಾತೃವುಂ ಭೊಕ್ತೃವೂಂನಗಜಾವಲ್ಲಭ ನೀನೆ ಮತ್ತೆ ಪೆರರಾರ್ ಶ್ರೀಚಂದ್ರಚೂಡಾಮಣೀ
ಶಿವನುಂಬಂ ಶಿವನೂಡುಗುಂ ಶಿವನೆಪೂಜ್ಯಂ ಪೂಜೆಯಂ ಮಾಳ್ಪನುಂಶಿವನಾಪ್ತಂ ಶಿವನಾಗಮಸ್ಥಿತ ಶಿವಂ ಜ್ಞಾನಂ ಶಿವಂ ಜ್ಞಾನಿಯುಂಶಿವನಿಷ್ಟಂ ಶಿವನಷ್ಟಸಿದ್ಧಿಯನೊರಲ್ದೀವಂ ಶಿವಂ ಸರ್ವನುಂಶಿವನೆಂದಾಂ ಶಿವನಿಮ್ಮನೆಯ್ದೆ ತಿಳಿದೆಂ ಶ್ರೀಚಂದ್ರಚೂಡಾಮಣೀ
ಮಿಡನೊಯ್ಗುಂ ಕುಡದಿರ್ಪ ಮಾಲನಲನೆಲ್ಲಂ ತಪ್ಪದೆಲ್ಲಂದದಿಂಪಿಡಿದಿರ್ದಾತನನೊಯ್ವತನ್ನೆಡೆಗೆ ನಿಮ್ಮಂ ನಂಬಿದೆಂ ನಿಮ್ಮನಾಂಬಿಡೆ ನೀನಿರ್ದೆಡೆಗೊಯ್ ಭವಾಂಬುಧಿಯನೆತ್ತಂ ಪೊಯ್ಸು ನೀನೆನ್ನನಾವೆಡೆಯೊಳ್ ನೀನೊಳಕೊಳ್‌ಮದೀಶ ದಯೆಯಿಂ ಶ್ರೀಚಂದ್ರಚೂಡಾಮಣೀ
ಒಡಲಿಂಗಾತ್ಮಭವಂಗೆ ತಳ್ತೊಡವೆಗಿಷ್ಟಂಗಾಪ್ತ ವರ್ಗಕ್ಕೆ ತಳ್ತೊಡಗೂಡಿರ್ದ ಮನಃಪ್ರಿಯ ಪ್ರತತಿಗೆಳ್ತರ್ಪೊಂದರಿಂ ಭಕ್ತಿಯಿಂಮೃಡ ನಿಮ್ಮಂ ಸಲೆ ಕೂಡುತಿರ್ಕೆ ಜಗದೊಳ್ ಮತ್ತನ್ಯರಾರ್ ನಿನ್ನ ಕಾಲ್ಪಿಡಿವೆಂ ಮಾಡಿದನಾವಗಂ ಕರುಣದಿಂ ಶ್ರೀಚಂದ್ರಚೂಡಾಮಣೀ
ಕ್ರಿಯೆಯಂ ನಿಚ್ಚಳಚಿತ್‌ಪ್ರಕಾಶರುಚಿ ಬಿಟ್ಟಂದೊಪ್ಪುಗುಂ ಚುಂಬಕಕ್ರಿಯೆಯಂ ಬಿಟ್ಟಡೆ ಬಿಟ್ಟನಾವುದುಮನಗ್ನಿಸ್ತಂಭಮಂ ಬಲ್ಲನಗ್ನಿಯನಕ್ಲೇಶದಳುರ್ಕೆಯಿಂ ಪಿಡಿವವೊಲ್ ಮತ್ತೊಬ್ಬ ತಾಂ ಬುದ್ಧಿನಿಶ್ಚಯದಿಂದಂ ಪಿಡಿಯಲ್ಕೆ ಕಿಚ್ಚು ಸುಡದೇ ಶ್ರೀಚಂದ್ರಚೂಡಾಮಣೀ
ಗುರುವಾಕ್ಯಂ ಮೊದಲಾಗಲಂಘ್ಯಮೆನೆ ವೇದಂ ದೇವಸಾಕ್ಷಾಜ್ಜಗದ್ಗುರುವಾಗಿರ್ದುಂಭವದ್ವಚಃಪ್ರಚಯ ಮಾರ್ಗಾಲಂಘ್ಯಮೆಂದುರ್ಮದೋತ್ಕರದೊಳ್ವಾಸಿಸೆ ವೇದ ಬಾಹ್ಯವೆನಿಪಾ ದುರ್ಬುದ್ಧಿಯಿಂ ದೇವ ದೇವರ ಮಾತಂ ಸಲೆ ಮೀರಿದಾತನೆ ವಲಂ ಶ್ರೀಚಂದ್ರಚೂಡಾಮಣೀ
ಪೆರನುಂಡಂ ಪೆರನುಟ್ಟಪಂ ಪೆರನತರ್ಕ್ಯೈಶ್ವರ್ಯಮಂ ತಾಳ್ದಿದಂಪೆರನುದ್ದಾಮ ಪರಾಕ್ರಮಕ್ಕೆ ನೆಲೆಯಾಗಿರ್ದಪ್ಪನೆಂದಾಗಳುಂಕರುಪಿಂ ತದ್ವಸನಕ್ಕೆ ಮೇಲೆ ನಿಸದಂದೋರಂತೆ ತನ್ನಂತೆ ತಾಂಪರರಂ ಭಾವಿಸೆ ತತ್ತ್ವಮಿಂತುಟೆವಲಂ ಶ್ರೀ ಚಂದ್ರಚೂಡಾಮಣೀ
ಗುರುವುಂ ತಂದೆಯುಮಾಪ್ತನುಂ ಜನನಿಯುಂ ಮತ್ ಸ್ವಾಮಿಯುಂ ದೈವಮುಂಹರ ನೀನೆಂದೆರಡಿಲ್ಲದಾಂ ಬಗೆವುತಿರ್ದೆಂ ತೊತ್ತುವೊಕ್ಕೆಂ ಮಹೇಶ್ವರ ನೀಂ ರಕ್ಷಿಪುದೆನ್ನನಾಶ್ರಿತಜನ ಪ್ರಾಕಾರನೆಂಬೊಂದು ನಾಣ್ಬಿರುದಂ ತೋರೆನಗಾಶ್ರಿತಂಗೆ ದಯೆಯಿಂ ಶ್ರೀ ಚಂದ್ರಚೂಡಾಮಣೀ
ತನಗೊಳ್ಪಂ ತನಗಳ್ತಿಯಂ ತನಗನಂತೈಶ್ವರ್ಯಸಂಪತ್ತಿಯಂತನಗಿಷ್ಟಾರ್ಥ ಸುಖಂಗಳಂ ತನಗೆ ಲೋಕಾಶ್ಚರ್ಯಮಂ ಧೈರ್ಯಮಂತನಗತ್ಯುಜ್ವಳ ಕೀರ್ತಿಯಂ ಬಯಸುವಾತಂ ಮಾಳ್ಪಶಾಂತಿತ್ವಮಿನ್ನೆನಗಕ್ಕುಂ ನೆರೆದಪ್ಪೆನಾ ಶಮತೆಯೊಳ್ ಶ್ರೀ ಚಂದ್ರಚೂಡಾಮಣೀ
ಹರ ನೀಂ ವಿಶ್ವಜನಕ್ಕೆ ಕರ್ತೃ ಧರಣಿ ನೀರಗ್ನಿ ಸೂರ್ಯಾನಿಳಾಂಬರ ಚಂದ್ರಾತ್ಮಕ ಮೂರ್ತಿಯೆಂದು ನುಡಿಗುಂ ವೇದಂಗಳೀ ವಸ್ತುವಿಂಪರಮಾತ್ಮಂ ಪೆರತೊಬ್ಬನಲ್ಲದೊಳರೇ ಮಾಹೇಶ ನೀನ್ ಜೈನ ಬೌದ್ಧರನೇಳಿಪ್ಪರು ನಿಮ್ಮನೇಳಿಸಿದವರ್ ಶ್ರೀ ಚಂದ್ರಚೂಡಾಮಣೀ
ಸಮಸಂದಾಕೃತಿ ಸಾರ್ದರೂಪು ಪಡೆದರ್ಥಂ ತಂದೆ ಪೆಂಡಿರ್ಯಥಾಕ್ರಮದಿಂ ಪುಟ್ಟಿದ ಪುತ್ರರಾದ ನಿಜಮಿತ್ರರ್ಸಾಲ್ಗುಮೆಂದಿರ್ದವಂಗಮರ್ದಿರ್ಕ್ಕುಂ ಪರಿಣಾಮಮಿಲ್ಲದವನೆಲ್ಲಾ ಚಿಂತೆಯೊಳ್ ಕೂಡಿಕೂಡಿ ಮರುಳ್ಗೊಳ್ಗುಮದೆಯ್ದದಾಗದು ಸುಖಂ ಶ್ರೀ ಚಂದ್ರಚೂಡಾಮಣೀ
ಮನಮೊಂದಂ ಬಗೆಗುಂ ಕುಬುದ್ಧಿ ಪೆರತೊಂದಂ ಭಾವಿಕುಂ ಚಿತ್ರಮೊಂದ ನೊರಲ್ದೀಪ್ಸಿಸುತಿರ್ಕುಮಿಂತಿವರನಂತ ಭ್ರಾಂತಿಗಾನಾರೆನೊಂದನುಮಾದಾಗಳುಮೆತ್ತಲುಂ ತೊಲಗದೇಕೀಭಾವದೊಳ್ ನಿಂದು ನೆಟ್ಟನೆ ಬಿಲ್ಲುಂ ಬೆರಗಾಗೆ ನಿಮ್ಮೊಳೆ ಮನಂ ಶ್ರೀ ಚಂದ್ರಚೂಡಾಮಣೀ
ಪಲಕಾಲಂ ಸುಖಮಿರ್ದೊಡಂ ಪಲವುಕಾಲಂ ಬಂದಡಂ ದೇವ ಕೋಟಲೆಯೊಳ್ ಪುಟ್ಟುವೆ ನೋವೆ ನೋಯಿಸುಗುಮಾ ಮುನ್ನಾದ ಸೌಖ್ಯಂ ಮನಂಬಲಮಂ ಮಾಡದದೆಂತುಮಂಧಕನ ಕೈಯಂ ಬಿಟ್ಟಡಾತಂಗೆ ನುಣ್ಗೊಲೆಯಪ್ಪಂತಿದನಾವಗಂ ತಿಳಿದೆ ನಾಂ ಶ್ರೀ ಚಂದ್ರಚೂಡಾಮಣೀ
ಇನಿತಕ್ಕಾರದೊರಲ್ದು ಕೃಪೆಗೆ ಕನಲ್ವಂತೆನ್ನ ಜಿಹ್ವಂವಿನೂತನ ಸತ್ಯಕ್ಕೆ ಮರಲ್ದಸತ್ಯವಚನಕ್ಕೋರಂತೆ ಕೊಕ್ಕೈಸೆ ಮಾಣ್ದೆನೆ ಸತ್ಯಂ ಸುರರಾಜಮೋಕ್ಷವಿದು ತಾಂ ಮಾರ್ಗಕ್ಕೆ ಸೋಪಾನ ಮಿಂತೆನಗಾ ಸತ್ಯಮೆ ಕೂಡುಗಾವತೆರದಿಂ ಶ್ರೀ ಚಂದ್ರಚೂಡಾಮಣೀ
ಪರಸೌಖ್ಯಂ ತನಗಾಗದೆಂದು ಪೆರತೊಂದುದ್ಯೋಗದಿಂ ತನ್ನ ದುರ್ಧರ ದುರ್ಬೋಧನದಿಂದೆ ಭೇದಿಸದೆ ಸರ್ವಪ್ರಾಣಿಯೊಳ್ ಮಾಡಿ ತಾಂಪರರ ಪ್ರೀತಿಯ ನೆರೆದಾವ ದೆಸೆಯಿಂ ತುಷ್ಟಾತ್ಮನಾಗಿರ್ಪ ತತ್ಪರಿಣಾಮಂ ಸಲೆ ಕೂಡುಗೆನ್ನ ಮನದೊಳ್ ಶ್ರೀ ಚಂದ್ರಚೂಡಾಮಣೀ
ದಯೆಯಿಂ ವಿಶ್ವಜನಂಗಳೊಳ್ ಸಲುವ ಸರ್ವಪ್ರಾಣಿ ಸಂಋದ್ಧಿಯಂಬಯಸುತ್ತಿರ್ಪ ಸುವಸ್ತು ವಸ್ತುಗಳೊಳಂ ಕೂಡಿರ್ಪ ಸರ್ವಾತ್ಮ ಸಿದ್ಧಿಯನಾನೆಯ್ದಿದೆನೆಂಬ ನಿಮ್ಮನರಿದಾಂ ನೀವಾದೆನೆಂದಿರ್ಪ ಬುದ್ಧಿಯನೀ ದೇವರ ದೇವ ಬೇಡಿದೆನಿದಂ ಶ್ರೀ ಚಂದ್ರಚೂಡಾಮಣೀ
ಸಿರಿಯಕ್ಕಾಗಡೆ ಪೋಗಲಕ್ಕೆ ಬರಿಸಂ ಬಾಳೀಗಲೇ ಪೊಗುಗಾಭರಣಂ ಸುತ್ತುಗೆ ಸಾವು ಪುಟ್ಟುಗಹಿತರ್ಬರ್ಕಿಷ್ಟರೆಯ್ತರ್ಕೆ ಕೇಸರಿ ಪಾಯ್ಗಂಗನೆ ಮೇಲೆವಾಯ್ಗೆನಗದೊಂದು ಭೇದಮಿಲ್ಲೆಲ್ಲಮಂಸರಿಯಾಗಲ್ ಕಾಣ್ಬೆನಕ್ಕೆ ಮನದೊಳ್ ಶ್ರೀ ಚಂದ್ರಚೂಡಾಮಣೀ
ಬಗೆಯೇಂ ನಿಜಯೋಗಮಕ್ಕೆ ನುಡಿಯೆಲ್ಲಂ ನಿಮ್ಮ ಮಂತ್ರಾಕ್ಷರೋಕ್ತಿಗಳಕ್ಕೆನ್ನರಿವೆಲ್ಲಮೆಯ್ದೆ ಭವದೀಯ ಜ್ಞಾನ ಮಕ್ಕೆಲ್ಲಿಯುಂನೆಗಳ್ದಾಳೋಕನಮೆಲ್ಲಮೆಯ್ದೆ ನಿಜತತ್ತ್ವಾಳೋಕಮಕ್ಕಿಂತಿವಂಬಗೆದಾಂ ಬೇಡುವೆನೊಲ್ಲೆನಿನ್ನುಳಿದವಂ ಶ್ರೀ ಚಂದ್ರಚೂಡಾಮಣೀ
ಉದಯಾದಿತ್ಯನ ಸಂಧಿವಿಗ್ರಹಿಲಲಾಮಂ ನಾಗವರ್ಮಂ ಸಮಂತುದಯಾದಿತ್ಯನ ರಾಯಭಾರಿಯೆನಿಸಿರ್ದಾತ್ಮಾಗ್ರಜಂ ಭಾಸ್ಕರಂಮೊದಲಾದೀಶ್ವರ ಭಕ್ತರಪ್ಪಿವರ್ಗೆ ಪೇಳೀಜ್ಞಾನಸಾರಂ ಸುಖಾಸ್ಪದ ಮೊಲ್ದೋದಂಗೆ ಭಕ್ತಿಮುಕ್ತಿ ಫಲಮಂ ಶ್ರೀಚಂದ್ರಚೂಡಾಮಣೀ
ಇದನಾವಂ ನಿಜಭಕ್ತಿ ಮಾವರಿಸದಿಂ ಪೇಳ್ವಾತನಾವಂ ಮನೋಮುದದಿಂದಂ ಸ್ತುತಿಯಿಪ್ಪನಾವ ಕವಿಗಂ ಮಾಹೇಶ್ವರೀಶಂ ವರಪ್ರದಹಸ್ತ ಪ್ರಮದಾವಲೋಕನ ಸುಖಾನಂದಾಶ್ರು ಕೋಟ್ಯರ್ಕ ಸಂಪದ ತೇಜೋನಿಧಿ ಮಾಳ್ಕಭೀಷ್ಟ ಫಲಮಂ ಶ್ರೀ ಚಂದ್ರಚೂಡಾಮಣೀ


