EN | KA

IV

Naḷacaritre

ಮರುಗೆ ಪುರಜನ ಜೂಜಿನಲಿ ಪು
ಷ್ಕರಗೆ ರಾಜ್ಯವ ಸೋತು ನಳಭೂ
ವರನು ನಿಜಸತಿಸಹಿತ ಹೊರವಂಟನು ವನಾಂತರಕೆ

ಕೇಳಿದೈ ರಾಜೇಂದ್ರ ಧರ್ಮನೃ
ಪಾಲ ನೈಷಧನತುಳಸಂಪದ
ದೇಳಿಗೆಯನೇನೆಂಬೆ ಸಪ್ತದ್ವೀಪದವನಿಪರ
ಮೌಳಿಗಳು ನೃಪನಂಘ್ರಿಕಮಲವ
ನೋಲಗಿಸುತಿಹುದವನ ಕೀರ್ತಿ ಚ
ಡಾಳಿಸಿತು ತ್ರೈಜಗವನವನೀಪಾಲ ಕೇಳೆಂದ

ಇಂತೆಸೆದ ಸಂಪತ್ತಿನಲಿ ಭೂ
ಕಾಂತ ನಳಚಕ್ರೇಶನಲಿ ದಮ
ಯಂತಿ ಪಡೆದಳು ಪುತ್ರಕನ ವರಪುತ್ರಿಯೊರ್ವಳನು
ಸಂತಸದೊಳಿರಲಾ ವಿದರ್ಭ ಪು
ರಾಂತರದಿ ನೆರೆದಖಿಳಜನ ಭೂ
ಕಾಂತರೊಡನೈತಂದು ಹೊಕ್ಕರು ತಮ್ಮ ನಗರಿಗಳ

ಸುರಪನಾಗ ವಿದರ್ಭಪುರವನು
ತೆರಳುತಮರಾವತಿಗೆ ದಿಕ್ಪಾ
ಲರು ಸಹಿತ ನಲವಿಂದೆ ದಮಯಂತಿಯ ಚರಿತ್ರೆಯನು
ಹರುಷಮಿಗೆ ಕೊಂಡಾಡುತೈತರು
ತಿರಲು ಮಾರ್ಗದಿ ಕಂಡರಾ ಕಲಿ
ಪುರುಷನನು ಕುಟಿಲಾತ್ಮಕನ ನಿಸ್ಸಾರಹೃದಯನನು

ಕುರುಳು ಜುಂಜುರು ತಲೆಯ ತಗ್ಗಿದ
ಕೊರಳ ಕೆಂಗರಿಗಣ್ಣ ಮೋರೆಯ
ಹರಕುಗಡ್ಡದ ಕೆಂಚುಮೀಸೆಯ ಮಲಿನವಸನದಲಿ
ನೆರೆದ ವೀರ ಕರಾಳಭಟರಿ
ತ್ತೆರದೊಳುಕ್ಕಿನ ತೇರಿನಲಿ ಕಲಿ
ಪುರುಷ ಕಾಣಿಸಿಕೊಂಡನಮರೇಶ್ವರನ ನಸುನಗುತ

ಆರು ನೀ ಜಂಭಾರಿಯೋ ಇವ
ರಾರು ಯಮ ವರುಣಾದ್ಯರೋ ಸಂ
ಚಾರವೆತ್ತಲು ನಿಮಗೆಯೆನಲಮರೇಂದ್ರ ನಸುನಗುತ
ತೋರಹತ್ತದೊಳೆಂದ ನಳನಿಗೆ
ನಾರೆ ದಮಯಂತಿಯನು ಮದುವೆಯ
ಧಾರೆಯೆರೆಯಿಸಿ ಬಂದೆವೆನೆ ಖತಿಗೊಂಡ ಕಲಿರಾಯ

ಅನಿಮಿಷರು ನೀವಧಿಕಬಲರಾ
ವನಿತೆಯನು ಕೈಕೊಳ್ಳಲಾರದೆ
ಜನಪ ನಳನೃಪಗಿತ್ತು ಬಂದಿರಿ ಹರಮಹಾದೇವ
ಎನಗೆ ನೇಮಿಸಿ ಕಳುಹಿ ನಿಮ್ಮಯ
ಮನದ ಬಯಕೆಯ ಸಲಿಸುವೆನು ಕೇ
ಳೆನಲು ಸುರಪತಿ ನಸುನಗುತ ಕಲಿಪುರುಷಗಿಂತೆಂದ

ಲೇಸನಾಡಿದೆ ಕಲಿಪುರುಷ ನಿನ
ಗೀಸು ಪೌರುಷವುಂಟೆ? ನಮಗಿ
ನ್ನಾ ಸರೋರುಹಗಂಧಿಯಲಿ ಮನವಿಲ್ಲ ನಳನೃಪತಿ
ಆ ಸಮಸ್ತನೃಪಾಲರಲಿ ಸ
ದ್ಭೂಷಣನು ಶೌರ್ಯೋನ್ನತನು ಕಮ
ಲಾಸನನಿಗಳವಲ್ಲ ನಿನ್ನಲಿ ಹರಿವುದೇನೆಂದ

ಎನಲು ಖತಿಗೊಂಡೆಂದ ಕೇಳೆಲೆ
ಯನಿಮಿಷಾಧಿಪಯೆನ್ನನರಿಯಾ
ದಿನಪನಿದಿರಲಿ ತಮದ ಹಾವಳಿಯೇ ಮಹಾದೇವ
ಎನಗೆ ಸರಿಯಾರನ್ನು ತಹೆನಾ
ವನಿತೆಯನು ಕುಹಕದಲಿ ನಳಭೂ
ಪನನು ಕೆಡಿಸಿಯೆ ಕಾನನಕೆ ಕಳುಹುವೆನು ನೋಡೆಂದ

ಹರಿ ಹರ ಬ್ರಹ್ಮಾದಿ ದೇವರು
ನರರುರಗ ಸುರ ಯಕ್ಷ ಕಿನ್ನರ
ಗರುಡ ಗಂಧರ್ವಾದಿ ಸುಮನಸರೆಲ್ಲರನು ಬಿಡದೆ
ಹುರುಳಗೆಡಿಸುವೆ ಸಾಕು ನಳಭೂ
ವರನ ಮಾತೇನಿನ್ನು ಲೋಕಾಂ
ತರದೊಳೆದುರಿಲ್ಲೆನಗೆ ನೀವಂತರಿಯಿರೇ ಎಂದ

ನಿಮಗೆ ಪೌರುಷವಿಲ್ಲ ನಳನಾ
ಕ್ರಮಿಸಿಕೊಂಡನು ಸತಿಯ ಪುರುಷಾ
ಧಮರು ನಿಮಗಿನ್ನೇಕೆ ಕೊಡಿ ವಟುವೇಷವನು ನಮಗೆ
ಕಮಲಮುಖಿಯನು ನಿಮಗೆ ಪಟ್ಟದ
ರಮಣಿಯನು ಮಾಡುವೆನುಯೆಂದು
ದ್ಭ್ರಮಿಸಿ ನುಡಿದನು ಗರ್ವದಲಿ ಕಲಿಪರುಷ ಸುರಪತಿಗೆ

೧೦

ಕೇಳಿ ಕಿವಿಮುಚ್ಚಿದರು ಹರಹರ
ಭಾಳಲೋಚನಯೆನುತ ಸಭೆಯಲಿ
ಖೂಳನಾಡಿದ ನುಡಿಗೆ ಸುರಪತಿ ಕನಲಿ ಖತಿಗೊಂಡು
ಬೀಳು ಮಾತುಗಳೇಕೆ ನಿನಗಿದು
ನೀಳಮೇಘಶ್ಯಾಮನಿಗೆ ಸಮ
ಪಾಳಿಯೆನಿಸುವ ನಳನೃಪಗೆ ಎರಡೆಣಿಸುವುದೆಯೆಂದ

೧೧

ಬವಣೆಯೇಕೆ ಹಿಮಾಂಶುಕುಲಸಂ
ಭವನು ಸುಜನಾಧಾರ ನೃಪಕುಲ
ನಿವಹದೊಳು ವಿಖ್ಯಾತ ನಿತ್ಯೋದಾರ ನಿರ್ಮಳನು
ಇವಗೆ ವರವಿತ್ತೆವು ಸದಾ ನೆನೆ
ದವರ ಪಾತಕ ಹರಿವುದಿನ್ನಾ
ಭುವನಪತಿಗೆಣೆಯಾರು ಲೋಕದೊಳೆಂದನಮರೇಂದ್ರ

೧೨

ಹಿಡಿಯೆ ಛಲವನು ಹಿಡಿದ ಬಳಿಕದ
ಬಿಡೆನು ಮತವೆನ್ನಲ್ಲಿ ನಿಷಧನ
ನಡವಿಗಟ್ಟದೆ ಮಾಣೆ ಮಾತಾಡದಿರಿ ನೀವೆನಲು
ಮಿಡುಕಿದರು ಕಡುಪಾಪಿಯಿವ ತಾ
ಬಿಡನೆನುತ ಮನನೊಂದು ಸುರಪತಿ
ತಡೆಯದೈದಿದನಮರಪುರಕವನೀಶ ಕೇಳೆಂದ

೧೩

ಇಳಿದನವನೀತಳಕೆ ಖಳಕುಳ
ತಿಳಕನೆಂದನು ತನ್ನ ಭಟರಿಗೆ
ನಲನೃಪನ ಕಟ್ಟುವಡಸಾಧ್ಯವಿದೆನಗೆಯಾತನಲಿ
ಒಲಿದಿಹಳು ಜಯವಧು ಸುಶೀಲತೆ
ನೆಲಸಿದುದು ದುಶ್ಶೀಲ ದುರ್ಗುಣ
ಬಳಸದರಸನೆನುತ್ತ ಹೊಕ್ಕನು ನಿಷಧಪಟ್ಟಣವ

೧೪

ಮಲ್ಲಿಗೆಯ ವನ ಸಂಪಿಗೆಯ ಬನ
ವೆಲ್ಲ ಕೇತಕಿಕುಸುಮಮಯ ಮೆಳೆ
ಯೆಲ್ಲ ರುದ್ರಾಕ್ಷಿಗಳು ಸರಸೀರುಹದ ಕೊಳಗಳವು
ಬೆಲ್ಲವತ್ತಗಳಿಕ್ಷುದ್ರಾಕ್ಷಿಗ
ಳೆಲ್ಲ ಖರ್ಜೂರಾದಿ ವಸ್ತುಗ
ಳಲ್ಲದಿಲ್ಲ ವೃಥಾ ನೆಲನಿಲ್ಲ ನಳನ ರಾಜ್ಯದಲಿ

೧೫

ಇಲ್ಲವೆನ್ನರು ಬೇಡಿದರೆ ಬಿಡ
ರಲ್ಲಿ ಪಾಡಿನ ಪಂಥಗಳ ನುಡಿ
ಯಿಲ್ಲವನೃತವನಾಡರಗ್ಗದ ಸತ್ಯನಿರ್ಮಳರು
ಎಲ್ಲರೊಳಗತಿಹಿತರು ಕ್ರೋಧಗ
ಳಿಲ್ಲದಿಹ ಸದ್ಧರ್ಮಜೀವಿಗ
ಳಲ್ಲಿ ಮೆರೆದರು ಸುಜನರಾ ನಳನೃಪನ ರಾಜ್ಯದಲಿ

೧೬

ಪತಿಯೆಡೆಗೆ ವಂಚಿಸರು ಸತಿಯರು
ಸುತರು ಪಿತೃಗಳ ನುಡಿಗಳನು ತಾ
ವತಿಗಳೆಯರಾಚಾರ ವರ್ಣಾಶ್ರಮದ ಧರ್ಮದಲಿ
ಮತಿಯುತರು ಹರಿಭಕ್ತಿಭಾವ
ವ್ರತನಿಯಮನಿಷ್ಠೆಯಲಿ ಜನಸ
ಮ್ಮತದೊಳೊಸೆದೊಪ್ಪುವರು ನೈಷಧನೃಪನ ರಾಜ್ಯದಲಿ

೧೭

ಅಲ್ಲಿ ತಿರುಗಿದ ಬೀದಿಬೀದಿಗ
ಳಲ್ಲಿ ಪುರಜನವರಿಯದಂತಿರ
ಲಲ್ಲಿ ಮಾಯಾರೂಪಿನಿಂದ ಪಿಶಾಚನಂದದಲಿ
ಸಲ್ಲಲಿತರಹ ವಿಷ್ಣುಭಕ್ತರಿ
ಗೆಲ್ಲ ನಯವಿದನಾಗಿ ಕುಜನರ
ನೆಲ್ಲ ಕಾಡುತ ಬಂದನರಮನೆಗಾಗಿ ಕಲಿರಾಯ

೧೮

ಮುರಿದು ನೋಡಿದನಲ್ಲಿ ತೆಂಗಿನ
ಮರಗಳುನ್ನತ ವಿವಿಧವೃಕ್ಷದ
ಹೊರಿಗೆಯಲಿ ಕಣ್ಗೆಸೆವ ನಗರೋದ್ಯಾನವೀದಿಯಲಿ
ಉರುತರದೊಳಿಹ ಅರ್ಕಪತ್ರದ
ತರುವಿನಗ್ರದೊಳಿರ್ದ ಬಹುದಿನ
ವರಸ ಕೇಳ್ ಕಲಿಪುರುಷನಿತ್ತಲು ರಾಜಭವನದಲಿ

೧೯

ಕರೆಸಿದನು ನಳನೃಪತಿ ಮುನಿಮು
ಖ್ಯರನು ಭೂಸುರವರ್ಗವನು ಸ
ತ್ಕರಿಸಿ ಜಪತಪಹೋಮಯಜ್ಞಾದಿಗಳನನುಗೊಳಿಸಿ
ಸುರರ ಸಂತರ್ಪಣೆಯೊಳಿರುತಿಹ
ನರಸನನುದಿನ ಪೂರ್ವಜನ್ಮಾಂ
ತರದ ಫಲವದನರಿಯೆ ಬಂದುದು ಕಾಲಗತಿ ನೃಪಗೆ

೨೦

ಒಂದು ದಿವಸದೊಳಾಗ ನೃಪನಿಗೆ
ಬಂದುದಲ್ಪಾಚಮನಕಾಲದೊ
ಳಂದು ಶುದ್ಧಾಚಮನವಿಲ್ಲದೆ ನಿಂದು ನೀರ್ಗುಡಿಯೆ
ಇಂದು ತನಗಿದೆ ಸಮಯವೆಂದಾ
ನಂದದಲಿ ಕಲಿಪುರುಷ ರಾಯನ
ಸಂಧಿಸಿದ ವಿಧಿವಶವ ತಪ್ಪಿಸಲಾರ ಹವಣೆಂದ

೨೧

ಕಪಟಭೂಸುರವೇಷದಲಿ ನಿ
ಷ್ಕಪಟ ನಳಭೂವರನ ಕೆಡಿಸುವ
ಯುಪಮೆಯನು ತಾ ನೆಗಳಿ ಬಂದನು ಪುಷ್ಕರನ ಹೊರಗೆ
ನಿಪುಣನೆಂದನು ನಿನಗೆ ನಳಭೂ
ಮಿಪನು ಸಖನೆನೆ ಕೇಳಿ ಬಂದಿಹೆ
ನಪಯಶಕೆ ಹೆದರದಿರು ನಿನಗಹುದಖಿಳಸಾಮ್ರಾಜ್ಯ

೨೨

ಬಲ್ಲೆಯಾ ನೀನೆನ್ನ ಲೋಕಕೆ
ಬಲ್ಲಿದನು ತಾ ಕಲಿಪುರುಷ ನಳ
ನಲ್ಲಿ ದ್ಯೂತವನಾಡಿ ಗೆಲಿಸುವೆ ನಿನ್ನ ನೆತ್ತದಲಿ
ಒಲ್ಲೆನೆನದಿರು ಸಕಲರಾಜ್ಯದ
ವಲ್ಲಭನ ಮಾಡುವೆನು ನಡೆ ಹುಸಿ
ಯಿಲ್ಲ ನಿಷಧನ ಕಿತ್ತು ಬಿಸುಡುವೆ ನಂಬು ನೀನೆಂದ

೨೩

ನಂಬಿದನು ಲೇಸಾಗಿ ಭಾಷೆಯ
ನಿಂಬುಗೊಂಡುದು ಹೃದಯ ಪುಷ್ಕರ
ನೆಂಬ ಖಳ ಸಂತೋಷದಲಿ ಕಲಿಪುರುಷನೊಡಗೊಂಡು
ಅಂಬುಜಾಕ್ಷನ ಕಳೆಗೆ ತಾ ಪ್ರತಿ
ಬಿಂಬನೆನಿಸುವ ನರನ ಬಳಿಗತಿ
ಸಂಭ್ರಮದೊಳೈತಂದರಿಬ್ಬರು ರಾಯನೋಲಗಕೆ

೨೪

ಮಿಸುನಿ ರತ್ನಪ್ರಭೆಗಳಲಿ ರಂ
ಜಿಸುವ ಮಂಟಪದೊಳಗೆ ರಾಜ
ಪ್ರಸರಸಹಿತವನೀಶನಿದ್ದನು ಸಿಂಹಪೀಠದಲಿ
ಶಶಿಮುಖಿಯರೆಡಬಲದಿ ಕೈವಾ
ರಿಸುತ ಸಿತಚಾಮರವ ಚಿಮ್ಮಲು
ನಸುನಗುತ ಕೈ ಮುಗಿದು ಪುಷ್ಕರನೆಂದನಾ ನಳಗೆ

೨೫

ಅರಸ ಕೇಳೀ ವಿಪ್ರನತಿ ಭಾ
ಸುರ ಸುತೇಜದೊಳೆಸೆವ ನೆತ್ತವ
ನೆರಡ ಕಾಣಿಕೆಗೊಟ್ಟ ನನಗಿದರಲ್ಲಿ ಮನವಾಯ್ತು
ಹರವು ಹಾಸಂಗಿಗಳನಾಡುವೆ
ವಿರದೆ ಸೋತವನಾವನಾಗಲಿ
ಧರೆಯನುಳಿದು ವನಾಂತರಕೆ ತೆರಳುವುದು ಸತಿಸಹಿತ

೨೬

ಧರಣಿಪತಿ ನಿನಗಿನಿತು ಚಿತ್ತಕೆ
ಹರುಷವಾಗಿರಲಿನ್ನು ಮನದಲಿ
ಕೊರತೆದೋರಲು ಮಾಣುಯಿದು ಪಾರ್ಥಿವರ ಪಂಥ ಕಣ
ಧುರಕೆ ಬೇಂಟೆಗೆ ಜೂಜಿಗೆಂದಡೆ
ಕರೆದಡೋಸರಿಸುವುದು ನೀತಿಯೆ
ನಿರುತವಿದು ಚಿತ್ತೈಸುಯೆಂದನು ನೃಪಗೆ ಕೈಮುಗಿದು

೨೭

ಮೇದಿನೀಪತಿ ಕೇಳು ಸಜ್ಜನ
ಸಾಧು ಬಲ್ಲನೆ ನಳನು ಹೃದಯವ
ನಾ ದುರಾತ್ಮನ ನುಡಿಯ ಕೈಕೊಂಡಾಡಿದನು ನೃಪತಿ
ಭೇದದಲಿ ಕಲಿಪುರುಷ ಮಾಯೋ
ಪಾಧಿಯಲಿ ಪುಷ್ಕರನ ಜೂಜಿನ
ವಾದದಿಂದರೆಗಳಿಗೆಯಲಿ ಗೆಲಿಸಿದನು ವಸ್ತುಗಳ

೨೮

ದುಗನು ಪಂಚಗ ಬಾರವೆರಡಿ
ತ್ತಿಗೆಯ ಬೇಡಿದಡಲ್ಲಿ ಬೀಳ್ವುದು
ವಿಗಡ ಪುಷ್ಕರನೃಪನು ಗೆಲಿದನು ಹಲಗೆಯೊಂದರಲಿ
ಬಗೆಬಗೆಯ ರತ್ನಗಳ ಧನಧಾ
ನ್ಯಗಳ ಗಜರಥತುರಗ ಮೊದಲಾ
ದಗಣಿತ ಸುವಸ್ತುಗಳ ಸೋತನು ನೃಪತಿ ಪುಷ್ಕರಗೆ

೨೯

ಆಡಿದನು ಜೂಜಿನಲಿ ನೃಪ ಹೋ
ಗಾಡಿದನು ರಾಜ್ಯವನು ಕೋಶವ
ಕೇಡುಗರ ಕೈ ಮೇಳವಿಸಿದುದು ದೈವಗತಿಯಿಂದ
ಬಾಡಿತರಸನ ವದನ ಸಭೆಯಲಿ
ನೋಡಿದರು ಸಜ್ಜನರು ಮರುಗಿದ
ರಾಡಲೇನದನರಸ ಸೋತನು ವಿಧಿಯ ಘಟನೆಯಲಿ

೩೦

ತೀರಿತಿನ್ನೇನವನಿಪತಿ ಭಂ
ಡಾರವಸ್ತು ಸುವಸ್ತುವೆಲ್ಲವು
ಸೇರಿತೆನಗಿಂದಿನಲಿ ಪಣವೇನಿನ್ನು ಪೇಳೆನಲು
ಭೂರಮಣ ಚಿಂತಿಸಿದ ಮನದಲಿ
ನಾರಿಯಳನೊಡ್ಡುವೆನು ಸೋತಿಹ
ಧಾರಿಣಿಯ ನೆರೆ ಗೆಲುವೆನೆನ್ನುತ ತನ್ನ ಮನದೊಳಗೆ

೩೧

ಅರಸನಾಪ್ತಪುರೋಹಿತನು ಮನ
ಹರುಷವಿಳಿದೆಯ್ತಂದನಂತಃ
ಪುರವ ಹೊಕ್ಕನು ರಾಜವದನೆಯ ಸಭೆಗೆ ತಾ ಬಂದು
ತರುಣಿಯರ ಮೇಳದಲಿ ಶೋಭಿಪ
ಪರಮರತ್ನದ ಪೀಠದಲಿ ತಾ
ಹರುಷಮಿಗೆ ರಂಜಿಸುವ ಸತಿಯಳ ಕಂಡು ಕೈ ಮುಗಿದು

೩೨

ತಾಯೆ ಬಿನ್ನಹವಿಂದು ನಿಮ್ಮಯ
ರಾಯ ಸೋತನು ಜೂಜಿನಲಿ ನಿ
ರ್ದಾಯದಲಿ ಪುಷ್ಕರನು ಗೆಲಿದನು ಸಕಲರಾಜ್ಯವನು
ನೋಯಲಾಗದು ಚಿತ್ತದಲಿ ನೆರೆ
ಬೀಯವಾದುದು ಸಿರಿಯುಯಿನ್ನಿದ
ರಾಯತವ ನೀವ್ ಬಲ್ಲಿರೆಂದನು ವಿಪ್ರ ಕೈಮುಗಿದು

೩೩

ಕಮಲವನದಲಿ ಮಂಜು ಸುರಿದಾ
ಕ್ರಮದ ಬಗೆಯಲಿ ಸತಿಯಳಿಗೆ ಮುಖ
ಕಮಲ ಬಾಡಿತು ನುಡಿಯ ಕೇಳುತ ಮನದ ಚಿಂತೆಯಲಿ
ಕಮಲನಾಭನ ಕರುಣಕವಚವು
ಸಮೆದರಾರೇಗುವರು ಹರಹರ
ಕುಮತಿ ಪುಷ್ಕರನಿಂತು ಮುನಿದನೆಯೆನುತ ಮರುಗಿದಳು

೩೪

ಕಮಲಮುಖಿ ನಳನೃಪಗೆ ರಾಜ್ಯ
ಭ್ರಮಣವಾಯಿತೆಯೆನುತ ಸತಿ ಭೂ
ರಮಣನೆಡೆಗೈತದು ಕಡಳು ಕಾಂತನಿಂಗಿತವ
ತಮದ ರಾಹುಗ್ರಹವು ಸೋಂಕಿದ
ದ್ಯುಮಣಿಯಂತಿರೆ ಕಂಡು ಧೈರ್ಯದಿ
ಕಮಲಮುಖಿ ಕೈಮುಗಿದು ಬಿನ್ನೈಸಿದಳು ನಿಜಪತಿಗೆ

೩೫

ಶಶಿಕುಲಾಂಬುಧಿಚಂದ್ರ ರಿಪುನೃಪ
ನಿಶಿತ ಭಾಸ್ಕರತೇಜ ನಿಮಗೀ
ವ್ಯಸನ ತೋರಿತೆ ಜೂಜಿನಲಿ ಶಿವಶಿವ ಮಹಾದೇವ
ಬಿಸರುಹಾಕ್ಷನ ಕರುಣವಿದು ಸೋ
ಲಿಸಿದನೇ ಪುಷ್ಕರನುಯಿದು ವಿಧಿ
ವಶವಲಾ ತಪ್ಪೇನು ಸಾಕಿನ್ನೆದಳಿಂದುಮುಖಿ

೩೬

ಲಲನೆಯಾಡಿದ ನುಡಿಗೆ ಸಭೆಯವ
ರಳಲಿ ಬೈದರು ಪುಷ್ಕರನ ಕೇ
ಳೆಲವೊ ಬಾಹಿರ ಸಾಕು ತೆಗೆ ಚಾರಿಗಳನೆಂದೆನುತೆ
ಹೊಲಬುದಪ್ಪಿದ ಹುಲ್ಲೆ ಬೇಡನ
ಬಲೆಗೆ ಬಿದ್ದಂತಾಗೆ ನಳನೃಪ
ತಿಲಕನೆಂದನು ಮನದ ದುಗುಡದಿ ತನ್ನ ನಿಜಸತಿಗೆ

೩೭

ತರುಣಿ ಕೇಳಪಜಯದ ನಾರಿಯ
ಸೆರಗ ಹಿಡಿದೆನು ರಾಜ್ಯಲಕ್ಷ್ಮಿಯ
ಪರರಿಗಿತ್ತುಳುಹಿದೆನು ದೇಹವನಿದಕೆಯಂಜದಿರು
ತರುಣಿ ನೀ ಕಾನನದಿ ಗಿರಿಗ
ಹ್ವರಗಳಲಿ ಬಿಡದೆಂತು ತೊಳಲುವೆ
ಹರಹರಾಯೆಂದೆನುತ ಸತಿಯನು ನೋಡಿ ಬಿಸುಸುಯ್ದ

೩೮

ಚಿತ್ತವಿಸು ಶಶಿಕುಲಶಿರೋಮಣಿ
ಹೆತ್ತವರು ಸತಿಸುತರು ಮನೆ ಮನೆ
ವಾರ್ತೆ ಬಾಂಧವ ಧರಣಿಪರ ಭೋಗೈಕಸಂಪದವು
ನಿತ್ಯವಲ್ಲ ಶರೀರಸುಖಗಳ
ನಿತ್ಯವೆಂಬುದ ತಿಳಿಯುತೀ ನಿಜ
ಸತ್ಯವನು ಕೈಹಿಡಿದು ಸಲಹೆಂದಳು ಸರೋಜಮುಖಿ

೩೯

ಚಿಂತೆ ಬೇಡೆಂದರಸನನು ಸತಿ
ಸಂತವಿಟ್ಟಳು ನೀತಿಯಲಿ ದಮ
ಯಂತಿ ನಿಜಮಂದಿರಕೆ ಸರಿಯಲು ಕಂಡು ಪುಷ್ಕರನು
ಇಂತು ಜೂಜಲಿ ಸೋತು ತಿರಿಗಿ
ನ್ನೆಂತು ರಾಜ್ಯದಿ ನಿಲುವಿರೆನೆ ಭೂ
ಕಾಂತ ವನವಾಸಕ್ಕೆ ನಿಜಸತಿಸಹಿತಲನುವಾದ

೪೦

ತಳಿತ ಮಣಿಭೂಷಣಗಳೆಲ್ಲವ
ಕಳಚಿ ಬಿಸುಟನು ಗುರುವಿನಂಘ್ರಿಗೆ
ನಳಿನಮುಖಿಸಹಿತೆರಗಿ ಹೊರವಂಟನು ನಿಜಾಲಯವ
ಬಳಿಕಲೈದಿದರಖಿಳಪುರಜನ
ಜಲದ ಕಣ್ಗಳ ಧಾರೆಯಲಿ ಗಾ
ವಳಿ ಮಸಗಿ ಮಿಗೆ ಶೋಕರವ ತುಂಬಿದುದು ಪಟ್ಟಣವ

೪೧

ಸಾಲುಕಂಬನಿಗಳಲಿ ನೆನೆದರು
ಊಳಿಗದ ಪರಿಜನರು ಮಂತ್ರಿಗ
ಳೋಲಗದ ಸಾಮಂತಸಚಿವರು ಮಲ್ಲಗಾಯಕರು
ಬಾಲೆಯರು ಬಾಲಕರು ಪುರಜನ
ಜಾಲವೆಲ್ಲವು ಶೋಕದಲಿ ಕ್ಷಿತಿ
ಪಾಲನರಸಿಯ ಕಂಡು ಮರುಗಿತು ಮಂದಿ ಗೋಳಿಡುತ

೪೨

ಮನದಿ ಮುನ್ನವೆ ತಿಳಿದು ನೃಪಸತಿ
ತನಯರನು ರಥದೊಳಗೆ ತಂದೆಯ
ಮನೆಗೆ ಕಳುಹಿದಳಾಪ್ತರೊಡನೆ ವಿದರ್ಭಪಟ್ಟಣಕೆ
ಜನಪ ಕೇಳಿತ್ತಲು ಮಹಾರೋ
ದನದಿ ಪಟ್ಟಣವೆಲ್ಲ ಮರುಗಲು
ವನಿತೆ ಪತಿಯೊಡನೈದಿದಳು ನಿಜಭಾವಶುದ್ಧಿಯಲಿ

೪೩

ಏನನೆಂಬೆನು ಜೀಯ ಲೋಕದ
ಮಾನಿನಿಯೆ ದಮಯಂತಿ ಸತ್ಯ
ಜ್ಞಾನಿಯಲ್ಲಾ ಸತಿಯರಿಗೆ ಗುರು ಪತಿವ್ರತಾಗುಣದಿ
ಮೌನದಲಿ ಪತಿಯಂಘ್ರಿಕಮಲ
ಧ್ಯಾನದಲಿ ಮನಸಂದು ಘನಸತಿ
ಕಾನನಕೆ ಗಮನಿಸಿದಳು ವರಪುರದರಸನಾಜ್ಞೆಯಲಿ

೪೪