EN | KA

II

Naḷacaritre

ಹಲವು ನಯನೀತಿಯಲಿ ಹಂಸೆಯ
ಕಳುಹಲಂದಿನ ರಾಯಭಾರದಿ
ನಳನೃಪಗೆ ಸತಿಯಾದಳಾ ದಮಯಂತಿ ಮನವೊಲಿದು

ಕೇಳು ಕುಂತೀತನಯ ಭೀಮನೃ
ಪಾಲತನುಜೆಗೆ ವಿರಹ ಬಲಿದು ವಿ
ಶಾಲವಾಗಿರಲಿತ್ತ ಕೇಳೈ ನಿಷಧನಗರಿಯನು
ಪಾಲಿಸುವ ನಳಚಕ್ರವರ್ತಿಯು
ಮೇಲೆನಿಪ ಸಭೆಯಲ್ಲಿ ರತ್ನದ
ಸಾಲುಹೊಳಹಿನ ಸಿಂಹಪೀಠದೊಳೆಸೆದು ಕುಳ್ಳಿರ್ದ

ಗೌಳ ವಂಗ ಕಳಿಂಗ ಕುಂತಳ
ಚೋಳ ಬರ್ಬರ ಸಿಂಧು ಕೇರಳ
ಲಾಳ ಮಗಧ ವರಾಳ ಸೌರಾಷ್ಟ್ರಾದಿ ಭೂಮಿಪರ
ಬಾಳೆಯರ ಮಂತ್ರಿಗಳ ವೀರಭ
ಟಾಳಿ ನಟ ಗಾಯಕರ ಕವಿಗಳ
ಜಾಲ ಸಂದೋಹದಲಿ ಮೆರೆದುದು ನೃಪತಿಯಾಸ್ಥಾನ

ಆ ಸಮಯದಲಿ ಬಂದನಲ್ಲಿಗೆ
ದೇಶಯಾತ್ರಿಕ ಭೂಸುರನೊಳವ
ನೀಶ ಕೇಳಿದನಿಳೆಯೊಳೇನುಂಟತಿ ವಿಚಿತ್ರವೆನೆ
ಭೂಸುರೋತ್ತಮನೆಂದನೆಲೆ ಧರ
ಣೀಶ ಕೇಳು ವಿದರ್ಭನಗರದೊ
ಳೇಸು ಪುಣ್ಯೋದಯದಿ ಪಡೆದನೊ ಭೀಮನೃಪ ಸುತೆಯ

ಅವಳ ರೂಪಗುಣಾತಿಶಯಗಳ
ನೆವಗೆ ಬಣ್ಣಿಸಲಳವೆ ಕೇಳಾ
ಯುವತಿ ಲೋಕದ ಸತಿಯ ಬಗೆಯಂತಲ್ಲ ಭಾವಿಸಲು
ಪ್ರವಿಮಲಾಕಾರದಲಿ ಮೃದುತರ
ಸವಿನುಡಿಯ ಸಂಭಾಷಣೆಗಳಲಿ
ಭುವನದೊಳು ನಾಕಾಣೆ ದಮಯಂತಿಗೆ ಸಮಾನರನು

ಮುರಹರನ ನಿಜಸೊಸೆಯ ರೂಪಂ
ತಿರಲಿ ಚಂದ್ರನ ಮಗಳ ಚೆಲುವಂ
ತಿರಲಿ ಮೈನಾಕನ ಸಹೋದರಿಯಂದವಂತಿರಲಿ
ಶರಧಿತನುಜೆಯ ಸೌಂದರಿಯವನು
ಮರಸಿತೆಂಬುದು ಲೋಕದೊಳಗಾ
ಸರಸಿಜಾಕ್ಷಿಯ ಬಗೆಗೆ ಸರಿಯಿಲ್ಲರಸ ಕೇಳೆಂದ

ಮಿಸುನಿಯೋಲೆಯ ಢಾಳ ಕದಪಿನೊ
ಳೆಸೆಯೆ ಮೇಲುದು ಜಾರೆ ಕುಚಭರ
ಕುಸಿಯೆ ನಡುವಲ್ಲಾಡೆ ಮಸಗಿದ ಮಂದಹಾಸದಲಿ
ಎಸೆವ ಸೋರ್ಮುಡಿ ಭಾರದಲಿ ಬಾ
ಗಿಸಿದ ಕೊರಳಿನ ಕೈಯ ವೀಣೆಯ
ಬಿಸರುಹಾಕ್ಷಿಯ ಸೊಬಗ ಬಣ್ಣಿಸಲರಿಯೆ ನಾನೆಂದ

ಹೇಳುತಿರೆ ನುಡಿನುಡಿಗೆ ಮೆಚ್ಚುತ
ಕೇಳಿ ತಲೆದೂಗಿದನು ನೈಷಧ
ನಾಲಿಗಳಿಗೆ ಸರೋಜಮುಖಿ ಗೋಚರಿಸಿದಂತಾಗೆ
ಬಾಲಿಕೆಯ ಮೋಹಿಸಿದ ಪುಷ್ಪಶ
ರಾಳಿಯಲಿ ಮನನೊಂದು ಶಿವ ಶಿವ
ಲೋಲಲೋಚನೆಯೆಂತು ತನಗಹಳೆನುತ ಚಿಂತಿಸಿದ

ವನಿತೆ ಗುಣಗಳೊಳೊಂದನೊಂದನು
ಮನದೊಳಗೆ ಸವಿಮಾಡಿ ತರುಣಿಯ
ನೆನೆದು ಹೊಂಪುಳಿವೋಗಿ ವಿರಹದಿ ಮದನಗೀಡಾಗಿ
ಘನವಿರಹದಲಿ ಕಾಯಕುಂದಿದ
ಜನಪ ನಳನಿರೆ ಬೇಂಟೆಕಾರರ
ಜನನಿವಹದಿಂ ಬಂದರಾ ಸಮಯದಲಿ ವನಚರರು

ಬಂದು ಫಲವಸ್ತುಗಳ ಕಾಣಿಕೆ
ಯಿಂದ ಕೈಮುಗಿದರಸ ಮೃಗಘನ
ವಿಂದು ಬೇಂಟೆಗೆ ಗಮಿಸಬೇಕೆನೆ ನೃಪತಿ ನಸುನಗುತ
ಇಂದು ವಿರಹವ ಕಳೆವಡಿದು ಲೇ
ಸೆಂದು ಶಬರರ ಕಳುಹಿಯೋಲಗ
ದಿಂದಲರಮನೆಗೆಯ್ದಲಸ್ತಾಂಬುಧಿಯೊಳಿನನಿಳಿದ

ನಳಿನಸಖನುದಯದಲಿ ನಳನೃಪ
ತಿಲಕ ಕರೆಸಿದ ಸಕಳದಳವನು
ಹೊಳೆವ ಖಡ್ಗಕಠಾರಿ ಮೊದಲಾದಖಿಳ ಕೈದುಗಳ
ಬಲುಭಟರು ಬೇಂಟೆಯಲಿ ನಾನಾ
ಬಲೆಗಳಂಟಿನ ಕೋಲು ಕಣ್ಣಿಯ
ಚಲಯುತರು ಸಂದಣಿಸಿ ಮೆರೆದುದು ಪುರದ ಬಾಹೆಯಲಿ

೧೦

ಅರಸ ಕೇಳ್ ಶಶಿಕುಲಶಿರೋಮಣಿ
ಧರಿಸಿದನು ನವರತುನಮಯದಾ
ಭರಣಗಳ ದಿವ್ಯಾಂಬರಾದಿ ಸುಗಂಧಲೇಪದಲಿ
ತರಿಸಿಯೇರಿದ ವಾಯುವೇಗದ
ತುರಗವನು ಸಂದಣಿಸಿ ಮೋಹರ
ತೆರಳಿತಗಣಿತ ವಾದ್ಯದಲಿ ನೆಲ ಬಿರಿಯಲೈತಂದ

೧೧

ಏನ ಹೇಳುವೆನರಸ ಹೊಕ್ಕರು
ಕಾನನವ ಬಳಸಿದರು ಮೃಗತತಿ
ಯಾನಲಾಪುದೆ ತೆಗೆದು ಹಾಯ್ದುದು ಭಟರ ಘಲ್ಲಣೆಗೆ
ಆನೆಗಳ ಕೆಡಹಿದರು ಬಲಸಂ
ಧಾನದಲಿ ಹುಲಿ ಕರಡಿ ಮುಸು ಮೊಲ
ವಾನರಾದಿ ಸಮಸ್ತ ಮೃಗಗಳ ತರುಬಿ ಕೆಡಹಿದರು

೧೨

ಹತ್ತಿ ತದ್ಗಿರಿಶಿಖರವನು ಮರ
ಮೊತ್ತದಲಿ ಬಲೆಗಳನು ಹಾಯ್ಕಿದ
ರೊತ್ತಿ ಸೋಹಿದರೊಂದು ಘನತರ ಸಿಹವಬ್ಬರಿಸಿ
ಹೊತ್ತ ಕೋಪದಿ ಸೈನ್ಯವನು ಮುರಿ
ದೊತ್ತಿ ಬರುತಿರೆ ಕಂಡು ನೃಪ ಬೆಂ
ಬತ್ತಿ ಕಡಿದನು ಮೃಗಪತಿಯ ವನವೆಲ್ಲ ಬೆರಗಾಗೆ

೧೩

ನಿಲಿಸಿ ಬೇಂಟೆಯನಲ್ಲಿ ಬಳಲಿದ
ಬಲಸಮೇತದಿ ಬಂದು ತತ್ಪುರ
ವಳಯದುದ್ಯಾನವನು ಹೊಕ್ಕನು ಬಲಿದ ವಿರಹದಲಿ
ನಲವು ಹಿಂಗಿದ ಮನದ ದುಗುಡದೊ
ಳಿಳಿದು ತೊಳೆದನು ಜಾನುಜಂಘೆಯ
ಕೊಳದಿ ಪರಿಹೃತನಾಗಿ ಸಂಚರಿಸಿದನು ವನದೊಳಗೆ

೧೪

ಆ ಕೊಳದ ತೀರದಲಿ ತರುಗಳ
ನೇಕವದರೊಳಗೊಂದು ಠಾವಿನೊ
ಳೇಕವೃಕ್ಷದ ನೆಳಲಿನಲಿ ನವಕುಸುಮದಿಕ್ಕೆಯಲಿ
ಆ ಕಮಲಜನತುರಗ ನಿದ್ರಾ
ವ್ಯಾಕುಲದಿ ಮಲಗಿರಲು ಕಡ ಶು
ಭಾಕರೋನ್ನತ ಶುಭ್ರತೇಜದ ರಾಜಹಂಸವನು

೧೫

ಅರುಣಮಯದಾನನದ ಪದಯುಗ
ಗರಿಗಳುನ್ನತಧವಳ ದೇಹದ
ಪರಮತೇಜದೊಳೆಸೆವ ಹಂಸೆಯ ಕಂಡು ಬೆರಗಾಗಿ
ಹರಹರಾ! ಇದರಾಯತವ ಮುರ
ಹರನು ತಾನೇ ಬಲ್ಲನೆನುತ
ಕ್ಕರದಿ ಮೆಲ್ಲನೆ ಕರವ ನೀಡುತ ಪಿಡಿದ ಹಂಸವನು

೧೬

ಒದರಿ ಕುಣಿಯಲು ಹಸ್ತದೊಳಗದ
ಕದಲದಂತಿರೆ ಪಿಡಿಯಲರಸನ
ವದನಕಮಲವ ನೋಡಿ ಹೆದರಿತು ಬಹಳ ಭೀತಿಯಲಿ
ಹೃದಯ ಕರಗುವ ಮಾತನೆಂದುದು
ಮದಕರಿಗೆ ನೊರಜಂತರವೆ ಕೈ
ಸದರದವರನು ಕೊಲುವುದೇನರಿದೆಂದುದಾ ಪಕ್ಷಿ

೧೭

ಕರಿಗಳನು ಮುರಿದಿಡುವ ಸಿಂಹಕೆ
ನರಿಗಳಿದಿರೇ ತಾನು ನಿನಗಂ
ತರವೆ ಸಾಕಂತಿರಲಿ ಕಂಡವರೆಲ್ಲ ಕಡುನಗರೆ
ಅರಿಭಯಂಕರ ಶತ್ರುಗಳ ಸಂ
ಹರಿಸುವುದು ನೃಪನೀತಿ ನಿನಗಿದು
ತರವೆ ಬಿಡು ಪರಹಿಂಸೆ ದೋಷವಿದೆಂದುದಾ ಪಕ್ಷಿ

೧೮

ಬಡಬಗೌತಣವಿಕ್ಕುವಡೆಯೊ
ಕ್ಕುಡಿತೆ ಹಾಲೇ ಮಂಜು ಸುರಿಯ
ಲ್ಕೊಡನೆ ಕೆರೆ ತುಂಬುವುದೆ ನೃಪ ನೀನೆನ್ನ ಭುಂಜಿಸಲು
ಒಡಲಿಗಾಪ್ಯಾಯನವೆ ಕೇಳೆಲೆ
ಪೊಡವಿಪತಿ ಬಿಡು ನನ್ನ ಮನೆಯಲಿ
ಮಡದಿ ಸುತರುಮ್ಮಳವ ನೋಡೆಂದೊರಲಿತಾ ಪಕ್ಷಿ

೧೯

ಮರನ ಹುತ್ತವನೇರಿದರ ಸಂ
ಗರದಿ ದೈನ್ಯಂಬಡುವರಾಯುಧ
ಮುರಿದ ಬರಿಗೈಯವರ ನೀರೊಳು ಹೊಕ್ಕು ನಿಂದವರ
ತರುಣಿಯರ ಮರೆಗೊಂಡವರ ನಿ
ಬ್ಬರದಿ ಮುರಿದೋಡುವರ ನಿದ್ರಾ
ಭರದೊಳಿರ್ದರ ಕೊಲುವುದುಚಿತವೆಯೆಂದುದಾ ಪಕ್ಷಿ

೨೦

ನುಡಿಗೆ ನಾಚಿದನರಸ ಹಂಸದ
ನಡವಳಿಗೆ ಮೆಚ್ಚಿದನು ನಿನ್ನನು
ಹಿಡಿದು ಕೊಲುವವನಲ್ಲ ನಿನ್ನಾಲಯಕೆ ಹೋಗೆಂದು
ಬಿಡಲು ರೆಕ್ಕೆಯ ಕೊಡಹಿ ಹಾರಿತು
ವೊಡನೆ ಮರಳಿತು ಧರೆಗೆ ರಾಯನ
ಕಡೆಗೆ ಮಂಡಿಸಿ ಕುಳಿತು ನುಡಿದುದು ನೃಪಗೆ ವಿನಯದಲಿ

೨೧

ಭೂರಮಣ ಕೇಳಸುವ ಕಾಯ್ದುಪ
ಕಾರಮಾಡಿದೆ ನೀನು ನಿನಗುಪ
ಕಾರಮಾಡುವೆನೆನಲದೇನೆಂದರಸ ಬೆಸಗೊಂಡ
ಸಾರಹೃದಯನೆ ಚಿತ್ತವಿಸು ವಿ
ಸ್ತಾರದಿಂದರುಹುವೆನು ಭುವನದೊ
ಳಾರಿಗುಂಟೇ ಪರಮಸುಕೃತಗಳೆಂದುದಾ ಪಕ್ಷಿ

೨೨

ಅರಸ ಕೇಳತಿದೂರದಲಿ ಸುರ
ಪುರವ ಪೋಲ್ವ ವಿದರ್ಭಪಟ್ಟಣ
ದರಸು ಭೀಮನೃಪಾಲನಾತನ ತನುಜೆ ದಮಯಂತಿ
ಪರಮ ಪುಣ್ಯಾಂಗನೆ ಮಹಾಸುಂ
ದರಿ ನಿಪುಣೆ ಗಜಗಮನೆ ನಯಗುಣ
ಭರಿತೆ ಸೊಬಗಿನ ಸೋನೆ ತಾನಿಹಳಲ್ಲಿ ವನಜಾಕ್ಷಿ

೨೩

ಪೊಗಳಲಳವೇ ಸತಿಯ ಚೆಲುವಿನ
ಬಗೆಯ ಭಾವಿಸಿ ನೋಡಲತಿ ಸೋ
ಜಿಗವು ನೆರೆ ದಮಯಂತಿ ಯೌವನರೂಪರೇಖೆಯಲಿ
ನಗೆಮೊಗದ ಪೊಂಬೊಗರ ಮಿಂಚಿನ
ಬೊಗಸೆಗಂಗಳ ಸೆಳೆನಡುವ ಸೆ
ಳ್ಳುಗುರ ಬೆಡಗಿನ ಕಾಂತೆ ರಂಜಿಸುತಿರ್ಪಳಾ ಪುರದಿ

೨೪

ಕ್ಷಿತಿಯೊಳಿಹ ಸತಿಯರಲಿಯಮರಾ
ವತಿಯೊಳಿಹ ಪೆಣ್ಗಳಲಿ ಮೇಣಾ
ವಿತಳದಲ್ಲಿಹ ನಾರಿಯರಲ್ಲೀಕ್ಷಿಸಿದಡಾ ಸತಿಗೆ
ಪ್ರತಿಯ ಕಾಣೆನು ರೂಪಿನಲಿ ನೀ
ನತಿ ಚೆಲುವ ನಿನಗವಳು ಪಾಸಟಿ
ಸತಿಗೆ ನೀನೇ ರಮಣನಲ್ಲದೆ ಕಾಣೆನಿತರರನು

೨೫

ಆವಳು ನಿನಗೊಲಿವಂತೆ ಮಾಡುವೆ
ಶಿವನ ಕೃಪೆ ನಿನಗುಂಟು ನಮ್ಮಲಿ
ಸವಡಿನುಡಿಯಿಲ್ಲರಸ ನಂಬುವುದೆನ್ನ ನೀನೆನಲು
ಅವನಿಪತಿ ನಸುನಗುತ ಹಂಸೆಯ
ಸವಿನುಡಿಗೆ ಮನಸೋತು ವಿರಹದ
ತವಕದಲಿ ಹೇವರಿಸಿ ನುಡಿದನು ನೃಪತಿ ಖಗಪತಿಗೆ

೨೬

ಮನಸಿಜನ ಶರಹತಿಗೆ ನೊಂದೆನು
ತನುವ ಸೈರಿಸಲಾರೆನೆನಗಾ
ವನಿತೆಯನು ಸೇರಿಸುತ ಸಲಹೆನ್ನಸುವ ಕರುಣದಲಿ
ಎನಗೆ ನೀನೇ ಪರಮಬಾಂಧವ
ಮನಕೆ ಹರುಷವ ಮಾಡು ನೀನೀ
ಬನಕೆ ಬಹ ಪರಿಯಂತ ತಾನಿಲ್ಲಿಹೆನು ಹೋಗೆಂದ

೨೭

ಕೇಳು ಧರ್ಮಜ ನಳನೃಪಾಲನ
ಬೀಳುಕೊಂಡು ಸರಾಗದಿಂದ ವ
ನಾಲಯವ ಹೊರವಂಟು ತೆರಳಿತು ವಾಯುವೇಗದಲಿ
ಆ ಲತಾಂಗಿಯ ಪತಿಯ ಕೀರ್ತಿ ವಿ
ಶಾಲವಾದದದಲಿ ರಾಜಮ
ರಾಳ ಗಗನಕೆ ಹಾಯ್ದು ಕಂಡಿಳಿತಂದುದಾ ಪುರಕೆ

೨೮

ಕನಕಮಣಿ ನಿರ್ಮಿತದ ಸೌಧದಿ
ಜನನಿಕರ ಸಂದೋಹದಲಿಯುಪ
ವನದ ವೀದಿಗಳೆಸೆದು ಮೆರೆವ ವಿದರ್ಭ ಪಟ್ಟಣಕೆ
ಮನವೊಲಿದು ನಿಜಬಳಗ ಸಹಿತಂ
ಗನೆಯರೋಲಗದಲ್ಲಿ ಮದನನ
ಮೊನೆಯಲಗಿನಲಿ ಬಳಲ್ವ ಸತಿಯನು ಕಂಡುದಾ ಹಂಸೆ

೨೯

ನೀಲಮಣಿಭಿತ್ತಿಗಳ ವಜ್ರದ
ಸಾಲುಗಂಬದ ಪಚ್ಚೆ ಹಲಗೆಯ
ಮೇಲೆ ಮುತ್ತಿನ ಲೋವೆ ಹವಳದಿ ಕಡೆದ ಬೋದಿಗೆಯ
ಸಾಲ ಮಣಿಮಂಟಪದಿ ಮಂಚದ
ಮೇಲೆ ಮಂಡಿಸಿ ನಳನ ಚಿಂತೆಯ
ತಾಳಿದಗನೆ ಸತಿಯರೊಡನಿರೆ ಕಂಡುದಾ ಹಂಸೆ

೩೦

ಪೆರೆನೊಸಲ ಕತ್ತುರಿಯ ತಿಲಕದ
ಕೊರಳ ಮುತ್ತಿನ ಹಾರ ರತ್ನದ
ಬೆರಳ ಮುದ್ರಿಕೆಗಳ ಸುವರ್ಣದ ಕರದ ಕಂಕಣದ
ಪರಿಪರಿಯ ನಿರಿಯುಡಿಗೆಗಳ ನೂ
ಪುರದ ತೊಡರಿನ ದೇಸಿ ಮಿಗೆ ಬಳ
ಸಿರಲು ತರುಣಿಯರದು ಸತಿಯನು ಕಂಡುದಾ ಹಸ

೩೧

ತಳಿತ ಮೇಘದಿ ಹೊಳೆವ ಮಿಂಚಿನ
ಬಳಗವೆನೆ ಹಂಸಗಳು ನಭದಿಂ
ದಿಳೆಗಿಳಿದು ಸತಿಯರ ಸಭಾಮಂಡಲದಿ ಕುಳ್ಳಿರಲು
ನಳಿನಲೋಚನೆ ಕಂಡು ಪಕ್ಷಿಯ
ಲಲನೆಯರ ಮೊಗ ನೋಡಿ ಹಂಸದ
ಚೆಲುವ ಬಣ್ಣಿಸಿ ಹಿಡಿಯಬೇಕೆಂದೆನುತ ಗಮನಿಸಿದಳು

೩೨

ಮೆಲ್ಲಮೆಲ್ಲನೆ ಅಡಿಯಿಡುತ ಕರ
ಪಲ್ಲವವ ಚಾಚಿದಳು ನೂಪುರ
ಘಲ್ಲುಘಲಿರೆನೆ ಅತ್ತಲಿತ್ತಲು ಸಾರುತಾ ಹಂಸೆ
ನಿಲ್ಲದಗೈಸುತ್ತ ಬರಲ
ಲ್ಲಲ್ಲಿ ಎಡರಿತು ಕುಸುಮಮಯ ನವ
ಮಲ್ಲಿಗೆಯ ಬನದಲ್ಲಿ ಹೊಕ್ಕುದು ಹೊದರ ಹೊಸಮೆಳೆಯ

೩೩

ಕೆಳದಿಯರ ಕೆಲಕೊತ್ತಿ ತಾನೇ
ಮೆಳೆಯ ಹೊಕ್ಕಳು ಬಾಗೆ ಸೆಳೆನಡು
ಬಳುಕೆ ಕುಚಭಾರದಲಿ ಮೇಲುದು ಜಾರೆ ಮುಡಿ ಚದರೆ
ಜಲಜಮುಖಿ ಬೆಮರಿಡಲು ಕೊರಳಿನ
ಲಲಿತದೇಕಾವಳಿಗಳಲ್ಲಾ
ಡಲು ಸೆರಗನಳವಡಿಸಿ ನಿಂದಳು ಬಳಲಿ ಬಿಸುಸುಯ್ದು

೩೪

ಎಲೆ ಸರೋರುಹಗಂಧಿ ನೀನೆನ
ಗೊಲಿದು ಮನದಲಿ ಹಿಡಿವೆನೆಂಬೀ
ಛಲವಿದೇತಕೆ ಮಾಣು ನಾವಂಬರದ ಪಕ್ಷಿಗಳು
ನಿಲುಕುವವರಾವಲ್ಲ ಬರಿದೇ
ಬಳಲದಿರು ತಾ ಬಂದ ಪರಿಯನು
ತಿಳುಹುವೆನು ನಿನಗೆಲ್ಲವನು ಕೇಳೆಂದುದಾ ಪಕ್ಷಿ

೩೫

ನಳಿನಮುಖಿ ನಳಚಕ್ರವರ್ತಿಯ
ಬಳಿಯ ವಾಹನವಾಗಿ ತಾನಿಹೆ
ನೊಲಿದು ಸಲಹುವನೆನ್ನ ಪರಮಪ್ರೀತಿವಚನದಲಿ
ಇಳೆಗೆ ನಳಕೂಬರ ಜಯಂತರ
ಚೆಲುವ ಮದನನ ರೂಪರೇಖೆಯ
ಹಳಿವುದಾ ನಳನೃಪನ ನಿಜಸೌಂದರ್ಯದಾಟೋಪ

೩೬

ನಿನ್ನ ರೂಪಿಗೆ ಸಲುವುದೌ ನಳ
ನುನ್ನತದ ಸೌಂದರ್ಯ ಜಗದೊಳ
ಗಿನ್ನು ನಾ ಸರಿಗಾಣೆ ನಿಮಗೀರ್ವರಿಗೆ ಸಮನಹುದು
ಎನ್ನಲಾ ನುಡಿಗೇಳಿ ಹಂಸೆಗೆ
ತನ್ನ ಶಿರವನು ಬಾಗಿ ಗುಣಸಂ
ಪನ್ನೆ ನುಡಿದಳು ನಾಚಿ ನಸುನಗೆಯಿಂದ ವಿನಯದಲಿ

೩೭

ಪರಮಗುಣನಿಧಿ ಪಕ್ಷಿ ಕೇಳ್‍ ಬಾ
ಹಿರನು ಪಾತಕಿ ಮದನನೆಲೆ ನಿ
ಷ್ಠುರದೊಳೆಸೆಯಲು ಪುಷ್ಪಬಾಣದಿ ನೊಂದುದೆನ್ನೊಡಲು
ಕರುಣರಸಧಾರೆಯಲಿ ತಾಪವ
ಪರಿಹರಿಸಬೇಕೆಂದು ನೀನಾ
ಧರಣಿಪತಿ ನಳನೃಪಗೆ ಬಿನ್ನೈಸೆಂದಳಿಂದುಮುಖಿ

೩೮

ಪರರ ದುಃಖವ ಪರಿಹರಿಸಿ ಮಿಗೆ
ಪರರಿಗುಪಕಾರಾರ್ಥವೆಸಗಲು
ಪರಮಪುಣ್ಯವಿದೆಂದು ಪೇಳ್ವರು ಪಿರಿಯರಾದವರು
ಪರಮಬಾಂಧವ ನೀನೆನಗೆ ಸ
ತ್ಕರಿಸು ವಿರಹದಿ ನೊಂದವಳ ಕರ
ಕರೆಗೆ ಗುರಿ ಮಾಡದಿರು ಸಲಹೆಂದಳು ಸರೋಜಮುಖಿ

೩೯

ಬಲಿದ ವಿರಹಾಗ್ನಿಯಲಿ ನೊಂದೆನು
ಬಳಲಿದೆನು ತನು ಬಾಡಿ ತಾಪದಿ
ನಲವು ಹಿಂಗಿತು ಬವಣೆ ಹೆಚ್ಚಿತು ತ್ರಾಣವೆಳದಾಯ್ತು
ಹಲವು ಮಾತೇನಿನ್ನು ನಳನೃಪ
ತಿಲಕನೆನ್ನಯ ಪತಿಯಲಾ ಭೂ
ತಳದ ಪುರುಷರು ಪಿತನ ಸಮ ಕೇಳೆಂದಳಿಂದುಮುಖಿ

೪೦

ಅರಸ ಕೇಳಾ ಹಂಸ ತರುಣಿಯ
ಕರುಣದಳತೆಯ ಕಂಡು ತಾ ಬಂ
ದಿರುವ ಕಾರ್ಯದ ಹದನು ಲೇಸಾಯ್ತೆಂದು ಮನದೊಳಗೆ
ಹರುಷ ಮಿಗೆ ಕೊಂಡಾಡಿ ಸತಿಯನು
ಕರೆದು ನುಡಿದುದು ನಿನಗೆ ನಳಭೂ
ವರನ ಪತಿಯನು ಮಾಳ್ಪೆನಂಜದಿರೆಂದುದಾ ಹಂಸೆ

೪೧

ಅಂತರಂಗದ ಬುದ್ಧಿಯನು ದಮ
ಯಂತಿಗೆಲ್ಲವನರುಹಿ ತರುಣಿಯ
ಸಂತವಿಟ್ಟಲ್ಲಿಂದ ಕಳುಹಿಸಿಕೊಂಡು ಬೇಗದಲಿ
ಮುಂತಳರ್ದು ಮಿಗೆ ತನ್ನ ಬಾಂಧವ
ಸಂತತಿಯನೊಡಗೊಂಡು ನಿಷಧನ
ಚಿಂತೆಯನು ಪರಿಹರಿಸಬೇಕೆಂದೈದಿತಾ ಹಂಸೆ

೪೨

ಆಗ ನಳಭೂವರನ ದಕ್ಷಿಣ
ಭಾಗ ಭುಜನಯನಂಗಳದುರಿದು
ವಾಗ ಕೇಳಿದನಿದರ ಫಲವೇನೆಂದು ಭೂಸುರರ
ಭೋಗಸುಖದರ್ಶನದ ಫಲವಿಂ
ದೀಗಲಹುದೆನಲಾ ಸಮಯದಿ ಸ
ರಾಗದಲಿ ನಡೆತಂದುದಾ ನೃಪನೆಡೆಗೆ ಕಲಹಂಸೆ

೪೩

ಬಂದ ಹಂಸೆಯ ಕಂಡು ಮುಖಕಳೆ
ಯಿಂದಲರಿದನು ನೃಪತಿ ಮನದಲಿ
ಯಿಂದುಮುಖಿ ತನಗೊಲಿದ ಹದನಹುದೆಂದು ಹರುಷದಲಿ
ಮಂದಗಮನೆಯ ಕಂಡಿರೇ ಏ
ನೆಂದು ನುಡಿದಳು ಸತಿಯ ಬಗೆಯೇ
ನೆಂದು ಕೇಳಲು ನೃಪಗೆ ಬಳಿಕಿಂತೆಂದುದಾ ಪಕ್ಷಿ

೪೪

ಮಾನವಾಧಿಪ ಕೇಳು ಮನದನು
ಮಾನವನು ಬಿಡು ಗುಡಿಯ ಕಟ್ಟಿಸು
ನೀನೆಳಸಿದಿಷ್ಟಾರ್ಥಫಲ ಸಿದ್ಧಿಸಿದುದಿನ್ನೇನು?
ಮಾನನಿಧಿ ನೀ ಮುನ್ನ ಮಾಡಿದ
ನೂನ ಸುಕೃತದ ಫಲವೊ ನಿನ್ನನೆ
ಧ್ಯಾನಿಸುವಳನವರತ ಮನ ಬೇರಿಲ್ಲವಾ ಸತಿಗೆ

೪೫

ಆ ತಳೋದರಿ ನಿನ್ನ ಮೇಲಣ
ಪ್ರೀತಿಯಿಂದೊಲಿದಂತರಂಗದಿ
ಕಾತರಿಸುತಿಹಳಂಗಜನ ಉಪಟಳದಿ ಕಡುನೊಂದು
ಧಾತುಗುಂದಿಹಳಾ ತರುಣಿ ಮನ
ಸೋತು ಹಂಬಲಿಸುವಳು ನಳನೃಪ
ನಾತನೇ ಪತಿಯೆಂದು ನಂಬಿಹೆನೆಂದಳಿಂದುಮುಖಿ

೪೬

ಎಲೆ ನೃಪತಿ ದಮಯತಿಯನು ನಿನ
ಗೊಲಿಸಿ ಬಂದೆನು ಭಾಷೆ ಸಂದುದು
ಲಲನೆಯನು ನೀ ಮದುವೆಯಾಗಿಂದೆನ್ನ ಕಳುಹೆನಲು
ಬಳಲಿದಿರಿ ನಮಗೋಸುಗವೆ ಬಲು
ಹಳುವದಲಿ ತೊಳಲಿದಿರಿ ಕಷ್ಟವ
ಬಳಸಿದಿರಿ ಸಾಕಿನ್ನು ಗಮನಿಸಿಯೆಂದು ಬೀಳ್ಕೊಟ್ಟ

೪೭

ಕೇಳು ಪಾಂಡವತನಯ ರಾಜಮ
ರಾಳ ತೆರಳಿದುದತ್ತ ನಳಭೂ
ಪಾಲನಿತ್ತಲು ಬಂದು ಹೊಕ್ಕನು ತನ್ನ ನಗರಿಯನು
ಆಳುಮಂದಿಯ ಕಳುಹಿ ಮನದಿ ವಿ
ಶಾಲವಿರಹದ ತಾಪದಲಿ ಮಿಗೆ
ಕೇಳಮೇಳ ವಿನೋದವಿಭವವನುಳಿದನಾ ನೃಪತಿ

೪೮

ಅತ್ತಲಾ ದಮಯಂತಿ ನಳನೊಳು
ಚಿತ್ತವಿಟ್ಟಳು ನೃಪಗೆ ವಿರಹವು
ಹೊತ್ತಿತಾಕೆಯ ಮೇಲೆಯಿರ್ವರಿಗಾಯ್ತು ಸಂತಾಪ
ಚಿತ್ತಜನು ಪಾತಕನು ವಿರಹವ
ಹೊತ್ತಿಸಿದನಿಬ್ಬರಿಗೆ ಮದನನ
ಹೆತ್ತವನು ವರಪುರದ ಚೆನ್ನಿಗರಾಯ ಕರುಣಿಸಿದ

೪೯