EN | KA

I

Naḷacaritre

ಶ್ರೀರಮಣ ಸರಸಿಜದಳಾಕ್ಷ ಮು
ರಾರಿ ಸಚರಾಚರಭರಿತ ದುರಿ
ತಾರಿ ನಿತ್ಯಾನಂದ ನಿರ್ಜರನಿಕರದಾತಾರ
ವಾರಿಜಾಂಬಕ ವರಗುಣಾಶ್ರಯ
ಮಾರಪಿತ ವೇದಾಂತನುತ ಸಾ
ಕಾರ ಚೆನ್ನಿಗರಾಯ ಪಾಲಿಸು ಜಗಕೆ ಮಂಗಳವ

ಶರಧಿಶಯನ ಮುಕುಂದ ಕಂಸಾ
ಸುರಮಥನ ಸುರಮೌನಿವಂದಿತ
ಗಿರಿಧರಾಚ್ಯುತ ವೇಣುನಾದ ವಿನೋದ ಭವದೂರ
ಸರಸಿಜೋದ್ಭವ ನುತ ದಯಾಸಾ
ಗರ ಮುರಾಂತಕ ದೇವ ವರಪುರ
ದರಸ ಚೆನ್ನಿಗರಾಯ ಪಾಲಿಸು ಸಕಲಸಜ್ಜನರ

ಉರಗರಿಪುಕೇತನ ವಿಭೀಷಣ
ವರದ ಹರಿ ಸದ್ಭಕ್ತಪೋಷಣ
ದುರಿತಕುಲಗಿರಿವಜ್ರ ನರಕಾಂತಕ ಮಹಾಮಹಿಮ
ಪರಮಪುರುಷ ಯಶೋದೆಯಾತ್ಮಜ
ದುರಿತದುಃಖವಿನಾಶ ವರಪುರ
ದರಸ ಚೆನ್ನಿಗರಾಯ ರಕ್ಷಿಸು ನಮ್ಮನನವರತ

ಕರಿವದನ ಹೇರಂಬ ಲಂಬೋ
ದರ ಗಣಾಧಿಪ ಮೋದಕಪ್ರಿಯೆ
ಪರಶು ಪಾಶಾಂಕುಶಕರಾಂಕಿತದಿಂದ ರಂಜಿಸುವ
ಸುರನರೋರಗನಮಿತ ಗೌರೀ
ವರಕುಮಾರಕ ವಿದ್ಯೆವಾರಿಧಿ
ವರದ ಗಣಪತಿ ಪಾಲಿಸೆನ್ನಯ ಮತಿಗೆ ಮಂಗಳವ

ನಾರಿ ನಳಿನದಳಾಕ್ಷಿ ವರ ಜಂ
ಭಾರಿನುತೆ ಚತುರಾನನಪ್ರಿಯೆ
ಭೂರಿಶುಭಗುಣಭರಿತೆ ಭಕ್ತಾಶ್ರಿತಜನಾಧಾರೆ
ನೀರೆ ನಿಗಮವಿಚಾರೆ ಘನಶೃಂ
ಗಾರೆ ಭಕ್ತರಿಗೊರವ ಕೊಡುವ ಉ
ದಾರೆ ಶಾರದೆ ನಲಿದೊಲಿದು ನೆಲಸೆನ್ನ ಜಿಹ್ವೆಯಲಿ

ರಾಯರೊಳಗಗ್ಗಳೆಯನಾ ಕೌಂ
ತೇಯನಿಗೆ ರೋಮಶಮಹಾಮುನಿ
ರಾಯ ವಿಸ್ತರಿಸಿದನು ನಳಭೂವರನ ಚರಿತೆಯನು
ಶ್ರೀಯರಸ ವರಪುರದ ಚೆನ್ನಿಗ
ರಾಯನಂಕಿತಮಾಗಿ ಪೇಳುವೆ
ಪ್ರೀಯದಿಂದಾಲಿಸುವ ಸುಜನರಿಗೀ ಮಹಾಕಥೆಯ

ಪರಮಪುಣ್ಯಚರಿತ್ರೆಯಿದನಾ
ದರಿಸಿ ಕೇಳುವ ನರರ ಜನ್ಮಾಂ
ತರದ ಘನದುಷ್ಕರ್ಮ ದುಃಖವಿನಾಶವಾಗುವುದು
ಕರಿ ತುರಗ ರಥನಿಚಯ ರಾಜ್ಯದ
ಸಿರಿಯ ಸಂಪದವಾಯುವನು ಮುರ
ಹರನು ಮನ್ನಿಸಿ ಕೊಡುವ ಸುಜನರಿಗಿಷ್ಟ ಸಂಪದವ

ಜನಪ ಕುರುಭೂಪಾಲನೊಳು ಜೂ
ಜಿನಲಿ ರಾಜ್ಯವ ಸೋತು ಯಮನಂ
ದನನು ತನ್ನನುಜಾತರೊಡನೆಯೆ ಸತ್ಯವನು ಬಿಡದೆ
ವನಿತೆ ಧೌಮ್ಯಮುನೀಂದ್ರ ಮಂತ್ರೀ
ಜನಸಹಿತ ನಡೆತಂದು ಕಾಮ್ಯಕ
ವನದೊಳಗೆ ಸಂಚರಿಸುತಿರ್ದನು ತೀರ್ಥಯಾತ್ರೆಯಲಿ

ಧರಣಿಪತಿ ಚಿಂತಿಸುತ ಹಲುಬಿದ
ನರನ ಹದನೇನೆಂದು ತಪದಲಿ
ಮರೆದು ಕಳೆದನೊ ನಮ್ಮನಿನಿಬರನೆನುತಲಿರಲಂದು
ಸುರಪ ಕಳುಹಿದ ರೋಮಶನು ಮುನಿ
ವರನು ಗಡಣದೊಳೆಯ್ದಿ ರವಿಭಾ
ಸುರಸುತೇಜದೊಳಂದು ಕಾಮ್ಯಕವನಕೆ ನಡೆತಂದ

ಚ್ಯವನ ಗೌತಮ ಕಪಿಲ ಭೃಗು ಭಾ
ರ್ಗವ ಭರದ್ವಾಜಾತ್ರಿ ಕೌಶಿಕ
ಪವನಭಕ್ಷಣ ವಾಮದೇವ ಮರೀಚಿ ಮೈತ್ರೇಯ
ಶ್ರವತಿ ಕಣ್ವಾಂಗಿರಸ ಶುಕ ಗಾ
ಲವ ಪರಾಶರ ದಾಲ್ಭ್ಯ ವರಮುನಿ
ನಿವಹದೊಡನೆಯ್ತಂದನಾ ರೋಮಶಮಹಾಮುನಿಷ

೧೦


ಅರಸನನುಜರು ಸಹಿತ ಮುನಿಮು
ಖ್ಯರನು ಕಂಡಿದಿರೆದ್ದು ಚರಣದೊ
ಳೆರಗಿ ಬಿಜಯಂಗೆಯ್ಸಿ ತಂದನು ತಳಿರ ಮಂಟಪಕೆ
ವರಮುನೀಂದ್ರರಿಗರ್ಘ್ಯಪಾದ್ಯೋ
ತ್ಕರದೊಳುಪಚರಿಸುತ್ತ ದರ್ಭಾ
ಸ್ತರಣದಲಿ ಕುಳ್ಳಿರಿಸಿದನು ಭಯಭರಿತಭಕ್ತಿಯಲಿ

೧೧

ನೀವಘಾಡದ ದೇವಋಷಿಗಳು
ಪಾವನರು ಮೂಲೋಕಕತಿ ಸಂ
ಭಾವನೀಯರು ಸತ್ಯಸಂಧರು ನಿರ್ಮಲಾತ್ಮಕರು
ಆವನರಿವನು ನಿಮ್ಮ ಮಹಿಮೆಯ
ಭಾವಿಸುವಡೆನಗಳವೆ ನಿಮ್ಮ ಪ
ದಾವಲಂಬನಸೇವೆ ದೊರಕಿತು ಧನ್ಯರಾವೆಂದ

೧೨

ಧರಣಿಪತಿ ಸುಕ್ಷೇಮವೇ ನಿಜ
ತರುಣಿ ನಿನ್ನನುಜಾತತನಯರು
ವರಸಚಿವ ಸಾಮಂತ ಧೌಮ್ಯಮುನೀಂದ್ರ ಮಂತ್ರಿಗಳು
ಪರಿಣತರೆ ಪೇಳೆನಲು ನಿಮ್ಮಯ
ಪರಮ ಕರುಣಾಮೃತವೆ ನಮ್ಮನು
ಹೊರೆಯುತಿರೆ ಸುಕ್ಷೇಮ ಬೇರಿಲ್ಲೆಂದನಾ ನೃಪತಿ

೧೩

ಧಾರಿಣಿಯ ನೆರೆ ಸೋತು ಅನುಜರು
ವಾರಿಜಾನನೆ ಸಹಿತ ಬಂದೀ
ಘೋರಕಾನನದೊಳಗೆ ಗಿರಿಗಹ್ವರದ ಮಧ್ಯದಲಿ
ಸೇರಿ ಹೃತಸುಖರಾಗಿ ಬಳಲಿದ
ರಾರು ಧರೆಯೊಳಗೆನ್ನವೊಲು ಭವ
ದೂರ ಮುನಿಕುಲತಿಲಕ ಹೇಳೆಂದರಸ ಬಿಸುಸುಯ್ದ

೧೪

ಎಲೆ ಮಹೀಪತಿ ನೀನಿನಿತು ಉ
ಮ್ಮಳಿಸಲೇಕರಸುಗಳು ಪೂರ್ವದ
ನಳ ಹರಿಶ್ಚಂದ್ರಾದಿ ರಾಘವನೃಪರು ಹಳುವದಲಿ
ಲಲನೆಯರ ತಾವಗಲಿ ಕಷ್ಟವ
ಬಳಸಿದರು ಅವರಂತೆ ನಿನಗುಪ
ಟಳಗಳುಂಟೇ ಬರಿದೆ ಮನನೋಯದಿರು ನೀನೆಂದ

೧೫

ಪರಮಋಷಿಗಳ ನೆರವಿಯೇ ಸಭೆ
ಹರಿಯ ಕಾರುಣ್ಯಾಂಬುಧಿಯೆ ಸಿರಿ
ನರವೃಕೋದರ ಮಾದ್ರಿತನಯರು ನಿನಗೆ ಬಾಹುಬಲ
ತರುಣಿಯೇ ಭೋಗೈಕಸಂಪ
ತ್ತುರುತರದ ವನರಾಜ್ಯ ನಿನಗಿಂ
ತಿರಲು ಸರಿಯಾರರಸ ಚಿಂತಿಸಲೇಕೆ ನೀನೆಂದ

೧೬

ಆದಡೆಲೆ ಮುನಿನಾಥ ನಳನೃಪ
ಮೇದಿನಿಯನುಳಿದವನಿಯಲಿ ತ
ಳೋದರಿಯನೆಂತಗಲಿದನು ತಾನಾರ ದೆಸೆಯಿಂದ
ಸಾಧಿಸಿದನವನಿಯನು ಧರೆಯೆಂ
ತಾದುದಾ ನಳನೃಪಗೆ ನೀವಿದ
ನಾದರಿಸಿ ಪೇಳೆನಲು ನಗುತಿಂತೆಂದನಾ ಮುನಿಪ

೧೭

ಭೂತಳೇಂದ್ರರೊಳಧಿಕಬಲ ವಿ
ಖ್ಯಾತನಹ ನಳಚಕ್ರವರ್ತಿಯು
ಭೂತಳವ ಪಾಲಿಸಿದನಾತನ ವಿಮಲಚರಿತೆಯನು
ಸೂತಮುನಿ ಹೇಳಿದನು ಮೌನಿ
ವ್ರಾತದಲಿಯಾಗಸ್ತ್ಯಮುನಿ ಸಂ
ಪ್ರೀತಿಯಿಂದರುಹಿದನು ರಘುನಂದನನೊಳೀ ಕಥೆಯ

೧೮

ವಸುಧೆಪತಿ ಕೇಳೀ ಚರಿತ್ರೆಯ
ನಿಷಧವಂತೆಂಬಾ ಮಹಾಪುರ
ವೆಸೆದುದಗಣಿತ ಗೋಪುರದ ಪ್ರಾಕಾರಶಿಖರದಲಿ
ಮಿಸುನಿ ರತ್ನಪ್ರಭೆಗಳಲಿ ರಂ
ಜಿಸುವ ದೇವಾಲಯಗಳಿರ್ದುದು
ವಸುಧೆಗಚ್ಚರಿಯೆನಿಸಿತಾ ಪುರವರಸ ಕೇಳೆಂದ

೧೯

ಮುರಿಮುರಿದ ಕೊತ್ತಳದ ಸಾಲಿನ
ಪರುಠವದ ಹುಲಿಮುಖದ ಬಾಗಿಲ
ಮಿರುಪ ಮಣಿವಜ್ರದ ಕವಾಟದ ಗಂಧವಟ್ಟಿಗೆಯ
ಉರುತರದ ವೇದಿಕೆಯ ಹೇಮದ
ಮೆರೆವ ಸೋಪಾನಗಳ ನೆಲೆಯು
ಪ್ಪರಿಗೆಗಳ ಮೇಲೆಸೆವ ಕಲಶದ ಕಾಂತಿ ರಂಜಿಸಿತು

೨೦

ಮುಗಿಲ ತುಡುಕುವ ತೆನೆಗಳಾಳ್ವೇ
ರಿಗಳು ಪಾತಾಳಗಳ ಖಾತಗ
ಳಗಳು ಬಳಸಿದ ಕೋಟೆ ಸುತ್ತಾವರಿಸಿದುನ್ನತದ
ಗಗನವೀದಿಯ ತಾರಕೆಯವೊಲ್
ಸೊಗಸುತೋರುವ ಕನ್ನಡಿಯ ಸಾ
ಲುಗಳ ರತ್ನಪ್ರಭೆಗಳಲಿ ರಂಜಿಸಿದುದಾ ನಗರ

೨೧

ರವಿಶಶಿಯ ವೀದಿಗಳ ಹೇಮದ
ವಿವಿಧ ಮಣಿಭಿತ್ತಿಗಳ ಕಾಂತಿಯು
ದಿವವನಣೆದುದು ರತ್ನನಿಚಯದ ಭದ್ರಭವನಿಕೆಯ
ಯುವತಿಯರ ಸಂಗೀತ ವೀಣಾ
ರವದ ರಹಿಯಲಿ ಮನಕೆ ಸವಿದೋ
ರುವ ಮಹಾರಚನೆಯಲಿ ಮೆರೆದುದು ನಿಷಧವರನಗರ

೨೨

ವಸುಧೆಯಮರರು ಕ್ಷತ್ರಿಯರು ರಂ
ಜಿಸುವ ವೈಶ್ಯ ಚತುರ್ಥರುನ್ನತ
ಕುಶಲವಿದ್ಯಾಧಿಕರು ಕವಿಗಳು ಮಲ್ಲಗಾಯಕರು
ಅಸಮರಥಿಕರು ಸಮರದಲಿ ಸಾ
ಹಸರು ಕರಿ ರಥ ತುರಗ ಪಾಯ್ದಳ
ವೆಸೆದುದಗಣಿತ ಚಾತುರಂಗದಿ ನಿಷಧವರನಗರ

೨೩

ಸಾಲ ಬಿಲ್ವ ಕಪಿತ್ಥ ಜಂಬು ತ
ಮಾಲ ದಾಡಿಮ ವಕುಳ ವಟ ಹಿಂ
ತಾಲ ಕ್ರಮುಕ ಕದಂಬ ಕುರವಕ ಕದಳಿ ಖರ್ಜೂರ
ತಾಲ ಚಂದನ ಪನಸ ವರತ
ಕ್ಕೋಲ ಕೇತಕಿ ಕುಟಜ ಸರಳದ
ಸಾಲತರುಗಳ ನಿಚಯದಿಂದುದ್ಯಾನ ರಂಜಿಸಿತು

೨೪

ಭೂರಮಣ ಕೇಳಾ ಪುರಾಧಿಪ
ವೀರಸೇನನೃಪಾಲ ರಿಪುಸಂ
ಹಾರನಾತನ ತನಯ ನಳನೃಪನೆಂಬುದಭಿಧಾನ
ಭೂರಿವಿಕ್ರಮ ಪರಮಧರ್ಮವಿ
ಚಾರ ಶಶಿಕುಲಮೌಳಿ ಘನಗಂ
ಭೀರ ಪಾಲಿಸುತಿರ್ದ ಸಪ್ತದ್ವೀಪದವನಿಪರ

೨೫

ಶರಧಿ ಮೇರು ದಿಗಂತದವನೀ
ಶ್ವರರು ಕಪ್ಪವ ತೆರುವರಗಣಿತ
ಧುರವಿಜಯ ದೋರ್ಬಲರು ಮಣಿಮಯಮಕುಟವರ್ಧನರು
ಚರಣಕಾನತರಾಗಿ ನಳಭೂ
ವರನ ಭಜಿಸುತಲಿರ್ದರಮರೇ
ಶ್ವರನ ಸಭೆಯಂದದಲಿ ಮೆರೆದುದು ನೃಪತಿಯಾಸ್ಥಾನ

೨೬

ಭೂಮಿಪತಿ ಕೇಳಿತ್ತಲುತ್ತರ
ಭೂಮಿಯಲಿ ಪಜ್ಜಳಿಸುತಿಹ ಸು
ತ್ರಾಮಪುರದಂತೆಸೆದುದಲ್ಲಿ ವಿದರ್ಭನಗರವದು
ರಾಮಣೀಯಕರಚನೆಯಲಿ ನವ
ಹೇಮಖಚಿತ ಸುರತ್ನ ಸೌಧ
ಸ್ತೋಮಗಳ ಸಾಲಿನಲಿ ರಂಜಿಸುತಿರ್ದುದಾ ನಗರ

೨೭

ಅಲ್ಲಿಗಧಿಪತಿ ಭೀಮನೃಪ ಗುಣ
ದಲ್ಲಿ ನಯದಲಿ ವೀರ್ಯವಿತರಣ
ದಲ್ಲಿ ಚಾತುರ್ಯದಲಿ ಸೌಭಾಗ್ಯದಲಿ ಧೈರ್ಯದಲಿ
ಬಲ್ಲಿದನು ತಾನಾಗಿ ನಿಜಸುತ
ರಿಲ್ಲವೆಂದುಮ್ಮಳಿಸುತಿರೆ ಮನ
ದಲ್ಲಿಗಾಕ್ಷಣ ಬಂದನಾ ದಮನಾಕ್ಯಮುನಿವರನು

೨೮

ಬಂದ ಮುನಿಗವನಿಪತಿ ವಂದಿಸಿ
ನಿಂದು ಕರಗಳ ಮುಗಿದು ವಿನಯದೊ
ಳೆಂದ ಸುತಸಂತಾನವಿಲ್ಲದ ಸಿರಿಯದೇಕೆಂದು
ನೊಂದು ನುಡಿಯಲು ಸುತರ ಪಡೆಯದ
ತಂದೆಗಿದು ಸಂತಾಪವಲ್ಲವೆ
ಎಂದು ಮುನಿ ಕರುಣದಲಿ ಸಂತೈಸಿದನು ಜನಪತಿಯ

೨೯

ಯೋಗದೃಷ್ಟಿಯೊಳರಿದು ಮುನಿವರ
ನಾಗ ನೃಪನೊಡನೆಂದ ಪುತ್ರನ
ಯಾಗವನು ಮಾಡರಸ ತಪ್ಪದು ಪುತ್ರಲಾಭವೆನೆ
ಆ ಗರುವ ಮುನಿಮಂತ್ರದಿಂದ ಸ
ರಾಗದಲಿ ಶುಭದಿನ ಸುಲಗ್ನದಿ
ಯಾಗವನು ಪೂರೈಸಿದನು ಸುರನರರು ತಣಿವಂತೆ

೩೦

ಅರಸ ಕೇಳಾ ಯಾಗಸಮನಂ
ತರದೊಳಾ ಮುನಿಮುಖ್ಯರನು ಸ
ತ್ಕರಿಸಿ ಕಳುಹಿದನವರವರನುಚಿತೋಪಚಾರದಲಿ
ತರುಣಿಗಾದುದು ಗರ್ಭ ಮಂಗಳ
ಕರ ಸುಲಗ್ನ ಸುತಾರೆಯಲಿ ನೃಪ
ನರಸಿ ಪಡೆದಳು ತನುಜೆಯನು ಲೋಕೈಕಸುಂದರಿಯ

೩೧

ಅಮರದುಂದುಭಿ ಮೊಳಗಲಿಳೆ ಸಂ
ಭ್ರಮಿಸೆ ಪುರಜನ ನಲಿಯೆ ನೃಪನಾ
ಸಮಯದಲಿ ದಮನಾಖ್ಯಮುನಿಗಭಿನಮಿಸಿ ನಿಜಸುತೆಗೆ
ವಿಮಲನಾಮವ ಪಾಲಿಸೆನಲಾ
ಕಮಲಮುಖಿ ದಮಯಂತಿಯೆಂದು
ತ್ತಮದ ಪೆಸರೆಂದರುಹಿ ಮುನಿ ಹೊರವಂಟನಾಶ್ರಮಕೆ

೩೨

ನಿರಿಗುರುಳ ಪವಳಾಧರದ ಉರು
ತರದ ತೋಳ್ಗಳ ಕಂಬುಕಂಠದ
ತರಳನಯನದ ಸಂಪಗೆಯ ನಾಸಿಕದ ಪೆರೆನೊಸಲ
ಹರಿಯ ಮಧ್ಯದ ಹಂಸಗಮನದ
ಗುರುಕುಚದ ಕರಪಲ್ಲವದ ಸರ
ಸಿರುಹಮುಖಿ ನಲಿದಾಡುತಿದ್ದಳು ರಾಜಭವನದಲಿ

೩೩

ಗುಣದೊಳಗೆ ಶೀಲದಲಿ ಮಾತಿನ
ಭಣಿತಿಯಲಿ ಗಾಂಭೀರ್ಯದಲಿ ವಿತ
ರಣದಲನುಪಮವಿದ್ಯೆಯಲಿ ಗುರು ದೈವಭಕ್ತಿಯಲಿ
ಪ್ರಣಿತಿಸಲು ಶರ್ವಾಣಿ ರತಿಯರಿ
ಗೆಣೆಯೆನಿಪ ಸುಂದರಿಗೆ ಮಿಕ್ಕಿನ
ಬಣಗು ಸತಿಯರು ಸರಿಯೆ ಲೋಕದೊಳೆಂದನಾ ಮುನಿಪ

೩೪

ಕೇಳು ಪಾಂಡವತನಯ ಭೀಮನೃ
ಪಾಲನೋಲಗದಲ್ಲಿ ಧರಣೀ
ಪಾಲಕರ ಚರಿತಪ್ರಸಂಗದೊಳಿರಲು ನಳನೃಪನ
ಶೀಲವನು ಸೌಂದರ್ಯವಿಭವ ವಿ
ಶಾಲಮತಿ ಲಾವಣ್ಯರೂಪು ಗು
ಣಾಳಿಗಳ ವಿಸ್ತರಿಸಿ ಕೊಂಡಾಡಿದರು ಕವಿಜನರು

೩೫

ವನಜಮುಖಿಯಾ ವಾರ್ತೆಯೆಲ್ಲವ
ಮನವೊಲಿದು ಕೇಳಿದಳು ಹಿಗ್ಗುತ
ನೆನೆದುದಂತಃಕರಣ ಹೆಚ್ಚಿದ ಚಿತ್ತವೃತ್ತಿಯಲಿ
ನೆನೆದು ಬರೆದಳು ನಳನ ರೂಪವ
ನನುನಯದಿ ಚಿತ್ರದಲಿ ಮಿಗೆ ಸಂ
ಜನಿಸಿತವನಲಿ ಮೋಹವೆಲೆ ಧರಣೀಶ ಕೇಳೆಂದ

೩೬

ಆಗ ಮದನನು ತನ್ನ ಬಲವನು
ಬೇಗದಲಿ ಜೋಡಿಸಲು ಖೋಯೆಂ
ದಾಗಲರಸಂಚೆಗಳು ಅಳಿವಿಂಡುಗಳು ನಲಿದಾಡೆ
ಕೋಗಿಲೆಗಳಾರ್ಭಟಿಸೆ ಗಿಳಿಗಳು
ಕೂಗೆ ನವಿಲುಗಳಾಡೆ ಮನ್ಮಥ
ನಾಗ ಪೂಗಣೆಗಳನು ಸಂಧಿಸಿಯೆಚ್ಚನಂಗನೆಯ

೩೭

ಉಣ್ಣಳನ್ನವ ಕಾಮಗತ್ತಲೆ
ಕಣ್ಣಿನಲಿ ಪೆರ್ಚಿದುದು ಸತಿಯರ
ಮನ್ನಣೆಗೆ ಮೈಗೊಡಳು ಬಲುಬೇಸರದಿ ಬಳಲುವಳು
ಬಣ್ಣಿಸಿಯೆ ಮಾತಾಡಲೊಲ್ಲಳು
ಬಣ್ಣಗುಂದಿದ ದೇಹದೊಳಗೆಳ
ವೆಣ್ಣುಗಳ ಸೌಖ್ಯವನು ತೊರೆದಳು ಮದನನೆಸುಗೆಯಲಿ

೩೮

ಕೆಳೆದಿಯರು ಕಂಡಂತರಂಗದಿ
ಬಲಿದ ವಿರಹದ ರಾಜವದನೆಯ
ಹೊಳಲೊಳುದ್ಯಾನವನ ಸುರುಚಿರ ಪುಷ್ಪತರುಗಳಲಿ
ಎಳದಳಿರ ನೆಳಲಿನಲಿ ಪರಿಮಳ
ದಲರ ಪನ್ನೀರಿನಲಿ ತಳುವದೆ
ನಲವು ಹಿಂಗಿದ ಸತಿಯನುಪಚರಿಸಿದರು ಬನದೊಳಗೆ

೩೯

ಕೆಲರು ಹದನೇನೆಂದು ಬಗೆದರು
ಕೆಲರು ಪನ್ನೀರುಗಳ ತಳಿದರು
ಕೆಲರು ಕಪ್ಪುರಗಂಧವನು ಲೇಪಿಸಿದರಂಗದಲಿ
ಕೆಲರು ಬೀಸಿದರಾಲವಟ್ಟದಿ
ಕೆಲರು ಹೂವನು ಹಾಸಿದರು ಕೋ
ಮಲೆಗೆ ನಾನಾವಿಧದ ಉಪಚಾರಂಗಳನು ರಚಿಸಿ

೪೦

ಈ ಪರಿಯೊಳಾ ಕಾಮಿನಿಗೆ ಶೈ
ತ್ಯೋಪಚಾರವ ಮಾಡಿದರು ಪರಿ
ತಾಪ ವೆಗ್ಗಳಿಸಿದುದು ಇದಕಿನ್ನೇನು ಹದನೆನುತ
ಚಾಪಳೆಯರಾಲೋಚಿಸುತ ಕಡು
ಪಾಪಿಯಂಗಜನೆಂದು ಬಯ್ಯುತ
ತೋಪಿನೆಡೆಗಿರದೈದಿ ತಂದರು ಸತಿಯ ಸಂತೈಸಿ

೪೧

ಬಕುಳ ಪಾದರಿ ನಿಂಬ ವಟ ಕೇ
ತಕಿ ಸರಳ ಪಾಟಳಿ ಕುಟಜ ಚಂ
ಪಕ ರಸಾಲ ಕಪಿತ್ಥ ದಾಡಿಮ ಕ್ರಮುಕತರುಗಳಲಿ
ಶುಕ ನವಿಲು ಜಿಲಿಬಿಲಿಗ ಗೀಜುಗ
ಬಕ ಹಸುಬ ಗೊರವಂಕ ಟಿಟ್ಟಿಭ
ಪಿಕ ಚಕೋರಕ ಮೀಂಬುಲಿಗ ಹಕ್ಕಿಗಳು ರಂಜಿಸಿತು

೪೨

ಬಿಗಿದ ರತ್ನದ ಸಾಲ ಸೋಪಾ
ನಗಲ ಕೆಂದಾವರೆಯ ಮೊಗ್ಗೆಯ
ಮುಗುಳ ತುಂಬಿಯ ಹಂಸಗಳ ಬಕಚಕ್ರವಾಕಗಳ
ಸೊಗಸುದೋರುವ ಸರಸಿಯಲಿ ವರ
ಸುಗುಣಿಯರು ದಮಯಂತಿಯೊಳು ಮನ
ಸೊಗಸಿನಿಂದಾಡಿದರು ಜಲಕೇಳಿಯ ವಿದಗ್ಧೆಯರು

೪೩

ಬಂದು ಸತಿಯರು ಕೊಳನ ತೀರದಿ
ನಿಂದು ವಸ್ತ್ರಾಭರಣಭೂಷಣ
ದಿಂದ ಶಶಿಕಾಂತೋಪಲದಿ ಕುಳ್ಳಿರಿಸಿ ಶಶಿಮುಖಿಯ
ಅಂದು ವಿರಹವ್ಯಥೆಯ ನಾನಾ
ಚಂದದಲಿ ಶೈತ್ಯೋಪಚಾರಗ
ಳಿಂದ ಸಂತೈಸಿದರು ವರಪುರದರಸನಾಜ್ಞೆಯಲಿ

೪೪