EN | KA

VIII

Hadibadeya Dharma

ಆವನಿಚ್ಛೆಯೊಳವತರಿಸಿದುದಾದಿಯೊ
ಳಾವನಿಂದೊಳ್ಪುವಡೆದುದು
ಆವನೊಳಡಗುವುವಖಿಳ ಚರಾಚರ
ವಾ ವಿಷ್ಣುಗಾನೆರಗುವನು

ಶ್ರೀ ವಿಷ್ಣುವಲ್ಲಭೆಯೆನಿಸಿ ಸಕಲ ವೇ
ದಾವಳಿಯೊಳು ಜಸವಡೆದ
ಪಾವನಚರಿತೆಯ ಪದ್ಮಸದ್ಮೆಯ ಲ
ಕ್ಷ್ಮೀವನಿತೆಯ ವಂದಿಪೆನು

ಲೋಕಶಾಸ್ತ್ರವನಾಲೋಚಿಸಿ ತಿಳಿದದ
ರೈಕಮತ್ಯವನಳವಡಿಸಿ
ಏಕಪತ್ನಿಯರೆಸಗುವ ದಿನಚರ್ಯೆಯ
ಜೋಕೆತಪ್ಪದೆ ಸೊಲ್ಲಿಸುವೆನು

ಅರುಣೋದಯದ ಸಮಯದೊಳೆದ್ದು ಶ್ರೀಹರಿ
ಗುರುಚರಣಕೆ ಕೂರ್ತೆರಗಿ
ಪರಮಭಕ್ತಿಯೊಳೊಲಿದಿನಿಯನೆಚ್ಚರುವನ್ನ
ಮರುಕವೆರೆದು ಕಾದಿಹುದು

ಸಡಿಲಿದ ಮುಡಿಯ ಸೈಪಿಡುತೊಂದರೊಳೊಂದು
ತೊಡಕಿದ ರನ್ನ ಸರಗಳ
ಬಿಡಿಸುತೆಚ್ಚರುವನ್ನೆವರಮಿನಿಯನ ಕೆಲ
ಗಡೆಯೊಳೊಲಿದು ಕಾದಿಹುದು

ಎದ್ದು ನಿಟ್ಟಿಸುವಿನಿಯನ ನೋಟಕೆ ತನ್ನ
ಮುದ್ದುಮೊಗವ ಮುಂಗೊಳಿಸಿ
ನಿದ್ದೆಯೊಳೆಸಗಿದ ನಿಖಿಲಾಪಚಾರವ
ತಿದ್ದುವುದಿನಿವಾತಿನೊಳು

ಅಡಿಗಳಿಗೆರಗಿಯಾಣತಿಗೊಂಡು ಪೊಡಮ
ಟ್ಟೊಡನೂಳಿಗದ ಪೆಣ್ಗಳಿಗೆ
ಬಿಡುಗೆಲಸಂಗಳ ಬೆಸಸಿ ಯಾಪಂತೆ ತಾ
ನೊಡರಿಪುದೊಳ್ಗಜ್ಜವನು

ಕರುತುರುಗಳ ಕಾಪಿಡುವ ಕರೆವ ಪಾ
ಲ್ಗರೆವ ಕಾಸುವ ಕೌಶಲವ
ಅರಿಯದ ಸೊಸೆ ಪೆಣ್ಮಕ್ಕಳಿಗಾ ಬಗೆ
ಯರಿವಂತನುಗೊಳಿಸುವುದು

ದೇವಪೂಜೆಯ ದೇವರಿಗೆರಗುವುದೆತ್ತ
ಮಾವಂದಿರಡಿಗೆ ಮಣಿವುದು
ಭಾವಂದಿರಡಿಗೆ ವಂದನೆಗೈವುದು ತನ್ನ
ಭಾವಶುದ್ಧಿಯ ಬಳೆಯಿಪುದು

ಮನಮೊಲಿದುಡಿಸಿ ತಿಲಕಂಗಳ
ನನುಗೈದಾದರವೆರಸಿ
ಮನೆಯೊಳಿರುವ ಮಕ್ಕಳನೆಲ್ಲರನೊ
ಯ್ದನಿಬರಡಿಯೊಳೆರಗಿಪುದು

೧೦

ಕಳವು ಕಪಟಗಳ ಕಲಿಯದಂದದಿ ಮ
ಕ್ಕಳನಡಿಗಡಿಗಳುಕಿಪುದು
ಎಳಮೆಯೊಳೆದೆಗೊಂಡು ಸುಗುಣ ದುರ್ಗುಣಗಳ
ಕಳೆವುದರಿದು ಕಡೆಕಡೆಗೆ

೧೧

ಆರೈದು ತನ್ನಿನಿಯನ ಸಿರಿ ಬಡತನ
ವೀ ರೀತಿಯೆಂದೆದೆಗೊಳಿಸಿ
ಬಾರದ ವಸ್ತುವ ಬಯಸಿ ಬಾಧಿಸದೆ ಕೈ
ಸಾರಿದುದಕೆ ಸಮ್ಮತಿಪುದು

೧೨

ಹಸಗೆಡದಂತೆ ಹಕ್ಕಿಗಳು ಕುಟುಕದಂತೆ
ಪಸುಗಳು ಬಾಯಿಡದಂತೆ
ಕಸ ಪುಗದಂತೆ ಕಾಪಿಡುವುದು ಧಾನ್ಯವ
ಜಸವಡೆವುದು ಜಾಣ್ಮೆಯೊಳು

೧೩

ಸಾವಧಾನದೊಳು ಸಂಪಾದಿಸಿ ಮನೆಯೊಳು
ತೀವಿದ ದಿವ್ಯವಸ್ತುಗಳ
ದೇವರಾರೋಗಣೆಗೆಂದೆಲ್ಲವ ಭಕ್ತಿ
ಭಾವದಿ ಪರಿಶೋಧಿಪುದು

೧೪

ಪಳದಾಗದ ಮುನ್ನ ಬಣ್ಣಗೆಡದ ಮುನ್ನ
ಮೊಳೆದೋರಿ ಮುಗ್ಗದ ಮುನ್ನ
ಕಳೆಯಳಿಯದ ಮುನ್ನ ಕುಂದಿ ಕುಂದದ ಮುನ್ನ
ಬಳಸುವುದಖಿಳ ವಸ್ತುವನು

೧೫

ಮೀಸಲಳಿಯದಂತೆ ಮಿದಿವರೆವುರ್ದುವ
ಬೀಸುವರನು ಬೆಸಸುವುದು
ಈ ಸುವಸ್ತುವನಿಂತನುಗೊಳಿಸುವ ಬಗೆ
ಲೇಸೆಂಬವೊಲೆಸಗುವುದು

೧೬

ಕೆಲಗಂದು ಬೇರು ಗೆಣಸು ದಂಟು ಕುಡಿ ಕಾ
ಯೆಲೆ ಮಿಡಿಗಾಯಿಗಳೆಂಬ
ಪಲವಗೆ ಶಾಕದೊಳುಚಿತಾನುಚಿತವ
ನೆಲೆಯರಿವುದು ನೇಮದೊಳು

೧೭

ಕೊಳೆತ ಕಂದಿದ ಇಲಿ ತಿಂದುಳಿದ ಮೀಸ
ಲಳಿದಲ್ಲದವರು ತಂದಿತ್ತ
ಪುಳಿತ ಪೊಲ್ಲದ ನೆಲದೊಳು ಪುಟ್ಟಿದ ಶಾಕಂ
ಗಳನು ಕಳೆದು ಬಿಸುಡುವುದು

೧೮

ಆಚಾರದಿಂದನುಪಮಧರ್ಮದೇಳಿಗೆ
ಆಚಾರದಿಂದಾಯುಷ್ಯ
ಆಚಾರದಿಂದಿಹಪರವದರಿಂದ ಸ
ದಾಚಾರವತಿಯೆನಿಸುವುದು

೧೯

ಆದಿಯೆನಿಪುದಾಚಾರಂಗಳಿಗೆ ಮೀಹ
ವಾದ ಬಗೆಯೊಳದನರಿತು
ಆದರವೆರಸಿ ಮೀವುದು ಮೊದಲೊಳು ಮಿಕ್ಕ
ವೇದವಿಧಿಯನೆಗುವುದು

೨೦

ಇಳಿದು ನೀರೊಳು ಮೀವುದಿದಕಾರದವರು ಮೈ
ದೊಳೆವುದು ಮಂಡೆಯನುಳಿದು
ಚಳಿಯ ಸೈರಿಸಲಾರದ ಸತಿಯರು ಬಿಸಿ
ಯೊಳು ಮೀವುದು ಮೈದೊಳೆವುದು

೨೧

ಬಳೆದ ಬೇನೆಯ ಬಡಮೆಯ್ಯೆ ಭಾವೆಯರೆದ್ದು
ತೊಳೆದು ಕೈಕಾಲು ಮೊಗಗಳ
ಉಳಿದಂಗವನು ನನೆದುಡೆಯೊಳು ತೊಡೆವುದು
ಕಳೆವುದು ಪಾಪಕರ್ಮವನು

೨೨

ನೀರೊಳು ಮೆಯ್ಯ ನೇಮದೊಳು ಕರಣಗಳ
ಭೂರಿಸತ್ವದೊಳು ಬುದ್ಧಿಯನು
ನಾರಾಯಣನಾಳುತನದೊಳಾತ್ಮನ ತೊಳೆ
ದೋರಂತೆ ಒಳ್ಪುವಡೆವುದು

೨೩

ಸಲೆ ಚಿನ್ನ ಬೆಳ್ಳಿ ಹಿತ್ತಳೆ ಕಂಚು ತಾಮ್ರದ
ಪಲಬಗೆ ಪಾತ್ರಂಗಳನು
ಕಿಲುಬಿನ ಕರೆ ತೋರದಂತಾದರದಿಂ
ದಲಸದೆ ತೊಳೆವುದಂದಂದು

೨೪

ಅಡಿಗೆಮನೆಗೆ ದೇವತಾರ್ಚನೆಯೆಡೆಗೆ ತಾ
ವಡಿದೊಳೆವುದಕೆಂದು ಬೇರೆ
ಮಡಗಿಸುವುದು ಮರ್ಯಾದೆಯರಿತು ನೀರ
ಕೊಡಗಳ ಕುಲಪಾಲಕಿಯರು

೨೫

ರಚನೆಯ ಬಗೆ ರಯ್ಯಮಾಗೆಯುಪಸ್ಕರ
ಉಚಿತಮೆನಿಸಿಯೊಳ್ಪುವಡೆಯೆ
ಶುಚಿ ರುಚಿಯಪ್ಪಂತೆ ಸುಯಿಧಾನದೊಳೈದೆ
ಪಚನಗೈವುದು ಭಾವೆಯರು

೨೬

ಬೆಂದು ಬೇಯದೆ ಗಬ್ಬದೊಳು ಪಸಿಯಾದುದ
ಬೆಂದುರೆ ತಳ ಪೊತ್ತಿದುದನು
ಅಂದವಳಿದುದನಚ್ಯುತನಾರೋಗಣೆ
ಗೆಂದು ಮುಂದಿಡದೆ ಕಳೆವುದು

೨೭

ಮೈದೊಳೆಯದ ಮಡಿಯುಡದ ಮೈಲಿಗೆಯೆಂಜ
ಲಾದ ನಾರಿಯರನುಗೈದ
ಈ ದೇವರಾ ದೇವರಿಗೆಂದುದನು ನಿ
ವೇದಿಸಲಾಗದಚ್ಯುತಗೆ

೨೮

ದೇವರಿಗೆರಗಿ ದೇವರ ಮನೆವೊಕ್ಕಲ್ಲಿ
ತೀವಿರುವುಪಕರಣಗಳ
ಸಾವಧಾನದಿ ಸಜ್ಜುಗೈವುದು ಜನ್ಮವ
ಪಾವನವೆನಿಸಿ ಬಾಳುವುದು

೨೯

ಸಾರಿಸಿ ರಂಗವಲ್ಲಿಯ ಸರಗೊಳಿಸಿ ದೀ
ಪಾರೋಪಣವನಾಚರಿಸಿ
ಹಾರುತ ಮನದನ್ನನ ಬರವನೆ ಮನ
ವಾರೆ ಕಾದಿಹುದು ಕಾಂತೆಯರು

೩೦

ಒಡನೆ ತನ್ನಿಷ್ಟದೇವತೆಗಾರೋಗಣೆ
ವಡಿಸಿ ತಂದಮೃತಾನ್ನವನು
ತಡೆಯದಿನಿಯನನುಮತಿವಡೆದದನುಣ
ಬಡಿಸುವುದುಪಚರಿಸುವುದು

೩೧

ಅತಿಥಿಗಳಭ್ಯಾಗತರೊಡನಧವರ
ಯತಿಯಾಚಕರೆಲ್ಲರನು
ಪತಿಕರಿಸುವುದು ಬಳಿಕ ಸಂತಸದೊಳು
ಸತಿಯರು ಸವಿವುದನ್ನವನು

೩೨

ತಿಳಿವಂತೆ ಪೇಳುವ ದೇಶಿಕೋತ್ತಮನಂಘ್ರಿ
ನಳಿನಂಗಳಿಗೆ ನತಿಗೈದು
ಬಳಿಕ ಭಾರತ ಭಾಗವತ ರಾಮಾಯಣ
ದೊಳುಗತೆಗಳನು ಕೇಳುವುದು

೩೩

ತಿಳಿದದರೊಳು ತತ್ವದಿರವ ಮಾಧವನಂಘ್ರಿ
ಯೊಳು ಭಕ್ತಿಭಾವವ ಬಲಿಸಿ
ಕಳೆವುದು ಸಕಲ ಕರಣ ಕಲ್ಮಷಗಳ
ತೊಳೆವುದು ಮನದ ಧೂಳುಗಳ

೩೪

ಏರುಜವ್ವನದ ನೀರೆಯರಿನಿತನಿತಕ್ಕೆ
ಮೋರೆಗಾಣಿಸಿ ಮುಂಬರಿಯದೆ
ಮೀರಬಾರದ ಕಜ್ಜದೊಳು ಮೇರೆಯರಿತು ಮೈ
ದೋರಿ ನಡೆವುದುಚಿತದೊಳು

೩೫

ಸುಜ್ಜುವಡೆಯೆ ಸೌಮ್ಯತೆ ಸರ್ವಾಂಗದೊ
ಳುಜ್ಜುಗಗೊಳೆಯೊಳ್ನಡತೆ
ಲಜ್ಜೆ ಬಿಂಬಿಸೆ ಲಾವಣ್ಯದೊಳೊಯ್ಯನೆ
ಪಜ್ಜೆಯಿಡುವುದು ಭಾಮೆಯರು

೩೬

ನೆಲನ ನಿಟ್ಟಿಸೆ ದಿಟ್ಟಿ ನೇಮದೊಳಿರೆ ಮನ
ತಲೆ ನಸುಮಣಿದಂದವಡೆಯೆ
ಒಲೆಯದೆ ಮೆಯ್ಯೊಪ್ಪದೊಳಿರೆ ಒಯ್ಯನೆ
ಕುಲವಧು ಪಜ್ಜೆಗೊಳುವುದು

೩೭

ತನ್ನೊಡಲಿಗೆ ತನ್ನ ಮನವ ಕಾಪಿಡುವುದು
ತನ್ನ ಮನಕೆ ತನ್ನ ಮತಿಯ
ತನ್ನ ಮತಿಗೆ ತನ್ನ ಸಾತ್ವಿಕ ಧೈರ್ಯವ
ನುನ್ನತಿವಡೆದೊಪ್ಪುವುದು

೩೮

ತನ್ನ ಮನೆ ಬಡತನಗಳ ಧನಗಳ
ತನ್ನಿನಿಯನ ತಪ್ಪುಗಳ
ತನ್ನ ಮರವೆ ಮೋಸಗಳನವರಿವರೊಳು
ಬಿನ್ನವಿಸದೆ ಮರಸುವುದು

೩೯

ಪರವೇಳೆಯೊಳು ಪರಿಯದೆ ತಾಯ್ವನೆಗಲ್ಲಿ
ಪಲವಗಲಿದ್ದು ನೆಲಸದೆ
ಪಲಬಗೆಯೊಳು ಪತಿಪದವನಗಲಿದೊಂದು
ಕಲೆಯ ಕಲ್ಪದವೋಲೆಣಿಪುದು

೪೦

ಪೆರರ ಮರ್ಮವ ಪೆರರಾಲೋಚನೆಗಳ
ಪೆರರೇಕಾಂತದೆಸಕವ
ಪೆರತೊರ್ವರಿಗೆ ಪೇಳುವ ಬೆಸನವ ಬಿಟ್ಟು
ನೆರೆ ನೇಮದೊಳು ನೆಲಸುವುದು

೪೧

ನೆರೆಮನೆ ಮನೆವಾರ್ತೆಯನಿಂತಿಂತೆಂದು
ಪರಿಹಾಸಗೈದು ಪಳಿಯದೆ
ಪರರೊಳು ಪರಿವಾದವ ಬಣ್ಣಿಸುವರೊಡ
ವೆರಸದೆ ಬೇರೆನಿಸುವುದು

೪೨

ಪರಿದೂರ ಬೀದಿ ಬೀದಿಯ ಪಲವನೆಯೊಳು
ತಿರುಗುವ ದಿಟ್ಟವೆಣ್ಗಳನು
ಕರೆದು ಮನ್ನಿಸದೇಕಾಂತವನಾಡದೆ
ಪರಿಹರಿಪುದು ಪದುಳದೊಳು

೪೩

ಬಂಡು ಬೂತಾಟದ ಮಾತುಗಳನು ಕಿವಿ
ಗೊಂಡು ಕೇಳದೆ ಕುರುಪಿಡದೆ
ಚಂಡಿ ಚಪಲೆ ಚಾಡಿಕಾತಿಯೆನಿಸದೆ ನ
ಲ್ವೆಂಡಿರಿರ್ಪುದು ನಲ್ಮೆಯೊಳು

೪೪

ಕೆಟ್ಟರಳಿದರೆಂಬ ಕೀರ್ತಿಗಂಜದೆ ಚಳಿ
ಬಿಟ್ಟ ಕೆಳದಿ ಪೆಣ್ಗಳೊಳು
ನೆಟ್ಟನೆ ಬಳೆದಿರ್ದ ನೇಹವ ನೆನೆಯದೆ
ಪೊಟ್ಟು ಕಳೆದು ಪೊರಡಿಪುದು

೪೫

ತೊಂಡುವೆಣ್ಗಳ ನೇಹದೊಡಕಿಗೆ ಸಿಲುಕದೆ
ಲಂಡವೆಣ್ಗಳ ಲಾಲಿಸದೆ
ಪುಂಡವೆಣ್ಗಳೊಳು ಪೊರ್ದುಗೆವಡೆಯದೆ ನ
ಲ್ವೆಂಡಿರೊಡನೆ ಬೆರಸುವುದು

೪೬

ಕಂಡಕಡೆಗೆ ನಡೆನಡೆದಳುಕದೆ ಕಾಲು
ಗಂಡ ಕರಾಳಿವೆಣ್ಣುಗಳ
ಅಂಡಲೆದವರೊಳು ಬಳೆದೊಳ್ನೇಹವ
ಬೆಂಡುಗಳೆದು ಬಿಡಿಸುವುದು

೪೭

ಮರುಳಾಗಿ ಮತ್ತೆ ಮಬ್ಬಿನೊಳಿದದಿಲ್ಲೆಂ
ದೊರೆದಿನಿಯನನೇಳಿಸದೆ
ಇರುಳಿಗೆಂದಿಳಿವೊತ್ತಿನೊಳೆಲ್ಲ ವಸ್ತುವ
ತರಿಸುವುದನುವಡಿಸುವುದು

೪೮

ನೆನೆದೊಂದೊಂದನೆಡೆಯೊಳಿದ್ದಾಣ್ಮನ
ಮನವ ನೋಯಿಸಿ ಮರುಗಿಸದೆ
ಮನೆಗೆಲಸವನೆಲ್ಲವನಾರೈದು ಮ
ತ್ತಿನಿಯನ ಶಯ್ಯೆಗೇರುವುದು

೪೯

ಪಗಲಿರುಳೀ ಪರಿಯೊಳು ನಡೆದಿನಿಯನ
ಬಗೆಯ ತಿಳಿದು ಬಂದಿಗೊಂಬ
ಸುಗುಣೆಯರಿಹಪರದೊಳು ಸೂರೆಗೊಂಬರು
ಸೊಗದ ಸುಗ್ಗಿಯ ಸುಲಭದೊಳು

೫೦

ಚೆನ್ನಿಗ ಚಿಕದೇವರಾಯನ ಸಂಚಿಯ
ಹೊನ್ನಮ್ಮನುಸುರ್ದ ಕಬ್ಬದೊಳು
ಉನ್ನತಿವಡೆದೊಪ್ಪಿದುದೆಂಟನೆಯ ಸಂಧಿ
ಸನ್ನುತ ಗುಣಸಂಬಂಧಿ

೫೧