EN | KA

VI

Hadibadeya Dharma

ಆವನಿಗಿಳೆಯುಮಾಗಸಮುಮಳತೆಗೊಳು
ವಾವೇಳೆಯೊಳಡಿಗಳಿಗೆ
ಪಾವುಗೆಯಂತಳವಟ್ಟು ತೋರಿದುವಾ
ದೇವನಿಗಾನು ವಂದಿಪೆನು

ಕಡಲೆಡೆಯೊಳು ಮಲಗಿದನಾವಳಿಗಾಗಿ
ಕಡಲ ಕಡೆದು ಬಳಲಿದನು
ಕಡಲೊಳು ದಾರಿಗೈದನು ಶೌರಿಯಾ ಸಿರಿ
ಮಡದಿಯಡಿಗೆ ವಂದಿಪೆನು

ಎಳೆಜವ್ವನಜೊಳೆಡೆಜವ್ವನದೊಳು ಮ
ತ್ತಿಳಿವ ಜವ್ವನದೊಳಿನಿಯಳ
ಒಳಗರಿತುಪಚರಿಸುವ ನಲ್ಲನಿಗವ
ಳೊಳಗಪ್ಪ ಬಗೆಯ ಬಣ್ಣಿಪೆನು

ಎರವೆಳ್ಳೆನಿತಿಲ್ಲದೊರ್ವರೊರ್ವಳೊಡ
ವೆರೆದಿರ್ಪ ಸತಿಪತಿಗಳಿಗೆ
ದೊರೆಕೊಂಬುದು ಸಂಸಾರ ಸುಖದ ಸುಗ್ಗಿ
ಪರದೊಳಾನಂದ ಪರ್ಬುವುದು

ಸತಿ ಪತಿಯರ ಸೌಹೃದದಿಂದ ಸಂಸಾರ
ವತಿಶಯವಡೆದು ತೋರುವುದು
ಇತರೇತರ ವೈರದಿಂದಿರ್ವರಿಗೆ ದು
ರ್ಗತಿಯಂತೆ ಕಂಗೊಳಿಸುವುದು

ಒಳತೋಟಿಯೊಡರಿಪ ಗಂಡ ಪೆಂಡಿರ ಮನೆ
ನೆಳಲ ಸೇರರು ನೀತಿವಿದರು
ಬಳಿಕ ಮಾತೇನಿನ್ನು ಬಸುರೊಳು ಬಂದ ಮ
ಕ್ಕಳುಮಲ್ಲಗಳೆದು ನಡೆವರು

ತೋಟಿಗೊಳುವ ದುಷ್ಟದಂಪತಿಗಳು ಬೂ
ತಾಟಗಳಿಂದನುಗೆಟ್ಟು
ಊಟ ನಿದ್ದೆಗಳೊಂದರೊಳು ಸುಖಮಿಲ್ಲದೆ
ಕೋಟಲೆಗೊಂಡು ಕುಗ್ಗುವರು

ದಂಪತಿಗಳ ಪಗೆತನದಿಂದಿರ್ವರ
ಪೆಂಪಿನ ಬೇರು ಪರಿವುದು
ಸೊಂಪುಗೆಡುವುದು ಸೊಬಗು ಸಂಸಾರದ
ಜಂಪು ಸಡಿಲಿ ಜಾರುವುದು

ಕಡುಮೂರ್ಖತನದೊಳು ಕಡೆಗಣಿಸುವ
ಬಿಡುನುಡಿಗಳ ಬಿತ್ತರಿಸುವ
ಬಿಡದೆ ಕಾದುವ ಗಂಡಪೆಂಡಿರನೇತಕೆ
ಪಡೆದನಕಟ ಪದ್ಮಭವನು

ಒರ್ವರೊರ್ವರನೊಡಬಡಿಸದ
ಗರ್ವಿತ ದಂಪತಿಗಳನು
ಇರ್ವರನಿಳೆ ನುಂಗದೆ ಪೊರುವುದರಿಂದ
ಸರ್ವಂಸಹೆಯೆನಿಸುವುದು

೧೦

ತಿಳಿದದರಿಂದಿನಿಯರು ದಿಟ್ಟವೆಂಡಿರ
ಬಳಿಸಂದೊಡಬಡಿಸುವುದು
ತಿಳಿಪುದೆದೆಗೊಳಿಸುವುದಿಂಪುದೋರುವು
ದೊಳಗುಗೈದೊಂದುವೆರೆವುದು

೧೧

ಒಲುಮೆಯನೊಳಕೊಂಡು ನಾಣ್ಚಿಯೊಲಿದಂತೆ
ಚಲಪೋರುವೆಳಜವ್ವನದ
ಕುಲಸತಿಯೊಳು ಕೋಪಿಸದೆ ಕೋಟಲೆಗೊಳ
ದಲಸದೆಯನುಸರಿಸುವುದು

೧೨

ಏನೆಂದರಿಯದೆಳವೆಯೊಳಿನಿಯಳಭಿ
ಮಾನಗೊಂಡಿರೆ ಮಚ್ಚರಿಸದೆ
ಮೋನದೊಳಿರದೆ ಮೋಡಿಯ ಕಾಣಿಸದೆ ಸ
ನ್ಮಾನದಿ ಮನಗರಗಿಪುದು

೧೩

ನಲ್ಲನಿಗೊಲಿದು ನಾಣ್ಚುವ ಮುದ್ದುವೆಣ್ಣಿನ
ಮೆಲ್ಲೆರ್ದೆ ಕಲ್ಲೆರ್ದೆಯೆನಿಸೆ
ಬಲ್ಲವನವಳ ಬಲುಮೆಗೈದು ಬಳಲದೆ
ಚಲ್ಲವಾಡುವುದು ಜಾಣ್ಮೆಯೊಳು

೧೪

ನಿಟ್ಟಿಸೆ ತಲೆವಾಗುವ ನೇಹದೊಳು ಮನ
ಮುಟ್ಟಿ ಮರಳಿ ನಿಟ್ಟಿಸುವ
ದಿಟ್ಟಿದಿಟ್ಟಿಗಳೊಡವೆರೆಯೆ ನಾಣ್ಚುವರೊಳ
ಗುಟ್ಟರಿತುಪಚರಿಸುವುದು

೧೫

ಮೀರಲೆಳಸಿ ಮೇಲುವರಿದು ಮನದ ಮಿತಿ
ಮೀರಲಂಜಿಕೆಗೊಂಬ ಮೆಯ್ಯ
ಏರುವ ಪುರ್ಬಿನೆರಗುವೊಳ್ಮೊಗದೆಳೆ
ನೀರೆಯ ನೆಲೆಯ ತಿಳಿವುದು

೧೬

ಪೆರತೊಂದು ಪೆಂಪೇರುವೆರ್ದೆಯ ಮಿರುಪ ಮೆಯ್ಯ
ನಿರಿಗೊಂಬ ನಿಡುವುರ್ಬುಗಳ
ಕುರಿತು ನೋಡುವ ನೋಟದ ಕೊಮರಿಯ ಬಗೆ
ಯರಿತೆರಕದೊಳೆರಗಿಪುದು

೧೭

ಕೊಂಕುಗಲಿವ ನೋಟ ಕುಣಿಯಲೆಳಸುವ ಪು
ರ್ಬಂಕೆಗೆ ನಿಲದಭಿಲಾಷೆ
ಬಿಂಕವಡೆವ ನಡೆವೆತ್ತೆಳೆವೆಂಡಿರ
ಸೋಂಕುವುದವರೊಲವರಿತು

೧೮

ಪೊದೆಯಲೆಳಸುವೆರ್ದೆ ಪುಸಿಯೆನಿಸುವ ನಡು
ಮದವೇರುವ ಮನದಿರವು
ಪದುಳಗೊಳುವ ನಡೆ ಬಗೆಗೊಂಬ ಬಾಲೆಯ
ಬೆದರಿಸದೊಡ ಬಡಿಸುವುದು

೧೯

ಸಣ್ಣನೆನಿಪ ನಡು ಸನ್ನಾಹವಡುವೆರ್ದೆ
ಬಣ್ಣವೇರುವ ಬಡಬಾಸೆ
ಬಣ್ಣಿಗೆಗೊಳುವ ಬಗೆಯ ಪೊಸವರೆಯದ
ಪೆಣ್ಣಿನೊಲುಮೆಯ ಪೆರ್ಚಿಪುದು

೨೦

ಗಾಡಿಗಲಿವ ನಡೆ ಗನ್ನವೇರುವ ನುಡಿ
ಮೋಡಿದೋರುವ ಮುದ್ದುನೋಟ
ಮೂಡುವ ಲಜ್ಜೆಯೆಸೆವ ಮುದ್ದುವೆಣ್ಗಳ
ನೀಡುಗೊಳುವುದಿರವರಿತು

೨೧

ಇಂಗಿತಗಳಿನಿದಿರಿಡಲೆಳಸುವ ನೋಟ
ವಂಗಹಾರದೊಳೆಸೆವಂಗ
ವ್ಯಂಗ್ಯವ ಕಲಿವ ಒಳ್ನುಡಿ ಬಗೆಗೊಳೆ ಕೋಮ
ಲಾಂಗಿಯ ಕೂರ್ತೆರಗಿಪುದು

೨೨

ಗಲಗೆಸಗದೆ ಗಾಬರಿಗೊಳಿಸದೆ ಮಿಗೆ
ಕಲಹವ ಗಂಟುವಡಿಸದೆ
ಬಲುಮೆಗೈಯದೆ ಬಾಲೆಯ ಬಣ್ಣವಾತಿನಿಂ
ದೊಲಿಸಿಯೊತ್ತಿಗೆ ಬರಿಸುವುದು

೨೩

ನಸುನಾಣ್ಚುವೆಳೆವೆಂಡಿರ ನಲವೇರಿಸಿ
ಬಸಗೈಯದೆ ಬಲ್ಮದೋರೆ
ಪೊಸಪೂವ ಸರಗೈದು ಮುಡಿಯದೆ ನಲುಗಿಸಿ
ರಸದೆಗೆವೆಸಕವೆನಿಪುದು

೨೪

ಬೆದರುವ ಮುದ್ದುವೆಣ್ಣಿಗೆ ಭೀತಿಗಳೆವಂತೆ
ಪದುಳಗೈಯದೆ ಬಲ್ಮೆದೋರೆ
ಸೊದೆಯುಂಡು ಸೊಕ್ಕುವ ಜೊನ್ನವಕ್ಕಿಗೆ ಬಿಸು
ಗದಿರನೂಡುವ ಗೈಮೆಯಂತೆ

೨೫

ಅರಿಯದ ಪೆಣ್ಣನಾದರಿಸಿ ಅಂಜಿಕೆಗಳ
ಪರಿವುಗೈಯದೆ ಬಲ್ಮೆದೋರೆ
ತರಿಸಂದು ಮಳೆಗೆ ಬಾಯ್ದೆರೆವ ಚಾದಗೆಯೊಳು
ಬರಸಿಡಿಲೆರಗಿತೆಂಬಂತೆ

೨೬

ಮುಗುದೆ ನಾಚಿಕೆಗೊಳೆ ಮುದ್ದಿಸಿ ತಿಳುಪದೆ
ಪಗೆ ಸಾಧಿಸಿ ಬಲ್ಮೆದೋರೆ
ಉಗುರೊಳು ಬಾಜಿಪ ಬೀಣೆಗೊನಕೆಗೊಂಬ
ಬಗೆಯೆನಿಪುದು ಭಾವಿಪೊಡೆ

೨೭

ಎರಗಿ ಎರಗದೆಳೆವೆಣ್ಣನೆರಗಿಸದೆ
ಬರಿದೆ ಮುನಿದು ಬಲ್ಮೆದೋರೆ
ಎರೆವ ತಣ್ಣೀರನೆಳಸುವೆಳೆವಳ್ಳಿಗೆ
ತರಿಳಗೆಂಡವ ತಳಿವಂತೆ

೨೮

ತರತಮಭಾವವರಿತು ತರುಣಿಯೊಳೊಡ
ವೆರಸಿ ಬಿನದವೆಸಗುವುದು
ತರವರಿಯದೆ ತಲೆಯೊಳು ಪೊತ್ತು ಲಾಲಿಸೆ
ಪರಿಭವಗೈದು ಪಳಿವಳು

೨೯

ತಿಳಿಯದಿನಿಯಳನುವನು ತೀವರವ
ಟ್ಟಳವಳಿ ದಾಲಿ ಪರಿಯದೆ
ಒಳಗರಿತೊಯ್ಯನೊಯ್ಯನೆ ಸೇರುವಿನಿಯನ
ಬಳಿ ಸಲುವರು ಬಾಲೆಯರು

೩೦

ಎರವಿನಿತಿಲ್ಲದಂತೆಳೆವಯದ ಪೆಣ್ಣ
ಸರಿಗೊಂಡು ಸರಸವಾಡುವುದು
ಸರಿಯಲ್ಲೆಂದುಳಿದಿರೆ ಮರವಡುವಳು
ಮರದ ಬೊಂಬೆಯ ಮಾಟದೊಳು

೩೧

ಒತ್ತಿಗೆ ಬರಿಸುವುದೊಮ್ಮೊಮ್ಮೆ ಬಿನದವಾ
ಡುತ್ತ ಭೀತಿಯ ಬಿಡಿಸುವುದು
ಮತ್ತೆ ಮೆಯ್ವಳಿಯೊಳು ಮನ್ನಿಸುವುದು ಚಿತ್ತ
ವೃತ್ತಿಯ ಸೆರೆಯ ಪಿಡಿವುದು

೩೨

ಬಿನದವಾತನು ಬೆಸಗೊಳೆ ಪೆರಸಾರದೆ
ಮುನಿಯದೆ ಮೋಡಿಯೊಳಿರದೆ
ಇನಿಸು ನಾಚಿಕೆಗೊಂಡೆರಗಿದ ನುಣ್ಮೊಗ
ದಿನಿಯಳನೆದೆಗರಗಿಪುದು

೩೩

ಮುಂಜೆರಗನು ಪಿಡಿದೊಡನೆ ಬಾಗಿದ ಮುಖ
ಕಂಜದ ಪದುಗುವೊಡಲಿನ
ಅಂಜುವ ಮನದೆಳವರೆಯದ ನೀರೆಯ
ನಂಜಿಸದನುಸರಿಸುವುದು

೩೪

ಸರಸವೆಸಗಿ ಕೈಸಾರ್ಚಿದೊಡನೆ ಮಿಗೆ
ಮೊರೆದೇಳುವ ಮೈನವಿರ
ಮುರಿಗೊಳುವಂಗದ ಮೊಳೆವ ಬೆಮರ ವರ
ತರುಣಿಯನೆದೆಗರಗಿಪುದು

೩೫

ಒದವಿ ಕೈಸೋಂಕಿದೊಡನೆ ಹದುಗುವ ಮೆಯ್ಯ
ಕದುಬುವ ಸಕಲ ಕರಣದ
ಬೆದರುವ ಕಣ್ಣ ಬೆಚ್ಚುವ ಮನದೆಳೆಯಳ
ಎದೆಗರಗಿಪುದಿಚ್ಛೆಯರಿತು

೩೬

ಪಿಡಿಯೆ ಮುಂಗೈಯ ಜಡಿದು ಮುರಿದಲಸುವ
ಕುಡುವುರ್ಬುಗಳ ಗುಡಿಗೊಳಿಪ
ಬಿಡು ಬಿಡೆಂದೊಮ್ಮೊಮ್ಮೆ ಬೆಚ್ಚಿ ಬಿನ್ನವಿಪೆಳೆ
ವಡದಿಯನೊಡಬಡಿಸುವುದು

೩೭

ಜಡೆಯ ತುಡುಕಿ ಪಿಡಿದೊಡನೆ ಘರಿಕ್ಕನೆ
ಮಡಮುರಿದೆಸೆವೊಳ್ಮೊಗದ
ಅಡವಾಯುವ ಕೂರ್‌ನೋಟದ ಕೊಮರಿಯ
ನೊಡಬಡಿಸುವುದೊಲಿಸುವುದು

೩೮

ಸೋಂಕಲೆಳಸೆ ಸುಕ್ಕುವ ಪೊಂಜೆಳೆಮೆಯ್ಯ
ಕೊಂಕಿದ ಕುಡುವುರ್ಬುಗಳ
ಭೋಂಕನೇಳುವ ನವಿರುಗಳೆಳವರೆಯದ
ಬಿಂಕಗಾತಿಯ ಬೆರಸುವುದು

೩೯

ಕನಲಿ ಕಲ್ಲೆರ್ದೆಯವಳೆಂದಲ್ಲಗಳೆಯದೆ
ಮನಮುರಿಯದೆ ಮಚ್ಚರಿಸದೆ
ಅನುನಯ ವಚನದಿಂದನುಗೊಳಸುವನಿಗೆ
ಮನವೀವರೆಳೆವಡದಿಯರು

೪೦

ನೆರೆಜವ್ವನದ ನೀರೆಯೊಳೆರವೆಣಿಸದೆ
ಮರೆಮಾಜಿ ಮನಮುರಿಯಿಸದೆ
ಎರಕವೆರಸಿ ಮನೆವಾಳ್ತೆಯ ಭಾರವ
ಪೊರಿಸಿ ಪುದುಗುವಡಿಸುವುದು

೪೧

ಆಯಿತಾಯಿತು ಎಂದಲ್ಲಗಳೆಯದೆ ತ
ನ್ನಾಯವನವಳಿಗರುಹದೆ
ಆಯ ಬೀಯವನವಳೊಡನಾಳೋಚಿಸಿ
ಕೈಯಡಕದೊಳಿರಿಸುವುದು

೪೨

ಎನ್ನವಳೆಂದೆರಕದೊಳೀವುದು ಪೊನ್ನ
ರನ್ನವ ಪೊಸದುಗುಲಗಳ
ತನ್ನ ಶಕ್ತಿಯ ವಂಚಿಸದೆ ಮನದನ್ನಳ
ನುನ್ನತಿವಡಿಸುವುದೊಲಿದು

೪೩

ತನ್ನ ಪೆರ್ಚುಗೆಯೊಳು ಪೆರ್ಚುಗೆಗೊಂಡುರೆ
ತನ್ನ ಕುಂದಿನೊಳು ಕುಂದುವಳ
ತನ್ನ ಮೆಯ್ಯೊಳಗರೆಮೆಯ್ಯೆನಿಸುವ ಮನ
ದನ್ನಳ ಮನ್ನಿಪುದೊಲಿದು

೪೪

ಉಡದಿರೆ ಮಡಿಯುಡದುಣದಿರೆ ಸರಿಯುಣ
ದೊಡವೆಯ ತೊಡದಿರೆ ತೊಡದೆ
ಎಡವಿಡದಿನಿಯನಡಿಯ ನೆಳಲನು ಪಡಿ
ವಿಡಿವ ಮಡದಿಯ ಮನ್ನಿಪುದು

೪೫

ನಿನ್ನದೆನ್ನದು ನೀ ನಾನು ನಿನ್ನವರಿವ
ರೆನ್ನವರಿವರುಗಳೆಂದು
ತನ್ನಿನಿಯಳ ತನ್ನೊಡವೆಯ ಮೈ ಬಳಗವ
ಭಿನ್ನಗೈಯದೆ ಬೆರಸುವುದು

೪೬

ಮನದೊಳು ಮನ ನೆನಹಿನೊಳು ನೆನಹು ಮತ್ತೆ
ತನು ತನುವಿನೊಳೊಡವೆರಸಿ
ಅನುಗೊಳೆ ಪಾಲುನೀರುಗಳಂತಿನಿಯನು
ಮಿನಿಯಳುಮೇಕವೆನಿಪುದು

೪೭

ಎಳೆಜವ್ವನ ಮೊದಲಿಂದುವರೆಗಮೆನ್ನ
ಬಳಿಸಂದು ಬಾಳಿದಳೆಂದು
ಇಳಿವ ಜವ್ವನದೊಳಗೆರವುದೋರದೆಯೆಂದಿ
ನೊಳು ನೇಹವನೊಡರಿಪುದು

೪೮

ಎಣಿಕೆಗೈವೊಡೆ ರೂಪು ಜವ್ವನಮಿದ್ದೇನು
ಗುಣಮಿಲ್ಲದ ಕುಲಸತಿಗೆ
ಗುಣಕರುಗೊಂಡಿರೆ ಕೂರ್ತೆಂದೆಂದಿಗು
ಮೆಣೆ ಬಿಚ್ಚದೇಕವೆನಿಪುದು

೪೯

ಎರವಿಲ್ಲದೇಕವೆನಿಸಿ ಧರ್ಮದೊಳು ಸಂ
ಸರಿಸುವ ಸತಿಪತಿಗಳಿಗೆ
ಪುರುಷೋತ್ತಮನಡಿಗಳ ಪೂಜೆಯಿಂದಿಹ
ಪರಸುಖ ಪದುಳಗೊಳುವುದು

೫೦

ಚೆನ್ನಿಗ ಚಿಕದೇವರಾಯನ ಸಂಚಿಯ
ಹೊನ್ನಮ್ಮನುಸುರ್ದ ಕಬ್ಬದೊಳು
ಉನ್ನತಿವಡೆದೊಪ್ಪಿದುದಾರನೆಯ ಸಂಧಿ
ಸನ್ನುತ ಗುಣಸಂಬಂಧಿ

೫೧