EN | KA

VIII

Naḷacaritre

ಸುರರ ದುಂದುಭಿ ಮೊಳಗೆ ಧರಣೀ
ಸುರರುಲಿಯೆ ಮುರಹರನ ಕರುಣದಿ
ತರುಣಿ ದಮಯಂತಿಯಳನೊಡಗೂಡಿದನು ನಳನೃಪತಿ

ಕೇಳಿದೈ ರಾಜೇಂದ್ರ ಧರ್ಮನೃ
ಪಾಲ ತೊರೆದಳು ಸಕಲ ವಿಭವವ
ಧೂಳಿ ಮುಸುಕಿದ ಮುಡಿಯ ಮಾಸಿದ ವಸನಗಳ ನೋಡಿ
ಕೇಳಿದಳು ಪೂರ್ವೋತ್ತರವ ಭೂ
ಪಾಲನವನಿಯನುಳಿದು ನಿನ್ನವ
ನಾಲಯದೊಳೆಂತಗಲಿದನು ಹೇಳೆಂದಳಾ ಜನನಿ

ಕಪಟದಲಿ ಪುಷ್ಕರನು ರಾಜ್ಯವ
ನಪಹರಿಸಿದನು ಜೂಜಿನಲಿ ನಳ
ನೃಪತಿ ಸೋತಾರಣ್ಯಕೈದಿದನೊಂದು ವಸ್ತ್ರದಲಿ
ಗುಪಿತದಿಂ ಬರೆ ಮುಂದೆ ಪಕ್ಷಿಗ
ಳುಪಮೆಯಲಿ ಕೊಂಡೊಯ್ಯೆ ವಸನವ
ಕೃಪಣತನದಲಿ ತನ್ನ ಸೀರೆಯೊಳೊಯ್ದನರ್ಧವನು

ಮರೆದು ಮಲಗಿದೆ ರಾತ್ರಿಯಲಿ ಎ
ಚ್ಚರಿಸದೇ ನೃಪ ತೆರಳಿದನು ಕಾ
ತರಿಸಿ ಕಂಬನಿಯೊಳಗೆ ಬಂದೆನು ಚೈದ್ಯನಗರಿಯಲಿ
ಕರುಣಿ ಚಿಕ್ಕಮ್ಮನಲಿ ತಿಂಗಳು
ಹೊರೆದೆನೀ ದೇಹವನು ಇಲ್ಲಿಗೆ
ಕರೆಸಿದಿರಿ ನೀವೆನುತ ಕಂಬನಿದುಂಬಿದಳು ತರಳೆ

ಏನನೆಂಬೆನು ತನ್ನ ಪುಣ್ಯದ
ಹಾನಿಯನು ಎಲೆ ತಾಯೆ ಲೋಕದ
ಮಾನಿನಿಯೊಳಾರುಂಟು ಎನ್ನವೊಲ್ ತೊಳಲಿ ಬಳಲಿದರು
ದಾನವಾಮರರೊಳಗೆ ಕಾಣೆ ಸ
ಮಾನರನು ನಳನೃಪಗೆಯಿನ್ನಿದ
ಕೇನ ಮಾಡುವೆನೆನುತ ಕಂಬನಿದುಂಬಿದಳು ತರುಣಿ

ಆರಿಗೆರಡೆಣಿಸಿದೆನೊ ಹಿರಿಯರ
ಗಾರುಗೆಡಿಸಿದೆನೋ ವೃಥಾ ಮು
ನ್ನಾರ ನೋಂಪಿಗಪಾರವಿಘ್ನವ ಮಾಡಿ ಕೆಡಿಸಿದೆನೊ
ಆರನಳಲಿಸಿದೆನೊ ತಪೋವ್ರತ
ನಾರ ಜರೆದೆನೊ ತನ್ನ ನಿಜಸಂ
ಸಾರವೀ ತೆರನಾಯ್ತು ಶಿವಶಿವಯೆನುತ ಮರುಗಿದಳು

ಕ್ಷಿತಿಯೊಳೆಲ್ಲಿಹನೋ ಪರಸ್ತ್ರೀ
ರತಿಗೆ ಮನಸೋತನೋ ತಪಸಿನ
ವ್ರತವ ಕೈಕೊಂಡನೋ ದನುಜರ ಬಲೆಗೆ ಸಿಲುಕಿದನೊ
ವಿತಳಕಿಳಿದನೊ ಚೆಲುವಿನಮರಾ
ವತಿಗೆ ನಡೆದನೊ ತೊರೆದು ನಳಭೂ
ಪತಿಯ ಕಾಣೆನು ತನಗೆ ಗತಿಯೇನೆಂದಳಿಂದುಮುಖಿ

ಪತಿವಿಹೀನೆಗೆ ಸಲುವುದೇ ಸು
ವ್ರತ ಸುಭೋಜನ ಸೌಖ್ಯ ಸುಖಸಂ
ಗತಿಗಳುಂಟೇ ತಾಯೆ ಭಾವಿಸಿ ನೋಡು ಚಿತ್ತದಲಿ
ಸತಿಯರಿಗೆ ಪತಿದೈವವೆಂದಾ
ಶ್ರುತಿವಚನವಾಡುವುದು ತನಗಾ
ಪತಿಯನಗಲಿದ ಬಳಿಕ ಗತಿಯಿಲ್ಲೆಂದಳಿಂದುಮುಖಿ

ಧರೆಯೊಳೆಲ್ಲಿಹನೋ ವಿಚಾರಿಸಿ
ಕರೆಸಿಕೊಡು ಎಲೆ ತಾಯೆ ಎನ್ನಯ
ಪುರುಷನಿಲ್ಲದ ಬಳಿಕ ಬಿಡುವೆನು ತನುವನೆಂದೆನಲು
ಮರುಗಿದಳು ಮಗಳೆಂದ ಮಾತಿಗೆ
ಕರಗಿ ಕಂಬನಿದೊಡೆದು ತನ್ನಯ
ಪುರುಷನೊಡನಿಂತೆನಲು ಭೀಮನೃಪಾಲ ಚಿಂತಿಸಿದ

ಅರಸ ಕೇಳು ವಿದರ್ಭಭೂಪತಿ
ಕರೆಸಿದನು ಭೂಸುರರನವರಿಗೆ
ಪರಮವಸ್ತುವನಿತ್ತು ಕಳುಹಿದ ನಿಷಧಪತಿಯಿರವ
ಶರಧಿಮೇರೆಯೊಳೆಲ್ಲ ಭೇದಿಸಿ
ಕರೆದು ತಾರೆನಲವರು ಬರುತಿರೆ
ಕರೆಸಿದಳು ದಮಯಂತಿಯವರೊಡನೆಂದಳೀ ಮಾತ

ನಳನೃಪತಿ ನಿಜರಾಜತೇಜವ
ನುಳಿದು ತಾ ಪ್ರತಿರೂಪುದಾಳಿಹ
ನಿಳೆಯೊಳಗ್ಗದ ಸಭೆಯೊಳಗೆ ನೀವೆಂಬುದೀ ನುಡಿಯು
ಹಳುವದಲಿ ಸತಿಯುಟ್ಟ ಸೀರೆಯ
ಸೆಳೆಯುತರ್ಧವ ಕೊಂಡು ನಾರಿಯ
ಕಳೆದು ಹೋದವರುಂಟೆಯೆನಲುತ್ತರವ ಪೇಳುವನು

೧೦

ಆ ನುಡಿಯ ತಂದೆನಗೆ ನೀವನು
ಮಾನವಿಲ್ಲದೆ ಪೇಳೆನುತ ಸ
ನ್ಮಾನದಿಂ ಬೀಳ್ಕೊಟ್ಟಳಂಗನೆ ತೆರಳಿದರು ಬಳಿಕ
ಮಾನವೇಂದ್ರರ ಸಭೆಯ ನೋಡಿ ನಿ
ಧಾನಿಸುತ ನಾನಾ ದಿಗಂತ
ಸ್ಥಾನದಲಿ ನಗರಿಗಳ ಭೇದಿಸುತೈದಿದರು ಪಥವ

೧೧

ಇಳೆಯಮರರಲ್ಲಲ್ಲಿ ಗಿರಿವನ
ಗಳ ನಿರೀಕ್ಷಿಸಿ ಕೆಲವು ಋಷಿಗಳ
ನಿಳಯಗಳ ನೋಡುತ್ತ ಕಾನನಗಳೆದು ಬೇಗದಲಿ
ಜಲಧಿ ಮೇರೆಯ ಮಧ್ಯದಲಿ ಭೂ
ವಳಯವೆಲ್ಲವ ಶೋಧಿಸುತ ತನು
ಬಳಲಿಕೆಯ ಭಾವಿಸದೆ ನಡೆದರು ಮುಂದೆ ಪಥವಿಡಿದು

೧೨

ಮುಂದೆ ಬರುತಿರೆ ಕಂಡರೊಬ್ಬನ
ಸಂದ ಯಾಚಕ ಭೂಸುರನನೆ
ಲ್ಲಿಂದ ಬಂದಿರಿಯೆನಲಯೋಧ್ಯಾನಗರದಿಂದೆನಲು
ಕುಂದದಲ್ಲಿ ವಿಶೇಷವೇನುಂ
ಟೆಂದೆನಲು ಪೇಳಿದನು ಮಖವಹು
ದೆಂದ ವಿಪ್ರನ ಮಾತಿನಿಂದೈದಿದರಯೋಧ್ಯೆಯನು

೧೩

ಮರುದಿವಸ ಋತುಪರ್ಣ ಮುನಿಮು
ಖ್ಯರು ಸಹಿತಲೋಲಗದೊಳಿರೆ ಕಂ
ಡರು ಮಹಾಸಭೆಯೊಳಗೆ ಹೊಕ್ಕರು ಎಂದು ಕೈನೆಗಹಿ
ಹಿರಿಯರಿದೆ ಸಾಮಾಜಿಕರು ಸ
ಚ್ಚರಿತರಿದೆಲಾ ಕೇಳಿ ನೀವೆಂ
ದುರುತರವ ಗಂಭೀರವಾಕ್ಯದೊಳೆಂದನಾ ವಿಪ್ರ

೧೪

ಹಳುವದಲಿ ಬಂದಲಸಿ ಮಲಗಿದ
ಕುಲಸತಿಯ ವಸನಗೊಳಗರ್ಧವ
ಕಳೆದುಕೊಂಡೊಯ್ದಗಲಿ ಪೋದವರುಂಟೆ ರಾತ್ರಿಯಲಿ
ಇಳೆಯನಾಳುವ ನೃಪರ ಸತ್ಯದ
ಬಳಕೆಗಿದು ಲೇಸಲ್ಲವೆನೆ ಮನ
ವಳುಕಿ ನಸುನಗೆಯಿಂದ ನುಡಿದನು ಒಲಿದು ಬಾಹುಕನು

೧೫

ಕ್ಷಿತಿಯಮರರೆಲ್ಲಿಂದ ಬಂದಿರಿ
ಸತಿಯನಗಲಿದ ಬಾಹಿರನು ಅವ
ಪತಿಯೆ ಸಾಕಂತಿರಲಿ ಬಿಡು ಋತುಪರ್ಣನೋಲಗದಿ
ಅತಿಶಯದ ನುಡಿಗೇಳ್ದೆವಕಟಾ
ಸತಿಗೆ ವಂಚನೆಯಲ್ಲವದು ನಿಜ
ಪತಿಗೆ ಕೊರತೆಯದೆಂದು ಸೂಚಿಸಿ ನುಡಿದ ವಿಪ್ರರಿಗೆ

೧೬

ಈತನಾರು ಕುರೂಪಿ ನೈಷಧ
ನೀತನೋ ಸಭೆಯೊಳಗೆ ತಾನೀ
ಮಾತನಾಡಲದೇಕೆ ಸಂಶಯವೆನುತ ಮನದೊಳಗೆ
ದೂತರಾಲೋಚಿಸುತ ಬಂದರು
ಭೂತಳಾಧಿಪ ಭೀಮನೃಪ ಸಂ
ಜಾತೆಯನು ಕಂಡೆರಗಿ ಕೈಮುಗಿದೆಂದರೀ ಹದನ

೧೭

ದೇವಿಯರು ಚಿತ್ತೈಸುವುದು ಭುವ
ನಾವಳಿಗಳೆಲ್ಲವನು ನೋಡಿದು
ನಾವು ಮುಂದೈತರಲು ಕಂಡೆವಯೋಧ್ಯೆನಗರಿಯನು
ಭೂವರನ ಋತುಪರ್ಣರಾಯನ
ಸೇವೆಯಲ್ಲಿ ಕುರೂಪಿಯೋರ್ವನು
ಜೀವಸಖನಾತಂಗೆ ಬಾಹುಕನೆಂಬ ನಾಮದಲಿ

೧೮

ತುರಗನಿಕರದ ಶಿಕ್ಷೆಯಲಿ ಮಂ
ದಿರದ ಬಾಣಸಿತನದ ಕೆಲಸದಿ
ನೆರೆ ನಿಪುಣನೆಂದೆನಿಸಿಕೊಂಡಿಹ ನೃಪನ ಸಭೆಯೊಳಗೆ
ಪರುಠವಿಸಿ ನೀವೆಂದ ಮಾತನು
ವರಸಭಾಮಧ್ಯದಲಿ ನುಡಿಯ
ಲ್ಕಿರದೆ ತಾನೀ ಮಾತನೆಂದನು ನಗುತ ಬಾಹುಕನು

೧೯

ಸತಿಗೆ ವಂಚನೆಗೈದ ಪತಿ ತಾ
ಮತಿವಿಕಳನಂತಿರಲಿ ಭೂಸುರ
ಪತಿಯೆ ಕೇಳಾ ಸತಿಗೆ ಭಂಗವೆ ಪತಿಗೆ ಕೊರತೆ ಕಣಾ
ಪತಿವ್ರತವನಾಚರಿಸುವಳು ನಿಜ
ಪತಿಯ ಗುಣದೋಷಗಳನೆಣಿಪಳೆ
ಗತಿಗೆ ಕಾರಣ ಸತ್ಯವೇ ತನಗೆಂದನವ ನಗುತ

೨೦

ಪತಿಯ ತಪ್ಪೆಣಿಸುವ ಸತಿ ಪತಿ
ವ್ರತೆಯೆ ಧರಣಿಯ ಪಾಲಿಸುವ ಜನ
ಪತಿಯ ನಿಂದಿಸುವಾತ ಸೇವಕನೇ ನಿಧಾನಿಸಲು

ಪಿತನ ವಾಕ್ಯವನತಿಗಳೆವವನು
ಸುತನೆ ಗುರುವಿನ ಮಾತನೆಣಿಸದ
ಪತಿತ ಪಾತಕಿ ಶಿಷ್ಯನೇ ತಾನೆಂದ ಬಾಹುಕನು

೨೧

ಎನಲು ತಲೆದೂಗಿದಳು ಈ ಮಾ
ತಿನಲಿ ಸಂಶಯವಿಲ್ಲದಿಹುದೆಂ
ದೆನುತ ಕಬನಿದುಂಬಿದಳು ದಮಯಂತಿ ಮನದೊಳಗೆ
ಇನಿಯನಹುದಾತನ ಪರೀಕ್ಷೆಗೆ
ನೆನೆಯಬೇಕೆಂದನುವನೆಂದಾ
ವನಿತೆ ತಂದೆಯನುಜ್ಞೆಯಲಿ ಕರೆದಳು ಸುದೇವನನು

೨೨

ಇಳೆಯಮರ ಬಾರೆಂದು ವಿವರವ
ತಿಳುಹಿ ಪಯಣವ ಮಾಡಿ ಕಳುಹಲು
ಹೊಳಲ ಹೊರವಂಟನು ಸುದೇವನು ಹಲವು ಯೋಜನವ
ಕಳೆದು ಬರುತಿರೆ ಮುಂದೆ ಕಂಡನು
ಲಲಿತರತ್ನಪ್ರಭೆಯ ಗೋಪುರ
ಹೊಳೆವಯೋಧ್ಯಾಪುರವನೀಕ್ಷಿಸಿ ಹೊಕ್ಕನವನಂದು

೨೩

ಇಟ್ಟ ಫಣೆಯೊಳಗೆಸೆವ ಮಟ್ಟಿಯ
ತೊಟ್ಟ ಹೊಸ ಯಜ್ಞೋಪವೀತದ
ಕಟ್ಟಿಯಿರುಕಿದ ಕಕ್ಷಪಾಳದ ಬೆರಳ ಜಪಸರದ
ಉಟ್ಟ ಧೋತ್ರದ ಬಳಲುಗಚ್ಚೆಯ
ಪಟ್ಟುಗಚ್ಚರಿರೂಪಿನಲಿ ಪರ
ಮೇಷ್ಠಿಯಂದದಿ ಬಂದನಾ ಋತುಪರ್ಣನೋಲಗಕೆ

೨೪

ಆರು ನೀವೆಲ್ಲಿಂದ ಬಂದಿರಿ
ದೂರದೇಶದ ಹಿರಿಯರಿಳೆಯೊಳು
ಕಾರಣವದೇನಿರುವುದಲ್ಲಿ ವಿಶೇಷವೇನೆನಲು
ಭೂರಮಣ ಕೇಳವನಿಯಲಿ ಸಂ
ಚರಿಸುತ ಬಂದೆವು ವಿದರ್ಭಕೆ
ಭೂರಿನೃಪರೈ ತರುತಲಿದೆ ಚತುರಂಗಬಲಸಹಿತ

೨೫

ದೇಶದೇಶದ ಯಾಚಕರು ಧರ
ಣೀಶರುನ್ನತ ತುರಗ ಗಜ ರಥ
ಭೂಸುರರು ಮಂತ್ರಿಗಳು ದೈವಜ್ಞರು ಸುಗಾಯಕರು
ಭಾಸುರದ ತೇಜದಲಿ ಜನ ಸಂ
ತೋಷದಲಿ ನಡೆತರುತಲಿದೆ ಪರ
ವಾಸುದೇವನೆ ಬಲ್ಲ ದಮಯಂತಿಯ ಸ್ವಯಂವರವ

೨೬

ಶಯನದಲಿ ಮಲಗಿದ ಸತಿಯನಡ
ವಿಯಲಿ ನಳನೃಪನಗಲಿ ಹೋದನು
ನಯವಿಹೀನಳಿಗಾಗಿ ರಚಿಸಿದರಾ ಸ್ವಯಂವರವ
ಪಯಣ ನಿಮಗುಂಟೀಗಳೆನೆ ನೃಪ
ಬಯಸಿ ಹೆಣ್ಣಿನ ಮೋಹದಲಿ ವಾ
ಜಿಯ ವರೂಥಕೆ ಹೂಡಬೇಳಿದ ಕರೆಸಿ ಬಾಹುಕನ

೨೭

ಹೈಹಸಾದವೆನುತ್ತ ವಂದಿಸಿ
ಬಾಹುಕನು ಮಂದಿರಕೆ ಬಂದು ವಿ
ವಾಹವುಂಟೇ ಮರಳಿ ದಮಯಂತಿಗೆ ಜಗನ್ನಾಥ
ಈ ಹದನವಾರಿಂದಲಾದುದೊ
ದ್ರೋಹಿಯಾ ದಮಯಂತಿಯಿದು ಸಂ
ದೇಹವಾಗಿದೆ ಎನುತ ಚಿಂತಿಸಿ ಬಂದನರಮನೆಗೆ

೨೮

ಲಾಯದೊಳಗುತ್ತಮದ ತೇಜಿಯ
ನಾಯ್ದು ಹೂಡಿದ ರಥಕೆ ಸೇರಿಸಿ
ವಾಯುವೇಗದ ತೇರ ನಿಲಿಸಿದ ತಂದು ನೃಪನೆಡೆಗೆ
ರಾಯನೇರಲು ಕರಿ ತುರಗ ರಥ
ಪಾಯದಳ ಸಂದಣಿಸಿದುದು ನೆಲ
ಬಾಯ ಬಿಡೆ ಹೊರವಂಟ ನೃಪ ಘನವಾದ್ಯರಭಸದಲಿ

೨೯

ಜನಪನೆಂದನು ಬಾಹುಕಗೆ ಮಾ
ನಿನಿಯನೀಕ್ಷಿಸಬೇಕು ನಿಲ್ಲದು
ಮನವಿದೊಂದೇ ದಿನಕೆ ನಡೆಸು ವಿದರ್ಭಪುರವರಕೆ
ಎನಲು ನಕ್ಕನು ಮನದೊಳಗೆ ತ
ನ್ನಿನಿಯಳಿಗೆ ವಿಧಿ ಬರೆದನೇ ಶಾ
ಸನವ ಮೀರುವರಾರೆನುತ ಮರುಗಿದನು ನಳನೃಪತಿ

೩೦

ಕರದ ವಾಘೆಯ ಸಡಿಲ ಬಿಡೆ ಮುಂ
ಬರಿದು ಚಿಮ್ಮಿದುವಡಿಗಡಿಗೆ ರಥ
ತುರಗ ಹಾಯ್ದುದು ತೇರು ಮುಂದಕೆ ಪವನವೇಗದಲಿ
ಭರದೊಳೈತರೆ ನೃಪನ ಹಚ್ಚಡ
ಧರೆಗೆ ಬೀಳಲು ಸಾರಥಿಯನೆ
ಚ್ಚರಿಸಿದನು ಋತುಪರ್ಣನಿದಕಿನ್ನೇನು ಹದನೆನುತ

೩೧

ಜೀಯ ಚಿತ್ತೈಸುರವಣಿಸಿ ನಿ
ರ್ದಾಯದಲಿ ಹಿಂದುಳಿದುದಂಬರ
ವಾಯುಗತಿಯಲಿ ದಾಟಿ ಬಂದೆವು ಹಲವು ಯೋಜನವ
ಹೋಯಿತಾ ಮಾತೇಕೆ ನಡೆಯೆನೆ
ರಾಯ ಮೆಚ್ಚಿದ ಸಾರಥಿಯ ಬಿರು
ದಾಯಕನು ನೀನೆಂದು ಕೊಂಡಾಡಿದನು ಬಾಹುಕನ

೩೨

ಮುಂದೆ ಕಂಡನು ಬರುತಲಡವಿಯೊ
ಳೊಂದು ತಾರೆಯ ಮರನನದರೊಳು
ಸಂದ ಫಲಪರ್ಣಂಗಳೆಣಿಸದೆ ಸೂತ ಪೇಳೆನಲು
ಇಂದೆನಗೆ ಮತಿದೋರದವನಿಪ
ಕುಂದದೆನಿಸಿದ ಪೇಳು ನೀನೆನ
ಗೆಂದೊಡಾ ಸಾರಥಿಗೆ ಲೆಕ್ಕವನರುಹಿದನು ನೃಪತಿ

೩೩

ಇಳಿದು ರಥವನು ಬಂದು ವೃಕ್ಷದ
ಬಳಿಗೆ ನಿಂದಾ ಶಾಖೆಗಳಲಿಹ
ಫಲದ ಪರ್ಣಂಗಳೆಣಿಸಿದನಾ ಪದ್ಯಸಂಖ್ಯೆಯಲಿ
ಒಲಿದು ಲೆಕ್ಕವ ಕಂಡು ತಾ ಮನ
ನಲಿದು ನಳನೃಪ ಪುಷ್ಕರನ ತಾ
ದೆಲುವ ಹದನಾಯ್ತೆನುತ ಬರೆ ಕಲಿಪುರುಷನಿದಿರಾದ

೩೪

ಎಲೆ ನೃಪಾಲಕ ನಿನ್ನ ಸತ್ಯದ
ನೆಲೆಯನೀಕ್ಷಿಸಬೇಕೆನುತ ಬಂ
ದಳಲಿಸಿದೆ ಹಿರಿದಾಗಿ ನೋಯದಿರಿನ್ನು ಚಿತ್ತದಲಿ
ತೊಲಗಿದೆನು ಇಂದಿನಲಿ ಶುಭಮಂ
ಗಳಕರವು ನನಗಪ್ಪುದೆನಲಾ
ನಳನೃಪತಿ ಖತಿಗೊಂಡು ಶಾಪವ ಕೊಡದೆ ಮನ್ನಿಸಿದ

೩೫

ಮಾನವಾಧಿಪ ಕೇಳು ಲೋಕಕೆ
ದೀನಜನಬಾಂಧವನು ನಳನೃಪ
ಕಾನನದೊಳವನತ್ತ ಕಳುಹಿಸಿ ಬಂದು ರಥವೇರಿ
ಆ ನರೇಂದ್ರಗಶ್ವಹೃದಯವ
ತಾನರುಹಿ ಆತನಲಿ ಪಡೆದನು
ಸಾನುರಾಗದಿ ಭೂರುಹದ ಹೃದಯವನು ನಿಮಿಷದಲಿ

೩೬

ಕರದ ವಾಘೆಯ ಕೊಂಡು ನೃಪಗೆ
ಚ್ಚರಿಸಿ ನೂಕಿದ ತೇಜಿಗಳು ಹೂಂ
ಕರಿಸಿ ಮನ ಮುಂಕೊಂಡು ಹಾಯ್ದುದು ಬಿಟ್ಟ ಸೂಟಿಯಲಿ
ಭರದ ಗಮನವನೇನನೆಂಬೆನು
ನೆರೆದ ಜನವಲ್ಲಲ್ಲಿ ನಿಂದುದು
ಧರೆಯೊಳೀ ಸಾರಥಿಗೆ ಸರಿಯಾರರಸ ಕೇಳೆಂದ

೩೭

ತುರಗಹೇಷಾರವದ ಗಾಲಿಯ
ಧರಧುರದ ಚೀತ್ಕೃತಿಯ ಸಾರಥಿ
ಯುರವಣೆಯ ರಥದಚ್ಚುಗಳ ಝೇಂಕಾರನಾದದಲಿ
ಭರದಿ ಕೆಂಧೂಳಿಡುತ ಬರಲಾ
ಪುರಜನರು ಸಂದಣಿಸಿ ನೋಡಲು
ಪರಿಚರರು ಬಂದರು ವಿದರ್ಭನೃಪಾಲಗರುಹಿದರು

೩೮

ಬದನೇ ಋತುಪರ್ಣನೆನುತಾ
ನಂದ ಮಿಗೆ ಕರೆಸಿದನು ಸಚಿವರ
ಮಂದಿಯನು ಕಳುಹಿಸಲು ಕರೆತಂದರು ನಿಜಾಲಯಕೆ
ಸಂದಣಿಯ ಪರಿಹರಿಸಿ ನೃಪ ಮುದ
ದಿಂದ ಬೇರರಮನೆಯೊಳುಲುಪೆಗ
ಳಿಂದಯೋಧ್ಯಾಪತಿಯ ಸತ್ಕರಿಸಿದನು ಭೀಮನೃಪ

೩೯

ಕೇಳಿದಳು ದಮಯಂತಿ ವಾರ್ತೆಯ
ತಾಳಿದಳು ಹರುಷವನು ಮನದಲಿ
ಫಾಲಲೋಚನದಿಂದ ಫಲಿಸಿತು ಪುಣ್ಯವೆನಗಿಂದು
ಬಾಲೆ ಕೇಳೆನಗಿಂದು ಶೋಕ
ಜ್ವಾಲೆ ಪರಿಹರವಾಯ್ತು ಮಂಗಳ
ದೇಳಿಗೆಯು ಪಸರಿಸಿತು ಶುಭಕರವೆಂದಳಿಂದುಮುಖಿ

೪೦

ಖಿನ್ನನಾದನು ಚಿತ್ತದಲಿ ಋತು
ಪರ್ಣ ಭೂಸುರನೆಂದ ಮಾತಿನ
ಬಿನ್ನಣಕೆ ಮರುಳಾಗಿ ಬಂದೆನು ಮೂಢನಾದೆನಲ
ಭಿನ್ನವಿಲ್ಲದೆ ಕೊಂಡ ನಾಚಿಕೆ
ಗಿನ್ನು ಹದನೇನೆನುತ ಗುಣಸಂ
ಪನ್ನ ಮರುಗಿದ ತನ್ನ ಮನದ ದುರಂತಚಿಂತೆಯಲಿ

೪೧

ಓಲಗವನಿತ್ತನು ವಿದರ್ಭನೃ
ಪಾಲ ಕರೆಸಿದ ಮಂತ್ರಿ ಬಾಂಧವ
ಜಾಲವನು ಋತುಪರ್ಣ ಬಂದನು ಬಾಹುಕನು ಸಹಿತ
ಸಾಲಮಣಿಪೀಠದಲಿ ಕುಳ್ಳಿರೆ
ಬಾಲೆಯರ ಸಂಗೀತನೃತ್ಯದ
ಕೇಳಮೇಳದಿ ರಂಜಿಸಿತು ಭೂಪಾಲನಾಸ್ಥಾನ

೪೨

ನಾರಿಯರ ಮರೆಗೊಂಡು ಸಭೆಯಲಿ
ಸಾರಥಿಯ ಕುಬ್ಜಾವತಾರವ
ನೋರೆಗಣ್ಣಿನೊಳೀಕ್ಷಿಸುತ ದಮಯಂತಿ ಮನದೊಳಗೆ
ಆರಿವನು ನಳನೃಪನ ಹೋಲುವ
ಚಾರುಚಿನ್ನೆಗಳಿಲ್ಲ ತೋರ್ಕೆ ವಿ
ಕಾರವಾಗಿದೆ ರೂಪೆನುತ ಚಿಂತಿಸಿದಳಿಂದುಮುಖಿ

೪೩

ಒರೆದೊರೆದು ನೋಡಿದಳು ಸೂತನ
ಸಿರಿಮೊಗದ ಕಾಂತಿಯನು ಕಳೆಗುಂ
ದಿರುವ ಕಾಯವ ಕಪ್ಪಿನಿಂದುದುರಿರ್ದ ರೋಮದಲಿ
ಪರಿಕಿಸಲ್ಕೀ ರೂಪು ಕೈಕೊಂ
ಡಿರುವನೇ ನಳನೃಪತಿ ಶಿವಶಿವ
ಮುರಹರನು ತಾ ಬಲ್ಲನೆಂದುಮ್ಮಳಿಸಿದಳು ತರಳೆ

೪೪

ಹರೆದುದೋಲಗವಲ್ಲಿ ನಿಜಮಂ
ದಿರಕೆ ಬಂದಾಲೋಚಿಸುವ ಮಿಗೆ
ತರುಣಿಯರ ಕಳುಹಿಸಲು ಬಂದರು ಬಾಣಸಿನ ಮನೆಗೆ
ಇರವ ಕಂಡರು ಪಾಕದಲಿ ಕೈ
ಕರಣವನು ನೆರೆ ಸೂಪಕಾರನ
ಪರಿಯ ಹೊಗಳುತ ಬಂದು ಬಿನ್ನೈಸಿದಳು ಭಾಮಿನಿಗೆ

೪೫

ತಾಯೆ ಚಿತ್ತೈಸಿನ್ನವನ ಕರ
ಣಾಯತನವೇನೆಂಬೆ ಲೋಕದ
ಸ್ತ್ರೀಯರೊಳಗಿನ್ನಿಲ್ಲ ರಚಿಸುವ ಶಾಕಪಾಕದಲಿ
ಮಾಯವನು ಮಿಗೆ ತಿಳಿಯಲರಿಯದು
ಪಾಯಂದಿದೀಕ್ಷಿಸಲು ಸಕಲ ರ
ಸಾಯನವು ಪರಿಪಕ್ವವಾಗಿದೆ ಪೇಳಲರಿಯದೆಮಗೆ

೪೬

ದಾದಿಯರು ಬಾಹುಕನ ಗುಣಗಳ
ಭೇದಿಸಿದರೊಂದೊಂದು ಬಗೆಯ ತ
ಳೋದರಿಗೆ ಬಿನ್ನೈಸೆ ನಿಶ್ಚೈಸಿದಳು ದಮಯಂತಿ
ಆದಡವ ನಳನಹುದು ಗುಣದಲಿ
ಭೇದಿಸುವೆನಿನ್ನೊಮ್ಮೆಯೆನುತ ವಿ
ನೋದದಿಂದಾಡುವ ಕುಮಾರರ ತರಿಸಿದಳು ತರುಣಿ

೪೭

ತರಳರಿಗೆ ನೀರೆರೆದು ಕಾಂಚನ
ವರದುಕೂಲವನಿತ್ತು ದಿವ್ಯಾ
ಭರಣಭೂಷಿತರಾದ ತನಯರ ದಾದಿಯರ ಕೈಯ
ಪಿರಿದು ಕಳುಹಲು ಬಾಣಸಿನ ಮಂ
ದಿರದ ಬಾಗಿಲ ಮುಂದೆ ಬಿಡೆ ಸಂ
ಚರಿಸಿ ಸುಳಿದಾಡುವರ ಕಂಡನು ನೃಪತಿ ಹರುಷಿಸುತ

೪೮

ತರಳರನು ಪಿಡಿದೆತ್ತಿ ತೊಡೆಯೊಳ
ಗಿರಿಸಿ ಮುದ್ದಾಡಿದನು ನೋಡುತ
ಸುರಿವ ಕಂಬನಿಗಳಲಿ ಬಾಹುಕ ಮರುಗುತಿರಲಂದು
ಮರೆಯ ಜಾಲಂಧ್ರದಲಿ ಕಂಡಳು
ತರುಣಿ ನಳನೃಪನೀತನಹುದೆಂ
ದುರುತರದ ಪ್ರೇಮದಲಿ ಬಂದಳು ಜನನಿಯರಮನೆಗೆ

೪೯

ತಾಯೆ ಸಂಶಯವಿಲ್ಲ ನೈಷಧ
ರಾಯನೀತನು ಸೂತನಲ್ಲ ವಿ
ಡಾಯದಲಿ ಬಂದಿಹನು ನೋಡು ಕುರೂಪಿವೇಷದಲಿ
ರಾಯರೊಳಗಗ್ಗಳೆಯ ನಳನೃಪ
ಮಾಯವನು ತೋರಿಹನು ಇವನ ನಿ
ಜಾಯತವ ತಾ ಬಲ್ಲೆ ಕರೆಸೆಂದಳು ಸರೋಜಮುಖಿ

೫೦

ಧರಣಿಪತಿಯನುಮತದೊಳಾತನ
ಕರೆಸಿದಳು ನೃಪನರಸಿ ಬಾಹುಕ
ನಿರದೆ ಬಂದನು ರಾಜಮಂದಿರದಲಿ ಕುಳ್ಳಿರಲು
ತರಳೆ ಮಾಸಿದ ಸೀರೆಯಲಿ ಗರ
ಗರಿಕೆ ತಪ್ಪಿದ ಚೆಲುವಿನಲಿ ನಿಂ
ದಿರಲು ಕಂಡನು ಸತಿಯ ತಲೆಬಾಗಿದನು ಲಜ್ಜೆಯಲಿ

೫೧

ಹಿಮಕರಾನ್ವಯತಿಲಕ ವಸುಧಾ
ರಮಣ ಪುಣ್ಯೋದಯ ಸುಭಾಷಿತ
ವಿಮಲಗುಣ ಚಾರಿತ್ರಸನ್ನುತ ಸತ್ಯಸಂಚಾರ
ಕುಮತಿ ಪುಷ್ಕರ ಮುನಿದನೇ ವಿ
ಕ್ರಮದರಿದ್ರತೆ ಬಂದುದೇ ಸಾ
ಕಮಿತಭುಜಬಲ ಪಾಲಿಸೆಂದಳು ಪತಿಗೆ ದಮಯಂತಿ

೫೨

ಮುನ್ನ ಮಾಡಿದ ಕರ್ಮಫಲ ಋತು
ಪರ್ಣನಲಿ ಸೇವೆಯನು ಮಾಡುವು
ದುನ್ನತಿಕೆಯಲಿ ಬಂದುದೇ ಮಿಗೆ ಸಾರ್ವಭೌಮರಿಗೆ
ತನ್ನ ಪುಣ್ಯದ ಹಾನಿ ತಾನಿದ
ಕಿನ್ನು ಬಳಲುವುದೇನು ಗುಣಸಂ
ಪನ್ನ ರಕ್ಷಿಸು ಸತಿಯನೆಂದೆರಗಿದಳು ಪದಯುಗಕೆ

೫೩

ತುರುಬ ಹಿಡಿದೆತ್ತಿದನು ಸತಿಯಳ
ಸುರಿವ ಕಂಬನಿದೊಡೆದು ನುಡಿದನು
ಬರಿದೆ ಚಿಂತಿಸಲೇಕೆ ಮಾನಿನಿ ಬಿಡು ಮನೋವ್ಯಥೆಯ
ಅರಿಯದವಳೇಂ ನೀನು ಲೋಕದ
ಸರಸಿಜಾಕ್ಷಿಯರೆಲ್ಲರಿಗೆ ವರ
ಗುರುವಲಾ ಬರಿದೆನ್ನ ಬಯಸಲು ಬೇಡ ಹೋಗೆಂದ

೫೪

ವಿನಯಹೀನನು ತಾನು ಮನದಲಿ
ನೆನೆದು ತಪ್ಪಿದ ನಿರ್ದಯನು ಕಾ
ನನದಿ ನಿನ್ನನು ಬಿಸುಟು ಕಳೆದ ದುರಾತ್ಮ ಬಾಹಿರನ
ನೆನೆವರೇ ಬಿಡು ಮರುಳೆ ನಿನಗಿಂ
ದಿನಲಿ ಮಾಳ್ಪಪುನಸ್ಸ್ವಯಂವರ
ಮನಕೆ ಸರಿಬಂದವನ ನೀನೊಲಿಸೆಂದನಾ ನೃಪತಿ

೫೫

ಎನಲು ಕರ್ಣಂಗಳಿಗೆ ಸಬಳದ
ಮೊನೆಗಳಿರಿದಂತಾಗೆ ಸತಿ ಕ
ಣ್ಣಿನಲಿ ತುಂಬಿದಳುದಕವನು ಹರಹರ ಶಿವಾಯೆನುತ
ಎನಗೆಯಿನ್ನುಪುನಸ್ಸ್ವಯಂವರ
ಮನದೊಳುಂಟೇ ನೀವು ಬರಬೇ
ಕೆನುತ ವಾರ್ತೆಯ ಕಲ್ಪಿಸಿದೆ ಕೇಳೆಂದಳಿಂದುಮುಖಿ

೫೬

ನಂಬಿದೆನು ಲೇಸಾಗಿ ಮನದೊಳ
ಗಿಂಬುಗೊಂಡುದು ವಿಕೃತಿರೂಪಿನ
ಡೊಂಬಿಯೇಕಿದು ಸಕಲಧರ್ಮವಿಚಾರವಂತರಿಗೆ
ಅಂಬುಜಾಕ್ಷನ ರೂಪಿನಲಿ ಪ್ರತಿ
ಬಿಂಬವಲ್ಲದೆ ನೀವು ಬಯಲಾ
ಡಂಬರದ ನುಡಿಯೇಕೆ ಸಾಕಿನ್ನೆಂದಳಿಂದುಮುಖಿ

೫೭

ನಡೆಯುತೆಡಹಿದ ಪಟ್ಟದಾನೆಯ
ಪಿಡಿದು ಕೊಲ್ಲುವರುಂಟೆ ನಂಬಿದ
ಮಡದಿಯಲ್ಲವೆ ತಾನು ಬಿರುನುಡಿಯೇಕೆ ನಳನೃಪತಿ
ಅಡವಿಯಲಿ ಕಡುನೊಂದು ದೇಹವ
ಬಿಡದೆಯುಳುಹಿದೆನಿನ್ನು ಪ್ರಾಣದ
ಗೊಡವೆಯಿನ್ನೇಕೆನುತ ಕಂಬನಿದುಂಬಿದಳು ತರಳೆ

೫೮

ನೋಯೆ ನೊಂದಿಹ ಸತಿಯನಾಡಲು
ನ್ಯಾಯವೇನಿದು ನಿಮಗೆ ಕೇಳೆಲೆ
ರಾಯ ನಿಮ್ಮನು ನೋಡೆ ಕಳುಹಿದ ಚರರ ದಿಕ್ಕಿನಲಿ
ಮಾಯರೂಪಿದ ಕಾಣಲಾರದೆ
ಬಾಯ ಬಿಡುತಿರಲಿನ್ನಯೋಧ್ಯೆಯ
ರಾಯನಲಿ ನೂತನದ ಸಾರಥಿಯೆನಲು ಕೇಳಿದೆನು

೫೯

ಆಗ ಭೂಸುರಪತಿ ಸುದೇವನ
ಬೇಗಲಟ್ಟಿದೆ ನಿಮ್ಮ ಬಳಿಗೆ ಸ
ರಾಗದಿಂದುತ್ತರಕೆ ಪ್ರತ್ಯುತ್ತರವ ಪೇಳ್ದಿರಲ
ಈಗಲಿದು ಸಂಶಯವೆ ತಾನದ
ಕಾಗಿ ಕರೆಸಿ ಸ್ವಯಂವರವ ನಿಮ
ಗಾಗಿ ಪೇಳಿದೆನಿದರ ತಪ್ಪೇನೆಂದಳಿಂದುಮುಖಿ

೬೦

ಜನನುತನೆ ಕೇಳಾದಿಯಲಿ ಯೌ
ವನವ ನಿನಗೊಪ್ಪಿಸಿದೆನಲ್ಲದೆ
ತನುಮನೋವಾಕ್ಕಾಯಕರ್ಮಂಗಳಲಿ ತಾನೆರಡ
ನಿನಗೆ ನೆನೆದವಳಲ್ಲ ನೀನೇ
ನನಗೆ ಗತಿಯೆದಿಹುದನರಿಯಾ
ಜನಪ ರಕ್ಷಿಸು ಕೈಪಿಡಿದು ಸಲಹೆಂದಳಿಂದುಮುಖಿ

೬೧

ಇದಕೆ ಯಮ ವರುಣಾನಿಲೇಂದ್ರರು
ಮದನಜನಕನೆ ಸಾಕ್ಷಿಯೆನೆ ಮೇ
ಘದಲಿ ನುಡಿದನು ವಾಯು ನಳನೃಪನೊಡನೆ ಸತ್ಯವನು
ಚದುರ ಕೇಳ್ ದಮಯಂತಿ ಲೋಕದ
ಸುದತಿಯೇ ತಿಳಿ ಲೋಕಪಾವನೆ
ಯಿದಕೆ ಸಂಶಯವೇಕೆ ಪಾಲಿಸು ಸತಿಯ ನೀನೆಂದು

೬೨

ಪವನನಾಡಿದ ನುಡಿಯ ಕೈಕೊಂ
ಡವನಿಪತಿ ಬಿನ್ನೈಸಿದನು ಕೈ
ತವಕದಲಿ ಕಲಿಯಿಂದ ನೊಂದೆನು ನಿಮ್ಮ ದರುಶನದಿ
ಬವಣೆ ಹಿಂಗಿ ಕೃತಾರ್ಥನಾದೆನು
ಭುವಿಯೊಳಿನ್ನೇನೆನುತ ಪಕ್ಷಿಯ
ಹವಣ ಮನದಲಿ ನೆನೆಯೆ ಬಂದುದು ದಿವ್ಯಮಯವಸನ

೬೩

ಧರಿಸಿದನು ನಳನಾ ದುಕೂಲವ
ಪರಿಹರಿಸಿತಾ ರೂಪು ಮುನ್ನಿನ
ಪರಮತೇಜದ ದಿವ್ಯತನುವಿನೊಳೆಸೆದು ರಂಜಿಸಲು
ಸುರರ ದುಂದುಭಿ ಮೊಳಗೆ ಮಲ್ಲಿಗೆ
ಯರಲ ಮಳೆ ಸೂಸಿದರು ಗಗನದಿ
ಸುರಸತಿಯರಕ್ಷತೆಯ ತಳಿದರು ಹರಸಿ ನಳನೃಪೆಗೆ

೬೪

ಸುರರು ಕೊಂಡಾಡಿದರು ಯಮ ಭಾ
ಸ್ಕರ ವಿರಿಂಚಾದಿಗಳುಲಿಯೆ ವರ
ತರುಣಿ ಬಂದೆರಗಿದಳು ಪತಿಯಂಘ್ರಿಯಲಿ ದಮಯಂತಿ
ಹರುಷದಲಿ ಬಿಗಿಯಪ್ಪಿದನು ಭೂ
ಸುರರು ಸಂಭ್ರಮಿಸಿದರು ವರಪುರ
ದರಸ ಚೆನ್ನಿಗರಾಯ ಸಲಹಿದನವರ ಕರುಣದಲಿ

೬೫