EN | KA

VII

Naḷacaritre

ಮಗಳ ಕಾಣದೆ ಭೀಮನೃಪ ಮೂ
ಜಗವ ಭೇದಿಸಿ ಚೈದ್ಯಭೂಪನ
ನಗರದಲ್ಲಿರೆ ಕಂಡು ಕರೆಸಿದ ತನ್ನ ನಿಜಸುತೆಯ

ಕೇಳು ಧರ್ಮಜ ರತ್ನ ನಿರ್ಮಿತ
ದಾಲಯದ ಸೊಬಗಿನಲಿಯೋಲಗ
ಶಾಲೆಯಲಿ ಋತುಪರ್ಣನಿದ್ದನು ಸಿಂಹಪೀಠದಲಿ
ಸಾಲ ಮಕುಟದ ನೃಪರು ಭೂಸುರ
ಜಾಲ ಮಂತ್ರಿ ಪುರೋಹಿತರು ಗುಣ
ಶೀಲರುನ್ನತಸತಿಯರಿಂದೆಸೆದಿರ್ದುದಾಸ್ಥಾನ

ಇದು ಸಮಯ ತನಗೆಂದು ನಳನೃಪ
ಮುದದಿ ವೇಷವ ತಾಳ್ದು ಹರಿಯಂ
ದದಲಿ ಬಂದನು ಸಭೆಯ ಕಂಡನು ನೃಪಗೆ ಕೈಮುಗಿದು
ಸದಮಲಾಸ್ಥಾನದಲಿ ರಿಪುಭಟ
ಕದನಗಲಿಗಳು ಜೀಯೆನಲು ನಯ
ಹೃದಯದಲಿ ಬಿನ್ನೈಸಿದನು ಋತುಪರ್ಣಭೂಪತಿಗೆ

ಅವನಿಪತಿ ಕೇಳ್ ನಿಮ್ಮ ಪದಕಮ
ಲವನು ಭಜಿಸುವೆ ಜೀಯ ಚಿತ್ತದಿ
ಸವಡಿನುಡಿ ತನಗಿಲ್ಲ ಬಾಹುಕನೆಂಬುದಭಿಧಾನ
ಭುವನದೊಳು ತಾನಶ್ವಕುಲಹೃದ
ಯವನು ಬಲ್ಲೆನು ಶಾಕಪಾಕದಿ
ಸವಿಗೊಳಿಪ ವರವಿದ್ಯೆ ತನಗುಂಟೆಂದನವ ನಗುತ

ಸೂಪಕಾರದೊಳಗ್ಗಳನು ಕಡು
ರೂಪಿನವ ತಾನಲ್ಲ ಚಿತ್ತದಿ
ಕಾಪುರುಷನೆನ್ನದಿರು ನೋಡಾ ತನ್ನ ಪೌರುಷವ
ಭೂಪ ಮುಂಗೈಗಂಕಣಕೆ ಕುಲ
ದೀಪ ಕನ್ನಡಿಯೇಕೆ ತರಿಸು ಪ್ರ
ತಾಪವಾಜಿಯನೆಂದು ಬಿನ್ನೈಸಿದನು ನಸುನಗುತ

ಪೊಡವಿಪತಿ ಋತುಪರ್ಣ ಬಾಹುಕ
ನುಡಿದ ವಚನಕೆ ಮೆಚ್ಚಿ ಮನದು
ಗ್ಗಡದ ತೇಜಿಯ ತರಿಸಿ ಕೊಡಲೇರಿದನು ಬೀದಿಯಲಿ
ಮಡದ ಸನ್ನೆಗೆ ಕುಣಿದು ರವೆಗಾ
ಲಿಡುತ ಜೋಡಣೆಯಿಂದ ಹಯವಡಿ
ಗಡಿಗೆ ಚಿಮ್ಮಿತು ವಾಯುವೇಗದೊಳರಸ ಕೇಳೆಂದ

ಕರದ ವಾಘೆಯ ಸಡಿಲ ಬಿಡೆ ನಿ
ಬ್ಬರದ ಗಮನದೊಳೈದಿತವನಿಯೊ
ಳುರವಣಿಸಿ ಕೆಂಧೂಳಿ ಮುಸುಕಿದುದಂಬರವ ಬಿಡದೆ
ಧರಣಿ ತಲ್ಲಣಿಸಿದುದು ಗಗನದಿ
ಸುರರು ಕೊಂಡಾಡಿದರು ರಾವುತ
ರರಸನಹುದೋ ಭಾಪು ಭಾಪೆಂದುದು ಸಮಸ್ತಜನ

ಮುರುಹಿ ಹಿಡಿಯಲು ಮಡದ ಸನ್ನೆಗೆ
ತಿರುಗಿತತಿವೇಗದಲಿ ಹಯವೋ
ಸರಿಸಿ ಕಿರುಬೆಮರಿಡಲು ನಿಲಿಸುತ ವಾರುವವನಿಳಿದು
ಕರವ ಮುಗಿಯಲು ನೃಪತಿ ಮೆಚ್ಚುತ
ತರಿಸಿ ಕೊಟ್ಟನು ಭೂಷಣಂಗಳ
ಹಿರಿದು ಸಂಬಳವಿತ್ತು ನಿಲಿಸಿದನರಸ ಬಾಹುಕನ

ಜನಪ ಕೇಳ್ ಬಾಹುಕನು ವಾಲಾ
ಖ್ಯನಲಿ ಸಖ್ಯವ ಬೆಳೆಸುತಾತನ
ನನುದಿನವು ಕೂಡಿರ್ದನೊಂದಾನೊಂದುದಿನ ರಾತ್ರಿ
ವನಜಮುಖಿ ದಮಯಂತಿಯೊಳು ಚುಂ
ಬನ ಸರಸ ಸಲ್ಲಾಪದಿಂದಿಹ
ಕನಸ ಕಂಡೆಚ್ಚರದಿ ಕಾಣದೆ ಸತಿಗೆ ಹಲುಬಿದನು

ಹಾ ತರುಣಿ ನಳಿನಾಕ್ಷಿ ನಯಸು
ಪ್ರೀತಿಪೂರ್ವಕದಿಂದ ಕನಸಲಿ
ಮಾತುದೋರಿದೆ ಬಂದು ನನ್ನಲಿ ಕರುಣದಿಂ ನೀನು
ಧಾತುಗುಂದಿದೆನಕಟ ಅಸುರಾ
ರಾತಿ ಬಲ್ಲನೆನುತ ಮನದಲಿ
ಕಾತರಿಸಿ ನಿಜಸತಿಗೆ ಹಲುಬಿದ ಮದನನೆಸುಗೆಯಲಿ

ವಿಕಳವನು ವಾಲಾಖ್ಯ ಕೇಳಿದು
ಪಕಪಕನೆ ನಗುತೆಂದನೆಲೆ ಬಾ
ಹುಕನೆ ಹಲುಬುವುದೇನು ಕಾಂತೆಗೆ ತಕ್ಕ ಬೊಂತೆಯನು
ಅಕಟ ನೀನತಿ ಚೆಲುವನೇ ಬಾ
ಲಕಿ ನಿನಗೆ ತಕ್ಕವಳೊ ಲೋಕದಿ
ಮಕರಕೇತನ ಮರುಳನೆಂದಪಹಾಸ್ಯ ಮಾಡಿದನು

೧೦

ಎಂದು ಹಾಸ್ಯವ ಮಾಡಿದವನೊಡ
ನೆಂದನಾ ಬಾಹುಕನು ಪೂರ್ವದೊ
ಳಂದು ಬ್ರಾಹ್ಮಣನೊಬ್ಬ ನಿಜಸತಿಯಗಲಿಯೆನ್ನೊಡನೆ
ನೊಂದು ನುಡಿದನು ವಿರಹದಲಿಯದ
ನಿಂದು ಕನಸಲಿ ಕಂಡು ಭ್ರಾಂತಿಯೊ
ಳೆಂದಡದು ತಪ್ಪೇನು ಸತಿಸುತರಿಲ್ಲ ತನಗೆಂದ

೧೧

ಅರಸ ಕೇಳಾ ಪುರದೊಳೊಬ್ಬರಿ
ಗರಿಯದಂದದಿ ನಳನಿರಲು ಭೂ
ಸುರರ ಮತದಲಿ ಕೇಳ್ದ ಭೀಮನೃಪಾಲನೀ ಹದನ
ಧರೆಯನೆಲ್ಲವ ಜೂಜಿನಲಿ ಪು
ಷ್ಕರಗೆ ಸೋತು ನಳನೃಪನಡವಿಗೆ
ತೆರೆಳಿದನು ಸತಿಸಹಿತವೆನೆ ಹೊರಳಿದನು ಶೋಕದಲಿ

೧೨

ಹಾ ಮಗಳೆ ದಮಯಂತಿ ನಿಷಧಸ
ನಾಮನನು ಕೈ ಹಿಡಿದು ಬಾಳುವ
ನೇಮವನು ಬಿಸುಟಡವಿಗಟ್ಟಿತೆ ವಿಧಿ ವಿಕರ್ಮಫಲ
ಭೀಮನೃಪನುದರದಲಿ ಜನಿಸಿ ವಿ
ರಾಮವಾದುದೆ ನಿನ್ನ ಸಿರಿಮುಖ
ತಾಮರಸವನು ಕಾಣೆ ತೋರೆಂದರಸ ಹಲುಬಿದನು

೧೩

ಮಗಳೆ ಮೋಹದ ಸುತರನಾರಿಗೆ
ತೆಗೆದು ಬಿಸುಟೆ ನಿರಾಸೆಯಲಿಯೀ
ಬಗೆಗೆ ತಂದುದೆ ವಿಧಿಯು ನಿನ್ನನು ಹರಮಹಾದೇವ
ಹೋಗಲುಬಹುದೇ ಕಾನನದೊಳಿಹ
ಮೃಗಗಳಿಂದೇನಾದಳೋ ಪತಿ
ಯಗಲಿದನೊ ಭೇತಾಳ ನುಂಗಿತೊಯೆನುತ ಹಲುಬಿದನು

೧೪

ಬಡವರುದರದೊಳುದಿಸಿ ಸುಖವನು
ಪಡೆಯಲೊಲ್ಲದೆ ಬಂದು ನೀನೀ
ಪೊಡವಿಪತಿಯುದರದಲಿ ಸಂಜನಿಸುವರೆ ಎಲೆ ತಾಯೆ
ಗಿಡಮೆಳೆಗಳಾರಣ್ಯದಲಿ ತನು
ವಿಡಿದು ಸೈರಿಪುದೆಂದು ಮಗಳೇ
ಸುಡು ತನುವನಿದನೆಂದು ಮರುಗಿದಳವಳ ನಿಜಜನನಿ

೧೫

ಸತಿಪತಿಗಳೀಪರಿಯ ಶೋಕೋ
ನ್ನತಿಯ ಸೈರಿಸಲಾರದಾ ಮಾ
ರುತನ ಸಖನೊಳು ಪುಗುವೆವೆಂದುರವಣಿಸಿ ನಡೆತರಲು
ಕ್ಷಿತಿಪ ಕೇಳಿಂತವರು ಬರುತಿರೆ
ಮತಿಯುತನೆ ಚಿಂತೆಯನು ಬಿಡು ಪತಿ
ವ್ರತೆಗೆ ಹಾನಿಯೆ ಸುಖದೊಳಿಹಳೆಂದುದು ನಭೋನಿನದ

೧೬

ಎಂದ ವಾಕ್ಯವ ಕೇಳಿ ಭೂಸುರ
ವೃಂದದಲಿ ಮುನಿಯೋರ್ವ ನುಡಿದನು
ಸಂದ ಪರಮಾನಂದಜ್ಯೋತಿರ್ಮಯನ ವಾಕ್ಯವಿದು
ಇಂದುಮುಖಿ ದಮಯಂತಿ ನಳನೃಪ
ರೆಂದಿಗೂ ಸುಕ್ಷೇಮಿಗಳು ನೀ
ವಿಂದು ಕಳುಹಿಸಿ ಚರರ ಭೇದಿಸಲೆಂದನಾ ಮುನಿಪ

೧೭

ಎನಲು ಮುನಿಪನ ಮಾತಿನಲಿ ಅರ
ಮನೆಗೆ ಬಂದು ವಿಶಾಲಚಿಂತೆಯ
ಮನದಲಿರಲಿನನಿಳಿದನಸ್ತಾಂಬುಧಿಗೆ ವಹಿಲದಲಿ
ಜನಪನಾ ರಾತ್ರಿಯಲಿ ನಿದ್ರಾಂ
ಗನೆಯನುಳಿಯಲು ಪೂರ್ವಶೈಲದಿ
ದಿನಪ ತಲೆದೋರಿದನು ಹರೆದುದು ರಜನಿಯಾಕ್ಷಣಕೆ

೧೮

ಅರಸ ಕರೆಸಿದ ವಿಪ್ರರನು ಭೂ
ಸುರರಿಗೆಂದನು ನೀವು ಕರುಣದಿ
ಧರೆಯೊಳೆಲ್ಲಿಹಳೆನ್ನ ಸುತೆ ದಮಯಂತಿ ನಳನೃಪರ
ಇರವ ಕಾಂಬುದು ಕಂಡು ಕರೆತಂ
ದರಿಗೆ ಕೊಡುವೆನು ಧರೆಯೊಳರ್ಧವ
ನಿರುತವೆಂದುಪಚರಿಸಿ ಕಳುಹಿದ ಭೀಮನೃಪನವರ

೧೯

ಹರಿದರರಸಾಳುಗಳು ಪಶ್ಚಿಮ
ಶರಧಿ ದಕ್ಷಿಣಶರಧಿ ಪೂರ್ವದ
ಶರಧಿಯುತ್ತರ ಕುರುನರೇಂದ್ರರ ಸೀಮೆ ಪರಿಯಂತ
ಪುರಗಳಲಿ ವನವೀದಿಯಲಿ ತ
ದ್ಗಿರಿಗಳಲಿ ನಾನಾ ದಿಗಂತದೊ
ಳರಸಿ ಕಾಣದೆ ಮುಂದೆ ನಡೆದರು ಹಲವು ದಿವಸದಲಿ

೨೦

ಪುರನಗರ ಬೀದಿಗಳ ಮಧ್ಯದಿ
ನೆರೆದ ಸಭೆಯಲಿ ಮಾರ್ಗದಲಿ ಸಂ
ಚರಿಸುವವರನು ಕಂಡು ಕೇಳುತ ಬಂದರಲ್ಲಲ್ಲಿ
ಇರವ ಕಾಣದೆ ಬಳಲಿ ಚಿಂತಿಸಿ
ಮರುಗುತವನೀಸುರರು ಭೇದಿಸು
ತಿರಲು ಮೂವರು ಬೇರೆ ಹೊಕ್ಕರು ಚೈದ್ಯನಗರಿಯನು

೨೧

ಅಲ್ಲಿ ವಾರ್ತೆಯ ಕೇಳಿದರು ಬೂ
ವಲ್ಲಭನ ಕ್ರತುಸಮಯವೆಂದವ
ರೆಲ್ಲ ಗಮನಿಸಲು ಕಂಡು ಮೂವರು ಕೂಡುತವರೊಡನೆ
ನಿಲ್ಲದೈದಿದರರಮನೆಗೆ ತಮ
ಗಲ್ಲಿ ದಕ್ಷಿಣೆ ತೃಪ್ತಿಭೋಜನ
ವೆಲ್ಲ ಸಿಗಲಹುದೆನುತ ಹೊಕ್ಕರು ಯಜ್ಞಮಂಟಪವ

೨೨

ಜನಪನವನೀಸುರರ ಮಂತ್ರದ
ಲನಿಲಸಖನಾರಾಧಿಸಲು ನೃಪ
ತನುಜೆಯಾದ ಸುನೀತೆಯೊಳು ದಮಯಂತಿ ಭಾವಿಸುತ
ವನಿತೆಯಿರೆ ಕಂಡನು ಸುದೇವನು
ಮನದೊಳನುಮಾನಿಸಿದನೀ ಮಾ
ನಿನಿ ಮಹಾಸತಿಯೆನುತ ವಿಸ್ಮಯಗೊಂಡ ಮನದೊಳಗೆ

೨೩

ಮುಗಿಲು ಮುಸುಕಿದ ಚಂದ್ರಬಿಂಬವೊ
ಪಗಲೊಳೆಸೆವ ಸುದೀಪಕಾಂತಿಯೊ
ಹೊಗೆಯೊಳೆಸಗಿದ ಚಿತ್ರಪ್ರತಿಮೆಯೊ ಹೇಳಲೇನವಳ
ಉಗಿದು ಬಿಸುಟ ವಿಭೂಷಣದ ಮೈ
ಲಿಗೆಯ ಸೀರೆಯ ಮಲಿನತನು ಕಳೆ
ತೆಗೆದು ಕೈಗಲ್ಲದಲಿ ನಿಂದಿರೆ ಕಂಡನಾ ಸತಿಯ

೨೪

ಇದು ಪತಿವ್ರತಧರ್ಮವಹುದೀ
ಸುದತಿ ತೊರೆದಿಹಳೆಲ್ಲವನು ನೃಪ
ವಧುವ ಕಾಣಿಸಿಕೊಂಬೆನೆಂದು ಸುದೇವ ನಡೆತಂದು
ಹದನಿದೇನೌ ತಾಯೆ ನಿಮ್ಮಯ
ವದನಕಮಲವು ಬಾಡಿ ಕುಡುಮಾ
ಸಿದುಡಿಗೆಯಲಿಹುದೇನು ಕಾರಣವೆನುತಲಿಂತೆಂದ

೨೫

ಇಂದುವದನೆ ವಿದರ್ಭಪಟ್ಟಣ
ದಿಂದ ಬಂದೆನು ತಾನು ಭೂಸುರ
ವಂದ್ಯನೆನ್ನಭಿಧಾನ ಕೇಳು ಸುದೇವನೆಂಬುವುದು
ಇಂದು ನಿಮ್ಮನು ನೋಡ ಕಳುಹಿದ
ತಂದೆ ಭೀಮನೃಪಾಲನಾತನ
ನಂದನಗೆ ತಾ ಸಖನು ಚಿತ್ತೈಸೆನ್ನ ಬಿನ್ನಪವ

೨೬

ಕ್ಷಿತಿಪ ಭೀಮನೃಪಾಲನಾತನ
ಸತಿಸುತರು ಬಾಂಧವ ಸಹೋದರ
ರತಿಶಯರು ನಿಮ್ಮಯ ಕುಮಾರರು ಕುಶಲರಿಂದಿನಲಿ
ಕ್ಷಿತಿಯನಗಲುತ ನಳನೃಪತಿ ನಿಜ
ಸತಿಸಹಿತ ವನಕೈದಿದುದ ಕೇ
ಳುತಲಿ ನಿಮ್ಮವರೆಲ್ಲ ಶೋಕಾಬ್ಧಿಯಲಿ ಮುಳುಗಿಹರು

೨೭

ಘೋರತರಶೋಕವನು ಸೈರಿಸ
ಲಾರದಾ ಸತಿಪತಿಗಳಿಬ್ಬರು
ಸೋರುತಿಹ ಕಂಬನಿಗಳಲಿ ಕರೆದೆಮ್ಮ ಕಳುಹಿದರು
ಧಾರಿಣಿಯಲರಸುತಲಿ ಬಂದೆವು
ವಾರಿಜಾನನೆ ನಿಮ್ಮ ಕಂಡೆವು
ಸೇರಿತೆಮ್ಮಯ ಪುಣ್ಯವೆಂದು ಸುದೇವ ಕೈಮುಗಿದ

೨೮

ವನಿತೆ ಕೇಳುತ ಶೋಕಜಲದಲಿ
ನೆನೆದು ಬುಧಕುಲತಿಲಕನನು ಬಾ
ರೆನುತ ಮನ್ನಿಸಿ ತನ್ನವರನಡಿಗಡಿಗೆ ಬೆಸಗೊಳಲು
ವನಿತೆ ನೋಡಿದಳಾ ಸುದೇವನ
ಜನನಿಗರುಹಲು ಬಂದಳಾ ವಿ
ಪ್ರನನು ನೀವಾರೆನಲು ನುಡಿದನು ಬಂದ ಸಂಗತಿಯ

೨೯

ಕೇಳು ತಾಯೆ ವಿದರ್ಭಪತಿ ಭೂ
ಪಾಲನಾತ್ಮಜೆ ಪತಿಯೊಡನೆ ತ
ನ್ನಾಲಯವನುಳಿದು ವನಕೈದಿದಳೆನಲು ನೃಪ ಕೇಳಿ
ತಾಳಲಾರದೆ ನೋಡಿ ಕರೆತರ
ಹೇಳಿ ಕಳುಹಲು ಬಂದೆನಿಲ್ಲಿಗೆ
ಬಾಲೆ ದಮಯಂತಿಯಳ ಕಂಡೆನೆನುತ್ತ ಕೈಮುಗಿದ

೩೦

ಕೇಳಿ ಶಿವಶಿವಯೆನುತ ಶೋಕವ
ತಾಳಿ ತೆಗೆದಪ್ಪಿದಳು ಮಗಳೆ ವಿ
ಟಾಳಿಸಿತೆ ಸಿರಿ ರಾಜ್ಯಸಂಪದವೀ ಮಹಾವ್ಯಥೆಯ
ಭಾಳದಲಿ ವಿಧಿ ಬರೆದನೇ ಜನ
ಪಾಲ ನಳನೃಪನೆತ್ತ ಸರಿದನೊ
ಕಾಲಗತಿಯಿಂತಾಯಿತೇ ಹಾಯೆನುತ ಮರುಗಿದಳು

೩೧

ಬಾಲೆ ಬಿಡು ಶೋಕವನು ಭೀಮನೃ
ಪಾಲನರಸಿಗೆ ತಂಗಿ ತಾ ತ
ನ್ನಾಲಯದಿ ಕಡುನೊಂದೆ ಮಗಳೇ ಸಾಕು ನಮ್ಮೊಡನೆ
ಪೇಳದಿಹರೆ ಸುನಂದನೆಗೆ ಸಮ
ಪಾಳಿ ನೀನೆಮಗೆಂದು ತಳ್ಕಿಸಿ
ಪಾಲಿಸಿದಳತಿಕರುಣದಲಿ ದಮಯಂತಿಯನು ಜನನಿ

೩೨

ಕಿರಿಯ ತಂದೆ ಸುಬಾಹು ಮರುಗಿದ
ವರಕುವರಿ ದಮಯಂತಿ ನಿನ್ನಯ
ಪುರುಷನಿಲ್ಲದೆ ಚಿಂತೆಯಿಂದೆಲ್ಲವನು ನೀ ತೊರೆದು
ಕರಗಿ ಕಂದಿದೆ ಮಗಳೆ ತಾನಿಂ
ತರಿದುದಿಲ್ಲಲ ನಿನ್ನ ಪುರುಷನ
ಕರೆಸಿ ಕೊಡುವೆನು ನಾನು ಚಿಂತಿಸಬೇಡ ನೀನೆಂದ

೩೩

ತರಳೆ ಬಾರೆಂದೆನುತ ಕಣ್ಣಿನೊ
ಳೊರೆವ ಕಂಬನಿಗಳನು ಸೆರಗಿನೊ
ಳೊರಸಿ ದಮಯಂತಿಯನು ಮನ್ನಿಸಿ ಬಂದನೋಲಗಕೆ
ಕರೆಸಿದನು ಭೂಸುರ ಸುದೇವನ
ನಿರುತ ಮಣಿಭೂಷಣಗಳಿಂದುಪ
ಚರಿಸಿ ಕಳುಹಲು ಬಂದ ಭೀಮನೃಪಾಲನೋಲಗಕೆ

೩೪

ಅರಸ ಕೇಳು ವಿದರ್ಭಪತಿ ಮನ
ಮರುಗುತಿರಲಾ ಸಮಯದಲಿ ಭೂ
ಸುರ ಸುದೇವನು ಬಂದು ಕೈ ಮುಗಿದೆಂದನೀ ಹದನ
ತರುಣಿ ದಮಯಂತಿಯನು ಕಂಡೆನು
ಹರುಷ ಮಿಗಲಾ ಚೈದ್ಯಪುರದಲಿ
ವರಜನನಿ ಚಿಕ್ಕಮ್ಮನಲ್ಲಿಹಳೆಂದನಾ ವಿಬುಧ

೩೫

ಕಂಡು ಮಾತಾಡಿದೆನು ಸತಿಯಳ
ಮಂಡೆ ಮಾಸಿದೆ ಮಲಿನ ವಸನದೆ
ಗಂಡನಗಲಿದ ಚಿಂತೆಯಲಿ ಮುಖ ಬಾಡಿ ದೇಹವನು
ದಂಡಿಸಿದಳನ್ನದಲಿ ಮನ ಮುರಿ
ಗೊಂಡುದಾ ಸತಿಗಿನಿಯನನು ನೆರೆ
ಕಂಡು ಹೇಳುವರಾರೆನುತ ಮರುಗುವಳು ಮನದೊಳಗೆ

೩೬

ಕೇಳುತರಸನ ವದನಕಾಂತಿ ವಿ
ಶಾಲವಾದುದು ಮನದಿ ಹರುಷವ
ತಾಳಿ ಹೊಂಪುಳಿವೋಗಿ ಭೀಮನೃಪಾಲ ಕರೆಸಿದನು
ಬಾಲೆಯರ ತನ್ನಾಪ್ತಸಚಿವರ
ಮೇಳದಲಿ ನಿಜಸುತೆಯ ಕರೆತರ
ಹೇಳಿ ರತ್ನಾಭರಣಗಳನ್ನಿತ್ತವರ ಕಳುಹಿದನು

೩೭

ಬಂದರಲ್ಲಿಗೆ ಚೈದ್ಯನೃಪತಿಯ
ನಂದು ಕಾಣಿಸಿಕೊಂಡರವರನು
ಮಂದಿರದ ಸುಕ್ಷೇಮವನು ಕೇಳಿದರೆ ಹೇಳಿದರು
ಇಂದುಮುಖಿ ದಮಯಂತಿಯನು ಕಳು
ಹೆದು ಭೀಮನೃಪಾಲ ಹರುಷದೊ
ಳಿಂದು ನಿಮಗುಡುಗೊರೆಗಳನು ಕಳುಹಿದನು ಕೇಳೆಂದು

೩೮

ಅರಸ ಕೇಳು ಸುಬಾಹು ಭೂಪತಿ
ಕರೆಸಿದನು ಮಂತ್ರಿಗಳ ಭೀಮನ
ಪುರಕೆ ಪಯಣವ ಮಾಡಿದನು ದಮಯಂತಿಯನು ಕರೆದು
ತರುಣಿ ನೀ ನಮ್ಮಲ್ಲಿ ತಿಂಗಳು
ಹೊರೆದೆ ದೇಹವ ಕಷ್ಟದಲಿಯೆಂ
ದುರುತರದ ಪ್ರೇಮದಲಿ ಕೊಟ್ಟನು ಸಕಲಭೂಷಣವ

೩೯

ತರಿಸಿದನು ದಂಡಿಗೆಯೊಳಗೆ ಕು
ಳ್ಳಿರಿಸಿ ಸತಿಯರ ಗಡಣದಲಿ ಮಂ
ದಿರವ ಹೊರವಂಟರಸನೇರಿದ ಗಜದ ಕಂಧರವ
ಮೆರೆವ ನಾನಾ ವಾದ್ಯರಭಸದಿ
ಕರಿ ತುರಗ ಕಾಲಾಳ ಸಂದಣಿ
ಯುರವಣಿಸೆ ನಡೆತದು ಹೊಕ್ಕ ವಿದರ್ಭಪಟ್ಟಣವ

೪೦

ದೂತರೈದಿದರೊಸಗೆಯಲಿ ಜನ
ಜಾತ ನಲಿಯಲು ಬಂದು ಬೇಗದಿ
ಭೂತಳೇಂದ್ರಗೆ ಕೈಮುಗಿದು ದಮಯಂತಿ ಬಂದಳೆನೆ
ಮಾತ ಕೇಳಿದನದನು ಬಲಸಂ
ಗಾತಲೈತದವರ ಕಂಡತಿ
ಪ್ರೀತಿಯಿಂ ತಕ್ಕೈಸಿ ಕರೆತಂದನು ನಿಜಾಲಯಕೆ

೪೧

ಅವನಿಪತಿ ಕೇಳಾ ಪುರದೊಳು
ತ್ಸವವನದನೇನೆಂಬೆನಂದಿನ
ದಿವಸದೊಳಗರಮನೆಯೊಳಾ ದಯಂತಿಯನು ಜನನಿ
ತವಕದಿಂ ಬಿಗಿಯಪ್ಪಿದಳು ಬಾಂ
ಧವರು ಸಂತೋಷಿಸಿದರನಿಬರು
ಯುವತಿಯರು ನಿಜತನಯರಾಲಿಂಗಿಸಿದರಂಗನೆಯ

೪೨

ಮಗನ ನೋಡಿದಳಿಂದ್ರಸೇನನ
ತೆಗೆದು ತಕ್ಕೈಸಿದಳು ಕರೆದಳು
ಮಗಳ ಚಂದ್ರಾಸ್ಯಳನು ತೊಡೆಯೊಳಗಿಟ್ಟು ಮಮತೆಯಲಿ
ಮೊಗವನೀಕ್ಷಿಸಿ ಮೊಲೆಗಳಲಿ ತೊರೆ
ದುಗುವ ಹಾಲಿನ ಜನನಿ ಮಿಗೆ ನೀ
ರೊಗುವ ಕಣ್ಣೀರಿನಲಿ ಸಂತೈಸಿದಳು ನಿಜಸುತರ

೪೩

ಕಂತುಪಿತನೊಲುಮೆಯಲಿ ಧರಣೀ
ಕಾಂತ ಭೀಮನೃಪಾಲ ಬಾಂಧವ
ಸಂತತಿಯನಾದರಿಸಿ ಕಳುಹಿದನವರನುಚಿತದಲಿ
ಸಂತಸವು ನಿಜಪತಿಯನಗಲಿದ
ಚಿಂತೆಯಲಿ ಮನಗುಂದಿದಳು ದಮ
ಯಂತಿ ನೆನೆಯುತಲಿರ್ದಳಾ ವರಪುರದ ಚೆನ್ನಿಗನ

೪೪