EN | KA

Menu

VI

Naḷacaritre

ಇಂದುವದನೆಯನಗಲಿ ತಾ ಮನನೊದು ಕಾರ್ಕೋಟಕನ ದೆಸೆಯಲಿಬಂದು ಹೊಕ್ಕನು ನಿಷಧಪತಿ ಋತುಪರ್ಣನಗರಿಯನು

ಕೇಳು ಕುಂತೀತನಯ ನಿಷಧನೃಪಾಲನಿತ್ತಲು ಮರೆದು ಮಲಗಿದಬಾಲಕಿಯ ಬಿಟ್ಟಡವಿಯಲಿ ಹೊರವಂಟನಾ ವನವಕಾಲವಾವನ ಕೀಳು ಮಾಡದುಶೂಲಪಾಣಿಯೆ ಬಲ್ಲ ನಳ ಭೂಪಾಲಕನ ವಿಧಿಯೇನನೆಂಬೆನು ಬಂದನಡವಿಯಲಿ

ವನಿತೆ ಮಲಗಿಹಳೋ ಅಧೈರ್ಯದಿನೆನೆವಳೋ ದೈವವನು ನಿದ್ರೆಯಕನಸ ಕಂಡೇಳುವಳೊ ಕಾಣದೆ ಹಲವ ಹಂಬಲಿಸಿಕನಲಿ ವಿಧಿಯನು ಬೈವಳೋ ಕಂಬನಿಯ ಸುರಿವಳೊ ಶೋಕದಲಿ ನಿಜತನುವ ಬಿಡುವಳೊ ಕಾಂತೆಯೆಂತಿಹಳೆನುತ ನಡೆತಂದ

ಸುತರ ಪರರೆಡೆಗಿತ್ತು ನಂಬಿದಸತಿಯ ತಂದಡವಿಯಲಿ ಮಲಗಿಸಿಮತಿವಿಕಳನಾದೆನು ಪುರಾಕೃತಕರ್ಮಫಲವೈಸೆಕ್ಷಿತಿಯೊಳಾರುಂಟೆನ್ನವೊಲ್ ನಿಜಸತಿಗೆ ತಪ್ಪಿದ ಬಾಹಿರನುಯೆಂದತಿಶಯದ ಶೋಕದಲಿ ನಡೆದನು ಶಿವಶಿವಾಯೆನುತ

ಲೋಕದೊಳಗಗ್ಗಳೆಯ ಮಹಿಪರನೇಕರವರೊಳಗಾರನೊಲ್ಲದೆನೂಕಿ ತನ್ನನೆ ಒಲಿದು ಕೈಕೊಂಡಳು ಸರೋಜಮುಖಿಆಕೆಯಗಲಿದ ಪಾತಕನು ತಾನೇಕೆ ಧರೆಯೊಳು ಶಿವಶಿವಾಯೆಂದಾ ಕಮಲಲೋಚನೆಗೆ ಮರುಗಿದನರಸ ಕೇಳೆಂದ

ಈ ಪರಿಯೊಳತಿಶೋಕದಿಂದ ಪ್ರಳಾಪಿಸುವ ನಳನೃಪತಿ ಹೆಚ್ಚಿದತಾಪದಲಿ ಕಡುನೊಂದು ಬಳಲುತ ತನ್ನ ಮನದೊಳಗೆಶ್ರೀಪತಿಯ ನೆಲೆಗೊಳಿಸಿ ಹೃದಯದತಾಪದೊಳು ಬರುತಿರಲು ಮುಂದೆ ಸಮೀಪದಲಿ ಹುತವಹನ ಮಹಿಮೆಯ ಕಡನವನೀಶ

ಏನನೆಂಬೆನು ನೃಪತಿ ಕಿಚ್ಚಿನಹಾನಿಯನು ಬನದೊಳಗೆ ಚಲಿಸುತಭಾನುಮಂಡಲವಡರೆ ಮುಸುಕಿದ ಹೊಗೆಯ ಹೊರಳಿಯಲಿಕಾನನವನೆಡೆಗೊಂಡ ದಳ್ಳುರಿಗಾನಲಾಪುದೆ ತರುನಿಕರ ವೈಮಾನಿಕರು ನಡನಡುಗೆ ಬೆಂದದು ಸಕಲ ವನಭೂಮಿ

ಬಿದಿರ ಮೆಳೆ ಧಗಧಗಿಸೆ ಘನ ಹೆಬ್ಬಿದಿರು ಛಟಛಟಿರೆನಲು ಉರಿಯೊಳುಕದಳಿಗಳು ಸಿಮಿಸಿಮಿಸೆ ತರುಗಳನುರುಹಿ ಮೆಳೆಗಳಲಿಗದಗದಿಸೆ ಗುಹೆಗಳಲಿ ಮೃಗತತಿಬೆದರಿ ಹಾಯ್ದುವು ಪಕ್ಷಿಸಂಕುಲಉದುರಿದುವು ಗರಿಸಹಿತ ಬೆಂದಾ ವನದ ಮಧ್ಯದಲಿ

ತೆಗೆದು ಹಾಯ್ದುವು ಸಿಂಹ ಶಾರ್ದೂಲಗಳು ಕರಿಗಳ ಹಿಂಡು ನಾನಾಮೃಗಗಳಗಣಿತ ಬೆಂದು ಬಿದ್ದವು ನಿಮಿಷಮಾತ್ರದಲಿಚಿಗಿದು ಹಾಯ್ದುವು ಗಂಡಭೇರುಂಡಗಳು ಮೊದಲಾದಖಿಳಮೃಗಪಕ್ಷಿಗಳು ಕೆಡೆದುವು ಕಿಚ್ಚಿನೊಳಗವನೀಶ ಕೇಳೆಂದ

ಪ್ರಳಯಕಾಲದಿ ಸುಡುವ ವಡಬಾನಳನೊಯೆನಲಾ ವನವ ಸುಡುತಲಿಸುಳಿಸುಳಿಯುತಾಹಾರಗೊಳುತಿರಲಲ್ಲಿ ದನಿಯಾಯ್ತುಸಿಲುಕಿದೆನು ಪಾವಕನೊಳೆನ್ನನುಒಲಿದು ಹಾ ನೃಪಕುಲಶಿರೋಮಣಿಕಳೆದು ಬಿಡಿಸೈ ಸುಕೃತ ನಿನಗಹುದೆಂದುದಾ ನಿನದ

ಆಗಲಾ ದನಿಗೇಳಿ ನೃಪತಿ ಸರಾಗದಿಂದವೆ ಬಂದು ಹೊಕ್ಕನುಕೂಗಿದವರಾರೆನುತ ಬರುತಿರೆ ಕಂಡನುರಗಪತಿಪೋಗುತಿದೆಯೆನ್ನಸುವು ಸಲಹು ಷಡಾಗಮಜ್ಞ ನೃಪಾಲಯೆನಲಾಭೋಗಿಯನು ಕಂಡರಸ ನೀನಾರೆಂದು ಬೆಸಗೊಂಡ

ಉರಗಪತಿ ಕಾರ್ಕೋಟಕನು ತಾನರಸ ಕೇಳೀ ಬನದೊಳಿರುತಿರೆಪರಮಋಷಿ ಬಂದೆನ್ನ ತಾಗಿದನಂದು ಭೀತಿಯಲಿಕರೆದು ಕೊಟ್ಟನು ಶಾಪವನು ಸಂಚರಿಸದಂತಿರೆಯೆನಗೆಯಿದು ಪರಿಹರವದೆಂದಿಗೆ ಮುನಿಪ ಕರುಣಿಪುದೆಂದೊಡಿಂತೆಂದ

ಇರಲಿರಲು ಕಾಲಾಂತರಕೆ ಭೂವರನು ನಳನೃಪನಿಲ್ಲಿಗೈದುವಧರಣಿಪನ ಕರಕಮಲ ಸೋಂಕಲು ಶಾಪವಿದು ಬಳಿಕಪರಿಹರಿಪುದೆನೆ ಮುನಿಯ ವಚನದಿಬರವ ಹಾರುತ್ತಿರಲು ಬಂದೈಕರುಣದಿಂದಗ್ನಿಯನು ಪರಿಹರಿಸೆಂದನುರಗಪತಿ

ಕರುಣದಲಿ ನೃಪ ಭೀತಿಗೊಳ್ಳದೆಯುರಗಪತಿಯನು ತೆಗೆಯುತನಲನಉರಿಯ ತಪ್ಪಿಸಿ ಕೊಳದ ತೀರಕೆ ತಂದುಪರಿಚರಿಸೆಕರವಿಡಿದು ಧರಣಿಪನ ಕಚ್ಚಿದಡುರವಣಿಸಿ ವಿಷವೇರೆ ನೃಪತಿಯಪರಮತೇಜದ ದೇಹ ಕೆಟ್ಟಿತು ವಿಕೃತರೂಪಾಗಿ

ದೊಡ್ಡ ಹೊಟ್ಟೆಯ ಗೂನುಬೆನ್ನಿನಅಡ್ಡ ಮೋರೆಯ ಗಂಟುಮೂಗಿನದೊಡ್ಡ ಕೈಕಾಲುಗಳ ಉದುರಿದ ರೋಮಮೀಸೆಗಳಜಡ್ಡು ದೇಹದ ಗುಜ್ಜುಗೊರಲಿನಗಿಡ್ಡ ರೂಪಿನ ಹರುಕು ಗಡ್ಡದಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ

ಮಾರನಾಕಾರದ ನೃಪಾಲಕಕ್ರೂರರೂಪಾದನು ಪುರಾಕೃತಮೀರಲಾರಳವೆಂದು ನುಡಿದನು ತನ್ನ ಮನದೊಳಗೆತೋರಮಾಣಿಕವೆಂದು ಪಿಡಿದರೆಭೂರಿ ಕೆಂಡವಿದಾಯ್ತು ಶಿವಶಿವಕ್ರೂರಜಂತುಗಳೊಡನೆ ಸಖತನ ಫಲಿಸಿತೆನಗೆಂದ

ಮುನ್ನ ಮಾಡಿದ ಕರ್ಮಫಲವಿದುಬೆನ್ನ ಬಿಡದಿರಲುರಗಪತಿ ಕೇಳಿನ್ನು ನೋಯಲದೇಕೆ ತಾನೇ ಪಾಪಿಯಾದೆನಲಪನ್ನಗಾರಿಧ್ವಜನ ಕೃಪೆ ತನಗಿನ್ನು ತಪ್ಪಿದ ಬಳಿಕ ಲೋಕದೊಳಿನ್ನು ಸೈರಿಸಲಾರ ವಶವೆಂದೆನುತ ಮರುಗಿದನು

ಏಕೆ ನೃಪತಿ ವೃಥಾ ಮನೋವ್ಯಥೆಕಾಕಬಳಸಲು ಬೇಡ ನೀನವಿವೇಕಿಯೇ ಸಾಕಿನ್ನು ನಿನಗುಪಕಾರವಂಜದಿರುಲೋಕ ನಿನ್ನನು ಕಾಣದಂತಿರಬೇಕೆನುತಲೇರಿಸಿದೆ ಗರಳವನೇಕವುಪಕಾರಂಗಳಹವದರಿಂದ ನಿನಗೆಂದ

ಗರಳವಿದು ಸರ್ವಾಂಗದಲಿ ಸಂಚರಿಸುತಿಹ ಪರಿಯಂತ ರಿಪುಗಳಶರಜಲಾಗ್ನಿಭುಜಂಗರೋಗಾದಿಗಳ ಭಯವಿಲ್ಲನಿರುತವಿದು ವಜ್ರಾಂಗಿ ಬೇಡಿನ್ನರಸ ಚಿಂತಿಸಬೇಡ ಕಾರ್ಯದಹೊರೆಗೆ ತಾನಿದು ಬೇರೆ ಭಯ ಬೇಡಿನ್ನು ನಿನಗೆಂದ

ಜನಪ ಕೇಳೈ ಧರೆಗೆ ಋತುಪರ್ಣನು ಮಹಾರಾಜೇಂದ್ರ ಗುಣನಿಧಿಯಿನಕುಲಾಂಬುಧಿ ಚಂದ್ರನಾತನ ಪುರವಯೋಧ್ಯೆಯದುನಿನಗೆ ಬಹುದಕ್ಷಹೃದಯವು ಆತನಲಿ ನೀನವಗಶ್ವ ಹೃದಯವನನುಗೊಳಿಸು ಸಾಕಿನ್ನು ಚಿಂತಿಸಬೇಡ ಹೋಗೆಂದ

ಪೊಡವಿಪನನೋಲೈಸು ವಾಘೆಯಪಿಡಿದು ಬಾಹುಕನೆಂಬ ನಾಮದಿನಡೆಸು ರಥವನು ಹೀನವೃತ್ತಿಯದಲ್ಲ ನಿನಗಿನ್ನುಬಿಡದೆ ಮುನ್ನಿನ ರೂಪು ಬೇಕಾದಡೆ ನೆನೆವುದಾ ಪಕ್ಷಿಗಳ ಹಚ್ಚಡವನೀವುವು ಧರಿಸಲಡಗುವುದೀ ಕುರೂಪಿತನ

ನಿನ್ನ ಹವಣೇ ಪೂರ್ವಾದಲಿ ಭಿಕ್ಷಾನ್ನವನು ಬೇಡಿದನು ಪಶುಪತಿಪನ್ನಗಾರಿಧ್ವಜನು ಕಾಯ್ದನು ಪಶುಗಳಡವಿಯಲಿಉನ್ನತೈಶ್ವರ್ಯಪ್ರದನು ಶತಮನ್ಯು ಬನದಲಿ ನವೆಯನೇ ಸಾಕಿನ್ನು ಮನನೋಯದಿರು ಚಿತ್ತೈಸೆಂದನುರಗಪತಿ

ಪರಮಸತ್ಯವ್ರತದೊಳಾ ಪುಷ್ಕರನ ಗೆಲಿದುನ್ನತದ ರಾಜ್ಯದಸಿರಿ ಮಿಗಲು ಸಾಮ್ರಾಜ್ಯವಾಳುವೆ ನಿನ್ನ ಸತಿಸಹಿತವರವನಿತ್ತೆನು ನಿನಗೆಯೆಂದುಪಚರಿಸಿ ಕಾರ್ಕೋಟಕನು ನಳನೃಪಗರುಹುತಾಕ್ಷಣ ಮಾಯವಾದನು ರಾಯ ಕೇಳೆಂದ

ಬಲಿದ ಚಿಂತೆಯ ಮನದ ದುಗುಡದನಳನೃಪತಿ ಕಾನನದಿ ಬರುತಿರೆಮಲೆತು ತೊಲಗದ ದುಷ್ಟಮೃಗಗಳ ಕಂಡು ನಸುನಗುತಹಲವು ಗಿರಿಗುಹೆ ಗಹ್ವರಂಗಳಕಳೆದು ಮುಂದಣ ಜನಪದಂಗಳಬಳಿವಿಡಿದು ನಡೆತಂದನಲಸದೆ ಹಲವು ಯೋಜನವ

ಹರಿವ ನದಿಗಳ ವನತಟಾಕದವರಕುಸುಮ ಮಲ್ಲಿಗೆಯ ಬನಗಳಪುರದ ಪ್ರಾಂತದೊಳೆಸೆವ ಕೆಂದಾವರೆಯ ಕೊಳಗಳನುಉರುತರದ ಪಾನೀಯಶಾಲೆಯಮರಗಳಿಂದತಿಮೆರೆವ ರಾಜ್ಯವಧರಣಿಪತಿ ಸಂತಸದಿ ನೋಡುತ ಬಂದನಾಯೆಡೆಗೆ

ಧಗಧಗಿಪ ಕೋಟಾವಳಿಯ ಹೊಗರುಗುವ ಹೇಮದ ಕೊತ್ತಳಂಗಳಗಗನವನು ಚುಂಬಿಸುವ ತೆನೆಗಳ ಸಾಲುರತ್ನಗಳಸೊಗಸುವಾಳ್ವೇರಿಗಳ ಸುತ್ತಿರಿವಗಳ ಘಾತವನಾರು ಬಲ್ಲರುಬಿಗಿದ ವಜ್ರಕವಾಟವೆಸೆದುದು ದಿಕ್ಕುದಿಕ್ಕಿನಲಿ

ಹೊಳೆವ ಮಿಸುನಿಯ ರತ್ನನಿಚಯದನೆಲೆನೆಲೆಯ ಸೌಧಾಗ್ರದಲಿ ಪ್ರಜ್ವಲಿಪ ಹೇಮದ ಕಲಶಗಳ ರವಿಚಂದ್ರಶಾಲೆಗಳಲಲನೆಯರ ನಾನಾ ವಿನೋದದಹಲವು ಗೋಪುರಶಿಖರದಗಣಿತನೆಲೆಯ ವರ್ಣಿಸಲರಿದಯೋಧ್ಯಾಪುರವು ರಂಜಿಸಿತು

ಅರಸುಗಳು ಭೂಸುರರು ಮಿಗೆ ವೈಶ್ಯರು ಚತುರ್ಥರು ನಾಗರಿಕದಪುರಜನರು ಸಂದಣಿಸಿತಗಣಿತ ರಾಜವೀಧಿಯಲಿಕರಿ ತುರಗ ರಥ ಪಾಯದಳ ಗೋಚರಿಸಿತಂಗಡಿ ನವವಿಧಾನದಿಮೆರೆವಯೋಧ್ಯಾಪುರವ ಕಂಡನು ತೂಗಿದನು ಶಿರವ

ಬಂದು ಹೊಕ್ಕನು ಪುರವ ಮೆರೆವತಿಚಂದವನು ನೆರೆನೋಡಿ ಮನದೊಳಗಂದು ಕೊಂಡಾಡಿದನು ಋತುಪರ್ಣನ ಮಹಾಸಿರಿಯತಂದುದೇ ವಿಧಿ ತನ್ನನಿಲ್ಲಿಗೆಮಂದಭಾಗ್ಯನು ತಾನೆನುತ ಮನನೊಂದು ನೆನೆದನು ವರಪುರಾಧಿಪ ಚೆನ್ನಕೇಶವನ