VIII
Khagendramaṇidarpaṇa
ಲೇಪನ ಪ್ರಕರಣಂ
ಶ್ರೀದಮೆನಿಸಿರ್ದ ಜಿನಗಂಧೋದಕದಿಂ ಶುದ್ಧಮಾದ ದೇಹಿಗಳ ಭವಚ್ಛೇದನಮಕ್ಕುಂ ವಿಷವಿಚ್ಛೇದನಮಂತೀ ಸಮಂತ್ರಕಂಗಾರ್ದ್ರತೆಯಿಂ
ಕೋಪಾಟೋಪದೆ ಫಣಿ ಪಿಡಿದಾ ಪಲ್ಗಳ್ ನಟ್ಟ ತಾಣದೊಳ್ ಮರ್ದುಗಳಂಲೇಪಿಸೆ ಸಮಂತ್ರಕಂಗಳ್ಲೋಪಮನೆಯ್ದಿಸುಗುಮುಗ್ರವಿಷವಿಕ್ರಮಮಂ
ಪಾನಮದರ್ಕಂಜನಮದರ್ಕಾ ನಸ್ಯಮದರ್ಕೆ ಲೇಪನಕ್ರಿಯೆಯೊಂದರ್ಕೀ ನಾಲ್ಕಱೊಳೊಂದೆ ವಿಷಗ್ಲಾನಿಯನಳಱಿಸುಗುಮೆಂದೊಡೇವಣ್ಣಿಪುದೋ
ಸಿರಿಸದ ಪುಷ್ಪ ಮಂಜಿಟಿಗೆ ಹಿಂಗು ಕರಂಜದ ಬೀಜ ದೇವದಾರರಿಸಿನಮುಂ ಕಟುತ್ರಯ ಫಲತ್ರಿತಯಂ ಸಿತಶೈಲ ಕನ್ಯೆಯಂಬರ ಗರುಡೋಗ್ರಗಂಧಿ ಸಿತಸರ್ಷಪದೊಳ್ ಕೊಱೆಯಕ್ಕಿ ದಾರ್ವಿಯುಂಬೆರಸಜಮೂತ್ರದಿಂದರೆವುದಕ್ಷಸಮಾನಮದಾಗಲುಂಡೆಯಂ
ಕೂಡಿರೆ ಚಾಯಾ ಶುಷ್ಕಂಮಾಡಿ ನೃಮೂತ್ರದೊಳೆ ನಸ್ಯ ಲೇಪನ ವಿಧಿಯಿಂಪೀಡಿಸುವಖಿಲ ವಿಷಂ ಬಿಟ್ಟೋಡುಗುಮಾ ಸೂೞ್ವರಂಗಳನಿತುಂ ವಿನುತಾ
ಎರಡರಿಸಿನ ಕುಂಕುಮಮೆಸೆವರಿದಾಳಂ ಬಾಳಯುಗ್ಮಮುತ್ಪಳ ತಗರಂಬೆರಸಿಂತಿವೆಲ್ಲಮೊಂದಾಗಿರೆ ಪದ್ಮಕಕೇಸರಂ ಲಸಜ್ಜಾಯಿಫಳಂ
ಸಾರತರಮೆನಿಪ ಚಂದನಗೋರೋಚನ ರೇಣುಕಂ ಮಣಿಚ್ಛಿಲೆಯುಂ ಕಸ್ತೂರಿ ವರಮಾಂಸಿಯೆಲೆಗಳೊಳೋರನ್ನಮೆನಲ್ಕೆ ನಾಗಕೇಸರ ಮನದಂ
ಕೂಡುವುದೆಲ್ಲವಱರ್ಧಮನೀಡಿತದಕ್ಷಪ್ರಮಾಣ ವಟಕಂಗಳ ನೀಂಕೂಡಿ ಕೊಡು ಲೇಪನಾದಿಗೆನಾಡಾಡಿಯೆ ಮರ್ದಿವಕ್ಕೆ ದೊರೆ ಪೆಱತುಂಟೇ
ಇದಮೋಘಂ ಸರ್ಪಾದಿಗಳೊದವಿದ ವಿಷಮಂ ವಿರೋಧಿಮಾ ಪಾತಕರಿಕ್ಕಿದ ವಿಷಮಂ ಪರಿಹರಿಕುಂಸದಮಳ ಚಂದ್ರಪ್ರಭಾಖ್ಯಯೋಗಮಿದಕ್ಕುಂ
ಇಂದು ಮಡುವಾಗಲೊಪ್ಪುವಕಂದಂ ಪಾತಾಳಗರುಡನೆಂಬಿವುಮಂ ಕೞಿಯಿಂದಂ ಮರ್ದಿಸಿ ಪೂಸಲ್ಸಂದೆಯಮೇಂ ನೆತ್ತಿಗೊತ್ತೆ ನಿರ್ವಿಷಮಕ್ಕುಂ
ಬೆಲ್ಲದೊಡಗೂಡಿ ಸುಣ್ಣಮನಿಲ್ಲಣಮಂ ಮರಿಚ ಲಶುನಮಂ ಕರಿಯೆಲೆಯಂನಿಲ್ಲದೆ ಜಲದಿಂ ಮರ್ದಿಸಿತಲ್ಲಣಿಸದೆ ಪೂಸೆ ಫಣಿವಿಷಕ್ಷಯಮಕ್ಕುಂ
ಬೆಳುಹೂಲಿಯ ಬೇರಂ ಮಂಡಳಮಾರಿಯ ಬೇರನಕ್ಕೆ ಪುಳಿಯಿಂದರೆದಾಖಳಸರ್ಪಂ ಕಡಿದೆಡೆಗಾಗಳೆ ಪೂಸಲ್ ನಿರ್ವಿಷಂ ಪರಾರ್ಥಚರಿತ್ರಾ
ಜೇನೊಳ್ ಗೋಜಿಹ್ವೆಯುಮಂಜಾನಿಸದೆ ಸಮಸ್ತ ಸರ್ಪ ಮೂಷಕ ದಷ್ಟಸ್ಥಾನದೊಳೆ ಪೂಸೆ ವಿಷದಭಿಧಾನಮದಾ (ನಾ)ಕ್ಷಣದೊಳೞಿಗುಮದು ನಿಶ್ಚಯದಿಂ
ಬೆಲ್ಲದೊಡಗೂಡಿ ಸುಣ್ಣಮನಿಲ್ಲಣಮಂ ಪಾವು ಮುಟ್ಟಿದೆಡೆಯಂ ಸುತ್ತಲ್ನಿಲ್ಲದೆ ಪೂಸುಗೆ ವಾಣೀವಲ್ಲಭನಿಷ್ಟಂ ವಿಷಾಪಹಂ ಸಱಿಯಕ್ಕುಂ
ಕುಮುದಂ ಮಳಯಜ ಗೋಪಿತ್ತ ಮಾಂಸಿ ಸೈಂಧವ ರಸಾಂಜನಂ ಪಿಪ್ಪಲಿಯುಂಕ್ರಮದಿಂದಮೊಂದನೊಂದಿಸಿಸಮಂತ್ರಕಂ ಪೂಸೆ ಫಣಿವಿಷಂಗಳ್ ಕಿಡುಗುಂ
ಮರಗಱುಕೆ ಮೂಕೊಱ (ತಿ) ಭಾಸ್ಕರ ಚಿತ್ರಕನುಗ್ಗೆ ತವಸೆಯಾರಗ್ವಧ ಕತ್ತರಿ ಬ್ರಹ್ಮದಂಡೆ ಬಿಲ್ವಂಗುರು ಮಂಡಲಮಾರಿಯೆಂಬಿವಂ ಕೞಿಯಿಂದಂ
ಪರಿಮರ್ದಿಸಿ ಪೂಸಲ್ ಪಿಡಿದುರಗಂ ಮೂಸಿದೆಡೆಗಂ ತಡೆಯದಾಕ್ಷಣಮುಬ್ಬರಿಸಿದ ಬಾವುಂ ತದ್ವಿಷದುರವಣೆಯುಂ ಕಿಡುಗುಮೆಂದಪಂ ಮಂಗಬುಧಂ
ಉರಗಂ ಮೊದಲಾದ ಮಹಾಗರಳಂ ತದ್ವಿಷದ ಬಾವು ಜಳರೋಗಂ ಕಾಸರಿಕೆಯ ಬೆನ್ನೀರಿಂದಂಪರಿಹರಿಕುಂ ಪೂಸೆ ಕುಡಿಸೆಯುಂ ಗುಣನಿಲಯಾ
ಸಾಲದೆ ಮಧು ಘೃತ ಚಂದನಚೀಲೈತಂ ಬಿಳಿಯ ಬದ್ದವಂ ಮರ್ದಿಸಿ ಪೂಸಾಲಸ್ಯಮೇವುದಂತದುಕಾಳೋರಗವಿಷಮನಾದೊಡಂ ಸಂಹರಿಕುಂ
ಬಜೆಯತಿಬಜೆಯಂಕೋಲಂರುಜೆ ತಗರಂ ಕಾಡೆಯುಂ ಹರಿದ್ರಮಿದೊಂದಲ್ವಿಜಯಫಳಯೋಗಮಹಿವಿಷವೃಜಿನಮನಾಕ್ಷಣದೊಳೞಿಗುಮಿದು ಸಿದ್ಧಾಂತಂ
ಪಿಪ್ಪಲಿಮೂಲಂ ಪಾಟಲಿಯೊಪ್ಪುವ ಕಟುತ್ರಯಂ ಸಮಂಗೊಂಡರೆ ಲೇಸಪ್ಪ ಕೞಿಯಿಂದೆ ಪೂಸಲ್ಕಿರ್ಪುದೆ ಫಣಿದಷ್ಟವಿಷಮದೇಂ ಕ್ಷಣಮಾತ್ರಂ
ಕರ್ಕಟಕನದರ ತಾಳಕಮರ್ಕನ ಸಿಫೆ ಕುನಟಿ ರಜನಿ ಕುಂಕುಮ ಕಡಂದುಱುಹಿಕ್ಕೆಯ ಮಣ್ ಗೋಸುಂಬೆಯಹಿಕ್ಕೆಯನೊಂದಾಗಿ ಪೂಸಲಹಿವಿಷಮೞಿಗುಂ
ಫಣಿಕೊಂಡ ತಾಣದೊಳಮಾಕ್ಷಣದೊಳ್ ಪೂಸುವುದು ಬೇಗದಿಂದೆಕ್ಕೆಯುಮಂಕಣಿಗಿಲೆಯಂ ಬೆರಸಿದೊಡದನಣುವಿಂ ಕಿಱಿದಾಗಿ ವಿಷಮದೞಿಗುಂ ಕ್ರಮದಿಂ
ತರಿಸುವುದಿಂದ್ರವಾರುಣಿ ಸುಗುಂಧಿಗಳಂ ಗಿರಿಕನ್ಯ (ರ್ಣಿ)ಕಾಖ್ಯಮೀಶ್ವರಿ ತಗರಂಗಳೆಂಬಿವನಹಸ್ಕರ ನೀಲಿ ಸುದೇವದಾಳಿಯಂನಿರುಪಮಮ್ಪ ಕೈಪೆಸೊರೆಯಂ ಭರದಿಂದರೆ (ವೆ) ಕಾೞುವೀರೆಯಂಬೆರಸವನೆಯ್ದೆ ಪೂಸುವುದು ಸರ್ಪವಿಷಾಪಹಮೀ ಧರಿತ್ರಿಯೊಳ್
ಎರಡರಿಸಿನ ತಿಲಸರ್ಷಪಸುರಸಿ (ಗಿ)ಯ ಬೇರ್ ಸೋಮರಾಜಿ ನಿಂಬದ ಬಿತ್ತಂಪರಿಮರ್ದಿಸಿ ಪೂಸಲ್ ವಿಷಧರಾದಿ ನಿಖಿಳೋಗ್ರತರ ವಿಷಂಗಳುಮೞಿಗುಂ
ಎರಡರಿಸಿನಮೀಶ್ವರಿ ಹತ್ತರಿಕೆಯಪಾಮಾರ್ಗ ಸೊಗದೆ ನೀಲಿಯಿವಂ ಶರ್ಕರೆವೆರಸಿ ಪೂಸಲೊಡಮಚ್ಚರಿಯೇಂ ಫಣಿ ವೃಶ್ಚಿಕಾದಿ ವಿಷಮಿರದೞಿಗುಂ
ಗುರುಗುಂಜಿಯುಮಂ ಗುಡಮಂಪರಿಮರ್ದಿಸಿ ಮಧುಘೃತಾನ್ವಿತಂ ಪೂಸುಗೆ ಮೇಣರೆದೀವುದು ಸಮುದ್ರಫಳಮೊಂದಿರೆ ಕುಳಿಮಾವಿನೊಳೆ ಕೞಿಯಿನಖಿಳ ವಿಷಘ್ನಂ
ಎರಡರಿಸಿನಮೆರಡುಂ ಬಜೆವೆರಸಿರ್ದಭಯಂ ವಸಂತಪುಷ್ಪಂ ರುಜೆಯಂತರದೊಳಿರಲರೆದು ಪೂಸಲ್ಗರುಡಮತಂ ವಿಷಧರಾದಿಗಳ ವಿಷಮೞಿಗುಂ
ವಿಳಸತ್ ಸೈಂಧವ ಲೋಧ್ರಂಶಿಳೆ ಕುಂಕುಮ ರೋಚನಂಗಳೆಂಬಿವನಿಂಬಿಂದಲತಗೆಯ ರಸದೊಳರೆದಂತಲಸದೆ ಪೂಸುವುದಶೇಷ ವಿಷಮಿರದೞಿಗುಂ
ಎರಡರಿಸಿನ ಕುಂಕುಮ ಶಿಲೆಯರಿದಾಳಂ ಕುಸಬೆಯೆಂಬಿವಂ ನೀರಿಂದಂಪರಿಮರ್ದಿಸಿ ಪೂಸಲೊಡಂಪರೆಗುಂ ಪಲತೆಱದ ಪಾವಿನುಗ್ರವಿಷಂಗಳ್
ಗೃಹಧೂಮ ಮೇಘನಾದಿಯುಮಹಿಷಾಕ್ಷಿಯುಮಂಗುರೆಂಬಿವಂ ಗೋಮೂತ್ರಂಸಹಿತಮೆನಲರೆದು ಪೂಸಲ್ಕಹಿಗಳ ಪಲತೆಱದ ವಿಷಗಳೇಂ ನಿಂದಪುವೇ
ಸೇ (ಸೀ)ಗುಡಿತೆಯ ಮುಳ್ ಕೊಗ್ಗಿಯದಾಗುಡಿ ಚಿತ್ತರಟಿ ಪಾಪಡಿಗಳೆಂಬವಱೊಳ್ಪ್ರಾಗುಕ್ತ ಮೂಲಮಿರದರೆದಾಗಳ್ ಖರಮೂತ್ರಲೇಪಮಲ್ತೆ ವಿಷಘ್ನಂ
ವಿಲಸನ್ಮರಿಚಂ ಕಣ ನಾಂಗುಲಿಯೊಪ್ಪುವ ಕಂದ ಪಾಟಲಿಯ ಮೂಲಮನಂಬಿಲದಿಂದಮರೆದು ಪೂಸಲ್ತೊಲಗುಗುಮಾ ಕಾಲದಷ್ಟವಿಷಮುಂ ಕ್ಷಣದಿಂ
ಇನದುಗ್ಧದ ಮುತ್ತದ ಬಿತ್ತಿನ ತಿರುಳುಮನೇೞುಸೂೞ್ ಭಾವಿಸಿದುದನಿಂಬಿನೊಳುದಕದಿಂದೆ ಲೇಪಿಸೆಘನವೆನಿಸುವ ವಿಷಧರಾದಿಗಳ ವಿಷಮೞಿಗುಂ
ಸೂರಣದಕಂದಮಂ ಜಂಬೀರರಸಂಗೂಡಿಯರೆವುದಿಲ್ಲಣ ಸಹಿತಂಪಾರದೆ ಪೆಱವಂ ಲೇಪಿಸೆಘೋರೋರಗ ವಿಷಮನೞಿಗುಮದು ನಿಶ್ಚಯದಿಂ
ರವಿಯೊಪ್ಪುವ ಪಣ್ಣೆಲೆಯುದ್ಭವರಸಮರುಠಾಳದೆಸೆವ ಬಿತ್ತುಂ ಮುಸ್ತಾಲವಣಮಿದೊಂದಿರೆ ಲೇಪಿಸೆತವಕದೊಳಂ ಭವನ ಕೊರಳ ಗರಳಂ ಪರೆಗುಂ
ಮಡುವಾಗಲ್ ನೀಲಿ ಪಾತಾಳಗರುಡಮೆಸೆವಂಕೋಲೆ ಚಾಂಪೇಯಮೊಂದಾದೊಡೆ ಧಾತ್ರೀಮೂಲಮುಂ ಕಾಸರಿಕೆಯ ಫಲಮುಂ ಕೌಡೆಯುಂ ಮಾ (ಕೂ)ಡಿ ಬಂದಂದೊಡಗೂಡಲ್ ಚಿನ್ನಧಾರಾಪ್ರಥಿತದುಗುನೆಯೊಳ್ಪತ್ರಮೀ ಪತ್ತುಮಂ ಕೂಡಿಡು ಜಂಬೀರಾಂಬುವಿಂ ಲೇಪಿಸೆ ಬರ್ದುಕುಗುಮಾ ಕಾಲದಷ್ಟಂ ಬುಧೇಷ್ಟಾ
ಬೆೞನೆರಡರ ಬೇರ್ಗಳುಮಂಕೞಿಯಿಂದಿರದರೆದು ಪೂಸುಗಂತಲ್ಲದೊಡಂಬೆೞಲೊಪ್ಪುವ ಬಂದಣಿಕೆಯನಳವಡೆ ಪೂಸುವುದು ಜೀವಿಕುಂ ಫಣಿದಷ್ಟಂ
ಆವರೆಯೆಲೆಯಂ ಕೞಿಯಿಂಭಾವಿಸಿ ದಷ್ಟಂಗೆ ಪುಣ್ಗೆ ಲೇಪಿಸಲೞಿಗುಂಪಾವಿನ ವಿಷಮೆಂದಖಿಳ ಧರಾವಳಯದೊಳಱಿಯೆ ಪೇೞ್ದನುಭಯಕವೀಂದ್ರಂ
ಸಿತಮೆನಿಸಿದ ತುಱುವೆಯನಾಹತಮಿಲ್ಲದ ನೀರೊಳರೆದು ಪಾವಿನ ದಂತಕ್ಷತದೆಡೆಯಂ ಪೂಸುವುದೀಕ್ಷಿತಿಯೊಳಿದೊಂದಲ್ತೆ ನಿರ್ವಿಷಂ ಗುಣನಿಳಯಾ
ದಿನಕರವಾರದೊಳಂ ಗರ್ದುಗಿನ ಬೇರಂ ತಕ್ರದಿಂದೆ ಮರ್ದಿಸಿ ಪೂಸಲ್ದಿನಪಗಿದಿರಾದ ಕೞ್ತಲೆಯನಿತುಂ ಪರೆವಂತೆ ಪರೆಗುಮಹಿಯುಗ್ರವಿಷಂ
ಪರಿಕಿಸಿ ನೀಂ ಮರ್ದುಗಳಂಪರಿದಱಸಲದೇಕೆ ಕಿವಿಯ ಕೊಗ್ಗಿಯುಮಂ ಕೊಂಡಿರದತಿವೇಗದೆ ಪೂಸಲ್ಪರೆಗುಂ ಫಣಿವಿಷಮದಮಳಗುಣಗಣನಿಳಯಾ
ಏನಣ್ಣ ಪಲವು ಮರ್ದಂಜಾನಿಸದತಿಶೀಘ್ರಮೆಸೆವ ಪಲ್ಗಳೊಳಿರ್ದಾಕೀನಿಯುಮಂ ಪೂಸಲೊಡಂಸೂನೃತಮಿದು ಸರ್ಪಕುಳದ ವಿಷಮಿರದೞಿಗುಂ
ಕೆಂಕರಿಸಿಯುಗುೞ್ದ ಮಣ್ಣಂತಾಂ ಕಲಿಸಿಯೆ ನಿರ್ವಿಷಾಮಿದೆಂಬಕ್ಕರಮಂತ್ರಾಂಕದವುಷಧಿಯ ಪೂಸುಗೆಮಾಂಕರಿಸದಿರಲ್ಕೆ ಸರ್ಪವಿಷಮಿರದೞಿಗುಂ
ಮೊಲಕಿವಿ ಕಲ್ಲನಾರು ದಧಿಫೇನ ಸಣಂಬಿನಬೀಜ ಕಾಚು ತುಗ್ಗಿಲ ವರ ಪತ್ರಕಂಗಳನೆ ಮತ್ತೆ ಕುಱಂಟಗೆಯೊಳ್ಳಿದಪ್ಪ ಸದ್ದಲರಸದಿಂದೆ ಮರ್ದಿಸಿರಲಂತು ಬೞಿಕ್ಕಹಿದಷ್ಟನಾ ಕ್ಷತಕ್ಕಲಸದೆ ಮೂತ್ರಕಾಚ ಲವಣಂ ಬೆರಸಲ್ಕದೆ ಪೂಸೆ ನಿರ್ವಿಷಂ
ಮಳಯರುಹ ರಸಾಂಜನಮುತ್ಪಳ ಮಧುಕಂ ಮಾಂಸಿ ಮಾಗಧಂ ಗೋಪಿತ್ತಂನೆಲೆಗಿಡಿಕುಂ ಫಣಿವಿಷಮಂಜಲದಿಂದರೆದೊಡನೆ ಪೂಸಲಿವನಾಕ್ಷಣದಿಂ
ಅಗುರೆಲವ ಮಧುಕ ಮಂಜಿಷ್ಠೆಗಳರಿಸನ ಮಾಂಸಿಯಂ ಜಲಾನ್ವಿತಮಂ ಮಾಡುಗೆ ಲೇಪನ ನಸ್ಯಮುಮಂಖಗರಾಜನ ಮಾೞ್ಕೆಯಿಂದಮಿೞಿಕುಂ ವಿಷಮಂ
ಭೋರೆಂದು ಬಂದು ರೌದ್ರಾಕಾರದೊಳಂ ಪಿಡಿಯೆ ಸರ್ಪನಾಕ್ಷಣದೊಳ್ ತಣ್ಣೀರಿಂದೆ ವೃಶ್ಚಿಕಾಳಿಯನೋರಂತಿರದರೆದು ಪೂಸೆ ನಿರ್ವಿಷಮಕ್ಕುಂ
ನೀರಿಂ ಕಳ್ಳಂಗಡಲೆಯಬೇರಂ ತಂದರೆದು ಪೂಸೆ ನಿರ್ವಿಷಮಕ್ಕುಂಪಾರದೆ ಪೆಱವಂ ಕೞಿಯಿಂಹೇರೀಚಲ ಪೂವನರೆದು ಪೂಸಲವದ್ಯಂ
ಆರಿಂದಮರಿದು ಬಾರಿಪರಾರೆಂದೆಲ್ಲರ್ಗೆ ಬಾಯ ಬಿಡುತಿರದಾಗಳ್ನೀರಿಂ ಮಡುವಾಗಲನರೆದಾರಾನುಂ ಲೇಪಿಸಲ್ಕೆ ಫಣಿವಿಷಮೞಿಗುಂ
ಶಿರೋದ್ವರ್ತನಂ
ಮರಿಚಮುಮಂ ಜೇಪಾಳದತಿರುಳಂ ಪ್ರತ್ಯೇಕಮೇೞು ಮಿಲಿಮಿಚ್ಚಿಯಪಣ್ಣರಿದೊಂದು ಭಾಗದೊಳಗಿಟ್ಟಡಿಸುವುದತ್ಯುಗ್ರಮಪ್ಪ ಬಿಸಿಲೊಳ್ ಬೞಿಯಂ
ಅನಿತು ಪುಳಿಯೆಱೆಯಲೆಱೆವುತ್ತನಿತನಿತನೆ ಬರ್ಪುದೆಯ್ದಲೇೞ್ಪಣ್ಣರಸಂಇನಿಸುೞಿಯದೆ ಪದನಱಿದಂತನಿತುಮನಜಪಿತ್ತದಿಂದೆ ಮರ್ದಿಸಿವಿಧಿಯಿಂ
ಭಾವಿಪುದಜಪಿತ್ತದೊಳಂಪಾವಡೆಯೊಳ್ ಕಟ್ಟಿ ಪೊಗೆಯೊಳಿಟ್ಟುದನಿಂಬಿಂಪಾವಡರ್ದು ಪಿಡಿಯೆ ಮೈಮಱೆದಾವಂಗಂ ಮಾೞ್ಪುದೊಂದು ಚೋದ್ಯಮನುಸಿರ್ವೆಂ
ಸತ್ತನಿವನೆಂಬ ಪದದೊಳ್ನೆತ್ತಿಯೊಳಂ ಶಸ್ತ್ರದಿಂದೆ ಸೊದೆವೊಯ್ದೆಡೆಯೊಳ್ನೆತ್ತರುಮುಣ್ಮಿನಮದನಿರದೊತ್ತುಗೆ ಪುಳಿಯಿಂದೆ ಮೂರ್ಛೆವೋದಂ ಬೞಿಯಂ
ನೋಡುವನೆಲ್ಲರೊಳಂ ಮಾತಾಡುವನೆೞ್ಚಱುವನೇೞುವಂ ನಡೆವಂ ತಾಂನೋಡಿರೆ ಚಿತ್ರಮನೆಂಬರ್ನಾಡೆಲ್ಲಂ ಮರ್ದಿದರ್ಕೆ ದೊರೆ ಪೆಱತುಂಟೇ
ಪಸಿಯದೆನಿಸಿರ್ಪ ಪೊಸಕೈಪೆಸೊರೆಯ ಕಾಯೊಳಗೆ ಲವಣಮಂ ಬೆರಸಿಯದಂಮಿಸುಪರ್ಕದುಗ್ಧದಿಂ ಭಾವಿಸಿ ಮಡಗಿರಲಹಿತಮಪ್ಪ ಮಹದಹಿ ಪಿಡಿಯಲ್
ಸೊತೆವೊಯ್ದಾಮ್ರಸಮೇತಂವ್ಯಥಿತನ ನೆತ್ತಿಯೊಳಮೊತ್ತಲಂತಾ ವಿಷಮುಂವೃಥೆಯಾಗಿಯೆ ಪೋಕುಂ ತತ್ಪೃಥುತರವಹ ಮೂರ್ಛೆ ತಿಳಿವುದಂತಾಕ್ಷಣದೊಳ್
ಫಣಿಕೊಂಡು ಬಿೞ್ದ ನರನಾಕುಣಪನವೋಲಿರಲಮೋಘಮೊಪ್ಪುವ ಲಶುನಂಮೆಣಸುಪ್ಪು ಶುಂಠಿ ಗರ್ದುಗಿಲ್ಲಣ ಹುಲಿಗಿಲಿವಂ ಸರಾಗಮರೆದಿರೆ ಕೞಿಯಿಂ
ಅಲಸದಿರೊಯ್ಯನೆ ಪೊಯ್ವುದುತಲೆಯೊಳ್ ಶತೆಯಂ ಬೞಿಕ್ಕೆ ನೆತ್ತರ್ ಬರಲಾವಿಲಚಿತ್ತನಾಗದಂತಾವಿಲಸದ್ಯೋಗಮನೆ ಪೂಸಲಾತಂ ಬಾೞ್ಗುಂ
ಸತ್ತನಹಿಕೊಂಡುದೆಂದಾಪೊತ್ತೊಯ್ದು ಚಿತಾಗ್ನಿಯಲ್ಲಿ ಸಂಧಿಸುವೆಡೆಯೊಳ್ಮತ್ತೆನಿಸದೊಂದು ನಯಮಂಬಿತ್ತರಿಸುವೆನವನ ತಲೆಗೆ ಶತೆವೊಯ್ದೊಲವಿಂ
ರಸಮಂ ಪೆರ್ಬುಲಿಯಂ ತನಿರಸದಿಂ ಮರ್ದಿಸಿ ಬೞಿಕ್ಕ ದಷ್ಟನ ಸಿರದೊಳ್ಬಿಸುಪೆಸೆಯೆ ತೇದು ಸಗಣದೊಳೆಸೆವಿನೆಗಂ ಕಟ್ಟುಗಟ್ಟು ಭಾವಿಸಿ ಬೞಿಯಂ
ಸಾಸಿವೆ ಮೆಣಸುಳ್ಳಿಯನರೆದಾ ಸಗಣದ ಕಟ್ಟೆಯೊಳಗೆ ಮೂತ್ರಯುತಂ ಪೊಯ್ಕಾಸಿದ ಕರ್ಬುನಮಂ ತಂದಾ ಸರಿಸದೊಳೊಪ್ಪೆ ಪಿಡಿಯಲಂತವನೇೞ್ಗುಂ
ತಪ್ಪುವಡೆ ರಾಮಬಾಣಂತಪ್ಪುವೊಡಾ ಭರತನಾಜ್ಞೆ ಗಣಧರಸೂಕ್ತಂತಪ್ಪುವೊಡಂ ತಪ್ಪದೆ ತಾನಪ್ಪುದು ಗರುಡಾಧಿಪ ಕ್ರಿಯಾಖ್ಯಮಿದಿಳೆಯೊಳ್
ಇದಮೋಘಂ ವೈದ್ಯಶಾಸ್ತ್ರಾರ್ಣದೊಳೆಸೆವ ತತ್ಸಾರಮಂ ಸ್ವಲ್ಪಮಂ ಪೇೞ್ದ ದಯಾಂಭೋರಾಶಿ ಮಂಗಂ ತಿಳಿಪಿದನಿಳೆಗಂ ನೋೞ್ದೊಡಾರೈದು ನಿಚ್ಚಂಮುದದಿಂದಂ ಮಾೞ್ಪುದಿಂತೀ ಕ್ರಿಯೆಗಳನೆಸೆವೀ ಲೇಪನಾಖ್ಯಂಗಳಂ ಪೆಂಪೊದವಲ್ ಧರ್ಮಾರ್ಥ ಕಾಮಂಗಳನಱಸುವವಂ ಸರ್ವಲೋಕೈಕಮಾನ್ಯಂ
ಗದ್ಯ. ಇದು ಸಕಲ ವಿದಮಲ ಜಿನೇಂದ್ರೋಕ್ತ ಸಿದ್ಧಾಂತ ಪಯಃಪಯೋನಿಧಿ ಪಾರಗ ಶ್ರೀ ಪೂಜ್ಯಪಾದ ಮುನೀಂದ್ರ ಚಾರುಚರಣಾರವಿಂದ ಗಂಧಗುಣಾನಂದಿತಮಾನಸಂ ಶ್ರೀಮದಖಿಲ ಕಳಾಗಮೋತ್ತುಂಗ ಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್ ಲೇಪನಾಧಿಕಾರಂ ಅಷ್ಟಮಂ


