IX
Khagendramaṇidarpaṇa
ಅಂಜನ ಪಾನ ನಸ್ಯ ಲೇಪನ ಪ್ರಕರಣಂ
ಶ್ರೀಲಲಿತ ಶಕ್ರಮಣಿಮಯಮೌಲಿಮಹಾಕಿರಣವಾರಿಧಾರೆಗಳಿಂ ದಂಕ್ಷಾಲಿತ ಪದಯುಗನಭಯಶ್ರೀಲಲನಾಕಾಂತ ಶಾಂತಿ ರಕ್ಷಿಸುಗೆಮ್ಮಂ
ಮುಂ ಪೇೞ್ದೆಂ ಪಾನಾದಿಗಳಂ ಪಿರಿದುಂ ಸ್ಪಷ್ಟಮಪ್ಪಿನಂ ಪ್ರತ್ಯೇಕಂಸೊಂಪೆಸೆಯಲ್ಕೆಲ್ಲಾ ಕ್ರಿಯೆಗಂ ಪುದುವೆನಿಸಿರ್ಪ ಯೋಗಮಂ ಪ್ರಕಟಿಸುವೆಂ
ಅನುಯೋಗಚತುಷ್ಟಯ ಭಾವನೆಯಿಂ ಭವವಿಷಮದೆಂತು ಪರೆಗುಮದಂತಂಜನ ನಸ್ಯಂ ಪಾನಂ ಲೇಪನದಿಂ ಖಳಫಣಿಕುಳೋಗ್ರವಿಷಮುಂ ಕಿಡುಗುಂ
ಆನೆ ರಥ ಕುದುರೆ ಕಾಲಾಳ್ಸೇನೆಯೊಳೊಂದೊಂದಮಿತ್ರಬಲಮಂ ಜಯಿಸಲ್ತಾನದೆ ಸಾಲ್ಗುಮೆನಲ್ಕಿನ್ನಾ ನಾಲ್ಕುಂ ಬಲಸಮೇತದಿಂ ತೀರದುದೇ
ಅದಱಿಂ ಪಾನಾಂಜನ ನಸ್ಯದ ಲೇಪನದೆಸೆವ ವಿಧಿಗೆ ಯೋಗ್ಯಮೆನಿಪ್ಪೊಳ್ಳಿದುವಪ್ಪ ಯೋಗಮಂ ಪೇೞ್ವುದೆ ತಾಂ ಕರ್ತವ್ಯಮೆಂದು ಮತ್ತಱಿಪುವೆನಾಂ
ವರಮಂಜಿಷ್ಟಿಗೆ ದೇವದಾರು ಮಧುಕಂ ತ್ವಗ್ರಾ ತ್ರಿಯುಗ್ಮಂ ಸಸಿಂಧುರುಹಂ ವ್ಯೋಷ ವಿಳಂಗ ಹಿಂಗು ಕಿಱುದೆಂಗೆಂಬಿಂತಿವಂ ಕೂಡಿ ನೀಂಸರಿಗೊಂಡಾಜ್ಯದೊಳೀಯೆ ಪಾನ ಮೊದಲಾಗೆಲ್ಲಾ ಕ್ರಿಯಾಭೇದದೊಳ್ಪರೆಗುಂ ಸರ್ವವಿಷಂಗಳೆಂದಱಿಪಿದಂ ಸಮ್ಯಕ್ತ್ವರತ್ನಾಕರಂ
ಬೆರಸರ್ಕಂ ದೇವದಾರು ಸ್ಫುಟಕುಟಜ ವಚಂ ಚಂದನದ್ವಂದ್ವಮಂಭೋಧರ ಕೋಷ್ಠ ವ್ಯೋಷ ಶಿಗ್ರುದ್ವಯ ಕಟುಕ ಸುಸಂವರ್ಚ ತಾಳೀಸಪತ್ರಂನಿರುತಂ ಸ್ಥೌಣೇಯಮುಂ ಗುಗ್ಗುಳು ಕುಱುಟಿಗೆಯೆಂಬಿಂತಿವಂ ಪಂಚಗವ್ಯೋತ್ಕರದಿಂ ಶೃಂಗೋದರಸ್ಥಂ ಬಹುವಿಷಹರಣಂ ನಸ್ಯಕರ್ಮಾದಿಯಿಂದಂ
ತುಲಸೀಪಾಠ ಪುನರ್ನವೋತ್ತರಣೆಯಂಕೋಲಂ ವಿಡಂಗಂ ಬಿಡಂಹುಲಿಗಿಲ್ ಸೈಂಧವ ನೀಲಿ ಭಾರ್ಙ್ಗಿ ರವಿ ಪುಷ್ಟೇಂದ್ರಂ ವಚಾಕೋಷ್ಠಮೊಂದಿರೆ ತಾಳೀಸ ಮೃಣಾಲ ಗೇರು ವಕುಲಾಸ್ಥಿಪ್ರೋಕ್ತಮಿಂತೆಲ್ಲಮಂ (?)ವಿಲಸಚ್ಚೂರ್ಣಿತಮಾಗೆ ಮಾಡಿ ಜಲಮಂ ಪೊಯ್ದಲ್ಲಿ ಮತ್ತಂತದಂ
ಸಮದೊಳಜದುಗ್ಧಮಂ ತುಪ್ಪಮನಿಂಬಿಂ ಬೆರಸಿ ಕಾಸಿ ಮೆಲುಗಿಚ್ಚಿಂ ತುಪ್ಪಮದುೞಿಯಲಟ್ಟು ಘೃತದಾಕ್ರಮದಿಂ ಪಾನಾಂಜನಾದಿಯಿಂದೆ ವಿಷಘ್ನಂ
ಅರಿಸಿನ ಶಿಗ್ರುದ್ವಯವಗರು ರೇಣುಕಂ ಹಿಂಗು ಶಿಲೆ ಸಮಂಜಿಷ್ಠೆಯಿವೊಂದಿರಲಟ್ಟು ಮೂತ್ರದಿಂದರೆದಿರಿಸುವುದೆಸೆದಿರ್ಪ ಶೃಂಗದೊಳ್ ಮಡಗಿದುದಂ
ನಂಜತಿವಿಷಮದಕಟೆಂದಂಜುವ ಪದದಲ್ಲಿ ಕುಡುಗೆ ನಸ್ಯಾದಿಗೆ ತದ್ಭಂಜನಮಂತದು ಬಗೆಯಲ್ಕುಂಜರಕೋಟಿಗೆ ಮೃಗೇಂದ್ರನೆಂತಂತೆ ವಲಂ
ಬಿಡುಲವಣಂ ಸುವರ್ಚಲ ಕಟುತ್ರಿತಯಂ ವರವಹ್ನಿವಕ್ತ್ರ ಹಿಂಗೊಡವೆರಸಲ್ಕೆ ಸೈಂಧವ ಫಲತ್ರಯ ಪಾಠೆ ಸದೀಪ್ಯವಿಂತಿವಾದೊಡೆ ಪುಡಿಮಾಡಿ ಗೋಘೃತದೊಳಟ್ಟುರೆ ಶೃಂಗದೊಳಿಟ್ಟು ಮತ್ತದಂಕುಡುವುದು ಪಾನಮುಖ್ಯದೊಳದುಂ ಭುಜಗಾದಿ ವಿಷಾಪಹಂ ದಿಟಂ
ಅಂಜಲದೇಕೆ ಪೇೞ್ ಫಣಿಕುಳಂ ಕೊಳೆ ಸತ್ತಪೆನೇವೆನೆಂದು ನೀಂರಂಜಿಪ ಪುತ್ರಜೀವಿಯನೆ ನಿಷ್ಕಸಮಾನಮನೀಂಟೆ ಪಾಲೊಳಂತಂಜನ ನಸ್ಯ ಲೇಪನದೆ ನಂಜಿೞಿದೋಡುಗುಮೆಂತೆನಲ್ ಮಹಾಮಂಜಿನ ಪುಂಜಮರ್ಕನಿದಿರೊಳ್ ಪರೆದೋಡುವ ಮಾೞ್ಕೆಯಿಂ ದಿಟಂ
ಅಂಗುರುಮತಿಬಜೆಯಿಲ್ಲಣಮುಂಗುಗ್ಗುಳು ಮೇಘನಾದಿಯುಂ ಸಮನಾಗಲ್ಕಂ ಗೋಜಳದಿಂದೀಂಟಲ್‌ಸಂಗತ ನಸ್ಯಾಂಜನಾದಿಯಿಂದೆ ವಿಷಘ್ನಂ
ವಿವರಿಸಿ ನೋಡೆ ಬಂಜೆ ಮಡುವಾಗಲ ಕಂದಮದಿರ್ದ ತಾಣಮಂದಿವಸಕರೈಕವಾರದೊಳೆ ತಂದುದುಮಂ ಶಕಲಂಗಳಾಗೆ ಮಾಡುವುದಿನತಾಪದಿಂದೊಣಗೆ ನಿಂಬೆಯಪಣ್ಣ ರಸಂಗಳಿಂದಮಂತವನುಱೆ ಭಾವಿಸಿಟ್ಟು ಶತಸೂೞ್ವರೆಗಂ ವಿಷವೈದ್ಯರೋಜೆಯಿಂ
ಮಡಗಿರಿಸಿ ಸರ್ಪದಷ್ಟಂಗೆಡೆಯುಡುಗದೆ ಪಾನ ಲೇಪನಾಂಜನ ನಸ್ಯಕ್ಕೊಡರಿಸು ನಿರ್ವಿಷಮಕ್ಕುಂತಡೆಯದೆ ವಿಭು ಮಂಗರಾಜನಭಿಮತದಿಂದಂ
ಎಲ್ಲಾ ಮರ್ದಿನೊಳೇಂ ಗಳಚಿಲ್ಲದ ಪಣ್ಣೊಂದೆ ಸಾಲ್ಗುಮಿಂಬಿಂ ನೀರಿಂತಲ್ಲಣಿಸದೆ ಕುಡುವುದದಂನಿಲ್ಲದು ವಿಷಮಂತೆ ನಸ್ಯ ಪಾನಾಂಜನದಿಂ
ಝಟಿತೆಯೊಳಂ ಕೋಶಾತಕಿಕಟುತುಂಬಿಯ ಬಳ್ಳಿಹರುಹೆ ಹುಲಿಗಿಲ ಬಿತ್ತುಂಘಟಿಯಿಸಿ ಗೋಪಿತ್ತಯುತಂಸ್ಫುಟ ಪಾನಾದಿಗಳೊಲಂ ವಿಷಾಪಹಮಕ್ಕುಂ
ಅರಿಸಿನ ದೇವದಾರು ಕಟುಕತ್ರಯ ಭಾರ್ಙ್ಗಿ ವಿಳಂಗಮಿಂಗು ಸಿಂಧುರುಹ ಸವಜ್ರಿ ಮಂಜಿಟಿಗೆಯುಂ ಮಧುಕಂ ತ್ರಿತೆಯೆಂಬಿವಂ ಸಮಂತಿರೆ ಘೃತದಿಂದಮಟ್ಟುದುಮನಂಜನ ಲೇಪನ ನಸ್ಯ ಪಾನದಿಂಪರಿಕಿಸೆ ಸರ್ಪದಷ್ಟವಿಷಮುಂ ಪೆಱಪಿಂಗುವುದಾವ ವಿಸ್ಮಯಂ
ಸಿರಿಸದ ಪೂವಿನ ರಸದಿಂಮರಿಚಮುಮಂ ಭಾವಿಸಿಟ್ಟು ನೂಱ್‌ಸೂೞ್ವರೆಗಂಬೆರಸುಗೆ ಶರ್ಕರೆಯಂ ಮತ್ತುರಗ ಸುದಷ್ಟಂಗೆ ಪಾನ ನಸ್ಯಾದಿ ಹಿತಂ
ನಾಗರ ಮಾಗಧಂ ಮರಿಚಮುಂ ಬಜೆ ಬಾಗೆಯಬೀಜಮೆಂಬಿವೊಂದಾಗಿರೆ ವಾಜಿಗಂಧಿಯುಮನೊಂದಿಸಿ ಬಾೞೆಯ ತೋಯದಿಂದೆ ಲೇಸಾಗಿರೆ ಭಾವಿಸಿಟ್ಟು ನೆೞಲೊಳ್ ಸಲೆ ಶೋಷಿಸಿ ಬಯ್ತಿಡಂತದಂಭೋಗಿ ಕೊಳಲ್ಕೆ ಪಾನ ನಯನಾಂಜನ ನಸ್ಯದೊಳೀಯೆ ನಿರ್ವಿಷಂ
ಸಿರಿಸದ ಬೀಜಮಂ ಭರದೆ ಭಾವಿಸು ತತ್ಪ್ರಸವಾಂಬುವಿಂ ನಿರಂತರಮಿರದೇಕವಿಂಶತಿ ದಿನಂ ಮರಿಚಂ ಸದುಗುಪ್ಪೆ ಶರ್ಕರೋತ್ಕರದೊಳದೊಂದುವಂತರೆದು ಮಾಡಿರಿಸುಂಡೆಗಳಂ ಬೞಿಕ್ಕೆ ಮತ್ತುರಗ ಸುದಷ್ಟಗಂ ಕುಡಿಸಿ ಪೂಸುವುದೆಚ್ಚುವುದಲ್ತೆ ನಿರ್ವಿಷಂ
ನುತಕುಷ್ಠಂ ಶುಭ್ರಗೋಪಿತ್ತ ಮರಿಚಕಣಮುಂ ಗೇಹಧೂಮಂಗಳಿಂದನ್ವಿತಮಾಗಲ್ ತಾಳಕಂ ತಚ್ಛಿಲೆವೆರಸರೆದಿರ್ದುಂಡೆಯಂ ಕೊಂಡುದಂ ಭಾವಿತಮಾಗಲ್ ಪಾನ ಲೇಪಾದಿಗೆ ಕುಡೆ ಫಣಿದಷ್ಟಂ ತದೀಯ ಪ್ರಭಾವೋನ್ನತಿಯಿಂದಂ ನಿರ್ವಿಷಂ ತಾನೆನಿಸಿ ಧರೆಯೊಳಂ ಜೀವಿಕುಂ ಭವ್ಯಬಂಧೂ
ಸಕಳ ಮುನಿಗಳಂತರ್ದೃಷ್ಟಿಯಿಂ ನೋಡಿ ಪೇೞ್ದಾಪ್ರಕರಣದೊಳಿದಂ ತತ್ಸಾರಮಂ ಪೇೞ್ದೆನಾಂ ಭಾವಕರಱಿವಿನೆಗಂ ಪಾನಾದಿಯಂ ದಿವ್ಯಯೋಗಪ್ರಕರಮನೆ ವಿಷೋಗ್ರಾಟೋಪಮಂ ಲೋಪಿಸಲ್ಕಂ
ಗದ್ಯ. ಇದು ಸಕಲ ವಿದಮಲ ಜಿನೇಂದ್ರೋಕ್ತ ಸಿದ್ಧಾಂತ ಪಯಃಪಯೋನಿಧಿಪಾರಗ ಶ್ರೀ ಪೂಜ್ಯಪಾದಮುನೀಂದ್ರ ಚಾರುಚರಣಾರವಿಂದ ಗಂಧಗುಣಾನಂದಿತ ಮಾನಸಂ ಶ್ರೀಮದಖಿಲ ಕಲಾಗಮೋತ್ತುಂಗ ಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್ ಪಾನಾಂಜನನಸ್ಯ ಲೇಪನ ಯೋಗಾಧಿಕಾರಂ ನವಮಂ


