II
Khagendramaṇidarpaṇa
ಸ್ಥಾವರವಿಷ ಪ್ರಕರಣಂ
ಸ್ಥಾವರ ವಿಷಕ್ಕೆ
ದೇವಾದಿದೇವನಂ ಜಿತಭಾವಜನನಚಿಂತ್ಯ ಮುಕ್ತಿಲಕ್ಷ್ಮೀವರನಂಭಾವಿಸಿ ವಂದಿಸಿ ಜನದಾಸ್ಥಾವರವಿಷಹರಣಂ ವಿವಕ್ಷಿಸಿ ಪೇೞ್ವೆಂ
ದೇವ ಜಿನೇಂದ್ರಭಾಷಿತವಿಷಂಗಳೆ ಮೂದೆಱನಪ್ಪುವೆಂತೆನಲ್ಸ್ಥಾವರ ಜಂಗಮಂ ಕೃತಕಯೋಗಜವೆಂದಿವಱೊಳ್ ವಿವೇಕಿಸಲ್ಸ್ಥಾವರಮಿರ್ಪತೈದು ತೆಱನಂತಧಿಕಂಗಳುಮಲ್ಲಿಯೈದುಮುಂಕೇವಳ ಮಧ್ಯಮಾಧಮವಿಭೇದಮನಾದರದಿಂದೆ ಪೇೞ್ದಪೆಂ
ವ. ಅದೆಂತೆಂದೊದೆ
ಪಂಚವಿಂಶತಿ ಸ್ಥಾವರವಿಷ ನಾಮಂಗಳ್
ಸಲೆ ಮುಸ್ತೆ ವತ್ಸನಾಭಂಬಲಾಹ ಪುಷ್ಕರಶರಂ ಹರಿದ್ರಾ ಶೃಂಗೀಕುಲ ಮೇಷಶೃಂಗಿ ಹಾಲಾಹಲ ಕಾಸ್ತುಕ ರಕ್ತಶೃಂಗಿ ಮಧುಪಾಕಂಗಳ್
ಪರಿವಿಡಿಯೊಳಿಂದ್ರವಜ್ರಂಸ್ಫುರದುರು ಕರ್ಕಾಟಕ ಶೃಂಗಿ ಮಧುರಂ ಕ್ರೌಂಚಂಹರಿತಾರ್ಕ ಕಾಳಕೂಟಕಮರಿದೆನಿಸಿದ ಪುಂಡರೀಕ ಸಂಕೋಚಂಗಳ್
ಗಾಳವಮಂಜನ ರೋಹಿಣಮಾಳೋಚಿಸಲೇಕವೀರಮಿಂತಿರ್ಪತ್ತೈದೀ ಲೋಕದೊಳಂ ಕ್ರೂರಜ್ವಾಳೆಗಳಿಂತಿವಱೊಳೈದತಿಕ್ರೂರಂಗಳ್
ವ. ಅವಾವುವೆಂದಡೆ
ಸಂಕೋಚ ಕಾಳಕೂಟವಿಷಾಂಕಮುಮಾ ವತ್ಸನಾಭಿ ಮುಸ್ತಕ ಶೃಂಗಾಖ್ಯಂ ಕರಮಿಳೆಯೊಳಿವೈದುಂಪಂಕಜಭವನೞಿಯಲರಿದು ತತ್ಕ್ರೂರತೆಯಂ
ಉೞಿದಿಪ್ಪತ್ತುಂ ಮಧ್ಯಮಮಿಳೆಯೊಳಗಿಂ ಮಿಕ್ಕುವೆಲ್ಲಮಲ್ತೆ ಜಘನ್ಯಂವಿಳಸತ್ತನುವಂ ಬೆರಸಾವಿಳಮಂ ಮಾಡಲ್ ತದಂಗಚೇಷ್ಟೆಯನೊರೆವೆಂ
ಅತಿಸಾರಂ ಮೂರ್ಛೆ ದಾಹಂ ಮತಿವಿಕಳತೆಯುಂ ಭ್ರಾಂತಿ ಹೃಚ್ಛೂಲೆ ತಾಪಂಗತಸತ್ವಂ ನೇತ್ರಮಾಂದ್ಯಂ ಪ್ರಕೃತಿ ವಿಕೃತಿಯುಂ ಗದ್ಗದಧ್ವಾನಕಂಠಂಗತಿಭಂಗಂ ಶ್ವಾಸಖಾಸಂ ರುಧಿರವಮನಮುಂ ಸ್ವೇದಮತ್ಯಂತ ಖೇದಂಧೃತಕೋಪಂ ತಾಮಿವೆಲ್ಲಂ ವಿಷಮತರಮೆನಿಪ್ಪಂಗೆ ಚಿಹ್ನಂಗಳಕ್ಕುಂ
ಇಂತಧಿಕಸ್ಥಾವರವಿಷಸಂತತಿಯುಮನವಱ ನಾಮ ವಿಷವೀರ್ಯಮುಮಂಭ್ರಾಂತರ್ಗೆ ತಿಳಿಯಪೇೞ್ದೆಂಮುಂತಱಿಪುವೆನಾ ವಿಷಾಪಹರಣಕ್ರಮಮಂ
ಪಲವೌಷಧಿ ಮಂತ್ರದೊಳಂಕೆಲವುಂ ದುರ್ಲಭತರಂಗಳೆನವೇಡವಱೊಳ್ನೆಲೆಯಱಿದು ಯೋಜಿಪಂಗತಿಸುಲಭಂಗಳೆನಲ್ಕೆ ಪೇೞ್ದಪೆಂ ಮುನಿಮತದಿಂ
ಮಂತ್ರಂ. ಗಳ್
1) ಓಂ ನಮೋ ಭಗವತೇ ಪಾರ್ಶ್ವನಾಥಾಯ ಸ್ಥಾವರ ಜಂಗಮ ಕೃತ್ರಿಮವಿಷಸಂಹರಾಯ
ಹಂ ಝಂ ಝಿಂ ಕ್ಷಿಂ ಹಂಸ ಪಾರ್ಶ್ವನಾಥದೇವತಾಜ್ಞಾ ವಿಷಹರ ಮಲ್ಲಿನಾಥದೇವತಾಜ್ಞಾ
ತ್ರಿಭುವನ ಗರುಡಾಜ್ಞಾ ಶ್ರೀಧರದೇವತಾಜ್ಞಾ ಶೀಘ್ರಂ ನಿರ್ವಿಷಂ ಕುರುಹುಂ ಫಟ್ಸ್ವಾಹಾ
ಇದು ಸಕಲ ವಿಷಹರ ಮಂತ್ರಂ.
2) ಓಂ ನಮೋ ಭಗವತೇ ಸ್ವಚ್ಛಂದ ಭೈರವೇ ಮಹಾಭೈರವೇ ಕಾಳಕೂಟವಿಷಂ ಸ್ಫೋಟಯ
ಖಂಡಯ ಅವತಾರಯ ನಾಭಿವಿಷಂ ಹಾಲಾಹಲವಿಷಂ ಕೃತ್ರಿಮವಿಷಂ ಶಂಕಾವಿಷಂ ಉಪಘಾತವಿಷಂ
ಸ್ಥಾವರವಿಷಂ ಜಂಗಮವಿಷಂ ಕಾಲಚಂಚುಚಾಪರಯೂತಾಜ ಸುಮಂತು ಜಹಾದ್ವಯುಃ
ಚೆನ್ನನಳಖಚಂದ್ರಜಯ ಓಂ ಕಾಳಾಯ ಮಹಾಕಾಳಾಯ ಕಾಳಗರ್ಭವಿಹಾ ಅಮೃತಗರ್ಭ ದೇವಿ
ಓಂ ಕ್ಷಾಂ ಕ್ಷೀಂ ಕ್ಷೂಂ ಕ್ಷಾಂ ಕ್ಷೂಂ ಓಂ ಹುಂ ಫಟ್ ಸ್ವಾಹಾ ನಾಸ್ತಿ ವಿಷ ಸ್ವಾಹಾ
ಇದು ಸ್ವಚ್ಛಂದ ಭೈರವೀಮಂತ್ರಂ.
3) ಓಂ ಅಮೃತೇ ಅಮೃತೋದ್ಭವೇ ಅಮೃತವರ್ಷಿಣೀ ಇದಮೃತಂ ಸ್ರಾವಯಸಂ ಕ್ಲಿಂ ಬ್ಲೂಂ
ದ್ರಾಂ ದ್ರಿಂ ದ್ರಾವಯ ಹಂ ಝಂ ಝಿಂ ಹಂಸ ಸ್ವಾಹಾ- ಇದು ಅಮೃತಧಾರಾಮಂತ್ರಂ.
4) ಓಂ ನಮೋ ಭಗವತೇ ಒಡ್ಡಾಮರೇಶ್ವರಾಯ ಕುಂಚಿತವೃತ್ತ ಅಮೃತ ಜಟಾ ಯತ ಓಂ
ಅಭಮಹಾಯುತೋ ಒಬಿ ಹಠಾಲೇವರ್ಸಸ್ಸುವಿ ನಯನಖಾತಯುಖಾಯಿ ನೆಮಯುಖಾಯೆ
ಶ್ರೀರಾಮೇಶ್ವರಾಯ ದ್ರಾಂ ಹ್ರೂಂ ಹ್ರಾಂ ಹರಹರ ವಿಷಂ ಸ್ವಾಹಾ- ಇದು ಒಡ್ಡಾಮರೇಶ್ವರೀಮಂತ್ರಃ
ಈ ನಾಲ್ಕು ಮಂತ್ರಂ. ಗಳ್ ಪಠಿತ ಸಿದ್ಧಿ
ವ. ಈ ಮಂತ್ರವಾರ್ಧಾರೆಯ ವಿಧಿತ್ರಯ
ಈ ಮಂತ್ರಂ. ಗಳೊಳಾವುದೊಂದಱೊಳಣಂ ತಾಂ ನಂಜಿನಿಂ ದಗ್ಧನಪ್ಪಾ ಮರ್ತ್ಯಾಂಗಮನೊರ್ಮೆ ಮಂತ್ರಿಸುವುದಂತಾ ಮಂತ್ರವಾರ್ಧಾರೆಯಿಂಸೋಮಧ್ಯಾನವಿಶೇಷದಿಂ ತಳಿದು ಸಮ್ಯಗ್ಭೇಷಜಾನೀಕಮಂನಾಮೋಚ್ಚಾರಣಪೂರ್ವಕಂ ಪಠಿಸಿ ದಷ್ಟಂಗೀಯೆ ಬಾೞ್ಗುಂ ದಿಟಂ
ವಮನೋಪವಾಸಮಂ ತತ್ಕ್ರಮದಿಂ ಮಾಡಿಸಿ ಮಲಾಪಹರಣಮದಿಂಬಿಂಸಮನಿಸೆ ಬೞಿಕ್ಕಮವರ್ಗಂದು ಮಹಾಭೇಷಜಮನೀಯೆ ವಿಷಹರಮಕ್ಕುಂ
ಮದನಫಲ ಲೋಧ್ರಮೆಂಬಿವನುದಕದೊಳಂ ಕುಡಿಯೆ ಕುಡುವುದಂತಲ್ಲದೊಡೀವುದು ಬಜೆಯೊಳುಪ್ಪುಮಂ ಬೆರಸಿದು ವಮನಮದಾಗೆ ಸರ್ವ ವಿಷಹರಮಕ್ಕುಂ
ಉದಕದೊಳೆ ಬಿಳಿಯ ಬೇರಂಪದಱಿದೀಯಲ್ಕೆ ವಿಷಮನೞಿದಾ ವಮನಂಅದು ದೊರಕದಂದು ಚುಂಚಿನೊಳೊದವಿದ ಬೀಜಮುಮನರೆದು ಕುಡುವುದು ಬೇಗಂ \
ನೀರೊಳ್ ಮಱುಗಿಸಿ ಕುಡು ಕಾಳ್ವೀರೆಯ ಬೇರಂ ಸಮಾಕ್ಷಿಕಂ ಘೃತದಿಂ ಸಂಹಾರಿಸುಗುಂ ವಮನಂ ವಿಷದಾರುಣಮಂ ತತ್ಕ್ಷಣಂ ಭಿಷಗ್ವರಮತದಿಂ
ನೀರೊಳ್ ಮಱುಗಿಸಿ ಕುಡು ಕಾಳ್ವೀರೆಯ ಫಲಮೊಂದನಾದೊಡಂ ತತ್ಕ್ಷಣದಿಂದಾರುಣ ವಿಷಂಗಳಂ ಸಂಹಾರಿಸುಗಂ ಛರ್ದಿಯಾಗೆ ಮನುಮುನಿಮತದಿಂ
ಎಳದೆನಿಸಿರ್ಪ ಕೈಪೆಸೊರೆಯೊಪ್ಪುವ ಕಾಯ ರಸಂ ಬರಲ್ಕವಂಪಿೞಿ ಮೆಲುಗಿರ್ಚಿನಿಂದಡು ಗುಳಂ ಬೞಿಯೊಳ್ ಚಣಕಪ್ರಮಾಣದಿಂಗುೞಿಗೆಯನೊಪ್ಪೆಮಾಡಿ ಗುಡಮಿಶ್ರಮದಾಗಿರಲಿತ್ತೊಡಾಕ್ಷಣಂತೊಲಗುಗುಮೆಯ್ದೆ ವಾಂತಿಯೊಳೆ ಸರ್ವವಿಷಂ ವಿಭು ಮಂಗನುಕ್ತಿಯಿಂ
ನಂಜು ತಗುೞ್ದುದೆಂದೆನಿಸುಮಂಜಲದೇವುದು ಶೀತತೋಯದಿಂರಂಜಿಪ ಪುತ್ರಜೀವಿಯನೆ ನಿಷ್ಕಸಮಾನಮನಿತ್ತೊಡಂತೆ ತಾನಂಜನ ನಶ್ಯದಿಂದಳಱಿಕುಂ ಹರಿಯೆಂತು ತಗುೞ್ವುದಂತಱಿಂಕುಂಜರಕೋಟಿಯುಂ ಬೆದಱುವಂದದೊಳಂ ಕವಿಪದ್ಮಭಾಸ್ಕರಾ
ಹಾಲಾಹಲಾದಿ ಮುಖ್ಯವಿಷಕ್ಕೆ
ಮೂಲಫಲಪತ್ರಸಂಭವಹಾಲಾಹಲ ಮುಖ್ಯಜಾತಿಯಂ ಸಂಹರಿಸಲ್ನೀಲಿ ಹಯಗಂಧಿ ಱೆಂಚಿಕೆಸಾಲದೆಯೊಂದೊಂದೆ ಧರೆಯೊಳಂ ಕೊಳೆಯಿವಱೊಳ್
ಬಜೆ ತುತ್ಥ ಟಂಕಣಾಖ್ಯಂರಜನಿ ಭುಜಂಗಾಕ್ಷಿ ಶೈಲಕರ್ಣಿಕೆಯೆಂದುಂವೃಜಿನವೆನಿಪಖಿಳ ಗರಳತ್ಯಜನಕ್ಕೊಂದೊಂದೆ ಕುಡಿಸು ನರಮೂತ್ರಯುತಂ
ಸರ್ವಸ್ಥಾವರಕ್ಕೆ
ಮಧುವಿಂ ಮುಸಲೀಕಂದಂವಿಧಿಯುಕ್ತಂ ಕಟುಕಮಿಶ್ರಿತಂ ಮೇಣ್ ಮಧುವಿಂಸುಧೆಗೆಣೆಯಪ್ಪಜದಂಡೆಯನೆ ಧಾರ್ಮಿಕಂ ಕುಡಿಸಲದು ವಿಷಂಗಳನೞಿಗುಂ
ಅರಿದೀ ಹಾಲಾಹಲಾದ್ಯಂ ವಿಷಮತರಮಿದೆಂದಂಜವೇಡಿಲ್ಲಿ ಬೇಗಂನರಮೂತ್ರಂ ಗವ್ಯಮೂತ್ರಂ ಪೞಿಯ ಘೃತಮಿರಲ್ಕಾವುದೊಂದೊಂದಱೊಳ್ ಕೊಂಡರೆದಾ ಹಾರಿದ್ರಮೋದಂ ಕುಡೆ ಪರಿಹರಿಕುಂ ಕಾಳಕೂಟಾದಿಯಾ ಸ್ಥಾವರಮಂ ತಜ್ಜಂಗಮಾಖ್ಯಂಗಳವೆನಿತನಿತಂ ಮಂಗರಾಜೋಕ್ತಿಯಿಂದಂ
ಅರಿಸಿನ ಗೋಕ್ಷೀರಂ ಮೇಣರಿಸಿನ ರುಜೆವೆರಸು ಪಾಲೊಳಂ ಮಱುಗಿಸಿ ಮೇಣರಿಸಿನ ರುಜೆ ಮಧ್ವಾಜ್ಯಮನಿರದೀಂಟಲ್ ಸರ್ವವಿಷಮ ವಿಷಸಂಹರಣಂ
ನೀರಿಂದೆ ಬಿಳಿಯ ಗುಂಜಿಯಬೇರಂ ಬಜೆವೆರಸು ರಾಗದಿಂ ಕುಡಿಸಲೊಡಂದಾರುಣ ವಿಷದಗ್ಧಂಗಂಪಾರದೆ ಪೆಱತಂ ವಿಷಾಪಹರಣಮಿದಕ್ಕುಂ
ಹಾಲಾಹಲ-ಕಾಲಕೂಟ ವಿಷಕ್ಕೆ
ವರತಿಗುಡೆಗೂಡಿ ಕೊತ್ತುಂಬರಿಯೊಂದೆ ಕಳೆವುದಲ್ತೆ ಹಾಲಾಹಲಮಂನಿರುತಂ ಗುಡ ಕಾರ್ಪಾಸದಸುರಸಂಗಳ್ ಕಾಲಕೂಟಮಂ ಪರಿಹರಿಕುಂ
ರಕ್ತಶೃಂಗೀವಿಷಕ್ಕೆ
ಅರಿದೆನಿಪ ರಕ್ತಶೃಂಗಿಯಗರಳಕ್ಕಂ ಗೋಮಯೋತ್ಥಜಲಮಂ ಕುಡಿಸಲ್ಪರಿಹರಿಕುಂ ಮೇಣ್ ಶೃಂಗಿಯಗರಳಮನಂಗುರವಿದೊಂದೆ ಕಳೆಗುಮಮೋಘಂ
ವತ್ಸನಾಭಿಗೆ
ಸಾಸಿವೆ ಮೆಣಸುತ್ತರಣೆಯನಾ ಸರ್ಪಿಶ್ಯರ್ಕರಾಯುತಂಗಳನರೆದೀಗಾಸುರದ ವತ್ಸನಾಭನವಾಸನೆಯಿಂ ಕಿಡಿಸಿ ಕಳೆಗುಮಾಕ್ಷಣದಿಂದಂ
ಜೀರಕಮತಿಬಜೆ ತಗಚೆಯುಮಾ ರಜನಿಯುಮಭ್ರನಾದಿಯಜಮೂತ್ರಯುತಂವಾರಿಪುವು ವತ್ಸನಾಭನಕ್ರೂರತೆಯನಿವಾಱು ಮರ್ದಿನೊಳ್ ಪ್ರತ್ಯೇಕಂ
ಅಭಯಾಮಲಕಾಕ್ಷಂಗಳಸುಭಾಂಡದಿಂ ಕ್ವಥಿತಮಾದ ಜಲಮಂ ಕುಡಿಸಲ್ಕಭಿಭವಿಪ ವತ್ಸನಾಭಪ್ರಭವಭಯಂ ಪಿಂಗುಗುಂ ಮನೋಹರಚರಿತಾ
ನಾಂಗು (ಲೀ)ರೀಕದ ವಿಷಕ್ಕೆ
ವಮನೋಪವಾಸಮೇ ಮುಖ್ಯಮದಕ್ಕುಂ ಕ್ರಮದೊಳೊಂದೆ ಕುಡುವುದು ದುಗ್ಧಾಜ್ಯಮುಮಂ ಮಲಹರಣಮುಮಂಕ್ರಮದಿಂ ಮಾಡಿಸುಗೆ ನಾಂಗುರಿಕವಿಷಮೞಿಗುಂ
ಪೊಸತಪ್ಪ ಕೋಷ್ಠ ಸೈಂಧವಮೆಸೆವುಷ್ಣೋದಕದೊಳೀಯಲೞಿಗುಂ ಮತ್ತಂವಸುಧೆಯೊಳೆ ಬಿಳಿಯ ಸುಂಡೆಯೆದೆಸೆಗೆಡಿಕುಂ ನಾಂಗುರೀ (ಲೀ)ಕದೆಸಕದ ವಿಷಮಂ
ಮಾಗಧಮೊಂದಲ್ಲದೊಡಾನಾಗರಮದುಮಿಲ್ಲದಿರ್ದೊಡಂ ನೀಲಿಯುಮಂಬೇಗದೊಳರೆದೀವುದು ತಾನಾಗಳೆ ನಾಂಗುರೀ (ಲೀ)ಕ ವಿಷಮವಿಷಮಂ ಕಳೆಗುಂ
ನಾಗರ ಮಧುಕಮುಮಂ ಸಮನಾಗಿರೆ ತಕ್ರದೊಳೆ ಕುಡಿಸೆ ಮೇಣೆಕ್ಕೆಯುಮಂಬೇಗಂ ಬೆನ್ನೀರೊಳ್ ಕುಡೆನೀಗುಗುಮರಿದೆನಿಪ ನಾಂಗುರೀಕದ ವಿಷಮಂ
ಕಣಿಗಿಲ (ಬೇರು ಎಣ್ಣೆ) ವಿಷಕ್ಕೆ
ಕರವೀರದ ಸೊಕ್ಕಿಂಗರೆದರಿಸಿನಮಂ ದಧಿಘೃತಂಗಳಿಂ ಕುಡು ಮತ್ತಂದೊರಕದೊಡಣಿಲೆ ನಿಶಾ ಶರ್ಕರೆಯಂ ಬೆರಸಿತ್ತೊಡಾಗಳಂತದು ಕಿಡುಗುಂ
ಅಭಯ ನಿಶೆ ಮರಿಚ ಮಧುಕಪ್ರಭೇದದಿಂದಿರ್ದ ನಾಲ್ಕುಮಂ ಕೂಡಿಯವಂಶುಭದ ಪಯೋಮಿಶ್ರದಿನೀಯೆ ಭಯಂಕರಮಪ್ಪ ಕಣಿಗಿಲತಿವಿಷಮೞಿಗುಂ
ಪುಳ್ಳುಂಪುಣಿಸೆಯುಮಂ ಕೂಡೊಳ್ಳಿದುವೆನಿಸಿರ್ಪ ಗೋೞಿಯಂ ಕುಡು ಮತ್ತಂಮಲ್ಲಿಗೆ ನೀಲಿಗಳಂ ತಳುವಿಲ್ಲದೆ ಕುಡು ಕಣಿಗಿಲುಗ್ರತರ ವಿಷಮೞಿಗುಂ
ಅರಿಸಿನಮಂ ಶರ್ಕರೆಯಿಂದರೆದೀವುದು ಮಧುಕಸಹಿತಮಣಿಲೆಯುಮಂ ಮೇಣಿರದೀವುದಣಿಲೆಯೊಂದಂಪರಿಹರಿಕುಂ ಕಣಿಗಿಲುಗ್ರವಿಷಮೆನಿತನಿತಂ
ಖದಿರಪ್ರಸೂನಮಾ ಖದಿರದ ರಸಮಂಬಿಲಮುಮಾಮ್ರ ಗೋಕ್ಷೀರಮುಮೊಳ್ಳಿದುವಪ್ಪ ಬೆಣ್ಣೆಯಂಗುರುಮದಿರಿಪುದೊಂದೊಂದೆ ಕಣಿಗಿಲುಗ್ರಮನನಿತಂ
ಅಶ್ವಮಾರಿಯ ವಿಷಕ್ಕೆ
ತರಣಿಯ ಮೂಲಂ ಸಜಲಂಮರಿಚಂ ಸಹತಕ್ರಮಲ್ಲದಂದರೆ ಬೆನ್ನೀರರಿಸಿನಮಂ ನೀರೊಳದಂಭರದಿಂ ಕುಡಲಶ್ವಮಾರಿಯುಗ್ರವಿಷಘ್ನಂ
ಭತ್ತದ (ನೆಲ್ಲ) ಬೇರ ವಿಷಕ್ಕೆ
ಅಂಬಿಲ ಲವಣ ಹರೀತಕಿಜಂಬೂಫಲ ಯಷ್ಟಿಮಧುಕಮೆಂಬಿವು ನಿಜದಿಂಕಿಂ ಬಹುನಾ ಶಾಲಿಯ ಬೇರಿಂಬಿನ ವಿಷಹರಮಿದಲ್ತೆ ಸುಜನವರೇಣ್ಯಾ
ಕಿಱುನೆಲ್ಲಿಯಕ್ಕಿಗರ್ಚುಮನೆಱೆವುದು ಮೇಣ್ ಪುಳಿಯನೆಱೆವುದಲ್ಲದೊಡಂ ತಂದೆಱೆವುದು ಕಾಂಜಿಕಮೊಂದಂಪಱಿಪಡಿಗುಂ ನೆಲ್ಲಬೇರ ವಿಷಮಾಕ್ಷಣದಿಂ
ಕಹಿಸೋರೆಯ ವಿಷಕ್ಕೆ
ಸಲಿಲಯುತಮರಳಗಂಜಿಯನಲಸದೆ ಮೇಣ್ ದಧಿಯುತಂ ಪುನರ್ನವಿಯಂ ಮೇಣ್ಪಲವರೊಳೇನಂಗುರಮಂಜಲದಿಂ ಕುಡಿಸಲ್ಕಲಾಬುವಿಷಮಂ ಕಳೆಗುಂ
ಕಹಿಹೀರೆಯ ವಿಷಕ್ಕೆ
ಜಂಬೂರಸಮಂ ಕುಡು ಕಟುತುಂಬಿಯ ಫಲದಲದೊಳೊಗೆದ ಪಟುತರವೆನಿಪಾಡಂಬರದ ವಿಷಮನೞಿಗುಮದಂಬುಧರಂ ಕೈಪೆವೀರೆಗುಪವಿಷಮಕ್ಕುಂ
ಘಟಿಯಿಸಿತಿದು ಕಾೞ್ವೀರೆಯಪಟುವಿಷವೆಂದಂಜಬೇಡ ಘನರವಮೊಂದಂಕಟುತರ ಪಿಪ್ಪಲಿಯಂ ಮೇಣ್ಝಟಿತೆಯೊಳಿಕ್ಕಲ್ಕದೞಿಯದೇ ತದ್ವಿಷಮಂ
ಕಾಂಜೀರ ವಿಷಕ್ಕೆ
ಭೋರನೆ ನೇಱಿಲ ತಿಗಡಂಕ್ಷೀರದೊಳಲ್ಲದೊಡೆ ನಿಶೆಯುಮಭಯಮುಮಂ ಬೆನ್ನೀರೊಳ್ ಕುಡೆ ಕಳೆಗುಂ ಕಾಂಜೀರ ವಿಮಿಶ್ರಿತಮೆನಿಪ್ಪ ತಿಳಜದ ವಿಷಮಂ
ಇಟ್ಟಿಬೀಜದ ವಿಷಕ್ಕೆ
ಬಾೞೆಯ ಪಣ್ಣೇಱಿಲ ತಿವುಡಾಳೋಚಿಸೆ ಮೇಣದುಕ್ಕಿನುದಕಂ ಮೇಣ್ ಸಿತಬಾಳಂ ತೋಯಸಮೇತಮದೇೞಿಲಮೇನಿಟ್ಟಿಯೆಸೆವ ವಿಷಮಂ ಕಳೆಗುಂ
ಜೇಪಾಳದ ವಿಷಕ್ಕೆ
ಜಂಬೀರ ಪುತ್ರಜೀವಿಯನಿಂಬಿಂ ಕುಡಿಸಲ್ಲದಂದು ಹೆಸಱಿನ ಪೊಸಕಟ್ಟೆಂಬುದುಮಂ ಕುಡೆ ಜೇಪಾಳಂಬೊರೆದ ವಿಷಂಗಳಂ ವಲಂ ಸಂಹರಿಕುಂ
ಉಮ್ಮತ್ತದ ವಿಷಕ್ಕೆ
ತಾವರೆಯಕ್ಕದಲ್ಲದೊಡಮಾಸಡಿ ಮೇಣ್ ರವಿಮೂಲಮಕ್ಕದಾತಾವರೆ ಶರ್ಕರಾನ್ವಿತಮದಾಗಲಿ ಪೞ್ತಿಯ ಬಿತ್ತು ಪಾಲ್ಗಳುಂಭಾವಿಸಲಾ ನಿಶಾದ್ವಯಮದಲ್ಲದೆ ಕೈತಕಮೂಲಮಕ್ಕದಂಜೀವನಮಿಶ್ರದಿಂ ಕನಕದುಗ್ರವಿಷಾಪಹಮಕ್ಕುಮಾಕ್ಷಣಂ
ಸಣಬಿನ ವಿಷಕ್ಕೆ
ಸಣಬಿನ ವಿಷಕ್ಕೆ ಕುಡು ಚೊಕ್ಕಣಿಕೆಯ ಕೂಡಮೃತಲತೆಯನಲ್ಲದೊಡಂತಾಕ್ಷಣದೊಳ್ ಕಿಱುಗೋಣಿಯುಮಂಪ್ರಣುತಯಶಂ ಕೊಡುವುದುಪವಿಷಂ ಭೂವಿನುತಾ
ಇಲಿವಾಲದ ಎಕ್ಕೆಯ ಹಾಲು ವಿಷಕ್ಕೆ
ಇಲಿವಾಲದ ವಿಷಮಂತದುತಿಳಿಗುಂ ದಂತಿಯುಮನಣಿಲೆಯಂ ಕುಡೆ ಮತ್ತಂತಿಳಜ ಸಿತ ತಕ್ರಪಾನಂಕಳೆಗುಂ ರವಿದುಗ್ಧದೋಷಮಂ ತತ್ಕ್ಷಣದಿಂ
ಎಕ್ಕೆಯಪಾಲ್ಗಳ ವಿಷಮಂದುಕ್ಕಲಿಕುಂ ತೈಲ ಟಂಕಣಾಂಬುಗಳಿಂದಂನಿಕ್ಕುವಮೇಂ ಪಾಲೊಳ್ ಕುಡೆಚೆಕ್ಕನೆ ಗೋಣಿಯುಮನಣಿಲೆಯಂ ಬುಧಮಿತ್ರಾ
ಎಳನೀರಿಂ ಕ್ಷೀರದಿಂ ಸ್ನಾನಮನೊಡರಿಪುದಾ ಸ್ನಾನದಿಂ ಪಾನದಿಂದಂತಿಳಿಗುಂ ತಾನರ್ಕದುಗ್ಧಪ್ರಭವಮದಮದಾಗಲ್ ಕರಂ ಕಣ್ಣೊಳಿರ್ದಾವಿಳಮಂ ಮಾಡಲ್ಕೆ ಬೇಗಂ ತಿಳಜಮನೆ ವಲಂ ಕೊಂಡು ಪಿಂಡಲ್ಕದಾಗಳ್ಕಳೆಗುಂ ನೇತ್ರವ್ಯಥಾಭೀತಿಯನಿದುೞಿಯೆ ಬೇಱಗ್ಗಳಂ ಮರ್ದುಮುಂಟೇ
ಕಳ್ಳಿಯಹಾಲ ವಿಷಕ್ಕೆ
ಅವರೆ ನೆಲ್ಲಿ ಯಷ್ಟಿಮಧುಕಂ ತಿಲವಾಸಡಿ ಕೊಗ್ಗಿ ಗೋಷ್ಪಯಂತಾವರೆ ನೇಱಿಲಂಕವಲೆ ಶರ್ಕರೆ ಪಾಲ್ಮರದಾ ಪ್ರಸೂನಮಿಂದೀವರ ಮಿತ್ರಭಕ್ತ ಕಟುಕತ್ರಯಮೆಂಬಿವು ಬೇಱೆವೇಱೆ ತಾಂಭಾವಿಸೆ ಕಳ್ಳಿಯುರ್ಕನಱಿಗಂತು ವಿಲೇಪನಪಾನದಿಂ ದಿಟಂ
ಹುಲಿಗಿಲ ವಿಷಕ್ಕೆ – ಕಾಗಿದೊಂಡೆ ವಿಷಕ್ಕೆ
ಹುಲಿಗಿಲ ವಿಷಕ್ಕೆ ಜಂಬುವಿನೆಲೆಯುಂ ಮೇಣೋವನರೆದು ಕುಡು ತಕ್ರದೊಳಂಜಲದಿಂ ಗಿರಿಕರ್ಣಿಕೆಯುಮನಲಸದೆ ಕುಡೆ ಪೋಕು ಕಾಗಿತೊಂಡೆಯ ವಿಷಮುಂ
ಕೊಗ್ಗಿಯ ಕಷಾಯಮೊಂದುಂಮಗ್ಗಿಸುಗುಮದಂಗುರುಗ್ರವಿಷಮಂ ಮತ್ತಂನುಗ್ಗೆಯ ಮದಮಂ ಕ್ಷೀರಂತಗ್ಗಿಸುಗುಮದಮಲಚರಿತನನುಮತದಿಂದಂ
ಹಯಗಂಧಿಯ ಸೊರ್ಕು ಫಳತ್ರಯದ ಕಷಾಯಂಗಳಿಂದಮೞಿಗುಮವಶ್ಯಂನಯವಿದನಪ್ಪ ವಿಷಾಗ್ನಿಯಭಯಮಂ ಪಿಂಗಿಸುವ ಮಂಗನನುಮತದಿಂದಂ
ಸುರದಾಳಿಯ ಸೊರ್ಕಿಂಗಂದರಿಮೇಧದ ತಿಗುಡನರೆದು ಕುಡುವುದು ಮತ್ತಾಸಿರಿಸದಕುಸುಮಂಗಳನಂತರೆದೀವುದದಂ ಕ್ಷಣಾರ್ಧದಿಂ ಪರಿಹರಿಕುಂ
ಜಾದುಂ ತಕ್ರಂ ಲೋಧ್ರಂನೈದಿಲ್ ಮಗ್ಗಾರೆಗುಪವಿಷಂ ಚಿಲ್ಲಮದರ್ಕೈದೆ ಘನನಾದಿ ಕಾಂಜಿಕಮಾದಂ ಕೌತುಕಮೆ ತಾನದುಪವಿಷಮಕ್ಕುಂ
ಗೋರೋಚನ ಕುಂಕುಮಮಂನೀರಿಂ ಶ್ರೀಗಂಧದಿಂದ ಕಳೆಗುಂ ಮೇಣ್ ಕರ್ಪೂರದ ವಿಷಮಂ ಬೇಗಂಧಾರಿಣಿಯೊಳ್ ಭೃಂಗರಸಮಿದೊಂದತಿಶಯದಿಂ
ಬಿಸಿನೀರೊಳಣಿಲೆಯಂ ಕೊಳ್ಬಿಸಜಂ ಮಲಯರುಹ ಶೀತವಾರಿಯುಮಂ ಮೇಣ್ದೆಸೆಗಿಡಿಕುಂ ಕರ್ಪೂರದೊಳೆಸೆವ ವಿಷಂಗಳನಶೇಷಗುಣಗಣನಿಳಯಾ
ಅರೆದು ಕುಡು ಮೇಘರವಮಂಕರಿದೆನಿಸುವ ಜೀರಕಾನ್ವಿತಂ ವಾರಿಯೊಳಂದರಿದೆನಿಸಿದ ಕರ್ಪೂರಂಬೆರಸಿದ ತೈಲದ ವಿಷಂಗಳುಪಶಮಿಸಿರ್ಕುಂ
ಇರ್ದಿಲುಮಂ ನೀರಿಂದಂಮರ್ದಿಸಿ ಕುಡಿಸಲ್ಕೆ ಕಪ್ಪುರಂ ತಿಲತೈಲಂಪೊರ್ದಿದ ವಿಷಮಂ ಕಳೆಗುಂಸಿದ್ಧಾಂತಂ ಮಂಗರಾಜಮತಮಿದು ವಿನುತಂ
ಕರ್ಪೂರಂ ಗುಡವೆರಸಿದೊಡಪ್ಪುದು ವಿಷಮಾ ವಿಷಕ್ಕೆ ವಮನಂ ಬಜೆ ನೀರುಪ್ಪುಂ ಪ್ರತಿವಿಷಮಕ್ಕುಂತಪ್ಪುಗುಮೇ ಮಂಗಭೂಪನಿಷ್ಟೋಕ್ತಿ ವಲಂ
ಕಪ್ಪುರದೊಳ್ ಪುಳಿವೆರಸಿದೊಡಪ್ಪುದು ವಿಷಮಂತದರ್ಕೆ ಪಾಲ್ಮರದ ರಸಂತಪ್ಪದುಪವಿಷಮದಕ್ಕುಂತಪ್ಪದು ಮೇಣ್ ಭೃಂಗರಸಮದತಿಹಿತವಚನಾ
ಕಿಱುನೆಲ್ಲಿಯಗಸೆ ಮಳಯಜಮಱಿ ಕುಂಕುಮಮಾ ತ್ರಿಶೂಲಿ ತಾಂಬೂಲದಲಂನೆಱೆ ಸಹದೇವಿಗಳೆಂಬಿವುಪಱಿಗುಮಿವೊಂದೊಂದೆ ಬಗೆಯೆ ಸೂತದ ವಿಷಮಂ
ಶ್ರೀಗಂಧಂ ಸಬ್ಬಸಿಗೆಯುಮಾ ಗಂಧಕದುರ್ಕನಿೞಿಸುಗುಂ ಟಂಕಣಕಂದಾಗಳೆ ಸೈಂಧವ ಗುಡದೊಳ್ಬೇಗಂ ರಾಮಠಮನಿಕ್ಕಿ ಕುಡಲದನೞಿಗುಂ
ಸ್ವಾಧೀನಮದೊಂದೆ ಶರೀರಾಧಿಷ್ಠಿತಮಪ್ಪ ಸಮದಮಂ ಕರ್ಪೂರ ಶಿಲಾಧಾತುವಿನ ವಿಷಕ್ಕಂಸಾಧಿತಮಾಗಿರ್ದ ನೀಲಿಯೊಂದೆ ಸಮರ್ಥಂ
ಸಾಲದೆ ಕಂಕುಷ್ಠಕ್ಕಂಬೇಲದ ಮೂಲಂ ತದಭ್ರಕಕ್ಕಾಸಡಿಯೊಳ್ಮೂಲರಸಂ ಕುಸುಬೆಯ ರಸಮಾಲೋಕಿಸಲುಪವಿಷಂ ಮನೋಹರಚರಿತಾ
ಬಿಸಿನೀರೊಳ್ ಕಡೆದಳೆಯಿಂದೆ ಸಮನ್ವಿತಮಾದ ನೆಲ್ಲಿಯುಪವಿಷಮಕ್ಕುಂಅಸಿತದುಯಃಕಾನ್ತರ ಮದಮಂದೆಸೆಗಿಡಿಸುಗುಮೆಂದೊಡಿಲ್ಲಿ ಸಂದೆಯಮುಂಟೇ
ಬಾಳಮದಕ್ಕುಂ ಬಜೆಗಂತೇಳಿಸದಿರದರೆದು ಕೂಡೆ ತಂಡುಲಜಲದಿಂದೇಲಕ್ಕಿಯನರೆದೀವುದುಮೇಳಿಸದಂತದಱ ವಿಷಮನಂತದೆ ಕಳೆಗುಂ
ಮೆಣಸಿಂದುದಯಿಸಿದ ಮದಂಮಣಿಗುಂ ನೆಲ್ಲಿಯನೆ ಮೆಲುಗೆ ಶಾಲ್ಮಲಿಯುದಕಂಪುಣಿಸೆಯ ರಸಮಿಂಗಿಂಗಂಭಣಿತ ಸುಗಂಧಿಯೆ ಕಟುತ್ರಯಕ್ಕುಪಗರಳಂ
ಕ್ಷಾರತ್ರಯ ಕಟುಕತ್ರಯಮಾರಯ್ಯಲ್ ಕಿಡಿಸುಗುಂ ಮರುದ್ವಹ್ನಿಗಳಂತೋರಂತಿರುರಿಪುಗುಂ ಸಬುಕಾರದ ಮದಮೆಂಬವನಮನಿದು ಕೇವಳಮೇ
ಭಸಿತದೊಡನಾಲಿಕಲ್ಲೀಕ್ಷಿಸೆ ಗೋಕ್ಷೀರಪ್ರಯುಕ್ತವಹ ತೆಂಗಿನ ಸುಪ್ರಸವಸಮೇತಂ ಶರ್ಕರೆವಸುಧೆಯ ಸಬುಕಾರದುದಿತಮದಮುಪಶಮಿಕುಂ
ತಿಲ ಮಾಷ ಟಂಕಣಾವನಿಫಲಮಿರದೊಂದೊಂದೆ ಕಿಡಿಸುಗುಂ ಸರ್ಷಪದೊಳ್ನೆಲಸಿದ ಮದಮಂ ಮೇಣಂಬಿಲವೊಂದೇ ಕಿಡಿಸುಗುಂ ಜಗಜ್ಜನಮಹಿತಾ
ಅಂಬುವಿಮಿಶ್ರ ಪುನರ್ನವಿಯೆಂಬುದು ಸಾಸಿವೆಯ ತೈಲಮದವದನೞಿಗುಂಕಿಂ ಬಹುನಾ ಲಶುನಯುಗಕ್ಕಂಬುವಿನೊಳ್ ಬೆರಸಿದವರೆಯುಪವಿಷಮಕ್ಕುಂ
ಬೇವಿನೆಲೆ ಬಿಳಿಯ ಗಣಜಿಲುಮಾವಿನ ಪಾಲಿಂದಮರೆದು ಶರ್ಕರೆಸಹಿತಂಸೇವಿಸೆ ಜೀರಗೆ ಮೆಂಥೆಯದೋವದ ವಿಷಹರಮದಕ್ಕು ಮಹಿಮದ ಗರುಡಾ
ಗುಡ ರಾಮಠ ಘೃತಮಿನಿತಂಕೊಡುವುದು ಸವನಿಪ್ಪ ಸಬ್ಬಸೀಗೆಯ ಮದಕಂಕುಡುಗೇಲಕ್ಕಿಗೆ ಸಿತಮಂಕುಡು ಕೊತ್ತುಂಬರಿಗೆ ತ್ರಿಫಳೆಯಂ ಕ್ಷಾರಮುಮಂ
ನಿತ್ತರಿಸಲೀಯದುಳ್ಳಿಯಮತ್ತತೆಯಂ ರುಜೆ ಹರೀತಕಿಗಳಿಂ ಬಗೆಯಲ್ಪತ್ತಿಯ ರಸ ಸಕ್ಕರೆಗಳ್ಮತ್ತಾ ಪಿಪ್ಪಲಿಗೆ ಮಧುಸಿತಂ ಪ್ರತಿಗರಳಂ
ತುಳಸೀರಸ ಧಾತ್ರೀಫಳವಿಳಸತ್ಕೇತಕಿಯ ಮೊಲ್ಲೆರಸಮೋರೊಂದೇಕಳೆಗುಂ ಲವಣದ ವಿಷಮಾಗಳೆ ಖರ್ಜೂರಕ್ಕೆ ಪದ್ಮಕೇಸರತತಿಯಿಂ
ಕ್ಷೀರಂ ಮೇಣ್ ವಾರಿ ಯವಕ್ಷಾರಂ ಮೇಣ್ ನಾರಿಕೇಳರಸಮುಂ ತತ್ಸಹಕಾರದ ಮದಮಂ ಕಳೆಗುಂಧಾರಿಣಿಯೊಳ್ ಕವಿಜನೈಕಮಿತ್ರನ ಮತದಿಂ
ಪಾಲುಂ ನೇಱಿಲಪಣ್ಗಳನಾಲೋಚಿಸದಧಿಕಮಾಗಿ ಕೊಂಡತಿವಿಷಮಂಚಾಳಿಸುಗುಂ ನೆಲ್ಲಿಯಕಾಯ್ಕಾಲೋಚಿತಮಲ್ಲದಿರೆ ಪೆಸರ್ಗಳ ಕಟ್ಟುಂ
ಮಧುಕದ ಕಷಾಯತೋಯಂಸುಧಾಸಮಂ ಜಂಬುಪಾಲ್ಗಳೊಂದಿದ ಮದಮಂವಿಧಿಯಿಂ ಕೊಂಡೊಡದಕ್ಕುಂವಿಧುಂತುದಂ ವಿಧುಗೆ ಶತ್ರುವೆಂತಂತೆ ವಲಂ
ಟಂಕಣ ಸೈಂಧವ ತಕ್ರದೊಳಂ ಕಿಡುಗುಂ ಜಂಬುವಿಂದೆ ಜನಿಸಿದ ಮದಮುಂಸಂಕಿಸದಿರಣಿಲೆ ಮರಿಚಮುಮಂ ಕೂಡಿ ಕೊಳಲ್ಕೆ ತದ್ವಿಷಾಪಹಮಕ್ಕುಂ
ಹಲಸಿನಹಣ್ಣಿನ ವಿಷಮಂತಿಲಜಂ ಮೇಣುಪ್ಪಿನೆಸಱ ಮಾವಿನಕಾಯುಂಘೞಿಲನೆ ಸುಂಠಿಯೊಳಳೆಯುಂವಿಳಸಜ್ಜಾಯಿಫಳ ಹಿಂಗು ತಕ್ರಂ ಕಳೆಗುಂ
ಕಡಸಿಗೆಯೆಸಱಂ ಮೆಣಸಂಕುಡುವುದು ಮೇಣ್ ತಕ್ರ ನಾಗರಂಗಳನೊಲವಿಂಕುಡುವುದು ಬಾೞೆಯಹಣ್ಣಿಂತೊಡರ್ದ ವಿಷಂ ಕಿಡುಗುಮಲ್ತೆ ಮರಿಚದೊಳೆಲ್ಲಂ
ನೆಲ್ಲಕ್ಕಿಯುಮಂ ಮೆಲುವುದುಪುಲ್ಲಂಪುಣಿಚೆಯ ಸುಬೀಜಮಂ ಮೇಣ್ ಮತ್ತಂತಲ್ಲದೆ ಕಳವಲಬಿತ್ತಂನಿಲ್ಲವು ತಾವಿಳೆಯ ನಾರಿಕೇಳ ವಿಷಂಗಳ್
ಪಿಂಗದೆ ಕಡಲೆಯ ಪುಳಿ ಮಧುರಂಗಿಯ ಬಿತ್ತಕ್ಕಿಗರ್ಚಿನೀವುದು ಸಿತದಿಂತೆಂಗಿಂಗಾ ಕ್ಷೀರ ವಿಷಕ್ಕಂ ಗಣಜಿಲೆ ವಜ್ರಿಯೆಸೆವ ಪಾಲಂ ಸಿತದಿಂ
ಕಡಸಿಗೆಯ ಬೇರನೊಂದಂಕುಡಿಸುವುದಂತಲ್ಲದಂದು ತಾಂ ವಾರಿಯನೇಕುಡಿಸಲ್ ಕರ್ವಿನ ಗರಳಂಕಿಡುಗುಂ ಸಾಹಿತ್ಯ ವೈದ್ಯವಿದ್ಯಾಂಬುನಿಧೀ
ನಾರಂಗಕ್ಕೊಪ್ಪುವ ಬೆಳುಗಾರಂ ಹೇರಿೞೆಗಮಣಿಲೆಯುಂ ಮೇಣ್ ಸದ್ಯಃಕ್ಷಾರಂ ಕಿತ್ತೀೞಿಗೆ ತಾನೋರಂತುಪವಿಷಮದಾ ತವಕ್ಷೀರಾಖ್ಯಂ
ನಾಗರಮಂ ದಧಿಯೊಳ್ವೆರಸಾಗಳೆ ಕುಡಲದು ಗುಣಪ್ರದಂ ದಾಡಿಮಸಂಯೋಗದ ಮದಮಂ ಕಳೆಗುಂಸಾಗರಗಂಭೀರನೆನಿಪ ಮಂಗನ ಮತದಿಂ
ನಿಂಬೆಗೆ ಮತ್ತಿಯ ತಿಗುಡಂತಿಂಬುದು ಮೇಣ್ ಮಧುವನಾದೊಡಂ ಪ್ರತಿವಿಷಮಕ್ಕಿಂಬಿನ ಪುಣಿಸೆಯ ತ್ವಕ್ಕದೊಡಂಬಡದೊಡೆ ಮಾದಲಕ್ಕೆ ಮಗ್ಗಾರೆ ದಿಟಂ
ವಿಲಸಿತ ಸೈಂಧವಮದು ಮಾದಲದ ವಿಷಾಪಹಮೆನಿಕ್ಕುಮಿಳೆಯೊಳ್ ರಂಭಾಫಲದ ಮದಂ ತಾನಭಯದೊಳೞಿಗುಂ ಮಂಜಿಂಗೆ ನಳಿನಮೞಿವಂತೆವೊಲಂ
ಅರವಿಂದದಳಂ ಸಿತಮಾವರಿಕೆಯ ಪೊಸಸೊಪ್ಪು ಸಮನದಾಗಲ್ಕಂತಾನರೆದುಂ ಪಾಲಿಂ ಸೇವಿಸೆಪರೆಗುಂ ಬೇವಿನ ವಿಷಂ ವಿದಗ್ಧಾಭರಣಾ
ನೀರಸಸುಣ್ಣಕೆ ಕೆಮ್ಮಣ್ಣೋರಂತಿರೆ ನೆಲ್ಲಿಗಂತೆ ತಾಱೆಯಕಾಯಂಧಾರಿಣಿಯೊಳೇಲೆ ಶಿಖಿಮುಖಕಾರಯ್ಯಲ್ ತಕ್ರಯುತಮದುಪವಿಷಮಕ್ಕುಂ
ಏಲಕ್ಕಿ ಕಟ್ಟುಮೊಸರೊಳ್ಸಾಲದೆ ಕಳಲಾಗಿ ಕುಡಿಸಲಣಿಲೆಯ ವಿಷಮಂಸೋಲಿಸುಗುಂ ಕಣಕಾಂಜಿತಮೇಲಪಿತಮದರ್ಕೆ ಬೇಱೆ ಮರ್ದುಗಳೊಳವೇ
ಅಣಿಲೆ ಬೆಳುವಾಲಕುಪವಿಷಮೆಣಿಸಲದೇಂ ಹೊನ್ನೆಗಭ್ರನಾದಿಯೆ ಮತ್ತೇಂಭಣಿತಂ ನೀಲಿಗೆ ಕುಡುಗಾಕ್ಷಣದಿಂದಮೃತೋಪಮಾನಮೆಂಬುದು ಪುಸಿಯೇ
ಕುಡುವುದು ಶುಂಠಿಯುಮಂ ಮೇಣ್ತಡೆಯದೆ ಶಿವೆಯೊಂದನೀವುದುಷ್ಣೋದಕದಿಂಕಡಸಿಗೆಯ ಸೊಕ್ಕನೞಿಗುಂಪೊಡವಿಯ ಬೆಳಲಿಂಗೆ ತೊಳಸಿ ಗುಗ್ಗುಳು ಮರಿಚಂ
ನಸುಗುನ್ನಿಯಸೊಕ್ಕಿಂಗಂಪಸುವಿನ ಘೃತಮಲ್ಲದಂದು ಭಸಿತಂ ಮೇಣ್ ನೀಲಿಸಮೇತಂ ಹಂಸಪಾದಿಯುಮೆಸೆವ ಸುಗಂಧಿಗಳೆ ಬಗೆಯಲುಪವಿಷಮಕ್ಕುಂ
ನಱುವಂಜಿ ನೆಲಾವರೆಗಳ್ತುಱುಚೆಯ ಕರಿಯಂ ಜಲಾನ್ವಿತಂ ಪೂಸುಗೆ ಮೇಣ್ಪಱಿಗುಂ ಪಂಕದ ಲೇಪದಿನಱಿ ನಸುಗುನ್ನಿಯ ವಿಷಂ ಭಿಷಗ್ವರಮತದಿಂ
ತೊಳಸಿಯ ಕರಿ ಸಬುಕಾರಂಗಳುಮಂ ಕಳಿಯುಕ್ತಮಾಗಿ ಪೂಸುಗೆ ಮೇಣಾಗಳೆ ಕರ್ದಮದಿಂ ಪೂಸಲ್ಕಳೆಗುಂ ಸಂದೇಹಮೇಕೆ ತುಱುಚೆಯ ತಿನಿಸಂ
ಪರ್ಪಾಟಕದ ಕಷಾಯಮದೊಪ್ಪುವರುಷ್ಕರದೊಳಾದ ಶೋಫೆಯುಮಂ ತಾದರ್ಪಮನಾಗಳೆ ತೊಲಗಿಪುದೊಪ್ಪುವ ಮುತ್ತದ ಕಷಾಯಮುಂ ಮೇಣ್ ಕಳೆಗುಂ
ಸುಪವಿತ್ರ ಫಲತ್ರಯಮುಂವಿಪಾಕಮೆನಿಸಿರ್ದ ವಾರಿಯುಂ ಮೇಣ್ ಪಾಲ್ಮರದಪರಿ ಸುಪಾಕದ ಜಲದಿಂವ್ಯಪಗತಮಾಗಿರ್ಪುದಲ್ತೆಕೇರಮದಾರ್ಪುಂ
ವರಸೊಗದೆ ಸಿತಂ ಮೇಣ್ ತುಂಬುರಮೂಲದ ಪಾನ ನೀಲಿ ಕರ್ಕೋಟಕಿಯಂಬುರುಹದ ಕೇಸರಮಿವು ತಾನರುಷ್ಕುರದ ಪುಣ್ಗೆ ಬೇಱೆವೇಱೆ ರಹಸ್ಯಂ
ಕರದಿಂ ಮುಟ್ಟದೆ ತೊಳೆ ನೀಂನರಮೂತ್ರದೊಳಲ್ಲದಂದು ಬಿಸಿಯಂಬಿಲದಿಂಪಿರಿದೆನಿಪ ಗೇರಪುಣ್ಗಳನಿರದಿಕ್ಕು ಬೞಿಕ್ಕದರ್ಕೆ ದಿವ್ಯೌಷಧಮಂ
ಸತಿಲಕ್ಷೀರಮುಮಂತುಮಲ್ಲದೊಡೆ ಸಾಜ್ಯಂ ಮೇಘನಾದ್ಯಾಖ್ಯಮಪ್ರತಿಮಂ ತುಂಬುರಸೊಪ್ಪೆಯಲ್ಲದೊಡಮಾ ತಾಂಬೂಲವಲ್ಲೀದಲಂಕ್ಷಿತಿಯೊಳ್ ಪರ್ಪಟಕಂ ಸಹಾಂಬುವನಿಶಂ ಗೇರ್ ತಿಂದು ಪುಣ್ಣಾಗೆ ಲೇಪಿತಮಾಗಲ್ಕಿರದೆಯ್ದೆ ಮಾಣ್ಗು ತನು ಶೋಭಾಕ್ರಾಂತನಪ್ಪಂ ನರಂ
ಮನುಜರ್ಗೆ ಗೇರಪುಣ್ಗಳ್ಘನಮಾಗಿರೆ ಕುಟಜಪುಷ್ಪಮಂ ಪೂಸುಗೆ ಮೇಣ್ಘನನಾದಿಯೊಳಾಜ್ಯಮುಮಂತನುಲೇಪಂಗೆಯ್ಯೆ ಮೆಯ್ಯ ಪುಣ್ಗಳ್ ಮಾಣ್ಗುಂ
ತಿಲ ದೂರ್ವೆ ಸೊಗದೆಯೆಂಬಿವನಲಸದೆ ಪೂಸಲ್ಕರುಷ್ಕರಾಖ್ಯದ ಪುಣ್ಗಳ್ನೆಲಸದೆ ಪೋಕುಂ ಮೆಯ್ಯೊಳ್ಸುಲಲಿತ ಕವಿಪಿಕವಸಂತನಿಷ್ಟೋಕ್ತಿಯೊಳಂ
ನೆಲ್ಲಕ್ಕಿ ಕಿಱುಕುಸಾಲೆಯನಲ್ಲದೊಡೆಳ್ಳೆಣ್ಣೆ ಮಯಣಯುತಮಾದುದಱಿಂದಲ್ಲದೊಡೆ ಮಧುಕ ಘೃತದಿಂನಿಲ್ಲವು ಭಲ್ಲಾತಕಾಖ್ಯಮೊಂದಿದ ಪುಣ್ಗಳ್
ನೀರಂ ನೆಯ್ಯಂ ಪೊಯ್ದುಂಚಾರಿಸಿ ವಳಿಗೆಯೊಳೆ ಬಿಡದೆ ನೂಱ್ಸೂೞ್ವರೆಗಂನೀರಿಂದೆ ತೊಳೆದು ಪೂಸೆ ನಿವಾರಿಸುಗುಂ ಗೇರಪುಣ್ಣನಂತಾ ಕ್ಷಣದಿಂ
ಕಱುಕೆಯ ರಸಭಾಗಂ ನಾಲ್ಕಱೊಳಂ ಪೊಯ್ ಘೃತಮನೊಂದುಮಂ ರಸಮಱೆಯಲ್ನೆಱೆಯಟ್ಟ ಘೃತದ ಲೇಪದೆಪಱಿಗುಮರುಷ್ಕರದ ಪುಣ್ಗಳಂತಾ ಕ್ಷಣದೊಳ್
ಕರಿಯೆಳ್ಳೆಮ್ಮೆಯ ಬೆಣ್ಣೆಯೊಳರಿಸಿನಮನದಲ್ಲದಂದು ತಿಲ ಪಿಚುದಳಮಂಬೆರಸರಿಸಿನಮಂ ಪೂಸುತ್ತಿರೆ ಕೇರಿಂದಾದ ಪುಣ್ಗಳಂ ಪರಿಹರಿಕುಂ
ಕರಿಯೆಳ್ಳಂ ಗೋಕ್ಷೀರದೊಳರೆದೆಮ್ಮೆಯ ಬೆಣ್ಣೆವೆರಸು ಮೇಣ್ ಬೆಣ್ಣೆಯೊಳಂದರಿಸಿನಮನಭ್ರನಾದಿಯೊಳರೆದಿಕ್ಕಲ್ ಕೇರಪುಣ್ಗಳಿರವವಮೋಘಂ
ತುಂಬುರಬಿತ್ತುಂ ಸಿತಮುಂತಾಂಬೂಲದಲಂಗಳಿನಿತನೆಳ್ಳೆಣ್ಣೆಯೊಳಂಕೊಂಬುದು ಕೇರಿನ ಪುಣ್ಗಳಳುಂಬಂ ಕೊಂಡಾದ ವಿಷಮನೞಿಗುಮವಶ್ಯಂ
ಲೊಕ್ಕಿಗೆ ತಕ್ರಂ ವಿಶ್ವಂಕಕ್ಕೆಗೆ ತಾಂ ಪೆಸಱಕಟ್ಟು ಮೇಣಾ ಗಣಜಿಲೆಯುಂನಿಕ್ಕುವ ಮಧುಕಂ ತಕ್ರಮಿವಕ್ಕುಂ ಪ್ರತಿಗರಳಮಿಂತು ಪರಹಿತಚರಿತಾ
ದಂತಿಗದಕ್ಕುಂ ಪ್ರತಿಗರಳಂ ತಿಳಿ ನೀಂ ಬಳ್ಳಿಸೊಂಡೆಯುಂ ಬೆಲ್ಲಂ ಮತ್ತಂತು ಕುರುಟಿಗೆಗಮಿದು ಸಿದ್ಧಾಂತಮೆನಲ್ ಕೊಗ್ಗಿ ನೆಲ್ಲಿಯುಂ ಪ್ರತಿಗರಳಂ
ಹಿಂಗುಂ ವಿಶ್ವಂ ಬೆರಸಿರಲೇಂ ಗಳ ಚಿತ್ರಕದ ವಿಷಮವಿಷದ ವಿರೋಧಂಸಂಗಳಿಸಿದ ಗುಂಜಾಮದಮಂ ಗೆಲಲೇನಭ್ರನಾದಿಯೊಂದದಮೋಘಂ
ಕುಸುಬೆಯ ರಸವಜದುಗ್ಧಂಯೆಸೆವ ಹರೀತಕಿಯುಮಾದೊಡೊಂದೊಂದೆ ವಲಂದೆಸೆಗಿಡಿಕುಮಂಕೊಲೆಯ ಮದಮೆಸೆಗುಮೆ ಪೇೞ್ ಕುಡಿಯೆ ವಾರಿಯಿಂ ಬುಧಬಂಧೂ
ಬೆರಸಿದೊಡೆ ನುಗ್ಗಿ ಗೋರಟೆಯೆಲೆಯಂಕೋಲೆಯ ಮದಕ್ಕೆ ಪದ್ಮಾಕ್ಷಿಯದೊಂದರುಟಾಳದ ಮದ ಶಮನಂಬೆರಸಿರೆ ಮಧುವಿಂಗೆ ಮಂಗರಾಜನ ಮತದಿಂ
ವಿಷಮೆಕ್ಕೆಗೆ ಗಿಣಿಮೂಗಂವಿಷಮುಂಗುರಿಗಂತೆ ಪಾಲು ಜಂಬೂತ್ವಚಮಾವಿಷದಣಬೆಗೆ ಮೊಸರಿಳೆಯೊಳ್ಭಿಷಗ್ವರರ್ ಹಿಂಗು ತಗಚೆಗುಪವಿಷಮಕ್ಕುಂ
ಸೂರಣಕೆ ನೆಲ್ಲಿ ಮತ್ತಂತೋರಂತಿರೆ ಪುಣಿಸೆಯೆಸೆವ ಪಣ್ ತಿಲಜಮದಕ್ಕಾರಯ್ಯೆ ತಕ್ರ ಗಣಜಿಲುಬಾರಿಸುಗಂತದಱ ಗರಳಮಂ ಗುಣನಿಲಯಾ
ಕೆಸವಿನ ಸೂರಣದೆಸಕಮನೆಸೆವಾ ವಾಸ್ತುಕದ ರಸಮದಲ್ಲದೊಡಂ ಮೇಣ್ವಸುಧೆಯೊಳಂತೆಳನೀರುಂಮಸುಳಿಸುಗುಂ ಸಕಲ ಸುಜನಸೇವ್ಯನ ಮತದಿಂ
ಇಳೆಯೊಳಗೆ ಹಸ್ತಿಕರ್ಣಿಗೆಸಲೆ ಪುಳ್ಳುಂಬುಣಿಸೆಯುಪವಿಷಂ ಮೇಣ್ ತೈಲಂನೆಲಗುಳ್ಳದ ಮದಮಂ ತಾಂತೊಲಗಿಸುಗುಂ ನೆಲ್ಲಿಯೊಂದೆ ಪರಹಿತಚರಿತಾ
ಮುಂಗುಱುವಳ್ಳಿಯ ವಿಷಮಂಸಂಗಳಿಸಿದ ಸಿತದೊಳಂ ಶತಾವರಿಯೞಿಗುಂಪಿಂಗಿಸುಗುಂ ಪಾಗಲ ವಿಷಸಂಗತಿಯಂ ನೆಲ್ಲಿಯೊಂದೆ ಗುಣಗಣನಿಳಯಾ
ದೀವದ್ರಾಕ್ಷೆಯ ಮದಮುದ್ಭಾವಿಸೆ ನಿರ್ಗುಂಡಿ ಮರಿಚದೊಳ್ ಸಮನಾಗಲ್ಕಾವಿನ ಪಾಲಿಂದೀಂಟೆ ಶುಭಾವಹಮಕ್ಕುಂ ವಿದಗ್ಧಚೂಡಾರತ್ನಾ
ಆವಾವ ಪಣ್ಗಳಂ ಮೆಲಲಾವಂ ತತ್ಫಲದ ಬೀಜಮಂ ತ್ರಿಕಟುಕದಿಂಸೇವಿಸಲುಪವಿಷಮಕ್ಕುಂಭೂಮಿಶ್ರುತ ಮಂಗರಾಜನನುಮತದಿಂದಂ
ಬೆರಸುಗೆ ಪುತ್ರಜೀವಿಯೊಳೆ ಕಂಬುವನಾ ನವಕೃಷ್ಣಜೀರಕಂಬೆರಸರೆದೀಯೆ ತುಂಬೆಯ ಮದಾಪಹಮಲ್ಲದೊಡೇವುದಾವುದಂಬೆರಸದೆ ಪಿಂಡಿ ನೀಂ ತುರುವೆಯಂ ರಸಮುದ್ಭವಮಾಗಲಂತದುಂಪರಿಹರಿಕುಂ ತದೀಯ ಮದಮಂ ವಿಭುವಂಶಲಲಾಮನುಕ್ತಿಯಿಂ
ಮರಿಚ ಸುತಕ್ರಂಗಳ್ ತುಂಬುರ ವಿಷಮಂ ಕಿಡಿಸುಗುಂ ಭಿಷಗ್ವರಮತದಿಂಮೊಸರ್ವೆರಸುಂಬೋಗರಕಂಪೆಸಱಿನ ಕಟ್ಟೀಂಟಲದಕೆ ಹಿತಮಂ ಮಾೞ್ಕುಂ
ಸುತಜೀವಿ ಕೃಷ್ಣಜೀರಕಯುತಮಾಗಲ್ ಕಾಯಿವೆರಸು ಮೇಣ್ ತುಱುವೆಯನುದ್ಧತಮಾದ ರಸಮುಮೀಕ್ಷಿಸೆಕ್ಷಿತಿಯೊಳ್ ತುಂಬೆಯ ಮದಾಪಹಂ ಗುಣನಿಲಯಾ
ಮೊಸರ್ವೆರಸುಂಡೋಗರದಾಮಿಸುಪ ಮದಂ ತೊಲಗುಗುಂ ನವೀನಮೆನಿಪ್ಪಾಪೆಸಱಿನ ಕಟ್ಟಂ ಕುಡಿಸಲ್ವಸುಧಾತಲಮಾನ್ಯ ಮಂಗರಾಜನ ಮತದಿಂ
ಉಳ್ಳಿ ಸಿತಂ ವ್ಯೋಷಂ ಪಯವೊಳ್ಳಿದುದೆನಿಸಿರ್ದ ಬಂಜೆ ಮಡುವಾಗಲಿವಂಕೊಳ್ಳು ತಿಲತೈಲಗೂಡೆಯ್ಮುಳ್ಳುಗಳಾ ಗರಳಮಂ ಕರಂ ಪರಿಹರಿಕುಂ
ಹೂರಂ ತ್ರಿಕಟುಕಂ ಕಾೞ್ವೀರೆ ಸುತಕ್ಕೋಲಘಟ್ಟಿ ಸಿತ ಜಲಧರಮುಂವಾರಿಯೊಳರೆದೀಂಟದುವೆ ನಿವಾರಿಕು ಪಯಗೂಡಿದೆಯ್ಯಮುಳ್ಳಿನ ವಿಷಮಂ
ಬಾದೇಂ ಪಿಟ್ಟಿಂಗೆ ಕದುಷ್ಣೋದಕಮಂ ಕುಡಿಯೆ ಲವಣಮಿಶ್ರದ ತಕ್ರಮದೋದನಕುಪವಿಷಮಕ್ಕುಂಮೇದಿನಿಯೊಳ್ ಮಂಗರಾಜನನುಮತದಿಂದಂ
ಮರಿಚ ಶಿಖಿ ಶುಂಠಿ ಬೇವಿನಸುರಸಂ ಗಣಿಜಿಲಯಮೂಲ ಸೈಂಧವಸಹಿತಂಪರಿಮರ್ದಿಸಿ ಕುಡು ವಾರಿಯೊಳಿರದಶನದ ಸೊಕ್ಕುಮೞಿವುದೊಂದಚ್ಚರಿಯೇ
ವರ್ಣಾನ್ನಮಿಶ್ರಿತಂ ಪರಿಪೂರ್ಣಂ ಕೊಂಡಖಿಳ ಶಾಕಪಾಕಾದಿಗಳಂಪರ್ಣಫಲಭೇದಮಂ ಸಂಕೀರ್ಣಂಗೊಂಡಂಗೆ ಲವಣತಕ್ರಂ ಶುಭದಂ
ವಿದಳಾನ್ನ ಸರ್ವಶಾಕಂಕದಶನಮಿವನುಂಡವರ್ಗೆ ಶುಂಠಿಗಳುಂ ತಕ್ರದೊಳೊಂದಿದ ಭಯಮುಂ ಮೇಣ್ವಿದಳಿಸುಗುಂ ತದ್ವಿಷಂಗಳಂ ಬುಧಮಿತ್ರಾ
ಅಪರಿಮಿತಮಪ್ಪ ವಿದಳಾನ್ನಪತ್ರಫಲಶಾಕ ಭೋಜನಂಗಳ ವಿಷಮುಂವ್ಯಪಗತಮಂಬಿಲ ದಧಿಯಿಂಗುಪಶಮಮಕ್ಕುಂ ವಿವೇಕಚೂಡಾರತ್ನಾ
ಕರಿಯೆಲೆಯ ರಸದೊಳಂ ಸಿಂಧುರುಹಂ ಮಗಧರುಹ ವಿಶ್ವಮಂ ಮೆಲ್ವುದು ಮೇಣ್ವರ ಕಟುಕರೋಹಿಣಿಯುಮಂಚರಿಸುಗೆ ಟಂಕಣಮನಧಿಕ ಭೋಜನ ವಿಷಮಂ
ನೀರಿಂ ಶುಂಠಿಯುಮಂ ಬೆನ್ನೀರಿಂದಣಿಲೆಯುಮನೀಂಟೆ ಕಡಸಿಗೆಯ ರಸಂಕ್ಷೀರಕ್ಕುಪವಾಸಂ ಮೇಣ್ಧಾರಾಧರನಾದಿ ಮತ್ತಮುಪವಿಷಮಕ್ಕುಂ
ಪೊಸ ಪೆಸಱ ಕಟ್ಟುಮಂ ಕುಡಿವಸುಧಾಫಲ ಭೋಜನಂಗಳಂ ಮಾೞ್ಪುದು ಶುಂಠಿಸಮೇತಮಭಯಮಂ ಮಱುಗಿಸಿಕೊಂಬುದು ಮೊಸರ ವಿಷಮನಂತದು ಕಳೆಗುಂ
ಕುಡು ಶರ್ಕರೆಯಂ ಮೊಸರಿಂತೊಡರ್ದ ವಿಷಂಗಳುಮನಳಱಿಕುಂ ತಕ್ರದ ಸೊರ್ಕಡಸುಗುಮದಱಿಂ ಮರಿಚಂಕೆಡಿಸುಗುಮದು ತಕ್ರಮರಿಚಮೆಂಬುದು ಧರೆಯೊಳ್
ತಡೆಯದೆ ತಕ್ರದ ವಿಷಮಂತೊಡೆಗುಂ ತಲೆದೋಱದಂತಾಕ್ಷಣದೊಳೆ ತಾಂಕಡಸಿಗೆಯೆಸರ್ನಾಗರಮಂಕುಡುವುದು ಮರ್ದುಗಳಿದರ್ಕೆ ದೊರೆ ಪೆಱತುಂಟೇ
ಮರಿಚಂ ಮಾಕ್ಷಿಕ ಕೂಷ್ಮಾಂಡರಸಂ ತಾಂಬೂಲದಳರಸಂಗಳನೀಂಟಲ್ಪಱಿಗುಂ ಮೇಣ್ ಬಿಸುನೀರ್ ಗಡತರಣಿಗೆ ತಮವೋಡುವಂತೆ ತುಪ್ಪದ ಗರಳಂ
ಕುಂಬಳದ ಫಲರಸಂ ಮೇಣಿಂಬಿನ ಲೊಕ್ಕಿಯ ಕಷಾಯಮುಂ ಕೆ (ಕು)ಡಿಸುಗುಮುಷ್ಣಾಂಬುವೆ ಮೇಣಾ ಮಧುವಿಂತಿಂಬಿದ ವಿಷಮಂ ವಿವೇಕ ಚೂಡಾರತ್ನ
ಮಧುವುಂ ಗೋಘೃತಮುಂ ಕೂಡೆ ಧಾತ್ರಿಯೊಳ್ ಕೊಂಡೊಡದು ವಿಷಂ ಭಾವಿಪೊಡಂಸುಧೆಗೆಣೆಯೆನಿಪಂಗುರಮಂಬುಧರೀವುದದರ್ಕದುಪವಿಷಂ ಗುಣನಿಳಯಾ
ಕಂಗುಂಗೆಯೆಣ್ಣೆಗಿಕ್ಷುರಸಂಗಳೆ ಭಾವಿಸೆ ತಿಲಕ್ಕಮರ್ಕನ ಮೂಲಂಸಂಗಳಿಸಿದ ತಿಲಜಕ್ಕೆ ಮನಂಗೊಳಿಸುವ ಕೋಕಿಲಾಕ್ಷಬೀಜಮಿವರಿಗಳ್
ಸಿತಯುತದ ಪಯಃಪಾನಮದತಿಶಯದಿಂ ಕಳೆಗುಮೆಸೆವ ತೈಲದ ವಿಷಮಂಘೃತಸಿತ ಮಧುವುಂ ಮೇಣೀಕ್ಷಿತಿಯೊಳ್ ತದ್ಗರಳನಾಶನಂ ಬುಧಬಂಧೂ
ಮಳಯರುಹ ನಾಗಕೇಸರಮಿಳೆಯೊಳ್ ಸಬ್ಬಸಿಗೆಯುಪವಿಷಂಗಳೆನಿಕ್ಕುಂಹುಳಿಸೆಯ ಹುಳಿಯುಂ ಗುಡಮುಂತಿಳಸಂಭವಮೆನಿಸಿದೆಣ್ಣೆಗಮಳಚರಿತ್ರಾ
ಎಳ್ಳಗಸೆಯ ತೈಲಕ್ಕಂಬೆಲ್ಲಂ ಪುಣಿಸೆಯ ಫಲೋದ್ಗತಂ ಪುಳಿವೆರಸಲ್ನಿಲ್ಲದೆ ಕುಡಿಸಲ್ಕುಪವಿಷಮಲ್ಲದೆ ಪೇೞಿದಕೆ ಬೇಱೆ ದೊರೆ ಪೆಱತುಂಟೇ
ಕ್ಷೋಣಿಯೊಳೆ ಬೇವಿನೆಣ್ಣೆಗೆರೇಣುಕ ಕುಟಜಂಗಳರಿಗಳಕ್ಕುಂ ಧರೆಯೊಳ್ಮೇಣೌಡಲದೆಣ್ಣೆಗೆ ಸಪ್ರಾಣಿಸದೊಡೆ ತುಳಸಿ ಗುಡಸಿತಂ ಹಿತಮಕ್ಕುಂ
ಎಳನೀರುಂ ಸಕ್ಕರೆ ಸೊರೆಯೆಲೆಯುಂ ಪ್ರತಿಪಕ್ಷಮಿಳೆಯೊಳಕ್ಕುಂ ಪಾಲೊಳ್ಕೆಳೆಗೊಂಡ ಕೞಲೆಯಿಂದಂಖಳತರಮೆನಿಸಿದ ಮದಕ್ಕೆ ಬುಧಜನಮಿತ್ರಾ
ಸೊಗಯಿಪ ಹಿತಕರಮಪ್ಪಾತಗಚೆ ಗಡಂ ತಾಂ ವಿಪಕ್ಷಮಕ್ಕುಂ ಬಿದಿರಿಂದೊಗೆದಿರ್ದ ಕೞಿಲೆಗಂ ತಾನಗಣಿತ ಗುಣನಿಲಯ ಮಂಗರಾಜನ ಮತದಿಂ
ಸಲೆ ಮರಿಚ ನಾಗರಂಗಳನಳೆಯಿಂ ಕೊಳಲಧಿಕಮಪ್ಪ ಜೋಳದ ಸೊಕ್ಕಂತೊಲಗಿಸುಗುಮಖಿಳ ವಿದ್ಯಾಜಲನಿಧಿಯೆಂದೆನಿಪ ಮಂಗರಾಜನ ಮತದಿಂ
ವರಮೇಘ ಶುಂಠಿ ಸೈಂಧವಮರಿಚಂ ಮಾಗಧಮಿವೆಲ್ಲಮಂ ತಕ್ರದೊಳಂಬೆರಸರೆದು ಕುಡಿಸೆ ಜೋಳದಕರಮರಿದೆನಿಸಿದ ವಿಷಂಗಳಂ ಸಂಹರಿಕುಂ
ಅಲಸದೆಯಗಸೆ ಕಷಾಯದಜಲಮಂ ತ್ರಿಕಟುಕದ ಸಿಂಧುವಾರದ ಯುತದಿಂಘಳಿಲನೆ ಕುಡುವುದು ನರರೊಳ್ನೆಲಸಿದ ಸಾವೆಯ ಮದಂಗಳಂ ಸಂಹರಿಕುಂ
ಲಶುನಂ ನಾಗರ ಹಿಂಗರಿಷ್ಟಮಿನಿತಂ ಕೂಡಿಟ್ಟು ಮತ್ತಂ ಕ್ರಿಯಾಕುಶಲಂ ಭಾವಿಸೆ ದುಗ್ಧದಿಂದತಿವಚಾ ಸಂಯೋಗದಿಂದೀಗೆ ವೈದ್ಯಶತಂಗಳ್ ಪೆಱವೇಕೆ ರಾಗಿಯ ವಿಷಂ ಕೆಯ್ಕೊಂಡು ಬಿೞ್ದಂಗೆ ತತ್ಪ್ರಶಮಂ ತಾನಿದು ಸಾಲ್ಗುಮೊಂದೆ ಬಗೆಯಲ್ ಶ್ರೀಮಂಗರಾಜೋಕ್ತಿಯಿಂ
ವರಕೋಷ್ಠ ರಾಮಠಂಗಳನರೆದೊಂದಾಗಿರಲು ಪಾಲೊಳೀವುದು ಮತ್ತಂಪರಿಹರಿಪುದಾಕ್ಷಣಂ ತಾಂಧರೆಯೊಳ್ ರಾಗಿಯ ವಿಷಂಗಳಂ ಗುಣನಿಳಯಾ
ಇರದಟ್ಟಿ ಹತ್ತುವಂ ನಾಗರಮುಂ ಹೆದ್ದುಂಬೆಯೆಂಬಿವಂ ತಕ್ರದೊಳಿಂತರೆದೀಗೆ ನವಣೆಯಿಂದಂಪೊರೆದ ವಿಷಂ ತೀರ್ಗುಮೆಂದನಮಲಚರಿತ್ರಂ
ಬರಗಿನ ವಿಷಕ್ಕೆ ಕುಂಬಳದ ರಸಂ ತಾನಕ್ಕುಮುಪವಿಷಂ ಕೋದ್ರವದಿಂಪೊರೆದ ವಿಷಂ ಪರಿಹರಿಪುದುಮರಿದೇ ಕೂಷ್ಮಾಂಡರಸ ಗುಡಾನ್ವಿತಪಾನಂ
ಮರಿಚಂ ಕುಂಬಳದೆಲೆಯುಮನರೆದ ರಸಂ ಸಿಂಧುಜಾತಮಂ ಕೂಡಿ ಬೞಿಕ್ಕಿರದೀಂಟಲ್ ಹಾರಕ್ಕಿಯಪಿರಿದೆನಿಪ ವಿಷಾಪಹರಣಮಕ್ಕುಮಮೋಘಂ
ಕೊಂಬುದು ಕಟುಕತ್ರಯಮುಂಜಂಭೀರದ ರಸಸಿತ ಪ್ರಯುಕ್ತಮದೇಂ ಮೇಣ್ನಿಂಬೆಯ ರಸದೊಡನಿಂಗುಂಕಂಬುವಿನ ವಿಷಾಪಹರಣಮಕ್ಕುಮಮೋಘಂ
ಇರೆ ಮುಳ್ಳುಸೌತೆ ನುಗ್ಗಿಯವರಬೀಜಂ ಸೈಂಧವಾನ್ವಿತಂ ಮೇಣ್ ಕೊತ್ತುಂಬರಿ ತಕ್ರಂ ಕುಡೆ ಗೋಧಿಯಗರಳಕ್ಕುಪವಿಷಮಿದಲ್ತೆ ಸುಜನವರೇಣ್ಯಾ
ಸಾರತರಂ ಗೋಧಿಯ ಮದವಾರಣಮಿದೆ ಸಾಲ್ಗುಮಿಂತಿದಂ ಕುಡು ನಯದಿಂಜೀರಕಮಂ ತಕ್ರದೊಳಂಭೋರುಹದಳನಯನ ಮಂಗರಾಜನ ಮತದಿಂ
ನಾಗರ ಹಿಂಗುಮನರೆದೊಂದಾಗಿರೆ ಕಾಸಿದ ಕಷಾಯದೊಳ್ ಬೆರಸೀಯಲ್ಬೇಗಂ ತ್ರಿಕಟುಕಮನದುಂನೀಗುಗುಮರಿದೆನಿಪ ಚಣಕಮದಮನಮೋಘಂ
ಹೆಸಱಿಂಗಂ ಧಾತ್ರೀಫಲಮೆಸೆವಾವುರ್ದಿಂಗೆ ಮುಳ್ಳುಸೌತೆಯೆ ಮತ್ತಂಪೊಸಮಜ್ಜಿಗೆಯವರೆಗೆ ಹಿತಮಸಮಾನ ಗುಣಕ್ಕಿವರ್ಕೆ ಸರಿ ಮರ್ದೊಳವೇ
ಪೊಸಶುಂಠಿ ಸೈಂಧವಂ ಮರಿಚಸಮೇತಮಿವಕ್ಕಮುಪವಿಷಂಗಳ್ ಧರೆಯೊಳ್ಮಿಸುಪವರೆಯ ಮದಮಂ ಮಾಣಿಸುಗುಂ ಮನುಕುಲಲಲಾಮ ಮಂಗನ ಮತದಿಂ
ಸಿಂಧುಜ ರಾಮಠಮುಂ ಮೇಣ್ಸೈಂಧವಮುಂ ಮರಿಚಯುಕ್ತಮವರೆಯ ಮದದಾಬಂಧಮನೞಿಗುಮವಶ್ಯಂಬಂಧುಜನಾನಂದನೆನಿಪ ಮಂಗನ ಮತದಿಂ
ಸೋಡವರೆಯ ಸೊರ್ಕಿಂಗಂದಾಡುಳಿಚಂ ಮಧುಕ ಚಿತ್ರಮೂಲಮನಿಂಬಿಂದಾಡಿನ ಪಾಲೊಳ್ ಸೇವಿಸಲೋಡಿಸುಗುಂ ತದ್ವಿಷೋಗ್ರಮಂ ಗುಣನಿಳಯಾ
ತಿಲತೈಲ ಸೈಂಧವಂ ಪಿಪ್ಪಲಿ ಮರಿಚಂ ವಿಶ್ವಮೆಂಬಿವಂ ಸಮನಾಗಲ್ಕುಳಿದು ಮೆಲುತ್ತಿರೆ ತೊಲಗುಗುಮಲಸಂದೆಯ ಸೊರ್ಕು ಬುಧಲಲಾಮನ ಮತದಿಂ
ಎಳ್ಳೆಣ್ಣೆ ಮೆಣಸುಮಂ ಕುಡಿಸಲ್ಲದೊಡಂ ತಕ್ರ ಲವಣ ಧಾತ್ರೀರಸಮಂಅಲ್ಲದೊಡೆ ವಿಶ್ವತಕ್ರಮನೊಳ್ಳಿದುದಂ ಕುಡಲು ತೊಗರಿಯುದಿತಮದಘ್ನಂ
ಹುರುವಳ್ಳಿಯ ಸೊರ್ಕಿಂಗಂಹರೀತಕೀಯುಕ್ತ ಮೇಘನಾದಿಯುಮಂ ಮೇಣ್ವರಹಿಂಗು ವಿಳಂಗಮನಿರದರೆದೀಂಟಲ್ ಪಾಲೊಳುಪವಿಷಂ ತಾಂ ಧರೆಯೊಳ್
ಕುರುವಿಂದಂ ಕಟುಕತ್ರಯಮುರು ಕಡಸಿಗೆಯೆಂಬಿವಂ ಸುನಿಂಬೆಯ ರಸದಿಂದರೆದು ಕುಡಿಸಲ್ಕದಾಗಳೆಪಱಿಗುಂ ಬೆಲ್ಲದ ವಿಷಂ ವಿದಗ್ಧಾಭರಣಾ
ಗಿರಿಕರ್ಣಿಕೆ ಕಟುಕತ್ರಯಮರಿಸಿನಮುತ್ತರಣೆಯಕ್ಕಿ ಮಧುವೆಂಬಿವಱಿಂವಿರಚಿಸಿದ ಗುೞಿಗೆಯಂ ತೇದಿರದೆಚ್ಚಲ್ ನಯನದೊಳ್ ವಿಷೂಚಿಕೆ ಕಿಡುಗುಂ
ಬಿಳಿಯ ಪುನರ್ನವಿ ಮೆಣಸಿಂಗುಳದ ಗುಣಂ ಸೈಂಧವಂಗಳೆಂಬಿವನಿಂಬಿಂಪುಳಿನಿಂಬೆಯ ರಸಮರ್ದಿತಗುಳಿಗೆಯನಿಸಲಮರಿಯಿಂದಜೀರ್ಣಂ ಕಿಡುಗುಂ
ಅರಿಸಿನಮುಮನಂಬಿಲದೊಳ್ಬೆರಸೀವುದದಲ್ಲದಂದು ಮಳಯಜಮಂ ತಾಂಬೆರಸಿದ ನೀರಂ ಕುಡುವುದುಪಿರಿದೇಂ ತಂಬುಲದ ಸೊರ್ಕದಾಗಳೆ ಕಿಡುಗುಂ
ಘೞಿಲನೆ ಕೊಡುವುದು ನಿರ್ಮಳಜಳಮಂ ತಾಂಬೂಲದಳ ಮದಂಗಳ್ ಕಿಡುಗುಂಬೆಳುಗಾರ ಮಜ್ಜಿಗೆಗಳಂಬಿಳಿಯೆಲೆಯಂ ಕುಡುವುದಡಕೆಯೊಗರ ವಿಷಕ್ಕಂ
ಬೆರಸಿ ಬೆಳುಗಾರ ಬೆಣ್ಣೆಯೊಳರೆದೇಲಕ್ಕಿಯುಮನಿತ್ತೊಡೇಂ ನಿಲ್ಗುಮೆ ಪೇೞ್ಪರಿಕಿಸಲೆ ನಾಗವಳ್ಳಿಯಗರಳಂ ಕವಿಕುಲಸರೋಜಭಾಸ್ಕರಮತದಿಂ
ತಂಬುಲದ ಚೂರ್ಣದಧಿಕತೆಯಿಂ ಬಾಯ್ ನೆಱೆ ಬೆಂದು ಪುಗುೞ್ಗಳಾದೊಡದುಂ ತಾಂಪಂಬಲಿಸದೆ ಪಲವಂ ತಾಂನಂಬು ದಿಟಂ ತೈಲಮೊಂದಱಿಂದಂ ಕಿಡುಗುಂ
ಪಸುವಿನ ಪಾಲೊಳ್ ನೆಲ್ಲಿಯರಸಮಂ ರುದ್ರಾಕ್ಷೆಯಂ ಸಿತಂ ಬೆರಸೀಂಟಲ್ಕಸುವಳಿವ ಭಂಗಿ ಮಾಂಸಪ್ರಸರದ ಕಳ್ಳುಗಳ ವಿಷಮನೞಿಗುಮವಶ್ಯಂ
ಆದರದಿಂದಣಿಲೆಯನುಷ್ಣೋದಕದಿಂ ಕಡೆದ ತಕ್ರದೊಳ್ ಬೆರಸಿಯದಂಬಾದೇಂ ಕುಡಿಸುಗೆ ಮದ್ಯದೊಳಾದ ವಿಷಂ ಕಿಡುಗುಮೆಂಬಿದೇಂ ಕೇವಳಮೇ
ಸಿತಮಂ ಬೆರಸುಗೆ ಗೋವಿನಘೃತದೊಳದಂ ಮದ್ಯಪಂಗೆ ಕುಡೆ ತನ್ಮದಮಂಕ್ಷಿತಿಯೊಳ್ ಶೀಘ್ರದೊಳೞಿಗುಂಪ್ರತೀತ ಗುಣನಿಲಯರಾದ್ಯರನುಮತದಿಂದಂ
ಅರಿಸಿನಮಂ ಮೆಣಸಂ ಬೆರಸರೆದೀವುದು ಮದ್ಯ ಮಾಂಸದುರ್ಕೞಿಗುಂ ಮತ್ತರಿಸಿನಮೊಂದಂ ಸೇವಿಸೆಪಱಿಗುಂ ಶುನಿಯೆಸೆವ ದುಗ್ಧದಿಂದಹ ಗರಳಂ
ಅರಗು ನವನೀತ ಸಿತ ಮಳಯರುಹಂ ರುದ್ರಾಕ್ಷಿ ಬಾಳಸೇವ್ಯ (ವೆ)ಗಳಂ ತಂದರೆದೀಂಟಲುರಿಯ ಸೆಕೆಯಿಂಪಿರಿದು ಬೞಲ್ದಂಗೆ ಬಾಧೆ ಪಿಂಗುಗುಮಚಿರಂ
ಜೀರಗೆ ಸೇವಂತಿಗೆ ಕರ್ಪೂರಂ ಪಾಲಾಲಿಕಲ್ಲು ಭಸಿತಯುತಂ ಕರ್ಪೂರ ಶಿಲಾಧಾತುವಿವಂನೀರೊಳ್ ಕುಡೆ ಕಿಚ್ಚಿನುರಿಯ ಬೞಲಿಕೆಯೞಿಗುಂ
ಉಪಯುಕ್ತಮಪ್ಪ ತಕ್ಕವಲ ಪುಟ್ಟಯೇಲಕ್ಕಿ ತಗರ ಮಲಯಜಮಿನಿತಂಸುಪರಿಮಿತದಕ್ಕಿಗರ್ಚಿನೊಳುಪ ಸೇವಿಸೆ ಪೊಗೆಯಿನೊಗೆದ ಬೞಲಿಕೆಯೞಿಗುಂ
ಮಲಯರುಹಂ ನಿಂಬದಳಂಜಲಧರನಿನದಂ ಸಮುದ್ರಫಲಮಿನಿತಂ ತಂಡುಲಜಲದಿಂದೀಂಟಿಸೆ ಪೊಗೆಬಳಸಿ ಬೞಲ್ದಂಗೆ ಹಿತಮದಕ್ಕುಮಮೋಘಂ
ಮೊಸರ ರಸದಿಂದೆ ಮೇಣ್ ಕಿಱುಕುಸಾಲೆಯಂ ಸಿಂಧುಜಾತದಿಂದೊಂದಿಸಿ ಕಣ್ಗೆಸೆಯೆ ಪೊಗೆ ನಟ್ಟ ಕಣ್ಗಳ್ಮಸುಳಿಸಿದೊಡೆ ವಿಮಲತರಮುಮಕ್ಕುಮಮೋಘಂ
ತುಪ್ಪಮನೀಂಟುವುದಿನಿದಂದೊಪ್ಪುವುದಂ ತೊಡೆದು ನಾಸಿಕಾಂತರದೊಳಮಂತಪ್ಪುದುಮಂ ಕಣ್ಗೆಚ್ಚುವುದೊಪ್ಪದೊಳಡುವುದು ಬೞಿಕ್ಕೆ ಪೊಗೆಯಡುಗೆಗಳಂ
ಪೊಸವೆಸರ್ಗಟ್ಟೆಳನೀರ್ ಪಾಲ್ವಸುಧಾಫಲ ಪಾನಮಾದೊಡಂ ಪ್ರತ್ಯೇಕಂಪಸಿಯೆಳ್ಳುಂ ಶರ್ಕರೆಯುಂಬಿಸಿಲಿಂ ಬೆಂಡಾದವಂಗೆ ಹಿತಕರಮಕ್ಕುಂ
ನೀರುಮನಾಕಂಠಾಂತಂಪೂರಿಸಿದ ನರಂಗಮಮರ್ದುವಳ್ಳಿಯ ಬೇರಂಚಾರಿಸಿ ಕೞಿಯಿಂ ಕುಡಿಸಲ್ವಾರಿ ಮರೞ್ದೋಡಲು ನರಂ ಜೀವಿಸುಗುಂ
ಕುಂಬಾಱರ ತಿಗುರಿಯೊಳಿಟ್ಟಿಂಬಿನೊಳಂ ತಿರಿಪೆ ನೀರೊಳೞ್ದುದರದೊಳಂತುಂಬಿದ ನೀರಂ ಕಳೆ ಬೞಿಯಂ ಬಿಡದಗ್ನಿಯೊಳೆ ಕಾಸಿ ಮಾೞ್ಪುದು ಮರ್ದಂ
ನಾಗರ ಶಿವೆಯುಪ್ಪೆಂಬಿವನಾಗಳೆ ತಾಂ ಕೂಡಿ ಕುಡಿಸುಗಂತಲ್ಲದೊಡಂಬೇಗದೊಳಭಯಂ ಮಥಿತದಯೋಗದೊಳಂ ಹಿತಮದರ್ಕೆ ಕುಡುವುದು ಮರ್ದಂ
ಪೂಸುವುದು ಭಸಿತಮಂಕಾಸುವುದು ಶರೀರಮಂ ಬೆಮರ್ವನ್ನೆಗಮುಪವಾಸಮಿರಿಸುವುದು ಹಿತಮತ್ರಾಸಂ ನೀರ್ಗುಡಿದು ಬಸಿಱು ಬಾತನ ತನುವಂ
ಕ್ಷೀರಾನ್ನ ಹೆಸಱುಗಟ್ಟೆಳನೀರುಂ ಮೇಣ್ ಪೞ್ತಿಯೆಸಱು ಮೇಣ್ ಪುಣಿಸೆಯ ಪಣ್ಸಾರತರ ಸಿತಮಿವೆಯ್ದೆ ವಿಚಾರಿಸೆ ಕಳೆಗುಂ ಚರಾಚರಂಗಳ ವಿಷಮಂ
ಸಗಣದ ರಸಮಂ ಪುಣಿಸೆಯೊಳೊಗೆದಾ ಪುಳಿ ಕೈಪೆಸೊರೆ ಸುರಾಮಠ ಕುಟಜಂಬಗೆಗೊಳ್ವ ಕೈಪೆತರಂಗಳ್ಜಗದೊಳ್ ಸ್ಥಾವರ ವಿಷಂಗಳಂ ಪರಿಹರಿಕುಂ
ಧರೆಯೊಳ್ ಸಕಳ ಚರಾಚರಗರಳಕ್ಕಂ ದಿವ್ಯಯೋಗಮೊಂದನೆ ಪೇೞ್ವೆಂವರ ನೀಲಿ ಲೋಧ್ರಮಂ ಕುಡೆಹರನ ಗಳಂ ಪೊರೆದ ಗರಳಮಾದೊಡಮೞಿಗುಂ
ಏಕೆ ಬಸವೞಿದು ಬಿರ್ದಿರಲೇಕಾಂತ ವಿಷಪ್ರಹಾರಮೊಂದನೆ ಪೇೞ್ವೆಂಸೂಕರ ವಿಷ್ಠೆಯನೀಂಟಿಪುದಾ ಕಲ್ಕಮನೆಸೆದು ನಸ್ಯಮಂ ಮಾೞ್ಕೆ ಬುಧಂ
ಉಬ್ಬಿರ್ದ ವಿಷ ಮರಳ್ವೊಂದುಬ್ಬೇಗದೊಳಂ ಬೞಲ್ದುಬಿರ್ದ ನರಂಗಂಕಬ್ಬುಗಳಂ ಮೆಲಿಸುವುದಱಿನೆಬ್ಬಿಸುವುದದೊಂದೆ ರಾತ್ರಿಯೊಳ್ ಬುಧಬಂಧೂ
ಮದನಫಲ ಲೋಧ್ರಮೆಂಬಿವನುದಕದೊಳಂ ಕುಡಿಯೆ ಕುಡುವುದಂತಲ್ಲದೊಡಂಸದಮಳ ಬಜೆಯಂ ಕುಡಿಸಲ್ಕದು ತಾಂ ವಿಷಮೋಗ್ರತರ ವಿಷಾಪಹಮಕ್ಕುಂ
ವಿಷಮ ವಿಷಂಗಳ್ಗಂ ಪ್ರತಿವಿಷತಂತ್ರಮನಿಂತು ಪೇೞ್ದೆನೆನ್ನಱಿವನಿತಂಸುಶಮಂ ತಾನೆನೆ ಕಂಟಕವಿಷಘ್ನಮೆಂದೆನಿಪ ಮಂತ್ರತಂತ್ರಮನುಸಿರ್ವೆಂ
ಕಲ್ಲುಗಳೊತ್ತಿ ಕಾಲ್ಗಳುಱೆ ನೊಂದೊಡೆ ಬಾತು ಸಿಗುರ್ಗಳಿಂದೆ ನೋವುಳ್ಳೊಡೆ ಭಾನುದುಗ್ಧಮನೆ ಪೊಯ್ದು ಕರಂ ಸೊಗಸಪ್ಪ ಮಾೞ್ಕೆಯಿಂಮೆಲ್ಲನೆ ಮೆಟ್ಟೆ ಕಾಯ್ದೊಲೆಯನಾಗಳೆ ಮಾಣ್ಗುಮದರ್ಕೆ ಬಾತುದುಂಮುಳ್ಳುಸಿಗುರ್ಗಳುಂ ಪೊಱಗಮುಚ್ಚಳಿಕುಂ ವಿಭು ಮಂಗನುಕ್ತಿಯಿಂ
ಮಿಷಮುಳ್ಳಿಗೆ ಮಂತ್ರ
1 ಓನ್ನಮೋ ಭಗವತೇ ಹರನ ಮುಳ್ಳಾದೊಡೇನು, ಹರಿಯ ಮುಳ್ಳಾದೊಡೇನು ಇಂದ್ರನ ಮುಳ್ಳಾದೊಡೇನು, ಚಂದ್ರನ ಮುಳ್ಳಾದೊಡೇನು ರಾಹು ಮುಳ್ಳಾದೊಡೇನು (ವಿಷನಾಗನ ಬೆನ್ನ ಮುಳ್ಳಾದೊಡೇನು) ಕೀತಡೆ ಬಾತಡೆ ವಜ್ರದ ಕೊಡತಿಯಲು ಒಂಬತ್ತ ಒಡೆಯ ಹೊಯ್ವೆ ಓಂ ಜುಂಬಾಳು ಗುರುಪ್ರಸಾದ
2. ಓಂ ನಮೋ ಭಗವತೇ ಅಸಿಯಾಯುಷಂ ನಮಃ ಪಾಂಡವರೈವರುಂ ಸಂಧಿಸಿ ಬಂಧಿಸಿ ಬಟ್ಟೆಯಲುವೀಬಡಗ ಮುಂತಾಗಿ ಪೋಗುತ್ತೆ ಇಂದುವೆಂಬ ಹಂದಿಯಂ ಕೊಂದು, ಮುಱಿದ ಬಿಲ್ಲಂ ಸಂಧಿಸಿ ಮುಳ್ಳು ಮಂತ್ರವನಾರು ಬಲ್ಲರು ಯೆಂದರೆ ಯೆಕಾತೆವೀರನೆಂಬ ಕೂಸಂಬಲ್ಲ ಪಂಚಧಾರೆಯ ಮುಳ್ಳು ಪೊಸಧಾರೆಯ ಮುಳ್ಳು ಕಾರೆಯ ಮುಳ್ಳು ತಿವುರು ಮುಳ್ಳು ನಾಲ್ಕು ಧಾರೆಯ ಮುಳ್ಳು ವಿಷ ಶರೀರ ಶೂಲೆಯ ಕೆಡುಗುಂ ಗುರುಪ್ರಸಾದ
ಈ ಮಂತ್ರಯುಗದೊಳೊಂದಂಪ್ರೇಮದೊಳೊಂಬತ್ತು ಸೂೞ್ವರಂ ಮಂತ್ರಿಸಿ ನಿಸ್ಸೀಮಂ ಪುಣ್ಗಿಡೆ ಮರ್ದಂಭೂಮಿಯೊಳಂ ಮುಳ್ಗಳುರ್ಚಿ ಬೀೞ್ಗುಮವಶ್ಯಂ
ಕುರುಟಗೆಯ ಬೇರ್ಗಳಂ ಪುಣ್ಗರೆದಿಕ್ಕಲ್ ಮೆಯ್ಯೊಳುಡಿದ ಮುಳ್ಳುಂ ಸರಲುಂತ್ವರಿತದೊಳೆ ಬೀೞ್ಗುಮೆಂದಂಪರಮಶ್ರೀ ಪಂಚಗುರು ಪದಾಂಬುಜ ಮಧುಪಂ
ಸುರಪತಿಯಾಸೆಗೆ ಮುಖಮಾಗಿರುತುಂ ಮೆಲ್ಕಿಱಿವ ಕೋಣನೊಪ್ಪುವ ಕಿವಿಯೊಳ್ಪೊರೆದಿರ್ಪ ಕೊಗ್ಗಿಯಂ ತಂದಿರದಿಕ್ಕುಗೆ ಪುಣ್ಗೆ ಮುಳ್ಳು ಬೀೞ್ಗುಮವಶ್ಯಂ
ಇಂದನಕಂದಮನಾಜ್ಯದೊಳೊಂದಿಸಿ ಕಟ್ಟುವುದು ಪುಣ್ಣೊಳಲ್ಲದೊಡಂ ತಾನಂದಿದಿಂದ್ರವಾರುಣಿಯುಮಂತಂದಿಕ್ಕಲ್ ಮುಳ್ಳು ಸರಲ್ಗಳುಂ ಪೊಱಮಡುಗುಂ
ಮರಿಚಂ ಸುಣ್ಣಮಿವೆರಡುಮನರೆದರ್ಕಕ್ಷೀರಸಂಯುತಂ ಪುಣ್ಣೊಳಿಡಲ್ಸರಳುಂ ಮುಳ್ಳುಂ ಪೊಱಮಡುಗಿರದೆ ಶರೀರಂಗಳಿಂದಮಿದು ಕೇವಳಮೇ
ಲೊಕ್ಕಿಯ ಬಂದಣಿಗೆಯುಮಂಚಕ್ಕನೆ ಪೂಸಲ್ಲದಿರ್ದೊಡೆಕ್ಕೆಯ ಪಾಲಂಪೊಕ್ಕಿರಲೆರೆ ನಿಬಿಡಮೆನಲ್ಸಿಕ್ಕಿದ ಮುಳ್ಳಲಗು ಪಾದದಿಂ ಪೊಱಮಡುಗುಂ
ನವಣೆಯ ಪಿಟ್ಟಿನೊಳಂ ಕೊಂಡವಯವದಿಂ ನೆಗ್ಗಿಲೆಸೆವ ಕೊನರಂ ಬೆರಸಂತವನೆ ತೊಳಸುಡುವುದುಣ್ಬುದುಜವದಿಂ ಪೊಱಮಡುವುದಲಗು ಮುಳ್ಳುಂ ತನುವಿಂ
ಶರಪುಂಖಿಯ ಬೇರಂ ತಂದರೆದೆಣ್ಣೆಯೊಳಯ್ದೆ ಕೂಡಿ ಕುಡಿಸುಗೆ ಮತ್ತಂತಿರದೆ ಪೊಱಮಡುಗುಮಂಬುಗಳರಿದೆನಿಸಿದ ಮುಳ್ಗಳುಂ ಬುಧಾಂಬುಜಮಿತ್ರಾ
ನೆಗೞ್ದ ವಿಷಕಂಟಕಮುಮಂತೆಗೆದು ಪುಣ್ಗಳ್ಗೆ ನೀಲಿ ಪೞ್ತಿಯ ಕೊನರಂತೊಗರಿಯ ಕೊನರಂ ಮಗುೞ್ದಿಕ್ಕುಗೆ ಮಾಣ್ಗುಂ ಮಂಗವಿಭುವಿನನುಮತದಿಂದಂ
ಗರಳಂ ಬೆರಸಿದ ಮುಳ್ ನಡೆಸಿರೀಸಮಂಕೋಲೆ ನಿಂಬಮೀಶ್ವರಿ ಪುಲಿಗಿಲ್ಸುರವಾರುಣಿಗಳ ಸೊಪ್ಪಂನಿರಂತರಂ ಬೇದುಕಟ್ಟುಗಂತಲ್ಲದೊಡಂ
ನೆಲಗೋಣಿ ಪುಣಸೆ ಪಾಪಟೆಹುಲಿಗಿಲ್ ದೊಗ್ಗಳೆಯ ಹಱುಹೆಯೆಂಬಿವಱೆಲೆಯಂಕೞಿಯೊಳುಱೆ ಕಾಸಿ ಕಟ್ಟಲ್ತೊಲಗುಗುಮೊದಱಿಸುವ ಮುಳ್ಳ ವಿಷಮೆನಿತನಿತುಂ
ಇಂಬಿನೊಳೀವುದು ತದ್ಭೂನಿಂಬಮುಮಂ ಕೂಡಿ ತುಳಿದು ಪುಳಿಯೆನಿಸಿರ್ಪೊಳ್ಳಂಬಿಲದೊಳ್ ಬೆರಸೀವುದದುಂ ಬಿಡದೊಳಱಿಸುವ ನೋವನಾಗಳೆ ಕಿಡಿಕುಂ
ಸುರದಾಳಿ ನೀಲಿ ಯಿಶ್ವರಿಸುರವಾರುಣಿ ಮೇಣ್ ಸುಗಂಧಿ ವಿಷ ಮುಂಗುರಿಯಂಗುರು ನಾಂಗುರಿಕಂ ಬಜೆಯಿವನರೆದಿಂಬಿಂ ಪೂಸೆ ಕಂಟಕೋಗ್ರವಿಷಘ್ನಂ
ಆವಾವ ಮುಳ್ಳು ನಟ್ಟೊಡೆತಾವುಂ ಮಾಡುವುದದರ್ಕೆಯವಱವಱೆಲೆಯಂಭಾವಿಸಿ ತಂಡುಲಜಲದಿಂದೀವುದು ಮಿಕ್ಕುವುಮದೇಂ ವಿಚಾರಿಸಲಿವಱಿಂ
ವಿವಿಧ ಶಸ್ತ್ರದ ಘಾಯದೊಳ್ ಸಲಿಸಂತೆ ತುಪ್ಪದಿನಟ್ಟು ಗೋದುವೆಯ ಪಿಟ್ಟನೆ ವಿಷ್ಣುವಲ್ಲಭೆ ಹೊನ್ನಗನ್ನೆಯನಕ್ಕೆ ಸಂಭವಿಸೆ ಲಜ್ಜರಿಕಾಖ್ಯಮುಂ ಶರಪುಂಖಿ ವಾಯಸ ಜಂಘೆಯಿಂಶಿವಱೊಳಾವುದನಾದೊಡಂ ತೊಡೆಗಲ್ಲಿ ತದ್ಘೃತಪಾನದಿಂ
ಪುರುಜಿನ ವಚನಾಂಭೋರಾಶಿಯೊಳ್ ತಮ್ಮ ಧೀಮಂದರಸುಮಥನಜಾತಂ ವೈದ್ಯಶಾಸ್ತ್ರಾಮೃತಂ ತದ್ವರಮುನಿಪತಿಯಪ್ಪೀ ಪೂಜ್ಯಪಾದೋಕ್ತಿಯೊಳ್ ಸ್ಥಾವರವಿಷಹರಮಂ ಸಂಕ್ಷೇಪದಿಂದೊಪ್ಪೆ ಪೇೞ್ದೆಂ
ಗದ್ಯ. ಇದು ಸಕಲ ವಿದಮಲ ಜಿನೇಂದ್ರೋಕ್ತ ಸಿದ್ಧಾಂತ ಪಯಃಪಯೋನಿಧಿ ಪಾರಗ ಶ್ರೀ ಪೂಜ್ಯಪಾದಮುನೀಂದ್ರ ಚಾರುಚರಣಾರವಿಂದ ಗಂಧಗುಣಾನಂದಿತ ಮಾನಸಂ ಶ್ರೀಮದಖಿಲಕಲಾಗಮೋತ್ತುಂಗಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್ ಸಕಲ ಸ್ಥಾವರ ವಿಷವಿಶೇಷ ವಿಪಕ್ಷಾಧಿಕಾರಂ ದ್ವಿತಿಯಂ


