EN | KA

Menu

III

Khagendramaṇidarpaṇa

ಸಂಗ್ರಹಾಧಿಕಾರಂ

ಜಂಗಮ ವಿಷಂಗಳ್‌

ಶ್ರೀಮನ್ನಾಗ ನರಾಮರೇಂದ್ರ ನಮಿತ ಶ್ರೀಪಾದಪದ್ಮದ್ವಯಂಕಾಮೋಗ್ರಾಹಿ ವಿಷಾಪಹಾರ ವಿಲಸಧ್ಯಾನೈಕಗಮ್ಯಂ ಬುಧಕ್ಷೇಮಂ ಶಾಂತರಸಾಮೃತಾಬ್ಧಿಯನಘಂ ಸಂಸಾರದುಃಖಾಪಹಂಸೋಮಾರ್ಕದ್ಯುತಿಕೋಟಿ ಪಾರ್ಶ್ವಜಿನಪಂ ರಕ್ಷಿಕ್ಕೆ ಭವ್ಯರ್ಕಳಂ

ಪಿಂತುಸಿರ್ದೆಂ ಸ್ಥಾವರವಿಷಸಂತತಿಗುಪವಿಷಮನಿಂತು ಜಂಗಮವಿಷದೊಳ್ಶಾಂತರಸಮಯ ಜಿನೇಂದ್ರಮತಾಂತರದೊಳ್‌ ತಿಳಿದು ಪೇೞ್ವೆನೆಂಟಂಗಮುಮಂ

ವ. ಅಂತು ಗರುಡಮತದೊಳೆಂಟಂಗವಾವುವೆಂದೊಡೆ

ಈ ಭೂಲೋಕದೊಳೊಪ್ಪೆ ಸಂಗ್ರಹಮುಮಂಗನ್ಯಾಸ ರಕ್ಷಾವಿಧಿಸ್ತೋಭಂ ಸ್ತಂಭವಿಷಪ್ರಹಾರಮಧಿಕಂ ಚೋದ್ಯಾಖ್ಯಮುಂ ಮತ್ತೆ ಸರ್ಪಾಭಂ ತಾಂ ಖಟಿಕಾಘಣಿಪ್ರಥಿತದಂತೋದ್ದಂಶಮೆಂಬಿಂತಿವಂತಾ ಭವ್ಯೋತ್ತಮನಪ್ಪ ಮಂಗವಿಭುವಿಂದುಕ್ತಂಗಳೆಂಟಂಗಮುಂ

ವ. ಅದೆಂತೆಂದೊಡೆ

1 ಸಂಗ್ರಹಂ

ತನುವಿಂ ದಷ್ಟನ ಜೀವಂವಿನಷ್ಟಮೆನಲೆಯ್ದಿಪೋದುದೊ ಮೇಣ್‌ ಬಿಡದಾತನುವಿನೊಳಿರ್ದಪುದೋಯೆಂದು ನಿರೀಕ್ಷಿಪ ಭೇದಮಲ್ತೆ ಸಂಗ್ರಹಮಕ್ಕುಂ

2 ಅಂಗನ್ಯಾಸಂ

ಆ ಸರ್ಪದಷ್ಟನಂಗದೊಳೋಸರಿಸದೆಯಮೃತಬೀಜ ಮಂತ್ರಾಕ್ಷರವಿನ್ಯಾಸಂ ಮಾೞ್ದುದೆ ಅಂಗನ್ಯಾಸಮೆನಿಕ್ಕುಂ ವಿವೇಕಕುವಲಯಚಂದ್ರಾ

3 ರಕ್ಷಾವಿಧಿ 4 ಸ್ತೋಭಂ

ದಷ್ಟಪುರುಷಂಗೆ ರಕ್ಷೆಯನಿಷ್ಟಮೆನಲ್‌ ಮಾೞ್ವುದದುವೆ ರಕ್ಷೆಯೆನಿಕ್ಕುಂದಷ್ಟಂಗಾವೇಶಮುಮಂಸ್ಪಷ್ಟಮೆನಲ್‌ ತಂದು ನುಡಿಸುವುದೆ ತಾಂ ಸ್ತೋಭಂ

5 ಸ್ತಂಭಂ 6 ನಿರ್ವಿಷಂ

ವಸುಧೆಯೊಳಂ ವಿಷಮಂ ಸ್ತಂಭಿಸುವುದೆ ತಾಂ ಸ್ತಂಭಮೆಂಗೆ ಮತ್ತಾ ವಿಷಮಂದೆಸೆಗಿಡಿಪುದದುವೆ ನಿರ್ವಿಷಮೆ ಸೂನೃತಂ ಮಂಗವಿಭುವಚೋವಿಲಸನದಿಂ

7 ಚೋದ್ಯಂ 8 ಖುಷಿಕಾಫಣೀಂದ್ರಂ

ಪತ್ರಾಚ್ಛಾದನದಿಂದಂಚಿತ್ರತೆಯಂ ಮಾೞ್ದುದದುವೆ ಚೋದ್ಯಮೆನಿಕ್ಕುಂಶತ್ರುಗೆ ಲಿಖಿತ ಫಣೀಂದ್ರನಗಾತ್ರಂ ಖಟಿಕಾಫಣೀಂದ್ರನೆಂಬುದು ಧರೆಯೊಳ್‌

ಇಂತೆಂಟಧಿಕಾರಂಗಳನೆಂತುಂ ಪೆಸರ್ಗೊಂಡೆನವಱ ವಿವರಣೆಯಂ ಪೇೞ್ದಂತಿರಲಱಿವುದು ಚರವಿಷಸಂತತಿಯೊಳ್‌ ಫಣಿಯ ಕುಲಬಲಂಗಳ ತೆಱದಿಂ

ವ. ಅದೆಂತೆಂದೊಡೆ

ಅಂಗಂಗಳೊಳಗೆ ಸಂಗ್ರಹಮಿಂ ಗಣನೆಗೆ ಮುಖ್ಯಮದನೆ ಮೊದಲೊಳ್‌ ಪೇೞ್ವೆಂತುಂಗಗುಣರಱಿಯೆ ಮುಗುಳಿಯಮಂಗವಿನಿರ್ಮಿತ ಖಗೇಂದ್ರಮಣಿದರ್ಪಣದೊಳ್‌

ಸಂಗಳಿಸಿದಹಿಗಳೆಸೆವ ಕುಲಂಗಳುಮಂ ದೇಶಕಾಲಭೇದಂಗಳುಮಂತುಂಗಗುಣನಿಳಯ ಮುಗುಳಿಯಮಂಗಬುಧೋತ್ತಮನೆ ಬಲ್ಲನೀ ವಸುಮತಿಯೊಳ್‌

ಅನುಪಮನನಂತ ಕುಳಿಕಂಘನ ವಾಸುಕಿ ಶಂಖಪಾಳ ತಕ್ಷಕನಿಳೆಯೊಳ್ವಿನುತ ಮಹಾಪದ್ಮಕನೆಂದೆನಿಪಂ ಕರ್ಕೋಟಕಾಖ್ಯನುಂ ಪದ್ಮಕನುಂ

ಇಂತಷ್ಟ ವಿಧದ ಘಣಿಗಳ್ಗೆಂತುಂ ಕುಲಭೇದವಿಷವಿಶೇಷಂಗಳುಮಂಮುಂತೆನಿಸುವ ಭೂತಂಗಳದಂತಕ್ರಮ ಧಾತುಚೇಷ್ಟೆಯಂ ವಿವರಿಸುವೆಂ

ವ. ಅಷ್ಟಕುಲ ಸರ್ಪಂಗಳ ಲಕ್ಷಣಮಂ ಪೇೞ್ವೆಂ

ಸಿರದೊಳೆ ನಾಸಿಕಂಬರಮೆನಲ್‌ ಕರಮೊಪ್ಪುವ ನಾಗಚಿಹ್ನಮಂತರದೊಳೆ ಪೇೞ್ದಪೆಂ ಸಿತ ಸರೋಜಮನಂತನ ಚಿಹ್ನಮಕ್ಕುಮಕ್ಷರಮೆನೆ ಶಂಖಮಿಂತೆಸೆಗುಮೊಪ್ಪುವ ಶೇಷಶಿರೋವಿಭಾಗದೊಳ್ಪರಿಕಿಸಲುತ್ಪಲಂ ಮೆಱೆವ ವಾಸುಗಿಗೆಂದಱಿ ನೀಂ ಧರಿತ್ರಿಯೊಳ್‌

ನಿರುತಂ ಕಾರ್ಕೋಟಗಂಗಂ ತ್ರಿಣಯನಮೆಸೆಗುಂ ಸ್ವಸ್ತಿಕಂ ತಕ್ಷಕಂಗೊಪ್ಪಿರೆ ಚಂದ್ರಾರ್ಧತ್ರಿಶೂಲಂ ಸ್ಫುರಿಸಲಹಿಯದೇ ಶಂಖಪಾಳಂ ಮಹಾಪದ್ಮರೆ ರಾಜಾವರ್ತಬಿಂದುಪ್ರಥಿತಮೆನಿಕುಮಾ ಪೃಷ್ಠದೊಳ್‌ ಪದ್ಮಪೃಷ್ಠಾಂತರದೊಳ್‌ ಪಂಚಾಂಗಬಿಂದೂತ್ಕರಮೆಸೆವರುಣಪ್ರಾಯದಿಂ ತೋರ್ಕುಮಲ್ತೇ

ಅಷ್ಟನಾಗಂಗಳ ಭೂತ ಚತುಷ್ಟಯಂಗಳನ್ವಯಂ

ಧರಣಿ ಜಲ ವಹ್ನಿ ಮಾರುತವರ ಭೂತ ಚತುಷ್ಟಯಂಗಳನ್ವಯ ವಿಷಮಂಧರಿಸಿಪ್ಪೆರಡೆರಡಹಿಯುದ್ಧರವೀರ್ಯಮನಱಿಯೆ ಪೇೞ್ದಪೆಂ ಕ್ರಮದಿಂದಂ

ಹುತವಹನಂಶಕದ ವಿಷಂಸಿತವರ್ಣಮನಂತ ಕುಳಿಕರುಂ ದ್ವಿಜಕುಲದರ್ಮತಿಯುಂ ಕಣ್ಣುಂ ಕಿಡುಗುಂಕ್ಷಿತಿಯೊಳ್‌ ದಷ್ಟಂಗೆ ವಮನಮಕ್ಕುಮದಾಗಳ್‌

ಧರೆಯಂಶಕದ ವಿಷಂಗಳ್ನಿರುತಂ ಪಾರ್ಥಿವಕುಲಂಗಳರುಣಚ್ಛಾಯಂವರ ಶಂಖಪಾಳ ವಾಸುಗಿಗರಳ ಗುಣಂ ಗುರು ಜಡತ್ವ ಹಿಮಮೆನಿಸಿರ್ಕುಂ

ಮಾರುತನಂಶದ ವಿಷಮಂದಾರಯ್ವೊಡೆ ವೈಶ್ಯವಂಶ ವರ್ಣಂ ಸ್ವರ್ಣಂಚಾರುಮಹಾಂಬುಜ ತಕ್ಷಕರೋರಂತಿರೆ ಪಿಡಿಯೆ ತನುಮುಖದ್ಯುತಿ ಕಿಡುಗುಂ

ಸಲಿಲಾಂಶಕ ಗರಳಮದೊಕ್ಕಲಿಗಂ ಕೃಷ್ಣಾಭಮಲ್ತೆ ಕಾರ್ಕೋಟಕನುಂವಿಲಸತ್‌ ಪದ್ಮಂ ಪಿಡಿಯಲ್ಸಲೆ ಲಾಲಾಸ್ರಾವ ಗಳನಿರೋಧಮುಮುಕ್ಕುಂ

ಶ್ವೇತಂ ದ್ವಿಜಾತಿ ರಕ್ತೋಪೇತಂ ಕ್ಷತ್ರಿಯನೆ ವೈಶ್ಯನುಂ ಕನಕಾಭಂಭೂತಳದಸಿತಂ ಶೂದ್ರಂಮಾತೇಂ ಜಾತಿಯೊಳೆ ನಾಲ್ಕು ನಾಗಕುಲಂಗಳ್‌

ಕರಿದಱೆ ಕರ್ಕೊಟ ಪದ್ಮಂಪರಿಕಿಸೆ ಪಾಂಡುರಮುಮಕ್ಕನಂತಂ ಕುಳಿಕಂವರ ಶಂಖಪಾಳ ವಾಸುಗಿಯರುಣಮುಮಾ ಪದ್ಮ ತಕ್ಷಕಂ ಕನಕನಿಭಂ

ಗಗನಮನಾಡಿಪ ನರನಂಯುಗ ಪಾರ್ಶ್ವಮನಿಳೆಯನೀಕ್ಷಿಸುತ್ತಾಡುಗುಮೀಜಗದೊಳ್‌ ವಿಜಾತಿ ಮೊದಲಾಗಗಣ್ಯಮಾ ನಾಲ್ಕು ಜಾತಿ ಫಣಿಕುಲಮನಿಶಂ

ಕೇಳ ಯಮದೂತಿ ರಾಕ್ಷಸಿಕಾಳಿ ಕರಾಳಿಗಳೆ ನಾಲ್ಕುಮಕ್ಕುಂ ವಿಷದಂಷ್ಪ್ರಾಳಿಗಳುೞಿದಮರಕುಳವ್ಯಾಳರ್‌ ಜಯ ವಿಜಯರೆನಿಪವರ್‌ ದಿವಸಂಸ್ಥರ್‌

ಅಂತಾ ಜಯ ವಿಜಯಯುಗಕ್ಕೆಂತುಂ ವರ್ತನಮದಿಲ್ಲಮೀ ಮೇದಿನಿಯೊಳ್ಸಂತತಮಾಶೀವಿಷಮೆನಿಪಿಂತಿದು ಪೂರ್ವೋಕ್ತ ಶಾಸ್ತ್ರಸಂಪಾದನೆಯಿಂ

ಪೇೞಲಿವೇ ಲಕ್ಷಣಮಾಭೀಳ ಕ್ಷತದಿಂದಮಱಿಗೆ ಕಾಕಪದಸೃಣಿಮೇಳದ ವೃತ್ತಂ ಚಾಪಂಕಾಳೀ ಪ್ರಮುಖಂಗಳಿಗೆ ಯಥಾಕ್ರಮದಿಂದಂ

ವ. ಆ ಕಾಳೀ ಪ್ರಮುಖಂ (ಗಳ ಚಿಹ್ನಂ) ಗಳಾವುವೆಂದೊಡೆ

ಕಾಳಿ ಯಮದೂತಿಯೆಸೆವ ಕರಾಳಿ ವಲಂ ರಾಕ್ಷಸೀ ಪ್ರಮುಖ ನಾಮದೊಳಂಮೇಳಿಸಿ ನಿಲ್ಕುಂ ವಿಷದಂಷ್ಟ್ರಾಳಿಗಳಿವಱಾ ಕ್ಷತಂಗಳಕ್ಕುಂ ಕ್ರಮದಿಂ

ಅಂತಲ್ಲದಂಕುಶಾಕೃತಿದಂತಂ ತಾಳುಗೆಯ ಮಧ್ಯದಲ್ಲಿರ್ಪುದು ಕಾಲಂ ತಾನದು ಪೆಸರಿಂ ಸರ್ಪಾಂತಕನೆಂಬಂಗಸಾಧ್ಯಮಂತದಱ ವಿಷಂ

ಓರೊಂದಕ್ಕೊಂದೆ ಪಲ್ಲಾಗಿರಲಧಿಕ ರಕ್ತಾಭಮಾ ಪಲ್‌ ಕರಂ ತಾಂಘೋರಂ ತಾನಲ್ಲದೊಂದೊಂದೆನಿಪ ಬೆಮರ ಬಿಂದೂದ್ಗಮಂ ನೀಲವರ್ಣಾಕಾರಂ ಮತ್ತೊಂದು ಜಂಭೀರದ ಫಲಸದೃಶಂ ಚಕ್ರಮೆಂತಿರ್ಪುದಂತಾಕಾರಂ ಕೇಳ್‌ ಮೂಱಱಿಂ ಕರ್ಚಿದೊಡದನಿೞಿಪಲ್‌ ವೈನತೇಯಂಗಸಾಧ್ಯಂ

ಕುಳಿಕಂ ವಾಸುಗಿ ತಕ್ಷಕನಿಳೆಯೊಳ್‌ ಕರ್ಕೋಟ ಪದ್ಮಮಾ ಪದ್ಮಕನುಂಸಲೆ ಶಂಖಪಾಳನೆಂಬಿವುಕೊಳುಗುಂ ರವಿವಾರಮಾದಿಯಾಗಿರೆ ಕ್ರಮದಿಂ

ಆದಿಯ ದಿನದೊಳನಂತಂಬಾಧಿಪುದು ಪದಾಗ್ರಮಂ ನಿದಾನಿಸಲದು ತತ್ಪಾದಾಗ್ರದೊಳಿರ್ಕುಂ ವಿಷಮಾದರದಿಂದಱಿಗೆ ಮಂಗವಿಭುವಿನ ಮತದಿಂ

ಶಶಿವಾರದಂದು ವಾಸುಗಿಯೆಸೆವಷ್ಟಮ ಯಾಮದಲ್ಲಿ ಸಿರಮಂ ಪಿಡಿಗುಂಪ್ರಸರಂಬೆತ್ತ ವಿಷಂ ತಾನಸಹ್ಯಮಿರ್ಪೆಡೆಯದಲ್ತೆ ಜಾನುಸ್ಥಾನಂ

ಭೂಮಿಜನೊಳ್‌ ತಕ್ಷಕನಕ್ಷೇಮಕರಂ ಪಿಡಿಯೆ ಬಲದ ಮುಂಗೆಯ್ಯೆಡೆಯಂಯಾಮಂ ಸಾರ್ಧಮದಾಗಲ್ಕೇಮಾತೋ ಕಟಿಯೊಳಿರ್ಕುಮಾ ವಿಷಮುದಿತಂ

ಬುಧನೊಳ್‌ ಕಾರ್ಕೋಟಕನುಂಕ್ಷುಧಾತುರಂ ಬಂದು ಪಿಡುವುದುಂ ಕಿಱುದೊಡೆಯಂನಿಧನವದಾಗಿಸುವ ಗುಣವಿಧಿಯಿಂದಂ ನಾಭಿಯಲ್ಲಿ ತದ್ವಿಷಮಿರ್ಕುಂ

ಗುರುದಿನದೊಳ್‌ ಪದ್ಮಕನುಂಭರದಿಂ ಬಂದೆರಡು ಜಾವವರೆಗಂ ಪಿಡಿಗುಂನಿರುತಂ ದಕ್ಷಿಣ ಜಂಘೆಯನುರು ವಿಷಮಿರ್ಕುಂ ಶಿರಃಪ್ರದೇಶದೊಳೆ ದಿಟಂ

ಆಪತ್ಕರನೆಂಬೊಂದು ಮಹಾಪದ್ಮಂ ಶುಕ್ರವಾರದೊಳ್‌ ಬೆನ್ನಂ ತಾಂಕೋಪದೆ ಯಾಮತ್ರಯದೊಳ್ತಾಪಿಸುಗುಂ ಪಿಡಿಯೆ ತಲೆಯೊಳತಿವಿಷಮಿರ್ಕುಂ

ಮಂದನೊಳೆ ಶಂಖಪಾಳಂಸಂದೆಯಮೇಂ ಜಾವದಲ್ಲಿ ಹಗಱಂ ಪಿಡಿಗುಂಬಂದಿರ್ಕುಂ ಕಣ್ಣೊಳ್‌ ವಿಷಮೆಂದಱಿ ನೀಂ ಮಂಗರಾಜನನುಮತದಿಂದಂ

ಅಱುವತ್ತು ಮತ್ತೆ ತೊಂಬತ್ತಱಿಕೆಯದೈವತ್ತು ಮತ್ತೆ ನಾಲ್ವತ್ತಕ್ಕುಂನೆಱೆಯೆಂಬತ್ತೆಪ್ಪತ್ತನೆನಿಱಿಗೆಯ ಮೂವತ್ತುಮಿವಱ ಘಳಿಗೆಗಳಕ್ಕುಂ

ಇವಱ ವಿಪರೀತದಿಂದಂತವು ಪಲವುಂ ಕ್ಷುದ್ರಜಾತಿಸಂಕರದಿಂದಪ್ಪುವು ಸರ್ಪಂಗಳವಲ್ಲದೆವಿವರಣೆಯೇಂ ತತ್ಪ್ರಸಿದ್ಧ ಜಾತಿಗಳಲ್ಲಂ

ವ ಇನ್ನಾ ಸರ್ಪಂಗಳುಂ ಪಿಡಿವುದರ್ಕೆ ಕಾರಣ ವಿಶೇಷಂಗಳಂ ಪೇೞ್ವೆನದೆಂತೊಂದೊಡೆ

ಸುರತಾರ್ಥಿಕ್ಷೋಭದಿಂ ಪಿಂಗುವುದತಿವಿಷದರ್ಪಿಷ್ಠನುನ್ಮತ್ತನಾಹಾರರತಂ ಸ್ವಸ್ಥಾನ ಲುಬ್ಧಂ ಕ್ಷುಧಿತನಧಿಕಭೀತಂ ನರಂ ದಾಂಟೆ ತನ್ನಂಪಿರಿದುಂ ಶಂಕಾಕುಳಂ ತಾನೆನಿಪ ನವವಿಧಂ ವೈರಸಂಬಂಧಮಕ್ಕುಂಧರೆಯೊಳ್‌ ನಿಷ್ಕಾರಣಂ ಬಂದಡಸಿ ಪಿಡಿದೊಡಂ ಕಾಲಸರ್ಪಾಖ್ಯನಕ್ಕುಂ

ವ. ಮತ್ತಂ ವಿಷಧರಂಗಳಿರ್ದ ಸ್ಥಾನವಿಶೇಷತೆಯಿನಸಾಧ್ಯಮಪ್ಪ ವಿಷಮಂ ಪೇೞ್ವೆನದೆಂತೆನೆ

ಒಡಗೆಱೆ ಜೀರ್ಣಕೂಪದೆಡೆ ಬಿೞ್ದ ಸುರಾಲಯ ನೀರಸದ್ರುಮಂಸುಡುವೆಡೆಗಾಡು ಪುತ್ತಿನೊಳಕ್ಷಕುಜಂ ನಿಧಿದಾಣ ಕೋಟರಂಕಡೆಸಿಡಿದೊಂದೆ ಭೂಜವಟಕಾನನಮೊಪ್ಪುವ ವೇಣುಕುಂಜವೆಂಬೆಡೆಗಳೊಳಿರ್ದ ಪಾವು ಕೊಳಲಪ್ಪುದಸಾಧ್ಯಮಿಳಾತಳಾಗ್ರದೊಳ್‌

ವ. ಇನ್ನಿಂತಪ್ಪಂಗದೊಳ್‌ ವಿಷಂ ಸಂಕ್ರಮಿಸಲೆತ್ತಲರಿದೆಂಬಾ ಸ್ಥಾನಮಂ ಪೇೞ್ವೆಂ

ಪೆಡತಲೆ ಕಣ್ನೊಸಲ್‌ ಕರತಳದ್ವಿತಯಂ ಪಣೆಗಣ್‌ ಕದಂಪು ಕಾಲಡಿದುದಿ ಮೂಗು ನಾಭಿ ಹೃದಯಂ ಚಿಬುಕಂ ತಲೆ ರೋಮದಂಚು ನಾಣೆಡೆ ಕುಚಮಧ್ಯಮುಂ ಪದಱು ಪುರ್ವುಗಳೆಂಬಿವುಮಂ ಮಹಾಹಿ ಕೊಂಡೊಡೆ ಗರುಡಂಗಮೆತ್ತಲರಿದೆಂದೊಡೆ ಪೇೞುೞಿದರ್ಗೆ ಸಾಧ್ಯಮೇ

ನಡುನೆತ್ತಿಯುದರ ದೇಹದೊಳೆಡೆಯೆಡೆಯಣ ಸಂಧಿ ಕೊಡಲೆ ನಾಲಗೆ ಗುದಮುಂನಡುಬೆನ್ನಂಬಿವನೀಕ್ಷಿಸಿಪಿಡಿಯಲ್ಕರಿದದಱ ಗರಳಮಾ ಖಗಪತಿಗಂ

ವ ಇನ್ನಾ ಶುಭ [ಕಾಲ] ತಿಥಿ ವಾರ ನಕ್ಷತ್ರ ಯೋಗ ಕರಣಂಗಳಂ ಪೇೞ್ವೆನದೆಂತೆಂದೊಡೆ

ಅಷ್ಟಮಿ ನವಮಿ ಚತುರ್ದಶಿಕಷ್ಟದಮಾವಾಸ್ಯೆ ಪೂರ್ಣೆ ಪಂಚಮಿ ರಿಕ್ತಾಸ್ಪಷ್ಟಮೆನಿಸಿರ್ದ ಕೃಷ್ಣೋತ್ಕೃಷ್ಟದ ತಿಥಿಯಾಗಲಂತದಶುಭಮೆನಿಕ್ಕುಂ

ಇನವಾರ ಭೌಮವಾರಂಶನಿವಾರಂ ಶುಕ್ರವಾರಮೆಂಬಿವಱೊಳ್‌ ಭೋರನೆ ಬಂದು ಪಿಡಿಯೆ ಸರ್ಪಂವಿನತಾಸುತನೆಂಬವಂಗೆ ವಿಷಮರಿದಕ್ಕುಂ

ಭರಣಿಯೊಳಾಶ್ಲೇಷೆಯೊಳಂಸುರಪತಿಯೊಳ್‌ ಪಾವು ಪಿಡಿಯೆ ತದ್ವಿಷಮರಿದಾಗರುಡಂಗೆಂದೆನೆ ಮಿಕ್ಕಿನಪುರುಷರ ಪವಣೇನೊ ಮರಣಮಕ್ಕುಮವಶ್ಯಂ

ಶ್ರವಣ ವಿಶಾಖೆ ಚಿತ್ತೆ ಮಖೆ ಕೃತ್ತಿಗೆ ರೇವತಿಮೂಲ ಪುಷ್ಯಮಿಂತವಗತ ಪೂರ್ವೆ ಮೂಱೆಸೆವ ಮಧ್ಯದಿನಂ ದಿವಸಾಂತ್ಯರಾತ್ರಿಯೊಳ್ಪವಣಿಸಿದರ್ಧಮಾಗಲಹ ವೇಳೆ ನಿಶಾಂತಮೆನಿಪೃ ಕಾಲಮೆಂಬಿವಱೊಳಹಿವ್ರಜಂ ಕೊಳಲಸಾಧ್ಯಮದೆಂದಱಿ ನೀಂ ಬುಧೋತ್ತಮಾ

ನಂದೆಯೊಳಂ ಸಂಕ್ರಾಂತಿಯೊಳಂದಾ ಗ್ರಹಣಂಗಳೊಳ್‌ ವ್ಯತೀಪಾತದೊಳಂಬಂದಾ ವೈಧೃತಿಯೊಳ್‌ ಫಣಿಸಂದಿಸೆ ಪರಿಹರಿಸಲರಿದು ತಾರ್ಕ್ಷ್ಯವರಂಗಂ

ರವಿವಾರ ಹಸ್ತ ಪಂಚಮಿಶ್ರವಣಂ ಶನಿವಾರ ಷಷ್ಠಿ ಕುಜನಶ್ವಿನಿಯೆಂಬಿವಱೊಳ್‌ ಸಪ್ತಮಿ ಪುಷ್ಯಂನವಮಿಯೊಳಂ ಗುರುವುಮೊದವಿರಲ್ಕತಿಕಷ್ಟಂ

ಶನಿ ರೋಹಿಣಿಯೇಕಾದಶಿಯನುರಾಧೆ ಬುಧಾಷ್ಟಮಿತ್ರಯಂಗಳುಮೋವಲ್ಕನುನಯದೆ ದಶಮಿ ರೇವತಿಧನುಜೇಜ್ಯರ್‌ ಕೂಡಿದಲ್ಲಿಯಹಿ ಕೊಳಲಶುಭಂ

ಯಮಘಂಟಮರ್ಧಯಾಮಂಸಮನಿಸೆ ತಿಥಿ ವಾರ ಸಂಕ್ರಮಂಗಳಿವಶಭಂಭ್ರಮರಹಿತನಾಗಿ ಭಾವಿಸಿಯೆ ಮಾೞ್ಪುದಶುಭಂಗಳಂ ವಿವರ್ಜಿಸಿ ಮರ್ದಂ

ವ ದೂತ ಲಕ್ಷಣಮಂ ಪೇೞ್ವೆಂ

ದೂತನ ಚೇಷ್ಟೆಗಳಂ ನಾನಾ ತೆಱದಿಂದಱಿದು ಬೞಿಕೆ ಮಾೞ್ಪುದು ವಿದ್ಯಾಪೂತ ವಿಭೇಷಜ ಮಂತ್ರವ್ರಾತಮುಮಂ ಪುಣ್ಯಕೀರ್ತಿಭಾಜನನಪ್ಪಂ

ಸುರಪ ಸುರಾರಿಯಬ್ಧಿಪತಿಯಾ ಧನದೇಶ್ವರರಿರ್ಪ ದಿಕ್ಕಿನೊಳ್ಬರೆ ಶುಭಮಗ್ನಿ ದಂಡಧರ ಮಾರುತ ಮಾರವಿರೋಧಿಯಾಶೆಯೊಳ್ಬರಲತಿಕಷ್ಟಮಿಷ್ಟಫಲಮಾಗದು ಪೋಗದಿರೆಂಗೆ ದೂತನಂಪರಿವಿಡಿಯಿಂ ನಿರೀಕ್ಷಿಸಿ ಶುಭಾಶುಭಮಂ ಧರೆಗೆಯ್ದೆ ಪೇೞ ನೀಂ

ಫಲ ಪುಷ್ಪಾಂಕಿತ ಹಸ್ತ ದಿವ್ಯವಸನಂ ತಾಂಬೂಲರಾಗಂ ಮಹಾಕುಲಜಂ ಸದ್ಗುಣಭೂಷಣಂ ಸುಲಲಿತಂ ಶ್ರೀಖಂಡಮಾಲ್ಯಾಂಕನಿಶ್ಚಲನಾಪೂರ್ಣ ಸುಲಕ್ಷಣಾಂಗನಮಲಂ ಸದ್ಭಾವದಿಂ ಬಂದವಂವಿಲಸದ್ವಾಕ್ಪಟುವಾಗೆ ದೂತನುಪಮಾತೀತಂ ಶುಭಂ ಧಾತ್ರಿಯೊಳ್‌

ತೃಣಹಸ್ತಂ ಕಾಷ್ಠಹಸ್ತಂ ಸ್ಖಲಿತ ನಿಜಪದಂ ಸಾಶ್ರುನೇತ್ರಂ ಕುನೇತ್ರಂಕುಣಪಾಂಗಂ ಜೀರ್ಣವಸ್ತ್ರಂ ಭಯಚಕಿತಕರಂ ಕಾಂತಹಸ್ತಂ ಸರಾವೋಲ್ಬಣ ವಾಕ್ಯದ್ವಂದ್ವಯುಕ್ತಂ ಬಧಿರನಸಿತ ರಕ್ತಾಭಮಾಲ್ಯಾಂಗ ದೀನಂಭಣಿತಾಶೇಷಮಯಂ ಬಂದಿರಲವನೆ ಕೃತಾಂತಾನುಗಂ ತಾನೆನಿಕ್ಕುಂ

ಒಟ್ಟೆ ಲುಲಾಯ ಗರ್ದಭರಥಂಗಳನೇಱಿದವಂ ಕುಲಾನ್ವಿತಂಬಿಟ್ಟ ಶಿರೋರುಹಂಗಳ ನರಂ ಕರ ಪಲ್ಲಿಲಿವಾಯನಪ್ಪವಂನಟ್ಟ ವಿಲೋಚನಂಗಳೊಳೆ ಮೇಗನೆ ನೋಡುತಮಿರ್ಪ ಮಾನಿಸಂತೊಟ್ಟನೆ ಬಂದು ಪೇೞಲಶುಭಂ ಗತಮಾನಸನನ್ಯವಂಶಜಂ

ಸುಯ್ಯದೆ ಪೊಯ್ಯದಂದು ನೆಲನಂ ತಲೆಯಿಂದೊಡೆಹಾಯ್ದು ಭೂಮಿಯೊಳ್ಮೆಯ್ಯನುರುಳ್ಚದುಟ್ಟು ಹೊದೆದಿರ್ದ ಸುವಸ್ತ್ರದ ನೂಲನಾಕ್ಷಣಂಕೆಯ್ಯೊಳೆ ಪೀಡಿಸುತ್ತಿರದೆಯಂಗುಲಿಯಂ ಮಿಡಿಯುತ್ತೆ ಮೇಗನಂದೊಯ್ಯನೆ ನೋಡದಿರ್ಪಧಟ ದೂತನವಂ ಶುಭದೂತನಲ್ಲವೇ

ಕೆಯ್ಯೊಳೆ ಕಾಷ್ಠಮಂ ಮುಱಿಯುತಾಗುಳಿಸುತ್ತತಿರೌದ್ರನಾಗಿರುತ್ತೊಯ್ಯನೆ ಸುಯ್ಯುತುಂ ನೆಲನನೇತಱೊಳಂ ಪೊಡೆಯುತ್ತೆ ಮತ್ತಮಾರಯ್ಯೆ ಕರಂಗಳಂ ಪಿಡಿಯುತುಂ ಬಲೆ ಬಳ್ಳಿಯನಾಯುಧಂಗಳಂಮೆಯ್ಯನುರುಳ್ಚುತುಂ ಧರೆಯೊಳಿರ್ಪೊಡವಂ ಯಮದೂತನಲ್ಲವೇ

ಅಸಿತಾಂಬರದರುಣಾಂಬರಭಸಿತಾಂಗಂ ಕೃಷ್ಣನಂಗವಿಕಳಂ ಕುಬ್ಜಂಕಿಸುಗುಳಿಗಂ ಕೃಶ ಸರುಜಂಬೆಸಗೊಂಡೊಡಮುಸಿರದಿರ್ದೊಡಂ ತಾಂ ಕಷ್ಟಂ

ತಲೆಯಂ ತೂಗುತ್ತೆ ಮೇಗಂ ದೆಸೆಗಳನೆ ಕರಂ ನೋೞ್ಪವಂ ಕೇಶಮಂ ಕೆಯ್ಯೊಳೆ ನೀವುತ್ತೆಣ್ಣೆಯಂ ಮಂಡೆಯೊಳೊರಸಿದವಂ ಮುಕ್ತಕೇಶಂ ನಖಾಗ್ರಂಗಳೊಳಂ ತತ್ಪಾಣಿಶಾಖಾಗ್ರದೊಳೆಳಸುವವಂ ಭಂಡಿಯಂ ಕೞ್ತೆ ಕೋಣಂಗಳುಮಂ ತಾನೇಱಿದಾತಂ ಬರಲವನೆ ವಲಂ ಕಾಲದೂತೋಪಮಾನಂ

ಮೃದುಮಧುರ ವಾಕ್ಯನಪ್ಪಂಸದಯಂ ಗಂಭೀರನಾದ ವಚನವಿಭೇದಂಪದನಱಿದು ಪೇೞ್ದನಪ್ಪಂಪದೆಪಿಂದಂ ಪಡೆವನಲ್ತೆಯಭಿಮತಫಲಮಂ

ದೂತಂ ವಾರ್ತೆಯನಱಿಪಿರ್ದಾತನುಮಾಕುಳತೆಯಿಂದಿರಲ್‌ ಮೊಗಮಂ ನಿರ್ಭೀತಂ ನೋಡದಿರಲ್ಕಂಮಾತೇಂ ಸಟಿಯೆಂಬುದಾತನೆಂಬುದನಱೆವಂ

ಪನ್ನಗದಷ್ಟನಾದನೆನುತಂದುಸಿರ್ದೊಪ್ಪುವ ದೂತನಲ್ಲಿ ಮೇಗನ್ನಗುತೀಕ್ಷಿಸುತ್ತಿರಲದುಂ ಪುಸಿಯೆಂದಱಿಯಲ್ಲದಂದು ದಷ್ಟಂ ನಿಜವಾರ್ತೆಯೆಂದು ನುಡಿದಾತನನೀಕ್ಷಿಸಲಾವ ತಾಣಮಂತನ್ನ ಕರಂಗಳಿಂದೊಸೆದು ಮುಟ್ಟಿದೊಡಾಯೆಡೆಯೆಂಗೆ ಬಲ್ಲಹಂ

ಮೊಗಮಂ ಮುಟ್ಟಲೆ ವಿಪ್ರನಂಗೆ ಭುಜಮಂ ತಾಂ ಮುಟ್ಟೆಯುಂ ಕ್ಷತ್ರಿಯಂನೆಗೞ್ದೂರುದ್ವಿತಯಂಗಳೊಳ್‌ ಸ್ಪರುಶಮಾಗಲ್‌ ವೈಶ್ಯವಂಶಂ ತದಂಘ್ರಿಗಳಂ ಬೆಟ್ಟಿನೊಳಂದು ಘರ್ಷಿಸೆ ವಲಂ ಶೂದ್ರಾದಿಯೆಂದಿಭ್ಯರೊಳ್ಬಗೆಯುಳ್ಳಂ ನೆಱೆ ನೋಡಿ ಪೇೞ್ಗೆ ವಿಲಸದ್ದೂತಾಂಗಮಂ ಮಾಂತ್ರಿಕಂ

ವ. ಇನ್ನಾ ಸ್ವರಮಂ ಪೇೞ್ವೆಂ

ನಿಲೆ ದೂತಂ ಮುಂದೆ ಮೇಣ್‌ ವಾಮದೊಳತಿಶುಭದಂ ಚಂದ್ರನಾಗಲ್ಕೆ ಮತ್ತಂಬಲದೊಳ್‌ ಮೇಣ್‌ ಪಿಂತೆ ನಿಂದಂದತಿ ಶುಭಫಲದಂ ಸೂರ್ಯನಾಗಲ್ಕೆ ಮತ್ತಂಬಲನುಂ ಪಿಂತಾಗೆ ಚಂದ್ರಂ ಸಮನಿಸಲೆಡನುಂ ಮುಂತುಮಾಗಲ್ಕೆ ಸೂರ್ಯಂನಿಲೆ ಪೊಲ್ಲಂ ಸೋಮಸೂರ್ಯರ್‌ ನಿಲೆ ಸತಿ ಪುರುಷದ್ವಂದ್ವದಿಂ ಷಂಡನಕ್ಕುಂ

ದೂತಂ ಪೇೞ್ವಕ್ಕರಂಗಳ್‌ ಸಮವೆನಿಸೆ ಸರಂ ಚಂದ್ರನಾಗಲ್ಕೆಯುಂ ಮೇಣ್ದೂತಂ ಪೇೞ್ವಕ್ಕರಂಗಳ್‌ ವಿಷಮವೆನೆ ಸರಂ ಸೂರ್ಯನಾಗಲ್ಕೆ ಬಾೞ್ಗುಂದೂತಂ ಪೇೞ್ದೋಜೆಯಿಂದಿಂತಿವಱಿತರದೊಳಂ ದಷ್ಟನಂ ಬಿಟ್ಟು ಪೋಕುಂಚೈತನ್ಯಂ ತಾನಿದೆಂಬೀ ಕ್ರಮಮನಱಿಪಿದಂ ಮಂಗವೈರೀಭಸಿಂಹಂ

ಸಸಿಯಕ್ಕೆ ಭಾನುವಕ್ಕಿಂತುಸಿರ್ಗಳೊಳಾರಯ್ದು ನೋಡಿ ದೂತಂ ಬಂದಾದೆಸೆಯೊಳ್‌ ಪೇೞಲ್‌ ಶುಭದಂಪುಸಿ ಜೀವಿಸಲರಿಯನೆಂಗೆ ಶೂನ್ಯಾಶೆಯೊಳಂ

ಗಗನ ಜಳ ಭೂಮಿ ಶಿಖಿ ವಾಯುಗಳುಂ ನಡುವಡಿಯೆಡಂಗಳುಪರಿಮಮೆಂತುಂಸೊಗಯಿಪ ಬಲವೆನೆ ತತ್ವಂಮುಗುಳಿಯ ವಿಭು ಮಂಗರಾಜನನುಮತದಿಂದಂ

ನಡೆವೊಡೆ ನಿಲ್ವೊಡೆಯೊಳಗುಮನಡರ್ವೊಡೆ ಸುಯ್‌ ರೇಚಕಂ ವಲಂ ಕುಂಭಕಮುಂಪೊಡವಿಯೊಳೆ ಪೂರಕಂಗಳ್ಬೆಡಂಗುವೆತ್ತಿರ್ದ ಮನುಕುಲಾಂಬರಭಾನೂ

ಅಮೃತದೊಳೆ ಪೂರಕಂ ತಾಂಸಮನಿಸೆ ಧರೆ ಜಲಮಿವಾಗೆ ಶುಭದಮೆನಿಕ್ಕುಂದಮಿಯಿಸಿ ವಿರಚಿಸೆ ಶಿಖಿಯುಂಸಮೀರನುಂ ನಭವದಾಗೆಯಶುಭಮೆನಿಕ್ಕುಂ

ಅತಿರೋಗಾಹಿಗ್ರಹಪೀಡಿತ ಕೆಟ್ಟೆನೇನೊ ಪದನೆಂಬೆಡೆಯೊಳಮುದ್ಧತರಾಯಮಾಗೆ ಬಾೞ್ಗುಂಗತಜೀವಿತನಪ್ಪನೆಂಗೆ ಬೀಯದೊಳಾತಂ

ದಿನಕರನೊಳಾಯಮಾಗಲ್ಘನಮೆನಿಪಚ್ಚಿಗಮದಕ್ಕುಮಾತಂಗಾಯುಷ್ಯನಿಬಂಧಂ ಶಶಿ ದೊರೆಕೊಳಲನೂನಮೆನಿಸಿರ್ಕುಮೆಂತುಮಶುಭಂ ಬೀಯಂ

ಸಸಿ ದಿನಪರೊಡನೆ ತಡೆಯಲ್ವಸುಧೆಯೊಳಂ ಕಾರ್ಯಹಾನಿಯಕ್ಕುಮವಶ್ಯಂಸಸಿ ಶುಭಕಾರ್ಯಕ್ಕುಚಿತಮೆಯಶುಭದ ಕಾರ್ಯಕ್ಕೆ ಪೊಲ್ಲ ಮಂಗನ ಮತದಿಂ

ಪೂರಕದಿಂದಂ ಬಾೞ್ಗುಂಸೂರಂ ಮೇಣ್‌ ಚಂದ್ರನಾಗೆ ರೇಚಕದಿಂದಂಧಾರಿಣಿಯೊಳುೞಿಯನಿದೆ ತತ್ಸಾರಂ ತಿಳಿದಿಂ ಬೞಿಕ್ಕೆ ಮಾಡುಗೆ ಮರ್ದಂ

ವ. ಇನ್ನಾ ಪ್ರಶ್ನೆಯಶುಭಾಶುಭಂಗಳಂ ಪೇೞ್ವೆಂ

ದೂತಂ ಪೇೞ್ದಕ್ಕರಸಂಘಾತಮನೆ ದ್ವಿಗುಣಿಸಿಟ್ಟು ಭಾಗಿಸು ಶಿಖಿಯಿಂದೇತೊದಳೊ ಪಱಿಯೆ ಸಾಗುಂಮಾತೇನೊಂದೆರಡು ಮಿಕ್ಕೊಡಾತಂ ಬಾೞ್ಗುಂ

ವ ಇನ್ನಾ ದಷ್ಟನ ನಾಮಾಕ್ಷರದಿಂದೆ ಸಾಧ್ಯಾಸಾಧ್ಯಮಂ ಪೇೞ್ವೆಂ, ಅದೆಂತೆಂದೊಡೆ

ಎಸೆವಾ ಮಾಹೇಂದ್ರಮುಂ ವಾರುಣಮುಮೆನಿಪ ನಾಮಾಕ್ಷರಂಗಳ್‌ ಜೀವಿಸುಗುಂ ದಷ್ಟಂ ತದೀಯಾಕ್ಷರಮನಿಲ ಹುತಾಶಂಗಳಾಗಲ್ಕೆ ಮತ್ತಂವಸುಗರ್ಭಂ ತಾನೆ ರಕ್ಷಾವಿಧಿಗಳನೆ ವಲಂ ಮಾಡೆಯುಂ ಸಾಗುಮೆಂದೀವಸುಧಾಖ್ಯಾತರ್ಗೆ ಪೇೞ್ದಂ ಸಕಲ ಗುಣ ಮಹೋತ್ತುಂಗನೀ ಮಂಗರಾಜಂ

ಸ್ವರದೊಳಮೈ ಔಯೆಂಬೀಯೆರಡುಂ ವ್ಯಂಜನದೊಳೊಪ್ಪುವೆತ್ತಕ್ಕರಮುಂಯ ರ ಲ ವಮುಂ ಮಾಹೇಂದ್ರಂಧರೆಯೊಳಮಂ ಅಃ ಸ್ವರಂಗಳಪ್ಪತಿಗಕ್ಕುಂ

ಎಸೆವಾ ಸ್ವರಂಗಳಾಱುಂಪೆಸರ್ವೆತ್ತೂಷ್ಮಂಗಳಪ್ಪ ಶ ಷ ಸ ಹಮುಂ ಭಾವಿಸಲಿವು ವಾರುಣಮಕ್ಕುಂವಸುಧಾಚಕ್ರೈಕಮಾನ್ಯನನುಮತದಿಂದಂ

ಸರದೊಳ್‌ ಮಿಕಿರ್ದ ಹ್ರಸ್ವಾಕ್ಷರಮೆನಿತನಿತುಂ ಮಾರುತಂ ತಾನೆ ಮತ್ತಾಸ್ವರದೊಳ್‌ ನೋೞ್ಪಂದು ದೀರ್ಘಾಕ್ಷರಕುಲಮನಿತುಂ ಪಾವಕೋದ್ಭೂತಮಕ್ಕುಂಧರೆಯೊಳ್‌ ತಾಂ ಸರ್ಪದಷ್ಟಂಗಿವೆ ಪೆಸರೆನಿಸಲ್‌ ಜೀವಿಸಲ್ಕಾರ್ಪನಲ್ತೆಂದಱಿದತ್ಯಂತಂ ವಲಂ ಪೇೞ್ದರಿಗಿದುವೆ ದಿಟಂ ಮಂಗರಾಜೋಕ್ತಿಯಿಂದಂ

ವ. ಅದೆಂತೆಂದೊಡೆ ಪದಿನಾಲ್ಕು ಸ್ವರಾಕ್ಷರಮಧ್ಯದೊಳ್‌ ಐ ಔ ಎಂಬೀ ಸ್ವರದ್ವಯಮುಂ ಕಕಾರಾದಿ

ವ್ಯಂಜನಂಗಳುಂ [ಯರಲವಂಗಳುಂ] ಮಾಹೇಂದ್ರನಾಮಾಕ್ಷರಂಗಳಕ್ಕುಂ. ಮತ್ತಮಲ್ಲಿ ಅಂ ಅಃ ಎಂಬೆರಡುಂ

[ಸ್ವರಂಗಳಾಱುಂ] ಊಷ್ಮಂಗಳೆಂಬ ಸಂಜ್ಞೆಯುಳ್ಳ ಶ ಷ ಸ ಹ ಎಂಬೀ ನಾಲ್ಕುಂ ವಾರುಣನಾಮದಿನಿರ್ಕುಂ.

ಮಿಕ್ಕ ಸ್ವರಂಗಳೊಳ್‌ ಹ್ರಸ್ವಾಕ್ಷರಂಗಳೆಲ್ಲಂ ಮಾರುತಂಗಳ್‌. ಅವಾವುವೆಂದಡೆ ಅ ಇ ಉ ಎಂಬಿವು.

ದೀರ್ಘ ಸ್ವರಂಗಳೆಲ್ಲಂ ಪಾವಕ ಸಂಭವಂಗಳಕ್ಕುಂ. ಅವಾವುವೆಂದೊಡೆ ಆ ಈ ಊ ಎಂಬಿವು.

ಅಲ್ಲಿಂ ಮುಂ ಪೇೞ್ದ ಮಹೇಂದ್ರವಾರುಣಂಗಳ್‌ ದಷ್ಟನಾಮದೊಳ್‌ ಬರೆ ಶುಭಂಗಳ್‌. ಉೞಿದ ಮರು

ದ್ವಹ್ನಿಗಳ್‌ ಅಶುಭಂಗಳೆಂದಱಿವುದು.

ಆರ್ಗಮಸಾಧ್ಯಂ ಬಗೆಯಲ್ವರ್ಗಾದಿಯ ಯುಗಯುಗಂಗಳಂತವು ಪತ್ತುಂವರ್ಗಿಸೆ ಮಾರುತಮಕ್ಕುಂದುರ್ಗಮ ವಹ್ನಿಗಳೆ ಮಿಕ್ಕ ಪಂಚದಶಂಗಳ್‌

ವ. ವರ್ಗಾಕ್ಷರಂಗಳ ಮೊದಲೆರಡೆರಡಕ್ಷರಂಗಳ್‌ ಕೂಡೆ ಐದು ವರ್ಗಕ್ಕಂ ಪತ್ತಕ್ಷರಂ; ಅವು

ಮರುದೇವತಾ ಸ್ವರೂಪಂಗಳಹವು. ಅವಾವುವೆಂದಡೆ ಕಖ ಚಛ ಟಠ ತಥ ಪಫ. ಮಿಕ್ಕ

ಮೂಱಕ್ಕರಂಗಳ್‌ ಕೂಡಿ ಪದಿನೈದುಂ ಅವುಂ ವಹ್ನಿದೇವತಾಸ್ವರೂಪಂಗಳ್‌ ಎಂತೆಂದೊಡೆ ಗಘಙ ಜಝಞ

ಡಢಣ ದಧನ ಬಭಮ. ಇಂತು ಪದಿನೈದಕ್ಕುಂ, ಇವು ನಾಮಾಕ್ಷರಂಗಳಾಗಲಸಾಧ್ಯಂ ಎಂದಱಿವುದು.

ಇನ್ನು ಶುಭನಿಮಿತ್ತಂಗಳಂ ಪೇೞ್ವೆಂ

ಸುವಿತಾನಂ ಚಾಮರಂ ಭೂಷಿತ ಯುವತಿಯರುಂ ಮದ್ಯಮಧ್ವಾಮಿಷಂ ಗಂಧವಿಲಿಪ್ತಸ್ವಾಂಗನುದ್ಯತ್ಸಿತ ಕುಸುಮಫಲಗ್ರಾಹಿ ದೂರ್ವಾಕ್ಷತಂ ಪಲ್ಲವ ಮಾಂಗಲ್ಯಪ್ರಯುಕ್ತಂ ಕರಮೆಸೆವಿನಿತಂ ಕಂಡೊಡತ್ಯಂತ ಶಸ್ತಂಭುವನ ಪ್ರಖ್ಯಾತ ವಿದ್ಯಾನಿಧಿಯೆನಿಸಿದ ಮಂಗಾಖ್ಯನಿಷ್ಟೋಕ್ತಿಯಿಂದಂ

ದಷ್ಟನನೀಕ್ಷಿಸಲ್ಕೆ ನಡೆವಾಗಳನೂನಮೆನಿಪ್ಪ ವಾಯಸಂಸ್ಪಷ್ಟ ರವಂಗಳಿಂ ಕರೆಯೆ ವಾಮದೊಳಂ ನರಿ ಗೂಗೆಯಕ್ಕೆ ಮೇಣ್ಶಿಷ್ಟಮದೆಂದು ತಾಮಱಿಗೆ ಪಲ್ಲಿ ಸರಾಗದ ಗರ್ದಭಂಗಳುತ್ಕೃಷ್ಟಮಿದೆಂಬುದೇ ಶಕುನಮುಂ ಬುಧಸಂಗತ ಮಂಗನುಕ್ತಿಯಿಂ

ಮಹದಾಪತ್ತೆಡೆಗೊಂಡತ್ತಹಿ ಕೊಂಡುದು ಕೆಟ್ಟೆನೆಂದು ನೋೞ್ಪೊಡೆ ಪೋಪಗೃಹಮಿರ್ದೆಡೆಯೊಳ್‌ ಪೋಗಲ್ದಹನಾಶೆಯೊಳಿರ್ದು ಪಲ್ಲಿ ಕರೆಯಲ್‌ ಶುಭದಂ

ಸುರಪ ಹುತಾಶನಾನಿಲ ಹರಾಸೆಯೊಳಿರ್ದು ಸರಂಗುಡಲ್ಕೆ ಭೀಕರಮೆನಿಸಿರ್ದ ದುಷ್ಟತರ ಸರ್ಪಭಯಂ ನೃಪಚೋರಭೀತಿಯುಂಪರಿಹರಿಸಿರ್ಕುಮಾಕ್ಷಣದೊಳಂ ಮಿಗೆ ದಕ್ಷಿಣದತ್ತಲಾದೊಡಂಪರಿಕಿಸೆ ನಿರ್ಭಯಂಗಳಿವು ಪಲ್ಲಿಗಳಿಂದಱಿ ಮಂಗನುಕ್ತಿಯಿಂ

ರುಜೆಯಡಸಿತ್ತು ರಾಜಭಯಮುಂ ಪಿರಿದಾದುದು ಚೋರಬಾಧೆಯಿಂಭುಜಗನ ಬಾಧೆಯಿಂದೞಿವು ತಪ್ಪದು ಕೆಟ್ಟೆನೆನುತ್ತೆ ಮುಚ್ಚೆಯಿಂಗಜಬಜೆಯಾಗಲಾಯೆಡೆಗೆ ಕೃಷ್ಣಮಿಗಂ ಬಲದತ್ತ ಪಾಯ್ದೊಡಂವಿಜಯಮದೆಂಗೆ ಪೆಣ್ಣುಡಿಸೆ ಮೇಣ್‌ ಭಯಮಾಗದಿಳಾಜನಸ್ತುತಾ

ಖಳಸರ್ಪಂ ಕೊಂಡುದಿನ್ನೇನುೞಿಯನಿವನೆನುತ್ತೀಕ್ಷಿಸಲ್‌ ತನ್ನೊಳಿರ್ದಾನೆಲೆಯಿಂದಂ ದಕ್ಷಿಣಸ್ಥಾನದೊಳೆ ಹಸುಬನುತ್ಸಾಹದಿಂ ತಳ್ತ ಕೊಂಬಿಂದುಲಿದೋಱಲ್‌ ಬಾೞ್ಗುಮಂತಲ್ಲದೊಡೆ ಹರಡೆ ವಾಮಾಸೆಯಿಂದಂ ಸರಂಗೆಯ್ಯಲದುಂ ಮೇಣ್‌ ನಟ್ಟೊಡಂ ಪಿಂಗಲಿಯತಿಶುಭದಂ ಮಂಗರಾಜೋಕ್ತಿಯಿಂದಂ

ವ. ಇನ್ನು ಸಂಗ್ರಹನಿರೀಕ್ಷಾಮಂತ್ರಮಂ ಪೇೞ್ವೆಂ

ರಸಹಾಕ್ಷರಮಂತ್ರಮದಾಗೆಸೆವೋಂ ಹ್ರೀಂ ವಃ ಯೆನಿಪ್ಪ ಮಂತ್ರದಿನಭಿಮಂತ್ರಿಸಿ ದಷ್ಟನ ಮುಖದೊಳ್‌ ಚಿಮ್ಮಿಸೆ ನಯನದ್ವಯಮನಿಂತು ತೆಱೆಯೆ ಸುಸಾಧ್ಯಂ

ಮತ್ತಂ ಹ್ರಾಂ ವಂ ಕ್ಷಂ ಯೆಂಬುತ್ತಮವಹ ಮಂತ್ರಯುಕ್ತ ಜಲಮಂ ತಳಿಯಲ್ತತ್ತನು ನಡುಗುವೊಡಂ ಮೇಣ್ಬಿತ್ತರದಿಂ ನಯನಯುಗಳಮಂ ತೆಱೆಯೆ ಶುಭಂ

ಸಕಲ ಸ್ವರದೊಳ್‌ ಕೂಡಿದಹಕಾರದಿಂ ಕ್ರಮದೊಳೆಯ್ದೆ ಮಂತ್ರಿಸಿ ಶೈತ್ಯೋದಕಮಂ ಕುಡೆ ನಿಲೆ ಶುಭದಂಸ್ವಕೀಯಮುಖದಿಂದ ಮರಳಲಂತವಸಾಧ್ಯಂ

ಬೇಸಱದಾ ಕ್ಷಿಪಾದಿ ಪರಮಂತ್ರಮುಮಂ ಭರದಿಂದೆ ದೇಹವಿನ್ಯಾಸಮನಂತೆ ಮಾಡೆ ಗಳಗುಲ್ಫದ ನಾಡಿಗಳಿಂ ನಿರೀಕ್ಷಿಸಲ್ಕಾಸಮನಾಡಿಗಳ್‌ ಬಿಡದೆ ಸಂಸ್ಫುರಿಸುತ್ತಿರಲುತ್ತಮಂ ನಿರಾಯಾಸದೊಳಂದು ಮರ್ದುಗಳನೊಪ್ಪಿರೆ ಮಾೞ್ದುದವಂಗೆ ಭಾವುಕಂ

ಮಂತ್ರಂ. -ಕ್ಷಿಪ ಓಂ ಸ್ವಾಹಾ

ಕ್ಷಿ. ಪ ಓಂ ಸ್ವಾಹಾ ಎನಿಪ್ಪ ಪ್ರಥಿತತರಮನಿಪ್ಪಕ್ಷರನ್ಯಾಸಮಂತಾಳಪಿತಂ ತಾನಾಗೆ ತನ್ಮಸ್ತಕ ಮುಖ ಹೃದಯಾದ್ಯಂಗದೊಳ್‌ ಮಾಡಿ ಮತ್ತಂತುಪಲಕ್ಷ್ಮೀಮಂತ್ರಿತಂ ಭಾವಿಸೆ ನಯನಯುಗಂ ಶೋಭೆವೆತ್ತಿರ್ದೊಡಂ ಮಂತ್ರಪರಂ ತಾಂ ಮಂತ್ರಿತಾಂಭೋಹವನ ವಿಧಿಗಳಂ ಮಾೞ್ಕವಂ ಬಾೞ್ಗುಮಲ್ತೇ

ಮಂತ್ರಂ. ಓಂ ಆಂ ಹ್ರೀಂ ಸಿಮಪ ಲಕ್ಷ್ಮಿ ಸ್ವಾಹಾ

ವ ಎಂಬೀ ಮಂತ್ರಮಂ ಎಂಟು ಸೂೞ್ವರಂ ಮಂತ್ರಿಸಿ ಜಪಿಸುವುದು

ಮಂತ್ರಂ. ತಪಲಕ್ಷ್ಮೀ ಎಂದು ಮಂತ್ರಿಸೆ ನೇತ್ರಯುಗ್ಮಂ ಸ್ಫುರಿಸೆ (ಜರ್ವಿಸೆ)

ಜ್ಯೋತಿಸ್ಪರ್ಶಸಿತಂಗಳಮೇತೊದಳೆನೆ ಸರ್ಪದಷ್ಟನುಂ ವ್ಯಂತರ ಭೂತಾತಿಶಯಚೇಷ್ಟಿತಂ ಪಡೆಮಾತೇಂ ಬಾೞ್ಗುಂ ನರಂ ಚಿರಂಜೀವಿಯೆನಲ್‌

ವ. ಇನ್ನು ದಷ್ಟಾಂಗಚೇಷ್ಟೆಯಂ ಪೇೞ್ವೆಂ

ಕಷ್ಟಮೆನಿಸಿರ್ದ ವಾಮಂದಷ್ಟಾಂಗಂಗುದಯಮಾಗೆ ಜೀವಿಸಲರಿಯಂಸ್ಪಷ್ಟ ಸಮೀರಂ ದಕ್ಷಿಣಮಿಷ್ಟಂ ತಲೆದೋಱೆ ತೋಱು ಮಾಂತ್ರಿಕತನಮಂ

ಕಿಱುನಾಲಗೆ ಮುಟ್ಟಲೊಡಂಬಱಬಱನಾಗಿರೆ ಮುರುಂಟೆ ಮಂಡೆಯ ಕೇಶಂಪಱಿಯಲತಿ ಶೈತ್ಯದುಸಿರ್ಗಳ್ಪೊಱಮಡೆ ದಷ್ಟಂಗೆ ಮರಣಮಕ್ಕುಮಮೋಘಂ

ಪತ್ತಿರೆ ಪಲ್ಲು ವಿವರ್ಣತೆವೆತ್ತಿರೆ ನಖನಿಕರಮಸಿತಮಾಗಿರೆ ರಸನಂಕೆತ್ತಿರೆ ಗಂಟಲ್‌ ಬಸಿಱೊಳಪತ್ತಿರೆ ಪೊಟ್ಟಣಿಸೆ ದಷ್ಟತನುಗಮರಿಷ್ಟಂ

ಪೆಡತಲೆ ಕೀಲಿಸಿದಂತಿರೆಮಡಿದುಂ ಗೋಣೊಱಗಿರಲ್ಕೆ ನಾಸಿಕದಿಂದಂನುಡಿಯದೆ ಬಾಯ್ವಿಡೆ ದಷ್ಟಂತಡೆಯದವಂ ಮಡಿಗುಮೆಂಬುದೇಂ ಕೇವಳಮೇ

ಕಣ್ಣಿಂ ಕಾಣದೊಡಂ ತಾಂಕಣ್ಣೆವೆಗಳ್‌ ನಟ್ಟವೋಲ್‌ ಪಳಂಚದೆ ನಿಲೆಯುಂತಿಣ್ಣಂ ತನುವಾಗಿರೆ ಮುಕ್ಕಣ್ಣಂಗಮಸಾಧ್ಯಮೆಂಬುದೇಂ ಕೇವಳಮೇ

ವ. ದಷ್ಟದರ್ಶನೀಯಮಲ್ಲದ ವಸ್ತುಗಳವಾವುವೆಂದೊಡೆ

ಶಶಿಯಂ ಭಾನು ಕೃಶಾನುವಂ ಮುಕುರಮಂ ದೀಪಾಳಿಯಂ ತೈಲಮಂಪೆಸರ್ವೆತ್ತಾಜ್ಯಮನೊಳ್ಪುವೆತ್ತಸಿಗಳಂ ಕಂಡಂದು ದಷ್ಟಂಗೆ ತಾನಸುವುಂ ನಿಲ್ಲದು ಶೂಲೆ ದಾಹ ವಮನಂ ಸರ್ವಾಂಗದೊಳ್‌ ಶೈತ್ಯಮಿಂತೆಸೆಯಲ್‌ ದಷ್ಟನೆ ಸಾಗುಮೆಂಗೆ ಮನುಗಳ್‌ ಮುಂ ಪೇೞ್ದ ಶಾಸ್ತ್ರೋಕ್ತಿಯಿಂ

ಭೇದ್ಯಾಭೇದ್ಯಮನಱಿಯದೆಹೃದ್ಯಮೆನಿಪ್ಪಖಿಳ ಯಂತ್ರಮಂತ್ರೌಷಧಿಯಂವೈದ್ಯಂ ಮಾಡಿದೊಡಾತನವಿದ್ಯೆಯೆ ಹಾಸ್ಯಕ್ಕೆ ಪಕ್ಕದಾಗದೆ ಧರೆಯೊಳ್‌

ಶೋಧಿಸಿ ಸಾಧ್ಯಾಸಾಧ್ಯಮನಾಧಾರಾಧೇಯಭೇದಮಂ ತಿಳಿದು ತಾಂಸ್ವಾಧೀನತೆಯಿಂ ಮಾೞ್ಕೆ ಸುಬೋಧರ್‌ ಬೞಿಕಾದುದಕ್ಕೆ ಕರ್ಮೋದಯದಿಂ

ಇಂತೀ ಪೇೞ್ದೋಜೆಯೊಳಂಚಿಂತಿಸಿಯಹಿದಷ್ಟನಂ ಪರೀಕ್ಷಿಸಿ ದಯೆಯಿಂಮಂತ್ರೌಷಧಿಯಂ ಮಾೞ್ಪುದುಮಂತ್ರವಿದಂ ಜೀವಮವನೊಳಿರ್ಪನ್ನೆವರಂ

ಪಿರಿದು ಭವಂಗಳೊಳ್‌ ನೆಱಪಿದೊಂದಘಮಿಂದಹಿರೂಪಮಾಗಿ ಬಂದಿರದತಿರೌದ್ರದಿಂ ಪಿಡಿಯೆ ಸಾಧ್ಯಮಸಾಧ್ಯಮೆನಿಪ್ಪ ಭೇದಮಂಪರಿವಿಡಿಯಿಂ ನಿಮಿತ್ತತತಿಯಿಂ ನೆಱೆ ನಿಟ್ಟಿಸಿ ದಷ್ಟನೊಳ್‌ ಕರಂಸುರುಚಿರ ಶಾಂತಿಯಿಂ ನೆಗೞೆ ಮಂತ್ರಿ ಪೊಗೞ್ಕೆಯ ಮಂತ್ರಿಯಲ್ಲನೇ

ತುಂಗಗುಣರೆನಿಪ ಮುನಿಪರಸಂಗತಿಯಿಂದಱಿದು ಪೇೞ್ದುದೀ ಸಂಗ್ರಹಮುಂಮಂಗಳನಿಕಾಯ ಮುಗುಳಿಯಮಂಗವಿನಿರ್ಮಿತ ಖಗೇಂದ್ರಮಣಿದರ್ಪಣದೊಳ್‌

ಸುರುಚಿರವರ ವಿದ್ಯಾಸಿಂಧು ಭವ್ಯೆಕಬಂಧೂಸ್ಥಿರತರ ಸುಖರಾಶಿ ಸ್ಯಾತ್ಪತಿ ಶ್ರೀಜಿನಾಧೀಶ್ವರನಿಗದಿತ ಶಾಸ್ತ್ರಾರಾಮದೊಳ್‌ ಸಲ್ವುದೊಂದಂಕುರದನಿತಿದೆ ಸಾಲ್ಗುಂ ಮರ್ತ್ಯಲೋಕೋಪಕಾರಂ

ಗದ್ಯ. ಇದು ಸಕಲ ವಿದಮಲ ಜಿನೇಂದ್ರೋಕ್ತ ಸಿದ್ಧಾಂತ ಪಯಃಯೋನಿಧಿ ಪಾರಗ ಶ್ರೀಪೂಜ್ಯಪಾದಮುನೀಂದ್ರ ಚಾರುಚರಣಾರವಿಂದ ಗಂಧಗುಣಾನಂದಿತಮಾನಸಂ ಶ್ರೀಮದಖಿಲ ಕಲಾಗಮೋತ್ತುಂಗಮಂಗವಿಭು ವಿರಚಿಮಪ್ಪ ಖಗೇಂದ್ರಮಣಿದರ್ಪಣದೊಳ್‌ ಸಂಗ್ರಹಾಧಿಕಾರಂ.