VIII
Girijākalyāṇa
ಕಾಮದಹನವರ್ಣನಂ
ಗರಳಧರನುರಗಭೂಷಂಸರಸಿಜಭವ ಮಸ್ತಕ ಪ್ರಯುಕ್ತಕರಂ ಭೀಕರಭಾಳಲೋಚನಂ ಭಕ್ತಿರಸಮನೆಮಗೀಗೆ ಹಂಪೆಯ ವಿರೂಪಾಕ್ಷಂ
ಕೀರತುರಗ ಸಂಘಮಯಮೀಧರೆ ಪುಷ್ಪಚಯಾಸ್ತ್ರ ಶಸ್ತ್ರ ವಿಸ್ತಾರ ಸುಗಂಧ ವೃಂದಮಯಮೀ ಕಕುಭಂ ಮಕರಂದ ಸಾಂದ್ರಂ ಸಂಚಾರ ರಜೋನಿಕಾಯಮೀನಭಮೆಂದೆನೆ ಕೌತುಕಪ್ರದಂಮಾರನೃಪಾಲಸೇನೆ ನಡೆದಿತ್ತು ಜಿತೇಂದ್ರಿಯಚಿತ್ತಶೋಷಣಂ
ವ. ಇಂದು ನೆರೆದು ನಡೆವ ಕುಸುಮಕೋದಂಡನ ಕಮನೀಯಬಲದ ಹಿಂದೆ,
ಘಳಿಲೆನೆ ಕಂಪನದಿಂ ಮುನಿಗಳ ಕರತಳದಕ್ಷಮಾಲೆ ಬೀಳುತ್ತಿರೆ ಕೋಕಿಳಕುಳ ನಿಸ್ಸಾಳಧಳಂಧಳಂ ಧಳಂ ಧಳನಿನಾದಮುಣ್ಮಿತ್ತಾಗಳ್
ವ. ಅನಂತರದಲ್ಲಿ,
ಮುನಿಚಿತ್ತಾಕರ್ಷನೀ ಬಂದನೆ ಋಷಿವಿಮಳಾಚಾರಸಂಹಾರಿಯೀ ಬಂದನೆ ಧರ್ಮಜ್ಞಾರಿಯೀ ಬಂದನೆ ಜಿತವಿಷಯವ್ರಾತ ವಿಧ್ವಂಸಿಯೀ ಬಂದನೆ ಶಾಂತಾರಾತಿಯೀ ಬಂದನೆ ಯತಿಹರನೀ ಬಂದನೀ ಬಂದನೀ ಬಂದನೆಯೆಂದಲ್ಲಲ್ಲಿ ಭೃಂಗೀ ಬಹುವಿಧ ಕಹಳಾನಾದಮುಣ್ಮಿತ್ತದೆತ್ತಂ
ತೊಲಗೆಲೆ ಸಹಸ್ರಲೋಚನತೊಲಗೆಲೆ ವಾಣೀಶ ತೊಲಗೆಲೇ ಪಾವಕ ನೀಂತೊಲಗು ಬೃಹಸ್ಪತಿ ಕೃಷ್ಣನೆತೊಲಗೆನುತುಣ್ಮಿದುವು ಬಹಳ ಕಹಳಾನಾದಂ
ವ. ಇಂತು ಬಿರುದೆತ್ತಿ ಕರೆವ ಬಹಳ ಕಹಳಾನಾದಂಗಳ ನಡುವೆ,
ನಡೆದುದು ಸೈನ್ಯಮೊಲ್ವವರನನ್ಯವಗಲ್ದರ ಜೀವಶೂನ್ಯ ವಾರ್ದಡಸಿತು ಕೂಡೆ ಕಾಮಿನಿಯರಾಡೆ ಜಿತೇಂದ್ರಿಯರೋಡೆ ನೋಡೆ ಬಿಲ್ವಿಡಿದ ರತೀಶನಪ್ರತಿಮವೇಷನನೂನವರಪ್ರಕಾಶನುರ್ಕುಡುಗೆ ನಿಯೋಗಿಗಳ್ ವಿಗತಭೋಗಿಗಳುದ್ಘನಿರೋಧಯೋಗಿಗಳ್
ಮುನಿಗಳಧೈರ್ಯಭೂಮಿ ರಜಮಪ್ಪಿನೆಗಂ ಮನುಚೇತನಾದ್ರಿ ಭೋಂಕನೆ ಪುಡಿಯಪ್ಪಿನಂ ಯತಿಚರಿತ್ರತರಂಗಿಣಿ ಪಂಕಮಪ್ಪಿನಂಘನವಿಮಳ ವ್ರತೀಂದ್ರರ ತಪೋವಿಪಿನಂ ಬಯಲಪ್ಪಿನಂ ರತೀಶನ ಚತುರಂಗಸೇನೆ ನಡೆದತ್ತು ಧರಿತ್ರಿಗೆ ಚಿತ್ರಮಪ್ಪಿನಂ
ಕೊರಗಿದರಾ ಯತಿಪತಿಗಳ್ಹರಣಂಗಳೆದರ್ ವಿಯೋಗಿಗಳ್ ಮನು ಮುನಿಗಳ್ಶರಣೆಂದರ್ ಜಿತಕಾಮರ್ಮರುಳಾದರ್ ಪುಷ್ಪಶರನ ಪಡೆ ನಡೆವಾಗಳ್
ವ. ಇಂತು ಸಕಳಭುವನಮಂ ಭಂಗಿಸುವ ಚತುರಂಗಸೇನೆಯ ನಡುವೆ ಕಡುಪಿಂ ನಡೆತಂದು ಭೂಮಿಗೆ ಮೆಱೆವ ಸೋಮಧರನಿರ್ಪ ಹೇಮಕೂಟ ಪ್ರಾಂತ ದೊಳ್ ನಿಂದು ನಗಾಗ್ರಮಂ ನೋಡಿ ಕಡುಮುಳಿದು ಕಾಮಭೂಪಂ ಉನ್ನತಮಪ್ಪ ತನ್ನ ಸೇನೆಗೆ ಕೆಯ್ವೀಸಿದ ಸಮಯದೊಳ್ ಗಿಳಿಗಳ್ ಚಪ್ಪರಿಸೆ ತುಂಬಿಗಳ್ ಮೊರೆಯೆ ಕೋಗಿಲೆಗಳ್ ಕರೆಯೆ ಮಂದಾನಿಳಂ ಮೇರೆವರಿಯೆ ಚಂದ್ರಂ ಬೆಳ್ದಿಂಗಳಂ ಬೀರೆ ಚಕೋರಿಗಳ್ ನಲಿದುಲಿಯೆ ಕುಸುಮ ಕುಲಂ ಕಂಪನೊತ್ತರಿಸೆ ಸಹಕಾರಂ ಸಂದಣಿಸೆ ಕಾಮಿನಿಯರ್ ಜಡಿಯೆ ರಥಾಂಗಂ ಸಂಗಡಿಸಿರೆ ನೂಂಕೆ ಮಕರಧ್ವಜಂ ಗಗನದೊಳ್ ಕುಣಿಯೆ ಮತ್ಸ್ಯಪತಾಕೆಯಚ್ಚರಿಯೊಳಾಡೆ ಮಾಕಂದಗಜ ಪೂತ್ಕಾರ ರಥಾಂಗರಥ ಚೀತ್ಕಾರಂ ಶಿಳೀಮುಖಝೇಂಕಾರಂ ಹಂಸಕುಲಕ್ರೇಂಕಾರಂ ಝಷಕೇತನ ಫಟತ್ಕಾರಂ ತರುಣೀಚರಣಮುದ್ರಿಕಾಠಣತ್ಕಾರಂ ತತ್ಕಟಕ ಮಂಜೀರ ಝಣತ್ಕಾರಂ ಕಳಕಂಠವೀಥೀಧಿಕ್ಕಾರಂ ಬೆರಸಿ ಬಳೆದಾಗಸಮಂ ಮುಸುಂಕೆ ಸರ್ವಬಲಮೊರ್ಬುಳಿಸಿ ಬೊಬ್ಬಿಟ್ಟಬ್ಬರಿಸಿ ಪರ್ಬಿ ಪರೆದು ಶರ್ವನ ಸಮಾಧಿ ಪರ್ವತಮನೊತ್ತರಿಸಿ ಪತ್ತಿ ಬಿಡದೆ ಸುತ್ತಿ ಮುತ್ತುತಿರೆ ಮುಂದಣ ಕಾಪಿನ ನಂದೀಶ್ವರಂ ಮೋಹನಬಲದ ಸುಧಾರಸಮಯಸುನಾದಮಂ ಭೋಂಕನೆ ಕೇಳ್ದಂತಂತೆ ಕಂಪಿಸಿ ಕರಣಂ ಕಲಂಕಿ ಕಿಂಚಿತ್ ಸಂಚಲಮನನಾಗಿ ಚೆಲ್ಲಿದ ಚಿತ್ತಮಂ ಮೆಲ್ಲ ಮೆಲ್ಲನೆ ಸಂತಯ್ಸಿಕೊಂಡು ಶಿವಜ್ಞಾನದಿಂದೆಳ್ಚೆತ್ತು ಕಣ್ದೆಱೆದು ಮುಂದಿರ್ದ ಬಲವಂ ಕಂಡು,
ಹರನ ಸಮಾಧಿಗಿಂತಿದನುಕೂಲತೆಯಲ್ಲ ವಿರೋಧವೃತ್ತಿಯಂನೆರಪುವರಾರಿದಾರ ಬಲವಾರ ಮದೋನ್ನತಿ ಯಾರ ಲೋಕಭೀಕರರವವಾರ ಸಂಭ್ರಮಮಿದಾರ ಮರುಳ್ತನಮೆಂದು ನಂದಿಕೇಶ್ವರನತಿ ಕೋಪದಿಂ ಮದನಸೇನೆಯನೀಕ್ಷಿಸಿದಾ ಕ್ಷಣಾರ್ಧದೊಳ್
ಅಳಿ ಮಲ್ಲಳಿಂ ಗೊಂಡುವು ಕೋಕಿಳನಿಕರಂ ವ್ಯಾಕುಳಾಂಗಮಾದುವು ಚಂದ್ರಂಕಳೆಗುಂದಿ ಕಂದಿದಂ ಕೋಮಳೆಯರ್ ವಿಹ್ವಳ ವಿಧಾನ ಮಾನಸರಾದರ್
ವ. ಮತ್ತಮಲ್ಲದೆ,
ಕೀರತರಂಗಮೋಡಿದುವು ಚೂತಗಜಾವಳಿ ಘಿಳಿಡುತ್ತೆ ಕಾಂತಾರದೊಳೆಯ್ದೆ ಬಿಳ್ದುವು ಸಮೀರನಡಂಗಿದನಾ ವಸಂತಕಂಘೋರವನಂಗಳೊಳ್ ಪುಗುತೆ ಮೆಯ್ಗರೆದಂ ಕಳಹಂಸಮಾಲೆ ಕಾಸಾರದೊಳಂಜಿ ಪೊಕ್ಕುವು ರಥಾಂಗರಥಂ ನಡೆಗೆಟ್ಟುವದ್ಭುತಂ
ವ. ಇಂತು ಕಂತುರಾಜನ ಚತುರಂಗಬಲಂ ದಿವಸೇಂದ್ರನ ಮುಂದಣ ತಮಃಪಟಲದಂತೆ ನಂದೀಶ್ವರನ ಕೋಪದ ಕಡುಗಾಯ್ಪಿಂ ನೋಡೆ ನೋಡೆ ಮಾಯವಾಗೆ,
ನುಡಿದಂ ಮದನಂ ತನ್ನೊಳ್ಬೆಡಂಗಿದೇನೀ ಗಣೇಶನೀ ತೆಱನಿನ್ನಾಮೃಡನಂ ನಡೆದೆಸುವೊಡೆ ಸಂಗಡವಾರಾರಳವದಾರ ಶಕ್ಯಮಶಕ್ಯಂ
ವ. ಇಂತೆನುತುಂ ಕಂತುರಾಜಂ ಸಂತಾಪದಿಂ ಚಿಂತಿಸುತ್ತಿರ್ಪಿನಮಿತ್ತಲ್,
ಬರುತಿರ್ದಳ್ ಮುಂದೆ ಕಾಂತಿಪ್ರದೆ ಸದಮಳೆ ಸತ್ಪುಷ್ಪಕಾರೂಢೆ ಸತ್ಯಾಕರೆ ನಿತ್ಯಾನಂದೆ ಚಂದ್ರಾಭರಣನ ಸುಖಸಂಪತ್ತಿ ರುದ್ರಾರ್ಚನಾವಿಸ್ತರೆ ವಿಶ್ವಾರಾಧ್ಯೆ ಕಾರುಣ್ಯದ ನೆಲೆವನೆ ಶರ್ವಾಣಿ ಗೀರ್ವಾಣಮೌಳೀವರರತ್ನ ವ್ರಾತ ಸಂಘಟ್ಟಿತಪದೆ ನಗಸಂಭೂತೆ ಸಂಪ್ರೀತಿಯಿಂದಂ
ಬರೆ ಕಣ್ ಬಂದಂತುಸಿರ್ ಬಂದವೊಲತಿ ಮುದಮಂ ತಾಳ್ದಿ ಬಾಳ್ದಿರ್ದು ಶೋಭಾಕರನಷ್ಟಾಂಗಪ್ರಣಾಮಂಬೆರಸು ಗಿರಿಜೆ ಗೌರೀ ಜಗನ್ಮಾತೆ ಸರ್ವೇಶ್ವರಿ ದಿವ್ಯಜ್ಞಾನಿ ನಾನಾಗಮನವಿದೆ ಸದಲಂಕಾರೆ ಸಾರಾಂಗಿ ವಿಶ್ವೋದರೆಯೆನ್ನಂ ರಕ್ಷಿಸೆಂದೀಕ್ಷಿಸಿ ಮಿಗೆ ಪೊಗಳ್ದಂ ಬಾಷ್ಪದೃಕ್ ಪುಷ್ಪಚಾಪಂ
ವ. ಅಂತು ದರ್ಪಕಂ ಶೂರ್ಪಕಮರ್ದನನಾರ್ಪುಗುಂದಿ ಕಾರ್ಪಣ್ಯದಿಂ ನಗತನೂಜೆಯಂ ಪೊಗಳುತ್ತುಂ ಮತ್ತಮಿಂತೆಂದಂ,
ಗಿರಿಶನ ತಪಮಂ ಕಿಡಿಸಲ್ಮುರರಿಪು ಕಳುಪಿದೊಡೆ ಬಂದು ಹೇಮಾಚಳಮಂಭರದಿಂದೆ ಮುತ್ತೆ ನಂದೀಶ್ವರನಿಂದಂ ಸಕಲಸೇನೆಯಳಿದಾನುಳಿದೆಂ
ತಾಯೆ ತವರೇ ಕೇಳೆನ್ನಾಯುವೆಯೆನ್ನಸುವೆ ಕಾವುದೆಂದೊಱಲುತ್ತುಂಬಾಯಳಿವ ಮದನನಂ ಕಾತ್ಯಾಯನಿ ದಯೆಯಿಂದೆ ನೋಡಿ ನಯದಿಂ ನುಡಿದಳ್
ಅಱಿದೆಂ ನಿನ್ನಯೆ ಬರವಂಕಱೆಗೊರಲನ ತೀವ್ರ ತಪಮನೆಳ್ಬಟ್ಟುವುದೀತೆಱದಿಂದೆನ್ನಿಷ್ಟಮದೆನ್ನರಕೆಯದೆನ್ನಿಚ್ಛೆಯೆನ್ನಲಾಭಂ ಲೋಭಂ
ನಾನಾ ವಿಧದಿಂ ರುದ್ರನನೂನತಪೋಭರದ ಬೆಸುಗೆಯಂ ಬಿಡಿಸೊಲವಿಂಶ್ರೀನಂದನ ನೀನಂಜದಿರಾನಿರ್ದಪೆನಾನೆ ರಕ್ಷೆಯಾನೆ ಸಹಾಯಂ
ಎಂದಗಜೆ ಬೆಸಸೆ ಕಾಮಂಪಿಂದಣ ಪರಿಭವಮನುಡುಗಿ ತಳೆದತಿಮುದಮಂಸಂದಣಿಸುತೊಡನೊಡನೆ ನಡೆತಂದಂ ಪುಷ್ಪಕದ ನೆಳಲ ಕರ್ಪಿನ ಮಱೆಯೊಳ್
ವ. ಆ ಸಮಯದೊಳ್,
ಮುಗಿದ ಮನಂ, ಮುಗಿದ ಕರಂಮಗಿದಕ್ಷಿಗಳಲರ್ವ ಪುಳಕಮಲರ್ವಾನಂದಾಶ್ರುಗಳಲರ್ವ ಭಕ್ತಿ ತನ್ನೊಳ್ಸೊಗಯಿಸೆ ನಂದೀಶನಿರ್ದನುತ್ತಮಭಕ್ತಂ
ವ. ಅಂತಿರ್ದ ನಂದೀಶನಂ ಚಂದ್ರಾನನೆ ಕೃಪೆಯಿಂದಂ ನೋಡುತ್ತುಂ ಶಿವಾರ್ಚನಾ ತತ್ಪರೆ ಪುಷ್ಪೋಪಚಯಕ್ಕೆ ಬಿಜಯಂಗೆಯ್ದಳಿತ್ತಲ್ ಪುಷ್ಪಚಾಪಂ ನಂದೀಶನ ಕಾಪಿನ ಸೀಮೆಯಂ ಕಳೆದು
ಬಂದು ಮತಂಗಪರ್ವತಮನೇಱಿ ಮಹೇಶನ ವಾಮಭಾಗದೊಳ್ನಿಂದು ವಿರಾಜಿಸಿರ್ಪ ರತಿಯಂ ಕೆಲದೊಳ್ ನಿಲವೇಳ್ದು ಶೌರ್ಯವೀರ್ಯಂ ದಳವೇಱೆ ಮೀಱೆ ನಭದೊಳ್ ಸುರಸಂತತಿ ನೋಡಿ ಭಾಪು ಭಾಪೆಂದೆನೆ ಮುಂದೆ ಪುಷ್ಪಶರನೀಕ್ಷಿಸಿದಂ ನಿಟಿಲಾಕ್ಷಲಕ್ಷ್ಯಮಂ
ವ. ಅಂತು ನೋಡಿ
ಅತುಳಬಲನಪ್ರತಿಮನೂರ್ಜಿತಶೌರ್ಯಂ ಕರ್ವುವಿಲ್ಲನೆಡಗೆಯ್ಯೊಳ್ ಮಂಡಿತಮನೆ ಪಿಡಿದಾಹಾ ರತಿಪತಿ ನಾರಿಯನೋವಿ ನೀವಿ ಜೇವೊಡೆವಾಗಳ್
ವ್ರತಿಗಳ್ ಮನುಗಳ್ ಮುನಿಗಳ್ಯತಿಗಳ್ ಸೆಡೆದಳ್ಕಿ ಬಳ್ಕಿ ಸುಗಿದಗಿದು ಕರಂಮತಿಗೆಟ್ಟರ್ ಧೃತಿಗೆಟ್ಟರ್ಗತಿಗೆಟ್ಟರ್ ಬುದ್ಧಿಗೆಟ್ಟರುನ್ನತಿಗೆಟ್ಟರ್
ವ. ಅಂತಿಕ್ಷು ಧನುಷ್ಟಂಕಾರರವದಿಂದಧಿಗತ ಪರಮಾರ್ಥರೆನಿಪ ಜಿತೇಂದ್ರಿಯರ್‌ವಿಕಾರಚಿತ್ತರಾಗುತ್ತಮಿರಲಿತ್ತಲ್ ಕುಸುಮಾಯುಧಂ ವಿಷಮಾಕ್ಷನನಿಸಲೆಂದು ಸಾಹಸ ಚಿತ್ತನುತ್ಸಾಹಿಸುತಿರ್ಪಾಗಳ್,
ಪಸರಿಸಿ ಪರ್ಬಿದ ನೀಡಡಿಕುಸಿದಂಗಂ ನೀಳ್ದ ದಂಡೆನೆಗೆದ ಭುಜಾಗ್ರಂಕುಸುಮಶರಾಕುಂಚಿತಕರಮೆಸೆದಿರ್ದುವು ದೃಷ್ಟಿ ಮುಷ್ಟಿ ಶರಸಂಧಾನಂ
ವ. ಆ ಸಮಯದೊಳ್
ಶೃಂಗಾರಂ ಕೋಡಿಟ್ಟುದೊಜಂಗಮಲತೆ ವೃತ್ತಮಾಯ್ತೊ ಲಾವಣ್ಯಂ ಶೌರ್ಯಾಂಗಬಡೆದುದೊ ಪೇಳೆನೆಪಿಂಗದೆ ನೆಱೆ ತೆಗೆದು ಪುಷ್ಪಚಾಪಂ ನಿಂದಂ
ಹರಿಯಜರರಿದರಿದೆನೆಯಂಬರತಳದೊಳ್ ಕಲಹಲಂಪಟಂ ನಾರದನಾರ್ದಿರೆ ಕಾಮಂ ಸಾಯಲ್ ಬಲ್ಲರ ದೇವಂ ತೊಟ್ಟನೊಂದು ಸರಲಂ ತೊಟ್ಟಂ
ವ. ಅಂತು ನನೆಗೆಣೆಯಂ ತೊಟ್ಟು ವಿಕ್ರಮಮುಮಂ ಮುಂತಿಟ್ಟು ಕೇಣಮನಿಂಬಿಟ್ಟು ಕಲಹಮನೊಡಂಬಟ್ಟು ಭಾಳಾಕ್ಷನಂ ಲಕ್ಷಿಸಿ ನೋಡಿ,
ಅಜ್ಞತೆಯಿಂ ಸಕಳಕಳಾಭಿಜ್ಞನನಖಿಳೈಕ ತಾತನಂ ಮದನಂ ದಿವ್ಯಜ್ಞಾನಿಯನಿರದುಱೆ ಸರ್ವಜ್ಞನನುನ್ಮದನಬಾಣದಿಂ ತೆಗೆದೆಚ್ಚಂ
ಎಚ್ಚೊಡೆ ತಪೋಮರೀಚಿಯನುಚ್ಚಳಿಸಲ್ಕಾಱದಿತ್ತ ತಿರುಗಿದ ಶರಮಂಚೆಚ್ಚೆರದೀಕ್ಷಿಸಿ ಛಲದಿಂದೆಚ್ಚಂ ಪಂಚೇಷು ಮದನಶರೀರದಿಂದಾಗಳ್
ನೀಡಾಗದೆ ಮದನ ಶರಂನಾಡೆಯುಮಿರದೆಯ್ದಿ ಹರನ ಹತ್ತಿರ ಬೀಳುತ್ತೋಡಿ ಬರೆ ಕಂಡು ಕಾಮಂಹೂಡಿದನುಣ್ಮುಣ್ಮೆನುತ್ತೆ ಮೋಹನಶರಮಂ
ಇದು ಹರಿಯಜ ಸುರಪತಿಗಳಮದಮುಡುಗಿಸಿತೀ ಶರಂ ಕರಂ ಮೂಱಂ ಲೋಕದ ಚಿತ್ತಮನಲ್ಲಾಡಿಸಿತಿದೆ ಕೊಳ್ಳಿದೆ ಕೊಳ್ಳೆನುತ್ತೆ ಮನ್ಮಥನೆಚ್ಚಂ
ಅಂತೆಸೆ ಮೋಹನಶರವಾರ್ಪಿಂ ತಡೆಯದೆ ಶೂಲಧರನ ಬಹಿರಂಗಮನೆಂತಂತೆ ನಸು ಸೋಂಕಿ ಬರುತಿರೆಸಂತಾಪನಬಾಣದಿಂದೆ ರತಿಪತಿಯೆಚ್ಚಂ
ತೆಗೆದೆಚ್ಚೊಡೆ ಸಂತಾಪನಮಗಲದೆ ಪರಿತಂದು ಹರನ ಮನದೊಳಗಂ ಮೆಲ್ಲಗೆ ಮುಟ್ಟಿ ಮುಟ್ಟಲಣ್ಮದೆಮಗುಳ್ದುಱೆ ಬರೆ ಕಂಡು ಮನ್ಮಥಂ ಮುಳಿದಾಗಳ್
ಲೋಕಕ್ಕದ್ಭುತಮೆಲೆಲೆ ಪಿನಾಕಿಯ ತಪಮಿನ್ನುಮೆನ್ನಿದಿರೊಳಿರ್ದಪುದೆಂದಾಕರ್ಣಂಬರೆ ತೆಗೆದು ವಶೀಕರಣಾಸ್ತ್ರದಿನನೂನ ವಿಕ್ರಮನೆಚ್ಚಂ
ಇಸೆ ಬಂದು ವಶೀಕರಣಂಸಸಿಯಂ ಸೂಡಿದನ ಕಮಲವಿಮಲಜ್ಞಾನಾವಸಥ ಪರಂಜ್ಯೋತಿಯ ಕಾಲ್ದೆಸೆಯಂ ಕಾಣದೆ ಮರಳ್ದು ಬರೆ ಬೆಱಗಾದಂ
ಓಹೋ! ಉನ್ಮದದ ಮದನಮೋಹನ ಸಂತಾಪನಂ ವಶೀಕರಣಾಸ್ತ್ರವ್ಯೂಹಂ ವ್ಯರ್ಥಮಿದೆಂದುತ್ಸಾಹಂಗುಂದುತ್ತೆ ಮದನನಂದಿಂತೆಂದಂ
ಟಂಕಾರಾಲ್ಪಧ್ವನಿಯಿಂಕಿಂಕುರ್ವಾಣತೆಯನೆಯ್ದುವರ್ ಮುನಿಗಳ್ ನಿಃಶಂಕನನಚಳಿತನಂ ಹರನಂ ಕಂಡೆಂ ಧರೆಗೆ ಚಿತ್ರಮತುಳಚರಿತ್ರಂ
ತೆಱಹುಗುಡನಚಳನನ್ಯಮನಱಿಯಂ ನಿರುಪಮಸಮಾಧಿಯುಕ್ತನಭೇದ್ಯಂಕುಱುಹಿಲ್ಲೆನುತುಂ ಬಿಲ್ಲುಂಬೆಱಗಾಗಿರ್ದಂ ರತೀಶನಸ್ತವಿಳಾಸಂ
ಈ ತೆಱದಿಂ ಬೆಱಗಾಗಿ ನಿಶಾತ ತಪೋಗಾತ್ರಧರನನೆಸಲಾಱದ ಮಾಜಾತನನೀಕ್ಷಿಸಿ ಗಗನದೊಳಾತುರಿಸುವ ಹರಿಯುಜರ್ಗೆ ನಾರದನೆಂದಂ
ಜಲದೊಳಗಣ ಜಲಜದವೋಲ್ತಿಲದೊಳಗಣ ತೈಲದಂತೆ ಕಾಷ್ಟದ ನಡುವುಜ್ಜ್ವಲಿಸುವ ಶಿಖಿಯಂತೊಪ್ಪುವಚಲಶಿವನಂ ಕಾಮನೆಸುಗೆ ಕೆಯ್ಕೊಂಡಪುದೇ
ತ್ರಿಣಯನನಂ ಹರನಂ ನಿರ್ಗುಣನಂ ಸಡಿಫಡ ರತೀಶನಿಸುವನೆ ಹೋ ಬೇಡಣಕದ ಮಾತೆಲ್ಲಿಯದೆತ್ತಣ ಕಾಮನದೆತ್ತಣಭವನೆತ್ತಣ ಬಾಣಂ
ವ. ಎಂದು ಗಗನಾಂಕಣದೊಳ್ ಕುಣಿವ ಸಂಗ್ರಾಮಲಂಪಟನಪ್ಪ ನಾರದಮುನೀಂದ್ರಂ ನಾರಾಯಣ ನೀರಜಸಂಭವರ್ಗೆ ನಲಿನಲಿದು ಪೇಳುತ್ತಿರ್ಪಿನಮಿತ್ತಲ್,
ನಡೆತಂದಳ್ ಶಿವಪೂಜೆಗೆಂದಗಜೆ ಪುಷ್ಪವ್ರಾತಮಂ ಕೊಂಡು ಸಂಗಡದೊಳ್ ಬರ್ಪ ವಿಲಾಸಿನೀನಿಕರದಿಂ ಸೌರಭ್ಯಲೋಲುಪ್ತಿಯಿಂಗಡಣಂಗೊಂಡ ಶಿಳೀಮುಖಪ್ರಕರದಿಂ ಸುಯ್ಗಂಪಿನೊಳ್ ಸಾರ್ದು ಮುಂಗುಡಿಯೊಳ್ ತೀಡುವ ದಕ್ಷಿಣಾನಿಲನಿನೊಪ್ಪಂಬೆತ್ತ ವಿಸ್ತಾರದೊಳ್
ಬಂದು ನವೀನ ಪುಷ್ಪಕುಲಮಂಡನಮಂ ಜಡೆಯೊಳ್ ಭುಜಂಗಳೊಳ್ಸಂದ ಕರಂಗಳೊಳ್ ಶಿವನ ತೋಳುರಃಸ್ಥಳದೊಳ್ ಪದಂಗಳೊಳ್ನಿಂದು ವಿಳಾಸದಿಂದಗಜೆ ಸಿಂಗರಿಸುತ್ತೆ ಕಟಾಕ್ಷಕಾಂತಿಯೊಳ್ಸಂದಣಿಗೊಳ್ವ ಕಾಮಕುಲಮಂದೊಗೆಯುತ್ತಿರೆ ನಾಡೆ ನೋಡಿದಳ್
ವ. ಅಂತು ನೋಟದೊಳ್ ಕೋಟ್ಯನುಕೋಟಿ ಕುಸುಮಾಯುಧರ್ ಪುಟ್ಟುತ್ತಿರೆ ಪುಷ್ಪಾಂಜಲಿಯಂ ಪಿಡಿದು ಕಪರ್ದಿಯ ತಪಮೆಂಬ ಶಶಿಕಾಂತಶಿಳಾತಳ ದೊಳ್ ಬಿಳ್ದ ಚಂದ್ರಕರಂಗಳಂತೆಯುಂ ಶಂಭುವಿನನೆಳ್ಚಱಿಕೆಯೆಂಬ ಚಂದ್ರೋದಯ ಮಪ್ಪನ್ನಂ ಸೈರಿಸದೆ ಪರಿದು ಮುತ್ತುವ ಚಕೋರಿಗಳಂತೆಯುಂ ಹರನ ಕರಣಂಗಳೆಂಬ ಬಲ್ನನೆಗಳಲರ್ವನ್ನಮಿರಲಾಱದೆ ಪರಿದೆಱಗಿ ಸುತ್ತಿ ಮುತ್ತುವ ಮಧುಕರಂಗಳಂತೆಯುಂ ಬೇಗಮೀಗಳೆ ನಿನ್ನ ಪಕ್ವತರಮಂ ಮಾಳ್ಪೆನೆಂಬ ಭೀಂಕೃತಿಯಂ ನುಡಿದು ಪರಿದು ಬೆರಸುವ ಕುಸುಮಶರಂಗಳಂತೆಯುಮಿರ್ದು ತನ್ನ ಸರಸದೃಷ್ಟಿಗಳಿಂ ಹರನಂ ನೋಡುತುಂ ತಪೋಭರಮಂ ಬಿಡಿಸಲಿರ್ದ ಮೃಡಾನಿಯಂ ಕುಸುಮ ಕೋದಂಡಂ ಕಂಡು,
ಇನ್ನಂಜೆನಂಜೆನಾಹಾಉನ್ನತಬಲವಾಯ್ತೆನುತ್ತೆ ವಿಭ್ರಮ ಬಳಸಂಪನ್ನಂ ಕಾಮಂ ತೆಗೆದಂತನ್ನಗ್ಗದುದಂಚ ಪಂಚಬಾಣಮನಾಗಳ್
ನಳನಳಿಸುವಿಕ್ಷುಚಾಪದೊಳಳವಡೆ ನಡೆನೋಡಿ ಹೂಡುತೈದಂಬಂ ಸಂಚಳಿಸದೆ ಶಂಕರನ ಮನಂಚಳಿಯಿಪುದಂ ಸಾರ್ದು ಪಾರ್ದು ತೆಗೆನೆಱೆದಿರ್ದಂ
ತೆಗೆದನಾಕರ್ಣಂಬರಂ ಶಂಬರರಿಪು ನೆಱೆ ಹೂಡಿರ್ದ ಪುಷ್ಪಾಸ್ತ್ರದೊಂದುಜ್ಜುಗಮಾಕಾಶಸ್ಥನಾಕೌಕರೊಳೊದವಿದನೂನಾರ್ತಿ ಕೂರ್ತೆಯ್ದೆ ನಿಂದಿರ್ಪಗಜಾಚಿತ್ತಾಭಿಲಾಷಾವಿತತಿ ನೆರೆದು ಭೂತೇಶ ಚಿತ್ತಾಂತದೊಳ್ ಪೊಕ್ಕು ಗಭೀರೋದ್ಯತ್ ತಪೋಬೀಜಮನತಿಭರದಿಂದೊತ್ತಿ ಮುತ್ತಿತ್ತು ಸುತ್ತಂ
ವ. ಇಂತು ಸಕಲಜಗದ್ಧಿತಾರ್ಥಮಪ್ಪ ಹರಿವಿರಿಂಚಿಗಳ ಮನದ ಬಯಕೆಯುಂ ಕಂದರ್ಪನ ಪಂಚಬಾಣಾನುಸಂಧಾನಮುಂ ಪಾರ್ವತಿಯ ಮನೋರಥಮುಂ ಮುಪ್ಪುರಿಗೊಂಡು ಶಿವನ ನಿಷ್ಕ್ರಿಯಾತ್ಮಕ ನಿರುಪಾಧಿಕ ನಿರಾವರಣ ಸ್ವಾನುಭವ ಸಂವೇದ್ಯ ಸ್ವಯಂಪ್ರಕಾಶಮಂ ಸುತ್ತಿ ಮುತ್ತಿ ಪತ್ತಿ ಚಿಗಿಲ್ತು ಬಿಡದಿರೆ ನಿರ್ವಿಕಾರಸ್ವರೂಪನಪ್ಪ ಪರಮಂಗೆ ಸ್ವಪ್ನೋಪಮಾಹಂ ಮಮತೆ ತಲೆಯೇಱೆ ಜೀವನಾಗಿ ಜೀವನಿಂ ಪ್ರಾಣಾನಿಲಂ ಪ್ರಾಣಾನಿಲನಿಂ ಚಿತ್ತಂ ಚಿತ್ತದಿಂದಹಂಕಾರಂ ಅಹಂಕಾರದಿಂ ಬುದ್ಧಿ ಬುದ್ಧಿಯಿಂ ಮನಂ ಜನಿಯಿಸಿತ್ತಂತರಂಗಬಹಿರಂಗಭಾವಮಂ ನೆನೆಯೆ ನೆನೆವಲ್ಲಿಂ ಮುನ್ನಂ ಮದನನ ಪಂಚಬಾಣಂ ಪರಿತಂದು ನೆರೆದಡಿಪಿ ಬೆರಸಿ ಕವಿದು ಮನಮನಿರ್ಮೆಯ್ಗಂಡು ಸಹಸ್ರಮುಖದಿಂ ಸಂಚಳಮನೀಯೆ ನಿಲಲ್ ಬಾರದೆ ತಪೋಭರದ ಬೆಸುಗೆ ಬಿಡುವಂತೆ ಮೆಯ್ಯ ಸಂಪುಟಂ ಬಿರ್ಚಲೊಡಂ ನೋಡಿ ನೋಡಿ ನೋಡಲಣ್ಮದೆ ಪುಷ್ಪಶರಮಂ ನೂರ್ಮಡಿಸುವಂತೆ ಪುಷ್ಪಾಂಜಲಿಯಂ ಕೊಟ್ಟಂತೆ ಕಂಪಿಸಿ ಮುಂತೆ ಮೆಯ್ಯಿಕ್ಕಿರ್ದ ಗಿರಿಜಾತೆಯಂ ಭೂತೇಶ್ವರಂ ಕಂಡಾನೇಕೆಯೀ ಮಾನಿನಿಯೇಕೀ ತಪದೊಳೆಲ್ಲಿಯದೆತ್ತಣಿಂ ಬಂದುದಾರಿಂದಾದುದೆಂದು ಕಾಮನಿರ್ಪ ವಾಮಭಾಗಮಂ ನಿಟಿಲಾಕ್ಷಂ ನಸುಗೋಪದಿಂ ನೋಡಿದಾಗಳ್,
ನೋಡದ ಮುನ್ನಂ ಕೋಪಂನಾಡೆಯುಮೊತ್ತರಿಸಿ ನೀಳ್ದು ನಿಟಿಲೇಕ್ಷಣದೊಳ್ಕೂಡೆ ಬಳೆಬಳೆದು ಸುಳಿಸುಳಿದೀಡಿಱಿದೊಳಗೊಳಗೆ ಘುಳುಘುಳಿಸಿ ಕುದಿದಾಗಳ್
ಪೊಗೆದುದು ಪೊತ್ತಿದತ್ತು ಕಿಡಿಯಿಟ್ಟುದು ನಾಲ್ದೆಸೆದೋಱಿದತ್ತು ಬಾನ್-ಗೊಗೆದುದು ನಿಂದು ಪೊಂಬೆಳಗುಮಂ ಪರಪುತ್ತದು ಧಂಧಗಿಲ್ ಧಗಿಲ್ಧಗಿಲೆನುತಟ್ಟಿ ತಟ್ಟಿದುದು ಮುಟ್ಟಿತು ಸುಟ್ಟಿತು ತಿಂದು ತೇಗಿದತ್ತಗಿಯದೆ ನಿಂದ ಪೂಗಣೆಯನಂ ಪಣೆಗಣ್ಣುರಿ ಹಂಪೆಯಾಳ್ದನಾ
ಇಟ್ಟಣಿಸಿ ಘುಡುಘುಡಿಸಿ ಕಿಡಿಗುಟ್ಟಿ ಕನಲ್ದಡಸಿ ಸಿಡಿಲ ಬಳಗದ ಮುಳಿಸಂತೊಟ್ಟುದು ಬಿಸುಗಣ್ಣುರಿ ಪೊಱಮಟ್ಟುದು ಸುಟ್ಟುದು ರತೀಶನಂ ನಿಮಿಷಾರ್ಧಂ
ಗಗನದೆ ಹರಿಸುರಪತಿಗಳ್ಜಗದ್ಧಿತಾರ್ಥಂ ಮಹೇಶ ಕರುಣಿಪುದೆಂಬನ್ನೆಗಮಿತ್ತಲ್ ಘಱಿ ಘಱಿ ಭುಗಿಭುಗಿಲೆನೆ ನೆಱೆ ಕಾಮನುರಿದು ಕರಿಮುಱಿವೋದಂ
ತೊಟ್ಟನೆ ಭಾಳಾನಲನಿರದೊಟ್ಟಯಿಸಿಯೆ ಕುಸುಮಶರನನುರುಪಿದ ಪದದೊಳ್ಪುಟ್ಟಿತುಮಂ ಪೋದುದುಮಂಸುಟ್ಟುದುಮಂ ಕಾಣಬಾರದಾಯ್ತಾ ಕ್ಷಣದೊಳ್
ವ. ಅಂತುಮಲ್ಲದೆ
ಅರರೇ ಭುರ್ಭುಗು ಭಾಪುರೇ ಭುಗು ಭುಗು ಪ್ರಜ್ವಾಲೆ ಮಜ್ಜಯ್ಯ ದೇವುರೆಮೇಘಾನಲ ವಿಸ್ಫುಲಿಂಗಮಮಮ ಪ್ರದ್ಯೋತವಯ್ಯಯ್ಯ ಭೀಕರವಾಹಾ ಛಿಣಿಛಿಳಿಲ್ ಛಿಟಿಲ್ ಭಲರೆ ಭಾಳಾಭೀಳಮೆಂದೆಂದು ನಿರ್ಜರಲೋಕಂ ಬೆಱಗಾಗೆ ಸುಟ್ಟುದು ವಿರೂಪಾಕ್ಷಾಕ್ಷಿ ಕಂದರ್ಪನಂ
ಸಂದಣಿಸಿ ಪತ್ತಿದುರಿ ಘರಿಲೆಂದುರುಪಿಡೆ ಬೇಗದಿಂದೆ ಉರಿದಾಕ್ಷಣದೊಳ್ಬೆಂದ ನುಲಿಯಂತೆ ಮದನಂನಿಂದಿರೆ ಕಂಡಭವನೆಯ್ದಿ ಮುಳಿದಂ ತುಳಿದಂ
ಜಯಶೀಲಂ ಪ್ರಭು ಪಾವಕನಯನಂ ವಿಷಕಂಠನಹಿವಿಭೂಷಂ ಕೋಪೋದಯನಭವಂ ಸ್ಮರಭಸ್ಮಾವಯವಂ ತಾನಾದನತುಳನಪ್ರತಿಮಂ
ವ. ಇಂತತಿ ಸ್ವತಂತ್ರಂ ಶತಪತ್ರನೇತ್ರಪೂಜಿತಪಾದಂ ಹೇಮಕೂಟಾಗ್ರದ ಮತಂಗಪರ್ವತದೊಳ್ ಮದನನಂ ಸುಟ್ಟುರುಪುತ್ತನಂಗ ಭಸ್ಮೋದ್ಧೂಳಿತಗಾತ್ರನಾಗಿ
ಮುಂತಿರ್ದೊಪ್ಪುವ ಗಿರಿಜಾಕಾಂತೆಯನೀಕ್ಷಿಸದೆ ನುಡಿಯಿಸದೆ ಸೋಂಕದೆ ನಿಶ್ಚಿಂತಂ ಸ್ವತಂತ್ರನಹಿಧರನಂತರ್ಧಾನಕ್ಕೆ ಸಂದನಲ್ಲಿಂ ಬಳಿಯಿಂ
ಶಿವನಧಿಕಾಕ್ಷಕ್ರೋಧೋದ್ಭವಶಿಖಿಯಿಂ ಮದನನುರಿಯೆ ರತಿಗತಿಶೋಕಂಕವಿದಳ್ಕಿದಳಿಂದುಗುಪಪ್ಲವಮಾಗೆ ಚಕೋರಿ ಕರಗಿ ಕೊರಗುವ ತೆಱದಿಂ
ವ. ಇಂತು ಮನಮಳ್ಕಿ ತನು ಬಳ್ಕಿ ಕೋಡಿ ಬಾಡಿ ಮತಿ ಕೆಟ್ಟು ರತಿದೇವಿಗತಿ ದುಃಖಂ ಪುಟ್ಟಿ ನಿಲಲಾಱದೆ ಕೊರಗುತುಂ ಪರಿದು ಬಂದು
ಬೆಂದಿರ್ದ ಕಾಮನಂ ಕಂಡಂದಳಲೊಳಗೇಱಿ ನುಡಿಯಲಱಿಯದೆ ನಿಲೆ ಶೋಕಂ ದಳವೇಱುತೆ ಮೀಱುತೆಸಂದಣಿಸುತ್ತಳಿಸಿತಸ್ತರತಿಯಂ ರತಿಯಂ
ವ. ಅದೆಂತೊಡೆ
ಎತ್ತಣ ಹರನೆತ್ತಣ ತಪಮೆತ್ತಣ ತಾರಕನ ಬಾಧೆ ಎತ್ತಣ ಬಿಸುಗಣ್ಎತ್ತಣುರಿ ಎತ್ತಣಿರವಿದುಎತ್ತಣ ಕೋಟಲೆಯನೆನಗೆ ಮಾಡಿದೆ ಮದನಾ
ಎಳೆಯನೆ ಸುಕುಮಾರನೆ ಸದಮಳನೆ ಸುಖಪ್ರದನೆ ಸೊಬಗೆ ಸುರತರುವೇ ತತ್ಫಳಮೆ ಸುಧಾರಸಮೇ ನಿನ್ನಳವಱಿಯದೆ ನೊಸಲ ಕಣ್ಣ ಮುಸುಕಂ ತೆಱೆದಯ್
ಅಸ್ವಪ್ನರನತಿಘೋರ ತಪಸ್ವಿಗಳನಪಾರಮಹಿಮರಂ ವಿಮಳಾಚಾರಾಸ್ವಾದಿಗಳಂ ಗೆಲ್ದ ಮನಸ್ವಿ ಲಲಾಟಾಗ್ನಿಗೆಂತು ಸವಿದುತ್ತಾದಯ್
ಕಂತುವೆ ನೀನಿಂತಾದೊಡದೆಂತುಳಿವೆನದೆಂತು ನಿಲ್ವೆನೆಂತೊಪ್ಪುವೆನಿನ್ನೆಂತುಸಿರ್ವೆನೆಂತು ಬಾಳ್ವೆನದೆಂತೀಕ್ಷಿಪೆನೆಂತು ಪೋಪೆನೆಂತಾನಿರ್ಪೆಂ
ಭಾವಿಸಿ ಭವನಂ ಕುಸುಮಾಸ್ತ್ರಾವಳಿಯಿಂದೆಚ್ಚು ಗೆಲ್ವೆಯೆಂದಿರ್ದೆನಿದಿಂತೋವೋ ನಿಟಿಲಾಗ್ನಿಯಿಂದಂಬೇವುದನಾನೆತ್ತ ಬಲ್ಲೆನಲರ್ವಿಲ್ಲರಸಾ
ಲಾವಣ್ಯಂ ಲಯಮಾಯ್ತು ವಿಭ್ರಮವಿಳಾಸಂ ಮಾಯಮಾಯ್ತಕ್ಕಟಾಜೀವಂ ಬೆಂದುದು ಚೆಲ್ವು ಸತ್ತುದು ಸುಖಂ ಹಾಳಾಯ್ತು ಕಂದರ್ಪ ಸದ್ಭಾವಂ ಭಸ್ಮಮದಾಯ್ತು ಮೆಯ್ಮೆ ಮಡಿಯಿತ್ತುತ್ಸಾಹವಿಂಗಿತ್ತದಿನ್ನೇವೇಳ್ವೆಂ ನಡೆದೆತ್ತ ಸಾರ್ವೆನಿಳೆಗಿನ್ನೇನಪ್ಪೆನೆಂತಿರ್ಪೆನೋ
ಎಲ್ಲಿತ್ತೊ ಶಶಿಯ ಬೆಳ್ಗೊಡೆಎಲ್ಲಿತ್ತೋ ಪೂತ ನೂತ್ನ ಚೂತಗಜಂ ತಾನೆಲ್ಲಿತ್ತೊ ಪಂಚಬಾಣಮದೆಲ್ಲಿತ್ತೋ ಕುಸುಮಚಾಪ ಭ್ರಮಮೀಗಳ್
ಎಲೆ ಸುರತಕಾಮಧೇನುವೆಎಲೆ ಸುರತಾಂಬೋಧಿಚಂದ್ರ ಎಲೆ ಸುರತಮಹೋತ್ಪಲ ಸೂರ್ಯ ಎಲೆ ಸುರತಸಂಕುಲಪರಮಾರಾಧ್ಯ ಎತ್ತಡಂಗಿದೆ ಮದನಾ
ಲಕ್ಷ್ಮಿಗೆ ನೆಱೆ ಪುಟ್ಟಿರ್ದಖಿಲಕ್ಷ್ಮಾಪತಿಯೆನಿಸಿ ಬಾಳ್ದು ಪುರಹರನ ಲಸತ್ಪಕ್ಷ್ಮಪುಟಾಗ್ರಂ ಬಿರ್ಚಿದಸೂಕ್ಷ್ಮದ ಕಾಲದೊಳೆ ಘಳಿಲನುಳಿದಯ್ ಮದನಾ
ಕೇಳೆಲೆ ಮನ್ಮಥ ಹಂಸೆಯತೂಳದ ತಳ್ಪಂ ಕರಂ ಕಠಿನಮೆಂದೀಗಳ್ಭಾಳಾಕ್ಷಿಯರಮನೆಯೊಳಾಭೀಳದ ದಳ್ಳುರಿಯ ಮಂಚದೊಳ್ ಪವಡಿಸಿದಯ್
ವ. ಅಂತುಮಲ್ಲದೆ
ಹಾ ಮದನ ಹಾ ಮನೋಹರಹಾ ಮಕರಪತಾಕ ಹಾ ಮಹಾವಿಭ್ರಮ ಹಾಹಾ ಮನ್ಮಥ ಹಾ ಸಮ್ಮದಹಾ ಮತ್ಪ್ರಾಣೇಶ ಹಾ ವಿಳಾಸ ವಿನೋದಾ
ಕುಸುಮಾಭರಣಾವಳಿಗಳ್ಬಸಮಲ್ಲಂ ಪೊಱೆಯಿವೆಂಬ ಸುಕುಮಾರತೆಯೊಳ್ಬಿಸುಗಣ್ಣ ಮಿಸುಪ ಕೋಪದಪೊಸ ತುಡಿಗೆಯನೆಂತು ಸೈರಿಸಿದೆ ಕಂದರ್ಪಾ
ವ. ಮತ್ತಮಲ್ಲದೆ ಪಂಚಬಾಣನ ಸರ್ವಗುಣಂಗಳಂ ನೆನೆನೆನೆದು ಸೈರಿಸಲಾಱದೆ ಮತ್ತೆ ಮತ್ತೆ ಶೋಕಂಗೆಯ್ದು
ಪಸಿವಱಿಯದೆ ತೃಷೆಯಱಿಯದೆದೆಸೆಯಱಿಯದೆ ಮದನ ಮದನ ಪಲವುಂ ಕಾಲಂಕುಸುಮದ ಲಿಂಗಮನೊಸೆದರ್ಚಸಿದ ಫಲಂ ಕಿರ್ಚಿನೊಳಗೆ ಬೇವಂತಾಯ್ತೇ
ಸುರತ ಶ್ರಾಂತಿಯೊಳೀಷತ್ಪರಿಸುಪ್ತಿಯನೆಯ್ದಿ ಸುಖದೊಳಾನಿರೆ ನೀಂ ಮೆಯ್ಗರೆದೆನ್ನನಂದು ನೋಯಿಪಪರಿ ತಾಂ ದಿಟಮಾದುದಿಂದು ಮನ್ಮಥಭೂಪಾ
ಬೆಳಗಾಯ್ತುಪ್ಪವಡಿಸು ಬೆಳಬೆಳಗುವ ಮಣಿಮುಕುರಮಂ ನಿರೀಕ್ಷಿಸು ಹಂಸಾವಳಿಯಂ ನಡೆಪಾಡಿಸು ಕೋಕಿಳನಾದಮನಾಲಿಸುಸಿರದಿರ್ಪರೆ ಮದನಾ
ಎಂದುಂ ಮುಳಿದೊಡೆ ತಿಳಿವಂಮುಂದಿಟ್ಟಲ್ಲದೆ ಮದೀಶ ಮುಳಿಸಿಲ್ಲಿಲ್ಲೀಯಂದಂ ಪೊಸತಿಂದಿನ ಮುಳಿಸೆಂದಿನ ಮುಳಿಸಿನವೊಲಲ್ತು ಮದನನೃಪಾಲಾ
ಪನ್ನಗಭೂಷಣ ವಿಷಸಂಪನ್ನನ ನಿಷ್ಠುರ ಗುಣಂಗಳುರಿಪುವುದುಚಿತಂನಿನ್ನಂ ನಿನ್ನೀ ಸದ್ಗುಣಮೆನ್ನಂ ನೆರೆದುರಿಪಲೇಕೆ ಮನ್ಮಥರಾಜಾ
ವ. ಎಂದು ಕುಸುಮಕೋದಂಡನ ಸುಧಾಮಯ ಸದ್ಗುಣಂಗಳನೆಣಿಸಿಯೆಣಿಸಿ ಪಲುಂಬಿ ಪಂಬಲಿಸಿ ಮತ್ತೆ ಮತ್ತೆ ಮಾಣದೆ
ಮದಕರಿ ಎತ್ತ ಪೋದೆ ವರಮೂರ್ತಿ ಅದೆತ್ತಲದೃಶ್ಯಮಾದೆ ಮದ್ವದನಸರೋಜಭೃಂಗನೆ ಅದೆತ್ತಲಡಂಗಿದೆ ನೀನದೆತ್ತ ಮಳ್ಗಿದೆ ಮಧುಮಿತ್ರ ಎತ್ತ ಲಯವಾದೆ ಮದೀಶ್ವರ ಎತ್ತಣ ಕ್ರಮಕ್ಕೊದವಿದೆ ಎತ್ತ ಸಾರ್ದೆ ಕಳಿದೆತ್ತಲಣಂ ತವಿಲಾದೆ ಮನ್ಮಥಾ
ವ. ಎಂದಿಂತು ಶೋಕಿಸುತ್ತಂ ವ್ಯಾಕುಲಚಿತ್ತೆ ವಲ್ಲಭವಿರಹಿತೆ ಸಕಳಸುಖ ವಿರಹಿತೆಯಪ್ಪ ರತಿದೇವಿ ನಿಂದಿರ್ದು ಬಿಸುಸುಯ್ದು ಬಸಿಱಂ ಹೊಸೆದು ಕೆಯ್ಯೆತ್ತಿ ದೆಸೆ ದೆಸೆಯಂ ನೋಡಿ
ಮೊಱೆಯೋ ಮೊಱೆಯೋ ಶಿವಧೋಕಱೆಗೊರಲನ ಕಣ್ಣ ದಾಳಿ ಕುಸುಮಾಯುಧನಂನೆಱೆ ಮುತ್ತಿತ್ತಯ್ಯೋ ಇದನಱಿವವರಿಲ್ಲಕ್ಕಟಾ ಕೃಪಾಳುಗಳಿಲ್ಲಾ
ನೆಲನೇ ನಭವೇ ಶಿಖಿಯೇಜಲವೇ ರವಿಯೇ ಶಶಾಂಕನೇ ಮಾರುತನೇಬಲವಳಿದವಳನನಾಥೆಯನಲಘುತರಾಘೌಘೆಯಂ ನಿರೀಕ್ಷಿಸಿರೆನ್ನಂ
ವನದೇವತೆಯರಿರಾ ನಂದನದೇವತೆಯರಿರ ದೆಶೆಯ ದೇವತೆಯರಿರಾಘನಪಾಪಂ ಪುದಿದಿರ್ದೀವನಿತೆಯನೊಳಕೊಳ್ಳಿರೇ ಅನಾಥೆಯನೆನ್ನಂ
ವ. ಎಂದಿಂತು ದೆಸೆದೆಸೆಗೆ ಕರೆಕರೆದು ಬಾಯಾಱಿ ಬಲ್ಪಳಿದು ನಿಂದಿರಲಾಱದೆ ಕಾಲ್ ಕುಪ್ಪಳಿಸಿ ಭೋಂಕನೆ ಕುಳ್ಳಿರ್ದು ತನ್ನೊಳಗೆ ತೆಕ್ಕನೆ ತೀವಿ ತೆರೆಮಸಗುವ ಶೋಕರಸಮುರ್ಕಿ ಪೊಱಪೊಣ್ಮಿದುದೆಂಬಂತೆ ಕಣ್ಣ ನೀರ್ ಕಱೆದೊತ್ತರಿಸಿ ಪರಿಯೆ ಮತ್ತೆಮತ್ತಳುತ್ತುಂ ಗಂಟಲುರ್ಬಿ ಸೆರೆಗಬಿಗಿದು ಕಣ್ ಕೆಂಪೇರಿ ಮಿಕ್ಕು ನೆಗೆವ ಬಿಕ್ಕಿನೊಳ್ ಬೆರೆಸಿ ನಾನಾವಿಧದಿಂ ನಾಲಗೆಯೊಳ್ ಪೊಱಮಡುವ ಶಿಥಿಲಾಕ್ಷರಂ ಶೋಕಾಗ್ನಿಯೊಳ್ ಬೆಂದುಗಿದು ಸೀದು ಸೀಕರಿವೋಗಿ ಪೊರಳ್ದುರುಳ್ದು ಬರೆ ನೆಲೆಗೊಂಡ ಗದ್ಗದದಿಂ ಪಲುಂಬಿ ಪಳಯಿಸುತುಂ ಮತ್ತಂ ಮನ್ಮಥನುರಿದ ದುಃಖಾನಳನಿಂ ಚಿತ್ತಂ ಹೊತ್ತಿಯಹಂಕಾರಂ ಹೊಗೆದು ಬುದ್ಧಿಯುರಿದು ಮನಂ ಬೆಂದುರಿಯುಸುರನುಸುರಿಕ್ಕೆ ಕೆಲಬಲದ ಮುಂದಣ ಗುಲ್ಮಲತೆಗಳ್ ಘಳಿಲನೆ ಘಱಿಘಱಿಲನುರಿಯೆ ವಶಮಲ್ಲದ ದುಃಖದಿಂ ಬಿಸುಸುಯ್ಯುತ್ತುಂ ಮತ್ತಂ ಗ್ರಹಣಕ್ಕಂಜಿ ಗಗನತಳದ ಮೃಗಧರಬಿಂಬಂ ಪೊಡವಿಯೊಳ್ ಬಿಳ್ದೊಡನೊಡನೆ ಬಿಡದೆ ಬೆಂಬತ್ತಿ ಕಡುವೇಗದಿಂ ಬಂದುರ್ವಿಯೊಳ್ ಸರ್ವಗ್ರಾಸಂಗೊಂಡು ನೆಲದೊಳಿ ಟ್ಟೊರಸುವ ರಾಹುಮಂಡಲದಂತೆ ಕೆದಱಿದ ಮುಡಿಕಟ್ಟು ಪಚ್ಚುವರೆದು ಮುಚ್ಚಿ ಮುಸುಂಕಿ ಭಾಳತಳಮಂ ಭೂತಳದೊಳಿಟ್ಟಾದ ನೋವಿಂ ತೇದುಕೊಳುತ್ತುಂ ಇಂತು ಕೇಳ್ವ ಪಶುಪಕ್ಷಿಮೃಗಗುಲ್ಮಲತೆವೃಕ್ಷಾವಳಿಗಳ್ಗೆ ಕರುಣಂ ಪುಟ್ಟುವಂತೆ ರತಿಯತಿ ಶೋಕಂಗೆಯ್ದು ದುಃಖಪ್ರಳಾಪಂಗೆಯ್ದು ಮೆಯ್ಯಿಕ್ಕಿ ಬಸಿಱಂ ಪೊಸೆದು ಚೇತನಂಗೆಟ್ಟು ಭೂತಳದೊಳ್ಬಿಳ್ದು ಕೆಚ್ಚುಗಟ್ಟಿದಳಲಿಂ ಮೂರ್ಛೆವೋಗಿ ಕೊರಲೊಳ್ ಹರಣಂ ಕಣ್ಣೊಳ್ ಕಾರ್ಪಣ್ಯಮಂ ಪಡಿಮೊಗದೊಳ್ ನಿಡುಸುಯ್ಯಂ ನಾಲಗೆಯೊಳ್ ವಿಕಳತೆಯಂ ಮನದೊಳ್ ಪರವಶತೆಯಿಂ ತನುವಿನೊಳ್ ಚೇತನಮಂ ಪಿಡಿದು ಗಗನದಿಂ ಬಿಳ್ದಂತೆ ದುಃಖದೊಳಳ್ದಂತೆ ದೈನ್ಯದೊಳೆಳ್ದಂತೆ ಶೋಕಂ ಹೊಸೆದು ಬಿಸುಟಂತೆ ದುಃಖಂ ರೂಪುಗೊಂಡಂತೆ ಮಱೆದೊಱಗಿರ್ದಾಗಳ್,
ಗಿರಿಸುತೆ ಬಂದು ಕಂಡು ಬೆರಗಾಗಿ ಕೃಪಾಕರಚಿತ್ತೆ ಹತ್ತೆ ಸಾರ್ದು ರತಿಯ ಮೆಯ್ಯುಮಂ ಮೊಗಮುಮಂ ತಡವುತ್ತಿರೆ ಸೊಂಕಿನಿಂದೆ ಚೇತರಿಸುತೆ ಕಣ್ಗಳಂ ತೆಱೆದು ಪಾರ್ವತಿಯಂ ನಡೆ ನೋಡುತಂ ದಯಾಪರೆ ಭುವನೈಕಮಾತೆ ಪದೆದೀಕ್ಷಿಪುದೆನ್ನಯೆ ದುಃಖದೊಪ್ಪಮಂ
ವ. ಎಂತು ನುಡಿದು ನಿಲಲಾಱದೆ
ಗಿರಿಜೆಯ ಪದಯುಗದೊಳ್ ರತಿಪೊರಳ್ದು ಪುಯ್ಯಲ್ಚಿ ಪೆರ್ಚಿದಳಲಿಮ್ಮಡಿಸುತ್ತಿರೆ ಪಳಯಿಸುತುಂ ದುಃಖಾತುರೆ ಶೋಕಂಗೆಯ್ದು ಸುಯ್ದು ಪೊಯ್ದಳಲುತ್ತುಂ
ಕರುಣಿಸು ತಾಯೇ ತವರೇಪರಿರಕ್ಷಿಸು ದಯೆಯೊಳೀಕ್ಷಿಸುಡುಗಿಸು ನೋವಂಪರಿಹರಿಸು ದುಃಖಮಂ ವರಗಿರಿರಾಜತನೂಜೆ ಕಾದುಕೊಳ್ಳೆನ್ನಸುವಂ
ವ. ಎಂದಳಲ್ವ ರತಿಯಂ ಕಂಡು ಮನಂಗೊಂಡು,
ಬೇಡುಡುಗು ಶೋಕರಸಮಂನೀಡಾಗದೆ ನಿನ್ನ ವಲ್ಲಭನನೀಶ್ವರನಂಬೇಡುವೆನಾವರ್ಥದೊಳಂಮಾಡುವೆನೆಲೆ ಪರಮಹರ್ಷಮಂ ನಿನಗೆ ರತೀ
ಎಂದಗಜೆ ಬೆಸಸೆ ಶೋಕಮನಂದುಡುಗುತಡಂಗಿಸುತ್ತುಮಳಲಂ ಮನದೊಳ್ಸಂದಣಿಪ ದುಃಖಮಂ ಮಱೆದೊಂದಿದಳಾ ರತಿ ಭವಾನಿಯುಜ್ಜ್ವಳವಚಮಂ
ವ. ಆ ಸಮಯದೊಳ್,
ಇಂತು ರತಿಗಭಯಮಂ ಕೊಟ್ಟಂತಕಹರನಿರದೆ ಪೋದ ಪರಿಯಂ ಭರದಿಂಚಿಂತಿಸಿ ಜಯವಿಜಯೆಗಳೊಡನಿಂತೆಂದಳ್ ಗಿರಿಜೆ ಮನದ ಮುನಿಸಿಂದಾಗಳ್
ಆನಿಂತಿಂತರ್ಚಿಸುತ್ತುಂ ಗತಿ ಮತಿ ಪತಿಯೆನ್ನಾಯುವೆನ್ನಾತ್ಮತತ್ತ್ವಂತಾನೆಂದುತ್ಸಾಹದಿಂದಿರ್ದಚಳಪತಿಯ ಮೇನಾಖ್ಯೆಯೊಂದಳ್ಕಱಂ ಬಿಟ್ಟಾನಂದಂಗೂಡಿ ಕಾರುಣ್ಯಮನನವರತಂ ಪಾರುತಿರ್ಪಲ್ಲಿ ಕೇಳಿಂತೇನೆಂದುಗ್ರಂ ಸಮಗ್ರಂ ರಜತಗಿರಿಗೆ ಪೋದಂ ನಿಕೃಷ್ಟಾತ್ಮನಾದಂ
ವ. ಅಂತುಮಲ್ಲದೆ,
ತಾನಿರ್ದಲ್ಲಿಗೆ ನಡೆತಂದಾನರ್ಚಿಸೆ ಕಾಮವೈರಿ ನುಡಿಯಿಸದಂತರ್ಧಾನಕ್ಕೆ ಸಂದನದಱಿಂದಾನಿರ್ದಲ್ಲಿಗೆ ಸಮಂತು ತನ್ನನೆ ತರ್ಪೆಂ
ಉಗ್ರತಪೋಭರಾಕೃತಿಯನಾಂತು ಜಗಂ ಬೆಱಗಾಗೆ ನಿಶ್ಚಲಾವ್ಯಗ್ರಮನೋಪ್ರಬಲೆಯಾಗಿ ಬಿಸಿಲ್ ಮಳೆಸೀತದೊಳ್ ನಗಪ್ರಾಗ್ರದೊಳಂ ಕುಜಪ್ರತತಿಯೊಳ್ ಸರಸೀಕುಳದೊಳ್ ವಿರಾಜಿಸುತ್ತಗ್ರನನೀಶನಂ ವಿಪುಳನಿಚ್ಚಳನಂ ಚಲದಿಂದೆ ತಂದಪೆಂ
ವ. ಎಂದಿಂತು ಸಖೀಜನದೊಡನೆ ತನ್ನ ಸಾಮರ್ಥ್ಯದೊಂದುನ್ನತಿಯಂ ನುಡಿಯುತ್ತುಂ ಮೃಡಾನಿ ಮಹಾಮಾಯೆ ಸಕಳಜಗಜ್ಜನನಿ ನಿಖಿಳಾರಾಧ್ಯೆ ಅಕಳಂಕಚರಿತ್ರೆ ದಿವ್ಯಜ್ಞಾನಿ ಸರ್ವಬ್ರಹ್ಮಾಂಡಾಭರಣೆ ಹರನ ಮನೋಹರೆ ಸದಾಶಿವನ ಸುಖಮುಖಂ ಮಹಾದೇವನ ಮನೋರಥಂ ಚಲದ ಲಲನೆ ಬಲ್ಪಿನ ಭಾವಕಿ ಏಕನಿಷ್ಠಾನಿಧಿ ಪಶುಪತಿಯ ಪಟ್ಟದ ಮಹಾದೇವಿಯೆನಿಪ್ಪ ಶ್ರೀ ಪಾರ್ವತೀದೇವಿಯುಗ್ರತಪೋಭರನಿವೇಶನಾಭಿಮುಖಿಯಾಗಿ,
ಸರಸಿಜನೇತ್ರೆ ಪುಣ್ಯಮಯಗಾತ್ರೆ ಸದಾಶಿವನಂಗಪಾತ್ರೆಯತ್ಯುರುತರಮಾನಿ ನಿರ್ಮಳಭವಾನಿ ನಿರಂತರದಾನಿ ನವ್ಯಸುಂದರವರಮೂರ್ತಿ ಶರ್ವ ನಸುಕೀರ್ತಿ ಮಹೇಶ್ವರನಾರ್ತಿ ಬಂದಳೊಪ್ಪಿರೆ ಗಿರಿಜಾತೆ ಲೋಕಚಯಮಾತೆ ಜಗಕ್ಕೆ ವಿನೂತೆಯಳ್ಕಱಿಂ
ಪರಮಸ್ವಾಮಿ ಜಟಾಧರಂ ಶಶಿಧರಂ ಗಂಗಾಧರಂ ಕಾಲಸಂಹರನಜ್ಞಾನಹರಂ ಪುರತ್ರಯಹರಂ ಸೌಖ್ಯಾಕರಂ ಶಂಭು ಶಂಕರನಾನಂದಕರಂ ಸಮಂತೆನಗೆ ಭಕ್ತಿಜ್ಞಾನ ವೈರಾಗ್ಯಮಂಕರುಣಂಗೆಯ್ಗೊಲವಿಂದೆ ಹಂಪೆಯ ವಿರೂಪಾಕ್ಷಂ ಶಿವಾವಲ್ಲಭಂ
ಇದು ಸಮಸ್ತ ಸುರಾಸುರಮಕುಟ ಖಚಿತ ದಿನಕರಕರಾಧಿಕ್ಯ ಮಾಣಿಕ್ಯಪ್ರಭಾಪುಂಜರಂಜಿತಚರಣ ನೆನಿಪ ಪಂಪಾವಿರೂಪಾಕ್ಷ ಶ್ರೀ ಪಾದಕಮಲ ಮಕರಂದ ಮಧುಕರಾಯಮಾಣ ಸತ್ಕವೀಶ್ವರ ಹಂಪೆಯ ಹರಿಹರದೇವ ವಿರಚಿತಮಪ್ಪ ಶ್ರೀ ಗಿರಿಜಾಕಲ್ಯಾಣ ಮಹಾಪ್ರಬಂಧದೊಳ್ ಕಾಮದಹನವರ್ಣನಂ ಅಷ್ಟಮಾಶ್ವಾಸಂ


