IX
Girijākalyāṇa
ಪಾರ್ವತೀ ತಪೋವರ್ಣನಂ ವಿರೂಪಾಕ್ಷ ಪ್ರತ್ಯಕ್ಷೀಕರಣ ವರ್ಣನಂ
ಕಾರುಣ್ಯಾಕರನಭವಂಘೋರತಪೋಮಯ ತಪಃ ಪ್ರಮೋದಾವೃತ ವಿಸ್ತಾರಫಲಪ್ರದನೆಮಗೀಗೋರಂತತಿ ಭಕ್ತಿಯಂ ವಿರೂಪಾಕ್ಷ ಶಿವಂ
ಬಂದು ತಪೋನಿವೇಶನಮನೀಕ್ಷಿಸಿ ಬರ್ಪ ನಿದಾಘಕಾಲದೊಳ್ಸಂದ ನಗಾಗ್ರದಲ್ಲಿ ನಿಲವೇಳ್ಕುಮೆನುತ್ತಮೆ ನಿಂದು ಮೇನಕಾನಂದನೆ ತದ್ವಿಳಾಸಿನಿಯರಾನನಮಂ ನಡೆನೋಡೆ ಕಾಣುತುಂಸೌಂದರಿಯರ್ ಜಟಾರಚನೆಯಂ ತರದಿಂ ಭರದಿಂದೊಡರ್ಚಿದರ್
ವಿರಚಿಸಿದರ್ ಜಡೆಗಳನಾದರದಿಂ ದರಹಸಿತಬಿಸರುಹಾನನೆಯರ್ ಶಂಕರನರಸಿಗೆ ಗಿರಿಜಾತೆಗೆವರಭಸಿತಮನಂಗತತಿಯೊಳುದ್ಧೂಳಿಸಿದರ್
ವರಭಸಿತೋದ್ಧೂಳನಮಂಗಿರಿಜೆಗೆ ಸುರಸತಿಯರೊಲ್ದು ಮಾಳ್ಪೆಡೆಯೊಳ್ ಕಪ್ಪುರದ ರಜದಿಂದೆ ಪುಷ್ಪೋತ್ಕರಮಾಲೆಯನೊಸೆದು ಪೊರೆವ ತೆಱನಾಯ್ತಾಗಳ್
ವ. ಅಂತುಮಲ್ಲದೆ,
ವಾರಿಜಮುಖಿಯರ್ ಸಖಿಯರ್ತಾರಾಚಲನಾಥನರಸಿಗನುನಯದಿಂದಂಸಾರಮೃದುತರವಿಮಳವಿಸ್ತಾರಿತವಲ್ಕಲಮನೊಪ್ಪಲುಡಿಸುತ್ತಿರ್ದರ್
ವ. ಅಂತುಮಲ್ಲದೆ,
ಸಾಕ್ಷಾಚ್ಛಂಕರವಕ್ತ್ರಮಿವಕ್ಷಯಸುಖಮೀವ ಸುಕೃತಫಲಮಿವು ಸತ್ಯಂರಕ್ಷೆಯಿವೆನುತಗಜೆಗೆ ರುದ್ರಾಕ್ಷಿಗಳಂ ಕೂಡೆ ತೊಡಿಸಿದರ್ ಮಾನಿನಿಯರ್
ವ. ಇಂತು ಭಕ್ತಿಜ್ಞಾನವೈರಾಗ್ಯಯುಕ್ತಮಪ್ಪ ತಪೋಮಂಡನಂಗಳಂ ಸಂಗಡ ಮಿರ್ದಂಗನೆಯರ್ ಶೃಂಗರಿಸೆ ಮಂಗಳಮುಖಿ ಹೊಂಗಿ ಹೊರೆಯೇಱೆ
ಸಂದಣಿಸುವ ಜಡೆ ಬೆನ್ನಂಮಂದಯಿಸಿ ಮುಸುಂಕುತಿಳಿಯೆ ನೀಲಾಂಬುದಮಂಪಿಂದಿಕ್ಕಿ ಮುಂದೆ ಬೆಳಗುತೆನಿಂದೆಳಮಿಂಚಿನವೊಲಗಜೆ ನೆಱೆ ಮೆಱಿದಿರ್ದಳ್
ಅಳವಡೆ ಮುನ್ನಂ ಪತ್ತಿದಕಳಂಕಮಂ ಪೊರ್ದದಂತೆ ನಭದಿಂದಿಳಿತಂದಿಳೆಯೊಳ್ ಶಂಭುಗೆ ಮಿಗೆ ಶಶಿಕಳೆ ತಪಮಿರ್ಪಂತೆ ಗಿರಿಜೆ ತಪದೊಳ್ ನಿಂದಳ್
ಭಗ್ನಮನಮಲ್ಲದಚಲಿತೆಲಗ್ನವ್ರತೆಯಾಗಿ ಶಂಕರಪ್ರೇಮ ಮನೋನ್ಮಗ್ನಾಂಗಿ ಧೈರ್ಯನಿಧಿ ಪಂಚಾಗ್ನಿಯ ನಡುವಗಜೆ ವಿಪುಳತಪದೊಳ್ ನಿಂದಳ್
ವ. ಅದೆಂತೆಂದೊಡೆ,
ಮಿಗೆ ಸುತ್ತಿರ್ದ ದವಾಗ್ನಿ ಕಾಯ್ವ ರವಿಕಾಂತಚ್ಚಾಗ್ನಿಯತ್ಯುಷ್ಣಮಂನೆಗಪುತ್ತಿರ್ಪುದರಾಗ್ನಿ ಮೇಗೆ ಕವಿತರ್ಪಾದಿತ್ಯತೀವ್ರಾಗ್ನಿ ಬಂದೊಗೆದಾ ಬೇಸಗೆಯಗ್ನಿಯೆಂದೆನಿಸಿ ತೋಱುತ್ತಿರ್ಪ ಪಂಚಾಗ್ನಿ ಮಧ್ಯಗತಾಂಘ್ರಿಪ್ರಭೆ ನಿಂದಳುಗ್ರತಪದೊಳ್ ಶರ್ವಾಣಿಯವ್ಯಗ್ರದಿಂ
ಚಲದಿಂದಂ ನಗರಾಜಪುತ್ರಿ ಹೃದಯಾಬ್ಜಾವಾಸದೊಳ್ ಭಾಪು ನಿಶ್ಚಲನಂ ನಿರ್ಮಳನಂ ನಿರಾವರಣನಂ ನಿರ್ಮಾಯನಂ ನಿತ್ಯನಂನಿಲಿಸುತ್ತುನ್ನತವಕ್ತ್ರೆ ಸನ್ನುತತಪೋವಿಸ್ತಾರೆ ಮಾರ್ತಂಡ ಸಂಕುಲತೇಜೋನಿಧಿ ನಿಂದಳುಗ್ರತಪದೊಳ್ ಲೋಕಕ್ಕಗುರ್ವಪ್ಪಿನಂ
ವ. ಅಂತುಮಲ್ಲದೆ,
ನೆನೆಯುತೆ ದೇವಿ ನಿಷ್ಪ್ರವರನಂ ವರನಂ ವರನಂ ಮಹೇಶನಂಘನನಿಟಲಾಗ್ನಿಯಿರ್ಪ ಶಿವನಂ ಶಿವನಂ ಶಿವನಂ ನಗೇಶ ನಂದನೆ ಸಾರದೀ ಭುವನಮಂ ವನಮಂ ವನಮಂ ಭವಾನಿ ಭೋಂಕನೆ ತಪಮಿರ್ದಳುಗ್ರತಪಮಂ ತಪಮಂ ತಪಮಂ ವಿಭಂಗಿಸಲ್
ವರನುತಧೈರ್ಯೆ ಪುಣ್ಯಮಯವೀರ್ಯೆ ಸಮಗ್ರತಪಃಪ್ರಶೌರ್ಯೆ ಶಂಕರನ ಸುಖೈಕಭಾರ್ಯೆ ಪರಮಾಗಮಕಾರ್ಯೆ ಜಗದ್ಧಿತಾರ್ಯೆ ವಿಸ್ತರಘನತೂರ್ಯೆ ಶಂಭುಸುಖಪೂರ್ವೆ ವಧೂಜನವರ್ಯೆ ರುದ್ರಬಂಧುರನಿಜಧಾರ್ಯೆ ಸೂರ್ಯಶಿಲೆಯಂ ಬಲದಿಂ ಛಲದಿಂದೆ ಮೆಟ್ಟಿದಳ್
ವ. ಇಂತು ಸೋಮಧರನರಸಿ ಹೇಮಕೂಟಾಗ್ರದ ಮೇಲವ್ಯಗ್ರಂದಿಂದುಗ್ರ ತಪದೊಳ್ ನೆಲಸಿ ನಿಲೆ ತಪಸ್ತೇಜಂ ಮೂಜಗಮಂ ಪರ್ಬಿದಾಗಳ್,
ಮೃಗತತಿ ಸುಳಿಯುವು ಮಿಗೆ ಪಕ್ಷಿಗಳೆಳ್ದೆಱಗವು ಸಮೀಕರಣಂ ಸಂಚಲಿಸಂಗಗನದ ಖೇಚರರಾ ಬಟ್ಟೆಗೆ ಸಾರರ್ ನಗಜೆಯತುಳತಪದಾತಪದೊಳ್
ಆಸುರದ ಗಿರಿಜೆಯಗ್ರವಿಭಾಸುರತಪಕಂಜಿ ನಭದ ತಪನಂ ನಡೆಯುತ್ತಾ ಸರಿಸಮಂ ಕರಂ ಬಿಟ್ಟೋಸರಿಸಿಯೆ ನಡೆವನೆಂದೊಡೇವಣ್ಣಿಪೆನೋ
ಅಸಮಾನಮಚಳಮದ್ಭುತವಿಸರಮನೂನಪ್ರಭಂ ಶುಭಂ ಘನವಿಭವಂಪೆಸರಿಡಬಾರದು ಮಿಗೆ ನಿಟ್ಟಿಸಬಾರದು ನೋಡಬಾರದಂಬಿಕೆಯ ತಪಂ
ವ. ಎಂಬ ಸಾಮರ್ಥ್ಯಮನೊಳಕೊಂಡು ಜಡೆಗಳ ಬೆಡಂಗಿ ಭಸಿತದ ಭಾಳ ಲೋಚನೆ ರುದ್ರಾಕ್ಷಿಯ ಭದ್ರಾಂಗಿ, ನಾರ ಸೀಱೆಯ ಧೀರೆ ಗಿರಿಶಿಖರದ ಗರುವೆ, ಉಗ್ರತಪದ ವ್ಯಗ್ರೆಯೆನಿಪ ಪಾರ್ವತೀದೇವಿ ಪ್ರಚಂಡತರಪ್ರತಾಪತಪೋವೇಷದಿಂದಿರೆಯಿರೆ,
ದೆಸೆಯಂ ಕಾಹೇಱಿಸುತ್ತುಂ ತೃಣಕುಲಲತೆಯಂ ಸೀದು ಕರ್ಪೇಱಿಸುತ್ತುಂರಸೆಯಂ ಸಂತಾಪಿಸುತ್ತುಂ ಜಳಭರಿತತಟಾಕಂಗಳಂ ಶೋಷಿಸುತ್ತುಂಸಸಿಯಂ ವೃಕ್ಷಾಳಿಯಂ ಸುಟ್ಟುರಿಪುತೆ ಮೃಗಮಂ ಬೇಯಿಸುತ್ತದ್ರಿಯಂ ದಳ್ಳಿಸಿ ಸೀಳುತ್ತುಂ ವಿಶಾಳಂ ದವಶಿಖಿಯವೊಲಳ್ದತ್ತಮೋಘಂ ನಿದಾಘಂ
ವ. ಅಂತು ತೋಱಿದ ನಿದಾಘದಲ್ಲಿ,
ಪೊಸಬೇಸಗೆಯೊಳ್ ಮೃಗತತಿಯಸುವೆರಸಿರವೇಳ್ಕುಮೆಂದು ಕರುಣಿಸಿ ಮಿತ್ರಂಬಿಸಿಲಂ ಹಿಳಿದೊಡೆ ಬೆನ್ನೀರೊಸರ್ವಂತಿರ್ದುದು ಮರೀಚಿಕಾಜಲಮೆತ್ತಂ
ತೆರದಿಂದಂ ತೆರೆಮಸಗುವಮರೀಚಿಕಾಜಲಮನಿಳೆಯ ಜಲಮೆಂದು ಕರಂಹರಿಣಂಗಳ್ ಪರಿತಂದಾತುರಿಸುತ್ತುಂ ಬಿಸಿಲ ಬಯಲನೀಂಟಿ ಬಳಲ್ಗುಂ
ವಹ್ನಿ ಧರೆಯೊಳಗೆ ತೀವಿದಚಿಹ್ನಮಿದೆಂಬಂತೆ ಬಿಸಿಲ ಬೇಗೆ ಕರಂ ಮಧ್ಯಾಹ್ನದೊಳಳುರ್ದೊಡೆ ಮೃಗತತಿಜಾಹ್ನವಿಯೊಳ್ ಪುಗಲೆ ಬಯಸಿದುವು ಬೇಸಗೆಯೊಳ್
ವ. ಆ ಸಮಯದೊಳ್,
ಘರಿಘರಿಲೆಂದು ಸೀದುವು ವಿಹಂಗಕುಲಂ ಕೆಱೆ ಬಾವಿ ಬೆಂಚೆಗಳ್ಪುರಿದರಳೆಳ್ದುವೀ ಮನುಜರಾತಪತಾಪದೊಳಳ್ಕಿ ಬಳ್ಕಿದರ್ಕರಿಮುರಿವೋಯ್ತರಣ್ಯಮುಱೆ ಬೆಂದು ಮೃಗಾವಳಿ ಪೊಂದಿದತ್ತು ನಿಂದುರಿದುವು ಬೆಟ್ಟಮಿಂಗಿದುವು ವಾರಿಧಿ ಕಾಯ್ದುದು ಭೂರಿಭೂತಳಂ
ಮೃಗಶಿಶುಗಳ್ ಕರಿಮುರಿ ಕಣ್ಗೊಗೆದ ಮರಂ ಘರಿಘರಿಲ್ ಗಜಂ ಚಿಮಿಚಿಮಿಯೆಂದಗನಿಕರಂ ಛಿಳಿಛಿಟಿಲೆನೆಮಿಗೆ ಸೀದುವು ಬೆಂದುವುರಿದುವೊಡೆದುವು ಬಿಸಿಲೊಳ್
ಮರದಡಿಯೊಳ್ ಕಾನನದೊಳ್ಗಿರಿತಟದೊಳ್ ಬಟ್ಟ ಬಯಲೊಳಂಬರತಳದೊಳ್ಕರಿಯ ಬಿಸಿಲುರಿಯ ಬಿಸಿಲಚ್ಚರಿಯ ಬಿಸಿಲ್ ಪಿರಿಯ ಬಿಸಿಲಖಂಡಿತದ ಬಿಸಿಲ್
ವ. ಮತ್ತಮಲ್ಲದೆ,
ನಡೆಯಲ್ಕೊಂದಡಿಯಿಟ್ಟು ಕಾಯ್ದ ನೆಲನಂ ಕಾಲ್ ಮುಟ್ಟಿ ಚುಯ್ಯೆಂದು ಬೆಂದೊಡೆ ಮತ್ತೊಂದಡಿಯೆತ್ತಲಾಱದಳಲಿಂ ಕಣ್ಮುಚ್ಚಿ ಹಸ್ತಾಗ್ರಮಂಕಡೆವಾಯೊಳ್ ಸೆಱೆಯಿಟ್ಟು ನೆತ್ತಿ ಬಿರಿದೆತ್ತಲ್ ಮುತ್ತುಗಳ್ ಸುತ್ತಲುಂಸಿಡಿಯುತ್ತಿರ್ಪಿನಮಿರ್ದುದೊಂದತಿ ಮದೇಭಂ ಭೀಷ್ಮದೊಳ್ ಗ್ರೀಷ್ಮದೊಳ್
ವ. ಅಂತುಮಲ್ಲದೆ ಮತ್ತೊಂದೆಡೆಯೊಳ್,
ಎಲೆಲೆಲೆ ನೋಡನೋಡೆ ಕೆಲನುಂ ಬಲನುಂ ನೆಲನುಂ ದವಾಗ್ನಿ ಸುಟ್ಟೊಲೆಯವೊಲಾಗೆ ಮೆಟ್ಟಿದಡಿಯೆತ್ತಿದ ಕಾಲುಱೆ ಸೀಯೆ ನಿಂದಿರಲ್ಚಲಿಯಿಸಲಾಱದಾತಪದೆ ಹಸ್ತಮನೆತ್ತುತೆ ಘೀಳಿಡುತ್ತೆ ತಾನೊಲೆದುದು ಚೇಷ್ಟೆಗುಂದಿದುದು ಜೋಲ್ದುದು ಬಿಳ್ದುದು ಬೆಂದುದೊಂದಿಭಂ
ವ. ಮತ್ತಮಲ್ಲದೆ,
ಜಳಜಸಖನನಿಲಸಖನೆಂದಿಳೆಯೊಳ್ ರಸವೆಸರನಾನದಿರ್ದೊಡೆ ಸೂರ್ಯಾನಳರೋವೊ ಸಂತಮಿರ್ಪರಘಳಿಲನೆ ನಿಂದುರಿದು ಹೋಗರೇ ಬೇಸಗೆಯೊಳ್
ತಪನನ ಮೆಯ್ಯೊಳ್ ಪುಗುಳಸಮಪಾವಕನ ತನುವಿನೊಳ್ ಮಹಾ ಸ್ಫೋಟಕವಾತಪದ ಕಡುಪಿಂದೆ ನೆಗೆತಂದಪುವೆನೆ ಬೇಸಗೆಯ ಬಿಸಿಲ ನಾಲಗೆಯೊಳ್ಪಂ
ವ. ಮತ್ತಮಾ ನಿಧಾಘಂ ಕಡುಗಾಯ್ವ ತೀವ್ರ ಖರಕರಪ್ರಕರಮಂ ಚುರ್ಱರ್ಱನೆ ಸುಡೆ ಕಾಯ್ದುರ್ಕಿ ಬಿಸಿಯ ತೆರೆ ತಾರ್ಮುಟ್ಟೆ ನೊರೆಗಟ್ಟಿ ಕುಕ್ಕುಳಂಗುದಿವ ಬಿಸಿ ನೀರೊಳ್ ನಿಲಲಾಱದೆ ನೆಱೆ ಮಱುಗಿ ಪೊಱಪೊಣ್ಮಿ ಬೆದಬೆದನೆ ಬೆಂದು ಬೆಂಡೆಳ್ದು ಬಱಬಱಂಬತ್ತಿ ಹೊತ್ತಿ ಹೊಗೆದು ಜೀವನವಿಂಗೆ ಜೀವನವಿಂಗುವಂತಾಗೆ ಕಿಱುವೆಂಚೆ ಯೊಳ್ ಕೋಟಲೆಗೊಳುತಿರ್ಪ ಪಾಠೀನಕುಲದಿಂ ಮತ್ತಂ ಮಸಗುವ ತಪನನ ಬಿಸಿಯ ಬಿಂಬದಿಂದೊಗೆತರ್ಪ ಬಿಸಿಲ ಬೆಂಕಿಯಿಂ ಹೊಗೆದೆಯ್ದೆ ತರುನಿಕರವುರಿದು ಕರಿಗೊಳ್ಳಿಯಂತೆ ಕಾಯ್ದೇಱೆ ಕರ್ಬೊಗೆಯಂ ನೆಗಪುವ ಕೊಂಬುಗಳ ಕಡುಬಿಸುಪು ಕಾಲ್ಗಳಂ ಸುಡೆ ಬಳ್ಳಿಗೊಂಡ ಬೇಗೆಯಿಂ ಕುಳ್ಳಿರಲಾಱದೆ ಮೀಱಿ ನೆಗೆದು ಪಾಱು ವಾಗಳ್ ಬಿಸಿಲುರಿ ಪೊಡೆದು ಪಕ್ಕಂ ಸೀದು ನೆಲಕ್ಕೆ ಬಿಳ್ದು ಕಣ್ಮುಚ್ಚಿ ಹಮ್ಮಯ್ಸಿ ಹರಣಂಗಳೆದು ಮಳಲೊಳ್ ಪುರಿದಂತಾಗೆ ಪರೆದಿರ್ದ ಬಹುವಿಧದ ವಿಹಂಗಾ ವಳಿಯಿಂ ಮತ್ತಂ ತಪನಪ್ರದ್ಯೋತಹತಿಯಿಂ ಬೆನ್ನೊಡೆದು ಬಾಯಾರಿ ತಾಳಿಗೆ ಬತ್ತಿ ನೆತ್ತಿ ಹೊತ್ತಿ ಕಣ್ಣೊಳ್ ನೆತ್ತರೆಚ್ಚು ಪಾಯೆ ಪರಿವರಿದು ಮರೀಚಿಕಾಜಲದೊಳ್ ಮೊಗ ಮಿಟ್ಟು ಬಗೆಗೆಟ್ಟು ಮರವಟ್ಟು ಧರೆಯೊಳ್ ಕೆಡೆದಿರ್ಪ ನಾನಾಮೃಗನಿಕಾಯದಿಂ ಮತ್ತಂ ಮಾರ್ತಂಡಮರೀಚಿ ಸುತ್ತಿ ಮುತ್ತೆ ಕುಂಭಸ್ಥಳಂ ಹೊತ್ತಿ ಹೊಗೆದು ಬಿರಿದ ನೆತ್ತಿಯಿಂ ಮುತ್ತೊಡೆದು ಸಿಡಿದು ಪಾಱೆ ಬೆನ್ನೊಣಗಿ ತರ್ಮಂ ಹೊಪ್ಪಳಿಸಿ ಸೀಳ್ದು ಬೀಡೆ ನಾಡೆ ನೋಯಿಸಿ ನೀರಡಿಕೆ ನೆರೆದೊಳಗುದೋಱೆ ಬಾಯೊಳ್ ಭರಿಕೆಯ್ಯನಿಟ್ಟೊಡಲೊಳಗೆ ಪುಡಿ ಪಾಱೆ ಬೆಂದ ಪುಷ್ಕರಮಂ ಭೋಂಕನೆ ತೆಗೆದು ಕಾಯ್ದ ಕೋಡೊಳ್ ಪೊಱಲಣ್ಮದೆ ಮೀಱಿದದಱಿಯ ತಟದೊಳ್ ನೀಡಿ ಕೆಡಪಿ ಕಣ್ಣುಚ್ಛೆ ನೆಮ್ಮಿ ಹಮ್ಮದಂಬೋಗಿ ಕಿಡಿಸೂಸಿ ಸುಯ್ದು ಗಾಸಿಯಾಗಿ ಮೆದೆಗೆಡೆದು ಮದವಳಿದಿರ್ಪ ಮಾತಂಗವ್ರಾತದಿಂ ಮತ್ತಂ ಶತಧಾರಾಸಹಸ್ರದಂತೆ ಸಹಸ್ರಕರಮರೀಚಿಗಳುಱದೆಱಗಿ ನಟ್ಟು ಕಾಯೆ ಗಳಗಳನರಳ್ದು ಪಳಪಳನೆ ಸೀಳ್ದು ಸಿಡಿದೊಡೆದು ಹಿಗ್ಗಿ ತಗ್ಗಿ ಕುಗ್ಗಿ ಕುಪ್ಪಳಿಸಿರ್ಪ ಪರ್ವತ ಪ್ರತಾನ ದಿಂದತ್ಯುಗ್ರತೆಯನತಿ ಪ್ರಚಂಡತೆಯನತ್ಯುಷ್ಣತೆಯನತ್ಯಾಭೀಳತೆಯನತಿ ಪ್ರತಾಪ ಮನುಗುಳುತ್ತಿರ್ದುದಂತುಮಲ್ಲದೆಯುಂ,
ಪಸಿವಿಂ ದಾವಾನಳಂ ಸುಟ್ಟುರಿಪೆ ತರುಗಿರಿವ್ರಾತಮಿಲ್ಲಾದುದೋ ನಾಲ್ದೆಸೆಯೊಳ್ ಸೂರ್ಯಂ ಕ್ಷುಧಾಪೀಡಿತನಱಸುತೆ ಕೆಯ್ನೀಡೆ ನಿಸ್ಸಾರಕಾಷ್ಠಪ್ರಸರಂ ಕೌಱೆಳ್ದುದೋ ನಿಂದನುಪಮತೃಪಿತಂ ವಾಡಬಂ ಪೀಱೆತಾಂಶೋಷಿಸಿತೋವಾರಾಶಿಯೆಂಬುಷ್ಣಮನೊದವಿಸಿತತ್ಯುಗ್ರಯೋಗ ನಿದಾಘಂ
ವ. ಆ ನಿದಾಘದಲ್ಲಿ,
ರವಿಕಾಂತೋಗ್ರಸ್ಫುಲ್ಲಿಂಗಪ್ರತತಿ ನೆಗೆದು ಪಾದಂಗಳೊಳ್ ಬಿಳ್ವೊಡಂ ಪೊಣ್ಮುವ ದಾವಪ್ರೋದ್ಭವ ಪ್ರಸ್ಫುರಿತವಿಲಸದುಷ್ಣಂ ತನೂಭಾಗಮಂ ಪತ್ತುವೊಡಂ ತದ್ದೇಹದಗ್ನಿಪ್ರಭೆಯೊದವುವೊಡಂ ಸೂರ್ಯತಿಗ್ಮಾಂಶುಗಳ್ ತಾಗುವೊಡಂ ಮಾಧ್ಯಂ ನಿದಾಘಂ ಕವಿದೊಡಮನಿತಕ್ಕಳ್ಕದಂತಾರ್ಯೆ ನಿಂದಳ್
ವ. ಅಂತು ನಿಂದು,
ದಶಭುಜನ ಮನೋವಲ್ಲಭೆದಿಶಾವಳೀಭರಿತ ಕೀರ್ತಿಯುತೆ ಘೋರತಪೋವಶೆ ನೆಱೆ ಗಂಗಾಧರನಂಶಶಿಧರನಂ ನೆನೆದು ಕಳೆದಳಾ ಬೇಸಗೆಯಂ
ವ. ಆ ಸಮಯದೊಳ್ ಸಕಳಕಳಾಕೋವಿದೆಯರಪ್ಪ ಜಯೆವಿಜಯೆಗಳ್ ಮೆಯ್ಯಿಕ್ಕಿ ಕೈಯಂ ಮುಗಿದು,
ಮದವುಡುಗಿತ್ತು ಬೇಸಗೆ ಕರಂ ನಸುದೋಱಿದುವಲ್ಲಿಗಲ್ಲಿಗಂಬುದನಿಕರಂ ಸುರುಳ್ದುದು ಬಿಸಿಲ್ ನೆಗೆದತ್ತು ತಟಿಲ್ಲತಾಂಕುರಂಬೆದಱಿದುವಂಚೆಯಾಡಲಡಿಯಿಟ್ಟುವು ಸೋಗೆಗಳೆಯ್ದೆ ಪಲ್ಲವಂಪುದಿದ ಕದಂಬದೊಳ್ ಮುಗಿಲನೆಳ್ಪಿಸಲಿರ್ದುದು ಪಶ್ಚಿಮಾನಿಳಂ
ವ. ಅನಂತರಮಾಗಳ್,
ಕಡವಿನ ಸೊವಡಿಂದೊಂದೆರದಡಿಯಿಡುತಿರ್ದಪುದು ಗಾಳಿ ನಲಿದು ನವಿಲ್ಗಳ್ನಡೆನಟಣೆಗೊಳುತ್ತಿರ್ದಪುವೆಡೆಯಱಸುತ್ತಿರ್ಪುವಂಚೆ ಸುಳಿದುವು ಮುಗಿಲ್ಗಳ್
ವ. ಎಂದು ಬಿನ್ನಯ್ಸುತ್ತುಂ ಮತ್ತಮಿಂತೆಂದರ್,
ಪೋದುದು ಬೇಸಗೆ ಕಾರ್ ಮೊಗವಾದುದು ತರುತಳದ ನೆಳಲ ತಣ್ಪಿನೊಳಿರ್ದತ್ಯಾದರದಿಂ ಮಾಳ್ಪುದು ಪುಣ್ಯೋದಯ ನಿಷ್ಕಪಟ ವಿಪುಳತಪಮಂ ಗಿರಿಜೇ
ಎನೆ ಕೇಳ್ದು ಮನಂಗೊಂಡತ್ಯನುಪಮ ಶೈವಪ್ರತಾಪ ತೇಜೋನಿಧಿ ಭೋಂಕನೆ ಗಿರಿಸುತೆ ನಡೆತಂದಳ್ವಿನಯವಿಭೂಷಣೆ ವಿಲಾಸವಿಭ್ರಮದಿಂದಂ
ಭರದಿಂದೆಯ್ತಂದು ಭರ್ಗಪ್ರಿಯೆ ಭವನ ಮನೋಮೂರ್ತಿ ಭಾಳಾಕ್ಷಭಕ್ತ್ಯಾತುರೆ ಮುಕ್ತಿವ್ರಾತೆ ಭೂತೇಶನ ಸಕಳಸುಖಾಕಾರೆ ಶರ್ವಾಣಿ ಸರ್ವೇಶ್ವರಿಯುರ್ವೀಮಾತೆ ಮೂಲೋಕದ ಸುಕೃತಫಲಂ ಸತ್ಯವಿಸ್ತಾರೆಯುದ್ಯತ್ಗಿರಿರಾಜಾಪತ್ಯೆ ನಿಂದಳ್ ಘನವಟವಿಟಪಿಚ್ಛಾಯೆಯೊಳ್ ಪ್ರೀತಿಯಿಂದಂ
ವ. ಇಂತಘಟಿತಘಟಿತೆ ಪಟುತರಚಿತ್ತೆ ನಿಟಿಲಲೋಚನೆ ವಟವೃಕ್ಷದ ಕೆಳಗೆ ವಾರಿಕುಲಕ್ಕೆ ಸೋಲದೆ ಧೀರೋದಾತ್ತೆ ಘೋರತಪದೊಳ್ ನಿಂದಳನ್ನೆಗಮಿತ್ತಲ್,
ನಲಿದುದು ಸೋಗೆ ನುಣ್ಪನೆಡೆಗೊಂಡುದು ಚಾದಗೆವಕ್ಕಿ ಮಿಕ್ಕುಪೂತಲರ್ದುದು ಸೊಂಪಿನಿಂ ಕಡವು ತಣ್ಪನೆ ಹೇಱಿದುವೆಯ್ದೆ ಬೆಟ್ಟು ಬಂದಲೆದುದು ಪಶ್ಚಿಮಾನಿಳನಮರ್ಚಿತು ಕೇತಕಿ ಪೂದೊಡಂಬೆಯಂಬಿಲದೊಳೆ ಪೊಕ್ಕುವಂಚೆ ಮುಗಿಲೊಡ್ಡಣೆಯೊಡ್ಡಿತು ಕಾರ ಕೊರ್ವಿನೊಳ್
ವ. ಅಂತುಮಲ್ಲದೆಯುಂ,
ಹರಿಸಂ ಮಿಗೆ ನವಿಲಾಡುತ್ತಿರೆ ಚಾದಗೆಯುರ್ಬಿ ನಲಿಯೆ ನಾಲ್ಕುಂ ದೆಸೆಯುಂಕರಿಯಂತಿರೆ ಗಿರಿಯಂತಿರೆಧರೆಯಂತಿರೆ ನಗೆದುದಭ್ರಕುಲಮಂಬರದೊಳ್
ತರದಿಂ ಶಿಖಿ ಚಾದಗೆ ಮಧುಕರಮಂಚೆ ಪಯೋಧರಂಗಳನನುನಯದಿಂದಂಕರೆದುವು ನೆರೆದುವು ಮೊರೆದುವುಪರೆದುವು ತೊಱೆದುವು ನಿರಂತರಂ ಕಾರ್ಮೊಗದೊಳ್
ವ. ಮತ್ತಮಲ್ಲದೆಯುಂ,
ಹರಿಸಂ ಮಿಕ್ಕಭ್ರಮಾತಂಗಮನತಿಭರದಿಂ ನೋಡಲೆಂದೆಳ್ದುವೋ ದಿಕ್ಕರಿಗಳ್ ದೇವೇಂದ್ರನೊಳ್ ಕಾದುವ ಕಡುಮುಳಿಸಿಂದೇಳ್ದುವೋ ಗೋತ್ರಶೈಳೋತ್ಕರಮೀಶಂಗಂ ಹಿರಣ್ಯಾಕ್ಷನಿನೊಗೆದ ಮನೋದುಃಖಮಂ ದೂಱಲೆಂದಾತುರದಿಂದೆಳ್ದತ್ತೋ ಧಾತ್ರೀತಳಮೆನೆ ನಭದೊಳ್ ತೀವಿತಭ್ರಪ್ರತಾನಂ
ವ. ಆ ಸಮಯದೊಳ್
ತವೆ ಬೆಳೆದು ಪರ್ಬುತಾಕಾಶವನೇಱಿದ ಮುಗಿಲನೀರ ನೆಱೆಯಂ ಮಿಗೆ ದುಶ್ಚ್ಯವನಂ ಬಿಡಿಸುವ ಘನ ಶಸ್ತ್ರವಣಂ ಹೊಳೆವಂತೆ ಮಿಂಚು ಮಿಂಚಿತ್ತಾಗಳ್
ಘುಳು ಘುಳು ಘಳ ಘಳ ಘುಡು ಘುಡುಘುಳು ಛಿಟಿ ಛಿಟಿ ಘಾರ್ಘುಳಂ ದಢಂ ಧಾಂಧಡ ಛಿಂಛಿಳಿ ಛಿಳಿ ಭಿಂಭಿಂ ಘಡ ಘಡಘಳ ಘಡ ಘಡಿಲೆಂದು ಮೊಳಗು ಮೊಳಗಿತು ನಭದೊಳ್
ಆ ಮಿಂಚಿನ ಮೊಳಗಿನೊಳುದ್ದಾಮಾಂಬುದ ನಿಕರದಿಂದೆ ರಸೆದೆಸೆ ಗಗನಂತಾಮಱಿಯಲ್ ಬಾರದವೋಲೇಮಾತೋ ಕಱಿದುದಿಳೆಯ ಹರ್ಷಂ ವರ್ಷಂ
ವ. ಮತ್ತಮಲ್ಲದೆಯುಂ
ಮಿಗೆ ಕಾರರಸಂ ಪಗೆವೇಸಗೆಯಂ ಸುರಧನುವಿನಿಂದೆ ಮುಗಿಲಂಬುಗಳಿಂತೆಗೆದೆಸೆ ಬಹುವಿಧ ಶರವವನಿಗೆ ಬೀಳ್ವಂತಿರ್ದುವಂಬು ಧಾರಾನೀಕಂ
ಬೆಂಗೊಟ್ಟೋಡುವ ಬೇಸಗೆಯಂ ಗರ್ಜಿಸುವಬ್ದಸಮಯ ನೃಪಘನಮದಮಾತಂಗ ಕುಲದಾನಧಾರಾಭಂಗಿಯನೊಡರಿಸಿತು ಕಟ್ಟಕಱೆವಾಸಾರಂ
ಗಗನದಿನೆಱಗಿದ ಮಳೆನೀನಗಲದೆ ಸಲಪೆಂದು ವರ್ಷನರಪಂಗಿಳೆಯಂಮುಗಿಲಗಲದ ಹಸ್ತದಿನಾಗಗನಾಂಗನೆ ಧಾರೆಯೆಱೆದ ತೆಱನಾಯ್ತಾಗಳ್
ಘನಸಮಯ ನೃಪಾಲಕನೊಳ್ಘನಪಾಣಿಗ್ರಹಣಮಾದ ಭೂವನಿತೆಗೆ ಮುತ್ತಿನ ಸೇಸೆಗಳಂ ಗಗನಾಂಗನೆ ಸೂಸಿದಳೆನೆ ಬಿಳ್ದುವಾಲಿವರಲ್ಗಳ್
ವ. ಅಂತು ಬರ್ಪ ಕಾರ ಮಳೆಯಂ ಕಂಡು ಮನಂಗೊಂಡು,
ಶುಕನಿಕರಂಗಳುಗ್ಗಡಿಸೆ ಕೋಕಿಳನಾದದ ತಾಳಮುಣ್ಮೆ ಸೌಖ್ಯಕರ ಕದಂಬ ಪುಷ್ಪರಸದಿಂ ತಣಿದೊಯ್ಯನೆ ಪಾಡೆ ಷಟ್ಟದಂವಿಕಸಿತ ಪಕ್ಷನೂರ್ಧ್ವಗಳನುನ್ಮುಖನುಚ್ಚಳಿತಸ್ವನಂ ಬಳಾಹಕನಿನದಕ್ಕೆ ಪೆಕ್ಕಣಮನಾಡಿದುದೊಂದು ಮಯೂರನಳ್ತಿಯಿಂ
ವ. ಮತ್ತಮನಂತರದಲ್ಲಿ,
ನೆಗೆದುದು ಸಾರ್ದು ಪೊರ್ದಿತಮರಿತ್ತು ತುಳುಂಕಿತು ಬೆಂಗೆ ನೀರ ಧಾರೆಗಳುಱೆ ನಾಂಟಲೀಂಟದುದು ನೇಹದೆ ನೋಡಿತುದಂಚಚಂಚುವಿಂದುಗಿದುದು ಪಕ್ಕದಿಂ ಪೊಡೆದುದಂಫ್ರಿಗಳಿಂದೊದೆದತ್ತು ನೆತ್ತಿಯಿಂನೆಗೆಪಿದುದಪ್ಪಿತಳ್ಳಿರಿದಂದಂಬುಕಣಂಗಳನೊಂದು ಚಾತಕಂ
ವ. ಇಂತು ಶಿಖಿಪ್ರಕರಮುಂ ಚಾತಕಕುಲಮುಂ ನಲಿಯುತ್ತುಮಿರೆಯಿರೆ,
ಧಾರೆಗಳವನಿಯನೊಳಪೊಕ್ಕೋರಂತುಚ್ಚಳಿಸಿ ಮೀಱುತಿರೆ ನಭದಿಂ ಭೋರ್ಭೋರೆಂದಿರುಳುಂ ಪಗಲುಂಜೀರೆನುತುಂ ತೆಱಪುಗುಡದೆ ಕಱೆದುವು ಮಳೆಗಳ್
ಒತ್ತರಿಸುತ್ತಂಬರಮಂಮುತ್ತುತ್ತುಂ ದಿಗ್ವಿತಾನಮಂ ಧರೆಯೊಳ್ ತೀವುತ್ತುಂ ಕತ್ತಲಿಸುತ್ತುಂಸುತ್ತುಂ ಜಿನುಗಿದುವು ಸೋನೆ ಇರುಳುಂ ಪಗಲುಂ
ವ. ಅಂತುಮಲ್ಲದೆ,
ಸರಿಗಳ ನೆರೆದೋಂಟಂ ಬಲ್ಸರಿಗಳ ಭರಿತಂ ಸರಿಗಳ ಕಲ್ಲೋಲ ಕುಲಂಸರಿಗಳ ಘೂರ್ಣಿತದಿಂದಂಶರನಿಧಿ ಕವಿದಂತೆ ಕಱೆದುದಿಳೆಯೊಳ್ ವರ್ಷಂ
ಮೇಘಂಗಳ್ ಪರಿಗತವಿನಿದಾಘಂಗಳ್ ಕಮಲವಿಮಳ ಜೀವನಭರಿತಾಮೋಘಂಗಳ್ ಶಿಖಿನಿಕರಶ್ಲಾಘಂಗಳ್ ಕಱೆದುವತುಳ ಶೀತಳಜಳಮಂ
ನೋಡುತ್ತಿರೆ ಸಕಳಜನಂಕೂಡುತ್ತಿರೆ ಚಾತಕಂಗಳಿಳೆ ಜಳದೊಳ್ ತೇಂಕಾಡುತ್ತಿರೆ ಶಿಖಿಕುಲಮೆಳ್ದಾಡುತ್ತಿರೆ ತುಱುಗಿ ಕಱೆದು ಮೆಱೆದುದು ಮೇಘಂ
ವೃಷ್ಟಿಗಳವು ಶಿಖಿಚಾತಕತುಷ್ಟಿಗಳವು ಘನತಟಾಕ ವಿಮಳನದೀಸಂಪುಷ್ಟಿಗಳವು ಜೀವರ್ಕಳದೃಷ್ಟಿಗಳವು ಬಿಡದೆ ಕಱಿದುವವನೀತಳದೊಳ್
ವ. ಮತ್ತಮಲ್ಲಿ,
ಗಗನಂ ಕೆಟ್ಟುದು ಚಂದ್ರ ಸೂರ್ಯರಳಿದರ್ ದಿಕ್ಚಕ್ರಮಿಲ್ಲಾಯ್ತುಬಟ್ಟೆಗಳಸ್ಪಷ್ಟಮವಾದುವಾತ್ತ ಜಳದೊಳ್ ಪೂಳ್ದತ್ತು ಧಾತ್ರೀತಳಂಖಗಸಂಚಾರತೆ ಶೂನ್ಯಮಾದುದು ನಿರುದ್ಯೋಗಕ್ಕೆ ಪಕ್ಕಾದುದೀಜಗಮೆಂದೆಂಬಿನಮೆಯ್ದೆ ಕಟ್ಟಿ ಕಱೆದತ್ತಾಸಾರಮೀ ಲೋಕದೊಳ್
ಸುರಿದುದು ಮಳೆ ತಣಿಯುತ್ತಿಳೆನೆರೆದುದು ಬೆಳೆ ಕಾನನಂಗಳೊಳ್ ನೆಱೆ ವಿಸಟಂಬರಿದುವು ಹೊಳೆ ನಾಂದುವು ಶಿಳೆಧರಣಿಗೆ ಮೆಳೆಪಿಡಿದ ತಳೆಗಳಾದುವು ಮಳೆಗಳ್
ವ. ಇಂತಪ್ಪ ಮಳೆಗಳೊಳಗೆ,
ಮಳೆ ಮಾಣ್ದೊಡೆ ಹನಿ ಮಾಣದದಳಫಳಯುತ ವಿಟಪಭರಿತ ವಿಟಪಿಯ ತಣ್ಣೆಳಲಲ್ಲಿಂ ತಳರದೆ ಕೋಮಳೆ ಮಳೆಯೊಳಗಜೆ ನಲಿದು ಸಲೆ ನಿಂದಿರ್ದಳ್
ವ. ಆ ಸಮಯದೊಳ್,
ಅಭವಂಗಿಳೆಯೊಳ್ ತಪಮಿರ್ಪ ಭವಾನಿಗೆ ಬಂದು ಕಲ್ಪತರು ಫಳರಸದಿಂದಭಿಷೇಕಂ ಮಾಡುವ ನವವಿಭವದವೋಲೆಸೆದುದಾಲಮರನಾ ಮಳೆಯೊಳ್
ವ. ಇಂತು ನೆಗೆದು ಮುಗಿಲ್ಗಳ ಭೀಕರಾಕಾರಕ್ಕಂ ಮಿಂಚುಗಳ ಸಂಚಳತೆಗಂ ಮೊಳಗಿನ ಮಹಾಧ್ವನಿಗಳಂ ಸಿಡಿಲ ಸಡಗರಕ್ಕಂ ಬಲ್ಸರಿಗಳ ಸಂಭ್ರಮಕ್ಕಂ ಬಿಱುಮಳೆಯ ಬಲ್ವೊಯಿಲ್ಗಂಪೆರ್ಮಳೆಯ ಧಾರೆಗಂ ಆಲಿಕಲ್ಲ ಕರ್ಕಶಕ್ಕಂ ಇಂದ್ರಗೋಪದ ಸಂದಣಿಗಂ ಶೀಕರದ ಶೀತಕ್ಕಂ ತುಂತುಱ ತಿಂತಿಣಿಗಂ ಸೋನೆಗಳ ಜಿನುಂಗಿಗಂ ಬಿಱುಗಾಳಿಯ ಗಾಸಿಗಂ ಕಾಲ್ವೊನಲ ಕಡುಪಿಂಗಂ ಪೆರ್ಮೋಡದ ಕಳ್ತಲೆಗಂ ಮರುಳ ಭಯಾನಕಕ್ಕಂ ಕ್ರೂರಮೃಗದ ರೌದ್ರಕ್ಕಂ ಉಗ್ರ ಸರ್ಪಂಗಳದ್ಭುತಕ್ಕಂ ಅರಣ್ಯದಾಭಿಗಳತೆಗಂಕೋಡದೆ ಕೊಂಕದೆ ಬಾಡದೆ ಬಳ್ಳದೆ ಸೇಡುಗೊಳ್ಳದೆ ಬೆಚ್ಚದೆ ಬೆದಱದೆ ಬಲಂಗೆಡದೆ ಮನಂಗುಂದದೆ ಕೆಲನಂ ಸಾರದೆ ಸಹಾಯಮಂ ಪಾಱದೆ ಮಹಾವಟವೃಕ್ಷದ ಕೆಳಗೆ ವಿಪುಳತಪದಿಂದಪರ್ಣೆಯೊಪ್ಪುತ್ತುಮಿರೆಯಿರೆ,
ಜಯವಿಜಯೆಗಳಱಿದ ಶಿವಪ್ರಿಯೆಯುಗ್ರತಪಃಪ್ರಭಾವಭಾಸುರೆ ಪುಣ್ಯೋದಯಶೀಲೆ ಶಾಂತೆ ಪಾರ್ವತಿಜಯಜಯರಕ್ಷಿಸೆನುತುಮೆಂದಿಂತೆಂದರ್
ಮಾಣ್ದುದು ಮಳೆ ಶರದಮಳತೆಪೂಣ್ದುದು ಕಳಹಂಸಮಾಲೆ ಮೆಲ್ಲನೆ ಬಿಲದೊಳ್ಕಣ್ದೆಱೆದುವು ತೊಳತೊಳಗುತ್ತೆಣ್ದೆಸೆ ನೆರೆ ತಿಳಿದುವೀಗಳವಧಾರಗಜೇ
ಜನವನುರಾಗವೇಱೆ ಪೊಱಮಟ್ಟು ಕೃಷಿವ್ಯವಸಾಯ ವೃಂದಮಂಮನದೊಲವಿಂದೆ ಮಾಡುತಿದೆ ಕೋಟರದಿಂ ನೆಗೆತಂದು ಪಕ್ಷಿಗಳ್ಕೊನೆದಳಿರ್ಗೊಂಬಿನೊಳ್ ಬಿಸಿಲನಾಂತಿವೆ ಹಂಸಕುಲಂ ಬಿಲಂಗಳಿಂದನುವಿಸೆ ಕೂಡೆ ಪೊಣ್ಮುತಿವೆ ಪಾರ್ವತಿ ನೋಡ ಶರದ್ವಿಳಾಸಮಂ
ರವಿಕಿರಣಂ ನೀರೋಡುತ್ತಿವೆ ತಣ್ಬಂ ಬೀರುತಿದೆ ರಥಾಂಗಕುಲಂಗಳ್ತವೆ ತಣ್ಬಿಸಿಲೊಳ್ ನಿಂದಿರ್ದಿವೆ ಮೇಘಂ ಹಿಂಡಿ ಹರಹಿದಂತಿವೆ ನಭದೊಳ್
ಪರೆದುವು ಪಯೋಧರಂಗಳ್ಬರುತಿವೆ ಕಳಹಂಸಮಾಲೆ ಬಿಸಿಲೊಳ್ ವಿಹಗಂನೆರೆದಿವೆ ಮೃಗಸಂತತಿ ಗಹ್ವರದಿಂ ಪೊಱಮಟ್ಟು ಮೇಯುತಿವೆ ಮೊಳೆವುಲ್ಲಂ
ತಿಳಿದುವು ದೆಸೆಗಳ್ ಹಂಸಾವಳಿ ಸಾರ್ದುವು ಪೂರ್ಣಸರಸಿಯಂ ಬಿಸಕಂದಂಮೊಳೆವೋದುವು ಸಲಿಲಂ ನಿರ್ಮಳಮಾದುವು ತಳೆದುದಾಗಸಂ ಧವಳತೆಯಂ
ವ. ಎಂದು ಜಯೆವಿಜಯೆಗಳ್ ಬಿನ್ನಪಂಗೆಯ್ದು,
ಇದುವೆ ಶರತ್ಸಮಯಂ ಮೇಲೊದೆವುತ್ತಿರೆ ಶೀತಕಾಲಮಗಸುತೆ ಕಾಸಾರದ ಕೆಱೆಗಳ ತೊಱೆಗಳ ಬೆಟ್ಟದ ತಳ್ಪಲ ಹಿಮದೊಳೆಸೆಯೆ ಮಾಳ್ಪುದು ತಪಮಂ
ವ. ಎಂದು ಜಯೆವಿಜಯೆಗಳ್ ಬಿನ್ನಪಂಗೆಯ್ದುಚಿತವಚನಾನೀಕಮನಾಕರ್ಣಿಸಿ ಲೋಕೈಕಬಂಧು ಸಾಕಾರಸುಧೆಯೆನಿಪ ಮಹಾದೇವಿ ಮಳೆಗಾಲಂ ಮಾಣ್ದುದಂ ಮನದೊಳಱಿದು ಬಡವಾದೊಡಲಂ ಬಿಡದೋಲಗಿಪ ನಾರಸೀರೆ ನಯವೇಱೆ ಪೊಱಗಣ ಮಳೆಯಿಂ ನಾಂದಮೆಯ್ಯ ನೀರ ಬಣ್ಣಮಂ ತಣ್ಣೆಳಲೊಳಾಱಿಸಿ ಧ್ಯಾನಾನಂದರಸದ ಸೋನೆಯಿಂದೊಳಗೆ ನಾಂದ ಕರಣಂಗಳನುಸಿರೊಳಾಱಿಸುತ್ತುಂ ತಪೋಭಾನೂದಯಕ್ಕೆ ಮುಖಕಮಳದಳಂ ಬೆರ್ಚುವಂತೆ ಮೆಯ್ಯ ಸಂಪುಟಂ ಬಿರ್ಚೆ ಕಣ್ದೆಱೆದು ಮುಂದಿರ್ದ ಸಹಚರಿಯರಂ ಕಂಡು,
ಜಳಧರದೊಳಗಿಂದಂ ಶಶಿಕಳೆ ಪೊಱಮಡುವಂತೆ ಪರಿದಾಲದ ಮರದಿಂಗಳಿಲನೆ ಪೊಱಮಟ್ಟಳ್ ಕೋಮಳೆಯರ್ ಕೆಯ್ಗುಡೆ ಭವಾನಿ ಮೆಲ್ಲಡಿಯಿಡುತುಂ
ನಡೆ ತಂದು ಮಂಜು ನೆಱೆ ಮಾಣ್ದೊಡೆ ಶೀತಂ ಮಾಣದಿರ್ಪ ತಣ್ನೆಳಲೊಳ್ ಕಂಪಿಡಿದ ಲತಾಗೇಹಂಗಳನಡುವಣ ಕಾಸಾರತಟದೊಳಂಬಿಕೆ ನಿಂದಳ್
ವ. ಅಂತು ನಿಂದಿರೆಯಿರೆ,
ಇತ್ತಲ್ ಭೂತಳದೊಳ್ ಹಿಮಮೊತ್ತರಿಸಿ ಭುವನ ಜನಮನುಱಿ ನಡುಗಿಸುತುಂಸುತ್ತುತ್ತುಂ ಸುಗಿಯುತ್ತುಂಮುತ್ತುತ್ತುಂ ಮುಂದುಗೆಡಿಸುತುಂ ಮುಸುಕಿಡುತುಂ
ವ. ಅಂತುಮಲ್ಲದೆಯುಂ,
ಮೃಗಸಂತತಿಯಂ ಕೊಳರ್ವಕ್ಕಿಗಳಂ ಪಕ್ಕಗಳನದ್ರಿತಟದೊಳಂ ಕೊಳನೊತ್ತುಗಳೊಳ್ ಕೋಟರದೊಳ್ ಮಿಗೆಪುಗಿಸುತ್ತುಂ ಬಂದನಮಮ ಶಿಶಿರನೃಪಾಲಂ
ವ. ಅಂತು ಬಂದು,
ಕಿಡಿಗಳ್ ಕೆಚ್ಚನೆಯಾಲಿಕಲ್ಲುರಿಯ ಮೊತ್ತಂ ಕೆಂದಳಿರ್ ಕೆಂಡದೊಂದಡಕಿಲ್ ಮಾಣಿಕದಿಂಡೆ ಕಾಯ್ವ ತಪನಂ ಚಂದ್ರಂ ಪೊದಳ್ದಾತಪಂಗಡ ಬೆಳ್ದಿಂಗಳೆನಿಪ್ಪುದೊಂದು ಪೆಸರಂ ತಾಂ ಮಾಡಿದಂತಿರ್ದುದಾಕಡುಪಿಂ ತನ್ನಯ ಕಾಲದಲಿ ಹಿಮರಾಜಂ ಧಾರಿಣೀಚಕ್ರದೊಳ್
ವ. ಮತ್ತಮಲ್ಲದೆಯುಂ,
ಮಿಗೆ ಬೆಮರಱತುದು ನೀರಡಿಕೆಳಗಿಂಗಿದುವುಷ್ಣದುಸಿರಡಂಗಿತು ತಪನಂಗೊಗೆದುದು ಪೆರ್ಚಿದ ತಣ್ಪಗ್ನಿಗೆ ಶೀತಂ ಪತ್ತಿತೇನನೆಂಬೆಂ ಹಿಮದೊಳ್
ಸಲೆ ರವಿ ತೇಜಂಗುಂದುತೆನಿಲಲಂಜುತ್ತೋಡಿ ಪುಗುವನದ್ರಿಯ ಮಱೆಯೊಳ್ಗೆಲೆ ಹರಿವ ಹಾವುರಿವ ಕಿರ್ಚೆಲೆ ನಿಂದುವು ಶಿಶಿರನೃಪತಿಯಾಜ್ಞೆಗೆ ಜಗದೊಳ್
ವ. ಮತ್ತಮಲ್ಲಿ,
ಉದಯಂ ಶೀತೋದಯಮಗ್ಗದ ಮಧ್ಯಾಹ್ನ ತುಷಾರಮಧ್ಯಾಹ್ನಂ ಮಿಕ್ಕುದಯಾಸ್ತಮಯಂ ತಾನುಷ್ಣದಸ್ತಮಯಮೆನಿಸಿತಮಮ ಹಿಮವಿಭ್ರಮದೊಳ್
ತಿಳಿವೊಡೆ ಶಶಿ ರವಿ ರವಿ ಶಶಿಬೆಳಗುವ ಜೊನ್ನಂ ಬಿಸಿಲ್ ಬಿಸಿಲ್ ತಾಂ ಜೊನ್ನಂಚಳಿ ಬಿಸುಪು ಬಿಸುಪು ಚಳಿಯೆನೆಬಳೆದುದು ಹಿಮರಾಜತೇಜಮೀ ಜಗದೆಡೆಯೊಳ್
ವ. ಆ ಸಮಯದೊಳ್,
ಪಲ್ವಱೆಯೊಳೆ ಹುಹುಹೆಂಬಾಚೆಲ್ವುಗ್ಗಡಣೆಯೊಳೆ ಹಸ್ತದಂಡಿಗೆಯೊಳ್ ತಾನೊಲ್ವನ್ನಂ ಶಿಶಿರನಟಂಸಲ್ವನ್ನಂ ಜನವನಾಡಿಸಿದನುರ್ವರೆಯೊಳ್
ನುಡಿಯೆ ಹುಹು ನಡೆಯ ಮಾತೇಕೊಡಲೇ ಪ್ರಾಣಂಗೆ ಚಳಿಯ ಕುಪ್ಪಸಮಾಯ್ತೆಂದೊಡೆ ಹಿಮದ ಮಹಿಮೆಯಂ ಪೇಳ್ವೊಡೆ ಕೇಳ್ವವನಾವನೊರ್ವನುರ್ವೀತಳದೊಳ್
ಉಱೆ ಶೀತಂ ಪತ್ತಿದೊಡಿರಲಱಿಯದೆ ಜೀವಂ ಬಿಗುರ್ತು ಜಠರಾಗ್ನಿಯನೆಳಱಿಸೆ ಹೊಗೆಯುಸಿರ ಪಥದಿಂಪೊಱಮಡುವುದು ಜನದ ಮುಖದೊಳಲ್ಲದೊಡುಂಟೇ
ವ. ಮತ್ತಮಲ್ಲದೆಯುಂ,
ಈಕ್ಷಿಸಿದಳೆಳಸಿ ಭಸಿತದರಕ್ಷೆಯನೊಸೆದಿಟ್ಟು ಮಂಜಿನಿಂ ತೂಪಿಱೆದುಂಶಿಕ್ಷಿಸಿ ಬಲ್ಪಿಂದೂಡುತೆರಕ್ಷಿಸುವಳ್ ಶೀತಮಾತೆ ಶಿಖಿಬಾಲಕನಂ
ಒದವಿ ಧರಾತಳದೊಳ್ ತೀವಿದ ಶೀತಕ್ಕಂಜಿ ಕಂಪಿಸುತ್ತುಂ ನಿಲಲಾಱದೆ ಬಡವಾಗೆ ಕರಂ ಕಾಷ್ಠದೊಳಗೆ ಪೊಕ್ಕಂ ಕೃಶಾನುವೇನಂ ಪೇಳ್ವಂ
ವ. ಮತ್ತಮಾ ಶೀತಾತಿಸಮಯದಲ್ಲಿ,
ಮುಚ್ಚಿ ಮುಸುಂಕಿದ ಹಿಮಮಂಕಿಚ್ಚಿಂದಂ ಕಳೆಯಲಾಱದಿಳೆಯ ಜನಂಗಳ್ಚೆಚ್ಚರಮೆಯ್ತಂದೊಲವಿಂದಚ್ಚರಿ ವಿರಹಿಯನೆ ಕಾಯ್ದು ಕಳೆವರ್ ಚಳಿಯಂ
ಪರಿಪೂರ್ಣತಟಾಕದ ಮೇಲುರಿಯಿಲ್ಲದೆ ಧೂಮಮೊಗೆವುತಿರೆ ಮಾಗಿಯೊಳತ್ಯುರುತರ ಗುರುತರ ತಾಪಕ್ಕಿರಲಾಱದೆ ವಿರಹಿ ಪೊಕ್ಕು ಮುಳುಗದೆ ಮಾಣಂ
ಪುಟ್ಟಿತು ಚಳಿ ಬಳೆದುದು ಚಳಿಕೊಟ್ಟುದು ಚಳಿ ಕೊಂಡುದೆಲ್ಲಮುಂ ಚಳಿಚಳಿಯೆಂದುಟ್ಟುದು ಚಳಿ ತೊಟ್ಟುದು ಚಳಿಮೆಟ್ಟಿತು ಚಳಿ ಮುಟ್ಟಿತೆಲ್ಲ ಚಳಿ ಪೊಸಚಳಿಯೊಳ್
ವ. ಎಂಬ ಕೌತುಕಮನೊಳಕೊಂಡು
ಈ ತೆಱದಿಂ ನೆಱೆ ಪರ್ಬಿದಶೀತದೊಳಗಜಾತೆ ನೂತ್ನ ಸುರಚಿರ ಸರಸೀವ್ರಾತಮದೆಲ್ಲಿ ಘನಾಚಳನೈತಂಬಮದೆಲ್ಲಿಯಲ್ಲಿ ತಪದಿಂ ನಿಂದಳ್
ವ. ಇಂತು ನಿದಾಘನಿಷ್ಠುರತೆಯೊಳಂ ಮಳೆಗಾಲದ ಜಲಪ್ರಳಯದೊಳಂ ಮಾಗಿಯ ಮಹಾಶೀತಲದೊಳಂ ಭಾಳಲೋಚನನ ಭಾಮಿನಿ ಗಂಗಾಧರನ ಗರುವೆ ಚಂದ್ರಧರನರಸಿಯೆನಿಪ ಗಿರಿರಾಜತನೂಜೆಯಿರ್ದ ನಿರುಪಮಾನತಪಪ್ರಭಾವಂ ವಿರೂಪಾಕ್ಷಕರಣಂಗಳೊಳ್ ಬೆರಸಿ ಬಳೆಯೆ ಪುರಹರನೆಳ್ಚತ್ತು ಕೆಚ್ಚುಗಟ್ಟದ ಧೈರ್ಯಮನೊಡೆದು ಮೂಡಿ ಪಿಡಿದೆಳೆವ ಕಾರುಣ್ಯಕ್ಕೆ ಪಕ್ಕಾಗಿ ಪನ್ನಗಭೂಷಣನಿನ್ನಿರಲ್ ಬಾರದೆಂದು ತನ್ನೊಳ್ ಬಗೆದತಿಗಿರಿಜೆಯ ಮನಮನೊರೆದು ನೋಡುವ ಭರದಿಂ ಬಂದು ನಿಂದು,
ದಶಭುಜಮಂ ಪಂಚಾಸ್ಯಮನಶೇಷಭೀಮಾಂಗವಿತತಿಯಂ ತನುವಿನೊಳಂವಶಮಂ ಮಾಡುತಡಂಗಿಸಿಪಶುಪತಿ ವಟುವೇಷದಿಂದಮೊಪ್ಪುತ್ತಿರ್ದಂ
ಗಿರಿಸುತೆಯಂ ಕಾಣ್ಬನ್ನಂವರಪರಮಬ್ರಹ್ಮಚರ್ಯದಿಂದಂ ತಾನಿರ್ದಿರವಂ ತೋಱುವ ತೆಱದಿಂಗಿರಿಶಂ ವಟುವೇಷಮಂ ವಿರಾಜಿಸೆ ತಳೆದಂ
ವ. ಅಂತು ತಳೆದು,
ಮಿಗೆ ಶೀತಾಂಶು ಚಕೋರಿಯಲ್ಲಿಗೆ ವಸಂತಂ ರಾಜಿಪುದ್ಯಾನದಲ್ಲಿಗೆ ಸೂರ್ಯಂ ಸರಸೀಜದಲ್ಲಿಗೆ ವರಪ್ರಾಣಾನಿಳಂ ದೇಹದಲ್ಲಿಗೆ ಮೇಘಂ ಶಿಖಿಯಲ್ಲಿಗೊಪ್ಪುವ ಮರಾಳಂ ಪೂರ್ಣಕಾಸಾರದಲ್ಲಿಗೆ ಬರ್ಪಂತೆ ಭವಾನಿಯಲ್ಲಿಗಭವಂ ಬಂದಂ ಜಗದ್ವಲ್ಲಭಂ
ವ. ಇಂತು ಭೂಲೋಕಕ್ಕಿಳಿತಂದು ಹೇಮಕೂಟದೊಳ್ ಹೈಮವತಿಯಿರ್ಪ ತಪೋವನಮಂ ಪುಗುತರ್ಪಾಗಳ್,
ಬರೆ ಗಿರಿಶಂ ವಸಂತಋತುವಲ್ಲದೊಡಂ ಮುದದಿಂದೆ ಭೋಂಕನಂಕುರಿಸಿತು ಮಾವು ಪಲ್ಲವಿಸಿತಲ್ಲಿಯಶೋಕೆ ವಸಂತದೂತಿಯೊಪ್ಪಿರೆ ನೆಱೆ ಪೂತುದನ್ಯಭೃತನುನ್ನತಿಯಿಂ ಕರೆದತ್ತು ಮಲ್ಲಿಕಾಪರಿಮಳಭಾರದಿಂ ಕುಸಿದು ಮೆಲ್ಲನೆ ತೀಡಿತು ದಕ್ಷಿಣಾನಿಲಂ
ವ. ಅಂತು ತೀಡೆ
ಜಯೆ ವಿಜಯೆಗಳಿಗಿದು ಪೊಸತತಿಶಯವೀ ಶಿಶಿರದೊಳದೇಂ ಭವಾನಿ ವಸಂತೋದಯಸೂಚನೆಯಾದುದು ನಿಮ್ಮಯೆ ಪುಣ್ಯತಪಃಪ್ರಭಾವ ಕಾರಣಮಲ್ತೇ
ಎನುತಿರೆ ಬಂದು ಭಾವಿಸಿ ತಪೋವನಮಂ ಶಶಿಮೌಳಿ ಪೊಕ್ಕು ಮೆಲ್ಲನೆ ಬರುತುಂ ಪಥಶ್ರಮವನಾಂತು ಬಳಲ್ದವೊಲಾಗಿ ತೇಂಕುತುಂಮನದೊಳನೂನಸಂಪದಮನೆಯ್ದುತುಮೀಕ್ಷಿಸುತಿರ್ಕೆಲಂಗಳಂಘನಮಹಿಮಂ ಸ್ವತಂತ್ರವಿಭು ಪೊರ್ದಿದನೊಂದು ವಿನೂತ್ನಚೂತಮಂ
ವ. ಇಂತು ಪೊರ್ದಿ ಕಪಟವಟುವೇಷಮಂ ತಳೆದ ಕಪರ್ದಿ ಪಾರ್ವತೀದೇವಿ ಯರ್ ತಪದೊಳಿರ್ಪ ಸೀಮಾಸಮೀಪದ ವಿಶಾಲ ಬಾಲಚೂತ ಶೀತಳಚ್ಛಾಯೆ ಯೊಳ್ ಕುಳ್ಳಿರೆ ಸಹಚರಿಯರಪ್ಪ ಜಯೆವಿಜಯೆಗಳ್ ಕಂಡು,
ತರಳನಪೂರ್ವಿಗನತಿಥಿಸ್ವರೂಪನೀಷದ್ ವಿಭೂತಿಲಸಿತಲಲಾಟಂವರವಿಪ್ರನೆನುತೆ ಬಂದಾದರಿಸಿದರೊಲವಿಂದೆ ಚರಣತಳಮಂ ತೊಳೆದರ್
ವ. ಅಂತು ತೊಳೆದು,
ಎಳವಾಳೆಯ ಸುಳಿಯೆಲೆಯೊಳ್ನಳನಳಿಸುವ ಕಂದಮೂಲಮಂ ನವಜಂಬೂಫಳವಾಮ್ರಫಳಂ ಕದಳೀಫಳಂಗಳಂ ತೀವಿ ತಂದು ಮುಂದಿಳಿಪುತ್ತುಂ
ಎಲೆಯತಿಥಿ ಬಳಲ್ದಿರೆಮ್ಮೀಫಲದಿಂದಂ ನಿಮ್ಮ ಪಸಿವನುಡುಗಿಸಿಯೆನೆ ಸೈಫಲಮಂ ಕೆಯ್ಕೊಂಡಪೆವೀಲಲನೆಯದಾರ್ ತಪವಗಣ್ಯವಾವನ ಪುಣ್ಯಂ
ವ. ಎಂದು ನುಡಿಯೆ ಜಯೆವಿಜಯೆಗಳ್ ಕೇಳ್ದು,
ಇವರಿರವಿನ ಚಿಂತಾರತಿನಿನಗೇಕೀ ಕ್ಷುಧೆಯನೀ ಪಥಶ್ರಮಮಂ ತೀರ್ಚುವ ಬಗೆಯಂ ಬೇಗಂ ಮಾಡುವುದೆನೆ ನಸುನಗುತೆ ವಿಪ್ರನಂದಿಂತೆಂದಂ
ಬೆಸಗೊಂಡೊಡೆ ದೋಷಮೆ ಈಪೊಸಕನ್ನೆ ತಪೋನಿರೋಧದಿಂದಿರ್ದೊಡೆ ಸೈರಿಸಬರ್ಪುದೆ ತಪಮಂ ಮಾಣಿಸುವವರಿಲ್ಲಾ ಸಹಾಯಸಂಪದಮಿಲ್ಲಾ
ಎನೆ ಕೇಳ್ದಾ ಗಿರಿಜೆ ಮನದೊಳ್ಮುನಿಯುತ್ತುಂ ಜಪವನುಡುಗಿ ಜಪಮಾಲೆಯನೊಯ್ಯನೆ ಕೆಯ್ಯೊಳೋಸರಿಸಿ ಮೆಲ್ಲನೆ ಕಣ್ದೆಱೆಯುತ್ತೆ ಕಂಡಳಾ ವರ ವಟುವಂ
ವ. ಆ ಸಮಯದೊಳ್,
ಇಂದುಗೆ ಮೇಘಂ ಕವಿದೊಡಮಂದೀ ಲೋಕಕ್ಕೆ ತಣ್ಪು ತಪ್ಪದ ತೆಱದಿಂದಿಂದುಧರಂ ವರವಟುವೇಷಂದಳೆಂದೊಡಮಗಜೆಗಾದುದತಿಹರ್ಷಮುಖಂ
ವ. ಅಂತು ಹರ್ಷಮನಿಮಿತ್ತಮೇಕಾದಪುದೆಂದು ನಿಮಿತ್ತಮನಱಿಯದೆ ಬೆಱಗಾಗಿ ನೋಡುತಿರ್ಪಲ್ಲಿ,
ಗಿರಿಸುತೆಯ ಮಧುರದೃಷ್ಟಿಗಳುರವಣೆಯಿಂ ತಾಗೆ ತನ್ನನಾಗಳ್ ವಿಪ್ರಂಕರಗಿ ನಿಲಲಾಱದೆಳ್ದಾತುರಪುಳಕಮನಂತುಮಿಂತು ಸಂತಮಿಡುತ್ತುಂ
ನೆಗೆವ ಜಡೆಮುಡಿಯನೊತ್ತುತ್ತೊಗೆವ ಭುಜಾವಳಿಯನಡಂಗಿಸುತ್ತೂರುಗಳಿಂಮಿಗುವ ವೃಷೇಂದ್ರನನೌಂಕುತ್ತಗಲದೆ ನಿಜಮೂರ್ತಿಯೊಳಗೆ ಗಜಬಜಿಸುತ್ತುಂ
ಎಂತಾನುಂ ನಿಜರೂಪಂಸಂತುವಿಡುತ್ತಲ್ಲಿ ವಿಪ್ರನತಿಧೈರ್ಯತೆಯಂಮುಂತಿಟ್ಟು ಗಿರಿಜೆಯೊಡನುಸಿರ್ದಂ ತಡಬಡಿಸುತ್ತೆ ಮಿಸುಪ ಪೊಸ ಪುಸಿವಾತಂ
ಈ ಸುಕುಮಾರತೆಯೀ ನಿಲವೀ ಸುಕುರತೆಯೀ ನವೀನಯೌವನಮದವೀಭಾಸುರತೆಯೀ ಸುಧಾಮಯವೀ ಸುಖದೊಳ್ ತಪಮಿದೆಂತು ಬಂದುದು ಮುಗ್ಧೇ
ನಿನಗೇಕೀ ತರುಣತೆಯೊಳ್ಘನತಪವೆಡೆಗೊಂಡುದಕಟ ನವಲತೆಯಂ ಸೂರ್ಯನ ಬಿಸಿಲಿಂ ಕೊರಗಿಪ ದುಷ್ಟನನೆನಗಱಿಪಬಲೆ ಸೌಕುಮಾರ್ಯಾವರಣೇ
ವ. ಅಂತುಮಲ್ಲದೆಯುಂ,
ಎಳೆಗೆಂಪನುಗುಳ್ವ ಮೃದುಕೋಮಳಪದಕಮಳಂಗಳೀಗಳತಿಕಠಿನಮೆನಿಪ್ಪಿಳೆಯೊಳ್ ಹರಹರ ಕಲ್ನೆಲಕಳವಟ್ಟುವಿವೆಂತು ಬಾಲಹಂಸೀಯಾನೇ
ಎಳೆವೆಳ್ದಿಂಗಳ ಸೋಂಕಿಂಗಳವಡದಳ್ಕುವ ಶಿರೀಷಸುಕುಮಾರಾಂಗಂಬಳವತ್ಕರ್ಕಶತರದಿಂಬಳಸಿರ್ದೀ ನಾರ ಸೀಱೆಗಾಂತುದು ಚಿತ್ರಂ
ಎಳಲತೆಯಂ ಱೋಡಾಡುವನಳಿತೋಳ್ ಕೋಕಂಗಳ ವಿಭಂಗಿಪ ಕುಚಮಂಡಳಮುಸಿರಲುಪವನಪಥದತುಳಮಧ್ಯಂ ತಪದ ಕೋಟಲೆಗೆ ಸಂಗಡವೇ
ಮಿಸುಗುವ ಶಶಿವದನಂ ಕಡುವಿಸಿಲಿಂ ಕೊರಗಿತ್ತು ಕುಸುಮಮಾಳಿಕೆಯಿಂ ರಾಜಿಸುವ ಕುಚಭಾರಮಯ್ಯೋಪೊಸಜಡೆಯಂ ಪಡೆದುದಕಟ ಘನಯೌವನದೊಳ್
ವ. ಮತ್ತಮಲ್ಲದೆಯುಂ,
ಬಿಸಿಲೆನ್ನದೆ ಮಳೆಯೆನ್ನದೆಶಿಶಿರವಿದೆನ್ನದೆ ತೃಷೋನ್ನತಿ ಕ್ಷುಧೆ ನಿದ್ರಾವಿಸರಮುಮಂ ನೆಱೆ ಗೆಲ್ದೀವಸುಮತಿ ಬೆಱಗಾಗೆ ತಪದೊಳಿರ್ದವರುಂಟೇ
ವನಜಾನನೆ ಏಱುಂಜವ್ವನದೊಳ್ ವನದೊಳ್ ನಿರೋಧದೊಳ್ ಪೇಳಿಂತಾವನನುದ್ದೇಶಿಸಿ ತಪಮಿದನೆನಗಱಿಪಿದೊಡೇನೊ ದೋಷಮೇ ಮೃಗನಯನೇ
ವ. ಎಂದು ಪ್ರೇಮಜನಪ್ರಣಯಕಲಹಲೀಲಾಲೋಲಚಿತ್ತನಪ್ಪ ವಿರೂಪಾಕ್ಷಂ ವಟುವೇಷದಿಂ ನುಡಿದ ಮೃದು ಕಠಿನಾಕ್ಷೇಪಗರ್ಭಿತವಚೋವಿಳಾಸಮಂ ಶೈಳಜೆ ಕೇಳ್ದು ಚಿಂತೆಯಂ ತಾಳ್ದು,
ಬೆಸಗೊಂಡಪನಮಳದ್ವಿಜನುಸಿರಲ್ ತಾಂ ಬಾರದುಸಿರದಿರಬಾರದೆನುತ್ತಸದೃಶತಪಮಂ ಮನದುಬ್ಬಸದಿಂದೆ ಭವಾನಿ ಮಾನಿ ಮೆಲ್ಲನೆ ನುಡಿದಳ್
ಬಗೆವೆರ್ಚಿ ಕೇಳುತಿರ್ದಪೆಮಿಗೆ ಪೇಳ್ದಪೆನೆಲೆಲೆ ಧೂರ್ತವಿಪ್ರನೆ ಕೇಳ್ ಶಂಭುಗೆ ಕಾರುಣ್ಯಾಬ್ಧಿಗೆ ಶೂಲಿಗೆ ಕರುಣಂ ಪುಟ್ಟುವಂತೆ ತಪದಿಂದಿರ್ಪೆಂ
ಎನುತುಂ ಗದ್ಗದಿಸುತೆ ಪುಳಕನಿಕಾಯಮನಾನುತಶ್ರುವಂ ಕಳೆಯುತ್ತುಂಘನಹರ್ಷಚಿತ್ತೆಯಾಗುತ್ತೆ ನಗೇಶ್ವರಪುತ್ರಿ ಶಂಕರನ ಪೆಸರ್ಗೊಂಡಳ್
ವ. ಎಂದು ವಿರೂಪಾಕ್ಷಂಗೆ ತಪಮಿರ್ದಪೆನೆಂಬ ನುಡಿಯಂ ಕೇಳ್ದು ದುಷ್ಟಧರಾಮರನಟ್ಟಹಾಸದಿಂದಿಂತೆಂದಂ,
ಅಕ್ಕಕ್ಕು ಕಾಮಹರನೊಳ್ಮುಕ್ಕಣ್ಣನೊಳಖಿಳವೇದ ಶಾಸ್ತ್ರ ಕ್ರಮಮಂಮಿಕ್ಕವನೊಳ್ ಪಿತೃವನದೊಳ್ಪೊಕ್ಕವನೊಳದೆಂತು ಚಿತ್ತವಿಟ್ಟೆ ಲತಾಂಗೀ
ಭೀಕರವಪ್ಪ ಶೂಲಿಯಭಿಲಾಷೆಯೊಳೀ ತಪವಾತನೇಕೆ ನೀನೇಕೆ ಕೃಪಾಣವೇಕೆ ಲತೆಯೇಕೆ ಲಸತ್ಕರಿಯೇಕೆ ರಂಭೆ ತಾನೇಕೆ ಕೃಶಾನುವೇಕೆ ಪೊಸಪೂವಿನ ಮಾಲೆಯದೇಕೆ ಭಾನುವೇಕಾ ಕುಮುದಂದಲೇಕೆ ಸಿಡಿಲೇಕೆ ಮರಾಳನದೇಕೆ ಲೋಕದೊಳ್
ನೀನಿಯಳ್ ವಿಷಮಾತಂನೀನತಿಮೃದು ಕಠಿನಗುಣಗಣಾಶ್ರಯನಾತಂನೀನಬಲೆಯುಗ್ರನಾತಂನೀನುರುತರಭೀರು ಸರ್ಪಭೂಷಣನಾತಂ
ಪುಲಿದೊವಲುಡಿಗೆಯ ಹಾವಿನನೆಲೆದೊಡಿಗೆಯ ನೊಸಲ ಕಣ್ಣ ಖಟ್ವಾಂಗದ ಪಂದಲೆಗಳ ಮಾಲೆಯ ಶೂಲದಕಲಿಗಂಜದೆ ಮನವನೆಂತು ಮಾಡಿದೆ ಮುಗ್ಧೇ
ವ. ಎಂದು ವಿಪ್ರಂ ನುಡಿದ ಶಿವನಿಂದೆಗೆ ಭವಾನಿ ಮುನಿದು ಕನಲ್ದು ಕಿನಿಸಿ ಕಿಡಿಕಿಡಿವೋಗಿ,
ತಪವಂತದಿರ್ಕೆ ಮಾಡುವಜಪವಿರ್ಕೆ ಮೃಗಾಂಕಮೌಳಿಯಂ ಭರದಿಂ ಧ್ಯಾನಿಪುದಿರ್ಕೆ ಶಂಭುವಂ ನಿಂದಿಪುದಂ ಕೇಳ್ವೊಂದು ಪಾಪವಿಂದೆನಗಾಯ್ತೇ
ಘೋರತಪದಲ್ಲಿ ಕೋಪಿಸಬಾರದು ತಾಂ ತಪದ ಕೇಡು ಪತಿನಿಂದೆಯುಮಂಸೈರಿಸಬಾರದೆನುತ್ತೆ ವಿಚಾರಮನುಳಿದಗಜೆ ಮನದ ಮುಳಿಸಿಂದಾಗಳ್
ಆದ ನಿರೋಧದ ನಿಂದೆಯನಾದರಿಸದೆ ಭಸಿತದಿಂದೆ ವಿಪ್ರನನಿಡೆ ಪೋಪೋದುದು ವಟುವೇಷಂ ಶಿವನಾದೊಡದೇಂ ಪುಸಿ ದಿಟಕ್ಕೆ ನಿಲ್ವುದೆ ಜಗದೊಳ್
ವ. ಆಗಳ್,
ಮುಗಿಲ ತೆಱೆ ಸರಿದ ಶಶಿಯಂತೊಗೆದ ತಮಂ ತೆಗೆದ ತರುಣತರಣಿಯ ತೆಱದಿಂಪೊಗೆ ತಳ್ಗಿದಗ್ನಿಯಂತಿರೆಮಿಗೆ ವೇಷಂ ತೊಲಗಿ ಶಂಭು ತೊಳಗುತ್ತಿರ್ದಂ
ಜಡೆಮುಡಿ ಪಂಚಮುಖಂ ನೆಗೆದುಡುಪತಿಕಳೆ ದಶಭುಜಂ ತ್ರಿಣೇತ್ರಂ ಗಾತ್ರಂಬಿಡಿದ ನವಭೂತಿ ಪುಲಿದೊವಲುಡಿಗೆಗಳಿಂ ಶಂಕರಂ ಕರಂ ಮೆಱೆದಿರ್ದಂ
ವ. ಆ ಸಮಯದೊಳ್,
ಸರಿದುದು ಪುಸಿವೇಷದ ತೆರೆಸುರಿದುದು ಕೆಯ್ನೀರ ತೆಱದೆ ಪೂವಳೆ ಸರಿಸಂಬರಿದುದು ಜೀರಿಗೆಬೆಲ್ಲದಪರಿಯಿಂ ಮುಳಿದಿಟ್ಟ ಭಸಿತಮದೆ ಮದುವೆಯವೋಲ್
ಪರಮಸ್ವಾಮಿ ಜಟಾಧರಂ ಶಶಿಧರಂ ಗಂಗಾಧರಂ ಕಾಲಸಂಹರನಜ್ಞಾನಹರಂ ಪುರತ್ರಯಹರಂ ಸೌಖ್ಯಾಕರಂ ಶಂಭು ಶಂಕರನಾನಂದಕರಂ ಸಮಂತೆನಗೆ ಭಕ್ತಿಜ್ಞಾನವೈರಾಗ್ಯಮಂಕರುಣಂಗೆಯ್ಗೊಲವಿಂದೆ ಹಂಪೆಯ ವಿರೂಪಾಕ್ಷಂ ಶಿವಾವಲ್ಲಭಂ
ಇದು ಸಮಸ್ತ ಸುರಾಸುರಮಕುಟ ಖಚಿತ ದಿನಕರಕರಾಧಿಕ್ಯ ಮಾಣಿಕ್ಯಪ್ರಭಾಪುಂಜರಂಜಿತಚರಣ ನೆನಿಪ ಪಂಪಾವಿರೂಪಾಕ್ಷ ಶ್ರೀ ಪಾದಕಮಲ ಮಕರಂದ ಮಧುಕರಾಯಮಾಣ ಸತ್ಕವೀಶ್ವರ ಹಂಪೆಯ ಹರಿಹರದೇವ ವಿರಚಿತಮಪ್ಪ ಶ್ರೀ ಗಿರಿಜಾಕಲ್ಯಾಣ ಮಹಾಪ್ರಬಂಧದೊಳ್ ಪಾರ್ವತೀತಪೋವರ್ಣನಂ ವಿರೂಪಾಕ್ಷ ಪ್ರತ್ಯಕ್ಷೀಕರಣ ವರ್ಣನಂ ನವಮಾಶ್ವಾಸಂ


