EN | KA

Menu

V

Girijākalyāṇa

ವಿರೂಪಾಕ್ಷದರ್ಶನ ಪುಷ್ಪಪಚಯ ಪೂಜಾವರ್ಣನಂ

ಶ್ರೀ ಗಂಗಾಧರನಭವಂಶ್ರೀ ಗೌರೀವರನುದಾರ ಪಾರಾವಾರಂಶ್ರೀ ಗುರು ಹಂಪೆಯ ಶಂಕರನೀಗೆಮಗೆ ಮನೋರಥಂಗಳಂ ಕೃಪೆಯಿಂದಂ

ಸರಸೀಸಂಜಾತಜಾತೋತನ್ನಿಶಿತ ನಿಶಿತ ಸೌರಂಭ ಸಂಪಾದನಾದಂಧರಣೀ ದಿಗ್‌ವ್ಯೋಮಭಾಗಾವೃತಭರಿತ ಘನಧ್ವಾನಸಂಭೇದನಾದಂಸುರತಾಸಕ್ತವ್ರಜಾಲಿಂಗನ ಚಲನಕರ ಪ್ರೌಢಿತಾನಾದನಾದಂಪರೆದತ್ತಾದಂ ಪ್ರಮೋದಂ ಶಿವನಿಳಯಕುಳೋತ್ಪಾದಮಾ ಶಂಖನಾದಂ

ಮುಗಿಯಲೊಡರ್ಚಿ ನಿಂದ ಕುಮುದಾವಳಿಯಂ ಸರಸೀರುಹಂ ಮುಗಳ್ನಗೆ ನಗುವಂತಿರಿರ್ದುವು ಚಕೋರಿಗಳಸ್ತಗಿರೀಂದ್ರದತ್ತಲುಬ್ಬೆಗದೊಳೆ ನೋಡುತಿರ್ದುವು ರಥಾಂಗಯುಗಕ್ಕೆ ಮನೋಜನೇಸು ಮೆಲ್ಲಗೆ ತೊಲಗುತ್ತುಮಿರ್ದುದುದಯಾದ್ರಿಗೆ ಗೋಪತಿ ಬರ್ಪ ಪೊಳ್ತಿನೊಳ್

ಕೆಂಪೇಱಿತು ಮೂಡಣದೆಸೆಸೊಂಪೇಱಿತು ಚಕ್ರಮಿಥುನಮಬ್ದ ಕದಂಬಂಕಂಪೇಱಿತು ಸಕಳ ಜಗಂಪೆಂಪೇಱಿತು ಪದ್ಮಮಿತ್ರನುದಯಿಸುವಾಗಳ್

ಉರ್ಕುಡುಗಲ್ ಕುಮುದಂಗಳ್ಸೊರ್ಕೊಗೆಯಲ್ ಕಮಳ ಚಕ್ರಪಕ್ಷಿಯುಗಂಗಳ್ತರ್ಕೈಸಲ್ ತಮಮಾಗಳ್ಬರ್ಕಟ ಬಯಲಾದುದರ್ಕನುದಯಿಸುವಾಗಳ್

ಇಳೆಯ ಮುಸುಂಕಂ ಮೆಲ್ಲಗೆಕಳೆಯುತ್ತೆಳ್ಚಱಿಸುತ್ತುಂ ರಥಾಂಗಮನಬ್ಚಂಗಳನೆವೆದೆಱೆಯಿಸುತುಂ ದೆಸೆಗಳನೆಳ್ಬಿಸುತೆಳ್ದುವಾಗಳಿನನ ಕರಂಗಳ್

ವ. ಮತ್ತಮಲ್ಲದೆ

ಕೊರಗಿಸಿ ಕುಮುದವನೆಳ್ಬಿಸಿಯರವಿಂದಮನಂಧತಮಮನೋಡಿಸಿ ದೋಷಾಕರನಂ ಕಳೆಗುಂದಿಸಿ ಪರಿವರಿದುವು ತರಣಿಯ ತಳಾಱರಂತಿರೆ ಕಿರಣಂ

ವ. ಆ ಸಮಯದೊಳ್

ಮುದುಡಿಸುತುಂ ಕೈರವಮಂಬೆದಱಿಸುತುಂ ಕೌಶಿಕಂಗಳಂ ಘನಪಥದೊಳ್ಕೆದಱುತ್ತುಂ ಕಿರಣಾಳಿಯನುದಯಾಚಳಚೂಡದಲ್ಲಿ ಮೂಡಿದನರ್ಕಂ

ಕಮಳಾಕರದಮಳ್ವಕ್ಕಿಗಳ ಮನೋರಥಮಲರೆ ವಾಸವಾಶಾಮುಖದೊಳ್ತಮಮೆಂಬೆವೆದೆಗೆಯುತ್ತಿರೆವಿಮಳ ಜಗಚ್ಚಕ್ಷು ತೊಳಗಿ ಬೆಳಗುತ್ತಿರ್ದಂ

ವ. ಅಂತಾದ ಸೂರ್ಯೋದಯದೊಳ್ ಸಕಳ ಶಿವಾಲಯಪ್ರೋದ್ಭೂತಮಪ್ಪ ಪಂಚಮಹಾಶಬ್ದಮುಂ ತಟಾಕತೀರಸ್ಥಿತ ಸಂಧ್ಯಾವಂದನಾಸಕ್ತ ಧರಾಮರ ಪ್ರಕರಮುಂ ಗಜಶಿಕ್ಷಾಪ್ರಾರಂಭಸಮಯ ಸಂರಂಭಸಂಯುಕ್ತ ಸುಭಟಾ ರೋಹ ನಿಕಾಯಮುಂ ಹಯಶಿಕ್ಷಾವಾಹಕ ವ್ಯೂಹಮುಖರ ಮುಖಜನಿತ ನಿಬಿಡ ನಿರ್ಘೋಷಮುಂ ಸೇವಾಭರಧರಾಧೀಶ್ವರ ಪ್ರಕರ ಸಂರಂಭಮುಂ ರಾಜನಿಳಯಾಗಮ ಲಂಪಟಲಲಿತ ಲಲಿತಾಂಗೀವಿತಾನ ವಿಸ್ತಾರಹಸ್ತಕಟಕ ಮಂಜೀರ ಸಂಜನಿತ ಮಧುರ ಧ್ವನಿಯುಂ ನರ್ತಕ ನರ್ತಕೀನಿಕರ ವೈತಾಳಿಕಾದಿ ವಂದಿಮಾಗಧ ಸ್ತೋತ್ರಧರಾಮರ ಪರಮಾಶೀರ್ವಾದ ಕದಂಬಧ್ವನಿಯುಂ ಪುರದೊಳಂ ರಾಜಮಂದಿರದೊಳಂ ನೆಗಳೆ ಪರಮಹರ್ಷದಿಂ ಗಿರೀಶ್ವರಂ ಪ್ರಭಾತಸಮಯಸಮುಚಿ ಸ್ಥಾನನಾಗಿ ಕುಳ್ಳಿರ್ದು ನೆನೆದು ನೋಡಿ ನಾರದಮುನೀಶ್ವರನಱಿಪಿ ಪೋದುದಂ ಕುರುಪುಗೊಂಡು ಹೈಮವತಿಯಂ ಹೇಮಕೂಟದೊಳಿರ್ಪ ಪರಂಜ್ಯೋತಿಃಸ್ವರೂಪನಪ್ಪ ಶ್ರೀ ವಿರೂಪಾಕ್ಷನಲ್ಲಿಗೆ ಕಳುಪಲೆಂದು ಮನದಂದೋಲಗಮಂ ಪರೆಯಲ್ವೇಳ್ದು.

ಗಿರಿರಾಜಂ ನಾರದಂ ಪೇಳ್ದತಿಹಿತವಚಮಂ ಚಿಂತಿಸುತ್ತಲ್ಲಿ ನಾನಾವರ ವಾರಸ್ತ್ರಿಯರೊಳ್ ತಾಂ ಜಯೆ ವಿಜಯೆಯೆನಿಪ್ಪಿರ್ವರಂ ಕೂಡಿಕೊಂಡೊಪ್ಪಿರೆ ಮೂಱುಂ ಪುಷ್ಪಕಂಗಳ್ ಬರೆ ನಿಜಸುತೆಯಂ ಶಾಂತೆಯಂ ಸತ್ಯೆಯಂ ಶಾಂಕರಿಯಂ ಶರ್ವಾಣಿಯಂ ಶಾಶ್ವತಗುಣನಿಧಿಯಂ ಬಾರೆನುತ್ತಿರ್ದನಾಗಳ್

ಗಿರಿಪತಿ ಕರೆದೊಡೆ ಪುಳಕಾಭರಣೆ ಮಹಾದೇವಿ ಮಾನಿ ಶರ್ವಾಣಿ ಕೃಪಾಕರೆ ಹಂಸಯಾನೆ ಬಿಂಬಾಧರೆ ತಂದೆಯ ಮುಂದೆ ಬಂದು ನಿಂದಿರ್ದಾಗಳ್

ಪದೆಪಿಂದಂ ಬಂದು ಮೇನಾಸತಿ ನಿಜಸುತೆಯಂ ನೋಡಿ ಮುಂಡಾಡಿ ದೇವೀಸದಳಂಕಾರೈಕಪಾತ್ರೇ ಪುಲಿಕರಡಿಮಹಾಸರ್ಪನಮ್ಮೂವು ಸಿಂಹಂಮದವನ್ಮಾತಂಗನುಗ್ರಗ್ರಹವಿಡಿದ ಬಿದಿರ್ ಬೆತ್ತವುಂಟಲ್ಲಿ ತಾಯೇಪದುಳಂ ಪೋಗವ್ವ ಪೋಗೆಂದತಿಭಯರಸದಿಂ ಬುದ್ಧಿವೇಳುತ್ತುಮಿರ್ದಳ್

ವ. ಎಂದಿಂತು ಪೇಳೆ ಕೇಳ್ದು ಮನದೊಳ್ ನಸುನಗುತ್ತುಂ ಮಾತೆಯ ಮಾತಿಗೊಂಡಂಬಟ್ಟು ವಿನಯವಿನಮಿತೆಯಾದ ಪಾರ್ವತಿಯಂ ಪರ್ವತರಾಜಂ ಪುಷ್ಪಕದೊಳ್ ಬಿಜಯಂಗೈಸಿ ತಾನುಂ ಕುಳ್ಳಿರ್ದು ಪಿಂತಣ ವಿಮಾನಂಗಳೊಳ್ ಜಯೆವಿಜಯೆಗಳಂ ಬರಲ್‌ವೇಳ್ದು ಗಗನಕ್ಕೆ ನೆಗೆದು ಮೀಱಿ ಪಾಱಿ ತ್ರ್ಯಕ್ಷನಂ ನೆನೆದು ದಕ್ಷಿಣಾಭಿಮುಖನಾಗಿ ನಡೆತರ್ಪಾಗಳ್,

ಪಲವುಂ ದೇಶಂಗಳಂ ಭಾಸುರನಗರಿಗಳಂ ತತ್ತಟಾಕಂಗಳಂ ನಿಶ್ಚಲಕೇದಾರಂಗಳಂ ಪರ್ವತವಿತತಿಗಳಂ ವಿಂಧ್ಯಸಂದೋಹಮಂ ನಿರ್ಮಲಕಾಸಾರಂಗಳಂ ತಾವರೆಗಳನಳಿಯಂ ಹಂಸಮಾಲಾವಿಳಾಸೋಜ್ಜ್ವಲಮಂ ನೋಡುತ್ತೆ ತೋಱುತ್ತಗಜೆಗೆ ನಗನಾಥಂ ಬರುತ್ತಿರ್ದನಾಗಳ್

ಇಂತಿಂತು ನೋಡುತುಂ ಬರೆಮುಂತಿರ್ದುದು ತರಳತರಂಗಪ್ರಯುತಾನಂತ ನವಫೇನಜಲಚರಸಂತಾನಂ ತುಂಗಭದ್ರೆ ಗಂಗಾಪ್ರಾಯಂ

ಇರೆ ಕಂಡು ಕೊಂಡು ಕೊನೆಯುತೆಗಿರಿರಾಜಂ ನಿಜತನೂಜೆಗಱಿಪಿದನತ್ಯಾದರದಿಂ ಭರದಿಂ ಪರಿದುದುಸುರುಚಿರನದಿ ತುಂಗಭದ್ರೆಯೆಂಬುದು ಪೆಸರಿಂ

ತರಳತರಂಗ ಮುದ್ರೆಯನನೇಕಮುನೀಂದ್ರ ಮನಸ್ಸುಭದ್ರೆಯಂಪರಮ ಸುಧಾರಸಾರ್ದ್ರೆಯನಪಾರಗಭೀರಸಮುದ್ರೆಯಂ ಪರಾಪರಸುಖ ನಿದ್ರೆಯಂ ದುರಿತಮಾಲೆಗುಪದ್ರೆಯನತ್ಯನೂನವಿಸ್ತರ ಸುಕೃತಾರ್ದ್ರೆಯಂ ನೆರೆ ನಿರೀಕ್ಷಿಸು ಪಾರ್ವತಿ ತುಂಗಭದ್ರೆಯಂ

ತಡೆವಿಡಿದೊಪ್ಪುವಾಮ್ರವರನೇಱಿಲಶೋಕೆ ಕವುಂಗು ತೆಂಗು ಕರ್ಪಿಡಿದ ತಮಾಲಮೀಳೆ ನವದಾಡಿಮವೀಥಿ ಲವಂಗಲುಂಗವಿಂಪೊಡರಿಪ ಬಾಳೆ ಪಕ್ವಫನಸಾವಳಿ ನಿಂಬಕಂದಂಬಮಿಂಬುಗೊಂಡಡಸಿದ ಮಾತುಳಂಗತತಿ ಪೂಗಕುಲಂ ಸಲೆ ತುಂಗಭದ್ರೆಯೊಳ್

ವ. ಮತ್ತಮಲ್ಲದೆ,

ನೆನೆದನೆ ಧನ್ಯಂ ನೋಡಿದನನಘಂ ಸೋಂಕಿದವನಮರನಘಮರ್ಷಣಮಿರ್ದನೆ ಗಣನಾಥಂ ಸೇವಿಸಿದನೆ ಮುಕ್ತಂ ಕೇಳ ತುಂಗಭದ್ರೆಯ ಜಳಮಂ

ವ. ಎಂದು ಪೇಳುತ್ತುಂ ತೋಱುತ್ತುಮಿರ್ಪಲ್ಲಿ,

ತರದಿಂ ಕುಳ್ಳಿರ್ದ ಸಂಧ್ಯಾಸಮಯವಿಮಳಮಂತ್ರಾಕ್ಷರಸ್ತೋಮಶೋಭಾಕರ ವಕ್ತ್ರಾನೀಕದಿಂದೊಪ್ಪುವ ಮುನಿತತಿಯಂ ಪರ್ಣಶಾಲಾಂತ್ಯದೊಳ್ ಭಾಸುರ ಶಂಭುಧ್ಯಾನ ನಾನಾಜಪನಿಯಮ ಸದಾಹೋಮದಿಂದಿರ್ಪ ವಿಪ್ರೋತ್ಕರದಿಂದಂ ತುಂಗಭದ್ರಾತಟಮೆಸೆದುದು ಹೇಮಾಚಳಪ್ರಾಂತಕಾಂತಂ

ವ. ಮತ್ತಮಾ ತುಂಗಭದ್ರೆ ಶಿವನ ಕೀರ್ತಿಯಂತೆ ಭುವನಭರಿತಮುಂ ಪಾರ್ವತೀವಿಳಾಸದಂತೆ ತೀರದೊಪ್ಪಮುಂ ಅಮರಾವತಿಯಂತನಿಮಿಷಪ್ರಕರಮುಂ ಕಱೆಗೊರಲನಂತೆ ವಿಷಭಂಗಮುಂ ಗಗನತಳದಂತೆ ವಕ್ರಗತಿಯುಂ ದ್ವಿಜರಾಜ ಶೋಭಿತಮುಮೆನಿಸಿರ್ದುದಾ ನದಿಯುಭಯತಟವಿಳಸಿತವನಾವಳಿಯಲ್ಲಿ,

ಪಱಿದೆಲೆಯಿಟ್ಟು ಪಲ್ಗಿಱಿದು ಹರ್ಱೆನುತುರ್ಬುತೆ ಪುರ್ಬನೇಱಿಸುತ್ತುಱುಗಿಸಿ ನೋಡಿ ದಾಂಟಲನುಗೆಯ್ಯುತೆ ತೂಗುತೆ ಝಂಕಿಸುತ್ತೆ ಬಾಯ್ದೆಱೆದೊಲೆಯುತ್ತೆ ಕೆಯ್ಗಳನೆ ಕೂನಿಸಿ ಕುರ್ಗುತೆ ಏಡಿಸುತ್ತೆ ತಾಂನೆರೆ ನಗಿಸಿತ್ತು ತಾಪಸಕುಮಾರರನಲ್ಲಿಯದೊಂದು ಮರ್ಕಟಂ

ವ. ಅಂತು ಪರಿಹಾಸರಸಮಂ ಮುನಿಗಳ ಮೊಗಕ್ಕೆ ಮೊಗೆದು ಚೆಲ್ಲುವಂತೇಡಿಸುವ ಕೋಡಗಂಗಳಂ ನೋಡುತ್ತುಂ ಬರೆವರೆ ಮುಂತನಂತಗುಲ್ಮ ಲತಾವೃಕ್ಷ ಗುಹಾಗಹ್ವರಂಗಳೊಳ್ ಶಿವಧ್ಯಾನ ನಾನಾತಪೋಭರಭರಿತಮಾದ ಮನುಮುನಿ ಸ್ತೋಮದಿಂ ಹೇಮಕೂಟಾಚಳ ಪ್ರಾಂತಮಿರ್ದುದದೆಂತೆಂದೊಡೆ,

ಪರಮಾರ್ಥಂ ಪುಣ್ಯತೀರ್ಥಂ ಮೃಗಪತಿನಿಕರ ಸ್ವಾರ್ಥಮದ್ಯತ್‌ ಸದರ್ಥಂಸುರಭೂಜಂ ಶೈವತೇಜಂ ವಿಮಳಮುನಿಸಮಾಜಂ ನಗವ್ರಾತರಾಜಂಸ್ಥಿರಶೀಲಂ ದಂತಿಜಾಲಂ ಸುಕೃತಪರಿವೃತಸ್ಥೂಲಮೊಪ್ಪಿತ್ತು ಶೈಲಂವರಕೂಟಂ ಶೃಂಗಮಾಟಂ ಮೃಗಧರಧರಜೂಟಂ ಕರಂ ಹೇಮಕೂಟಂ

ವ. ಆ ಶೈಲದಲ್ಲಿ

ತರುತರುಗಳೊಳಗನಾದಿಯಹಿರಿಯರತಿವ್ರತಿಗಳಚಳರಾರೂಢ‌ರ್ ಭಕ್ತಿರಸಾವಿಷ್ಟ‌ರ್ ನಿಯತ‌ರ್ಪರಮ ತಪೋನಿಧಿಗಳಧಿಕರುನ್ನತರಿರ್ಪರ್

ವೇದಕರೀಶನ ಭಕ್ತಿಯಬೋಧಕರುರುಸಾತ್ವಿಕರ್ ಸದರ್ಥರ್ ಸಿದ್ಧ‌ರ್ಸಾಧಕರುತ್ತಮರಭವಾರಾಧಕರತಿಸಾಧುಗಳ್ ವಿರಾಜಿಸುತಿರ್ಪ‌ರ್

ನಿರತರ್ ಭರಿತ‌ರ್ ಚರಿತ‌ರ್ಪರತತ್ತ್ವರತರ್ ನುತ‌ರ್ ವಿಕರ್ತನ ತೇಜಃಕಿರಣ‌ರ್ ಕರುಣ‌ರ್ ಶರಣ‌ರ್ಕರುಣಾಳುಗಳರುಣಮಣಿನಿಭರ್ ನೆಲಸಿರ್ದರ್

ವ. ಅಂತವರ ನಿಸ್ಸೀಮತಪಃಪ್ರಭಾವಮಂ ನೋಡುತ್ತುಂ ಬರ್ಪಾಗಳ್,

ಕರೆಯವು ಕೋಗಿಲೆ ಮಧುಪಂಮೊರೆಯವು ಗಿಳಿಗಳಪವನಿಲನಲ್ಲಾಡಂ ಪೆರ್ಮರನಂ ಗಿಡುವಂ ಲತೆಯಂಗುರುಶರ್ವಸಮಾಧಿಭೀತಿಯಿಂದಾ ನಗದೊಳ್

ವ. ಅಂತವಱನೀಕ್ಷಿಸುತ್ತುಂ ಬರೆವರೆ ಮುಂತೆ

ಭಾನುಪ್ರದ್ಯೋತಕಾಯಂ ನುತಸುಕೃತನಿಕಾಯಂ ವಿಮಾಯಂ ಮಹೇಶಧ್ಯಾನಾರೂಢಂ ಸಗಾಢಂ ಸದಮಳಗುಣಚೂಡಂ ಶಿವಜ್ಞಾನಲೀಢಂಶ್ರೀನಂದೀಶಂ ಸುವೇಶಂ ಸುರುಚಿರ ಸುಖಸಾಕಾರಸಾರಂ ಸುಧೀರಂಸಾನಂದಂ ಕಾದು ನಿಂದಂ ಗಿರಿಶಿಖರ ಮುಖದ್ವಾರಮಂ ಭಕ್ತಿಯಿಂದಂ

ಅಂತಿರ್ದು ನಂದಿನಾಥಂಮುಂತಿದಿರ್ವಂದಗಜೆಗೆಱಗಿ ಹೆಱಸಾರ್ದೊಲವಿಂದಂ ತಾಯೆ ದೇವಿ ಶಾಂತೆಯನಂತಗುಣಾಭರಣೆ ಕರುಣಿ ಶರಣೆನುತಿರ್ದಂ

ವ. ಆಗಳ್

ತೊಳಗುವ ಶಾರದ ನೀರದದೊಳಗಿಂ ಮಿಂಚಿಳಿವ ತೆಱದೆ ಗಿರಿಸುತೆ ಶಶಿಮಂಡಳದಧಿದೇವತೆ ಧರಣೀತಳಕ್ಕೆ ಬರ್ಪಂತೆ ಪುಷ್ಪಕದಿನಿಳಿತಂದಳ್

ಒಡನಿಳಿದಂ ಗಿರಿರಾಜಂತಡವಿಲ್ಲದೆ ಭೋಂಕನಿಳಿದು ಜಯೆವಿಜಯೆಗಳಾಗಡೆ ನವರತ್ನದ ಪಾವುಗೆಯಿಡೆ ಮೆಟ್ಟಿದಳಗಜೆ ಮುಟ್ಟಿದಳ್ ಶಿವನೊಲವಂ

ಗಿರಿರಾಜಂ ಕೆಯ್ಗುಡೆ ನೇವುರದ ಕಳಧ್ವಾನಮೊಗೆದು ನಗಮಂ ಜಗಮಂಪರಿವೇಷ್ಠಿಸೆ ಬರುತಿರ್ದಳ್ಪರಮೇಶ್ವರಿ ಚಂದ್ರಧರನನೀಕ್ಷಿಪ ಭರದಿಂ

ವ. ಅಂತು ಬರೆವರೆ

ಇದು ವಿದ್ಯುತ್ಪ್ರಭವಪ್ರಭಾಪ್ರಸರಮೋ ಸಂಪೂರ್ಣಚಂದ್ರಾಂಶುಸಂಪದಮೋ ಶಾಶ್ವತ ಸೂರ್ಯಕೋಟಿರುಚಿರಪ್ರದ್ಯೋತಮೋ ಮೀಱಿ ಪೊಣ್ಮಿದ ಸರ್ವೇಶನಿಜಪ್ರಕಾಶನಿಧಿಯೋ ಪೇಳೆಂಬಿನಂ ತೋಱುತಿರ್ದುದು ದಿಕ್ಸಂಕುಳನಿರ್ಮಳೀಕೃತ ವಿರೂಪಾಕ್ಷ ಪ್ರಭಾಮಂಡಲಂ

ವ. ಆ ಪ್ರಭಾಮಂಡಲದೊಳಗೆ

ವಿಳಸತ್‌ ಪದ್ಮಾಸನಂ ಭಾಸುರಭಸಿತವಪುರ್ವಲ್ಕಲಂ ಧಾನ್ಯಮುದ್ರಾಂಗುಳಿ ರುದ್ರಾಕ್ಷಾಕ್ಷಮಾಲಾರುಚಿ ನಳಿಗುಣವ್ರಾತಯಜ್ಞೋಪವೀತಂಲಳಿತಾಸ್ಯಂ ಸ್ನಿಗ್ಧಗಂಡಂ ಮುಕುಳಿತನಯನಂ ಚಿತ್ತನಿಷ್ಕಂಪನಂ ಪಿಂಗಳವರ್ಣೋದ್ಯಜ್ಜಟಾಮಂಡಳಮೆಸೆಯೆ ತಪೋವೇಷದಿಂದೀಶನಿರ್ದಂ

ಮನಮೆಂತು ಬುದ್ಧಿಯೊಳ್ ಬುದ್ಧಿಯ ನಿಲವದಹಂಕಾರದೊಳ್ ತಾನಹಂಕಾರ ನಿಜಂ ಚಿತ್ತಾಂತದೊಳ್ ಚಿತ್ತದ ನೆಲೆ ವಿಲಸತ್ ಪ್ರಾಣದೊಳ್ ಪ್ರಾಣಮುಂ ಜೀವನೊಳಾದಂ ಕೂಡೆ ಜೀವಂ ಪರಮನೆನಿಸಿ ನಿರ್ಮಾಯ ನಿಷ್ಕಾಮಿ ನಿಷ್ಕಂಪ ನಿವಾತಜ್ಯೋತಿರೂಪಂ ನಿರುಪಮನೆನಿಸಿರ್ದಂ ವಿರೂಪಾಕ್ಷಲಿಂಗಂ

ಭಿನ್ನಾಭಿನ್ನಂ ಜ್ಞಾನಮಯಂ ನಿಜತೇಜೋವಿಲೀನ ಮಾನಸನಚಲಂತನ್ನ ತಾನೇ ಜಾನಿಪಬಿನ್ನಣದೊಳಗಿರ್ದನಭವನದ್ವಯರೂಪಂ

ಇದುಸತ್ಯಾಕಾರಮೋ ಶಾಂತಿಯ ನೆಲೆವನೆಯೋ ಧರ್ಮವಿಸ್ತಾರಮೋ ಪುಣ್ಯದ ಜನ್ಮಸ್ಥಾನಮೋ ಜ್ಞಾನದ ನಿಜರುಚಿಯೋ ನಿತ್ಯನಿರ್ಮಾಯಮೋ ತತ್ತ್ವದ ತೇಜಃಪುಂಜಮೋ ಮುಕ್ತಿಯ ಸುಖಮುಖಮೋ ಯೋಗಸಂಧಾನಮೋ ನೋಡಿದು ತಾನೆಂಬಂತೆ ಮುಂತಿರ್ದುದು ಶಿವನ ನಿಜಧ್ಯಾನಮೂರ್ತಿಪ್ರಭಾವಂ

ವ. ಅಂತುಮಲ್ಲದೆ

ಮಾತಿನ ವೇಧೆಯ ಬೋಧೆಯಭೂತಾದಿಯ ಪಂಚವಿಂಶತಿಗಳಂ ಮೀಱಿಜ್ಞಾತೃಜ್ಞಾನಜ್ಞೇಯವ್ರಾತಮನಳಿದುಳಿದು ತಾನೆ ತಾನಾಗಿರ್ದಂ

ಮುನಿತತಿಗಳ ಮನವೆಯ್ದದಮನುಗಳ ಬಗೆ ಪುಗದ ಶಾಸ್ತ್ರವಱಿಯದ ವೇದಂಜಿನುಗುವ ಗಜಬಜೆ ನಿಳ್ಕದಘನತೇಜೋರಾಶಿ ನಿಜ ನಿವೇಶದೊಳಿರ್ದಂ

ಪೊಱಗಂ ಬಳಸದ ಮಾಯೆಗೆತೆಱಹಂಗುಡದಚ್ಚಬಚ್ಚಬಱಿಯಱಿವಿನ ಸೈವೆಱಗಿನ ಮಱಹಿನ ಕುಱುಹಿನಕಱೆಗೊರಲಂ ನಿಜಸಮಾಧಿಯೊಳ್ ಸಂದಿರ್ದಂ

ಇರೆ ಕಾಣುತೆ ಗಿರಿರಾಜಂಪರಮಸುಖಂಬಡೆದು ಪಿಡಿದು ಮೆಲ್ಲಡಿಗಳನಾದರದಿಂ ಹರ್ಷಂ ಮೂಡುತ್ತಿರೆ ಪುಳಕದ ಮೆಯ್ಯೊಳೊಲ್ದು ಮೆಯ್ಯಿಕ್ಕಿರ್ದಂ

ವ. ಅಂತು ಮೆಯ್ಯಿಕ್ಕಿ ನಿಂದು ಕೆಯ್ಯಂ ಮುಗಿದು ಪಾರ್ವತಿಯಂ ಕರೆದು,

ಅನುಪಮನಿರ್ದನಿರ್ದನೆ ಶರಣ್ಬುಗು ಶಾಶ್ವತಮೂರ್ತಿಯಿರ್ದ ನಿರ್ದನೆ ನಡೆನೋಡು ಚಂದ್ರಧರನಿರ್ದನೆ ನಂಬು ನಿಜೇಶನಿರ್ದನಿರ್ದನೆ ಪರಿಭಾವಿಸಪ್ರತಿಮನಿರ್ದನೆ ಕೀರ್ತಿಸು ಶಂಭುವಿರ್ದನಿರ್ದನೆ ಪದೆದರ್ಚಿಸರ್ಚಿಸೊಲವಿಂದಮೆ ಪಾರ್ವತಿ ಹಂಪೆಯಾಳ್ದನಂ

ನಿಧಿಯಿದೆ ಭಕ್ತರ ಬಯ್ಕೆಯನಿಧಾನವಿದೆಯಚ್ಚಶರಣರನುವಿದೆ ಕರುಣಾಂಬುಧಿಯಿದೆ ಸುಧೆಯಿದೆ ಕೇಳ್ ನಿನ್ನಧಿಪಂ ಶಶಿಮೌಳಿಯೆಂಬ ಕಲ್ಪಮಹೀಜಂ

ಸದಮಳವಿದೆ ಪರತತ್ತ್ವದನಿಧಾನಮಿದೆಯಾದ್ಯರಱಿದು ಕುಱುಪಿಟ್ಟಾನಂದದ ಮೊದಲಿದೆ ಪರಮಾರ್ಥದತುದಿಯಿದೆ ಗಿರಿಜಾತೆ ನೋಡು ನೆನೆ ಹೊಗಳೆಂದಂ

ವ. ಎಂದು ಗಿರಿರಾಜಂ ಹರನ ಪರತತ್ತ್ವಮಯ ಸೌಂದರ್ಯರೂಪಮಂ ಗಿರಿಜೆಗೆ ತೋಱುತ್ತಂ ಪೊಡಮಡು ಪೊಡಮಡೆನೆ ಪಾರ್ವತೀದೇವಿಗೆ ಕೌತುಕರಸದೊಳಾನಂದಂ ಪುಟ್ಟಿ ಭಯರಸದೊಳ್ ಭಕ್ತಿಯುಣ್ಮಿ ಸ್ನೇಹರಸದೊಳ್ ತಾತ್ಪರ್ಯಂ ಪೊಣ್ಮೆ ಶೃಂಗಾರರಸದೊಳ್ ಲಜ್ಜೆವೆರಸಿ ಕಲ್ಪತರುವಿನ ಬೀಳಲ್ ಮಹಾನಿಧಾನಕ್ಕೆಱಗುವಂತೆ ಮಂದಾನಿಳನ ಸೊಂಕಿಂದಂ ಪುಷ್ಪಮಾಲೆ ಬಳ್ಕುವಂತೆ ಕುಸುಮಚಾಪಂ ಕಾಲ್ಗೆಱಗುವಂತೆ ಪಂಚಬಾಣಂ ಹೊಡೆಗೆಡೆವಂತೆ ಮುಂದೆ ನಿನ್ನ ವಾಮ ಭಾಗಮಂ ಸೂಱೆಗೊಳ್ವುದರ್ಕಿದೆ ಕುಱುಪೆಂಬಂತೆ ಬಿಂಕದಿಂ ಕೊಂಕಿ ನಿಂದು ವಿಲಾಸದಿಂದೆಡದುಂಗುಟಮಂ ಲಲಾಟದಿಂ ಮುಟ್ಟಿ ಪೊಡೆಮುಟ್ಟು ನಿಂದು,

ಆನಿರ್ದಂತಿರದೇಕೆ ಬೇಡ ತಪವೆಂದೆಂಬಂತಹಂಕಾರದಿಂನೀನೇ ಸದ್ಗತಿ ದೇವ ದೇವ ದಯೆಗೆಯ್ಯೆಂಬಂತೆ ಕಾರ್ಪಣ್ಯದಿಂಸಾನಂದಾತ್ಮಕನೆನ್ನನೇಕಱಿವನೆಂದೆಂಬಂತೆ ನಿರ್ವೇದದಿಂನಾನಾ ಭೋಗದೊಳೆಂದು ಕೂಡಿದಪೆನೆಂಬಂತಾಸೆಯಿಂ ನೋಡಿದಳ್

ಶಿವನೀತಂ ನಿಜವಲ್ಲಭಂ ಮಮಗುರು ಪ್ರಖ್ಯಾತನತ್ಯೂರ್ಜಿತಂಭವನೆನ್ನಾಳ್ದನೆನಿಪ್ಪುದಂ ತಿಳಿದೆನಾಂ ನೀಂ ಪೋಗು ನಿತ್ಯಾರ್ಚನೋತ್ಸವದಿಂ ಸಂತಸದಿಂ ಸದಾತುರತೆಯಿಂ ಸಾನಂದದಿಂದಿರ್ಪೆನೆಂದು ವಿಳಾಸಾಬ್ಧಿ ಭವಾನಿ ನೋಡಿ ನುಡಿದಳ್ ಭೂಭೃತ್ಕುಲಾಧೀಶನೊಳ್

ನುಡಿಯೆ ಗಿರಿರಾಜನೊಲವಿಂಮೃಡಾಣಿಯಂ ನೋಡಿ ಮಗಳೆ ಮಾತೆ ಕರಂ ನಟ್ಟಡವಿ ಗುಹೆ ಗಹ್ವರಂ ಮಡುಗಿಡುವವಱೊಳ್ ಪದುಳಮರ್ಚಿಸೆನುತುಂ ನುಡಿದಂ

ಪತ್ತಡಿಯಿಟ್ಟತಿಮೋಹಂಚಿತ್ತಮನಳ್ಳಿಱಿಯೆ ತಿರುಗಿ ಬಂದು ಗಿರಿಜೆ ಲೋಕೋತ್ತಮೆ ಪೋದಪೆನೆನುತುಂಮತ್ತಂ ಮತ್ತಪ್ಪಿ ಪರಸಿ ಗಿರಿಪತಿ ಪೋದಂ

ವ. ಅಂತು ಪೋಗೆ ಚಿಂತಿಸಿ ನೋಡಿ ಮುಂತಿರ್ದ ವಿಪುಳ ವಿಭ್ರಮನಂ ತಪೋಮಯನಂ ವಿಳಾಸನಿಧಿಯಂ ವೈರಾಗ್ಯಯುಕ್ತನಂ ಸೌರಭ್ಯಸದನನಂ ಭಸಿತ ಕಾಯನಂ ಸೌಂದರ್ಯರೂಪನಂ ಜ್ಞಾನಪ್ರದೀಪನಂ ನಿಜಸುಖನಿವಾಸನಂ ಸ್ವಯಂ ಪ್ರಕಾಶನಂ ಕಂಡು ಶೃಂಗಾರರಸಕ್ಕೆ ಮನದಂದು ವೈರಾಗ್ಯರಸಕ್ಕೆ ಮೆಯ್ದೆಗೆದು ಸಹಚರಿಯರಪ್ಪ ಜಯೆವಿಜಯೆಗಳ್ಗೆ ನಗತನೂಜೆ ನಿರ್ವೇದದಿಂದಿಂತೆಂದಳ್,

ಇದೆ ವಿಭು ಸಾರ್ದನೊಲ್ದು ಪರವಂ ಪರವಂ ಪರವಂಚನೋಕ್ತಿ ಕೊಳ್ಳದು ತಪಮತ್ಯಸಾಧ್ಯ ವಿಷಯಂ ವಿಷಯಂ ವಿಷಯಂತ್ರದಂತೆ ಸುತ್ತಿದುದುಪತಾಪವೆಯ್ದಿ ತನುವಂ ತನುವಂ ತನುವಂ ಕಪರ್ದಿ ನೋಡಿದೊಡೆನಗಾದುದೆಯ್ದೆ ಕುಮುದಂ ಕುಮುದಂ ಕುಮುದಂ ಮೃಗೇಕ್ಷಣೇ

ತಪಮಿಂತಿದು ಮದ್ವಿರಹಾತಪಮತ್ಯಧಿಕಂ ತುಡುಂಕಬಾರದಪಾರಂತಪನನ ತೇಜಕ್ಕಂ ವಿತ್ತಪನಱಿವಿಂಗಂ ವಿಶೇಷ ಚೋದ್ಯಮಭೇದ್ಯಂ

ನಿಗಮಂಗಳ್ ವಿಷ್ಣು ವಿರಿಂಚಿಗಳಱಿಯದ ಶಿವನನಱಿವೊಡೆನ್ನಳವೇ ತಾಂಬಗೆವೊಡೆ ಸಾತ್ತ್ವಿಕ ಶಿವಭಕ್ತಿಗಲ್ಲದಭವನಂ ಸಮಂತು ಸಿಲ್ಕಂ ನಿಲ್ಕಂ

ಅದುಕಾರಣದಿಂ ಭಕ್ತಿಪ್ರದನಂ ವಿರೂಪಾಕ್ಷನಂಘ್ರಿಗಳನರ್ಚಿಸುವೆಂಸದಮಳ ಶಿವಸುಖಮುಖಸಂಪದದೊಳ್ ಬಳಿಕಿರ್ಪೆನಪ್ಪಿ ಶರ್ವನ ತನುವಂ

ಎಂದಬಲೆಯರೊಳ್ ನುಡಿಯುತ್ತುಂ ದಟ್ಟಡಿಯಿಟ್ಟು ಭಕ್ತಿ ತನ್ನಯೆ ಮನಮಂಬಂದಡರೆ ಭರಂಮಿಗೆ ಮುದದಿಂದಂ ಪುಷ್ಪಾಪಚಯಕ್ಕೆ ಗಿರಿಸುತೆ ಬಂದಳ್

ನೇವುರದ ನುಣ್ದನಿಗೆ ಮಿಗೆಯಾವರಿಸುವ ಹಂಸೆವಿಂಡನೆಡಪುತ್ತುಂ ಸದ್ಭಾವಕಿ ಭಾಮಿನಿ ಭರ್ಗನಜೀವಂ ಶೃಂಗಾರವಾರಿನಿಧಿ ನಡೆತಂದಳ್

ವ. ಇಂತು ನಡೆತಂದು ಪೂದೋಂಟಮಂ ಪೊಕ್ಕು,

ಅರರೆ ಸುಕುಮಾರೆ ಸೌರಭ್ಯರತೆ ವಸಂತಾನುಕೂಲೆ ಮೆಲ್ಲಡಿಯಿಡುತುಂಹರನ ಜಡೆಮುಡಿಗೆ ನಡೆತಂದಿರವಂತಿಗೆಯರಲನಗಜೆ ಬಗೆ ಮಿಗೆ ತೆಗೆದ‌ಳ್

ತೊಳಗುವ ಚಂಪಕಮಾಲೆನಾಸಿಕೆಬಳಸಿದ ಚಂಪಕಮಾಲೆ ಸುಗಂಧಿ ನಗನಂದನೆ ಬಂದಳಿಮನವಲ್ಲದ ಭಕ್ತ್ಯುಜ್ಜ್ವಳೆ ತಿಱಿದಳ್ ಕಂಪು ಸುರಿವ ಸಂಪಗೆಯಲರಂ

ಎಸೆವ ರಜೋಗುಣ ಲಸಿತಪ್ರಸನ್ನಮುಖರಾಗಯುಕ್ತೆ ಶಿವಪದಪೂಜಾವ್ಯಸನೆ ಶಶಿವದನೆ ತಿಱಿದಳ್ಪೊಸ ಹರಿಸಮನಾಂತು ಶಾಂತೆ ಸೇವಂತಿಗೆಯಂ

ಪರಮೋತ್ಸವದಿಂ ನಡೆತಂದುರುತರ ಮೃಗನಾಭಿಗಂಧಿ ನಿಂದು ಬಿಳಿಯ ಕತ್ತುರಿ ತಾನೆನಿಸುವ ಪಡ್ಡಳಿಯರಲಂ ತಿಱಿದಳ್ ಭವಾನಿ ಶಿವಪೂಜಾರ್ಥಂ

ಎಳಸಿ ನಲಿನಲಿದು ನವಪಾಟಳಗಂಧಿಕೆ ಪಾಟಳಾಂಗಿ ಮಿಗೆ ಕೊಯ್ದಳ್ ಪಾಟಳರುಚಿರಾಧರೆ ಕಾಮನಶಿಳೀಮುಖದ ಪರಿಯ ಪಾದರಿಯ ಪೊಸ ಪೂವಂ

ವ. ಅವಂ ಕೊಂಡು ಮತ್ತೆ ನಡೆತಂದು ಕೊಳನಂ ಪೊಕ್ಕು,

ಕಮಳಂದಿಱಿಯಲ್ ನಿಜಕರಕಮಳಮುಮಂ ನೀಡೆ ಕೆಯ್ಯ ಕಂಪಿಂಗಮಮಭ್ರಮರಾಳಿ ಮುತ್ತೆ ಕರಮಂಕಮಳಂ ದಿಟಮೆಂದು ಬಗೆದು ನೋಡುತ್ತಿರ್ದಳ್

ವ. ಅಂತು ನೋಡಿ ತಿಳಿದು

ಮಿಸುಪ ನವತರುಣ ತರಣಿಯಪಸಿಯ ಬಿಸಿಲ್ ಮಸಗೆ ತನುವಿನರಿಸಿನವೊಲವಿಂದೆಸೆವ ರಥಾಂಗಕುಚದ್ವಯೆಪೊಸದಾವರೆವೂವನೋವಿ ಭಾವಿಸಿ ತಿಱಿದಳ್

ಸದಮಳ ಮೃದುಮಯ ಹಸ್ತಪ್ರದೇಶಮಂ ಸುತ್ತಿ ಮುತ್ತೆ ಮತ್ತಾಳಿಗಳಂಬುದ ಕೋದಂಡ ಭ್ರೂಯುಗೆಸುದೀರ್ಘನಖೆ ಕೊಯ್ದಳೊಲ್ದು ನುತಕೇತಕಿಯಂ

ಸೆಳ್ಳುಗುರ್ಗಳ ನಳನಳಿಸುವಬಳ್ಳಿವೆಳಗು ಕರೆಯೆ ಕೌಮುದಿಯನುತ್ಸವದಿಂದುಳ್ಳಲರ್ವ ಕುಮುದಕುಲದೊಳಗೊಳ್ಳಿದುವಂ ತೆಗೆದಳಿಂದುಮುಖಿ ತಿಳಿಗೊಳನೊಳ್

ಜಾತಿಸುಗಂಧಿನಿ ಮೇನಾಜಾತೆ ಕುಸುಮ ಜಾತಿಯೊಳಗೆ ಜಾತಿಯಿದೆಂದಾಜಾತಿ ಸ್ತ್ರೀ ಜಾತಿಯೊಳತಿಜಾತೆ ಜಗನ್ಮಾತೆ ಜಾತಿಯರಲಂ ಕೊಯ್ದಳ್

ಮಲ್ಲಿಗೆ ಶರ್ವನ ಜೆಡೆಮುಡಿಯಲ್ಲಿಗೆ ಕೊಂಡೊಯ್ಯಲೆಂದು ಸಮ್ಮುದದಿಂ ನಿಮ್ಮಲ್ಲಿಗೆ ಬಂದೆನೆನುತ್ತುಂಮಲ್ಲಿಗೆಯಲರ್ದೊಂಗಲಂ ಮಹೇಶ್ವರಿ ಕೊಯ್ದಳ್

ವ. ಮತ್ತಂ ಪುಷ್ಪಜಾತಿಯಂ ಕೊಯ್ದು ಪತ್ರ ಜಾತಿಯಂ ಕೊಯ್ಯಲೆಂದು

ಸಹಜಾಮೋದೆ ಸುಗಂಧಾಮಹಮೆನಿಸಿದ ಮರುಗದಲ್ಲಿ ಪರಿಮಳದೆಲೆಯಂಬಹುಗುಣಭೂಷಣೆ ಭಕ್ತಿಯೊಳಹಿನಿವಹಾಭರಣನರ್ಚನೆಗೆ ನೆರೆ ತಿಱಿದಳ್

ನಲವಿಂದಂ ಮುಡಿವಾಳದನೆಲೆಗೆಯ್ತಂದಗತನೂಜೆ ಬೇರಂ ಬಲ್ಲರ್ಗೆಲೆದೋಱಲೇಕೆ ನೀನೆನುತೊಲವಿಂ ಪರಿಮಳದ ಬೇರ್ಗಳಂ ಬರೆ ತೆಗೆದಳ್

ಇಂತಿಂತನಂತಕಾಂತಲತಾಂತಂಗಳನಾಯ್ದು ಕೊಯ್ದು ಸಂತಸದಿಂದಂಮುಂತೆ ನವಾಂಕುರಕಿಸಲಯದಿಂ ತೀವಿದ ಬಾಲಚೂತದೆಡೆಗೆಯ್ತಂದಳ್

ಒಡನೆ ಜಯೆವಿಜಯೆಗಳ್ ಮೆಲ್ಲಡಿಯಿಡುತುಂ ಬಂದು ಪುಷ್ಪಪುಟಿಕೆಗಳಂ ಸಂಗಡಮಿಳುಹಿ ವಿಮಳತಳದೊಳ್ಪೊಡೆಮಡುತುಂ ಗಿರಿತನೂಜೆಗತಿಮುದದಿಂದಂ

ವ. ಅಂತು ಪೊಡೆಮಟ್ಟು ಬಾಲಸಹಕಾರತಳದೊಳ್ ಹರಿತ ಭೂಮಿಕೆಯೊಳ್ ಸುರುಚಿರ ಮರೀಚಿಗಳಂಕುರಿಸಿತೆಂಬಂತೆ ನಳನಳಿಸಿ ಬೆಳೆದು ಪೊಸ ಪಸಲೆಯ ಮೇಲೆ ಕದಳೀದಳಂಗಳಂ ಕಮಲಪತ್ರಂಗಳಂ ನುಣ್ಬೆಳಗಂ ಕಱೆವ ಪೊಂಬಾಳೆಯ ಪತ್ರಂಗಳನಿಂಬಿನಿಂ ಪಾಸುತ್ತುಂ ಪಾಸಿಗೆ ಕವಿವ ಮತ್ತಾಳಿಗಳನೆತ್ತಂ ನಿವಾರಿಸುತ್ತುಂ ಕುಸುಮಕುಲಮನೆಸೆಯೆ ಸುರಿದು ಭಾಸುರದುಕೂಲದಿಂ ಬಾಸಣಿಸಿ ಶತಪತ್ರಸೂತ್ರಕುಲಮಂ ಕೆಲದೊಳಿರಿಸಿ ಮೆಯ್ಯಿಕ್ಕಿ ಕೆಯ್ಯಂ ಮುಗಿದು ದೇವಿ ಜಗನ್ಮಾತೆ ಸರ್ವಕಳಾಕೋವಿದೆ ಸುಕುಮಾರಾಂಗಿ ಸೌಂದರ್ಯಮೂರ್ತಿ ಇತ್ತ ಬಿಜಯಂಗೆಯ್ವುದೆಂದು ಬಿನ್ನವಿಸಿ ಕೆಯ್ಗುಡೆ ಮೃದುಪದನ್ಯಾಸದಿಂ ನಡೆತಂದಿಕ್ಕಿದ ಮಾಂದಳಿರ ಪೊಸ ಪಸೆಯ ಮೇಲೆ ಕಮನೀಯದಿಂ ಕುಳ್ಳಿರ್ದಾಗಳ್,

ಪರಿಮಳದಧಿದೇವತೆಯೋವರಕುಮುದದ ಕೂಡೆ ಬಂದ ಶಶಿಕಳೆಯೋ ವಾರಿರುಹದ ನಡುವೆಯ್ತಂದಿಂದಿರೆಯೋ ಎನೆ ದೇವಿ ಪೂವನೋವುತ್ತಿರ್ದಳ್

ವ. ಅಂತೋವುತ್ತುಮಿರ್ದು,

ಮುಟ್ಟಿದೊಡಾಗಾಳೆ ಕಂದುವನೆಟ್ಟನೆ ನೋಡಿದೊಡೆ ಕೋಡಿ ಬಾಡುವ ನೆನೆಯಲ್ತೊಟ್ಟನೆ ಕೊರಗುವ ಪೂವಂಕಟ್ಟುವ ಪರಿಯೆಂತೆನುತ್ತೆ ಚಿಂತಿಸುತಿರ್ದಳ್

ವ. ಅಂತು ಚಿಂತಿಸಿ ನೋಡಿ ಭಕ್ತಿಯೊಳ್ ಕೂಡಿ ಪೂಜಿಸಲ್ಬೇಡಿ ಪೂವಂ ಪೂ ಸೋಂಕೆ ಕೊರಗದೆಂಬಂತೆ ತನ್ನ ಕರಕಮಲಮಂ ನೀಡಿ,

ಅತಿಸುಕುಮಾರೆ ಸುಖಾಕರೆನುತ ಗುಣಗಣಯುಕ್ತೆ ಶಾಂತೆ ಸಾತ್ತ್ವಿಕರೂಪಾನ್ವಿತೆ ಸರ್ವಕಳಾನಿಧಿ ಪಾರ್ವತಿಸತಿ ಶತಪತ್ರಸೂತ್ರಮಂ ತೆಗೆಯುತ್ತುಂ

ವದನಕ್ಕಂ ಕುಸುಮಕ್ಕಂಪದೆದೆಱಗುವ ಮಧುಕರಂಗಳಂ ಸೋವುತ್ತುಂಮೃದುತರ ಸರಳಾಂಗುಲಿಯಿಂಸದಮಲೆಯಿರವಂತಿಯರಲನೊಲವಿಂ ಪಿಡಿದಳ್

ಪಿಡಿದೆತ್ತಿ ನಳಿನ ಗುಣದೊಳ್ತೊಡರ್ಚುತುಂ ಮೆಲ್ಲ ಮೆಲ್ಲನಿರವಂತಿಯ ಪೂದೊಡಿಗೆಗಳಂ ವಿರಚಿಸಿದಳ್ಮೃಡಾಣಿ ಮೃಡನವಯವಕ್ಕೆ ಸಡಗರದಿಂದಂ ‌

ಸರಸಿಜಬಂಧಂ ಕಮಲಾಕರಬಂಧಂ ಮುರಜಬಂಧಮುತ್ಪಲಬಂಧಂತರುಬಂಧಂ ಗಿರಿಬಂಧಂವರಬಂಧಂ ಲಿಂಗಬಂಧಮಂ ವಿರಚಿಸಿದಳ್

ಸುರರ ಶಿರೋಮಾಲಾವಿಸ್ತರಬಂಧ ನಾಗಬಂಧಮವನೀಬಂಧಂದ್ವಿರದಾಜಿನಬಂಧಂ ವಿಸ್ತರ ವಿಧುರವಿಬಿಂಬ ಬಂಧಮಂ ವಿರಚಿಸಿದಳ್

ಕರಕಮಲದ ಲೋಚನಸರಸಿರುಹದೆ ವದನಾರವಿಂದದಾ ಪರಿಮಳದಿಂಪೊರೆಯುತ್ತುಂ ಪೊಸಪೂವಂಗಿರಿಜೆ ಸುಖಂ ಮುಟ್ಟಿ ಮುಟ್ಟಿ ಕಟ್ಟುತಿರ್ದಳ್

ಈ ತೆರದಿಂ ಕ್ಷಿತಿಧರವರಜಾತೆ ಜಗನ್ಮಾತೆಯೆಸೆವ ಕುಸುಮಾವಳಿಯಿಂದೋತು ಮನೋಹರಮಪ್ಪ ವಿನೂತನ ಮಾಳಾವಿಳಾಸಮಂ ಮಿಗೆ ಸಮೆದಳ್

ವ. ಇಂತು ಪುಷ್ಪಾವಳಿಯಿಂ ಪಲವುಂ ತೆಱದ ಬಂಧಮಂ ಸಮೆದು ಬಳಲ್ದು ಸ್ಟೇದಭರಿತ ಗಂಡಸ್ಥಳಿಯುಂ ಶಿಥಿಳೀಕೃತಕರತಳೆಯುಮಾಗಿರ್ದ ಪಾರ್ವತಿಯಂ ಕಂಡು ಸಹಚರಿಯರ್ ಬಂದು ಸೇವಂತಿಗೆಯ ಪನಿನೀರಂ ಮಜ್ಜನಕ್ಕೆಱೆದು ಪರಾಗದಂಗರಾಗ ಮನಮರ್ಚಿ ತಾವರೆಯ ನೂಲ ದುಕೂಲಮನುಡಿಸಿ ಕದಂಬಕುಸುಮಮಂ ಸಿರಿಮುಡಿಯೊಳ್ ತುಱುಂಬಿ ಕೇತಕಿಯ ಸಣ್ಣನಪ್ಪ ನುಣ್ಣೆಸಳ ಕರ್ಣಪತ್ರಮನಿಕ್ಕಿ ಮಕರಂದದ ತಿಲಕಮನಿಟ್ಟು, ಪುಷ್ಪಮಂಜರಿಯ ಕರ್ಣಾವತಂಸಮನಳವಡಿಸಿ ಮಲ್ಲಿಗೆಯ ನನೆಯ ಏಕಾವಳಿಯಂ ಮುತ್ತಿನ ಹಾರದೊಳೊಡಗೂಡಿ ಮೊಲ್ಲೆಯ ಮುಗುಳ ಕಂಕಣಮಂ ಕೆಯ್ಗೊಳಿಸಿ ನಳಿನಕರ್ಣಿಕಾ ಮುದ್ರಿಕೆಗಳಂ ಭದ್ರಾಂಗುಲಿಗೆ ಹತ್ತೆ ಸಾರ್ಚಿ ನವಲತೆಯನಂಕುರದಿಂದಲಂಕರಿಸುವಂತೆ ಕಲ್ಪತರುವಂ ಕುಸುಮದಿಂದೆ ಮುಸುಂಕುವಂತೆ ಪಿನಾಕಿಯ ಮನೋರಥಮಂ ಪುಣ್ಯಫಲದಿಂ ಪಸದನಂಗೊಳ್ವಂತೆ ಕುಸುಮಬಾಣಮಂ ಪೊಸಗಂಪಿಂ ಕೂರ್ಪಿಡುವಂತೆ ಸೌಂದರ್ಯಮಂ ಮೋಹ ದಿಂದೊಲ್ವಂತೆ ಸೌಕುಮಾರ್ಯನಿಧಿಯಪ್ಪ ಶರ್ವಾಣಿಗೆ ಶೃಂಗಾರಂಗೆಯ್ದನುರಾಗದಿಂ ಕೆಯ್ಗೊಟ್ಟ ಕೆಳದಿಯರ ಕೈಯ್ಯೊಳ್ ಮೆಯ್ಯಂ ಮಲಂಗಿಸಿ ಮೆಲ್ಲ ಮೆಲ್ಲನಡಿಯಿಡುವಾಗಳ್ ಹೊನ್ನ ಹಾವುಗೆಯ ರನ್ನವೆಳಗಂ ಕೀಳ್ಮಾಡಿ ನಕ್ಷತ್ರಮಾಲೆಯಂತೆ ನುಣ್ಬೆಳಗನೀಂಬ ಪದನಖಪ್ರಭೆ ಪೂವಲಿಗೆದಱೆ ಮಂಜೀರದ ಮಧುರಧ್ವನಿಗೆ ಮಂಡಳಿಸುವ ಮರಾಳಕುಳಮಂ ಜಡಿವಂತೆ ಪಳಂಚುವ ಪಾದಮುದ್ರಿಕೆ ನುಣ್ದನಿಯನುಗುಳೆ ಹರನ ಚಿತ್ತಮಂ ಗಿರಿಜೆ ನಿನ್ನ ಚರಣದೊಳ್ ಕೆಡಪುವೆನೆಂದು ಭಾಷೆಗುಡುವಂತೆ ಸೂಸುವ ಸುನಾದದಿಂ ನೇವುರಮುಲಿಯೆ ಕುಸುಮಕುಳವಿಳಸಿತ ಕಾಂಚೀದಾಮದ ಭಾರಮಂ ತಳೆದ ನಿತಂಬಬಿಂಬಮಂ ಸುತ್ತಿ ಮುತ್ತಿದ ದುಕೂಲದ ಧವಳದ್ಯುತಿ ದೆಸೆ ದೆಸೆಗೆ ಪಸರಿಸೆ ಲಾವಣ್ಯರಸಂ ತೀವಿ ನೆಲೆಗಾಣಲ್ ಬಾರದ ಗಂಭೀರನಾಭೀ ಸರೋವರದೊಳಗೊಗೆದ ಮೃಣಾಳನಾಳದಂತಿರ್ದ ಬಾಸೆಯಂ ಮಱೆಗೊಂಡ ಬಡನಡುವಡಿಗಡಿಗೆ ಬಳುಂಕುತ್ತಿರೆ ವಿಭವಮಾದುಭಯಕಕ್ಷಮನಿಂಬುಗೊಂಡು ತುಂಬಿ ಬಳೆದು ಮುತ್ತಿನ ಮೇಲುದನೊತ್ತರಿಸಿ ಹೊತ್ತೆತ್ತಿ ಕೆಲಕ್ಕೆ ನೂಂಕುವ ಪೆರ್ಮೊಲೆಗಳ್ಗೆ ಹಾರಕಾಂತಿ ಹೊಸಮೇಲುದಂ ಪೂರಯ್ಸೆ ಕಲ್ಪತರುವಿನ ಶಾಖೆಗಳಂತೆ ಕೋಮಳದಿಂ ನೀಳ್ದು ನಳನಳಿಸಿ ಬೆಳೆಬೆಳೆದ ಬಾಹುಲತಾಪ್ರಸೂನಮಂ ಪೋಲ್ವ ಸೆಳ್ಳುಗುರ್ಗಳ್ ಬಳ್ಳಿವೆಳಗಂ ಕಱೆಯೆ ಕಬರೀಭರದ ಗುರುತ್ವಮನಾಂತ ಕಂಬುಗ್ರೀವಮಿಂಬುವಡೆಯೆ ಕಪೋಳಬಿಂಬದೊಳ್ ಪ್ರತಿಬಿಂಬಿಸುವ ಕರ್ಣಾವತಂಸಪ್ರಸವಮಂಜರಿಗಳ್ ಕರ್ಣಪಾಲಿಕೆಯೊಳಾಂದೋಳಮನಾಡೆ ನೆಱೆ ತೀವಿ ತೆರೆಮಸಗುವ ಮುಖರಸದೊಡನೆ ಕಡೆಗಣ್ಣ ಕಾಂತಿ ಕೋಡಿವರಿಯೆ ಕರ್ಪೂರದ ಮೂಕುತಿಗೆ ಕಂಪನಿರ್ಮಡಿಸುವ ನಿಡುಸುಯ್ಯ ಪರಿಮಳಕ್ಕೆ ಪರಿಮರಿಯಾಡುವ ಮಧುಕರನಿಕರಂ ಮಕರಂದ ತಿಲಕದ ತನಿಗಂಪಿಂಗಳಸಿ ಲಲಾಟಪಟ್ಟದೊಳಂಕುರಿಸಿ ನಲಿವ ನೀಳಾಳಕಮೆಂಬ ಮಱಿದುಂಬಿಗಳೊಳ್ ಕಾಳೆಗಂದೆಗೆಯೆ ತಾರಕಿತಮಾದ ನೀರದಮಂ ಮುಸುಂಕಿದ ತಾರೇಶಮರೀಚಿಗಳಂತೆ ಕದಂಬಕುಸುಮಗರ್ಭೀಕೃತ ಕಬರೀಭರಸಂಯುತಶಿರೋಭಾಗಮಂ ಬಾಸಣಿಸಿದ ನನೆಯ ಸೂಸಕದ ಕೊನೆಗಳಲುಗೆ ಶಿವನ ಮನೋರಥಂ ಮೂರ್ತಿಗೊಂಡಂತೆ ಹರನ ಮೆಚ್ಚು ಹರೆಯಂಬಡೆದಂತೆ ಶಂಕರನ ಬಿಂಕಂ ಬಿನ್ನಣಮಾದಂತೆ ಚಂದ್ರಕಳೆ ಕಳೆಕಣ್ದೆಱೆದಂತೆ ನೆಱೆ ಮೆಱೆದು ನಡೆತಂದು ನಗತನೂಜೆ ಚಂದ್ರಧರನ ಮುಂದೆ ನಿಂದು,

ಇರುಳುಂ ಪಗಲುಂ ಕಾಮಂತರದಿಂ ತೆಗೆದೆಚ್ಚ ಕುಸುಮಬಾಣಮಿದೆಂದಾಗಿರಿಶಂಗೆ ತೋರ್ಪ ತೆಱದಿಂನೆರಪಿದಳಭವಾಂಘ್ರಿಗಳ್ಗೆ ಪುಷ್ಪಾಂಜಳಿಯಂ

ವ. ಅಂತುಮಲ್ಲದೆ

ಸಂದಣಿಸುವ ನವನವ ಪುಳಕಂ ದಟ್ಟಯ್ಸುತ್ತೆ ನೆಗೆಯೆ ಶಶಿಮೌಳಿಗೆ ಪೂರ್ಣೇಂದುಮುಖಿ ಪೊಡೆಮಡುತ್ತಾನಂದಾಶ್ರುಗಳಿಂದೆ ಚರಣತಳಮಂ ತೊಳೆದಳ್

ಪದೆಪಿಂ ಪೊಡೆಮಡುವಾಗಳ್ಮೃದುತರಪದದುಪರಿಭಾಗಮಂ ಚೆಲ್ವಿಂ ಪತ್ತಿದ ಮಕರಂದದ ತಿಳಕಂಸದಮಳ ಚಂದನ ವಿಳಾಸಮೆನಿಸಿತ್ತಾಗಳ್

ಸದ್ಗಂಭೀರಾವೃತ ವಿಳಸದ್ಗಮಕದೆ ನಿಂದು ಶಿವನ ಮೆಲ್ಲಡಿಗಳಿಗುದ್ಯದ್ಗುಣಭೂಷಣೆ ಸುರಿದಳ್ಗದ್ಗದಿಸುತೆ ಪುಳಕಿಸುತ್ತೆ ಸರಸಿಜದಲರಂ

ಊರುದ್ವಯದೊಳ್ ಕರದೊಳ್ಚಾರುಭುಜಾಗ್ರಂಗಳೊಳ್ ಸುಬಾಹುಗಳೊಳ್ ಪುಣ್ಯೋರ ಸ್ಥಳದೊಳ್ ಗಿರಿಸುತೆಹಾರಯ್ಸುತೆ ಕುಸುಮಮಾಲೆಯಂ ಪಸರಿಸಿದಳ್

ವ. ಮತ್ತಮದಲ್ಲದೆಯುಂ,

ತವ ತವಗೆ ಮುಂಚುವಿಂದ್ರಿಯನಿವಹಮನೋವುತ್ತೆ ಗಿರಿಜೆ ಹರಕಂಧರದೊಳ್ನವಕುಸುಮಮಾಲೆಯಂ ಸಾರ್ಚುವ ನೆವದಿಂ ಸೋಂಕಿ ಸೋಂಕಿ ಪುಳಕಿಸುತಿರ್ದಳ್

ವ. ಅಂತಿರ್ದು,

ಭರದಿಂದಂ ನವಕುಸುಮಾಭರಣಂಗಳನಭವನಂಗದೊಳ್ ಸಿಂಗರಿಸುತ್ತರಳುತ್ತುರ್ಬುತೆ ಕೊರ್ಬುತೆಗಿರಿಸುತೆ ನಱುಸುಯ್ಯ ಧೂಪಮಂ ಪದೆದಿತ್ತಳ್

ಅಲರ್ದೊಂಗಲ ಪೊಸದುಡಿಗೆಯನಲಂಪಿನಿಂ ಶಂಕರಂಗೆ ಕೆಯ್ಗೊಳಿಸುತ್ತಗ್ಗಲಿಸುತ್ತೆತ್ತಿದಳಂಬಿಕೆನಲವಿಂ ನಗೆಮೊಗದ ಕಾಂತಿಯೆಸೆವಾರತಿಯಂ

ಉತ್ತಮ ಗುಣಗಣಭೂಷಣೆಚಿತ್ತವಿಕಾಸಮನೆ ಪಡೆದು ಸಾತ್ತ್ವಿಕ ಭಾವೋನ್ಮತ್ತೆ ನಗಪುತ್ರಿ ಮುದದಿಂದಿತ್ತಳ್ ಶರ್ವಂಗೆ ಭಕ್ತಿಯಾರೋಗಣೆಯಂ

ವ. ಇಂತು ಪಾರ್ವತಿ ಪಲವುಂ ಭೋಗಂಗಳಂ ರಾಗದಿಂ ರಾಜಮೌಳಿಗೊಲ್ದು ಪೂಜೆಯ ನೆವದಿಂ ನಿವೇದಿಸಿ ಸಂಪದಮನೋಲಗಿಪ ಸಿಂಗರದಂತೆ ಧರ್ಮಮಂ ಬಳೆಯಿಸುವ ಸಂಪದದಂತೆ ಪುಣ್ಯಮಂ ಸೇವಿಪ ಧರ್ಮದಂತೆ ಭಕ್ತಿಯಂ ಬಯಸುವ ಪುಣ್ಯದಂತೆ ಶಿವಜ್ಞಾನಮನೆಳಸುವ ಭಕ್ತಿಯಂತೆ ಮುಕ್ತಿಯಂ ನಿಶ್ಚಯಿಪ ಶಿವಜ್ಞಾನದಂತೆ ಶಿವಸಂಗಮಂ ಬಯಸಿ ಮನ್ಮಥ ಮನೋರಥ ದುರ್ಲಭವಲ್ಲಭನಂ ನೋಡುವಾಗಳ್,

ಪೊಸಜಡೆಯೊಳ್ ತೊಡಂಕಿ ನೊಸಲೊಳ್ ನಡೆಪಾಡಿ ಕಪೋಲಭಾಗದೊಳ್ಪಸರಿಸಿ ಲೋಚನಂಗಳೊಳಮರ್ಚಿ ತದಾಸ್ಯದೊಳೊಂದಿ ಕಂಠದೊಳ್ಮಿಸುಗಿ ಭುಜಾಗ್ರದೊಳ್ ತೊಳಗಿ ಪಕ್ಷದೊಳಾಳ್ದು ಕರಂಗಳೊಳ್ ವಿರಾಜಿಸಿ ಪದದಲ್ಲಿ ಬಿಳ್ದುವು ಭವಾನಿಯ ಮಾನಿಯ ದೈನ್ಯದೃಷ್ಟಿಗಳ್

ವ. ಇಂತು ಶರ್ವನ ಸರ್ವಾಂಗದೊಳ್ ನೋಟಂ ಮುಸುಂಕಿ ನೋಡಿ,

ಬೆಮರ್ವಳ್ ಬೆರ್ಚುವಳುರ್ಬುವಳಮರ್ವಳ್ ಪೆಱಸಾರ್ವಳಂಜಿ ನಿಲ್ವಳ್ ಸೋಂಕಲ್ನಿಮಿರ್ವಳ್ ನೆನೆವಳ್ ಮುನಿವಳ್ಸಮಸಲ್ವಳ್ ಗಿರಿಜೆ ಸೆಡೆದು ಸುಯ್ವಳ್ ಕಾಯ್ವಳ್

ಚಾರುತರ ಕಾಂತಿಮಯಸುಕುಮಾರಾವಯವಂಗಳಂ ನಿರೀಕ್ಷಿಸಿ ನಲಿವಳ್ತಾರಾಚಳನಾಥನ ಘನವೈರಾಗ್ಯಕ್ಕಂಜಿ ನಡುಗಿ ಸಿಡಿಮಿಡಿಗೊಳ್ವಳ್

ವ. ಅಂತುಮಲ್ಲದೆ

ಶಿವನಂ ನೋಡುತ್ತೆ ಮೇನಾಸುತೆ ಮದನಸುಖಾಸಕ್ತಿಯಿಂ ಸುತ್ತುವಳ್ ಸೋಂಕುವಳಾನಂದಾಶ್ರುವಂ ಸೂಸುವಳನುವಿಸುವಳ್ ತತ್ತಪಕ್ಕಂಜಿ ಹಿಮ್ಮೆಟ್ಟುವಳಂತಂತಳ್ಕುವಳ್ ಬಳ್ಕುವಳದಟಳಿವಳ್ ಕೋಡುವಳ್ ಬಾಡುವಳ್ ಕುಂದುವಳಾರ್ತಂಗೆಟ್ಟು ನಿಲ್ವಳ್ ನೆನೆದುರವಣಿಪಳ್ ಮುಂದಳಲ್ವಳ್ ಬಳಲ್ವಳ್

ವ. ಮತ್ತಮಾಗಳ್

ನಗುವಳ್ ನಗೆಯೊಳ್ ಕೌತುಕಮೊಗೆಯೆ ನಿರೀಕ್ಷಿಸುವಳೀಕ್ಷಣದೊಳಗೆ ದೈನ್ಯಂಮಿಗೆ ಭಾವಿಸುವಳ್ ಭಾವದೊಳಗೆ ದೇವನ ಚೆಲ್ವನಬಲೆ ಸಲೆ ನಿಲೆ ನೆನೆವಳ್

ವ. ಇಂತು ನೋಳ್ಪರ ಕಣ್ಗೆ ಶೀತಳಮಯ ಸುಧಾರೋಚಿಗಳಂ ಬೀಱುವ ಚಂದ್ರಮನಂತೆ ಮುಟ್ಟುವರ ಮೆಯ್ಗೆ ತೀವ್ರಪ್ರತಾಪಮಂ ಕುಡುವ ಸೂರ್ಯನಂತೆ ಪೊಗಳ್ವರ ನಾಲಿಗೆಗಮೃತದಂತೆ ಕೇಳ್ವರ ಕಿವಿಗೆ ಮಧುರವಾಣಿಯಂತೆ ನೆನೆವರ ಮನಕ್ಕೆ ನಿರುಪಾಧಿಕ ಜ್ಯೋತಿಯಂತೊಪ್ಪುತಿರ್ದ ರುದ್ರನ ಮನೋಹರಮೂರ್ತಿಯಂ ನೋಡಿ ನೋಡಿ ತಣಿಯದೆ ಸೋಂಕಿ ಸೋಂಕಿ ಸವೆಯದೆ ಪೊಗಳ್ದು ಪೊಗಳ್ದು ತೀಱದೆ ನೆನೆದು ನೆನೆದು ನೆಱೆಯದೆ ನಡೆತಂದು ಪಾರ್ವತೀದೇವಿ ಪೊಚ್ಚ ಪೊಸಪೂಗಳನಚ್ಚರಿ ಮಿಗೆ ತಂದು ತಂದಂದಂದಿಂಗೆ ಚಂದ್ರಧರನಂ ಕಳಾನಿಧಿಯಂ ವಿಳಾಸದಿಂದಾರ್ತದಿಂ ಹತ್ತೆ ಸಾರ್ದು ಮತ್ತೆ ಮತ್ತೆ ಮಾಣದೆ,

ಹರನಂ ಶಿವನಂ ಮೃಗಧರಧರನಂ ಸುಸ್ನೇಹಮಡರೆ ನವನವ ಕುಸುಮೋತ್ಕರದಿಂದೆ ನಚ್ಚಿ ಮಚ್ಚಿಯೆಗಿರಿಜಾವಧುವರ್ಚಿಸುತ್ತುಮಿರ್ಪಿನಮತ್ತಲ್

ಪರಮಸ್ವಾಮಿ ಜಟಾಧರಂ ಶಶಿಧರಂ ಗಂಗಾಧರಂ ಕಾಲಸಂಹರನಜ್ಞಾನಹರಂ ಪುರತ್ರಯಹರಂ ಸೌಖ್ಯಾಕರಂ ಶಂಭು ಶಂಕರನಾನಂದಕರಂ ಸಮಂತೆನಗೆ ಭಕ್ತಿಜ್ಞಾನ ವೈರಾಗ್ಯಮಂಕರುಣಂಗೆಯ್ಗೊಲವಿಂದೆ ಹಂಪೆಯ ವಿರೂಪಾಕ್ಷಂ ಶಿವಾವಲ್ಲಭಂ

ಇದು ಸಮಸ್ತ ಸುರಾಸುರಮಕುಟ ಖಚಿತ ದಿನಕರಕರಾಧಿಕ್ಯ ಮಾಣಿಕ್ಯಪ್ರಭಾಪುಂಜರಂಜಿತಚರಣ ನೆನಿಪ ಪಂಪಾವಿರೂಪಾಕ್ಷ ಶ್ರೀ ಪಾದಕಮಲ ಮಕರಂದ ಮಧುಕರಾಯಮಾಣ ಸತ್ಕವೀಶ್ವರ ಹಂಪೆಯ ಹರಿಹರದೇವ ವಿರಚಿತಮಪ್ಪ ಶ್ರೀ ಗಿರಿಜಾಕಲ್ಯಾಣ ಮಹಾಪ್ರಬಂಧದೊಳ್ ವಿರೂಪಾಕ್ಷದರ್ಶನ ಪುಷ್ಪಾಪಚಯ ಪೂಜಾವರ್ಣನಂ ಪಂಚಮಾಶ್ವಾಸಂ