IV
Girijākalyāṇa
ಪಾರ್ವತೀಯೌವನ ರಾತ್ರಿವಿಹಾರವರ್ಣನಂ
ಶ್ರೀಸಕಳಸುರ ಮುನೀಶ್ವರವಾಸವ ಹರಿಕಮಲ ಪುತ್ರಪೂಜಿತಚರಣಂಭಾಸುರತೇಜಂ ಭಕ್ತವಿಳಾಸಮನೆಮಗೀಗೆ ಹಂಪೆಯ ವಿರೂಪಾಕ್ಷಂ
ಶಿವ ಶಿವ ನಳನಳಿಸುವ ಶೈಶವದೊಳ್ ಬಳೆಯುತ್ತುಮಿರ್ಪ ಗಿರಿಜೆಗೆ ರೂಪೋತ್ಸವದೊಡನೆ ಮೆಱೆವ ದಶವರ್ಷವದಾಯ್ತುಲರ್ಗಣೆಗೆ ಕೂರ್ಪು ಕೂಡುವ ತೆಱದಿಂ
ಇಂತಾಗೆ ಮೇನೆಯುಂ ತತ್ಕಾಂತನುಮತಿಹರ್ಷಪುಳಕಯುತರಾಗುತ್ತುಂಮುಂತಿರ್ದ ತನುಜೆಯಂ ಮನದಿಂ ತೂಪಿಱಿಯುತ್ತೆ ತಮ್ಮೊಳೊಲ್ದಿಂತೆಂದರ್
ಅನವದ್ಯಂ ಚರಿತಂ ಮುನ್ನಿನ ಸರಿ ತಾನಲ್ಲ ಬಾಲ್ಯಮೀಪೋದುದೆ ಯೌವನಮೀ ಸಾರ್ದುದೆ ಬಣ್ಣಿಸುವನ ಜಾಣ್ಮೆಗತರ್ಕ್ಯಮತುಳಮನುಪಮಮಧಿಕಂ
ನಗೆ ನಸುಲಜ್ಜೆಯೊಳ್ ತೊಡರಲಿರ್ದುದೆ ಬಲ್ನಡೆ ಮಾಂದ್ಯ ಭಾವದೊಳ್ಪುಗಲಿದೆ ಬಾಸೆ ಸಾಲಱಿತಲರ್ದುದೆ ಸೂಸುವ ನೋಟವಾಸೆಯೊಳ್ಮಿಗಲಿದೆ ತತ್ಕುಚಂ ನಿಜಸೀಮೆಗೆ ರೇಖೆಯನೊತ್ತಿ ಲಜ್ಜಿಸಲ್ಬಗೆದಿವೆ ಯೌವನೋದಯಮೊ ಬಾಲ್ಯವಿಮೋಚನಮೋ ಭವಾನಿಯಾ
ಅಳಕಂ ತೆಱಪುಗೊಡಲ್ಕವೆತಿಳಕಕ್ಕೆ ತದಾಸ್ಯಬಿಂಬಮಾದರ್ಶದೊಳಂಪೊಳೆಯಲಿದೆ ನಾಭಿಮಂಡಲಮೊಳೆಪುಗಲಿದೆ ನೋಡು ಮೇನೆಯಂಬಿಕೆಯಿರವಂ
ದಂತಂ ಮುಸುಂಕುಗಳೆಯಲ್ಕಾಂತಿವೆ ನಡು ತನುವನೆಳಸದಿದೆ ನುಡಿ ಮೌನಪ್ರಾಂತಮನೊತ್ತುಗೊಳಲ್ಕಿದೆಕಾಂತಿ ಶರೀರಮನಮರ್ಚಲಿದೆ ಪಾರ್ವತಿಯಾ
ವ. ಎಂದಿಂತು ಮಗಳ ವಯಸ್ಸಂಧಿಯಂ ವಯಃಪರಿಣತರಪ್ಪ ಮಾತಾ ಪಿತೃಗಳ್ ಬಣ್ಣಿಸುತಿರ್ಪಿನಮನುಕ್ರಮದಿಂ ಪಲಕೆಲವು ದಿಕ್ಕೆ ಬನಮಂ ಸಹಕಾರಂ ಸಹಕಾರಮಂ ವಸಂತಂ ವಸಂತನಂ ಕಾಮಂ ಕಾಮನಂ ಇಕ್ಷುಚಾಪಂ ಇಕ್ಷುಚಾಪಮಂ ನನೆಗಣೆ ಸಾರ್ವಂತೆ ಪಾರ್ವತಿಯಂ ನವಯೌವನಂ ಸಾರ್ವಲ್ಲಿ,
ನವಕುಚಕಳಶಂಗಳಿನೊಪ್ಪುವ ಮುಖದರ್ಪಣದಿನಳಕತೋರಣದಿಂ ಪೊಣ್ಮುವ ಮುಡಿ ಗುಡಿಯಿಂದ ಮಿಕ್ಕವಯವದಿಂಗದಗಜೆ ಯೌವನಮನಿದಿರ್ಗೊಂಡಳ್
ಎಂಬಂತೆ ತೀವಿ ಪರ್ವಿದಚುಂಬಿತಮುದಿತೋದಿತ ಪ್ರಕಾಶಿತ ಗಿರಿಶಾಲಂಬಿತ ಗಿರಿಜಾಯೌವನಮಂ ಬಣ್ಣಿಪೊಡುರಗ ಖಚರ ಭೂಚರರಳವೇ
ಶರ್ವಾಣಿಯ ಸೌಂದರ್ಯಮನೊರ್ವಂ ಬಣ್ಣಿಸುವೆನೆಂಬವಂ ಗಾಂಪಂ ಪನ್ನಿರ್ವರ್ ಭಾರತಿಯರ್ ಸಾಸಿರ್ವರ್ ಫಣಿರಾಜರಾದೊಡಂ ತೀರ್ದಪುದೇ
ಮದಮಂ ವಿಭ್ರಮಮಂ ವಿಲಾಸದೊದವಂ ಸೌಂದರ್ಯಮಂ ಸೌಖ್ಯಮಂಸದಲಂಕಾರತೆಯಂ ಸಲಕ್ಷಣಮನಾಂತಿರ್ದಂಬಿಕಾ ಯೌವನಪದೆಪಿಂ ಪೇಳ್ವೊಡದತ್ಯನೂನಪದಮತ್ಯಾಶ್ಚರ್ಯಮತ್ಯುಜ್ವಲಪ್ರದಮತ್ಯೂರ್ಜಿತಮತ್ಯಸಾಧ್ಯಗುಣಮತ್ಯಾನಂದಮತ್ಯುನ್ನತಂ
ಅತಿಮಧುರಮತಿಮನೋಹರಮತಿಮಂಗಳ ಮತಿವಿಚಿತ್ರಮತಿಬಂಧುರಮಂತತಿಸಂಭ್ರಮಮತಿವಿಭ್ರಮಮತಿಯೌವನಮತಿವಿಲಾಸಮತಿ ಪಾರ್ವತಿಯಾ
ವ. ಮತ್ತಮಾ ಪಾರ್ವತಿಯ ನವಯೌವನಂ ವಸಂತನಂತೆ ರಾಗೋದಯಂ ಮಕರಧ್ವಜನ ಮತ್ತಗಜದಂತೆ ಮಂದಯಾನಂ ಕಂದರ್ಪನ ಶಿಳೀಮುಖಕಳಾಪದಂತೆ ಜಗನ್ಮೋಹನಂ ಝಷಕೇತನ ನಿಕೇತನ ತೋರಣ ರತ್ನಸ್ತಂಭಂಗಳಂತೆ ಕಾಂತಿಮಯಂ ಶಶಿಕಾಂತ ಕೃತಕಾಚಳದಂತೆ ನಿರ್ಮಳೀಕೃತಂ ಕ್ಷೀರಬ್ಧಿಯ ತರಂಗದಂತುತ್ತರೋತ್ತರಂ ಕಮಲಾಕರದಂತೆ ಪ್ರಸನ್ನ ಗಂಭೀರಂ ಬಿಸಜನಾಳದಂತೆ ಭುವನಾಲಂಕಾರಂ ವನಲತೆಯಂತೆ ಸುಕೋಮಲಂ ಸುವರ್ಣಕಳಶದಂತೆ ರಮಣೀಯಂ ಸುರದ್ರುಮಶಾಖೆಯಂತೆ ಸರ್ವವಾಂಛಿತ ಫಲಪ್ರದಂ ಕಂಬುವಿನಂತೆ ತ್ರಿರೇಖಾನ್ವಿತಂ ಪೂರ್ಣಚಂದ್ರನಂತೆ ಕಲಾಭರಿತಂ ವ್ಯೋಮದಂತೆ ಘನಚಿತ್ರಮೆನಿಸಿರ್ದು ದಂತುಮಲ್ಲದೆಯುಂ,
ತೀವಿದ ಜವ್ವನಮಂ ಪರಿಭಾವಿಸೆ ಮಾಧುರ್ಯ ಚರಿತಮೆಡೆಗೊಂಡುದು ಸದ್ಭಾವಂ ಚಂದ್ರಾಭರಣನಜೀವಂ ಬಣ್ಣಿಪ್ಪನಾವನೇ ದೇವಂ
ವ. ಅದೆಂತೆಂದೊಡೆ,
ಮನದಾಸೆ ವದನದೊಳ್ ಲೋಚನದೊಳ್ ನುಡಿನಗೆ ಕಪೋಳದೊಳ್ ಕೋಪಂ ಪುರ್ಬಿನೊಳಱಿವು ಬುದ್ಧಿಯೊಳ್ ಭಾವನೆ ಚಿತ್ರದೊಳಮರ್ದುವಂಬಿಕೆಗೆ ಯೌವನದೊಳ್
ನುಡಿಯೊಳ್ ಜಾಣ್ ನೋಟದೊಳ್ ವಕ್ರತೆ ಪೊಸನಡೆಯೊಳ್ ವಿಭ್ರಮಂ ಸಾರ್ದುದೆಯ್ದಿತ್ತಡಿಯಿಟ್ಟಿತ್ತಾಹ ಕರ್ಣಾಮೃತಮತಿರುಚಿರಂ ಕಣ್ಣ ಪುಣ್ಯಂ ದಿಟಕ್ಕಿರ್ಮಡಿ ವಾಣೀದೇವಿಗಂ ನೂರ್ಮಡಿ ಕುಸುಮಶರಕ್ಕಂಚೆವಿಂಡಿಂಗೆ ಸಾಸಿರ್ಮಡಿ ಸಾಹಿತ್ಯಂ ವಿಳಾಸಂ ಗಮಕಮಮರ್ದುದಾರ್ಯಾಂಗದೊಳ್ ಕಣ್ಗೆ ಚಿತ್ರಂ
ವ. ಇಂತೊಪ್ಪುವ ನವಯೌವನದೊಳ್ ಸಕಲಲೀಲಾವಿಲಾಸೆಯಪ್ಪ ಪಾರ್ವತೀದೇವಿ ನಲವಿಂ ಜಲಕ್ರೀಡೆಗೆಂದು ಷೋಡಶಸಹಸ್ರವಿಳಾಸಿನಿಯರ್ವೆರಸು ಕೇಳೀವನಮಂ ಪುಗುತರ್ಪಾಗಳ್
ವಿದಳಿತ ಪದ್ಮ ಸೌರಭಕೆ ಸಂದಣಿಗೊಳ್ವ ಮಧುವ್ರತ ಪ್ರತಾನದಿನೆಸೆವುತ್ಪಳ ಪ್ರಕರದೊಳ್ ನೆಱೆಸಿಲ್ಕಿ ಜಿನುಂಗುತಿರ್ಪ ಷಟ್ಪದ ಶಿಶುವೃಂದದಿಂ ಕಮಲ ತಂಡುಲಮಂ ಕೊಳುತಿರ್ಪ ಹಂಸೆಯಿಂಮದನ ಸುಖಾಬ್ಧಿಯೊಳ್ ನೆರೆವ ಚಕ್ರದಿನೊಪ್ಪುವುದೊಂದು ಪೂಗೊಳಂ
ಕೊಳನಂ ಕಂಡು ವಿಳಾಸಿನೀ ನಿಕರಮುದ್ಯಚ್ಚಂದನಂ ಕುಂಕುಮಂವಿಳಸನ್ನೂತನ ಪುಷ್ಟರಾಜಿ ಮೃಗನಾಭಿವ್ರಾತ ತಂದು ನಿರ್ಮಳಕಾಸಾರದೊಳೊಂದುಗೂಡಿ ಶಿವೆ ಬಾ ಸರ್ವಜ್ಞೆ ಬಾ ದೇವಿ ಬಾಕಳನಾದಪ್ರಿಯೆ ಬಾರೆನುತ್ತೆ ಕರೆದರ್ ಶರ್ವಾಣಿಯಂ ಜಾಣೆಯರ್
ವ. ಅಂತು ಕರೆಯೆ,
ವನಲಕ್ಷ್ಮಿ ಕೆಯ್ಗುಡುತ್ತಿರೆಯನಸೂಯಾದೇವಿಯಾದಿಯಾದಂಗನೆಯರ್ಜನನಿ ಜಗಜ್ಜೀವನೆ ಮೆಲ್ಲನೆ ಪಾಯವಧಾರು ದೇವಿಯೆನೆ ನಡೆತಂದಳ್
ನೇವುರದ ಮುದ್ರಿಕೆಯ ಹಾರಾವಳಿಗಳ ಮಧುರನಾದಮಬ್ಜಾಕರಮಂತೀವುತ್ತಿರೆ ಸಕಲಕ್ರೀಡಾವಾರಿಧಿ ಎಳಸಿ ಬಳಸಿ ಕೊಳನಂ ಪೊಕ್ಕಳ್
ತೊಳಗುವ ವಿಮಳಾಕಾಶದೊಳೆಳವೆಱೆ ಪುಗುವಂತೆ ಮುಂತೆ ನಿರ್ಮಳ ಶಶಿಮಂಡಳದಧಿದೇವತೆ ಬೆಳ್ದಿಂಗಳೊಳಗೆ ಪುಗುವಂತೆ ಪೊಕ್ಕಳಂಬಿಕೆ ಕೊಳನೊಳ್
ಗಿರಿಜೆ ಶಶಿವದನೆ ಕೊಳನಂಭರದಿಂ ಪುಗೆ ನೆಯ್ದಿಲೆಯ್ದಿದುವು ವಿಕಸನಮಂವಿರಹಮನಾಂತುವು ಕೋಕಂಸರಸಿರುಹಂ ಮುಗಿದುವರರೆ ಪಗಲೊಳ್ ಚಿತ್ರಂ
ವ. ಇಂತು ಜಲಕ್ರೀಡೆಗೆಂದು ಕೊಳನಂ ಪೊಕ್ಕಲ್ಲಿ ನನೆದೊಡಿಗೆಯ ನಾಯಕಿ ಯರುಂ ತಿಲಕದ ಲಲನೆಯರುಂ, ಪೂದುಱುಂಬಿನ ಪುಣ್ಯವತಿಯರಂದುಗೆಯ ಭಂಗಿಯರುಂ ನಗೆಗಣ್ಗಳ ನೀಱೆಯರುಂ, ಗಿರಿಜೆಯ ಚರಣಕಮಲಕ್ಕೆ ಭರದಿಂದೆಱ ಗುತ್ತುಂ, ನತಮುಖಿಯರ್ ಸನ್ನದ್ಧೆಯರಾಗಿ
ಬಗೆ ಮಿಗೆ ಸತಿಯರ್ ಜಲಕೇಳಿಗೆ ಚಿತ್ತಂಗೊಟ್ಟು ದೇವಿಯವಧಾರೆನುತುಂಪುಗುತುಂ ಮಿಗುತುಂ ನಗುತುಂಸೊಗಯಿಸಿದರ್ ಸೆಣಸಿದರ್ ಸಮಂತಿದಿರಾದರ್
ಅಳಿಗಳಳಕಂಗಳೊಡನುತ್ಪಳಮಕ್ಷಿಗಳೊಡನೆ ಕಮಳಮಾಸ್ಯದೊಡನೆ ನಿರ್ಮಳ ಚಕ್ರಂ ಕುಚದೊಡನಗ್ಗಳಿಸಿದುವಿದಿರಾದುವಮರ್ದುವುರ್ಬಿದುವಾಗಳ್
ಮೃದುಕರತಳದಿಂದಬಲೆಯರುದಕಂಗಳನೆತ್ತಿ ಸುತ್ತಿ ಸೂಸುವ ಪದದೊಳ್ಮುದದಿಂ ಕುಡುವಂತಿರ್ದುದುಮೊದಲೊಳ್ ಮದನಂಗೆ ಮೆಱೆವ ರತ್ನಾಂಜಲಿಯಂ
ಓರೋರ್ವರೊಳೋರೊರ್ವರ್ವಾರಿಗಳಂ ಚೆಲ್ಲುವಲ್ಲಿ ಜಲದೇವತೆಯರ್ಕಾರೊಳಗಾಡುವೊಲಿರ್ದುದುಹಾರಯ್ಸುತೆ ನಲಿಯುತಾಲಿವರಲೋಕುಳಿಯಂ
ವ. ಮತ್ತಮಲ್ಲದೆ
ಅಳಕಾಳಿಗಳಿಂ ನಯನೋತ್ಪಳದಿಂ ಮುಖಕಮಲದಿಂದ ಕುಚಚಕ್ರದಿ ನುಜ್ಜ್ವಳಕಾಂತಿಸಲಿಲದಿಂದಾಕೊಳನೊಳ್ ಕೊಳನಾಡುವಂತಿರೊಪ್ಪಿದರಾಗಳ್
ವ. ಅಲ್ಲದೆ ತಮ್ಮೊಳೆಱೆವಚ್ಚಿಕೊಂಡು ಮತ್ಸರಂಗೆಯ್ದು
ಕಮಳದಳಂಗಳೊಳಗೆ ಕುಂಕುಮಜಳಮಂ ತೀವಿ ಚಕ್ರಕುಚೆಯರ್ ಚಲದಿಂವಿಮಳೇಂದು ಮುಖಿಯರಂ ವಿಭ್ರಮದಿಂ ನಡೆದಿಟ್ಟು ಕಱೆದರೆಳವಿಸಿಲೊಳ್ಪಂ
ಇಡೆ ಶಶಿಮುಖಿಯರ್ ಕಂಡಾಗಡೆ ಧವಳೋತ್ಪಳದ ನಡುವೆ ಚಂದನರಸಮಂಬಿಡೆ ತೀವಿಕೊಂಡು ನಡೆನಡೆದೊಡನೊಡನಿಟ್ಟಿಟ್ಟು ಜೊನ್ನಮಂ ಪಸರಿಸಿದರ್
ವ. ಇಂತಾಡುವಲ್ಲಿ
ಅಂಬುವಿನೊಳಗೆ ನಿಜಪ್ರತಿಬಿಂಬವನೀಕ್ಷಿಸುತೆ ತರುಣಿ ಪೋಗದಿರೆನುತುಂಬೆಂಬತ್ತಿ ನಡೆದು ಕಾಣದೆಡಂ ಬಲನಂ ನೋಡಿ ಮುಗ್ಧೆ ನಗಿಸಿದಳಾಗಳ್
ಮಡದಿಯರಾಡುವ ಪದದೊಳ್ಸಡಿಲ್ದ ಘನಕುಂತಳಾಳಿ ಪೋಲ್ದುದು ಚಲದಿಂದುಡುಪತಿ ಬಿಂಬಂಗಳ ಬೆಂಬಿಡದೆಯ್ದುವ ರಾಹುಮಂಡಲಂಗಳ ತೆಱನಂ
ಉರವಣಿಸಿ ಚೆಲ್ಲೆ ಸತಿಯರ್ಕರಂಗಳಿಂ ವದನವೃಂದಮಂ ಮುಚ್ಚಿರೆ ತಳ್ತರವಿಂದಂ ಶಶಿಬಿಂಬೋತ್ಕರಮಂ ಮುತ್ತಿದುದೆನಿಪ್ಪ ತೆಱನಾಯ್ತಾಗಳ್
ನೋಡುವ ಪಾರ್ವತಿ ಮುದಮಂಕೂಡುತ್ತಿರೆ ತುಂಬಿವಿಂಡು ಪಾಡುತ್ತಿರೆ ತುಳ್ಕಾಡಿದರಿಟ್ಟಾಡಿದರೀಸಾಡಿದರಮರ್ದಾಡಿದರ್ ಸರೋಜಾನನೆಯರ್
ವ. ಇಂತಾಡುವ ಸತಿಯರ್ಗೆ ಸಂತಸದಿಂ ಮುಯ್ಯಾಂತು
ಈ ತೆರದಿಂ ಜಲಕೇಳಿಯೊಳೋತು ಮನಂಗೂಡಿ ನೋಡಿಯಾಡುತ್ತೆ ಜಗನ್ಮಾತೆ ಗಿರಿಜಾತೆ ಸುಖಸಂಭೂತೆ ನುತಖ್ಯಾತೆ ಸರಸಿಯಂ ಪೊಱಮಟ್ಟಳ್
ವ. ಅಂತು ಪೊಱಮಟ್ಟು ನವ್ಯದುಕೂಲಮನುಟ್ಟು ದಿವ್ಯಾಭರಣಂ ತೊಟ್ಟು ಸಂತಸಮಂ ಮುಂತಿಟ್ಟು ಸಕಳಕಳೆಗಳನೊಚ್ಚತಂಗೊಂಡು ನಿಶ್ಚಲಿತ ಚಿತ್ತೆಯುಚ್ಚಾಸನಮನೇಱಿ ವಿಲಾಸಿನಿಯರ್ ಕೆಲಬಲದೊಳ್ ನೆಲನುಗ್ಗಡಿಸೆ ಪುರಾಭಿಮುಖಿಯಾಗಿ ಬರುತ್ತುಮಿರೆ,
ಇತ್ತಲ್ ತಮ್ಮೊಳ್ ನುಡಿದರ್ವೃತ್ತಸ್ತನೆ ಗಿರಿಜೆಗುತ್ತರೋತ್ತರ ರೂಪಂಬೆತ್ತ ಘನಯೌವನ ಸಾರುತ್ತಿರ್ದಪುದೀ ವರಾಂಗನೆಗೆ ವರನಾರೋ
ಈ ರೂಪಿಂಗೀ ಯೌವನಕೀ ರಮಣೀಯಾಂಗವತಿಗೆ ಮಿಗೆ ಸೌಂದರ್ಯಕ್ಕೀ ರಾಜಿಪ ಗಿರಿಜೆಯ ವಿಸ್ತಾರಕ್ಕಂ ವರನನಿಂದುಧರನೇ ಬಲ್ಲಂ
ವ. ಎಂದಿಂತು ನುಡಿಯುತ್ತೆ ಶರ್ವಾಣಿಯ ರೂಪಾತಿಶಯಕ್ಕೆ ಬೆಱಗಾಗಿ ಮೇನೆಯ ತಪಕ್ಕೆ ದಾಕ್ಷಾಯಿಣಿ ಕರುಣಿಸಿ ಬಂದಳೆಂಬುದನತ್ಯಾಶ್ಚರ್ಯದಿಂ ಮಱೆದು
ತಿಳಿಯದೆ ಮೇನಾಸತಿಯುಮಚಳಪತಿಯುಂ ಚಿಂತಿಸುತ್ತುಮಿರೆಯಿರೆ ತೋಱಿತ್ತಳವಲ್ಲದೆ ನಳನಳಿಸುತೆತಳ ತಳಿಸುತೆ ಪೊಳೆದು ಬಳೆವ ಬೆಳಗಾಗಸದೊಳ್
ಅಮೃತಮಯೂಖಮಂಡಲದಿನೇಳ್ತರುತಿರ್ಪ ಶಶಾಂಕಮೂರ್ತಿಯೋಅಮರನದೀ ಪ್ರವಾಹದೊಳಗಿಂದೊಗೆತರ್ಪ ವಿಶಾಲ ಪುಣ್ಯಮೋಪ್ರಮುದಿತ ಶೈವಕೀರ್ತಿ ಬರುತಿರ್ದಪುದೋ ಎನೆ ಬಂದನಳ್ಕಱಿಂವಿಮಳ ವಿಶಾರದಂ ಘನಶರದ್ಘನ ಸನ್ನಿಭನೊಲ್ದು ನಾರದಂ
ಇಳಿವ ಜಡೆ ಬಳೆವ ವೀಣಾಕಳಸ್ವನಂ ಭಸಿತಗಾತ್ರಮುಜ್ವಳ ತೇಜಂವಿಳಸನ್ಮಂಜುಳ ಮುಖಮಂಡಳ ಚಂದ್ರಿಕೆಯೊಪ್ಪೆ ನಾರದಂ ನಡೆತಂದಂ
ಬರೆ ಗಿರಿಪತಿಯುಂ ಸತಿಯುಂವರಮುನಿಗತಿ ವಿನತರಾಗಿ ಭದ್ರಾಸನದೊಳ್ಭರದಿಂ ಕುಳ್ಳಿರಿಸುತ್ತುಂಚರಣಂದೊಳೆಯುತ್ತೆ ತೀರ್ಥಜಳಮಂ ತಳೆದರ್
ವ. ಅಂತು ತಳೆದು
ಗುರುಮೂರ್ತಿ ಶೈವನಿಧಿ ಶಂಕರಮೂರ್ತಿ ಕೃಪಾಪರೈಕವರ ಶಾಂತಿ ಸುಧಾಕರಮೂರ್ತಿ ದೇವ ನಿಮ್ಮಯೆಬರವಿಂದೆ ಕೃತಾರ್ಥರಾದೆವೆಂದಿಂತೆಂದರ್
ಬರವೆಂತಾದುದು ನಾಕಲೋಕಸುಖಮಂ ಬಿಟ್ಟೀ ಧರಾಮಂಡಲಕ್ಕಿರದಿಂದೆಮ್ಮಯೆ ಪುಣ್ಯವೆಮ್ಮ ಜನನಂ ಸಾಫಲ್ಯವೆಮ್ಮಿಂದೆ ವಿಸ್ತರ ಸೌಖ್ಯಾಕರರಾರೆನುತ್ತೆ ನಲವಿಂ ಬಿನ್ನಯ್ಸುತಿರ್ಪನ್ನೆಗಂಬರುತಿರ್ದಳ್ ಗಿರಿಜಾತೆ ಷೋಡಶ ಸಹಸ್ರ ಸ್ತ್ರೀಪರಿಸ್ಪಂದದೊಳ್
ಇದು ವಿದ್ಯುನ್ಮಾಲೆಯೋ ಚಂದ್ರಮನ ಕಮನಪೀಯೂಷ ದೀಪ್ತಿಸ್ವರೂಪೋಮದನಾಸ್ತ್ರವ್ರಾತಮೋ ನೂತನವನಲತಿಕಾನೀಕಮೋ ನಾಕಲೋಕಾಸ್ಪದ ನಾರೀಕ್ಷೀರವಾರಾಶಿಯೊ ಸುರುಚಿರ ಸೌಂದರ್ಯ ಸಂಘಾತಮೋ ನೋಡಿದು ತಾನೆಂಬಂತೆ ತೀವಿರ್ದಬಲೆಯರೊಳಗಿರ್ದಂಬಿಕಾಕಾಂತೆ ಬಂದಳ್
ಸರಸಿಜನೇತ್ರೆ ಪುಣ್ಯಮಯಗಾತ್ರೆ ಸದಾಶಿವನಂಗ ಪಾತ್ರೆಯತ್ಯುರುತರದಾನಿ ನಿರ್ಮಲ ಭವಾನಿ ನಿರಂತರಮಾನಿ ನವ್ಯಸೌಂದರವರ ಮೂರ್ತಿ ಶರ್ವನ ಸುಕೀರ್ತಿ ಮಹೇಶ್ವರನರ್ತಿ ಬಂದಳೊಪ್ಪಿರೆ ಗಿರಿಜಾತೆ ಲೋಕಚಯಮಾತೆ ಜಗಕ್ಕೆ ವಿನೂತೆಯಳ್ಕಱಿಂ
ವ. ಇಂತು ಬಂದು ತಾರೆಗಳ ನಡುವಣ ತಾರಾಪತಿಯ ಕಳೆಯಂತೆ ಲತೆಗಳ ನಡುವಣ ಕಲ್ಪಲತೆಯಂತೆ ರತ್ನಂಗಳ ನಡುವಣ ಚಿಂತಾರತ್ನದಂತೆ ಧೇನುಗಳ ನಡುವಣ ಕಾಮಧೇನುವಿನಂತೆ ರುದ್ರಾಕ್ಷಗಳ ನಡುವಣೇಕಮುಖ ರುದ್ರಾಕ್ಷಿಯಂತೆ ಸಕಲಸ್ತ್ರೀಯರ ನಡುವೆ ಗಿರಿರಾಜತನೂಜೆ ವಿರಾಜಿಸುತಿರ್ದು
ಸುರುಚಿರ ಪೂರ್ವಾಚಳದೊಳ್ಗುರುತರ ಪೂರ್ಣೇಂದುವುದಯಿಪಂತಿರೆ ರಾತ್ರೀಶ್ವರವದನೆ ಗಿರಿಜೆ ಭರದಿಂಗಿರಿರಾಜನ ತೊಡೆಯ ಮೇಲೆ ಬಿಜಯಂಗೆಯ್ದಳ್
ವ. ಆ ಸಮಯದೊಳ್
ಕಂಡಷ್ಟಾಂಗಪ್ರಣಾಮಂಬೆರಸು ಹರಿಸದಿಂ ನಾರದಂ ಭೀತಿಯಂ ಕೆಯ್ಕೊಂಡಿಷ್ಟಾರ್ಥಪ್ರದೈಕಪ್ರಭೆಗೆ ವಿಭವದಿಂದಂ ನವಾಶ್ಚರ್ಯ ಪೂರ್ವಂಹಿಂಡೇಳ್ವಾನಂದ ರೋಮಾಂಚದ ಪೊದಕೆಗಳಂ ತಾಳ್ದು ನಿಂದಿರ್ದು ತಾಯೇಚಂಡಾಂಶುವ್ರಾತ ತೇಜೋನಿಧಿ ಶರಣೆನುತಂ ಸ್ತೋತ್ರಮಂ ಮಾಡುತಿರ್ದಂ
ಶ್ರೀನಿಧಿ ಶಾಂಕರಿ ಶೈವಜ್ಞಾನಿ ಸದಾವರದೆ ಭುವನ ಭರಿತೆ ಭವಾನೀಮಾನಿನಿ ಮಾತೆ ಮಹೇಶಧ್ಯಾನಿ ಮಹಾದಾನಿ ನೀನೆ ಶರಣೆನುತಿರ್ದಂ
ಇಂತಿಂತು ಬಣ್ಣಿಸುತ್ತುಂಮುಂತಿರ್ದಗರಾಜ ಸುತೆಯನುಚ್ಚಾಸನದೊಳ್ಸಂತಂ ಬಿಜಯಂಗೆಯ್ಸುತ್ತುಂ ತಣಿಯದೆ ಮತ್ತೆ ನಾರದಂ ನುತಿಗೆಯ್ದಂ
ತಾಯೇ ತವರೇ ತ್ರಿಭುವನದಾಯುವೆ ಜಗದುಸಿರೆ ಜಗದ ಕಣ್ಣೆ ಜಗನ್ನಿರ್ಮಾಯಾನಿಧಿಯೇ ಸುಧಿಯೇಕಾಯೆನ್ನಂ ಕರುಣದಿಂದೆ ಸಲಹೆನುತಿರ್ದಂ
ವ. ಎಂದಿಂತಾರ್ತದಿಂ ಸ್ತೋತ್ರಂಗೆಯ್ಯೆ ಕೇಳ್ದು ಕೌತುಕಂದಾಳ್ದು ಗಿರಿರಾಜನುಂ ಮೇನೆಯುಮಿರ್ದೆಲೆಲೆ ಮುನೀಂದ್ರಾ ನಿಮ್ಮಡಿಗಳ ನೊಚ್ಚತಂಗೊಂಡುಚ್ಚಾಸನದೊಳಿರಿಸಿ ಪಾದೋದಕಮನಾದರದಿಂ ಕೊಂಡು ಅತಿಹರ್ಷದಿಂ ಕೃತಾರ್ಥರಾದೆವಲ್ಲದೆಮ್ಮ ಮಗಳ್ಗೆ ನಿಮ್ಮಡಿಗಳ್ ವಂದನಂಗೆಯ್ವುದತ್ಯಾಶ್ಚರ್ಯವೆಂದಜ್ಞಾನದಿಂ ನುಡಿಯೆ ದಿವ್ಯಜ್ಞಾನಿ ನಾರದಂ ನಸುನಗುತ್ತುಮಿಂತೆಂದಂ
ಸುರರಱಿಯರಿಂದ್ರನಱಿಯಂಹರಿಕಮಲಜರಱಿಯರಖಿಳ ಮನುಗಳ್ ಮುನಿಗಳ್ಕರಮಱಿಯರೆಂದೊಡಗಜೆಯಚರಣಾಬ್ಜಕ್ಕೆಱಗಲಿಳೆಯೊಳಾನೆನಿತಱವಂ
ನೆವದಿಂದಂ ನಿಮ್ಮ ಪುಣ್ಯೋದರದೊಳೊಗೆದೊಡೀ ಬಾಲೆಯಂ ಪುತ್ರಿಯೆಂಬೊಂದವಿಚಾರಂ ಬೇಡ ನೀವೇ ಜನನಿಜನಕರಲ್ಲಲ್ಲದಂತಿರ್ಕೆ ತಾಯೇನವರತ್ನಕ್ಕಬ್ಧಿ ಚಿಂತಾಮಣಿಗೆ ಮೊರಡಿ ಮುತ್ತಿಂಗೆ ಸಿಂಪಿಂದುವಿಂಗಂರವಿಗಂ ಪೂರ್ವಾಶೆ ಲಿಂಗಕ್ಕವನಿ ಸುಧೆಗೆ ದುಗ್ಧಾಬ್ಧಿ ಪದ್ಮಕ್ಕೆ ಪಂಕಂ
ವ. ಮತ್ತಮಲ್ಲದೆ
ಮೇನೆಯೆ ನಿನ್ನ ತಪಕ್ಕತಿಮಾನಿ ಮಹಾದೇವಿ ಕರುಣದಿಂ ನಿನ್ನುದರಸ್ಥಾನದೊಳಂ ಜನಿಯಿಸೆ ಸುಜ್ಞಾನಿಯನೆಲೆ ಪುತ್ರಿಯೆಂಬರೇ ಧಾರಿಣಿಯೊಳ್
ಶಿವನ ಸುಧೆ ಶಿವನ ಜೀವಂಶಿವನಾನಂದಂ ಸದಾಶಿವನ ಘನಪುಣ್ಯಂಶಿವನ ಸುಖಂ ಶಿವನ ಮುಖಂಶಿವನಾಯು ಗಿರೀಂದ್ರ ಗಿರಿಜೆಯಂ ಸುತೆಯೆಂಬಯ್
ದಕ್ಷನ ಶಿವನಿಂದೆಗೆ ಕಮಲಾಕ್ಷಿ ಮಹಾದೇವಿ ಸೆಡೆದು ನಿಜಯೋಗದೊಳಿಂತಕ್ಷಯ ನಿಧಿ ಮೇನೆಗೆ ಕರುಣೇಕ್ಷಣೆಯಾಗುತ್ತೆ ಬಂದುದಂ ಭಾವಿಸಿರೇ
ಅದು ಕಾರಣದಿಂ ಮುನ್ನಮೆಮೊದಲಿಂ ಹರನರಸಿ ಗಿರಿಶನರ್ಧಾಂಗಿ ವರಪ್ರದೆ ವರನೀಶ್ವರನೀಕೆಗೆಮುದದಿಂ ಶಿವನಲ್ಲಿಗಿರದೆ ಕಳಿಪುವುದುಚಿತಂ
ಗಿರಿಸುತೆ ಬಳೆವನ್ನವರಂಹರನಿರ್ದಪನೊಲ್ದು ಹೇಮಕೂಟಸ್ಥಳದೊಳ್ಪರಿಪೂರ್ಣಪರಂಜ್ಯೋತೀಸ್ವರೂಪ ನಿಜಯೋಗ ಭೋಗರಾಗೋನ್ನತಿಯಂ
ವ. ಎಂದಿಂತತರ್ಕ್ಯ ಮುನಿಹಿತೋಪದೇಶಮಂ ಪೇಳ್ದು ಗಿರಿಜೆಯ ಪರಮ ಲಾವಣ್ಯಾವಯವಂಗಳಂ ಕಂಡು ನೋಡಲಣ್ಮದೆ ಪೊಡಮಡುತ್ತೆ ಮತ್ತಮಿಂತೆಂದಂ
ಈ ಗಿರಿಜೆಯ ನವಯೌವನಮೀ ಗಿರಿಜೆಯ ರೂಪವಿಭವಮೀ ಗಿರಿಜೆಯ ಸೌಖ್ಯಾಗಮವೀ ಗಿರಿಜೆಯ ನಿಜರಾಗಂ ಶಂಕರನ ಚಿತ್ತಮಂ ಚಿಗುರಿಸದೇ
ಹರನ ಮನೋಹರಂ ಗಿರಿಜೆಯೀ ನಡೆಯೀ ನುಡಿಯೀ ವಿಳಾಸವೀತರಳಕಟಾಕ್ಷವೀ ಪರಿಮಳಾಕೃತಿಯೀ ದರಹಾಸವೀ ಸುಖಾವರಣತೆಯೀ ಸಲಕ್ಷಣತೆಯೀ ಸೊಬಗೀ ಮಧುರಸ್ವಭಾವವೀಸುರುಚಿರಕಾಂತಿಯೀ ಹರೆಯವೀ ಸುಕುಮಾರತೆಯೀ ಸುಧಾಮಯಂ
ಉರಮಿಂಬಿಲ್ಲ ಪಯೋಧರದ್ವಯದ ಕೊರ್ಬಿಂಗಾಸ್ಯಮಿಂಬಿಲ್ಲ ಭಾಸುರ ನೇತ್ರದ್ವಿತಯ ಪ್ರಚಾರತೆಗೆ ಬೆನ್ನಿಂಬಿಲ್ಲ ಧಮ್ಮಿಲ್ಲ ಬಂಧುರ ಸೀಮಾವಳಯಕ್ಕೆ ನೋಡ ನಡುವಿಂಬಿಲ್ಲೊಪ್ಪುವೀ ಬಾಸೆಗೆಗಿರಿಜಾಯೌವನ ಸಂಪದಕ್ಕೆ ತನುವೆಂತಪ್ಪುದೋ ರುದ್ರನಾ
ಇಂತೊಪ್ಪುವ ಜವ್ವನೆಯಂಶಾಂತೆಯನಖಿಳೈಕಮಾತೆಯಂ ಶಂಕರನೇಕಾಂತದ ಸುಖಮಂ ಸ್ತ್ರೀಮಾತ್ರಂ ತನುಜೆಯೆನಿಪ್ಪ ಬಗೆಯನುಳಿ ಗಿರಿರಾಜಾ
ನಿನಗಱಿಪಲ್ ಬಂದೆಂ ಶರ್ವನ ವಧು ಶರ್ವಾಣಿಯೆಂದು ನಗಜೆಯ ನಗರಾಜನೆ ಕೇಳ್ ಭರದಿಂ ಕೈಲಾಸನಗಕ್ಕಾಂ ಪೋದಪೆನೆಂದು ನಾರದನೆಂದಂ
ಎನೆ ಕೇಳ್ದು ಶೈಳರಾಜಂವಿನಯಂ ಬೆರಸಗಜೆಗಂದು ಕೆಯ್ಮುಗಿಯುತ್ತುಂಮನದೊಳ್ ಬೆಱಗಾಗುತ್ತುಂಘನ ಶೈವಾಂಬುನಿಧಿಗೆ ನಾರದಂಗಿಂತೆಂದಂ
ನೀವೆಂದಂತೆ ಭವಾನಿಯಂ ಮಱೆದು ಪುತ್ರೀಭಾವಮಂ ತಾಳ್ದೆವಿನ್ನೇವೇಳ್ವೆಂ ಮರುಳಾಗುತಿರ್ದೆಮಗೆ ನಿಮ್ಮೀ ಬೋಧೆಯಿಂ ಜ್ಞಾನ ಸದ್ಭಾವಂ ಪುಟ್ಟಿದುದಿಂಪಿನಿಂ ಪರಸುತಂ ಪಂಪಾವಿರೂಪಾಕ್ಷನಿರ್ಪಾವಾಸಕ್ಕಿರದುಯ್ದು ತೋಱಿದಪೆನೀ ಶರ್ವಾಣಿಯಂ ಜಾಣೆಯಂ
ನೀವಿಂದೆಮ್ಮರಮನೆಯೊಳ್ದೇವಾರ್ಚನಂಗೆಯ್ದು ನಾಳೆ ಪೋಪುದೆನುತ್ತುಂತೀವಿರ್ದ ಮೃದು ಮಧುರ ವಾಕ್ಯಾವಳಿಯಿಂ ನಾಡೆ ಬೇಡಿಕೊಂಡಂ ಭೂಪಂ
ವ. ಇಂತು ಬೇಡಿಕೊಳುತ್ತುಮಿರೆ
ನಗಪತಿಯೆಂದುದಂ ಸಲಿಸಿ ನಾರದನಾತನ ಕೂಡೆ ರುದ್ರನಂಮೃಗಧರ ಚೂಡನಂ ಶಿವನನರ್ಚಿಸಿ ತತ್ಪರಮಪ್ರಸಾದದಿಂಮಿಗೆ ತಣಿದಿರ್ವರುಂ ಕನಕ ಪೀಠದೊಳಿರ್ಪಿನಮಿತ್ತಲತ್ತಲಾಖಗನ ತುರಂಗವೆಯ್ದಲಣಮಿರ್ದುವು ಪಶ್ಚಿಮ ಪರ್ವತಾಗ್ರಮಂ
ವ. ಆ ಸಮಯದೊಳ್
ಅದು ಪೂರ್ವಾಂಗನೆಯಿಡೆ ನೆಗೆದೊದೆವುತೆ ಬೆಳ ಬೆಳಗುತೆಯ್ದಿ ಪಶ್ಚಿಮಶೈಳಾಗ್ರದ ಮೇಲೆ ಬಿಳ್ದ ಮಾಣಿಕ್ಯದ ಕಂತುಕದಂತಿರೆಸೆದುದರ್ಕನ ಬಿಂಬಂ
ವ. ಆ ಸಮಯದೊಳ್
ಅರೆಮುಗಿವಬ್ಜಮುಳ್ಳಲರ್ವಕೈರವಮಾಕುಲಿಪಾ ಮಧುವ್ರತಂಕೊರಗುವ ಕೋಕಮುತ್ಸವಿಪ ಜಾರತೆಯರೊಂದೆರಡೇಳ್ವಮೀನ್ಗಳಂಕುರಿಪ ತಮಂಧಮಳ್ಕಱೊಳೆ ಪಕ್ಕೆಗೆ ಸಾರ್ವ ವಿಹಂಗವೀಥಿ ಚೇತರಿಸುವ ಮಾರುತಂ ನಸುಕಲಂಕುವ ಸಾಂಧ್ಯಮಯೂಖಲೇಖೆಗಳ್
ಅತ್ತಿತ್ತ ಮಿಸುಕದೆ ಮೆಯ್ವೆತ್ತಿದ ಮನ್ಮಥ ಸುಖೋತ್ತಮಾಂಗದೊಳಿರುತುಂಮುತ್ತಿನ ಕಾಂತಿಗೆ ಭಯಮಂಪೊತ್ತಿನ ವಕ್ತ್ರಮನೆ ನೋಡಿ ಸುಯ್ದುದು ಕೋಕಂ
ಕಾಲ್ಗೆ ಗೆಯೆ ಬಿಳ್ದಿನಂ ಮಿಗೆಸಾಲ್ದೆಗೆದುದು ವಿಹಗವೀಥಿ ಮುಗಿಯುತ್ತಬ್ಜಂಜೋಲ್ದುವು ನೊಂದು ರಥಾಂಗಂಕೀಲ್ದೆಗೆದವೊಲಗಲೆ ಸಾರ್ದು ಕೊರಗಿದುವಾಗಳ್
ಬಗೆಗುಂದಿ ಚಕ್ರಮಿಥುನಂಮಿಗೆ ನೊಂದೊಂದೊಂದನಗಲಲಾಱದೆ ನೋಟಂದೆಗೆಯುತ್ತಳಲುತ್ತೊರಲುತ್ತಗಲ್ದುವು ಉಱೆ ಪಗಲನರಸಿ ತಿರುಗುವ ತೆಱದಿಂ
ಮುಗಿವ ಸರಸಿರುಹಷಂಡಮನಗಲ್ವ ಚಕ್ರಪ್ರತಾನಮಂ ಕೋಟರದೊಳ್ಪುಗುವ ವಿಹಗಂಗಳಂ ಮಿಗೆನಗುವಂತಿರೆ ನೆಯ್ದಿಲೆಯ್ದಿದುವು ವಿಕಸನಮಂ
ವ. ಇಂತು ಮುಗಿವ ಕಮಲಂಗಳನಗಲ್ವ ಚಕ್ರಮಿಥನಂಗಳಂ ನೋಡಲಾಱ ದಿಳಿವಂತೆ ಜಳಜ ಸಖಂ ಪಶ್ಚಿಮಾಬ್ಧಿಯೊಳಿಳಿಯೆ ನಾನಾ ಶಿವಾಲಯಾಂತರಂಗ ಸಂಧ್ಯಾಸಮಯ ಸಮುದ್ಭೂತ ಮೃದುಮೃದಂಗಪಟಹ ಶಂಖಭೇರೀನಿನಾದಮಂವಾರನಾರೀ ಸಂಗೀತನೃತ್ಯಚಟುಳತರರವಭರಿತ ಪುರವಳಯ ವಿಳಸಿತ ಬಹುರತ್ನರಚಿತಸಹಸ್ರವೀಥೀಪ್ರತಿನಿಳಯಂಗಳೊಳ್ ಪತಂಗನ ಕಿರಣಂಗಳಂ ಕಳ್ತಲೆ ಸೆಱೆವಿಡಿದಂತೆ ಪೊತ್ತಿಸಿದ ದೀಪಿಕಾನಿಕಾಯಂ ನಾಡೆಮೆಱೆಯೆ, ಕಡುಗಳ್ತಲೆ ಕವಿತಾರ್ಪಾಗಳೊರ್ವ ಜಾರೆ ಮನೆಯರ್ಗಂಜಿ ಮಹೋತ್ಸಾಹದಿಂ ಪುದಿದ ತಮಮಂ ಪದಿರಿಂಪಾಡಿದಳದೆಂತೆಂದೊಡೆ
ಅಳಿಯಂ ಕತ್ತುರಿಯಂ ಕೋಕಿಳನಂ ಕಾಳಿಂದಿಯಂ ವಿನೀಳಾಂಬುದಮಂಬಳನನುಜನನುಱೆಪಾಡಿದಳಳವಟ್ಟತಿ ಜಾರೆ ಧೀರೆ ರಜನೀಮುಖದೊಳ್
ವ. ಮತ್ತಮಲ್ಲದೆ
ಪರಸಿದರಿದಿರ್ಗೊಂಡರಲಂಕರಿಸಿದರಾದರಿಸಿದರ್ ಕರಂ ನುತಿಗೆಯ್ದರ್ಬೆರಸಿದರೆಳಸಿದರಪ್ಪಿದರೆರೆದರ್ ನಲಿನಲಿದು ಜಾರೆಯರ್ ಕಳ್ತಲೆಯಂ
ವ. ಆಗಳಭಿಸಾರಿಕಾನಿಕಾಯದುತ್ಸವಂ ಪೆರ್ಚುವಂತೆ
ನಸುಗಳ್ತಲೆಯರೆಗಳ್ತಲೆಮುಸುಕುಂಗಳ್ತಲೆ ಪೊಗಳ್ದ ಪೆರ್ಗಳ್ತಲೆ ನಾಲ್ದೆಸೆಗಳ್ತಲೆ ಪೊಸಗಳ್ತಲೆರಸೆಗಳ್ತಲೆಯೆನಿಸಿ ಕೂಡೆ ತೀವಿತು ತಿಮಿರಂ
ದಿವಸುಧೆಯಬ್ಧಿಯನೊಲವಿಂತವೆ ಜನರಿಚ್ಛೆಯನೆ ಪಡೆಯಲೆಂದುಱೆ ಕಡೆಯಲ್ಹವಣಿಸಿದ ವಿಷಮನನುಕರಿಸುವ ತೆಱದಿಂದುದಯಮುಳಿದು ತಳೆದುದು ತಮಮಂ
ಅಱಿಯೆಂ ಪಿರಿದಂ ಪೊಗಳಲ್ಪೆಱತೇಂ ಮುಚ್ಚಿದೊಡೆ ಮುಚ್ಚಿದಂತಲ್ಲದೆ ಕಣ್ತೆಱೆದೊಡೆ ತೆಱೆದಂತಲ್ಲದೆಮಱೆದಂತೆನೆಯಿಕ್ಕಲೀಯದಿಡಿದ ತಮಂಧಂ
ಉಗುರಿಂದಂಟಿ ಬೆಱಂಟಿಯಂಜನಮದಕ್ಕುಂ ಚೌಕಮಂ ಕೀಱುತುಂತೆಗೆದಾಚ್ಛಾದಿಸೆ ಕೇಳ ನೀಳಪಟಮಕ್ಕುಂ ಬಟ್ಟಿತಂ ಮಾಡಿ ಸುತ್ತುಗಳೆತ್ತಲ್ಕಸಿತಾತಪತ್ರಮೆನಲಕ್ಕುಂ ತಾನಿದೆಂಬಂತಿರೀಜಗದೊಳ್ ಕಣ್ಗೆ ವಿಚಿತ್ರಮಾಗೆ ನೆರೆದಟ್ಟಯ್ಸಿತ್ತನಿತ್ತಂ ತಮಂ
ಇದು ಮಧುಕರಮಿದು ಮಲ್ಲಿಗೆಯಿದು ಕೋಕಿಳಮಿದು ಮರಾಳಮಿದು ಮದಗಜಮಿಂತಿದು ಕಂಠೀರವಮಿದು ಕರಿದಿದು ಬಿಳಿದೆಂದಱಿಯಬಾರದುರ್ವಿದ ತಮದೊಳ್
ಮನದೊಳಗಂ ಪೊಱಗಂ ತೆಕ್ಕನೆ ತೀವಿದ ಮರ್ಬಿನಲ್ಲಿ ಮನಸುಂ ನೆನಸುಂಕನಸುಂ ತಾನುಂ ಕಳ್ತಲೆಯೆನಿಸಿರ್ದುದು ತಮದ ಘನಮನದನೇನೆಂಬೆಂ
ನೆಲಸಿ ನೆಲೆಗೊಂಡ ಪೆರ್ಗಳ್ತಲೆಯೊಳ್ ತೊಳ ತೊಳಗಿ ಮಿನಿ ಮಿನಿಸುತ್ತುಂಪಲವುಂ ದೀವಿಗೆಗಳ್ ಕಳ್ತಲೆ ಪೂತಂತೊಪ್ಪುತಿರ್ದುವಾ ಮನೆ ಮನೆಯೊಳ್
ವ. ಅಂತೊಪ್ಪುತ್ತುಮಿರೆಯಿರೆ
ರಸೆಯಂ ನಭಃಸ್ಥಳಮನೆಣ್ದೆಸೆಯಂ ದಟ್ಟಯ್ಸುತಮರ್ದ ತಮದೊಳ್ ಚಾರಪ್ರಸರಂ ಪೊಡಮಟ್ಟುದು ಶಂಕಿಸಿದೊಲ್ದಲ್ಲಲ್ಲಿ ಕುಟಲ ಪಥ ಸಮತಳದೊಳ್
ಒದವಿದ ಕಳ್ತಲೆಯೊಳ್ ಸಮ್ಮುದದಿಂ ಪೊಱಮಟ್ಟ ಜಾರಮಿಥುನಾಳಿಗೆ ಕಂಡುದೆ ಬರವೆಳಸಿತೆ ಮನಮಿರ್ದುದೆ ಮನೆ ಪಟ್ಟಿದುದೆ ಪಾಸು ಮುಟ್ಟಿತೆ ಮರ್ಮಂ
ದಾರಿಯೊಳಿರುಕುಱೊಳೋಣಿಯೊಳಾರವೆಗಳ ತಳದೊಳಂಗಡಿಗಳೊಳ್ ಮನೆಯೊಳ್ಕೇರಿಯೊಳಾವಿಗೆಗಳೊಳಂಬೇರೂಱಿತು ಜಾರರನುಭವಂ ಕಳ್ತಲೆಯೊಳ್
ವ. ಅದೆಂತೆಂದೊಡೆ
ತಾಗದ ಚುಂಬನಮುಱೆ ಸೋಪ್ಪಾಗದ ಕರಘಾತಮಗಲದಿರ್ಪನುಭವದೊಳ್ಸಾಗಿಸುವ ಸರಭಸಂ ಮಿಗೆರಾಗಿಸುವ ಮನಂ ಮನೋಹರಂ ಜಾರೆಯರೊಳ್
ಆರೈವ ಮನಂ ಸುಖದೊಳ್ಪೂರೈಪ ಶರೀರಮುಸಿರದುಸಿರಿರ್ಪಡಕಂಸ್ಮೇರಾಸ್ಯಂ ಮೊಳೆನುಡಿಗಳಸೌರಂಭಂ ಸುರತ ಸಂಭ್ರಮಂ ಜಾರೆಯರಾ
ಪುಳಕಿಪ ತನು ಪೊಣ್ಮುವ ಸುಯ್ಬಳೆವ ರತಂ ಬೆಮರ್ವ ಗಂಡಮಿಳಿವಶ್ರು ಸುಖಂದಳೆವ ಮನಂ ಕಂಪಿಪ ಕೆಯ್ಕಳವಳಿಸುವ ಗಳಮನೂನಮಸತೀಕುಳದೊಳ್
ಕಲ್ಲೆನ್ನದೆ ಮುಳ್ಳೆನ್ನದೆಸಲ್ಲಲಿತಾಸ್ಥಾನಮೆನ್ನದಿರ್ದಿರ್ದೆಡೆಯೊಳ್ಪಲ್ಲವಿಸಿತು ಪೂತುದು ಫಲವಲ್ಲರಿಯಂ ಪಡೆದುದರರೆ ಜಾರರ ಸುರತಂ
ಒರ್ಬುಳಿಸಿದ ಸಮಸುಖದೊಳಗುರ್ಬಿಸುತಂತೊಲಿದು ನಲಿದು ಪಲತೆಱದಿಂ ನಿಂದುರ್ಬುತೆ ಕೊರ್ಬುತೆ ಪರ್ಬುತೆಗರ್ಬಿಸಿತಭಿಸಾರಿಕಾನಿಕಾಯಂ ನಿಶಿಯೊಳ್
ವ. ಮತ್ತಮಲ್ಲದೆ
ಇಳೆಯನಮರ್ಚಿ ಮುಚ್ಚಿ ಮುಸುಕಿರ್ದ ತಮಂಧಮನಳ್ತಿಯಿಂದೆ ಕಂಡಳಿಕುಳಮೆಂದು ಕಾಳಿಮತರಂಗಿಣಿಯೆಂದು ವಿನೀಳ ಮೇಘಮೆಂದಳಕದೊಳೊತ್ತುತುಂ ಸಲಿಲಕೇಳಿಯುಮಂ ನವಿಲಾಟದೇಳ್ಗೆಯಂತಳೆದಭಿಸಾರಿಕಾನಿಕರಮೊಪ್ಪಿದುದಾತ್ತ ರತಾಂತಲೀಲೆಯೊಳ್
ವ. ಅಂತೊಪ್ಪುತ್ತು ಮಿರ್ಪ ಸಮಯದೊಳ್
ಗಗನಂ ಪೂತುದೊ ತಮಮಂಮಿಗೆ ನೋಡುವ ಭರದೊಳಂಬರಂ ತಾನಂತಕ್ಷಿಗಳಂ ಪಡೆದುದೊ ಪೇಳೆನೆಸೊಗಯಿಸಿದುವು ತೊಳಗಿ ಬೆಳಗಿ ತಾರಗೆ ನಭದೊಳ್
ದಿನಕರನೆಸೆವಾಕಾಶಾವನಿಯೊಳ್ ದಶಶತಕರಾನುಕೂಲಂ ಮನದೊಂದನುನಯದಿಂ ಬಿತ್ತಿದ ಬೆಳಗಿನ ಬೀಜಾಂಕುರಮಿವೆನಿಸಿದುವು ತಾರಗೆಗಳ್
ಅಂಬುಜ ನಿಜಸಖನಸ್ತಮಯಂಬರಮಂಬರದ ನಡುವೆ ಬಹುತರದಿಂ ನೆಯ್ದಂಬರದೊಳ್ ಕೆಯ್ಗೊಳಿಸಿದಚುಂಬಿತರತ್ನಂಗಳಂತೆ ತಾರಗೆ ಮೆಱೆಗುಂ
ನೆಟ್ಟನೆ ಬಂದಪನೆನ್ನಯೆನಿಟ್ಟೆಯ ನಿಧಿ ಚಂದ್ರನೆಂದು ರಾತ್ರೀವಧು ತಾಂಕಟ್ಟಿದ ಬಹುರತ್ನದ ಮೇಲ್ಕಟ್ಟೆನಿಸಿದುದಂಬರಂ ಸುತಾರಾಗಣದಿಂ
ಅಂದಂಬರ ಗಂಗೆಯ ಮುಳಿಸಿಂದಂ ಕಾಳಿಂದಿ ಕಲಕೆ ಕರ್ಪಾಗಲ್ಕಲ್ಲೊಂದಿದ ಮುಕ್ತಾವಳಿಯೆಂಬಂದದಿ ತಾರಗೆಗಳೆಸೆದುವಾ ನಭದೆಡೆಯೊಳ್
ವ. ಅಂತೆಸೆವ ನಕ್ಷತ್ರೋದಯ ಸಮನಂತರದೊಳ್
ಇದು ಸಂಕ್ರಂದನ ದಿಗ್ವಧೂ ನಿಟಿಲ ಸಿಂಧೂರಾಂಶುವೊ ನೋಡು ನೋಡಿದು ಪುಷ್ಪಾಯುಧ ಪದ್ಮರಾಗಮುಕುರ ಪ್ರದ್ಯೋತಮೋ ಪೇಳ್ವೊಡಿಂತಿದು ವಿಸ್ತಾರಿತ ಕಾಮಹೋಮಹುತಭುಕ್ಪ್ರಜ್ವಾಲೆಯೋ ಎಂಬ ಸಂಪದಮಂ ಬೀಱಿದುದಿಂದ್ರದಿಗ್ವಿವರದೊಳ್ ಚಂದ್ರದ್ಯುತಿಪ್ರಾಭವಂ
ವ. ಆಗಳ್
ಕರಮೆಸೆದತ್ತು ಕೌಮುದಿಯ ಬಿತ್ತು ಚಕೋರಿಯ ತುತ್ತು ನೀರಜೋತ್ಕರದ ವಿಪತ್ತು ತಾರೆಗಳ ತುತ್ತು ಸುಧಾಂಬುಧಿಯೊತ್ತು ಮತ್ತಮಂಬರದ ಪುಳಿಂದಿ ತಾಳ್ದೆಸೆವ ಮೂಗಿನ ಮುತ್ತು ಮಗುಳ್ದು ನೋಡಲಚ್ಚರಿಯೆನಿಸಿತ್ತು ಮೂಡದೆಸೆಯಿಂದೊಗೆತರ್ಪ ಹಿಮಾಂಶುಮಂಡಲಂ
ಮುದದಿಂ ತಂದಿರ್ಕೆ ಪೂರ್ವಾಂಗನೆ ಗಿರಿಶಿರದೊಳ್ ಪೀಠಮಂ ಸತ್ಪ್ರಭಾಸಂಪದಮಂ ಕೆಯ್ಗೊಟ್ಟು ಚೈತ್ರಂ ನಡೆತರೆ ವದನಂ ಪುಷ್ಪಬಾಣಂಗಳಂ ಹೂಡಿದ ಬಿಲ್ಲಂ ಪೊತ್ತು ಪಿಂದಂ ಬರೆ ನವಕುಮುದಾಮೋದ ಮಾಧುರ್ಯದಿಂ ಷಟ್ಪದ ಗಾನಂಬೊಣ್ಮಿಸುತ್ತುಂ ಶಶಿಯುದಯದೊಳೊಪ್ಪಿತ್ತು ರಾಜೋಪಚಾರಂ
ವ. ಅಂತೊಪ್ಪುತ್ತುಮಿರೆ
ವಿದಳತ್ ಕೈರವರಾಜಿ ರಾಜಬಲದಿಂ ಸಂತೋಷಮಂ ಮುಟ್ಟೆ ಸಂಮುದಮಂ ತಾವರೆಯೆತ್ತಿ ಕಟ್ಟೆ ತಮಮಂ ಶೀತಾಂಶುವೆಳ್ಬಟ್ಟೆ ಪೆರ್ಚಿದಗುರ್ವಿಂ ವಿರಹಾಳಿಯಂ ಕುಸುಮಬಾಣಂ ಕಾಯ್ದು ಬೆನ್ನಟ್ಟೆ ಮೆಟ್ಟಿದನಿಂದ್ರಾಚಲ ಚೂಡಮಂ ಕಿರಣ ವೀಥೀ ಸಾಂದ್ರಮಂ ಚಂದ್ರಮಂ
ವ. ಮತ್ತಮಲ್ಲದೆ
ಅದು ಪೊಸಪವಳದ ಬಂಧೂಕದ ಕೆಂದಾವರೆಯ ದಾಸಣದ ಪೂವಿನ ವರ್ಣದ ಸಂಪದದಿಂ ಮದದಿಂಮುದದಿಂದೊಪ್ಪಿತ್ತು ಚಂದ್ರಬಿಂಬವಿಡಂಬಂ
ಇದು ವಿರಹವಾರ್ಧಿಮಧ್ಯಪ್ರದೇಶದಿಂದೊಗೆದ ರಾಗವಡಬಾನಳ ಪಿಂಡದವೋಲ್ ವಿರಹಿಗೆ ತೋಱಿದುದುದಯಾದ್ರಿಯ ಮೇಲೆ ಮೆಱೆವ ಹಿಮಕರಬಿಂಬಂ
ವ. ಅನಂತರಂ
ಅದಿರದೆ ವಿರಹಿಗಳತಿಸಂಮುದದಿಂ ಬರ್ಪಾಗಳೊಲ್ದು ಮಧು ಮದನಂಗೆ-ತ್ತಿದ ಮುತ್ತಿನ ಸತ್ತಿಗೆಯೆನಿಸಿದುದಿಂದ್ರಾಶಾ ನಿವೇಶದೊಳ್ ಶಶಿಬಿಂಬಂ
ಮುಂದೆ ತಮಂಧಮಿಟ್ಟಣಿಸಿ ರಾಹುವಿನಂತಿರೆ ಪೂರ್ವವೈರಮಂಮುಂದುಗೊಳುತ್ತೆ ಎನ್ನನಿದು ಮಾಡುವ ಮಾಳ್ಕೆಯನಿಂದು ಮಾಳ್ಪೆನಾನೆಂದು ತದೀಯರೂಪನುಱೆ ನುಂಗೆ ತನುಚ್ಛವಿಯಿಂದೆ ತೋಱಿತೆಂಬಂದದೊಳೊಪ್ಪುತಿರ್ದುದು ನಿಶಾಕರಮಂಡಲದಲ್ಲಿ ಲಾಂಛನಂ
ಒಡವುಟ್ಟಿದ ಬಿಸಮಿದನಾಂಕಡೆನೂಂಕಲದೇಕೆ ಕೂಡಿ ನಡೆವೆನೆನುತ್ತಂದೊಡಲೊಳಗಿಂಬಿಟ್ಟಯ್ದುವಪಡಿಯೆನಲೊಪ್ಪಿದುದು ಲಾಂಛನಾಂಕಿತ ಚಂದ್ರಂ
ವ. ಇಂತಾದ ಚಂದ್ರೋದಯಮಂ ಕಂಡು ಭೋಗಸಹಾಯರಪ್ಪ ನಾಗರಿಕ ವಿಟವಿದೂಷಕ ಪೀಠಮರ್ದಕರ್ ಭರದಿ ಪರಿತಂದು ಆಸ್ಥಾನದೊಳಿರ್ದ ಗೋತ್ರರಾಜಂಗೆ ಮೆಯ್ಯಿಕ್ಕಿ ನಿಂದು ಕೆಯ್ಯಂ ಮುಗಿದು ದೇವಾ, ಪತಂಗಂ ಪಶ್ಚಿಮಾಬ್ಧಿಯೊಳಿಳಿದಂ, ಸರಸಿರುಹಂ ಸುರುಳ್ದುವು, ಕುಮುದಕುಲಂ ರಮಣೀಯಮಾದುವು, ಕೋಕಂಗಳಗಲ್ದು ಶೋಕಮನೆಯ್ದಿದುವು, ಪಕ್ಕಿಗಳ್ ಪಕ್ಕೆಗೆ ಸಾರ್ದುವು, ಮೃಗಂಗಳ್ ನಗಮನೆತ್ತುಗೊಂಡುವು, ಇಳೆಯ ಜನಂ ನಿಳಯಮಂ ಪೊಕ್ಕುದು, ಕಳ್ತಲೆಯೊತ್ತರಿಸಿತ್ತು, ಜಾರೆಯರ್ ಹಾರಯ್ಸಿದರ್ ಗಗನದೊಳ್ ಭಗಣಂ ನೆಗೆದುದು, ಚಂದ್ರಂ ಶೈಳೇಂದ್ರಮನೇಱಿದಂ ಬೆಳ್ದಿಂಗಳ್ ಬೀದಿವರಿದುದು, ಅಸತಿಯರ್ ದೆಸೆಗೆಟ್ಟೋಡಿದರ್, ಚಕೋರಮುಖಂ ವಿಕಸಿತಮಾದುದು, ಮನ್ಮಥಂ ನನೆಗಣೆಯಂ ಹೂಡಿದಂ, ವಿರಹಿಗಳ್ ವಿರಥರಾದರ್ ದೇವಾ ಇಂದಿನ ದಿನಂ ಬೆಳತಿಗೆ ಬೆಳ್ದಿಂಗಳೊಳ್ ಪುರವೀಥಿಯ ವಿಳಾಸಮಂ ಕೆಯ್ಮಿಕ್ಕು ನೋಡಿ ರಾತ್ರೀ ವಿಹಾರಮಂ ಮಾಡಲ್‌ವೇಳ್ಪುದೆಂದು ಬಿನ್ನಯ್ಸಿದ ಮನ್ನಣೆಯ ರಸಿಕರ್ಗೆ ಪಸಾಯನಮನಿತ್ತೋಲಗಮಂ ಪರೆಯಲ್ವೇಳ್ದು ನಾರದನೊಡಗೂಡಿ ನಗರಾಜಂ ನಿರ್ಮಳೀಕೃತಕರಚರಣನುಂ, ಭಸಿತಾವಯವನುಂ, ರುದ್ರಾಕ್ಷಮಾಲಾಲಂಕೃತನುಂ, ಶಿವಲಿಂಗೇಕ್ಷಣ ನಿತ್ಯನಿಯಮಸಂಪನ್ನನುಂ, ಪ್ರಸಾದಭರಿತ ಶರೀರನುಂ, ಸುಗಂಧಮಯ ತಾಂಬೂಲಮುಖನುಂ, ಕುಸುಮಾವಳೀ ಪರಿವೃತ ಕಬರೀಭರನುಂ, ಯಕ್ಷಕರ್ದಮ ಕಕ್ಷಪುಟನುಂ, ನವ್ಯವಸ್ತ್ರಪರಿವೃತನುಂ, ದಿವ್ಯಾಭರಣಸರ್ವಾಂಗನು ಮಾಗಿ ದಕ್ಷಿಣಾನುಕೂಲ ದೃಷ್ಟಶಠನಾಯಕರೆಂಬ ರಾಜಪುತ್ರಂ ಕೂಡಿಕೊಂಡು ಸಕಲ ಸುಕುಮಾರ ಭೋಗನಿಯೋಗನಿರತರ್ ಪಿಂತೆಬರೆ ನಾರದಮುನೀಂದ್ರಸಹಿತಂ ಗಿರಿರಾಜಂ ತನ್ನರಮನೆಯಂ ಪೊಱಮಟ್ಟು ರಾಜವೀಥಿಯೊಳ್ ನಿಂದು ಪೂರ್ವ ದಿಶಾವಲೋಕನನಾಗಿ ಕಟ್ಟಿದಿರೊಳಿಟ್ಟಣಿಸಿದ ಬೆಳಗಿಂ ದಟ್ಟಯ್ಸಿ ತೋರ್ಪ ಚಂದ್ರಬಿಂಬಮಂ ನೋಳ್ಪಾಗಳ್.
ಸರಸನೆನಿಸಿರ್ದ ಸಖ ನಾಗರಿಕಂ ಕೆಲಸಾರ್ದು ನಿಂದು ಕೆಯ್ಮುಗಿಯುತ್ತುಂಪರಿಪೂರ್ಣಚಂದ್ರಮಂಡಲದಿರವಂ ಕಂಡಾಗಳವನಿಪಂಗಿಂತೆಂದಂ
ಇಂದು ಸುಧಾಂಶುರಾಜನತಿ ಶೀತಳಶೀಲನನೂನದಾನಿಯೇಳ್ತಂದೊಡೆ ಕೈರವಕ್ಕೆ ಶಶಿಕಾಂತದ ಕಲ್ಗೆ ಚಕೋರಮಾಲೆಗಾನಂದಮದಾಯ್ತು ಪಂಕಜಕೆ ಚಕ್ರಯುಗಕ್ಕಸತೀಕುಲಕ್ಕೆ ಪೋದಂದುಗಮಾಯ್ತು ಸರ್ವಜನಸಮ್ಮತನಾವ ನಗಾಧಿನಾಯಕಾ
ವ. ಮತ್ತಮದಲ್ಲದೆ
ಕಮಲಂಗಳೊಡನೆ ಧಾತ್ರೀಕುಮುದಂ ಮುಗಿದಿರ್ದುವರಸ ಕುಮುದದೊಡನೆ ತತ್ಕಮಲಂ ಮಿಕ್ಕಲರ್ದುವು ಚಂದ್ರಮನುದಯದೊಳೆಂದೊಡಿಳೆಗದೇಂ ಕೌತುಕಮೋ
ವ. ಮತ್ತಮಲ್ಲದೆ ದೇವಾ, ಪರ್ಬಿದ ಬೆಳ್ದಿಂಗಳಗುರ್ಬನೇನಂ ಬಣ್ಣಿಪೆಂ
ಮುನ್ನಂ ಪಯೋಧಿ ಪಡೆದೊಡೆತನ್ನಂ ಶಶಿ ಪಡೆದನಾ ಪಯೋಧಿಯನೆಂಬಂತುನ್ನತಿವೆತ್ತುದು ರಾಜೋತ್ಪನ್ನಮಭಿನ್ನಂ ಪ್ರಸನ್ನಮೊಪ್ಪುವ ಜೊನ್ನಂ
ಹರನುದ್ಧೂಳಿಸಿದತ್ಯನೂನಭಸಿತ ಪ್ರದ್ಯೋತಮೋ ಚಂದ್ರ ಶೇಖರನಾನಂದಮಯಾಟ್ಟಹಾಸರುಚಿಯೋ ಸರ್ವೇಶ ಸತ್ಕೀರ್ತಿಯೋಪರಮೋತ್ತುಂಗ ಮರುನ್ನದೀ ಪ್ರಬಳ ಗೌರಚ್ಛಾಯೆ ಭೂಭಾಗದೊಳ್ಪರೆದತ್ತೋ ಎನೆ ಪರ್ವಿತುರ್ವಿಯನಗುರ್ವಿಂ ಸಾಂದ್ರಚಂದ್ರಾತಪಂ
ಮುಡಿವೊಡೆ ಮಲ್ಲಿಕಾಪ್ರತತಿ ಪೂಸವೊಡುತ್ತಮ ನವ್ಯಚಂದನಂತುಡುವೊಡೆ ಮೌಕ್ತಿಕಾಭರಣವೀಸುವೊಡಂತಮೃತಾಬ್ಧಿ ಪೊರ್ದು ಕೊಳ್ವೊಡೆ ಧವಳೋತ್ತರೀಯಮೊಸೆದೀಂಟುವೊಡಾ ನವದುಗ್ಧಮೊಲ್ದು ನೋಳ್ಪೊಡೆ ರಜತಾದ್ರಿಯೆಂದೆನಿಸಿ ತೋಱಿತು ಮೀಱಿದ ಚಂದ್ರಿಕೋಜ್ವಳಂ
ಸರಳಜನಂ ಕೌಮುದಿಯಿಂದೆ ಕಡೆದು ಕಂಡರಿಸಿತೆಂಬ ನುಡಿ ಚಿತ್ರಮೆ ಕೌತುಕಮರಸ ಚಂದ್ರಮಂ ಚಂದ್ರಿಕೆ ಕವಿದ ಕಳಂಕ ಚಂದ್ರನಂತೆಸೆದಿರ್ದಂ
ಶಿವಕೀರ್ತಿರಸದೆ ಬೊಮ್ಮಂತವೆ ತೊಳೆದನೊ ಜಗಮನಮೃತವಾರ್ಧಿಯ ಬೆಳಗಿಂಧವಳಿಸಿದನೊ ಪೇಳೆನೆ ಭೂಭುವನಮನೆಡೆಗೊಂಡುದಚ್ಚ ಪೊಸವೆಳ್ದಿಂಗಳ್
ವ. ಇಂತೊಪ್ಪುವ ಸಾಂದ್ರಚಂದ್ರಿಕಾ ಸಂಪದಮಂ ನಗೇಶ್ವರಂಗೆ ನಾಗರಿಕಂ ನಲಿನಲಿದು ತೋಱುತ್ತುಂ ಮೀಱಿ ಬರೆವರೆ ಪಟ್ಟಣದ ದಟ್ಟಯ್ಸಿದ ಪಲವು ವೀಥಿಗಳ ವಿಚಿತ್ರ ವಿಭ್ರಮಮಂ ಶೈಲಪತಿಯಾಲೋಕಿಸುತ್ತುಂ ಕೇಳುತ್ತುಂ ಬಾಳುತ್ತುಂ ಕೇಳೀ ವನಮಂ ಪುಗುತರ್ಪಾಗಳ್
ಸುಗಿದಿವೆ ಕಮಳಂ ಕುಮುದಂನಗುತಿವೆ ಕೋಕದ್ವಯಂ ರತೀಶ್ವರನೆಸುವಿಂದುಗಿ ಬಗಿಯಾಗುತ್ತಿವೆ ಮಿಗೆಬಗೆವೆರ್ಚುತ್ತಿವೆ ಸರಾಗಪೂರ ಚಕೋರಂ
ಚೂತಮನಪ್ಪಿ ಪುಷ್ಪವತಿಯಾದುದು ಮಲ್ಲಿಗೆ ಶೀತಕೃತ್ಕರವ್ರಾತಮನಪ್ಪಿಯೊಪ್ಪೆ ಕರಗಿತ್ತು ಹಿಮೋಪಲಮೋತು ತುಂಬಿಯಂಪ್ರೀತಿಯೊಳಪ್ಪಿ ಗರ್ಭಿಣಿಯದಾಯ್ತು ಸರೋರುಹಮುತ್ಪಲಂ ಪ್ರಸೂತಾತುರೆಯಾಗಿ ಪೆತ್ತುದಳಿಯಂ ನವಚಂದ್ರಿಕೆಯೊಳ್ ನಗೇಶ್ವರಾ
ವ. ಮತ್ತಮದಲ್ಲದೆ
ಎಳದಳಿರೊಳರಲೊಳಾಮ್ರದನೆಳಲೊಳ್ ಪುಳಿನಂಗಳೊಳಗೆ ಶಶಿಕಾಂತ ಶಿಳಾತಳದೊಳ್ ಕೊಳದೊಳ್ ವನದೊಳ್ತಳರದ ವಿರಹಿಗಳ ವೀಥಿಯಿದೆ ಗಿರಿರಾಜಾ
ಒತ್ತುವ ಪದ್ಮಪತ್ರಕದಳೀದಳ ಸಂಕುಳಮೆಯ್ದೆ ಬೆಂದು ಸೀಯುತ್ತಿವೆ ದೂರದಿಂದೆ ಸಖಿಯರ್ ತವೆ ಚೆಲ್ಲುವ ಶೀತವಾರಿಯುರ್ಕುತ್ತಿವೆ ಬೀಸುತಿರ್ಪ ಕುಸುಮೋಜ್ವಳ ವೀಜನ ವೃಂದಮೋವೊ ಪೊತುತ್ತಿವೆ ತನ್ವಿಯೋ ವಿರಹವಹ್ನಿಗೆ ಪುಟ್ಟಿದದೊಂದು ಮೂರ್ತಿಯೋ
ಸಂದಣಿಸಿ ಮಾಣದಾಳೀವೃಂದಂ ಶಿಶಿರೋಪಚಾರಮಂ ಲಲನೆಗೆ ಮಾಳ್ಪಂದಂ ಘೃತದಿಂ ಕಿರ್ಚಂನಂದಿಪ ತೆಱನಾಗಿ ತೋಱುತಿದೆ ನೋಡರಸಾ
ತಾಳ್ದಿದ ವಿರಹದೊಳೀಕೆಗೆಬೆಳ್ದಿಂಗಳ್ ಬಿಳಿಯ ಕಿರ್ಚು ಸಸಿ ಬಿಸಿ ಕಾವಂತೂಳ್ದುವ ದಾವಂ ಚೈತ್ರಂಸೀಳ್ದಿಕ್ಕುವ ಕುಂಭಿ ಕದಳಿ ಕದಳೀಘಾತಂ
ವ. ಎಂದಿಂತು ವಿರಹಾತಿಶಯಮಂ ಬಿನ್ನವಿಸುತ್ತುಂ ಬರೆವರೆ ಮುಂದೊಂದೆಡೆಯೊಳ್
ಮಿಗೆ ಸೌಕುಮಾರ್ಯ ನವ ಮಸ್ತುಗಳಂ ಪೆಸರ್ಗೊಂಡೊಡುಳಿಯಳವಳೆನುತುಂ ಸುತ್ತುಗವಳಲುತ್ತುಂ ಸಂಜ್ಞೋಕ್ತಿಗಳಂ ತೋಱುತ್ತುಮಿರ್ದುದಬಳಾನೀಕಂ
ಇದೆ ಪಿಕನೆಳ್ಬು ಹಂಸೆ ಬರುತಿರ್ದುದೆ ನೂಂಕು ಮಧುವ್ರತಾಳಿ ಮುಂದಿದೆಯಿಡು ಚಂಪಕಮಾಲೆಪ್ರಸವದಿಂ ಗಿಳಿವಿಂಡಿದೆ ಸೋವು ಮಾರುತಂಮದ ಮುಖದಿಂದೆ ತೀಡುತಿದೆಯೊಡ್ಡು ಸೆಱಂಗನೆನಿಪ್ಪ ತಮ್ಮ ಹಸ್ತದ ನಿಜಸಂಜ್ಞೆಯಿಂ ಸುದತಿಯರ್ ನುಡಿದರ್ ಶಿಶಿರೋಪಚಾರದೊಳ್
ವ. ಮತ್ತಮೊಂದೆಡೆಯೊಳೊರ್ವ ತರುಣಿಗತ್ಯಧಿಕ ವಿರಹತಾಪಂ ಒಳಗಂ ಪೊಱಗಂ ತಕ್ಕನೆ ತೀವೆ ತಳತಳಿಸಿ ಕಾಯ್ದು ಘುಳುಘುಳಿಸುವಯಃಪಿಂಡವೆಂದು ಶಶಿಮಂಡಲಮಂ ನೋಡಲಂಜಿ ಕಣ್ಮುಚ್ಚಿ ಬೆದಱುತ್ತುಂ, ಬಿಸಿಯ ಬೆಳಗೆಂದು ಬೆಳ್ದಿಂಗಳ ಸೋಂಕಿಂಗೆ ಮೆಯ್ದೆಗೆದು ಸುಗಿಯುತ್ತುಂ ಬಾಳ ಬಾಯ್ದಾರೆಯ ಸೋಂಕೆಂದು ಕದಳೀದಳ ಸ್ಪರ್ಶನಕ್ಕೆ ದರ್ಪಂಗೆಟ್ಟೊಪ್ಪಂಗುಂದುತ್ತುಂ, ವಸಂತನೆಂಬ ಕಮ್ಮಱಂ ಶಶಿಬಿಂಬದ ಪೊಸಸಾಣೆಯೊಳೊತ್ತಿ ಮಸೆವ ಕಾಮದೇವನ ಕೂರಲಗಿನ ದನಿಯೆಂದು ಕೋಕಿಲಧ್ವನಿಗಾಕಂಪನಂಗೊಳುತ್ತುಂ ಮಕರ ಧ್ವಜವೇತ್ರಧರ ಮುಖ ಜನಿತ ಮುಖರ ಗರ್ಜನಾರವಮೆಂದು ಚಪ್ಪರಿಪ ಗಿಳಿಗಳ ಬಳಗಕ್ಕೆ ಧರೆಗಿಳಿಯುತ್ತುಂ, ಬಿಡಿದಿಸುವ ಕುಸುಮಕೋದಂಡ ಚಂಡಪ್ರಸವ ಬಾಣಭೀಂಕಾರ ಘೋರಧ್ವನಿಯೆಂದುಱೆ ಝೇಂಕರಿಸುವ ತುಂಬಿಗಳ ಝೇಂಕಾರಕ್ಕೆ ಭೋಂಕನೆ ನಡುಗಿ ಶಂಕಿಸುತ್ತುಂ, ಚೈತ್ರ ರಾಜತೇಜಃ ಪ್ರತಾಪದುರಿಯ ಹಳವಿಗೆಯ ಹೊಯ್ಲೆಂದು ಬೀಸುವ ಪೊಂಬಾಳೆಯ ಚಾಮರದೆಲರ್ಗೆ ಕೊಱಗಿ ಕಳೆಗುಂದುತುಂ ಸಖೀಜನಂ ಕೆಯ್ಗೊಟ್ಟೆಯ್ತಂದು ಕೊಳನಂ ಪುಗಿಸೆ ಮೆಯ್ಯ ಬೆಂಕಿಯಿಂ ಚುಯ್ಯೆಂದು ನೊರೆಗಟ್ಟಿ ಬಿಸಿಯ ತೆರೆ ತನುಮುಟ್ಟಿ ಸೆಕೆಯುಸಿರ್ ಭುಗಿಲನೊಗೆದು ಕಾದ ನೀರ್ ಕಾಯಮಂ ಸುಡೆ ಘಳಿಲನೆ ಪೊರಮಟ್ಟು ಕೆಳದಿಯಂ ನೆಮ್ಮಿ ಹಮ್ಮದಂಬೋಗುತ್ತುಂ ಕಾಮಂಗೆ ಕನಲ್ದು ವಸಂತಂಗಳಲ್ದು ಎಳಲತೆಗೆ ಬಳಲ್ದು ಪಲ್ಲವಕ್ಕೆ ಕಳಲ್ದು ಕುಸುಮಕುಲಕ್ಕೆ ಬಸವಳಿದು ಮಂದಾನಿಳಂಗೆ ಮದವುಡುಗಿ ಕಾಮನ ಕಾರಾಗಾರದೊಳಿರ್ಪಂತೆ ಕೇಳೀವನದೊಳಿರ್ಪ ಬಾಲಕಿಗೆ ಚಂದ್ರನ ದಾಳಿ ಅಳಿಗಳ ದಳವುಳಂ ಬಸಂತನ ಬಂದಿ ಬಾಲಚೂತದ ಭಯಂ ಮಳಯಾನಿಳನ ಗಾಸಿ ಶಿಶಿರೋಪಚಾರದ ದಂಡಣೆಯ ಖಂಡಿತಮಾಗೆ ಕೊಱಗಿ ಕರಗಿ ಕುಂದಿ ಕೋಡಿ ಬಾಡಿ ಸುರುಳ್ದುರುಳ್ದು ತೆರಳ್ದು ಒಳಗಾಱಿ ಬಿಸುಪೇಱಿ ಕಳೆಗುಂದಿಯಾಸೆಯಱಿತು ನೋಟಂ ಬಱತು ವಿರಹಾಗ್ನಿಯೆತ್ತಿ ಮನಂ ಪೊತ್ತು ಬುದ್ಧಿ ಕವರ್ದು ಅಹಂಕಾರಂ ಹೊಗೆದು ಚಿತ್ತಂ ಬೆಂದು ಹರಣಮುರಿದು ಹಮ್ಮಯ್ಸಿ ಕಣ್ಮುಚ್ಚಿ ವಿರಹದ ಕರುವಿನಂತೆ ಕರುಣದ ಹಾಹೆಯಂತೆ ದೈನ್ಯದ ಸೀಮೆ ಯಂತೆ ಕಾರ್ಪಣ್ಯದ ನೆಳಲಂತೆ ವಿಲಾಸದ ವಿರತೆ ವಿಭ್ರಮದಭ್ರಚ್ಚಾಯೆ ಲಾವಣ್ಯದ ಬಂಜೆ ಭೋಗದ ವಿಯೋಗಿಯೆನಿಸಿರ್ದ ತರುಣಿಯರ ವಿರಹಾತಿಯಶಮಂ ಗಿರಿರಾಜಂ ಕರುಣಿಸಿ ನೋಡಿ ಕೌತುಕಮನಾಳುತ್ತಾ ವನದೊಳ್ ಬೇಯುತ್ತುಮಿರ್ಪ ವಿರಹಿಗಳ್ಗವರವರ ನಲ್ಲರನಲ್ಲಲ್ಲಿ ತಂದು ಸಲ್ಲೀಲೆಯಿಂ ಕೂಡುವುದೆಂದು ಚರರಂ ಪರಿಕಲ್ಪಿಸುತ್ತುಂ ತಿರುಗಿ ನಡೆತಂದು ಪಣ್ಯಾಂಗನಾವೀಥಿಯಂ ಪುಗುತರ್ಪಾಗಳ್,
ಯುವತಸಂತಾನ ನಾನಾಚಲದಳಕ ಲಸಲ್ಲಾಸ್ಯಲೀಲಾಪ್ರಬದ್ಧಂವಿವಿಧಾಗಾರಾಂಗಣ ಪ್ರಸ್ಫುರಿತ ಕೃತಕಕಾಸಾರ ಪಾನೀಯಭಂಗೋದ್ಭವ ಬಿಂದುವ್ರಾತ ಶೀತಾವರಣನೊಲವಿನಿಂ ತೀಡಿದಂ ಸ್ತ್ರೀಕುಲೋದ್ಯನ್ನವಕಸ್ತೂರೀ ಹಿಮಪ್ರೋನ್ಮಲಯಜಘುಸೃಣಾಮೋದಭಾರಂ ಸಮೀರಂ
ಸಕಳ ನಿಕೇತನಂಗಳೊಳೆ ದರ್ಪಕನುನ್ನತಿ ದರ್ಪಕಾಜ್ಞೆ ದರ್ಪಕನ ಕಥಾಳಿ ದರ್ಪಕನ ವರ್ಣನೆ ದರ್ಪಕನ ಪ್ರಶಸ್ತಿ ದರ್ಪಕನ ವಿಳಾಸ ವಿಭ್ರಮತೆ ದರ್ಪಕನುಜ್ವಳತೇಜದೇಳ್ಗೆ ದರ್ಪಕನ ಸುಕೀರ್ತಿ ದರ್ಪಕನ ದಂಡನೆ ದರ್ಪಕನಾಣೆ ಸುತ್ತಲುಂ
ರತಿಯ ವಿಲಾಸದಿಂ ರತಿಯ ವಿಭ್ರಮದಿಂ ರತಿಯರ್ಚನಾಳಿಯಿಂರತಿಯತಿತೇಜದಿಂ ರತಿಯ ನೋಂಪಿಗಳಿಂ ರತಿಯಾಣೆಯೋಜೆಯಿಂರತಿಯ ಸುಗೀತದಿಂ ರತಿಯ ನವ್ಯ ಸುಧಾರಸಪೂರಗೋಷ್ಠಿಯಿಂರತಿಮಯವಾಯ್ತು ಪಣ್ಯವನಿತಾಪರಿ ವೀಥಿಯೊಳೆಲ್ಲಿ ನೋಳ್ಪೊಡಂ
ವ. ಮತ್ತಮಲ್ಲಿ
ಉಳಿ ಕಳೆ ನಿಃಸ್ವನಂ ಕರೆ ಸದರ್ಥನನಿಂಬಿಡು ತಂದ ಮಂಡನಂಗಳನೊಸೆದಳ್ಕಱಿಂ ರತಿಯನರ್ಚಿಸು ಕಾಮನ ನೋಂಪಿಗಿಕ್ಷುಸಂಕುಳ ಫಳ ಪುಷ್ಪಮಂ ತರಿಸು ನವ್ಯದುಕೂಲ ಸುಗಂಧ ವೃಂದಮಂತಳೆ ನವನಂದನಕ್ಕೆ ನಡೆಯೆಂಬ ರವಂ ಸಲೆ ಗೇಹ ಗೇಹದೊಳ್
ವ. ಅಂತು ನುಡಿ ವ ಮದನ ಪ್ರತಾಪವಿತತ ಚತುರೋಕ್ತಿಗಳಂ ಕೇಳುತ್ತುಂ ಬರೆವರೆ ಮುಂದೊಂದೆಡೆಯೊಳ್ ಕೆಲಬರ್ ಮುಗ್ಧೆಯರ್ಗೆ ವಿದಗ್ಧೆಯರ್ ಲಲಿತ ಚರಿತಮಂ ಕಲಿಸುತಿರ್ದರದಂತೆಂದೊಡೆ,
ಓದಿಸದಿರ್ ಗಿಳಿಯಂ ನಿನ್ನೀ ದಂತಮನೆಸೆವ ದಾಡಿಮೀಬೀಜಂ ಗೆತ್ತಾದರದಿಂ ಕರ್ದುಕುಗುಮೆಂದೋದಿಸುತಿರ್ದಳ್ ವಿದಗ್ಧೆ ಮುಗ್ಧೆಯನೊಲವಿಂ
ತಿಳಿವಿಲ್ಲದೆ ಶಶಿಕಾಂತದಕಳಶಮನೇಕಾಂತೆ ಕಾಂತೆ ನಿನ್ನ ಮುಖೇಂದೂಜ್ಜ್ವಳ ಕೌಮುದಿಯಿಂದೊಸರ್ದಪುದಿಳಿಪಿಳಿಪೆಂದೊರ್ವ ಮುಗ್ಧೆಯಂ ಸಖಿ ನುಡಿದಳ್
ಕುಂಜದಳೇಕ್ಷಣೆ ನಿನ್ನೀಮಂಜುಳ ರವದಿಂದೆ ಪಾಡೆ ನವಪರಪುಷ್ಟಪ್ರಾಂಜುಳ ಮಧುರಧ್ವನಿಯೆಂದಂಜುವರೆಲೆ ಮಗಳೆ ಪಾಡದಿರ್ ವಿರಹಿಣಿಗಳ್
ತಿಳಕಮದಿಲ್ಲದೆ ಬೆಳ್ದಿಂಗಳೊಳಗೆ ನಿಂದಿರದಿರಬಲೆ ಸಕಳಂಕಂ ನಿನ್ನೊಳಸೂಯೆಗೊಂಡು ನೋಡುವನೆಳೆಯಳೆ ಚಂದ್ರಮನ ದಿಟ್ಟಿ ತಾಗದೆ ನಿನ್ನಂ
ವ. ಎಂದು ನುಡಿವ ವಿದಗ್ಧೆಯರ ಪ್ರೌಢವಚನಂಗಳಂ ಕೇಳುತಿರ್ಪ ಮುಗ್ಧೆಯರೊಳೊರ್ವಳ್ ಬೆಳ್ದಿಂಗಳೊಳ್ ನಿಂದು,
ಕಳಶೋದಕದೊಳ್ ಚಂದ್ರನನೆಳಲಂ ಕಂಡೆಲೆಲೆ ಸಿಲ್ಕಿದಂ ಶಶಿಯೆನುತಂದೊಳಪೊಕ್ಕು ನೋಡಿ ಕಾಣದೆಗಳಿಲನೆ ತಡವರಿಸಿ ತರುಣಿ ತಳವೆಳಗಾದಳ್
ವ. ಮತ್ತಮೊರ್ವಳ್
ಕರತಳ ಕಳಶೋದಕದೊಳ್ಸುರುಚಿರ ಚಂದ್ರಮನ ನೆಳಲನೂನಂ ತೋಱುತ್ತಿರೆ ಬೆಳ್ಳಿವಟ್ಟಲೆಂದಾತರುಣಿ ಕರಂ ತೆಗೆದು ತೆಗೆದು ಬೆಱಗಾಗಿರ್ದಳ್
ಮಿಗೆ ದಟ್ಟಯ್ಸಿದ ಚಂದ್ರಿಕೆಸೊಗಯಿಸೆ ಕಂಡೋರ್ವ ಮುಗ್ಧೆ ದುಗ್ಧವಿದೆಂದೆಂದಗಲದೆ ಬದ್ಧಾಂಜಳಿಯಿಂಮೊಗೆ ಮೊಗೆದಾ ಬಯಲನೀಂಟಿ ಬಳಲುತ್ತಿರ್ದಳ್
ವ. ಅದಲ್ಲದೆಯುಂ ಮತ್ತಮೊಂದೆಡೆಯೊಳೊರ್ವ ಮುಗ್ಧ ಮನೋವಲ್ಲಭಂ ಬಿನದದಿಂ ಬನಕ್ಕೆ ಪೋಗೆ ಸೈರಿಸಲಾಱದಿರ್ಪಲ್ಲಿ
ಮುಗುಳೊಳ್ ಕಿಡಿ ಬೆಳ್ದಿಂಗಳೊಳಗೆ ದಳ್ಳುರಿ ಪೂವಿನೊಳ್ ಪುಗುಳ್ ಮೂಡುವವೋಲ್ಮಿಗೆ ಮುಗ್ಧೆಯೊಳತಿವಿರಹಂನೆಗೆದುದು ಮತ್ತೊರ್ವರಱಿಯರಂತಿಂತುಸುರಳ್
ಒಳಗಣ್ಗಂ ಪೊಱಗಣ್ಗಂಬಳಲುತ್ತೆಡೆಯಾಡುವಳ್ ಕರಂ ಬಿಸು ಸುಯ್ವಳ್ಮುಳಿವಳ್ ತನ್ನೊಳ್ ತಾನೇತಿಳಿವಳ್ ಕಳೆಗುಂದುವಳ್ ಕನಲ್ವಳ್ ಕಾಯ್ವಳ್
ಒಳಗೊಳಗೆ ಬಳೆ ಬಳೆದು ಘಟದೊಳಗಣ ದೀಪ್ತಿಯವೊಲಿರ್ಪ ಘನವಿರಹಮನಂತೊಳಕೊಂಡು ನುಡಿಯಲಱಿಯದೆಕಳೆಗುಂದಿದ ಚಂದ್ರನಂತೆ ಕರಗುತ್ತಿರ್ದಳ್
ಇರೆ ಹರಣಂ ನಡೆತರ್ಪಂತಿರೆ ವಲ್ಲಭನಲ್ಲಿ ಬರೆ ಸರಾಗೋತ್ಸವದಿಂಕರೆದಿದಿರ್ಗೊಂಡಿರದದಿರ್ಗೊಂಡೆರೆದಿದಿರ್ಗೊಂಡಪ್ಪಿಯಪ್ಪಿಯರಲುತ್ತಿರ್ದಳ್
ಭರದಿಂ ಬಂದಚ್ಚಳಿಯದೆಸಿರಿಮಂಚದ ಮೇಲೆ ಲೀಲೆ ಮಿಕ್ಕಾದರದಿಂತರದಿಂ ಪುಳಕಂ ನೆಗೆಯುತ್ತಿರೆ ಸುರತಾಂಬುಧಿಯ ಸುಧೆಯ ಸುಳಿಯೊಳಗಿರ್ದರ್
ಮನವಲರೆ ಮುಖವಲರೆ ಲೋಚನವಲರೆ ಕಪೋಲವಲರೆ ಕಂಠವಲರೆ ಸುಯ್ಯನುವಲರೆ ತನುವಲರೆ ಮಿಕ್ಕನುಭವಸುಖವಲರೆ ಸುರತಸುಖದೊಳಗಿರ್ದರ್
ವ. ಆ ಸಮಯದೊಳ್
ಪುದಿದಾಲಿಂಗನದೊಳಗಾವುದನಾವುದು ಸೋಂಕಿತದೆ ಮುಖೋತ್ಸವಮದೆ ಕಾಮದಮದೆ ಮದನವಿಲಾಸಾಸ್ಪದಮದೆ ಸರ್ವಾಂಗ ಹರ್ಷಮದೆ ಸಮಯೋಗಂ
ವ. ಇಂತು ಸಮಾನರಾಗಸಂಭೂತ ಸುಖಮುಖದೊಳಿರ್ದು ಭರಿತಮಾದ ಸುರತಶ್ರಾಂತಿಯಿಂ ಪೊಱಪೊಣ್ಮಿದ ಸುಖಸ್ವೇದಬಿಂದುಗಳನಾಱಿಸಲೆಂದು ಮೀಱಿ ಬಂದು ನಿಜನಿಳಯ ವೇದಿಕಾಮಧ್ಯದೊಳಿರ್ದ ಮುಗ್ಧೆಯರಂ ಗಿರಿಪತಿಗೆ ನಾಗರಿಕಂ ತೋಱುತ್ತುಂ ಬರೆವರೆ ಮುಂದೊಂದೆಡೆಯೊಳೊರ್ವ ಮುಗ್ಧೆ ವಲ್ಲಭನೊಳ್ ಮುಳಿದಂತೆ ಮಱೆದು ನುಡಿಯದಿರ್ಪಲ್ಲಿ ತತ್ಪ್ರಿಯನಿಂತೆಂದಂ
ಮುಗ್ಧೇ ಕೈರವನೇತ್ರೆ ವಿದಗ್ಧೆಯವೋಲ್ ಮುಳಿಸನಾಂತೊಡಾನೆಂತಿರ್ಪೆಂದಗ್ಧಾಂತರಂಗನಾದೆಂದುಗ್ಧಂ ವಿಷಮಾದೊಡೇನನೆಂದಪೆನಿಳೆಯೊಳ್
ವ. ಎಂದು ನುಡಿದು ಸುಖದೊಳಿರೆ ಮತ್ತಮೊಂದೆಡೆಯೊಳ್
ಬಳೆದೊಡಿಸಲೆಂದು ಸುದತಿಯಕೆಳೆಯನದೊರ್ವಂ ಕರಕ್ಕೆ ಕೆಯ್ನೀಡೆ ಸುಖೋಜ್ಜ್ವಳೆಯ ಶಶಿಮುಖಿಯ ಚಿತ್ತಂಗೊಳಿಸುವ ಸಖಿ ಬೇಡ ಬೇಡವೆನುತುಂ ನುಡಿದಳ್
ಪರಿರಂಭಾರಂಭಣದಾತುರಸಮಯದೊಳಂ ಮನೋಹರ ವ್ಯಾಜದೊಳಂವಿರಹದೊಳಂ ತನ್ನಿನಿಯಂಬರೆ ಸುಖದೊಳಗಬಲೆಗೆಂತು ನಿಲ್ವುವು ಬಳೆಗಳ್
ವ. ಎಂದಿಂತು ನುಡಿವ ಸರಸೋಕ್ತಿಗಳಂ ಕೇಳುತ್ತುಂ ಬರೆವರೆ ಮುಂದೊಂದೆಡೆಯೊಳೊರ್ವ ಮಧ್ಯಮನಾಯಕಿಯ ವಿರಹಾತಿಶಯಮಂ ಪ್ರೇಮಸಖಿ ತನ್ನ ಕೆಳದಿಗೆ ಪೇಳತ್ತುಮಿರ್ದಳದಂತೆಂದೊಡೆ,
ಅಸವಸದಿಂದಿನನುಳಿದೊಡೆದೆಸೆ ಕಾವುಳ ಮಸಗಿ ಮಾನಿನಿಗೆ ಮಧು ಮಱುಕಂಸಸಿ ಬಿಸಿ ಕಾವಂ ದಾವಂಬಿಸಜಂ ಬಿಸಮನಿಲನನಲನೆನಿಸಿತ್ತಾಗಳ್
ವ. ಮತ್ತಮಲ್ಲದೆ,
ವಿರಹದೊಳೀಕೆಗಕ್ಕ ಬಿಸಜಂ ವಿಷಜಂ ಹಿಮರೋಚಿ ಸೂಚಿ ಪಾದರಿ ದರಿ ಮಾವು ಪಾವು ಕುಮುದಂ ಕುಮುದಂ ತನಿಗರ್ಬು ಮರ್ಬು ಕತ್ತುರಿಯುರಿ ಗಾಳಿ ದಾಳಿ ಕುಸುಮಂ ವಿಷಮಂ ಪೊಸಬಾಳೆ ಬಾಳ್ ವನೋತ್ಕರವುರಿ ಹಂಸೆ ಹಿಂಸೆ ಮೊರೆವಾಱಡಿಯಾಱಡಿ ತಿಂಗಳಿಂಗಳಂ
ವ. ಮತ್ತಮದಲ್ಲದೆ
ಅತಿವಿರಹದೊಳೀ ಲಲನೆಗೆಮತಿ ದುರ್ಮತಿ ವೀಣೆ ಸಾಣೆ ಸೋಮಂ ಭೀಮಂಲತೆಯಸಿಲತೆ ಸಂಪಗೆ ಪಗೆನುತ ಕೀರಂ ಘೋರಮನ್ಯಪುಷ್ಟಮನಿಷ್ಟಂ
ವ. ಎಂದು ನುಡಿವಾಗಳ್
ಬಿಸಿಲ ಚಕೋರಿಗೆ ಚಂದ್ರಂಪಸಿದ ಶುಕಂಗಿದಿರೊಳಮೃತಫಳಮಿದಿರ್ವರ್ಪಂ-ತಸಮಾನ ಸುಧಾಶೀಲಂರಸಮಯ ಸುಖಜಲಧಿ ವಲ್ಲಭಂ ನಡೆತಂದಂ
ನಡೆತರೆ ಕಂಡು ಜೀವಮಿದಿರ್ವಂದವೊಲೊರ್ವರನೊರ್ವರೀಕ್ಷಿಸುತ್ತಡಿಯಿಡುತೊಂದಿ ಮುಂದುವರಿವಿಂದ್ರಿಯದಿಂ ನಡೆ ಮುಂಚಿ ಮೀಱಿ ಬಂದೆಡೆಗುಡದಪ್ಪಿಯಪ್ಪಿ ನಿರತಂ ಸುರತಾಬ್ಧಿಯೊಳಾಳುತೇಳುತುಂಕಡೆಮೊದಲಿಲ್ಲದೆಳ್ತರದ ಕಾಮಿಗಳಿರ್ದರನೂನ ಸಂಗದೊಳ್
ಘನಗಾಢಾಲಿಂಗನಂ ಚಾಪಳಗಳಮತಿದೈನ್ಯೋಕ್ತಿಯುಕ್ತಾಧರಂ ಚುಂ-ಬನಸೀತ್ಕಾರಂ ಸ್ಮಿತಾಸ್ಯಂ ಮುಕುಳಿತನಯನಂ ಲಾಸ್ಯನೀಲಾಳಕಂ ಕಂ-ಪನಹಸ್ತಂ ಸ್ವೇದಗಂಡಂ ಪುಳಕಭರಿತಗಾತ್ರಂ ಸುಖಶ್ವಾಸಮಾನಂ-ದನಿವಾಸಂ ಲೀನಚಿತ್ತಂ ಗುರುತರ ಸುರತಂ ಕೂಡೆ ಕೂಡುತ್ತುಮಿರ್ದರ್
ನಯನಝಷಾವಳಿಯಿಂದತಿಶಯಾಧರೋದ್ಯತ್ ಪ್ರವಾಳದಿಂದಂ ದ್ವಿಜಸಂಚಯ ಮೌಕ್ತಿಕದಿಂ ಸುರತಾಬ್ಧಿಯದಂತಿರೆ ತೆರೆಗಳಂತೆ ಕಾದಲರಿರ್ದರ್
ವ. ಅಂತು ಸುರತಸುಖದಿಂ ನಲಿನಲಿದು ನರ್ತಿಸುತ್ತುಂ ಮತ್ತವಾರಣದ ಮೇಲಿರ್ಪ ಮಧ್ಯಮನಾಯಕಿಯರಂ ನಾಗರಿಕಂ ನಗರಾಜಂಗೆ ತೋಱುತ್ತುಂ ನಡೆತರೆ ಮುಂದೊಂದೆಡೆಯೊಳೊರ್ವ ವಿದಗ್ಧೆ ವಿರಹತಾಪದಿಂ ನಿಲಲಾಱದೆ ನಿಜಸಖಿಗೆ ಬಿಸುಸುಯ್ಯುತ್ತುಮಿಂತೆಂದಳ್,
ಸಕಳಂಕಂ ಶಶಿಕಾಮನೀಶನುರಿಗಣ್ಣಿಂ ಬೆಂದವಂ ವಾಯು ಸರ್ಪಕದಂಬಾಶನಶೇಷವಂಗಜನ ಮಿತ್ರಂ ರಾಗಿ ಮತ್ತಾಳಿಗಳ್ವಿಕಳಂಗಳ್ ಪಿಕನನ್ಯಪುಷ್ಪನಿವಱೊಳ್ ಸೌಜನ್ಯಮಂ ಮಾಳ್ಪುದಕ್ಕ ಕರಂ ಕಷ್ಟಮೆನುತ್ತೆ ಕಾಂತೆ ನುಡಿದಳ್ ಸಾಲಿಟ್ಟ ಸಂತಾಪದಿಂ
ವ. ಎಂದು ನುಡಿದ ನಿರ್ವೇದೋಕ್ತಿಗಳಂ ಕೇಳಲಾಱದೆ ಪರಮಮಿತ್ರೆ ಪರಿದು ಪೋಗಿ ಮನೋವಲ್ಲಭನನೊಡಗೊಂಡು ಬರೆ ಬಂದು ನಿಂದು ಸಾಪರಾಧಿ ಸಮೀಪಸ್ಥನಾಗಿ ಕುಳ್ಳಿರ್ಪಲ್ಲಿ,
ಎಱಗುಗುಮೆಂದು ಮೇಲುದಿನೊಳಂಘ್ರಿಗಳಂ ಮಱೆಮಾಡುತುಂ ಸ್ಮಿತಂಪೊಱಮಡೆ ಮತ್ತಮೊಂದು ನೆವದಿಂದಮೆ ಮುಚ್ಚುತುಮೆಯ್ದೆ ನೋಟಮಂಮಱೆಯಿಸಿ ನೋಡುತುಂ ನಡಿಯಲುತ್ತರಮಂ ಸಖಿಗೀಯುತಿಂತು ತನ್ನೆಱೆಯನೊಳೊಲ್ದು ಕೋಪಿಸುವ ಕಾಮಿನಿಗೀ ಮುಳಿಸೊಂದು ಸಾಲದೇ
ವ. ಇಂತು ಮುಳಿದ ವಿದಗ್ಧನಾಯಕಿಯ ಮುಳಿಸಂ ತಿಳಿಪಿ ಸಜ್ಜೆವನೆಯ ಸಿರಿಮಂಚದ ಹಂಸತೂಳದಡಕಿಲ್ವಾಸಿನೊಳ್ ಭರದಿಂ ನೆರೆವಾಗಳ್
ಸೆಳೆಮಂಚದ ಕಳನಿನದಂಬಳಸಿದ ಶಕುನಿಗಳ ನುಣ್ಚರಂ ನೇವುರದುಜ್ಜ್ವಳನಾದಂ ಲಲನಾಗಳಗಳಿತಧ್ವನಿ ಬೆರಸಿ ಬಳೆದು ನೆರೆಪಿದುದಾಗಳ್
ಕರಘಾತಂ ಸೌಖ್ಯಜಾತಂ ಕಳರಣಿತಸಮೇತಂ ಲಸತ್ಕರ್ಣಪೂತಂಸ್ಮರಯಂತ್ರಂ ಸಾರತಂತ್ರಂ ಘನಗಳರವಮಂತ್ರಂ ಪ್ರಮೋದಸ್ವತಂತ್ರಂಸ್ಫುರಿತಾಂಗಂ ಸ್ಟೇದಸಂಗಂ ಸುರತರಸತರಂಗಂ ಪ್ರರೋಮಾಂಚಲಿಂಗಂಗುರುನೇತ್ರಂ ಬಾಷ್ಪಪಾತ್ರಂ ಸುಖರವಮುದಿತಶ್ರೋತ್ರಮಾನಂದಗಾತ್ರಂ
ವ. ಅಂತುಮಲ್ಲದೆ
ಗಳರವದಿಂದಪ್ಪಿಂ ಕೋಮಳರೂಪಿಂದಧರರಸದೆ ಸುಯ್ಗಂಪಿಂದಾಗಳೆ ಕಿವಿ ಮೆಯ್ ಕಣ್ ನಾಲಗೆವಿಳಸನ್ನಾಸಿಕಮನಲ್ಲಿ ತಣಿಪುತ್ತಿರ್ದಳ್
ವ. ಮತ್ತಮೊಂದೆಡೆಯೊಳೊರ್ವಳ್ ತನ್ನ ಮಗಳ ಸೌಭಾಗ್ಯಮಂ ಪ್ರೇಮಸಖಿಗೆ ಪೇಳುತ್ತುಮಿರ್ದಳದೆಂತೆಂದೊಡೆ,
ಮಾಳತಿಯೊಳ್ ಬಂಡುಂಡ ಮದಾಳಿಯನಳಿಮಾಲೆ ಎಱಗಿ ಬಂಡುಣ್ಬವೊಲೀನೀಳಾಳಕಿಯೊಳ್ ಬೆರೆಸಿದಖೇಳನ ವಿಟರೆಯ್ದಿ ಸೋಂಕಿ ಸುಖಿಯಾಗಿರ್ಪರ್
ವ. ಅಂತುಮಲ್ಲದೆ
ದರಹಾಸಶ್ರೀಗೆ ಬೆಳ್ದಿಂಗಳ ಸಿರಿ ಸರಿಯಲ್ಲಂ ಕಟಾಕ್ಷೇಕ್ಷಣಕ್ಕಾಸ್ಮರಬಾಣಂ ಸಾಟಿಯಲ್ಲಂ ಮಿಱುಗುವ ಕುಡುವುರ್ವಿಂಗೆ ತಾನಿಕ್ಷುಚಾಪಂದೊರೆಯಲ್ಲಂ ಚಕ್ರವಾಕಂ ನೆಲೆಮೊಲೆಗೆಣೆಯಲ್ಲಂ ಕಳಂಕಪ್ರಭೂತಂಪರಿದಗ್ಧಂ ತದ್ವಿಯೋಗಾಕುಳನಬಲೆಯ ರೂಪಿಂಗದೆಂತೊಂದುಮಾಳ್ಪೆಂ
ವ. ಎಂದು ಬಣ್ಣಿಸುತ್ತಿರ್ಪಿನಂ ಇತ್ತಲ್ ಮತ್ತೊಂದೆಡೆಯೊಳೊರ್ವ ವಿದಗ್ಧ ವಿಟಂ ವಿರಹ ಪರಿತಾಪದಿಂ ನಿಲಲಾಱದೆ ನಿಜಸಖಿಗಿಂತೆಂದಂ,
ಎರೆವೆಂ ಮತ್ಸಖಿ ತಂದುಕೂಡು ಗುಣವೃಂದಾರಾಮೆಯಂ ರಾಮೆಯಂವರಪುಷ್ಪಾಯುಧಚಾಪಸಂಯುತಮೆನಿಪ್ಪಾ ನಾರಿಯಂ ನಾರಿಯಂಸ್ಮರನಾಳೋಚನೆಗಾಪ್ತೆಯಾಗಿ ನೆಲೆಸಿರ್ಪಾ ಕಾಂತೆಯಂ ಕಾಂತೆಯಂತರುಣೀ ಸಂಘಶಿರೋಮಣಿ ಪ್ರಬಳ ಕೀರ್ತ್ಯಾಶಾಂತೆಯಂ ಶಾಂತೆಯಂ
ವ. ಎಂದಿಂತು ಬಾಯಳಿವ ಮಿತ್ರನಂ ನಲ್ಲಳೊಳ್ ಕೂಡಿ ಸಮಸುಖ ದೊಳಿರಿಸೆ, ಮತ್ತಮೊಂದೆಡೆಯೊಳ್ ವಿಟಂಗತ್ಯಾಸಕ್ತೆಯಾದ ಮಗಳ್ಗೆ ಮಾತೆ ಬುದ್ಧಿವೇಳ್ವಲ್ಲಿ.
ಮಗಳೆ ಬಿಡಾತನಂ ಬಿಡೆನವಂ ಧನಮಂ ಪಿರಿದೀಯನಿತ್ತುದೇಮಿಗೆ ಪಿರಿದೆಯ್ದದೆಯ್ದುವುದು ಸಾಲದು, ಸಾಲ್ವುದು ಬೇಡ ಬೇಳ್ವುದೊತ್ತೆಗೆ ನಡೆ ಊಹು ಮೂರ್ಖತೆಯ ಮೂರ್ಖತೆ ಕೆಟ್ಟಪೆ ಕೆಟ್ಟಪೆಂ ಕೆಲಂತೆಗಳ್ದೆಯ ಹೈ ಕರಂ ತೆಗಳ್ದೆಯೆಂದೆನೆ ಪುತ್ರಿಯನಟ್ಟಿ ಮೋದಿದಳ್
ವ. ಅಲ್ಲದೆಯುಂ ಮತ್ತಮೊಂದೆಡೆಯೊಳೊರ್ವ ವೃದ್ಧವೇಶ್ಯಾಂಗನೆ ತನ್ನ ನೆರೆಮನೆಯ ಬಾಲಮುಗ್ಧೆಯ ಸೊಬಗಂ ಕಂಡು ಅಸೂಯೆಗೊಂಡು ತನ್ನೊಳಿಂತೆಂದಳ್,
ಮೊಲೆ ಮುಗುಳೊತ್ತವಕ್ಷಿ ಚಪಳತ್ವಮನೆಯ್ದವು ಬಾಸೆ ಬಾರದುಜ್ಜ್ವಳಿಸದು ಭಾಳಲೇಖೆ ವದನಂ ಮದವೇಱದು ನೋಡೆ ತಳ್ತು ಕಣ್ಗೊಳಿಸದು ಮೇಲುದಗ್ಗಳಿಪ ನೋಟಮಗುರ್ವಿಪ ಮಧ್ಯಮೊಪ್ಪುವೀತಿಳಕಮನೂನಗರ್ವಮೊಲವಿಂ ನೆಲೆಸಿರ್ಪುದು ಚೋದ್ಯಮಲ್ಲವೇ
ವ. ಎಂದು ತನ್ನೊಳ್ ತಾನೇ ಜಿನುಂಗಿ ನುಡಿವ ಮುದುಪಾಱಿಯಂ ನೋಡುತುಂ ನಗುತುಂ ಬರೆ ಮುಂದೊಂದೆಡೆಯೊಳೊರ್ವ ಲಲನೆ ತನ್ನೋಪ ನಿಂದಾದ ಬೇಸಱಂ ನಿಜಸಖಿಗೆ ಪೇಳುತಿರ್ದಳದೆಂತೆಂದೊಡೆ,
ಆದರಿಪಂತೆ ಸಾರ್ವನುಪಚಾರಮನಾಡುವನಿತ್ತುದಂ ಸಮಂತೋದುವನಾವಗಂ ಕಟಕಿಯಂ ನುಡಿವಂ ನಗುವಂತೆ ಕೋಪಿಪಂಸಾಧಿಸುವಂ ದಿಟಂ ಪುರುಡಿಪಂತೆ ನೆಗಳ್ಚುವನಟ್ಟೆ ಪತ್ತುವಂಪೋದೊಡೆ ಪೋಗನಿರ್ದೊಡಿರನೀ ಶನಿಯಂ ಸಖಿಯೆಂತು ನೀಗುವೆಂ
ವ. ಎಂದು ನುಡಿದ ನಿರಾಶಾವಚನಂಗಳಂ ಕೇಳುತ್ತುಂ ಬರೆವರೆ ಮುಂದೊಂದೆಡೆಯೊಳನೇಕ ನವೀನರತ್ನಮಯದರ್ಪಣಕನಕಕಳಶವಿಚಿತ್ರಪತ್ರ ಪರಿಶೋಭಿತಮಾಗಿ ನವೀನಕ್ರೀಡೆ ತವಿಲಿಲ್ಲದ ನವಿಲುಯ್ಯಲ ಮುಂದೊರ್ವ ವಿದಗ್ಧವನಿತೆ ಸಖೀಜನಂಬೆರಸು ಬೆಳ್ದಿಂಗಳನಿದಿರ್ಗೊಂಡು ವಸಂತಂಗೆ ಪೊಸತಳಿ ರ್ಗಳ ಪಸೆಯಂ ತಂದಿಕ್ಕಿ ಕಾಮಂಗೆ ಸಣ್ಣನನೆಗಳ ಪುಷ್ಪಾಂಜಲಿಯನಿತ್ತು ರತಿದೇವಿಗೆ ಮೆಯ್ಯಿಕ್ಕಿ ಚಂದ್ರಂಗೆ ಕುಸುಮರಸದರ್ಘ್ಯಮಂ ಕೊಟ್ಟು ಗಿಳಿ ಹಂಸೆ ಕೋಗಿಲೆ ಗಳನುಚಿತಾಹಾರದಿಂ ತಣಿಪಿ ಮಂದಯ್ಸಿದ ಸತಿಯರ ಸಂದಣಿಯೊಳಾಂದೋಳ ಮನೇಱಿದಾಗಳ್.
ಏಱಿದ ಮಣೆಯುದಯನಗಂತೋಱಿದ ಮುಖಬಿಂಬಮಿಂದು ಬಿಂಬಮಪಾಂಗಂಮೀಱಿದ ಚಂದ್ರಿಕೆಯೆನೆ ಕಳೆಯೇಱಿದ ಪಡಿಚಂದ್ರನಂತೆ ಸೌಂದರಿಯೆಸೆದಳ್
ನೋಡುವನೇಕ ಸದ್ವಿಟಜನಂಗಳ ಪೆಣ್ಗಳ ಕಣ್ಗಳಾಡೆ ಕೊಂಡಾಡುವ ತತ್ಸಖೀಕುಲದ ಚಾಗದ ಭೋಗದ ರಾಗಮಾಡೆ ತೂಗಾಡುವ ಬಾಲಕೀವ್ರಜದ ಕಂಕಣ ಝಂಕೃತಿ ಭೋಂಕನಾಡೆ ತಾನಾಡಿದಳುಯ್ಯಲಂ ಮುಖಶಶಿಪ್ರಭೆ ಮುಚ್ಚಿ ಮುಸುಂಕೆ ಚಂದ್ರನಂ
ವ. ಇಂತಾಡುವ ನವೀನಾಂದೋಳನಕ್ರೀಡೆ ಕಡೆಯಾದನೇಕಮದನ ಮಹೋತ್ಸಾಹಂಗಳಂ ನೋಡುತ್ತುಂ ಪಣ್ಯಾಂಗನಾವೀಥೀವಿರಸಮಂ ಕಳೆದು ಬಂದು ರಾಜನಿಳಯದ್ವಾರದ ಮುಂದೆ ನಿಂದಿರೆ ನಾಗರಿಕನಿಂತೆಂದಂ,
ದೀಪ್ತಿಯನುಳಿದುವು ಭಗಣಂಸುಪ್ತಜನಂ ನಿದ್ರೆದಿಳಿದುದಿದೆ ಕೋಕಂ ತನ್ನಾಪ್ತನನಱಸುತ್ತಿರುಳ ಸಮಾಪ್ತಿ ಕರಂ ಹತ್ತೆ ಸಾರ್ದುದಚಳಾಧೀಶಾ
ಬರವಂ ಬಯಸುತೆ ಕುಳಿರೆಂಬ ರವಂ ಮಿಗೆ ಪತ್ತೆ ಸಾರುತಿಂತಿವೆ ಚಕ್ರಂಅರುಣೋದಯಮಂ ಸೂಚಿಸುತರುಣೋದಯಮಿತ್ತಲಾಗುತಿದೆ ಗಿರಿರಾಜಾ
ವ. ಎಂದು ನುಡಿವ ನಾಗರಿಕನ ಬಿನ್ನಪಮಂ ಕೇಳ್ದು ಅರಮನೆಯಂ ಪೊಕ್ಕು ಗಿರಿರಾಜಂ ನಿರ್ಮಳೀಕೃತಕರಚರಣನುಂ ನವ್ಯವಸ್ತುಪರಿಶೋಭಿತನುಂ ವಿಭೂತಿ ವಿಳಸಿತಸರ್ವಾಂಗನುಂ ರುದ್ರಾಕ್ಷಾಲಂಕೃತಶರೀರನುಂ ಶಿವಲಿಂಗಪೂಜಾವಿರಚಿತ ಹಸ್ತಕಮಳನುಂ ತತ್ಪಾದವಂದನಾಸಕ್ತನುಂ ಪಾದೋದಕಪ್ರಸಾದಸಂತುಷ್ಟ ಹೃದಯನುಂ ಕರ್ಪೂರತಾಂಬೂಲಮುಖವಳಯನುಮಾಗಿ ಸಭಾನಿಳಯಕ್ಕೆ ನಡೆತಂದು ನಾರದಮುನಿಯಂ ನಾಕಲೋಕಕ್ಕೆ ಕಳುಪಿ, ಪೂರ್ವಾಚಳಮನೇಱಿದ ಭಾಸ್ಕರನಂತೆ ಸಿಂಹವಿಷ್ಟರೋಪವಿಷ್ಟನಾಗಿರ್ದನಾ ಪ್ರಸ್ತಾವದೊಳ್,
ಪರಮ ಸ್ವಾಮಿ ಜಟಾಧರಂ ಶಶಿಧರಂ ಗಂಗಾಧರಂ ಕಾಲಸಂಹರನ ಜ್ಞಾನಹರಂ ಪುರತ್ರಯಹರಂ ಸೌಖ್ಯಕರಂ ಶಂಭು ಶಂಕರನಾನಂದಕರಂ ಸಮಂತೆನಗೆ ಭಕ್ತಿಜ್ಞಾನ ವೈರಾಗ್ಯಮಂಕರುಣಂಗೆಯ್ಗೊಲವಿಂದೆ ಹಂಪೆಯ ವಿರೂಪಾಕ್ಷಂ ಶಿವಾವಲ್ಲಭಂ
ಇದು ಸಮಸ್ತ ಸುರಾಸುರಮಕುಟ ಖಚಿತ ದಿನಕರಕರಾಧಿಕ್ಯ ಮಾಣಿಕ್ಯಪ್ರಭಾಪುಂಜರಂಜಿತಚರಣ ನೆನಿಪ ಪಂಪಾವಿರೂಪಾಕ್ಷ ಶ್ರೀ ಪಾದಕಮಲ ಮಕರಂದ ಮಧುಕರಾಯಮಾಣ ಸತ್ಕವೀಶ್ವರ ಹಂಪೆಯ ಹರಿಹರದೇವ ವಿರಚಿತಮಪ್ಪ ಶ್ರೀ ಗಿರಿಜಾಕಲ್ಯಾಣ ಮಹಾಪ್ರಬಂಧದೊಳ್ ಪಾರ್ವತೀಯೌವನ ರಾತ್ರಿವಿಹಾರ ವರ್ಣನಂ ಚತುರ್ಥಾಶ್ವಾಸಂ


