EN | KA

II

Hadibadeya Dharma

ಮಂಗಳಗುಣಗಣನಿಧಿಗೆ ನಿರ್ಮಲನಿಗು
ತ್ತುಂಗ ಮಹಿಮಗೆ ಮಾಧವಗೆ
ಸಂಗತಜನಸರ್ವಫಲದಗೆ ಪಶ್ಚಿಮ
ರಂಗಧಾಮನಿಗೆರಗುವೆನು

ಇಂಗೋಲನ ತಾಯಿಗಿಂಗದಿರನ ತಂಗಿ
ಗಿಂಗಡಲಣುಗಿಗಿಂದಿರೆಗೆ
ರಂಗಧಾಮನ ರಾಣಿಗೆ ರಾರಾಜಿಪ
ರಂಗನಾಯಕಿಗೆರಗುವೆನು

ಪತಿಯೊಳು ಪರಭಕ್ತಿಗೈವುದು ಲಕ್ಷ್ಮೀ
ಪತಿಯಾಣತಿಯೆಂದು ಬಗೆದು
ಪತಿಯನೆ ಪರದೇವತೆಯೆಂದು ಭಜಿಸುವ
ಸತಿಯ ಸನ್ನುತಿಸುವೆನು

ಪತಿಭಕ್ತಿಯೊಂದು ಶ್ರೀಪತಿಭಕ್ತಿಯೊಂದಿದ
ರತಿಶಯಕಿನ್ನೆಣೆಯಿಲ್ಲ
ಮತಭೇದವುಂಟು ಮಾಧವಭಕ್ತಿಗಿದಕಾ
ಮತಭೇದವೂ ಮಗುಳಿಲ್ಲ

ಆದರದೊಡನಂತರಂಗದೊಳಾಣ್ಮನ
ಪಾದವ ಭಜಿಪ ಭಾವೆಯರ
ಪಾದಧೂಳಿಗಳಿಂದೆ ಪಾವನವಹುದೀ
ಮೇದಿನಿಯೆನೆ ಮಿಕ್ಕುದೇನು

ಪತಿತರ ಪಾವನವೆನಿಸುವ ಬಲ್ಮೆಯೊ
ಳತಿಶಯವಡೆದ ತೀರ್ಥಗಳು
ಸತಿಯರ ಪಾದಸಂಸ್ಪರ್ಶದಿಂ ತಮ್ಮ ದು
ಷ್ಕೃತವ ಕಳೆಯಲೆಳಸುವುವು

ತಡೆಯದೆಲ್ಲೆಡೆಯೊಳು ತಾನು ಬೀಸುವೆನೀ
ಯೆಡರನೇಳಿಪೆನೆಂದೆಲರು
ಸಡಗರದಿಂದ ಸಾಧ್ವಿಯರಡಿಸೋಂಕಿದ
ಪುಡಿಯ ಮುಡಿಯೊಳಾನುವುದು

ತೇಜಿಗಳೆಡಹದೆ ತೇರುಡಿಯದೆ ತ
ನ್ನೋಜೆಯುಡುಗದೆ ಭಾಸ್ಕರನು
ಈ ಜಾತಿಸಾಧ್ವಿಯರೆಸಕದೇಳಿಗೆಯಿಂದ
ತೇಜವಡೆದು ತಿರುಗುವನು

ಮಳೆಗರೆವುದು ಬೆಳೆ ಪೆರ್ಚುವುದಿಳೆ ತಳ
ಕಿಳಿದು ಪೋಗಲದೆ ತಡೆದಿಹುದು
ಪಳಿವಿಲ್ಲದ ಪತಿವ್ರತೆಯರ ನಡತೆಯ
ಬಳದೊಳೆಂಬರು ಬಲ್ಲವರು

ಪರಮ ಪತಿವ್ರತೆಯರ ಪಾದದರ್ಶನ
ದೊರೆಕೊಂಡುದೆ ಪುಣ್ಯದಿವಸ
ಪರದಿರವನು ಬಲ್ಲವರೆ ಭೂಪ್ರದಕ್ಷಿಣ
ದಿರವನ್ನಿನ್ನೇವಣ್ಣಿಪೆನು

೧೦

ತನ್ನಿನಿಯನ ತಾಯ್‌ ತಂದೆಯ ಕುಲಗಳ
ನುನ್ನತಿಯಗೈದೊಪ್ಪುವಡೆದು
ಮನ್ನಣೆವೆತ್ತ ಸಾಧ್ವಿಯರ ಮಹಿಮೆಗಳ
ಸನ್ನುತಿಸುವಡೆನ್ನಳವೆ

೧೧

ಈ ಸುಚರಿತ್ರೆಯರೆಸಗಿದನ್ನವನುಣ
ಲಾಸೆವಡುವರು ಪಿತೃಗಳು
ಆ ಸುಖ ದೊರೆಕೊಂಡೊಡವರಿಗಪ್ಪುದು ತೃಪ್ತಿ
ಸಾಸಿರ ಬರಿಸ ಪರ್ಯಂತ

೧೨

ಸತಿಯರ ಕೈ ಸೋಂಕಿದನ್ನವ ಸವಿವುದ
ರತಿಶಯವಾಡಲೆನ್ನಳವೆ
ಅತಿಕೃಚ್ಛ್ರಚಾಂದ್ರಾಯಣ ಸಾಂತಪನಾದಿ
ವ್ರತನಿಯಮದ ಪವಣಲ್ಲ

೧೩

ಇವರಿದ್ದೆಡೆ ಪುಣ್ಯತೀರ್ಥ ಪುಣ್ಯಕ್ಷೇತ್ರ
ವಿವರಿದ್ದ ಮನೆ ದೇವಭವನ
ಇವರೆ ಪ್ರತ್ಯಕ್ಷ ದೇವತೆಯರು ದಿಟವೆಂಟು
ವಿವರಿಸುವರು ವೇದವಿದರು

೧೪

ಉದಯಕಾಲದೊಳೆದ್ದೊಲಿದಷ್ಟದೈವದ
ಪದಗಳ ಪಾಡುವಂದದೊಳು
ಪದಿಬದೆಯರ ಪೆಸರ್‌ಗೊಂಡು ಪೊಗಳ್ವುದು
ವಿದಿತವೈಸಲೆ ವೈದಿಕರಿಗೆ

೧೫

ಪತಿಯ ಪಾದಾಬ್ಜಭಕ್ತಿಯೆ ತಮಗಿಹಪರ
ಗತಿಯೆಂದು ಕಡುವಿಡಿದಿರ್ಪ
ಸತಿರಿರ್ಪೆಡೆಯೊಳು ಕೃತಯುಗಮೊಂದಲ್ಲ
ದಿತರಯುಗಕ್ಕಿಂಬಿಲ್ಲ

೧೬

ಪರಮ ಪತಿವ್ರತೆಯಿದ್ದ ಬಳಿಯೊಳಾ
ಸಿರಿರಾಣಿ ಸೇರಿ ಬಂದಿಹಳು
ಸರಸತಿ ಸಾವಿತ್ರಿ ಗಾಯತ್ರಿಯರುಮಾ
ಪರಿಸರದೊಳು ಬಳಸಿಹರು

೧೭

ಪಲವು ಸುಕೃತಮಿಂತು ಪರಿಣತಿವೆತ್ತುದೊ
ಕುಲದೇಳ್ಗೆ ಗುಂಪುಗೂಡಿದುದೊ
ಸಲೆ ಪರಿಶುದ್ಧಿ ಸಾಕಾರಮಾದುದೊ ಎನೆ
ಕುಲವಧು ಕುರುಹುಗೊಂಡಿಹಳು

೧೮

ಪತಿಭಕ್ತಿರಸಮಿಂತು ಬಲಿದುದೊ ಪರಿಶುದ್ಧ
ಮತಿಗಿಂತು ಮೈ ದೊರಕಿದುದೊ
ವ್ರತದೇಳ್ಗೆಯಿಂತು ಬಿತ್ತರವಡೆದುದೊ ಎನೆ
ಸತಿಯರು ಜಸವಡೆದಿಹರು

೧೯

ಜಗದೊಳುಪಾಂಸುಲೆಯರ ಚರಿತಕೆ ಸರಿ
ಮಿಗಿಲಿಲ್ಲ ಮಿಕ್ಕ ಧರ್ಮದೊಳು
ಬಗೆಯರಿತೆಸಗಬಲ್ಲವರಿಗೆಂದೆಂದಿಗೂ
ಮೊಗದೋರವು ಮೋಸಗಳು

೨೦

ಈ ಕಾಲವಾ ಕಾಲವೀ ದೇಶವಾ ದೇಶ
ವೀ ಕುಲವಾ ಕುಲವೆನ್ನದೆ
ಏಕರೀತಿಯೊಳೆಸಗುವ ಧರ್ಮಕಿದಕಿನ್ನು
ಲೋಕದೊಳೆಣೆ ಬೇರುಂಟೆ

೨೧

ಉಣದುಡದೊಡಲ ದಂಡಿಸುವಾಯಸವಿಲ್ಲ
ಪಣವ ವೆಚ್ಚಿಸುವ ಪಾಡಿಲ್ಲ
ಗುಣವಂತೆಯರೆಸಗುವ ಪತಿಶುಶ್ರೂಷೆ
ಗೆಣೆಯಹ ತಪವಿನ್ನೊಳವೆ

೨೨

ಪಲನಾಡಿಗೆ ಪರಿಪರಿದು ಬಳಲಿಯಲ್ಲಿ
ಪಲನೀರ ಮುಳುಗಿ ಮುಂಗೆಡದೆ
ನಲಿದೆಸಗುವ ನಲ್ವೆಂಡಿರ ನಡತೆಗೆ
ಪಲನೇಮಗಳು ಪಾಸಟಿಯೆ

೨೩

ಮನೆಯ ತೊರೆದು ಮನೆವಾಳ್ತೆಯನುಳಿದು ತ
ನ್ನನುಕೂಲದಾಸೆಯನಳಿದು
ಬನದೊಳು ಗೈವ ಬರಿಯ ತಪಗಳು ಕುಲ
ವನಿತೆಯರಿರವಿಗೆ ದೊರೆಯೆ

೨೪

ಮನೆಯೆ ಧರ್ಮಾಶ್ರಮ ಮನೆವಾಳ್ತೆಯೆ ಧರ್ಮ
ವಿನಿಯನೂಳಿಗ ದೇವಪೂಜೆ
ಮನನವಿವನ ನೆನೆವುದೆ ಸಾಧ್ವಿಯರಿಗೆ
ಮುನಿಸತಿಯರ ನೋಡಿಯೇನು

೨೫

ಇನಿಯನ ಸೇವೆಯೊಳೆಣೆಯಿಲ್ಲದ ಧರ್ಮ
ಮನೆವಾಳ್ತೆಯೊಳರ್ಥಕಾಮ
ಮನದನ್ನನೊಳು ಮಾಧವನ ಭಾವಿಸೆ ಮೋಕ್ಷ
ವೆನೆ ಸತಿಯರಿಗರಿದೇನು

೨೬

ಪಲವು ಧರ್ಮಂಗಳ ಬಳೆಯಿಪುದಾಯಾಸ
ಫಲವ ಭೋಗಿಪುದಾನಂದ
ಕುಲಸತಿಧರ್ಮವ ಕೂರ್ತೆಸಗುವುದಾ
ಫಲಭೋಗಕೆ ಪಾಟಿಯಲ್ತೆ

೨೭

ಕಡುನೇಮವಿಡಿದು ಕಕ್ಕಸಗೊಂಡು ಮುನಿವರ
ರೊಡರಿಸುವುಗ್ರತಪಗಳು
ಮಡದಿಯರಿನಿಯರ ಮನವರಿತೆಸಗುವ
ನಡತೆಗಳಿಗೆ ಪಡಿಯಲ್ಲ

೨೮

ಆ ರೂಢಿವೆತ್ತ ಮಹಾಭಾರತದೊಳ
ಗಾರಣ್ಯಕ ಪರ್ವದೊಳು
ನೂರತೊಂಬತ್ತೆಂಟನೆಯಧ್ಯಾಯದೊ
ಳಾರಯ್ಯೆ ಕಥೆಯೊಂದುಂಟು

೨೯

ಸಾಂಗ ವೇದವನೋದಿ ಸಕಲ ಧರ್ಮದ ತ
ತ್ವಂಗಳನರಿತಾಚರಿಸಿ
ತುಂಗ ಮಹಿಮೆವೆತ್ತು ದೋಷವಳಿದು ಮುನಿ
ಪುಂಗವನೊರ್ವನೆಸೆದನು

೩೦

ಮನೆಯೊಳು ಮರುಕವನುಳಿದು ತಪವಗೈದು
ಮನದಿ ವನವನನುಸರಿಸಿ
ತನುವ ದಂಡಿಸಿ ಘೋರ ತಪವನೆಸಗುತಲ್ಲಿ
ಮುನಿಮುಖ್ಯನೆನಿಸಿ ಮೆರೆದನು

೩೧

ಒಂದು ದಿವಸ ವೇದಮೋದುತ ಬೇಸಗೆ
ಯಿಂದ ಬಳೆದ ಬಿಸಿಲಿನೊಳು
ಬೆಂದುರೆ ಬೆಮರುತ ಬಿಸುಸುಯ್ಯುತ್ತಂದು
ನಿಂದನು ಮರದ ನೆಳಲೊಳು

೩೨

ಆ ಋಷಿವರನಂತಿರ್ಪ ವೇಳೆಯೊಳಾ
ಭೂರುಹದಗ್ರಶಾಖೆಯೊಳು
ಸೇರಿದ ಬಿಳುವಕ್ಕಿ ಚೀರುವ ದನಿ ಮಿಗೆ
ಕ್ರೂರವಾಗಿರೆ ಕೊನರಿದುದು

೩೩

ಆ ಪರಿ ದನಿ ಯಾವ ಬಳಿಯೊಳು ಪೊಣ್ಮಿದು
ದಾ ಪರಿಸರವನಾರೈದು
ಕೋಪವೆರಸಿ ಕೂರ್ತು ನೋಡೆ ತಾಪಸನಂ
ದಾ ಪಕ್ಕಿಗಸುವಡಗಿದುದು

೩೪

ಹರಣವಳಿದು ಧರೆಗುರುಳಿದ ಪಕ್ಕಿಯ
ಪರಿಯ ನಿಟ್ಟಿಸಿ ಪರಿತಪಿಸಿ
ಇರದೆ ತಾನೆಸಗಿದ ತಪಗಳ ಮೈಮೆಗೆ
ಸರಿಯಿಲ್ಲೆಂದೆಣಿಸಿದನು

೩೫

ಬಳಿಕ ಪಸಿದು ಪಾ‍ರ್ವರ ಬೀದಿಯೊಳೊಂದು
ನಿಳಯವ ಪೊಕ್ಕು ನಿಂದಲ್ಲಿ
ಬಳಲಿದೆನೆನಗುಣಬಡಿಸೆಂದಲ್ಲಿರ್ದ
ಕುಲಪಾಲಿಕೆಗುಸುರಿದನು

೩೬

ಒಲಿದೇಕಪತ್ನಿಯೊಂಬೊಳ್ವೆಸರೆಸೆವಾ
ಕುಲಸತಿಯಳ್ಕರುಗೂಡಿ
ನಲವಿನಿಂದವನಿಗನ್ನವನೀಯುವೆನೆಂದು
ಕೆಲದೊಳು ಕುಳ್ಳಿರಿಸಿದಳು

೩೭

ಅನಿತರೊಳಲ್ಲಿಗವಳ ಗಂಡನೈತರೆ
ಮನಮೊಲಿದಿದಿರೆದ್ದು ನಡೆದು
ವಿನಯದಿಂದುಚಿತೋಪಚಾರವೆಸಗಿ ಮಿಗೆ
ಮನದನ್ನನ ಮನ್ನಿಸಿದಳು

೩೮

ಪತಿಸೇವೆಯೊಳಂತು ಪಸಿದ ಪಾರ್ವನ ಮರೆ
ದತಿ ವಿಳಂಬವನಾಚರಿಸೆ
ಸತಿಯರ ಧರ್ಮದ ಸಾರವನರಿಯದೆ
ಖತಿಗೊಂಡು ಮುನಿ ಗಳಪಿದನು

೩೯

ಅತಿಘೋರ ತಪವೆಮ್ಮದದನು ನೀನರಿಯದೆ
ಮತಿಗೆಟ್ಟು ಮರುಳಾಗದಿರು
ಪತಿಶುಶ್ರೂಷೆಯ ಬಲ್ಮೆ ಫಲಿಸದಿಲ್ಲಿ
ಯತಿಧರ್ಮದಿರವಿದು ಬೇರೆ

೪೦

ಎಂದು ಗರ್ವದ ಸೊಕ್ಕೇರಿ ನುಡಿದ ಮುನಿ
ಯಂದಮನಾರೈದೊಡನೆ
ಅಂದು ತನ್ನಾಣ್ಮನೊಳನುಮತಿವಡೆದೈ
ತಂದು ನುಡಿದಳಿಂತೆಂದು

೪೧

ಬಳಲಿದೆ ಸಾಕಿನ್ನು ಬಡಿಸಿದನ್ನವನುಂಡು
ತಳುವದೆ ತಪವನಾಚರಿಸು
ಬಿಳುವಕ್ಕಿಯ ಬೀಳಗೆಡಹಿದ ಬಿಂಕವೀ
ಬಳಿಯೊಳು ಬಣ್ಣವಡೆಯದು

೪೨

ಮರುಳೆ ನೀನೀ ಮಾತ ಮರೆ ಧರ್ಮಸೂಕ್ಷ್ಮದೊಂ
ದಿರವ ನೀನರಿತವನಲ್ಲ
ಪರಮ ಪತಿವ್ರತೆಯರ ಬಗೆ ಬೇರಿದು
ಹರಿಹರಾದ್ಯರ ಹವಣಲ್ಲ

೪೩

ಇತರ ಚಿಂತೆಯನುಳಿದೇಕಚಿತ್ತದೊಳಾತ್ಮ
ಪತಿಪಾದಭಕ್ತಿಯೊಳೆಸೆವ
ಸತಿಯರೊಲಿದು ಪರಸಿದುದೆಯನುಗ್ರಹ
ಖತಿಗೊಂಡು ನುಡಿದುದೆ ಶಾಪ

೪೪

ವ್ರತಿ ವಾನಪ್ರಸ್ಥ ಯತಿಗಳಿರದೆ ಗೈ
ವತಿಘೋರ ತಪದಾಚರಣೆ
ಸತಿಯರ ಧರ್ಮಕೆ ಸರಿಯಿಲ್ಲೆಂದು ಗೀ
ಷ್ಪತಿಯಗಸ್ತ್ಯನೊಳಾಡಿದನು

೪೫

ಆ ತ್ರಿಮೂರ್ತಿಗಳಾಮಂತ್ರಿತ ಜಲಸೇಕ
ಮಾತ್ರದೆ ಮೈಮೆ ಮೈದೆಗೆದು
ಅತ್ರಿಯ ಸತಿಗನಸೂಯಾದೇವಿಗೆ
ಪುತ್ರರಾದರು ಪೂ‍ರ್ವದೊಳು

೪೬

ಪಾತಿವ್ರತ್ಯದೇಳ್ಗೆಯ ಪರಿಕಿಪೆನೆಂ
ದೋತು ರಾಘವನುಸಿರ್ದೊಡನೆ
ಸೀತೆ ಬೆಂಕಿಯ ಪುಗೆ ಶೀತಳಮಾದುದು
ಮಾತಾವುದು ಮತ್ತೆ ಬೇರೆ

೪೭

ಹರನ ಸಾಹಸಕಂಜದೆ ಪಲವಗಲು ಮು
ಪ್ಪುರ ಪಡಿಬಡಿಸಿ ಪೋರಿದುದು
ಪುರದೊಳಗಿರ್ಪ ಪುಣ್ಯಾಂಗನೆಯರ ಸ
ಚ್ಚರಿತದ ಸಲಿಗೆಯಿಂದೈಸೆ

೪೮

ಧರ್ಮಗತಿ ತಾರತಮ್ಯವ ತಿಳಿವೊಡೆ
ಪೆರ್ಮೆಯ ಬಿಟ್ಟು ಬೇಸರದೆ
ನಿರ್ಮಲಮತಿಯಾಗಿ ನೀ ನಡೆ ಮಿಥಿಲೆಗೆ
ಧರ್ಮವ್ಯಾಧನ ಬಳಿಗೆ

೪೯

ಎಂದೇಕಪತ್ನಿ ನುಡಿಯೆ ಕೇಳಿ ಮುನಿ ಮನ
ದಂದವಳಡಿಗಳಿಗೆರಗಿ
ಅಂದಿನ ಗರ್ವವಳಿದು ಮಿಥಿಲೆಯ ಬಳಿ
ಸಂದನು ಸಂತೋಷದೊಳು

೫೦

ಈ ಪಾತಿವ್ರತ್ಯದೇಳ್ಗೆಯನಾಲಿಸೆ
ಪಾಪಗಳೆದ್ದು ಪಾರುವುವು
ಶ್ರೀಪತಿಯಿವರೆನ್ನ ಸೇವಕರೆಂದುರೆ
ಕಾಪಿಡುವನು ಕರುಣದೊಳು

೫೧

ಚೆನ್ನಿಗ ಚಿಕದೇವರಾಯನ ಸಂಚಿಯ
ಹೊನ್ನಮ್ಮನುಸುರ್ದ ಕಬ್ಬದೊಳು
ಮನ್ನಣೆವಡೆದುದೊಂದರ ಮುಂದಣ ಸಂಧಿ
ಸನ್ನುತ ಗುಣಸಂಬಂಧಿ

೫೨