EN | KA

I

Hadibadeya Dharma

ಶ್ರೀಮದಮಲಗುಣನಿಧಿಗೆ ನಿತ್ಯನಿಗೆ ನಿ
ಸ್ಸೀಮ ಕೃಪಾವಾರಿಧಿಗೆ
ರಾಮಣೀಯಕರಾಶಿಗೆ ಪಶ್ಚಿಮ ರಂಗ
ಧಾಮನಿಗಾನೆರಗುವೆನು

ರಂಗಧಾಮನ ದಿವ್ಯಾಂಗ ಸಂಗತಿಯಿಂ
ಮಂಗಳದೇವತೆಯೆನಿಪಾ
ರಂಗಮಂದಿರ ಮಂಗಳವೈಜಯಂತಿಗೆ
ರಂಗನಾಯಕಿಗೆರಗುವೆನು

ಆದಿನಾರಾಯಣನಾ ಶೇಷನೊಡಗೂಡಿ
ಯಾದರದಿಂದವತರಿಸೆ
ಯಾದವಕುಲವೇಳಿಗೆವೆತ್ತಿ‍ರ್ಪುದು
ಮೇದಿನಿಯೊಳು ಮೈಮೆವಡೆದು

ಆ ಯಾದವರಿಗೆ ಕುಲದೇವರೆನಿಪ ನಾ
ರಾಯಣ ನಾದಿ ಕಾರಣನು
ಶ್ರೀಯೊಡಗೂಡಿ ಕರ್ಣಾಟಕದೇಶದೊ
ಳೀ ಯಾದವಾದ್ರಿಯೊಳಿಹನು

ಬಲಕೃಷ್ಣರಿಂದೆ ಪಲವು ಪೂಜೆಗೊಂಡಿರ್ಪ
ಕುಲದೇವರ ಸೇವೆಗೆಂದು
ಪಲವು ಯಾದವರಾಯರಾ ದ್ವಾರಾವತಿಯಿಂ
ದೊಲಿದೈತಂದರೀ ನೆಲಕೆ

ಶ್ರೀ ನಾರಾಯಣನಡಿಗಳಿಗೆರಗಿ ಮ
ಹಾನಂದರಸದ ಮೈಮೆಯೊಳು
ಆ ನೆಲೆಯನು ಬಿಟ್ಟಗಲಲಾರದೆ ತಾ
ವೀ ನಾಡೋಳು ನೆಲಸಿದರು

ಈ ಶೈಲಕೆರಡು ಗಾವುದ ತೆಂಕಣ ರಮ್ಯ
ದೇಶದ ನೆಲೆವೀಡುಗೊಳಿಸಿ
ಈ ಶೂರರು ನೆಲಸಿದರದರಿಂದೆ ಮ
ಹೀಶೂರಪುರವೆನಿಸಿದುದು

ಆ ದಿನ ಮೊದಲು ಮೈಸೂರನಾಳಿದರಾ
ಯಾದವಕುಲವ‍ರ್ಧನರು
ಶ್ರೀ ದೇವರಾಜಚಂದ್ರಮನವತರಿಸಿದ
ನಾ ದಿವ್ಯವಂಶವಾರ್ಧಿಯೊಳು

ಭಾವಿಸೆ ಭೋಗಭಾಗ್ಯದೊಳೈಸಿರಿಯೊಳು
ದೇವೇಂದ್ರಗೆ ಮಿಗಿಲೆನಿಸಿ
ದೇವರಾಜನ ಬಸುರಿಂದೊಗೆದನು ದೊಡ್ಡ
ದೇವರಾಜೇಂದ್ರ ಭೂವರನು

ಭೂವನಿತೆಯ ಪುಣ್ಯದ ಪುಂಜ ಮಾನುಷ
ಭಾವವ ಪಡೆದುದೆಂಬಂತೆ
ಈ ವಸುಧೀಶನಿಂದೊಗೆದೆಸೆದನು ಚಿಕ್ಕ
ದೇವರಾಜನು ತೇಜದೊಳು

೧೦

ಶ್ರೀರಂಗಪಟ್ಟಣದೊಳು ರತ್ನಸಿಂಹಾಸ
ನಾರೋಹಣವನಾಚರಿಸಿ
ಧಾರಿಣಿಯನು ಧರ್ಮದೊಳು ಪಾಲಿಸುತ ಮ
ಹಾರಾಜನೆನಿಸಿ ರಾಜಿಪನು

೧೧

ಶ್ರೀ ಯುವತೀಶನಖಿಲಗುಣನಿಧಿ ನಾ
ರಾಯಣನಾದಿಕಾರಣನು
ಆಯುರಾರೋಗ್ಯೈಶ್ವರ್ಯವ ಚಿಕದೇವ
ರಾಯನಿಗನುಗೊಳಿಸುವನು

೧೨

ಧರೆಯ ಪೊರೆವ ಧರ್ಮವ ಸಂಪಾದಿಪ
ಧುರವ ಗೆಲುವ ಗೈಮೆಯೊಳು
ನರಪತಿ ಚಿಕದೇವರಾಜೇಂದ್ರಗೆ ಶೌರಿ
ನೆರವಾಗಿಹನು ನೇಮದೊಳು

೧೩

ಚಿಕದೇವರಾಜಚಂದ್ರಮನ ಪಟ್ಟದ ರಾಣಿ
ಸಕಲ ಸದ್ಗುಣ ಸಂಪನ್ನೆ
ಅಕಲುಷೆ ಯೆಳವಂದೂರ ದೇವಮ್ಮನು
ಸಕಲ ಸಂಪದದೊಡನಿಹಳು

೧೪

ಇಷ್ಟಗುಣೆಯರೆಣ್ಬರು ಮತ್ತೆ ರಾಣಿಯ
ರಷ್ಟೈಶ್ವರ್ಯ ಲಕ್ಷ್ಮಿಯರೊ
ಅಷ್ಟದಿಗ್ವಿಜಯಲಕ್ಷ್ಮಿಯರೊ ತಾಮೆನೆ ಸಂ
ತುಷ್ಟಿಯೊಳೊಡವೆರೆದಿಹರು

೧೫

ಹಡಪ ಕಾಳಾಂಜಿ ಪೊಂಗಟ್ಟಿಗೆ ಕುಂಚ ಕ
ನ್ನಡಿ ಗಿಂಡಿ ಬಿಜ್ಜಣಿಗೆಗಳ
ಪಿಡಿದೂಳಿಗಗೈವ ಬಿಂಕಗಾತಿಯರಾ
ಪೊಡವಿಯಾಣ್ಮನ ಹೊದ್ದಿಹರು

೧೬

ಪಾಡುವ ಕುಣಿವ ಬಾಜಿಪ ಬಣ್ಣನೆ ಮಾ
ತಾಡುವ ಪರಿಹಾಸಗೈವ
ಗಾಡಿಕಾತಿಯರು ಗಣನೆಯಿಲ್ಲದೆ ಜೋಡು
ಗೂಡಿರುವರು ಕೂರ್ಮೆಯೊಳು

೧೭

ನೋಂತು ಚತುಷ್ಷಷ್ಟಿ ಕಲೆಗಳು ಪೆಣ್ಬರಿ
ಜಾಂತು ಸೇರಿದುವೊ ಎಂಬಂತೆ
ಸಂಸತ ಮಿಗೆ ಸರ್ವ ಸರಸವಿದ್ಯಾ ಸಿ
ದ್ಧಾಂತವೇದಿನಿಯರೊಪ್ಪಿಹರು

೧೮

ಪಲರಾಣಿಯರೂಳಿಗದ ಪೆಣ್ಗಳುಮಿ
ಕ್ಕೆಲದೊಳು ಪಂಕ್ತಿಗೊಂಡೆಸೆಯೆ
ನೆಲದಾಣ್ಮನೊಳವೋಲಗದೊಳೊಪ್ಪಿದನಾ
ಬಲವೈರಿಗೆ ಪಡಿಯೆನಿಸಿ

೧೯

ಓಲಗಗೊಳುತೊಂದು ದಿನವೆಡಬಲದ ಸು
ಶೀಲೆಯರೊಳು ಕಡೆಗಣ್ಣ
ಸಾಲುವಿಡಿದು ಸುಳಿಸುಳಿಸಿಯೆನ್ನೊಳು ಸತ್ ಕೃ
ಪಾಲೋಕನವನೆಸಗಿದನು

೨೦

ಕರುಣಾಮೃತಾಬ್ಧಿಯ ಕಲ್ಲೋಲಗಳಂತೆ
ತರತರದೊಳು ಕವಿತರುವ
ಸರಸಕಟಾಕ್ಷವನೆಸಗಿಯೆನ್ನೊಳು ಮನ
ಗರಗಿ ಮನ್ನಿಸಲೆಳಸಿದನು

೨೧

ಎನ್ನ ಮನ್ನಿಪೆನೆಂದಣಿಸಿ ತನ್ನೆಡೆದೊಳು
ಪೊನ್ನ ಪುತ್ತಳಿಯಂತೆಸೆವ
ಮನ್ನಣೆವಡೆದ ಪಟ್ಟದ ರಾಣಿಯ ಮೊಗ
ಮನ್ನೋಡುತಿಂತು ನುಡಿದನು

೨೨

ಅರಸಿ ಕೇಳೀ ಹೊನ್ನಿ ಸರಸಸಾಹಿತ್ಯದ
ವರದೇವತೆ ತಾನೆಂದು
ಪರಮಾರ್ಥವಾದಿಯಳಸಿಂಗರಾರ್ಯನು
ಪರಿಪರಿಯೊಳು ಬಣ್ಣಿಪನು

೨೩

ಓದುಗಲಿಸುವರೊಲಿದು ಪೊಗಳಿದೊಡಾ
ವೋದುಗಲಿವರೋದುಗಳು
ಮೇದಿನಿಯೊಳು ಮೇಲೆನಿಪುವೆಂಬುದು ಲೋಕ
ವಾದವೈಸಲೆ ರಾಣಿ ಕೇಳು

೨೪

ಇವಳು ಕಾವ್ಯಾಲಂಕಾರನಾಟಕಗಳ
ಪವಣಿಗೆಯಿರವ ಬಲ್ಲವಳು
ಇವಳ ಸಾಹಿತ್ಯದ ಸವಿಗೆಳಸುತ್ತೆನ್ನ
ಕಿವಿಗಳು ಕದುಬುಗೊಂಡಿಹವು

೨೫

ಪವಣಿಗೆಯೊಪ್ಪೆ ಪುರುಳು ಪೋಗರೇರೆಯಂ
ಗವಿಸೆಯಲಂಕಾರಗಳು
ಕವಿದು ಪರಿಯೆ ರಸದೊಳ್ಗಂಪು ಕಮ್ಮೆನೆ
ಕವಿತೆಯೊಂದನು ಪೇಳಿಸಿಂದು

೨೬

ಎಂದ ರಾಯನ ನುಡಿಗಾನು ವಿನಯಗೂಡಿ
ಪಿಂದೆಗೆದಿರೆ ಪಟ್ಟದರಸಿ
ಕಂದ ಬಾರೆನ್ನ ಕಟ್ಟಾಣಿ ಪೆಣ್ಮಣಿಯೆ ಬಾ
ರೆಂದು ಮುಂದಕೆ ಬರಿಸಿದಳು

೨೭

ಹೊನ್ನಿ ಬಾ ಹೊನ್ನಕ್ಕ ಬಾರೆಂದು ಕರವಿಡಿ
ದೆನ್ನ ತನ್ನೊತ್ತಿಗೆ ಬರಿಸಿ
ಎನ್ನೊಳು ನೆವಮಿನಿತಿಲ್ಲದೆರಕಗೂಡಿ
ಮನ್ನಿಸಿ ನುಡಿದಳಿಂತೆಂದು

೨೮

ಕಲಿತ ಬಿಜ್ಜೆಯಂ ಬಲ್ಲರಿಗೆ ಕೇಳಿಪುದೈಸೆ
ಫಲವಿದನರಿತು ನೀನಿಂದು
ಅಲಸದೆ ನಾಣ್ಚದಂಜದೆಯಳುಕದೆ ಪೇಳು
ಪಲವಗೆ ಕಬ್ಬದೊಳ್ಪುಗಳ

೨೯

ಇಂತು ನುಡಿದ ರಾಣಿಯ ನುಡಿಗೇಳಿಯೋ
ರಂತೆ ಚಿತ್ತವ ಬಲಿವಿಡಿದು
ಸಂತಸ ಮಿಗೆ ಸಭೆಯೊಳು ರಾಯಗೆ ಮಾ
ರಾಂತು ಬಿನ್ನವಿಸಿದೆನಿಂತು

೩೦

ಅರಸ ಕೇಳೆನಗೆ ನಿನ್ನಡಿಯೂಳಿಗಮೊಂ
ದರಸಿಯರಡಿಯೊಲ್ಮೆಯೊಂದು
ಪರಿಕಿಪೊಡಖಿಳಾರ್ಥಸಾಧನಂಗಳಿಗಿವು
ನೆರವಾಗಿಹವು ನೇಮದೊಳು

೩೧

ನಿನ್ನಡಿಯೊಲವರಿತಿ‍‍ರ್ಪದೆನಗೆ ಬಿಜ್ಜೆ
ನಿನ್ನೂಳಿಗವೆನ್ನ ಧರ್ಮ
ನಿನ್ನಾಣತಿಗೈವುದೆನ್ನ ಮನೋರಥ
ವೆನ್ನ ಭಾಗ್ಯಕ್ಕೆ ಸರಿಯುಂಟೆ

೩೨

ಪಲವೋದುಗಳಿಂದ ಪಲವು ಗೈಮೆಗಳಿಂದ
ಪಲ ಬಗೆವಾತುಗಳಿಂದ
ಬೆಲೆವಡೆದಿರ್ಪೆನೆಂದೆಣಿಸುವಳಲ್ಲ ನಿ
ನ್ನೊಲವೊಂದನೆ ನಂಬಿಹೆನು

೩೩

ನಿನ್ನ ಗುಣಂಗಳನೊಲಿದೋದುವುದೋದು
ನಿನ್ನಾಳ್‌ ಗೈಮೆಯೊಳ್ಗೈಮೆ
ನಿನ್ನೊಲವರಿತು ನುಡಿವ ನುಡಿ ನಲ್ನುಡಿ
ಯಿನ್ನಿವಕೆಣೆ ಬೇರುಂಟೆ

೩೪

ನಿನ್ನ ಕೃಪಾರಸದಿಂದೈಸೆಯಾನು ಕ
‍‍ರ್ಬೊನ್ನು ಚೆಂಬೊನ್ನಾದಂತೆ‍
ಸನ್ನುತಿವಡೆದೊಳ್ಪುವೆತ್ತು ಸಕಲ ಭಾ
ಗ್ಯೋನ್ನತಿಯೊಡಗೂಡಿದೆನು

೩೫

ನಿನ್ನಡಿ ಸೋಂಕಿನೊಳಖಿಲ ದುರಿತಗಳ
ಸನ್ನಾಹವ ಸದೆದಟ್ಟಿ
ಚೆನ್ನಗ ಚಿಕದೇವರಾಯನ ಸಂಚಿಯ
ಹೊನ್ನಿಯೆಂಬೇಳ್ಗೆವೆತ್ತಿಹೆನು

೩೬

ನಿನ್ನಾಣತಿಗೇಳಿ ನಿನ್ನ ಬಳಿಗೆ ಸಂದು
ನಿನ್ನೂಳಿಗಗಳನೆಸಗಿ
ನಿನ್ನವಳೆನಿಸಿ ನಿನ್ನೆಡೆವಿಡದಿರ್ಪೆನೀ
ಯುನ್ನತಿಗಿನ್ನೆಣೆಯುಂಟೆ

೩೭

ಆನಾವಳೆನ್ನ ಮುನ್ನಿರವಾವುದು ಮ
ತ್ತೀ ನಿನ್ನ ದಯವಾವುದಕಟ
ಏನೆಂಬೆನಿದಕೆ ಪೆಳವನೆಡೆಗಾ ಗಂಗೆ
ತಾನೈದೆ ಬಂದುದೆಂಬಂತೆ

೩೮

ಎನ್ನ ಜನ್ಮಕೆ ಸಾಫಲ್ಯಮಾದುದು ನಿನ್ನ
ಚೆನ್ನಡಿಯೂಳಿಗದಿಂದ
ಪಿನ್ನೇಳು ಮುನ್ನೇಳು ತರದವರನಿಬರು
ಮುನ್ನತಿವಡೆದರೆನ್ನಿಂದ

೩೯

ಆವ ಜನ್ಮದೊಳಾನಾವ ಸುಕೃತಗಳ
ನಾವ ಬಗೆಯೊಳೆಸಗಿದೆನು
ಈ ವಿಧದೇಳಿಗೆವಡೆದೀಯೊಡಲೊಳೆ
ದೇವರೂಳಿಗವೆಸಗುವೆನು

೪೦

ಒಲಿದು ತನ್ನೊಡವುಟ್ಟು ಸೊಸೆ ಮಗಳೆಂದೆಂಬ
ಪಲರು ಮುನ್ನಿನ ಬಾಂಧವರು
ಕುಲದೇವತೆಯೆಂದು ಕೂರ್ತು ತಂತಮ್ಮಿಷ್ಟ
ಫಲವ ಪಡೆದವರೆನ್ನಿಂದ

೪೧

ಸುತ್ತಣ ದೇಶದರಸಿಯರ ಬೈತಲೆ
ಗುತ್ತಮ ಭೂಷಣವೆನಿಪ
ಮುತ್ತಿನ ಸರವೆನ್ನ ರನ್ನವಾವುಗೆಗಳ
ಸುತ್ತ ಲಂಬಣಮಾದುದಿಂದು

೪೨

ಏವೇಳುವೆನೆನ್ನ ಮನದಾನಂದವ
ನಾವ ಬಗೆಯೊಳರುಹುವೆನು
ಭಾವಿಸೆ ಸೊಗದ ಸುಗ್ಗಿಯ ತನಿಸೊಕ್ಕೆನ್ನ
ನಾವರಿಪುದು ಮತ್ತೇವೆ

೪೩

ಒಡೆಯನಿರಿಸಿದಂತಿರ್ಪುದಲ್ಲದೆ ಪೇ
ಳೊಡವೆಗೆ ಬೇರಿರವುಂಟೆ
ಕಡುಗೂರ್ಮೆಯಿಂದ ನಿನ್ನಡಿಯಾಣತಿಯನೆನ್ನ
ಮುಡಿಯೊಳಾಂತೆನು ಮತ್ತೇನು

೪೪

ಆದೊಡಮೆನ್ನ ಕವಿತೆಗಬ್ಬದ ಬಗೆ
ಈ ದಿವ್ಯಸಭೆಗೆ ಸಂಗತಮೆ
ಪಾದದೂಳಿಗದೊಳು ಬಳೆದ ಬಾಲಕಿಯೆಂ
ದಾದರದಿಂದಾಲಿಪುದು

೪೫

ಪದಿನೆಂಟು ಬಣ್ಣನೆಯೆಂದು ಬವಣೆಗೊಂಡು
ಪದಗೆಟ್ಟು ಬಯಲ ಬಣ್ಣಿಸದೆ
ಮುದದೊಡನಿಹಪರದೇಳ್ಗೆವಡೆಯೆ ಹದಿ
ಬದೆಯ ಧರ್ಮವ ಬಣ್ಣಿಪೆನು

೪೬

ಅರಸಿಯರನಿಬರುಮಾದರದಿಂದೆನ್ನ
ಸರಸಕಾವ್ಯವ ಸವಿವಂತೆ
ಪರಮ ಪತಿವ್ರತೆಯರ ನಡತೆಯನಿಲ್ಲಿ
ಪುರುಳುಗೊಳಿಸಿ ಪೊಗಳುವೆನು

೪೭

‍ಧರ್ಮದ ತನಿಗಂಪು ತಲೆದೋರೆ ಕಾವ್ಯದ
ಪೆರ್ಮೆ ಬೇ‍ರ್ವರಿದು ಬಿತ್ತರಿಸೆ
ನಿ‍ರ್ಮಲ ಸತಿಯರ ಧರ್ಮವ ವೃತ್ತಿಯಾಗಿ
ನಿರ್ಮಿಸಿ ನೆಗಳಿಪೆನಿಂದು

೪೮

ಬಲ್ಲರಿಂದಾನು ಕೇಳಿದುದಕೆ ಪೆರ್ಚು ಕುಂ
ದಿಲ್ಲದಂತೆಚ್ಚರುಗೂಡಿ
ಎಲ್ಲರುಮರಿವಂತೆಳವಾತುಗಳಿಂದ
ಸೊಲ್ಲಿಸುವೆನು ಸೊಗಸುವೊಲು

೪೯

ಎಂದ ನುಡಿಯ ರಾಯನುಮರಸಿಯರುಮಾ
ನಂದವಡೆದು ಬಗೆಗೊಳಿಸೆ
ಸಂತ ಸತೀಧರ್ಮವನು ಸಾಹಿತ್ಯದೊ
ಳೊಂದುಗೊಳಿಸಿ ಪೇಳಿದೆನು

೫೦

ಆದಿಕಾವ್ಯದೊಳೈದನೆಯ ವೇದದೊಳು ಮ
ನ್ವಾದಿಕ ಧರ್ಮಶಾಸ್ತ್ರದೊಳು
ಭೇದಿಸಿ ಪಿರಿಯರು ಪೇಳಿದುದನೆ ಕೃತಿ
ಗೈದಾನು ಕಿವಿಗೊಳಿಸಿದೆನು

೫೧

ಸತಿಯರೀ ಕೃತಿಯನಾಲಿಸಿದೊಡಂದಂದಗೆ
ಪತಿಭಕ್ತಿ ಬಣ್ಣವೇರುವುದು
ಮತಿ ಮಸುಳಿಸದೆ ಮರವೆದೋರದಿಹ ಪರ
ದತಿಶಯವನುಗೂಡುವುದು

೫೨

ಎಳವೆಣ್ಗಳೀ ಕೃತಿಗೇಳೆ ತಮ್ಮಿನಿಯರ
ನೆಳಮೆಯೊಳಳವುಗೆಡಿಸದೆ
ಬಳಿಸಂದು ಬಾಳುವರತ್ತೆಮಾವಂದಿರ
ನೊಳವು ಗೈದೊಳ್ಪುವಡೆವರು

೫೩

ಮನೆವಾಳ್ತೆಯರಿಯದ ಮರುಳುವೆಣ್ಣೀ ಕೃತಿ
ಯನೆ ಮನಮೊಲಿದೋದಿದೊಡೆ
ಜನರಿವಳನು ಪೋಲ್ವ ಜಾಣೆ ಜಗದೊಳಿ
ಲ್ಲೆನೆ ಚಾತು‍ರ್ಯವಡೆವಳು

೫೪

ಮುನಿದು ಮೂದಲಿಸಿ ಮೋಡಿಯೊಳಿದ್ದು ಮೂರ್ಖಿಪ
ಮೊನೆಗಾತಿಯಾ ಕೃತಿಗೇಳೆ
ಇನಿಯನ ಮೊಗವ ನೋಡದ ಮುನ್ನ ಮೋಹಿಸಿ
ಮನಗರಗುವಳು ಮತ್ತೇನು

೫೫

ಕಡುನಾಣ್ಚಿಯಂಜಿ ಕಣ್ಮುಚ್ಚಿ ಕಂಪನಗೊಂಬ
ಬಡವೆಣ್ಗಳೀ ಕೃತಿಗೇಳೆ
ಎಡಬಲದವರೇಳಿಸದಂತೆ ಮನದನ್ನ
ರೊಡನೆ ಬಾಳುವರಡಕದೊಳು

೫೬

ಬಗೆಯೆ ಮೈಲಿಗೆಯೆಂಜಲೆಂಬುದನರಿಯದ
ಮುಗುದೆಯರೀ ಕೃತಿಗೇಳೆ
ನಿಗಮದೊಳೊಗೆದ ನೇಮಂಗಳ ತಿಳಿದೀ
ಜಗಕೆ ಪಾವನೆಯರೆನಿಪರು

೫೭

ಅತ್ತೆನಾದಿನಿಯರೊಳಳುಕದ ಕಾದುವು
ನ್ಮತ್ತೆಯರೀ ಕೃತಿಗೇಳೆ
ಉತ್ತಮ ಗುಣಗಳಿಂದೊಳಗುಗೈದವರೊಳು
ಪತ್ತುಗೆವೆರಸಿ ಬಾಳುವರು

೫೮

ಒರ್ವರೊರ್ವರೊಳು ಮಚ್ಚರಿಸುವ ಸವತಿಯ
ರಿರ್ವರುಮೀ ಕೃತಿಗೇಳೆ
ಬೇರ್ವರಿದಿರ್ಪ ವೈರದ ಬೇರ ಪರಿದಿ
ಟ್ಟಿರ್ವರೊಂದೆನಿಸಿಯೊಪ್ಪುವರು

೫೯

ಇದು ಪಾತಿವ್ರತ್ಯಧರ್ಮತತ್ವದ ಸಾರ
ವಿದೆ ಸಂಜೀವನ ಮಂತ್ರ
ಇದು ಪರಮಾರ್ಥ ಹಿತೋಪದೇಶದ ತಿರು
ಳಿದನು ಸತಿಯರೋದುವುದು

೬೦

ಇದನಾಲಿಪುದೊಳ್ವೆಂಡಿರೀ ಧರ್ಮದ
ಪದನರಿತಾಚರಿಸುವುದು
ಇದನು ಕಲಿವುದಿದರೊಳಗರಿವುದು ಹದಿ
ಬದೆಯರೆನಿಸಿ ಬಾಳುವುದು

೬೧

ಚೆನ್ನಿಗ ಚಿಕದೇವರಾಯನ ಸಂಚಿಯ
ಹೊನ್ನಮ್ಮನುಸುರ್ದ ಕಬ್ಬದೊಳು
ಉನ್ನತಿವಡೆದೊಗೆದುದು ಪೀಠಿಕಾಸಂಧಿ
ಸನ್ನುತಗುಣಸಂಬಂಧಿ

೬೨