III
Girijākalyāṇa
ಹೈಮವತೀ ಶೈಶವವರ್ಣನಂ
ಶ್ರೀ ಗೌರೀ ಕುಚಯುಗಳ ಪರಾಗಯುತಾನರ್ಘ್ಯರತ್ನವಿಳಸದ್ವಕ್ಷೋಭಾಗಂ ಸದ್ಭಕ್ತಿಯನೆಮಗೀಗೆ ದಯಾವಾರ್ಧಿ ಹಂಪೆಯ ವಿರೂಪಾಕ್ಷಂ
ಅಂತಿರ್ಪಾಸ್ಥಾನದೊಳ್ ಭೂಭುಜನಿಕರ ಕಿರೀಟಪ್ರರತ್ನಪ್ರಭೂತಾನಂತಪ್ರದ್ಯೋತ ನೂತ್ನೋದಕಜನಿತ ಪದಾಂಭೋಜನುದ್ಯದ್ಧರಿತ್ರೀಕಾಂತಾ ವಕ್ಷಃಸ್ಥಲಾಲಿಂಗನಭರ ನಿಜದೋರ್ದಂಡ ಚಂಡಾಸಿಧಾರಾಶ್ರಾಂತಂ ಪ್ರಾತರ್ಕ್ಯವೈರಿವ್ರಜಧರನೆನಿಸಿರ್ದಂ ಗಿರಿವ್ರಾತನಾಥಂ
ಇರೆ ಮಾಧ್ಯಂದಿನ ಡಿಂಡಿಮವರನಾದಂ ಕೇಳಲಾಗೆ ಗಿರಿಕುಲರಾಜಂತರದಿಂ ನೆರೆದೋಲಗಮಂಪರೆಯಲ್ವೇಳ್ಕೆಂದು ಪೇಳ್ದ ಸಮನಂತರದೊಳ್
ಕ್ವಣಿತಾನೇಕಪ್ರಧಾನಾಭರಣ ಚರಮಹಾಮಾತ್ಯ ಸಾಮಂತಯೂಥಂಗಣಿಕಾಸಂತಾನ ನಾನಾ ನವಮಣಿಗಣ ವಿಸ್ತೀರ್ಣ ಮಂಜೀರಮುದ್ರಾರಣಿತಂ ತದ್ವೇತ್ರ ಹಸ್ತಪ್ರತಿಮುಖರ ಪ್ರೋದ್ಗತಾಭೀಳಘೋಷಂಪ್ರಣತಾಸಕ್ತಾವನೀಶ ಪ್ರಕಟಮಕುಟಯುಕ್ತಂ ಸಭಾವಾಸವಕ್ತ್ರಂ
ಗಿರಿರಾಜಂ ಸಿಂಹಪೀಠೋತ್ಥಿತಕರಭರನಾಗುತ್ತುಮೇಳ್ತಂದು ಸೌಖ್ಯಾಕರರೂಪಂ ಮಜ್ಜನಂಮಾಡುತೆ ಭಸಿತಲಲಾಟಂ ಸರುದ್ರಾಕ್ಷ ಕಂಠಂಸ್ಥಿರಚಿತ್ತಂ ಲಿಂಗಪೂಜಾವಿರಚನಪರಿತುಷ್ಟಂ ಪ್ರಸಾದಪ್ರಮೋದಂಸ್ಮರಬಾಣವ್ರಾತಮಂ ಲೆಕ್ಕಿಸದತಿಸುಖದಿಂ ಮೇನೆಯುಂ ತಾನುಮಿರ್ದರ್
ವ. ಇಂತು ವಿಮಳ ಮನದಿಂ ಸಮಸುಖದೊಳಿರ್ಪಲ್ಲಿ,
ಭರದಿಂ ಬಹುಸಂತಾನಾತುರೆ ಸಾಧುಸುಶೀಲೆ ಲೀಲೆ ಮಿಕ್ಕಾದರದಿಂಗಿರಿರಾಜಂಗೆ ವಿರಾಜಿಪವರಜೀವಸಮಾನೆ ಮೇನೆ ನಯದಿಂ ನುಡಿದಳ್
ಮೊಲೆಯುಣುತಳ್ಕಱಿಂ ನಗುವ ನಿಂದಿರುತಪ್ಪುವ ಪೊಂಗಿ ಹಿಗ್ಗುತಂಮಲೆವ ಮರಳ್ವ ಕಣ್ಗಳನಲರ್ಚುವ ಮುಚ್ಚುವ ನೋಡುತಾಡುತಂನಲಿನಲಿದುರ್ಬುತಂ ತೊಲೆಯುತಿಂತೊಲೆವಳ್ತಿಯ ಮುದ್ದಿನೊಪ್ಪದೊಳ್ನೆಲಸಿದ ಪುತ್ರಿಯಂ ಬಯಸುತಿರ್ದಪುದೆನ್ನಮನಂ ಮನಃಪ್ರಿಯಾ
ಉಗ್ರತಪದಿಂದೆಯತುಳಸಮಗ್ರೆಯನಭವಂಗೆ ವಧುವೆನಿಪ್ಪಳನಾನವ್ಯಗ್ರದೆ ಪಡೆವೆಂ ಕುಧರಪ್ರಾಗ್ರನೆ ಕಳಿಪೆಂದು ಮೇನೆ ನುಡಿವವಸರದೊಳ್
ಗಿರಿರಾಜನೊಡಂಬಟ್ಟಾದರದಿಂದಂ ಪುಳಕಿಸುತ್ತೆ ಪುಟವೇಳುತ್ತುಂಪರಿಚಾರ ಪಟುಗಳೆನಿಸುವತರುಣಿಯರಂ ಕೂಡಿಕೊಟ್ಟು ಸಂತಸದಿಂದಂ
ವರಪುತ್ರೀ ಸ್ಥಿರಭಾವಕಾಮ್ಯವಿಲಸತ್‌ಸನ್ಮಾನ್ಯೆಯಂ ಯಾನೆಯಂತರುಣೀ ಕುಂತಳಮಲ್ಲಿಕಾ ಮಧುಕರೀ ಸಂತಾನೆಯಂ ಜ್ಞಾನೆಯಂಪರಮಾನಂದ ತಪೋಭರೋತ್ಥಿತ ಮನಃ ಪ್ರಾಧೀನೆಯಂ ಸ್ಥಾನೆಯಂಗಿರಿರಾಜಂ ಕಳಿಪುತ್ತುಮಿರ್ದನತಿಯೋಗಧ್ಯಾನೆಯಂ ಮೇನೆಯಂ
ಕಳಿಪೆ ನಡೆತಂದು ರಮ್ಯಸ್ಥಳದೊಳ್ ನಿಂದೇಕಪಾದದಿಂದಂ ಮೇನಾಲಳನೆ ಮಹಾದೇವಿಯ ನಿರ್ಮಳರೂಪಂ ಹೃದಯಕಮಲದೊಳ್ ತಳೆದಿರ್ದಳ್
ಮುಗಿದುವು ನಯನಸರೋಜಂಮಿಗೆಯಲರ್ದುದು ಚಿತ್ತಕೈರವಂ ಮಿಕ್ಕೇಱಿತ್ತು ಗಭೀರ ತಪೋವಾರಿಧಿಬಗೆಯೊಳಗಾ ಧ್ಯಾನ ಚಂದ್ರನುದಯಿಸುವಾಗಳ್
ವ. ಇಂತು ತಪೋಬೀಜಂ ಚಿತ್ತಭೂಮಿಯೊಳ್ ಬೇರೂಱಿಯಹಂಕಾರ ದೊಳಂಕುರಿಸಿ ಬುದ್ಧಿಯೊಳ್ ಪಲ್ಲವಿಸಿ ಮನದೊಳ್ ನಿಮಿರ್ದು ನಿಷ್ಠೆಯೊಳ್ ಕುಡಿವರಿದು ಪರಿದು ಪರ್ವಿ ಪುರಹರನರಸಿಯ ಮೆಲ್ಲಡಿಗಳ್ಗೆ ನಿಲ್ಲದೆ ಧೀಂಕಿಡೆ ಭವಾನಿ ಭೋಂಕನಱಿದು ಮೇನೆಯ ತಪಕ್ಕೆ ಮಿಗೆ ಮೆಚ್ಚಿ ಕರುಣಿಸಿ ಹರನಂ ಬೀಳ್ಕೊಂಡು ತಂದೆ ಮಾಡುವ ಯಾಗಮಂ ನೋಳ್ಪ ನೆವದಿಂ ಕೈಲಾಸಮಂ ಪೊಱಮಟ್ಟು ದಕ್ಷನ ಪುರಕ್ಕಭಿಮುಖಿಯಾಗಿ,
ತ್ರಿಣಯನ ವಿರಹಿತಯಾಗಕ್ಕಣಿಯರದಿಂ ಪೋಗಿ ಮುಂದೆ ನಿಲೆ ದಕ್ಷಂ ನಿರ್ಗುಣನಂ ನಿಂದಿಸೆ ದಾಕ್ಷಾಯಣಿ ಕೇಳದೆ ವಿಮಳಯೋಗದಿಂ ನಡೆತಂದಳ್
ಸುರತರುವಿಂ ಬೀಜಂ ದಿವ್ಯರತ್ನದಿಂ ಕಾಂತಿ ಪೂರ್ಣಶಶಿಯಿಂ ಕಿರಣಂವರಸುಧೆಯಿಂ ಮಧುರತೆ ಬಂಧುರಕುಸುಮದೆ ಕಂಪು ಬರ್ಪತೆರದಿಂ ಬಂದಳ್
ಬಂದು ನಿಜ ತಪದ ಮೇನೆಯನಂದೀಕ್ಷಿಸಿ ಶಾಂತ ರವಿನಿಕಾಯ ಮರೀಚೀವೃಂದನಿಭಕಮಳ ವಿಮಳಾನಂದವಿಕಾಶಪ್ರಕಾಶನಿಧಿ ನಿಂದಿರ್ದಳ್
ವ. ಅಂತು ನಿಂದು,
ಉತ್ಕಟ ತಪೋನಿಷ್ಠೆಗೆಸತ್ಕರುಣಮನಾಂತು ನಿನ್ನ ಬಸಿಱೊಳ್ ಬರ್ಪೆಂಸತ್ಕುಲಜೆಯೆನುತೆ ಮೇನೆಯಹೃತ್ಕಮಲದ ಬೆಳಗಿನೊಳಗೆ ಬೆಳಗಾಗಿರ್ದಳ್
ಇರೆ ಮೇನೆಯಱಿದು ಹರ್ಷದಶರನಿಧಿಯೊಳ್ ಪೊಕ್ಕು ಲೀಲೆ ಮಿಕ್ಕೋಲಾಡುತ್ತರಲುತ್ತೀಸಾಡುತ್ತುಂಪೊರೆಯೇಱುತೆ ಜಪದ ವಿಪುಳೆ ತಪಮಂ ಬಿಟ್ಟಳ್
ನಡೆತಂದಳ್ ಗಿರಿರಾಜವಲ್ಲಭೆ ಭವಾನೀ ಪ್ರೇಮದಿಂ ರಾಗದಿಂಬಿಡದುದ್ಯತ್ ಕಲಶಪ್ರಬದ್ಧಲಲನಾ ಸಂತಾನದಿಂ ಗಾನದಿಂಕಡುಪಿಂ ಪೊಣ್ಮುವ ವಾದ್ಯ ವಿಪ್ರವದನ ಪ್ರೋನ್ನಾದದಿಂ ವೇದದಿಂಗುಡಿಗುಟ್ಟುತ್ತಿದಿರ್ಗೊಳ್ವ ಪೌರಜನತಾ ಸಂತೋಷದಿಂ ಘೋಷದಿಂ
ಬಂದಗರಾಜ ರಾಜಗೃಹಮಂ ಪುಗುತುಂ ಪರಮ ಪ್ರದೀಪೆ ಸಾನಂದೆ ಸರೋಜನೇತ್ರೆವರವಕ್ತ್ರೆ ಮನೋಹರೆ ಮಾನ್ಯೆಮೇನೆ ಸಾರ್ತಂದು ನಿಜೇಶನುಂ ಪ್ರಿಯದೊಳಪ್ಪಿ ಮನೋರಥ ಸಿದ್ಧಿಯಾದುದಂನಿಂದುಸಿರ್ದಂತರಂಗ ಬಹಿರಂಗ ಸುಖಾನ್ವಿತೆಯಾಗುತೊಪ್ಪಿದಳ್
ವ. ಇಂತು ತನ್ನ ಬಸಿಱೊಳ್ ಭವಾನಿ ಬರ್ಪ ವರಮಂ ಪಡೆದು ಮೇನಾದೇವಿ ನಾನಾ ಸುಖದೊಳೊಪ್ಪಿರ್ದು,
ಮುಂದಾ ಸ್ತ್ರೀರತ್ನಮನೊಲವಿಂದಂ ಪಡೆದಪ್ಪೆನೆಂಬುದಂ ಸೂಚಿಸುವಂತೊಂದೆರಡು ದಿನದೊಳತ್ಯಾನಂದನೆ ಕಡುಜಾಣೆ ಮಾಣಿಕಂಗಂಡಿರ್ದಳ್
ವ. ಆ ಸಮಯದೊಳ್
ಎಸೆವ ಬಳಲ್ಮೊಗಮುಷ್ಣಮನುಸಿರ್ವುಸಿರನುರಾಗವೇಱುವಕ್ಷಿದ್ವಿತಯಂಪೊಸಕಂಪನುಗುಳ್ವ ಕಕ್ಷಂನಸು ಕರಗುವ ತನು ಮನೋಹರಂ ಮಾನಿನಿಯಾ
ಸೆಡೆವ ನಡೆ ತೊಡೆಯ ತಡೆಗಾಲ್ನಡುವಿಂಗತಿಗಾಢದುಡಿಗೆ ಬಡತನು ಸೊಂಕಿಂಗೆಡೆಗುಡದ ಮನಂ ಮಾತಂಮಡಗುವ ಪರಿ ಸೊಗಯಿಸಿತ್ತು ಪಂಕಜಮುಖಿಯೊಳ್
ಮಾನಿನಿಯಾತೆಱದಿಂ ಸಂದಾ ನಾಲ್ಕುಂದಿವಸಮಿರ್ದು ಬಳಿಯಿಂ ಶುದ್ಧಸ್ನಾನಾಂಗೀಕೃತವಿಮಳಶ್ರೀನಿಧಿ ಮೇನಾ ಲತಾಂಗಿ ಕಣ್ಗೆಸೆದಿರ್ದಳ್
ಬೆಳಗಿದ ಮಣಿ ಮುಕುರದವೋಲ್ಜಳದಂಗಳಗಲ್ದ ಚಂದ್ರಕಳೆವೋಲ್ ಪುಟವಿಟ್ಟವಟ್ಟ ಮಿಸುನಿವೋಲ್ ಮಂಗಳ ನಿರ್ಮಳ ರುಚಿರರೂಪೆಯೊಪ್ಪುತ್ತಿರ್ದಳ್
ಸುಲಿಪಲ್ ಬಿಂಬಾಧರಂ ರಾಜಿಪ ನಯನಯುಗಂ ಚಂಪಕಾಮೋದಿತಂ ನಿರ್ಮಲವಕ್ತ್ರಂ ಶ್ರೀಲಲಾಮಂ ಸುರುಚಿರವರ ವಕ್ಷೋಜಯುಕ್ತಾಂಗರಾಗಂವಿಲಸತ್ ಕಕ್ಷಾಂತದೊಳ್ ಪೂಸಿದ ಮೃಗಮದಮುದ್ಯದ್ದುಕೂಲಂ ಪ್ರಸೂನೋಜ್ವಲಧಮ್ಮಿಲ್ಲಂ ಸರಾಗಂ ಮೆಱೆಯೆ ನಿಜಪತಿಧ್ಯಾನದೊಳ್ ಮೇನೆಯಿರ್ದಳ್
ಇರೆ ಕುಸುಮಮಾಲೆಯಲ್ಲಿಗೆವರಮಧುಕರನೆಯ್ದೆ ಬರ್ಪತೆಱದಿಂ ಬಂದಂಗಿರಿರಾಜಂ ಸ್ಮರರಾಗಾತುರಭರಭರಿತಂ ರತಾರ್ಥಿಮೂರ್ತಿ ವಿಳಾಸಂ
ವ. ಅಂತು ಬಂದು ಸಜ್ಜನ ಸ್ನೇಹದಿಂ ಸಜ್ಜೆವನೆಯಂ ಪೊಕ್ಕು ಹಂಸತೂಳತಳ್ಪದ ಮೇಲೆ ಮೇನೆಯುಂ ತಾನುಂ ಕುಳ್ಳಿರ್ದು ಬಳ್ಳಿವರಿವ ನೇಹಂ ಕುಡಿವರಿದು ನಿಮಿರೆ ಸುಖ ಸೊಂಕು ವಿಕಾಸಮನೆಯ್ದೆ ಸಹಜಾಮೋದಂ ಸೊಗಸನೀಯೆ ನೀಡಾಗದೆ ಗಾಢಾಲಿಂಗನಕ್ಕಾತರಿಸುವಲ್ಲಿ
ಲವಲವಿಸುವ ನೋಟಂ ಕೆತ್ತುವ ತೋಳ್ ಕಂಪಿಸುವ ಹಸ್ತಮೊಗೆವ ಬೆಮರ್ ಪೊಣ್ಮುವ ಪುಳಕಮುಣ್ಮುವಶ್ರುಗ-ಳವತರಿಸುವ ಗದ್ಗದಂ ಮನೋಹರಮಾಗಳ್
ಬರೆತೆಗೆದಪ್ಪಿಯಪ್ಪಿ ಮುದದಿಂ ಮೊಗದೊಳ್ ಮೊಗಮಿಕ್ಕಿಯಿಕ್ಕಿ ಸುಯ್ಯೆರಲೆಡೆಯಾಡೆ ಜಿಹ್ವೆ ನಲಿದಾಡೆ ಸುಖಂ ಸುಳಿದಾಡೆ ಲೀಲೆ ಮೋಹರಿಸೆ ಗಳಂ ಚಮತ್ಕರಿಸೆ ಗದ್ಗದಮಾಂತಿರೆ ಕಂಪನಂ ಕೊನರ್ತಿರೆ ಪುಳಕಂಗಳೆಳ್ದಿರೆ ಪರಸ್ಪರಮಾರ್ತದೊಳೊಲ್ದು ಕೂಡಿದರ್
ಪ್ರಿಯದಿಂದ ಮನಂ ಮನದೊಳ್ನಯನಂ ನಯನಂಗಳೊಳ್ ಮುಖಂ ಮುಖದೊಳಗಾಸುಯಿ ಸುಯ್ಯೊಳ್ ಕೆಯ್ ಕೆಯ್ಯೊಳ್ಮೆಯಿ ಮೆಯ್ಯೊಳ್ ಬೆರಸೆ ಬೆರಸಿದರ್ ದಂಪತಿಗಳ್
ಅರಲುತಿರೆ ನಯನ ಕುಮುದಂಪೊಱೆಯೇರುತ್ತಿರೆ ತನುಪ್ರಭಾ ಕೌಮುದಿ ಕಾಮರಸಾಬ್ಧಿ ಮಿಕ್ಕುಮೀಱುತ್ತಿರೆ ನೆರೆದರ್ ಭರಿತ ಸುರತ ಚಂದ್ರೋದಯದೊಳ್
ಸುರತಸುಖಂ ತವಿಲಱಿಯದೆಭರದಿಂದಮರ್ದಪ್ಪಿದಪ್ಪು ಸಡಿಲದೆ ತಮ್ಮೊಳ್ಬೆರಸಿದ ಸುಯ್ ಬಿರ್ಚದೆ ಬೇರ್ವರಿದ ಮನಂ ಬೇಱೆ ಪರಿಯದಿರೆ ನೆರೆದಿರ್ದರ್
ವ. ಇಂತು ಸಮಾನರಾಗ ಭೋಗ ಭರಿತ ಪರಮಸುಖದಿಂ ಸಂತುಷ್ಠ ಪುಷ್ಟ ಹೃದಯರಾಗಿ,
ತಿಳಿದು ಸುರತಾಂತದೊಳ್ ಕಣ್ಗೊಳಿಸುವ ಗಿರಿಪತಿಯುಮೆಸೆವಮೇನಾಸತಿಯುಂಕಳೆಯೋಡಿದಿಂದು ಬೆಳ್ದಿಂಗಳನಾಂತ ಚಕೋರಿಯೆಂಬಿನಂ ಮೆಱೆದಿರ್ದರ್
ವ. ಆ ಸಮಯದೊಳ್
ಪದೆಪಿಂ ಮೇನೆಯ ಹೃತ್ಕಮಲದ ಬೆಳಗಿಳಿತಂದು ಮಿಕ್ಕ ಶಕ್ತಿಸುಖದ ಸಂಗದೊಳೊಂದಿ ಬಳೆಯುತ್ತಿರ್ದುದುಸದಮಳರೂಪಿ ಭವಾನಿಯುಜ್ವಳ ತೇಜಂ
ತೊಳಪ ಸರೋಜಗರ್ಭದೊಳಗೊಪ್ಪುವ ಬಾಲಮರಾಳ ಪಿಂಡದಂತಳವಡೆ ಶಾರದಾಭ್ರದೊಳಗಿರ್ಪಲಸಚ್ಛಶಿಲೇಖೆಯಂತೆಯುಜ್ವಳಿಸುವ ಬೀಜದೊಳ್ ಪೊಳೆವ ಪುಣ್ಯಸುಧಾಲತೆಯಂತೆ ನಾಡೆ ಕಣ್ಗೊಳಿಸಿತು ಪುಣ್ಯಗರ್ಭಮತಿಶೈವ ಸುಖೋದರದಲ್ಲಿ ಮೇನೆಯಾ
ವ. ಇಂತೊಪ್ಪುತ್ತುಮಿರ್ದು
ಒಂದೆರಡು ಮೂಱು ನಾಲ್ಕಯ್ದೆಂದಾಱೇಳೆಂಬ ಮಾಸಮಾಗಿರೆ ಗರ್ಭಂಚಂದಂಬಡೆದೊಳಗೆಸೆದಾನಂದದೆ ಬಳೆಯಿತ್ತಗಣ್ಯ ಪುಣ್ಯೋದರದೊಳ್
ಅಱಿವಿನ ಕಣಿ ಮುಕ್ತಿಯ ಮಣಿಹೆಱೆಸೂಡಿದನಚ್ಚ ಸೊಗದ ಮೊಳೆ ಬೆಳೆಯುತ್ತುಂತೆಱಪುಗೊಳ್ಳುತ್ತಿರೆ ಮೇನೆಯಹೊಱಗೊಗೆದುದು ಗರ್ಭಸೂಚನಾ ಸೌಂದರ್ಯಂ
ವ. ಅದೆಂತೆಂದೊಡೆ
ತಿವಳಿಯವಿಳತ್ತಮಾದುವುನವನಾಭಿ ನಿವಾರಿಸಿತ್ತು ಗುಣ್ಪಂ ಕುಚವಾಂತುವು ಕುಡಿಗರ್ಪಂ ನೋಟಂತವೆ ತಳೆದುವು ನಸು ಬಳಲ್ಕೆಯಂ ಮೇನಕೆಯಾ
ನಡೆ ನಾಡೆ ಮಾಂದ್ಯದೊಳ್ ಪುಗೆಮುಡಿ ಮೂಡೆ ಕವಲ್ತು ಕದಪು ಕಾಂತಿಯನುಗೆ ಮೆಲ್ನುಡಿ ನೀಡೆ ಮೃದುಮಧುರಮಂನಡು ನೀಡಂ ಪೊಂಗೆ ಮೇನೆಗೆಸೆದುದು ಗರ್ಭಂ
ಮಿಗೆ ಬಾಸೆ ಬಣ್ಣವೇಱಿತುಸೊಗಯಿಸಿದುದು ಮೊಗರಸಂ ತುಳುಂಕಾಡುತೆ ಮೆಲ್ನಗೆ ಸೂಸಿತ್ತು ಬಳಲ್ಕೆಯನೊಗೆದುವು ನವನವ ಮನೋರಥಂ ಮೇನಕೆಯಾ
ವ. ಇಂತು ತೀವಿದ ಗರ್ಭದಿಂ ಭಾವಭರಿತ ಪರಮಹರ್ಷಂ ನೆಲೆಗೊಂಡು ಸುಖದೊಳಿರ್ಪ ಮೇನಾದೇವಿಯಿರವ ನಂತಃಪುರದೊಳ್ ಕಳಾಪ್ರೌಢೆಯರಪ್ಪ ವಿಳಾಸಿನಿಯರ್ ಗಿರಿರಾಜಂಗೆ ತೋಱುತ್ತುಮಿರ್ದರದೆಂತೆಂದೊಡೆ,
ಮುಡಿಯ ಭರಕ್ಕುರೋಜದ ಭರಕ್ಕೆ ನಿತಂಬಭರಕ್ಕೆ ನಾಡೆ ಮೆಲ್ಲಡಿಯಿಡಲೆತ್ತಲಾಱದಿವೆ ಮತ್ತಮದಲ್ಲದೆ ಪುಣ್ಯಗರ್ಭದಿಂಕಡುಪಿರಿದಾದ ಭಾರದೊಳದೆಂತಡಿಯಿಟ್ಟಪಳೆಂತು ನಿಂದಪಳ್ನುಡಿದಪಳೆಂತು ನೋಡುವಳದೆಂತು ಗಿರೀಶ್ವರ ನೋಡು ಮೇನೆಯಂ
ವ. ಎಂದು ಬಿನ್ನವಿಸುತ್ತಿರೆ ಕೆಲವುಂ ದಿನದೊಳ್
ಆದುದು ನವಮಾಸಂ ಪುಣ್ಯೋದರದೊಳ್ ಪಕ್ವಸಮಯಮಲರ್ದುದು ಸುಪಥಂವೇದಿಸಿದುದು ಸುಮುಹೂರ್ತಂಕಾದಿರ್ದುವು ಭರದೊಳೆಮಗೆ ತಮಗೆನುತಾಗಳ್
ವ. ಆ ಸಮಯದೊಳ್
ಅಲರ್ದ ಸರೋಜದಿಂದಮೊಗೆತರ್ಪ ಲಸತ್ಕಳ ಹಂಸಿಯಂತೆ ನಿರ್ಮಲತರ ಮೇರುವಿಂದೆ ಪೊಱಪೊಣ್ಮುವ ತನ್ಮಣಿಮಾಲೆಯಂತೆ ನಿಶ್ಚಲ ಪುರುಹೂತ ದಿಙ್ಮುಖದಿನೇಳ್ತರುತಿರ್ಪ ಮೃಗಾಂಕ ಬಿಂಬದಂತಳವಡೆ ಗೌರಿ ಗರ್ಭದೊಳಗಿಂ ಬರುತೊಪ್ಪಿದಳಂದು ಮೇನೆಯಾ
ಇಂದಿರೆ ಬಂದಿರೆ ಕೆಲದೊಳ್ನಿಂದಿರೆಯನಸೂಯೆ ಸಪ್ತಮಾತೃಕೆಯರ್ ತಾವೊಂದಿರೆ ರೋಹಿಣಿ ತಣ್ಪಂತಂದಿರೆ ಗಿರಿಜಾತೆಯೋತು ಪೊಱಮಡುತಿರ್ದಳ್
ತೆರೆ ಮಸಗೆ ಕಾಂತಿ ನಾಭೀಸರೋಜಮಲ್ಲಾಡೆ ಜೀವಹಂಸಿ ಬೆದಱೆ ಬಂಧುರ ಕುಚ ಚಕ್ರಂ ನಡುಗುತ್ತಿರೆ ಮೇನೆಯ ಗರ್ಭಸರಸಿಯಂ ಪೊಱಮಟ್ಟಳ್
ರತಿ ನೆಲನುಗ್ಗಡಿಸೆಯರುಂಧತಿ ಕೆಯ್ಗುಡೆ ಸುಖಮನೆಯ್ದೆ ಸಾವಿತ್ರಿ ಸರಸ್ವತಿ ಪೊಗಳೆ ಶಚಿ ನಲಿಯೆ ಪಾರ್ವತಿ ಮೇನೆಯ ಗರ್ಭನಿಳಯದಿಂ ಪೊಱಮಟ್ಟಳ್
ಇಳೆಯೊಳ್ ಪಾರ್ವತಿಯುದಯಿಸೆಕಳೆಯೇಱಿದನಿಂದು ಜೊನ್ನಮಲರ್ದುದು ಕಾಮಂತಳೆದಂ ನಿಜಭುಜ ಬಲಮಂಪುಳಕಿತಮಾಯ್ತಿಂದುಧರನ ವರವಾಮಾಂಗಂ
ಮದನನ ಕರ್ವುವಿಲ್ಗೆ ಮದವೇಱೆ ವಸಂತನ ಸರ್ವಭಾಗ್ಯ ಸಂಪದ ದಳವೇಱೆ ಲೋಕನಯನೋತ್ಪಳರಾಜಿ ವಿಕಾಸವೇಱೆ ಪರ್ಚೊದವಿದ ಮೇನೆ ತತ್ಪತಿಗಳುತ್ಸವವಾರಿಧಿಯೇಱೆ ಗೌರಿ ತಾನುದಯಿಸಿದಳ್ ಸುಧಾಂಶುಕಳೆ ಪಶ್ಚಿಮಭಾಗದೆ ಪುಟ್ಟಿದಂದದಿಂ
ಜಡೆಮುಡಿ ಇಂದು ಬಾಹು ಬಳೆ ಭಾಳವಿಲೋಚನಮಕ್ಷಮಾಲೆಯೊಳ್ಳುಡೆ ನವಕಾಂತಿ ಹಸ್ತಕಟಕಂ ಮೆಱೆಯುತ್ತಿರೆ ಪುಣ್ಯದಂತೆ ಕಂಪಿಡಿದ ಸುರದ್ರುಮ ಪ್ರಸವದಂತೆ ಪರಾಪರಮುಕ್ತಿಯಂತೆ ಸಂಗಡಿಸಿದ ಕಾಮಧೇನುವಿನವೋಲ್ ಗಿರಿರಾಜತನೂಜೆಯೊಪ್ಪಿದಳ್
ವ. ಇಂತೊಪ್ಪುತ್ತುಮಿರ್ದು,
ಶಿವಲಿಂಗೇಕ್ಷಣ ಲೋಲುಪೆಶಿವಪ್ರಸಾದಾತ್ತಚಿತ್ತೆ ಶಿವಭಕ್ತಿ ಶಿವೋತ್ಸವೆ ಶಿವಪುಣ್ಯಾಂಭೋನಿಧಿಶಿವನಂ ನೆಱೆನೆಚ್ಚಿ ಮಚ್ಚಿ ಕಣ್ಮುಚ್ಚಿರ್ದಳ್
ಇರೆ ಮೇನಾ ಮಾನಿನಿಯುಂಗಿರಿರಾಜನುಮಱಿಯದಂಜಿ ಗುರುಶೈವಾಚಾರ್ಯರನಂದು ಕೇಳೆ ಶಿವ ಶಿವಪರಮಶಿವಜ್ಞಾನದಿಂದಮವರಿಂತೆಂದರ್
ಅನುನಯದಿಂದೆ ಮುನ್ನಮವನೀತಳದೊಳ್ ಮಿಗೆ ಬಾಣನೆಂಬವಂಜನಿಯಿಸಿ ಕಣ್ಗಳಂ ತೆಱೆಯದಿರ್ದೊಡೆ ಲಿಂಗಮನಂದು ತೋಱೆ ಭೋಂಕನೆ ನಯನಂಗಳಂ ತೆಱೆದು ಕಂಡೊಲವಿಂ ಮೊಲೆಯುಂಡನಂತೆ ಸಜ್ಜನೆ ಗಿರಿಜಾತೆ ಕಣ್ದೆಱೆಯದಿರ್ಪುದು ತಪ್ಪದಿದುತ್ತರೋತ್ತರಂ
ಎನೆ ಗಿರಿರಾಜಂ ದೇವಾರ್ಚನಾ ನಿಕೇತನಕೆ ಬಂದು ಶಶಿ ರವಿ ಶಿಖಿ ಲೋಚನ ಶಿವಲಿಂಗಮನುತ್ಸವಜನಿತಮನಂ ತಂದು ಮುಂದೆ ನಿಂದೊಲವಿಂದಂ
ಅಮಮ ಪಯೋವಾರ್ಧಿಗೆ ಚಂದ್ರಮನಂ ಪುಣ್ಯಕ್ಕೆ ಮುಕ್ತಿಯಂ ತೋರ್ಪಂತಾವಿಮಳೆಗೆ ಗಿರಿಜೆಗೆ ಶಿವಲಿಂಗಮನಧಿಕ ಮನಃಪ್ರಮೋದದಿಂ ತೋಱುವುದುಂ
ತೋಱಲೊಡಂ ಕಣ್ದೆಱೆದಳ್ಪೇಱಿದಳೆರಡುಂ ಕರಂಗಳಂ ನೊಸಲೊಳ್ ಸೊಂಪೇಱಿದಳಭವನೊಳಗೆ ಬೇರೂಱಿದಳಂಕುರಿಸಿ ಪಲ್ಲವಿಸಿ ಫಲವಾದಳ್
ಆ ಕೆಯ್ಯೊಳ್ ಮೊಲೆಯುಂಡಳ್ಸಾಕಾರೆ ಶಿವಪ್ರಸಾದ ನವನೀತಮುಮಂಕೆಯ್ಕೊಂಡಳ್ ಗಿರಿಜಾವಧುಲೋಕೈಕಾರಾಧ್ಯೆ ಮೇನೆಯೊಡನೊಪ್ಪಿರ್ದಳ್
ವ. ಆ ಸಮಯದೊಳ್
ಮೂಡಿದ ಶೀತದೀಧಿತಿಗೆ ಕಾಲಪಿತಂ ಪ್ರಸವೋತ್ಸವಂಗಳಂಮಾಡುವ ಮಾಳ್ಕೆಯಿಂದಮರಭೂರುಹದಿಂ ನೆಗೆದಂಕುರಕ್ಕೆ ಕೊಂಡಾಡಿ ವಸಂತಕಂ ಜನನ ಕರ್ಮವನೊಪ್ಪಿರೆ ಮಾಡುವಂದದಿಂಮಾಡಿದನಳ್ಕಱಿಂದೆ ಗಿರಿರಾಜನ ಜಾತೆಗೆ ಜಾತಕರ್ಮಮಂ
ವ. ಅಂತು ಮಾಡೆ
ಬೆಳಗುವ ನಯನದ್ಯುತಿಯಿಂಬೆಳಗುವ ಗಂಡಸ್ಥಳಂಗಳಿಂ ಬೆಳಗುವ ಕೋಮಳ ತನುರುಚಿಯಿಂದಂ ತೊಳತೊಳಗುತೆ ನಳನಳಿಸಿ ಪೊಳೆಯುತಂಬಿಕೆ ಎಸೆದಳ್
ಮಂಗಳಮುಖಿ ಮಾನಿನಿ ಶಿವಲಿಂಗದ ಸುಖಲತೆ ಸಮಸ್ತ ಲಕ್ಷಣಯುತೆ ತಾನಂಗೆಯ್ಯ ಪದ್ಮದಿಂ ಚರಣಂಗಳ ಪದ್ಯಂಗಳಿಂದೆ ಗಿರಿಸುತೆಯೆಸೆದಳ್
ವ. ಆ ಪ್ರಸ್ತಾವದೊಳ್
ಜಯ ಜಯ ಜಯ ಜಯತು ಶುಭೋದಯೆ ವರನಿಧಿ ಮಾಯೆ ದೇವಿ ಶರ್ವಾಣಿ ಶಿವಪ್ರಿಯೆ ಶಾಶ್ವತೆ ಶಾಂತೆ ಜಗತ್ತ್ರಯಹಿತೆ ಶರಣೆನುತುಮಿರ್ದುದಬಳಾಲೋಕಂ
ವ. ಎಂಬ ಪುಣ್ಯ ಕೀರ್ತಿಯಂ ತಳೆದಿರ್ಪ ಸಮಯದೊಳ್ ಸಕಳ ವಾದ್ಯಂಗಳ ಮಂಗಳ ಧ್ವನಿಗಳುಂ ಪಿಂಗದೆ ಸುರಿವ ಸುರಕುಜದ ಸುಮನೋವೃಷ್ಟಿಯುಂ ಪುಟ್ಟಿದುದೆಂತೆಂದೊಡೆ:
ವರ ಶಂಖರವಂ ಕಹಳೆಗಳ ರವಂ ಡಿಂಡಿಮ ರವಂಗಳಾನಕದ ರವಂಕರಡೆಗಳ ರವಂ ನಿಸ್ಸಾಳರವಂ ಭೇರೀರವಂ ಮೃದಂಗರವಂಗಳ್
ಎಳನನೆಗಳ ಮೆಲ್ಸರಿ ನನೆಗಳ బಲ್ಸರಿ ಮುಗುಳ ತಂದಲಾ ಮೊಗ್ಗೆಯ ಪೆರ್ಮಳೆಯಲರ್ಗಳ ಬಿಱುಮಳೆ ಎಸಳ್ಗಳ ಸೋನೆ ಪರಾಗ ಪರಿಮಳದ ತುಂತುಱುಗಳ್
ವ. ಅಂತು ಪುಟ್ಟಿದ ವಾದ್ಯಧ್ವನಿಗಳುಮಂ ಗಿರಿರಾಜಂ ಕಂಡು ಮನಂಗೊಂಡು
ಇಳೆಗತಿಶೀತಳಂ ಮಿಗೆ ಗಿರೀಶ್ವರನುತ್ಸವದಿಂದೆ ತುಪ್ಪದೋಕುಳಿ ನವದುಗ್ಧದೋಕುಳಿ ಹಿಮವ್ರಜದೋಕುಳಿ ಜೇನತುಪ್ಪದೋಕುಳಿ ದಧಿಯೋಕುಳಿ ಪ್ರಸವದೋಕುಳಿ ಕತ್ತುರಿ ಚಂದನಂಗಳೋಕುಳಿ ಪನಿನೀರ್ಗಳೋಕುಳಿಯನಾಡಿದನುಬ್ಬಿದನೊಕ್ಕಿಲಿದಕ್ಕಿದಂ
ವ. ಅಂತೋಕುಳಿಯನಾಡಿ ನವೀನ ಶೃಂಗಾರಮಂ ಮಾಡಿ
ಆದರದಿಂ ಗೋದಾನಂಸ್ತ್ರೀದಾನಂ ವಸ್ತ್ರದಾನಮಿಭಕುಲದಾನಂಭೂದಾನಂ ಧನದಾನಂಶ್ರೀದಾನಂಗುಡುತುಮೊಪ್ಪಿದಂ ಗಿರಿರಾಜಂ
ಗುಡಿಕಟ್ಟಿತು ನೆಱೆ ಪುರದೊಳ್ಮಡುಗಟ್ಟಿತ್ತಚಳ ನಾಥ ಸಂತೋಷರಸಂಕುಡಿಯಿಟ್ಟುದು ಧೀಂಕಿಟ್ಟುದುಗಡಿಗೆಟ್ಟುದು ಪುಣ್ಯಕೀರ್ತಿಲತೆ ಧಾರಿಣಿಯೊಳ್
ವ. ಎಂಬ ಯಶಸ್ಸಿಂಗೆ ತಾವೆ ಭಾಜನರಾಗಿ ಗಿರಿರಾಜನುಂ ಮೇನಾದೇವಿಯುಂ ಪರಿಜನಮುಂ ಪುರಜನಮುಂ ಧರಾವಳಯಮುಂ ಪರಮಸುಖದಿಂದಿರ್ಪಲ್ಲಿ
ತೊಗಲದ ಪುಣ್ಯವಾರಿಧಿಗಗಣ್ಯ ಮರೀಚಿಗೆ ಲೀಲೆಯಿಂದೆ ಬಂದಿಳೆಯೊಳೆ ಪುಟ್ಟಿದಪ್ರತಿಮೆಗಾನತಲೋಕೆಗೆ ಶರ್ವನಾಮೆಗುಜ್ಜ್ವಳಿಪ ನಿಜಕ್ಕೆ ನಾಮಕರಣಂ ಗಿರಿಜಾತೆಯೆನಿಪ್ಪುದಾಗೆ ತೊಟ್ಟಿಲೊಳಿಡುತಿರ್ದರೊಪ್ಪುವ ಸುವಾಸಿನಿಯರ್ ಮನದುತ್ಸವಂಗಳಿಂ
ದಿಟದಿಂ ಜಗಕ್ಕೆ ತನ್ನುಂಗುಟಮೇ ತಾಯ್ದೊಟ್ಟಿಲಾದ ಗಿರಿಸುತೆಯನತಿಸ್ಫುಟಮಣಿಗಣಪ್ರಭಾಸಂಪುಟಮೆನಿಸುವ ರನ್ನದೊಟ್ಟಿಲೊಳಗಿರಿಸುತ್ತುಂ
ರಾಗಂ ಮಿಗೆ ಸಪ್ತರ್ಷಿಸ್ತ್ರೀಗಣಮೊಲವಿಂದೆ ಲಳಿತೆ ಬಂಗಾಳಂ ಶ್ರೀರಾಗಂಗಳೊಗೆಯೆ ಪಾಡುತೆತೂಗಿದರಖಿಳ ಪ್ರಪಂಚವಾಡಿಪ ಶಿಶುವಂ
ಜೋ ಸಕಳ ತತ್ತ್ವಮಯೆ ಜೋಜೋ ಸತ್ತ್ವಾದಿ ಗುಣರಹಿತೆ ಜೋ ನಿರ್ಮಳೆ ಜೋಜೋ ಸದ್ಗುಣೆ ಜೋ ಶಾಶ್ವತೆಜೋ ಸಂಪದೆ ಜೋ ವಿಶಾಲೆ ಜೋ ಶಿವೆ ಜೋಜೋ
ಜೋಜೋ ಶಂಕರನರ್ಧಮಂ ಕವರ್ದುಕೊಳ್ವತ್ಯಂತರೂಪಾನ್ವಿತೇಜೋಜೋ ಸರ್ವಜಗಚ್ಛಿಶುಪ್ರಕರಮಂ ರಕ್ಷಿಪ್ಪ ಮಾತಾಮಹೇಜೋಜೋ ಶೈವಸಮುದ್ರವರ್ಧನಕರ ಪ್ರಖ್ಯಾತ ಚಂದ್ರಾನನೇಜೋಜೋ ರಕ್ಷಿಸೆನುತ್ತೆ ತೂಗಿ ನಲಿದರ್ ಶರ್ವಾಣಿಯಂ ಜಾಣೆಯರ್
ವ. ಅಂತು ತೂಗುವ ಜೋಗುಳದ ರಾಗದೊಳಂ, ಮೊಲೆಯೂಡುವ ಮೇನೆಯ ಮಗ್ಗುಲೊಳಂ, ಸಾಗಿಸುವ ಸಾವಿತ್ರಿಯ ಸೋಗಿಲೊಳಂ, ಎತ್ತುವನಸೂಯೆಯ ಹಸ್ತದೊಳಂ, ಅಪ್ಪುವರುಂಧತಿಯುರದೊಳಂ, ನೆಗಪುವ ಗಾಯತ್ರಿಯ ಸೊಗಸಿನೊಳಂ, ಮುಟ್ಟುವ ರೋಹಿಣಿಯ ತಣ್ಪಿನೊಳಂ, ಸೋಂಕುವ ಕಮಳೆಯ ಸಂಪದದೊಳಂ, ಮುದ್ದಾಡಿಸುವ ಸರಸ್ವತಿಯೆ ಮಧುರ ವಾಣಿಯೊಳಂ, ನೋಡುವ ಶಚಿಯ ಸಂತೋಷದೊಳಂ, ಪರಸುವ ಸಪ್ತಮಾತೃಕೆಯರ ಪರಕೆಯೊಳಂ, ಮಿಕ್ಕುನಲಿವಚಲಗತಿಯಳ್ಕಱೊಳಂ, ಸಾಮರ್ಥ್ಯದ ಬಿಳ್ತಿನಂತೆ, ಸೌಂದರ್ಯದಂಕುರ ದಂತೆ, ಸೌಕುಮಾರ್ಯದ ಪಲ್ಲವದಂತೆ, ಸಾಹಿತ್ಯದ ಕುಸುಮದಂತೆ ಸತ್ಯದ ಫಲದಂತೆ, ಭೂಮಿಯ ಬಿಣ್ಪಿನಂತೆ, ಸಲಿಲದ ತಣ್ಪಿನಂತೆ, ಗಗನದ ಪೆಂಪಿನಂತೆ, ಪಯೋನಿಧಿಯ ಗುಣ್ಪಿನಂತೆ, ಪವಮಾನನುಸಿರಿ ಪಾವಕನ ತೇಜದಂತೆ, ಚಂದ್ರನ ಬಲದಂತೆ, ದಿವಸೇಂದ್ರನ ಕಿರಣದಂತೆ, ಪರಮಾತ್ಮನ ಪರಿಣಾಮದಂತೆ, ಲೋಕದಾ ಲೋಕದಂತೆ, ಸಲ್ಲಕ್ಷಣದ ಲಾವಣ್ಯದಂತೆ, ಬೆಳ್ದಿಂಗಳ ಬಣ್ಣದಂತೆ, ವಸಂತನ ವಶ್ಯದಂತೆ, ಮಲಯಾನಿಲನ ಮಹಿಮೆಯಂತೆ, ಮಕರಧ್ವಜನ ಮದದಂತೆ, ಕುಸುಮ ಬಾಣದ ಕುಶಲದಂತೆ, ಪುಣ್ಯದ ಜೀವದಂತೆ, ಶಿವಜ್ಞಾನದ ದೇಹದಂತೆ, ಸಾಲೋಕ್ಯದ ಸವಿಯಂತೆ, ಸಾಮೀಪ್ಯದ ಸೀಮೆಯಂತೆ, ಸಾರೂಪ್ಯದ ಸುಧೆಯಂತೆ, ಸಾಯುಜ್ಯದ ನಿಲವಿನಂತೆ, ಶಿವನ ಸುಖದಂತೆ, ಮುಕ್ತಿಯ ಮುಖದಂತೆ, ಕಾಂತಿಯ ಲತೆಯಂತೆ, ನಿರುಪಾಧಿಕ ಜ್ಯೋತಿಯಂತೆ, ಸಕಲ ಜಗನ್ಮಾತೆಯಪ್ಪ ಗಿರಿಜಾತೆ ಶೈಶವ ಲೀಲೆಯನೊಳಕೊಂಡು ತೊಳತೊಳಗಿ ಬೆಳಬೆಳಗಿ ನಳನಳಿಸಿ ಬಳೆಯುತಿರ್ದಳಂತು ಮಲ್ಲದೆಯುಂ,
ಸರಸಿಜ ಕುಟ್ಮಳಮಲರ್ವಂತಿರೆ ಕರುಣಾನಿಳಯ ಮೃದು ಕವಾಟಂದೆಗೆವಂತಿರೆ ನಗೆ ಮೊಗಮಂ ಸವಿವಂತಿರೆ ಗಿರಿಸುತೆ ಕಲ್ತಳಮರ್ದಿನಗೆಯಂ ನಗೆಯಂ
ಘನರಜತಗಿರಿಯ ಸಿಂಹಾಸನದೊಳ್ ನಲಿದಿರ್ಪ ಪರಿಯನಭವನ ತೊಡೆಯೊಳ್ಮನದೊಲವಿಂ ಕುಳ್ಳಿರ್ಪುದನನುಕರಿಸುವ ತೆಱದೊಳಗಜೆ ಕುಳ್ಳಿರೆ ಕಲ್ತಳ್
ತ್ರ್ಯಂಬಕನಂ ಬಲವರಲೆರಡೆಂಬೀ ಪದವೆಯ್ದವೆಂದು ನಾಲ್ಕುಂ ಕಾಲಿಂದಂ ಬಲವಂದಪಳೆಂಬಂತಂಬಿಕೆಯಂಬಳಿಕಿಯಾಡುವಳ್ ಶೈಶವದೊಳ್
ಬೇರ್ಪಡದೆ ಕೂಡೆ ತಾನೆಯಡರ್ಪಖಿಳಕ್ಕೆಂಬ ನೈಜಮಂ ಮೆಱೆಯಿಸುತಂದಾರ್ಪಿಂ ಭಿತ್ತಿಗಳಂ ನೆಮ್ಮಿರ್ಪಳ್ ನಿಂದಗಜೆ ಬಾಲ್ಯಮಂ ನಟಿಯಿಸುತುಂ
ಅಡಿಗಳ ಕೋಮಲತೆಗೆ ಧರೆಬಿಡಲಾಱದೆ ಪೊಡಮಡುತ್ತೆ ಬಿಡದಿರೆ ನಯದಿಂಬಿಡಿಸಿಕೊಳುತ್ತುಂ ಮೆಲ್ಲನೆನಡೆದಪಳೆನೆ ಮೆಱೆದುವಗಜೆಯೊಳ್ ದಟ್ಟಡಿಗಳ್
ಒಡನೆಯ ಸತಿಯರ್ ನೆಲನುಗ್ಗಡಿಸೆ ಧರಾಕಾಂತೆ ಮೆಲ್ಲಡಿಗೆ ಮದುವಾಗುತ್ತೆಡೆಗುಡುತುಂ ಪುಳಕಿಸುತಿರೆನಡೆಗಲ್ತಳ್ ಗಿರಿಜೆ ಪರಮನರಮನೆಯತ್ತಲ್
ರಸನೆಯ ಸುಧೆಯಂ ಮಿಗೆ ಸವಿದುಸವಿದು ಮಗ್ನತೆಯನೆಯ್ದಿ ಮಧುರಾಕ್ಷರಮುಬ್ಬಸದಿಂ ಪೊರಳುತ್ತುರುಳುತ್ತೊಸರ್ದಪುದೆನೆ ಗಿರಿಜೆಯೊಳ್ ತೊದಳ್ನುಡಿಯೆಸೆಗುಂ
ಮನದೊಳಗೆ ಪುಟ್ಟಿ ಕಂಠದೊಳನುನಯದಿಂ ಬಳೆದು ಜಿಹ್ವೆಯೊಳ್ ದಟ್ಟಡಿಯಿಟ್ಟಿನಸುಂ ಸುಳಿಗೊಳುತುಂ ಗಿರಿತನಯಳ ಮುಖದೊಳ್ ತೊದಳ್ನುಡಿಗಳೆಸೆದಿರ್ಕುಂ
ವ. ಅಂತುಮಲ್ಲದೆಯುಂ
ಮಂಗಳ ಮುಖಿಯರ್ ಸಖಿಯರ್ಸಂಗಡದಿಂ ಕೊಂಡುಕೊನೆಯುತಾಡಿಸುವೆಡೆಯೊಳ್ಪಿಂಗದೆ ಭುಜಲತೆ ಶಿವನಾಲಿಂಗನಮಂ ಪೇಳೆ ಬಾಲೆ ತೋಳಾಡಿಸುವಳ್
ಉಣ್ಮೆ ಶಶಿಧರನ ಬಗೆ ಮಿಗೆಪೊಣ್ಮುವ ಪುಳಕಂಗಳಿಂದೆಯಂತಃಸ್ಥಳದೊಳೊಲ್ದಾಣ್ಮನನೀಕ್ಷಿಪ ತೆಱದಿಂಕಣ್ಮುಚ್ಚುವಳಮಳೆ ವಿಮಳ ಕಮಳಾಕೃತಿಯಿಂ
ಗಿರಿಸುತೆ ಹರನಂಘ್ರಿಯನಂತರಂಗದೊಳ್ ಮುಚ್ಚಿ ಪೊಱಗೆ ನೋಳ್ಪಾಸೆಯೊಳಾಚರಣಾರುಣೋದಯಕೆ ತಾವರೆಯಲರ್ದವೊಲಂದು ಮುಂದೆ ಕಣ್ದೆಱೆದಿರ್ದಳ್
ವ. ಮತ್ತಮಾ ಶೈಶವದಲ್ಲಿ
ವರಭಾಳಾಕ್ಷದ ಮೇಲೊಂದುರುತರೆ ನಿಟಿಲಾಕ್ಷಮೊಗೆದುದೆಂಬಂತಿರೆ ಶಾಂಕರಿಗೆಸೆದುದು ಮುಂದಲೆಯೊಳಗರಳೆಲೆ ಬಹುರತ್ನ ನೂತ್ನಕಾಂತಿ ಪ್ರಕರಂ
ನೋಡಭವವಲ್ಲಭೆಯ ಕಿವಿಗೂಡಿದೆವತಿ ಸಫಲವಾದೆವೆನುತುಂ ಕುಣಿವಂತಾಡುವ ಗಿರಿಜೆಯ ಮೊಗದೊಡನಾಡುವ ಹೊನ್ನೋಲೆವಿಡಿದು ಪೊಸ ಮಾಗಾಯ್ಗಳ್
ಶಿವನಂ ಬಿಡದಪ್ಪುವ ತೋಳಿವನಪ್ಪಿ ಕೃತಾರ್ಥರಪ್ಪೆವೆಂಬಂದದೊಳಾನವರತ್ನದ ರವೆಯದ ಬಂದಿ ವಿರಾಜಿಸುತಿರ್ಪುದಪ್ಪಿಯಗಜಿಯ ತೋಳಂ
ಒದವಿರ್ದ ಸಕಲ ಲಾವಣ್ಯದ ಸಿರಿ ಕೆಯ್ಸಾರ್ದುದರ್ಕ್ಕೆ ಕಂಕಣಮಂ ಕಟ್ಟಿದವೋಲ್ ಮೆಱೆದುವು ವರ ಹಸ್ತದೊಳೆಸೆವಂಬಿಕೆಯ ಸುಕರ ಮಣಿಮಯಕಟಕಂ
ಪುರಮಥನನ ವರಕೀರ್ತ್ಯಂಕುರಮೀ ಗಿರಿಸುತೆಯ ವದನದೊಳ್ ಮೊಳೆತುದು ಸಾದರದಿಂ ತಾನೆಂಬಂತಿರೆಕರಮೆಸೆದುದು ವಿಮಳಮೌಕ್ತಿಕಂ ನಾಸಿಕದೊಳ್
ಅನವಧಿ ಗುಣನಿಧಿ ಪಾರ್ವತಿಜನಿಯಿಸೆ ತಾನಱಿದು ಬಂದು ಚಂದ್ರಾಭರಣಂಮನಮೊಸೆದು ತಾಳಿಗಟ್ಟಿದನೆನೆ ಮೆಱೆದುದು ಕೊರಲೊಳೇಕಮುಖ ರುದ್ರಾಕ್ಷಂ
ಈ ಶಶಿಮುಖಿ ದಿಟದಿಂ ವ್ಯಾಘ್ರಾಸುರ ಹರನ ನರಸಿಯೆಂಬುದರ್ಕಿದೆ ಕುಱುಪೆಂಬಾ ಸೈಪನಱಿವಂತಿರೆಬಾಸುರಮಾಯ್ತರರೆ ಪುಲಿಯುಗುರ್ ನಗಸುತೆಯಾ
ಹೆಱೆಸೂಡಿದನ ಮನವನೀತೆಱದಿಂದಂ ಸುತ್ತುವಳ್ ಭವಾನಿಯೆನಿಪ್ಪಾತೆಱನಂ ತೋಱುವ ತೆಱದಿಂಮೆಱೆವುಡಿಗೆಯ ಮೇಲೆ ಸುತ್ತಿದುಡೆವಣಿ ತೋರ್ಕುಂ
ಬಿಡೆವಿನ್ನೀ ಗಿರಿಜೆಯ ಮೆಲ್ಲಡಿಗಳನೆಂದಖಿಳ ವೇದಮುಲಿವಂತೆ ವಲಂನಡೆವೆಡೆಯೊಳಗುರ್ಬಿಂ ಬೊಬ್ಬಿಡುವಂದುಗೆ ಗೆಜ್ಜೆ ಸಜ್ಜನೆಗೆ ಸೊಗಯಿಸುಗುಂ
ವ. ಇಂತು ಸಕಲ ಸೌಂದರ್ಯಮಂ ಬೀಱುವ ಬಾಲದುಡಿಗೆವೆರಸು ಲೀಲೆ ಮಿಕ್ಕು
ತರದಿಂ ಗೆಜ್ಜೆಗಳುಲಿಯುತ್ತಿರೆ ಮಾಂಗಾಯಲುಗೆ ಮೂಡೆ ಮೆಲ್ನಗೆ ನಲವಿಂಪರಿಪರಿದು ಪೋಗಿ ಗಿರಿಸುತೆಹರಿಸಂ ಮಿಗೆ ಹರನ ನಿಳಯದೊಳ್ ನೆಲೆಸಿರ್ಪಳ್
ನಲಿವಳ್ ನಗುವಳ್ ರಾಗಿಪಳುಲಿವಳ್ ಮುದ್ದಿಸುವಳಳುವಳಪ್ಪುವಳಂತಿಂತೊಲೆವಳ್ ನಿಲ್ವಳ್ ಮೇನೆಯಮೊಲೆಯಂ ಮಱೆದಭವನಾಟದೊಳ್ ಸಂದಿರ್ಪಳ್
ವ. ಇಂತಾರುಮಂ ಬಗೆಯದೆ ನೆರಮಂ ಪಾರದೆ ಪೋಗಿ ಪರಮ ಪ್ರೀತಿಯಿಂ ಹರನಾಲಯದೊಳ್ ಗಿರಿಜಾತೆಯಿರ್ಪುದುಂ ಗಿರಿರಾಜಂ ಕಂಡು ಮನಂಗೊಂಡು ಜಡೆಮುಡಿಯ ಜಾಣೆಗೆ ಭಾಳತಳದ ಭಾಮಿನಿಗೆ ತ್ರಿಲೋಚನದ ಲಲನೆಗೆ ಕರ್ಣಪಾಲಿಕೆಯ ಕಾಮಿನಿಗೆ ಕಪೋಳ ವಿಪುಳೆಗೆ ನಗೆಗಣ್ಗಳ ನಲ್ಲೆಗೆ ನಾಸಿಕದ ನೀಱೆಗೆ ಬೆಳರ್ವಾಯ ಭಾಗ್ಯನಿಧಿಗೆ ಸಿರಿಮೊಗದರಸಿಗೆ ತೊದಳ್ನುಡಿಯ ಸದಮಳಗೆ ಕಂಬುಗ್ರೀವದ ಕಲ್ಯಾಣಿಗೆ ಪೇರುರದ ಪಾರಿಜಾತಕ್ಕೆ ನಳಿತೋಳ ನಿಜಕ್ಕೆ ಹಸ್ತಕಡಗದ ಹರಿಣಾಕ್ಷಿಗೆ ಬಡನಡುವಿನ ಬಾಲೆಗೆ ಸುಳಿನಾಭಿಯೆಳೆಯಳ್ಗೆ ಎಸೆವುಡಿಗೆಯ ಪೊಸಚೆಲ್ವೆಗೆ ನುಣ್ದೊಡೆಯ ನೂತನೆಗೆ ಕಿಱುದೊಡೆಯ ಕಾಮಧೇನುಗೆ ಮೃದುತಳದ ಮಂದಯಾನೆಗೆ ಗೆಜ್ಜೆಗಳ ಸಜ್ಜನೆಗೆ ಅಂದುಗೆಯಾನಂದೆಗೆ ನೇವುರದ ಭಾವಕಿಗೆ ಪಾಡಗದ ಪರುಷಕ್ಕೆ ಉಡಿಗೆಯ ಮೃಡಾಣಿಗೆ ಉಡೆವಣಿಯುತ್ಸಾಹಕ್ಕೆ ಕರವಲಯದ ಪರಬೊಮ್ಮಕ್ಕೆ ಹೊಂಗಡಗದ ಲಿಂಗವಂತೆಗೆ ತೋಳಬಂದಿಯ ಬಾಲಕಿಗೆ ಪುಲಿಯುಗುರ ಸುಲಲಿತೆಗೆ ನೇವಳದ ನಾಯಕಿಗೆ ರತ್ನದಾಳಿಯ ರಾಜಹಂಸೆಗೆ ಮಾಗಾಯ್ಗಳ ಮುಗ್ಧೆಗೆ ಹೊನ್ನೋಲೆಯ ಚೆನ್ನೆಗೆ ಮೂಗತಿಯ ಮುಗುಳ್ಗೆ ಅಂಜನದ ಮೃತಕ್ಕೆ ತಿಲಕದ ಲಲಿತೆಗೆ ಅರಳೆಲೆಯ ತರಳೆಗೆ ಸೂಸಕದ ಸುಮ್ಮಾನೆಗೆ ರುದ್ರಾಕ್ಷಿಯ ಭದ್ರಾಂಗಿಗೆ ವಿಭೂತಿಯ ವಿಳಾಸನಿಧಿಗೆ ಭಕ್ತಿಯ ಭಾವಕ್ಕೆ ಅಱಿವಿನವಯವಕ್ಕೆ ಶಿವಜ್ಞಾನದ ಸೀಮೆಗೆ ವೈರಾಗ್ಯದ ಮೇರೆಗೆ ಪರಮೈಶ್ವರ್ಯದ ಪುಣ್ಯಕ್ಕೆ ಲೋಕದ ಲೋಚನಕ್ಕೆ ಸಾಕಾರದ ಸುಧೆಗೆ ಪಶುಪತಿಯ ಪಟ್ಟದ ಮಹಾದೇವಿಗೆ ಸಕಳ ಜಗನ್ಮಾತೆಗೆ ಸಕಳ ಬ್ರಹ್ಮಾಂಡಮಂ ರಕ್ಷಿಸುವ ರುದ್ರಾಣಿಗೆ ರಕ್ಷಣಾರ್ಥಂ ತಂದೆ ನಿಯಾಮಿಸಿ ಕೊಟ್ಟ ದಂಡಿಗೆಯ ಧವಳಛತ್ರದ ಅಂಗರಕ್ಷಕರ ಸಹವಾಸಿಗಳ ದಾದಿಯರ ಪಡಿಯಱತಿಯರ ಚಾಮರದ ಸೀಗುರಿಯ ಹಡಪದ ಮಡಿವರ್ಗದ ಅಂಜನದ ಕನ್ನಡಿಯ ಕಳಶದ ಸಿರಿಮುಡಿಯ ಸಿಂಗರದ ಸಾದಿನ ಕುಸುಮ ಕುಳದ ಕತ್ತುರಿಯ ಕರ್ಪೂರದ ಶ್ರೀಖಂಡದ ರಾಜಶುಕಪಠಣದ ಹಂಸರಕ್ಷಣದ ಮಯೂರ ನರ್ತನದ ಲೀಲಾಂಬುಜದ ರತ್ನಕಂತುಕದ ವಿಳಾಸಿನಿಯರ ಹರಿದ್ರಾಭರಣದ ಚರಣ ಪ್ರಕ್ಷಾಳನದ ಕದಂಬ ಫಲಭಾರದ ಮಂಗಳಾರತಿಯ ಮಾನಿನಿಯರಾದಿಯಾದ ಪುಣ್ಯಾಗಣ್ಯಲಾವಣ್ಯಮಯ ಸಾಮ್ರಾಜ್ಯ ಪರಿಚರ್ಯಪಟುಗಳೆನಿಸಿದ ಷೋಡಶ ಸಹಸ್ರ ವಿಳಾಸಿನಿಯರ್ವೆರಸು ನಡೆತಂದ ಪೂರ್ವ ಸರ್ವವಿದ್ಯೆಗಳನಭ್ಯಾಸಂಮಾಡದೊಡಂ ಮುನ್ನಿನಂತೆ ಸಹಜಮಾಗಿ ನೆಲಸಿ ನಿಲೆ ವಿಹಿತ ನವೀನ ಕ್ರೀಡೆ ಬಾಲ್ಯಮಂ ಸವಿದಪುದೆನೆ ಸಲ್ಲೀಲೆಯಿಂ ಶೈಲಾತ್ಮಜೆ ಕೇಳೀವನಂಗಳಂ ಪುಗುತಂದು,
ಎಲ್ಲಿ ಸರೋಜಮೆಲ್ಲಿ ವಿಮಳೋತ್ಪಳಮೆಲ್ಲಿ ಲತಾನದೊಳ್ಪೆಲ್ಲಿ ವನಂಗಳೆಲ್ಲಿ ಕೃತಕಾಚಳಮೆಲ್ಲಿ ವಿಶಾಲಮಪ್ಪತಣ್ಪೆಲ್ಲಿ ತಟಾಕಮೆಲ್ಲಿ ಪುಳಿನಸ್ಥಳಮೆಲ್ಲಿ ನದೀನದಾಳಿ ತಾನಲ್ಲಿ ಭವಾನಿ ಭಕ್ತಿಮಿಗೆ ಭಾವಿಸಿ ಭರ್ಗನನೊಲ್ದು ಪೂಜಿಪಳ್
ಕಣ್ಮಲರಿಂದಶ್ರುಜಲಂಪೂಣ್ಮುತ್ತಿರೆ ತನುವಿನಲ್ಲಿ ಪುಳಕಂ ಸಾಲ್ಗೊಂಡುಣ್ಮುತ್ತಿರೆ ಗಿರಿಪತಿಸುತೆನುಣ್ಮಳಲಿಂ ದಿವ್ಯಲಿಂಗಮಂ ವಿರಚಿಸುವಳ್
ವಿರಚಿಸುವ ಲಿಂಗದೊಳ್ ಮೃದುಕರಾಂಗುಲಿಸ್ಪರ್ಶಸುಖಮನೆಳಸುತೆ ಶರ್ವಂಪರಿತಂದು ನಿಲ್ವನೆಂದೊಡೆಗಿರಿಜೆಯ ಸೌಭಾಗ್ಯದಿರವನಾರ್ ಬಣ್ಣಿಸುವರ್
ವ. ಇಂತು ಸೌಕುಮಾರ್ಯ ಶೃಂಗಾರಮನಾಂತು,
ಹಿಮಕರ ಕಿರಣಾವಳಿಗಳ್ಕುಮುದದ ಸೋಂಕಿಂದೆ ಕಂಪನಪ್ಪಿದುವೆನೆ ವಿಭ್ರಮ ಮಲ್ಲಿಕಾನಿಕಾಯದೆಕಮಳಾನನೆ ವಿಮಳಲಿಂಗಮಂ ಪೂಜಿಸುವಳ್
ತರಣಿಯ ತರುಣಕಿರಣಮಂಬುರುಹಪರಿಷ್ವಂಗದಿಂದೆ ಪರಿಮಳಮಂ ಪೊತ್ತರಲ್ದಪುವೆನಿಸುವ ಸಂಪಗೆಯರಲಿಂದಂ ಗಿರಿಜೆ ಹರನನೊಲ್ದರ್ಚಿಸುವಳ್
ತರಣಿಯ ಮಧುಕರನಿಕರದಮರುತನ ಕಾಲ್ದುಳಿಯಿವೆಂದು ಪೂವಂ ಬಿಟ್ಟಾಗಿರಿಸುತೆ ಮನಃಕುಸುಮದಿಂಪರಮನನೇಕಾಂತಭೂಮಿಯೊಳ್ ಪೂಜಿಸುವಳ್
ವ. ಅಂತುಮಲ್ಲದೆಯುಂ
ವನರುಹನಾಳಂ ದಂಡಂವನರುಹ ನವಪತ್ರವೊಂದೆ ಪೊಸಸೂರೆ ಮತ್ತಾವನರುಹ ಸೂತ್ರಂ ತಂತ್ರಿಗಳೆನೆ ಶಿವನಂ ಜಾಣೆ ಬೀಣೆಯಂ ಕೇಳಿಸುವಳ್
ವ. ಇಂತು ಬಾಲಲೀಲೆ ಶಿವಲೀಲೆಯಾಗಿ ಕೆಲನಱಿಯದೆ ಬಲನಱಿಯದೆ ಪಸಿವನಱಿಯದೆ ತೃಷೆಯನಱಿಯದೆ ದೆಸೆಯಱಿಯದಿರುಳ್ ಪಗಲಱಿಯದೆ ಪರಿಜನಮಂ ಪರೀಕ್ಷಿಸದೆ ಶಿವನಂ ಮರುಳ್ಗೊಂಡು ಭವಾನಿಯಿರೆ ಕಂಡು ಕೌತುಕಗೊಂಡು ಸಹಚರಿಯರ್ ತಮತಮಗಂಜಿ ಭಾರತಿಗೋರನ್ನಳೆನಿಪ್ಪ ನಾರಿಯೊರ್ವಳಂ ಗಿರಿರಾಜನಲ್ಲಿಗೆ ಭರದಿಂ ಕಳುಪಿದೊಡಾ ತರುಣಿ ಭೀತಿಯಿಂ ಪರಿತಂದರಮನೆಯಂ ಪೊಕ್ಕೋಲಗದೊಳ್ ನಿಂದು ನಗಾಧಿಪಂಗೆ ನಯಂ ಮಿಗೆ ಭಯಭಕ್ತಿಯಿಂ ಮೆಯ್ಯಿಕ್ಕಿ ಕೆಯ್ಮುಗಿದು ನಿಂದು,
ದೇವಕುಮಾರಿಬಾಲೆ ಸುಕುಮಾರಿ ಸಮರ್ಥೆಯತಿ ಸ್ವತಂತ್ರೆ ನಾನಾವಿಧ ಶೈಲರಾಜಿ ನವರಾಜಿ ಸರೋವರರಾಜಿ ಸಲ್ಲತಾಂತಾವಳಿ ಸೈಕತಾವಳಿ ಲತಾವಳಿಯೆಂಬಿವಱಲ್ಲಿ ಸಂತತಂದೇವರ ದೇವನಂ ಶಿವನನರ್ಚಿಸುತಿರ್ದಪಳೊಲ್ಲಳೇನುಮಂ
ದೇವಿಯ ಮೊಲೆವಾಲಂ ಪರಿಭಾವಿಸಳಾರಯ್ಯಳಂಜಳಳ್ಕಳ್ ವನದೊಳ್ತೀವಿರ್ದ ಗುಲ್ಮಲತೆ ವೃಕ್ಷಾವಳಿಯೊಳ್ ಲಿಂಗಪೂಜೆಯೊಳ್ ಸಂದಿರ್ಪಳ್
ಕಲ್ಲೆನ್ನಳ್ ಮುಳ್ಳೆನ್ನಳ್ಮೆಲ್ಲಿತ್ತಿದು ಬೆಟ್ಟಿತ್ತೆನ್ನಳತಿ ಭಕ್ತಿಯೊಳಂತೆಲ್ಲಿ ಸುಖಸ್ಥಳಮುಂಟಾದಲ್ಲಿ ವಿರೂಪಾಕ್ಷ ಪೂಜೆಗೀಡಾಗಿರ್ಪಳ್
ಬರೆದರೊ ಬೈತರೊ ಪೊಲ್ದರೊಪೊರೆದರೊ ಬೆಚ್ಚರೊ ಮಗುಳ್ಚಿ ಕರುವಿಟ್ಟರೊ ಕಂಡರಸಿದರೊ ಕಡೆದರೊ ಎನೆಗಿರಿರಾಜತನೂಜೆ ಪೂಜೆಯೊಳ್ ರಾಜಿಸುವಳ್
ಬೇಡೆಂದೊಡೆ ಮಾಣಳ್ ನಲಿದಾಡುವಳಪ್ಪುವಳಮರ್ಚುವಳ್ ಪುಳಕಿಪ್ಪಳ್ಮಾಡುವ ಲಿಂಗಾರ್ಚನೆಯೊಳ್ನೋಡಳ್ ನುಡಿಯಳ್ ಭವಾನಿಯೇನೆಂದಱಿಯಳ್
ವ. ಎಂದು ಬಿನ್ನವಿಸೆ ಕೇಳ್ದು ಗಿರಿರಾಜಂ ನಿಜಾತ್ಮಜಾವಲೋಕನ ಹರ್ಷವದನಂ ಭದ್ರಾಸನದಿಂ ಭೋಂಕನೇಳ್ದು ಪೊಱಮಡುತ್ತೆ ಆರಾಧಿತಾರ್ಯ ಪ್ರಕರನುಂ, ದಾನಪ್ರಮೋದಿತ ನಾನಾದ್ವಿಜನುಂ, ತ್ಯಾಗಪರಿಪೋಷಿತ ವಂದಿವ್ರಜನುಂ, ಅವಷ್ಟಂಭಿತ ಕುಂಭಿ ಕುಂಭಸ್ಥಳಪೂರ್ವಾಸನನುಂ, ಸಮಸ್ತಮುಕ್ತಾನೀತ ಮೌಕ್ತಿಕಾತಪತ್ರನುಂ, ಪಾರ್ಶ್ವಯುಗನರ್ತಿತ ಚಮರ ವಿಭ್ರಮನುಂ, ನವೀನನರ್ತಕೀ ನರ್ತನಲೀಲಾವಿಲಾಸೇಕ್ಷಣನುಂ, ಬಹಳ ಕಹಳಾರವಬಧಿರೀಕೃತದಿಙ್ಮಂಡಲನುಂ, ನಿಸ್ಸೀಮೋದ್ಧತ ನಿಸ್ಸಾಳನಾದನುಂ, ಮಕರಾಯಮಾನದ್ವಿರದ ಕುಲತರಂಗಾಯಮಾನ ತುರಂಗೌಘ ಮೇಘಾಯಮಾನರಥಯುತ ಸೇನಾಸಮುದ್ರನುಮಾಗಿ ನಡೆತರುತ್ತುಂ ಮುಂದೆನಿಂದು ಬಹಿರ್ವನದೊಳಗಣ ಹಾಲಚೂತಾಂಕುರಮಂ ಬಲವಂದು ಭಾವಿಸಿ ನೋಡಿ ತೀವಿದ ನೇಹದಿಂದೋವಿಯೋವಿ ನಸುಕರ್ದುಂಕಿ ನವರಸಮಂ ಸವಿಸವಿದು ಸೊರ್ಕಿ ಪಕ್ಕಮಂ ಬಿರ್ಚಿ ಮಿಕ್ಕು ನೆಗೆದೆಳದಳಿರ ಬಳಗದೊಳ್ ಪೊರಳ್ದು ಪಾರ್ದು ನಲಿನಲಿದು ನೋಡಿನೋಡಿ ಮಲೆತುನಿಂದು ಮೇಲಣ ತರುಶಾಖಮನೇಱಿ ವಿರಹಿಗಳತ್ತಲ್ ಬರಲಾಗ ಕಾಮದೇವನ ತೋಟಿ ಬೇಡೆಂದು ಬಿರುದೆತ್ತಿ ಕರೆವ ಕಂದರ್ಪನ ಕಹಳೆಗಳೆಂಬಂತೆ ತಂಡ ತಂಡದಿಂ ಕೂಗುವ ಗಂಡುಗೋಗಿಲೆಗಳಂ, ಮತ್ತಮಲರ್ದಿರದೆ ಮುಕುಳಿತಮಾಗದುಳ್ಳಲರ್ದ ಬಿರಿಮುಗುಳೊಳ್ ಭರದಿಂ ಪೊಕ್ಕು ಪೊಸಕಂಪನೆಸೆಯೆ ಪೀರ್ದು ತಣಿ ತಣಿದಣಿಯರದಿಂದುರ್ಕಿ ಸೊರ್ಕಿ ಮೊರೆದ ನೆರೆದು ಮೇಗಣ್ಗೆ ನೆಗೆದು ಸಾಲ್ಗೊಂಡೇಱಿ ವನಲಕ್ಷ್ಮಿಪಾರ್ವತಿಗೆ ಲೀಲೆಯಿಂದೋಲಗಿಸಲೆಂದೆತ್ತಿದ ನೀಲದ ಮಾಲೆಯಂತೆ ನೆಱೆಮೆಱೆವ ಮಧುಕರ ಪ್ರಕರಮಂ, ಮತ್ತಂ ಸೆಳೆಗೊಂಬಿನ ತನಿವಣ್ಣಂ ತವಕದೊಳಪ್ಪಿ ರಸದೊಱತೆಯ ಸೆಱೆಯಂತಿರ್ಪ ಪಣ್ಣ ಸೆರೆಯಂ ಕಂಡು ಕಣ್ಣೊಳಾಲಿಂಗಿಸುವಂತೆ ಸವಿ ಸವಿದು ನೋಡಿ ಚಂಚುಪುಟದೋಳೀಡಿಱಿದೆಚ್ಚು ಪಾಯ್ವ ರಸಧಾರೆಗೆ ನಾಲಗೆಯೊಡ್ಡಿ ನಲಿನಲಿದೀಂಟಿ ತಣಿದು ತೂಗಿ ತೊಂಡುಗೆಡೆದು ವಸಂತರಾಜನ ಪಡಿಯಱರಂತೆ ವಿರಹಿಗಳಂ, ಚಪ್ಪರಿಪ ರಾಜಕೀರಂಗಳಂ ಮತ್ತಮಗಲ್ದ ಪೆಣ್ಣಂಚೆಯಂ ಪುಳಿನಸ್ಥಳದ ಕುಸುಮರಜದ ಪೊಸಪಜ್ಜೆವಿಡಿದಱಸಿ ಪೋಗಿ ಕೊಳನಂ ಪೊಕ್ಕು ಘಳಿಲನೆ ಕಂಡಮರ್ದಪ್ಪಿ ಕಮಲವನದೆಲೆದುಱುಗಲಿಱುಂಬಿನೊಳನುರಾಗದಿಂ ನೆರೆವ ರಾಜಹಂಸ ಮಿಥುನಂಗಳಂ, ಮತ್ತಂ ಕಳ್ತಲಿಪ ತಮಾಲವನದೊಳ್ ವಿರಹಿಗಳನಱಸಲೆಂದು ಕಾಮದೇವನೆತ್ತಿಸಿದ ಕೆಯ್ದೀವಿಗೆಗಳಂತೆ ಪಲ್ಲವರಾಗದಿಂ ಪಲ್ಲವಿಸಿ ತೋರ್ಪಶೋಕದ್ರು ಮಂಗಳಂ, ನಿಂದ ಲತೆಗಳನಲ್ಲಾಡಿಪ ಮಂದಾನಿಳನಂ, ಅಗಲ್ದರಂ ನಗುವಂತೆ ನಸುವಿರಿದ ದಾಡಿಮಂಗಳಂ, ಸುಳಿವ ವಿದ್ಯಾಧರಿಯರಂ ಕುಣಿವ ನವಿಲ್ಗಳಂ ಕರೆವ ಕೊಳರ್ವಕ್ಕಿಗಳಂ, ನೆರೆವ ಚಕ್ರಮಿಥುನಂಗಳಂ, ಕಂಡು ಗಿರಿರಾಜಂ ಕೊಂಡಾಡುತಂ ಬಂದು ಮುಂದೆ ಪುಂಡರೀಕ ಪ್ರಕರ ಪರಿಮಳಾಸಕ್ತ ಭ್ರಮರಕುಲವಿಲಸಿತಮಾದ ಕಾಸಾರತಟದೊಳ್ ಮಂದಾನಿಳನಿಂ ಪರೆದ ಪರಾಗದ ಪೀಠದ ಮೇಲಣ ನುಣ್ಮಣಲ ಶಿವಲಿಂಗಮನಗಣಿತ ಪ್ರೇಮದಿಂ ಸೊಗಮಿಕ್ಕು ಮಿಗೆ ಪೂಜಿಸುತ್ತಿರ್ದ ಮಗಳಂ ಕಂಡು,
ಬಿಡದೇಳ್ವ ಪುಳಕತತಿಯೊಡನೊಡನಾನಂದಾಶ್ರುವೊಗೆಯೆ ಬಗೆವೆರ್ಚುತ್ತಿರ್ಮಡಿ ಮೂವಡಿ ನಾಲ್ವಡಿಯಯ್ವಡಿ ಸಂತಸದಿಂದೆ ತಂದೆ ಮಗಳಂ ಕರೆದಂ
ಬಾರೆನ್ನಾಯುವೆ ಬಾರ ಪುಣ್ಯತತಿಯೇ ಬಾರೆನ್ನ ಸೌಂದರ್ಯವೇಬಾರೆನ್ನಾದಿಯೆ ಬಾರ ಶೈವನಿಧಿಯೇ ಬಾರೆನ್ನಯ ಪ್ರಾಣವೇಬಾರೆನ್ನೊಲ್ಮೆಯೆ ಬಾರ ತತ್ತ್ವಸುಖಮೇ ಬಾರೆನ್ನ ಮಾತಾಮಹೇಬಾರೆನ್ನಾಳ್ದಳೆನುತ್ತುಮೊಲ್ದು ಕರೆದಂ ಶರ್ವಾಣಿಯಂ ಶೈಳಪಂ
ವ. ಇಂತು ಕರೆದ ನಿಜಜನಕಜನಿತ ಸ್ನೇಹರಸಾರ್ದ್ರಮಧುರಾಕ್ಷರಸಮ್ಮಿಳಿತ ಸಾತ್ವಿಕ ಸರಮಂ ಕೇಳ್ದು ಪುತ್ರೀಭಾವಮಂ ನಟಿಸಲೆಂದು ಶಿವಲಿಂಗಮಂ ಬೀಳ್ಕೊಂಡು ತಿರುಗಿನೋಡಿ,
ನಿಂದಿರ್ದು ನಗುತೆ ನಲಿಯುತ್ತಂದುಗೆ ಪೊಂಗೆಜ್ಜೆಯುಲಿಪು ನೆಲನುಗ್ಗಡಿಸುತ್ತಂದೆಸೆಯೆ ಮಂದಯಾನದೊಳಿಂದು ಪ್ರಭೆ ಮುಂದೆ ಮುಂದೆ ನಡೆತರುತಿರ್ದಳ್
ಅರಳೆಲೆ ಭಾಳದೊಳಾಡುತ್ತಿರೆ ಮಾಂಗಾಯ್ಗಂಡಯುಗಳಮಂ ಮುಂಡಾಡುತ್ತಿರೆ ಕುರುಳ್ಗಳ್ ಕುಣಿದಾಡುತ್ತಿರೆ ಸತಿಯರ ನಡುವೆ ಗಿರಿಜೆ ನಡೆತರುತಿರ್ದಳ್
ನವಿಲಾಟಂ ಹಂಸೆಯ ನಡೆತವೆ ಮಂದಾನಿಳನ ಸುಗತಿ ಮದಗಜಗಮನಂತವತವಗಡಂಗುತಿರ್ದುವುನವೀನ ಬಾಲಕಿಯ ಮಧುರ ಮೃದುಪದಗತಿಯೊಳ್
ಎಂದೆನಿಸ ವಿಳಾಸಂ ಮಿಗೆಮುಂದಾಡುತೆ ತೊಳಪ ಬೆಳಪ ಬೆಳತಿಗೆಗಣ್ಗಳ್ಮಂದೈಪ ಮೆಲ್ನಗೆಯನುಗೆಬಂದಪ್ಪಿದಳಗಜೆ ಸೊಗಯಿಸುತ್ತಿರೆ ಪಿತನಂ
ವ. ಅಂತು ಬಂದಪ್ಪಿದಾಗಳ್,
ಮಾಣಿಕವೆ ಮೌಕ್ತಿಕವೆ ಮತ್ಪ್ರಾಣವೆ ಪೊನ್ನೊಱೆಯೆ ಪರುಷವೇ ಮುಕ್ತಿಯ ನಿರ್ಮಾಣವೆ ಎನುತುಂ ಮೂರ್ಧ್ನಾಘ್ರಾಣಂ ಬೆರಸಗಲಪ್ಪಿದಂ ಗಿರಿರಾಜಂ
ಸುತ್ತಿದ ಪರಮ ಸ್ನೇಹದೆಮತ್ತಂ ಮತ್ತಪ್ಪಿ ಪುಳಕಿಸುತ್ತುಂ ಪುಟವೇಱುತ್ತುಂ ಪೊಣ್ಮುತ್ತುಂ ನಲಿಯುತ್ತೆ ಗಜಾರೂಢನಾಗುತುಂ ಗಿರಿರಾಜಂ
ಪೂರ್ವಾಸನದೊಳ್ ಪದೆಪಿಂಪಾರ್ವತಿಯಂ ಹರ್ಷವೇಱೆ ಬಿಜಯಂಗೆಯ್ಯುತ್ತುರ್ವುತೆ ಕೊರ್ವುತೆ ಪರ್ವುತೆಪರ್ವತರಾಜಂ ಪುರಕ್ಕೆ ತಿರುಗಿದನಾಗಳ್
ಒಸೆದೆತ್ತಲ್ ತನ್ನ ಬೆನ್ನೊಳ್ ಬರುತಿರೆ ಚತುರಂಗಂ ಮಹಾದೇವಿ ಶರ್ವಾಣಿ ಸಮಸ್ತಾಧಿಕ್ಯೆ ಪೂರ್ವಾಸನದೊಳಿರೆ ಬರುತ್ತೊಪ್ಪಿದಂ ಶೈಳಪಂ ಸಂತಸದಿಂ ಭೂಭಾಗಮಂ ನೋಳ್ಪತಿಭರವಶದಿಂ ಪೂರ್ವಗೋತ್ರಾಗ್ರದೊಳ್ ತಾಂಶಶಿಯಂ ಮುಂತಿಟ್ಟು ಬರ್ಪುಜ್ವಳ ವಿಮಳ ವಸಂತಂಬೊಲಾನಂದದಿಂದಂ
ಬರುತಿರೆ ಮುಂದೆ ಪಟ್ಟಣದೆರಳ್ದೆಸೆಯೊಪ್ಪುವ ರಾಜವೀಧಿಯೊಳ್ನೆರೆದ ಶಶಾಂಕವಕ್ತ್ರೆಯರ ಕಣ್ಗಳ ಕಾಂತಿ ಶರೀರ ಕಾಂತಿಯಾಭರಣದ ಕಾಂತಿ ರತ್ನಕುಲಕಾಂತಿ ದರಸ್ಮಿತಕಾಂತಿಯೆಂಬ ವಿಸ್ತರಿತ ಸುಖಾಬ್ಧಿಯಂ ಸುಖದೊಳೀಸುತೆ ಬಂದನಗೇಂದ್ರವಲ್ಲಭಂ
ವ. ಅಂತು ಬಂದು ಸಕಲ ರಾಜಲೋಕಂ ಬೆರಸು ಗಿರಿರಾಜಂ ರಾಜಧಾನಿತಿಳಕಮೆನಿಪ ರಾಜಮಂದಿರದ ಮುಂದೆ ನಿಂದು,
ಪೊಳೆವ ಗಜದಿಂದಮವನೀತಳಕ್ಕೆ ನಿಜತನುಜೆವೆರಸು ಬಿಜಯಂಗೆಯ್ದಗ್ಗಳಿಪ ಶಶಿಸೂರ್ಯ ವಂಶೋಜ್ಜಳರಂ ಕಳಿಪುತ್ತೆ ಬಂದನಗಕುಲರಾಜಂ
ಪರಿಜನಮೊಡನೊಡನೊಲ್ದೊಪ್ಪಿರೆ ಕೆಲ ಬಲ ಪಡಿತಳಾವಧಾರುಯೆನುತ್ತುಂಬರುತಿರೆ ತನೂಜೆ ಸಹಿತಂಗಿರಿರಾಜಂ ಸಿಂಹವಿಷ್ಟರಸ್ಥಿತನಾದಂ
ಹಾರಮರೀಚಿ ತತ್ಕುಚಮರೀಚಿ ಕಪೋಳ ಮರೀಚಿಯಾನನಸ್ಮೇರಮರೀಚಿ ಲೋಚನಮರೀಚಿ ಲಲಾಟಮರೀಚಿ ದಂತವಿಸ್ತಾರಮರೀಚಿಗಳ್ ತೊಳಗುವಾರತಿಗಾರತಿವೆತ್ತು ಸುತ್ತಿ ನಿಂದಾರತಿಯೆತ್ತಿದರ್ ಗಿರಿಜೆಗಂ ಜನಕಂಗಮನಂತಕಾಂತೆಯರ್
ವ. ಅಂತೆತ್ತುವಾರತಿಗಳಂ ಕೆಯ್ಕೊಂಡು ಗಿರಿರಾಜಂ ನಾನಾ ಹರ್ಷದಿಂ ಮೇನಾ ದೇವಿಯಂ ಕರೆಯಿಸಿ ಬರುತಿರ್ದಳದೆಂತೆಂದೊಡೆ
ಎಡಬಲವಂಕದೊಳ್ ನೆಲನನುಗ್ಗಡಿಪಾಳಿಯರಿಂ ವಿಳಾಸದಿಂದಡಿಯಿಡುವಲ್ಲಿ ನೇವುರದ ನುಣ್ದನಿಗಾಡುವ ಹಂಸೆವಿಂಡಿನಿಂಬಿಡದೆ ಮುಖಾಬ್ಜಸೌರಭವನುಣ್ಬ ಮದಾಳಿಗಳಿಂ ವಿನೂತನಂಬಡೆದತಿಮಾನಿ ಮೇನೆ ನಡೆತಂದು ನಿರೀಕ್ಷಿಸುತುಂ ಭವಾನಿಯಂ
ಏನೆನ್ನಾಯುವೆ ಎನ್ನಪಾರಸುಖಮೇ ಏನೆನ್ನ ಪುಣ್ಯಾಬ್ಧಿಯೇಏನೆನ್ನುತ್ಸವಮೇ ವಿಳಾಸನಿಧಿಯೇ ಏನೆನ್ನ ಸೌಂದರ್ಯಮೇನಾನಾ ಪರ್ವತದೊಳ್ ವನ ಪ್ರಕರದೊಳ್ ಸಂಪೂರ್ಣ ಕಾಸಾರದೊಳ್ನೀನೇಕಿಂತಿರಲೇಕೆ ತಾಯೆ ಎನುತುಂ ಬಂದಪ್ಪಿಕೊಂಡಪ್ಪಿದಳ್
ವ. ಇಂತು ಮೊಲೆಯೊಡನೆ ಕಣ್‌ತೊಱೆಯೆ, ಪುಳಕದೊಡನೆ ಗದ್ಗದಂ ಪೊಣ್ಮೆ, ಸ್ವೇದದೊಡನೆ ಕಂಪಂನಂ ಕನರೆ, ಸಿಂಹಪೀಠದ ಸಿಂಗರದ ಶಿಶುವಂ ಮೊಗೆದಪ್ಪಿ ತೆಗೆದಪ್ಪಿ ಮೂರ್ಧ್ವಾಘ್ರಾಣಮಂ ಮಾಡಿ ಮೊಲೆಯೂಡಿ, ಮೇನೆಯುಂ ಗಿರಿರಾಜನುಂ, ಕಣ್ ತೀವಿ ನೋಡಿ, ಮೆಯ್ ತೀವಿಯಷ್ಪಿ, ಮನಂತೀವಿ ನೆನಹಿನೊಳಿಟ್ಟು ಶಶಿಕಲೆಯಂ ಸಲಹುವಂತೆ ಸೌಕುಮಾರ್ಯಮಂ ಸುಯಿಧಾನಂ ಮಾಳ್ಪಂತೆ ಸೊಬಗಂ ಸಂವರಿಸುವಂತೆ ಬೆಳ್ದಿಂಗಳಂ ಬಣ್ಣವಿಡುವಂತೆ, ಭೋಗಮಂ ಸಾಗಿಸುವಂತೆ, ಚೆಲ್ವಂ ಚಮತ್ಕರಿಸುವಂತೆ, ಸಾಹಿತ್ಯಮಂ ಸಯ್ತಿಡುವಂತೆ, ಪ್ರಾಣಮಂ ಪರಿರಕ್ಷಿಪಂತೆ, ಜ್ಞಾನಮಂ ಬಳೆಯಿಸುವಂತೆ, ಶಾಂತಿಯಂ ಕಾಂತಿಯಿಡುವಂತೆ, ಸತ್ಯಮಂ ಸಂತವಿಡುವಂತೆ ನಿತ್ಯಮಂ ಪ್ರತ್ಯಕ್ಷಮಂ ಮಾಳ್ಪಂತೆ, ಪುಣ್ಯಮಂ ಪುಟವಿಡುವಂತೆ, ಮುಕ್ತಿಯಂ ಮೂರ್ತಿಗೊಳಿಸುವಂತೆ, ಪಾರ್ವತಿಯಂ ಸಲಹುತ್ತುಮಿರೆಯಿರೆ,
ಇದು ಸಮಸ್ತ ಸುರಾಸುರಮಕುಟ ಖಚಿತ ದಿನಕರಕರಾಧಿಕ್ಯ ಮಾಣಿಕ್ಯ ಪ್ರಭಾಪುಂಜರಂಜಿತಚರಣ ನೆನಿಪ ಪಂಪಾವಿರೂಪಾಕ್ಷ ಶ್ರೀಪಾದಕಮಲ ಮಕರಂದ ಮಧುಕರಾಯಮಾಣ ಸತ್ಕವೀಶ್ವರ ಹಂಪೆಯ ಹರಿಹರದೇವ ವಿರಚಿತಮಪ್ಪ ಶ್ರೀ ಗಿರಿಜಾಕಲ್ಯಾಣ ಮಹಾಪ್ರಬಂಧದೊಳ್ ಹೈಮವತೀ ಶೈಶವ ವರ್ಣನಂ ತೃತೀಯಾಶ್ವಾಸಂ


