EN | KA

Menu

XI

Khagendramaṇidarpaṇa

ವೃಶ್ಚಿಕ ಪ್ರಕರಣಂ

ಶ್ರೀಕರುಣಾಕರನಂ ಜಿತಶೋಕವಿಮೋಹ ಸ್ಮರೋಗ್ರಭವಸಂಹರನಂಏಕಾಗ್ರತೆಯಿಂ ನೆನೆದೀಲೋಕದ ವೃಶ್ಚಿಕವಿಶೇಷಮಂ ಪ್ರಕಟಿಸುವೆಂ

ಚಿನ್ಮಯರನಿರ್ವರಂ ವಿಲಸನ್ಮುನಿಗಳನೊಸೆದು ಮೂವರಂ ಕ್ರಮದಿಂದಂಮನ್ಮಾನಸದೊಳ್‌ ಭಾವಿಸಿತನ್ಮಂತ್ರ ಮಹೌಷಧಂಗಳಂ ವಿವರಿಸುವೆಂ

ಆರುಣಂ ಹೇಮಾಭ ಪೀತಂ ಮಣಿಧವಳ ಹರಿದ್ರಾಭ ಕೃಷ್ಣಂ ಕುಳಿಂದಂಸಿರ ರೇಖಾರಾಜಿಯಾ ರೋಮಶ ಕಬಲನುಮಾ ತಾಳುಕಾಹ್ವಂಗಳಾಭಂಪರಘಾತಾಖ್ಯೋಗ್ರ ಕರ್ಮಂಗಳೆ ಮಧುನಿಭಯುಕ್ತಂಗಳಾಗಿಂತು ಪತ್ತುಂಬೆರಸಿರ್ದಾ ಮೂಱಱೊಳ್‌ ವೃಶ್ಚಿಕಕುಲಮಿಳೆಯೊಳ್‌ ಪುಟ್ಟುಗುಂ ಕಷ್ಟಜನ್ಮಂ

ಖಳಸರ್ಪಂಗಳ ಲೋಳೆ ಸೂಸಿದ ಧರಾಭಾಗಂಗಳೊಳ್‌ ವೃಶ್ಚಿಕಾವಳಿಯಕ್ಕುಂ ಮಿಡಿಯಲ್ಕಮಂತವತಿಮೂರ್ಛಾ ಕಂಪ ಲಾಲಾಸ್ರವಂಮಳಮೂತ್ರಂ ಮಱುಕಂ ಬೆಮರ್‌ ಗುದಮರುತ್ಕೋಪಂ ಮನಸ್ತೋಭಮಾಕುಳಿ ಲಿಂಗಸ್ಫುರಣಂ ಗಳಕ್ಕುಮದಱಿಂ ತಜ್ಜೀವಿತಂ ದುರ್ಲಭಂ

ಒಂದುಂ ಮೂಱೈದೇೞ್ ಪನ್ನೊಂದುಂ ಪದಿನೈದುಮಂತೆ ಪದಿನೆಂಟೊಂಬತ್ತೆಂದಿಂತು ಧರೆಯ ವೃಶ್ಚಿಕಸಂದೋಹದ ಮಣಿವಿಭೇದಮಕ್ಕುಂ ನಿರುತಂ

ಮಣಿ ಸಮದಾಗಿರೆ ಸಾಧ್ಯಂಮಣಿಗಳ್‌ ವಿಷಮಂಗಳಾಗಲಂತದಸಾಧ್ಯಂಮಣಿಯೊಂದಾದುದು ವೃಶ್ಚಿಕಗಣದಧಿಪತಿ ಕಾಲಮೃತ್ಯುರೂಪನಸಾಧ್ಯಂ

ಕೆಂದಲೆಯ ಸರಟನಂ ನವಿಲಂದಮುಮಂ ನೆನೆಯೆ ತೇೞ ವಿಷಮದು ಪರೆಗುಂನೊಂದವನುಂ ಮಾಂತ್ರಿಕನುಂಸಂದೆಯಮೇಂ ಭಾವಿಸಲ್ಕೆ ನಿರ್ವಿಷಮಕ್ಕುಂ

ವ. ಇನ್ನು ನಾನಾ ವೃಶ್ಚಿಕಜಾತಿಗೆ ತನ್ಮಂತ್ರಂಗಳಂ ಪೇೞ್ವೆನದೆಂತೆಂದೊಡೆ

ಮಂತ್ರಂ. ಓಂ ನಮೋ ಭಗವತೇ ಪಾರ್ಶ್ವನಾಥಾಯ ಸಕಲ ಕ್ಷುದ್ರೋಪದ್ರವ ನಿರ್ನಾಶ ನಾಯ ಶ್ರಾಂ ಭ್ವ್ರೋಂ

ಶ್ರಾಂ ಪ್ರಾಂ ಭ್ರ್ವೋಂ ಪ್ರಾಂ ಭ್ರ್ವೋಂ ಸ್ರಾಂ ಹ್ರಾಂ ಭ್ರ್ವೂಂ ಹ್ರಾಂ ಹ್ರೀಂ ಹ್ರೋಂ ಹ್ರೌಂ ಹ್ರಃ ಸ್ವಾಹಾ

ತೊಡೆ ಕರವೀರದ ಶಾಖೆಯನಡಿಗಡಿಗೀ ಮಂತ್ರದಿಂದೆ ವೃಶ್ಚಿಕನಿಕರಂಮಿಡಿದವಿಷಂ ಕಿಡುಗುಂ ಮುಕ್ಕೊಡೆಯನ ದಿವ್ಯ ಮಂತ್ರಮೇಂ ಕೇವಳಮೇ

ಮಂತ್ರಂ. ಓಂ ನಮೋ ಭಗವತೇ ಪಾರ್ಶ್ವತೀರ್ಥಂಕರಾಯ ಅಷ್ಟಾದಶ ವೃಶ್ಚಿಕಾನಾಂ

ಇಳಿ ಮಿಳಿ ಚಳಿ ವಜ್ರಮುಷ್ಟಿ ಮಹಾಮುಷ್ಟಿ ಸ್ವಾಹಾ

ಈ ಮಂತ್ರದಿಂದಮೊಸೆದಂತಾ ಮಾಂತ್ರಿಕನಿೞಿಯೆ ಮಂತ್ರಿಸಲ್‌ ವಿಷಮಿೞಿಗುಂಈ ಮಂತ್ರದಿಂದಮೊಪ್ಪದೊಳಾ ಮಾಂತ್ರಿಕನೇಱಿಸಲ್ಕುಮೇಱುವುದು ವಿಷಂ

ಮಂತ್ರಂ. ಓಂ ಸವರಿ ಪೂನೆ ಸವರ ಸವರಿ ಸನಿವದ ಸುಲರಂನಮೊಡಂತೆಪಾಯಂ

ಚೇಳುಪಿಯು ಫಣಿಯುಕ್ತ ದೇವಿಯ ಗುರುಂ ಚ ಸಿದ್ಧಿ

ನೀರಂ ತ್ರಿವಾರಮೆಸೆವಿನಮಾರೞ್ದಾ ಮಂತ್ರದಿಂದೆ ಮಂತ್ರಿಸಿ ಕುಡಿಸಲ್ಭೋರೆನಲೂದುಗೆ ಕಿವಿಯಂಬಾರಿಸುಗುಂ ವೃಶ್ಚಿಕಾಂಗ ವಿಷದುಗ್ರತೆಯಂ

ಮಂತ್ರಂ. ಓಂ ಕೃಷ್ಣಮಾತಂಗಿ ಓಂ ಫಟ್‌ ಹ್ರೂಂ ಫಟ್‌ ಸ್ವಾಹಾ

ಸಂಧಿಸಿ ಮಂತ್ರದೆ ಮುಂಬಲ್ಲಿಂದರಳಿಯ ಮುಗುಳನಗಿವುತುಂ ಥೂ ಥೂ ಯೆಂದಂದಭಿಮಂತ್ರಿಸಿ ಭಸ್ಮಮನಂದಿೞಿಪಲ್‌ ತೇೞ ವಿಷಮದಾಕ್ಷಣಮಿೞಿಗುಂ

ಮಂತ್ರಂ. ಓಂ ಉಡುಂ ಜಟ್ಟು ಜಟ್ಟತಿ ತೆಳಿಟ್ಟಾ ಬಟ್ಟೆ ಉಡುಂಬು ತೇೞಿಂವಿದ ವಟ್ಟ

ಬಟ್ಟೆ ಉಡುಂಬುಂ ತೇೞಿಂ ವಿದಟ್ಟು ಬಟ್ಟೆವುಡುಂ ಬೆರತೇೞಂ ಚಂಪೋೞಿಂ ಸ್ವಾಹಾ

ಮೇಳಿಸದಿಪ್ವತ್ತೊಂದೇಸೂೞುವರಂ ಮಂತ್ರಿಸುತ್ತೆ ತೊಡೆವುದು ಮತ್ತಂಜೋಳದ ದಂಟಿಂದಿೞಿಗುಂತೇೞವಿಷಂ ಹಿಮದೊಳೞಿವ ತೆಱದಿಂ ಕಮಲಂ

ತಲೆಯಿಂ ಚರಣಂಬರಮುಂಮಲಯೋದ್ಭವದಿಂದೆ ಬರೆವುದಾ ಶ್ರೀಕಾರಂಚಲಿಸದಿರಲ್‌ ಭ್ರಮಿಸಲ್ಕಂಕೆಲದೊಳ್‌ ಸ್ವಸ್ಥಾಂಗನಪ್ಪನಲ್ಲಿಂ ಬೞಿಯಂ

ಅಷ್ಟಾದಶ ಸಂಖ್ಯಾತಂಸ್ಪಷ್ಟಮೆನಲ್‌ ಬರೆದು ಮಾೞ್ಪುದುಂ ಫೂತ್ಕಾರೋತ್ಕೃಷ್ಟತೆಯಿಂ ವೃಶ್ಚಿಕತತಿದಷ್ಟವಿಷಂ ಕಿಡುಗುಮೆಸೆವ ಮಂತ್ರದ ದೆಸೆಯಿಂ

ವ. ಅದೆಂತೆಂದೊಡಲ್ಲಿ

ಮಂತ್ರಂ. ಶ್ಲೋಕ

ಆದಿತ್ಯ ರಥವೇಗೇನ ವಿಷ್ಣುಬಾಹುಬಲೇನ ಚ

ಗರುಡೋತ್ಪಕ್ಷಪಾತೇನ ಭೂಮ್ಯಾಂ ಗಚ್ಛ ಮಹಾವಿಷಂ

ಓಂ ಶ್ರೀಂ ಪಕ್ಷಿಯೋಗಿಪಾದಾಜ್ಞಾ ಶ್ರೀಸಿದ್ಧಪರಮೇಷ್ಠಿಪಾದಾಜ್ಞಾ ನಿರ್ವಿಷಂ ಭವತಿ

ನಸ್ಯಂ, ಧೂಪಂ

ಎಲ್ಲಾ ಧೂಪಮುಮಂ ಕೊಳ್ವಲ್ಲಿ ಕರಂ ಮುಸುಕನಿಕ್ಕಿ ಪೊಗೆ ಪೋಗದವೊಲ್ಮೆಲ್ಲನೆ ಪೊಗೆಯಂ ಕುಡಿಯಲ್ನಿಲ್ಲವು ಪದಿಮೂಱು ತೆಱದ ತೇೞಿನ ವಿಷಗಳ್‌

ನವಿಲುಂ ಚರಣಾಯುಧ ಪಾರಿವಮೆಂಬಿವಱೆಚ್ಚಮರ್ಕಮೂಲಮಿವಂ ತಾಂಜವದಿಂ ಧೂಪಂಗೊಳಲಹಿನಿವಹ ಸಮುದ್ಭೂತ ವೃಶ್ಚಿಕೋಗ್ರವಿಷಘ್ನಂ

ಅದುವುಂ ಮತ್ತಂ ಖರಪುಚ್ಛದ ರೋಮಂ ತಚ್ಛಿರೋಜ ಕಪಿಲೆಯ ರೋಮಂಪದೆಪಿಂ ತದ್ಘೃತದೊಡನಿಕ್ಕಿದ ಧೂಪಂ ತೇೞವಿಷಮನಾಗಳೆ ಕಿಡಿಕುಂ

ಅರಿಸಿನದ ಚೂರ್ಣದಿಂ ಮೇಣರೆದಂತದುಮಲ್ಲದಿರ್ದೊಡಿಟ್ಟಿಯ ಬಿತ್ತಂವಿರಚಿಸೆ ಧೂಪಮನದಱಿಂಪರೆಗುಂ ಪದಿಮೂಱು ತೆಱದ ವೃಶ್ಚಿಕದ ವಿಷಂ

ವರ ಪುಷ್ಯಾರ್ಕದ ದಿವಸಂಸಿರಿಸದ ಮೂಲಮನೆ ತಂದು ಕೞಿಯಿಂ ಬೆರಸಿಟ್ಟರೆದಿರದೆ ನಸ್ಯಮಂ ತಾಂವಿರಚಿಸೆ ವೃಶ್ಚಿಕಮಹೋಗ್ರವಿಷಮಂ ಕಳೆಗುಂ

ನಾಗರಮಂ ಜಲದಿಂದಂಪೋಗೊರಸಿಯೆ ನಾಸಿಕಾಂತರಾಳದೊಳೆಱೆಯಲ್ಕಾಗಳೆ ವೃಶ್ಚಿಕವಿಷಮಂಭಾಗಿಸುಗುಂ ಬುಧಜನೈಕಮಿತ್ರನ ಮತದಿಂ

ನಿಂಬಫಳಂ ಘನಂ ಕ್ರಿಮಿಹರಂ ಕಟುಕತ್ರಯಮೆಂಬಿವಂ ಸಮಂಗೊಂಬುದು ಗವ್ಯಮೆಂದೆನಿಪ ಮೂತ್ರದೊಳಿಟ್ಟರೆದಂತದಂ ಸಿರಾಂತಂಬರೆಗಂ ಮನೋಮುದದೊಳಂ ಪಿೞಿ ನಸ್ಯಮನಾದೊಡಂ ತದರ್ಕುಂ ಬಹುತರತಂತ್ರಮೇಕೆ ವಿಷವೃಶ್ಚಿಕದುಗ್ರವಿಷಂಗಳೋಡುಗುಂ

ಕರ್ಣಪೂತ್ಕಾರಂ – ಮಂತ್ರಂ.

ಹಂಸಪದಿಯೆಸೆವ ಬೇರ್ಗಳುಮಂ ಸಿದ್ಧಿಸಿ ತಂದು ಸವಿದು ಕಿವಿಗೂದಲೊಡಂಹಂಸಕ ವೃಶ್ಚಿಕ ವಿಷವಿಧ್ವಂಸನಮಂ ಮಾೞ್ಪುದಂತದಮಳಚರಿತ್ರಾ

ನಿಂಬ ಸುಪತ್ರದೊಳಂ ಬಜೆಯಂ ಬೆರಸದನಡಸಿ ಮೆಲಿದು ತೇೞ್ಗಡಿದನ ಕರ್ಣಂಬುಗಲೂದಲ್‌ ವಿಷಮಿೞಿಗುಂ ಬುಧಜನಮಿತ್ರ ಮಂಗರಾಜನ ಮತದಿಂ

ದಕ್ಷಿಣಭಾಗದ ತೇೞ ವಿಪಕ್ಷಯಕರಮಲ್ತೆ ವಾಮಕರ್ಣದೊಳೂದಂತೀಕ್ಷಿಸಿ ನಿಶೆಯಂ ಸವಿದಂತಾಕ್ಷಣದಿಂ ವಾಮತನುಗೆ ತದ್ವಿಪರೀತಂ

ತಿಂಬುದು ಕಾರ್ಪಾಸದ ಬೇರಂ ಬೞಿಯಂ ಕಿವಿಯಲೂದಲಂತದಱಿಂದಾಡಂಬರದ ತೇೞ ವಿಷಮುಂಕುಂಬಳದಿಂ ಪಿಂಗೆ ಕಣಿಕದಂದದೊಳೞಿಗುಂ

ಕವಳಂ

ತಿಲದನಿತೆ ವತ್ಸನಾಗನನೊಲಿದೀವುದು ಮೇಲ್ತದಂಗದೊಳ್‌ ವೃಶ್ಚಿಕ ಸಂಕುಲಮೊತ್ತಿಪಿಡಿದ ತಾಣದೊಳಲಸದೆ ಪೂಸಲ್‌ ಸಮಸ್ತ ವಿಷಮನದೞಿಗುಂ

ಪಾನಂ

ಜಲದಿಂದಂ ತೇೞ್ಕುಟುಗನನೆಲಗುಂಬಳಮೆಂಬಿವಂ ಸಮಂಗೊಂಡರೆದಿಂಪಲವಱೊಳೇಂ ಕುಡಿಸಲ್ಕಂಖಿಲ ವೃಶ್ಚಿಕವಿಷಮದಾಕ್ಷಣಂ ಪಱಿಪಡುಗುಂ

ಎಕ್ಕೆಯ ಕನಕದ ಬೇರ್ಗಳನಿಕ್ಕುವುದೊಂದಾಗಿ ನೀರೊಳರೆದೀಂಟಲೊಡಂನಿಕ್ಕುವಮಿಂ ತೇೞ ವಿಷಂಮೆಕ್ಕೆಯ ವಾಸನೆಯ ಕಣಿಕದಂತದು ಕಿಡುಗುಂ

ಮಿಸುಗುವ ಸೈಂಧವಮೊಂದಂಬಿಸುನೀರಿಂ ಬೆರಸಿ ಕುಡಿದೊಡಂತಾಕ್ಷಣದಿಂದೆಸೆಗಿಡುಗುಂ ತೇೞವಿಷಂಬಿಸಿಲರಿಸಿನದಂತೆ ಕವಿಕುಲಾಂಬುಜಭಾನೂ

ಸಾಲದೆ ತೇೞೂಱಿದೊಡಾಚೀಲೈತನ ಬೇರನೊಂದೆ ಕೞಿಯಿಂದೀಂಟಲ್ಬಾಲಮದು ಸೋಂಕಿದೆಡೆಗಾಮೂಲಮನಂತರೆದು ಪೂಸೆ ನಿರ್ವಿಷಮಕ್ಕುಂ

ಲೇಪಂ

ಹುಲಿಗಿಲ ಪುತ್ರಜೀವಿಗಳ ಮುತ್ತದ ಬೀಜಗಳಂ ಸಮಂತು ತಾಂಜಲದೊಳಮಿಟ್ಟು ಸಣ್ಣಮೆನಲಂತರೆ ಲೇಪಿಸದಲ್ಲದಂದು ಮೇಣ್ವಿಲಸಿತ ಭಾನುದುಗ್ಧ ಘೃತಮಂ ತೊಡೆ ತೇೞ ವಿಷಂಗಳೋಡುಗುಂಸುಲಲಿತ ಮಂದಮಾರುತನ ಚಂದನದಗ್ರದ ಕೋಷ್ಣದಂದದಿಂ

ಎಕ್ಕೆಯ ಬೇರ್‌ ಮಯೂರಶಿಖಿ ಯಿಲ್ಲಣಮೆಂಬಿವನೆಯ್ದೆ ಕೊಂಡು ನೀಂಚಕ್ಕನೆ ಕೂಡಿ ಮತ್ತರೆದು ಲೇಪಿಸೆ ವೃಶ್ಚಿಕಮೂಱಿದೊಂದು ತಾಣಕ್ಕೆ ಬೞಿಕ್ಕಮುಗ್ರಮೆನಿಸಿರ್ಪ ವಿಷಂ ಕಿಡುಗುಂ ಜನಂಗಳೆಕ್ಕೆಕ್ಕೆಗೆ ಬಾದುಗೆಯ್ದು ಕಿಡುವಂತಿರೆ ಲೋಕದ ಪಕ್ಷಪಾತದಿಂ

ಪಲವಂದದ ಮರ್ದುಗಳಂಪೊಲವೊಲದೊಳಮಱಸಲೇಕೆ ಹಿಂಗುಮನೊಂದಂಜಲದಿಂದಮರೆದು ಪೂಸುವುದಲಸದೆ ನೀಂ ತೇೞವಿಷಮದಾಗಳೆ ಕಿಡುಗುಂ

ಖಳವೃಶ್ಚಿಕವಿಷದುಗ್ರಂತೊಲಗುಗುಮಂಬಿಲದೊಳರೆದು ಪೂಸಲೊಡಂ ಲಾಂಗಲಿಯೆಸೆವ ಕಂದಮಂ ಮೇಣಲಸದೆ ಘೃತ ನಿಂಬಪತ್ರ ಸೈಂಧವಮಿನಿತಂ

ಮರಿಚಮುಮಂ ಪಿಪ್ಪಲಿಯಂಸರಿವೆರಸರೆದರ್ಕದುಗ್ಧದಿಂ ಪೂಸಲೊಡಂಪರಿಹರಿಕುಂ ತೇೞಿನ ಪಾವರಣೆಯ ಪಾವಿನ ವಿಷಂಗಳೆಲ್ಲಂ ಧರೆಯೊಳ್‌

ಇನದುಗ್ಧದೆ ಮುತ್ತದ ಬಿತ್ತಿನ ತಿರುಳುಮನೇೞುಸೂೞ್ ಭಾವಿಸಿಯುಂ ಲೇಪನಮಂ ಮಾಡಲೊಡಂ ತೇೞಿನ ವಿಷಮಿರದೞಿಗುಮೆಂದನಪಗತಕಲುಷಂ

ಮರ್ಕಟನ ಕೆಯ್ಯ ಸುಂಕಂಕರ್ಕಟಕನ ಕರ ಕಪಾಲ ನಾಂಗುಲಿಯುತದಿಂದರ್ಕಕ್ಷೀರದೆ ತೇೞವಿಷಕ್ಕೇಱಲುಮಿೞಿಯೆ ಪೂಸಲೇಱುಗುಮಿೞಿಗುಂ

ನವಿಲಱವೊಱಸಿನ ಕುಕ್ಕುಟದ ವಿಷ್ಠೆಯಂ ಭರದೊಳೇಱೆ ಪೂಸಲೊಡಂ ತಾನವಯವದಿಂದೇಱುಗುಮಿೞಿಪುವ ಪದದೊಳಮಿೞಿಗುಮುಗ್ರ ವೃಶ್ಚಿಕದ ವಿಷಂ

ಸೊಡರ್ಗುಡಿಯ ತೈಲದೊಳ್‌ ತಂದೊಡಗೂಡಿದ ಕಿವಿಯ ಕೊಗ್ಗಿಯಂ ಪೂಸಲೊಡಂತಡೆಯದೆ ಕೆಂದೇೞೆಂಬುದುಮಿಡಿದ ವಿಷಂ ಪವನನಿದಿರ ಸೊಡರಂತಕ್ಕುಂ

ಸೊಡರಿಂದೊಸರ್ದೆಣ್ಣೆಯುಮಂತೊಡೆವುದಲ್ಲದೊಡೆ ಗುಂಜಿಯೊಪ್ಪುವ ಬೇರಂತಡೆಯದರೆದಂತದಂ ಮೇಣ್ತೊಡೆವುದು ಕೆಂದೇೞಿನ ವಿಷಮದಾಗಳೆ ಕಿಡುಗುಂ

ಕೆಂದೇೞ್ ಮಿಡಿದೊಡೆ ತವುಡಂತಂದಿಕ್ಕಿದ ಧೂಪದಿಂದೆ ತದ್ವಿಷಮೞಿಗುಂಸಂದೆಯಮೇಂ ಮೇಣ್‌ ಗುಗ್ಗುಳದಿಂದೊಪ್ಪುವ ಧೂಪದಿಂದೆ ತದ್ವಿಷಮೞಿಗುಂ

ಎಕ್ಕೆಯ ದಳಂಗಳೊಳ್‌ ತಾಂಮೊಕ್ಕಳಮೆಸೆದಿರ್ಪ ತುಪ್ಪಮಂ ತೊಡೆವುರಮಂಚಕ್ಕನೆ ಕಾಸಿಯೆ ಕಟ್ಟಲದುಕ್ಕಲಿಕುಂ ತೇೞ ವಿಷಮನನುಪಮಚರಿತಾ

ಸಮ್ಮಾರ್ಜನೆ – ರಕ್ಷೆ

ರವಿವಾರದೊಳಂ ಲುಂಗದನವಮೂಲಮನಗೆದು ತಂದು ವಾಮಾಂಗದ ತೇೞವಿಷಕ್ಕೆ ಹಂ ಎನುತ್ತುಂತವನಂ ಮಂತ್ರಿಸು ಬಲಕ್ಕೆ ತದ್ವಿಪರೀತಂ

ಇನವಾರದೊಳಂಗುರು ಸಿತಮೆನಿಸಿದ ಗಣಜಿಲೆಯ ಬೇರರಕ್ಷೆಗಳಂ ತಾನನುಮಾಡಿರೆ ತೇೞಿಡಿದನತನುವಿಂದಿೞಿಪುತ್ತುಮಿರ್ಕೆ ತದ್ವಿಷಮಿೞಿಗುಂ

ಸಿದ್ಧಿದಿನಂಗಳೊಳ್‌ ತಹುದು ಮೋನದೆ ಬೇವಿನಕೋಲನಂತದಂಶುದ್ಧ ದಿನೇಶದುಗ್ಧದೊಳೆ ಭಾವಿಪುದೇಱೆನಿಸಿರ್ಪ ಸೂೞ್ವರಂಗೃದ್ಧೃ ಮಯೂರ ಕುಕ್ಕುಟನ ವಿಷ್ಠೆಯೊಳೊಪ್ಪುವ ಬ್ರಹ್ಮಬೀಜಮಂತದ್ಧಿತಮೆಂದೆನಲ್‌ ಬೆರಸಿ ಪನ್ನೆರಡಪ್ಪಿನ ಮಾಡಿರಲ್ಕದಂ

ಕಶ್ಚಿತ್ಪುರುಷಂ ಪಿಡಿದೊಡೆನಿಶ್ಚಲಮನದಿಂದಮಿೞಿಪಿದೊಡೆ ಜೀವಿಸುಗುಂವೃಶ್ಚಿಕ ವಿಷಮೂರ್ಛಿತನಿದುಪಶ್ಚಿಮದಂಡಂ ವಿಷಾಷ್ಟಪದ ಭೇರುಂಡಂ

ದೀಪದನಿಂದ್ರವಾರುಣಿಯ ಪಣ್ಣೊಳೆ ತೀವುಗೆ ಪಾರದಾಖ್ಯಮಂದೀಪದಿನ ಪ್ರಸಿದ್ಧಿಯೊಳೆ ಪನ್ನೆರಡಪ್ಪ ದಿನಂಗಳಿರ್ದುದಂಲೋಪಮದಾಗದಂತಿರೆ ಸುರಕ್ಷಿತಮಾದುದಱೊಂದೆ ಬೀಜನಿಷ್ವಾಪಮನಿಟ್ಟು ನೀಂಗಣಕೆಯಗ್ರದೊಳಂ ತಿಳಿಪಲ್ಕಮಾಕ್ಷಣಂ

ಕಂಟಕವಿಷ ವೃಶ್ಚಿಕತತಿಯಂಟಿದ ಗರಳಂಗಳೞಿಗುಮದು ನಿಶ್ಚಯದಿಂದಂಟಿಕ್ಕಡಿಯನೆ ಸೀೞ್ವುದಿದುಂಟೆನಿಕುಂ ಸಕಳತಂತ್ರ ಸಾಮರ್ಥ್ಯಮುಮಂ

ಪುತ್ತಿನೊಳೆ ಬೆಳೆದ ತುಱುಚೆಯನುತ್ತಮದಿನದಂದು ತಂದು ತೇೞ್ ಕಡಿದುದೆನಲ್ತೆತ್ತಿಸೆ ಕಣಿಕೆಯ ತುದಿಗಿೞಿಪುತ್ತಿರಲಿೞಿಗುಂ ಮಱಳ್ಗುಮೇಱಿಸೆ ವಿಷಮುಂ

ಹಸ್ತಾರ್ಕಯೋಗದೊಳ್‌ ತಾಂಪ್ರಸ್ತುತಮೆನಿಸಿರ್ದ ಬಿಳಿಯ ಹೂಲಿಯ ಬೇರಿಂವಿಸ್ತರಿಸಿದ ರಕ್ಷೆಯದೇಶಸ್ತಂ ತೊಡೆದಿೞಿಪಲೞಿಗುಮಾ ತೇೞ ವಿಷಂ

ಬದರೋದ್ಯಚ್ಛಾಖೆಯಂ ಕಂಟಕಸಹಿತಮದಂ ತಂದು ಬಿೞ್ದಿರ್ದ ಶುಂಡಾಲದ ಲಂಡಂಗೂಡಿ ಪುಟ್ಟಿರ್ದೆಸೆವ ಕೊಡೆಗಳಿಂ ಭಾನುದುಗ್ಧ ಪ್ರಯೋಗಕ್ಕೊದವಿರ್ದಾ ಬೇೞಪಣ್ಣೊಳ್ಗುಳವೆರಸಲ್‌ ಮರ್ದನಂಗೆಯ್ದುದರ್ಕಂತದಱಿಂದಂ ಮುಟ್ಟಿಸಲ್ಕೇಱಿೞಿಪಲಿೞಿಗುಮಂತಂತೆ ತೇೞುಗ್ರತಾಪಂ

ಏಱಿಸಲೇಱಿದ ಮುಳ್ಳಿಂದೇಱುಗುಮಿೞಿದಿರ್ದ ಮುಳ್ಳಿನಿೞಿಗುಂ ಮತ್ತಂಬೇಱೊರ್ವನ ನಾಂಟಲ್‌ ವಿಷಮೇಱುಗುಮಿೞಿಪಲ್ಕಮಿೞಿಗುಮಿಂತಿದು ಚಿತ್ರಂ

ಇದು ಸಾತಾವೇದನೀಯಾಸ್ಪದಮೆನಿಸಿದ ಹಾಳಾಹಳೋಗ್ರಾಗ್ನಿ ಗಂಗಾನದಿಯೆಂತಂತೆಂಬಿನಂ ಪೇೞ್ದಿದಱೆಸೆವ ಚಮತ್ಕಾರಮಂ ಸಾರಮಂ ನೋೞ್ವುದು ಭವ್ಯರ್‌ ಪ್ರೇಮದಿಂದಂ ಭಲರೆಯೆನೆ ತದೀಯಂಗಳಂ ಮಾೞ್ದುದೀ ಕೋವಿದರಪ್ಪರ್‌ ಭಾವಿತಾತ್ಮರ್‌ ಪರಹಿತಚರಿತರ್‌ ಮಂಗರಾಜೋಕ್ತಿಯಿಂದಂ

ಗದ್ಯ. ಇದು ಸರ್ವ ಶೇಷ್ಠರಾದ ಜಿನೇಂದ್ರೋಕ್ತ ಸಿದ್ಧಾಂತ ಪಯಃಪಯೋನಿಧಿ ಪಾರಗ ಶ್ರೀ ಪೂಜ್ತಪಾದ ಮುನೀಂದ್ರ ಚಾರುಚರಣಾರವಿಂದ ಗಂಧ ಗುಣಾನಂದಿತ ಮಾನಸಂ ಶ್ರೀಮದಖಿಲ ಕಳಾಗಮೋತ್ತುಂಗ ಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್‌ ವೃಶ್ಚಿಕವಿಷಹರಣ ಚಿಕಿತ್ಸಾಧಿಕಾರಂ ಏಕಾದಶಂ